Introduction – ಪರಿಚಯ

 

1. ಆದಮ್ (ಅ)- ಅಂದರೆ, ಪ್ರಥಮ ಮಾನವ ಅಥವಾ ಮಾನವ ಜನಾಂಗದ ಆದಿಪಿತ. ಕುರ್‌ಆನ್ ಮತ್ತು ಪ್ರವಾದಿ ವಚನಗಳಿಂದ ತಿಳಿದು ಬರುವಂತೆ, ಅವರು ತಂದೆ ತಾಯಿಗಳ ಮೂಲಕ ಹುಟ್ಟಿದವರಲ್ಲ. ಅಲ್ಲಾಹನು ಒಂದು ನಿರ್ದಿಷ್ಟ ಬಗೆಯ ಮಣ್ಣಿನಿಂದ ಒಂದು ಆಕೃತಿಯನ್ನು ನಿರ್ಮಿಸಿ ತನ್ನ ಆತ್ಮ ಅಥವಾ ಚೇತನದ ಒಂದಂಶವನ್ನು ಅದರೊಳಕ್ಕೆ ಊದುವ ಮೂಲಕ ಅವರನ್ನು ಸೃಷ್ಟಿಸಿದನು. ಭೂಮ್ಯಾಕಾಶಗಳನ್ನು ಹಾಗೂ ಮಲಕ್ ಮತ್ತು ಜಿನ್ನ್‌ಗಳನ್ನು ಸೃಷ್ಟಿಸಿದ ಬಳಿಕ ಆದಮ್(ಅ)ರನ್ನು ಸೃಷ್ಟಿಸಲಾಗಿತ್ತು. ಅವರ ಪತ್ನಿ ಹವ್ವಾರ ಹೆಸರು ಕುರ್‌ಆನ್‌ನಲ್ಲಿಲ್ಲ. ಆದರೆ ಆದಮ್‌ರಿಗಾಗಿ, ಅವರೊಳಗಿಂದಲೇ ಅವರ ಜೋಡಿಯನ್ನು ನಿರ್ಮಿಸಲಾಯಿತೆಂಬ ಸೂಚನೆ ಇದೆ. ಕುರ್‌ಆನಿನ ಈ ಕೆಳಗಿನ ಸ್ಥಾನಗಳಲ್ಲಿ ಆದಮ್(ಅ)ರ ಪ್ರಸ್ತಾಪ ಕಂಡುಬರುತ್ತದೆ; 2:30ರಿಂದ39/ 3:33/ 7:11ರಿಂದ 25/ 15:28ರಿಂದ 43/ 17:61ರಿಂದ 65/ 18:50/ 20:116ರಿಂದ 123/ 38:71ರಿಂದ 76.

ಜ್ಞಾನದ ವಿಷಯದಲ್ಲಿ ಮಾನವರು ಮಲಕ್‌ಗಳಿಗಿಂತ ಶ್ರೇಷ್ಠರೆಂದು ಹಾಗೂ ಮಲಕ್‌ಗಳು ಹಾಗೂ ಜಿನ್ನ್‌ಗಳು ಅಲ್ಲಾಹನ ಆದೇಶ ಪ್ರಕಾರ ಆದಮ್‌ರಿಗೆ ಸಾಷ್ಟಾಂಗವೆರಗಿದ್ದರೆಂದು ಕುರ್‌ಆನ್‌ನಿಂದ ತಿಳಿದು ಬರುತ್ತದೆ.

ಸ್ವರ್ಗದಲ್ಲಿ ಆದಮ್ ಮತ್ತವರ ಪತ್ನಿಗೆ ನೀಡಲಾಗಿದ್ದ ಮುಕ್ತ ಸ್ವಾತಂತ್ರ ಮತ್ತು ಆ ಬಳಿಕ ಶೈತಾನನ ಪ್ರಚೋದನೆಯಿಂದ ಅವರು ಎಸಗಿದ ಪಾಪಕೃತ್ಯದ ಪ್ರಸ್ತಾಪ ಕುರ್‌ಆನ್‌ನಲ್ಲಿದೆ. ಆದರೆ ಇತರ ಧರ್ಮಗ್ರಂಥಗಳಿಗೆ ಹೋಲಿಸಿದರೆ ಕುರ್‌ಆನಿನ ವಿಶೇಷತೆ ಏನೆಂದರೆ, ಇಲ್ಲಿ ಆದಮರು ಎಸಗಿದ ಪಾಪವನ್ನು ಪ್ರಸ್ತಾಪಿಸಿದ್ದರ ಬೆನ್ನಿಗೇ ಆದಮರು ತಮ್ಮ ಪಾಪಕ್ಕಾಗಿ ಮನಸಾರೆ ಪಶ್ಚಾತ್ತಾಪ ಪಟ್ಟು ಅಲ್ಲಾಹನಲ್ಲಿ ಕ್ಷಮೆಯಾಚಿಸಿದರು ಮತ್ತು ಅಲ್ಲಾಹನು ಅವರನ್ನು ಕ್ಷಮಿಸಿಬಿಟ್ಟನು ಎಂದು ಸ್ಪಷ್ಟವಾಗಿ ಪ್ರಸ್ತಾಪಿಸಲಾಗಿದೆ. ಈ ಮೂಲಕ, ಆದಮರು ಪಾಪವೆಸಗಿದ್ದರಿಂದ ಆದಮರ ಸಂತತಿಗಳೆಲ್ಲಾ ಜನ್ಮನಃ ಪಾಪಿಗಳಾಗಿರುತ್ತಾರೆ ಎಂಬ ಮೂಢನಂಬಿಕೆಯನ್ನು ಮೂಲೋತ್ಪಾಟನೆ ಮಾಡಲಾಗಿದೆ. ಮಾನವ ಕುಲವನ್ನು ಅನಗತ್ಯ ಪಾಪಪ್ರಜ್ಞೆಯಿಂದ ಕಾಪಾಡುವ ನಿಟ್ಟಿನಲ್ಲಿ ಇದು ಕುರ್‌ಆನಿನ ಅಮೂಲ್ಯ ಕೊಡುಗೆಯಾಗಿದೆ. ಹಾಗೆಯೇ, ಆದಮರು ಪಾಪವೆಸಗುವುದಕ್ಕೆ ಅವರ ಪತ್ನಿ ಪ್ರಚೋದಕಿಯಾಗಿದ್ದಳೆಂಬ ಆರೋಪವನ್ನೂ ಕುರ್‌ಆನ್ ಅಲ್ಲಗಳೆಯುತ್ತದೆ. ಆದಮ್ ಮತ್ತು ಅವರ ಪತ್ನಿ ಇಬ್ಬರೂ ಸಮಾನವಾಗಿ ಶೈತಾನನ ಪ್ರಚೋದನೆಗೆ ತುತ್ತಾಗಿದ್ದರು ಆದ್ದರಿಂದ ಅವರಿಂದ ಸಂಭವಿಸಿದ ಪಾಪಕೃತ್ಯಕ್ಕೆ ಅವರಿಬ್ಬರೂ ಸಮಾನ ಹೊಣೆಗಾರರಾಗಿದ್ದರು ಎಂದು ಕುರ್‌ಆನ್ ಪ್ರತಿಪಾದಿಸುತ್ತದೆ. ಈ ಮೂಲಕ ಅದು ಪಾಪದ ಪ್ರಚೋದಕಿಯರೆಂಬ ಘೋರ ಆರೋಪದಿಂದ ಸ್ತ್ರೀ ಸಮುದಾಯವನ್ನು ಮುಕ್ತಗೊಳಿಸಿದೆ.

ಕುರ್‌ಆನ್‌ನಲ್ಲಿ ಆದಮ್‌ರನ್ನು ಪರಿಚಯಸುವ ಮೂಲಕ, ಮಾನವರೆಲ್ಲರೂ ಮೂಲತಃ ಒಂದೇ ತಂದೆ-ತಾಯಿಯ ಮಕ್ಕಳು ಮತ್ತು ಆ ಕಾರಣಕ್ಕಾಗಿ, ಜಾತಿ, ಮತ, ಧರ್ಮ, ವರ್ಣ, ಭಾಷೆ, ವಂಶ, ಜನಾಂಗ ಇತ್ಯಾದಿ ಎಲ್ಲ ಭೇದ ಭಾವಗಳನ್ನು ಮೀರಿ, ಸರ್ವ ಮಾನವರೂ ಒಂದೇ ಕುಟುಂಬದವರು ಎಂಬ ಸತ್ಯವನ್ನು ಪರಿಚಯಿಸಲಾಗಿದೆ.

ಕುರ್‌ಆನಿನ ಪ್ರಕಾರ, ಪ್ರಥಮ ಮಾನವ ಆದಮ್‌ರನ್ನು ಭೂಮಿಗೆ ಕಳಿಸುವಾಗ ಅವರಿಗೆ ಸನ್ಮಾರ್ಗದ ಅರಿವನ್ನು ನೀಡಲಾಗಿತ್ತು.(20:122) ಮಾತ್ರವಲ್ಲ ಅವರು ಸ್ವತಃ ಮಾರ್ಗದರ್ಶಿ ದೇವದೂತರಾಗಿದ್ದರು (ನೋಡಿರಿ; 3:33). ಮಾನವರ ಪ್ರಥಮ ಪೀಳಿಗೆಯೇ, ಸತ್ಯ-ಮಿಥ್ಯಗಳನ್ನು ಗುರುತಿಸುವ ಸಾಮರ್ಥ್ಯವನ್ನು ಪಡೆದಿತ್ತೆಂಬುದು ಇದರಿಂದ ವ್ಯಕ್ತವಾಗುತ್ತದೆ.

2. ಇದ್ರೀಸ್ ()-ಇವರು ಆದಮ್ (ಅ)ರ ಪುತ್ರ ಶೀಸ್ (ಅ)ಅವರ ಸಂತತಿಗೆ ಸೇರಿದ ಪ್ರವಾದಿ. ಕುರ್‌ಆನ್‌ನಲ್ಲಿ ಈ ಕೆಳಗಿನ ಸ್ಥಾನಗಳಲ್ಲಿ ಅವರ ಪ್ರಸ್ತಾಪವಿದೆ.

19:56,57 ಮತ್ತು 21:85

ಬೈಬಲ್‌ನಲ್ಲಿ ಅವರನ್ನು ಹನೂಕ್ ಅಥವಾ ಇನೋಕ್ (ENOCH) ಎಂದು ಗುರುತಿಸಲಾಗಿದೆ. ಯಹೂದಿಗಳ ಐತಿಹ್ಯ ಪ್ರಕಾರ ಇದ್ರೀಸ್ (ಅ) ಗಣಿತ, ಖಗೋಳಶಾಸ್ತ್ರ, ಹೊಲಿಗೆ ಮತ್ತು ಕೈಬರಹ ಶಾಸ್ತ್ರಗಳ ಜನಕರಾಗಿದ್ದರು. ಹಾಗೆಯೇ ಅವರು ಜೀವಂತರಾಗಿದ್ದ ಸ್ಥಿತಿಯಲ್ಲೇ ಅಲ್ಲಾಹನು ಅವರನ್ನು ಭೂಮಿಯಿಂದ ಆಕಾಶ ಲೋಕಕ್ಕೆ ಎತ್ತಿಕೊಂಡನೆಂಬ ನಂಬಿಕೆ ಕ್ರೈಸ್ತ ಹಾಗೂ ಯಹೂದಿ ಗ್ರಂಥಗಳಲ್ಲಿ ಕಂಡುಬರುತ್ತದೆ.

3. ನೂಹ್ () ಇವರನ್ನು ಆದಮ್‌ರ ಸಂತತಿಯಲ್ಲಿನ ಪ್ರಥಮ ರಸೂಲ್ ಎಂದು ಗುರುತಿಸಲಾಗುತ್ತದೆ. ಕುರ್‌ಆನಿನ ಹಲವು ವಚನಗಳಲ್ಲಿ ಅವರ ಪ್ರಸ್ತಾಪವಿದೆ; 3:33/ 7:59ರಿಂದ 64 10:71 ರಿಂದ 73/ 11:34, 36ರಿಂದ 48/ 17:3/ 21:76,77/ 23:23ರಿಂದ 30/ 25:37/ 26:105 ರಿಂದ 121/ 29:14,15/ 37:75ರಿಂದ 82/ 51:46/ 54:9ರಿಂದ 16/ 57:26/ 66:10/ 69:11,12/ 71:1ರಿಂದ 28.

