62. Al Jumuah

62. ಅಲ್ ಜುಮುಅಃ (ಶುಕ್ರವಾರ),

ವಚನಗಳು – 11, ಮದೀನಃ

ಅಲ್ಲಾಹನ ಹೆಸರಿಂದ – ಅವನು ಅಪಾರ ದಯಾಳು, ಕರುಣಾಮಯಿ.

1. ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಎಲ್ಲವೂ ಅಲ್ಲಾಹನ ಪಾವಿತ್ರವನ್ನು ಜಪಿಸುತ್ತಿವೆ. ಅವನು ನೈಜ ಅಧಿಪತಿಯೂ ಪರಮ ಪಾವನನೂ ಪ್ರಬಲನೂ ಯುಕ್ತಿವಂತನೂ ಆಗಿದ್ದಾನೆ.

2. ಅವನೇ ನಿರಕ್ಷರಿಗಳ ಮಧ್ಯೆ, ಅವರಲ್ಲೊಬ್ಬನನ್ನು ದೂತನಾಗಿ ಕಳುಹಿಸಿದನು. ಅವರು (ಆ ದೂತರು) ಅವರಿಗೆ ಆತನ ವಚನಗಳನ್ನು ಓದಿ ಕೇಳಿಸುತ್ತಾರೆ. ಹಾಗೂ ಅವರನ್ನು ಸಂಸ್ಕರಿಸುತ್ತಾರೆ ಮತ್ತು ಅವರಿಗೆ ಗ್ರಂಥವನ್ನೂ ಯುಕ್ತಿಯನ್ನೂ ಕಲಿಸಿಕೊಡುತ್ತಾರೆ. ಈ ಹಿಂದೆ ಆ ಜನರು ಸ್ಪಷ್ಟವಾಗಿ ದಾರಿಗೆಟ್ಟಿದ್ದರು.

3. ಇದಲ್ಲದೆ, ಅವರ ಪೈಕಿ, ಅವರಿನ್ನೂ ಭೇಟಿಯಾಗಿಲ್ಲದವರ ಕಡೆಗೂ ಅವರನ್ನು (ದೂತರಾಗಿ) ಕಳುಹಿಸಲಾಗಿದೆ. ಅವನು ಪ್ರಬಲನೂ ಯುಕ್ತಿವಂತನೂ ಆಗಿರುತ್ತಾನೆ.

4. ಇದು ಅಲ್ಲಾಹನ ಅನುಗ್ರಹ. ಅವನು ತಾನಿಚ್ಛಿಸಿದವರಿಗೆ ಇದನ್ನು ದಯಪಾಲಿಸುತ್ತಾನೆ ಮತ್ತು ಅಲ್ಲಾಹನು ಮಹಾ ಅನುಗ್ರಹಶಾಲಿಯಾಗಿದ್ದಾನೆ.

5. ತೌರಾತಿನ ಹೊಣೆ ವಹಿಸಿ ಕೊಡಲಾದವರು ಮತ್ತು ಆ ಹೊಣೆಯನ್ನು ನಿರ್ವಹಿಸದೆ ಇದ್ದವರ ಉದಾಹರಣೆಯು ಗ್ರಂಥಗಳ ಹೊರೆ ಹೊತ್ತ ಕತ್ತೆಯಂತಿದೆ. ಅಲ್ಲಾಹನ ವಚನಗಳನ್ನು ತಿರಸ್ಕರಿಸಿದವರ ಸ್ಥಿತಿಯು ನಿಜಕ್ಕೂ ಕೆಟ್ಟದಾಗಿದೆ. ಅಲ್ಲಾಹನು ಅಕ್ರಮಿಗಳಿಗೆ ಸರಿದಾರಿಯನ್ನು ತೋರುವುದಿಲ್ಲ.

6. ಹೇಳಿರಿ; ‘‘ಯಹೂದಿಗಳೇ, ಇತರೆಲ್ಲ ಮಾನವರನ್ನು ಬಿಟ್ಟು, ನೀವು ಮಾತ್ರ ಅಲ್ಲಾಹನಿಗೆ ಪರಮ ಆಪ್ತರು ಎಂಬ ದೊಡ್ಡಸ್ತಿಕೆ ನಿಮಗಿದ್ದರೆ ಮತ್ತು ನೀವು ಸತ್ಯವಂತರಾಗಿದ್ದರೆ, ನೀವು ಮರಣವನ್ನು ಅಪೇಕ್ಷಿಸಿರಿ’’.

