17. Al Isra

17. ಬನೀ ಇಸ್ರಾಈಲ್

ವಚನಗಳು – 111 (ಮಕ್ಕಃ)

ಅಲ್ಲಾಹನ ಹೆಸರಿಂದ – ಅವನು ಅಪಾರ ದಯಾಳು, ಕರುಣಾಮಯಿ.

1. ರಾತ್ರಿಯ ವೇಳೆ ತನ್ನ ದಾಸನನ್ನು, ಮಸ್ಜಿದುಲ್ ಹರಾಮ್‌ನಿಂದ, ನಾವು ಪರಿಸರವನ್ನು ಸಮೃದ್ಧ ಗೊಳಿಸಿರುವ ಮಸ್ಜಿದುಲ್ ಅಕ್ಸಾದೆಡೆಗೆ ಕರೆದೊಯ್ದವನು ಪಾವನನು. ಇದು ಆತನಿಗೆ ನಮ್ಮ ಸಂಕೇತಗಳನ್ನು ತೋರಿಸಿಕೊಡುವುದಕ್ಕಾಗಿತ್ತು. ಅವನು (ಅಲ್ಲಾಹನು) ಖಂಡಿತ ಎಲ್ಲವನ್ನೂ ಕೇಳುವವನು ಮತ್ತು ನೋಡುವವನಾಗಿದ್ದಾನೆ.

2. ನಾವು ಮೂಸಾರಿಗೆ ಗ್ರಂಥವನ್ನು ನೀಡಿದೆವು ಮತ್ತು ಅದನ್ನು ಇಸ್ರಾಈಲರ ಸಂತತಿಗಳಿಗೆ ಮಾರ್ಗದರ್ಶಿಯಾಗಿ ಮಾಡಿದೆವು – ನೀವು ನನ್ನ ಹೊರತು ಬೇರೆ ಯಾರನ್ನೂ ಕಾರ್ಯ ಸಾಧಕನಾಗಿ ಅಂಗೀಕರಿಸಬಾರದು (ಎಂದು ಅದರಲ್ಲಿ ಬೋಧಿಸಲಾಗಿತ್ತು).

3. ನಾವು ನೂಹ್‌ರ ಜೊತೆ (ಹಡಗನ್ನು) ಹತ್ತಿಸಿದ್ದವರ ಸಂತತಿಗಳೇ, ಅವರು (ನೂಹ್) ಖಂಡಿತ ಒಬ್ಬ ಕೃತಜ್ಞ ದಾಸರಾಗಿದ್ದರು.

4. ನಾವು ಇಸ್ರಾಈಲರ ಸಂತತಿಗಳಿಗೆ ಗ್ರಂಥದಲ್ಲೇ (ಹೀಗೆಂದು) ತಿಳಿಸಿಬಿಟ್ಟಿದ್ದೆವು: ನೀವು ಭೂಮಿಯಲ್ಲಿ ಎರಡು ಬಾರಿ ಅಶಾಂತಿಯನ್ನು ಹಬ್ಬುವಿರಿ ಮತ್ತು ಭಾರೀ ಪ್ರಕ್ಷೋಭೆಯನ್ನುಂಟು ಮಾಡುವಿರಿ.

5. ಅವೆರಡರ ಪೈಕಿ ಮೊದಲ ಅವಧಿ ಬಂದಾಗ, ತುಂಬಾ ಬಲಿಷ್ಠ ಹೋರಾಟಗಾರ ರಾಗಿರುವ ನಮ್ಮ ದಾಸರನ್ನು ನಾವು ನಿಮ್ಮ ಮೇಲೆ ಹೇರಿ ಬಿಡುವೆವು ಮತ್ತು ಅವರು ನಾಡುಗಳಿಗೆ ನುಗ್ಗಿ ವ್ಯಾಪಕ ವಿನಾಶವನ್ನು ಮೆರೆಯುವರು – ಈ ವಾಗ್ದಾನವು ಖಂಡಿತ ಈಡೇರುವುದು.

6. ಮುಂದೆ ನಾವು ಅವರ ವಿರುದ್ಧ ನಿಮಗೆ ಪ್ರಾಬಲ್ಯವನ್ನು ನೀಡುವೆವು ಮತ್ತು ಸಂಪತ್ತು ಹಾಗೂ ಸಂತಾನಗಳ ಮೂಲಕ ನಿಮಗೆ ನಾವು ನೆರವಾಗುವೆವು ಮತ್ತು ನಿಮ್ಮನ್ನು ಒಂದು ದೊಡ್ಡ ಪಡೆಯಾಗಿ ಬೆಳೆಸುವೆವು.

7. ನೀವು ಒಳಿತನ್ನು ಮಾಡಿದರೆ, ನಿಮಗಾಗಿಯೇ ಮಾಡುವಿರಿ ಮತ್ತು ಕೆಡುಕನ್ನು ಮಾಡಿದರೂ ನಿಮಗಾಗಿಯೇ ಮಾಡುವಿರಿ. ಮುಂದೆ, ಆ ಎರಡನೆಯ ಅವಧಿಯು ಬಂದು ಬಿಟ್ಟಾಗ (ಮತ್ತೆ ಕೆಲವರನ್ನು ನಾವು ನಿಮ್ಮ ಮೇಲೆ ಹೇರಿ ಬಿಡುವೆವು) – ನಿಮ್ಮ ಮುಖಗಳನ್ನು ವಿಕೃತಗೊಳಿಸಲಿಕ್ಕಾಗಿ, ಮೊದಲ ಬಾರಿ ನುಗ್ಗಿದಂತೆ (ಅಲ್‌ಅಕ್ಸಾ) ಮಸೀದಿಯೊಳಗೆ ನುಗ್ಗಲಿಕ್ಕಾಗಿ ಮತ್ತು ತಮ್ಮ ನಿಯಂತ್ರಣಕ್ಕೆ ಸಿಗುವ ಎಲ್ಲವನ್ನೂ ನಾಶಮಾಡಲಿಕ್ಕಾಗಿ.

8. ನಿಮ್ಮ ಒಡೆಯನು ನಿಮ್ಮ ಮೇಲೆ ಕರುಣೆ ತೋರ ಬಹುದು. ಆದರೆ ನೀವು ಮತ್ತೆ ಅದನ್ನೇ ಮಾಡಿದರೆ ನಾವೂ ಅದನ್ನೇ ಮಾಡುವೆವು. ನಾವು ನರಕವನ್ನೇ ಧಿಕ್ಕಾರಿಗಳ ಪಾಲಿನ ಸೆರೆಮನೆಯಾಗಿಸಿರುವೆವು.

9. ಈ ಕುರ್‌ಆನ್ ಬಹಳ ಸ್ಥಿರವಾದ ದಾರಿಯೆಡೆಗೆ ಮಾರ್ಗದರ್ಶನ ಮಾಡುತ್ತದೆ ಮತ್ತು ಇದು, ಸತ್ಕರ್ಮ ಮಾಡುವ ವಿಶ್ವಾಸಿಗಳಿಗೆ ಬಹುದೊಡ್ಡ ಪ್ರತಿಫಲವಿದೆ ಎಂಬ ಶುಭವಾರ್ತೆಯನ್ನು ನೀಡುತ್ತದೆ.

10. ಮತ್ತು ಪರಲೋಕದಲ್ಲಿ ನಂಬಿಕೆ ಇಲ್ಲದವರಿಗಾಗಿ ನಾವು ಕಠಿಣ ಶಿಕ್ಷೆಯನ್ನು ಸಿದ್ಧ ಪಡಿಸಿಟ್ಟಿದ್ದೇವೆ ಎಂದು ಇದು ಎಚ್ಚರಿಸುತ್ತದೆ.

11. ಮಾನವನು ಒಳಿತನ್ನು ಬೇಡಬೇಕಾದ ರೀತಿಯಲ್ಲಿ ಕೆಡುಕನ್ನು ಬೇಡುತ್ತಾನೆ. ಮಾನವನು ತುಂಬಾ ಆತುರ ಜೀವಿಯಾಗಿದ್ದಾನೆ.

12. ನಾವು ರಾತ್ರಿ ಹಾಗೂ ಹಗಲನ್ನು ಎರಡು ಪುರಾವೆಗಳಾಗಿಸಿದ್ದೇವೆ ಮತ್ತು ನೀವು ನಿಮ್ಮ ಒಡೆಯನ ಅನುಗ್ರಹವನ್ನು ಅರಸಬೇಕೆಂದು ಹಾಗೂ ವರ್ಷಗಳ ಸಂಖ್ಯೆ ಮತ್ತು (ಇತರ) ಪ್ರಮಾಣಗಳನ್ನು ತಿಳಿಯಬೇಕೆಂದು, ನಾವು ರಾತ್ರಿಯ ಪುರಾವೆಯನ್ನು ಮಂದಗೊಳಿಸಿ, ಹಗಲಿನ ಪುರಾವೆಯನ್ನು ಉಜ್ವಲವಾಗಿಸಿದ್ದೇವೆ. ಮತ್ತು ನಾವು ಎಲ್ಲವನ್ನೂ ಸವಿಸ್ತಾರವಾಗಿ ವಿವರಿಸಿದ್ದೇವೆ.

13. ನಾವು ಪ್ರತಿಯೊಬ್ಬ ಮಾನವನ ಅದೃಷ್ಟವನ್ನು ಅವನ ಕೊರಳಿಗೆ ಕಟ್ಟಿದ್ದೇವೆ. ಪುನರುತ್ಥಾನ ದಿನ ನಾವು ಅವನಿಗಾಗಿ ಒಂದು ಪುಸ್ತಕವನ್ನು ಹೊರತೆಗೆಯುವೆವು. ಅವನು ಅದನ್ನು ತೆರೆದಿರುವ ಸ್ಥಿತಿಯಲ್ಲಿ ಕಾಣುವನು.

