29. Al Ankabut

29. ಅಲ್ ಅನ್ಕಬೂತ್ (ಜೇಡ)

ವಚನಗಳು – 69, ಮಕ್ಕಃ

ಅಲ್ಲಾಹನ ಹೆಸರಿಂದ – ಅವನು ಅಪಾರ ದಯಾಳು, ಕರುಣಾಮಯಿ.

1. ಅಲಿಫ್ ಲಾಮ್ ಮ್ಮೀಮ್.

2. ಜನರೇನು, ನಾವು ನಂಬಿದೆವು ಎಂದು ಹೇಳಿದೊಡನೆ ತಮ್ಮನ್ನು ಬಿಟ್ಟು ಬಿಡಲಾಗುವುದೆಂದು ಹಾಗೂ ತಮ್ಮನ್ನು ಪರೀಕ್ಷಿಸಲಾಗುವುದಿಲ್ಲವೆಂದು ಭಾವಿಸಿದ್ದಾರೆಯೇ?

 3. ಅವರ ಹಿಂದಿನವರನ್ನೂ ನಾವು ಪರೀಕ್ಷಿಸಿರುವೆವು. ಸತ್ಯವಂತರು ಯಾರೆಂಬುದನ್ನು ಅಲ್ಲಾಹನು, ಖಂಡಿತ ಅರಿಯುವನು ಮತ್ತು ಸುಳ್ಳರನ್ನೂ ಅವನು ಖಂಡಿತ ಅರಿಯುವನು.

4. ದುಷ್ಟ ಕೆಲಸಗಳನ್ನು ಮಾಡುವವರು, ಅವರು ನಮ್ಮನ್ನು ಮೀರಿ ಹೋಗಬಲ್ಲರೆಂದು ಭಾವಿಸಿಕೊಂಡಿರುವರೇ? ಎಷ್ಟೊಂದು ಕೆಟ್ಟ ತೀರ್ಮಾನ ಅವರದು!

5. ಅಲ್ಲಾಹನನ್ನು ಭೇಟಿಯಾಗುವ ನಿರೀಕ್ಷೆ ಉಳ್ಳವರು (ತಿಳಿದಿರಲಿ;) ಅಲ್ಲಾಹನು ನಿಶ್ಚಯಿಸಿರುವ ಆ ಹೊತ್ತು ಖಂಡಿತ ಬರಲಿದೆ ಮತ್ತು ಅವನು ಎಲ್ಲವನ್ನೂ ಕೇಳುವವನು ಹಾಗೂ ಬಲ್ಲವನಾಗಿದ್ದಾನೆ.

6. ಪ್ರತಿಯೊಬ್ಬ ಶ್ರಮಿಸುವವನು ಸ್ವತಃ ತನ್ನ ಹಿತಕ್ಕಾಗಿ ಶ್ರಮಿಸುತ್ತಾನೆ. ಅಲ್ಲಾಹನಂತು ಸರ್ವಲೋಕಗಳಿಂದ ನಿರಪೇಕ್ಷನಾಗಿದ್ದಾನೆ.

7. ಸತ್ಯವನ್ನು ನಂಬಿ ಸತ್ಕರ್ಮಗಳನ್ನು ಮಾಡಿದವರಿಂದ ನಾವು ಅವರ ಪಾಪಗಳನ್ನು ನಿವಾರಿಸುವೆವು ಮತ್ತು ಅವರು ಮಾಡಿದ್ದ ಕರ್ಮಗಳಿಗಿಂತ ಪ್ರತಿಫಲವನ್ನು ಅವರಿಗೆ ನೀಡುವೆವು.

8. ಮತ್ತು ನಾವು ಮನುಷ್ಯನಿಗೆ, ತನ್ನ ತಾಯಿ ತಂದೆಯ ಜೊತೆ ಅತ್ಯುತ್ತಮವಾಗಿ ವರ್ತಿಸಬೇಕೆಂದು ಆದೇಶಿಸಿರುವೆವು ಹಾಗೂ (ದೇವರೆಂದು) ನಿನಗೆ ತಿಳಿದಿಲ್ಲದವರನ್ನು ನನ್ನ ಜೊತೆ ಪಾಲುಗೊಳಿಸಲು ಅವರು ನಿನ್ನನ್ನು ಆಗ್ರಹಿಸಿದರೆ, ಅವರನ್ನು ಅನುಸರಿಸಬೇಡ. ಕೊನೆಗೆ ನೀವು ನನ್ನ ಬಳಿಗೇ ಮರಳಿ ಬರುವಿರಿ, ನೀವು ಏನೆಲ್ಲ ಮಾಡುತ್ತಿದ್ದಿರೆಂಬುದನ್ನು ಆಗ ನಾನು ನಿಮಗೆ ತಿಳಿಸುವೆನು.

9. ಸತ್ಯವನ್ನು ನಂಬಿದವರನ್ನು – ಹಾಗೂ ಸತ್ಕರ್ಮಗಳನ್ನು ಮಾಡಿದವರನ್ನು ನಾವು ಸ್ವರ್ಗದೊಳಗೆ ಸಜ್ಜನರ ಜೊತೆ ಸೇರಿಸುವೆವು.

 10. ಜನರಲ್ಲೊಬ್ಬನು, ನಾವು ಅಲ್ಲಾಹನನ್ನು ನಂಬಿದೆವು ಎನ್ನುತ್ತಾನೆ. ಆದರೆ ಆ ಬಳಿಕ ಅಲ್ಲಾಹನ ಮಾರ್ಗದಲ್ಲಿ ತನ್ನನ್ನು ಸತಾಯಿಸಲಾದರೆ, ಜನರಿಂದ ಬಂದ ಪರೀಕ್ಷೆಯನ್ನು ಅವನು ಅಲ್ಲಾಹನ ಶಿಕ್ಷೆ ಎಂಬಂತೆ ಪರಿಗಣಿಸುತ್ತಾನೆ. ಇನ್ನು ನಿಮ್ಮ ಒಡೆಯನ ಸಹಾಯ ಬಂದರೆ ಖಂಡಿತವಾಗಿಯೂ ಅವರು, ನಾವು ನಿಮ್ಮ ಜೊತೆಗೇ ಇದ್ದೆವು ಎನ್ನುತ್ತಾರೆ. ಲೋಕದೆಲ್ಲೆಡೆಯ ಜನರ ಮನಸ್ಸುಗಳಲ್ಲಿ ಏನಿದೆ ಎಂಬುದು ಅಲ್ಲಾಹನಿಗೆ ಚೆನ್ನಾಗಿ ತಿಳಿಯದೇ?

