3. ಪಕ್ಕದ ನಾಡಿನಲ್ಲಿ (ಇದು ಸಂಭವಿಸಿದೆ). ಮತ್ತು ಅವರು ತಮ್ಮ ಈ ಸೋಲಿನ ಬಳಿಕ ಮತ್ತೆ ವಿಜಯಿಗಳಾಗುವರು.
4. ಕೆಲವು ವರ್ಷಗಳಲ್ಲಿ (ಇದು ಸಂಭವಿಸಲಿದೆ). ನೈಜ ಅಧಿಕಾರವು ಅದಕ್ಕಿಂತ ಹಿಂದೆಯೂ, ಅನಂತರವೂ ಅಲ್ಲಾಹನಿಗೇ ಸೇರಿರುತ್ತದೆ. ವಿಶ್ವಾಸಿಗಳು ಸಂಭ್ರಮಿಸುವ ದಿನವೊಂದು ಬರಲಿದೆ.
5. ಅಲ್ಲಾಹನ ನೆರವಿನಿಂದ (ಆ ದಿನ ಬರಲಿದೆ). ಅವನು ತಾನಿಚ್ಛಿಸಿದವರಿಗೆ ನೆರವಾಗುತ್ತಾನೆ. ಅವನು ಪ್ರಚಂಡನೂ ಕರುಣಾಳುವೂ ಆಗಿರುತ್ತಾನೆ.
6. ಇದು ಅಲ್ಲಾಹನ ವಾಗ್ದಾನ. ಅಲ್ಲಾಹನು ತಾನು ನೀಡಿದ ವಾಗ್ದಾನವನ್ನು ಎಂದೂ ಉಲ್ಲಂಘಿಸುವುದಿಲ್ಲ. ಆದರೆ ಹೆಚ್ಚಿನ ಜನರು ತಿಳಿದಿಲ್ಲ.
7. ಅವರು ತಿಳಿದಿರುವುದು, ಈ ಲೋಕದ ಬದುಕಿನ ಬಾಹ್ಯ ಭಾಗವನ್ನು ಮಾತ್ರ. ಪರಲೋಕದ ಕುರಿತು ಅವರಿಗೆ ಅರಿವಿಲ್ಲ.
8. ಅವರೇನು ಸ್ವತಃ ತಮ್ಮ ಕುರಿತು ಚಿಂತನೆ ನಡೆಸುವುದಿಲ್ಲವೇ? ಅಲ್ಲಾಹನು ಆಕಾಶಗಳನ್ನು ಹಾಗೂ ಭೂಮಿಯನ್ನು ಮತ್ತು ಅವುಗಳ ನಡುವೆ ಇರುವ ಎಲ್ಲವನ್ನೂ ನ್ಯಾಯೋಚಿತವಾಗಿ ಹಾಗೂ ಒಂದು ನಿರ್ದಿಷ್ಟ ಅವಧಿಗಾಗಿ ಸೃಷ್ಟಿಸಿರುವನು. ಆದರೆ ಜನರಲ್ಲಿ ಹೆಚ್ಚಿನವರು ತಮ್ಮ ಒಡೆಯನನ್ನು ಭೇಟಿಯಾಗಲಿಕ್ಕಿರುವುದನ್ನು ಧಿಕ್ಕರಿಸುತ್ತಾರೆ.
9. ಅವರೇನು ಭೂಮಿಯಲ್ಲಿ ತಿರುಗಾಡಿ, ತಮಗಿಂತ ಹಿಂದಿನವರ ಗತಿ ಏನಾಯಿತೆಂಬುದನ್ನು ಕಾಣುವುದಿಲ್ಲವೇ? ಅವರು (ಹಿಂದಿನವರು) ಇವರಿಗಿಂತ ಹೆಚ್ಚು ಶಕ್ತಿಶಾಲಿಗಳಾಗಿದ್ದರು, ಭೂಮಿಯಲ್ಲಿ ಉಳುಮೆ ನಡೆಸಿದ್ದರು ಮತ್ತು ಅದನ್ನು (ಭೂಮಿಯನ್ನು) ಇವರಿಗಿಂತ ಹೆಚ್ಚು ಸಂಪನ್ನಗೊಳಿಸಿದ್ದರು. ಅವರ ಬಳಿಗೂ ಅವರ ದೂತರು ಸ್ಪಷ್ಟವಾದ ಪುರಾವೆಗಳೊಂದಿಗೆ ಬಂದಿದ್ದರು. ಅಲ್ಲಾಹನು ಅವರ ಮೇಲೆ ಅಕ್ರಮವೆಸಗುವವನಾಗಿರಲಿಲ್ಲ. ಸ್ವತಃ ಅವರೇ ತಮ್ಮ ಮೇಲೆ ಅಕ್ರಮವೆಸಗಿಕೊಂಡಿದ್ದರು.
