64. Al Taghabun

64. ಅತ್ತಗಾಬುನ್ (ಎಳೆದಾಟ),

ವಚನಗಳು – 18, ಮದೀನಃ

ಅಲ್ಲಾಹನ ಹೆಸರಿಂದ – ಅವನು ಅಪಾರ ದಯಾಳು, ಕರುಣಾಮಯಿ.

1. ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಎಲ್ಲವೂ ಅಲ್ಲಾಹನ ಪಾವಿತ್ರವನ್ನು ಜಪಿಸುತ್ತಿವೆ. ಆಧಿಪತ್ಯವು ಅವನಿಗೇ ಸೇರಿದೆ. ಪ್ರಶಂಸೆಗಳು ಅವನಿಗೇ ಮೀಸಲು. ಅವನು ಎಲ್ಲವನ್ನೂ ಮಾಡಲು ಶಕ್ತನಾಗಿದ್ದಾನೆ.

2. ಅವನೇ ನಿಮ್ಮನ್ನು ಸೃಷ್ಟಿಸಿದವನು. ಇನ್ನು, ನಿಮ್ಮಲ್ಲಿ ಧಿಕ್ಕಾರಿಗಳೂ ಇದ್ದಾರೆ ಮತ್ತು ನಿಮ್ಮಲ್ಲಿ ವಿಶ್ವಾಸಿಗಳೂ ಇದ್ದಾರೆ. ಮತ್ತು ನೀವು ಮಾಡುತ್ತಿರುವ ಎಲ್ಲವನ್ನೂ ಅಲ್ಲಾಹನು ನೋಡುತ್ತಿದ್ದಾನೆ.

3. ಅವನು ಆಕಾಶಗಳನ್ನು ಮತ್ತು ಭೂಮಿಯನ್ನು ನ್ಯಾಯೋಚಿತವಾಗಿ ಸೃಷ್ಟಿಸಿರುವನು. ಅವನೇ ನಿಮಗೆ ರೂಪ ನೀಡಿದವನು. ಮತ್ತು ಅವನು ನಿಮಗೆ ಬಹಳ ಶ್ರೇಷ್ಠ ರೂಪವನ್ನು ನೀಡಿರುವನು. (ಕೊನೆಗೆ ಎಲ್ಲರೂ) ಅವನ ಕಡೆಗೇ ಮರಳ ಬೇಕಾಗಿದೆ.

4. ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿ ಇರುವ ಎಲ್ಲವನ್ನೂ ಅವನು ಬಲ್ಲನು. ಹಾಗೂ ನೀವು ಗುಟ್ಟಾಗಿಡುವ ಮತ್ತು ಪ್ರಕಟ ಪಡಿಸುವ ಎಲ್ಲವನ್ನೂ ಅವನು ಬಲ್ಲನು. ಅಲ್ಲಾಹನು ಮನಸ್ಸಿನ ರಹಸ್ಯಗಳನ್ನೂ ಬಲ್ಲವನಾಗಿದ್ದಾನೆ.

5. ಗತಕಾಲದ ಧಿಕ್ಕಾರಿಗಳ ಸಮಾಚಾರವು ನಿಮಗೆ ತಲುಪಿಲ್ಲವೇ? ಅವರು ತಮ್ಮ ಕೃತ್ಯಗಳ ಫಲವನ್ನು ಅನುಭವಿಸಿದರು ಮತ್ತು ಅವರಿಗೆ ಕಠಿಣ ಶಿಕ್ಷೆ ಕಾದಿದೆ.

6. ಏಕೆಂದರೆ ಅವರ (ಕಾಲದ) ದೂತರುಗಳು ಸ್ಪಷ್ಟ ಪುರಾವೆಗಳೊಂದಿಗೆ ಅವರ ಬಳಿಗೆ ಬಂದಾಗ ಅವರು, ‘‘ಏನು? ಮನುಷ್ಯರು ನಮ್ಮ ಮಾರ್ಗದರ್ಶಿಗಳಾಗುವುದೇ?’’ ಎನ್ನುತ್ತಾ ಧಿಕ್ಕರಿಸಿದರು ಹಾಗೂ ಮುಖ ತಿರುಗಿಸಿ ಕೊಂಡರು. ಅಲ್ಲಾಹನು ಅವರನ್ನು ಕಡೆಗಣಿಸಿ ಬಿಟ್ಟನು. ಅಲ್ಲಾಹನು ಅಪೇಕ್ಷೆಗಳಿಲ್ಲದವನು ಮತ್ತು ಪ್ರಶಂಸಾರ್ಹನಾಗಿದ್ದಾನೆ.

