Information – ಮಾಹಿತಿಗಳು

 

1.ಕೆಲವು ಪ್ರಮುಖ ಪದಗಳ ತಾತ್ಪರ್ಯ; ಕುರ್‌ಆನ್‌ನಲ್ಲಿರುವ ಕೆಲವು ಪದಗಳಿಗೆ ಸಮಾನಾರ್ಥ ಕನ್ನಡ ಪದಗಳು ಲಭ್ಯವಿಲ್ಲ. ತುಂಬಾ ವಿಶಾಲ ಅರ್ಥವಿರುವ ಅಂತಹ ಪದಗಳನ್ನು ಬಲವಂತವಾಗಿ ಕನ್ನಡದ ಅಥವಾ ಬೇರಾವುದೇ ಭಾಷೆಯ ಒಂದೆರಡು ಪದಗಳಲ್ಲಿ ಅನುವಾದಿಸಲು ಹೊರಟರೆ, ಓದುಗರು ಗೊಂದಲಕ್ಕೆ ಸಿಲುಕುವ ಸಾಧ್ಯತೆ ಇದೆ. ಆದ್ದರಿಂದ ಈ ಅನುವಾದ ಕೃತಿಯಲ್ಲಿ, ಅನುವಾದದ ವೇಳೆ ಅಂತಹ ಪದಗಳನ್ನು ಮೂಲ ರೂಪದಲ್ಲೇ ಉಳಿಸಿಕೊಂಡು, ಇಲ್ಲಿ ಅವುಗಳ ತಾತ್ಪರ್ಯವನ್ನು ಸಂಕ್ಷಿಪ್ತವಾಗಿ ವಿವರಿಸಲಾಗಿದೆ. ಉದಾ:

ಅಲ್ಲಾಹ್: ಇದು, ಸಾಮಾನ್ಯವಾಗಿ ಎಲ್ಲ ಸಮಾಜಗಳಲ್ಲೂ ದೇವರು ಎಂದು ಗುರುತಿಸಲಾಗುವ, ವಿಶ್ವದೊಡೆಯನ ವ್ಯಕ್ತಿನಾಮ. ಅವನು ಕುರ್‌ಆನ್‌ನಲ್ಲಿ ತನ್ನನ್ನು ಹಾಗೆಂದೇ ಪರಿಚಯಿಸಿಕೊಂಡಿದ್ದಾನೆ. ಕುರ್‌ಆನ್ ಅನಾವರಣಗೊಂಡ ಸಮಾಜದಲ್ಲಿ ವಿಗ್ರಹಾರಾಧಕರು, ಕ್ರೈಸ್ತರು, ಯಹೂದಿಗಳು ಮತ್ತಿತರರು ವಿಶ್ವದ ಸೃಷ್ಟಿಕರ್ತನನ್ನು ಅದೇ ಹೆಸರಿನಿಂದ ಕರೆಯುತ್ತಿದ್ದರು. ಅಲ್ಲಾಹನ ಗುಣವಿಶೇಷಗಳನ್ನು, ಅವನ ಗುಣನಾಮಗಳನ್ನು, ಅವನ ಸಾಧನೆ – ಸಾಮರ್ಥ್ಯಗಳನ್ನು, ಅವನ ಅಧಿಕಾರ ವ್ಯಾಪ್ತಿಯನ್ನು, ಅವನ ಕುರಿತಂತೆ ಮಾನವರಿಗಿರುವ ಬಾಧ್ಯತೆ ಹಾಗೂ ಹೊಣೆಗಾರಿಕೆಗಳನ್ನು ಮತ್ತು ಅವನ ಕುರಿತಾದ ವಿವಿಧ ಅಪಗ್ರಹಿಕೆಗಳ ವಾಸ್ತವವನ್ನು ಪವಿತ್ರ ಕುರ್‌ಆನಿನಲ್ಲಿ ಸವಿಸ್ತಾರವಾಗಿ ವಿವರಿಸಲಾಗಿದೆ.

ಮಲಕ್ ಮತ್ತು ಜಿನ್ನ್: ಕುರ್‌ಆನಿನಲ್ಲಿ ಪದೇಪದೇ ಮಲಕ್‌ಗಳು ಹಾಗೂ ಜಿನ್ನ್‌ಗಳನ್ನು ಪ್ರಸ್ತಾಪಿಸಲಾಗಿದೆ. ಅನುವಾದದಲ್ಲಿ ಈ ಎರಡೂ ಪದಗಳನ್ನು ಯಥಾವತ್ತಾಗಿ ಬಳಸಲಾಗಿದೆ. ಮನುಷ್ಯರಂತೆ ಮಲಕ್ ಮತ್ತು ಜಿನ್ನ್‌ಗಳು, ಅಲ್ಲಾಹನು ಸೃಷ್ಟಿಸಿರುವ ಎರಡು ಪ್ರತ್ಯೇಕ ಸಮುದಾಯಗಳು. ಈ ಎರಡೂ ಸಮುದಾಯಗಳನ್ನು ಮಾನವರಿಗಿಂತ ಬಹಳ ಹಿಂದೆಯೇ ಸೃಷ್ಟಿಸಲಾಗಿತ್ತು. ಮಲಕ್ ಮತ್ತು ಜಿನ್ನ್‌ಗಳೆರಡೂ ಮಾನವರಂತೆ ಯೋಚಿಸಬಲ್ಲ, ನೋಡಬಲ್ಲ, ಕೇಳಬಲ್ಲ, ಮಾತನಾಡಬಲ್ಲ ಮತ್ತು ಚಲಿಸಬಲ್ಲ ಬುದ್ಧಿವಂತ ಜೀವಿಗಳು. ಆದರೆ ಸಾಮಾನ್ಯವಾಗಿ, ಮಾನವರ ಪಾಲಿಗೆ ಅದೃಶ್ಯವಾಗಿರುವ ಈ ಎರಡೂ ಜೀವಿಗಳ ರಚನೆ, ರೂಪ ಹಾಗೂ ಅವುಗಳ ಆಯುಷ್ಯ, ಶಕ್ತಿ, ಸಾಮರ್ಥ್ಯ ಇತ್ಯಾದಿಗಳು ಮಾನವರಿಗಿಂತ ತೀರಾ ಭಿನ್ನವಾಗಿದ್ದು ಆ ಕುರಿತು ಮಾನವರಿಗೆ ಲಭ್ಯ ಮಾಹಿತಿಯೂ ಬಹಳ ಸೀಮಿತ. ಮಲಕ್ ಮತ್ತು ಜಿನ್ನ್‌ಗಳ ನಡುವೆ ಇರುವ ಪ್ರಮುಖ ವ್ಯತ್ಯಾಸವೇನೆಂದರೆ, ಮಲಕ್‌ಗಳಿಗೆ ಇಚ್ಛಾ ಸ್ವಾತಂತ್ರವಾಗಲಿ ಕರ್ಮಗಳ ವಿಷಯದಲ್ಲಿ ಆಯ್ಕೆಯ ಸ್ವಾತಂತ್ರವಾಗಲಿ ಇಲ್ಲ. ಅವರು ಅಲ್ಲಾಹನ ಇಚ್ಛೆ ಹಾಗೂ ಅವನ ಆದೇಶಗಳನ್ನು ಪಾಲಿಸುವುದಕ್ಕೆ ಸದಾ ನಿರ್ಬಂಧಿತರಾಗಿರುತ್ತಾರೆ. ಅತ್ತ ಜಿನ್ನ್‌ಗಳಿಗೆ ಮಾನವರಂತೆ ತಾತ್ಕಾಲಿಕ ಇಚ್ಛಾ ಸ್ವಾತಂತ್ರ ಹಾಗೂ ಕರ್ಮಗಳ ವಿಷಯದಲ್ಲಿ ಆಯ್ಕೆಯ ಸ್ವಾತಂತ್ರ ಇದೆ. ಮಾನವರಂತೆ ಜಿನ್ನ್‌ಗಳಲ್ಲೂ ಶಿಷ್ಟರು ಹಾಗೂ ದುಷ್ಟರಿದ್ದಾರೆ. ಸ್ಥಾನ ಮಾನದ ದೃಷ್ಟಿಯಿಂದ ಮಾನವ ಸಮುದಾಯಕ್ಕೆ, ಮಲಕ್ ಹಾಗೂ ಜಿನ್ನ್‌ಗಳಿಗಿಂತ ಹೆಚ್ಚಿನ ಹಿರಿಮೆಯನ್ನು ನೀಡಲಾಗಿದೆ.

ನಮಾಝ್ ಅಥವಾ ಸ್ವಲಾತ್; ಅರಬಿ ಮೂಲದಲ್ಲಿರುವ ‘ಸ್ವಲಾತ್’ ಎಂಬ ಪದಕ್ಕೆ ಪರ್ಯಾಯವಾಗಿ ಕನ್ನಡಾನುವಾದದಲ್ಲಿ ‘ನಮಾಝ್’ ಎಂಬ ಪದವನ್ನು ಬಳಸಲಾಗಿದೆ. ನಮಾಝ್ ಎಂಬುದು ಮೂಲತಃ ಫಾರ್ಸಿ ಅಥವಾ ಪರ್ಶಿಯನ್ ಪದ. ಅರಬಿ ಮಾತೃಭಾಷೆಯವರನ್ನು ಬಿಟ್ಟರೆ, ಉಳಿದಂತೆ ಹೆಚ್ಚಿನೆಡೆಗಳಲ್ಲಿ ‘ಸ್ವಲಾತ್’ಗೆ ಪರ್ಯಾಯವಾಗಿ ಈ ಪದವನ್ನೇ ಬಳಸಲಾಗುತ್ತದೆ. ಮಲಯಾಳಮ್ ಭಾಷಿಗರು ಇದನ್ನು ‘ನಮಸ್ಕಾರಮ್’ ಎಂದು ಅನುವಾದಿಸುತ್ತಾರೆ. ಒಟ್ಟಿನಲ್ಲಿ ಇದು ಒಂದು ನಿರ್ದಿಷ್ಟ ಸ್ವರೂಪದ ಆರಾಧನಾಕ್ರಮ. ಪ್ರವಾದಿ ಮುಹಮ್ಮದ್(ಸ) ಕಲಿಸಿಕೊಟ್ಟ ಕ್ರಮಾನುಸಾರ, ನಿರ್ದಿಷ್ಟ ಸಮಯಗಳಲ್ಲಿ ನಿತ್ಯ 5 ಹೊತ್ತು ನಮಾಝ್ ಸಲ್ಲಿಸುವುದು ಪ್ರತಿಯೊಬ್ಬ ಮುಸ್ಲಿಮ್ ಸ್ತ್ರೀ ಹಾಗೂ ಪುರುಷನ ಮೇಲೆ ಕಡ್ಡಾಯವಾಗಿದೆ. ಪುರುಷರು ಈ ಐದೂ ಹೊತ್ತಿನ ನಮಾಝ್‌ಗಳನ್ನು ‘ಮಸ್ಜಿದ್’ (ಮಸೀದಿ)ಗಳಲ್ಲಿ ಸಂಘಟಿತ ಹಾಗೂ ಸಾಮೂಹಿಕ ರೂಪದಲ್ಲಿ ಸಲ್ಲಿಸಬೇಕೆಂಬ ನಿಯಮವಿದೆ. ಮಾನಸಿಕ ಸಿದ್ಧತೆ ಹಾಗೂ ಶುದ್ಧ ಶರೀರದೊಂದಿಗೆ ಸಲ್ಲಿಸಲಾಗುವ ನಮಾಝ್‌ನಲ್ಲಿ, ನಿರ್ದಿಷ್ಟ ದಿಕ್ಕಿಗೆ ಮುಖ ಮಾಡಿ, ಭಯ ಭಕ್ತಿಯೊಂದಿಗೆ ನಿಂತು, ಬಾಗಿಕೊಂಡು, ಸಾಷ್ಟಾಂಗವೆರಗಿಕೊಂಡು ಹಾಗೂ ಕುಳಿತುಕೊಂಡು – ಹೀಗೆ ವಿವಿಧ ಭಂಗಿಗಳಲ್ಲಿ ನಿರ್ದಿಷ್ಟ ಪದಗಳನ್ನು ಉಚ್ಚರಿಸುತ್ತಾ ನಿರಾಕಾರನಾದ ಅಲ್ಲಾಹನನ್ನು ಸ್ಮರಿಸುವ, ಅವನ ಗುಣಗಾನ ಮಾಡುವ ಹಾಗೂ ಅವನೆದುರು ದೀನವಾಗಿ ಪ್ರಾರ್ಥಿಸುವ ಪ್ರಕ್ರಿಯೆ ನಡೆಯುತ್ತದೆ. ಸಾಮಾನ್ಯವಾಗಿ ಒಂದು ನಮಾಝ್‌ಗೆ ತಗಲುವ ಸಮಯ 5ರಿಂದ 10 ನಿಮಿಷಗಳು. ನಮಾಝ್‌ನಲ್ಲಿ, ಫರ್ಝ್, ಸುನ್ನತ್, ನಫಿಲ್, ವಿತ್ರ್ ಎಂದಿತ್ಯಾದಿಯಾಗಿ ಹಲವು ಪ್ರಕಾರಗಳಿವೆ. ಅನೇಕ ನಮಾಝ್‌ಗಳನ್ನು ಒಂಟಿಯಾಗಿಯೇ ಸಲ್ಲಿಸಲಾಗುತ್ತದೆ. ಕೆಲವು ನಿರ್ದಿಷ್ಟ ಪದಗಳನ್ನು ಉಚ್ಚರಿಸುತ್ತಾ ಪ್ರವಾದಿ ಮುಹಮ್ಮದ್(ಸ)ರಿಗೆ ಶುಭಹಾರೈಸುವ ಕ್ರಿಯೆಯನ್ನೂ ‘ಸ್ವಲಾತ್’ ಎನ್ನಲಾಗುತ್ತದೆ. ಉದಾ; ಸಲ್ಲಲ್ಲಾಹು ಅಲೈಹಿ ವ ಸಲ್ಲಮ್ ಅಥವಾ ಅಲ್ಲಾಹುಮ್ಮ ಸಲ್ಲಿ ಅಲಾ ಮುಹಮ್ಮದ್ (ನೋಡಿರಿ: 33:56).

ಝಕಾತ್ ಮತ್ತು ಸ್ವದಕ; ನಿರ್ದಿಷ್ಟ ಪ್ರಮಾಣಕ್ಕಿಂತ ಹೆಚ್ಚಿನ ಸಂಪತ್ತು ಇರುವ ಪ್ರತಿಯೊಬ್ಬ ಮುಸಲ್ಮಾನನು ಪ್ರತಿ ವರ್ಷ ತನ್ನ ಸಂಪತ್ತಿನ 2.5% ಭಾಗವನ್ನು ಕಡ್ಡಾಯವಾಗಿ ದಾನ ಮಾಡಬೇಕು. (9:104, 22:41). ಝಕಾತ್ ಪಡೆಯಲು ಅರ್ಹರೆಂದು ಕುರ್‌ಆನ್‌ನಲ್ಲಿ ಸೂಚಿಸಲಾಗಿರುವ 8 ನಿರ್ದಿಷ್ಟ ವರ್ಗಗಳಿಗೆ ಅಥವಾ ಆ ಪೈಕಿ ಯಾವುದಾದರೂ ಒಂದು ವರ್ಗಕ್ಕೆ ಈ ಮೊತ್ತವು ಸಂದಾಯವಾಗಬೇಕು. (ಪ್ರಸ್ತುತ 8 ವರ್ಗಗಳ ವಿವರಗಳಿಗೆ ನೋಡಿರಿ; ಕುರ್‌ಆನ್-9:60) ಝಕಾತ್ ಪಾವತಿಯು ತನ್ನ ಮೇಲೆ ಕಡ್ಡಾಯವಾದ ಬಳಿಕವೂ ಅದನ್ನು ಪಾವತಿಸದೆ ಇರುವವನು ಶಿಕ್ಷಾರ್ಹನಾಗಿರುತ್ತಾನೆ. ಝಕಾತ್ ಕಡ್ಡಾಯವಾಗಿರುವವರು ಮತ್ತು ಕಡ್ಡಾಯವಾಗಿಲ್ಲದವರು ಐಚ್ಛಿಕವಾಗಿ ಪಾವತಿಸಬೇಕಾದ ದಾನವು ಇದಕ್ಕಿಂತ ಭಿನ್ನವಾಗಿದ್ದು, ಅದನ್ನು ‘ಸ್ವದಕಃ’ ಎಂದು ಕರೆಯಲಾಗುತ್ತದೆ. 51:19/ 93:10/69:30 ರಿಂದ 37.

ಹಜ್ಜ್ ಮತ್ತು ಉಮ್ರಃ: ಮಕ್ಕಃದಲ್ಲಿರುವ ಕಅಬಃ ಮಸೀದಿಯನ್ನು ಪವಿತ್ರ ಕುರ್‌ಅನ್‌ನಲ್ಲಿ ಜಗತ್ತಿನ ಪ್ರಥಮ ಆರಾಧನಾಲಯವೆಂದು ವರ್ಣಿಸಲಾಗಿದೆ. (3:96). ನಿರ್ದಿಷ್ಟ ದಿನಗಳಲ್ಲಿ, ನಿರ್ದಿಷ್ಟ ಕ್ರಮ ಪ್ರಕಾರ ಆ ಮಸೀದಿಯ ಸಂದರ್ಶನ ನಡೆಸಿ, ಅಲ್ಲಿ ಹಾಗೂ ಅದರ ಸುತ್ತಮುತ್ತಲಿನ ನಿರ್ದಿಷ್ಟ ಸ್ಥಳಗಳಲ್ಲಿ ನಿರ್ದಿಷ್ಟ ವಿಧಾನ ಪ್ರಕಾರ ನಡೆಸುವ ಆರಾಧನೆಗೆ ಹಜ್ಜ್ ಎನ್ನುತ್ತಾರೆ. ಆರ್ಥಿಕ ಹಾಗೂ ಆರೋಗ್ಯದ ದೃಷ್ಟಿಯಿಂದ ಹಜ್ಜ್ ನಡೆಸುವ ಸಾಮರ್ಥ್ಯವಿರುವ ಎಲ್ಲ ಮುಸ್ಲಿಮರ ಪಾಲಿಗೆ ಜೀವನದಲ್ಲೊಮ್ಮೆ ಹಜ್ಜ್ ಕಡ್ಡಾಯವಾಗಿದೆ (3:97). ಈ ಕುರಿತು ಹೆಚ್ಚಿನ ಮಾಹಿತಿಗಳಿಗಾಗಿ ನೋಡಿರಿ: 2:125 ರಿಂದ 129, 158, 196 ರಿಂದ 203/ 3:96,97/ 5:2, 94 ರಿಂದ 97/ 22:26 ರಿಂದ 33.

2. ಕುರ್ಆನ್ ಪಠ್ಯದ ವಿಭಾಗೀಕರಣ: ಓದುಗರ ಅನುಕೂಲಕ್ಕಾಗಿ, ಕುರ್‌ಆನ್‌ನ ಒಟ್ಟು ಪಠ್ಯವನ್ನು ವಿವಿಧ ರೀತಿಯಲ್ಲಿ ವಿಂಗಡಿಸಲಾಗಿದೆ. ಉದಾ: ಆಯತ್, ರುಕೂಅ್, ಸೂರಃ, ಜುಝ್‌ಅ್, ಹಿಝ್ಬ್ (ಅಥವಾ ಮನ್‌ಝಿಲ್). ಈ ಪೈಕಿ ರುಕೂಅ್ ಮತ್ತು ಜುಝ್‌ಅ್ ಎಂಬ ವಿಭಾಗೀಕರಣವು ಕಾಲಕ್ರಮೇಣ ಆವಿಷ್ಕೃತವಾಗಿರಬೇಕೆಂದು ಹಲವು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ.

ಆಯತ್ಎಂಬ ಪದಕ್ಕೆ ಸೂಚನೆ, ನಿದರ್ಶನ, ಪುರಾವೆ ಇತ್ಯಾದಿ ಅರ್ಥಗಳಿವೆ. ಕುರ್‌ಆನಿನ ವಾಕ್ಯ ಅಥವಾ ವಚನಗಳನ್ನು ಆಯತ್‌ಗಳೆಂದು ಗುರುತಿಸಲಾಗುತ್ತದೆ. ಆದರೆ, ಸಾಮಾನ್ಯವಾಗಿ ಇತರ ಭಾಷೆಗಳಲ್ಲಿರುವಂತೆ, ಪ್ರತಿಯೊಂದು ವಾಕ್ಯವು ಅಥರ್ದ ದೃಷ್ಟಿಯಿಂದ ಸಂಪೂರ್ಣವಾಗಿರಬೇಕೆಂಬ ನಿಯಮ ಕುರ್‌ಆನಿನ ಎಲ್ಲ ವಾಕ್ಯಗಳಿಗೆ ಅನ್ವಯಿಸುವುದಿಲ್ಲ. ಕುರ್‌ಆನಿನಲ್ಲಿ ಹೆಚ್ಚಿನ ಆಯತ್‌ಗಳು ಅರ್ಥದ ದೃಷ್ಟಿಯಿಂದ ಪರಿಪೂರ್ಣವಾಗಿರುತ್ತವೆ. ಕೆಲವೊಮ್ಮೆ ಒಂದೇ ಆಯತ್‌ನೊಳಗೆ, ಪರಿಪೂರ್ಣ ಅರ್ಥವಿರುವ ಎರಡು, ಮೂರು ಅಥವಾ ಅದಕ್ಕಿಂತಲೂ ಹೆಚ್ಚಿನ ವಚನಗಳಿರುತ್ತವೆ. ಆದರೆ ಇತರ ಹಲವೆಡೆ ಎರಡು, ಮೂರು ಅಥವಾ ಇನ್ನೂ ಹೆಚ್ಚಿನ ಆಯತ್‌ಗಳು ಸೇರಿದಾಗ ಮಾತ್ರ ಅರ್ಥವು ಸಂಪೂರ್ಣವಾಗುತ್ತದೆ.

