4. ಮತ್ತು ಅಚಲ ನಂಬಿಕೆಯುಳ್ಳವರಿಗೆ ನಿಮ್ಮ ಸೃಷ್ಟಿಯಲ್ಲಿ ಹಾಗೂ ಅವನು (ಅಲ್ಲಾಹನು) ಭೂಮಿಯಲ್ಲಿ ಹರಡಿರುವ ಜಾನುವಾರುಗಳಲ್ಲಿ ಪುರಾವೆಗಳಿವೆ.
5. ಹಾಗೆಯೇ, ರಾತ್ರಿ ಹಾಗೂ ಹಗಲುಗಳ ಪರಿವರ್ತನೆ ಹಾಗೂ ಅಲ್ಲಾಹನು ಆಕಾಶದಿಂದ ಇಳಿಸಿಕೊಡುವ ಆಹಾರ ಹಾಗೂ ಭೂಮಿಯು ನಿರ್ಜೀವವಾದ ಬಳಿಕ ಅವನು ಅದಕ್ಕೆ ನೀಡುವ ಪುನಶ್ಚೇತನ ಮತ್ತು ಗಾಳಿಯ ಚಲನೆ – (ಇವೆಲ್ಲಾ) ಬುದ್ಧಿಯುಳ್ಳವರ ಪಾಲಿಗೆ ಪುರಾವೆಗಳಾಗಿವೆ.
6. ಇವು, ಸತ್ಯದೊಂದಿಗೆ ನಿಮಗೆ ಓದಿ ಕೇಳಿಸಲಾಗುತ್ತಿರುವ, ಅಲ್ಲಾಹನ ವಚನಗಳು, ಅಲ್ಲಾಹ್ ಮತ್ತು ಅವನ ವಚನಗಳ ಬಳಿಕ ಮತ್ತೇನನ್ನು ತಾನೇ ಅವರು ನಂಬುವರು?
7. ಸುಳ್ಳನ್ನು ಸೃಷ್ಟಿಸುವ ಪ್ರತಿಯೊಬ್ಬ ಪಾಪಿಗೆ ವಿನಾಶವಿದೆ.
8. ಅವನು ತನಗೆ ಓದಿ ಕೇಳಿಸಲಾದ ಅಲ್ಲಾಹನ ವಚನಗಳನ್ನು ಕೇಳುತ್ತಾನೆ. ಆ ಬಳಿಕ ತಾನು ಅದನ್ನು ಕೇಳಿಯೇ ಇಲ್ಲವೆಂಬಂತೆ ಅಹಂಕಾರ ಮೆರೆಯುತ್ತಾ ಉದ್ಧಟನಾಗಿರುತ್ತಾನೆ. ಅವನಿಗೆ ಯಾತನಾಮಯ ಶಿಕ್ಷೆಯ ಶುಭವಾರ್ತೆ ಕೊಟ್ಟು ಬಿಡಿರಿ.
9. ಅವನಿಗೆ ನಮ್ಮ ಯಾವುದಾದರೂ ವಚನದ ಕುರಿತು ತಿಳಿದಾಗ ಅವನು ಅದನ್ನು ಗೇಲಿ ಮಾಡುತ್ತಾನೆ. ಅವರಿಗೆ ಅಪಮಾನಕಾರಿ ಶಿಕ್ಷೆ ಕಾದಿದೆ.
10. ನರಕವು ಅವರ ಮುಂದಿದೆ. ಅವರ ಸಂಪಾದನೆಯಿಂದ ಅವರಿಗೆ ಯಾವ ಪ್ರಯೋಜನವೂ ಆಗದು. ಅಲ್ಲಾಹನ ಹೊರತು ಅವರು ನೆಚ್ಚಿಕೊಂಡಿರುವ ಪೋಷಕರಿಂದಲೂ ಅಷ್ಟೇ, (ಯಾವ ಲಾಭವೂ ಆಗದು). ಅವರಿಗೆ ಭಾರೀ ಶಿಕ್ಷೆ ಸಿಗಲಿದೆ.
11. ಇದು ಮಾರ್ಗದರ್ಶಿ. ತಮ್ಮ ಒಡೆಯನ ವಚನಗಳನ್ನು ಧಿಕ್ಕರಿಸಿದವರಿಗೆ ಅತ್ಯಂತ ಕಠಿಣ ಶಿಕ್ಷೆ ಸಿಗಲಿದೆ.
