90. Al Balad

90. ಅಲ್ ಬಲದ್ (ನಗರ)

ವಚನಗಳು – 20, ಮಕ್ಕಃ

ಅಲ್ಲಾಹನ ಹೆಸರಿಂದ – ಅವನು ಅಪಾರ ದಯಾಳು, ಕರುಣಾಮಯಿ.

1. ಇಲ್ಲ, ನಾನು ಈ ನಗರದ ಆಣೆ ಹಾಕುತ್ತೇನೆ.

2. ನೀವು ಇದೇ ನಗರದಲ್ಲಿ ಇರುವವರು.

3. ತಂದೆಯ (ಆದಮರ) ಮತ್ತು ಅವರ ಸಂತತಿಯ ಆಣೆ.

4. ನಾವು ಮನುಷ್ಯನನ್ನು ಇಕ್ಕಟ್ಟಿನಲ್ಲಿರುವವನಾಗಿ ಸೃಷ್ಟಿಸಿದ್ದೇವೆ.

5. ತನ್ನ ಮೇಲೆ ಯಾರಿಗೂ ನಿಯಂತ್ರಣವಿಲ್ಲವೆಂದು ಅವನು ಭಾವಿಸಿದ್ದಾನೆಯೇ?

6. ನಾನು ಬಹಳಷ್ಟು ಸಂಪತ್ತನ್ನು ವ್ಯರ್ಥಗೊಳಿಸಿದ್ದೇನೆ ಎಂದವನು ಹೇಳುತ್ತಾನೆ.

 7. ಅವನೇನು, ತನ್ನನ್ನು ಯಾರೂ ನೋಡಿಲ್ಲವೆಂದು ಭಾವಿಸಿದ್ದಾನೆಯೇ?

8. ನಾವೇನು ಅವನಿಗೆ ಎರಡು ಕಣ್ಣುಗಳನ್ನು ನೀಡಿಲ್ಲವೇ?

9. ನಾಲಿಗೆ ಹಾಗೂ ಎರಡು ತುಟಿಗಳನ್ನು ನೀಡಿಲ್ಲವೇ?

10. ಮತ್ತು ಅವನಿಗೆ ಎರಡು ದಾರಿಗಳನ್ನು ತೋರಿಸಿಲ್ಲವೇ?

11. ಆದರೆ ಅವನು ಏರು ಹಾದಿಯನ್ನು ಕ್ರಮಿಸಲು ನಿರಾಕರಿಸಿದನು.

12. ನಿಮಗೇನು ಗೊತ್ತು ಆ ಏರು ಹಾದಿ ಏನೆಂದು?

13. (ದಾಸ್ಯದಲ್ಲಿರುವವರ) ಕೊರಳನ್ನು ಬಿಡಿಸುವುದು.

14. ಅಥವಾ ಹಸಿವಿನ ದಿನ ಉಣಿಸುವುದು.

15. ಸಂಬಂಧಿಕನಾಗಿರುವ ಅನಾಥನನ್ನು ಪೋಷಿಸುವುದು.

16. ಸಂಕಷ್ಟದಲ್ಲಿರುವ ಬಡವನಿಗೆ ನೆರವಾಗುವುದು.

 17. (ಇದನ್ನು ಮಾಡಿದವನು) ವಿಶ್ವಾಸಿಗಳ, ಪರಸ್ಪರ ಸಹನೆಯನ್ನು ಬೋಧಿಸುವವರ ಹಾಗೂ ಪರಸ್ಪರ ಕರುಣೆಯನ್ನು ಬೋಧಿಸುವವರ ಸಾಲಿಗೆ ಸೇರಿರಬೇಕು.

18. ಅವರೇ ಬಲ ಭಾಗದವರು (ಸೌಭಾಗ್ಯವಂತರು).

19. ಇನ್ನು, ನಮ್ಮ ವಚನಗಳನ್ನು ಧಿಕ್ಕರಿಸಿದವರೇ ಎಡಭಾಗದವರು (ಭಾಗ್ಯಹೀನರು).

20. ಅವರನ್ನು ನರಕಾಗ್ನಿಯಲ್ಲಿ ಮುಚ್ಚಿ ಬಿಡಲಾಗುವುದು.