ಇದೇ ಕಾರಣದಿಂದಾಗಿ ಕುರ್‌ಆನಿನ ವಚನಗಳ ಸಂಖ್ಯೆ ಎಷ್ಟೆಂಬ ಕುರಿತು ವಿಭಿನ್ನ ಮತಗಳಿವೆ. ಉದಾ: ಕೂಫಾದ ವಿದ್ವಾಂಸರ ಪ್ರಕಾರ 6236 ವಚನಗಳು, ಬಸ್ರಾದ ವಿದ್ವಾಂಸರ ಪ್ರಕಾರ 6216 ವಚನಗಳು, ಸಿರಿಯಾದ ವಿದ್ವಾಂಸರ ಪ್ರಕಾರ 6250 ವಚನಗಳು, ಮಕ್ಕಃದ ವಿದ್ವಾಂಸರ ಪ್ರಕಾರ 6212 ವಚನಗಳು ಮತ್ತು ಮದೀನಾದ ವಿದ್ವಾಂಸರ ಪ್ರಕಾರ 6214 ವಚನಗಳು. ಕೆಲವು ನಿರ್ದಿಷ್ಟ ವಚನಗಳ ಗಾತ್ರದ ಕುರಿತು ತಲೆದೋರಿರುವ ಭಿನ್ನಾಭಿಪ್ರಾಯವೇ ಈ ಭಿನ್ನತೆಗೆ ಕಾರಣ. ಉದಾ: ಒಂದೇ ದೀರ್ಘ ವಾಕ್ಯವನ್ನು ಕೆಲವರು ಒಂದು ವಚನವೆಂದು ಪರಿಗಣಿಸಿದ್ದರೆ ಮತ್ತೆ ಕೆಲವರು ಎರಡು ವಚನಗಳೆಂದು ಗಣಿಸಿದ್ದಾರೆ. ಹಾಗೆಯೇ ಕುರ್‌ಆನಿನ 114 ಅಧ್ಯಾಯಗಳ ಪೈಕಿ 113 ಅಧ್ಯಾಯಗಳು ‘‘ಅಲ್ಲಾಹನ ಹೆಸರಿಂದ – ಅವನು ಅಪಾರ ದಯಾಳು, ಕರುಣಾಮಯಿ’’ ಎಂಬ ವಚನದೊಂದಿಗೆ ಆರಂಭವಾಗುತ್ತವೆ. ಆದರೆ ಸಾಮಾನ್ಯವಾಗಿ ಈ ಪೈಕಿ ಪ್ರಥಮ ಅಧ್ಯಾಯದಲ್ಲಿ ಮಾತ್ರ ಈ ವಾಕ್ಯವನ್ನು ಒಂದು ಸ್ವತಂತ್ರ ಹಾಗೂ ಪ್ರತ್ಯೇಕ ಆಯತ್ (ವಚನ) ಎಂದು ಪರಿಗಣಿಸಲಾಗುತ್ತದೆ. ಉಳಿದೆಡೆ ಇದನ್ನು ಹಾಗೆಂದು ಪರಿಗಣಿಸದೆಯೇ ಓದಲಾಗುತ್ತದೆ. ಕೆಲವರು ಇದನ್ನು ಎಲ್ಲ ಅಧ್ಯಾಯಗಳಲ್ಲೂ ಪ್ರತ್ಯೇಕ ವಚನವೆಂದು ಪರಿಗಣಿಸಿ ಓದುತ್ತಾರೆ. ಈ ಕಾರಣದಿಂದಾಗಿ ಅಂಥವರ ಎಣಿಕೆಯಲ್ಲಿ ವಚನಗಳ ಸಂಖ್ಯೆ ಆ ಮಟ್ಟಿಗೆ ವೃದ್ಧಿಸುತ್ತದೆ.

 ‘ರುಕೂಅ್ ಗಳೆಂದರೆ, ನಿರ್ದಿಷ್ಟ ವಚನಗಳ ಕೊನೆಯಲ್ಲಿ ‘ಐನ್’ ಎಂಬ ಅಕ್ಷರವನ್ನು ಪ್ರತ್ಯೇಕವಾಗಿ ಎದ್ದು ಕಾಣುವಂತೆ ಬರೆಯುವ ಮೂಲಕ ನೀಡಲಾಗಿರುವ ಸೂಚನೆ. ಸಾಮಾನ್ಯವಾಗಿ ನಮಾಝ್ ಸಲ್ಲಿಸುತ್ತಿರುವವರು, ಅದರೊಳಗೆ ತಾವು ಕುರ್‌ಆನಿನ ವಚನಗಳನ್ನು ಓದುವಾಗ, ಎಲ್ಲಿ ಓದು ನಿಲ್ಲಿಸಿ ಬಾಗಬೇಕೆಂಬುದನ್ನು ಅರಿಯುವುದಕ್ಕೆ ಈ ಸೂಚನೆ ನೆರವಾಗುತ್ತದೆ. ದೀರ್ಘ ಅಧ್ಯಾಯಗಳಲ್ಲಿ ಒಂದು ರುಕೂಅ್ ಬಹುತೇಕ ಹತ್ತು ವಚನಗಳನ್ನು ಒಳಗೊಂಡಿರುತ್ತದೆ. ಪ್ರಥಮ ಅಧ್ಯಾಯದಲ್ಲಿ ಹಾಗೂ 30ನೆಯ ಭಾಗದ ಹೆಚ್ಚಿನ ಅಧ್ಯಾಯಗಳು ಸಂಕ್ಷಿಪ್ತವಾದ್ದರಿಂದ ಅವುಗಳಲ್ಲಿ ಕೇವಲ ಒಂದೇ ರುಕೂಅ್ ಇದೆ. ಕುರ್‌ಆನಿನಲ್ಲಿ ಒಟ್ಟು 540 ರುಕೂಅ್ಗಳಿವೆ.

ಸೂರಃ ಅಂದರೆ ಅಧ್ಯಾಯ. ಕುರ್‌ಆನಿನಲ್ಲಿ ಒಟ್ಟು 114 ಅಧ್ಯಾಯಗಳಿವೆ. ಅವುಗಳ ಗಾತ್ರ ವಿಭಿನ್ನವಾಗಿದೆ. ಉದಾ: ಕುರ್‌ಆನಿನ ಪ್ರಥಮ ಅಧ್ಯಾಯದಲ್ಲಿ 7 ವಚನಗಳಿದ್ದರೆ ಎರಡನೆಯ ಅಧ್ಯಾಯದಲ್ಲಿ 286 ವಚನಗಳಿವೆ ಮತ್ತು 108ನೇ ಅಧ್ಯಾಯದಲ್ಲಿ ಕೇವಲ 3 ವಚನಗಳಿವೆ. ಪ್ರತಿಯೊಂದು ಅಧ್ಯಾಯಕ್ಕೆ ಒಂದು ಹೆಸರಿದೆ. ಈ ಹೆಸರುಗಳಿರುವುದು ವಿವಿಧ ಅಧ್ಯಾಯಗಳನ್ನು ಗುರುತಿಸುವುದಕ್ಕೇ ಹೊರತು ಅವುಗಳಲ್ಲಿ ಚರ್ಚಿಸಲಾಗಿರುವ ವಿಷಯ ಏನೆಂಬುದನ್ನು ಸೂಚಿಸುವುದಕ್ಕಲ್ಲ. ಉದಾ; ಎರಡನೇ ಅಧ್ಯಾಯಕ್ಕೆ ಅಲ್‌ಬಕರಃ ಅಥವಾ ದನ ಎಂಬ ಹೆಸರಿದೆ. ಇದರ ಅರ್ಥ, ದನದ ಪ್ರಸ್ತಾಪವಿರುವ ಅಧ್ಯಾಯವೆಂದೇ ಹೊರತು, ಮುಖ್ಯವಾಗಿ ದನದ ಕುರಿತಾಗಿಯೇ ಚರ್ಚಿಸುವ ಅಧ್ಯಾಯವೆಂದಲ್ಲ.

ಜುಝ್ಅ್ ಅಂದರೆ ಭಾಗ ಅಥವಾ ಕಾಂಡ. ಕುರ್‌ಆನನ್ನು ಬಹುತೇಕ ಸಮಗಾತ್ರದ 30 ಕಾಂಡಗಳಾಗಿಯೂ ವಿಂಗಡಿಸಲಾಗಿದೆ. ಪ್ರತಿಯೊಂದು ಕಾಂಡದ ಪ್ರಥಮ ಪದವನ್ನೇ ಆ ಕಾಂಡದ ಹೆಸರಾಗಿ ಬಳಸಿಕೊಳ್ಳಲಾಗಿದೆ. ಈ ವಿಂಗಡನೆಯ ಒಂದು ಪ್ರಮುಖ ಔಚಿತ್ಯವೇನೆಂದರೆ, ಪ್ರತಿ ದಿನ ಕುರ್‌ಆನಿನ ಒಂದು ಕಾಂಡದ ಅಧ್ಯಯನ ನಡೆಸುವವರು ಒಂದು ತಿಂಗಳೊಳಗೆ ಸಂಪೂರ್ಣ ಕುರ್‌ಆನನ್ನು ಓದಿ ಮುಗಿಸಬಹುದು.

ಕುರ್‌ಆನನ್ನು ಹಿಝ್ಬ್ ಅಥವಾ ಮನ್ಝಿಲ್ ಎಂದು ಕರೆಯಲಾಗುವ ಬಹುತೇಕ ಸಮಗಾತ್ರದ 7 ಪ್ರತ್ಯೇಕ ಘಟಕಗಳಾಗಿಯೂ ವಿಭಜಿಸಲಾಗಿದೆ. ಪ್ರತಿದಿನ ಒಂದು ಹಿಝ್ಬ್ಅನ್ನು ಓದಿ, ಒಂದು ವಾರದ ಅವಧಿಯಲ್ಲಿ ಕುರ್‌ಆನನ್ನು ಓದಿ ಮುಗಿಸಬಯಸುವವರಿಗೆ ಈ ವಿಭಾಗೀಕರಣವು ಸಹಕಾರಿಯಾಗಿದೆ. 7 ಹಿಝ್ಬ್ ಗಳನ್ನು ಗುರುತಿಸುವ ಸರಳ ವಿಧಾನ ಹೀಗಿದೆ:

ಹಿಝ್ಬ್ 1. ಅಧ್ಯಾಯ 2 ರಿಂದ 4. (3 ಅಧ್ಯಾಯಗಳು)

ಹಿಝ್ಬ್ 2. ಅಧ್ಯಾಯ 5 ರಿಂದ 9. (5ಅಧ್ಯಾಯಗಳು)

ಹಿಝ್ಬ್ 3. ಅಧ್ಯಾಯ 10 ರಿಂದ 16. (7 ಅಧ್ಯಾಯಗಳು)

ಹಿಝ್ಬ್ 4. ಅಧ್ಯಾಯ 17 ರಿಂದ 25. (9 ಅಧ್ಯಾಯಗಳು)

ಹಿಝ್ಬ್ 5. ಅಧ್ಯಾಯ 26 ರಿಂದ 36. (11 ಅಧ್ಯಾಯಗಳು)

ಹಿಝ್ಬ್ 6. ಅಧ್ಯಾಯ 37 ರಿಂದ 49. (13 ಅಧ್ಯಾಯಗಳು)

ಹಿಝ್ಬ್ 7. ಅಧ್ಯಾಯ 50 ರಿಂದ 114. (65 ಅಧ್ಯಾಯಗಳು)

3. ಕುರ್ಆನಿನ ಅನುಪಮ ನಿರೂಪಣಾ ಶೈಲಿ: ಜಗತ್ತಿನ ಎಲ್ಲ ಗ್ರಂಥಗಳ ನಿರೂಪಣಾ ಶೈಲಿ ಒಂದೇ ತೆರನಾಗಿರುವುದಿಲ್ಲ. ಕುರ್‌ಆನಿನ ನಿರೂಪಣಾ ಶೈಲಿಯಂತೂ ಬಹಳ ವಿಶಿಷ್ಟ ಹಾಗೂ ವಿಭಿನ್ನವಾಗಿದೆ. ಆದ್ದರಿಂದ ಸಹಜವಾಗಿಯೇ, ಕುರ್‌ಆನಿನ ಅಧ್ಯಯನ ನಡೆಸಲು ಹೊರಟವರು ಬೇರಾವುದಾದರೂ ಗ್ರಂಥದ ಶೈಲಿ, ಧಾಟಿಗಳನ್ನು ಇಲ್ಲಿಯೂ ನಿರೀಕ್ಷಿಸಿದರೆ ಗೊಂದಲಕ್ಕೆ ಸಿಲುಕುವ ಸಾಧ್ಯತೆ ಇದೆ. ಕುರ್‌ಆನಿನಲ್ಲಿ ನಿರೂಪಣಾ ಶೈಲಿಯು ಪದೇ ಪದೇ ಬದಲಾಗುತ್ತಾ ಹೊಸ ರೂಪಗಳನ್ನು ತಾಳುತ್ತಿರುತ್ತದೆ. ಇದರ ಹೆಚ್ಚಿನ ಭಾಗವು ಸರಾಸರಿ ಬೌದ್ಧಿಕ ಮಟ್ಟದ ಒಬ್ಬ ಸಾಮಾನ್ಯ ಮನುಷ್ಯನು ಓದಿ ಅರಗಿಸಿಕೊಳ್ಳ ಬಹುದಾದಷ್ಟು ಸರಳ ಸ್ವರೂಪದಲ್ಲಿದೆ. ಮೂಲ ಅರಬಿ ಭಾಷೆಯಲ್ಲಿ ಕುರ್ ಆನ್ ಓದುವವರಿಗೆ, ಇದು ಗದ್ಯರೂಪದಲ್ಲಿದ್ದರೂ ಕಾವ್ಯದ ಹಲವು ಸೊಗಸುಗಳನ್ನು ತನ್ನೊಳಗೆ ಮೈಗೂಡಿಸಿಕೊಂಡಿರುವುದು ಕಂಡು ಅಚ್ಚರಿಯಾಗುವುದುಂಟು. ನಿಜವಾಗಿ ಇದರ ಶೈಲಿಯು ಲೇಖನಕ್ಕಿಂತ ಭಾಷಣಕ್ಕೆ ಹೆಚ್ಚು ನಿಕಟವಾಗಿದೆ. ಇದರೊಳಗಿನ ಅಧ್ಯಾಯಗಳ ಹಾಗೂ ವಚನಗಳ ಗಾತ್ರ ಸಮನಾಗಿಲ್ಲ. ಉದಾ: ಇದರ ಪ್ರಥಮ ಅಧ್ಯಾಯದಲ್ಲಿ 7 ವಚನಗಳಿವೆ. ಆದರೆ 2ನೇ ಅಧ್ಯಾಯದಲ್ಲಿ 286 ವಚನಗಳಿವೆ. 74ನೇ ಅಧ್ಯಾಯದ 21ನೇ ವಚನದಲ್ಲಿ ಕೇವಲ 2 ಪದಗಳು ಮಾತ್ರ ಇವೆ. ಅದರೆ ಅದೇ ಅಧ್ಯಾಯದ 31ನೇ ವಚನದಲ್ಲಿ ಸುಮಾರು 45 ಪದಗಳಿವೆ. ಕುರ್‌ಆನಿನಲ್ಲಿ, ಕೆಲವೊಮ್ಮೆ ಮಾನವರೇ, ಎಂದು ಕರೆದು ಉಪದೇಶ ಆರಂಭಿಸಿದರೆ, ಕೆಲವೊಮ್ಮೆ ವಿಶ್ವಾಸಿಗಳೇ, ದೂತರೇ, ಧಿಕ್ಕಾರಿಗಳೇ ಅಥವಾ ಗ್ರಂಥದವರೇ ಎಂದು ಕರೆದು ಆದೇಶಗಳನ್ನು ನೀಡಲಾಗುತ್ತದೆ. ಕೆಲವೆಡೆ, ಸೂರ್ಯ, ಚಂದ್ರ ಮತ್ತಿತರ ಕೆಲವು ವಸ್ತುಗಳ ಅಥವಾ, ಹಗಲು, ಇರುಳು, ಇತ್ಯಾದಿಗಳ ಹೆಸರಲ್ಲಿ ಪ್ರಮಾಣ ಮಾಡಿ ಮಾತನ್ನು ಆರಂಭಿಸಲಾಗಿದೆ. ಕೆಲವೊಮ್ಮೆ, ಇಲ್ಲ, ಅದು ಸರಿಯಲ್ಲ, ಎಂದಿತ್ಯಾದಿಯಾಗಿ ಖಚಿತ ನಿರಾಕರಣೆಯೊಂದಿಗೆ ವಾದವನ್ನು ಮುಂದಿಡಲಾಗಿದೆ. ಇದರಲ್ಲಿ, ಪ್ರಕೃತಿ, ಇತಿಹಾಸ, ಆರ್ಥಿಕತೆ, ಶಿಕ್ಷಣ, ಆಧ್ಯಾತ್ಮ, ಕಾನೂನು, ನೈತಿಕ ಬೋಧನೆಗಳು…. ಹೀಗೆ ಎಲ್ಲ ವಿಷಯಗಳೂ ವಿವಿಧೆಡೆ ಚರ್ಚಿತವಾಗಿವೆ. ಅದರೆ ಎಲ್ಲೂ, ಒಂದು ನಿರ್ದಿಷ್ಟ ವಿಷಯವನ್ನು ಚರ್ಚೆಗೆತ್ತಿಕೊಂಡು, ಆ ಒಂದೇ ವಿಷಯಕ್ಕೆ ಸೀಮಿತವಾಗಿ ಸವಿಸ್ತಾರ ಚರ್ಚೆ ನಡೆಸುವ ವಿಧಾನವನ್ನು ಅನುಸರಿಸಲಾಗಿಲ್ಲ. ಒಂದೇ ವಿಷಯವನ್ನು ವಿವಿಧ ಅಧ್ಯಾಯಗಳಲ್ಲಿ ಪ್ರಸ್ತಾಪಿಸಿದ್ದೂ ಇದೆ. ಒಂದೇ ವಚನವನ್ನು ಒಂದೇ ಅಧ್ಯಾಯದಲ್ಲಿ ಹಲವು ಬಾರಿ ಪುನರಾವರ್ತಿಸಿದ್ದೂ ಇದೆ. ಉದಾ: 55:13ರಲ್ಲಿರುವ ಒಂದು ವಚನವನ್ನು ಅದೇ ಅಧ್ಯಾಯದಲ್ಲಿ 31 ಬಾರಿ ಆವರ್ತಿಸಲಾಗಿದೆ. ಹೊಲ, ತೋಟ, ಬೆಟ್ಟ, ನದಿ, ಸಮುದ್ರ ಹೀಗೆ ಪ್ರಕೃತಿಯ ವರ್ಣನೆ, ಇತಿಹಾಸದ ವಿವಿಧ ಮಜಲುಗಳ ಕಥನ, ಸಂಕ್ಷಿಪ್ತ ಕಥೆಗಳು, ಧಾರಾಳ ಉಪಮೆಗಳು, ಉದಾಹರಣೆಗಳು, ಮುಕ್ತ ಪ್ರಶಂಸೆ, ಉಗ್ರ ಖಂಡನೆ, ಎಚ್ಚರಿಕೆ, ಆಶ್ವಾಸನೆ, ಭರವಸೆ, ಸಾಂತ್ವನ ಇವೆಲ್ಲಾ ಕುರ್‌ಆನಿನ ಅಧ್ಯಯನ ನಡೆಸುವವರಿಗೆ ಪದೇ ಪದೇ ಕಾಣಲು ಸಿಗುತ್ತವೆ.

ಕುರ್‌ಆನಿನ ನೂರಾರು ವಚನಗಳ ಅಂತ್ಯದಲ್ಲಿ ಮತ್ತು ಕೆಲವು ವಚನಗಳ ಆರಂಭದಲ್ಲಿ ಅಲ್ಲಾಹನ ವಿವಿಧ ಗುಣಗಳನ್ನು ಹಾಗೂ ಸಾಮರ್ಥ್ಯಗಳನ್ನು ಪ್ರಸ್ತಾಪಿಸಲಾಗಿದೆ. ಮೇಲ್ನೋಟಕ್ಕೆ, ಈ ಗುಣಗಳಿಗೂ ಅವುಗಳ ಹಿಂದಿನ ಅಥವಾ ಮುಂದಿನ ವಚನಗಳಲ್ಲಿರುವ ವಿಷಯಗಳಿಗೂ ಯಾವುದೇ ಸಂಬಂಧ ಇರುವಂತೆ ತೋರುವುದಿಲ್ಲ. ಆದರೆ ತುಸು ಸೂಕ್ಷ್ಮವಾಗಿ ನೋಡಿದರೆ ಪ್ರಸ್ತುತ ಗುಣಗಳಿಗೂ, ಅವುಗಳ ಆಚೀಚೆ ಇರುವ ಮಾತುಗಳಿಗೂ ಬಹಳ ಆಳವಾದ ನಂಟು ಇರುವುದು ಸ್ಪಷ್ಟವಾಗಿ ಬಿಡುತ್ತದೆ. ಉದಾ: 2ನೇ ಅಧ್ಯಾಯದ 38ನೇ ವಚನದಲ್ಲಿ, ಆದಮರು(ಅ) ತಪ್ಪು ಮಾಡಿದ ಬಳಿಕ ಪಶ್ಚಾತ್ತಾಪ ಪಟ್ಟ ವಿಷಯವನ್ನು ಹೇಳಿದ ಬೆನ್ನಿಗೇ, ಅವನು (ಅಲ್ಲಾಹನು) ಪಶ್ಚಾತ್ತಾಪವನ್ನು ಸ್ವೀಕರಿಸುವವನು ಹಾಗೂ ಕರುಣಾಳುವಾಗಿದ್ದಾನೆ ಎನ್ನುವ ಮೂಲಕ, ಅಲ್ಲಾಹನ ಎರಡು ಗುಣಗಳನ್ನು ನೆನಪಿಸಿ, ವಚನವನ್ನು ಪೂರ್ತಿಗೊಳಿಸಲಾಗಿದೆ. ಇಲ್ಲಿ ಪ್ರಸ್ತಾಪಿಸಲಾಗಿರುವ ಆದಮರ(ಅ) ಕ್ರಿಯೆ ಮತ್ತು ಅಲ್ಲಾಹನ ಗುಣಗಳು – ಇವೆರಡರ ನಡುವೆ ನಂಟು ಕಲ್ಪಿಸುವುದು ಕಷ್ಟವೇನಲ್ಲ. ಇಲ್ಲಿ, ಅಲ್ಲಾಹನು ಆದಮರ(ಅ) ಪಶ್ಚಾತ್ತಾಪವನ್ನು ಸ್ವೀಕರಿಸಿರುವನು ಎಂದು ಪ್ರತ್ಯೇಕವಾಗಿ ತಿಳಿಸಿಲ್ಲವಾದರೂ ಅಲ್ಲಾಹನು ಅದನ್ನು ಸ್ವೀಕರಿಸಿರುವನು ಎಂಬ ಸೂಚನೆ ಮಾತ್ರ ಸಾಕಷ್ಟು ಸ್ಪಷ್ಟವಾಗಿದೆ. ಕುರ್‌ಆನಿನಲ್ಲಿ 200ಕ್ಕಿಂತಲೂ ಹೆಚ್ಚಿನ ವಚನಗಳು ‘‘ಕುಲ್’’ (ಹೇಳಿರಿ) ಎಂಬ ಆದೇಶದೊಂದಿಗೆ ಆರಂಭವಾಗುತ್ತವೆ. ಸಾಮಾನ್ಯವಾಗಿ, ಪ್ರವಾದಿವರ್ಯ(ಸ) ರನ್ನುದ್ದೇಶಿಸಿ, ನೀವು ಜನರೊಡನೆ ಈ ರೀತಿ ಹೇಳಿರೆಂದು ಆದೇಶಿಸಬೇಕಾದಾಗ ಕುರ್‌ಆನಿನಲ್ಲಿ ಈ ಶೈಲಿಯನ್ನು ಅನುಸರಿಸಲಾಗಿದೆ. ಎಷ್ಟೋ ಕಡೆ ಉಪದೇಶವು ಪ್ರಶ್ನೋತ್ತರ ಗಳ ರೂಪದಲ್ಲಿದೆ. ಹಲವೆಡೆ, ‘‘ಅವರು ನಿಮ್ಮೊಡನೆ ಕೇಳುತ್ತಾರೆ.’’ ‘‘.. ಅವರು ನಿಮ್ಮೊಡನೆ ಹೀಗೆಂದು ಕೇಳಿದರೆ…..’’ ‘‘ಕೇಳುವವನು, ಹೀಗೆಂದು ಕೇಳುತ್ತಾನೆ …..’’ ಎಂದಿತ್ಯಾದಿಯಾಗಿ ಮಾತು ಆರಂಭವಾಗುತ್ತದೆ. ಹೊಸದಾಗಿ ಕುರ್ ಆನಿನ ಅಧ್ಯಯನ ಆರಂಭಿಸಿದವರು ಕುರ್‌ಆನಿನ ವಚನಗಳೊಳಗೆ ಪದೇ ಪದೇ ಬದಲಾಗುವ ಧ್ವನಿಗಳಿಗೂ ಒಗ್ಗಿಕೊಳ್ಳಬೇಕಾಗುತ್ತದೆ. ಕೆಲವೊಮ್ಮೆ ಇಲ್ಲಿ ಒಂದೇ ವಚನದಲ್ಲಿ, ದೇವರು ಉತ್ತಮ ಪುರುಷನ (ಉದಾ: ನಾವು, ನಾನು, ನನ್ನ ) ಧ್ವನಿಯಲ್ಲಿ ಮಾತನ್ನು ಆರಂಭಿಸಿ, ಅದೇ ವಾಕ್ಯದ ಮಧ್ಯದಲ್ಲಿ ಅಥವಾ ಕೊನೆಯಲ್ಲಿ ತನ್ನ ಕುರಿತಾಗಿಯೇ, ತನ್ನ ಮಾತನ್ನು ಮಧ್ಯಮ ಪುರುಷ ಅಥವಾ ಪ್ರಥಮ ಪುರುಷನ ಧ್ವನಿಗೆ ಪರಿವರ್ತಿಸಿ ಬಿಡುವುದುಂಟು. ಇದಕ್ಕೆ ತದ್ವಿರುದ್ಧವಾಗಿ, ವಚನದ ಆರಂಭದಲ್ಲಿ ತನ್ನ ಕುರಿತು ಪ್ರಥಮ ಪುರುಷನ ಧಾಟಿಯನ್ನು ಬಳಸಿ, ಮುಂದೆ ಅದೇ ವಚನದಲ್ಲಿ, ತನ್ನ ಕುರಿತಾದ ಮಾತನ್ನು ಮಧ್ಯಮ ಪುರುಷ ಅಥವಾ ಉತ್ತಮ ಪುರುಷನ ಧಾಟಿಗೆ ಪರಿವರ್ತಿಸಿ ಬಿಡುವುದುಂಟು. ಅಂದರೆ ಅಲ್ಲಾಹನು ಒಂದೇ ವಾಕ್ಯದಲ್ಲಿ ತನ್ನ ಕುರಿತು, ನಾನು, ನಾವು , ಅವನು, ನೀನು, ಅಥವಾ ಅಲ್ಲಾಹನು ಎಂಬ ಪದಗಳನ್ನು ಬಳಸುವುದುಂಟು. ಇಂತಹದು, ಒಂದೇ ವಚನದಲ್ಲಿ ಸಂಭವಿಸಿದಂತೆ, ಬೆನ್ನು ಬೆನ್ನಿಗೆ ಬರುವ ವಚನಗಳಲ್ಲೂ ಸಂಭವಿಸುವುದುಂಟು (ಉದಾ: 20: 113/ 35:9/ 39:15/ 69: 41ರಿಂದ 4/ 89:25 ರಿಂದ 30). ತಾವು ಓದುತ್ತಿರುವುದು, ಒಂದು ವಿಶಿಷ್ಠ ಗ್ರಂಥವನ್ನು ಎಂಬ ಪ್ರಜ್ಞೆ ಮನಸ್ಸುಗಳಲ್ಲಿ ಜಾಗೃತವಾಗಿದ್ದರೆ, ಇಂತಹ ಶೈಲಿಯಿಂದ ಓದುಗರಿಗೆ ಸಮಸ್ಯೆಯೇನೂ ಆಗುವುದಿಲ್ಲ. ಇನ್ನು, ಅಧ್ಯಯನವು ಮುಂದುವರಿದಂತೆ ಕುರ್‌ಆನಿನ ಈ ಶೈಲಿ ಹೆಚ್ಚಿನ ಓದುಗರಿಗೆ ಹಿಡಿಸಲಾರಂಭಿಸುತ್ತದೆ.

