65. At Talak

65. ಅತ್ತಲಾಕ್ (ವಿಚ್ಛೇದನ)

ವಚನಗಳು – 12, ಮದೀನಃ

ಅಲ್ಲಾಹನ ಹೆಸರಿಂದ – ಅವನು ಅಪಾರ ದಯಾಳು, ಕರುಣಾಮಯಿ.

1. ಪ್ರವಾದಿ ವರ್ಯರೇ, (ವಿಶ್ವಾಸಿಗಳೊಡನೆ ಹೇಳಿರಿ;) ನೀವು ಮಹಿಳೆಯರಿಗೆ (ಪತ್ನಿಯರಿಗೆ) ತಲಾಕ್ ನೀಡುವಾಗ (ವಿಚ್ಛೇದಿಸುವಾಗ) ಅವರ (ನೈರ್ಮಲ್ಯದ) ಅವಧಿಯಲ್ಲಿ ತಲಾಕ್ ನೀಡಿರಿ ಮತ್ತು ಅವಧಿಯ ದಿನಗಳನ್ನು ಸರಿಯಾಗಿ ಎಣಿಸಿರಿ. ಮತ್ತು ನಿಮ್ಮೊಡೆಯನಾದ ಅಲ್ಲಾಹನಿಗೆ ಅಂಜಿರಿ. ಅವರು ಸ್ಪಷ್ಟವಾದ ಅಶ್ಲೀಲ ಕೃತ್ಯವನ್ನು ಎಸಗಿರದಿದ್ದರೆ, ಅವರನ್ನು (ಇದ್ದತ್‌ನ ಅವಧಿಯಲ್ಲಿ) ಅವರ ಮನೆಗಳಿಂದ ಹೊರ ಹಾಕ ಬೇಡಿ, ಮತ್ತು ಸ್ವತಃ ಅವರೂ ಹೊರ ಹೋಗದಿರಲಿ. ಇವು ಅಲ್ಲಾಹನು ನಿಶ್ಚಯಿಸಿರುವ ಮಿತಿಗಳು. ಅಲ್ಲಾಹನು ನಿಶ್ಚಯಿಸಿರುವ ಮಿತಿಗಳನ್ನು ಉಲ್ಲಂಘಿಸಿದವನು ಸ್ವತಃ ತನ್ನ ಮೇಲೆ ಅಕ್ರಮವೆಸಗಿ ಕೊಂಡನು. ನಿಮಗೆ ತಿಳಿಯದು, ಇಷ್ಟಾದ ಬಳಿಕ ಅಲ್ಲಾಹನು ಹೊಸ ಮಾರ್ಗವನ್ನೇನಾದರೂ ತೋರಿಸಲೂ ಬಹುದು.

2. ಮುಂದೆ ಅವರು ತಮ್ಮ ಅವಧಿಯ ಕೊನೆಯನ್ನು ಮುಟ್ಟಿದಾಗ ಅವರನ್ನು ನಿಯಮಾನುಸಾರ (ಪತ್ನಿಯರಾಗಿ) ಇಟ್ಟುಕೊಳ್ಳಿರಿ ಅಥವಾ ನಿಯಮಾನುಸಾರ ಅವರನ್ನು ಪ್ರತ್ಯೇಕಿಸಿರಿ ಹಾಗೂ ನಿಮ್ಮ ಪೈಕಿ ಇಬ್ಬರು ನ್ಯಾಯವಂತರನ್ನು ಸಾಕ್ಷಿಯಾಗಿಸಿಕೊಳ್ಳಿರಿ. ಮತ್ತು ನೀವು, ಅಲ್ಲಾಹನಿಗಾಗಿ ಸಾಕ್ಷಿ ಹೇಳಿರಿ. ಇವು, ಅಲ್ಲಾಹನಲ್ಲಿ ಮತ್ತು ಪರಲೋಕದಲ್ಲಿ ನಂಬಿಕೆ ಉಳ್ಳವನಿಗೆ ನೀಡಲಾಗುತ್ತಿರುವ ಉಪದೇಶಗಳು. ಅಲ್ಲಾಹನ ಭಯ ಉಳ್ಳವನಿಗೆ ಅವನು (ಅಲ್ಲಾಹನು, ಸಂಕಟಗಳಿಂದ) ಹೊರ ಬರುವ ದಾರಿ ತೋರುವನು.