10. ಕೊನೆಗೆ, ಕೆಟ್ಟ ಕೆಲಸಗಳನ್ನು ಮಾಡುತ್ತಿದ್ದವರ ಗತಿಯೂ ಕೆಟ್ಟದಾಗಿ ಬಿಟ್ಟಿತು. ಏಕೆಂದರೆ ಅವರು ಅಲ್ಲಾಹನ ವಚನಗಳನ್ನು ತಿರಸ್ಕರಿಸಿದ್ದರು ಮತ್ತು ಅವುಗಳನ್ನು ಗೇಲಿಮಾಡುತ್ತಿದ್ದರು.
11. ಅಲ್ಲಾಹನೇ ಸೃಷ್ಟಿಕಾರ್ಯವನ್ನು ಆರಂಭಿಸುತ್ತಾನೆ. ಆ ಬಳಿಕ ಅವನೇ ಅದನ್ನು ಪುನರಾವರ್ತಿಸುವನು. ಕೊನೆಗೆ ನಿಮ್ಮೆಲ್ಲರನ್ನೂ ಅವನೆಡೆಗೇ ಮರಳಿಸಲಾಗುವುದು.
12. ಆ ಅಂತಿಮ ಕ್ಷಣವು ಬಂದು ಬಿಟ್ಟಾಗ ಅಪರಾಧಿಗಳು ಸಂಪೂರ್ಣ ನಿರಾಶರಾಗಿ ಬಿಡುವರು.
13. ಅವರ ಪಾಲುದಾರ ದೇವರುಗಳ ಪೈಕಿ ಯಾರೂ ಅವರ ಪರ ಶಿಫಾರಸುದಾರರಾಗಲಾರರು. ಆಗ ಅವರು ಆ ತಮ್ಮ ಪಾಲುದಾರರನ್ನೆಲ್ಲಾ ಧಿಕ್ಕರಿಸಿ ಬಿಡುವರು.
14. ಆ ಅಂತಿಮ ಕ್ಷಣವು ಬರುವ ದಿನ ಅವರೆಲ್ಲರೂ ವಿಚ್ಛಿದ್ರರಾಗಿ ಬಿಡುವರು.
15. ಸತ್ಯವನ್ನು ನಂಬಿದ್ದ ಹಾಗೂ ಸತ್ಕಾರ್ಯಗಳನ್ನು ಮಾಡಿದ್ದ ಜನರು (ಅಂದು) ಒಂದು ಭವ್ಯ ತೋಟದಲ್ಲಿ ಸಂಭ್ರಮಿಸುತ್ತಿರುವರು.
16. ಅತ್ತ, ಸತ್ಯವನ್ನು ಧಿಕ್ಕರಿಸಿದ್ದ ಮತ್ತು ನಮ್ಮ ವಚನಗಳನ್ನು ಹಾಗೂ ಪರಲೋಕದ ಭೇಟಿಯನ್ನು ಸುಳ್ಳೆಂದು ತಿರಸ್ಕರಿಸಿದ್ದ ಜನರನ್ನು ಶಿಕ್ಷೆಗಾಗಿ ಹಾಜರುಪಡಿಸಲಾಗುವುದು.
17. ಸಂಜೆಯ ವೇಳೆ ಹಾಗೂ ಮುಂಜಾವಿನ ವೇಳೆ ನೀವು ಅಲ್ಲಾಹನ ಪಾವಿತ್ರವನ್ನು ಜಪಿಸಿರಿ.
19. ಅವನು ನಿರ್ಜೀವದಿಂದ ಜೀವಿಯನ್ನು ಹೊರ ತೆಗೆಯುತ್ತಾನೆ ಮತ್ತು ಜೀವಿಯಿಂದ ನಿರ್ಜೀವಿಯನ್ನು ಹೊರ ತೆಗೆಯುತ್ತಾನೆ ಮತ್ತು ಭೂಮಿಯು ಸತ್ತ ಬಳಿಕ ಅದನ್ನು ಮತ್ತೆ ಜೀವಂತಗೊಳಿಸುತ್ತಾನೆ. ಇದೇ ರೀತಿ ನಿಮ್ಮನ್ನು (ಮರಣಾನಂತರ, ಜೀವಂತಗೊಳಿಸಿ) ಹೊರ ತೆಗೆಯಲಾಗುವುದು.
20. ಅವನು (ಅಲ್ಲಾಹನು) ನಿಮ್ಮನ್ನು ಮಣ್ಣಿನಿಂದ ಸೃಷ್ಟಿಸಿರುವುದು ಮತ್ತು ಅಂತಹ ನೀವು ಇದೀಗ ಮನುಷ್ಯರಾಗಿ (ಎಲ್ಲೆಡೆ) ಹರಡಿಕೊಂಡಿರುವುದು ಅವನ ಸಂಕೇತಗಳ ಸಾಲಿಗೆ ಸೇರಿವೆ.