11. ಯಾರು ನಂಬಿರುವವರು ಮತ್ತು ಯಾರು ಕಪಟಿಗಳು ಎಂಬುದನ್ನು ಅಲ್ಲಾಹನು ಖಂಡಿತ ಅರಿಯುವನು.

12. ಧಿಕ್ಕಾರಿಗಳು ವಿಶ್ವಾಸಿಗಳೊಡನೆ, ‘‘ನೀವು ನಮ್ಮ ದಾರಿಯನ್ನು ಅನುಸರಿಸಿರಿ, ನಿಮ್ಮ ಪಾಪಗಳನ್ನು ನಾವು ಹೊತ್ತುಕೊಳ್ಳುವೆವು’’ ಎನ್ನುತ್ತಾರೆ. ಆದರೆ ಅವರು, ಅವರ (ವಿಶ್ವಾಸಿಗಳ) ಯಾವ ಪಾಪವನ್ನೂ (ತಮ್ಮಿಚ್ಛೆಯಿಂದ) ಹೊರಲಾರರು. ಅವರು ಖಂಡಿತ ಸುಳ್ಳುಗಾರರು.

 13. ಅವರು ಖಂಡಿತ ತಮ್ಮದೇ ಹೊರೆಗಳನ್ನು ಮತ್ತು ತಮ್ಮ ಹೊರೆಗಳ ಜೊತೆ ಇನ್ನಷ್ಟು ಹೊರೆಗಳನ್ನು ಹೊತ್ತಿರುವರು. ಅವರು ರಚಿಸುತ್ತಿದ್ದ ಸುಳ್ಳುಗಳ ಕುರಿತು ಪುನರುತ್ಥಾನ ದಿನ ಅವರನ್ನು ಖಂಡಿತ ಪ್ರಶ್ನಿಸಲಾಗುವುದು.

14. ನಾವು ನೂಹರನ್ನು ಅವರ ಜನಾಂಗದೆಡೆಗೆ ಕಳಿಸಿದ್ದ್ದೆವು. ಅವರು ಒಂಭತ್ತುನೂರ ಐವತ್ತು ವರ್ಷಗಳ ಕಾಲ ಅವರ ಜೊತೆಗಿದ್ದರು. ಕೊನೆಗೆ ಬಿರುಗಾಳಿಯು ಆ ಜನರನ್ನು ಆಕ್ರಮಿಸಿತು. ಅವರು ಅಕ್ರಮಿಗಳಾಗಿದ್ದರು.

15. ನಾವು ಅವರನ್ನು (ನೂಹರನ್ನು) ಮತ್ತು ಹಡಗಿನವರನ್ನು ರಕ್ಷಿಸಿದೆವು ಮತ್ತು ಅದನ್ನು (ಆ ಹಡಗನ್ನು) ಸರ್ವಲೋಕದವರ ಪಾಲಿಗೆ ಒಂದು ಪಾಠವಾಗಿಸಿದೆವು.

16. ಮತ್ತು ಇಬ್ರಾಹೀಮರು ತಮ್ಮ ಜನಾಂಗದವರೊಡನೆ ಹೇಳಿದರು; ಅಲ್ಲಾಹನನ್ನೇ ಆರಾಧಿಸಿರಿ ಮತ್ತು ಅವನಿಗೆ ಅಂಜಿರಿ. ನೀವು ಬಲ್ಲವರಾಗಿದ್ದರೆ ನಿಮ್ಮ ಪಾಲಿಗೆ ಅದುವೇ ಉತ್ತಮ.

 17. ನೀವು ಅಲ್ಲಾಹನನ್ನು ಬಿಟ್ಟು ವಿಗ್ರಹಗಳನ್ನು ಪೂಜಿಸುತ್ತಿರುವಿರಿ ಮತ್ತು ಸುಳ್ಳನ್ನು ಸೃಷ್ಟಿಸುತ್ತಿರುವಿರಿ, ನೀವು ಅಲ್ಲಾಹನನ್ನು ಬಿಟ್ಟು ಯಾರನ್ನೆಲ್ಲಾ ಪೂಜಿಸುತ್ತಿರುವಿರೋ ಅವರು ನಿಮಗೆ ಆಹಾರವನ್ನು ಒದಗಿಸಲು ಶಕ್ತರಲ್ಲ. ಆದ್ದರಿಂದ ನೀವು ಆಹಾರವನ್ನು ಅಲ್ಲಾಹನ ಬಳಿಯಲ್ಲೇ ಹುಡುಕಿರಿ, ಅವನನ್ನೇ ಆರಾಧಿಸಿರಿ ಮತ್ತು ಅವನಿಗೆ ಕೃತಜ್ಞತೆ ಸಲ್ಲಿಸಿರಿ. (ಕೊನೆಗೆ) ನೀವು ಅವನ ಬಳಿಗೇ ಮರಳುವಿರಿ.

18. ನೀವೀಗ ಇದನ್ನು (ಸತ್ಯವನ್ನು) ತಿರಸ್ಕರಿಸುತ್ತೀರಾದರೆ (ನಿಮಗೆ ತಿಳಿದಿರಲಿ); ನಿಮಗಿಂತ ಹಿಂದಿನ ಸಮುದಾಯಗಳೂ ತಿರಸ್ಕರಿಸಿದ್ದವು. ದೂತರ ಮೇಲಿರುವುದು, ಸ್ಪಷ್ಟವಾಗಿ (ಸತ್ಯವನ್ನು) ತಲುಪಿಸುವ ಹೊಣೆ ಮಾತ್ರ.