14. (ಅಂದು ಅವನೊಡನೆ) ‘‘ಓದು ನಿನ್ನ (ಕರ್ಮಗಳ)ಗ್ರಂಥವನ್ನು ಇಂದು ನಿನ್ನ ವಿಚಾರಣೆಗೆ ನೀನೇ ಸಾಕು’’ ಎನ್ನಲಾಗುವುದು.

15. ಸನ್ಮಾರ್ಗದಲ್ಲಿ ನಡೆಯುವಾತನು ಸ್ವತಃ ತನ್ನ ಲಾಭಕ್ಕಾಗಿಯಷ್ಟೇ ಸನ್ಮಾರ್ಗದಲ್ಲಿ ನಡೆಯುತ್ತಾನೆ. ಇನ್ನು ದಾರಿಗೆಟ್ಟವನ ದಾರಿಗೇಡಿತನದ ದುಷ್ಪರಿಣಾಮ ಕೂಡಾ ಅವನ ಮೇಲೆಯೇ ಇರುವುದು. (ಪುನರುತ್ಥಾನ ದಿನ) ಹೊರೆ ಹೊರುವ ಯಾವೊಬ್ಬನೂ ಇನ್ನೊಬ್ಬನ ಹೊರೆಯನ್ನು ಹೊರಲಾರನು. ನಾವಂತು ದೂತರನ್ನು ಕಳಿಸುವ ತನಕ ಯಾರನ್ನೂ ಶಿಕ್ಷಿಸುವವರಲ್ಲ.

16. ನಾವು ಒಂದು ನಾಡನ್ನು ನಾಶಗೊಳಿಸ ಬಯಸಿದಾಗ ಅದರಲ್ಲಿನ ಸ್ಥಿತಿವಂತರಿಗೆ (ನೀವಿಚ್ಛಿಸಿದ್ದನ್ನು ಮಾಡಿರಿ ಎಂದು) ಆದೇಶಿಸಿ ಬಿಡುತ್ತೇವೆ ಮತ್ತು ಅವರು ಅಲ್ಲಿ ಅವಿಧೇಯತೆಯನ್ನು ಮೆರೆಯಲಾರಂಭಿಸುತ್ತಾರೆ. ಆಗ ಅವರ ಮೇಲೆ ನಮ್ಮ ಶಿಕ್ಷೆಯು ಕಡ್ಡಾಯವಾಗಿ ಬಿಡುತ್ತದೆ ಮತ್ತು ನಾವು ಅವರನ್ನು ಸಂಪೂರ್ಣ ನಿರ್ನಾಮಗೊಳಿಸಿ ಬಿಡುತ್ತೇವೆ.

17. ನೂಹ್‌ರ ಬಳಿಕ ನಾವು ಅದೆಷ್ಟೋ ನಾಡುಗಳನ್ನು ನಾಶಗೊಳಿಸಿ ಬಿಟ್ಟೆವು. ತನ್ನ ದಾಸರ ಪಾಪಗಳ ವಿಚಾರಣೆಗೆ ನಿಮ್ಮ ಒಡೆಯನೇ ಸಾಕು. ಅವನು ಎಲ್ಲವನ್ನೂ ಅರಿತಿರುವವನು ಮತ್ತು ಎಲ್ಲವನ್ನೂ ನೋಡುತ್ತಿರುವವನಾಗಿದ್ದಾನೆ.

 18. ಆತುರವಾಗಿ ಸಿಗುವುದನ್ನು (ಇಹದ ಸುಖವನ್ನು) ಬಯಸುವವರ ಪೈಕಿ, ನಾವಿಚ್ಛಿಸಿದಾತನಿಗೆ ನಾವು , ನಾವಿಚ್ಛಿಸುವಷ್ಟನ್ನು ಆತುರವಾಗಿಯೇ (ಇಹದಲ್ಲೇ) ಕೊಟ್ಟು ಬಿಡುತ್ತೇವೆ. ಆದರೆ ಮುಂದೆ ನಾವು ಆತನಿಗೆ ನರಕವನ್ನು ವಿಧಿಸಿ ಬಿಡುತ್ತೇವೆ. ನಿಂದ್ಯನಾಗಿಯೂ ಅಪಮಾನಿತನಾಗಿಯೂ ಅವನು ಅದರೊಳಗೆ ಸೇರುವನು.

19. ಇನ್ನು, ಪರಲೋಕವನ್ನು ಅಪೇಕ್ಷಿಸಿ, ಅದಕ್ಕಾಗಿ, ಸಾಕಷ್ಟು ಶ್ರಮಿಸುವವನು ಮತ್ತು ವಿಶ್ವಾಸಿಯೂ ಆಗಿರುವವನು – ಅವರ ಶ್ರಮವೆಲ್ಲಾ ಸ್ವೀಕೃತವಾಗುವುದು.

20. ನಿಮ್ಮಡೆಯನ ಅನುಗ್ರಹಗಳಿಂದ ನಾವು ಇವರಿಗೂ ನೀಡುವೆವು, ಅವರಿಗೂ ನೀಡುವೆವು. ನಿಮ್ಮ ಒಡೆಯನ ಅನುಗ್ರಹಗಳನ್ನು ತಡೆಹಿಡಿಯಲಾಗುವುದಿಲ್ಲ.

21. ನಾವು (ಈ ಲೋಕದಲ್ಲೇ) ಯಾವ ರೀತಿ ಅವರಲ್ಲಿ ಕೆಲವರಿಗೆ ಕೆಲವರಿಗಿಂತ ಹೆಚ್ಚಿನ ಮೇಲ್ಮೆಯನ್ನು ನೀಡಿರುತ್ತೇವೆಂಬುದನ್ನು ನೋಡಿರಿ. ಇನ್ನು ಪರಲೋಕವಂತು ಸ್ಥಾನಮಾನಗಳಲ್ಲೂ, ಶ್ರೇಷ್ಠತೆಯಲ್ಲೂ ತುಂಬಾ ಹಿರಿದಾಗಿರುತ್ತದೆ.

22. ಅಲ್ಲಾಹನ ಜೊತೆ ಬೇರೆಯಾರನ್ನೂ ದೇವರಾಗಿಸಿಕೊಳ್ಳಬೇಡಿ. ಹಾಗೆ ಮಾಡಿದರೆ ನೀವು ಸದಾ ನಿಂದಿತರಾಗಿಯೂ ಅಸಹಾಯಕರಾಗಿಯೂ ಕುಳಿತಿರಬೇಕಾಗುವುದು.

23. ನಿಮಗೆ ನಿಮ್ಮ ಒಡೆಯನು (ಹೀಗೆಂದು) ವಿಧಿಸಿರುತ್ತಾನೆ; ನೀವು ಅವನೊಬ್ಬನ ಹೊರತು ಬೇರಾರನ್ನೂ ಪೂಜಿಸಬಾರದು ಮತ್ತು ತಂದೆ ತಾಯಿಯ ಜೊತೆ ಸೌಜನ್ಯಶೀಲರಾಗಿರಬೇಕು. ಒಂದು ವೇಳೆ ಅವರಲೊಬ್ಬರು ಅಥವಾ ಅವರಿಬ್ಬರೂ ನಿಮ್ಮ ಮುಂದೆ ಮುದಿ ವಯಸ್ಸನ್ನು ತಲುಪಿದರೆ, ಅವರೆದುರು ಚಕಾರ ವೆತ್ತಬೇಡಿ ಮತ್ತು ಅವರನ್ನು ಗದರಿಸಬೇಡಿ. ಅವರ ಜೊತೆ ಗೌರವದೊಂದಿಗೆ ಮಾತನಾಡಿರಿ.

24. ವಿನಯ ಹಾಗೂ ವಾತ್ಸಲ್ಯದೊಂದಿಗೆ ಅವರೆದುರು ಸದಾ ಬಾಗಿಕೊಂಡಿರಿ ಮತ್ತು ‘‘ನನ್ನೊಡೆಯಾ, ನನ್ನ ಬಾಲ್ಯದಲ್ಲಿ ಅವರಿಬ್ಬರೂ ನನ್ನನ್ನು ಪೋಷಿಸಿದಂತೆಯೇ ನೀನು ಅವರಿಬ್ಬರ ಮೇಲೂ ಕೃಪೆ ತೋರು’’ ಎಂದು ಪ್ರಾರ್ಥಿಸಿರಿ.

25. ನಿಮ್ಮ ಒಡೆಯನು ನಿಮ್ಮ ಮನಸ್ಸಿನೊಳಗಿನ ವಿಚಾರಗಳನ್ನೂ ಚೆನ್ನಾಗಿಬಲ್ಲನು. ನೀವು ಸಜ್ಜನರಾಗಿ ಬಾಳಿದ್ದರೆ, ಖಂಡಿತವಾಗಿಯೂ ಅವನು, ಅವನೆಡೆಗೆ ಸದಾ ಒಲಿಯುತ್ತಿದ್ದವರ ಪಾಲಿಗೆ ಕ್ಷಮಾಶೀಲನಾಗಿರುತ್ತಾನೆ.

26. ನೀವು ಬಂಧುಗಳಿಗೆ, ಬಡವರಿಗೆ ಮತ್ತು ಪ್ರಯಾಣಿಕರಿಗೆ ಅವರ ಹಕ್ಕನ್ನು ಸಲ್ಲಿಸಿರಿ ಮತ್ತು ನೀವು ದುಂದು ವೆಚ್ಚ ಮಾಡಬೇಡಿ.

27. ದುಂದು ವೆಚ್ಚ ಮಾಡುವವರು ಖಂಡಿತ ಶೈತಾನನ ಸಹೋದರರು. ಶೈತಾನನು ತನ್ನ ಒಡೆಯನಿಗೆ ಕೃತಘ್ನನಾಗಿದ್ದನು.