21. ಹಾಗೆಯೇ ಅವನು ನಿಮಗಾಗಿ ನಿಮ್ಮೊಳಗಿಂದಲೇ, ನೀವು ನೆಮ್ಮದಿ ಪಡೆಯಬಹುದಾದ ಜೋಡಿಗಳನ್ನು ಸೃಷ್ಟಿಸಿರುವುದು ಮತ್ತು ನಿಮ್ಮ ನಡುವೆ ಪ್ರೀತಿ, ವಾತ್ಸಲ್ಯಗಳನ್ನು ಬೆಳೆಸಿರುವುದು – (ಇವೆಲ್ಲಾ) ಅವನ ಸಂಕೇತಗಳ ಸಾಲಿಗೆ ಸೇರಿವೆ. ಚಿಂತನೆ ನಡೆಸುವವರಿಗೆ ಇದರಲ್ಲಿ ಖಂಡಿತ ಸೂಚನೆಗಳಿವೆ.
22. ಆಕಾಶಗಳ ಹಾಗೂ ಭೂಮಿಯ ಸೃಷ್ಟಿ ಮತ್ತು ನಿಮ್ಮ ಭಾಷೆ ಹಾಗೂ ಬಣ್ಣಗಳಲ್ಲಿರುವ ವ್ಯತ್ಯಾಸಗಳು ಅವನ ಸಂಕೇತಗಳ ಸಾಲಿಗೆ ಸೇರಿವೆ. ಜ್ಞಾನ ಉಳ್ಳವರಿಗೆ ಇದರಲ್ಲಿ ಖಂಡಿತ ಸೂಚನೆಗಳಿವೆ.
23. ರಾತ್ರಿ ಹಾಗೂ ಹಗಲಲ್ಲಿ ನೀವು ಮಾಡುವ ನಿದ್ದೆ ಮತ್ತು ಅವನ ಅನುಗ್ರಹಕ್ಕಾಗಿ ನೀವು ನಡೆಸುವ ಹುಡುಕಾಟ (ಇವೆಲ್ಲಾ) ಅವನ ಸಂಕೇತಗಳ ಸಾಲಿಗೆ ಸೇರಿವೆ. ಆಲಿಸುವವರಿಗೆ ಖಂಡಿತವಾಗಿಯೂ ಇದರಲ್ಲಿ ಸೂಚನೆಗಳಿವೆ.
24. ಹಾಗೆಯೇ ಅವನು ನಿಮಗೆ ತೋರಿಸುವ, ಭಯವನ್ನೂ ನಿರೀಕ್ಷೆಯನ್ನೂ ಹುಟ್ಟಿಸುವ ಮಿಂಚು ಮತ್ತು ಅವನು ಆಕಾಶದಿಂದ ಸುರಿಸುವ ನೀರು ಮತ್ತು ಆ ಮೂಲಕ ಅವನು ಭೂಮಿಗೆ ಅದರ ಮರಣಾನಂತರ ನೀಡುವ ಮರು ಜೀವ – (ಇವೆಲ್ಲಾ) ಅವನ ಸಂಕೇತಗಳ ಸಾಲಿಗೆ ಸೇರಿವೆ. ಆಲೋಚಿಸುವವರಿಗೆ ಖಂಡಿತವಾಗಿಯೂ ಇದರಲ್ಲಿ ಸೂಚನೆಗಳಿವೆ.
25. ಆಕಾಶಗಳು ಮತ್ತು ಭೂಮಿಯು ಅವನ ಅಪ್ಪಣೆಯಂತೆ ಸ್ಥಾಪಿತವಾಗಿರುವುದು ಅವನ ಸಂಕೇತಗಳ ಸಾಲಿಗೆ ಸೇರಿದೆ. ಕೊನೆಗೊಮ್ಮೆ ಅವನು ಒಂದು ಕರೆಕೊಟ್ಟು ನಿಮ್ಮನ್ನು ಕರೆದಾಗ ಭೂಮಿಯೊಳಗಿಂದ ನೀವೆಲ್ಲಾ ಹೊರಟು ಬರುವಿರಿ.
26. ಆಕಾಶಗಳಲ್ಲಿ ಹಾಗೂ ಭೂಮಿಯಲ್ಲಿ ಇರುವ ಎಲ್ಲವೂ ಅವನಿಗೇ ಸೇರಿವೆ ಮತ್ತು ಎಲ್ಲವೂ ಅವನಿಗೆ ವಿಧೇಯವಾಗಿವೆ.