7. ಧಿಕ್ಕಾರಿಗಳು, ತಮ್ಮನ್ನು ಮತ್ತೆ ಜೀವಂತ ಗೊಳಿಸಲಾಗದು ಎಂದು ನಂಬಿ ಕೊಂಡಿದ್ದಾರೆ. ಹೇಳಿರಿ; ಯಾಕಿಲ್ಲ? ನನ್ನೊಡೆಯನಾಣೆ, ನಿಮ್ಮನ್ನು ಖಂಡಿತ ಮತ್ತೆ ಜೀವಂತ ಗೊಳಿಸಲಾಗುವುದು ಮತ್ತು ನೀವು ಮಾಡಿದ್ದೆಲ್ಲವನ್ನೂ ಖಂಡಿತ ನಿಮಗೆ ತಿಳಿಸಲಾಗುವುದು. ಇದು ಅಲ್ಲಾಹನ ಮಟ್ಟಿಗೆ ತುಂಬಾ ಸುಲಭದ ಕೆಲಸವಾಗಿದೆ.

8. ಅಲ್ಲಾಹನಲ್ಲಿ ಮತ್ತವನ ದೂತರಲ್ಲಿ ಹಾಗೂ ನಾವು ಇಳಿಸಿ ಕೊಟ್ಟ ಬೆಳಕಿನಲ್ಲಿ ನಂಬಿಕೆ ಇಡಿರಿ. ಅಲ್ಲಾಹನಿಗೆ, ನಿಮ್ಮ ಎಲ್ಲ ಕೃತ್ಯಗಳ ಅರಿವಿದೆ.

 9. ಅವನು ನಿಮ್ಮನ್ನು ಒಟ್ಟು ಸೇರಿಸುವ ದಿನ, ಅಂತಿಮ ಸಮಾವೇಶದ ಆ ದಿನವು, ಭಾರೀ ನಷ್ಟದ ದಿನವಾಗಿರುವುದು. ಅಲ್ಲಾಹನು, ತನ್ನಲ್ಲಿ ವಿಶ್ವಾಸವಿಟ್ಟು ಸತ್ಕರ್ಮ ಮಾಡಿದವನ ಎಲ್ಲ ಪಾಪಗಳನ್ನು ನಿವಾರಿಸುವನು ಮತ್ತು ಅವನನ್ನು, ತಳ ಭಾಗದಲ್ಲಿ ನದಿಗಳು ಹರಿಯುತ್ತಿರುವ ಸ್ವರ್ಗದೊಳಗೆ ಸೇರಿಸುವನು. ಅವರು ಅಲ್ಲಿ ಸದಾಕಾಲ ಇರುವರು. ಇದು ನಿಜಕ್ಕೂ ಮಹಾ ಸೌಭಾಗ್ಯವಾಗಿದೆ.

 10. ಇನ್ನು, ನಮ್ಮ ವಚನಗಳನ್ನು ಧಿಕ್ಕರಿಸಿದವರು ಮತ್ತು ತಿರಸ್ಕರಿಸಿದವರು. ಅವರು, ನರಕ ವಾಸಿಗಳು. ಅವರು ಸದಾಕಾಲ ಅದರಲ್ಲೇ ಇರುವರು ಮತ್ತು ಅದು ತೀರಾ ಕೆಟ್ಟ ನೆಲೆಯಾಗಿದೆ.

11. ಅಲ್ಲಾಹನ ಆದೇಶವಿಲ್ಲದೆ, ಯಾವ ವಿಪತ್ತೂ ಎರಗುವುದಿಲ್ಲ. ಅಲ್ಲಾಹನು ತನ್ನಲ್ಲಿ ನಂಬಿಕೆ ಇಟ್ಟವರ ಮನಸ್ಸಿಗೆ ಮಾರ್ಗದರ್ಶನ ನೀಡುತ್ತಾನೆ. ಮತ್ತು ಅಲ್ಲಾಹನು ಎಲ್ಲ ವಿಷಯಗಳನ್ನೂ ಬಲ್ಲವನಾಗಿದ್ದಾನೆ.