 19. ಯಾವ ರೀತಿ ಅಲ್ಲಾಹನು ಸೃಷ್ಟಿಕಾರ್ಯವನ್ನು ಆರಂಭಿಸುತ್ತಾನೆ ಮತ್ತು ಅದನ್ನು ಪುನರಾವರ್ತಿಸುತ್ತಾನೆ ಎಂಬುದನ್ನು ಅವರು ಕಂಡಿಲ್ಲವೇ? ಅಲ್ಲಾಹನ ಮಟ್ಟಿಗೆ ಅದು ಸರಳ ಕಾರ್ಯವಾಗಿದೆ.

 20. ಹೇಳಿರಿ; ನೀವು ಭೂಮಿಯಲ್ಲಿ ಸಂಚರಿಸಿರಿ ಮತ್ತು ಅವನು (ಅಲ್ಲಾಹನು) ಯಾವ ರೀತಿ ಸೃಷ್ಟಿಕಾರ್ಯವನ್ನು ಆರಂಭಿಸುತ್ತಾನೆ ಎಂಬುದನ್ನು ನೋಡಿರಿ. ಅದೇ ಅಲ್ಲಾಹನು ಮತ್ತೊಂದು ಬಾರಿ (ಎಲ್ಲವನ್ನೂ) ಜೀವಂತಗೊಳಿಸಲಿದ್ದಾನೆ. ಅಲ್ಲಾಹನಂತು ಎಲ್ಲವನ್ನೂ ಮಾಡಲು ಖಂಡಿತ ಶಕ್ತನಾಗಿದ್ದಾನೆ.

 21. ಅವನು ತಾನಿಚ್ಛಿಸಿದವರನ್ನು ಶಿಕ್ಷಿಸುತ್ತಾನೆ ಮತ್ತು ತಾನಿಚ್ಛಿಸಿದವರ ಮೇಲೆ ಕೃಪೆ ತೋರುತ್ತಾನೆ. (ಕೊನೆಗೆ) ನೀವೆಲ್ಲರೂ ಅವನೆಡೆಗೇ ಮರಳುವಿರಿ.

22. ಭೂಮಿಯಲ್ಲಾಗಲಿ ಆಕಾಶದಲ್ಲಾಗಲಿ (ಅಲ್ಲಾಹನಿಂದ) ತಪ್ಪಿಸಿಕೊಳ್ಳಲು ನಿಮಗೆ ಖಂಡಿತ ಸಾಧ್ಯವಿಲ್ಲ. ಅಲ್ಲಾಹನ ಹೊರತು ನಿಮಗೆ ಬೇರಾರೂ ಪೋಷಕರಾಗಲಿ ಸಹಾಯಕರಾಗಲಿ ಇಲ್ಲ.

23. ಅಲ್ಲಾಹನ ವಚನಗಳನ್ನು ಮತ್ತು ಅವನನ್ನು ಭೇಟಿಯಾಗಲಿಕ್ಕಿದೆ ಎಂಬುದನ್ನು ಧಿಕ್ಕರಿಸಿದವರು ನನ್ನ ಕೃಪೆಯ ಕುರಿತು ನಿರಾಶರಾಗಿರುವರು. ಅವರೇ, ಕಠಿಣ ಶಿಕ್ಷೆಗೆ ತುತ್ತಾಗುವವರು.

 24. ‘‘ಅವನನ್ನು ಕೊಲ್ಲಿರಿ ಅಥವಾ ಅವನನ್ನು ಸುಟ್ಟುಬಿಡಿರಿ’’ ಎನ್ನುವುದಷ್ಟೇ ಅವರ (ಇಬ್ರಾಹೀಮರ) ಜನಾಂಗದವರ ಉತ್ತರವಾಗಿತ್ತು. ಆದರೆ ಅಲ್ಲಾಹನು ಅವರನ್ನು ಬೆಂಕಿಯಿಂದ ರಕ್ಷಿಸಿದನು. ನಂಬುವ ಜನರಿಗೆ ಇದರಲ್ಲಿ ಖಂಡಿತ ಪಾಠವಿದೆ.

25. ಅವರು (ಇಬ್ರಾಹೀಮರು) ಹೇಳಿದರು; ನೀವು ಅಲ್ಲಾಹನನ್ನು ಬಿಟ್ಟು ವಿಗ್ರಹಗಳನ್ನು ನೆಚ್ಚಿಕೊಂಡಿರುವಿರಿ. ಇಹಲೋಕದ ಬದುಕಿನಲ್ಲಿ ನಿಮ್ಮ ನಡುವೆ ಭಾರೀ ಪ್ರೇಮವಿದೆ. ಆದರೆ ಪುನರುತ್ಥಾನ ದಿನ ನೀವು ಪರಸ್ಪರರನ್ನು ಧಿಕ್ಕರಿಸುವಿರಿ ಮತ್ತು ಪರಸ್ಪರ ಶಪಿಸಿಕೊಳ್ಳುವಿರಿ. ನರಕವೇ ನಿಮ್ಮ ಅಂತಿಮ ನೆಲೆಯಾಗಿರುವುದು ಮತ್ತು ನಿಮಗೆ ಯಾವ ಸಹಾಯಕರೂ ದೊರೆಯಲಾರರು.

26. ಲೂತರು ಆತನಲ್ಲಿ ನಂಬಿಕೆ ಇಟ್ಟರು ಮತ್ತು ಹೇಳಿದರು; ನಾನು ನನ್ನ ಒಡೆಯನ ಕಡೆಗೆ ವಲಸೆ ಹೋಗುತ್ತಿದ್ದೇನೆ. ಖಂಡಿತವಾಗಿಯೂ ಅವನು ಭಾರೀ ಪ್ರಬಲನು ಮತ್ತು ಯುಕ್ತಿವಂತನು.