12. ಸಮುದ್ರದಲ್ಲಿ ತನ್ನ ಆದೇಶಾನುಸಾರ ಹಡಗುಗಳು ತೇಲುವಂತೆ ಹಾಗೂ ಆ ಮೂಲಕ ನೀವು ಅವನ ಅನುಗ್ರಹವನ್ನು ಹುಡುಕುವಂತೆ, ಸಮುದ್ರವನ್ನು ನಿಮಗೆ ವಿಧೇಯಗೊಳಿಸಿರುವವನು ಅಲ್ಲಾಹನು. ನೀವು ಅವನಿಗೆ ಕೃತಜ್ಞರಾಗಬೇಕೆಂದು (ಅವನು ಇದನ್ನು ಮಾಡಿರುವನು).
13. ಹಾಗೆಯೇ, ಅವನು ಆಕಾಶಗಳಲ್ಲಿ ಹಾಗೂ ಭೂಮಿಯಲ್ಲಿರುವ ಎಲ್ಲವನ್ನೂ ತನ್ನ ವತಿಯಿಂದ ನಿಮಗೆ ವಿಧೇಯಗೊಳಿಸಿರುವನು. ಚಿಂತನೆ ನಡೆಸುವವರಿಗೆ ಇದರಲ್ಲಿ ಖಂಡಿತ ಪುರಾವೆಗಳಿವೆ.
14. ಅಲ್ಲಾಹನ ದಿನಗಳನ್ನು ನಿರೀಕ್ಷಿಸದವರನ್ನು ಕ್ಷಮಿಸಬೇಕೆಂದು ವಿಶ್ವಾಸಿಗಳೊಡನೆ ಹೇಳಿರಿ. ಜನರಿಗೆ ಅವರ ಗಳಿಕೆಗೆ ಅನುಸಾರವಾದ ಪ್ರತಿಫಲವನ್ನು ಅವನೇ ನೀಡುವನು.
15. ಸತ್ಕರ್ಮಗಳನ್ನು ಮಾಡುವವನು ಸ್ವತಃ ತನಗಾಗಿ ಮಾಡುತ್ತಾನೆ ಮತ್ತು ಕೆಡುಕನ್ನು ಮಾಡಿದವನು ಕೂಡಾ (ಅದರ ಫಲವನ್ನು) ತಾನೇ ಅನುಭವಿಸಬೇಕಾಗುವುದು. ಕೊನೆಗೆ ನಿಮ್ಮನ್ನು ನಿಮ್ಮ ಒಡೆಯನೆಡೆಗೆ ಮರಳಿಸಲಾಗುವುದು.
16. ಇಸ್ರಾಈಲರ ಸಂತತಿಗಳಿಗೆ ನಾವು ಗ್ರಂಥವನ್ನು, ಅಧಿಕಾರವನ್ನು ಹಾಗೂ ಪ್ರವಾದಿತ್ವವನ್ನು ನೀಡಿದೆವು ಮತ್ತು ನಾವು ಅವರಿಗೆ ಶುದ್ಧ ಆಹಾರವನ್ನು ದಯಪಾಲಿಸಿದೆವು ಹಾಗೂ ಅವರಿಗೆ ಸರ್ವಲೋಕಗಳ ಇತರೆಲ್ಲರಿಗಿಂತ ಶ್ರೇಷ್ಠ ಸ್ಥಾನವನ್ನು ಕರುಣಿಸಿದೆವು.
17. ನಾವು ಅವರಿಗೆ ಬಹಳ ಸ್ಪಷ್ಟವಾದ ಆದೇಶಗಳನ್ನು ನೀಡಿದ್ದೆವು. ಆದರೆ ತಮ್ಮ ಬಳಿಗೆ ಜ್ಞಾನವು ಬಂದ ಬಳಿಕ ಅವರು ಕೇವಲ ಪರಸ್ಪರ ಹಗೆತನದಿಂದಾಗಿ ಭಿನ್ನಾಭಿಪ್ರಾಯ ತಾಳಿದರು.
