77. ಅಲ್ ಮುರ್ಸಲಾತ್(ಕಳಿಸಲಾದವುಗಳು)
ವಚನಗಳು – 50, ಮಕ್ಕಃ
ಅಲ್ಲಾಹನ ಹೆಸರಿಂದ – ಅವನು ಅಪಾರ ದಯಾಳು, ಕರುಣಾಮಯಿ.
1. ಮೃದುವಾಗಿ ಚಲಿಸುವ ವಸ್ತುವಿನ (ವಾಯುವಿನ) ಆಣೆ.
2. ಕ್ರಮೇಣ ಅದು ಬಿರುಸಾಗಿ ಬಿಡುತ್ತದೆ.
3. (ಮೋಡಗಳನ್ನು) ವಿವಿಧೆಡೆಗಳಿಗೆ ತಲುಪಿಸುತ್ತದೆ.
4. ಕೊನೆಗೆ ಅವುಗಳನ್ನು ಚದುರಿಸಿ ಬಿಡುತ್ತದೆ.
5. ದಿವ್ಯ ಉಪದೇಶವನ್ನು ತಲುಪಿಸುವವರ (ಮಲಕ್ಗಳ) ಆಣೆ.
6. ಪುರಾವೆಯ ರೂಪದಲ್ಲಾಗಲೀ ಎಚ್ಚರಿಕೆಯ ರೂಪದಲ್ಲಾಗಲೀ.
7. ನಿಮಗೇನನ್ನು ವಾಗ್ದಾನ ಮಾಡಲಾಗಿದೆಯೋ ಅದು ಖಂಡಿತ ಸಂಭವಿಸಲಿದೆ.
8. ನಕ್ಷತ್ರಗಳು ನಿಸ್ತೇಜವಾದಾಗ,
9. ಆಕಾಶವು ಬಿರಿದು ಬಿಟ್ಟಾಗ,
10. ಪರ್ವತಗಳು (ಚೂರು ಚೂರಾಗಿ) ಹಾರಾಡುತ್ತಿರುವಾಗ.
11. ದೇವ ದೂತರುಗಳನ್ನು ಒಟ್ಟು ಸೇರಿಸಲಾದಾಗ.
12. (ಅವರ ವಿಚಾರಣೆಯನ್ನು) ಯಾವ ದಿನಕ್ಕಾಗಿ ಮುಂದೂಡಲಾಗಿದೆ?
13. (ಅಂತಿಮ) ತೀರ್ಪಿನ ದಿನಕ್ಕಾಗಿ.
14. ಆ ತೀರ್ಪಿನ ದಿನ ಏನೆಂಬುದು ನಿಮಗೇನು ಗೊತ್ತು?
15. ಅಂದು ಧಿಕ್ಕಾರಿಗಳಿಗೆ ವಿನಾಶವಿದೆ.
16. ನಾವೇನು ಹಿಂದಿನವರನ್ನು ನಾಶ ಮಾಡಿಲ್ಲವೇ?
17. ಆ ಬಳಿಕ ನಾವು ಮುಂದಿನವರನ್ನು ಅವರ ಹಿಂದೆ ನಡೆಸಿದೆವು.
18. ನಾವು ಅಪರಾಧಿಗಳಿಗೆ ಹೀಗೆಯೇ ಮಾಡುತ್ತೇವೆ.
19. ಅಂದು ಧಿಕ್ಕಾರಿಗಳಿಗೆ ವಿನಾಶವಿದೆ.
20. ನಾವೇನು ನಿಮ್ಮನ್ನು ತುಚ್ಛವಾದ ನೀರಿನಿಂದ ಸೃಷ್ಟಿಸಿಲ್ಲವೇ?
21. ತರುವಾಯ ನಾವು ಅದನ್ನು ಒಂದು ಸುರಕ್ಷಿತ ಸ್ಥಳದಲ್ಲಿಟ್ಟೆವು.
22. ಒಂದು ನಿರ್ದಿಷ್ಟ ಕಾಲದವರೆಗೆ.
23. ತರುವಾಯ ನಾವು (ಅದರ) ಪ್ರಮಾಣವನ್ನು ನಿಶ್ಚಯಿಸಿದೆವು. ನಾವು ಅತ್ಯುತ್ತಮವಾಗಿ ಪ್ರಮಾಣವನ್ನು ನಿಶ್ಚಯಿಸುತ್ತೇವೆ.
24. ಅಂದು ವಿನಾಶವಿದೆ, (ಸತ್ಯವನ್ನು) ತಿರಸ್ಕರಿಸಿದವರಿಗೆ.
25. ನಾವು ಭೂಮಿಯನ್ನು ಬಾಚುವ ವಸ್ತುವಾಗಿಸಿಲ್ಲವೇ –
26. – ಜೀವಿಸಿರುವವರನ್ನೂ ಸತ್ತವರನ್ನೂ?
27. ನಾವು ಅದರೊಳಗೆ ಎತ್ತರದ ಪರ್ವತಗಳನ್ನಿಟ್ಟಿರುವೆವು ಮತ್ತು ನಿಮಗೆ ಸಿಹಿ ನೀರನ್ನು ಕುಡಿಸಿರುವೆವು.