4. ಮಕ್ಕಃ ಅಥವಾ ಮದೀನಾದ ಅಧ್ಯಾಯಗಳು; ಸಾಮಾನ್ಯವಾಗಿ, ಕುರ್‌ಆನಿನ ಮುದ್ರಿತ ಪ್ರತಿಗಳಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ, ಪ್ರತಿಯೊಂದು ಅಧ್ಯಾಯದ ಆರಂಭದಲ್ಲಿ, ಅದು ಮಕ್ಕಃದ ಅಧ್ಯಾಯ ಅಥವಾ ಮದೀನಾದ ಅಧ್ಯಾಯವೆಂಬ ಸೂಚನೆ ಇರುತ್ತದೆ. ಹೆಚ್ಚಿನ ಕುರ್‌ಆನ್ ಪ್ರತಿಗಳಲ್ಲಿ 86 ವಿವಿಧ ಅಧ್ಯಾಯಗಳ ಕುರಿತು, ಅವು ಮಕ್ಕಃ ದ ಅಧ್ಯಾಯಗಳೆಂದೂ 28 ಅಧ್ಯಾಯಗಳ ಕುರಿತು, ಅವು ಮದೀನಾದ ಅಧ್ಯಾಯಗಳೆಂದೂ ಸೂಚಿಸಲಾಗಿದೆ. ನಿಜವಾಗಿ ಇಲ್ಲಿ ಮಕ್ಕಃ ಅಥವಾ ಮದೀನಾ ಎಂಬ ಪದಗಳು ಕೇವಲ ಎರಡು ವಿಭಿನ್ನ ಪ್ರದೇಶಗಳನ್ನು ಸೂಚಿಸುವ ಬದಲು, ಎರಡು ವಿಭಿನ್ನ ಕಾಲಘಟ್ಟಗಳನ್ನು ಸೂಚಿಸುತ್ತವೆ. ದಿವ್ಯ ಸಂದೇಶವಾಗಿರುವ ಪವಿತ್ರ ಕುರ್‌ಆನ್ ಮಾನವ ಕುಲಕ್ಕೆ ತಲುಪಿದ್ದು, ಪ್ರವಾದಿ ಮುಹಮ್ಮದ್(ಸ) ಅವರ ಮೂಲಕ. ಅವರು 40ರ ಹರೆಯದಲ್ಲಿದ್ದಾಗ ವಿಶ್ವದೊಡೆಯನಾದ ಅಲ್ಲಾಹನು ಅವರನ್ನು ತನ್ನ ದೂತರಾಗಿ ನೇಮಿಸಿಕೊಂಡನು. ಈ ರೀತಿ, ಮನುಕುಲಕ್ಕೆ ತಲುಪಿಸಬೇಕೆಂಬ ಹೊಣೆಗಾರಿಕೆಯೊಂದಿಗೆ ಅವರಿಗೆ ದಿವ್ಯಸಂದೇಶವನ್ನು ನೀಡುವ ಪ್ರಕ್ರಿಯೆ ಆರಂಭವಾಯಿತು ಹಾಗೂ ಮುಂದಿನ ಸುಮಾರು 23 ವರ್ಷಗಳ ತನಕ, ಅಂದರೆ ಮುಹಮ್ಮದ್(ಸ)ರ ಜೀವನಾವಧಿಯುದ್ದಕ್ಕೂ ಮುಂದುವರಿಯಿತು. ಈ ಸಂದೇಶವನ್ನು ಪ್ರವಾದಿ ಮುಹಮ್ಮದ್(ಸ)ರಿಗೆ ವಿಭಿನ್ನ ಸನ್ನಿವೇಶಗಳಲ್ಲಿ ಸ್ವಲ್ಪ ಸ್ವಲ್ಪವಾಗಿ ಹಾಗೂ ಹಂತ ಹಂತವಾಗಿ ನೀಡಲಾಗಿತ್ತು. ಈ ರೀತಿ ತಾವು ದೂತರಾಗಿ ನಿಯುಕ್ತರಾದ ಅನಂತರದ 23 ವರ್ಷಗಳಪೈಕಿ ಸುಮಾರು 13 ವರ್ಷಗಳ ಕಾಲ ಪ್ರವಾದಿ (ಸ) ಮಕ್ಕಃದಲ್ಲಿದ್ದರು. ಅ ಬಳಿಕ ಅವರು ಮದೀನಾಗೆ ವಲಸೆ ಹೋದರು ಹಾಗೂ 10 ವರ್ಷಗಳ ಬಳಿಕ ಅಲ್ಲೇ ನಿಧನರಾದರು. ‘ಹಿಜ್ರತ್’ ಎಂದು ಕರೆಯಲಾಗುವ ಪ್ರಸ್ತುತ ವಲಸೆಯನ್ನು ಕುರ್‌ಆನಿನ ಹಾಗೂ ಇಸ್ಲಾಮಿನ ಇತಿಹಾಸದ ಒಂದು ನಿರ್ಣಾಯಕ ಘಟನೆಯೆಂದು ಪರಿಗಣಿಸಲಾಗಿದೆ. ಎಷ್ಟೆಂದರೆ, ಇಸ್ಲಾಮೀ ಶಕೆಯ ಗಣನೆ ಕೂಡಾ ಆ ಘಟನೆಯ ದಿನದಿಂದಲೇ ಆರಂಭವಾಗುತ್ತದೆ. ಆದ್ದರಿಂದಲೇ ಕುರ್‌ಆನ್‌ನ ಅಧ್ಯಾಯಗಳ ಪೈಕಿ, ವಲಸೆಗೆ ಮುನ್ನ ಕಳಿಸಿಕೊಡಲಾದ ಅಧ್ಯಾಯಗಳನ್ನು ಹಾಗೂ ವಲಸೆಯ ಬಳಿಕ ಕಳಿಸಿಕೊಡಲಾದ ಅಧ್ಯಾಯಗಳನ್ನು ಪ್ರತ್ಯೇಕಿಸಿ ಗುರುತಿಸುವ ಉದ್ದೇಶದಿಂದ ಈ ರೀತಿ ಪ್ರತಿಯೊಂದು ಅಧ್ಯಾಯದ ಆರಂಭದಲ್ಲೇ, ಮಕ್ಕಃ ಅಥವಾ ಮದೀನಾ ಎಂದು ಸೂಚಿಸಲಾಗುತ್ತದೆ. ಈ ದೃಷ್ಟಿಯಿಂದ, ಪ್ರಸ್ತುತ ಸೂಚನೆಯ ಉದ್ದೇಶ, ನಿರ್ದಿಷ್ಟ ಅಧ್ಯಾಯದ ಆಗಮನದ ಪ್ರದೇಶವನ್ನು ಸೂಚಿಸುವುದಕ್ಕಿಂತ ಹೆಚ್ಚಾಗಿ ಅದರ ಆಗಮನದ ಕಾಲವನ್ನು ಸೂಚಿಸುವುದಾಗಿದೆ.

ಈ ಕುರಿತಂತೆ ಗಮನದಲ್ಲಿರಬೇಕಾದ ಇನ್ನೊಂದು ಪ್ರಮುಖ ಅಂಶವೇನೆಂದರೆ, ಮಕ್ಕಃ ಎಂದು ಸೂಚಿಸಲಾಗಿರುವ ಕುರ್‌ಆನಿನ ಪ್ರತಿಯೊಂದು ಅಧ್ಯಾಯವೂ ಸಂಪೂರ್ಣವಾಗಿ ಮಕ್ಕಃದಲ್ಲೇ ಆಗಮಿಸಿರಬೇಕು ಅಥವಾ ಮದೀನ ಎಂದು ಸೂಚಿಸಲಾಗಿರುವ ಪ್ರತಿಯೊಂದು ಅಧ್ಯಾಯವೂ ಸಂಪೂರ್ಣವಾಗಿ ಮದೀನಾದಲ್ಲೇ ಆಗಮಿಸಿರಬೇಕೆಂಬ ನಿಯಮವೇನಿಲ್ಲ. ಮಕ್ಕಃ ಎಂದು ಸೂಚಿತವಾಗಿರುವ ಕೆಲವು ಅಧ್ಯಾಯಗಳಲ್ಲಿ, ಮಕ್ಕಃದ ಹೊರಗೆ, ಮಿನಾದಲ್ಲಿ, ಅರಫಾತ್‌ನಲ್ಲಿ ಅಥವಾ ಪ್ರಯಾಣಮಧ್ಯದಲ್ಲಿ ದೇವದೂತರಿಗೆ ಇಳಿಸಿಕೊಡಲಾದ ವಚನಗಳು ಮಾತ್ರವಲ್ಲ, ಖಚಿತವಾಗಿ ಮದೀನಾದಲ್ಲಿ ಆಗಮಿಸಿದ ಕೆಲವು ವಚನಗಳು ಇರುವ ಸಾಧ್ಯತೆ ಇದೆ. ಹಾಗೆಯೇ, ಮದೀನಾ ಎಂದು ಸೂಚಿತವಾಗಿರುವ ಕೆಲವು ಅಧ್ಯಾಯಗಳಲ್ಲಿ, ಮದೀನಾದಿಂದ ನೂರಾರು ಮೈಲು ದೂರ ಅನಾವರಣಗೊಂಡ ವಚನಗಳು, ಮಾತ್ರವಲ್ಲ, ಖಚಿತವಾಗಿ ಮಕ್ಕಃದಲ್ಲಿ ಆಗಮಿಸಿದ ಕೆಲವು ವಚನಗಳು ಇರುವ ಸಾಧ್ಯತೆ ಇದೆ. ಉದಾ: 17ನೆಯ ಅಧ್ಯಾಯವು ಮಕ್ಕಃದ ಅಧ್ಯಾಯಗಳ ಸಾಲಿಗೆ ಸೇರಿದೆ. ಅದರೆ ಅದರ 73ನೆಯ ವಚನವು ಮದೀನಾದಲ್ಲಿ ಸಂಭವಿಸಿದ ಒಂದು ಘಟನೆಗೆ ಸಂಬಂಧಿಸಿದೆ. ಹಾಗೆಯೇ, ಮದೀನಾ ಎಂದು ಸೂಚಿತ 4ನೆಯ ಅಧ್ಯಾಯದಲ್ಲಿರುವ 58ನೆಯ ವಚನವು ಮಕ್ಕಃದಲ್ಲಿ ಆಗಮಿಸಿದ್ದೆಂಬ ಕುರಿತು ಬಹುತೇಕ ಒಮ್ಮತವಿದೆ.

5.ಕೆಲವು ಅಧ್ಯಾಯಗಳ ಆರಂಭದಲ್ಲಿರುವ ಬಿಡಿ ಅಕ್ಷರಗಳು: ಅಲಿಫ್ ಲಾಮ್ ಮೀಮ್ – ಇವು ಅರಬಿ ಲಿಪಿಯ ಮೂರು ಪ್ರತ್ಯೇಕ ಅಕ್ಷರಗಳು. ಕುರ್‌ಆನಿನ ಒಟ್ಟು 29 ಅಧ್ಯಾಯಗಳ ಆರಂಭದಲ್ಲಿ ಇಂತಹ ವಿಭಿನ್ನ ಬಿಡಿ ಅಕ್ಷರಗಳು ಕಂಡು ಬರುತ್ತವೆ. 3 ಅಧ್ಯಾಯಗಳ ಅರಂಭದಲ್ಲಿ ಕೇವಲ ಒಂದು ಬಿಡಿ ಅಕ್ಷರವಿದೆ (ಅಧ್ಯಾಯ 38, 50 ಮತ್ತು 68). 9 ಅಧ್ಯಾಯಗಳ ಆರಂಭದಲ್ಲಿ 2 ಬಿಡಿ ಅಕ್ಷರಗಳಿವೆ (ಅಧ್ಯಾಯ 20, 27, 36, 40, 41, 43, 44,45 ಮತ್ತು 46). 13 ಅಧ್ಯಾಯಗಳ ಅರಂಭದಲ್ಲಿ 3 ಬಿಡಿ ಅಕ್ಷರಗಳಿವೆ (ಅಧ್ಯಾಯ 2,3, 10, 11, 12, 14, 15, 26, 28, 29, 30, 31 ಮತ್ತು 32). ಎರಡು ಅಧ್ಯಾಯಗಳ ಆರಂಭದಲ್ಲಿ 4 ಬಿಡಿ ಅಕ್ಷರಗಳಿವೆ (ಅಧ್ಯಾಯ 7 ಮತ್ತು 13) ಮತ್ತು ಎರಡು ಅಧ್ಯಾಯಗಳ ಆರಂಭದಲ್ಲಿ 5 ಬಿಡಿ ಅಕ್ಷರಗಳಿವೆ (ಅಧ್ಯಾಯ 19 ಮತ್ತು 42). ಅರಬಿ ಅಕ್ಷರಮಾಲೆಯ ಒಟ್ಟು 14 ವಿವಿಧ ಅಕ್ಷರಗಳನ್ನು ಕುರ್‌ಆನಿನ ಪ್ರಸ್ತುತ ಅಧ್ಯಾಯಗಳ ಆರಂಭದಲ್ಲಿ ಬಳಸಲಾಗಿದೆ. ಮೇಲ್ನೋಟಕ್ಕೆ ಯಾವುದೇ ನಿರ್ದಿಷ್ಟ ಅರ್ಥ ಇಲ್ಲದ ಈ ಬಿಡಿ ಅಕ್ಷರಗಳಿಗೆ ಅರ್ಥ ನೀಡಲು ಹಲವು ವ್ಯಾಖ್ಯಾನಕಾರರು ಶ್ರಮಿಸಿದ್ದಾರೆ. ಉದಾ; ಇವು ಅಲ್ಲಾಹನ ನಾಮಗಳು, ಇವು ಆಯಾ ಅಧ್ಯಾಯದ ಹೆಸರುಗಳು, ಇವು ಪ್ರವಾದಿ ಮುಹಮ್ಮದ್(ಸ)ರನ್ನು ಅಕ್ಕರೆಯಿಂದ ಕರೆಯುವುದಕ್ಕೆ ಬಳಸಲಾಗಿರುವ ಹೆಸರುಗಳು-ಇತ್ಯಾದಿ. ಕೆಲವರು ಈ ಎಲ್ಲ ಬಿಡಿ ಅಕ್ಷರಗಳನ್ನು ಜೋಡಿಸಿ ವಾಕ್ಯಗಳನ್ನು ರಚಿಸಿದ್ದೂ ಇದೆ. ಈ ಕುರಿತಂತೆ ವ್ಯಾಪಕ ಸಂಶೋಧನೆ ನಡೆಸಿರುವ ಕುರ್‌ಆನ್ ವ್ಯಾಖ್ಯಾನಕಾರ ಅಲ್ಲಾಮಾ ಹಮೀದುದ್ದೀನ್ ಫರಾಹಿ (ರ) ಅವರು ಮಂಡಿಸಿರುವ ವಾದಗಳು ಗಮನಾರ್ಹವಾಗಿದೆ. ಅವರ ಪ್ರಕಾರ ಪ್ರಾಚೀನ ಅರೇಬಿಯಾದಲ್ಲಿ ಇಬ್ರಾನೀ ಅಥವಾ ಹಿಬ್ರೂ ಭಾಷೆಯ ಅಕ್ಷರಗಳು ಬಳಕೆಯಲ್ಲಿದ್ದವು. ಅರಬೀ ಅಕ್ಷರಗಳು ಪ್ರಸ್ತುತ ಹೀಬ್ರೂ ಮೂಲದಿಂದಲೇ ವಿಕಾಸಗೊಂಡವು. ಇಂಗ್ಲಿಷ್, ಹಿಂದಿ ಮತ್ತಿತರ ಕೆಲವು ಭಾಷೆಗಳ ಅಕ್ಷರಗಳು ಕೇವಲ ಸ್ವರ ಅಥವಾ ಧ್ವನಿಯನ್ನು ಪ್ರತಿನಿಧಿಸುತ್ತವೆ. ಆದರೆ ಪ್ರಾಚೀನ ಚೀನೀ, ಹಿಬ್ರೂ, ಅರಬೀ ಮುಂತಾದ ಕೆಲವು ಭಾಷೆಗಳ ಧ್ವನಿಯನ್ನು ಪ್ರತಿನಿಧಿಸುವ ಜೊತೆಗೇ ನಿರ್ದಿಷ್ಟ ವಸ್ತುಗಳನ್ನು ಪ್ರತಿನಿಧಿಸುತ್ತಿದ್ದವು. ಈಜಿಪ್ತ್‌ನ ಪ್ರಾಚೀನ ಪಿರಮಿಡ್ಡುಗಳಲ್ಲಿ ವಿವಿಧ ಆಶಯಗಳ ಪ್ರಕಟಣೆಗೆ ಇಂತಹ ಅಕ್ಷರಗಳನ್ನೇ ಚಿತ್ರಿಸಲಾಗಿದೆ. ಭಾಷೆ ಬೆಳೆಯುತ್ತಾ ಹೋದಂತೆ, ವಿವಿಧ ಅಕ್ಷರಗಳು ಯಾವ ನಿರ್ದಿಷ್ಟ ವಸ್ತುಗಳನ್ನು ಪ್ರತಿನಿಧಿಸುತ್ತವೆ ಎಂಬ ಮಾಹಿತಿಯೂ ಬಹುಮಟ್ಟಿಗೆ ಕಳೆದು ಹೋಯಿತು. ಕೇವಲ ಕೆಲವು ಅಕ್ಷರಗಳ ಹಿನ್ನೆಲೆಗಳ ಕುರಿತಾದ ನೆನಪುಗಳು ಮಾತ್ರ ಉಳಿದುಕೊಂಡವು.