27. ನಾವು ಅವರಿಗೆ (ಇಬ್ರಾಹೀಮರಿಗೆ) ಇಸ್‌ಹಾಕ್ ಮತ್ತು ಯಅಕೂಬರನ್ನು ನೀಡಿದೆವು ಮತ್ತು ಅವರ ಸಂತತಿಯ ಕೆಲವರಿಗೆ ಪ್ರವಾದಿತ್ವವನ್ನೂ ಗ್ರಂಥವನ್ನೂ ನೀಡಿದೆವು ಮತ್ತು ಅವರಿಗೆ (ಇಬ್ರಾಹೀಮರಿಗೆ) ಇಹಲೋಕದಲ್ಲಿ ಅವರ ಪ್ರತಿಫಲವನ್ನು ನೀಡಿದೆವು. ಪರಲೋಕದಲ್ಲಿ ಅವರು ಖಂಡಿತ ಸಜ್ಜನರ ಸಾಲಿನಲ್ಲಿರುವರು.

28. ಲೂತರು ತಮ್ಮ ಜನಾಂಗದವರೊಡನೆ ಹೇಳಿದರು; ‘‘ನೀವು ತೀರಾ ಅಶ್ಲೀಲ ಕೃತ್ಯವೊಂದನ್ನು ಎಸಗುತ್ತಿರುವಿರಿ. ನಿಮಗಿಂತ ಮುಂಚೆ ಸರ್ವಲೋಕಗಳಲ್ಲಿ ಯಾರೊಬ್ಬರೂ ಇಂತಹ ಕೃತ್ಯದಲ್ಲಿ ತೊಡಗಿರಲಿಲ್ಲ’’.

29. ‘‘ನೀವೇನು ಮಹಿಳೆಯರನ್ನು ಬಿಟ್ಟು ಪುರುಷರ ಜೊತೆ (ಕಾಮದಲ್ಲಿ) ನಿರತರಾಗುತ್ತೀರಾ? ಮತ್ತು ಪ್ರಯಾಣಿಕರನ್ನು ದೋಚುತ್ತೀರಾ? ನೀವಂತೂ ನಿಮ್ಮ ಸಭೆಗಳಲ್ಲೇ ದುಷ್ಟ ಕಾರ್ಯಗಳಲ್ಲಿ ನಿರತರಾಗುತ್ತೀರಿ’’. ಇದಕ್ಕೆ ಉತ್ತರವಾಗಿ ಅವರ ಜನಾಂಗದವರು ಹೇಳಿದ್ದಿಷ್ಟೇ; ‘‘ನೀನು ಸತ್ಯವಂತನಾಗಿದ್ದರೆ ನಮ್ಮ ಮೇಲೆ ಅಲ್ಲಾಹನ ಶಿಕ್ಷೆಯನ್ನು ಎರಗಿಸು’’.

30. ಅವರು (ಲೂತ್), ‘‘ನನ್ನೊಡೆಯಾ ಅಶಾಂತಿ ಹಬ್ಬುವ ಈ ಜನಾಂಗದ ವಿರುದ್ಧ ನನಗೆ ನೆರವಾಗು’’ ಎಂದು ಪ್ರಾರ್ಥಿಸಿದರು.

31. ಶುಭವಾತೆರ್ಯೊಂದಿಗೆ ಇಬ್ರಾಹೀಮರ ಬಳಿಗೆ ಬಂದಿದ್ದ ನಮ್ಮ ದೂತರು (ಮಲಕ್‌ಗಳು) ಹೇಳಿದರು; ‘‘ನಾವು ಆ ನಾಡನ್ನು ಖಂಡಿತ ನಾಶ ಮಾಡುವೆವು. ಏಕೆಂದರೆ ಅದರ ವಾಸಿಗಳು ಅಕ್ರಮಿಗಳಾಗಿದ್ದಾರೆ’’ .

32. ಅವರು (ಇಬ್ರಾಹೀಮ್) ‘‘ಅಲ್ಲಿ ಲೂತ್ ಇದ್ದಾರೆ’’ ಎಂದರು. ಅವರು (ಮಲಕ್‌ಗಳು) ಹೇಳಿದರು; ‘‘ಅಲ್ಲಿ ಯಾರೆಲ್ಲಾ ಇದ್ದಾರೆಂಬುದು ನಮಗೆ ಚೆನ್ನಾಗಿ ತಿಳಿದಿದೆ. ನಾವು ಅವರನ್ನು ಮತ್ತು ಅವರ ಮನೆಯವರನ್ನು ರಕ್ಷಿಸುವೆವು. ಅವರ ಪತ್ನಿಯ ಹೊರತು. ಆಕೆ ಹಿಂದುಳಿಯುವವರ ಸಾಲಿಗೆ ಸೇರಿದ್ದಾಳೆ.

 33. ನಮ್ಮ ದೂತರು (ಮಲಕ್‌ಗಳು) ಲೂತರ ಬಳಿಗೆ ಬಂದಾಗ ಅವರು (ಲೂತರು) ಅವರ ಕುರಿತು ಗಾಬರಿಗೊಂಡರು ಮತ್ತು ಅವರ ಮನಸ್ಸು ತುಂಬಾ ನೊಂದಿತ್ತು. ಆಗ ಅವರು (ಮಲಕ್‌ಗಳು) ಹೇಳಿದರು; ನೀವು ಅಂಜಬೇಡಿ ಮತ್ತು ದುಃಖಿಸಬೇಡಿ. ನಾವು ನಿಮ್ಮನ್ನೂ ನಿಮ್ಮ ಮನೆಯವರನ್ನೂ ರಕ್ಷಿಸುವೆವು – ನಿಮ್ಮ ಪತ್ನಿಯ ಹೊರತು. ಆಕೆ ಹಿಂದುಳಿಯುವವರ ಸಾಲಿಗೆ ಸೇರಿದ್ದಾಳೆ.

 34. ಈ ನಾಡಿನವರು ಎಸಗಿದ ದುಷ್ಟ ಕೃತ್ಯಗಳ ಫಲವಾಗಿ ಅವರ ಮೇಲೆ ನಾವು ಆಕಾಶದಿಂದ ಶಿಕ್ಷೆಯನ್ನು ಎರಗಿಸುವೆವು.