ನೂಹ್ (ಅ) ಮೂಲತಃ ಇರಾಕ್‌ನಲ್ಲಿದ್ದರು. ಕುರ್‌ಆನಿನ ಪ್ರಕಾರ ಅವರು 950 ವರ್ಷಕ್ಕಿಂತಲೂ ಹೆಚ್ಚು ಕಾಲ ಬದುಕಿದ್ದರು. ಅವರ ಕಾಲದಲ್ಲಿ ವಿಗ್ರಹಾರಾಧನೆ ಸಾಮಾನ್ಯವಾಗಿಬಿಟ್ಟಿತ್ತು. ಮುಖ್ಯವಾಗಿ ವದ್ದ್, ಸುವಾಅ್, ಯಗೂಸ್, ಯವೂಕ್ ಮತ್ತು ನಸ್ಸ್ ಎಂಬ ಪಂಚದೇವತೆಗಳು ಬಹಳ ಜನಪ್ರಿಯರಾಗಿದ್ದರು. ಬದುಕಿನ ವಿಭಿನ್ನ ಅಗತ್ಯಗಳಿಗಾಗಿ ವಿಭಿನ್ನ ದೇವರುಗಳನ್ನು ಅವಲಂಬಿಸುವ ಸಂಪ್ರದಾಯವು ಅವರ ಸಮಾಜದಲ್ಲಿ ಜನಪ್ರಿಯವಾಗಿತ್ತು. ಹಾಗೆಯೇ ಆ ಸಮಾಜದಲ್ಲಿ ವಿವಿಧ ಸ್ವರೂಪದ ಅಕ್ರಮ ಅನ್ಯಾಯಗಳು ವ್ಯಾಪಿಸಿದ್ದವು. ತಮ್ಮ ಬದುಕಿನುದ್ದಕ್ಕೂ ನೂಹರು ಆ ಸಮಾಜದ ಸುಧಾರಣೆಗೆ ಶ್ರಮಿಸಿದ್ದರು. ಜನರನ್ನು ಸತ್ಯಧರ್ಮದೆಡೆಗೆ ಆಮಂತ್ರಿಸುತ್ತಿದ್ದರು. ಆದರೆ ಸಮಾಜದ ತೀರಾ ಬಡ ಹಾಗೂ ದುರ್ಬಲ ವರ್ಗದ ಕೆಲವು ಜನರ ಹೊರತು ಉಳಿದವರು ನೂಹರ ಕರೆಯನ್ನು ತಿರಸ್ಕರಿಸಿದ್ದರು. ಸ್ವತಃ ಅವರ ಮಡದಿ ಮತ್ತು ಮಗನೂ ಅವರ ಮಾತಿಗೆ ಕಿವಿಗೊಡಲಿಲ್ಲ. ಮಾತ್ರವಲ್ಲ, ಅವರು ನೂಹ್(ಅ) ಮತ್ತವರ ಜತೆಗಾರರನ್ನು ಎಲ್ಲ ಬಗೆಯ ಅಪಮಾನ, ಕಿರುಕುಳ ಹಾಗೂ ಹಿಂಸೆಗೆ ತುತ್ತಾಗಿಸಿದ್ದರು. ಕೊನೆಗೆ ಒಂದು ಮಹಾ ಪ್ರವಾಹವು ಉಕ್ಕಿ ಬಂದು ಅವರ ಎಲ್ಲ ಸಮಕಾಲೀನರನ್ನು ಬಲಿ ತೆಗೆದುಕೊಂಡಿತು. ನೂಹ್ (ಅ)ರ ಕೆಲವು ನಿಷ್ಠಾವಂತ ಅನುಯಾಯಿಗಳು ಮತ್ತು ಆ ಪ್ರವಾಹಕ್ಕೆ ಪೂರ್ವಭಾವಿಯಾಗಿ ನೂಹರು ತಯಾರಿಸಿಟ್ಟಿದ್ದ ಹಡಗಿನಲ್ಲಿ ಹತ್ತಿಕೊಂಡಿದ್ದ ವಿವಿಧ ಜೀವಿಗಳು ಮಾತ್ರ ಆ ವಿನಾಶಕಾರಿ ಪ್ರವಾಹದಿಂದ ಸುರಕ್ಷಿತವಾಗಿ ಉಳಿದರು. ಈ ರೀತಿ ಅವರ ಮೂಲಕ ಮಾನವ ಜಾತಿಯು ಮರುಜೀವ ಪಡೆದು ಭೂಮಿಯಲ್ಲಿ ಮತ್ತೆ ತನ್ನ ಪ್ರಯಾಣವನ್ನು ಹೊಸದಾಗಿ ಆರಂಭಿಸಿತು.

4. ಹೂದ್()-ಅರೇಬಿಯಾದ ದಕ್ಷಿಣ ಭಾಗದಲ್ಲಿದ್ದ ಆದ್ ಎಂಬ ಕುಖ್ಯಾತ ಜನಾಂಗಕ್ಕೆ ಸತ್ಯ ಸಂದೇಶವನ್ನು ತಲುಪಿಸಲಿಕ್ಕಾಗಿ ಅಲ್ಲಾಹನು ಇವರನ್ನು ಪ್ರವಾದಿಯಾಗಿ ನೇಮಿಸಿದ್ದನು. ಕುರ್‌ಆನ್‌ನಲ್ಲಿ ಈ ಕೆಳಗಿನ ಸ್ಥಾನಗಳಲ್ಲಿ ಅವರ ಪ್ರಸ್ತಾಪ ಕಂಡುಬರುತ್ತದೆ; 7:65ರಿಂದ 72, 11:50ರಿಂದ 60, 26: 123ರಿಂದ 140, 29:38, 41:13ರಿಂದ 21, 69:4 ಮತ್ತು 6ರಿಂದ 8.

ಹೂದ್ ಜನಾಂಗದಲ್ಲಿ ಪೂರ್ವಜರ ಅಂಧಾನುಕರಣೆಯ ಅನಿಷ್ಟ ಆಳವಾಗಿ ಬೇರೂರಿತ್ತು. ಮೂರ್ತಿ ಪೂಜೆಯಂತಹ ವೌಢ್ಯಗಳು ವ್ಯಾಪಕವಾಗಿಬಿಟ್ಟವು. ಅವರಿಗೆ ಏಕದೇವತ್ವವನ್ನು ಪರಿಚಯಿಸಿ, ಸತ್ಯ ಮತ್ತು ಸನ್ಮಾರ್ಗದೆಡೆಗೆ ಅವರನ್ನು ಆಮಂತ್ರಿಸಿದ ಹೂದ್ ಎಲ್ಲ ಬಗೆಯ ವಿರೋಧ ಹಾಗೂ ಹಿಂಸೆಯನ್ನು ಎದುರಿಸಬೇಕಾಯಿತು. ಆದ್ ಜನಾಂಗದ ವಿದ್ರೋಹ ನೀತಿಯು ಮಿತಿ ಮೀರಿದಾಗ ಒಂದು ಭಯಾನಕ ಬಿರುಗಾಳಿಯು ಅವರ ಮೇಲೆರಗಿತು ಮತ್ತು ಅವರನ್ನು ಹಾಗೂ ಅವರ ಭವ್ಯ ಭವನಗಳನ್ನು ಮತ್ತು ಅವರ ವಿಶಾಲ ಹೊಲತೋಟ ಇತ್ಯಾದಿಗಳನ್ನೆಲ್ಲಾ ನಾಶಮಾಡಿಬಿಟ್ಟಿತು. ಹೂದ್(ಅ) ಮತ್ತು ಅವರ ಬೆಂಬಲಕ್ಕೆ ನಿಂತ ನಿಷ್ಠಾವಂತ ಅನುಯಾಯಿಗಳು ಮಾತ್ರ ಸುರಕ್ಷಿತವಾಗಿ ಉಳಿದರು.

5. ಸ್ವಾಲಿಹ್ (): ಪ್ರವಾದಿ ನೂಹ್ (ಅ)ರ ಅನಂತರದ ಕಾಲದಲ್ಲಿ ಅರೇಬಿಯಾದ ಉತ್ತರ ಹಾಗೂ ಪಶ್ಚಿಮ ಭಾಗದಲ್ಲಿ ಸಮೂದ್ ಎಂಬ ಒಂದು ಬಲಿಷ್ಠ ಜನಾಂಗ ನೆಲೆಸಿತ್ತು. ಆ ಜನಾಂಗದ ಮಾರ್ಗದರ್ಶನಕ್ಕಾಗಿ ಸ್ವಾಲಿಹ್ (ಅ) ನಿಯುಕ್ತರಾಗಿದ್ದರು. ಕುರ್‌ಆನ್‌ನಲ್ಲಿ ಅವರ ಪ್ರಸ್ತಾಪವು ಈ ಕೆಳಗಿನ ಸ್ಥಾನಗಳಲ್ಲಿ ಕಂಡುಬರುತ್ತದೆ;

7:73ರಿಂದ 79/ 11:61ರಿಂದ 68/ 14:9/ 15:80ರಿಂದ 84/ 17:59, 26:140ರಿಂದ 158/ 27:45ರಿಂದ 53/ 29:38, 41:17,18 /51:43ರಿಂದ 45/ 53:51/ 54:23ರಿಂದ 31/ 69:4,5 /89:9/ 91:11ರಿಂದ 15.

ಪ್ರವಾದಿ ಸ್ವಾಲಿಹ್ (ಅ) ಸತ್ಯ ಪ್ರಚಾರ ನಡೆಸಿದ ಪ್ರದೇಶವನ್ನು ಕುರ್‌ಆನಿನಲ್ಲಿ ಹಿಜ್ರ್ ಎಂದು ಗುರುತಿಸಲಾಗಿದೆ. (15:84)

ಹಲವು ಬಗೆಯ ಸಾಮೂಹಿಕ ಅಕ್ರಮ ಹಾಗೂ ಮೌಢ್ಯಗಳು ಆಳವಾಗಿ ಬೇರೂರಿದ್ದ ಆ ಸಮಾಜದಲ್ಲಿ ಜನಮಾನಸವನ್ನು ಸತ್ಯದ ಪ್ರಕಾಶದಿಂದ ಬೆಳಗಲು ಸ್ವಾಲಿಹ್ (ಅ) ಶ್ರಮಿಸಿದ್ದರು. ಆದರೆ ಅವರು ಅಲ್ಲಿ ತೀರಾ ಪ್ರತಿಕೂಲ ಸನ್ನಿವೇಶವನ್ನು ಎದುರಿಸ ಬೇಕಾಯಿತು. ಸಮೂದ್ ಜನಾಂಗವು ಏಕದೇವತ್ವ, ಪರಲೋಕ ಮುಂತಾದ ಪರಮಸತ್ಯಗಳನ್ನು ಧಿಕ್ಕರಿಸಿದ್ದು ಮಾತ್ರವಲ್ಲ, ಸ್ವಾಲಿಹ್(ಅ)ರಂತಹ ಸಜ್ಜನನನ್ನೇ ಅಪಹಾಸ್ಯ ಮಾಡಲು, ನಿಂದಿಸಲು ಹಾಗೂ ಹಿಂಸಿಸಲು ಆರಂಭಿಸಿತು.

ಈ ರೀತಿ ಆ ಜನರು, ತಾವು ಸಾಮೂಹಿಕವಾಗಿ ಶಿಕ್ಷಾರ್ಹರೆಂಬುದನ್ನು ಸಾಬೀತು ಪಡಿಸಿದಾಗ ಅವರಿಗೆ ಒಂದು ಅಂತಿಮ ಅವಕಾಶವನ್ನು ನೀಡಲಿಕ್ಕಾಗಿ ಅಲ್ಲಾಹನು ಒಂದು ಒಂಟೆಯನ್ನು ಸಂಕೇತವಾಗಿ ಬಳಸಿದನು. ಆ ಒಂಟೆಯ ವಿಷಯದಲ್ಲಿ ಕೆಲವು ನಿಯಮಗಳನ್ನು ಪಾಲಿಸಬೇಕು, ಅನ್ಯಥಾ ನಿಮ್ಮ ಜನಾಂಗ ಸಾಮೂಹಿಕ ವಿನಾಶಕ್ಕೆ ತುತ್ತಾಗಬೇಕಾಗುತ್ತದೆ ಎಂಬ ಸ್ಪಷ್ಟ ಮುನ್ನೆಚ್ಚರಿಕೆಯನ್ನು ನೀಡಲಾಯಿತು. ಇಷ್ಟಾಗಿಯೂ ಅವರು ಸರ್ವಶಕ್ತನ ಎಚ್ಚರಿಕೆಯನ್ನು ಕಡೆಗಣಿಸಿದರು, ಅವನ ಪ್ರತಿನಿಧಿಯಾಗಿದ್ದ ಸ್ವಾಲಿಹ್ (ಅ)ರನ್ನು ಅಪಮಾನಿಸಿದರು ಮತ್ತು ಅವನ ಸಂಕೇತವಾಗಿದ್ದ ಒಂಟೆಯನ್ನು ಕೊಂದು ಹಾಕಿದರು. ಈ ಮೂಲಕ ತಾವು ಶಿಕ್ಷಾರ್ಹರೆಂಬುದನ್ನು ಅವರು ಸಾಬೀತುಪಡಿಸಿದಾಗ, ಒಂದು ಭಯಾನಕ ಸಿಡಿಲು ಅವರ ಮೇಲೆರಗಿ ಜಗತ್ತಿಗೆಲ್ಲಾ ಪಾಠವಾಗುವಂತೆ ಅವರನ್ನು ನಿರ್ನಾಮಗೊಳಿಸಿತು. ಸ್ವಾಲಿಹ್ (ಅ) ಮತ್ತು ಅವರ ಅನುಯಾಯಿಗಳನ್ನು ಅಲ್ಲಾಹನು ಈ ಸಾಮೂಹಿಕ ವಿನಾಶದಿಂದ ಕಾಪಾಡಿದನು.

