06. Al Anam

6. ಅಲ್ ಅನ್ಆಮ್ (ಜಾನುವಾರುಗಳು)

 ವಚನಗಳು – 165, ಮಕ್ಕಃ

ಅಲ್ಲಾಹನ ಹೆಸರಿಂದ – ಅವನು ಅಪಾರ ದಯಾಳು, ಕರುಣಾಮಯಿ.

1. ಎಲ್ಲ ಪ್ರಶಂಸೆ ಅಲ್ಲಾಹನಿಗೆ. ಅವನೇ, ಆಕಾಶಗಳನ್ನು ಹಾಗೂ ಭೂಮಿಯನ್ನು ಸೃಷ್ಟಿಸಿದವನು ಮತ್ತು ಕತ್ತಲುಗಳನ್ನು ಹಾಗೂ ಬೆಳಕನ್ನು ರೂಪಿಸಿದವನು. ಇಷ್ಟಾಗಿಯೂ ಧಿಕ್ಕಾರಿಗಳು (ಅನ್ಯರನ್ನು) ತಮ್ಮ ಒಡೆಯನಿಗೆ ಸಮಾನರೆಂದು ಪರಿಗಣಿಸುತ್ತಾರೆ.

2. ಅವನೇ ನಿಮ್ಮನ್ನು ಮಣ್ಣಿನಿಂದ ಸೃಷ್ಟಿಸಿದವನು ಹಾಗೂ ಆ ಬಳಿಕ (ನಿಮ್ಮ ಮರಣಕ್ಕೆ) ಒಂದು ಸಮಯವನ್ನು ನಿಗದಿಗೊಳಿಸಿದವನು. ಅವನ ಬಳಿಯಂತು (ಎಲ್ಲದಕ್ಕೂ) ಸಮಯವು ನಿಶ್ಚಿತವಾಗಿದೆ. ಆದರೆ ನೀವು ಸಂಶಯಿಸುತ್ತಿರುವಿರಿ.

3. ಆಕಾಶಗಳಲ್ಲೂ ಭೂಮಿಯಲ್ಲೂ ಆ ಅಲ್ಲಾಹನೇ ಇರುವನು. ನಿಮ್ಮ ಗುಪ್ತ ಹಾಗೂ ಬಹಿರಂಗವಾದ ಎಲ್ಲ ಸಂಗತಿಗಳನ್ನೂ ಅವನು ಬಲ್ಲನು ಮತ್ತು ನೀವು ಏನನ್ನು ಸಂಪಾದಿಸುತ್ತಿರುವಿರಿ ಎಂಬುದೂ ಅವನಿಗೆ ತಿಳಿದಿದೆ.

4. ಅಲ್ಲಾಹನ ದೃಷ್ಟಾಂತಗಳ ಪೈಕಿ, ತಮ್ಮ ಬಳಿಗೆ ಬಂದ ಪ್ರತಿಯೊಂದು ದೃಷ್ಟಾಂತವನ್ನೂ ಅವರು ಕಡೆಗಣಿಸಿದರು.

5. ಸತ್ಯವು ತಮ್ಮ ಬಳಿಗೆ ಬಂದಾಗಲೆಲ್ಲಾ ಅವರು ಅದನ್ನು ಸುಳ್ಳೆಂದು ತಿರಸ್ಕರಿಸಿದರು. ಆದರೆ ಅವರು ಈ ತನಕ ಗೇಲಿ ಮಾಡುತ್ತಿದ್ದ ವಿಷಯಗಳ ಸತ್ಯಾಂಶವು ಶೀಘ್ರವೇ ಅವರಿಗೆ ತಿಳಿಯಲಿದೆ.

 6. ನಾವು ಅವರಿಗಿಂತ ಮುನ್ನ ಅದೆಷ್ಟು ಜನಾಂಗಗಳನ್ನು ನಾಶಗೊಳಿಸಿರುವೆವೆಂದು ಅವರು ಕಂಡಿಲ್ಲವೇ? ಭೂಮಿಯಲ್ಲಿ ನಿಮಗೆ ನೀಡಿಲ್ಲದಷ್ಟು ಸ್ಥಿರತೆಯನ್ನು ನಾವು ಅವರಿಗೆ ನೀಡಿದ್ದೆವು ಹಾಗೂ ಆಕಾಶದಿಂದಲೂ ಅವರ ಮೇಲೆ ಧಾರಾಳ ಮಳೆಯನ್ನು ಸುರಿಸಿದೆವು ಮತ್ತು ನಾವು ಅವರ ತಳದಲ್ಲಿ ನದಿಗಳನ್ನು ಹರಿಸಿದೆವು – ಕೊನೆಗೆ, ಅವರ ಪಾಪಗಳ ಕಾರಣ ನಾವು ಅವರನ್ನು ನಾಶ ಮಾಡಿದೆವು ಮತ್ತು ಅವರ ಬಳಿಕ ಬೇರೆ ಜನಾಂಗಗಳನ್ನು ಮುಂದೆ ತಂದೆವು.