35. ಬುದ್ಧಿ ಉಳ್ಳವರಿಗಾಗಿ ನಾವು ಅಲ್ಲಿನ (ಲೂತ್‌ರ ಜನಾಂಗದಲ್ಲಿನ) ಕೆಲವು ಕುರುಹುಗಳನ್ನು ಉಳಿಸಿದೆವು.

 36. ಮತ್ತು ನಾವು ಮದ್‌ಯನ್‌ನೆಡೆಗೆ ಅವರ ಸಹೋದರ ಶುಐಬ್‌ರನ್ನು ಕಳಿಸಿದೆವು. ಅವರು ಹೇಳಿದರು; ನನ್ನ ಜನಾಂಗದವರೇ, ನೀವು ಅಲ್ಲಾಹನನ್ನೇ ಪೂಜಿಸಿರಿ, ಅಂತಿಮ ದಿನವನ್ನು ನಿರೀಕ್ಷಿಸಿರಿ ಮತ್ತು ಭೂಮಿಯಲ್ಲಿ ಅಶಾಂತಿಯನ್ನು ಹಬ್ಬುವವರಾಗಿ ತಿರುಗಾಡಬೇಡಿ.

37. ಅವರು ಆತನನ್ನು ತಿರಸ್ಕರಿಸಿದರು. ಕೊನೆಗೆ ಭೂಕಂಪವು ಅವರನ್ನು ಆಕ್ರಮಿಸಿಕೊಂಡಿತು. ಬೆಳಗಾಗುವ ಹೊತ್ತಿಗೆ ಅವರು ತಮ್ಮದೇ ನಿವಾಸಗಳಲ್ಲಿ ಅಧೋಮುಖರಾಗಿ ಬಿದ್ದುಕೊಂಡಿದ್ದರು.

38. ಹಾಗೆಯೇ, ಆದ್ ಮತ್ತು ಸಮೂದ್ ಜನಾಂಗಗಳು. ನಾವು ಅವರ ವಾಸಸ್ಥಾನಗಳನ್ನು ನಿಮಗೆ ಸ್ಪಷ್ಟವಾಗಿ ತಿಳಿಸಿರುವೆವು. ಶೈತಾನನು ಅವರಿಗೆ ಅವರ ಕರ್ಮಗಳನ್ನು ಚಂದಗಾಣಿಸಿ ಬಿಟ್ಟಿದ್ದನು ಮತ್ತು ಅವರನ್ನು (ಸತ್ಯದ) ಮಾರ್ಗದಿಂದ ತಡೆದಿಟ್ಟಿದ್ದನು. ನಿಜವಾಗಿ, ಅವರು ಬುದ್ಧಿ ಉಳ್ಳವರೇ ಆಗಿದ್ದರು.

39. ಹಾಗೆಯೇ ಕಾರೂನ್, ಫಿರ್‌ಔನ್ ಮತ್ತು ಹಾಮಾನ್. ಅವರ ಬಳಿಗೆ ಮೂಸಾ ಬಹಳ ಸ್ಪಷ್ಟ ಪುರಾವೆಗಳೊಂದಿಗೆ ಬಂದಿದ್ದರು. ಆದರೆ ಅವರು ಭೂಮಿಯಲ್ಲಿ ದೊಡ್ಡಸ್ತಿಕೆ ಮೆರೆದರು. ಕೊನೆಗೆ ಓಡಿಹೋಗಲು ಅವರಿಗೆ ಸಾಧ್ಯವಾಗಲಿಲ್ಲ.

 40. ಅವರಲ್ಲಿ ಪ್ರತಿಯೊಬ್ಬರನ್ನೂ ನಾವು ಅವರ ಪಾಪಗಳಿಗಾಗಿ ದಂಡಿಸಿದೆವು. ಅವರಲ್ಲಿ ಕೆಲವರ ಮೇಲೆ ನಾವು ಕಲ್ಲಿನ ಮಳೆಯನ್ನು ಸುರಿಸಿದರೆ, ಕೆಲವರು ಭೀಕರ ಬಿರುಗಾಳಿಗೆ ತುತ್ತಾದರು. ಮತ್ತೆ ಕೆಲವರನ್ನು ನಾವು ಭೂಮಿಯೊಳಗೆ ಅದುಮಿಬಿಟ್ಟರೆ, ಇನ್ನು ಕೆಲವರನ್ನು ನಾವು ಮುಳುಗಿಸಿಬಿಟ್ಟೆವು. ಅಲ್ಲಾಹನು ಅವರ ಮೇಲೆ ಅಕ್ರಮ ಎಸಗುವವನಾಗಿರಲಿಲ್ಲ. ಅವರು ತಮ್ಮ ಮೇಲೆ ತಾವೇ ಅಕ್ರಮವೆಸಗಿಕೊಂಡರು.

41. ಅಲ್ಲಾಹನ ಹೊರತು ಅನ್ಯರನ್ನು ತಮ್ಮ ಪೋಷಕರಾಗಿಸಿಕೊಂಡವರ ಉದಾಹರಣೆಯು ಒಂದು ಜೇಡರ ಹುಳುವಿನಂತಿದೆ. ಅದು ಒಂದು ಮನೆಯನ್ನು ನಿರ್ಮಿಸುತ್ತದೆ. ಮತ್ತು ಮನೆಗಳ ಪೈಕಿ ಅತ್ಯಂತ ದುರ್ಬಲ ಮನೆ ಜೇಡರ ಹುಳುವಿನ ಮನೆಯಾಗಿರುತ್ತದೆ. ಅವರಿಗೆ ಇದು ತಿಳಿದಿದ್ದರೆ ಎಷ್ಟು ಚೆನ್ನಾಗಿತ್ತು!

42. ಅವರು ಅಲ್ಲಾಹನ ಹೊರತು ಯಾರನ್ನೆಲ್ಲಾ ಪ್ರಾರ್ಥಿಸುತ್ತಾರೆಂಬುದನ್ನು ಅಲ್ಲಾಹನು ಚೆನ್ನಾಗಿ ಬಲ್ಲನು. ಅವನು ಮಹಾ ಪ್ರಬಲನೂ ಯುಕ್ತಿವಂತನೂ ಆಗಿದ್ದಾನೆ.