18. (ದೂತರೇ,) ಆ ಬಳಿಕ ಇದೀಗ ನಾವು ನಿಮ್ಮನ್ನು ಧರ್ಮದ ಒಂದು ನಿರ್ದಿಷ್ಟ ಹಾದಿಯಲ್ಲಿ ನಡೆಸಿರುವೆವು. ನೀವು ಅದನ್ನು ಅನುಸರಿಸಿರಿ ಮತ್ತು ನೀವು ಜ್ಞಾನವಿಲ್ಲದವರ ಇಚ್ಛೆಗಳನ್ನು ಅನುಸರಿಸಬೇಡಿ.
19. ಖಂಡಿತವಾಗಿಯೂ ಅಲ್ಲಾಹನೆದುರು ಅವರು ನಿಮ್ಮ ಯಾವ ನೆರವಿಗೂ ಬರಲಾರರು. ಅಕ್ರಮಿಗಳು ಖಂಡಿತ ಪರಸ್ಪರರ ಪೋಷಕರಾಗಿರುತ್ತಾರೆ ಮತ್ತು ಧರ್ಮ ನಿಷ್ಠರ ಪಾಲಿಗೆ ಅಲ್ಲಾಹನೇ ಪೋಷಕನಾಗಿರುತ್ತಾನೆ.
20. ಇದು (ಕುರ್ಆನ್) ಮಾನವರ ಕಣ್ಣು ತೆರಸುವ ಸಾಧನವಾಗಿದೆ ಮತ್ತು ಅಚಲ ನಂಬಿಕೆ ಉಳ್ಳವರ ಪಾಲಿಗೆ ಮಾರ್ಗದರ್ಶಿ ಹಾಗೂ ಕೃಪೆಯಾಗಿದೆ.
21. ಪಾಪಗಳನ್ನು ಸಂಪಾದಿಸಿದವರು, ನಾವು ಅವರನ್ನು, (ಸತ್ಯದಲ್ಲಿ) ನಂಬಿಕೆ ಇಟ್ಟು ಸತ್ಕರ್ಮಗಳನ್ನು ಮಾಡಿದವರಿಗೆ ಸಮಾನರಾಗಿ ಮಾಡುತ್ತೇವೆಂದು ಅವರ ಬದುಕು ಮತ್ತು ಅವರ ಸಾವು (ವಿಶ್ವಾಸಿ ಸತ್ಕರ್ಮಿಗಳಿಗೆ) ಸಮಾನವಾಗಿರುವುದೆಂದು ಭಾವಿಸಿದ್ದಾರೆಯೇ? ಅವರ ಲೆಕ್ಕಾಚಾರ ಬಹಳ ಕೆಟ್ಟದಾಗಿದೆ.
22. ಅಲ್ಲಾಹನು ಆಕಾಶಗಳನ್ನು ಹಾಗೂ ಭೂಮಿಯನ್ನು ಸತ್ಯದ ಆಧಾರದಲ್ಲಿ ಸೃಷ್ಟಿಸಿರುವನು. (ಆದ್ದರಿಂದ) ಪ್ರತಿಯೊಬ್ಬನಿಗೂ ಅವನ ಗಳಿಕೆಯನುಸಾರ ಪ್ರತಿಫಲ ಸಿಗಲಿದೆ ಹಾಗೂ ಅವರ ಮೇಲೆ ಅನ್ಯಾಯವಾಗದು.
23. ತನ್ನ ಸ್ವೇಚ್ಛೆಯನ್ನೇ ತನ್ನ ದೇವರಾಗಿಸಿಕೊಂಡವನನ್ನು ನೀವು ನೋಡಿದಿರಾ? ಅವನು ತಿಳುವಳಿಕೆ ಉಳ್ಳವನಾಗಿದ್ದರೂ ಅಲ್ಲಾಹನು, ಅವನನ್ನು ದಾರಿಗೆಡಿಸಿ ಬಿಟ್ಟಿರುವನು ಮತ್ತು ಅವನ ಕಿವಿ ಹಾಗೂ ಅವನ ಹೃದಯದ ಮೇಲೆ ಮುದ್ರೆ ಒತ್ತಿ ಬಿಟ್ಟಿರುವನು ಮತ್ತು ಅವನ ಕಣ್ಣಿನ ಮೇಲೆ ತೆರೆ ಎಳೆದಿರುವನು. ಅಲ್ಲಾಹನ ಬಳಿಕ ಬೇರೆ ಯಾರು ತಾನೇ ಅವನಿಗೆ ಸರಿದಾರಿ ತೋರಿಸಬಲ್ಲನು? ನೀವೇನು ಅರ್ಥ ಮಾಡಿ ಕೊಳ್ಳುವುದಿಲ್ಲವೇ ?