6. ಇಬ್ರಾಹೀಮ್ ()- ಯಹೂದಿಗಳು, ಕ್ರೈಸ್ತರು ಮತ್ತು ಮುಸ್ಲಿಮರು ಸಮನಾಗಿ ಗೌರವಿಸುವ ಇಬ್ರಾಹೀಮ್ (ಅ)ರನ್ನು ಕುರ್‌ಆನಿನಲ್ಲಿ ಪ್ರಸ್ತುತ ಮೂರೂ ಸಮುದಾಯಗಳ ತಂದೆಯೆಂದು ವರ್ಣಿಸಲಾಗಿದೆ. ಪ್ರವಾದಿಗಳು ಮತ್ತು ದೂತರ ಪೈಕಿ ಇಬ್ರಾಹೀಮ್ (ಅ)ರ ಸ್ಥಾನ ತುಂಬಾ ಉನ್ನತ ಹಾಗೂ ಅನುಪಮವಾದುದು. ಮಕ್ಕಃದಲ್ಲಿರುವ ಪವಿತ್ರ ಕಅಬ ಮಸೀದಿಯನ್ನು ನಿರ್ಮಿಸಿದವರು ಅವರು. ಅಂತಿಮ ಪ್ರವಾದಿ ಮುಹಮ್ಮದ್ (ಸ)ರ ಸಹಿತ ಅನೇಕಾರು ಪ್ರವಾದಿಗಳು ಅವರ ವಂಶಸ್ಥರಾಗಿದ್ದರು. ಕುರ್‌ಆನ್‌ನಲ್ಲಿ ಅವರ ಪ್ರಸ್ತಾಪ ಈ ಕೆಳಗಿನ ಸ್ಥಾನಗಳಲ್ಲಿ ಕಾಣಬಹುದು.

2:124ರಿಂದ 132/ 2:135, 258, 260/ 3:65ರಿಂದ 68 3:95ರಿಂದ 97, 4:125/ 6:75ರಿಂದ 86/ 9:114/ 11:69ರಿಂದ76/ 14:35ರಿಂದ 41 15:51ರಿಂದ 59/ 16:120ರಿಂದ 123/ 19:41ರಿಂದ 50/ 21:51ರಿಂದ 73/ 22:26, 27/ 26:69ರಿಂದ 104/ 29:16ರಿಂದ 27,31,32/ 37:83ರಿಂದ 113 38:45ರಿಂದ 47/ 43:26ರಿಂದ 28/ 51:24ರಿಂದ 32/ 57:26/ 60:4ರಿಂದ 6.

ಇರಾಕ್‌ನಲ್ಲಿ ಜನಿಸಿದ ಇಬ್ರಾಹೀಮ್ (ಅ) ಬಾಲ್ಯದಿಂದಲೇ ಮಿಥ್ಯದೇವರುಗಳು, ಮೂಢನಂಬಿಕೆಗಳು ಮತ್ತು ದಬ್ಬಾಳಿಕೆಯ ವಿರುದ್ಧ ಧ್ವನಿ ಎತ್ತಿದ್ದರು. ತಮ್ಮ ಸಮಾಜದ ಹಾಗೂ ತಮ್ಮ ಪೂರ್ವಜರ ಅನಾಚಾರಗಳನ್ನು ಸ್ವೀಕರಿಸಲು ಅಥವಾ ಅನುಸರಿಸಲು ಇಬ್ರಾಹೀಮರ ಆತ್ಮ ಸಾಕ್ಷಿಯು ಅನುಮತಿಸಲಿಲ್ಲ. ಪ್ರಕೃತಿಯ ಕುರಿತಾದ ಅವರ ವೀಕ್ಷಣೆ ಮತ್ತು ಚಿಂತನೆ ಕೂಡಾ ಮಿಥ್ಯ ನಂಬಿಕೆಗಳನ್ನು ಧಿಕ್ಕರಿಸಲು ಅವರಿಗೆ ಪ್ರೇರಕವಾಯಿತು. ಕೊನೆಗೆ ಅಲ್ಲಾಹನು ಅವರನ್ನು ತನ್ನ ದೂತರಾಗಿ ನೇಮಿಸಿ, ಅವರಿಗೆ ತನ್ನ ದಿವ್ಯ ಸಂದೇಶವನ್ನು ನೀಡಿ ಅದನ್ನು ಸಮಾಜಕ್ಕೆ ತಲುಪಿಸುವ ಹೊಣೆಗಾರಿಕೆಯನ್ನು ವಹಿಸಿಕೊಟ್ಟನು. ಆಗ ಅವರು ಬಹಳ ಧೈರ್ಯದಿಂದ ಜನರಿಗೆ ಸತ್ಯವನ್ನು ತಲುಪಿಸಲಾರಂಬಿಸಿದರು. ಅವರ ಸಂದೇಶವನ್ನು ಜೀರ್ಣಿಸಿಕೊಳ್ಳಲು ಸಮಾಜ ಸಿದ್ಧವಿರಲಿಲ್ಲ. ಅವರು ಇಬ್ರಾಹೀಮರನ್ನು ಮೌನಗೊಳಿಸಲು ವಿವಿಧ ತಂತ್ರಗಳನ್ನು ಹೂಡಿದರು. ಈ ಮಧ್ಯೆ ಇಬ್ರಾಹೀಮರನ್ನು ನಮ್ರೂದ್ ಎಂಬ ಆ ಕಾಲದ ಮಹಾರಾಜನ ಮುಂದೆ ಹಾಜರು ಪಡಿಸಲಾಯಿತು. ಅವನ ಜೊತೆ ನಡೆದ ಸಂವಾದದಲ್ಲಿ ಇಬ್ರಾಹೀಮರು ಸತ್ಯದ ಮೇಲ್ಮೆಯನ್ನು ಸಾಬೀತು ಪಡಿಸಿದರು. ಕೊನೆಗೆ ಅವರ ಸಮಾಜವು ಅವರನ್ನು ಜೀವಂತ ಸುಟ್ಟು ಹಾಕಲು ತೀರ್ಮಾನಿಸಿತು. ಅಲ್ಲಾಹನು ಇಬ್ರಾಹೀಮ್ (ಅ)ರನ್ನು ರಕ್ಷಿಸಿಕೊಂಡನು.

ಅಲ್ಲಾಹನ ಆದೇಶದಂತೆ ಅವರು ಇರಾಕನ್ನು ಬಿಟ್ಟರು. ಅಂದು ತೀರಾ ನಿರ್ಜನ ಹಾಗೂ ಬರಡಾಗಿದ್ದ ಮಕ್ಕಃ ಎಂಬ ಪ್ರದೇಶಕ್ಕೆ ವಲಸೆಹೋದರು. ಅಲ್ಲಿ ಅಲ್ಲಾಹನ ಮಾರ್ಗದರ್ಶನದಂತೆ ಅವರು ಮತ್ತು ಅವರ ಪುತ್ರ ಇಸ್ಮಾಈಲರು ಕಾಬಾ ಮಸೀದಿಯನ್ನು ನಿರ್ಮಿಸಿದರು ಮತ್ತು ಅದರ ಬಳಿಗೆ ಬಂದು ಹಜ್ಜ್ ಎಂಬ ಆರಾಧನಾ ಕರ್ಮವನ್ನು ಸಲ್ಲಿಸುವಂತೆ ಜಗತ್ತಿನ ಎಲ್ಲೆಡೆಯ ಜನತೆಗೆ ಕರೆ ನೀಡಿದರು. ವಿವಿಧ ಸಂದರ್ಭಗಳಲ್ಲಿ ಅವರು ಅಲ್ಲಾಹನ ಮುಂದೆ ಮಾಡಿದ ಹಲವು ಪ್ರಾರ್ಥನೆಗಳನ್ನು ಕುರ್‌ಆನ್‌ನಲ್ಲಿ ದಾಖಲಿಸಲಾಗಿದೆ. ಹಾಗೆಯೇ ಅಲ್ಲಾಹನ ಜೊತೆ ಅವರು ನಡೆಸಿದ ಸಂಭಾಷಣೆಗಳ ಪ್ರಸ್ತಾಪವೂ ಕುರ್‌ಆನ್‌ನಲ್ಲಿದೆ. ತಮ್ಮ ಕಾಲದ ಒಬ್ಬ ಶಕ್ತಿಶಾಲಿ ದೊರೆಯ ಜೊತೆ ಅವರು ನಡೆಸಿದ ಸಂವಾದಗಳನ್ನು ಕುರ್‌ಆನ್‌ನಲ್ಲಿ ಪ್ರಸ್ತಾಪಿಸಲಾಗಿದೆ.

 7. ಲೂತ್ (): ಇವರು ಇಬ್ರಾಹೀಮ್(ಅ)ರ ಸಮಕಾಲೀನರು. ಅವರನ್ನು ಅಲ್ಲಾಹನು ಪ್ರವಾದಿಯಾಗಿ ನೇಮಿಸಿದ್ದನು. ಪ್ರವಾದಿ ಮುಹಮ್ಮದ್(ಸ) ರ ಸಮಕಾಲೀನ ಅರಬ್ ಜನತೆಗೆ ಅವರ ಕುರಿತು ತಿಳಿದಿತ್ತು. ಅನೇಕ ಅರಬ್ ವರ್ತಕರು ತಮ್ಮ ವ್ಯಾಪಾರ ನಿಮಿತ್ತದ ಪ್ರಯಾಣದ ವೇಳೆ, ಲೂತ್ ಜನಾಂಗದವರು ವಾಸಿಸಿದ್ದ ನಾಡಿನಿಂದ ಹಾದು ಹೋಗುತ್ತಿದ್ದರು ಮತ್ತು ಆ ಜನಾಂಗದವರ ಕುರಿತು ವಿವಿಧ ಐತಿಹ್ಯಗಳನ್ನು ಕೇಳಿದ್ದರು. ಕುರ್‌ಆನ್‌ನಲ್ಲಿರುವ, ಲೂತ್(ಅ)ರ ಪ್ರಸ್ತಾಪವಿರುವ ಕೆಲವು ವಚನಗಳು ಇಲ್ಲಿವೆ;

7:80-84/11:77:83/15:58-77/21:71/21:74,75/26:160-175/27:54-59/29:28-30/29:3335/37:133-138/51:32-37/54:33-39/66:10.

ಲೂತ್(ಅ)ರ ಜನಾಂಗದವರು ಹಲವು ಸಾಮೂಹಿಕ ಅನಾಚಾರಗಳಲ್ಲಿ ನಿರತರಾಗಿದ್ದರು. ಮುಖ್ಯವಾಗಿ ಅವರು ಎಸಗುತ್ತಿದ್ದ ಮೂರು ಘೋರ ಅಪರಾಧಗಳನ್ನು ಕುರ್‌ಆನ್‌ನಲ್ಲಿ ಪ್ರಸ್ತಾಪಿಸಲಾಗಿದೆ;

1. ಸಲಿಂಗಕಾಮ 2. ಪ್ರಯಾಣಿಕರು ಅಥವಾ ಅಪರಿಚಿತರ ದರೋಡೆ ಮತ್ತು 3. ಸಭೆ ಸಮಾರಂಭಗಳಲ್ಲಿ ಬಹಿರಂಗವಾಗಿ ಅಶ್ಲೀಲ ಹಾಗೂ ಅನೈತಿಕ ಚಟುವಟಿಕೆ.

ಲೂತ್ (ಅ) ಈ ಕೃತ್ಯಗಳನ್ನು ಉಗ್ರವಾಗಿ ಖಂಡಿಸಿದರು ಹಾಗೂ ತಮ್ಮ ಜನಾಂಗವನ್ನು ಈ ಅನಾಚಾರಗಳಿಂದ ರಕ್ಷಿಸಲು ಶ್ರಮಿಸಿದರು. ಅವರು ಜನರಿಗೆ ಅಲ್ಲಾಹನ ಆದೇಶಗಳನ್ನು ತಿಳಿಸುವ ಹಾಗೂ ಪ್ರಸ್ತುತ ದುಷ್ಟ ಕೃತ್ಯಗಳ ಪರಿಣಾಮಗಳನ್ನು ನೆನಪಿಸುವ ಮೂಲಕ, ಅವರನ್ನು ಸರಿದಾರಿಗೆ ತರಲು ಸಾಕಷ್ಟು ಹೆಣಗಾಡಿದರು. ಆದರೆ ಜನರು ಅವರ ಉಪದೇಶವನ್ನು ಸ್ವೀಕರಿಸುವ ಬದಲು ಲೂತ್‌ರನ್ನೇ ಮೂದಲಿಸಲು ಆರಂಭಿಸಿದರು. ನೀವು ನಿಜಕ್ಕೂ ಪ್ರವಾದಿಯಾಗಿದ್ದರೆ ನಮ್ಮ ಮೇಲೆ ದೇವ ಪ್ರಕೋಪವನ್ನು ಎರಗಿಸಿ ನೋಡಿ ಎಂದು ಅವರಿಗೆ ಸವಾಲುಹಾಕಿದರು. ಕೊನೆಗೆ ಜನರು, ಲೂತ್‌ರ ಮನೆಗೆ ಅತಿಥಿಗಳ ರೂಪದಲ್ಲಿ ಬಂದಿದ್ದ ಮಲಕ್‌ಗಳನ್ನೂ ಅಪಮಾನಿಸಲು ಹೊರಟರು. ಅಲ್ಲಾಹನ ಆದೇಶ ಪ್ರಕಾರ ಲೂತರು ಅದೇ ದಿನ ರಾತ್ರಿ ತಮ್ಮ ನಿಷ್ಠ ಅನುಯಾಯಿಗಳೊಂದಿಗೆ ಊರು ಬಿಟ್ಟು ಹೊರಟು ಹೋದರು. ಹಠಾತ್ತನೆ ಆ ನಾಡಿನ ಮೇಲೆ ಅಲ್ಲಾಹನ ಶಿಕ್ಷೆಯು ಬಂದೆರಗಿತು. ಮೊದಲು ಕಲ್ಲಿನ ಮಳೆಯ ರೂಪದಲ್ಲಿದ್ದ ಆ ಶಿಕ್ಷೆಯು ಆ ನಾಡನ್ನು ಬುಡಮೇಲುಗೊಳಿಸಿ ಅದರಲ್ಲಿದ್ದ ಎಲ್ಲ ದುಷ್ಟರನ್ನು ಸಂಪೂರ್ಣ ನಾಶ ಮಾಡಿ ಬಿಟ್ಟಿತು. ಲೂತ್‌ರ ಪತ್ನಿ ಕೂಡಾ ಆ ನಾಡಿನ ದುಷ್ಟರ ಸಾಲಿಗೆ ಸೇರಿದ್ದರಿಂದ ಇತರರ ಜೊತೆ ಆಕೆಯೂ ನಾಶವಾದಳು.

 8. ಇಸ್ಮಾಈಲ್(): ಇವರು ಪ್ರವಾದಿ ಇಬ್ರಾಹೀಮ್(ಅ)ರ ಪುತ್ರರು. ಪ್ರವಾದಿ ಮುಹಮ್ಮದ್(ಸ) ಜನಿಸಿದ್ದು ಇವರದೇ ಸಂತತಿಯಲ್ಲಿ. ಇಸ್ಮಾಈಲರು ಹುಟ್ಟಿದ ಕೆಲವೇ ದಿನಗಳ ಬಳಿಕ ಅಲ್ಲಾಹನ ಸೂಚನೆಯಂತೆ ಇವರ ತಂದೆ ಇವರನ್ನು ಹಾಗೂ ಇವರ ಮಾತೆ ಹಾಜಿರಾರನ್ನು ಮಕ್ಕಃದ ನಿರ್ಜನ ಮರಳುಗಾಡಿನಲ್ಲಿ ಬಿಟ್ಟು ಬಂದಿದ್ದರು. ತಮ್ಮ ಯವ್ವನದ ದಿನಗಳಲ್ಲಿ ಅವರು, ತಂದೆಯ ಜೊತೆ ಪವಿತ್ರ ಕಅ್ಬ ಕಟ್ಟಡದ ನಿರ್ಮಾಣದ ಕಾರ್ಯದಲ್ಲಿ ಭಾಗವಹಿಸಿದ್ದರು. ನಿನ್ನನ್ನು ಬಲಿ ನೀಡುತ್ತಿರುವುದಾಗಿ ನಾನು ಕನಸು ಕಂಡಿದ್ದೇನೆಂದು ಇಬ್ರಾಹೀಮರು ಹೇಳಿದಾಗ ಅದನ್ನು ದೇವಾದೇಶವೆಂದು ಪರಿಗಣಿಸಿ, ಬಲಿಯಾಗಲು ಸನ್ನದ್ಧರಾಗಿ ಬಿಟ್ಟವರು ಎಂಬ ಕಾರಣಕ್ಕಾಗಿ ಅವರನ್ನು ‘ಝಬೀಹುಲ್ಲಾಹ್’ (ಅಲ್ಲಾಹನಿಗಾಗಿ ಬಲಿಯಾಗುವವರು) ಎಂದೂ ಕರೆಯುತ್ತಾರೆ. ಹೆಚ್ಚಿನ ವಿವರಗಳಿಗೆ ನೋಡಿರಿ: ಕುರ್‌ಆನ್ 2:125 ರಿಂದ 129/ 2:133/ 6: 86/ 19: 54,55/ 21:85,86/ 37: 101ರಿಂದ 107/ 38:48.

9. ಇಸ್ಹಾಕ್(): ಅವರು ಇಬ್ರಾಹೀಮ್(ಅ) ಇನ್ನೊಬ್ಬ ಪುತ್ರ ಮತ್ತು ಯಅ್ಕೂಬ್(ಅ)ರ ತಂದೆ. ಇಬ್ರಾಹೀಮರು ಮತ್ತವರ ಪತ್ನಿ ತೀರಾ ವೃದ್ಧಾಪ್ಯದಲ್ಲಿದ್ದಾಗ, ಅವರಿಗೆ ಇಸ್‌ಹಾಕ್ ಎಂಬ ಪುತ್ರನು ಜನಿಸಲಿರುವ ಶುಭವಾರ್ತೆ ಅಲ್ಲಾಹನ ವತಿಯಿಂದ ದೊರೆತಿತ್ತು. ಜೊತೆಗೇ ಇಸ್ಹಾಕ್‌ರಿಗೆ, ಯಅ್ಕೂಬ್ ಎಂಬ ಪುತ್ರ ಜನಿಸುವನೆಂಬ ಶುಭವಾರ್ತೆಯನ್ನೂ ನೀಡಲಾಗಿತ್ತು. ಕುರ್‌ಆನಿನಲ್ಲಿ ಇವರನ್ನು ತುಂಬಾ ಸಜ್ಜನ ಹಾಗೂ ಬುದ್ಧಿವಂತ ದಾಸನೆಂದು ಹೊಗಳಲಾಗಿದೆ. ಇವರ ಸಂತತಿಯಲ್ಲಿ ಅನೇಕ ಪ್ರವಾದಿಗಳು ಹಾಗೂ ದೇವ ದೂತರು ಜನಿಸಿದರು. ಹೆಚ್ಚಿನ ವಿವರಗಳಿಗಾಗಿ ನೋಡಿರಿ: 2:133, 6:85, 12:6/ 21:72,73/ 37:112,113/ 38: 45 ರಿಂದ 49, 51:28ರಿಂದ30.

10. ಯಅ್ಕೂಬ್(): ಅವರು ಪ್ರವಾದಿ ಇಬ್ರಾಹೀಮ್(ಅ)ರ ಮೊಮ್ಮಗ ಹಾಗೂ ಯೂಸುಫ್(ಅ)ರ ತಂದೆ. ಅವರನ್ನು ಇಸ್ರಾಈಲರ ಸಂತತಿಯ ಕಡೆಗೆ ದೂತರಾಗಿ ನೇಮಿಸಲಾಗಿತ್ತು. ಇವರ ಕುರಿತು ವಿವರಗಳಿಗೆ ನೋಡಿರಿ: 2:133/ 3: 93/ 12: 4ರಿಂದ 20/ 12:63 ರಿಂದ 70, 76, 83 ರಿಂದ 87, 94ರಿಂದ 98/ 21: 72,73/ 38: 45 ರಿಂದ 47.

11. ಯೂಸುಫ್(): ಅವರು ಯಅ್ಕೂಬ್(ರ)ರ ಪುತ್ರ. ಅವರು ಒಬ್ಬ ಪ್ರವಾದಿಯ ಮನೆಯಲ್ಲಿ, ಅವರ ಪುತ್ರನಾಗಿ ಜನಿಸಿದರೂ ತಮ್ಮ ಮಲ ಸಹೋದರರ ಅಸೂಯೆಗೆ ಗುರಿಯಾಗಿ, ಅವರ ಸಂಚುಗಳಿಗೆ ತುತ್ತಾಗಿ, ಬಾಲ್ಯದಲ್ಲೇ ಸಾಕಷ್ಟು ಸಂಕಷ್ಟಗಳನ್ನು ಅನುಭವಿಸಬೇಕಾಯಿತು. ಆದರೆ ಅಲ್ಲಾಹನು ಹೆಜ್ಜೆ ಹೆಜ್ಜೆಗೂ ಅವರನ್ನು ರಕ್ಷಿಸಿದನು. ತಮ್ಮ ಅಸಾಮಾನ್ಯ ಸೌಂದರ್ಯಕ್ಕೆ ಖ್ಯಾತರಾಗಿದ್ದ ಯೂಸುಫ್(ಅ)ರಿಗೆ ಸ್ವಪ್ನಗಳ ವಿಶ್ಲೇಷಣೆಯಲ್ಲಿ ಅನುಪಮ ಪಾಂಡಿತ್ಯವಿತ್ತು. ಇವರು ಸುಮಾರು ಕ್ರಿ.ಪೂ 1800 ರಲ್ಲಿ ಜೆರುಸಲೇಮ್ ಸಮೀಪದ ಜಬರೂನ್ ಎಂಬಲ್ಲಿ ಜನಿಸಿದ್ದರು. ಒಂದು ಹಂತದಲ್ಲಿ, ಬಾವಿಗೆ ಎಸೆಯಲ್ಪಟ್ಟಿದ್ದ ಹಾಗೂ ಇನ್ನೊಮ್ಮೆ ತಾನು ಮಾಡದಿದ್ದ ತಪ್ಪಿಗಾಗಿ ಕೈದಿಯಾಗಿ ಸೆರೆಮನೆ ಸೇರಿದ್ದ ಇವರು, ಬದುಕಿನ ಇನ್ನೊಂದು ಹಂತದಲ್ಲಿ ಈಜಿಪ್ತ್ ದೇಶದ ಆಡಳಿತಗಾರರಾದರು. ತಮ್ಮ ವಿರುದ್ಧ ಸಂಚು ಹೂಡಿದ್ದ ತಮ್ಮ ಸಹೋದರರನ್ನು ಕ್ಷಮಿಸಿದರು. ಕುರ್‌ಆನಿನಲ್ಲಿ ಬೇರಾವುದೇ ಪ್ರವಾದಿಗೆ ಹೋಲಿಸಿದರೆ ಯೂಸುಫ್(ಅ)ರ ಬದುಕಿನ ಕಥೆಯನ್ನು ಹಾಗೂ ಅದರಲ್ಲಿನ ಪಾಠಗಳನ್ನು ಹೆಚ್ಚು ವಿಸ್ತಾರವಾಗಿ ಪ್ರಸ್ತಾಪಿಸಲಾಗಿದೆ. ಉದಾ: 6:84/ 12: 3 ರಿಂದ 101/ 23: 34.