7. (ದೂತರೇ,) ಒಂದು ವೇಳೆ ನಾವು ನಿಮಗೆ ಕಾಗದದಲ್ಲಿ ಬರೆದಿರುವ ಸಂದೇಶವನ್ನು ಇಳಿಸಿಕೊಟ್ಟಿದ್ದರೆ ಮತ್ತು ಅವರು (ಜನರು) ಅದನ್ನು ತಮ್ಮ ಕೈಗಳಿಂದ ಮುಟ್ಟುವಂತಿದ್ದರೆ, ಆಗಲೂ ಧಿಕ್ಕಾರಿಗಳು – ಇದೆಲ್ಲಾ ಸ್ಪಷ್ಟ ಮಾಟಗಾರಿಕೆಯಲ್ಲದೆ ಬೇರೇನೂ ಅಲ್ಲ – ಎನ್ನುತ್ತಿದ್ದರು.

8. ‘‘ಅವರ (ದೂತರ) ಜೊತೆ ‘ಮಲಕ್’ ಅನ್ನು ಯಾಕೆ ಇಳಿಸಿಕೊಡಲಾಗಿಲ್ಲ?’’ ಎಂದು ಅವರು ಕೇಳುತ್ತಾರೆ. ಒಂದು ವೇಳೆ ನಾವು ಮಲಕ್‌ಗಳನ್ನು ಇಳಿಸಿಬಿಟ್ಟಿದ್ದರೆ ಎಲ್ಲವೂ ಇತ್ಯರ್ಥವಾಗಿ ಬಿಡುತ್ತಿತ್ತು ಮತ್ತು ಅವರಿಗೆ ಕಾಲಾವಕಾಶವೇ ಸಿಗುತ್ತಿರಲಿಲ್ಲ.

 9. ಇನ್ನು ನಾವು ಮಲಕ್ ಅನ್ನು ಕಳಿಸಿದ್ದರೂ, ಆತನನ್ನು ಮಾನವ ರೂಪದಲ್ಲೇ ಕಳುಹಿಸುತ್ತಿದ್ದೆವು ಮತ್ತು ಆಗಲೂ, ನಾವು ಅವರಲ್ಲಿ, ಅವರು ಈಗ ಪ್ರಕಟಿಸುತ್ತಿರುವಂತಹ ಸಂದೇಹವನ್ನೇ ಬಿತ್ತುತ್ತಿದ್ದೆವು.

10. (ದೂತರೇ,) ನಿಮಗಿಂತ ಹಿಂದಿನ ದೇವದೂತರುಗಳನ್ನೂ ಗೇಲಿ ಮಾಡಲಾಗಿತ್ತು. ಆದರೆ ಕೊನೆಗೆ, ಅವರು ಏನನ್ನು ಗೇಲಿ ಮಾಡುತ್ತಿದ್ದರೋ ಅದುವೇ ಅವರಲ್ಲಿನ ಗೇಲಿ ಮಾಡುವವರನ್ನು ಆವರಿಸಿಕೊಂಡಿತು.

11. ಹೇಳಿರಿ; ಭೂಮಿಯಲ್ಲಿ ಪ್ರಯಾಣಿಸಿರಿ ಮತ್ತು ಧಿಕ್ಕಾರಿಗಳಿಗೆ ಎಂತಹ ಗತಿ ಒದಗಿತೆಂಬುದನ್ನು ನೋಡಿರಿ.

