75. ಅಲ್ ಕಿಯಾಮಃ (ಪುನರುತ್ಥಾನ)
ವಚನಗಳು – 40, ಮಕ್ಕಃ
ಅಲ್ಲಾಹನ ಹೆಸರಿಂದ – ಅವನು ಅಪಾರ ದಯಾಳು, ಕರುಣಾಮಯಿ.
1. ಅಲ್ಲ, ನಾನು ಪುನರುತ್ಥಾನ ದಿನದ ಆಣೆ ಹಾಕುತ್ತೇನೆ.
2. ಅಲ್ಲ, ನಾನು ದೂಷಿಸುವ ಚಿತ್ತದ ಆಣೆ ಹಾಕುತ್ತೇನೆ.
3. ಮನುಷ್ಯನೇನು, ಅವನ ಎಲುಬುಗಳನ್ನು ನಾವು (ಮತ್ತೆ) ಸಂಘಟಿಸಲಾರೆವೆಂದು ಭಾವಿಸಿದ್ದಾನೆಯೇ?
4. ಯಾಕಿಲ್ಲ? ನಾವಂತೂ ಅವನ ಬೆರಳ ತುದಿಗಳನ್ನೂ ಮತ್ತೆ ರಚಿಸಲು ಸಮರ್ಥರಾಗಿದ್ದೇವೆ.
5. ನಿಜವಾಗಿ, ಮನುಷ್ಯನು ತನ್ನ ಪಾಪಕೃತ್ಯಗಳಲ್ಲೇ ಮುಂದುವರಿಯ ಬಯಸುತ್ತಾನೆ.
6. ‘‘ಪುನರುತ್ಥಾನ ದಿನವು ಅದೆಂದು ಬಂದೀತು?’’ ಎಂದು ಅವನು (ವ್ಯಂಗ್ಯವಾಗಿ) ಪ್ರಶ್ನಿಸುತ್ತಾನೆ.
7. ಕಣ್ಣುಗಳು ಕೋರೈಸುವಾಗ.
8. ಚಂದ್ರಕ್ಕೆ ಗ್ರಹಣವಾದಾಗ.
9. ಮತ್ತು ಸೂರ್ಯ ಹಾಗೂ ಚಂದ್ರರನ್ನು ಒಂದು ಗೂಡಿಸಲಾದಾಗ.
10. ಆ ದಿನ ಮನುಷ್ಯನು ‘‘ಪಲಾಯನಕ್ಕೆ ದಾರಿ ಎಲ್ಲಿದೆ?’’ ಎಂದು ಕೇಳುವನು.
11. ಖಂಡಿತ ಇಲ್ಲ, ಎಲ್ಲೂ ಆಶ್ರಯವಿಲ್ಲ.
12. ಅಂದು ಆಶ್ರಯವಿರುವುದು ನಿಮ್ಮೊಡೆಯನ ಬಳಿಯಲ್ಲಿ ಮಾತ್ರ.
13. ಅಂದು ಅವನು ಮನುಷ್ಯನಿಗೆ ತಿಳಿಸುವನು, ಆತನು ಮುಂದೆ ಕಳಿಸಿದ್ದ ಮತ್ತು ಹಿಂದೆ ಬಿಟ್ಟು ಬಂದಿದ್ದ ಕರ್ಮಗಳ ಕುರಿತು.
14. ನಿಜವಾಗಿ ಮನುಷ್ಯನು ತನ್ನ ಕುರಿತು ತಾನೇ ಸಾಕ್ಷಿಯಾಗಿದ್ದಾನೆ.
15. ಅವನು ಅದೆಷ್ಟೇ ನೆಪಗಳನ್ನೊಡ್ಡಿದರೂ ಸರಿಯೇ.
16. (ದೂತರೇ,) ನೀವು ಇದಕ್ಕಾಗಿ (ದಿವ್ಯವಾಣಿಯನ್ನು ನೆನಪಿಟ್ಟುಕೊಳ್ಳಲಿಕ್ಕಾಗಿ) ಆತುರವಾಗಿ ನಿಮ್ಮ ನಾಲಿಗೆಯನ್ನು ಚಲಿಸಬೇಡಿ.
17. ಇದನ್ನು ಸಂಗ್ರಹಿಸುವ ಹಾಗೂ ಓದಿಸುವ ಹೊಣೆ ಖಂಡಿತ ನಮ್ಮ ಮೇಲಿದೆ.
18. ಆದ್ದರಿಂದ ನಾವು ಇದನ್ನು ಓದುವಾಗ, ನೀವು ಇದರ ಪಠಣವನ್ನು ಅನುಸರಿಸಿರಿ.
19. ಆ ಬಳಿಕ ಇದನ್ನು ವಿವರಿಸುವ ಹೊಣೆಯೂ ನಮ್ಮ ಮೇಲಿದೆ.
20. ಹಾಗೇನೂ ಅಲ್ಲ. (ಜನರೇ,) ನೀವು ತುರ್ತಾಗಿ ಸಿಗುವುದನ್ನು (ಇಹ ಲೋಕವನ್ನು) ಮಾತ್ರ ಪ್ರೀತಿಸುತ್ತೀರಿ.
21. ಮತ್ತು ಅನಂತರದ್ದನ್ನು (ಪರಲೋಕವನ್ನು) ಬಿಟ್ಟು ಬಿಡುತ್ತೀರಿ.
22. ಅಂದು ಹಲವು ಮುಖಗಳು ಅರಳಿರುವವು.
23. ಅವು ತಮ್ಮ ಒಡೆಯನೆಡೆಗೆ ನೋಡುತ್ತಿರುವವು.
24. ಮತ್ತೆ ಕೆಲವು ಮುಖಗಳು ಅಂದು ಬಾಡಿರುವವು.
25. ತಮ್ಮ ಜೊತೆ ಸೊಂಟ ಮುರಿಯುವಂತಹ ವ್ಯವಹಾರ ನಡೆಯುವುದನ್ನ್ನು ಅವು ನಿರೀಕ್ಷಿಸುತ್ತಿರುವವು.
26. ಹಾಗಲ್ಲ. ಜೀವವು ಕೊರಳನ್ನು ತಲುಪಿದಾಗ,
27. ಜನರು, ‘‘ಮಾಂತ್ರಿಕನೆಲ್ಲಿದ್ದಾನೆ?’’ ಎನ್ನುವರು.
28. ಅದು (ತನ್ನ) ವಿದಾಯದ ಸಮಯ ಎಂದು (ಸಾಯುತ್ತಿರುವವನಿಗೆ) ಅನಿಸುವುದು.
29. (ಸತ್ತವನ) ಮೊಣ ಕಾಲುಗಳನ್ನು ಸೇರಿಸಿ ಕಟ್ಟಲಾಗುವುದು.
30. ಅಂದು ನೀನು ನಿನ್ನ ಒಡೆಯನೆಡೆಗೆ ಹೊರಡ ಬೇಕಾಗುವುದು.
31. ಅವನು ಸತ್ಯವನ್ನು ಸಮರ್ಥಿಸಲಿಲ್ಲ ಮತ್ತು ನಮಾಝನ್ನು ಸಲ್ಲಿಸಲಿಲ್ಲ.
32. ಅವನು (ಸತ್ಯವನ್ನು) ತಿರಸ್ಕರಿಸಿದನು ಹಾಗೂ ಕಡೆಗಣಿಸಿದನು.
33. ಮತ್ತು ಹೆಮ್ಮೆಯಿಂದ ಬೀಗುತ್ತಾ ತನ್ನ ಮನೆಯವರ ಬಳಿಗೆ ಹೊರಟನು.
34. ಅಯ್ಯೋ ನಿನ್ನ ದುಸ್ಥಿತಿಯೇ,
35. ಅಯ್ಯೋ ನಿನ್ನ ದುಸ್ಥಿತಿಯೇ!
36. ಮನುಷ್ಯನೇನು, ತನ್ನನ್ನು ಹೀಗೆಯೇ ಬಿಟ್ಟು ಬಿಡಲಾಗುವುದೆಂದು ಕೊಂಡಿದ್ದಾನೆಯೇ?
37. ಅವನೇನು, ಕೇವಲ ಹರಿಸಿ ಬಿಡಲಾದ ಒಂದು ಹನಿ ವೀರ್ಯವಾಗಿರಲಿಲ್ಲವೇ?
38. ತರುವಾಯ ಅವನು ರಕ್ತ ಪಿಂಡವಾದನು. ಆ ಬಳಿಕ ಅವನು (ಅಲ್ಲಾಹನು) ಅವನನ್ನು ಸೃಷ್ಟಿಸಿದನು ಮತ್ತು ರೂಪಿಸಿದನು.
39. ಮುಂದೆ ಅದರಿಂದಲೇ ಪುರುಷ ಮತ್ತು ಸ್ತ್ರೀ ಎಂಬ ಇಬ್ಬರ ಜೋಡಿಯನ್ನುಂಟು ಮಾಡಿದನು.
40. ಅಂಥವನು (ಇಷ್ಟೆಲ್ಲಾ ಮಾಡಿದವನು) ಸತ್ತವರನ್ನು ಜೀವಂತಗೊಳಿಸಲು ಅಸಮರ್ಥನೇ?