12. ಮತ್ತು ನೀವು ಅಲ್ಲಾಹನ ಆದೇಶ ಪಾಲಿಸಿರಿ ಹಾಗೂ ದೂತರ ಆದೇಶ ಪಾಲಿಸಿರಿ. ನೀವು ಅದನ್ನು ಕಡೆಗಣಿಸಿದರೆ (ನಿಮಗೆ ತಿಳಿದಿರಲಿ) ನಮ್ಮ ದೂತರ ಮೇಲಿರುವುದು, ಸ್ಪಷ್ಟವಾಗಿ ಸಂದೇಶ ತಲುಪಿಸುವ ಹೊಣೆ ಮಾತ್ರ.

13. ಅಲ್ಲಾಹ್ – ಅವನ ಹೊರತು ಪೂಜಾರ್ಹರು ಬೇರಿಲ್ಲ. ವಿಶ್ವಾಸಿಗಳಾಗಿರುವವರು ಸಂಪೂರ್ಣವಾಗಿ ಅಲ್ಲಾಹನಲ್ಲೇ ಭರವಸೆ ಇಟ್ಟಿರುತ್ತಾರೆ.

14. ವಿಶ್ವಾಸಿಗಳೇ, ನಿಮ್ಮ ಪತ್ನಿಯರು ಮತ್ತು ನಿಮ್ಮ ಸಂತಾನಗಳಲ್ಲಿ ನಿಮ್ಮ ಶತ್ರುಗಳಿದ್ದಾರೆ. ಅವರ ಕುರಿತು ಎಚ್ಚರವಾಗಿರಿ. ಇನ್ನು ನೀವು ಮನ್ನಿಸಿದರೆ, ಕಡೆಗಣಿಸಿದರೆ ಮತ್ತು ಕ್ಷಮಿಸಿದರೆ, ಅಲ್ಲಾಹನು ಖಂಡಿತ ಕ್ಷಮಾಶೀಲನೂ ಕರುಣಾಮಯಿಯೂ ಆಗಿದ್ದಾನೆ.

15. ನಿಮ್ಮ ಸಂಪತ್ತುಗಳು ಮತ್ತು ನಿಮ್ಮ ಸಂತತಿಗಳು ಪರೀಕ್ಷೆಗಳಾಗಿವೆ. ಮತ್ತು ಅಲ್ಲಾಹನ ಬಳಿ ಭವ್ಯ ಪ್ರತಿಫಲವಿದೆ.

 16. ನಿಮಗೆ ಸಾಧ್ಯವಿದ್ದಷ್ಟು, ಅಲ್ಲಾಹನಿಗೆ ಅಂಜಿರಿ. ಹಾಗೂ (ಅವನ ಆದೇಶಗಳನ್ನು) ಆಲಿಸಿರಿ ಮತ್ತು ಅನುಸರಿಸಿರಿ ಮತ್ತು (ಸತ್ಕಾರ್ಯಗಳಿಗೆ) ಖರ್ಚು ಮಾಡಿರಿ. ಅದು ನಿಮ್ಮ ಪಾಲಿಗೇ ಉತ್ತಮವಾಗಿದೆ. ತಮ್ಮ ಮನಸ್ಸಿನ ಸಣ್ಣತನದಿಂದ ರಕ್ಷಿಸಲ್ಪಟ್ಟವರೇ ನಿಜವಾದ ವಿಜಯಿಗಳು.

 17. ನೀವು ಅಲ್ಲಾಹನಿಗೆ ಒಳಿತಿನ ಸಾಲವನ್ನು ನೀಡಿದರೆ ಅವನು ಅದನ್ನು ನಿಮಗಾಗಿ ಹೆಚ್ಚಿಸುವನು ಮತ್ತು ನಿಮ್ಮನ್ನು ಕ್ಷಮಿಸುವನು. ಅಲ್ಲಾಹನು ಪುರಸ್ಕರಿಸುವವನು ಮತ್ತು ಸಂಯಮಿಯಾಗಿದ್ದಾನೆ.

18. ಅವನು ಗುಪ್ತ ಮತ್ತು ವ್ಯಕ್ತವಾದ ಎಲ್ಲವನ್ನೂ ಅರಿತಿರುವ ಪ್ರಬಲನೂ ಯುಕ್ತಿವಂತನೂ ಆಗಿದ್ದಾನೆ.