12. ಆಕಾಶಗಳಲ್ಲಿ ಹಾಗೂ ಭೂಮಿಯಲ್ಲಿ ಇರುವುದೆಲ್ಲವೂ ಯಾರಿಗೆ ಸೇರಿದ್ದೆಂದು (ಜನರೊಡನೆ) ಕೇಳಿರಿ (ಮತ್ತು) ಹೇಳಿರಿ; ಅಲ್ಲಾಹನಿಗೇ ಸೇರಿದೆ. ಅವನು ತನ್ನ ಮೇಲೆ ಕರುಣೆಯನ್ನು ಕಡ್ಡಾಯಗೊಳಿಸಿರುತ್ತಾನೆ. ಅವನು ಪುನರುತ್ಥಾನ ದಿನ ನಿಮ್ಮೆಲ್ಲರನ್ನೂ ಸೇರಿಸುವನೆಂಬುದರಲ್ಲಿ ಸಂದೇಹವಿಲ್ಲ. ಸ್ವತಃ ತಮ್ಮನ್ನು ನಷ್ಟಕ್ಕೊಳಪಡಿಸಿಕೊಂಡವರು (ಸತ್ಯವನ್ನು) ನಂಬಲಾರರು.

13. ಇರುಳಲ್ಲೂ ಹಗಲಲ್ಲೂ ಇರುವ ಎಲ್ಲವೂ ಅವನಿಗೇ (ಅಲ್ಲಾಹನಿಗೇ) ಸೇರಿದೆ. ಅವನು ಎಲ್ಲವನ್ನೂ ಕೇಳುವವನು ಮತ್ತು ಎಲ್ಲವನ್ನೂ ಬಲ್ಲವನು.

14. ಹೇಳಿರಿ; ನಾನೇನು ಅಲ್ಲಾಹನನ್ನು ಬಿಟ್ಟು ಅನ್ಯರನ್ನು ನನ್ನ ಪೋಷಕನಾಗಿಸಿ ಕೊಳ್ಳಬೇಕೇ? ಅವನಂತು ಆಕಾಶಗಳನ್ನು ಮತ್ತು ಭೂಮಿಯನ್ನು ನಿರ್ಮಿಸಿದವನು. ಅವನು (ಎಲ್ಲರಿಗೆ) ಉಣಿಸುತ್ತಾನೆ ಆದರೆ ತಾನು ಉಣ್ಣುವುದಿಲ್ಲ. ಹೇಳಿರಿ; ನನಗಂತು (ಅಲ್ಲಾಹನಿಗೆ) ಶರಣಾದವರಲ್ಲಿ ಪ್ರಥಮನಾಗಬೇಕೆಂದು ಹಾಗೂ ಅವನ ಜೊತೆ (ಅನ್ಯರನ್ನು) ಪಾಲುಗೊಳಿಸುವವನಾಗಬಾರದು ಎಂದು ಆದೇಶಿಸಲಾಗಿದೆ.

15. ಹೇಳಿರಿ; ಒಂದು ವೇಳೆ ನಾನು ಅವಿಧೇಯನಾದರೆ, ಒಂದು ಮಹಾ ದಿನದ ಶಿಕ್ಷೆಯ ಭಯ ನನಗಿದೆ.

16. ಅಂದು ಅದನ್ನು (ಶಿಕ್ಷೆಯನ್ನು) ಯಾರಿಂದ ನಿವಾರಿಸಲಾಯಿತೋ ಅವನ ಮೇಲೆ ಅವನು (ಅಲ್ಲಾಹನು) ಕರುಣೆ ತೋರಿದನು – ಅದು ನಿಜಕ್ಕೂ ಸ್ಪಷ್ಟ ವಿಜಯವಾಗಿದೆ.

17. ಅಲ್ಲಾಹನು ನಿಮಗೇನಾದರೂ ಹಾನಿ ಮಾಡಿದರೆ ಅವನ ಹೊರತು ಬೇರೆ ಯಾರೂ ಅದನ್ನು ನಿವಾರಿಸಲಾರರು. ಹಾಗೆಯೇ, ಅವನು ನಿಮಗೇನಾದರೂ ಹಿತವನ್ನು ಮಾಡಿದರೆ, ಅವನಂತು ಎಲ್ಲವನ್ನೂ ಮಾಡಲು ಶಕ್ತನು.

18. ಅವನು ತನ್ನ ದಾಸರ ಮೇಲೆ ಪ್ರಾಬಲ್ಯ ಉಳ್ಳವನು ಮತ್ತು ಅವನು ಯುಕ್ತಿವಂತನೂ ಅರಿವು ಉಳ್ಳವನೂ ಆಗಿದ್ದಾನೆ.

