96. ಅಲ್ಅಲಕ್ (ರಕ್ತ ಪಿಂಡ)
ವಚನಗಳು – 19, ಮಕ್ಕಃ
ಅಲ್ಲಾಹನ ಹೆಸರಿಂದ – ಅವನು ಅಪಾರ ದಯಾಳು, ಕರುಣಾಮಯಿ.
1. ಓದಿರಿ, (ವಿಶ್ವವನ್ನು) ಸೃಷ್ಟಿಸಿದ ನಿಮ್ಮೊಡೆಯನ ಹೆಸರಿಂದ.
2. ಅವನು ಮನುಷ್ಯನನ್ನು ಹೆಪ್ಪು ಗಟ್ಟಿದ ರಕ್ತದಿಂದ ಸೃಷ್ಟಿಸಿರುವನು.
3. ಓದಿರಿ. ಮಹಾ ಉದಾರಿಯಾದ ನಿಮ್ಮೊಡೆಯನ ಹೆಸರಿಂದ.
4. ಅವನು ಲೇಖನಿಯ ಮೂಲಕ ಕಲಿಸಿದನು.
5. ಮತ್ತು ಮಾನವನಿಗೆ ತಿಳಿದಿಲ್ಲದ್ದನ್ನು ಕಲಿಸಿದನು.
6. ಆದರೆ ಮನುಷ್ಯನು ಮಾತ್ರ ವಿದ್ರೋಹವೆಸಗುತ್ತಾನೆ.
7. ಅವನು ತನ್ನನ್ನು ತೀರಾ ಸ್ವತಂತ್ರನಾಗಿ ಕಾಣುತ್ತಾನೆ.
8. ಖಂಡಿತ (ಎಲ್ಲರೂ) ನಿಮ್ಮ ಒಡೆಯನ ಕಡೆಗೇ ಮರಳ ಬೇಕಾಗಿದೆ.
9. ನೀವು ನೋಡಿದಿರಾ, ತಡೆಯುವವನನ್ನು?
10. (ನಮ್ಮ) ದಾಸನು ನಮಾಝ್ ಸಲ್ಲಿಸುವಾಗ (ತಡೆಯುವವನನ್ನು)?
11. ನೀವು ನೋಡಿದಿರಾ? ಒಂದು ವೇಳೆ ಅವನು ಸರಿದಾರಿಯಲ್ಲಿದ್ದರೆ.
12. ಅಥವಾ ಅವನು ಸತ್ಯನಿಷ್ಠೆಯನ್ನು ಬೋಧಿಸಿದ್ದರೆ (ಅವನನ್ನು ತಡೆದವನ ಗತಿ ಏನಾದೀತು?)
13. ನೀವು ನೋಡಿದಿರಾ? ಅವನು (ತಡೆಯುವವನು, ಸತ್ಯವನ್ನು) ತಿರಸ್ಕರಿಸುವವನು ಹಾಗೂ ಕಡೆಗಣಿಸುವವನಾಗಿದ್ದರೆ (ಅವನ ಗತಿ ಏನಾದೀತು?)
14. ಅಲ್ಲಾಹನು ನೋಡುತ್ತಿರುವನೆಂದು ಅವನಿಗೆ ತಿಳಿಯದೇ?
15. ಒಂದು ವೇಳೆ ಅವನು ತನ್ನನ್ನು ತಡೆಯದಿದ್ದರೆ, ನಾವು ಅವನ ತಲೆಯ ಜುಟ್ಟನ್ನು ಹಿಡಿದು ಎಳೆದೊಯ್ಯುವೆವು.
16. ಸುಳ್ಳುಗಾರ, ಪಾಪಿ ಹಣೆ ಅದು.
17. ಅವನೀಗ ತನ್ನ ಕೂಟವನ್ನು ಕರೆಯಲಿ.
18. ನಾವು ನಮ್ಮ ಪಡೆಯನ್ನು ಕರೆಯುವೆವು.
19. (ದೂತರೇ,) ಬೇಡ. ನೀವು ಅವನ ಆದೇಶವನ್ನು ಪಾಲಿಸಬೇಡಿ. ನೀವು ಸಾಷ್ಟಾಂಗವೆರಗಿರಿ ಮತ್ತು (ನಮಗೆ) ನಿಕಟರಾಗಿರಿ.