24. ‘‘ನಮ್ಮ ಇಹಲೋಕದ ಬದುಕಿನ ಆಚೆ ಬೇರೇನೂ ಇಲ್ಲ. ನಾವು ಸಾಯುತ್ತೇವೆ ಮತ್ತು ನಾವು ಬದುಕುತ್ತೇವೆ. ನಮ್ಮನ್ನು ನಾಶ ಮಾಡುವುದು ಕಾಲ ಮಾತ್ರ’’ ಎಂದು ಅವರು ಹೇಳುತ್ತಾರೆ. ನಿಜವಾಗಿ ಅವರಿಗೆ ಈ ಕುರಿತು ಯಾವ ಜ್ಞಾನವೂ ಇಲ್ಲ ಅವರು ಕೇವಲ ಊಹಿಸುತ್ತಿದ್ದಾರೆ.
25. ನೀವು ಅವರಿಗೆ ನಮ್ಮ ಸ್ಪಷ್ಟವಾದ ವಚನಗಳನ್ನು ಓದಿ ಕೇಳಿಸಿದಾಗ, ‘‘ನೀವು ಸತ್ಯವಂತರಾಗಿದ್ದರೆ ನಮ್ಮ ಪೂರ್ವಜರನ್ನು (ಜೀವಂತಗೊಳಿಸಿ) ತನ್ನಿರಿ’’ ಎನ್ನುವುದಷ್ಟೇ ಅವರ ವಾದವಾಗಿರುತ್ತದೆ.
26. ಹೇಳಿರಿ; ಅಲ್ಲಾಹನೇ ನಿಮ್ಮನ್ನು ಜೀವಂತಗೊಳಿಸುತ್ತಾನೆ ಮತ್ತು ಅವನೇ ನಿಮ್ಮನ್ನು ಸಾಯಿಸುತ್ತಾನೆ. ಆ ಬಳಿಕ ನಿಸ್ಸಂದೇಹವಾಗಿ ಬರಲಿರುವ ಪುನರುತ್ಥಾನದ ದಿನ ಅವನೇ ನಿಮ್ಮನ್ನು ಒಟ್ಟು ಸೇರಿಸಲಿದ್ದಾನೆ. ಆದರೆ ಹೆಚ್ಚಿನ ಮಾನವರಿಗೆ ಅರಿವಿಲ್ಲ.
27. ಆಕಾಶಗಳ ಹಾಗೂ ಭೂಮಿಯ ಆಧಿಪತ್ಯವು ಅಲ್ಲಾಹನಿಗೇ ಸೇರಿದೆ. ಅಂತಿಮ ಕ್ಷಣವು ಬಂದು ಬಿಟ್ಟ ದಿನ ಮಿಥ್ಯವಾದಿಗಳು ನಷ್ಟ ಅನುಭವಿಸುವರು.
28. ಅಂದು ನೀವು, ಎಲ್ಲ ಸಮುದಾಯಗಳು ಮೊಣಕಾಲೂರಿ ಬಿದ್ದಿರುವುದನ್ನು ಕಾಣುವಿರಿ. (ಅಂದು) ಪ್ರತಿಯೊಂದು ಸಮುದಾಯವನ್ನೂ ಅದರ ಕರ್ಮಗಳ ದಾಖಲೆಯ ಕಡೆಗೆ ಕರೆಯಲಾಗುವುದು. (ಮತ್ತು ಹೇಳಲಾಗುವುದು;) ಇಂದು ನಿಮಗೆ ನೀವು ಮಾಡುತ್ತಿದ್ದ ಕರ್ಮಗಳ ಪ್ರತಿಫಲ ಸಿಗಲಿದೆ .
29. ಇದು ನಿಮ್ಮ ಕುರಿತು ಸತ್ಯವನ್ನೇ ಹೇಳುವ ನಮ್ಮ ದಾಖಲೆ. ನೀವು ಮಾಡುತ್ತಿದ್ದ ಎಲ್ಲವನ್ನೂ ನಾವು ಬರೆಸಿಡುತ್ತಿದ್ದೆವು.