43. ಇವು ಮಾನವರಿಗಾಗಿ ನಾವು ಮುಂದಿಡುವ ಉದಾಹರಣೆಗಳು. ಆದರೆ ಬಲ್ಲವರು ಮಾತ್ರ ಇವುಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ.

44. ಅಲ್ಲಾಹನು ಆಕಾಶಗಳನ್ನು ಹಾಗೂ ಭೂಮಿಯನ್ನು ನ್ಯಾಯೋಚಿತವಾಗಿಯೇ ಸೃಷ್ಟಿಸಿರುವನು. ನಂಬುವವರ ಪಾಲಿಗೆ ಇದರಲ್ಲಿ ಪಾಠವಿದೆ.

 ಕಾಂಡ – 21

45. (ದೂತರೇ,) ನಿಮಗೆ ದಿವ್ಯವಾಣಿಯ ಮೂಲಕ ಕಳಿಸಲಾಗಿರುವುದನ್ನು ನೀವು ಓದಿ ಕೇಳಿಸಿರಿ ಮತ್ತು ನಮಾಝ್‌ಅನ್ನು ಪಾಲಿಸಿರಿ. ಖಂಡಿತವಾಗಿಯೂ ನಮಾಝ್ ಅಶ್ಲೀಲತೆಗಳಿಂದ ಹಾಗೂ ದುಷ್ಟ ಕೃತ್ಯಗಳಿಂದ ತಡೆಯುತ್ತದೆ. ಅಲ್ಲಾಹನ ನೆನಪೇ ದೊಡ್ಡದು. ನೀವು ಮಾಡುತ್ತಿರುವ ಎಲ್ಲವನ್ನೂ ಅಲ್ಲಾಹನು ಬಲ್ಲನು.

46. ಗ್ರಂಥದವರೊಡನೆ ನೀವು ಸದಾ ಅತ್ಯುತ್ತಮ ರೀತಿಯಲ್ಲೇ ಸಂವಾದ ನಡೆಸಿರಿ – ಅವರಲ್ಲಿನ ಅಕ್ರಮಿಗಳನ್ನು ಬಿಟ್ಟು. ನೀವು ಹೇಳಿರಿ; ‘‘ನಾವಂತು, ನಮಗೆ ಇಳಿಸಿಕೊಡಲಾಗಿರುವುದನ್ನೂ (ಕುರ್‌ಆನ್‌ಅನ್ನೂ) ನಿವುಗೆ ಇಳಿಸಿ ಕೊಡಲಾಗಿರುವುದನ್ನೂ (ತೌರಾತ್, ಇನ್‌ಜೀಲ್ ಇತ್ಯಾದಿಗಳನ್ನೂ) ನಂಬಿರುವೆವು. ನಮ್ಮ ದೇವರೂ ನಿಮ್ಮ ದೇವರೂ ಒಬ್ಬನೇ ಮತ್ತು ನಾವು ಅವನಿಗೆ ಶರಣಾಗಿರುವೆವು’’.

47. (ದೂತರೇ,) ಈ ರೀತಿ ನಾವು ನಿಮಗೆ ಈ ಗ್ರಂಥವನ್ನು ಇಳಿಸಿಕೊಟ್ಟಿರುವೆವು. ನಾವು ಯಾರಿಗೆ ಗ್ರಂಥವನ್ನು ನೀಡಿರುವೆವೋ ಅವರು ಇದನ್ನು ನಂಬುತ್ತಾರೆ. ಮತ್ತು ಇವರಲ್ಲೂ (ಮಕ್ಕಃದವರಲ್ಲೂ) ಇದನ್ನು ನಂಬುವ ಕೆಲವರಿದ್ದಾರೆ. ಧಿಕ್ಕಾರಿಗಳು ಮಾತ್ರವೇ ನಮ್ಮ ವಚನಗಳ ವಿರುದ್ಧ ಜಗಳಾಡುತ್ತಾರೆ.

 48. (ದೂತರೇ,) ಈ ಹಿಂದೆ ನೀವು ಯಾವುದೇ ಗ್ರಂಥವನ್ನು ಓದಿರಲಿಲ್ಲ ಮತ್ತು ನೀವು ನಿಮ್ಮ ಕೈಯಿಂದ ಏನನ್ನೂ ಬರೆದಿರಲಿಲ್ಲ. ಅನ್ಯಥಾ ಮಿಥ್ಯವಾದಿಗಳು ಸಂಶಯ ಪಡುತ್ತಿದ್ದರು.

49. ಬಹಳ ಸ್ಪಷ್ಟವಾಗಿರುವ ಈ ವಚನಗಳು ಜ್ಞಾನಿಗಳ ಮನಸ್ಸುಗಳಲ್ಲಿ ಸುರಕ್ಷಿತವಾಗಿವೆ. ಅಕ್ರಮಿಗಳ ಹೊರತು ಬೇರೆ ಯಾರೂ ನಮ್ಮ ವಚನಗಳ ವಿಷಯಗಳಲ್ಲಿ ಜಗಳಾಡುವುದಿಲ್ಲ.

 50. ‘‘ಆತನಿಗೆ ಆತನ ಒಡೆಯನ ಕಡೆಯಿಂದ ಪುರಾವೆಗಳನ್ನೇಕೆ ನೀಡಲಾಗಿಲ್ಲ?’’ ಎಂದು ಅವರು ಕೇಳುತ್ತಾರೆ. ಹೇಳಿರಿ; ಪುರಾವೆಗಳೆಲ್ಲಾ ಅಲ್ಲಾಹನ ಬಳಿಯಲ್ಲಿವೆ. ನಾನು ಸ್ಪಷ್ಟವಾಗಿ ಎಚ್ಚರಿಸುವವನು ಮಾತ್ರ.