27. ಅವನೇ ಸೃಷ್ಟಿಯನ್ನು ಆರಂಭಿಸಿದವನು ಮತ್ತು ಅವನೇ ಅದನ್ನು ಪುನರಾವರ್ತಿಸುವನು. ಅವನ ಪಾಲಿಗೆ ಇದೆಲ್ಲಾ ಸುಲಭದ ಕೆಲಸವಾಗಿದೆ. ಆಕಾಶಗಳಲ್ಲೂ ಭೂಮಿಯಲ್ಲೂ ಅತ್ಯುನ್ನತ ವೈಭವವು ಅವನಿಗೇ ಸೇರಿದೆ. ಅವನು ಅತ್ಯಂತ ಪ್ರಬಲನು ಹಾಗೂ ಯುಕ್ತಿವಂತನು.
28. ಅವನು ನಿಮಗಾಗಿ ನಿಮ್ಮೊಳಗಿಂದಲೇ ಒಂದು ಉದಾಹರಣೆಯನ್ನು ಮುಂದಿಡುತ್ತಾನೆ; ನಿಮ್ಮ ಮಾಲಕತ್ವದಲ್ಲಿರುವ ಗುಲಾಮರ ಪೈಕಿ ಕೆಲವರು, ನಿಮಗೆ ನಾವು ನೀಡಿರುವ ಸಂಪತ್ತಿನಲ್ಲಿ ಪಾಲುದಾರರಾಗಿ, ಅದರಲ್ಲಿ ನೀವು ಅವರಿಗೆ ಸಮಾನರಾಗಿ ಬಿಟ್ಟದ್ದುಂಟೇ? ಮತ್ತು ನೀವು ಪರಸ್ಪರರಿಗೆ ಅಂಜುವಂತೆ ಅವರಿಗೆ ಅಂಜಿದ್ದುಂಟೇ? ಈ ರೀತಿ ನಾವು, ಆಲೋಚಿಸುವವರಿಗಾಗಿ ವಚನಗಳನ್ನು ವಿವರಿಸುತ್ತೇವೆ.
29. ಆದರೆ ಅಕ್ರಮಿಗಳು ಜ್ಞಾನವಿಲ್ಲದೆ ತಮ್ಮ ಸ್ವೇಚ್ಛೆಯನ್ನಷ್ಟೇ ಅನುಸರಿಸುತ್ತಾರೆ. ಅಲ್ಲಾಹನೇ ದಾರಿಗೆಡಿಸಿಬಿಟ್ಟಾತನನ್ನು ಮತ್ತೆ ಯಾರು ತಾನೇ ಸರಿದಾರಿಗೆ ತರಬಲ್ಲರು? ಅಂಥವರಿಗೆ ಸಹಾಯಕರು ಯಾರೂ ಇಲ್ಲ.
30. ನೀವಿನ್ನು ಏಕಾಗ್ರತೆಯೊಂದಿಗೆ ನಿಮ್ಮ ಗಮನವನ್ನು ಧರ್ಮದಲ್ಲಿ ಕೇಂದ್ರೀಕರಿಸಿರಿ. ಮಾನವನನ್ನು ಅಲ್ಲಾಹನ ಪ್ರಕೃತಿಗನುಸಾರ ರೂಪಿಸಲಾಗಿದೆ. ಅಲ್ಲಾಹನು ಮಾಡಿದ ರಚನೆಯಲ್ಲಿ ಬದಲಾವಣೆ ಇಲ್ಲ. ಇದುವೇ ಸುಸ್ಥಿರ ಧರ್ಮ. ಆದರೆ ಜನರಲ್ಲಿ ಹೆಚ್ಚಿನವರು ಅರಿತಿಲ್ಲ.
31. (ನೀವು) ಅವನತ್ತ ಒಲವು ಉಳ್ಳವರಾಗಿರಿ, ಅವನಿಗೆ ಅಂಜಿರಿ, ನಮಾಝ್ ಅನ್ನು ಪಾಲಿಸಿರಿ ಮತ್ತು ಬಹುದೇವಾರಾಧಕರಾಗಬೇಡಿರಿ.
32.ತಮ್ಮ ಧರ್ಮವನ್ನು ಛಿದ್ರಗೊಳಿಸಿ ವಿವಿಧ ಪಂಗಡಗಳಾಗಿ ಬಿಟ್ಟವರು (ನೀವಾಗಬೇಡಿ). ಪ್ರತಿಯೊಂದು ಗುಂಪೂ ತನ್ನ ಬಳಿ ಏನಿದೆಯೋ ಅದರಲ್ಲೇ ಸಂತುಷ್ಟವಾಗಿದೆ.