28. ಒಂದು ವೇಳೆ, ನೀವಿನ್ನೂ ನಿಮ್ಮ ಒಡೆಯನ ನಿರೀಕ್ಷಿತ ಅನುಗ್ರಹವನ್ನು ಕಾಯುತ್ತಿರುವ ಕಾರಣ, ಅವರಿಂದ (ಬಂಧುಗಳು, ಬಡವರು ಮುಂತಾದವರಿಂದ) ಮುಖ ತಿರುಗಿಸಿಕೊಳ್ಳಬೇಕಾಗಿ ಬಂದರೂ ಅವರೊಂದಿಗೆ ಬಹಳ ಸೌಮ್ಯವಾದ ಮಾತನ್ನೇ ಆಡಿರಿ.

29. ನೀವು (ತೀರಾ ಜಿಪುಣರಾಗಿ) ನಿಮ್ಮ ಕೈಯನ್ನು ಕೊರಳಿಗೆ ಕಟ್ಟಿಕೊಳ್ಳಬೇಡಿ ಮತ್ತು ಅದನ್ನು ಸಂಪೂರ್ಣವಾಗಿ ಬಿಚ್ಚಿ ಬಿಡಲೂ ಬೇಡಿ – (ಅನ್ಯಥಾ) ಅಪಮಾನಿತರಾಗಿಯೂ ಅಸಹಾಯಕರಾಗಿಯೂ ಕುಳಿತಿರಬೇಕಾದೀತು.

30. ಖಂಡಿತವಾಗಿಯೂ ನಿಮ್ಮ ಒಡೆಯನು ತಾನಿಚ್ಛಿಸಿದವರ ಪಾಲಿಗೆ ಸಂಪತ್ತನ್ನು ಧಾರಾಳಗೊಳಿಸಿ ಬಿಡುತ್ತಾನೆ. ಮತ್ತು (ತಾನಿಚ್ಛಿಸಿದವರ ಪಾಲಿಗೆ ಅದನ್ನು) ಸೀಮಿತ ಗೊಳಿಸುತ್ತಾನೆ. ಖಂಡಿತವಾಗಿಯೂ ಅವನು ತನ್ನ ದಾಸರ ಕುರಿತು ಅರಿವು ಉಳ್ಳವನು ಹಾಗೂ ಎಲ್ಲವನ್ನೂ ನೋಡುತ್ತಿರುವವನಾಗಿದ್ದಾನೆ.

31. ನೀವು ಬಡತನದ ಭಯದಿಂದ ನಿಮ್ಮ ಮಕ್ಕಳನ್ನು ಕೊಲ್ಲಬೇಡಿ. ಅವರಿಗೂ ನಿಮಗೂ ನಾವೇ ಆಹಾರವನ್ನು ನೀಡುತ್ತೇವೆ. ಅವರ ಹತ್ಯೆಯು ಖಂಡಿತ ಮಹಾ ಪಾಪವಾಗಿದೆ.

32. ನೀವು ವ್ಯಭಿಚಾರದ ಹತ್ತಿರವೂ ಸುಳಿಯಬೇಡಿ – ಅದು ಖಂಡಿತ ನಿರ್ಲಜ್ಜ ಕೃತ್ಯವಾಗಿದೆ ಮತ್ತು ತೀರಾ ಕೆಟ್ಟ ದಾರಿಯಾಗಿದೆ.

33. ಅಲ್ಲಾಹನು ನಿಷಿದ್ಧಗೊಳಿಸಿರುವ (ಕೊಲ್ಲಬಾರದೆಂದಿರುವ) ಯಾವುದೇ ಜೀವವನ್ನು ನೀವು ಅಕ್ರಮವಾಗಿ ಕೊಲ್ಲಬೇಡಿ. ಮತ್ತು ನಾವು, ಅನ್ಯಾಯವಾಗಿ ಕೊಲೆಯಾದವನ ಉತ್ತರಾಧಿಕಾರಿಗೆ (ಪ್ರತೀಕಾರದ) ಅಧಿಕಾರವನ್ನು ನೀಡಿದ್ದೇವೆ. ಆದರೆ ಅವನು ಕೊಲೆಯ ವಿಷಯದಲ್ಲಿ ಮಿತಿಮೀರಬಾರದು. ಅವನು ಖಂಡಿತ ನೆರವಿಗೆ ಅರ್ಹನಾಗಿದ್ದಾನೆ.

34. ಮತ್ತು ಅನಾಥನು ಪ್ರೌಢನಾಗುವ ತನಕ – ಉತ್ತಮ ರೀತಿಯಿಂದಲ್ಲದೆ – ನೀವು ಅವನ ಸಂಪತ್ತಿನ ಹತ್ತಿರ ಹೋಗಬಾರದು. ಮತ್ತು ನೀವು ಕರಾರನ್ನು ಪಾಲಿಸಿರಿ. ಕರಾರಿನ ಕುರಿತು ಖಂಡಿತ ವಿಚಾರಿಸಲಾಗುವುದು.

35. ನೀವು ಅಳೆಯುವಾಗ ಪೂರ್ಣವಾಗಿ ಅಳೆಯಿರಿ ಮತ್ತು ಸರಿಯಾಗಿರುವ ತಕ್ಕಡಿಯಲ್ಲೇ ತೂಗಿರಿ. ಇದುವೇ ಶ್ರೇಷ್ಠ ಕ್ರಮವಾಗಿದೆ ಮತ್ತು ಫಲಿತಾಂಶದ ದೃಷ್ಟಿಯಿಂದಲೂ ಉತ್ತಮವಾಗಿದೆ.

36. ನಿನಗೆ ಅರಿವಿಲ್ಲದ ವಿಷಯದ ಬೆನ್ನು ಹಿಡಿಯಬೇಡ. ಖಂಡಿತವಾಗಿಯೂ, ಕಿವಿ, ಕಣ್ಣು ಮತ್ತು ಮನಸ್ಸು ಇವೆಲ್ಲವುಗಳ ಕುರಿತು ವಿಚಾರಣೆ ನಡೆಯಲಿದೆ.

37. ಭೂಮಿಯಲ್ಲಿ ಅಹಂಕಾರದೊಂದಿಗೆ ನಡೆಯಬೇಡ. ಖಂಡಿತವಾಗಿಯೂ (ಆ ಮೂಲಕ) ನೀನು ಭೂಮಿಯನ್ನೂ ಸೀಳಲಾರೆ ಮತ್ತು ಪರ್ವತಗಳ ಎತ್ತರವನ್ನೂ ತಲುಪಲಾರೆ.

38. ಈ ಎಲ್ಲ ಕೆಡುಕುಗಳು ನಿನ್ನ ಒಡೆಯನ ದೃಷ್ಟಿಯಲ್ಲಿ ಅಪ್ರಿಯವಾಗಿವೆ.

39. ಇದು, ನಿಮ್ಮ ಒಡೆಯನು ಯುಕ್ತಿಯಿಂದ ದಿವ್ಯವಾಣಿಯ ಮೂಲಕ ನಿಮ್ಮ ಕಡೆಗೆ ಕಳುಹಿಸಿದ ಸಂದೇಶವಾಗಿದೆ. (ಮಾನವನೇ,) ನೀನೆಂದೂ ಅಲ್ಲಾಹನ ಜೊತೆ ಬೇರೆ ಯಾರನ್ನಾದರೂ, ಪುಜಾರ್ಹನೆಂದು ಪರಿಗಣಿಸಬೇಡ. ಹಾಗೆ ಮಾಡಿದರೆ, ನಿನ್ನನ್ನು ಅಪಮಾನಿತನಾಗಿಸಿ ಹಾಗೂ ತಿರಸ್ಕೃತನಾಗಿಸಿ ನರಕಕ್ಕೆ ಎಸೆದು ಬಿಡಲಾಗುವುದು.

  40. (ಸ್ವಲ್ಪ ಯೋಚಿಸಿ ನೋಡಿ:) ನಿಮ್ಮ ಒಡೆಯನೇನು ಪುತ್ರರನ್ನು ನಿಮಗೆ ಮೀಸಲಾಗಿಟ್ಟು ಮಲಕ್‌ಗಳನ್ನು ತನ್ನ ಪುತ್ರಿಯರಾಗಿಸಿಕೊಂಡನೇ? ನಿಜಕ್ಕೂ ನೀವು ಭಾರೀ ದೊಡ್ಡ (ಪಾಪದ) ಮಾತೊಂದನ್ನು ಆಡುತ್ತಿರುವಿರಿ.

41. ಜನರು ಉಪದೇಶ ಸ್ವೀಕರಿಸಬೇಕೆಂದು ನಾವು ಈ ಕುರ್‌ಆನ್‌ನಲ್ಲಿ, (ಸತ್ಯವನ್ನು) ವಿವಿಧ ರೀತಿಯಲ್ಲಿ ವಿವರಿಸಿದ್ದೇವೆ. ಇಷ್ಟಾಗಿಯೂ ಅವರ (ಧಿಕ್ಕಾರಿಗಳ) ದ್ವೇಷವಷ್ಟೇ ಹೆಚ್ಚುತ್ತಿದೆ.

42. ಹೇಳಿರಿ; ಒಂದು ವೇಳೆ ಅವರು ಹೇಳುವಂತೆ ನಿಜಕ್ಕೂ ಅವನ (ಅಲ್ಲಾಹನ) ಜೊತೆ ಬೇರೆ ದೇವರುಗಳು ಇದ್ದಿದ್ದರೆ ಅವರು ವಿಶ್ವ ಸಿಂಹಾಸನದ ಒಡೆಯನ ಕಡೆಗಿರುವ ದಾರಿಯನ್ನು ಹುಡುಕುತ್ತಿದ್ದರು.

43. ಅವನು ಪಾವನನು ಮತ್ತು ಅವರು ಏನೆಲ್ಲಾ ಹೇಳುತ್ತಿರುವರೋ ಅವೆಲ್ಲವುಗಳಿಗಿಂತ ಉನ್ನತನು, ಶ್ರೇಷ್ಠನು ಮತ್ತು ಮಹಾನನು.