28. ಅಂದು ವಿನಾಶವಿದೆ, (ಸತ್ಯವನ್ನು) ತಿರಸ್ಕರಿಸಿದವರಿಗೆ.
29. ಇದೀಗ, ನೀವು ಯಾವುದನ್ನು ತಿರಸ್ಕರಿಸುತ್ತಲಿದ್ದಿರೋ ಅದರೆಡೆಗೆ ನಡೆಯಿರಿ.
30. ನಡೆಯಿರಿ, ಮೂರು ಮಜಲುಗಳಿರುವ ಕತ್ತಲೆಯೆಡೆಗೆ.
31. ಅಲ್ಲಿ ನೆರಳು ಇರದು ಮತ್ತು ಅಗ್ನಿಯ ಆಲಿಂಗನದಿಂದ ರಕ್ಷೆಯೂ ಇರದು.
32. ಅದು ಕೋಟೆಗಳ ಗಾತ್ರದ ಬೆಂಕಿಯ ಕಿಡಿಗಳನ್ನು ಸುರಿಸುತ್ತಿರುವುದು.
33. ಅವು ಹಳದಿ ಒಂಟೆಗಳಂತಿರುವವು.
34. ಅಂದು ವಿನಾಶವಿದೆ, (ಸತ್ಯವನ್ನು) ತಿರಸ್ಕರಿಸಿದವರಿಗೆ.
35. ಅದು ಅವರಿಗೆ ಮಾತನಾಡಲಾಗದ ದಿನವಾಗಿರುವುದು.
36. ನೆಪಗಳನ್ನೊಡ್ಡಲು, ಅಂದು ಅವರಿಗೆ ಅನುಮತಿ ಸಿಗದು.
37. ಅಂದು ವಿನಾಶವಿದೆ, (ಸತ್ಯವನ್ನು) ತಿರಸ್ಕರಿಸಿದವರಿಗೆ.
38. ಇದು ಅಂತಿಮ ತೀರ್ಪಿನ ದಿನ. (ಇಂದು) ನಾವು ನಿಮ್ಮನ್ನೂ ನಿಮ್ಮ ಹಿಂದಿನವರನ್ನೂ ಒಟ್ಟು ಸೇರಿಸಿರುವೆವು.
39. ನಿಮ್ಮ ಬಳಿ ಏನಾದರೂ ಸಂಚು ಇದ್ದರೆ ಹೂಡಿ ನೋಡಿರಿ.
40. ಅಂದು ವಿನಾಶವಿದೆ, (ಸತ್ಯವನ್ನು) ತಿರಸ್ಕರಿಸಿದವರಿಗೆ.
41. (ಅಂದು) ಧರ್ಮನಿಷ್ಠರು ನೆರಳುಗಳಲ್ಲಿರುವರು ಮತ್ತು (ಅವರ ಬಳಿ) ಚಿಲುಮೆಗಳಿರುವವು.
42. ಹಾಗೂ ಅವರು ಮೆಚ್ಚುವ ಹಣ್ಣು ಹಂಪಲುಗಳಿರುವವು.
43. ‘‘ನೀವು ಮಾಡಿದ್ದ ಕರ್ಮಗಳ ಫಲವಾಗಿ, ಧಾರಾಳವಾಗಿ ತಿನ್ನಿರಿ ಮತ್ತು ಕುಡಿಯಿರಿ’’ (ಎಂದು ಅವರೊಡನೆ ಹೇಳಲಾಗುವುದು).
44. ಸಜ್ಜನರನ್ನು ನಾವು ಇದೇ ರೀತಿ ಪುರಸ್ಕರಿಸುತ್ತೇವೆ.
45. ಅಂದು ವಿನಾಶವಿದೆ, (ಸತ್ಯವನ್ನು) ತಿರಸ್ಕರಿಸಿದವರಿಗೆ.
46. (ಧಿಕ್ಕಾರಿಗಳೇ, ಇಹಲೋಕದಲ್ಲಿ) ಅಲ್ಪಾವಧಿಗಾಗಿ ತಿನ್ನಿರಿ ಮತ್ತು ಕುಡಿಯಿರಿ – ನೀವು ಖಂಡಿತ ಅಪರಾಧಿಗಳಾಗಿರುವಿರಿ.
47. ಅಂದು ವಿನಾಶವಿದೆ, (ಸತ್ಯವನ್ನು) ತಿರಸ್ಕರಿಸಿದವರಿಗೆ.
48. ‘‘(ಅಲ್ಲಾಹನ ಮುಂದೆ) ಬಾಗಿರಿ’’ ಎಂದು ಅವರೊಡನೆ ಹೇಳಿದಾಗ ಅವರು ಬಾಗುವುದಿಲ್ಲ.
49. ಅಂದು ವಿನಾಶವಿದೆ, (ಸತ್ಯವನ್ನು) ತಿರಸ್ಕರಿಸಿದವರಿಗೆ. 50. ಇದರ (ಕುರ್ಆನಿನ) ಬಳಿಕ, ಅವರಿನ್ನು ಯಾವ ಮಾತನ್ನು ತಾನೇ ನಂಬುವರು?
ಕಾಂಡ– 30