33. ಜನರಿಗೆ ಏನಾದರೂ ತೊಂದರೆಯಾದಾಗ ಅವರು ತಮ್ಮ ಒಡೆಯನೆಡೆಗೆ ಒಲಿದು ಅವನಿಗೆ ಮೊರೆ ಇಡುತ್ತಾರೆ. ಮುಂದೆ ಅವನು ಅವರಿಗೆ ತನ್ನ ಅನುಗ್ರಹದ ರುಚಿ ಉಣಿಸಿದಾಗ ಅವರಲ್ಲಿನ ಒಂದು ಗುಂಪು ತಮ್ಮ ಒಡೆಯನ ಜೊತೆ ಇತರರನ್ನು ಪಾಲುಗೊಳಿಸುತ್ತದೆ.
34. ನಮ್ಮ ಕೊಡುಗೆಗಳಿಗೆ ಕೃತಘ್ನತೆ ತೋರುವುದಕ್ಕಾಗಿ (ಅವರು ಹೀಗೆ ಮಾಡುತ್ತಾರೆ)! ಸದ್ಯ ಮೋಜುಮಾಡಿರಿ. (ಇದರ ಪರಿಣಾಮವು) ಬೇಗನೇ ನಿಮಗೆ ತಿಳಿಯಲಿದೆ.
35. ಅವರು (ದೇವತ್ವದಲ್ಲಿ) ಪಾಲುಗೊಳಿಸುವವುಗಳ ಪರವಾಗಿ ಮಾತನಾಡುವ ಪುರಾವೆಯನ್ನೇನಾದರೂ ನಾವು ಅವರಿಗೆ ಇಳಿಸಿಕೊಟ್ಟಿದ್ದೇವೆಯೇ?
36. ನಾವು ಜನರಿಗೆ ನಮ್ಮ ಅನುಗ್ರಹದ ರುಚಿ ಉಣಿಸಿದಾಗ ಅವರು ಸಂಭ್ರಮಿಸುತ್ತಾರೆ ಮತ್ತು ಅವರೇ ಸಂಪಾದಿಸಿ ಕಳಿಸಿದ ಕರ್ಮಗಳ ಕಾರಣ ಅವರಿಗೇನಾದರೂ ಕೇಡನ್ನು ಮಾಡಿದರೆ, ಅವರು ಸಂಪೂರ್ಣ ನಿರಾಶರಾಗಿ ಬಿಡುತ್ತಾರೆ.
37. ಅವರು ನೋಡುವುದಿಲ್ಲವೇ, ಅಲ್ಲಾಹನು ತಾನಿಚ್ಛಿಸಿದವರಿಗೆ ಸಂಪನ್ನತೆಯನ್ನು ಹೆಚ್ಚಿಸುತ್ತಾನೆ ಮತ್ತು ತಾನಿಚ್ಛಿಸಿದವರಿಗೆ ಅದನ್ನು ಸೀಮಿತಗೊಳಿಸುತ್ತಾನೆ. ನಂಬುವವರಿಗೆ ಖಂಡಿತವಾಗಿಯೂ ಇದರಲ್ಲಿ ಪಾಠಗಳಿವೆ.
38. ನೀವು ಬಂಧುವಿಗೆ, ಬಡವನಿಗೆ ಮತ್ತು ಪ್ರಯಾಣಿಕನಿಗೆ ಅವರ ಹಕ್ಕನ್ನು ಕೊಟ್ಟು ಬಿಡಿರಿ. ಅಲ್ಲಾಹನ ಮೆಚ್ಚುಗೆಯನ್ನು ಬಯಸುವವರಿಗೆ ಇದುವೇ ಉತ್ತಮವಾಗಿದೆ ಮತ್ತು ಅವರೇ ವಿಜಯಿಗಳಾಗುವರು.
39. ಜನರ ಸಂಪತ್ತನ್ನು ಹೆಚ್ಚಿಸಲೆಂದು ನೀವು ನೀಡುವ ಬಡ್ಡಿಯು ಅಲ್ಲಾಹನ ಬಳಿ ಅದನ್ನು ಹೆಚ್ಚಿಸುವುದಿಲ್ಲ. ಆದರೆ ಅಲ್ಲಾಹನ ಮೆಚ್ಚುಗೆಯನ್ನು ಬಯಸಿ ನೀವು ನೀಡುವ ದಾನ (ಅದು ನಿಮ್ಮ ಪ್ರತಿಫಲವನ್ನು ಹೆಚ್ಚಿಸುತ್ತದೆ). ಅವರೇ (ದಾನಶೀಲರೇ) ಹಲವು ಪಟ್ಟು ಅಧಿಕ ಪ್ರತಿಫಲ ಪಡೆಯುವವರು.
