79. An Naziat

79. ಅನ್ನಾಝಿಆತ್,

ವಚನಗಳು – 46,

ಅಲ್ಲಾಹನ ಹೆಸರಿಂದ – ಅವನು ಅಪಾರ ದಯಾಳು, ಕರುಣಾಮಯಿ.

1. ಮುಳುಗಿ ಏಳುವವರ ಆಣೆ.

2. ಮೃದುವಾಗಿ ಬಿಡಿಸುವವರ ಆಣೆ.

3. ತೇಲುತ್ತಾ ಚಲಿಸುವವರ ಆಣೆ.

4. ಹುರುಪಿನಿಂದ ಮುನ್ನುಗ್ಗುವವರಾಣೆ.

5. (ಜಗತ್ತಿನ)ವ್ಯವಹಾರಗಳನ್ನು ನೋಡಿ ಕೊಳ್ಳುವವರಾಣೆ.

6. ಭೂಮಿಯು ಅಲ್ಲೋಲ ಕಲ್ಲೋಲವಾಗುವ ದಿನ.

7. ಅದರ ಬೆನ್ನಿಗೇ ಮತ್ತೆ ಅಲ್ಲೋಲ ಕಲ್ಲೋಲವಾಗುವುದು.

8. ಅಂದು ಮನಸ್ಸುಗಳು ಭಯ ಭೀತವಾಗಿರುವವು.

9. ದೃಷ್ಟಿಗಳು ಭಯದಿಂದ ತಗ್ಗಿರುವವು.

 10. (ಧಿಕ್ಕಾರಿಗಳು) ಕೇಳುತ್ತಾರೆ ನಾವು ಮರಳಿ ಮತ್ತೆ ಬರಲಿಕ್ಕುಂಟೇ?

 11. ನಾವು ಟೊಳ್ಳು ಮೂಳೆಗಳಾದ ಬಳಿಕ (ಮರಳಿ ಬರುವುದೇ?)

12. ಆ ಮರಳಿಕೆಯು ತೀರಾ ನಷ್ಟದ ವ್ಯವಹಾರವಾಗಿದೆ ಎಂದು ಅವರು ಹೇಳುತ್ತಾರೆ.

13. ಅದೊಂದು ಭೀಕರ ಶಬ್ದವಾಗಿರುವುದು.

14. ಅದರ ಬೆನ್ನಿಗೇ ಅವರೆಲ್ಲಾ ಒಂದು ಬಯಲಲ್ಲಿ ಸೇರುವರು.

15. ನಿಮಗೆ ಮೂಸಾರ ವೃತ್ತಾಂತವು ತಲುಪಿದೆಯೇ?

16. ಅವರ ಒಡೆಯನು ಅವರನ್ನು ಪವಿತ್ರ ‘‘ತುವಾ’’ ಬೆಟ್ಟದಿಂದ ಕರೆದು (ಹೇಳಿದನು);

17. ಹೋಗಿರಿ ಫಿರ್‌ಔನ್‌ನೆಡೆಗೆ, ಅವನು ವಿದ್ರೋಹಿಯಾಗಿದ್ದಾನೆ.

18. ಮತ್ತು ಅವನೊಡನೆ ಹೇಳಿರಿ – ನೀನು ನಿರ್ಮಲನಾಗ ಬಯಸುವೆಯಾ?

 19. ನಾನು ನಿನಗೆ ನಿನ್ನೊಡೆಯನ ಕಡೆಗಿರುವ ದಾರಿಯನ್ನು ತೋರಬಲ್ಲೆನು – ನೀನು ಭಯಭಕ್ತಿ ಉಳ್ಳವನಾಗಬೇಕೆಂದು.

20. ಅವರು ಅವನಿಗೆ ದೊಡ್ಡ ಪುರಾವೆಯನ್ನು ತೋರಿಸಿದರು.

21. ಆದರೆ ಅವನು ತಿರಸ್ಕರಿಸಿದನು ಮತ್ತು ಅವರ ಆದೇಶವನ್ನು ಮೀರಿದನು.

22. ಆ ಬಳಿಕ ಅವನು ಮರಳಿ ಸಂಚು ಹೂಡ ತೊಡಗಿದನು.

23. ಮತ್ತು ಜನರನ್ನು ಸೇರಿಸಿ ಕರೆ ಕೊಟ್ಟನು

24. ಮತ್ತು ನಾನೇ ನಿಮ್ಮ ಅತಿ ದೊಡ್ಡ ಒಡೆಯನು ಎಂದು ಘೋಷಿಸಿದನು.

25. ಕೊನೆಗೆ ಅಲ್ಲಾಹನು ಅವನನ್ನು ಹಿಡಿದು ಪರಲೋಕದ ಮತ್ತು ಇಹಲೋಕದ ಶಿಕ್ಷೆಗೆ ಗುರಿಪಡಿಸಿದನು.

