54. Al Qamar

54. ಅಲ್ಕಮರ್ (ಚಂದ್ರ),

ವಚನಗಳು – 55, ಮಕ್ಕಃ

ಅಲ್ಲಾಹನ ಹೆಸರಿಂದ – ಅವನು ಅಪಾರ ದಯಾಳು, ಕರುಣಾಮಯಿ.

1. (ಲೋಕಾಂತ್ಯದ) ಆ ಕ್ಷಣವು ಸಮೀಪಿಸಿತು ಮತ್ತು ಚಂದ್ರವು ಸೀಳಿಹೋಯಿತು.

2. ಅವರು ಯಾವುದಾದರೂ ಪುರಾವೆಯನ್ನು ಕಂಡಾಗ ಮುಖ ತಿರುಗಿಸಿಕೊಳ್ಳುತ್ತಾರೆ ಮತ್ತು ಇದು ತೀರ ತಾತ್ಕಾಲಿಕ ಜಾದೂಗಾರಿಕೆ ಎನ್ನುತ್ತಾರೆ.

3. ಅವರು (ಸತ್ಯವನ್ನು) ತಿರಸ್ಕರಿಸಿದರು ಮತ್ತು ಸ್ವೇಚ್ಛೆಯನ್ನು ಅನುಸರಿಸಿದರು. ನಿಜವಾಗಿ, ಎಲ್ಲ ವಿಷಯಗಳಿಗೂ ಒಂದು ಕಾಲ ನಿಶ್ಚಿತವಾಗಿರುತ್ತದೆ.

4. ಖಂಡಿತ, ಪಾಠದಾಯಕ ಮಾಹಿತಿಗಳು ಅವರ ಬಳಿಗೆ ಬಂದಿವೆ.

5. ಪರಿಪೂರ್ಣ ಜಾಣ್ಮೆಯ (ಉಪದೇಶವು ತಲುಪಿದೆ). ಆದರೆ ಎಚ್ಚರಿಸುವವರಿಂದ ಅವರಿಗೇನೂ ಲಾಭವಾಗಿಲ್ಲ.

6. (ದೂತರೇ,) ನೀವು ಅವರನ್ನು ಕಡೆಗಣಿಸಿಬಿಡಿರಿ. (ಶೀಘ್ರದಲ್ಲೇ) ಕರೆಯುವವನೊಬ್ಬನು ತೀರಾ ಅಪ್ರಿಯವಾದುದರ ಕಡೆಗೆ (ಅವರನ್ನು) ಕರೆಯುವನು.

7. ಆಗ ಅವರ ದೃಷ್ಟಿಗಳು ತಗ್ಗಿರುವವು. ಅವರು ಚದುರಿದ ಮಿಡತೆಗಳೋ ಎಂಬಂತೆ ಗೋರಿಗಳಿಂದ ಎದ್ದು ಬರುವರು.

8. ಕೂಗುವಾತನೆಡೆಗೆ ಅವರು ಧಾವಿಸುತ್ತಿರುವರು. ಅಂದು ಧಿಕ್ಕಾರಿಯು ಹೇಳುವನು; ಇದು ತುಂಬಾ ಕಠಿಣ ದಿನ.

9. ಅವರಿಗಿಂತ ಹಿಂದೆ ನೂಹ್‌ರ ಜನಾಂಗವು (ಸತ್ಯವನ್ನು) ತಿರಸ್ಕರಿಸಿತ್ತು. ಅವರು, ನಮ್ಮ ದಾಸರನ್ನು ತಿರಸ್ಕರಿಸಿದ್ದರು ಮತ್ತು ಅವರನ್ನು ಹುಚ್ಚನೆಂದು ಕರೆದರು ಹಾಗೂ ಅವರಿಗೆ ಬೆದರಿಕೆ ಒಡ್ಡಿದರು.

10. ಕೊನೆಗೆ ಅವರು (ನೂಹರು), ನಾನಿದೋ ಸೋತು ಹೋಗಿದ್ದೇನೆ. ಇದೀಗ ನೀನೇ ಪ್ರತೀಕಾರ ತೀರಿಸು ಎಂದು ತಮ್ಮ ಒಡೆಯನಿಗೆ ಮೊರೆ ಇಟ್ಟರು.

11. ನಾವು, ಧಾರಾಳವಾಗಿ ಸುರಿಯುವ ಮಳೆಯ ಮೂಲಕ ಆಕಾಶದ ಬಾಗಿಲುಗಳನ್ನು ತೆರೆದುಬಿಟ್ಟೆವು.

12. ಮತ್ತು ನಾವು ಭೂಮಿಯಿಂದ ಚಿಲುಮೆಗಳನ್ನು ಹರಿಸಿಬಿಟ್ಟೆವು. ಕೊನೆಗೆ, ಮೊದಲೇ ನಿರ್ಧಾರವಾಗಿದ್ದ ಒಂದು ಕಾರ್ಯಕ್ಕಾಗಿ ನೀರು ಸಂಗ್ರಹವಾಯಿತು.

13. ಮತ್ತು ನಾವು ಅವರನ್ನು (ನೂಹರನ್ನು), ಹಲಗೆಗಳು ಹಾಗೂ ಮೊಳೆಗಳಿದ್ದ ವಸ್ತುವಿಗೆ (ಹಡಗಿಗೆ) ಹತ್ತಿಸಿದೆವು.

14. ಅದು ನಮ್ಮ ಕಣ್ಣ ಮುಂದೆಯೇ (ನಮ್ಮ ಕಾವಲಿನಲ್ಲಿ) ಚಲಿಸುತ್ತಿತ್ತು. (ಹೀಗಿತ್ತು) ಧಿಕ್ಕರಿಸಲ್ಪಟ್ಟವನ ಪರವಾಗಿ ತೀರಿಸಲಾದ ಪ್ರತೀಕಾರ.

15. ಮತ್ತು ನಾವು ಅದನ್ನು ಒಂದು ಪುರಾವೆಯಾಗಿ ಉಳಿಸಿದೆವು. ಪಾಠ ಕಲಿಯುವವರು ಯಾರಾದರೂ ಇದ್ದಾರೆಯೇ ?

16. (ನೋಡಿರಿ,) ಹೇಗಿತ್ತು ನನ್ನ ಶಿಕ್ಷೆ ಹಾಗೂ ಎಚ್ಚರಿಕೆ ?

 17. ನಾವು ಉಪದೇಶಕ್ಕಾಗಿ ಕುರ್‌ಆನನ್ನು ಸರಳಗೊಳಿಸಿರುವೆವು. ಯಾರಾದರೂ ಇದ್ದಾರೆಯೇ, ಉಪದೇಶ ಸ್ವೀಕರಿಸುವವರು?

18. ಆದ್ ಜನಾಂಗದವರೂ (ಸತ್ಯವನ್ನು) ತಿರಸ್ಕರಿಸಿದ್ದರು. (ಅವರ ವಿಷಯದಲ್ಲೂ) ಹೇಗಿತ್ತು ನನ್ನ ಶಿಕ್ಷೆ ಹಾಗೂ ಎಚ್ಚರಿಕೆ?

19. ಒಂದು ಅಶುಭ ದಿನದಂದು, ನಾವು ಅವರ ವಿರುದ್ಧ ಪ್ರಚಂಡ ಬಿರುಗಾಳಿಯನ್ನು ಕಳಿಸಿದೆವು. ಅದು ಬೀಸುತ್ತಲೇ ಇತ್ತು.

20. ಅದು ಜನರನ್ನು, ಉರುಳಿ ಬಿದ್ದ ಖರ್ಜೂರ ಗಿಡದ ಬುಡಗಳೆಂಬಂತೆ ಕಿತ್ತೆಸೆಯುತ್ತಿತ್ತು.

21. ಹೇಗಿತ್ತು, ನನ್ನ ಶಿಕ್ಷೆ ಹಾಗೂ ಎಚ್ಚರಿಕೆ?

22. ಉಪದೇಶಕ್ಕಾಗಿ, ನಾವು ಕುರ್‌ಆನನ್ನು ಸರಳಗೊಳಿಸಿರುವೆವು. ಯಾರಾದರೂ ಇದ್ದಾರೆಯೇ, ಉಪದೇಶ ಸ್ವೀಕರಿಸುವವರು?

23. ಸಮೂದ್ ಜನಾಂಗದವರು, ಎಚ್ಚರಿಸುವವರನ್ನು ತಿರಸ್ಕರಿಸಿದರು.

24. ಅವರು ಹೇಳಿದರು; ನಾವೇನು, ನಮ್ಮೊಳಗಿನ ಒಬ್ಬ ಮಾನವನನ್ನು ಹಿಂಬಾಲಿಸಬೇಕೇ? ಹಾಗೆ ಮಾಡಿದರೆ ನಾವು ದಾರಿಗೆಟ್ಟವರು ಹಾಗೂ ಹುಚ್ಚರಾಗಿ ಬಿಡುವೆವು.

25. ನಮ್ಮ ಪೈಕಿ ಅವನಿಗೆ ದಿವ್ಯ ಬೋಧನೆಯನ್ನು ಇಳಿಸಿಕೊಡಲಾಗಿದೆಯೇ? ಅವನಂತು ಸುಳ್ಳುಗಾರ ಹಾಗೂ ತನ್ನನ್ನೇ ಹೊಗಳುವವನಾಗಿದ್ದಾನೆ.

26. ಸುಳ್ಳುಗಾರ ಮತ್ತು ತನ್ನನ್ನೇ ಹೊಗಳುವವನು ಯಾರೆಂಬುದು ಅವರಿಗೆ ನಾಳೆ ತಿಳಿಯಲಿದೆ.

27. ನಾವು ಅವರ ಪಾಲಿಗೆ ಪರೀಕ್ಷೆಯಾಗಿ ಒಂದು ಹೆಣ್ಣೊಂಟೆಯನ್ನು ಕಳಿಸುವೆವು (ಸಾಲಿಹರೇ,) ನೀವು ಅವರನ್ನು ನೋಡುತ್ತಲಿರಿ ಹಾಗೂ ಸಹನಶೀಲರಾಗಿರಿ.

28. ಮತ್ತು ನೀರನ್ನು ಅವರ ನಡುವೆ ಹಂಚಲಾಗಿದೆ. ಪ್ರತಿಯೊಬ್ಬರೂ ನೀರು ಕುಡಿಯುವ ತಮ್ಮ ಸರದಿಯ ವೇಳೆ ಹಾಜರಿರಬೇಕು ಎಂದು ಅವರಿಗೆ ತಿಳಿಸಿರಿ (ಎನ್ನಲಾಯಿತು).

29. ಅವರು (ಊರವರು) ತಮ್ಮ ಸಂಗಾತಿಯನ್ನು ಕರೆದರು. ಅವನು ಅತಿಕ್ರಮಕ್ಕಿಳಿದನು ಹಾಗೂ ಅವನು (ಒಂಟೆಯನ್ನು) ಕಡಿದು ಬಿಟ್ಟನು.

30. ಕೊನೆಗೆ, ಹೇಗಿತ್ತು ನನ್ನ ಶಿಕ್ಷೆ ಮತ್ತು ನನ್ನ ಎಚ್ಚರಿಕೆ (ಎಂಬುದನ್ನು ನೋಡಿರಿ;)

 31. ನಾವು ಅವರ ಮೇಲೆ ಒಂದೇ ಒಂದು ಅಬ್ಬರದ ಸಿಡಿಲನ್ನು ಎರಗಿಸಿಬಿಟ್ಟೆವು. ಅಷ್ಟಕ್ಕೇ ಅವರು ಒಣ ಹುಲ್ಲಿನಂತಾಗಿ ಬಿಟ್ಟರು.

32. ನಾವು ಉಪದೇಶಕ್ಕಾಗಿ ಕುರ್‌ಆನನ್ನು ಸರಳಗೊಳಿಸಿರುವೆವು. ಉಪದೇಶ ಸ್ವೀಕರಿಸುವವನು ಯಾರಾದರೂ ಇದ್ದಾನೆಯೇ ?

33. ಲೂತ್‌ರ ಜನಾಂಗದವರು, ಎಚ್ಚರಿಸುವವರನ್ನು ತಿರಸ್ಕರಿಸಿದರು.

34. ನಾವು ಅವರ ಮೇಲೆ ಕಲ್ಲುಗಳನ್ನು ಸುರಿಸುವ ಬಿರುಗಾಳಿಯನ್ನು ಎರಗಿಸಿದೆವು – ಲೂತ್‌ರ ಮನೆಯವರ ಹೊರತು. ಅವರನ್ನು ನಾವು ಮುಂಜಾವಿನ ಸಮಯದಲ್ಲೇ ರಕ್ಷಿಸಿದೆವು.

35. ಅದು ನಮ್ಮ ವತಿಯಿಂದ (ನೀಡಲಾದ) ಕೊಡುಗೆಯಾಗಿತ್ತು. ಕೃತಜ್ಞನಾದವನನ್ನು ನಾವು ಇದೇ ರೀತಿ ಪುರಸ್ಕರಿಸುತ್ತೇವೆ.

36. ಅವರು (ಲೂತರು) ನಮ್ಮ ಶಿಕ್ಷೆಯ ಕುರಿತು ಅವರನ್ನು (ತಮ್ಮ ಜನಾಂಗದವರನ್ನು) ಎಚ್ಚರಿಸಿದ್ದರು. ಆದರೆ ಅವರು ಆ ಎಚ್ಚರಿಕೆಯ ಕುರಿತು ಜಗಳಾಡ ತೊಡಗಿದರು.

37. ಮತ್ತು ಅವರು, ಅವರ (ಲೂತರ) ಅತಿಥಿಗಳನ್ನು ಅವರಿಂದ ಕಸಿದುಕೊಳ್ಳ ಬಯಸಿದರು. ಆಗ ನಾವು ಅವರ ಕಣ್ಣುಗಳನ್ನು ಅಳಿಸಿಬಿಟ್ಟೆವು – ಸವಿಯಿರಿ ನನ್ನ ಶಿಕ್ಷೆಯನ್ನು ಹಾಗೂ ಎಚ್ಚರಿಕೆಯನ್ನು.

38. ಮುಂಜಾನೆಯೇ ಅವರ ಮೇಲೆ ಶಾಶ್ವತ ಶಿಕ್ಷೆಯೊಂದು ಎರಗಿಬಿಟ್ಟಿತು.

39. ಸವಿಯಿರಿ ನನ್ನ ಶಿಕ್ಷೆಯನ್ನು ಹಾಗೂ ಎಚ್ಚರಿಕೆಯನ್ನು.

40. ನಾವು ಕುರ್‌ಆನನ್ನು ಉಪದೇಶಕ್ಕಾಗಿ ಸರಳಗೊಳಿಸಿರುವೆವು. ಯಾರಾದರೂ ಇದ್ದಾನೆಯೇ, ಉಪದೇಶ ಸ್ವೀಕರಿಸುವವನು?

41. ಮತ್ತು ಫಿರ್‌ಔನನ ಜನಾಂಗದವರ ಬಳಿಗೂ ಎಚ್ಚರಿಸುವವರು ಬಂದಿದ್ದರು.

42. ಅವರು ನಮ್ಮ ಎಲ್ಲ ಪುರಾವೆಗಳನ್ನೂ ತಿರಸ್ಕರಿಸಿದರು. ಕೊನೆಗೆ ನಾವು ಅವರನ್ನು ಹಿಡಿದೆವು. ಅದು ಭಾರೀ ಪ್ರಬಲನೂ ಬಲಿಷ್ಠನೂ ಆಗಿರುವವನ ಹಿಡಿತವಾಗಿತ್ತು.

43. ನಿಮ್ಮಲ್ಲಿನ ಧಿಕ್ಕಾರಿಗಳೇನು ಅವರಿಗಿಂತ ಉತ್ತಮರೇ? ಅಥವಾ (ಗತಕಾಲದ) ದಿವ್ಯ ಗ್ರಂಥಗಳಲ್ಲಿ ನಿಮಗೇನಾದರೂ ಕ್ಷಮಾ ಪತ್ರ ನೀಡಲಾಗಿದೆಯೇ?

44. ನಾವು ಪ್ರತೀಕಾರ ತೀರಿಸಬಲ್ಲ (ಶಕ್ತಿಶಾಲಿ) ಪಡೆಯಾಗಿದ್ದೇವೆ ಎಂದು ಅವರು ಹೇಳಿಕೊಳ್ಳುತ್ತಿದ್ದಾರೆಯೇ?

45. ಬಹು ಬೇಗನೇ ಆ ಪಡೆ ಸೋತು ಹೋಗಲಿದೆ ಮತ್ತು ಅವರು ಬೆನ್ನು ತಿರುಗಿಸಿ ಓಡಲಿದ್ದಾರೆ.

46. ಅವರಿಗೆ (ಪುನರುತ್ಥಾನದ) ಆ ಕ್ಷಣದ ವಾಗ್ದಾನ ಮಾಡಲಾಗಿದೆ ಮತ್ತು ಆ ಕ್ಷಣವು ತುಂಬಾ ಕಠಿಣ ಹಾಗೂ ಅಸಹನೀಯವಾಗಿರುವುದು.

47. ಖಂಡಿತವಾಗಿಯೂ ಅಪರಾಧಿಗಳು ದಾರಿಗೆಟ್ಟಿದ್ದಾರೆ ಹಾಗೂ ಸಂಪೂರ್ಣ ಅಜ್ಞಾನದ ಸ್ಥಿತಿಯಲ್ಲಿದ್ದಾರೆ.

48. ಅವರ ಮುಖಗಳನ್ನು ನೆಲಕ್ಕೆ ಒರಗಿಸಿ ಅವರನ್ನು ಎಳೆಯುತ್ತಾ ನರಕಕ್ಕೆ ಸಾಗಿಸಲಾಗುವ ದಿನ ‘‘ಸವಿಯಿರಿ ಬೆಂಕಿಯ ಉರಿಯನ್ನು’’ (ಎಂದು ಅವರೊಡನೆ ಹೇಳಲಾಗುವುದು).

49. ನಾವು ಪ್ರತಿಯೊಂದು ವಸ್ತುವನ್ನೂ ನಿರ್ದಿಷ್ಟ ಪ್ರಮಾಣದಲ್ಲಿ ಸೃಷ್ಟಿಸಿರುವೆವು.

50. ಮತ್ತು ನಮ್ಮ ಆದೇಶವು ಕಣ್ಮುಚ್ಚಿ ತೆರೆಯುವಷ್ಟು ಕ್ಷಿಪ್ರವಾದ ಕೇವಲ ಒಂದು ಸೂಚನೆಯಾಗಿರುತ್ತದೆ.

51. ನಾವು ನಿಮ್ಮ ಸಹವರ್ತಿಗಳನ್ನು ನಾಶ ಮಾಡಿರುವೆವು. ಯಾರಾದರೂ ಇದ್ದಾನೆಯೇ, ಉಪದೇಶ ಸ್ವೀಕರಿಸುವವನು?

52. ಅವರು ಮಾಡಿದ್ದೆಲ್ಲವೂ ಗ್ರಂಥಗಳಲ್ಲಿ ದಾಖಲಾಗಿದೆ.

53. ಸಣ್ಣ ಹಾಗೂ ದೊಡ್ಡ ಎಲ್ಲ ವಿಷಯಗಳೂ ಲಿಖಿತವಾಗಿವೆ.

54. ಧರ್ಮನಿಷ್ಠರು ಖಂಡಿತ ಭವ್ಯ ತೋಟಗಳಲ್ಲಿ ಹಾಗೂ ನದಿಗಳಲ್ಲಿರುವರು.

55. ನಿರ್ಮಲ ಸ್ಥಾನದಲ್ಲಿ, ಸರ್ವಶಕ್ತನಾದ ದೊರೆಯ (ಅಲ್ಲಾಹನ) ಸಮೀಪ.