44. ಏಳು ಆಕಾಶಗಳು ಮತ್ತು ಭೂಮಿ ಹಾಗೂ ಅವುಗಳಲ್ಲಿ ಇರುವ ಎಲ್ಲವೂ ಅವನ (ಅಲ್ಲಾಹನ) ಪಾವಿತ್ರವನ್ನು ಜಪಿಸುತ್ತಿವೆ. ನಿಜವಾಗಿ, ಅವನ ಗುಣಗಾನ ಮಾಡುತ್ತಾ ಅವನ ಪಾವಿತ್ರವನ್ನು ಜಪಿಸದ ಯಾವ ವಸ್ತುವೂ ಇಲ್ಲ. ಆದರೆ ಅವುಗಳು ಮಾಡುವ ಪಾವಿತ್ರಜಪವು ನಿಮಗೆ ಅರ್ಥವಾಗುವುದಿಲ್ಲ. ಖಂಡಿತವಾಗಿಯೂ ಅವನು ಸಂಯಮಿ ಹಾಗೂ ಕ್ಷಮಾಶೀಲನು.

45. ನೀವು ಕುರ್‌ಆನ್ ಅನ್ನು ಓದುವಾಗ, ನಾವು ನಿಮ್ಮ ಹಾಗೂ ಪರಲೋಕವನ್ನು ನಂಬದವರ ನಡುವೆ, ಸುಪ್ತ ತೆರೆಯೊಂದನ್ನು ಎಳೆದು ಬಿಡುತ್ತೇವೆ.

46. ಮತ್ತು ಅವರಿಗೆ ಇದು ಅರ್ಥವಾಗದಂತೆ ನಾವು ಅವರ ಮನಸ್ಸುಗಳ ಮೇಲೆ ತೆರೆಯನ್ನು ಎಳೆಯುತ್ತೇವೆ ಮತ್ತು ಅವರ ಕಿವಿಗಳಲ್ಲಿ ಕಿವುಡುತನವಿದೆ. ನೀವು ಕುರ್‌ಆನ್‌ನಲ್ಲಿ, ನಿಮ್ಮ ಒಡೆಯನ ಕುರಿತು ಅವನು ಏಕಮಾತ್ರನೆಂದು ಪ್ರಸ್ತಾಪಿಸಿದೊಡನೆ ಅವರು ದ್ವೇಷದಿಂದ ಮುಖ ತಿರುಗಿಸಿ ಓಡಲಾರಂಭಿಸುತ್ತಾರೆ.

47. ಅವರು ನಿಮ್ಮ ಕಡೆಗೆ ಕಿವಿಗೊಟ್ಟು ಕೇಳುತ್ತಿರುವಾಗ, ಅವರು (ಆ ರೀತಿ) ಕೇಳುವುದೇಕೆಂಬುದನ್ನು ಮತ್ತು ಅವರು ಗುಟ್ಟಾಗಿ ಸಮಾಲೋಚಿಸಿದ ಸಂದರ್ಭವನ್ನು ನಾವು ಚೆನ್ನಾಗಿ ಬಲ್ಲೆವು. ‘‘ನೀವು ಮಾಟಕ್ಕೆ ತುತ್ತಾದ ಒಬ್ಬ ವ್ಯಕ್ತಿಯನ್ನು ಅನುಸರಿಸುತ್ತಿದ್ದೀರಿ’’ ಎಂದು ಅಕ್ರಮಿಗಳು ಹೇಳುತ್ತಾರೆ.

48. ನೋಡಿರಿ, ಅವರು ಎಂತೆಂತಹ (ದೂಷಣೆಯ) ಮಾತುಗಳನ್ನು ನಿಮಗೆ ಅನ್ವಯಿಸುತ್ತಾರೆ! ನಿಜವಾಗಿ ಅವರು ದಾರಿಗೆಟ್ಟಿದ್ದಾರೆ ಮತ್ತು ಅವರಿಗೆ ಸರಿದಾರಿ ಸಿಗುತ್ತಿಲ್ಲ.

49. ‘‘ನಾವು ಎಲುಬುಗಳಾಗಿ ತೀರಾ ಚೂರು ಚೂರಾಗಿ ಬಿಟ್ಟ ಬಳಿಕ ನಮ್ಮನ್ನೇನು ಹೊಸದಾಗಿ ಜೀವಂತಗೊಳಿಸಲಾಗುವುದೇ?’’ಎಂದು ಅವರು ಕೇಳುತ್ತಾರೆ;

50. ಹೇಳಿರಿ; ನೀವು ಕಲ್ಲುಗಳಾಗಿ ಅಥವಾ ಉಕ್ಕಾಗಿ ಬಿಟ್ಟ ಬಳಿಕವೂ.

51. ಅಥವಾ ನೀವು, ಅವುಗಳಿಗಿಂತಲೂ ದೊಡ್ಡದೆಂದು ನಿಮ್ಮ ಮನಸ್ಸಿನಲ್ಲಿರುವ ಬೇರೇನಾದರೂ ಆಗಿಬಿಟ್ಟ ಬಳಿಕವೂ (ನಿಮ್ಮನ್ನು ಜೀವಂತಗೊಳಿಸಲಾಗುವುದು). ‘‘(ಆ ರೀತಿ) ನಮ್ಮನ್ನು ಮತ್ತೆ ಜೀವಂತಗೊಳಿಸುವವರು ಯಾರು?’’ ಎಂದು ಅವರು ಕೇಳುವರು; ಹೇಳಿರಿ; ನಿಮ್ಮನ್ನು ಮೊದಲ ಬಾರಿ ರೂಪಿಸಿದವನು (ಅವನೇ ಆ ಕೆಲಸಮಾಡುವನು). ಮತ್ತೆ ಅವರು ತಮ್ಮ ತಲೆಗಳನ್ನು ನಿಮ್ಮೆಡೆಗೆ ವಾಲಿಸುತ್ತಾ, ‘‘ಅದು (ಆ ದಿನ) ಬರುವುದು ಯಾವಾಗ?’’ ಎಂದು ಕೇಳುವರು. ‘‘ಅದು ತುಂಬಾ ಹತ್ತಿರವೇ ಇರಲೂಬಹುದು’’ ಎಂದು ಹೇಳಿರಿ.

52. ಅಂದು ಅವನು (ಅಲ್ಲಾಹನು) ನಿಮ್ಮನ್ನು ಕೂಗಿ ಕರೆಯುವನು ಮತ್ತು ನೀವು ಅವನ ಗುಣಗಾನ ಮಾಡುತ್ತಾ ಓಗೊಡುವಿರಿ ಮತ್ತು (ಈ ಲೊಕದಲ್ಲಿ) ನೀವು ಬದುಕಿದ್ದುದು ತೀರಾ ಅಲ್ಪಕಾಲ ಮಾತ್ರ ಎಂದು ಆಗ ನೀವು ಭಾವಿಸುತ್ತಿರುವಿರಿ.

 53. ಮತ್ತು ಒಳ್ಳೆಯ ಮಾತನ್ನೇ ಆಡಬೇಕೆಂದು ನನ್ನ ದಾಸರೊಡನೆ ಹೇಳಿರಿ. ಖಂಡಿತವಾಗಿಯೂ ಶೈತಾನನು ಅವರ ನಡುವೆ ಹಗೆತನವನ್ನು ಬಿತ್ತುತ್ತಾನೆ. ಖಂಡಿತವಾಗಿಯೂ ಶೈತಾನನು ಮನುಷ್ಯನ ಪಾಲಿಗೆ ಬಹಿರಂಗ ಶತ್ರುವಾಗಿದ್ದಾನೆ.

54. ನಿಮ್ಮ ಒಡೆಯನು ನಿಮ್ಮನ್ನು ಚೆನ್ನಾಗಿ ಬಲ್ಲನು. ಅವನು ಬಯಸಿದರೆ ನಿಮ್ಮ ಮೇಲೆ ಕರುಣೆ ತೋರಬಹುದು ಅಥವಾ ಅವನು ಬಯಸಿದರೆ ನಿಮ್ಮನ್ನು ಶಿಕ್ಷಿಸಬಹುದು. (ದೂತರೇ,) ನಿಮ್ಮನ್ನು ನಾವು ಅವರ ಮೇಲಿನ ಕಾವಲುಗಾರನಾಗಿ ಕಳುಹಿಸಿಲ್ಲ.

 55. ನಿಮ್ಮ ಒಡೆಯನು ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಪ್ರತಿಯೊಬ್ಬರನ್ನೂ ಚೆನ್ನಾಗಿ ಬಲ್ಲನು. ಮತ್ತು ನಾವು, ಕೆಲವು ದೂತರಿಗೆ ಮತ್ತೆ ಕೆಲವರಿಗಿಂತ ಹಿರಿಮೆಯನ್ನು ನೀಡಿರುವೆವು ಮತ್ತು ದಾವೂದ್‌ರಿಗೆ ನಾವು ಝಬೂರ್ (ಗ್ರಂಥ)ವನ್ನು ನೀಡಿದ್ದೆವು.

56. ಹೇಳಿರಿ; ಅವನ ಹೊರತು ಬೇರೆ ಯಾರೆಲ್ಲಾ (ದೇವರೆಂದು) ನಿಮ್ಮ ಭ್ರಮೆಯಲ್ಲಿರುವರೋ ಅವರೆಲ್ಲರನ್ನೂ ನೀವು ಕರೆದು ಪ್ರಾರ್ಥಿಸಿ ನೋಡಿರಿ. ನಿಮ್ಮ ಯಾವುದೇ ಸಂಕಟವನ್ನು ನಿವಾರಿಸುವ ಅಥವಾ ಹಗುರಗೊಳಿಸುವ ಸಾಮರ್ಥ್ಯ ಅವರಲ್ಲಿಲ್ಲ.

57. ಅವರು ಯಾರನ್ನು ಕರೆದು ಪ್ರಾರ್ಥಿಸುತ್ತಿರುವರೋ, ನಿಜವಾಗಿ ಅವರೆಲ್ಲಾ ತಮ್ಮ ಒಡೆಯನ ಮೆಚ್ಚುಗೆಗಳಿಸಲು ಮತ್ತು ಅವನಿಗೆ ಇತರರಿಗಿಂತ ಹೆಚ್ಚು ನಿಕಟರಾಗಲು ದಾರಿ ಹುಡುಕುತ್ತಿರುತ್ತಾರೆ, ಅವನ ಅನುಗ್ರಹದ ನಿರೀಕ್ಷೆಯಲ್ಲಿರುತ್ತಾರೆ ಮತ್ತು ಅವನ ಶಿಕ್ಷೆಗೆ ಅಂಜುತ್ತಿರುತ್ತಾರೆ. ನಿಮ್ಮೊಡೆಯನ ಶಿಕ್ಷೆಯು ನಿಜಕ್ಕೂ ಅಂಜಲೇ ಬೇಕಾದ ಶಿಕ್ಷೆಯಾಗಿದೆ.

58. ಪುನರುತ್ಥಾನದಿನಕ್ಕೆ ಮುಂಚೆ ನಾವು ನಾಶ ಮಾಡದ ಅಥವಾ ತೀವ್ರ ಶಿಕ್ಷೆಗೆ ಒಳಪಡಿಸದ ಯಾವ ನಾಡೂ ಇಲ್ಲ. ಇದು ಗ್ರಂಥದಲ್ಲಿ ಬರೆದಿರುವ ವಿಷಯವಾಗಿದೆ.

59. ನಾವು (ಹೊಸ) ಪುರಾವೆಗಳನ್ನು ಕಳಿಸದೆ ಇರುವುದಕ್ಕೆ, ಹಿಂದಿನವರು ಅವುಗಳನ್ನು ಧಿಕ್ಕರಿಸಿದ್ದೇ ಕಾರಣವಾಗಿದೆ. ಮತ್ತು ನಾವು ಸಮೂದ್ ಜನಾಂಗದವರಿಗೆ, ಎದ್ದು ಕಾಣುವ (ಪುರಾವೆಯಾಗಿ) ಒಂದು ಒಂಟೆಯನ್ನು ನೀಡಿದ್ದೆವು. ಆದರೆ ಅವರು ಅದರ ಮೇಲೆ ಅಕ್ರಮ ವೆಸಗಿದರು. ನಿಜವಾಗಿ ನಾವು ಪುರಾವೆಗಳನ್ನು ಕಳಿಸುವುದು ಎಚ್ಚರಿಸುವುದಕ್ಕಾಗಿ ಮಾತ್ರ.

60. ನಿಮ್ಮ ಒಡೆಯನು ಜನರನ್ನೆಲ್ಲಾ ಸುತ್ತುವರಿದಿರುವನು ಎಂದು ನಾವು ನಿಮಗೆ ಹೇಳಿದ ಸಂದರ್ಭ(ವನ್ನು ಸ್ಮರಿಸಿರಿ). ನಾವು ನಿಮಗೆ ತೋರಿಸಿದ ಆ ದೃಶ್ಯಗಳನ್ನು ಮತ್ತು ಕುರ್‌ಆನ್‌ನಲ್ಲಿ ಶಪಿಸಲಾಗಿರುವ ಆ ಮರವನ್ನು ನಾವು ಜನರ ಪಾಲಿಗೆ ಪರೀಕ್ಷೆಯಾಗಿಸಿದ್ದೇವೆ. ನಾವು ಅವರನ್ನು ಎಚ್ಚರಿಸುತ್ತಿದ್ದೇವೆ. ಆದರೆ ಅದು ಅವರ ಭಾರೀ ವಿದ್ರೋಹವನ್ನಷ್ಟೇ ಹೆಚ್ಚಿಸುತ್ತಿದೆ.

61. ನಾವು ಮಲಕ್‌ಗಳೊಡನೆ, ಆದಮರಿಗೆ ಸಾಷ್ಟಾಂಗವೆರಗಿರಿ ಎಂದಾಗ ಅವರೆಲ್ಲರೂ ಸಾಷ್ಟಾಂಗವೆರಗಿದರು – ಇಬ್ಲೀಸ್‌ನ ಹೊರತು. ಅವನು ಹೇಳಿದನು; ನಾನೇನು, ಮಣ್ಣಿನಿಂದ ಸೃಷ್ಟಿಸಲ್ಪಟ್ಟವನಿಗೆ ಸಾಷ್ಟಾಂಗವೆರಗಬೇಕೇ?

 62. ಅವನು ಹೇಳಿದನು; ನೀನು ನನಗಿಂತ ಹೆಚ್ಚಿನ ಮೇಲ್ಮೆಯನ್ನು ನೀಡಿರುವ ಆತನನ್ನು ನೋಡು. ನೀನು ಪುನರುತ್ಥಾನ ದಿನದ ತನಕ ನನಗೆ ಕಾಲಾವಕಾಶ ನೀಡಿದರೆ, ಕೇವಲ ಕೆಲವರ ಹೊರತು ಅವನ ಸಂತತಿಯವರನ್ನೆಲ್ಲಾ ನಾನು ನನ್ನ ವಶಕ್ಕೆ ತೆಗೆದುಕೊಳ್ಳುವೆನು.

63. ಅವನು (ಅಲ್ಲಾಹನು) ಹೇಳಿದನು; ನೀನು ಹಾಗೂ ಅವರ ಪೈಕಿ ನಿನ್ನ ಅನುಕರಣೆ ಮಾಡಿದವರು – ಹೊರಟು ಹೋಗಿರಿ. ನಿಮಗೆ ಖಂಡಿತವಾಗಿಯೂ ನರಕವೇ ಪ್ರತಿಫಲವಾಗಿರುವುದು – ಪರಿಪೂರ್ಣ ಪ್ರತಿಫಲ.

64. ಅವರ ಪೈಕಿ ನಿನಗೆ ಸಾಧ್ಯವಿರುವವನನ್ನು ನೀನು ನಿನ್ನ ಧ್ವನಿಯ ಮೂಲಕ ಪುಸಲಾಯಿಸು ಮತ್ತು ನಿನ್ನ (ಪಡೆಯ) ಸವಾರರನ್ನೂ ಕಾಲಾಳುಗಳನ್ನ್ನೂ ಅವರ ಮೇಲೆ ಹೇರಿ ಬಿಡು ಮತ್ತು ನೀನು ಸಂಪತ್ತು ಹಾಗೂ ಸಂತಾನಗಳಲ್ಲಿ ಅವರ ಪಾಲುದಾರನಾಗು ಮತ್ತು ನೀನು ಅವರಿಗೆ ವಾಗ್ದಾನವನ್ನು ನೀಡು. ಶೈತಾನನು ಅವರಿಗೆ ನೀಡುವ ವಾಗ್ದಾನವು ಕೇವಲ ವಂಚನೆಯಾಗಿರುತ್ತದೆ.

65. ಖಂಡಿತವಾಗಿಯೂ ನನ್ನ (ನಿಷ್ಠ) ದಾಸರ ಮೇಲೆ ನಿನಗೆ ಯಾವ ನಿಯಂತ್ರಣವೂ ಸಿಗದು. (ದೂತರೇ,) ಕಾರ್ಯ ಸಾಧನೆಗೆ ನಿಮ್ಮ ಒಡೆಯನೇ ಸಾಕು.

66. ನಿಮ್ಮ ಒಡೆಯನೇ, ನೀವು ಅವನ ಅನುಗ್ರಹವನ್ನು ಹುಡುಕುವಂತಾಗಲು ಸಮುದ್ರದಲ್ಲಿ ನಿಮಗಾಗಿ ಹಡಗುಗಳನ್ನು ಚಲಿಸುತ್ತಾನೆ. ಅವನು ಖಂಡಿತ ನಿಮ್ಮ ಪಾಲಿಗೆ ಕರುಣಾಳುವಾಗಿದ್ದಾನೆ.

67. ಸಮುದ್ರದಲ್ಲಿ ನಿಮಗೇನಾದರೂ ಆಪತ್ತು ಎದುರಾದಾಗ, ಅವನೊಬ್ಬನ ಹೊರತು ನೀವು ಕರೆದು ಪ್ರಾರ್ಥಿಸುವ ಇತರೆಲ್ಲರೂ ಕಳೆದು ಹೋಗುವರು. ಕೊನೆಗೆ ಅವನು ನಿಮ್ಮನ್ನು ರಕ್ಷಿಸಿ ದಡದೆಡೆಗೆ ತಲುಪಿಸಿದಾಗ, ನೀವು ತಿರುಗಿ ಬಿಡುತ್ತೀರಿ. ಮಾನವನು ಖಂಡಿತ ಕೃತಘ್ನನು.

68. ಅವನು (ಅಲ್ಲಾಹನು), ದಡದ ಭಾಗದಲ್ಲೇ ನಿಮ್ಮನ್ನು (ಭೂಮಿಯೊಳಗೆ) ಹೂತು ಬಿಡುವ ಅಥವಾ ಅವನು ನಿಮ್ಮ ಮೇಲೆ ಕಲ್ಲಿನ ಮಳೆ ಸುರಿಸುವ ಸಾಧ್ಯತೆಯ ಕುರಿತು ನೀವೇನು ನಿಶ್ಚಿಂತರಾಗಿರುವಿರಾ? (ಹಾಗೇನಾದರೂ ಆದರೆ) ನೀವು ನಿಮ್ಮ ಪಾಲಿಗೆ ಯಾವ ಕಾರ್ಯಸಾಧಕನನ್ನೂ ಕಾಣಲಾರಿರಿ.