40. ಅಲ್ಲಾಹನೇ ನಿಮ್ಮನ್ನು ಸೃಷ್ಟಿಸಿದವನು, ಆ ಬಳಿಕ ನಿಮಗೆ ಆಹಾರ ಒದಗಿಸಿದವನು, ಆ ಬಳಿಕ ನಿಮಗೆ ಮರಣ ನೀಡುವವನು ಮತ್ತು ಆ ಬಳಿಕ ನಿಮ್ಮನ್ನು ಪುನಃ ಜೀವಂತಗೊಳಿಸುವವನಾಗಿದ್ದಾನೆ. ದೇವತ್ವದಲ್ಲಿ ಪಾಲುದಾರರೆಂದು ನೀವು ನಂಬಿರುವ ಯಾರಾದರೂ ಈ ಪೈಕಿ ಯಾವ ಕೆಲಸವನ್ನಾದರೂ ಮಾಡಬಲ್ಲರೇ? ಅವನಂತು (ಅಲ್ಲಾಹನಂತು) ಪಾವನನಾಗಿದ್ದಾನೆ ಮತ್ತು (ಅವನ ಜೊತೆ) ನೀವು ಪಾಲುಗೊಳಿಸುವ ಎಲ್ಲರಿಗಿಂತ ತುಂಬಾ ಉನ್ನತನಾಗಿದ್ದಾನೆ.
41. ಮಾನವರ ಕೃತ್ಯಗಳ ಫಲವಾಗಿ, ನೆಲದಲ್ಲೂ ಜಲದಲ್ಲೂ ಅಶಾಂತಿ ಹಬ್ಬಿದೆ. ಅವರು ಸರಿದಾರಿಗೆ ಮರಳಿಬರಬಹುದೆಂದು, ಅವರ ಕೆಲವು ಕೃತ್ಯಗಳ ರುಚಿಯನ್ನು ಅವರಿಗೆ ಉಣಿಸಲಿಕ್ಕಾಗಿ (ಹೀಗಾಗಿದೆ).
42. ಹೇಳಿರಿ; ನೀವು ಭೂಮಿಯಲ್ಲಿ ತಿರುಗಾಡಿರಿ ಮತ್ತು ನಿಮಗಿಂತ ಹಿಂದಿನವರ ಗತಿ ಏನಾಯಿತೆಂಬುದನ್ನು ನೋಡಿರಿ. ಅವರಲ್ಲಿ ಹೆಚ್ಚಿನವರು ಬಹುದೇವಾರಾಧಕರಾಗಿದ್ದರು.
43.ಅಲ್ಲಾಹನ ಕಡೆಯಿಂದ, ರದ್ದು ಗೊಳಿಸಲಾಗದ ದಿನವೊಂದು ಬಂದು ಬಿಡುವ ಮುನ್ನ, ನೀವು ನಿಮ್ಮ ಮುಖವನ್ನು ಸ್ಥಿರವಾದ ಧರ್ಮದೆಡೆಗೆ ತಿರುಗಿಸಿಕೊಳ್ಳಿರಿ. ಅಂದು ಎಲ್ಲರೂ ಪ್ರತ್ಯೇಕವಾಗುವರು.
44. ಧಿಕ್ಕರಿಸಿದವನ ಧಿಕ್ಕಾರದ ಹೊಣೆಯು ಸ್ವತಃ ಅವನ ಮೇಲೆಯೇ ಇರುವುದು. ಇನ್ನು, ಸತ್ಕರ್ಮಮಾಡುತ್ತಿರುವವರು ಸ್ವತಃ ತಮಗಾಗಿ ಪೂರ್ವಸಿದ್ಧತೆ ನಡೆಸುತ್ತಿರುವರು.
45. ಅವನು ತನ್ನ ಅನುಗ್ರಹದಿಂದ ವಿಶ್ವಾಸಿಗಳು ಮತ್ತು ಸತ್ಕರ್ಮಿಗಳಿಗೆ ಸತ್ಫಲವನ್ನು ನೀಡುವನು. ಅಲ್ಲಾಹನು ಕೃತಘ್ನರನ್ನು ಖಂಡಿತ ಮೆಚ್ಚುವುದಿಲ್ಲ.
46. ಅವನು, ನಿಮಗೆ ತನ್ನ ಅನುಗ್ರಹದ ರುಚಿಯನ್ನು ಉಣಿಸಲಿಕ್ಕಾಗಿ ಹಾಗೂ ಅವನ ಆದೇಶದಂತೆ ಹಡಗುಗಳನ್ನು ಚಲಿಸಲಿಕ್ಕಾಗಿ ಮತ್ತು ನೀವು ಅವನ ಕೊಡುಗೆಯನ್ನು ಹುಡುಕುತ್ತಾ ಕೃತಜ್ಞತೆ ಸಲ್ಲಿಸಲಿಕ್ಕಾಗಿ ಕಳಿಸುವ, ಶುಭವಾರ್ತೆ ನೀಡುವ ಗಾಳಿಯು, ಅವನ ಪುರಾವೆಗಳ ಸಾಲಿಗೆ ಸೇರಿದೆ.