19. (ದೂತರೇ) ‘‘ಯಾರ ಸಾಕ್ಷವು ಹೆಚ್ಚು ದೊಡ್ಡದು?’’ ಎಂದು ಕೇಳಿರಿ (ಮತ್ತು) ಹೇಳಿರಿ; ‘‘ಅಲ್ಲಾಹನದು. ನನ್ನ ಹಾಗೂ ನಿಮ್ಮ ನಡುವೆ ಅವನೇ ಸಾಕ್ಷಿ. ಈ ಕುರ್‌ಆನ್‌ನ ಮೂಲಕ ನಾನು ನಿಮ್ಮನ್ನು ಹಾಗೂ ಇದು ಯಾರಿಗೆಲ್ಲಾ ತಲುಪುವುದೋ ಅವರೆಲ್ಲರನ್ನೂ ಎಚ್ಚರಿಸಬೇಕೆಂದು ಇದನ್ನು ನನಗೆ ದಿವ್ಯ ಸಂದೇಶವಾಗಿ ನೀಡಲಾಗಿದೆ. ಅಲ್ಲಾಹನ ಜೊತೆ ಬೇರೆ ದೇವರಿದ್ದಾರೆಂದು ನೀವೇನು ಸಾಕ್ಷಿ ಹೇಳಬಲ್ಲಿರಾ?’’ ಹೇಳಿರಿ; ‘‘ನಾನಂತು (ಆ ರೀತಿ) ಸಾಕ್ಷಿ ಹೇಳಲಾರೆ.’’ ಹೇಳಿರಿ; ‘‘ಪೂಜಾರ್ಹನು ಅವನೊಬ್ಬನು ಮಾತ್ರ. ನೀವು ಅವನ ಜೊತೆ ಪಾಲುಗೊಳಿಸುವ ಎಲ್ಲವುಗಳಿಂದ ನಾನು ಮುಕ್ತನಾಗಿದ್ದೇನೆ.’’

20. ಯಾರಿಗೆ ನಾವು ಗ್ರಂಥವನ್ನು ನೀಡಿರುವೆವೋ ಅವರು ತಮ್ಮ ಪುತ್ರರನ್ನು ಗುರುತಿಸುವಂತೆ ಇದನ್ನು (ಕುರ್‌ಆನನ್ನು) ಗುರುತಿಸುತ್ತಾರೆ. ಆದರೆ ತಮ್ಮನ್ನು ತಾವೇ ನಷ್ಟದಲ್ಲಿ ಸಿಲುಕಿಸಿಕೊಂಡವರು ನಂಬುವವರಲ್ಲ.

21. ಅಲ್ಲಾಹನ ಮೇಲೆ ಸುಳ್ಳಾರೋಪ ಹೊರಿಸುವಾತನಿಗಿಂತ ಅಥವಾ ಅವನ (ಅಲ್ಲಾಹನ) ವಚನಗಳನ್ನು ತಿರಸ್ಕರಿಸುವಾತನಿಗಿಂತ ದೊಡ್ಡ ಅಕ್ರಮಿ ಯಾರಿದ್ದಾನೆ? ಅಕ್ರಮಿಗಳು ಖಂಡಿತ ವಿಜಯಿಗಳಾಗುವುದಿಲ್ಲ.

22. ನಾವು ಅವರೆಲ್ಲರನ್ನೂ ಒಂದೆಡೆ ಸೇರಿಸುವ ದಿನ, ನಾವು ಬಹುದೇವಾರಾಧಕರೊಡನೆ ‘‘ಎಲ್ಲಿದ್ದಾರೆ ನೀವು ಅಭಿಮಾನ ಪಡುತ್ತಿದ್ದ ಆ ನಿಮ್ಮ ದೇವತ್ವದ ಪಾಲುದಾರರು?’’ ಎಂದು ಪ್ರಶ್ನಿಸುವೆವು.

23. ಆಗ ಅವರ ಬಳಿ ‘‘ನಮ್ಮೊಡೆಯನಾದ ಅಲ್ಲಾಹನಾಣೆ, ನಾವು ಬಹುದೇವಾರಾಧಕರಾಗಿರಲಿಲ್ಲ’’ ಎನ್ನುವುದು ಬಿಟ್ಟರೆ ಬೇರೆ ಯಾವ ಕುತಂತ್ರವೂ ಉಳಿದಿರಲಾರದು.