30. ವಿಶ್ವಾಸಿಗಳಾಗಿದ್ದವರನ್ನು ಹಾಗೂ ಸತ್ಕರ್ಮಗಳನ್ನು ಮಾಡುತ್ತಿದ್ದವರನ್ನು ಅವರ ಒಡೆಯನು ತನ್ನ ಕೃಪೆಯೊಳಗೆ ಸೇರಿಸುವನು. ಇದುವೇ ಸ್ಪಷ್ಟ ವಿಜಯವಾಗಿದೆ.
31. ಅತ್ತ ಧಿಕ್ಕಾರಿಗಳೊಡನೆ ಹೇಳಲಾಗುವುದು; ನಿಮಗೆ ನನ್ನ ವಚನಗಳನ್ನು ಓದಿ ಕೇಳಿಸಲಾಗಿರಲಿಲ್ಲವೇ? ಆದರೆ ನೀವು ಅಹಂಕಾರ ತೋರಿದಿರಿ ಮತ್ತು ನೀವು ಅಪರಾಧಿಗಳಾಗಿದ್ದಿರಿ.
32. ‘‘ಅಲ್ಲಾಹನ ವಾಗ್ದಾನವು ಖಂಡಿತ ಸತ್ಯವಾಗಿದೆ ಮತ್ತು ಅಂತಿಮ ಕ್ಷಣವು ಬರುವುದರಲ್ಲಿ ಸಂದೇಹವಿಲ್ಲ ಎಂದು (ನಿಮ್ಮಾಡನೆ) ಹೇಳಲಾದಾಗ ನೀವು, – ಅಂತಿಮ ಘಳಿಗೆ ಅಂದರೇನೆಂದು ನಮಗೇನೂ ತಿಳಿಯದು, ನಾವು ಅದನ್ನು ಕೇವಲ ಒಂದು ಭ್ರಮೆ ಎಂದು ಪರಿಗಣಿಸುತ್ತೇವೆ ಮತ್ತು ನಾವಂತು ನಂಬುವವರಲ್ಲ – ಎನ್ನುತ್ತಿದ್ದಿರಿ’’.
33. ಅವರು ಮಾಡಿದ್ದ ಪಾಪಕೃತ್ಯಗಳು ಅವರ ಮುಂದೆ ಪ್ರಕಟವಾಗಿ ಬಿಡುವವು ಮತ್ತು ಯಾವುದನ್ನು ಅವರು ಗೇಲಿ ಮಾಡುತ್ತಿದ್ದರೋ ಅದುವೇ (ಆ ಶಿಕ್ಷೆಯೇ) ಅವರನ್ನು ಆವರಿಸಿಕೊಳ್ಳುವುದು.
34. ಮತ್ತು ಅವರೊಡನೆ ಹೇಳಲಾಗುವುದು; ‘‘ನೀವು ಈ ದಿನದ ಭೇಟಿಯನ್ನು ಮರೆತಿದ್ದಂತೆ ಇಂದು ನಾವು ನಿಮ್ಮನ್ನು ಮರೆತು ಬಿಟ್ಟಿರುವೆವು. ನರಕವೇ ನಿಮ್ಮ ನೆಲೆಯಾಗಿದೆ ಮತ್ತು ನಿಮಗೆ ಸಹಾಯಕರು ಯಾರೂ ಇಲ್ಲ’’.
35. ‘‘ಇದೇಕೆಂದರೆ, ನೀವು ಅಲ್ಲಾಹನ ವಚನಗಳನ್ನು ಗೇಲಿ ಮಾಡುತ್ತಿದ್ದಿರಿ ಮತ್ತು ಇಹಲೋಕದ ಬದುಕು ನಿಮ್ಮನ್ನು ಮೋಸಗೊಳಿಸಿತ್ತು’’. ಇಂದು ಅವರಿಗೆ ಇಲ್ಲಿಂದ ಹೊರ ಹೋಗಲಿಕ್ಕೂ ಸಾಧ್ಯವಿಲ್ಲ ಮತ್ತು ಅವನನ್ನು (ಅಲ್ಲಾಹನನ್ನು) ಮೆಚ್ಚಿಸಲಿಕ್ಕೂ ಅವಕಾಶವಿಲ್ಲ.