 69. ಅಥವಾ, ಅವನು ನಿಮ್ಮನ್ನು ಮತ್ತೊಮ್ಮೆ ಅದರೊಳಕ್ಕೆ (ಸಮುದ್ರದೊಳಕ್ಕೆ) ಒಯ್ದುಬಿಡುವ ಹಾಗೂ ನಿಮ್ಮ ಕೃತಘ್ನತೆಯ ಕಾರಣ ಭಾರೀ ಬಿರುಗಾಳಿಯ ಸುಳಿಯೊಂದು ನಿಮ್ಮನ್ನು ಮುಳುಗಿಸಿಬಿಡುವ ಸಾಧ್ಯತೆಯ ಕುರಿತು ನೀವು ನಿರ್ಭೀತರಾಗಿರುವಿರಾ? ಆಗಲೂ ನಿಮಗೆ ನಮ್ಮ ಕಡೆಯಿಂದ ಬೆಂಬಲಿಗರು ಯಾರೂ ಸಿಗಲಾರರು.

 70. ನಾವು ಆದಮರ ಸಂತತಿಯನ್ನು ಗೌರವಾನ್ವಿತಗೊಳಿಸಿದೆವು ಹಾಗೂ ಅವರನ್ನು ನೆಲದಲ್ಲೂ ಜಲದಲ್ಲೂ ಪ್ರಯಾಣಿಸುವವರಾಗಿ ಮಾಡಿದೆವು ಮತ್ತು ಅವರಿಗೆ ಶುದ್ಧ

ಆಹಾರಗಳನ್ನು ಒದಗಿಸಿದೆವು ಮತ್ತು ನಮ್ಮ ಇತರ ಅನೇಕ ಸೃಷ್ಟಿಗಳೆದುರು ಅವರಿಗೆ ಸ್ಪಷ್ಟವಾದ ಶ್ರೇಷ್ಠತೆಯನ್ನು ದಯಪಾಲಿಸಿದೆವು.

71. ನಾವು ಎಲ್ಲ ಮಾನವರನ್ನೂ ಅವರ ನಾಯಕರ ಜೊತೆ ಕರೆದು ಕೂಡಿಸುವ ದಿನ, (ಕರ್ಮಗಳ) ಗ್ರಂಥವನ್ನು ಬಲಗೈಯಲ್ಲಿ ನೀಡಲಾದವರು ತಮ್ಮ ಗ್ರಂಥವನ್ನು ಓದುವರು ಮತ್ತು ಅವರ ಮೇಲೆ ಕಿಂಚಿತ್ತೂ ಅನ್ಯಾಯವಾಗದು.

72. ಇಲ್ಲಿ (ಈ ಲೋಕದಲ್ಲಿ, ಸತ್ಯದ ಪಾಲಿಗೆ) ಕುರುಡಾಗಿದ್ದವನು ಪರಲೋಕದಲ್ಲೂ ಕುರುಡನಾಗಿರುವನು ಮತ್ತು ಇನ್ನಷ್ಟು ದಾರಿಗೆಟ್ಟಿರುವನು.

  73. (ದೂತರೇ,) ಅವರು (ಧಿಕ್ಕಾರಿಗಳು), ನಾವು ನಿಮಗೆ ದಿವ್ಯವಾಣಿಯ ಮೂಲಕ ನೀಡಿರುವ ಸಂದೇಶದಿಂದ ನಿಮ್ಮನ್ನು ದೂರ ಸರಿಸಿ, ನೀವು ನಮ್ಮ ಹೆಸರಲ್ಲಿ ಬೇರೇನನ್ನಾದರೂ ರಚಿಸಿ ತರುವಂತೆ ಮಾಡಲು ಶ್ರಮಿಸಿದ್ದರು. ಒಂದು ವೇಳೆ ಹಾಗೆ ಆಗಿ ಬಿಟ್ಟಿದ್ದರೆ ಅವರು ನಿಮ್ಮನ್ನು ಪರಮ ಆಪ್ತನಾಗಿ ಕಾಣುತ್ತಿದ್ದರು.

74. ನಾವು ನಿಮಗೆ ಸ್ಥಿರತೆಯನ್ನು ನೀಡದೆ ಇದ್ದಿದ್ದರೆ ನೀವು ಸ್ವಲ್ಪವಾದರೂ ಅವರೆಡೆಗೆ ವಾಲಿ ಬಿಡುತ್ತಿದ್ದಿರಿ.

75. ಹಾಗೇನಾದರೂ ಆಗಿ ಬಿಟ್ಟಿದ್ದರೆ ನಾವು ನಿಮಗೆ ಬದುಕಿನಲ್ಲೂ ಸಾವಿನಲ್ಲೂ ದುಪ್ಪಟ್ಟು ಶಿಕ್ಷೆಯ ರುಚಿ ಉಣಿಸುತ್ತಿದ್ದೆವು ಮತ್ತು ನಮ್ಮೆದುರು ನಿಮಗೆ ಯಾವ ಸಹಾಯಕನೂ ಸಿಗುತ್ತಿರಲಿಲ್ಲ.

76. ಅವರು ನಿಮ್ಮನ್ನು ಇಲ್ಲಿಂದ ಹೊರದಬ್ಬಲಿಕ್ಕಾಗಿ, ಈ ನಾಡಿನಲ್ಲಿ ನಿಮ್ಮನ್ನು ಅಸ್ಥಿರಗೊಳಿಸಲು ಶ್ರಮಿಸುತ್ತಿದ್ದಾರೆ. ಒಂದು ವೇಳೆ ಹಾಗೆ ಆಗಿಬಿಟ್ಟರೆ, ನಿಮ್ಮ ಬಳಿಕ ಅವರೇನೂ ಹೆಚ್ಚುಕಾಲ ಉಳಿಯಲಾರರು.

77. ನಾವು ನಿಮಗಿಂತ ಮುಂಚೆ ಕಳಿಸಿದ ನಮ್ಮ ದೂತರ ವಿಷಯದಲ್ಲಿ ನಾವು ಪಾಲಿಸಿದ ನಿಯಮ (ನೆನಪಿರಲಿ). ನೀವು ನಮ್ಮ ನಿಯಮದಲ್ಲಿ ಯಾವುದೇ ಬದಲಾವಣೆಯನ್ನು ಕಾಣಲಾರಿರಿ.

 78. ಸೂರ್ಯನ ಇಳಿಮುಖ ಆರಂಭವಾಗಿ ರಾತ್ರಿಯ ಕತ್ತಲು ಆವರಿಸಿಬಿಡುವ ತನಕ ನಮಾಝ್‌ಅನ್ನು ಪಾಲಿಸಿರಿ ಮತ್ತು ಮುಂಜಾವಿನ ಕುರ್‌ಆನ್ (ಪಠಣ) – ಖಂಡಿತವಾಗಿಯೂ ಮುಂಜಾವಿನ ಕುರ್‌ಆನ್ ಸಾಕ್ಷಿಯಾಗಿರುತ್ತದೆ.

 79. ಇನ್ನು ರಾತ್ರಿಯ ಒಂದು ಭಾಗದಲ್ಲಿ ‘ತಹಜ್ಜುದ್’ ನಮಾಝ್‌ಅನ್ನು ಸಲ್ಲಿಸಿರಿ. ಇದು ನಿಮ್ಮ ಮೇಲಿನ ಹೆಚ್ಚುವರಿ ಹೊಣೆಯಾಗಿದೆ – ನಿಮ್ಮ ಒಡೆಯನು ನಿಮ್ಮನ್ನು ‘ಮಹ್ಮೂದ್’(ವ್ಯಾಪಕವಾಗಿ ಹೊಗಳಲ್ಪಡುವ) ಸ್ಥಾನಕ್ಕೆ ತಲುಪಿಸಲೂ ಬಹುದು.

 80. ಮತ್ತು ಹೇಳಿರಿ; ನನ್ನೊಡೆಯಾ, ನೀನು ನನ್ನನ್ನು ತಲುಪಿಸುವಲ್ಲಿಗೆಲ್ಲಾ ಸತ್ಯದೊಂದಿಗೇ ತಲುಪಿಸು ಹಾಗೂ ನನ್ನನ್ನು ನೀನು ಹೊರಡಿಸುವ ಎಲ್ಲೆಡೆಯಿಂದಲೂ ಸತ್ಯದೊಂದಿಗೇ ಹೊರಡಿಸು ಮತ್ತು ನಿನ್ನ ಕಡೆಯಿಂದ ನನಗೆ ಸಹಾಯಕ ಶಕ್ತಿಯನ್ನು ಒದಗಿಸು.

81. ಮತ್ತು ಹೇಳಿರಿ; ಸತ್ಯವು ಬಂದು ಬಿಟ್ಟಿತು ಮತ್ತು ಅಸತ್ಯವು ಅಳಿದು ಹೋಯಿತು – ಖಂಡಿತವಾಗಿಯೂ ಅಸತ್ಯವು ಅಳಿಯುವಂತಹದೇ ಆಗಿದೆ.

 82. ನಾವು ಇಳಿಸಿಕೊಡುವ ಕುರ್‌ಆನ್‌ನ ಭಾಗವು ವಿಶ್ವಾಸಿಗಳ ಪಾಲಿಗೆ ಗುಣ ಹಾಗೂ ಅನುಗ್ರಹವಾಗಿರುತ್ತದೆ. ಆದರೆ ಅಕ್ರಮಿಗಳ ಮಟ್ಟಿಗೆ ಇದು ಅವರ ನಷ್ಟವನ್ನಷ್ಟೇ ಹೆಚ್ಚಿಸುತ್ತದೆ.

83. ನಾವು ಮಾನವನಿಗೆ ಕೊಡುಗೆಗಳನ್ನು ದಯಪಾಲಿಸಿದಾಗ ಅವನು (ನಮ್ಮನ್ನು ಕಡೆಗಣಿಸುತ್ತಾ) ಮುಖ ತಿರುಗಿಸಿಕೊಳ್ಳುತ್ತಾನೆ ಮತ್ತು ಮಗ್ಗಲು ಬದಲಾಯಿಸುತ್ತಾನೆ. ಇನ್ನು ಅವನಿಗೇನಾದರೂ ಹಾನಿ ಸಂಭವಿಸಿದರೆ, ಅವನು ಹತಾಶನಾಗಿ ಬಿಡುತ್ತಾನೆ.