3. ಮತ್ತು ಅವನು ಊಹಿಸಿಯೂ ಇಲ್ಲದ ಕಡೆಯಿಂದ ಅವನಿಗೆ ಸಾಧನಗಳನ್ನು ಒದಗಿಸುವನು. ಅಲ್ಲಾಹನಲ್ಲಿ ಭರವಸೆ ಇಟ್ಟವನಿಗೆ ಅವನೇ (ಅಲ್ಲಾಹನೇ) ಸಾಕು. ಅಲ್ಲಾಹನು ತನ್ನ ಕಾರ್ಯವನ್ನು ಪೂರ್ತಿಗೊಳಿಸಿಯೇ ತೀರುವನು. (ಆದರೆ) ಅಲ್ಲಾಹನು ಪ್ರತಿಯೊಂದಕ್ಕೂ ಒಂದು ನಿರ್ದಿಷ್ಟ ಪ್ರಮಾಣವನ್ನು ನಿಶ್ಚಯಿಸಿರುವನು.

4. ನಿಮ್ಮ (ವಿಚ್ಛೇದಿತ) ಮಹಿಳೆಯರ ಪೈಕಿ ಋತು ಸ್ರಾವದ ಕುರಿತು ನಿರಾಶರಾಗಿರುವವರ (ಋತುಸ್ರಾವ ನಿಂತವರ) ಅವಧಿಯ ವಿಷಯದಲ್ಲಿ ನಿಮಗೆ ಸಂಶಯವಿದ್ದರೆ, ಅವರ ಅವಧಿ ಮೂರು ತಿಂಗಳಾಗಿದೆ. ಇನ್ನೂ ಋತುಸ್ರಾವ ಆರಂಭವಾಗಿಲ್ಲದವರಿಗೂ ಇದು ಅನ್ವಯಿಸುತ್ತದೆ. ಗರ್ಭಿಣಿಯರ ಅವಧಿಯು ಪ್ರಸವದವರೆಗಿರುತ್ತದೆ. ಅಲ್ಲಾಹನು, ತನ್ನನ್ನು ಅಂಜುವವನಿಗೆ ಅವನ ವ್ಯವಹಾರಗಳನ್ನು ಸುಲಭಗೊಳಿಸಿ ಕೊಡುತ್ತಾನೆ.

5. ಇವು ನಿಮ್ಮೆಡೆಗೆ ಇಳಿಸಿ ಕೊಡಲಾಗಿರುವ ಅಲ್ಲಾಹನ ಆದೇಶಗಳು. ಅಲ್ಲಾಹನು ತನ್ನನ್ನು ಅಂಜುವವನ ಪಾಪಗಳನ್ನೆಲ್ಲಾ ನಿವಾರಿಸುವನು ಮತ್ತು ಅವನಿಗೆ ಭವ್ಯ ಪ್ರತಿಫಲವನ್ನು ನೀಡುವನು.

6. (ಇದ್ದತ್‌ನ ಅವಧಿಯಲ್ಲಿ ) ಸಾಧ್ಯವಾದಷ್ಟು ಮಟ್ಟಿಗೆ ಆ ಮಹಿಳೆಯರನ್ನು ನೀವು ವಾಸಿಸುವಲ್ಲೇ ವಾಸಗೊಳಿಸಿರಿ ಮತ್ತು ಅವರ ಬದುಕನ್ನು ದುಸ್ತರಗೊಳಿಸಲಿಕ್ಕಾಗಿ ಅವರಿಗೆ ಕಿರುಕುಳ ನೀಡಬೇಡಿ. ಒಂದು ವೇಳೆ ಅವರು ಗರ್ಭಿಣಿಯರಾಗಿದ್ದರೆ ಅವರು ಪ್ರಸವಿಸುವ ತನಕ ಅವರ ಖರ್ಚು ವೆಚ್ಚಗಳನ್ನು ಭರಿಸಿರಿ. ಅವರು ನಿಮಗಾಗಿ (ಮಗುವಿಗೆ) ಮೊಲೆಹಾಲುಣಿಸಿದರೆ – ಅವರಿಗೆ ಅವರ ಸಂಭಾವನೆಯನ್ನು ನೀಡಿರಿ. ನೀವು (ಎಲ್ಲ ವಿಷಯಗಳನ್ನೂ) ನಿಯಮಾನುಸಾರ ಪರಸ್ಪರ ಸಮಾಲೋಚಿಸಿ ನಿರ್ಧರಿಸಿರಿ. ಇನ್ನು, ನಿಮಗೆ ಕಷ್ಟವೆನಿಸಿದರೆ, ಅದಕ್ಕೆ (ಮಗುವಿಗೆ) ಬೇರೊಬ್ಬಳು ಮೊಲೆ ಹಾಲುಣಿಸಲಿ.