 12.ಅಯ್ಯೂಬ್(): ಅವರು ಪ್ರವಾದಿ ಇಬ್ರಾಹೀಮ್(ಅ) ಹಾಗೂ ಇಸ್‌ಹಾಕ್(ಅ)ರ ಸಂತತಿಯವರಾಗಿದ್ದರು. ಕೆಲವು ಇತಿಹಾಸಕಾರರ ಪ್ರಕಾರ ಅವರು ಬಹುತೇಕ ಯೂಸುಫ್(ಅ)ರ ಸಮಕಾಲೀನರಾಗಿದ್ದರು ಮತ್ತು ಫಲಸ್ತೀನ್‌ನ ಪಶ್ಚಿಮ ಭಾಗದಲ್ಲಿ ಔಝ್ ಎಂಬ ನಾಡಿನಲ್ಲಿ ವಾಸವಾಗಿದ್ದರು. ಅಲ್ಲಾಹನು ಅವರಿಗೆ ಎಲ್ಲ ಬಗೆಯ ಸಂಪತ್ಸೌಕರ್ಯಗಳನ್ನು ದಯಪಾಲಿಸಿದ್ದನು. ಒಂದು ಹಂತದಲ್ಲಿ ಅವರು ತೀರಾ ನಿಗೂಢ ಹಾಗೂ ಸಂಕಟದಾಯಕವಾಗಿದ್ದ ರೋಗವೊಂದಕ್ಕೆ ತುತ್ತಾದರು. ಬಹಳ ದೀರ್ಘ ಕಾಲ ಅವರನ್ನು ಸತತ ಬಾಧಿಸಿದ ಈ ರೋಗದ ಅವಧಿಯು ಅವರ ಪಾಲಿಗೆ ಒಂದು ಕಠಿಣ ಪರೀಕ್ಷೆಯ ಅವಧಿಯಾಗಿತ್ತು. ಅವರು ಈ ಅವಧಿಯುದ್ದಕ್ಕೂ ಅಲ್ಲಾಹನಿಂದ ನಿರಾಶರಾಗದೆ, ಅತ್ಯುನ್ನತ ಮಟ್ಟದ ಸಹನಶೀಲತೆ, ಕೃತಜ್ಞತಾಭಾವ ಹಾಗೂ ಆಶಾವಾದವನ್ನು ಪ್ರದರ್ಶಿಸಿದರು. ದಣಿಯದೆ ಪ್ರಾರ್ಥಿಸಿದರು. ಕೊನೆಗೆ ಅಲ್ಲಾಹನು ಅವರಿಗೆ ಆ ವ್ಯಾಧಿಯಿಂದ ಸಂಪೂರ್ಣ ಮುಕ್ತಿ ನೀಡಿದನು. ಕುರ್‌ಆನಿನಲ್ಲಿ ಅವರ ಸಹನೆಯನ್ನು ವಿಶೇಷವಾಗಿ ಪ್ರಸ್ತಾಪಿಸಿ, ಅವರನ್ನು, ಶ್ರೇಷ್ಠ ದಾಸರೆಂದು ಹೊಗಳಲಾಗಿದೆ. ನೋಡಿರಿ: 4:163/ 6:84/ 21:83,84 /38: 41 ರಿಂದ 44.

13. ಶುಐಬ್(): ಅವರು, ಪ್ರವಾದಿ ಮೂಸಾ(ಅ)ರ ಸಮಕಾಲೀನರು. ಅವರನ್ನು ಕೆಂಪು ಸಮುದ್ರದ ತೀರದಲ್ಲಿದ್ದ ಮದಿಯನ್‌ ಎಂಬ ಒಂದು ಅರಬ್ ನಾಡಿನೆಡೆಗೆ ದೇವದೂತರಾಗಿ ನೇಮಿಸಲಾಗಿತ್ತು. ಅಲ್ಲಿನ ಜನತೆ ಒಂದೆಡೆ ಸಾಮೂಹಿಕವಾಗಿ ದೇವರ ವಿಷಯದಲ್ಲಿ ಹಲವು ಬಗೆಯ ಮೌಢ್ಯಗಳಿಗೆ ತುತ್ತಾಗಿದ್ದರೆ ಇನ್ನೊಂದೆಡೆ ಅಲ್ಲಿನ ಅನುಕೂಲಸ್ಥ ವರ್ಗದಲ್ಲಿ ಅಹಂಕಾರ, ವ್ಯವಹಾರದಲ್ಲಿ ವಂಚನೆ, ಅಳತೆ -ತೂಕದಲ್ಲಿ ಮೋಸ, ನಕಲಿ ನಾಣ್ಯಗಳ ಚಲಾವಣೆ, ಹೆದ್ದಾರಿ ದರೋಡೆ ಮುಂತಾದ ಹಲವು ದುರ್ಗುಣಗಳು ವ್ಯಾಪಕವಾಗಿದ್ದವು. ಶುಐಬರು ಆ ಸಮಾಜದ ಸುಧಾರಣೆಗೆ ಅವಿರತ ಶ್ರಮಿಸಿದರು. ಜನರಿಗೆ ದೇವರ ಕುರಿತಾದ ವಾಸ್ತವಗಳನ್ನು ಪರಿಚಯಿಸಿ, ಆ ದೇವರಿಗೆ ಶರಣಾಗಿ, ಅವನ ಆದೇಶಗಳನ್ನು ಪಾಲಿಸುತ್ತಾ ಸಜ್ಜನರಾಗಿ ಬದುಕುವಂತೆ ಅವರ ಮನವೊಲಿಸಲು ಶ್ರಮಿಸಿದರು. ಆದರೆ ಆ ನಾಡಿನ ಹೆಚ್ಚಿನ ಜನರು ಅವರ ಮಾತನ್ನು ತಿರಸ್ಕರಿಸಿದ್ದು ಮಾತ್ರವಲ್ಲದೆ ಅವರನ್ನು ಹಾಗೂ ಅವರ ಅನುಯಾಯಿಗಳನ್ನು ಗೇಲಿ ಮಾಡಿದರು. ಸಾಲದ್ದಕ್ಕೆ, ನೀವು ಸತ್ಯವಂತರಾಗಿದ್ದರೆ ನಮ್ಮನ್ನು ದೇವರ ಶಿಕ್ಷೆಗೆ ಗುರಿಪಡಿಸರೆಂದು ಅವರಿಗೆ ಸವಾಲೆಸೆಯಲು ಆರಂಭಿಸಿದರು. ಕೊನೆಗೆ ಅಲ್ಲಾಹನು ಶುಐಬ್(ಅ) ಮತ್ತವರ ಅನುಯಾಯಿಗಳನ್ನು ರಕ್ಷಿಸಿ ಆ ನಾಡನ್ನು ಹಾಗೂ ಅದರ ನಿವಾಸಿಗಳನ್ನೆಲ್ಲಾ ನಿರ್ದಯವಾಗಿ ಸರ್ವನಾಶ ಮಾಡಿಬಿಟ್ಟನು. ನೋಡಿರಿ: 7: 85ರಿಂದ 93/11:84ರಿಂದ 95/15:78,79/26:172 ರಿಂದ 190 / 29:36,3714.

ಮೂಸಾ(): ಈಜಿಪ್ತ್ ದೇಶದ ಕ್ರೂರ ದೊರೆ ಫಿರ್‌ಔನ್‌ನ ಆಸ್ಥಾನದಲ್ಲೇ ಅವನಿಗೆ ಸವಾಲೆಸೆದು, ಅವನ ಅಮಾನುಷ ದಬ್ಬಾಳಿಕೆಯಿಂದ ಇಸ್ರಾಈಲರ ಜನಾಂಗವನ್ನು ವಿಮೋಚಿಸಿದ ಕೀರ್ತಿ ಮೂಸಾ(ಅ)ರಿಗೆ ಸೇರುತ್ತದೆ. ಹೆಚ್ಚಿನ ಇತಿಹಾಸಕಾರರ ಪ್ರಕಾರ ಅವರು ಸುಮಾರು ಕ್ರಿ.ಪೂ. 16ನೇ ಶತಮಾನದವರು. ಕುರ್‌ಆನಿನಲ್ಲಿ 136 ಬಾರಿ ಅವರ ಹೆಸರನ್ನು ಪ್ರಸ್ತಾಪಿಸಲಾಗಿದೆ.   

 ಮುಂದೆ ನಿನ್ನ ಸಾಮ್ರಾಜ್ಯವನ್ನು ಕೊನೆಗಾಣಿಸಲಿರುವ ಒಬ್ಬ ಶತ್ರು ಈ ವರ್ಷ ಇಸ್ರಾಈಲ್ ಜನಾಂಗದಲ್ಲಿ ಜನಿಸಲಿದ್ದಾನೆ ಎಂದು ಕೆಲವರು ಫಿರ್‌ಔನನಿಗೆ ಎಚ್ಚರಿಕೆ ನೀಡಿದ್ದ ವರ್ಷವೇ ಮೂಸಾ ಜನಿಸಿದ್ದರು. ಆ ವರ್ಷ ಇಸ್ರಾಈಲ್ ವಂಶಜರಲ್ಲಿ ಜನಿಸುವ ಎಲ್ಲ ಗಂಡು ಮಕ್ಕಳನ್ನು ವಧಿಸಿ ಬಿಡಬೇಕೆಂದು ತನ್ನ ಯೋಧರಿಗೆ ಆದೇಶಿಸಿದ್ದನು. ಈ ಹಿನ್ನೆಲೆಯಲ್ಲಿ ನವಜಾತ ಮೂಸಾರ ತಾಯಿ ತನ್ನ ಮಗುವಿನ ಜೀವ ಉಳಿಸುವುದು ಹೇಗೆಂದು ಚಿಂತಾಕ್ರಾಂತರಾಗಿದ್ದರು. ಕೊನೆಗೆ ದಿವ್ಯ ಮಾರ್ಗದರ್ಶನದಂತೆ, ಮಗುವನ್ನು ಒಂದು ತೊಟ್ಟಿಲಲ್ಲಿ ಹಾಕಿ ನದಿಯಲ್ಲಿ ತೇಲಿಬಿಟ್ಟರು ಮತ್ತು ಆ ಮಗು, ತನ್ನನ್ನು ಕೊಲ್ಲ ಹೊರಟಿದ್ದ ಫಿರ್‌ಔನನ ಅರಮನೆಯನ್ನು ಸೇರಿತು. ಸಾಕ್ಷಾತ್ ಫಿರ್‌ಔನ್ ಮತ್ತವನ ಪತ್ನಿಯೇ ಆ ಮಗುವಿನ ಪೋಷಕರಾದರು. ಮೂಸಾ ಅಲ್ಲೇ ಬೆಳೆದು ಯುವಕರಾದರು. ಯವ್ವನದ ದಿನಗಳಲ್ಲಿ ಆಕಸ್ಮಿಕವಾಗಿ ಅವರಿಂದ ಒಂದು ಕೊಲೆ ಸಂಭವಿಸಿತು ಮತ್ತು ಅವರು ಈಜಿಪ್ತ್ ದೇಶವನ್ನು ತೊರೆದು ಹೊರ ಹೋಗ ಬೇಕಾಯಿತು. ಆ ಅವಧಿಲ್ಲಿ ಅಲ್ಲಾಹನು ಅವರನ್ನು ತನ್ನ ದೂತರಾಗಿ ನೇಮಿಸಿದನು ಮತ್ತು ಅವರು ನಿಜಕ್ಕೂ ದೇವ ದೂತರೆಂದು ಯಾರಿಗಾದರೂ ಮನವರಿಕೆ ಮಾಡಿಸುವಂತಹ ಹಲವು ಬಲಿಷ್ಠ ಪುರಾವೆಗಳನ್ನು ಹಾಗೂ ವಿಶೇಷ ಸಾಮರ್ಥ್ಯಗಳನ್ನು ಅವರಿಗೆ ದಯಪಾಲಿಸಿದನು. ಅವರ ಸಹೋದರ ಹಾರೂನ್(ಅ)ರನ್ನು ಅವರ ಸಹಾಯಕರಾಗಿ ನೇಮಿಸಿದನು. ಅವರು ಫಿರ್‌ಔನನ ಆಸ್ಥಾನದಲ್ಲಿ ನಿಂತು, ತಾನೇ ದೇವರೆಂದು ಹೇಳಿಕೊಳ್ಳುತ್ತಿದ್ದ ಫಿರ್‌ಔನನ ಪ್ರಭುತ್ವವನ್ನು ಧಿಕ್ಕರಿಸಿದರು. ಬಹಿರಂಗವಾಗಿ, ಅಲ್ಲಾಹನನ್ನು ಪರಿಚಯಿಸಿ, ಅವನಿಗೆ ಶರಣಾಗುವುದೇ ಎಲ್ಲರ ವಿಜಯಕ್ಕಿರುವ ದಾರಿ ಎಂದು ಘೋಷಿಸಿದರು. ಸಂಪೂರ್ಣ ಇಸ್ರಾಈಲಿ ಜನಾಂಗವನ್ನು ದಾಸ್ಯಕ್ಕೆ ಸಿಲುಕಿಸಿದ್ದ ಫಿರ್‌ಔನನ ದಬ್ಬಾಳಿಕೆಯ ವಿರುದ್ಧ ಸಮರ ಘೋಷಿಸಿದ ಮೂಸಾ(ಅ) ಇಸ್ರಾಈಲಿ ಜನಾಂಗವನ್ನು ಮುಕ್ತಗೊಳಿಸಬೇಕೆಂದು ಫಿರ್‌ಔನನಿಗೆ ಕರೆ ನೀಡಿದರು. ಫಿರ್‌ಔನ್ ಮತ್ತವನ ಆಸ್ಥಾನಿಗರು ಮೂಸಾ(ಅ)ರನ್ನು ವಿವಿಧ ರೀತಿಯಲ್ಲಿ ಅಪಮಾನಿಸಲು ಪ್ರಯತ್ನಿಸಿದರು. ಅವರನ್ನು ಮಾಂತ್ರಿಕ ಹಾಗೂ ಜಾದೂಗಾರನೆಂದು ಮೂದಲಿಸಿದರು. ಅವರನ್ನು ಸೋಲಿಸಲು ಬೇರೆ ಬೇರೆ ನಾಡುಗಳಿಂದ ನುರಿತ ಜಾದೂಗಾರರನ್ನು ತರಿಸಿ, ಮೂಸಾ(ಅ)ರಿಗೆ ಬಹಿರಂಗ ಸವಾಲೆಸೆದರು. ಆದರೆ ಅವರ ಯಾವ ಸಂಚೂ ಫಲಿಸಲಿಲ್ಲ. ಮೂಸಾ(ರ)ರ ಮುಂದೆ ಸೋಲೊಪ್ಪಿಕೊಂಡ ಆ ಎಲ್ಲ ಮಾಂತ್ರಿಕರು ಮೂಸಾ (ಅ) ರ ಸಂದೇಶವನ್ನು ಸ್ವೀಕರಿಸಿ ಅವರ ನಿಷ್ಠ ಅನುಯಾಯಿಗಳಾಗಿ ಮಾರ್ಪಟ್ಟರು. ಇದರಿಂದಾಗಿ ಹತಾಶರಾದ ಫಿರ್‌ಔನ್ ಮತ್ತು ಅವನ ಬೆಂಬಲಿಗರು ಮೂಸಾ(ಅ)ರ ವಿರುದ್ಧ ಮತ್ತಷ್ಟು ಕೆರಳಿದರು ಮತ್ತು ಆ ಮಾಂತ್ರಿಕರನ್ನು ಹಿಂಸಿಸಿ ವಧಿಸಿ ಬಿಟ್ಟರು. ಹೀಗೆ ಫಿರ್‌ಔನ್ ಮತ್ತವನ ಜನಾಂಗದವರು ಸರಿದಾರಿಗೆ ಬರುವ ಸಾದ್ಯತೆಯೇ ಇಲ್ಲವೆಂಬುದು ಖಚಿತವಾದಾಗ ಮೂಸಾ(ಅ) ದೇವಾದೇಶ ಪ್ರಕಾರ, ಒಂದು ರಾತ್ರಿ ಇಸ್ರಾಈಲರ ಜನಾಂಗದವರನ್ನು ಕರೆದುಕೊಂಡು, ಫಿರ್‌ಔನನ ನಾಡಿನಿಂದ ಫಲಸ್ತೀನ್‌ನ ಕಡೆಗೆ ವಲಸೆ ಹೊರಟರು. ಈ ವಿಷಯವನ್ನು ಅರಿತ ಫಿರ್‌ಔನ್ ತನ್ನ ಬೃಹತ್ ಸೇನೆಯೊಂದಿಗೆ ಅವರನ್ನು ಹಿಂಬಾಲಿಸಿದನು. ದಾರಿಯಲ್ಲಿ ಕೆಂಪು ಸಮುದ್ರವನ್ನು ದಾಟಬೇಕಾಗಿ ಬಂದಾಗ ಮೂಸಾ(ಅ)ರ ಅನುಯಾಯಿಗಳು ಅಂಜಿ, ತಾವಿನ್ನು ತಮ್ಮನ್ನು ಹಿಂಬಾಲಿಸಿ ಬರುತ್ತಿರುವ ಶತ್ರು ಸೇನೆಗೆ ಬಲಿಯಾಗುವುದು ಖಚಿತವೆಂದುಕೊಂಡರು. ಆದರೆ ದೇವಾದೇಶದಂತೆ ಸಮುದ್ರವು ಅವರ ಪಾಲಿಗೆ ದಾರಿ ಬಿಟ್ಟುಕೊಟ್ಟಿತು ಮತ್ತು ಅವರೆಲ್ಲಾ ಸುರಕ್ಷಿತವಾಗಿ ಸಮುದ್ರದ ಇನ್ನೊಂದು ದಡವನ್ನು ತಲುಪಿದರು. ಅತ್ತ, ಅವರನ್ನು ಬೆಂಬತ್ತಿ ಬಂದು ನೀರಿಗಿಳಿದ ಫಿರ್‌ಔನ್ ಮತ್ತವನ ಸೇನೆಯು ಸಮುದ್ರದ ನಡುಭಾಗವನ್ನು ತಲುಪಿದಾಗ ಸಮುದ್ರದ ನೀರು ಎಲ್ಲ ದಿಕ್ಕುಗಳಿಂದ ಅವರನ್ನು ಆವರಿಸಿ ಅವರೆಲ್ಲರನ್ನೂ ಮುಳುಗಿಸಿ ಬಿಟ್ಟಿತು. ಮುಂದೆ ಮೂಸಾ(ಅ) ಮತ್ತು ಹಾರೂನ್(ಅ)ರ ಬದುಕು ಇಸ್ರಾಈಲರ ಜನಾಂಗವನ್ನು ಸಂಸ್ಕರಿಸುವ ಕಾಯಕಕ್ಕೆ ಮೀಸಲಾಯಿತು. ಆ ಅವಧಿಯಲ್ಲಿ ಅವರು ಸ್ವತಃ ತಮ್ಮದೇ ಜನಾಂಗದವರ ಕಡೆಯಿಂದ ಎಲ್ಲ ಬಗೆಯ ಕಿರುಕುಳಗಳನ್ನು ಎದುರಿಸಬೇಕಾಯಿತು. ಈ ಕುರಿತಂತೆ ಹಲವು ಪ್ರಮುಖ ಸನ್ನಿವೇಶಗಳನ್ನು ಕುರ್‌ಆನಿನಲ್ಲಿ ಪ್ರಸ್ತಾಪಿಸಲಾಗಿದೆ. ಮೂಸಾ(ಅ)ರ ಕುರಿತು ಕುರ್‌ಆನ್‌ನಲ್ಲಿರುವ ಕೆಲವು ಹೇಳಿಕೆಗಳಿಗಾಗಿ ನೋಡಿರಿ: 2:40ರಿಂದ 76/ 2: 83ರಿಂದ 87,92, 93, 108/ 6:21ರಿಂದ 26, 70, 71/ 6:84, 155/ 7:103ರಿಂದ 156, 159 ರಿಂದ 168/ 8:54/ 10:75ರಿಂದ93/