47. (ದೂತರೇ,) ನಾವು ನಿಮಗಿಂತ ಮುಂಚೆ ಅವರ ಜನಾಂಗದೆಡೆಗೆ ದೂತರನ್ನು ಕಳಿಸಿದ್ದೆವು. ಅವರು ಸ್ಪಷ್ಟವಾದ ಉಪದೇಶಗಳೊಂದಿಗೆ ಅವರ ಬಳಿಗೆ ಬಂದಿದ್ದರು. ಕೊನೆಗೆ ನಾವು ಅಪರಾಧಿಗಳ ವಿರುದ್ಧ ಸೇಡು ತೀರಿಸಿದೆವು. ನಂಬಿದವರಿಗೆ ನೆರವಾಗುವುದು ನಮ್ಮ ಕರ್ತವ್ಯವಾಗಿತ್ತು.
48. ಅಲ್ಲಾಹನೇ ಗಾಳಿಯನ್ನು ಕಳುಹಿಸುತ್ತಾನೆ, ಅವು ಮೋಡಗಳನ್ನು ಹೊತ್ತು ಚಲಿಸುತ್ತವೆ ಮತ್ತು ಅವನು ಅದನ್ನು (ಮೋಡವನ್ನು) ತಾನಿಚ್ಛಿಸಿದಂತೆ ಆಕಾಶದಲ್ಲಿ ಹರಡಿಬಿಡುತ್ತಾನೆ ಹಾಗೂ ಅದನ್ನು ಛಿದ್ರಗೊಳಿಸುತ್ತಾನೆ ಮತ್ತು ಅದರ ಮಧ್ಯದಿಂದಲೇ ಮಳೆ ಸುರಿಯುವುದನ್ನು ನೀವು ಕಾಣುತ್ತೀರಿ. ಆ ಬಳಿಕ ಅವನು ತನ್ನ ದಾಸರ ಪೈಕಿ ತಾನಿಚ್ಛಿಸಿದವರಿಗೆ ಅದನ್ನು ತಲುಪಿಸುತ್ತಾನೆ ಮತ್ತು ಅವರು ಸಂಭ್ರಮಿಸುತ್ತಾರೆ.
49. ನಿಜವಾಗಿ, ಅವರ ಮೇಲೆ ಮಳೆ ಸುರಿಯುವ ಮುನ್ನ ಅವರು ನಿರಾಶರಾಗಿ ಬಿಟ್ಟದ್ದರು.
50. ಅಲ್ಲಾಹನ ಕಾರುಣ್ಯದ ಕುರುಹುಗಳನ್ನು (ಮತ್ತು) ಅವನು ಯಾವ ರೀತಿ ಭೂಮಿಯು ಸತ್ತ ಬಳಿಕ ಅದನ್ನು ಜೀವಂತಗೊಳಿಸುತ್ತಾನೆಂಬುದನ್ನು ನೋಡಿರಿ. ಅವನೇ ಸತ್ತವರನ್ನು ಜೀವಂತಗೊಳಿಸುವವನು. ಅವನು ಎಲ್ಲವನ್ನೂ ಮಾಡಲು ಶಕ್ತನಾಗಿದ್ದಾನೆ.
51. ಇನ್ನು ನಾವು (ಪ್ರತಿಕೂಲ) ಗಾಳಿಯನ್ನು ಕಳಿಸಿ, (ಅದರಿಂದಾಗಿ ಹೊಲಗಳು) ಹಳದಿಯಾಗಿರುವುದನ್ನು ಅವರು ಕಂಡಾಗ ಅವರು ಮತ್ತೆ ದಾರಿಗೆಟ್ಟು ಕೃತಘ್ನರಾಗಿ ಬಿಡುತ್ತಾರೆ.
52. ಮೃತರಿಗೆ ಕೇಳಿಸಲು ನಿಮಗೆ ಖಂಡಿತ ಸಾಧ್ಯವಾಗದು ಮತ್ತು ಕಿವುಡರು ಬೆನ್ನು ತಿರುಗಿಸಿ ಓಡುತ್ತಿರುವಾಗ ಅವರಿಗೆ (ನಿಮ್ಮ) ಕರೆಯನ್ನು ಕೇಳಿಸಲಿಕ್ಕೂ ನಿಮಗೆ ಸಾಧ್ಯವಾಗದು.
53. ಕುರುಡರನ್ನು ಅವರ ದಾರಿಗೇಡಿತನದಿಂದ ರಕ್ಷಿಸಿ ಸರಿದಾರಿಗೆ ತರಲು ನಿಮಗೆ ಸಾಧ್ಯವಾಗದು. ನೀವು, ನಮ್ಮ ವಚನಗಳನ್ನು ನಂಬುವವರಿಗೆ ಮತ್ತು ಶರಣಾದವರಿಗೆ ಮಾತ್ರ ಕೇಳಿಸಬಲ್ಲಿರಿ.