26. ಭಯಭಕ್ತಿ ಉಳ್ಳವನಿಗೆ ಇದರಲ್ಲಿ ಖಂಡಿತ ಪಾಠವಿದೆ.

 27. ನಿಮ್ಮನ್ನು ಸೃಷ್ಟಿಸುವುದು ಕಷ್ಟವೋ ಅಥವಾ ಅಕಾಶಗಳನ್ನೋ? ಅವನು ಅವುಗಳನ್ನು ರಚಿಸಿರುವನು.

28. ಅವನು ಅವುಗಳನ್ನು ಎತ್ತರಕ್ಕೇರಿಸಿರುವನು ಹಾಗೂ ಅವುಗಳಿಗೆ ರೂಪ ಕೊಟ್ಟಿರುವನು.

29. ಅವನು ಇರುಳನ್ನು ಕತ್ತಲಾಗಿಸಿರುವನು ಮತ್ತು ಬಿಸಿಲನ್ನು ಹೊರಡಿಸಿರುವನು.

30. ತರುವಾಯ ಭೂಮಿಯನ್ನು ಹರಡಿರುವನು.

31. ಅವನು ಅದರಿಂದ ನೀರನ್ನು ಹೊರಡಿಸಿ ಮೇವನ್ನು ಬೆಳೆಸಿರುವನು

32. ಮತ್ತು ಅದರ ಮೇಲೆ ಪರ್ವತಗಳನ್ನು ಹೊರಿಸಿರುವನು.

33. ಇದೆಲ್ಲಾ ನಿಮ್ಮ ಲಾಭಕ್ಕಾಗಿ ಹಾಗೂ ನಿಮ್ಮ ಜಾನುವಾರುಗಳಿಗಾಗಿ.

34. ಆ ಮಹಾ ವಿಪತ್ತು ಬಂದು ಬಿಟ್ಟಾಗ.

35. ಅಂದು ಮನುಷ್ಯನು ತಾನು ಮಾಡಿದ್ದೆಲ್ಲವನ್ನೂ ಸ್ಮರಿಸಿ ಕೊಳ್ಳುವನು.

36. ಮತ್ತು ನೋಡುವವರ ಮುಂದೆ ನರಕವನ್ನು ತಂದಿಡಲಾಗುವುದು.

37. ವಿದ್ರೋಹ ವೆಸಗಿದವನು

38. ಮತ್ತು ಇಹಲೋಕ ಬದುಕಿಗೆ ಪ್ರಾಶಸ್ತ್ಯ ಕೊಟ್ಟವನು –

39. – ನರಕವೇ ಅವನ ನೆಲೆಯಾಗಿರುವುದು.

40. ಇನ್ನು ತನ್ನ ಒಡೆಯನ ಮುಂದೆ ನಿಲ್ಲಲಿಕ್ಕಿದೆ ಎಂದು ಅಂಜುತ್ತಿದ್ದವನು ಮತ್ತು ತನ್ನ ಸ್ವೇಚ್ಛೆಯನ್ನು ನಿಯಂತ್ರಿಸುತ್ತಿದ್ದವನು –

41. – ಸ್ವರ್ಗವೇ ಅವನ ನೆಲೆಯಾಗಿರುವುದು.

 42. (ಪುನರುತ್ಥಾನದ) ಆ ಘಳಿಗೆಯು ಎಂದು ಬರುವುದು? ಎಂದು ಅವರು ಪ್ರಶ್ನಿಸುತ್ತಾರೆ.

43. ಅದನ್ನು ಪ್ರಸ್ತಾಪಿಸಿ ನಿಮಗೆ ಏನಾಗಬೇಕಾಗಿದೆ?

 44. ಆ ಕುರಿತು ಅಂತಿಮ ಜ್ಞಾನವು ನಿಮ್ಮೊಡೆಯನ ಬಳಿ ಇದೆ.

45. (ದೂತರೇ,) ನೀವಂತು ಭಯ ಭಕ್ತಿ ಉಳ್ಳವರನ್ನು ಎಚ್ಚರಿಸುವವರು ಮಾತ್ರ

46. ಅವರು ಅದನ್ನು (ಪರಲೋಕವನ್ನು) ಕಣ್ಣಾರೆ ಕಂಡಾಗ, ತಾವು (ಇಹಲೋಕದಲ್ಲಿ) ಕಳೆದುದು ಕೇವಲ ಒಂದು ಸಂಜೆ ಅಥವಾ ಒಂದು ಮುಂಜಾನೆ ಮಾತ್ರ ಎಂದು ಕೊಳ್ಳುವರು.