 11:96, 99, 110/ 14:5 ರಿಂದ 8/ 16:124/ 17:2ರಿಂದ 6, 101 ರಿಂದ 104/ 19:51ರಿಂದ 53/ 20: 9 ರಿಂದ 98/21:48,49/ 23:45ರಿಂದ49/ 25:35,36/ 26:11ರಿಂದ 67/27: 7ರಿಂದ 14/ 28: 3ರಿಂದ 43/ 29:39/32:23,24/ 33:7/ 37:114 ರಿಂದ 122/ 40:23ರಿಂದ 33, 36ರಿಂದ 54/ 43:46 ರಿಂದ 56/ 44:17ರಿಂದ 33/ 45:16, 17/ 51: 38 ರಿಂದ 40 / 54:41, 42 / 61: 5 /66:11 /73:15, 16/79:15 ರಿಂದ 26.

15. ಇಲ್ಯಾಸ್(): ಕುರ್‌ಆನಿನಲ್ಲಿ ಅವರನ್ನು ಓರ್ವ ದೇವದೂತರಾಗಿ ಪರಿಚಯಿಸಲಾಗಿದೆ. ಎರಡು ಕಡೆ (6: 85/ 37:123) ಅವರನ್ನು ಇಲ್ಯಾಸ್ ಎಂದೂ ಒಂದು ಕಡೆ (37:130) ಇಲ್ಯಾಸೀನ್ ಎಂದೂ ಹೆಸರಿಸಲಾಗಿದೆ. ಅವರ ಕಾಲ ಅಥವಾ ಅವರು ಸತ್ಯ ಪ್ರಸಾರ ನಡೆಸಿದ ಪ್ರದೇಶದ ಕುರಿತು ಕುರ್‌ಆನಿನಲ್ಲಿ ವಿವರಗಳಿಲ್ಲ. ಕೆಲವು ಇತಿಹಾಸಕಾರರ ಅಂದಾಜಿನಂತೆ ಅವರು ಸುಮಾರು ಕ್ರಿಸ್ತ ಪೂರ್ವ 9ನೇ ಶತಮಾನದಲ್ಲಿ ಜನಿಸಿದ್ದರು ಮತ್ತು ಸಿರಿಯಾದ ಪಶ್ಚಿಮ ಪ್ರದೇಶದಲ್ಲಿ ಸಕ್ರಿಯರಾಗಿದ್ದರು. ಕುರ್‌ಆನಿನಲ್ಲಿ ಅವರ ಪ್ರಸ್ತಾಪವಿರುವ ವಚನಗಳು: 6:85ರಿಂದ88 / 37: 122 ರಿಂದ 132.

16. ದಾವೂದ್(): ತಮ್ಮ ಎಳೆಯ ವಯಸಿನಲ್ಲಿ ಅವರು ತಾಲೂತ್ ಎಂಬ ಇಸ್ರಾಈಲ್ ಜನಾಂಗದ ದೊರೆಯ ಸೇನೆಯಲ್ಲಿ ಒಬ್ಬ ಯೋಧರಾಗಿದ್ದರು. ತಮ್ಮ ಅಸಾಮಾನ್ಯ ಶೌರ್ಯದಿಂದಾಗಿ ಖ್ಯಾತರಾದರು. ಇಸ್ರಾಈಲರ ಜನಾಂಗದ ಶತ್ರುವಾಗಿದ್ದ ಜಾಲೂತ್ನ ಸೇನೆಯ ವಿರುದ್ಧ ಹೋರಾಟದಲ್ಲಿ ದಾವೂದರು ನಿರ್ಣಾಯಕ ಪಾತ್ರ ವಹಿಸಿದ್ದರು. ಭಾರೀ ಗಾತ್ರದ ಹಾಗೂ ಎಲ್ಲರ ಪಾಲಿಗೆ ಸಿಂಹ ಸ್ವಪ್ನನಾಗಿದ್ದ ಜಾಲೂತನನ್ನು ದಾವೂದರೇ ಸಂಹರಿಸಿದರು. ತಾಲೂತರ ನಿಧನಾನಂತರ ಇಸ್ರಾಈಲರ ಜನಾಂಗದವರ ಪೈಕಿ ಮೊದಲು ಯಹೂದಿ ಪಂಗಡದವರು ದಾವೂದ್(ಅ)ರನ್ನು ತಮ್ಮ ದೊರೆಯಾಗಿ ಆರಿಸಿಕೊಂಡರು. ಕ್ರಮೇಣ ಇಸ್ರಾಈಲರ ಇತರ ಪಂಗಡಗಳ ಜನರೂ ಅವರ ನಾಯಕತ್ವವನ್ನು ಅಂಗೀಕರಿಸಿದರು. ಜೆರುಸಲೇಮ್ ಅಥವಾ ಯರುಶಲಮ್ ಅನ್ನು ಶತ್ರುಗಳ ಕಪಿ ಮುಷ್ಠಿಯಿಂದ ವಿಮೋಚಿಸಿದ ಖ್ಯಾತಿ ಅವರಿಗೆ ಸಲ್ಲುತ್ತದೆ. ಅವರ ಆಡಳಿತಾವಧಿಯನ್ನು ಇಸ್ರಾಈಲ್ ಜನಾಂಗದವರು ತಮ್ಮ ಇತಿಹಾಸದ ಸುವರ್ಣಯುಗವೆಂದು ಪರಿಗಣಿಸುತ್ತಾರೆ. ಅಲ್ಲಾಹನು ಅವರನ್ನು ತನ್ನ ದೂತನಾಗಿ ನೇಮಿಸಿ ಅವರಿಗೆ ಝಬೂರ್ ಗ್ರಂಥವನ್ನು ನೀಡಿದ್ದಲ್ಲದೆ, ತುಂಬಾ ಸುಶ್ರಾವ್ಯ ಧ್ವನಿಯನ್ನು ಹಾಗೂ ಉಕ್ಕಿನಿಂದ ವಿವಿಧ ವಸ್ತುಗಳನ್ನು ತಯಾರಿಸುವ ಕಲೆಯನ್ನು ದಯಪಾಲಿಸಿದ್ದನು. ಕುರ್‌ಆನಿನಲ್ಲಿ ಅವರ ಪ್ರಸ್ತಾಪವಿರುವ ಕೆಲವು ಸ್ಥಳಗಳು: 2:251/ 4: 163/ 5:78/ 6:85/ 17:55/ 21:78ರಿಂದ 80/ 27:15/ 34:10,11/ 38:17, 26, 30.