24. ಅವರು ಯಾವ ರೀತಿ ಸ್ವತಃ ತಮ್ಮ ವಿರುದ್ಧವೇ ಸುಳ್ಳುಗಳನ್ನು ಹೇಳುತ್ತಿದ್ದಾರೆಂಬುದನ್ನು ನೋಡಿರಿ. ಕೊನೆಗೆ ಅವರು ರಚಿಸಿಕೊಂಡಿದ್ದ ಎಲ್ಲವೂ ಅವರಿಂದ ಕಳೆದು ಹೋಗುವುದು.

25. (ದೂತರೇ,) ಅವರಲ್ಲಿ ಕೆಲವರು ನಿಮ್ಮ ಮಾತನ್ನು ಕಿವಿಗೊಟ್ಟು ಕೇಳುತ್ತಾರೆ. ಆದರೆ ಅದು ಅವರಿಗೆ ಅರ್ಥವಾಗದಂತೆ ನಾವು ಅವರ ಮನಸ್ಸುಗಳ ಮೇಲೆ ತೆರೆ ಎಳೆದಿರುವೆವು. ಅವರ ಕಿವಿಗಳಲ್ಲಿ ತಡೆ ಇದೆ. ಅವರು (ಸತ್ಯದ ಪರವಾಗಿ) ಎಲ್ಲ ದೃಷ್ಟಾಂತಗಳನ್ನು ಕಂಡರೂ ಅದನ್ನು ನಂಬುವವರಲ್ಲ. ಅವರು ನಿಮ್ಮ ಬಳಿಗೆ ಬಂದಾಗ ನಿಮ್ಮೊಡನೆ ಜಗಳಾಡುತ್ತಾರೆ ಮತ್ತು ಧಿಕ್ಕಾರಿಗಳು ‘‘ಇವೆಲ್ಲಾ ಗತಕಾಲದವರ ಕತೆಗಳು ಮಾತ್ರ’’ ಎನ್ನುತ್ತಾರೆ.

26. ಅವರು ಅದರಿಂದ (ಸತ್ಯದಿಂದ) ಇತರರನ್ನು ತಡೆಯುತ್ತಾರೆ ಮತ್ತು ಸ್ವತಃ ಅದರಿಂದ ದೂರ ಉಳಿಯುತ್ತಾರೆ. ನಿಜವಾಗಿ ಅವರು ತಮ್ಮನ್ನು ತಾವೇ ನಾಶ ಮಾಡಿಕೊಳ್ಳುತ್ತಿದ್ದಾರೆ. ಆದರೆ ಅವರಿಗೆ ಅದರ ಅರಿವಿಲ್ಲ.

27. (ಆ ದೃಶ್ಯವನ್ನು) ನೀವು ಕಾಣಬೇಕಿತ್ತು! ಅವರನ್ನು ನರಕದ ಬೆಂಕಿಯಲ್ಲಿ ನಿಲ್ಲಿಸಲಾದಾಗ ಅವರು ಹೇಳುವರು; ‘‘ಅಯ್ಯೋ, ನಮ್ಮನ್ನು ಮರಳಿ (ಇಹಲೋಕಕ್ಕೆ) ಕಳಿಸಿದ್ದರೆ ಎಷ್ಟು ಚೆನ್ನಾಗಿತ್ತು! ನಾವು ನಮ್ಮೊಡೆಯನ ಯಾವ ದೃಷ್ಟಾಂತವನ್ನೂ ತಿರಸ್ಕರಿಸದೆ, ಸತ್ಯವಿಶ್ವಾಸಿಗಳಾಗಿ ಬಿಡುತ್ತಿದ್ದೆವು’’

28. ನಿಜವಾಗಿ ಅವರು ಈ ಹಿಂದೆ ಬಚ್ಚಿಟ್ಟಿದ್ದ ಎಲ್ಲವೂ ಅವರ ಮುಂದೆ ಪ್ರಕಟವಾಗಿದೆ. ಅವರನ್ನು ಮತ್ತೆ (ಇಹಲೋಕಕ್ಕೆ) ಮರಳಿಸಿದರೆ, ಅವರನ್ನು ಯಾವುದರಿಂದ ತಡೆಯಲಾಗಿದೆಯೋ, ಅದನ್ನೇ ಅವರು ