1. ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಎಲ್ಲವೂ ಅಲ್ಲಾಹನ ಪಾವಿತ್ರವನ್ನು ಜಪಿಸುತ್ತವೆ. ಅವನು ಪ್ರಬಲನೂ ಯುಕ್ತಿವಂತನೂ ಆಗಿರುವನು.
2. ವಿಶ್ವಾಸಿಗಳೇ, ನೀವು ಮಾಡದ್ದನ್ನು ಯಾಕೆ ಹೇಳುತ್ತೀರಿ?
3. ನೀವು ಮಾಡದ್ದನ್ನು ಹೇಳುವುದು ಅಲ್ಲಾಹನ ದೃಷ್ಟಿಯಲ್ಲಿ ತೀರಾ ಅಪ್ರಿಯವಾಗಿದೆ.
4. ತಾವು ಸೀಸ ಹೊಯ್ದ ಗೋಡೆಗಳೆಂಬಂತೆ ಸಾಲಾಗಿ (ಸಂಘಟಿತರಾಗಿ) ತನ್ನ ಮಾರ್ಗದಲ್ಲಿ ಹೋರಾಡುವವರನ್ನು ಅಲ್ಲಾಹನು ಖಂಡಿತ ಪ್ರೀತಿಸುತ್ತಾನೆ.
5. ನನ್ನ ಜನಾಂಗದವರೇ, ನಾನು ನಿಮ್ಮೆಡೆಗೆ ಬಂದಿರುವ, ಅಲ್ಲಾಹನ ದೂತನೆಂಬುದನ್ನು ಅರಿತಿದ್ದೂ ನೀವೇಕೆ ನನ್ನನ್ನು ಹಿಂಸಿಸುತ್ತಿರುವಿರಿ? ಎಂದು ಮೂಸಾ ತಮ್ಮ ಜನಾಂಗದವರೊಡನೆ ಕೇಳಿದರು. ಅವರು (ಮೂಸಾರ ಜನಾಂಗದವರು) ವಕ್ರ ಬುದ್ಧಿ ತೋರಿದಾಗ ಅಲ್ಲಾಹನು ಅವರ ಮನಸ್ಸುಗಳನ್ನು ವಕ್ರಗೊಳಿಸಿಬಿಟ್ಟನು. ಅಲ್ಲಾಹನು ಅವಿಧೇಯರಿಗೆ ಸರಿದಾರಿಯನ್ನು ತೋರಿಸುವುದಿಲ್ಲ.
6. ‘‘ಇಸ್ರಾಈಲರ ಸಂತತಿಗಳೇ, ನಾನು ನಿಮ್ಮ ಬಳಿಗೆ ಅಲ್ಲಾಹನ ದೂತನಾಗಿ ಬಂದಿರುತ್ತೇನೆ. ನಿಮ್ಮ ಬಳಿ ಈಗಾಗಲೇ ಇರುವ ತೌರಾತನ್ನು ನಾನು ಸಮರ್ಥಿಸುತ್ತೇನೆ. ಮತ್ತು ನಾನು, ನನ್ನ ಬಳಿಕ ಬರಲಿರುವ ಅಹ್ಮದ್ ಎಂಬ ಹೆಸರಿನ ದೂತರ ಕುರಿತು ಶುಭವಾರ್ತೆ ನೀಡುವವನಾಗಿರುತ್ತೇನೆ’’ ಎಂದು ಮರ್ಯಮರ ಪುತ್ರ ಈಸಾ ಹೇಳಿದ್ದರು. ಕೊನೆಗೆ ಅವರು (ಆ ದೂತರು) ಸ್ಪಷ್ಟ ಪುರಾವೆಗಳೊಂದಿಗೆ ಅವರ ಬಳಿಗೆ ಬಂದಾಗ ಅವರು ಇದೆಲ್ಲಾ ಸ್ಪಷ್ಟ ಮಾಟಗಾರಿಕೆಯಾಗಿದೆ ಎಂದು ಬಿಟ್ಟರು.
7. ತನ್ನನ್ನು ಇಸ್ಲಾಮಿನ ಕಡೆಗೆ ಕರೆಯಲಾದಾಗ, ಅಲ್ಲಾಹನ ಮೇಲೆ ಸುಳ್ಳಾರೋಪಗಳನ್ನು ಹೊರಿಸುವವನಿಗಿಂತ ದೊಡ್ಡ ಅಕ್ರಮಿ ಯಾರಿದ್ದಾನೆ? ಅಲ್ಲಾಹನು ಅಕ್ರಮಿಗಳಿಗೆ ಸರಿದಾರಿಯನ್ನು ತೋರುವುದಿಲ್ಲ.
8. ಅವರು ಅಲ್ಲಾಹನ ಬೆಳಕನ್ನು ತಮ್ಮ ಬಾಯಿಗಳಿಂದ (ಊದಿ) ನಂದಿಸಬಯಸುತ್ತಾರೆ. ಅಲ್ಲಾಹನಂತೂ ತನ್ನ ಬೆಳಕನ್ನು ಸಂಪೂರ್ಣ ವ್ಯಾಪಿಸಿಯೇ ತೀರುವನು. ಧಿಕ್ಕಾರಿಗಳಿಗೆ ಅದು ಎಷ್ಟೇ ಅಪ್ರಿಯವಾಗಿದ್ದರೂ ಸರಿಯೇ.