17. ಸುಲೈಮಾನ್(): ಅವರು ಸ್ವತಃ ದೇವ ದೂತರಾಗಿದ್ದರು ಮತ್ತು ದೇವದೂತ ದಾವೂದ್(ಅ)ರ ಪುತ್ರರಾಗಿದ್ದರು. ಅವರ ಮಾನವೀಯ ಕಾಳಜಿ, ವಿದ್ವತ್ತು ಹಾಗೂ ನ್ಯಾಯಪ್ರಜ್ಞೆಯು ಅಸಾಮಾನ್ಯವಾಗಿತ್ತು. ಅಲ್ಲಾಹನು ಅವರಿಗೆ ವಿವಿಧ ಜಾತಿಯ ಪ್ರಾಣಿ -ಪಕ್ಷಿಗಳೊಂದಿಗೆ ನೇರವಾಗಿ ಸಂವಹನ ನಡೆಸುವ ಸಾಮರ್ಥ್ಯವನ್ನು ಕರುಣಿಸಿದ್ದನು. ಹಲವು ಶಕ್ತಿಶಾಲಿ ಜಿನ್ನ್‌ಗಳು ಅವರ ವಶದಲ್ಲಿದ್ದು, ಅವರ ಆಜ್ಞಾಪಾಲನೆ ಮಾಡುತ್ತಿದ್ದವು. ಸುಮಾರು ಕ್ರಿಸ್ತಪೂರ್ವ 10ನೇ ಶತಮಾನದಲ್ಲಿ, ಅವರು ಆಳಿದ ಸಾಮ್ರಾಜ್ಯವು ಒಂದೆಡೆ ಸಿರಿಯಾ, ಫಲಸ್ತೀನ್ ಮತ್ತು ಇರಾಕಿನ ಯೂಫ್ರೆಟಿಸ್ ನದಿಯ ತನಕ ಹಾಗೂ ಪಶ್ಚಿಮ ದಿಕ್ಕಿನಲ್ಲಿ ಈಜಿಪ್ತ್ ದೇಶದ ತನಕ ಹಬ್ಬಿತ್ತು. ಕಥೆ ಕಟ್ಟುವವರು ಅವರ ಕುರಿತು ಹಲವು ಕಥೆಗಳನ್ನು ಕಟ್ಟಿದ್ದಾರೆ. ಕೆಲವರು ಅವರನ್ನು ಭಾರೀ ಸುಖ ಲೋಲುಪನಂತೆ ಚಿತ್ರಿಸಿದ್ದಾರೆ.  ಆದರೆ ಕುರ್‌ಆನ್ ಇತರೆಲ್ಲ ಮಹಾ ಪುರುಷರಂತೆ ಸುಲೈಮಾನರ(ಅ) ವಿಷಯದಲ್ಲೂ ಉತ್ಪ್ರೇಕ್ಷೆ ಹಾಗೂ ಕಲಬೆರಕೆಗಳಿಂದ ಮುಕ್ತವಾದ ವಾಸ್ತವಗಳನ್ನು ಮುಂದಿಟ್ಟಿದೆ. ಅದು ಅವರನ್ನು ಒಬ್ಬ ವಿನಯಶೀಲ, ಸಜ್ಜನ, ನ್ಯಾಯಪರ ಹಾಗೂ ಧರ್ಮನಿಷ್ಠ ವ್ಯಕ್ತಿಯಾಗಿ ಅವರನ್ನು ಚಿತ್ರಿಸಿದೆ. ನೋಡಿರಿ: 2:102/4:163/6:85/ 21:78ರಿಂದ 82/27:15 ರಿಂದ44/34:12ರಿಂದ15/38:30ರಿಂದ40.

18. ಯೂನುಸ್(): ಅವರು ಸುಮಾರು ಕ್ರಿಸ್ತಪೂರ್ವ 8ನೇ ಶತಮಾನದಲ್ಲಿ ಟಿಗ್ರಿಸ್ ನದಿತೀರದಲ್ಲಿದ್ದ ಒಂದು ಸಮುದಾಯದಲ್ಲಿ ಜನಿಸಿದ್ದವರು. ಅಲ್ಲಾಹನು ಅವರನ್ನು ತನ್ನ ದೂತರಾಗಿ ನೇಮಿಸಿ ಆ ಜನಾಂಗವನ್ನು ಸುಧಾರಿಸುವ ಹೊಣೆಗಾರಿಕೆಯನ್ನು ಅವರಿಗೆ ಒಪ್ಪಿಸಿದನು. ಅವರು ತಮ್ಮ ಜನಾಂಗಕ್ಕೆ ಸತ್ಯದ ಬೆಳಕನ್ನು ತಲುಪಿಸಲು ಹಾಗೂ ಅವರನ್ನು ಸಂಸ್ಕರಿಸಲು ಪ್ರಾಮಾಣಿಕವಾಗಿ ಶ್ರಮಿಸಿದರು. ಅದರೆ ಅವರ ಸಮುದಾಯದವರು ಅವರನ್ನು ತಮ್ಮ ಹಿತೈಶಿಯೆಂದು ಅಂಗೀಕರಿಸಲು ಸಿದ್ಧರಿರಲಿಲ್ಲ. ಸರಿದಾರಿಗೆ ಬರದಿದ್ದರೆ ನೀವು ಅಲ್ಲಾಹನ ಶಿಕ್ಷೆಗೆ ಗುರಿಯಾಗುವಿರೆಂದು ಅವರು ಪದೇ ಪದೇ ನೀಡಿದ ಎಚ್ಚರಿಕೆಗೂ ಜನರು ಸೊಪ್ಪು ಹಾಕಲಿಲ್ಲ. ಕೊನೆಗೆ, ಆ ಜನರ ಕಿಡಿಗೇಡಿತನವು ಎಲ್ಲೆ ಮೀರಿದಾಗ, ಅವರ ಮೇಲೆ ಅಲ್ಲಾಹನ ಶಿಕ್ಷೆ ಬಂದೆರಗುವುದು ಖಚಿತವೆಂದು ನಂಬಿದ ಯೂನುಸ್(ಅ), ಶಿಕ್ಷೆಯ ಕೆಲವು ಪ್ರಾಥಮಿಕ ಮುನ್ಸೂಚನೆಗಳನ್ನು ಕಂಡೊಡನೆ, ಅಲ್ಲಾಹನ ಅಪ್ಪಣೆಗೆ ಕಾಯದೆ, ಆ ನಾಡನ್ನು ಬಿಟ್ಟು ಹೊರಟು ಹೋದರು. ಅವರ ಆ ಹೆಜ್ಜೆಯು ನಿರಾಶೆ ಹಾಗೂ ಆತುರದ ಪ್ರತೀಕವಾಗಿತ್ತು.

ಅವರು ಹೊರಟು ಹೋದ ಬಳಿಕ ಆ ನಾಡಿನ ಜನರು ಸತ್ಯವನ್ನು ಮನಗಂಡು, ತಮ್ಮ ಎಲ್ಲ ತಪ್ಪುಗಳಿಗಾಗಿ ಪ್ರಾಮಾಣಿಕವಾಗಿ ಪಶ್ಚಾತ್ತಾಪ ಪಟ್ಟು, ಸತ್ಯಧರ್ಮವನ್ನು ಸ್ವೀಕರಿಸಿದರು. ಅತ್ತ ಯೂನುಸ್(ಅ) ಪ್ರಯಾಣಿಸುತ್ತಿದ್ದ ಹಡಗು, ಕಡಲ ಮಧ್ಯದಲ್ಲಿ ಭಾರೀ ಬಿರುಗಾಳಿಯನ್ನು ಎದುರಿಸಬೇಕಾಯಿತು. ಅ ಕಾಲದಲ್ಲಿ ಚಲಾವಣೆಯಲ್ಲಿದ್ದ ಮೂಢನಂಬಿಕೆಯನುಸಾರ ಹಡಗಿನಲ್ಲಿದ್ದ ಪ್ರಯಾಣಿಕರಲ್ಲೊಬ್ಬರು ಅ ಬಿರುಗಾಳಿಗೆ ಕಾರಣರೆಂದು ತೀರ್ಮಾನಿಸಿ, ಆ ವ್ಯಕ್ತಿ ಯಾರೆಂದು ತೀರ್ಮಾನಿಸಲು ಚೀಟಿ ಎತ್ತಲಾಯಿತು. ಚೀಟಿಯಲ್ಲಿ ಯೂನುಸ್(ಅ)ರ ಹೆಸರು ಬಂದುದರಿಂದ ಅವರನ್ನೇ ಹೊಣೆಗಾರರೆಂದು ಪರಿಗಣಿಸಿ ಕಡಲಿಗೆ ಎಸೆದು ಬಿಡಲಾಯಿತು. ಕಡಲಲ್ಲಿ ಒಂದು ದೊಡ್ಡ ಮೀನು ಅವರನ್ನು ನುಂಗಿತು. (ಈ ಹಿನ್ನೆಲೆಯಲ್ಲೇ ಅವರನ್ನು ಝುನ್ನೂನ್ ಅಥವಾ ಸಾಹಿಬುಲ್ ಹೂತ್ ಅಂದರೆ ಮೀನಿನವರು ಎಂದು ಕರೆಯಲಾಗುತ್ತದೆ). ನಿರಾಶೆ ಹಾಗೂ ಆತುರದಿಂದ ಊರು ಬಿಟ್ಟು ಹೊರಟಿದ್ದ ಯೂನುಸ್(ಅ)ರಿಗೆ ಆಗ ತಮ್ಮ ತಪ್ಪಿನ ಅರಿವಾಗಿ ಅವರು ತಮ್ಮನ್ನು ದೂಷಿಸಿ ಕೊಂಡರು ಹಾಗೂ ಮೀನಿನ ಉದರದಲ್ಲಿ ಅಲ್ಲಾಹನ ಪಾವಿತ್ರವನ್ನು ಜಪಿಸಲಾರಂಭಿಸಿದರು. ಕೊನೆಗೆ ಅಲ್ಲಾಹನು ಅವರನ್ನು ರಕ್ಷಿಸಿ ಸುರಕ್ಷಿತವಾಗಿ ದಡಕ್ಕೆ ತಲುಪಿಸಿದನು. ಮುಂದೆ ಅವರನ್ನು ಬೇರೊಂದು ನಾಡಿಗೆ ದೂತರಾಗಿ ರವಾನಿಸಿದನು. ನೋಡಿರಿ: 4:163/ 6:87/10: 98, 99/21:87, 88/ 37;139 ರಿಂದ 148/ 68:48 ರಿಂದ 50.

19. ಝಕರಿಯ್ಯ(); ಅವರು ಇಸ್ರಾಈಲರ ಗೋತ್ರದವರು ಹಾಗೂ ಈಸಾ(ಅ)ರ ಮಾತೆ ಮರ್ಯಮ್(ಅ)ರ ಪೋಷಕರಾಗಿದ್ದರು. ಮರ್ಯಮ್(ಅ) ಇನ್ನೂ ಎಳೆಯವರಾಗಿದ್ದಾಗಲೇ ಅಲ್ಲಾಹನ ಕಡೆಯಿಂದ ಅವರ ಬಳಿಗೆ ವಿಶೇಷ ಆಹಾರ ಬರುತ್ತಿದ್ದುದನ್ನು ಅವರು ಕಂಡಿದ್ದರು. ಕುರ್‌ಆನಿನಲ್ಲಿ ಅವರನ್ನು ಒಬ್ಬ ಪ್ರವಾದಿಯಾಗಿ ಪರಿಚಯಿಸಲಾಗಿದೆ. ಯಹೂದಿಗಳು ಅವರ ಪ್ರವಾದಿತ್ವವನ್ನು ಅಂಗೀಕರಿಸುವುದಿಲ್ಲ. ಕ್ರೈಸ್ತರೂ ಅವರನ್ನು ಕೇವಲ ಒಬ್ಬ ಸಜ್ಜನನಾಗಿ ಮಾತ್ರ ಗುರುತಿಸುತ್ತಾರೆ. ಝಕರಿಯ್ಯ(ಅ) ರಿಗೆ ಬಹುಕಾಲ ಯಾವುದೇ ಸಂತತಿ ಇರಲಿಲ್ಲ. ಆದರೂ ಅವರು ಅಲ್ಲಾಹನ ಮೇಲೆ ಸಂಪೂರ್ಣ ಭರವಸೆ ಇಟ್ಟು, ತಮ್ಮ ವೃದ್ಧಾಪ್ಯದಲ್ಲೂ, ಸಂತತಿಗಾಗಿ ಪ್ರಾರ್ಥಿಸಿದ್ದರು. ತಮ್ಮ ಪತ್ನಿ ವೃದ್ದೆ ಹಾಗೂ ಬಂಜೆ ಎಂಬುದು ತಿಳಿದಿದ್ದರೂ ಅವರು ನಿರಾಶರಾಗಿರಲಿಲ್ಲ. ಅವರ ಆ ಪ್ರಾರ್ಥನೆಗಳಿಗೆ ಉತ್ತರವಾಗಿ ಅಲ್ಲಾಹನು ಅವರಿಗೆ ಯಹ್ಯಾ(ಅ)ರಂತಹ ಬುದ್ಧಿವಂತ ಹಾಗೂ ಸುಶೀಲ ಸಂತಾನವನ್ನು ದಯಪಾಲಿಸಿದ್ದನು. ವಿವರಗಳಿಗೆ ನೋಡಿರಿ: 3:37ರಿಂದ 41/ 6:85/ 19:2ರಿಂದ 11/ 21:90.