7. ಅವರು ಅದನ್ನೆಂದೂ ಅಪೇಕ್ಷಿಸಲಾರರು. (ಏಕೆಂದರೆ) ಅವರ ಕೈಗಳು ಮುಂದೆ ಕಳಿಸಿರುವ ಕರ್ಮಗಳು ಹಾಗಿವೆ. ಅಲ್ಲಾಹನು ಅಕ್ರಮಿಗಳನ್ನು ಚೆನ್ನಾಗಿ ಬಲ್ಲನು.

8. ಹೇಳಿರಿ; ನೀವು ಯಾವ ಮರಣದಿಂದ ದೂರ ಓಡುತ್ತಿರುವಿರೊ ಅದು ಖಂಡಿತ ನಿಮ್ಮ ಮುಂದೆ ಬರಲಿದೆ. ಆ ಬಳಿಕ ನಿಮ್ಮನ್ನು, ಗುಪ್ತ ಹಾಗೂ ಬಹಿರಂಗವಾದ ಎಲ್ಲವನ್ನೂ ಬಲ್ಲವನ ಬಳಿಗೆ ಮರಳಿಸಲಾಗುವುದು. ನೀವು ಏನೆಲ್ಲಾ ಮಾಡುತ್ತಿದ್ದಿರೆಂಬುದನ್ನು ಆಗ ಅವನು ನಿಮಗೆ ತಿಳಿಸುವನು.

9. ವಿಶ್ವಾಸಿಗಳೇ, ಶುಕ್ರವಾರದ ದಿನ ನಿಮ್ಮನ್ನು ನಮಾಝ್‌ಗಾಗಿ ಕರೆಯಲಾದಾಗ ಅಲ್ಲಾಹನ ಸ್ಮರಣೆಯೆಡೆಗೆ ಧಾವಿಸಿರಿ ಮತ್ತು ಇತರೆಲ್ಲಾ ವ್ಯವಹಾರಗಳನ್ನು ಬಿಟ್ಟು ಬಿಡಿರಿ. ನೀವು ಅರಿಯುವವರಾಗಿದ್ದರೆ ನಿಮ್ಮ ಪಾಲಿಗೆ ಇದುವೇ ಉತ್ತಮ.

10. ನೀವು ನಮಾಝನ್ನು ಮುಗಿಸಿದ ಬಳಿಕ ಭೂಮಿಯಲ್ಲಿ ಚದುರಿರಿ ಹಾಗೂ ಅಲ್ಲಾಹನ ಅನುಗ್ರಹವನ್ನು ಹುಡುಕಿರಿ ಮತ್ತು ಪದೇ ಪದೇ ಅಲ್ಲಾಹನನ್ನು ಸ್ಮರಿಸಿರಿ. ನೀವು ವಿಜಯಿಗಳಾಗಬಹುದು.

11. (ದೂತರೇ,) ಅವರು (ಕೆಲವರು) ಯಾವುದಾದರೂ ವ್ಯಾಪಾರ ಅಥವಾ ಮನರಂಜಕ ವಸ್ತುವನ್ನು ಕಂಡಾಗ ನಿಮ್ಮನ್ನು ನಿಂತಲ್ಲೇ ಬಿಟ್ಟು ಅವುಗಳೆಡೆಗೆ ಧಾವಿಸಿ ಬಿಡುತ್ತಾರೆ. ಹೇಳಿರಿ ಅಲ್ಲಾಹನ ಬಳಿ ಏನಿದೆಯೋ ಅದು ಸಕಲ ಮನರಂಜನೆ ಮತ್ತು ಸರ್ವ ವ್ಯಾಪಾರಗಳಿಗಿಂತಲೂ ಉತ್ತಮವಾಗಿದೆ ಮತ್ತು ಅಲ್ಲಾಹನು ಅತ್ಯುತ್ತಮ ಅನ್ನದಾತನಾಗಿದ್ದಾನೆ.