51. ನೀವು ಅವರಿಗೆ ಓದಿ ಕೇಳಿಸುವ ಗ್ರಂಥವನ್ನು ನಾವು ನಿಮಗೆ ಇಳಿಸಿಕೊಟ್ಟಿರುವುದು ಅವರಿಗೆ ಸಾಲದೇ? ನಂಬುವವರಿಗಾಗಿ ಖಂಡಿತವಾಗಿಯೂ ಇದರಲ್ಲಿ ಅನುಗ್ರಹವಿದೆ ಮತ್ತು ಉಪದೇಶವಿದೆ.

52. ಹೇಳಿರಿ; ನನ್ನ ಹಾಗೂ ನಿಮ್ಮ ನಡುವೆ ಸಾಕ್ಷಿಯಾಗಿ ಅಲ್ಲಾಹನೇ ಸಾಕು. ಆಕಾಶಗಳಲ್ಲಿ ಹಾಗೂ ಭೂಮಿಯಲ್ಲಿ ಇರುವ ಎಲ್ಲವನ್ನೂ ಅವನು ಬಲ್ಲನು. ಮಿಥ್ಯವನ್ನು ನಂಬುವವರು ಮತ್ತು ಅಲ್ಲಾಹನನ್ನು ಧಿಕ್ಕರಿಸುವವರು – ಅವರೇ ನಷ್ಟ ಅನುಭವಿಸುವವರಾಗಿದ್ದಾರೆ.

 53. ಮತ್ತು ಅವರು ನಿಮ್ಮ ಬಳಿ ಶಿಕ್ಷೆಗಾಗಿ ಆತುರಪಡುತ್ತಾರೆ. ಒಂದು ನಿರ್ದಿಷ್ಟ ಕಾಲವು ಮೊದಲೇ ನಿಗದಿಯಾಗದೆ ಇದ್ದಿದ್ದರೆ ಈಗಾಗಲೇ ಅವರ ಮೇಲೆ ಶಿಕ್ಷೆಯು ಬಂದೆರಗಿರುತ್ತಿತ್ತು. ಮತ್ತು ಅದು, ಅವರಿಗೆ ಅರಿವೇ ಇಲ್ಲದಾಗ ಹಠಾತ್ತನೆ ಅವರ ಮೇಲೆ ಬಂದೆರಗುವುದು.

54. ಅವರು ನಿಮ್ಮ ಬಳಿ ಶಿಕ್ಷೆಗಾಗಿ ಆತುರಪಡುತ್ತಾರೆ. ನಿಜವಾಗಿ ನರಕವು (ಈಗಾಗಲೇ) ಧಿಕ್ಕಾರಿಗಳನ್ನು ಸುತ್ತುವರಿದಿದೆ.

55. ಅವರ ಮೇಲಿಂದಲೂ, ಅವರ ಕಾಲಡಿಯಿಂದಲೂ ಆ (ನರಕದ) ಶಿಕ್ಷೆಯು ಅವರನ್ನು ಆವರಿಸಿ ಕೊಳ್ಳುವ ದಿನ ಅವನು ಅವರೊಡನೆ ‘‘ಸವಿಯಿರಿ, ನಿಮ್ಮ ಕರ್ಮಗಳ ಫಲವನ್ನು’’ ಎನ್ನುವನು .

56. ಸತ್ಯವನ್ನು ನಂಬಿರುವ ನನ್ನ ದಾಸರೇ, ನನ್ನ ಭೂಮಿಯು ಖಂಡಿತ ವಿಶಾಲವಾಗಿದೆ. ನೀವು ನನ್ನನ್ನೇ ಪೂಜಿಸಿರಿ.

57. ಪ್ರತಿಯೊಂದು ಜೀವವೂ ಮರಣವನ್ನು ಸವಿಯಲೇ ಬೇಕು. ಆ ಬಳಿಕ ನಿಮ್ಮನ್ನು ನಮ್ಮೆಡೆಗೆ ಮರಳಿಸಲಾಗುವುದು.

58. ಸತ್ಯವನ್ನು ನಂಬಿ ಸತ್ಕರ್ಮಗಳನ್ನು ಮಾಡಿದವರನ್ನು ನಾವು ಸ್ವರ್ಗದಲ್ಲಿನ ಮೇಲು ಮನೆಗಳಲ್ಲಿ ವಾಸಗೊಳಿಸುವೆವು ಅವುಗಳ ತಳದಲ್ಲಿ ನದಿಗಳು ಹರಿಯುತ್ತಿರುವವು. ಅಲ್ಲಿ ಅವರು ಸದಾಕಾಲ ಇರುವರು. (ಎಷ್ಟೊಂದು) ಚೆನ್ನಾಗಿರುತ್ತದೆ, ಸತ್ಕರ್ಮಿಗಳಿಗೆ ಸಿಗುವ ಪ್ರತಿಫಲ!

59. ಅವರು ಸಹನಶೀಲರು ಹಾಗೂ ತಮ್ಮ ಒಡೆಯನಲ್ಲಿ ಭರವಸೆ ಉಳ್ಳವರಾಗಿರುತ್ತಾರೆ.

 60. ಅದೆಷ್ಟೋ ಜೀವಿಗಳಿವೆ – ಅವೆಲ್ಲಾ ತಮ್ಮ ಆಹಾರವನ್ನು ಸದಾ ಹೊತ್ತು ನಡೆಯುವುದಿಲ್ಲ. ಅಲ್ಲಾಹನೇ ಅವುಗಳಿಗೆ ಆಹಾರ ಒದಗಿಸುತ್ತಾನೆ ಮತ್ತು ನಿಮಗೂ ಒದಗಿಸುವನು. ಅವನು ಎಲ್ಲವನ್ನೂ ಕೇಳುವವನು ಮತ್ತು ಬಲ್ಲವನಾಗಿದ್ದಾನೆ.

61. ಆಕಾಶಗಳನ್ನು ಹಾಗೂ ಭೂಮಿಯನ್ನು ಸೃಷ್ಟಿಸಿದವನು ಮತ್ತು ಸೂರ್ಯ – ಚಂದ್ರರನ್ನು ನಿಯಂತ್ರಣದಲ್ಲಿ ಇಟ್ಟಿರುವವನು ಯಾರು? ಎಂದು ನೀವು ಅವರೊಡನೆ ಕೇಳಿದರೆ ಅವರು ‘‘ಅಲ್ಲಾಹನು’’ ಎಂದು ಉತ್ತರಿಸುತ್ತಾರೆ. ಹಾಗಾದರೆ ಅವರು ಮತ್ತೆಲ್ಲಿ ಅಲೆಯುತ್ತಿದ್ದಾರೆ?