20. ಯಹ್ಯಾ(); ಅವರು ಪ್ರವಾದಿ ಝಕರಿಯ್ಯ(ಅ)ರ ಪುತ್ರ. ಅವರೂ ಅಲ್ಲಾಹನ ಕಡೆಯಿಂದ ಪ್ರವಾದಿಯಾಗಿ ನಿಯುಕ್ತರಾಗಿದ್ದರು. ಯಹೂದಿಗಳು ಅವರನ್ನೂ ಪ್ರವಾದಿಯಾಗಿ ಅಂಗೀಕರಿಸುವುದಿಲ್ಲ. ಆದರೆ, ಕ್ರೈಸ್ತರು ಮಾತ್ರ, ತೀರಾ ಪ್ರತಿಕೂಲ ಸನ್ನಿವೇಶದಲ್ಲಿ ಈಸಾ(ಅ)ರನ್ನು ಸಮರ್ಥಿಸಿದವರೆಂಬ ನೆಲೆಯಲ್ಲಿ ಅವರನ್ನು ತುಂಬಾ ಗೌರವದಿಂದ ಕಾಣುತ್ತಾರೆ. ಅವರ ಈ ವಿಶೇಷತೆಯನ್ನು ಕುರ್‌ಆನಿನಲ್ಲೂ ಪ್ರಸ್ತಾಪಿಸಲಾಗಿದೆ. ತಮ್ಮ ತಂದೆ ಹಾಗೂ ಬಂಜೆ ತಾಯಿ – ಇಬ್ಬರೂ ತೀರಾ ವೃದ್ಧರಾಗಿದ್ದ ಕಾಲದಲ್ಲಿ ಅವರ ಜನನವಾಗಿತ್ತು. ಯಹ್ಯಾ(ಅ)ರ ಈ ಪವಾಡಸದೃಶ ಜನನವು, ನಿಜವಾಗಿ ಮುಂದೆ ಸಂಭವಿಸಲಿದ್ದ ಹಾಗೂ ಮತ್ತಷ್ಟು ಪವಾಡ ಸದೃಶ ಸ್ವರೂಪದ ಈಸಾ(ಅ)ರ ಜನನಕ್ಕೆ ಮುನ್ನುಡಿಯಾಗಿತ್ತು. ಅಂದರೆ ಅದು ಜನರನ್ನು ಇನ್ನಷ್ಟು ದೊಡ್ಡ ಸಂಭವಕ್ಕೆ ಮಾನಸಿಕವಾಗಿ ಸಿದ್ಧಗೊಳಿಸುವ ಕ್ರಮವಾಗಿತ್ತು. ಯಹ್ಯಾ(ಅ)ರ ಕುರಿತು ಕುರ್‌ಆನಿನ ಹೇಳಿಕೆಗಳಿಗಾಗಿ ನೋಡಿರಿ: 3:38,39/ 6:85/ 19:2ರಿಂದ15.

21. ಅಲ್ ಯಸಅ್(): ಕುರ್‌ಆನಿನಲ್ಲಿ ಎರಡು ಕಡೆ ಇತರ ಪ್ರವಾದಿಗಳ ಸಾಲಲ್ಲಿ ಇವರನ್ನು ಹೆಸರಿಸಲಾಗಿದೆ. ನೋಡಿರಿ: 6:86ರಿಂದ 88/ 38: 48,49.

22. ಝುಲ್ ಕಿಫ್ಲ್(): ಅಲ್ ಯಸಅ್(ಅ)ರಂತೆಯೇ ಇವರನ್ನೂ ಕುರ್‌ಆನಿನಲ್ಲಿ ಸ್ಪಷ್ಟವಾಗಿ ಪ್ರವಾದಿಯೆಂದು ಕರೆದಿಲ್ಲ. ಆದರೆ ಎರಡು ಕಡೆ ಪ್ರವಾದಿಗಳ ಸಾಲಲ್ಲಿ ಇವರನ್ನು ಪ್ರಸ್ತಾಪಿಸಿ ಪ್ರಶಂಸಿಸಲಾಗಿದೆ.ಉದಾ: 21:85/ 38:48.

23. ಶಮೂಯೆಲ್(): ಕುರ್‌ಆನಿನಲ್ಲಿ ಅವರ ಹೆಸರನ್ನು ಹೆಸರಿಸಲಾಗಿಲ್ಲ. ಕೆಲವು ವ್ಯಾಖ್ಯಾನಕಾರರರು 2ನೇ ಅಧ್ಯಾಯದ 246ರಿಂದ 251ರ ವರೆಗಿನ ವಚನಗಳಲ್ಲಿ ಪ್ರಸ್ತಾಪಿಸಲಾಗಿರುವ ಪ್ರವಾದಿಯ ಹೆಸರು ಶಮೂಯೆಲ್(ಅ) ಎಂದು ವಾದಿಸಿದ್ದಾರೆ.

24. ಹಿಝಕ್ಕೀಲ್(): ಇವರ ಹೆಸರೂ ಕುರ್‌ಆನಿನಲ್ಲಿಲ್ಲ. ಆದರೆ 2ನೇ ಅಧ್ಯಾಯದ 234ನೇ ವಚನದಲ್ಲಿ, ಮರಣದ ಭಯದಿಂದ ನರಳುತ್ತಿದ್ದ ಒಂದು ಸಮುದಾಯದ ಪ್ರಸ್ತಾಪವಿದೆ. ಆ ಜನಾಂಗಕ್ಕೆ ಪ್ರವಾದಿಯಾಗಿ ರವಾನಿಸಲ್ಪಟ್ಟಿದ್ದ ವ್ಯಕ್ತಿಯನ್ನು ಕೆಲವು ವ್ಯಾಖ್ಯಾನಕಾರರು ಹಿಝಕ್ಕೀಲ್(ಅ) ಎಂದು ಹೆಸರಿಸಿದ್ದಾರೆ.

25.ಈಸಾ ಮತ್ತು ಮರ್ಯಮ್(): ಕುರ್‌ಆನ್‌ನಲ್ಲಿ ಈಸಾ (ಅ) ಅಥವಾ ಏಸುವನ್ನು ಅಲ್ಲಾಹನ ಒಬ್ಬ ದೂತರೆಂದು ಪರಿಚಯಿಸಲಾಗಿದೆ. ಪ್ರವಾದಿ ಮುಹಮ್ಮದ್(ಸ) ರಿಗಿಂತ ಸುಮಾರು 600 ವರ್ಷ ಹಿಂದೆ ಆಗಮಿಸಿದ್ದ ಈಸಾ (ಅ) ಅಸಾಮಾನ್ಯ ಸ್ವರೂಪದಲ್ಲಿ ಜನಿಸಿದರು. ಅವರು ಮರ್ಯಮ್ (ಅ) ಎಂಬ ಕನ್ಯೆಯ ಗರ್ಭದಿಂದ ಬಂದವರು. ಅವರ ಜನನದ ಸ್ವರೂಪವು ಹಲವು ಬಗೆಯ ಸಂದೇಹಗಳಿಗೆ, ಆರೋಪಗಳಿಗೆ ಮತ್ತು ಮೌಢ್ಯಗಳಿಗೆ ಪ್ರೇರಕವಾಗಿತ್ತು. ಈ ಹಿನ್ನೆಲೆಯಲ್ಲಿ ಕುರ್‌ಆನ್ ಈ ಕುರಿತಾದ ಸಕಲ ಗೊಂದಲಗಳನ್ನು ನಿವಾರಿಸುವ ರೀತಿಯಲ್ಲಿ ಸ್ಪಷ್ಟವಾದ ಮಾಹಿತಿಗಳನ್ನು ಒದಗಿಸುತ್ತದೆ. ಅಲ್ಲಾಹನ ಆದೇಶದಂತೆ, ಎಲ್ಲ ಮಾನವರ ಆದಿಪಿತ ಆದಮ್(ಅ), ತಂದೆಯಾಗಲಿ ತಾಯಿಯಾಗಲಿ ಇಲ್ಲದೆ ಜನಿಸಿದ್ದರು. ಆದ್ದರಿದ ಈಸಾ(ಅ) ಅಲ್ಲಾಹನ ಆದೇಶ ಪ್ರಕಾರ ಯಾವುದೇ ಪುರುಷನ ಅಥವಾ ತಂದೆಯ ಪಾತ್ರವಿಲ್ಲದೆ ಒಬ್ಬ ಕನ್ಯೆಗೆ ಜನಿಸಿದ್ದರಲ್ಲಿ ಅಚ್ಚರಿಯೇನಿಲ್ಲ (3:59). ಕುರ್‌ಆನಿನ ಪ್ರಕಾರ ಸ್ವತಃ ಮರ್ಯಮ್(ಅ)ರ ಜನನ ಕೂಡಾ ಅಸಾಮಾನ್ಯ ಸ್ವರೂಪದ್ದಾಗಿತ್ತು. ಅವರು ಕೂಡಾ ಯಹ್ಯಾ(ಅ)ರಂತೆ ತಮ್ಮ ತಂದೆ ತಾಯಿ ತೀರಾ ವೃದ್ಧಾಪ್ಯದಲ್ಲಿದ್ದಾಗ, ಅವರ ವಿನೀತ ಪ್ರಾರ್ಥನೆಗಳಿಗೆ ಉತ್ತರವಾಗಿ ಜನಿಸಿದವರು. ಮರ್ಯಮ್(ಅ)ರ ಬಾಲ್ಯದಲ್ಲೂ ಹಲವು ಅಸಾಮಾನ್ಯ ಘಟನೆಗಳು ಸಂಭವಿಸಿದ್ದವು. ಅಲ್ಲಾಹನು ಮರ್ಯಮ್(ಅ)ರನ್ನು ಸಂರಕ್ಷಿಸಿದ್ದನು(3:42,43). ಈಸಾ(ಅ)ರ ಮೂಲಕ ಅನೇಕ ಅಸಾಮಾನ್ಯ ಘಟನೆಗಳು ಲೋಕದಲ್ಲಿ ನಡೆಯಲಿವೆ ಎಂದು ಅಲ್ಲಾಹನು ಅವರ ಜನನಕ್ಕಿಂತ ಮುನ್ನವೇ ಘೋಷಿಸಿದ್ದನು (3:46). ಆದರೂ ಅವರು ದೇವರೇನೂ ಅಲ್ಲ (5:17) ದೇವ ಪುತ್ರರೂ ಅಲ್ಲ (9:30). ಅಲ್ಲಾಹನನ್ನು ಆರಾಧಿಸಿರಿ ಎಂದೇ ಅವರು ಜನರಿಗೆ ಕರೆ ನೀಡಿದ್ದರು (3:51, 5:72). ಈಸಾ(ಅ)ರ ಹತ್ಯೆ ನಡೆಯಿತು ಮತ್ತು ಅವರನ್ನು ಶಿಲುಬೆಗೆ ಏರಿಸಲಾಯಿತು ಎಂಬುದೆಲ್ಲಾ ಸುಳ್ಳು ಹಾಗೂ ಇವು ಯಾವುದೇ ಆಧಾರವಿಲ್ಲದ ಮೂಢ ನಂಬಿಕೆಗಳು(4:156 ರಿಂದ 158). ಇತರೆಲ್ಲ ದೇವ ದೂತರಂತೆ ಅವರೂ ಒಬ್ಬ ದೇವದೂತರಾಗಿದ್ದರು (4:163, 5:75). ಅವರ ಸಮಕಾಲೀನ ಅನುಯಾಯಿಗಳು ತಮ್ಮನ್ನು ಮುಸ್ಲಿಮ್ ಎಂದೇ ಗುರುತಿಸಿ ಕೊಂಡಿದ್ದರು (5:111). ಅಲ್ಲಾಹನು ಸುರಕ್ಷಿತವಾಗಿ ಅವರನ್ನು ತನ್ನೆಡೆಗೆ ಎತ್ತಿಕೊಂಡಿರುವನು (3:55ರಿಂದ 58/ 4:157ರಿಂದ 159). ಅವರು ಲೋಕಾಂತ್ಯಕ್ಕೆ ಮುನ್ನ ಮತ್ತೆ ಈ ಲೋಕಕ್ಕೆ ಬರಲಿದ್ದಾರೆ (3:46/ 4:159 /5:11/ 43:57ರಿಂದ 61). ವ್ಯಾಖ್ಯಾನಕಾರರ ಪ್ರಕಾರ, ಅವರು ಎರಡನೆಯ ಬಾರಿ ಭೂಮಿಗೆ ಬಂದಾಗ, ಇಸ್ಲಾಮ್ ಧರ್ಮದ ಹಾಗೂ ಮುಹಮ್ಮದ್(ಸ)ರ ಅನುಯಾಯಿಯಾಗಿರುವರು.