84. ಹೇಳಿರಿ; ಪ್ರತಿಯೊಬ್ಬನೂ ತನ್ನದೇ ಶೈಲಿಯಲ್ಲಿ ಕೆಲಸಮಾಡುತ್ತಾನೆ – ಯಾರು ಸರಿದಾರಿಯಲ್ಲಿರುವರು ಎಂಬುದನ್ನು ನಿಮ್ಮ ಒಡೆಯನು ಚೆನ್ನಾಗಿ ಬಲ್ಲನು.

85. ಅವರು ನಿಮ್ಮೊಡನೆ ‘ರೂಹ್’ ಕುರಿತು ಪ್ರಶ್ನಿಸುತ್ತಾರೆ. ಹೇಳಿರಿ; ರೂಹ್ ನನ್ನ ಒಡೆಯನ ಆದೇಶಗಳಲ್ಲೊಂದು. ನಿಮಗೆ ತೀರಾ ಸೀಮಿತ ಜ್ಞಾನವನ್ನಷ್ಟೇ ನೀಡಲಾಗಿದೆ.

86. ನಾವು ಬಯಸಿದರೆ, ದಿವ್ಯವಾಣಿಯ ಮೂಲಕ ನಿಮಗೆ ಕೊಟ್ಟಿರುವುದನ್ನೆಲ್ಲಾ ಕಿತ್ತುಕೊಳ್ಳಬಲ್ಲೆವು. ಮತ್ತು ನಮ್ಮೆದುರು ನಿಮಗೆ ಯಾವ ಸಹಾಯಕರೂ ಸಿಗಲಾರರು-

87. – ನಿಮ್ಮ ಒಡೆಯನ ಕೃಪೆಯ ಹೊರತು. ನಿಮ್ಮ ಮೇಲಿರುವ ಅವನ ಅನುಗ್ರಹವು ನಿಜಕ್ಕೂ ದೊಡ್ಡದು.

88. (ದೂತರೇ,) ಹೇಳಿರಿ; ಇಂತಹ ಇನ್ನೊಂದು ಕುರ್‌ಆನ್‌ಅನ್ನು ರಚಿಸಲಿಕ್ಕೆಂದು ಎಲ್ಲ ಮಾನವರು ಮತ್ತು ಜಿನ್ನ್‌ಗಳು ಒಂದು ಗೂಡಿದರೂ, ಇಂತಹದೊಂದನ್ನು ರಚಿಸಿ ತರಲು ಅವರಿಂದಾಗದು – ಅವರು (ಇದಕ್ಕಾಗಿ) ಪರಸ್ಪರ ನೆರವಾದರೂ ಸರಿಯೇ.

89. ನಾವು ಈ ಕುರ್‌ಆನಿನಲ್ಲಿ ಜನರಿಗಾಗಿ ವಿವಿಧ ಬಗೆಯ ಸಕಲ ಉದಾಹರಣೆಗಳನ್ನು ಮುಂದಿಟ್ಟಿರುವೆವು – ಆದರೆ ಜನರಲ್ಲಿ ಹೆಚ್ಚಿನವರು ಧಿಕ್ಕರಿಸಿದರು.

90. ಅವರು ಹೇಳುತ್ತಾರೆ; ನೀವು ನಮಗಾಗಿ ಭೂಮಿಯಿಂದ ಒಂದು ಚಿಲುಮೆಯನ್ನು ಹೊರಡಿಸುವ ತನಕ. ನಾವು ನಿಮ್ಮ ಮಾತನ್ನು ನಂಬಲಾರೆವು.

91. ಅಥವಾ ನಿಮ್ಮ ಬಳಿ ಖರ್ಜೂರ ಹಾಗೂ ದ್ರಾಕ್ಷಿಗಳ ಒಂದು ತೋಟವಿದ್ದು, ನೀವು ಅದರ ನಡು ಮಧ್ಯದಲ್ಲಿ ಕಾಲುವೆಗಳನ್ನು ಹರಿಸುವ ತನಕ (ನಾವು ನಂಬಲಾರೆವು).

 92. ಅಥವಾ ನೀವೇ ಹೇಳಿಕೊಳ್ಳುವಂತೆ, ಆಕಾಶದಿಂದ ತುಂಡುಗಳನ್ನು ನೀವು ನಮ್ಮ ಮೇಲೆ ಬೀಳಿಸುವ ತನಕ ಅಥವಾ ನೀವು ಅಲ್ಲಾಹನನ್ನು ಮತ್ತು ಮಲಕ್‌ಗಳನ್ನು ನಮ್ಮ ಮುಂದೆ ತಂದು ನಿಲ್ಲಿಸುವ ತನಕ (ನಾವು ನಂಬಲಾರೆವು). 93. ಅಥವಾ ನಿಮ್ಮ ಬಳಿ ಬಂಗಾರದ ಒಂದು ಮನೆ ಇರುವ ತನಕ ಅಥವಾ ನೀವು ಆಕಾಶಕ್ಕೆ ಏರಿ ಹೋಗುವ ತನಕ (ನಾವು ನಂಬಲಾರೆವು). ಇನ್ನು ನೀವು ಅಲ್ಲಿಂದ, ನಾವು ಓದಬಹುದಾದ ಒಂದು ಗ್ರಂಥವನ್ನು ನಮಗಾಗಿ ಇಳಿಸಿ ಕೊಡುವ ತನಕ ನೀವು ಏರಿ ಹೋಗಿರುವುದನ್ನೂ ನಾವು ನಂಬಲಾರೆವು (ಎಂದು ಅವರು ಹೇಳುತ್ತಾರೆ). ನೀವು ಹೇಳಿರಿ; ನನ್ನ ಒಡೆಯನು ಪರಮ ಪಾವವನು. ನಾನು ದೂತನಾಗಿರುವ ಒಬ್ಬ ಮಾನವ ಮಾತ್ರನಲ್ಲವೇ?

94. ನಿಜವಾಗಿ, ಜನರ ಬಳಿಗೆ ಮಾರ್ಗದರ್ಶನ ಬಂದಾಗಲೆಲ್ಲಾ, ‘‘ಅಲ್ಲಾಹನೇನು ಒಬ್ಬ ಮಾನವನನ್ನು ದೂತನಾಗಿ ಕಳಿಸಿರುವನೇ?’’ ಎಂಬ ಪ್ರಶ್ನೆಯೇ ಅದನ್ನು ನಂಬದಂತೆ ಅವರನ್ನು ತಡೆದಿತ್ತು.

95. ಹೇಳಿರಿ; ಒಂದು ವೇಳೆ ಭೂಮಿಯಲ್ಲಿ ಮಲಕ್‌ಗಳು ನೆಮ್ಮದಿಯಿಂದ ನಡೆದಾಡುತ್ತಾ ಇದ್ದಿದ್ದರೆ ನಾವು ಖಂಡಿತವಾಗಿಯೂ ಆಕಾಶದಿಂದ ಅವರಿಗಾಗಿ ಒಬ್ಬ ಮಲಕ್‌ನನ್ನೇ ದೂತನಾಗಿ ಇಳಿಸುತ್ತಿದ್ದೆವು.

96. ಹೇಳಿರಿ; ನನ್ನ ಮತ್ತು ನಿಮ್ಮ ನಡುವೆ ಸಾಕ್ಷಿಯಾಗಿ ಅಲ್ಲಾಹನೇ ಸಾಕು. ಖಂಡಿತವಾಗಿಯೂ ಅವನು ತನ್ನ ದಾಸರ ಕುರಿತು ಸಂಪೂರ್ಣ ಅರಿವು ಉಳ್ಳವನಾಗಿದ್ದಾನೆ ಮತ್ತು ಅವರನ್ನು ಸದಾ ನೋಡುತ್ತಿರುವವನಾಗಿದ್ದಾನೆ.

97. ಯಾರಿಗೆ ಅಲ್ಲಾಹನು ದಾರಿ ತೋರಿದನೋ ಅವನು ಮಾತ್ರ ಸರಿದಾರಿಯಲ್ಲಿರುತ್ತಾನೆ. ಇನ್ನು ಅವನು ದಾರಿಗೆಡಿಸಿ ಬಿಟ್ಟವರಿಗಾಗಿ ನೀವು ಅವನ ಹೊರತು ಬೇರಾವ ರಕ್ಷಕನನ್ನೂ ಕಾಣಲಾರಿರಿ. ಪುನರುತ್ಥಾನ ದಿನ ನಾವು ಅವರನ್ನು, ಅವರ ಮುಖಗಳು ನೆಲಕ್ಕೆ ಒರಗಿರುವ ಸ್ಥಿತಿಯಲ್ಲಿ, ಕುರುಡರಾಗಿಯೂ ಮೂಗರಾಗಿಯೂ ಕಿವುಡರಾಗಿಯೂ ಒಟ್ಟು ಸೇರಿಸುವೆವು. ನರಕವೇ ಅವರ ನೆಲೆಯಾಗಿರುವುದು. ಅದರ ಬೆಂಕಿಯು ಮಂದವಾದಂತೆಲ್ಲಾ ನಾವು ಮತ್ತೆ ಅದನ್ನು ಭುಗಿಲೆಬ್ಬಿಸುತ್ತಿರುವೆವು.

98. ಇದು, ಅವರು ನಮ್ಮ ವಚನಗಳನ್ನು ಧಿಕ್ಕರಿಸಿದ್ದಕ್ಕಾಗಿ ಮತ್ತು ‘‘ನಾವು ಕೇವಲ ಎಲುಬುಗಳಾಗಿಯೂ ಛಿದ್ರ ಛಿದ್ರರಾಗಿಯೂ ಮಾರ್ಪಟ್ಟ ಬಳಿಕ ನಮ್ಮನ್ನೇನು ಮತ್ತೆ ಹೊಸದಾಗಿ ಸೃಷ್ಟಿಸಿ ಜೀವಂತಗೊಳಿಸಲಾಗುವುದೇ?’’ ಎಂದುದಕ್ಕಾಗಿ ಅವರಿಗೆ ಸಿಗಲಿರುವ ಪ್ರತಿಫಲವಾಗಿದೆ.

