85. ಅಲ್ ಬುರೂಜ್ (ಗೋಪುರಗಳು)
ವಚನಗಳು – 22, ಮಕ್ಕಃ
ಅಲ್ಲಾಹನ ಹೆಸರಿಂದ – ಅವನು ಆಪಾರ ದಯಾಳು, ಕರುಣಾಮಯಿ
1. ಗೋಪುರಗಳಿರುವ ಆಕಾಶದಾಣೆ.
2. ವಾಗ್ದಾನ ಮಾಡಲಾಗಿರುವ ಆ ದಿನದ ಆಣೆ.
3. ಹಾಜರಾಗುವವನ ಮತ್ತು ಯಾರ ಮುಂದೆ ಹಾಜರು ಪಡಿಸಲಾಗುವುದೋ ಅವನಾಣೆ.
4. ನಾಶವಾದರು, ಕಂದಕಗಳನ್ನು ಅಗೆದವರು.
5. ಅವರು ಅದರಲ್ಲಿ ಉರಿಯುವ ಕೆಂಡಗಳನ್ನು ತುಂಬಿದ್ದರು.
6. ಅವರು ಅದರ ಸುತ್ತಲೂ ಕುಳಿತಿದ್ದರು.
7. ಮತ್ತು ಅವರು ವಿಶ್ವಾಸಿಗಳಿಗೆ ತಾವು ನೀಡುತ್ತಿದ್ದುದನ್ನು (ಚಿತ್ರ ಹಿಂಸೆಯನ್ನು) ನೋಡುತ್ತಿದ್ದರು.
8. ಅವರು ಆ ವಿಶ್ವಾಸಿಗಳ ವಿರುದ್ಧ ಪ್ರತೀಕಾರವೆಸಗಲು ಇಳಿದುದಕ್ಕೆ, ಅವರು (ಆ ವಿಶ್ವಾಸಿಗಳು) ಪ್ರಬಲನೂ ಪ್ರಶಂಸಾರ್ಹನೂ ಆದ ಅಲ್ಲಾಹನಲ್ಲಿ ನಂಬಿಕೆ ಇಟ್ಟರು ಎಂಬುದಷ್ಟೇ ಕಾರಣವಾಗಿತ್ತು.
9. ಆಕಾಶಗಳ ಮತ್ತು ಭೂಮಿಯ ಆಧಿಪತ್ಯವು ಅವನಿಗೇ (ಅಲ್ಲಾಹನಿಗೆ) ಸೇರಿದೆ. ಮತ್ತು ಅಲ್ಲಾಹನು ಎಲ್ಲದಕ್ಕೂ ನೇರ ಸಾಕ್ಷಿಯಾಗಿದ್ದಾನೆ.
10. ವಿಶ್ವಾಸಿ ಪುರುಷರು ಮತ್ತು ಸ್ತ್ರೀಯರನ್ನು ಹಿಂಸಿಸಿದವರು ಹಾಗೂ ಆ ಕುರಿತು ಪಶ್ಚಾತ್ತಾಪ ಪಡದವರು – ಅವರಿಗೆ ನರಕದ ಶಿಕ್ಷೆ ಕಾದಿದೆ ಮತ್ತು ಅವರಿಗೆ ಸುಡುವ ಶಿಕ್ಷೆ ಕಾದಿದೆ.
11. ವಿಶ್ವಾಸಿಗಳಿಗೆ ಹಾಗೂ ಸತ್ಕರ್ಮಗಳನ್ನು ಮಾಡಿದವರಿಗೆ ತಳದಲ್ಲಿ ನದಿಗಳು ಹರಿಯುವ ಸ್ವರ್ಗ ತೋಟಗಳು ಸಿಗುವವು. ಇದು ನಿಜಕ್ಕೂ ದೊಡ್ಡ ಸೌಭಾಗ್ಯವಾಗಿದೆ.
12. ನಿನ್ನ ಒಡೆಯನ ಹಿಡಿತವು ಬಹಳ ಕಠಿಣವಾಗಿರುತ್ತದೆ.
13. ಖಂಡಿತವಾಗಿಯೂ ಅವನೇ ಸೃಷ್ಟಿ ಕಾರ್ಯವನ್ನು ಆರಂಭಿಸಿದವನು ಮತ್ತು ಅವನೇ ಅದನ್ನು ಪುನರಾವರ್ತಿಸುವನು (ಪುನಃ ಸೃಷ್ಟಿಸುವನು).
14. ಅವನು ಕ್ಷಮಿಸುವವನೂ ಪ್ರೀತಿಸುವವನೂ ಆಗಿದ್ದಾನೆ.
15. ಅವನು ಗೌರವಾನ್ವಿತ ವಿಶ್ವ ಪೀಠದ ಒಡೆಯನು.
16. ಅವನು ತಾನಿಚ್ಛಿಸಿದ್ದನ್ನು ಮಾಡಿಯೇ ತೀರುತ್ತಾನೆ.
17. ಪಡೆಗಳ ಸಮಾಚಾರವು ನಿಮಗೆ ತಲುಪಿದೆಯೇ?
18. ಅಂದರೆ ಫಿರ್‌ಔನ್ ಮತ್ತು ಸಮೂದರ ಪಡೆಗಳು.
19. ನಿಜವಾಗಿ ಧಿಕ್ಕಾರಿಗಳು (ಸತ್ಯವನ್ನು) ಅಲ್ಲಗಳೆಯುತ್ತಿದ್ದಾರೆ.
20. ಅಲ್ಲಾಹನು ಅವರನ್ನು ಎಲ್ಲ ಕಡೆಯಿಂದಲೂ ಸುತ್ತುವರಿದಿದ್ದಾನೆ.
21. ನಿಜವಾಗಿ ಇದು ಗೌರವಾನ್ವಿತ ಕುರ್‌ಆನ್ ಆಗಿದೆ.
22. ಇದು ಸುರಕ್ಷಿತ ಗ್ರಂಥದಲ್ಲಿದೆ.