ಉದಾ: ಅಲಿಫ್ ಎಂಬುದು ಅರಬಿ ಅಕ್ಷರಮಾಲೆಯ ಪ್ರಥಮ ಅಕ್ಷರ. ಇದು ಕನ್ನಡದ ’ಅ’ ಅಥವಾ ಇಂಗ್ಲಿಷ್ ಭಾಷೆಯ ‘ಎ’ ಎಂಬ ಸ್ವರವನ್ನು ಪ್ರತಿನಿಧಿಸುತ್ತದೆ. ಒಂದು ಕಾಲದಲ್ಲಿ ಇದನ್ನು ದನ ಎಂಬ ಅರ್ಥದಲ್ಲಿ ಬಳಸಲಾಗುತ್ತಿತ್ತು. ಅಂದು ಈ ಅಕ್ಷರವನ್ನು ದನದ ತಲೆಯ ಆಕೃತಿಯಲ್ಲಿ ಬರೆಯುತ್ತಿದ್ದರು. ಇದು ಅರಬೀ ಭಾಷೆಯ ಇತಿಹಾಸ ಬಲ್ಲವರಿಗೆಲ್ಲಾ ತಿಳಿದಿರುವ ವಿಷಯ. ಪ್ರಾಚೀನ ಹಿಬ್ರೂ ಭಾಷೆಯಲ್ಲಿ ‘ಬಾ’ (ಬ) ಎಂಬ ಅಕ್ಷರವನ್ನು ಮನೆಯ ರೂಪದಲ್ಲಿ ಬರೆಯುತ್ತಿದ್ದರು. ಆ ಕಾಲದಲ್ಲಿ ‘ಬ‘ ಅಕ್ಷರವೇ ಮನೆ ಎಂಬ ಅರ್ಥದಲ್ಲಿ ಬಳಕೆಯಲ್ಲಿತ್ತು. ಹಾಗೆಯೇ ಹಿಬ್ರೂ ಭಾಷೆಯ ಜೀಮ್ (ಜ) ಎಂಬ ಅಕ್ಷರವನ್ನು ಒಂಟೆ ಎಂಬ ಅಥರ್ದಲ್ಲಿ ಜಮಲ್ ಎಂದು ಉಚ್ಚರಿಸಲಾಗುತ್ತಿತ್ತು ಮತ್ತು ಅದನ್ನು ಒಂಟೆಯ ಆಕೃತಿಯಲ್ಲಿ ಬರೆಯಲಾಗುತ್ತಿತ್ತು. ‘ತ್ವಾ’ ಎಂಬ ಅಕ್ಷರವು ಹಾವು ಎಂಬ ಅರ್ಥದಲ್ಲಿ ಬಳಕೆಯಲ್ಲಿದ್ದು, ಅದನ್ನು ಹಾವಿನ ಆಕೃತಿಯಲ್ಲಿ ಬರೆಯುತ್ತಿದ್ದರು. ಹಾಗೆಯೇ, ‘ಮೀಮ್’ (ಮ) ಎಂಬ ಅಕ್ಷರವು ನೀರಿನ ಅಲೆಯನ್ನು ಪ್ರತಿನಿಧಿಸುತ್ತಿತ್ತು. ಅದನ್ನು ನೀರಿನ ಅಲೆಯನ್ನು ಹೋಲುವಂತಹ ಚಿತ್ರದ ರೂಪದಲ್ಲಿ ಬರೆಯುತ್ತಿದ್ದರು. ಈ ಹಿನ್ನೆಲೆಯಲ್ಲಿ ಕುರ್‌ಆನಿನ ಹಲವು ಅಧ್ಯಾಯಗಳ ಆರಂಭದಲ್ಲಿರುವ ಬಿಡಿ ಅಕ್ಷರಗಳು ಆಯಾ ಅಧ್ಯಾಯದೊಳಗಿನ ಯಾವುದಾದರೂ ಪ್ರಮುಖ ವಸ್ತುವನ್ನು ಪ್ರತಿನಿಧಿಸುತ್ತವೆ ಎಂದು ಅಲ್ಲಾಮಾ ಫರಾಹಿ (ರ) ವಾದಿಸಿದ್ದಾರೆ. ಉದಾ: 68ನೇ ಅಧ್ಯಾಯವು ‘ನೂನ್’ (ನ) ಎಂಬ ಬಿಡಿ ಅಕ್ಷರದೊಂದಿಗೆ ಆರಂಭವಾಗುತ್ತದೆ. ನೂನ್ ಎಂದರೆ ಮೀನು. ಈ ಅಕ್ಷರದ ಆಕಾರ ಕೂಡ ಮೀನನ್ನು ಹೋಲುವಂತಿದೆ. ಈ ಅಧ್ಯಾಯದಲ್ಲಿ ಪ್ರವಾದಿ ಯೂನುಸ್ (ಅ)ರನ್ನು ಮೀನು ನುಂಗಿದ ಘಟನೆ ಪ್ರಸ್ತಾಪಿತವಾಗಿದೆ. ಹಾಗೆಯೇ ಕುರ್‌ಆನಿನ 20, 26, 27 ಮತ್ತು 28ನೇ ಅಧ್ಯಾಯಗಳ ಆರಂಭದಲ್ಲಿ ಕ್ರಮವಾಗಿ ತ್ವಾಹಾ, ತ್ವಾ ಸೀನ್ ಮೀಮ್, ತ್ವಾ ಸೀನ್ ಮತ್ತು ತ್ವಾ ಸೀನ್ ಮೀಮ್ ಎಂಬ ಬಿಡಿ ಅಕ್ಷರಗಳಿವೆ. ಈ ಪೈಕಿ ತ್ವಾ ಎಂಬ ಅಕ್ಷರವು ಪ್ರಸ್ತುತ ನಾಲ್ಕು ಅಧ್ಯಾಯಗಳ ಆರಂಭದಲ್ಲೂ ಸಮಾನವಾಗಿ ಕಂಡು ಬರುತ್ತದೆ. ಪ್ರಾಚೀನ ಕಾಲದಲ್ಲಿ ಈ ಅಕ್ಷರವನ್ನು ಹಾವಿನ ಆಕಾರದಲ್ಲಿ ಬರೆಯಲಾಗುತ್ತಿತ್ತು. ಗಮನಾರ್ಹ ಅಂಶವೇನೆಂದರೆ, ಈ ಅಕ್ಷರದೊಂದಿಗೆ ಆರಂಭವಾಗುವ ಪ್ರಸ್ತುತ ಎಲ್ಲ ಅಧ್ಯಾಯಗಳಲ್ಲಿ ಹಾವಿನ ಪ್ರಸ್ತಾಪವಿದೆ. ಈ ದೃಷ್ಟಿಯಿಂದ ಪ್ರಸ್ತುತ ಅಕ್ಷರಗಳು ಆಯಾ ಅಧ್ಯಾಯಗಳ ಹೆಸರುಗಳಾಗಿರುವ ಸರ್ವ ಸಾಧ್ಯತೆ ಇದೆ.

ಆದರೆ ಇಂತಹ ಯಾವುದೇ ವ್ಯಾಖ್ಯಾನಕ್ಕೆ ವ್ಯಾಪಕ ಮನ್ನಣೆ ದೊರಕಿಲ್ಲ. ಕುರ್‌ಆನಿನ ಆಗಮನದ ಕಾಲದಲ್ಲಿ ಈ ರೀತಿ ಬಿಡಿ ಅಕ್ಷರಗಳನ್ನು ಉಚ್ಚರಿಸಿ ಆ ಬಳಿಕ ಮಾತನ್ನು ಆರಂಭಿಸುವ ಶೈಲಿ ಬಹುಶಃ ಪರಿಚಿತವಾಗಿತ್ತು. ಆದ್ದರಿಂದಲೇ, ಕುರ್‌ಆನಿನ ಒಂದೊಂದು ಹೇಳಿಕೆಯಲ್ಲೂ ದೋಷ ಹುಡುಕಿ ಆ ಕುರಿತು ಜಗಳಾಡುತ್ತಿದ್ದ, ಪ್ರವಾದಿವರ್ಯರ (ಸ) ಸಮಕಾಲೀನ ವಿರೋಧಿಗಳು ಈ ವಿಷಯದಲ್ಲಿ ಯಾವುದೇ ತಕರಾರು ಎಬ್ಬಿಸಿದ ದಾಖಲೆ ಇಲ್ಲ. ಹಾಗೆಯೇ, ಹೆಚ್ಚಿನ ವಿಷಯಗಳಲ್ಲಿ ಪ್ರವಾದಿವರ್ಯ(ಸ)ರೊಡನೆ ವಿವರಣೆ ಕೇಳುತ್ತಿದ್ದ ಅವರ ಅನುಯಾಯಿಗಳು ಕೂಡಾ ಈ ಕುರಿತು ಯಾವುದೇ ಪ್ರಶ್ನೆ ಕೇಳಿದ ಪ್ರಸ್ತಾಪ ಕಂಡು ಬರುವುದಿಲ್ಲ. ಅಲ್ಲದೆ, ಒಂದು ವಿಷಯದಲ್ಲಿ ಅಧಿಕೃತ ಹಾಗೂ ಅವಲಂಬನೀಯ ಮಾಹಿತಿ ಲಭ್ಯವಿಲ್ಲದ ಸನ್ನಿವೇಶದಲ್ಲಿ ಆ ಕುರಿತು ಊಹಾಪೋಹಗಳನ್ನು ನಡೆಸುವ ಬದಲು, ಮಾನವರೆಂಬ ನೆಲೆಯಲ್ಲಿ ನಮ್ಮ ಜ್ಞಾನ ಹಾಗೂ ಸಾಮರ್ಥ್ಯಗಳ ಇತಿಮಿತಿಗಳನ್ನು ಒಪ್ಪಿಕೊಂಡು ಮುಂದುವರಿಯುವುದು ಲೇಸು.

6. ಪ್ರವಾದಿಗಳು ಮತ್ತು ದಿವ್ಯ ಗ್ರಂಥಗಳು; ಮಾನವರನ್ನು ಸೃಷ್ಟಿಸಿ ಅವರಿಗೆ ಬದುಕನ್ನು ಕರುಣಿಸಿದ ದೇವರು, ಹೇಗೆ ಬದುಕಬೇಕೆಂಬ ವಿಷಯದಲ್ಲಿ ಮಾನವನನ್ನು ಕತ್ತಲಲ್ಲಿ ಬಿಟ್ಟುಬಿಡಲಿಲ್ಲ. ತನ್ನ ದಾರಿಯನ್ನು ತನ್ನ ಇಚ್ಛಾನುಸಾರ ತಾನೇ ಕಂಡುಕೊಳ್ಳುವ ಹೊಣೆಗಾರಿಕೆಯನ್ನೂ ಅವನು, ಸೀಮಿತ ಸಾಮರ್ಥ್ಯದ ಮಾನವನ ಮೇಲೆ ಹೊರಿಸಲಿಲ್ಲ. ಬದುಕು ಮತ್ತು ಬದುಕಿಗೆ ಬೇಕಾದ ಸಕಲವನ್ನೂ ನೀಡಿದ ಆ ದೇವರೇ, ಮಾನವನಿಗೆ ಬದುಕಿನ ವಿಧಾನವನ್ನು ಕಲಿಸುವ ಏರ್ಪಾಡನ್ನೂ ಮಾಡಿರುವನು. ಅವನು, ತಾನು ಈ ಭೂಮಿಗೆ ಕಳಿಸಿದ ಪ್ರಥಮ ಮಾನವ ಜೋಡಿಗೆ ಸನ್ಮಾರ್ಗವನ್ನು ತೋರಿದ್ದನು. ಮಾತ್ರವಲ್ಲ, ಪ್ರಥಮ ಮಾನವನನ್ನೇ ಇತರ ಮಾನವರಿಗೆ ಸರಿದಾರಿಯನ್ನು ತೋರಿಸಿಕೊಡುವ ಹೊಣೆಹೊತ್ತ ಮಾರ್ಗದರ್ಶಿಯಾಗಿ ನೇಮಿಸಿದ್ದನು. ಈ ರೀತಿ ಅರಂಭವಾದ ಮಾರ್ಗದರ್ಶನದ ಸರಣಿಯು ಮಾನವ ಇತಿಹಾಸದ ಸಂಗಾತಿಯಾಗಿ ಮಾನವನ ಜೊತೆಗೇ ಮುಂದುವರಿಯಿತು. ಮಾನವರ ಪ್ರತಿಯೊಂದು ಸಮುದಾಯದಲ್ಲೂ ಅವರಲ್ಲೊಬ್ಬರನ್ನು ದೂತರಾಗಿ ಹಾಗೂ ಮಾರ್ಗದರ್ಶಿಯಾಗಿ ನೇಮಿಸಿ, ಬದುಕನ್ನು ಸಾರ್ಥಕಗೊಳಿಸುವ ವಿಧಾನವನ್ನು ಅವರ ಮೂಲಕ ಇತರರಿಗೆ ಕಲಿಸಲಾಯಿತು. ನೂಹ್, ಇಬ್ರಾಹೀಮ್, ಮೂಸಾ, ಈಸಾ ಇಬ್ನು ಮರ್ಯಮ್ (ಅ) ಅವರೆಲ್ಲಾ ಪ್ರವಾದಿ ಮುಹಮ್ಮದ್(ಸ)ರಿಗಿಂತ ಮುನ್ನ ವಿವಿಧ ಕಾಲಗಳಲ್ಲಿ ಹಾಗೂ ವಿವಿಧ ಭೂಭಾಗಗಳಲ್ಲಿ ಮಾನವರ ಮಾರ್ಗದರ್ಶನಕ್ಕಾಗಿ ನಿಯುಕ್ತ ದೂತರಾಗಿದ್ದರು. ಹಾಗೆಯೇ, ಝಬೂರ್, ತೌರಾತ್, ಇಂಜೀಲ್ ಇವೆಲ್ಲಾ ಪವಿತ್ರ ಕುರ್‌ಆನಿನ ಆಗಮನಕ್ಕೆ ಮುನ್ನ ವಿವಿಧ ದೂತರ ಮೂಲಕ ವಿವಿಧ ಸಮುದಾಯಗಳಿಗೆ ಕಳಿಸಿಕೊಡಲಾಗಿದ್ದ ದಿವ್ಯ ಗ್ರಂಥಗಳಾಗಿದ್ದುವು. ಪವಿತ್ರ ಕುರ್‌ಆನ್, ಅಲ್ಲಾಹನು ಈ ಲೋಕಕ್ಕೆ ಕಳಿಸಿದ ದಿವ್ಯ ಸಂದೇಶಗಳ ದೀರ್ಘ ಸರಣಿಯ ಕೊನೆಯ ಕೊಂಡಿಯಾಗಿದೆ. ಹಾಗೆಯೇ, ಪ್ರವಾದಿ ಮುಹಮ್ಮದ್(ಸ) ಮಾನವಕುಲದ ಮಾರ್ಗದರ್ಶನಕ್ಕಾಗಿ ದೇವರಿಂದ ನಿಯುಕ್ತರಾಗಿದ್ದ ಸಹಸ್ರಾರು ಪ್ರವಾದಿಗಳು ಮತ್ತು ನೂರಾರು ದೇವದೂತರ ಸಾಲಿನ ಕೊನೆಯ ಸದಸ್ಯರು. ಈ ರೀತಿ, ಕುರ್‌ಆನ್ ಹಾಗೂ ಪ್ರವಾದಿ ಮುಹಮ್ಮದ್(ಸ) ತಮ್ಮ ಆಗಮನಾನಂತರದ ಎಲ್ಲ ಕಾಲಗಳ, ಎಲ್ಲೆಡೆಯ ಎಲ್ಲ ಮಾನವರ ಪಾಲಿಗೆ ಸತ್ಯ, ನ್ಯಾಯ ಹಾಗೂ ಸನ್ಮಾರ್ಗವನ್ನು ಅರಿಯುವ ಅವಲಂಬನೀಯ ಮೂಲವಾಗಿದ್ದಾರೆ.

7. ನಬೀ ಮತ್ತು ರಸೂಲ್: ನಬೀ ಮತ್ತು ರಸೂಲ್‌ಗಳು, ಮಾನವಕುಲಕ್ಕೆ ವಿಜಯದ ದಾರಿಯನ್ನು ತೋರಿಸಲು ಅಲ್ಲಾಹನು ನೇಮಿಸಿದ ಅಧಿಕೃತ ಮಾರ್ಗದರ್ಶಿಗಳು. ನಬೀ ಎಂದರೆ ಮುನ್ನೆಚ್ಚರಿಕೆ ನೀಡುವವನು. ಸತ್ಯವನ್ನು ಧಿಕ್ಕರಿಸಿ ಸನ್ಮಾರ್ಗವನ್ನು ಕಡೆಗಣಿಸಿದರೆ, ಆ ಧೋರಣೆಯ ದುಷ್ಪರಿಣಾಮ ಏನಾದೀತೆಂದು ಜನರನ್ನು ಎಚ್ಚರಿಸುವವನು. ರಸೂಲ್ ಎಂದರೆ ಕಳಿಸಲಾದವನು ಅಥವಾ ದೂತ. ಅಂದರೆ, ಅಲ್ಲಾಹನ ಸಂದೇಶವನ್ನು ಮಾನವರಿಗೆ ತಲುಪಿಸುವ ದೂತ ಅಥವಾ ಪ್ರತಿನಿಧಿ. ಮಾನವರ ಮಾರ್ಗದರ್ಶನಕ್ಕಾಗಿ ನಿಯುಕ್ತ ನಬೀಗಳು ಮತ್ತು ರಸೂಲ್‌ಗಳು ಇಬ್ಬರೂ ಮಾನವರೇ ಆಗಿರುತ್ತಾರೆ. ನಬೀ ಮತ್ತು ರಸೂಲರಿಗೆ ಅಲ್ಲಾಹನ ಸಂದೇಶವನ್ನು ತಲುಪಿಸುವ ದೂತರು ಮಲಕ್‌ಗಳಾಗಿರುತ್ತಾರೆ. ಸ್ಥಾನ ಮಾನದ ದೃಷ್ಟಿಯಿಂದ ರಸೂಲರ ಹುದ್ದೆ ನಬೀಗಳ ಹುದ್ದೆಗಿಂತ ದೊಡ್ಡದು. ಎಲ್ಲ ರಸೂಲರೂ ಅಲ್ಲಾಹನಿಂದ ನಿಯುಕ್ತ ನಬೀಗಳಾಗಿರುತ್ತಾರೆ. ಆದರೆ ನಬೀಗಳೆಲ್ಲಾ ರಸೂಲರಾಗಿರುವುದಿಲ್ಲ. ನಬೀಗಳ ಪೈಕಿ ಕೆಲವರನ್ನು ಆರಿಸಿ, ರಸೂಲರ ಹುದ್ದೆಗೆ ನಿಯೋಜಿಸಲಾಗುತ್ತದೆ. ರಸೂಲರಾದವರಿಗೆ ಕೆಲವು ಅಸಾಮಾನ್ಯ ಸಾಮರ್ಥ್ಯಗಳನ್ನು, ಒಂದು ಹೊಸ ಮಾರ್ಗದರ್ಶಿ ಗ್ರಂಥವನ್ನು ಹಾಗೂ ಒಂದು ಹೊಸ ‘ಶರೀಅತ್’ ಅಥವಾ ಕಾನೂನು ಸಂಹಿತೆಯನ್ನು ನೀಡಲಾಗುತ್ತದೆ. (ಈ ಕೃತಿಯಲ್ಲಿ ‘ನಬೀ’ ಪದವನ್ನು ಪ್ರವಾದಿ ಎಂದೂ ‘ರಸೂಲ್’ ಪದವನ್ನು ದೂತ ಅಥವಾ ದೇವದೂತ ಎಂದೂ ಅನುವಾದಿಸಲಾಗಿದೆ).

8. ಕುರ್ಆನ್ ಸಂಗ್ರಹದ ಇತಿಹಾಸ; ಕುರ್‌ಆನಿಗಿಂತ ಹಿಂದೆ ಮಾನವ ಸಮಾಜಕ್ಕೆ ನೀಡಲಾಗಿದ್ದ ದಿವ್ಯ ಗ್ರಂಥಗಳೆಲ್ಲಾ, ಪುರೋಹಿತರು, ಆಡಳಿತಗಾರರು ಮತ್ತಿತರ ಹಲವರ ಇಚ್ಛಾನುಸಾರ, ಹಲವು ಹಸ್ತಕ್ಷೇಪಗಳಿಗೆ ಹಾಗೂ ವಿವಿಧ ವಿಕೃತಿಗಳಿಗೆ ತುತ್ತಾಗಿ, ಕಾಲಕ್ರಮೇಣ ತಮ್ಮ ಮೂಲಸ್ವರೂಪವನ್ನೇ ಕಳೆದುಕೊಂಡವು.ಅದರೆ ಪವಿತ್ರ ಕುರ್‌ಆನ್ ಇಂತಹ ಯಾವುದೇ ದುರಂತಕ್ಕೆ ತುತ್ತಾಗಲಿಲ್ಲ, ಮಾತ್ರವಲ್ಲ, ಅದು ಯಾವ ಕಾಲದಲ್ಲೂ ಅಂತಹ ಯಾವುದೇ ವಿಕೃತಿಗೆ ಒಳಗಾಗುವ ಸಾಧ್ಯತೆ ಕೂಡಾ ಇಲ್ಲ. ಏಕೆಂದರೆ, ಇದು ಮಾನವಕುಲದ ಮಾರ್ಗದರ್ಶನಕ್ಕಿರುವ ಅಂತಿಮ ಮೂಲವಾಗಿದ್ದು, ಇದನ್ನು ಕಳಿಸಿರುವ ಅಲ್ಲಾಹನೇ ಇದನ್ನು ಸಂರಕ್ಷಿಸುವ ಹೊಣೆಹೊತ್ತಿರುವನು. ಪ್ರವಾದಿ ಮುಹಮ್ಮದ್(ಸ)ರಿಗೆ ಅಲ್ಲಾಹನ ಕಡೆಯಿಂದ ಪ್ರಥಮ ದಿವ್ಯ ಸಂದೇಶವು ಕ್ರಿ.ಶ. 610ರಲ್ಲಿ ಪ್ರಾಪ್ತವಾಗಿತ್ತು. ಅನಂತರದ 23 ವರ್ಷಗಳ ಅವಧಿಯಲ್ಲಿ ಹಂತ ಹಂತವಾಗಿ ಕುರ್‌ಆನಿನ ಭಾಗಗಳು ಅವರಿಗೆ ಪ್ರಾಪ್ತವಾಗುತ್ತಲೇ ಇದ್ದವು. ಪ್ರವಾದಿವರ್ಯ(ಸ)ರ ನಿಧನಕ್ಕೆ ಕೆಲವೇ ದಿನ ಮುನ್ನ ಕ್ರಿ.ಶ.632ರಲ್ಲಿ ಈ ಸರಣಿ ಪರಿಪೂರ್ಣಗೊಂಡಿತು.