9. ಅವನೇ, ಮಾರ್ಗದರ್ಶನ ಮತ್ತು ಸತ್ಯಧರ್ಮದೊಂದಿಗೆ ತನ್ನ ದೂತನನ್ನು ಕಳುಹಿಸಿ ಕೊಟ್ಟವನು. ಅದನ್ನು ಅವನು, ಇತರ ಎಲ್ಲ ಧರ್ಮಗಳೆದುರು ವಿಜಯಿಯಾಗಲಿಕ್ಕಾಗಿ ಕಳಿಸಿರುವನು. ಅದು ಬಹುದೇವಾರಾಧಕರಿಗೆ ಎಷ್ಟೇ ಅಪ್ರಿಯವಾಗಿದ್ದರೂ ಸರಿ.
10. ವಿಶ್ವಾಸಿಗಳೇ, ನಾನು ನಿಮಗೆ ನಿಮ್ಮನ್ನು (ನರಕದ) ಕಠಿಣ ಶಿಕ್ಷೆಯಿಂದ ರಕ್ಷಿಸುವ ವ್ಯವಹಾರವೊಂದನ್ನು ತಿಳಿಸಲೇ?
11. ನೀವು ಅಲ್ಲಾಹನಲ್ಲಿ ಮತ್ತು ಅವನ ದೂತರಲ್ಲಿ ನಂಬಿಕೆ ಇಡಿರಿ. ಮತ್ತು ನಿಮ್ಮ ಸಂಪತ್ತುಗಳನ್ನೂ ಜೀವಗಳನ್ನೂ ತೊಡಗಿಸಿ ಅಲ್ಲಾಹನ ಮಾರ್ಗದಲ್ಲಿ ಹೋರಾಡಿರಿ. ನೀವು ಅರಿಯುವವರಾಗಿದ್ದರೆ ಅದುವೇ ನಿಮ್ಮ ಪಾಲಿಗೆ ಉತ್ತಮ.
12. ಆಗ ಅವನು ನಿಮ್ಮ ಪಾಪಗಳನ್ನು ಕ್ಷಮಿಸುವನು ಮತ್ತು ತಳದಲ್ಲಿ ನದಿಗಳು ಹರಿಯುತ್ತಿರುವ ಸ್ವರ್ಗತೋಟಗಳೊಳಗೆ ನಿಮ್ಮನ್ನು ಸೇರಿಸುವನು. ಮತ್ತು ಶಾಶ್ವತವಾದ ಆ ಸ್ವರ್ಗತೋಟಗಳಲ್ಲಿ (ನಿಮಗೆ) ನಿವಾಸಗಳನ್ನು ಒದಗಿಸುವನು. ಇದುವೇ ಮಹಾ ವಿಜಯವಾಗಿದೆ.
13. ಹಾಗೆಯೇ, ನೀವು ಪ್ರೀತಿಸುವ ಇನ್ನೊಂದು ವಸ್ತು – ಅಲ್ಲಾಹನ ನೆರವು ಮತ್ತು ಶೀಘ್ರ ವಿಜಯ (ಕೂಡಾ ನಿಮಗೆ ಸಿಗಲಿವೆ). ವಿಶ್ವಾಸಿಗಳಿಗೆ ಶುಭ ವಾರ್ತೆ ನೀಡಿರಿ.
14. ವಿಶ್ವಾಸಿಗಳೇ, ನೀವು ಅಲ್ಲಾಹನ ಸಹಾಯಕರಾಗಿರಿ – ಮರ್ಯಮರ ಪುತ್ರ ಈಸಾ ತಮ್ಮ ಆಪ್ತ ಶಿಷ್ಯರೊಡನೆ ‘‘ಅಲ್ಲಾಹನ ಮಾರ್ಗದಲ್ಲಿ ನನಗೆ ನೆರವಾಗುವವರು ಯಾರಿದ್ದಾರೆ?’’ ಎಂದಂತೆ. ಅವರ ಆಪ್ತ ಶಿಷ್ಯರು ‘‘ನಾವು ಅಲ್ಲಾಹನ ಸಹಾಯಕರು’’ ಎಂದರು. ಆ ಬಳಿಕ ಇಸ್ರಾಈಲರ ಸಂತತಿಯಲ್ಲಿನ ಒಂದು ಗುಂಪು ವಿಶ್ವಾಸವಿಟ್ಟಿತು ಮತ್ತು ಇನ್ನೊಂದು ಗುಂಪು ಧಿಕ್ಕರಿಸಿತು. ನಾವು ವಿಶ್ವಾಸಿಗಳಿಗೆ ಅವರ ಶತ್ರುಗಳ ವಿರುದ್ದ ನೆರವು ಒದಗಿಸಿದೆವು ಮತ್ತು ಅವರು ವಿಜಯಿಗಳಾದರು.