62. ಅಲ್ಲಾಹನು ತನ್ನ ದಾಸರ ಪೈಕಿ ತಾನಿಚ್ಛಿಸಿದವರ ಪಾಲಿಗೆ ತನ್ನ ಕೊಡುಗೆಗಳನ್ನು ವಿಸ್ತರಿಸುತ್ತಾನೆ ಅಥವಾ ಅವುಗಳನ್ನು ಅವರ ಪಾಲಿಗೆ ಸೀಮಿತಗೊಳಿಸಿ ಬಿಡುತ್ತಾನೆ. ಅಲ್ಲಾಹನು ಖಂಡಿತವಾಗಿಯೂ ಎಲ್ಲವನ್ನೂ ಬಲ್ಲವನಾಗಿದ್ದಾನೆ.

 63. ಆಕಾಶದಿಂದ ನೀರನ್ನಿಳಿಸಿ, ಆ ಮೂಲಕ ಭೂಮಿಗೆ ಅದರ ಮರಣಾ ನಂತರ ಜೀವ ನೀಡುವವನು ಯಾರು? ಎಂದು ನೀವು ಅವರೊಡನೆ ಕೇಳಿದರೆ ಅವರು ‘‘ಅಲ್ಲಾಹನು’’ ಎಂದು ಉತ್ತರಿಸುತ್ತಾರೆ. ‘‘ಎಲ್ಲ ಹೊಗಳಿಕೆ ಅಲ್ಲಾಹನಿಗೆ’’ ಎಂದು ಹೇಳಿರಿ. ಆದರೆ ಅವರಲ್ಲಿ ಹೆಚ್ಚಿನವರು ಆಲೋಚಿಸುವುದಿಲ್ಲ.

64. ಇಹಲೋಕದ ಈ ಬದುಕು ಕೇವಲ ಆಟೋಟ ಹಾಗೂ ಮನರಂಜನೆ ಮಾತ್ರವಾಗಿದೆ. ಖಂಡಿತವಾಗಿಯೂ ಪರಲೋಕದ ನೆಲೆಯೇ ನಿಜವಾದ ಬದುಕು. ಅವರು ಅರಿತಿದ್ದರೆ (ಎಷ್ಟು ಚೆನ್ನಾಗಿತ್ತು)!

65. ಅವರು ಹಡಗನ್ನೇರುವಾಗ, ನಿಷ್ಠೆಯನ್ನೆಲ್ಲಾ ಅಲ್ಲಾಹನಿಗೇ ಮೀಸಲಾಗಿಟ್ಟು ಅವನಿಗೆ ಮೊರೆ ಇಡುತ್ತಾರೆ. ಕೊನೆಗೆ ಅವನು ಅವರನ್ನು ರಕ್ಷಿಸಿ ದಡಕ್ಕೆ ತಲುಪಿಸಿದಾಗ ಅವರು (ತಮ್ಮ ನಿಷ್ಠೆಯಲ್ಲಿ) ಇತರರನ್ನು ಪಾಲುಗೊಳಿಸುತ್ತಾರೆ.

66. ಅವರಿಗೆ ನಾವು ಏನನ್ನು ನೀಡಿರುವೆವೋ ಅದಕ್ಕೆಲ್ಲಾ ಕೃತಘ್ನತೆ ತೋರಲಿಕ್ಕಾಗಿ ಮತ್ತು ಮೋಜು ಮಾಡುತ್ತಿರಲಿಕ್ಕಾಗಿ (ಅವರು ಹೀಗೆ ಮಾಡುತ್ತಾರೆ). ಬಹು ಬೇಗನೇ ಅವರಿಗೆ (ಈ ಧೋರಣೆಯ ಫಲಿತಾಂಶ) ತಿಳಿಯಲಿದೆ.

 67. ಅವರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜನರ ಅಪಹರಣ ನಡೆಯುತ್ತಿರುವಾಗ ನಾವು ಈ ಪವಿತ್ರ ಸ್ಥಳವನ್ನು (ಮಕ್ಕಃವನ್ನು) ಪ್ರಶಾಂತ ಸ್ಥಳವಾಗಿಸಿರುವುದನ್ನು ಅವರೇನು ನೋಡುತ್ತಿಲ್ಲವೇ? ಅವರೇನು, ಮಿಥ್ಯವನ್ನು ನಂಬಿ ಅಲ್ಲಾಹನ ಅನುಗ್ರಹಗಳಿಗೆ ಕೃತಘ್ನತೆ ತೋರುತ್ತಾರೆಯೇ?

68. ಅಲ್ಲಾಹನ ಮೇಲೆ ಸುಳ್ಳಾರೋಪ ಹೊರಿಸುವ ಅಥವಾ ತನ್ನ ಬಳಿಗೆ ಸತ್ಯವು ಬಂದಾಗ ಅದನ್ನು ಸುಳ್ಳೆನ್ನುವಾತನಿಗಿಂತ ದೊಡ್ಡ ಅಕ್ರಮಿ ಯಾರಿದ್ದಾನೆ? ಧಿಕ್ಕಾರಿಗಳಿಗೇನು ನರಕದಲ್ಲಿ ನೆಲೆ ಇಲ್ಲವೇ?

69. ನಮಗಾಗಿ ಶ್ರಮಿಸುವವರಿಗೆ ನಾವು ನಮ್ಮ ಮಾರ್ಗಗಳನ್ನು ತೋರಿಸಿಕೊಡುತ್ತೇವೆ. ಮತ್ತು ಅಲ್ಲಾಹನು ಖಂಡಿತ ಸತ್ಕರ್ಮಿಗಳ ಜೊತೆಗಿದ್ದಾನೆ.