ಈ ರೀತಿ, ಕುರ್‌ಆನಿನ ಅನಾವರಣದ ಪ್ರಕ್ರಿಯೆಯು ಪೂರ್ಣವಾಗುತ್ತಿದ್ದಂತೆಯೇ, ಅದನ್ನು ಸಂರಕ್ಷಿಸುವ ಪ್ರಕ್ರಿಯೆಯ ಒಂದು ನಿರ್ಣಾಯಕ ಹಂತವೂ ಪೂರ್ಣಗೊಂಡಿತ್ತು. ಪ್ರವಾದಿವರ್ಯ(ಸ)ರ ಬದುಕಿನ ಅವಧಿಯಲ್ಲೇ, ಎರಡೆರಡು ವಿಧಾನಗಳಿಂದ ಕುರ್‌ಆನನ್ನು ಸುರಕ್ಷಿತವಾಗಿ ದಾಖಲಿಸಲಾಗಿತ್ತು; 1. ದಿವ್ಯ ಸಂದೇಶವನ್ನು ಕಂಠ ಪಾಠ ಮಾಡುವ ಮೂಲಕ ಮತ್ತು 2. ಅದನ್ನು ಲಿಖಿತವಾಗಿ ದಾಖಲಿಸುವ ಮೂಲಕ. ಅಂದರೆ ಪ್ರಥಮವಾಗಿ, ಮಾನವ ಮಸ್ತಿಷ್ಕಗಳಲ್ಲೇ ಕುರ್‌ಆನನ್ನು ಸಂರಕ್ಷಿಸಲಾಯಿತು. ಸಾಕ್ಷಾತ್ ಪ್ರವಾದಿ ಮುಹಮ್ಮದ್(ಸ) ಪವಿತ್ರ ಕುರ್‌ಆನಿನ ಪ್ರಥಮ ‘ಹಾಫಿಝ್’ ಆಗಿದ್ದರು. (ಹಾಫಿಝ್ ಎಂದರೆ ಸಂರಕ್ಷಕ. ಕುರ್‌ಆನನ್ನು ಸಂಪೂರ್ಣ ಕಂಠಪಾಠ ಮಾಡಿಕೊಂಡವರನ್ನು ಹಾಫಿಝ್‌ಗಳೆಂದು ಗುರುತಿಸಲಾಗುತ್ತದೆ). ಪ್ರವಾದಿವರ್ಯ(ಸ)ರ ಸಂಗಾತಿ (ಸಹಾಬಿ)ಗಳ ಪೈಕಿ, ಅಬೂಬಕರ್(ರ), ಉಮರ್(ರ), ಉಸ್ಮಾನ್(ರ), ಅಲೀ(ರ), ತಲ್ಹಾ (ರ), ಸಅದ್(ರ), ಇಬ್ನು ಮಸ್‌ವೂದ್(ರ), ಅಬೂ ಹುರೈರ(ರ), ಅಬ್ದುಲ್ಲಾಹ್‌ಬಿನ್ ಉಮರ್(ರ), ಇಬ್ನು ಅಬ್ಬಾಸ್(ರ), ಅನಸ್‌ಬಿನ್‌ಮಾಲಿಕ್(ರ)ಮುಂತಾದ ಖ್ಯಾತ ನಾಮರ ಸಹಿತ ನೂರಾರು ಮಂದಿ ಹಾಫಿಝ್‌ಗಳಾಗಿದ್ದರು. ಇದರ ಜೊತೆಗೆ, ದಿವ್ಯ ಸಂದೇಶವನ್ನು ಬರೆದು ದಾಖಲಿಸಿಡುವ ಏರ್ಪಾಡನ್ನೂ ಮಾಡಲಾಗಿತ್ತು. ನಾಲ್ವರು ಖಲೀಫರ ಸಹಿತ ಸುಮಾರು 40 ಸಹಾಬಿಗಳು ಅಧಿಕೃತವಾಗಿ ಪ್ರವಾದಿವರ್ಯ(ಸ)ರ ನಿರ್ದೇಶಾನುಸಾರ ದಿವ್ಯ ಸಂದೇಶವನ್ನು ಬರೆದಿಡುತ್ತಿದ್ದರು. ಪ್ರವಾದಿವರ್ಯ(ಸ)ರಿಗೆ ಕುರ್‌ಆನಿನ ಯಾವುದಾದರೂ ಭಾಗವು ಪ್ರಾಪ್ತವಾದಾಗ ಅವರು ತಮ್ಮ ಸಂಗಾತಿಗಳನ್ನು ಕರೆದು ಆ ಭಾಗವನ್ನು, ಈ ಹಿಂದೆ ದಾಖಲಿಸಲಾದ ಯಾವ ಭಾಗದ ಮುನ್ನ ಅಥವಾ ಯಾವ ಭಾಗದ ನಂತರ ಬರೆದಿಡಬೇಕೆಂದು ಸೂಚಿಸುತ್ತಿದ್ದರು. ಆ ಪ್ರಕಾರ ಸಹಾಬಿಗಳು ಅದನ್ನು ಕಲ್ಲಿನ ಫಲಕಗಳಲ್ಲಿ, ಚರ್ಮದಲ್ಲಿ, ಖರ್ಜೂರದ ಎಲೆಗಳ ಹಾಳೆಗಳಲ್ಲಿ, ಬಿದಿರಿನ ತುಂಡುಗಳಲ್ಲಿ ಹೀಗೆ ವಿವಿಧ ವಸ್ತುಗಳಲ್ಲಿ ಬರೆದಿಡುತ್ತಿದ್ದರು. ಇವರಲ್ಲದೆ ಕುರ್‌ಆನಿನ ಭಾಗಗಳನ್ನು ಕಂಠಪಾಠ ಮಾಡಿಕೊಂಡಿದ್ದ ಇತರ ಅನೇಕ ಸಂಗಾತಿಗಳೂ ತಮಗೆ ನೆನಪಿರುವ ಭಾಗಗಳನ್ನು ಬರೆದಿಡುತ್ತಿದ್ದರು. ಹಾಗೆಯೇ,ಪ್ರತಿದಿನ, ಕಡ್ಡಾಯ ಹಾಗೂ ಐಚ್ಛಿಕ ನಮಾಝ್‌ಗಳಲ್ಲಿ ಕುರ್‌ಆನನ್ನು ಓದುವ ಹಾಗೂ ಮುಸ್ಲಿಮರು ಒಟ್ಟುಸೇರುವ ಸಂದರ್ಭಗಳಲ್ಲೆಲ್ಲಾ ಪರಸ್ಪರರಿಗೆ ಕುರ್‌ಆನನ್ನು ಓದಿ ಕೇಳಿಸುವ ಸಂಪ್ರದಾಯವು ಪ್ರವಾದಿವರ್ಯ(ಸ)ರ ಕಾಲದಿಂದಲೇ ಅನುಷ್ಠಾನದಲ್ಲಿದ್ದು, ಕುರ್‌ಆನಿನ ಸಂರಕ್ಷಣೆಯ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರವಹಿಸಿದೆ.

ಪ್ರವಾದಿವರ್ಯ(ಸ)ರ ಕಾಲದಲ್ಲಿ ಪವಿತ್ರ ಕುರ್‌ಆನನ್ನು ಬರೆದಿಡಲಾಗಿದ್ದ ಕೆಲವು ಕೃತಿಗಳು ಪೂರ್ಣವಾಗಿದ್ದರೆ, ಹೆಚ್ಚಿನ ಸಂಗ್ರಹ ಕೃತಿಗಳು ಅಪೂರ್ಣವಾಗಿದ್ದವು. ಕೆಲವರ ಬಳಿ 5 ಅಧ್ಯಾಯಗಳಿದ್ದರೆ ಮತ್ತೆ ಕೆಲವರ ಬಳಿ 15 ಅಧ್ಯಾಯಗಳಿದ್ದವು. ಕೆಲವರು ಕುರ್‌ಆನಿನ ಮೂಲ ವಾಕ್ಯಗಳ ಜೊತೆಗೆ, ಆ ಕುರಿತು ಟಿಪ್ಪಣಿಗಳನ್ನೂ ಬರೆದಿದ್ದರು. ಆದ್ದರಿಂದ ಪ್ರವಾದಿವರ್ಯ(ಸ)ರ ಬಳಿಕ ಮುಸ್ಲಿಮ್ ಸಮುದಾಯದ ನಾಯಕರಾಗಿ ನಿಯುಕ್ತರಾದ ಅಬೂಬಕರ್ ಸಿದ್ದೀಕ್(ರ)ರ ಆಡಳಿತಾವಧಿಯಲ್ಲಿ ಪ್ರಸ್ತುತ ಭಾಗಗಳನ್ನೆಲ್ಲಾ ಒಂದುಗೂಡಿಸಿ, ಒಂದು ಅಧಿಕೃತ ಪ್ರತಿಯನ್ನು ಕ್ರೋಢೀಕರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಯಿತು.

ಈ ಕಾರ್ಯಾಚರಣೆಯ ಉಸ್ತುವಾರಿಯನ್ನು ಝೈದ್‌ಬಿನ್ ಸಾಬಿತ್(ರ) ರಿಗೆ ವಹಿಸಿ ಕೊಡಲಾಯಿತು. ಅವರು ಸ್ವತಃ ಕುರ್‌ಆನ್ ಕಂಠಪಾಠವಿರುವ ಹಾಫಿಝ್ ಆಗಿದ್ದರು. ಅಲ್ಲದೆ ಪ್ರವಾದಿವರ್ಯ(ಸ)ರ ಕಾಲದಲ್ಲಿ, ಕುರ್‌ಆನಿನ ವಾಕ್ಯಗಳನ್ನು ಬರೆದಿಡುವ ಕಾಯಕದಲ್ಲಿ ಸಕ್ರಿಯವಾಗಿ ಪಾಲುಗೊಂಡ ಅನುಭವವೂ ಅವರಿಗಿತ್ತು. ಅವರು ಕೇವಲ ತಮ್ಮ ನೆನಪಿನ ಆಧಾರದಲ್ಲಿ ಅಥವಾ ಆ ಕಾಲದಲ್ಲಿ ಅವರಿಗೆ ಸುಲಭವಾಗಿ ಲಭ್ಯವಾಗಿದ್ದ ಕುರ್‌ಆನಿನ ಹಲವು ಸಂಪೂರ್ಣ ಲಿಖಿತ ಪ್ರತಿಗಳ ಪೈಕಿ ಯಾವುದಾದರೂ ಒಂದು ಅಥವಾ ಎರಡು ಪ್ರತಿಗಳನ್ನು ಆಧಾರವಾಗಿಟ್ಟು ಈ ಕಾರ್ಯವನ್ನು ನೆರವೇರಿಸಬಹುದಾಗಿತ್ತು. ಆದರೆ ಅವರು ಈ ವಿಷಯದಲ್ಲಿ ಇಂತಹ ಯಾವುದಾದರೂ ಒಂದೆರಡು ಮೂಲಗಳನ್ನು ಮಾತ್ರ ಅವಲಂಬಿಸುವ ಬದಲು, ಬಹಳ ಸಮಗ್ರವಾದ ಹಾಗೂ ಪ್ರಮಾದಗಳಿಗೆ ಅವಕಾಶವೇ ಇಲ್ಲದ ವಿಧಾನವೊಂದನ್ನು ಅನುಸರಿಸಿದರು.

ಈ ನಿಟ್ಟಿನಲ್ಲಿ ಪ್ರಥಮ ಹೆಜ್ಜೆಯಾಗಿ, ಅಬೂಬಕರ್ ಸಿದ್ದೀಕ್(ರ) ಅವರು ಉಮರ್ ಬಿನ್ ಖತ್ತಾಬ್(ರ)ರನ್ನು, ಝೈದ್(ರ)ರ ಸಹಾಯಕರಾಗಿ ನೇಮಿಸಿದರು. ಉಮರ್(ರ) ಸ್ವತಃ ಹಾಫಿಝ್ ಆಗಿದ್ದರು ಹಾಗೂ ಕುರ್‌ಆನಿನ ಒಂದೊಂದು ವಾಕ್ಯದ ಕುರಿತೂ ಸಾಕ್ಷಾತ್ ಪ್ರವಾದಿವರ್ಯ(ಸ)ರ ಜೊತೆ ಚರ್ಚಿಸಿ ಆ ಕುರಿತು ತಿಳುವಳಿಕೆ ಪಡೆದವರಾಗಿದ್ದರು. ಎರಡನೆಯ ಹೆಜ್ಜೆಯಾಗಿ, ಯಾರೆಲ್ಲರ ಬಳಿ ಕುರ್‌ಆನನ್ನು ಬರೆದಿಟ್ಟ ಫಲಕ, ಹಾಳೆ ಇತ್ಯಾದಿಗಳಿವೆಯೋ ಅವರೆಲ್ಲಾ ಅವುಗಳನ್ನು ತಂದೊಪ್ಪಿಸಬೇಕೆಂದು ಸಾರ್ವಜನಿಕರಿಗೆ ಕರೆ ನೀಡಲಾಯಿತು. ಆ ಪ್ರಕಾರ ಜನರು ತಂದು ಕೊಡುತ್ತಿದ್ದ ಪ್ರತಿಗಳನ್ನು ಝೈದ್(ರ) ಹಾಗೂ ಉಮರ್(ರ) ಜಂಟಿಯಾಗಿ ಸ್ವೀಕರಿಸುತ್ತಿದ್ದರು ಹಾಗೂ ಅವರಿಬ್ಬರೂ ಜೊತೆಯಾಗಿ ತಮ್ಮ ನೆನಪಿನ ಹಾಗೂ ಅದಾಗಲೇ ಲಭ್ಯವಿದ್ದ ವಿಶ್ವಸನೀಯ ಪ್ರತಿಗಳ ಆಧಾರದಲ್ಲಿ ಅವುಗಳ ಪರಿಶೀಲನೆ ನಡೆಸುತ್ತಿದ್ದರು. ಮೂರನೆಯದಾಗಿ, ಲಭ್ಯ ಲಿಖಿತ ಪ್ರತಿಗಳನ್ನು ಪರಿಶೀಲನೆಗಾಗಿ ಸ್ವೀಕರಿಸುವ ಮುನ್ನ, ಅವುಗಳ ವಿಶ್ವಾಸಾರ್ಹತೆಯನ್ನು ಖಚಿತಪಡಿಸಿಕೊಳ್ಳಲಾಗುತ್ತಿತ್ತು. ಅದಕ್ಕಾಗಿ, ಯಾವುದೇ ಪ್ರತಿಯ ಪರವಾಗಿ, ಅದನ್ನು ಪ್ರವಾದಿವರ್ಯ(ಸ)ರ ಬದುಕಿನ ಕೊನೆಯ ವರ್ಷದಲ್ಲಿ ಪ್ರವಾದಿವರ್ಯರ(ಸ) ಮುಂದೆ ಓದಿ ಕೇಳಿಸಲಾಗಿತ್ತು ಹಾಗೂ ಅವರು ಅದನ್ನು ಅನುಮೋದಿಸಿದ್ದರೆಂದು ಇಬ್ಬರು ನಂಬಲರ್ಹ ವ್ಯಕ್ತಿಗಳು ಸಾಕ್ಷಿ ಹೇಳಿದ ಬಳಿಕ ಮಾತ್ರ ಅಂತಹ ಪ್ರತಿಯನ್ನು ಪರಿಶೀಲನೆಗೆ ತೆಗೆದು ಕೊಳ್ಳಲಾಗುತ್ತಿತ್ತು. ನಾಲ್ಕನೆಯದಾಗಿ, ಇಂತಹ ಎಲ್ಲ ಬಿಡಿ ಪ್ರತಿಗಳಲ್ಲಿದ್ದ ಬರಹಗಳನ್ನು, ಸಾಕ್ಷಾತ್ ಪ್ರವಾದಿವರ್ಯ(ಸ)ರ ಸಮಕ್ಷಮ ಅವರ ಸಂಗಾತಿಗಳು ಬರೆದಿಟ್ಟಿದ್ದ ಪೂರ್ಣ ಪ್ರತಿಗಳೊಂದಿಗೆ ಹೋಲಿಸಿ ನೋಡಲಾಗುತ್ತಿತ್ತು. ಇಷ್ಟಾದ ಬಳಿಕ ಪ್ರತಿಯೊಂದು ಅಧ್ಯಾಯವನ್ನು ಪ್ರತ್ಯೇಕ ಕಾಗದಗಳಲ್ಲಿ ಬರೆದು ದಾಖಲಿಸಲಾಯಿತು. ಈ ಸಂಗ್ರಹವನ್ನು ಜನರು ‘ಉಮ್ಮ್’ (ಮಾತೃ ಪ್ರತಿ) ಎಂದು ಕರೆಯುತ್ತಿದ್ದರು. ಈ ಸಂಗ್ರಹದಲ್ಲಿ ಕುರ್‌ಆನಿನ ಎಲ್ಲ ವಚನಗಳನ್ನು ಪ್ರವಾದಿ(ಸ) ಸೂಚಿಸಿದ್ದ ಕ್ರಮಾನುಸಾರವೇ ದಾಖಲಿಸಲಾಗಿತ್ತು. ಆದರೆ ಅಧ್ಯಾಯಗಳನ್ನು ಮಾತ್ರ ಪ್ರತ್ಯ ಪ್ರತ್ಯೇಕ ಹಾಳೆಗಳಲ್ಲಿ ಬರೆಯಲಾಗಿತ್ತು. ಈ ಅಧ್ಯಾಯಗಳ ಸಂಗ್ರಹವು ಅಬೂಬಕರ್(ರ)ರ ಅಧಿಕಾರಾವಧಿಯಲ್ಲಿ ಅವರ ವಶದಲ್ಲಿತ್ತು ಮತ್ತು ಅವರ ನಿಧನಾನಂತರ ಉಮರ್(ರ)ರ ವಶದಲ್ಲಿತ್ತು. ಉಮರ್(ರ) ಹುತಾತ್ಮರಾದಾಗ ಅವರ ಉಪದೇಶಾನುಸಾರ ಅದನ್ನು ಪ್ರವಾದಿಪತ್ನಿ ಹಫ್ಸಾ(ರ)ರ ವಶಕ್ಕೆ ನೀಡಲಾಯಿತು.

ಕುರ್‌ಆನಿನ ಸಂಗ್ರಹ ಹಾಗೂ ಕ್ರೋಡೀಕರಣದ ನಿಟ್ಟಿನಲ್ಲಿ ಅಂತಿಮ ಕಾರ್ಯಾಚರಣೆಯು ತೃತೀಯ ಖಲೀಫಾ ಉಸ್ಮಾನ್ ಬಿನ್ ಅಫ್ಫಾನ್(ರ) ಅವರ ಆಡಳಿತಾವಧಿಯಲ್ಲಿ ನಡೆಯಿತು. ಆ ವೇಳೆಗಾಗಲೇ ಇಸ್ಲಾಮಿನ ಬೆಳಕು ಅರೇಬಿಯಾದ ಗಡಿಗಳನ್ನು ದಾಟಿ, ಇರಾನ್ ಸಹಿತ ದೂರದೂರದ ಹಲವಾರು ನಾಡುಗಳಲ್ಲಿ ಹಬ್ಬಿತ್ತು. ಜನರು ದೊಡ್ಡ ಸಂಖ್ಯೆಯಲ್ಲಿ ಸಾಮೂಹಿಕವಾಗಿ ಇಸ್ಲಾಮ್ ಧರ್ಮ ಸ್ವೀಕರಿಸಿದ್ದ ಈ ನಾಡುಗಳಲ್ಲಿ, ಕುರ್‌ಆನನ್ನು ಯಾವ ಶೈಲಿಯಲ್ಲಿ ಓದಬೇಕೆಂಬ ವಿಷಯದಲ್ಲಿ ಭಿನ್ನಾಭಿಪ್ರಾಯಗಳು ಮೂಡತೊಡಗಿದವು. ಹಲವರಿಗೆ, ಪ್ರವಾದಿವರ್ಯರು(ಸ) ಅನುಮತಿಸಿದ ಕುರ್‌ಆನ್ ಪಠಣದ ಏಳು ವಿಭಿನ್ನ ಶೈಲಿಗಳ ಅರಿವು ಇರಲಿಲ್ಲ. ಆದ್ದರಿಂದ ಕೆಲವರು, ತಾವು ಓದುವ ಶೈಲಿ ಮಾತ್ರ ಸರಿ, ಇತರರ ಶೈಲಿ ಸರಿಯಲ್ಲ ಎಂದು ಪಟ್ಟು ಹಿಡಿಯಲಾರಂಭಿಸಿದರು. ಈ ಸನ್ನಿವೇಶಕ್ಕೆ ಒಂದು ಶಾಶ್ವತ ಪರಿಹಾರ ಒದಗಿಸಲು ನಿರ್ಧರಿಸಿದ ಉಸ್ಮಾನ್(ರ), ಈ ಹಿಂದೆ, ಅಬೂಬಕರ್ ಸಿದ್ದೀಕ್(ರ) ಅವರ ಕಾಲದಲ್ಲಿ ಕ್ರೋಢೀಕರಿಸಲಾಗಿದ್ದ ಕುರ್‌ಆನಿನ ‘ಮಾತೃ ಪ್ರತಿ’ ಯ ನಕಲು ಪ್ರತಿಗಳನ್ನು ತಯಾರಿಸಿ ಅವುಗಳನ್ನು ಎಲ್ಲ ಪ್ರದೇಶಗಳಿಗೆ ರವಾನಿಸಿ ಕೊಡಲು ನಿರ್ಧರಿಸಿದರು. ಈ ನಿಟ್ಟಿನಲ್ಲಿ ಅವರು ಪ್ರಥಮವಾಗಿ, ಹಫ್ಸಾ(ರ)ರಿಗೆ ಸಂದೇಶ ಕಳಿಸಿ ‘ಮಾತೃಪ್ರತಿ’ಯನ್ನು ತಮ್ಮ ಬಳಿಗೆ ತರಿಸಿಕೊಂಡರು.

ಎರಡನೆಯದಾಗಿ, ಈ ಹಿಂದೆ ಅಬೂಬಕರ್(ರ)ರ ಕಾಲದಲ್ಲಿ ‘ಮಾತೃಪ್ರತಿ’ಯನ್ನು ಕ್ರೋಡೀಕರಿಸುವ ಕಾರ್ಯಾಚರಣೆಯ ಉಸ್ತುವಾರಿ ವಹಿಸಿದ್ದ ಝೈದ್ ಬಿನ್ ಸಾಬಿತ್(ರ)ರ ಸಹಿತ ನಾಲ್ವರು ಹಿರಿಯ ಸಹಾಬಿಗಳನ್ನೊಳಗೊಂಡ ಸಮಿತಿಯೊಂದನ್ನು ರಚಿಸಿದರು ಮತ್ತು ‘ಮಾತೃಪ್ರತಿ’ಯ ನಕಲು ಪ್ರತಿಗಳನ್ನು ತಯಾರಿಸುವ ಹೊಣೆಗಾರಿಕೆಯನ್ನು ಆ ಸಮಿತಿಗೆ ವಹಿಸಿಕೊಟ್ಟರು. ಜೊತೆಗೆ, ಸುಮಾರು ಹನ್ನೆರಡು ಮಂದಿ ಹಿರಿಯ ಸಹಾಬಿಗಳ ತಂಡವೊಂದನ್ನು ಆ ಸಮಿತಿಯ ನೆರವಿಗಾಗಿ ನೇಮಿಸಿದರು. ಪ್ರಸ್ತುತ ಸಮಿತಿಯು, ಮತ್ತೆ ಅಬೂಬಕರ್ ಸಿದ್ದೀಕ್(ರ)ರ ಕಾಲದಲ್ಲಿ ಅನುಸರಿಸಲಾಗಿದ್ದ ಕ್ರಮವನ್ನೇ ಅನುಸರಿಸಿ, ಜನರ ಬಳಿ ಇದ್ದ ವಿವಿಧ ಲಿಖಿತ ಪ್ರತಿಗಳನ್ನು ತರಿಸಿ ಹೋಲಿಸಿ ನೋಡಿದ ಬಳಿಕ ಮಾತೃಪ್ರತಿಯ ಪರಿಪೂರ್ಣತೆಯನ್ನು ಮತ್ತೆ ಅನುಮೋದಿಸಿ, ಅದರ ನಕಲು ಪ್ರತಿಗಳನ್ನು ರಚಿಸಿತು.

ಈ ಸಮಿತಿಯು ‘ಮಾತೃಪ್ರತಿ’ಯಲ್ಲಿ ಪ್ರತ್ಯ ಪ್ರತ್ಯೇಕವಾಗಿ ಬರೆದಿಡಲಾಗಿದ್ದ ಎಲ್ಲ ಅಧ್ಯಾಯಗಳನ್ನು ಕ್ರಮಬದ್ಧವಾಗಿ ಒಂದೇ ಪ್ರತಿಯಲ್ಲಿ ಕ್ರೋಡೀಕರಿಸಿ, ಅದರ ಹಲವು ನಕಲು ಪ್ರತಿಗಳನ್ನು ರಚಿಸಿತು. ಆ ಪ್ರತಿಗಳನ್ನು ಮಕ್ಕಃ, ಬಹ್ರೈನ್, ಯಮನ್, ಕೂಫಾ, ಸಿರಿಯಾ, ಬಸ್ರಾ ಮುಂತಾದೆಡೆಗಳಿಗೆ ರವಾನಿಸಿ, ಒಂದು ಪ್ರತಿಯನ್ನು ಮದೀನಾದಲ್ಲಿ ಇಟ್ಟುಕೊಳ್ಳಲಾಯಿತು.