54. ನಿಮ್ಮನ್ನು ತೀರಾ ದುರ್ಬಲ ಸ್ಥಿತಿಯಲ್ಲಿ ಸೃಷ್ಟಿಸಿದವನು ಮತ್ತು ಆ ಬಳಿಕ ದೌರ್ಬಲ್ಯದ ಸ್ಥಿತಿಯಿಂದ ನಿಮ್ಮನ್ನು ಶಕ್ತಿಶಾಲಿ ಸ್ಥಿತಿಗೆ ಒಯ್ದವನು ಮತ್ತು ಶಕ್ತಿಶಾಲಿ ಸ್ಥಿತಿಯಿಂದ ನಿಮ್ಮನ್ನು ಪುನಃ ದೌರ್ಬಲ್ಯದ ಹಾಗೂ ವೃದ್ಧಾಪ್ಯದ ಸ್ಥಿತಿಗೆ ಒಯ್ಯುವವನು ಅಲ್ಲಾಹನೇ. ಅವನು ತಾನಿಚ್ಛಿಸಿದ್ದನ್ನು ಸೃಷ್ಟಿಸುತ್ತಾನೆ. ಅವನು ಎಲ್ಲವನ್ನೂ ಬಲ್ಲವನು ಮತ್ತು ಶಕ್ತನಾಗಿದ್ದಾನೆ.
55. (ಅಂತಿಮ ವಿಚಾರಣೆಯ) ಆ ಕ್ಷಣವು ಬಂದು ಬಿಟ್ಟಾಗ, ಅಪರಾಧಿಗಳು, ತಾವು ಬದುಕಿದ್ದುದು ಒಂದು ಕ್ಷಣ ಮಾತ್ರ ಎಂದು ಆಣೆ ಹಾಕಿ ಹೇಳುವರು. ಹೀಗೆಯೇ ಅವರು (ಇಹ ಲೋಕದ ಬದುಕಿನಲ್ಲಿ) ಭ್ರಮೆಗೊಳಗಾಗಿದ್ದರು.
56. ಜ್ಞಾನ ಹಾಗೂ ವಿಶ್ವಾಸ ನೀಡಲ್ಪಟ್ಟವರು ಹೇಳುವರು; ಅಲ್ಲಾಹನ ಗ್ರಂಥದಲ್ಲಿ ಬರೆದಿರುವ ಪ್ರಕಾರ, ಮತ್ತೆ ಜೀವಂತಗೊಳ್ಳುವವರೆಗೂ ನೀವು (ಸತ್ತ ಸ್ಥಿತಿಯಲ್ಲಿ) ಇದ್ದಿರಿ – ಇದೋ, ಮತ್ತೆ ಜೀವಂತಗೊಳ್ಳುವ ದಿನ. ಆದರೆ ನಿಮಗೆ ತಿಳಿದಿರಲಿಲ್ಲ.
57. ಅಂದು ಅಕ್ರಮಗಳಿಗೆ ಅವರ ನೆಪಗಳಿಂದ ಯಾವ ಲಾಭವೂ ಆಗದು ಮತ್ತು ಪಶ್ಚಾತ್ತಾಪ ಪಡುವ ಅವಕಾಶವನ್ನೂ ಅವರಿಗೆ ನೀಡಲಾಗದು.
58. ನಾವು ಈ ಕುರ್‌ಆನ್‌ನಲ್ಲಿ ಮಾನವರಿಗಾಗಿ ಎಲ್ಲ ಬಗೆಯ ಉದಾಹರಣೆಗಳನ್ನು ಮುಂದಿಟ್ಟಿದ್ದೇವೆ. ಆದರೆ (ದೂತರೇ), ನೀವು ಅವರ ಬಳಿಗೆ ಒಂದು ವಚನವನ್ನು ತಂದಾಗಲೆಲ್ಲಾ ಧಿಕ್ಕಾರಿಗಳು ನೀವು ಸುಳ್ಳನ್ನು ರಚಿಸಿ ತರುವವರು ಎಂದೇ ಹೇಳುತ್ತಾರೆ.
59. ಈ ರೀತಿ ಅಲ್ಲಾಹನು ಅರಿವಿಲ್ಲದವರ ಮನಸ್ಸುಗಳ ಮೇಲೆ ಮುದ್ರೆ ಒತ್ತಿ ಬಿಡುತ್ತಾನೆ.
60. ನೀವು ಸಹನಶೀಲರಾಗಿರಿ. ಅಲ್ಲಾಹನ ಮಾತು ಖಂಡಿತ ಸತ್ಯ. ಅಚಲ ನಂಬಿಕೆ ಇಲ್ಲದವರು ನಿಮ್ಮನ್ನು ಅಸ್ಥಿರಗೊಳಿಸದಿರಲಿ.