99. ಅವರೇನು ಕಾಣುತ್ತಿಲ್ಲವೇ, ಆಕಾಶಗಳನ್ನು ಮತ್ತು ಭೂಮಿಯನ್ನು ಸೃಷ್ಟಿಸಿದವನು, ಅವರಂತಹವರನ್ನು ಸೃಷ್ಟಿಸಲು ಖಂಡಿತ ಶಕ್ತನಾಗಿರುವನೆಂದು? ನಿಜವಾಗಿ ಅವನು ಅವರಿಗೆ ಒಂದು ಅವಧಿಯನ್ನು ನಿಶ್ಚಯಿಸಿರುವನು – ಅದರಲ್ಲಿ ಸಂಶಯವೇನೂ ಇಲ್ಲ. ಆದರೂ ಅಕ್ರಮಿಗಳು ಧಿಕ್ಕಾರದ ನೀತಿಯಲ್ಲೇ ಸ್ಥಿರರಾಗಿದ್ದಾರೆ.

100. ಹೇಳಿರಿ; ಒಂದು ವೇಳೆ ನನ್ನ ಒಡೆಯನ ಭಂಡಾರಗಳೆಲ್ಲಾ ನಿಮ್ಮ ಮಾಲಕತ್ವದಲ್ಲಿ ಇದ್ದಿದ್ದರೆ, ಎಲ್ಲಿ ಖರ್ಚಾಗಿ ಬಿಡುವುದೋ ಎಂಬ ಭಯದಿಂದ ನೀವು ಅದನ್ನೆಲ್ಲಾ ತಡೆದಿಟ್ಟುಕೊಳ್ಳುತ್ತಿದ್ದಿರಿ – ಮಾನವನು ನಿಜಕ್ಕೂ ತೀರಾ ಸಣ್ಣ ಮನಸ್ಸಿನವನಾಗಿದ್ದಾನೆ.

 101. ನಾವು ಮೂಸಾರಿಗೆ ಸ್ಪಷ್ಟವಾದ ಒಂಭತ್ತು ಪುರಾವೆಗಳನ್ನು ನೀಡಿದ್ದೆವು. ನೀವು ಇಸ್ರಾಈಲರ ಸಂತತಿಗಳೊಡನೆ ಕೇಳಿ ನೋಡಿರಿ. ಅವರ ಬಳಿಗೆ ಅವರು (ಮೂಸಾ) ಬಂದಾಗ ಅವರೊಡನೆ ಫಿರ್‌ಔನ್ ಹೇಳಿದನು; ಓ ಮೂಸಾ, ನಾನಂತು ನಿನ್ನನ್ನು ಮಾಟಪೀಡಿತನೆಂದೇ ಭಾವಿಸುತ್ತೇನೆ.

 102. ಅವರು (ಮೂಸಾ) ಹೇಳಿದರು; ಇವುಗಳನ್ನೆಲ್ಲಾ (ಜನರ) ಕಣ್ಣು ತೆರೆಸಲಿಕ್ಕಾಗಿ ಆಕಾಶಗಳ ಮತ್ತು ಭೂಮಿಯ ಒಡೆಯನೇ ಇಳಿಸಿ ಕೊಟ್ಟಿರುವನೆಂಬುದು ನಿನಗೆ ಚೆನ್ನಾಗಿ ತಿಳಿದಿದೆ. ಓ ಫಿರ್‌ಔನ್, ನಾನಂತು ನಿನ್ನನ್ನು ಸರ್ವನಾಶವಾಗುವವನೆಂದು ಭಾವಿಸುತ್ತೇನೆ.

103. ಆ ಬಳಿಕ ಅವನು ಅವರನ್ನು ಭೂಮಿಯಿಂದ ನಿರ್ಮೂಲನ ಗೊಳಿಸಬಯಸಿದನು. ಆದರೆ ನಾವು ಅವನನ್ನು ಹಾಗೂ ಅವನ ಜೊತೆಗಿದ್ದ ಎಲ್ಲರನ್ನೂ ಮುಳುಗಿಸಿಬಿಟ್ಟೆವು.

104. ಆ ಬಳಿಕ ನಾವು ಇಸ್ರಾಈಲರ ಸಂತತಿಯೊಡನೆ, ‘‘ನೀವು ಭೂಮಿಯಲ್ಲಿ ವಾಸಿಸಿರಿ. ಕೊನೆಗೆ ಲೋಕಾಂತ್ಯದ ವಾಗ್ದಾನಿತ ಸಮಯ ಬಂದಾಗ ನಾವು ನಿಮ್ಮೆಲ್ಲರನ್ನು ಒಂದಾಗಿ ಹೊರತರುವೆವು’’ ಎಂದೆವು.

105. ನಾವು ಇದನ್ನು (ಕುರ್‌ಆನನ್ನು) ಸತ್ಯದೊಂದಿಗೆ ಇಳಿಸಿಕೊಟ್ಟಿರುವೆವು ಮತ್ತು ಇದು ಸತ್ಯದೊಂದಿಗೇ ಇಳಿದು ಬಂದಿದೆ. ಇನ್ನು ನಿಮ್ಮನ್ನು ನಾವು ಸುವಾರ್ತೆ ನೀಡುವವರಾಗಿ ಹಾಗೂ ಎಚ್ಚರಿಸುವವರಾಗಿಯೇ ಕಳಿಸಿರುತ್ತೇವೆ.

106. ನೀವು ಅದನ್ನು ಸ್ವಲ್ಪ ಸ್ವಲ್ಪವಾಗಿ ಜನರಿಗೆ ಕೇಳಿಸುತ್ತಿರಬೇಕೆಂದು, ನಾವು ಕುರ್‌ಆನನ್ನು ಭಾಗ ಭಾಗವಾಗಿ ಇಳಿಸಿ ಕೊಟ್ಟಿರುವೆವು. ಮತ್ತು ನಾವು ಅದನ್ನು ಬಹಳ ಯೋಜಿತ ರೀತಿಯಲ್ಲಿ ಇಳಿಸಿಕೊಟ್ಟಿರುವೆವು.

107. ಹೇಳಿರಿ; ನೀವು ಇದನ್ನು ನಂಬಿರಿ ಅಥವಾ ನಂಬದೆ ಇರಿ – ಆದರೆ ಈ ಹಿಂದೆ ಜ್ಞಾನ ಪ್ರಾಪ್ತವಾಗಿದ್ದವರು ಮಾತ್ರ ತಮಗೆ ಇದನ್ನು ಕೇಳಿಸಲಾದಾಗ, ತಮ್ಮ ಮುಖಗಳನ್ನು ನೆಲಕ್ಕಿಟ್ಟು ಸಾಷ್ಟಾಂಗವೆರಗಿ ಬಿಡುತ್ತಾರೆ.

108. ಮತ್ತು ಅವರು, ‘‘ನಮ್ಮೊಡೆಯನು ಪರಮ ಪಾವವನು. ನಮ್ಮ ಒಡೆಯನು ಮಾಡಿರುವ ವಾಗ್ದಾನವು ಖಂಡಿತ ಪೂರ್ತಿಯಾಗಲಿದೆ’’ಎನ್ನುತ್ತಾರೆ;

109. ಹಾಗೆಯೇ ಅವರು ರೋದಿಸುತ್ತಾ ತಮ್ಮ ಮುಖಗಳನ್ನು ನೆಲಕ್ಕಿಟ್ಟು ಬಿಡುತ್ತಾರೆ ಮತ್ತು ಇದು (ಕುರ್‌ಆನ್) ಅವರ ಭಕ್ತಿ ಭಾವವನ್ನು ಹೆಚ್ಚಿಸುತ್ತಲೇ ಇರುತ್ತದೆ.

110. ನೀವು (ಅವನನ್ನು) ಅಲ್ಲಾಹನೆಂದು ಕರೆಯಿರಿ ಅಥವಾ ರಹ್ಮಾನನೆಂದು ಕರೆಯಿರಿ. ನೀವು ಅವನನ್ನು ಏನೆಂದು ಕರೆದರೂ ಅತ್ಯುತ್ತಮ ಹೆಸರುಗಳೆಲ್ಲಾ ಅವನಿಗಾಗಿಯೇ ಇವೆ. ನೀವು ನಿಮ್ಮ ನಮಾಝ್‌ಗಳಲ್ಲಿ ಹೆಚ್ಚು ಧ್ವನಿಯೇರಿಸಬೇಡಿ ಮತ್ತು ಅವುಗಳನ್ನು ತೀರಾ ನಿಶ್ಯಬ್ದಗೊಳಿಸಲೂ ಬೇಡಿ. ಅವೆರಡರ ನಡುವಿನ (ಮಧ್ಯಮ) ಮಾರ್ಗವನ್ನು ಅನುಸರಿಸಿರಿ.

111. ಹೇಳಿರಿ; ಎಲ್ಲ ಹೊಗಳಿಕೆಗಳು ಅಲ್ಲಾಹನಿಗೆ ಮೀಸಲು. ಅವನು ಯಾರನ್ನೂ ತನ್ನ ಪುತ್ರನಾಗಿಸಿಕೊಂಡಿಲ್ಲ. ವಿಶ್ವಾಧಿಪತ್ಯದಲ್ಲಿ ಅವನಿಗೆ ಯಾರೂ ಪಾಲುದಾರರಿಲ್ಲ. ತನ್ನನ್ನು ದೌರ್ಬಲ್ಯದಿಂದ ರಕ್ಷಿಸುವ ಸಹಾಯಕರ ಅಗತ್ಯವೂ ಅವನಿಗಿಲ್ಲ. ನೀವು ಅವನ ಮಹಿಮೆಯನ್ನು ಕೊಂಡಾಡಬೇಕಾದ ರೀತಿಯಲ್ಲಿ ಕೊಂಡಾಡಿರಿ.