 ‘ಮುಸ್‌ಹಫ್ ಉಸ್ಮಾನ್’ ಎಂದು ಗುರುತಿಸಲಾಗುವ ಆ ಪ್ರತಿಗೆ ಸಮುದಾಯದ ಎಲ್ಲ ವಲಯಗಳಿಂದ ವ್ಯಾಪಕ ಮನ್ನಣೆ ದೊರಕಿತು. ಆ ಪೀಳಿಗೆಯ ಹಾಗೂ ಅದರ ಅನಂತರದ ಪೀಳಿಗೆಯ ಎಲ್ಲರೂ ಆ ಪ್ರತಿಗಳನ್ನೇ ಮಾನದಂಡವಾಗಿ ಅಂಗೀಕರಿಸಿ ಅವುಗಳ ನಕಲು ಪ್ರತಿಗಳನ್ನೇ ಬಳಸುತ್ತಿದ್ದರು. ಆದರೆ, ಆ ಪ್ರತಿಗಳಲ್ಲಿನ ಬರಹದಲ್ಲಿ, ಅಕ್ಷರಗಳ ಜೊತೆಗೆ ಚುಕ್ಕೆಗಳಾಗಲಿ, ಅ ಕಾರ, ಈ ಕಾರ, ಉ ಕಾರ ಇತ್ಯಾದಿಗಳನ್ನು ಸೂಚಿಸುವ ಸಂಕೇತಗಳಾಗಲಿ ಇರಲಿಲ್ಲ. ಆ ಸ್ಥಿತಿಯಲ್ಲಿದ್ದ ಬರಹಗಳನ್ನು ಅರಬಿ ಮಾತೃಭಾಷೆಯ ಮಂದಿ ಸುಲಭವಾಗಿ ಓದುತ್ತಿದ್ದರು. ಆದರೆ, ಅರಬಿ ಭಾಷೆಯ ಹೆಚ್ಚಿನ ಜ್ಞಾನ ಇಲ್ಲದವರು ಮಾತ್ರ ಅವುಗಳನ್ನು ಓದಲು ಪ್ರಯಾಸ ಪಡಬೇಕಾಗುತ್ತಿತ್ತು. ಈ ಸಮಸ್ಯೆಗೆ ಪರಿಹಾರವಾಗಿ, ಉಚ್ಚಾರ ಹಾಗೂ ಪಠನಕ್ಕೆ ನೆರವಾಗುವಂತೆ, ಅಕ್ಷರಗಳಿಗೆ ಚುಕ್ಕೆಗಳನ್ನು, ಸ್ವರಸಂಕೇತಗಳನ್ನು ಮತ್ತು ವಾಕ್ಯಗಳ ವಿವಿಧ ನಿಯಮಗಳನ್ನು ಸೂಚಿಸುವ ಲಾಂಛನಗಳನ್ನು ಸೇರಿಸುವ ಪ್ರಕ್ರಿಯೆಯು ಅಲೀ ಬಿನ್ ಅಬೀ ತಾಲಿಬ್(ರ)ರ ಕಾಲಾನಂತರ ಆರಂಭವಾಗಿ, ಹಿಜರಿ ಮೂರನೇ ಶತಮಾನದ ವೇಳೆಗೆ ಪೂರ್ತಿಗೊಂಡಿತು.

9. ಕುರ್ಆನ್: ಆಗಮನ ಕ್ರಮ ಮತ್ತು ಸಂಕಲನ ಕ್ರಮ; ಅಲ್ಲಾಹನ ವತಿಯಿಂದ ಪ್ರವಾದಿ ಮುಹಮ್ಮದ್(ಸ)ರಿಗೆ ಕುರ್‌ಆನ್ ನ ಭಾಗಗಳು ಪ್ರಾಪ್ತವಾದ ಕ್ರಮಕ್ಕೆ ಹೋಲಿಸಿದರೆ, ಕುರ್‌ಆನಿನ ಸಂಕಲನದಲ್ಲಿ ಬಳಸಲಾಗಿರುವ ಕ್ರಮವು ಅಥವಾ ಅದರ ಪಠನ ಕ್ರಮವು ತೀರಾ ಭಿನ್ನವಾಗಿದೆ. ಕುರ್‌ಆನಿನ ಎಲ್ಲ ವಚನಗಳು ಅಥವಾ ಎಲ್ಲ ಅಧ್ಯಾಯಗಳು ಪ್ರವಾದಿವರ್ಯ(ಸ)ರ ಮುಂದೆ ಏಕಕಾಲದಲ್ಲಿ ಅನಾವರಣ ಗೊಂಡಿರಲಿಲ್ಲ. ಅವರ ಪ್ರವಾದಿತ್ವದ ಒಟ್ಟು 23 ವರ್ಷಗಳ ಅವಧಿಯಲ್ಲಿ, ಬೇರೆ ಬೇರೆ ಸಮಯ, ಸ್ಥಳ ಹಾಗೂ ಸನ್ನಿವೇಶಗಳಲ್ಲಿ ಮತ್ತು ವಿವಿಧ ಪ್ರಮಾಣಗಳಲ್ಲಿ ಅವರಿಗೆ ದಿವ್ಯ ವಚನಗಳು ಪ್ರಾಪ್ತವಾಗಿದ್ದವು. ಹಾಗೆ ಪ್ರಾಪ್ತವಾದ ವಚನಗಳನ್ನು ಯಾವ ಕ್ರಮಾನುಸಾರ ದಾಖಲಿಸಬೇಕೆಂಬುದನ್ನು ಸಾಕ್ಷಾತ್ ದಿವ್ಯ ಮಾರ್ಗದರ್ಶನದ ಪ್ರಕಾರ ಪ್ರವಾದಿ ವರ್ಯರೇ(ಸ) ಸೂಚಿಸಿದ್ದರು. ಆದ್ದರಿಂದಲೇ, ಕಾಲಕ್ರಮಾನುಸಾರ ಪ್ರಥಮವಾಗಿ ಅನಾವರಣಗೊಂಡ 5 ವಚನಗಳು ಪಠನ ಕ್ರಮಾನುಸಾರ 96ನೇ ಸ್ಥಾನದಲ್ಲಿರುವ ಅಲ್ ಅಲಕ್ ಅಧ್ಯಾಯದಲ್ಲಿವೆ. ಹಾಗೆಯೇ, ಕಾಲಕ್ರಮಾನುಸಾರ 87ನೇ ಸ್ಥಾನದಲ್ಲಿರುವ ಅಲ್ ಬಕರಃ ಅಧ್ಯಾಯವು ಪಠನ ಕ್ರಮಾನುಸಾರ 2ನೇ ಸ್ಥಾನದಲ್ಲಿದೆ.

10. ವಹ್ಯ್ ಅಥವಾ ದಿವ್ಯ ಸಂದೇಶದ ಸಂವಹನ; ‘‘ದೇವರ ಸಂದೇಶವನ್ನು ದೇವದೂತರು ಮಾನವರಿಗೆ ತಲುಪಿಸುತ್ತಾರೆ’’ ಎಂಬ ಹೇಳಿಕೆಯ ಬೆನ್ನಿಗೇ ‘‘ದೇವದೂತರಿಗೆ ದೇವರ ಸಂದೇಶ ಸಿಗುವುದು ಹೇಗೆ? ಅದರ ವಿಧಾನ ಏನು?’’ ಎಂಬ ಪ್ರಶ್ನೆ ಮೂಡುವುದು ಸ್ವಾಭಾವಿಕ. ಇದು, ಕುರ್‌ಆನಿನ ಅಧ್ಯಯನ ನಡೆಸುವಾಗ ಪ್ರಾಥಮಿಕ ಹಂತದಲ್ಲೇ ಸ್ಪಷ್ಟವಾಗಿ ಅರಿತಿರಬೇಕಾದ ಒಂದು ಪ್ರಮುಖ ವಿಷಯ. ಕುರ್‌ಆನಿನಲ್ಲಿ, ದೇವರು ತನ್ನ ಸಂದೇಶವನ್ನು ತನ್ನ ದೂತರಿಗೆ ತಲುಪಿಸುವ, ದಿವ್ಯ ಸಂದೇಶದ ಸಂವಹನದ ಪ್ರಕ್ರಿಯೆಯನ್ನು ‘ವಹ್ಯ್’ ಎಂದು ಕರೆಯಲಾಗಿದೆ. ಅರಬಿ ಭಾಷೆಯಲ್ಲಿ, ವಹ್ಯ್ ಪದ ಅಥವಾ ಈಹಾ ಎಂಬ ಅದರ ಮೂಲ ಪದದ ಶಬ್ದಾರ್ಥ, ‘ಕ್ಷಿಪ್ರ ಸೂಚನೆ’. ಸಾಮಾನ್ಯವಾಗಿ, ಕಣ್ಸನ್ನೆ, ಕೈಸನ್ನೆಗಳ ಮೂಲಕ, ಸಿಳ್ಳಿನಂತಹ ಧ್ವನಿಗಳ ಮೂಲಕ, ಚಿತ್ರ ಅಥವಾ ಬರಹ ಇತ್ಯಾದಿಗಳ ಮೂಲಕ ನೀಡುವ ಸೂಚನೆ ಗಳಿಗೆಲ್ಲಾ ಇದು ಅನ್ವಯವಾಗುತ್ತದೆ. ಕುರ್‌ಆನಿನಲ್ಲೂ ಈ ಪದವು ಅಂತಹ ಅರ್ಥಗಳಲ್ಲಿ ಬಳಕೆಯಾಗಿದೆ (ಉದಾ; 19:11/ 6:112, 121). ಹಾಗೆಯೇ, ಅಲ್ಲಾಹನು ತನ್ನ ದೂತರಲ್ಲದವರಿಗೆ ನೀಡುವ ಸೂಚನೆ ಅಥವಾ ಪ್ರೇರಣೆಗಳಿಗೂ ಕುರ್‌ಆನಿನಲ್ಲಿ ಈ ಪದವನ್ನು ಬಳಸಲಾಗಿದೆ (ಉದಾ: 16:68/ 8:12/ 28:7). ಆದರೆ, ಅಲ್ಲಾಹನು ತನ್ನ ನಿಯುಕ್ತ ದೂತರಿಗೆ ತನ್ನ ಸಂದೇಶವನ್ನು ತಲುಪಿಸುವ ಪ್ರಕ್ರಿಯೆಯನ್ನು ಸೂಚಿಸಲು ಈ ಪದ ಬಳಕೆಯಾಗಿರುವಲ್ಲಿ ಅದು ಬಹಳ ಸೂಕ್ಷ್ಮ ಹಾಗೂ ಸಂಕೀರ್ಣವಾದ ಕೆಲವು ಅಸಾಮಾನ್ಯ ಆಯಾಮಗಳನ್ನು ಒಳಗೊಂಡಿರುತ್ತದೆ.

ಕುರ್‌ಆನಿನ ಒಂದು ಹೇಳಿಕೆಯನ್ನು ಗಮನಿಸಿ:

 ‘‘ಅಲ್ಲಾಹನು ತನ್ನೊಡನೆ (ನೇರವಾಗಿ) ಮಾತನಾಡುವಂತೆ ಮಾಡಲು ಯಾವ ಮಾನವನಿಗೂ ಸಾಧ್ಯವಿಲ್ಲ – ದಿವ್ಯವಾಣಿಯ ಮೂಲಕ ಅಥವಾ ತೆರೆಮರೆಯಿಂದ (ಮಾತನಾಡುವ) ಹೊರತು, ಅಥವಾ ಅವನು ಒಬ್ಬ (ಮಲಕ್) ದೂತನನ್ನು ಕಳಿಸಿ ಅವನು (ಆ ದೂತನು) ಆತನ (ಅಲ್ಲಾಹನ) ಆದೇಶ ಪ್ರಕಾರ, ಆತನು ಬಯಸುವ ದಿವ್ಯವಾಣಿಯನ್ನು ತಲುಪಿಸುವುದರ ಹೊರತು. ಅವನು ಖಂಡಿತ ಉನ್ನತನೂ ಯುಕ್ತಿವಂತನೂ ಆಗಿದ್ದಾನೆ.’’ (42:51)

ಮುಹಮ್ಮದ್(ಸ) ಮತ್ತು ಅವರಿಗಿಂತ ಹಿಂದಿನ ಎಲ್ಲ ಪ್ರವಾದಿಗಳು ಹಾಗೂ ದೂತರಿಗೆ (ನೋಡಿರಿ, ಟಿಪ್ಪಣಿ 14) ದಿವ್ಯ ಸಂದೇಶವು ವಹ್ಯ್ ಯ ಮಾಧ್ಯಮದಿಂದ ಪ್ರಾಪ್ತವಾಗುತ್ತಿತ್ತು. ಮೂಲತಃ, ಪ್ರಸ್ತುತ ವಹ್ಯ್‌ಯನ್ನು ಮೂರು ವಿಭಿನ್ನ ಸ್ವರೂಪಗಳಲ್ಲಿ ಗುರುತಿಸಲಾಗಿದೆ:

ಅ) ಮಾನಸಿಕ ಪ್ರೇರಣೆ; ಅಂದರೆ ದೇವರು ತನ್ನ ಸಂದೇಶವನ್ನು ನೇರವಾಗಿ ತನ್ನ ದೂತನ ಮನಸ್ಸಿನೊಳಕ್ಕೆ ವರ್ಗಾಯಿಸಿ ಬಿಡುವುದು. ಈ ಸ್ವರೂಪದ ಸಂವಹನದಲ್ಲಿ, ದೇವರು ಹಾಗೂ ದೂತನ ನಡುವೆ ಮಲಕ್‌ಆಗಲಿ, ಬೇರಾವುದೇ ಮಾಧ್ಯಮವಾಗಲಿ ಇರುವುದಿಲ್ಲ. ಮಾತ್ರವಲ್ಲ, ಈ ಪ್ರಕ್ರಿಯೆಯಲ್ಲಿ ದೂತನ ಇಂದ್ರಿಯಗಳಿಗೂ ಯಾವುದೇ ಪಾತ್ರವಿರುವುದಿಲ್ಲ. ಅವನ ಕಣ್ಣುಗಳಿಗೆ ಏನೂ ಕಾಣಿಸದೆಯೇ, ಅವನ ಕಿವಿಗಳಿಗೆ ಏನೂ ಕೇಳಿಸದೆಯೇ, ಒಂದು ಸಂದೇಶವು ನೇರವಾಗಿ ಅವನ ಮನದೊಳಗೆ ಸೇರಿಕೊಂಡಿರುತ್ತದೆ ಮತ್ತು ಅದು ಅಲ್ಲಾಹನ ಕಡೆಯಿಂದ ಬಂದ ಸಂದೇಶ ಎಂಬ ಅರಿವೂ ಅವನಲ್ಲಿ ಮೂಡಿರುತ್ತದೆ. ಈ ಸಂವಹನವು ಕೆಲವೊಮ್ಮೆ ಎಚ್ಚರದ ಸ್ಥಿತಿಯಲ್ಲಿ ನಡೆದರೆ, ಕೆಲವೊಮ್ಮೆ ಸ್ವಪ್ನದಲ್ಲೂ ನಡೆಯುತ್ತದೆ.

ಆ) ದಿವ್ಯ ಸಂದೇಶದ ನೇರ ಶ್ರವಣ; ಸಂವಹನದ ಈ ಪ್ರಕಾರದಲ್ಲೂ ದೇವರು ಹಾಗೂ ದೂತರ ಮಲಕ್‌ಗಳ ಮಾಧ್ಯಮ ಇರುವುದಿಲ್ಲ. ಆದರೆ, ಇಂದ್ರಿಯಗಳಿಗೆ ಪಾತ್ರವಿರುತ್ತದೆ. ಒಂದು ವಿಶಿಷ್ಠ ಧ್ವನಿಯ ರೂಪದಲ್ಲಿ ದೂತನು ದೇವರ ಸಂದೇಶವನ್ನು ಆಲಿಸುತ್ತಾನೆ. ಅ ಧ್ವನಿಯು ಎಲ್ಲ ಸೃಷ್ಟಿಗಳ ಧ್ವನಿಗಳಿಗಿಂತ ತೀರಾ ಭಿನ್ನ ಹಾಗೂ ಅನುಪಮವಾಗಿರುತ್ತದೆ. ಸಾಮಾನ್ಯ ಮಾನವರ ಗ್ರಹಿಕೆಯ ವ್ಯಾಪ್ತಿಯನ್ನು ಮೀರಿದ ಆ ಧ್ವನಿಯನ್ನು ಪರಿಪೂರ್ಣವಾಗಿ ಗುರುತಿಸಲು ಹಾಗೂ ಗ್ರಹಿಸಲು ಪ್ರವಾದಿಗಳು ಮತ್ತು ದೂತರಿಗೆ ಮಾತ್ರ ಸಾಧ್ಯ.

ಇ) ಮಲಕ್‌ಗಳ ಮೂಲಕ ಸಂದೇಶ; ಅಂದರೆ ಅಲ್ಲಾಹನು ಮಲಕ್‌ಗಳ ಮೂಲಕ ತನ್ನ ಸಂದೇಶವನ್ನು ತನ್ನ ದೂತರಿಗೆ ತಲುಪಿಸುವ ಪ್ರಕ್ರಿಯೆ. ಇದು ವಹ್ಯ್‌ಯ ಸಾಮಾನ್ಯ ಹಾಗೂ ಹೆಚ್ಚು ಪರಿಚಿತ ವಿಧಾನವಾಗಿದೆ. ಇದರಲ್ಲೂ ಕೆಲವು ವಿಭಿನ್ನ ಪ್ರಕಾರ ಗಳಿವೆ. ಉದಾ: ಸಂದೇಶ ತರುವ ಮಲಕ್, ದೂತರಿಗೆ ಕಾಣಿಸಬಹುದು ಅಥವಾ ಕಾಣಿಸದಿರಬಹುದು. ಮಲಕ್, ಮಾನವ ರೂಪದಲ್ಲಿ ಬರಬಹುದು ಅಥವಾ ತನ್ನ ನಿಜರೂಪದಲ್ಲೂ ಪ್ರತ್ಯಕ್ಷನಾಗಬಹುದು.

ಒಮ್ಮೆ ಹಾರಿಸ್ ಬಿನ್ ಹಿಶಾಮ್ (ರ) ಎಂಬ ಸಂಗಾತಿಯು ಪ್ರವಾದಿ ಮುಹಮ್ಮದ್(ಸ)ರೊಡನೆ, ನಿಮಗೆ ದೇವ ಸಂದೇಶ ಯಾವ ರೀತಿ ಪ್ರಾಪ್ತವಾಗುತ್ತದೆ? ಎಂದು ವಿಚಾರಿಸಿದಾಗ ಪ್ರವಾದಿ(ಸ) ಹೇಳಿದರು; ‘‘ನನಗೆ ಕೆಲವೊಮ್ಮೆ ಗಂಟೆಯ ನಾದ ಕೇಳಿಸುತ್ತದೆ. ದಿವ್ಯವಾಣಿಯ ಈ ಪ್ರಕಾರವು ನನ್ನ ಪಾಲಿಗೆ ಅತ್ಯಂತ ಕಠಿಣವಾಗಿರುತ್ತದೆ. ಅದು (ಗಂಟೆಯ ನಾದ) ಮುಗಿದಾಗ, ಹೇಳಲಾದ ಮಾತು ಆಗಲೇ ನನಗೆ ಕಂಠಪಾಠವಾಗಿರುತ್ತದೆ. ಕೆಲವೊಮ್ಮೆ ಮಲಕ್, ನನ್ನ ಮುಂದೆ ಮಾನವ ರೂಪದಲ್ಲಿ ಬರುವುದುಂಟು’’ (ಸಹೀಹ್ ಬುಖಾರಿ, ಭಾಗ 1).

ಪ್ರವಾದಿ ಪತ್ನಿ ಅಯಿಶಾ(ರ) ಹೇಳುತ್ತಾರೆ;

‘‘…… ತೀವ್ರ ಚಳಿಯ ಸಮಯದಲ್ಲಿ ಅವರಿಗೆ ದಿವ್ಯವಾಣಿ ಪ್ರಾಪ್ತವಾಗುವುದನ್ನು ನಾನು ನೋಡಿದ್ದೇನೆ. ದಿವ್ಯವಾಣಿಯ ಸಂವಹನ ಮುಗಿದಾಗ (ತೀವ್ರ ಚಳಿಯ ಹೊರತಾಗಿಯೂ) ಅವರ ಹಣೆಯಲ್ಲಿ ಬೆವರು ತುಂಬಿರುತ್ತಿತ್ತು’’ (ಸಹೀಹ್ ಬುಖಾರಿ, ಭಾಗ 1).

ಮೇಲ್ಕಾಣಿಸಿದ ಮೂರು ಪ್ರಕಾರಗಳಲ್ಲದೆ ಇತರ ಕೆಲವು ಅನಿರ್ದಿಷ್ಟ ಪ್ರಕಾರಗಳ ಮೂಲಕವೂ ಪ್ರವಾದಿ ಮುಹಮ್ಮದ್(ಸ)ರಿಗೆ ದಿವ್ಯವಾಣಿ ಪ್ರಾಪ್ತವಾಗುತ್ತಿತ್ತು.

ಪ್ರವಾದಿ ಮುಹಮ್ಮದ್(ಸ)ರ ಬಳಿಗೆ ದಿವ್ಯ ಸಂದೇಶವನ್ನು ತರುತ್ತಿದ್ದ ಮಲಕ್‌ನ ಹೆಸರು

ಜಿಬ್ರೀಲ್(). ಅವರು ಕೆಲವೊಮ್ಮೆ ಮಾನವ ರೂಪದಲ್ಲಿ ಪ್ರವಾದಿಯ ಬಳಿಗೆ ಬರುತ್ತಿದ್ದರು ಮತ್ತೆ ಕೆಲವೊಮ್ಮೆ ತಮ್ಮ ನಿಜರೂಪದಲ್ಲೂ ಪ್ರತ್ಯಕ್ಷರಾಗುತ್ತಿದ್ದರು.

11. ಕುರ್ಆನ್ ಅಕ್ಷರಶಃ ದಿವ್ಯ ಸಂದೇಶ; ಕುರ್‌ಆನಿನಲ್ಲಿರುವ ಎಲ್ಲ ಪದಗಳೂ ಎಲ್ಲ ವಚನಗಳೂ ದೇವ ಸಂದೇಶದ ಕೇವಲ ಸಾರಾಂಶವಾಗಲಿ ತಾತ್ಪರ್ಯವಾಗಲಿ ಆಗಿರದೆ ಅಕ್ಷರಶಃ ದೇವ ಸಂದೇಶಗಳಾಗಿವೆ. ಹಾಗೆಯೇ ಕುರ್‌ಆನಿನಲ್ಲಿರುವ ಒಂದೊಂದು ಅಕ್ಷರವನ್ನೂ ಯಥಾವತ್ತಾಗಿ ಸಾಕ್ಷಾತ್ ಅಲ್ಲಾಹನೇ ಕಳಿಸಿ ಕೊಟ್ಟಿರುವನು – ಇದು, ಕುರ್‌ಆನನ್ನು ದೇವ ವಚನವೆಂದು ನಂಬುವ ಎಲ್ಲರ ನಡುವೆ ಸಾರ್ವತ್ರಿಕ ಒಮ್ಮತವಿರುವ ವಿಷಯವಾಗಿದೆ. ಜೊತೆಗೆ, ಅಲ್ಲಾಹನು ಕುರ್‌ಆನಿನ ಭಾಗವಾಗಿ,

 ‘ವಹ್ಯ್’ಯ ರೂಪದಲ್ಲಿ ಕಳಿಸಿರುವ ಸಂದೇಶಕ್ಕೆ ಒಂದಕ್ಷರವನ್ನಾದರೂ ಸೇರಿಸುವ ಅಥವಾ ಅದರಿಂದ ಒಂದಕ್ಷರವನ್ನಾದರೂ ಕಳೆಯುವ ಅಧಿಕಾರ ಪ್ರವಾದಿಗಳು, ದೇವದೂತರು ಮತ್ತು ಮಲಕ್‌ಗಳ ಸಹಿತ ಯಾರಿಗೂ ಇಲ್ಲ ಎಂಬುದು ಈ ನಂಬಿಕೆಯ ಭಾಗವಾಗಿದೆ.