7. ಸ್ಥಿತಿವಂತನು ತನ್ನ ಸಾಮರ್ಥ್ಯಾನುಸಾರ ಖರ್ಚುಮಾಡಲಿ ಮತ್ತು ಆರ್ಥಿಕ ಸಂಕಷ್ಟದಲ್ಲಿರುವವನು ತನಗೆ ಅಲ್ಲಾಹನು ನೀಡಿರುವಷ್ಟರಿಂದ ಖರ್ಚುಮಾಡಲಿ. ಅಲ್ಲಾಹನು ಯಾವ ಜೀವಿಯ ಮೇಲೂ ತಾನು ಅದಕ್ಕೆ ನೀಡಿರುವ ಸಾಮರ್ಥ್ಯಕ್ಕಿಂತ ಹೆಚ್ಚಿನ ಹೊಣೆಯನ್ನು ಹೊರಿಸುವುದಿಲ್ಲ. ಅಲ್ಲಾಹನು ದಾರಿದ್ರದ ಬೆನ್ನಿಗೇ ಸಂಪನ್ನತೆಯನ್ನು ನೀಡಬಹುದು.

8. ಅದೆಷ್ಟೋ ನಾಡುಗಳ ಜನರು ತಮ್ಮ ಒಡೆಯನ ಹಾಗೂ ಅವನ ದೂತರ ಆದೇಶಗಳ ವಿಷಯದಲ್ಲಿ ವಿದ್ರೋಹವೆಸಗಿದರು. ನಾವು ಅವರನ್ನು ಬಹಳ ಕಠಿಣ ವಿಚಾರಣೆಗೊಳಪಡಿಸಿದೆವು ಮತ್ತು ಅವರಿಗೆ ಭಾರೀ ಶಿಕ್ಷೆಯನ್ನು ನೀಡಿದೆವು.

9. ಹೀಗೆ ಅವರು ತಮ್ಮ ಕೃತ್ಯದ ಫಲವನ್ನು ಉಂಡರು ಮತ್ತು ನಷ್ಟವೇ ಅವರ ಅಂತಿಮ ಗತಿಯಾಯಿತು.

10. ಅಲ್ಲಾಹನು ಅವರಿಗಾಗಿ ಘೋರ ಶಿಕ್ಷೆಯನ್ನು ಸಿದ್ಧಪಡಿಸಿಟ್ಟಿರುವನು. ಆದ್ದರಿಂದ, ಬುದ್ಧಿಯುಳ್ಳ ವಿಶ್ವಾಸಿಗಳೇ, ನೀವು ಅಲ್ಲಾಹನಿಗೆ ಅಂಜಿರಿ. ಅಲ್ಲಾಹನು ನಿಮಗಾಗಿ ಈ ಬೋಧನೆಯನ್ನು ಇಳಿಸಿಕೊಟ್ಟಿರುವನು.

11. ದೂತರು, ವಿಶ್ವಾಸಿಗಳನ್ನು ಮತ್ತು ಸತ್ಕರ್ಮಿಗಳನ್ನು ಕತ್ತಲೆಯಿಂದ ಹೊರತಂದು ಬೆಳಕಿನೆಡೆಗೆ ಮುನ್ನಡೆಸಲಿಕ್ಕಾಗಿ, ನಿಮಗೆ ಅಲ್ಲಾಹನ ಸುಸ್ಪಷ್ಟ ವಚನಗಳನ್ನು ಓದಿ ಕೇಳಿಸುತ್ತಾರೆ. ಅಲ್ಲಾಹನಲ್ಲಿ ವಿಶ್ವಾಸವಿಟ್ಟು ಸತ್ಕರ್ಮ ಮಾಡಿದವನನ್ನು ಅವನು ತಳದಲ್ಲಿ ನದಿಗಳು ಹರಿಯುತ್ತಿರುವ ಸ್ವರ್ಗೋದ್ಯಾನದೊಳಗೆ ಸೇರಿಸುವನು. ಅವರು ಸದಾಕಾಲ ಅಲ್ಲೇ ಇರುವರು. ಅಲ್ಲಾಹನು ಅವರಿಗೆ ಧಾರಾಳ ಸಂಪನ್ನತೆಯನ್ನು ನೀಡುವನು.

12. ಏಳು ಆಕಾಶಗಳನ್ನು ಮತ್ತು ಅದೇ ಪ್ರಕಾರ ಭೂಮಿಯನ್ನು ಸೃಷ್ಟಿಸಿದವನು ಅಲ್ಲಾಹನೇ. ಅವುಗಳ ನಡುವೆ ಅವನ ಆದೇಶಗಳು ಇಳಿಯುತ್ತಲೇ ಇರುತ್ತವೆ – ಅಲ್ಲಾಹನು ಸರ್ವ ಶಕ್ತನೆಂಬುದನ್ನು ಮತ್ತು ಅಲ್ಲಾಹನು ತನ್ನ ಜ್ಞಾನದ ಮೂಲಕ ಎಲ್ಲವನ್ನೂ ಆವರಿಸಿ ಕೊಂಡಿರುವನು ಎಂಬುದನ್ನು ನೀವು ಅರಿಯುವಂತಾಗಲಿಕ್ಕಾಗಿ.