12. ‘ವಹ್ಯ್ ಮತ್ಲೂಮತ್ತುವಹ್ಯ್ ಗೈರ್ ಮತ್ಲೂ’: ಅಲ್ಲಾಹನ ಅಂತಿಮ ದೂತ ಪ್ರವಾದಿ ಮುಹಮ್ಮದ್(ಸ)ರಿಗೆ ಅಲ್ಲಾಹನ ಕಡೆಯಿಂದ ವಹ್ಯ್‌ಯ ರೂಪದಲ್ಲಿ ಪ್ರಾಪ್ತವಾದ ದಿವ್ಯ ಸಂದೇಶಗಳ ಕುರಿತಂತೆ ಮೂಲಭೂತ ಮಹತ್ವವಿರುವ ಇನ್ನೊಂದು ಸಂಗತಿಯನ್ನು ಕುರ್‌ಆನಿನ ಓದುಗರು ಅರಿತಿರಬೇಕು. ಅದೇನೆಂದರೆ, ಪ್ರವಾದಿವರ್ಯರಿಗೆ(ಸ) ಮುಖ್ಯವಾಗಿ ‘ವಹ್ಯ್ ಮತ್ಲೂ’ (ಕುರ್‌ಆನಿನ ಭಾಗವಾಗಿ, ಪಠನಕ್ಕೆ ಲಭ್ಯವಿರುವ ವಹ್ಯ್) ಮತ್ತು ‘ವಹ್ಯ್ ಗೈರ್ ಮತ್ಲೂ’ (ಕುರ್‌ಆನಿನ ಭಾಗವಲ್ಲದ ವಹ್ಯ್) ಎಂದು ಗುರುತಿಸಲಾಗುವ ಎರಡು ವಿಭಿನ್ನ ವರ್ಗದ ದಿವ್ಯ ಸಂದೇಶಗಳು ಪ್ರಾಪ್ತವಾಗಿದ್ದವು. ಈ ಪೈಕಿ ಮೊದಲ ವರ್ಗದ ಸಂದೇಶಗಳನ್ನು, ದೇವಾದೇಶದಂತೆ ಚಾಚೂ ತಪ್ಪದೆ, ಅಕ್ಷರಶಃ ಕುರ್‌ಆನಿನಲ್ಲಿ ದಾಖಲಿಸಲಾಗಿದೆ ಮತ್ತು ಎರಡನೆಯ ವರ್ಗದ ಸಂದೇಶಗಳನ್ನು ದೇವಾದೇಶದಂತೆ ಕುರ್‌ಆನಿನಿಂದ ಹೊರಗಿಡಲಾಗಿದೆ. ಕುರ್‌ಆನಿನಲ್ಲಿ ಪ್ರಸ್ತಾಪಿಸಿಲ್ಲದ ಅನೇಕಾರು ಆದೇಶಗಳು ಮತ್ತು ಸಂದೇಶಗಳು ಪ್ರವಾದಿವರ್ಯ(ಸ)ರಿಗೆ ದಿವ್ಯವಾಣಿಯ ಮೂಲಕ ಪ್ರಾಪ್ತವಾಗುತ್ತಿದ್ದವು ಎಂಬುದನ್ನು ಸೂಚಿಸುವ ಅನೇಕ ವಚನಗಳು ಕುರ್‌ಆನಿನಲ್ಲಿವೆ. ಉದಾ: 2:143, 187, 238, 239, 3:123ರಿಂದ 126, 4:113, 8:7, 48:15, 66:3. ಅದೆಷ್ಟೋ ಸನ್ನಿವೇಶಗಳಲ್ಲಿ ಪ್ರವಾದಿವರ್ಯ(ಸ)ರಿಗೆ ಅಲ್ಲಾಹನ ಕಡೆಯಿಂದ ದೊರೆತ ಆದೇಶ, ಮಾರ್ಗದರ್ಶನ ಇತ್ಯಾದಿಗಳು ಹದೀಸ್ ಗ್ರಂಥಗಳಲ್ಲಿ ದಾಖಲಾಗಿವೆ. ಈ ಪೈಕಿ, ‘‘ಅಲ್ಲಾಹನು ಹೀಗೆ ಹೇಳಿರುವನು’’ ಎಂಬ ವಿಶೇಷ ಮುನ್ನುಡಿಯೊಂದಿಗೆ ಪ್ರವಾದಿ(ಸ) ಉದ್ಧರಿಸಿರುವ ಅಲ್ಲಾಹನ ಮಾತುಗಳನ್ನು ಹದೀಸ್ ಕುದ್ಸೀಎಂದು ಗುರುತಿಸಲಾಗುತ್ತದೆ.

13. ಕುರ್ಆನಿನಲ್ಲಿರುವದುಆ’ (ಪ್ರಾರ್ಥನೆ)ಗಳು: ಎಲ್ಲ ಪ್ರಾರ್ಥನೆಗಳೂ ಅಲ್ಲಾಹನೊಬ್ಬನನ್ನು ಮಾತ್ರ ಉದ್ದೇಶಿಸಿರಬೇಕು, ಅವನ ಹೊರತು ಯಾರೊಡನೆಯೂ ಪ್ರಾರ್ಥಿಸಬಾರದು ಎಂಬುದು ಕುರ್‌ಆನಿನ ಒಂದು ಪ್ರಮುಖ ಬೋಧನೆ. ಕುರ್‌ಆನಿನಲ್ಲಿ, ವಿಭಿನ್ನ ಹಿನ್ನೆಲೆಯ ನೂರಾರು ದುಆ ಅಥವಾ ಪ್ರಾರ್ಥನೆಗಳಿವೆ. ಕುರ್‌ಆನ್ ಎಂತಹ ಸಮಾಜವನ್ನು ನಿರ್ಮಿಸಬಯಸುತ್ತದೆ, ಎಂತಹ ಚಾರಿತ್ರವನ್ನು ಬೆಳೆಸಬಯಸುತ್ತದೆ ಮತ್ತು ಅದು ಖಾಸಗಿ ಹಾಗೂ ಸಾಮಾಜಿಕ ಬದುಕುಗಳಿಂದ ಯಾವೆಲ್ಲ ಪಿಡುಗುಗಳನ್ನು ನಿವಾರಿಸಬಯಸುತ್ತದೆ ಇತ್ಯಾದಿ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಕಂಡು ಕೊಳ್ಳುವುದಕ್ಕೆ ಈ ಪ್ರಾರ್ಥನೆಗಳು ಸಹಾಯಕವಾಗಿವೆ.

ಕುರ್‌ಆನ್‌ನಲ್ಲಿ ‘ರಬ್ಬನಾ’ (ನಮ್ಮೊಡೆಯಾ) ಎಂಬ ಪದದೊಂದಿಗೆ ಆರಂಭವಾಗುವ ಕೆಲವು ದುಆಗಳಿವೆ; 2:127, 128, 201, 250, 286(2)/ 3:8, 9, 16, 53, 147, 191, 192, 193, 194/ 5:83, 84, 114/ 7:2, 47, 89, 126/ 10:8586/ 14:38, 40, 41/ 18:10/ 20:45/ 23:109/ 25:6566/ 25:74/ 35:34/ 40:7, 8, 9/ 59:10(2)/ 60:4,5/ 66:8. ಕುರ್‌ಆನಿನಲ್ಲಿ ‘ರಬ್ಬಿ‘ (ನನ್ನೊಡೆಯಾ) ಎಂಬ ಪದದೊಂದಿಗೆ ಆರಂಭವಾಗುವ ಕೆಲವು ದುಆಗಳಿವೆ; 11:47/ 14:40, 41/ 17:24, 80/ 20:25ರಿಂದ 28, 114/ 21:89/ 23:29, 97, 98,118/ 26:83ರಿಂದ 85/ 27:19/ 28:24/ 29:30/ 46:15/ 66:11. ದಾಸರು ತನ್ನನ್ನು ಪ್ರಾರ್ಥಿಸಿದಾಗ ತಾನು ಅವರ ಪ್ರಾರ್ಥನೆಗೆ ಸ್ಪಂದಿಸುತ್ತೇನೆ ಎಂದು ಅಲ್ಲಾಹನು ನೀಡಿರುವ ಆಶ್ವಾಸನೆಯನ್ನೂ ಕುರ್‌ಆನ್‌ನಲ್ಲಿ ಪ್ರಸ್ತಾಪಿಸಲಾಗಿದೆ(2:186). ಕುರ್‌ಆನ್‌ನ ಪ್ರಥಮ ಅಧ್ಯಾಯ ಹಾಗೂ ಕೊನೆಯ ಎರಡು ಅಧ್ಯಾಯಗಳು ಸಾದ್ಯಂತ ಪ್ರಾರ್ಥನೆಯ ರೂಪದಲ್ಲೇ ಇದೆ. ಕುರ್‌ಆನ್‌ನಲ್ಲಿ ಪ್ರಾರ್ಥನೆಗಳಿರುವ ಇತರ ಕೆಲವು ವಚನಗಳು; 7:155, 156/ 10:10/ 11:73/ 12:92/ 21:83,87/ 39:46. ಇವುಗಳಲ್ಲದೆ ಪ್ರವಾದಿ (ಸ) ಕಲಿಸಿದ ಹಾಗೂ ಬೇರೆ ಬೇರೆ ಸಂದರ್ಭ, ಸನ್ನಿವೇಶಗಳಿಗೆ ಸಮರ್ಪಕವಾದ ದುಆಗಳ ಒಂದು ಬೃಹತ್ ಸಂಗ್ರಹ ಹದೀಸ್ ಗ್ರಂಥಗಳಲ್ಲಿದೆ.

14. ಮಾನವನು ಜನ್ಮನಃ ಪಾಪಿಯಲ್ಲ: ಕುರ್‌ಅನ್‌ನ ಪ್ರಕಾರ ಯಾವ ಮಾನವನೂ ಜನ್ಮನಃ ಪಾಪಿಯಾಗಿರುವುದಿಲ್ಲ. ಈ ಲೊಕದಲ್ಲಿ ಯಾರೂ ಪಾಪದ ಹೊರೆ ಹೊತ್ತು ಹುಟ್ಟುವುದಿಲ್ಲ. ಮಾನವನ ಪಾಲಿಗೆ ಪಾಪ ಪುಣ್ಯಗಳ ಪ್ರಯಾಣ ಆರಂಭವಾಗುವುದು ಅವನು ಈ ಭೂಮಿಯಲ್ಲಿ ಜನಿಸಿ, ಅವನಲ್ಲಿ ಪಾಪ ಪುಣ್ಯಗಳ ಪ್ರಜ್ಞೆ ಬೆಳೆದ ಬಳಿಕ ಮಾತ್ರ. ಕುರ್‌ಆನಿನ ಬೋಧನೆಗಳಲ್ಲಿ ಪೂರ್ವ ಜನ್ಮ ಅಥವಾ ಜನ್ಮಗಳ ಸರಮಾಲೆಯ ಕಲ್ಪನೆ ಇಲ್ಲ. ಕುರ್‌ಆನ್‌ನ ಪ್ರಕಾರ ಅಲ್ಲಾಹನು ಸಂಪೂರ್ಣ ಮಾನವ ಕೋಟಿಯನ್ನು ಬಹಳ ಹಿಂದೆಯೇ ಸೃಷ್ಟಿಸಿದ್ದಾನೆ. ತಾನಿಚ್ಛಿಸುವ ಸಮಯದಲ್ಲಿ ಅವನು ನಿರ್ದಿಷ್ಟ ಮಾನವರ ಆತ್ಮಗಳನ್ನು ಮಾನವ ಗರ್ಭಗಳ ಮೂಲಕ ಭೂಮಿಗೆ ಕಳಿಸುತ್ತಾನೆ. ಈ ರೀತಿ ಭೂಮಿಯಲ್ಲಿ ಜನಿಸುವ ಪ್ರತಿಯೊಬ್ಬ ಮಾನವನ ಪಾಲಿಗೆ, ಅವನು ಭೂಮಿಯಲ್ಲಿ ಬದುಕಿರುವಷ್ಟು ಕಾಲವು ಅವನ ಪರೀಕ್ಷೆಯ ಅವಧಿಯಾಗಿರುತ್ತದೆ. ಮರಣದೊಂದಿಗೆ ಈ ಪರೀಕ್ಷಾವಧಿಯು ಮುಗಿದು ಬಿಡುತ್ತದೆ. ವ್ಯಕ್ತಿಗಳ ಆಯುಷ್ಯದಂತೆ, ಈ ಭೂಮಿ ಹಾಗೂ ಒಟ್ಟು ವಿಶ್ವ ವ್ಯವಸ್ಥೆಯ ಆಯುಷ್ಯಕ್ಕೂ ಒಂದು ಮಿತಿ ಇದೆ. ಆ ಮಿತಿಯನ್ನು ತಲುಪಿದಾಗ ಈ ಒಟ್ಟು ವ್ಯವಸ್ಥೆಯೂ ನಾಶವಾಗಲಿದೆ. ಆ ಬಳಿಕ ಅದನ್ನು ಮತ್ತೆ ರಚಿಸಿ ಮತ್ತೆ ಸ್ಥಾಪಿಸಲಾಗುವುದು. ಅದನ್ನೇ ಲೋಕಾಂತ್ಯ ಹಾಗೂ ಪುನರುತ್ಥಾನವೆಂದು ಕರೆಯಲಾಗುತ್ತದೆ. ಪುನರುತ್ಥಾನದ ಬಳಿಕ ಮಾನವನು ತನ್ನ ಕರ್ಮಗಳ ಫಲಿತಾಂಶವನ್ನು ಅನುಭವಿಸಬೇಕಾದ ಅವಧಿಯು ಆರಂಭವಾಗುತ್ತದೆ.

15. ಪ್ರಥಮ ಮಾನವನ ತಪ್ಪನ್ನು ಕ್ಷಮಿಸಲಾಗಿದೆ: ಪ್ರಥಮ ಮಾನವ ಆದಮ್(ಅ) ಒಂದು ತಪ್ಪು ಮಾಡಿದ್ದ ರಿಂದ ಅವರ ಸಂತತಿಗಳೆಲ್ಲರೂ ಪಾಪಿಗಳು ಎಂಬ ಮೂಲ ಪಾಪ ಅಥವಾ Original sinನ ಕಲ್ಪನೆಯನ್ನೂ ಕುರ್‌ಆನ್ ತಿರಸ್ಕರಿಸುತ್ತದೆ. ಕುರ್‌ಆನ್‌ನಲ್ಲಿ, ಆದಮ್ (ಅ) ರಿಂದ ಸಂಭವಿಸಿದ ತಪ್ಪನ್ನು ಪ್ರಸ್ತಾಪಿಸಲಾಗಿದೆ. ಜೊತೆಗೇ, ಆ ತಪ್ಪಿಗಾಗಿ ಸ್ವರ್ಗಲೋಕದಲ್ಲೇ ಅವರು ಪಶ್ಚಾತ್ತಾಪ ಪಟ್ಟಿದ್ದರು ಮತ್ತು ಅಲ್ಲಾಹನು ಅವರ ಪಶ್ಚಾತ್ತಾಪವನ್ನು ಮನ್ನಿಸಿ ಅವರನ್ನು ಅಲ್ಲೇ ಕ್ಷಮಿಸಿ ಬಿಟ್ಟಿದ್ದನು ಎಂಬುದನ್ನೂ ಸ್ಪಷ್ಟಪಡಿಸಲಾಗಿದೆ (ನೋಡಿರಿ, ಕುರ್‌ಆನ್; 2:35 ರಿಂದ 37). ಈ ರೀತಿ, ಆದಮರು (ಅ) ಭೂಮಿಗೆ ಬರುವಾಗ ಪಾಪಿಯಾಗಿ ಬಂದಿರಲಿಲ್ಲ ಮತ್ತು ಯಾವುದೇ ಪಾಪದ ಭಾರ ಕೂಡಾ ಅವರ ಮೇಲಿರಲಿಲ್ಲ ಎಂಬುದು ಕುರ್‌ಆನ್‌ನ ಮೂಲಕ ಸ್ಪಷ್ಟವಾಗಿದೆ. ಈ ದೃಷ್ಟಿಯಿಂದ ಆದಮರ ಸಂತತಿಗಳು ಆದಮರ ಪಾಪಕ್ಕೆ ಹೊಣೆಗಾರರಾಗುವ ಅಥವಾ ಉತ್ತರಾಧಿಕಾರಿಗಳಾಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಆದ್ದರಿಂದ ಯಾವ ಮಾನವನೂ ತನ್ನ ಆದಿ ಪಿತನ ತಪ್ಪಿಗಾಗಿ ಪಾಪ ಪ್ರಜ್ಞೆಯಿಂದ ಬಳಲಬೇಕಾಗಿಲ್ಲ.

16. ಬದುಕು ಪರೀಕ್ಷಾವಧಿ: ಅಂದರೆ ಬದುಕೆಂಬುದು ಹಿಂದಿನ ಯಾವುದಾದರೂ ಜನ್ಮದ ಕೃತ್ಯಗಳ ಪ್ರತಿಫಲವಲ್ಲ. ಭೂಮಿಯಲ್ಲಿ ಜನಿಸಿದ ಮಾನವನಿಗೆ, ಇಲ್ಲಿ ಎದುರಾಗುವ ಆರೋಗ್ಯ, ಅನಾರೋಗ್ಯ, ಸುಖ, ದುಃಖ, ಸಂಪನ್ನತೆ, ದಾರಿದ್ರ ಇದಾವುದೂ ಯಾವುದೇ ಪೂರ್ವ ಜನ್ಮದ ಕರ್ಮಗಳ ಫಲಿತಾಂಶವಲ್ಲ. ಕುರ್‌ಆನಿನ ಪ್ರಕಾರ, ಇವೆಲ್ಲಾ ಮಾನವನ ಪಾಲಿಗೆ ಸವಾಲುಗಳು ಹಾಗೂ ಪರೀಕ್ಷೆಗಳಾಗಿವೆ. ಮುಂದಿನ ಶಾಶ್ವತ ಬದುಕಿನಲ್ಲಿ ತಾನು ಶಾಶ್ವತ ಸುಖಕ್ಕೆ ಅರ್ಹನೋ, ಅನರ್ಹನೋ ಎಂಬುದನ್ನು ಸಾಬೀತು ಪಡಿಸುವುದಕ್ಕಾಗಿ ಮಾನವನ ಮುಂದಿರುವ ಅವಕಾಶವೇ ಬದುಕು. ಅಲ್ಲಾಹನು ಮನುಷ್ಯನಿಗೆ ಬದುಕನ್ನು ನೀಡಿರುವಂತೆಯೇ ಈ ಬದುಕನ್ನು ಹೇಗೆ ಸಾಗಿಸಬೇಕೆಂದು ತಿಳಿಸುವ ಒಂದು ಮಾರ್ಗದರ್ಶಿ ಸಂಹಿತೆಯನ್ನೂ ನೀಡಿರುವನು. ಆ ಸಂಹಿತೆಯ ಆಧಾರದಲ್ಲಿ, ಹೆಜ್ಜೆ ಹೆಜ್ಜೆಗೂ ಅಲ್ಲಾಹನ ಮಾರ್ಗದರ್ಶನವನ್ನು ಅನುಸರಿಸುತ್ತಾ ಬದುಕುವುದೇ ಬದುಕಿನ ಯಶಸ್ಸಿಗಿರುವ ದಾರಿ.

17. ಗ್ರಂಥದವರು: ಕುರ್‌ಆನ್‌ನಲ್ಲಿ ಕೆಲವರನ್ನು ‘ಅಹ್ಲುಲ್‌ಕಿತಾಬ್‌‘ (ಗ್ರಂಥದವರು) ಅಥವಾ ‘ಅಲ್ಲಝೀನ ಊತುಲ್‌ಕಿತಾಬ್‌‘ (ಗ್ರಂಥ ನೀಡಲಾದವರು) ಎಂದು ಕರೆಯಲಾಗಿದೆ. ಕುರ್‌ಆನ್, ದಿವ್ಯ ಮಾರ್ಗದರ್ಶನದ ಅಂತಿಮ ಆವೃತ್ತಿಯಾಗಿದ್ದು, ಅದಕ್ಕಿಂತ ಮುನ್ನ ಹಿಂದಿನ ದೇವದೂತರ ಕಾಲಗಳಲ್ಲಿ ಕಳಿಸಲಾಗಿದ್ದ ತೌರಾತ್, ಇಂಜೀಲ್, ಝಬೂರ್ ಮುಂತಾದ ಗ್ರಂಥಗಳು ಕೂಡಾ ಮೂಲತಃ ದಿವ್ಯಗ್ರಂಥಗಳಾಗಿದ್ದವು ಎಂದು ಕುರ್‌ಆನ್ ಪ್ರತಿಪಾದಿಸುತ್ತದೆ. ಆ ಗ್ರಂಥಗಳಲ್ಲಿ ತಮಗೆ ನಂಬಿಕೆ ಇದೆ ಎಂದು ವಾದಿಸುವವರನ್ನು ಮತ್ತು ವಿಶೇಷವಾಗಿ ತಾವು ತೌರಾತ್ ಹಾಗೂ ಇಂಜೀಲ್ (ಬೈಬಲ್‌ನ ಹಳೆಯ ಹಾಗೂ ಹೊಸ ಒಡಂಬಡಿಕೆ)ಗಳ ಅನುಯಾಯಿ ಗಳೆಂದು ಹೇಳಿಕೊಳ್ಳುತ್ತಿದ್ದ ಕ್ರೈಸ್ತರು ಹಾಗೂ ಯಹೂದಿಗಳನ್ನು ಕುರ್‌ಆನ್‌ನಲ್ಲಿ ‘ಗ್ರಂಥದವರು’ ಎಂದು ಗುರುತಿಸಲಾಗಿದೆ. ಉದಾ: 2:42, 88, 89, 102, 109, 121, 145, 146/3:20 ರಿಂದ 24, 61, 64, 69 ರಿಂದ 75, 87, 98 ರಿಂದ 100, 110, 112, 118ರಿಂದ 120, 181, 183, 186 ರಿಂದ 189/ 4:49 ರಿಂದ 57, 60, 150 ರಿಂದ 155 / 5:5,15.

 18. ಇಸ್ರಾಈಲರ ಸಂತತಿ (ಬನೀಇಸ್ರಾಈಲ್): ಇಸ್ರಾಈಲರ ಸಂತತಿಗಳೇ, ಎಂಬ ಕರೆ ಕುರ್‌ಆನ್‌ನಲ್ಲಿ ಹತ್ತಾರು ಕಡೆ ಕಂಡುಬರುತ್ತದೆ. ಇಸ್ರಾಈಲ್ ಎಂಬುದು, ಪ್ರವಾದಿ ಇಬ್ರಾಹೀಮ್ (ಅ)ರ ಮೊಮ್ಮಗ ಪ್ರವಾದಿ ಯಾಕೂಬ್(ಅ)ರ ಇನ್ನೊಂದು ಹೆಸರು. ಅವರು ಪ್ರವಾದಿ ಇಸ್‌ಹಾಕ್(ಅ)ರ ಪುತ್ರರಾಗಿದ್ದರು. ಸುಮಾರು ಕ್ರಿ.ಪೂ.2000 ದಲ್ಲಿ ಬದುಕಿದ್ದ ಯಾಕೂಬ್(ಅ)ರಿಗೆ 12 ಮಂದಿ ಪುತ್ರರಿದ್ದರು. ಆ 12 ಮಂದಿಯ ಸಂತತಿಗಳೇ ಇಸ್ರಾಈಲರ ಸಂತತಿಗಳು ಅಥವಾ ಬನೀ ಇಸ್ರಾಈಲರು. ಕ್ರಮೇಣ ಅವರು ತಮ್ಮನ್ನು ಯಹೂದಿ ಮತಸ್ಥರೆಂದು ಗುರುತಿಸಿಕೊಂಡರು. ಮೂಲತಃ ಏಕದೇವತ್ವ ವಿಶ್ವಾಸಿಗಳೂ ಪ್ರತಿಪಾದಕರೂ ಆಗಿದ್ದ ಈ ಜನಾಂಗದಲ್ಲಿ ಹಲವಾರು ಪ್ರವಾದಿಗಳು ಆಗಮಿಸಿದ್ದರು. ಅವರು ಬಹುಕಾಲ ಆಡಳಿತಗಾರರೂ ಆಗಿದ್ದರು. ದಾವೂದ್ (ಅ) ಹಾಗೂ ಸುಲೈಮಾನ್ (ಅ)ರಂತಹ ಪ್ರಚಂಡ ಆಡಳಿತಗಾರರು ಆ ಜನಾಂಗದಲ್ಲಿ ಜನಿಸಿದ್ದರು. ಅಲ್ಲಾಹನು ಅವರಿಗೆ ಅಪಾರ ಅನುಗ್ರಹಗಳನ್ನು ದಯಪಾಲಿಸಿದ್ದನು. ವಿದ್ವತ್ತು ಮತ್ತು ಸಂಪತ್ತು ಇವೆರಡೂ ಅವರಿಗೆ ಧಾರಾಳವಾಗಿ ಪ್ರಾಪ್ತವಾಗಿತ್ತು. ಆದರೆ ಕಾಲಕ್ರಮೇಣ ಆ ಜನಾಂಗದಲ್ಲಿ ಪತನದ ಲಕ್ಷಣಗಳು ತಲೆದೋರಲಾರಂಭಿಸಿದವು. ವಿಶೇಷವಾಗಿ ಜನಾಂಗ ಹಿರಿಮೆಯ ಅಹಂಕಾರದಲ್ಲಿ ಅವರು ಕುರುಡಾಗತೊಡಗಿದರು.

ಪ್ರವಾದಿ ಮುಹಮ್ಮದ್(ಸ) ತಮ್ಮ ಪ್ರವಾದಿತ್ವವನ್ನು ಘೋಷಿಸಿದಾಗ, ಅನೇಕ ಯಹೂದಿ ವಿದ್ವಾಂಸರಿಗೆ, ಅವರೇ ಬಹು ನಿರೀಕ್ಷಿತ ಅಂತಿಮ ದೇವದೂತರೆಂಬುದು ಮನವರಿಕೆಯಾಗಿತ್ತು. ಆದರೆ ಕೇವಲ ಸ್ವಾರ್ಥ ಹಾಗೂ ಜನಾಂಗವಾದದ ಆಧಾರದಲ್ಲಿ ಅವರಲ್ಲಿ ಅನೇಕರು ಮುಹಮ್ಮದ್ (ಸ) ಹಾಗೂ ಅವರು ಪರಿಚಯಿಸಿದ ಸತ್ಯವನ್ನು ಧಿಕ್ಕರಿಸಿದರು. ಕುರ್‌ಆನ್‌ನಲ್ಲಿ ಅವರನ್ನು ಅಹ್ಲುಲ್‌ಕಿತಾಬ್ (ಗ್ರಂಥದವರು) ಹಾಗೂ ಯಹೂದಿಗಳೆಂದು ಕರೆಯಲಾಗಿದೆ. ಕುರ್‌ಆನ್‌ನಲ್ಲಿ ಅವರ ಕುರಿತು ಪ್ರಸ್ತಾಪಿಸಲಾಗಿರುವ ಕೆಲವು ವಚನಗಳು ಇಲ್ಲಿವೆ; 2:40 ರಿಂದ 102, 156, 211, 246 ರಿಂದ 250/ 3:21 ರಿಂದ 24, 93/ 4:154 ರಿಂದ 157, 160 ರಿಂದ 162/ 5:12,13, 20 ರಿಂದ 26,70, 78ರಿಂದ 80/7:25, 137, 163 ರಿಂದ 169, 16:124/ 17:4ರಿಂದ 8,104, 45:16,17,/ 61:6,14.

19. ಇಹಲೋಕ ಮತ್ತು ಪರಲೋಕ: ಕುರ್‌ಆನ್‌ನ ಪ್ರಕಾರ ಮಾನವರ ಪಾಲಿಗೆ ಇಹಲೋಕದ ಬದುಕು ಒಂದು ತಾತ್ಕಾಲಿಕ ಪರೀಕ್ಷಾವಧಿಯಾಗಿದೆ. ಇಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಮರಣದ ಸವಿಯನ್ನು ಸವಿಯಲೇಬೇಕು. ಹಾಗೆಯೇ, ಈ ತಾತ್ಕಾಲಿಕ ಪರೀಕ್ಷಾ ಲೋಕ ಮತ್ತು ಇಲ್ಲಿರುವ ಎಲ್ಲವೂ ಒಂದು ದಿನ ನಾಶವಾಗಲಿದೆ. ಆ ಬಳಿಕ ಪರಲೋಕದ ಶಾಶ್ವತ ಬದುಕು ಆರಂಭವಾಗಲಿದೆ. ಅಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಇಹಲೋಕದ ಕರ್ಮಗಳ ಕುರಿತು ವಿಚಾರಣೆ ನಡೆಯಲಿದೆ. ಪ್ರಾಮಾಣಿಕವಾಗಿ ಅಲ್ಲಾಹನ ಮಾರ್ಗದರ್ಶನವನ್ನು ನಿಷ್ಠೆಯಿಂದ ಸ್ವೀಕರಿಸಿ, ಸನ್ಮಾರ್ಗದಲ್ಲಿ, ಸತ್ಯ ನಿಷ್ಠರಾಗಿ ಬದುಕಿದ್ದವರು ಪರಲೋಕದಲ್ಲಿ ವಿಜಯಿಗಳಾಗುವರು. ಅಲ್ಲಿ ಅವರಿಗೆ ಸದಾ ಸುಖಕರವಾದ ಬದುಕು ಪ್ರಾಪ್ತವಾಗುವುದು. ಇಹಲೊಕದಲ್ಲಿ ಅಲ್ಲಾಹನ ಮಾರ್ಗದರ್ಶನವನ್ನು ಧಿಕ್ಕರಿಸಿ ಸ್ವೇಚ್ಛಾನುಸಾರ ಬದುಕಿದವರು ಅಲ್ಲಿ ಸೋಲನುಭವಿಸುವರು. ಅಲ್ಲಿಯ ವಿಜಯಿಗಳು ಸದಾಕಾಲ ಸ್ವರ್ಗ ಸುಖದಲ್ಲಿರುವರು ಮತ್ತು ಅಲ್ಲಿ ಸೋತವರು ಸದಾ ನರಕದ ಹಿಂಸೆ ಹಾಗೂ ಅಪಮಾನಕ್ಕೆ ತುತ್ತಾಗಿರುವರು. ಈ ಕುರಿತು ಕುರ್‌ಆನಿನ ಕೆಲವು ವಚನಗಳು ಇಲ್ಲಿವೆ;

2:48, 123, 166-167, 212, 253, 259, 260, 281/ 3:25,30, 105, 106, 116, 182, 185, 186, 195 / 4:41, 42/ 5:36, 37/ 6:22, 24, 32, 36, 37, 70, 73, 94, 128-130, 149, 154-157, 160, 164 /

7:8-9, 38-39, 41, 44, 50/ 10:10, 26, 27, 29, 30, 45, 54 / 11:106-108

20. ಕುರ್ಆನ್ ಪಠಣದ ವೇಳೆ ಪಾಲಿಸಲಾಗುವ ಕೆಲವು ಶಿಷ್ಟಾಚಾರಗಳು: ಸಾಮಾನ್ಯವಾಗಿ ಮಸ್ಲಿಮರು ಕುರ್‌ಆನಿನ ಅಧ್ಯಯನದ ವೇಳೆ ಕೆಲವು ನಿರ್ದಿಷ್ಟ ಶಿಷ್ಟಾಚಾರಗಳನ್ನು ಪಾಲಿಸುತ್ತಾರೆ. ಉದಾ;ಅರಬಿ ಭಾಷೆಯಲ್ಲಿರುವ ಕುರ್‌ಆನ್‌ನ ಮೂಲ ಪಾಠವನ್ನು ಪಠಿಸುವಾಗ ಶರೀರವು ಶುದ್ಧವಾಗಿರಬೇಕು. ಸಾಮಾನ್ಯ ಸ್ಥಿತಿಯಲ್ಲಿ ‘ವುಝೂ’ (ಅಥವಾ ಉಲೂ) ಮಾಡಿರಬೇಕು. ವುಝೂ ಅಂದರೆ ಭಾಗಶಃ ಸ್ನಾನ. ಮುಖ ತೊಳೆಯುವುದು, ಎರಡೂ ಕೈಗಳನ್ನು ಮೊಣಕೈಗಳ ತನಕ ತೊಳೆಯುವುದು, ತೇವಗೊಂಡ ಕೈಗಳಿಂದ ತಲೆಯನ್ನು ಭಾಗಶಃ ಸವರಿಕೊಳ್ಳುವುದು ಮತ್ತು ಎರಡೂ ಕಾಲುಗಳನ್ನು ಮಣಿಗಂಟಿನ ತನಕ ತೊಳೆದುಕೊಳ್ಳುವುದು – ಕ್ರಮವಾಗಿ ಇವಿಷ್ಟು ವುಝೂವಿನ ಕಡ್ಡಾಯ ಭಾಗಗಳು. ಬಾಯಿ ತೊಳೆದುಕೊಳ್ಳುವುದು ಮೂಗಿನ ನಾಳಗಳನ್ನು ಶುಚೀಕರಿಸುವುದು ಮತ್ತು ಕಿವಿಗಳನ್ನು ಸವರಿಕೊಂಡು ಶುಚೀಕರಿಸುವುದು ಇವು ವುಝೂವಿನಲ್ಲಿ ಕಡ್ಡಾಯವಲ್ಲದ ಭಾಗಗಳು. ಹಾಗೆಯೇ, ಸ್ನಾನವು ಕಡ್ಡಾಯವಾಗಿರುವ ಸನ್ನಿವೇಶಗಳಲ್ಲಿ (ಮುಖ್ಯವಾಗಿ, ವೀರ್ಯ ಸ್ಖಲನವಾದ ಬಳಿಕ, ಸಂಭೋಗದ ಬಳಿಕ ಮತ್ತು ಋತುಸ್ರಾವ ಮುಗಿದ ಬಳಿಕ) ಕುರ್‌ಆನ್ ಪಠಣಕ್ಕೆ ಮುನ್ನ ಸ್ನಾನ ಮಾಡಿರಬೇಕು.

ಕುರ್‌ಆನ್‌ನ ಅನುವಾದವನ್ನು ಓದುವ ವೇಳೆ, ಅದರ ವ್ಯಾಖ್ಯಾನದ ಅಧ್ಯಯನ ನಡೆಸುವಾಗ ಅಥವಾ ಇತರ ಸಂದರ್ಭಗಳಲ್ಲೂ ಕೆಲವು ನಿರ್ದಿಷ್ಟ ಹೆಸರುಗಳ ಪ್ರಸ್ತಾಪ ಬಂದಾಗ ಗೌರವಸೂಚಕವಾಗಿ, ನಿರ್ದಿಷ್ಟ ಪ್ರಾರ್ಥನೆಗಳನ್ನು ಉಚ್ಚರಿಸಬೇಕು. ಉದಾ: ಪ್ರವಾದಿ ಮುಹಮ್ಮದ್(ಸ)ರ ಪ್ರಸ್ತಾಪ ಬಂದಾಗ ‘ಸಲ್ಲಲ್ಲಾಹು ಅಲೈಹಿ ವ ಸಲ್ಲಮ್’ (ಅಲ್ಲಾಹನು ಅವರಿಗೆ ಹಿತವನ್ನು ಹಾಗೂ ಶಾಂತಿಯನ್ನು ದಯಪಾಲಿಸಲಿ) ಎನ್ನಬೇಕು. ಇತರ ಪ್ರವಾದಿಗಳ, ದೇವದೂತರ ಅಥವಾ ಮಲಕ್‌ಗಳ ಪ್ರಸ್ತಾಪ ಬಂದಾಗ ‘ಅಲೈಹಿಸ್ಸಲಾಮ್’ (ಅವರಿಗೆ ಶಾಂತಿ ಸಿಗಲಿ) ಎಂದು ಹಾರೈಸಬೇಕು. (ಇದರ ಬಹುವಚನ ‘ಅಲೈಹಿಮುಸ್ಸಲಾಮ್’).

 ಪ್ರವಾದಿ ಮುಹಮ್ಮದ್(ಸ)ರ ಸಂಗಾತಿ (ಸಹಾಬಿ) ಗಳ ಪ್ರಸ್ತಾಪ ಬಂದಾಗ ‘ರಝಿಯಲ್ಲಾಹು ಅನ್‌ಹು’ (ಅಲ್ಲಾಹನು ಅವರನ್ನು ಮೆಚ್ಚಿರುವನು) ಎನ್ನಬೇಕು. (ಇದರ ಸ್ತ್ರೀವಚನ -ಅನ್‌ಹಾ, ದ್ವಿವಚನ – ಅನ್‌ಹುಮಾ ಮತ್ತು ಬಹುವಚನ – ಅನ್‌ಹುಮ್). ಪ್ರವಾದಿ ಮುಹಮ್ಮದ್(ಸ)ರ ಕಾಲಾನಂತರದ ಹಿರಿಯರ ಪ್ರಸ್ತಾಪ ಬಂದಾಗ ‘ರಹ್ಮತುಲ್ಲಾಹಿ ಅಲೈಹಿ’ (ಅವರನ್ನು ಅಲ್ಲಾಹನು ಅನುಗ್ರಹಿಸಲಿ) ಎಂದು ಹಾರೈಸಬೇಕು. (ಇದರ ಬಹುವಚನ – ಅಲೈಹಿಮ್, ಸ್ತ್ರೀಯರಿಗೆ – ಅಲೈಹಾ, ಇಬ್ಬರಿಗೆ – ಅಲೈಹಿಮಾ).

21.ಕುರ್ಆನ್ ಎಲ್ಲರದು: ಕುರ್‌ಆನ್ ಎಲ್ಲರ ಗ್ರಂಥ: ಪವಿತ್ರ ಕುರ್‌ಆನ್ ಯಾವ ಹಂತದಲ್ಲೂ ಯಾವುದಾದರೂ ಒಂದು ವರ್ಗದ ಸೊತ್ತಾಗಿ ಉಳಿಯಲಿಲ್ಲ. ಎಲ್ಲ ಮಾನವರ ದೇವರ ಕಡೆಯಿಂದ ಎಲ್ಲ ಮಾನವರ ಉದ್ಧಾರಕ್ಕಾಗಿ ಬಂದ ಕುರ್‌ಆನ್, ತನ್ನ ಅನಾವರಣದ ಆರಂಭದಿಂದಲೇ ಎಲ್ಲರಿಗೆ ಲಭ್ಯವಾಗಿತ್ತು. ಯಾರೂ ಅದನ್ನು ಹುಡುಕಿಕೊಂಡು ಹೋಗಬೇಕಾಗಿರಲಿಲ್ಲ. ಅದನ್ನು ಪಡೆದ ದೂತರೇ ಜನರ ಮನೆ ಬಾಗಿಲುಗಳಿಗೆ ಹೋಗಿ ಜನರ ಜೊತೆ ಅದನ್ನು ಹಂಚಿಕೊಳ್ಳಲು ಶ್ರಮಿಸುತ್ತಿದ್ದರು. ತೀರಾ ಆರಂಭಿಕ ಹಂತದಲ್ಲಿ, ಅಂದರೆ ಸಮಾಜದ ದೃಷ್ಟಿಯಲ್ಲಿ ಕುರ್‌ಆನನ್ನು ಕೇಳುವುದೇ ಶಿಕ್ಷಾರ್ಹ ಅಪರಾಧವಾಗಿದ್ದ ದಿನಗಳಲ್ಲಿ, ಕುರ್‌ಆನನ್ನು ಕೇಳಿ, ಅದರಿಂದ ಪ್ರಭಾವಿತರಾಗಿ, ಅದನ್ನು ಅಂಗೀಕರಿಸಿ, ಅದರ ಮೇಲಿನ ತಮ್ಮ ನಂಬಿಕೆಯನ್ನು ಘೋಷಿಸುವ ಕೆಚ್ಚೆದೆ ತೋರಿದವರಲ್ಲಿ ಹೆಚ್ಚಿನವರು ಸಮಾಜದ ಅತ್ಯಂತ ಬಡ ಹಾಗೂ ದುರ್ಬಲ ವರ್ಗದವರಾಗಿದ್ದರು. ಆ ಕಾಲದಿಂದ ಇಂದಿನವರೆಗೂ ಅತ್ಯಧಿಕ ಸಂಖ್ಯೆಯಲ್ಲಿ ಕುರ್‌ಆನ್‌ನ ವಿಶ್ವಾಸಿಗಳು, ಅಭಿಮಾನಿಗಳು ಪ್ರತಿಪಾದಕರು, ವಿದ್ಯಾರ್ಥಿಗಳು,ವಿದ್ವಾಂಸರು, ಮತ್ತು ವಿಶೇಷವಾಗಿ ಹಾಫಿಝ್‌ಗಳು ಹೊರಡುತ್ತಿರುವುದು, ‘ಜನಸಾಮಾನ್ಯರು’ ಎಂದು ಕರೆಯಲಾಗುವ ಇದೇ ವರ್ಗದಿಂದ.

22. ನಾಸಿಖ್ (ಅನೂರ್ಜಕ) ಮತ್ತು ಮನ್ಸೂಖ್ (ಅನೂರ್ಜಿತ):

 ಅಲ್ಲಾಹನು ಮನುಕುಲದ ಮಾರ್ಗದರ್ಶನಕ್ಕಾಗಿ ಕುರ್‌ಆನ್‌ನ ಮೂಲಕ ನೀಡಿದ ಆದೇಶಗಳ ಪೈಕಿ ಹೆಚ್ಚಿನ ಆದೇಶಗಳು ಶಾಶ್ವತ ಸ್ವರೂಪದವುಗಳು. ಆದರೆ ಕೆಲವು ವಿಷಯಗಳಲ್ಲಿ ಅಲ್ಲಾಹನು ತನ್ನ ಅಪೇಕ್ಷಿತ ನಿಯಮವನ್ನು ಹಂತ ಹಂತವಾಗಿ, ಕ್ರಮೇಣ ಅನುಷ್ಠಾನಿಸುವ ಧೋರಣೆಗೆ ಪ್ರಾಶಸ್ತ್ಯ ನೀಡಿದ್ದು ಆ ಕುರಿತಾದ ಆದೇಶಗಳನ್ನು ಹಂತಹಂತವಾಗಿ ಬಿಡುಗಡೆಗೊಳಿಸಿದನು. ಉದಾ: ಮದ್ಯಪಾನದ ಕುರಿತಂತೆ 2:219ರಲ್ಲಿ, ಅದೊಂದು ಪಾಪ ಕಾರ್ಯ ಎಂದಷ್ಟೇ ಸೂಚಿಸಲಾಗಿತ್ತು. ಮುಂದೆ 4:43ರಲ್ಲಿ, ಮದ್ಯದ ಅಮಲಿನಲ್ಲಿರುವವರು (ಆ ಅವಧಿಯಲ್ಲಿ) ನಮಾಝ್‌ನಿಂದ ದೂರವಿರಬೇಕೆಂದು ಆದೇಶಿಸಲಾಯಿತು. ಕೊನೆಗೆ 5: 90ರಲ್ಲಿ ಬಹಳ ಸ್ಪಷ್ಟವಾಗಿ, ಮದ್ಯಪಾನದ ಮೇಲಿನ ಸಂಪೂರ್ಣ ನಿಷೇಧವನ್ನು ಘೋಷಿಸಲಾಯಿತು. ಈ ಹಿನ್ನೆಲೆಯಲ್ಲಿ, 5:90ರಲ್ಲಿನ ಆದೇಶವು 4:43 ರಲ್ಲಿನ ಆದೇಶವನ್ನು ಅನೂರ್ಜಿತಗೊಳಿಸಿದಂತಾಯಿತು. ಇವೆರಡರ ಪೈಕಿ ಮೊದಲ ಆದೇಶವನ್ನು ನಾಸಿಖ್ ಎಂದೂ ಎರಡನೆಯ ಆದೇಶವನ್ನು ಮನ್‌ಸೂಖ್ ಎಂದೂ ಕರೆಯಲಾಗುತ್ತದೆ. ಏಕೆಂದರೆ, ಸಂಪೂರ್ಣ ಪಾನ ನಿಷೇಧದ ಆದೇಶ ಬಂದ ಬಳಿಕ, ನಮಾಝ್‌ನ ವೇಳೆಗೆ ಮಾತ್ರ ಸೀಮಿತವಾಗಿದ್ದ ನಿಷೇಧವು ಸಹಜವಾಗಿಯೇ ಅನೂರ್ಜಿತವಾಗಿ ಬಿಡುತ್ತದೆ. ಆದರೆ, ಒಂದು ವಚನದಲ್ಲಿ ಅಡಗಿರುವ ಆದೇಶವು ಅನೂರ್ಜಿತವಾದ ಮಾತ್ರಕ್ಕೆ ಆ ವಚನವು ಅನೂರ್ಜಿತವಾಗಿ ಬಿಡುವುದಿಲ್ಲ. ಕುರ್‌ಆನಿನ ವಚನಗಳನ್ನಾಗಲಿ, ಅವುಗಳಲ್ಲಿರುವ ಆದೇಶವನ್ನಾಗಲಿ ಅನೂರ್ಜಿತಗೊಳಿಸುವ ಅಧಿಕಾರವು ಸಂಪೂರ್ಣವಾಗಿ ಅಲ್ಲಾಹನಿಗೆ ಮಾತ್ರ ಸೇರಿದೆ. ಈ ವಿಷಯದಲ್ಲಿ ಇನ್ನೊಂದು ಉದಾಹರಣೆ ಇಲ್ಲಿದೆ; ವ್ಯಭಿಚಾರದ ಕುರಿತಂತೆ 4:15 ರಲ್ಲಿ ಒಂದು ಆದೇಶವಿದೆ. ಆದರೆ ಆ ಆದೇಶವನ್ನು ಮುಂದೆ 24:2 ರಲ್ಲಿರುವ ಆದೇಶವು ಅನೂರ್ಜಿತ ಗೊಳಿಸಿದೆ.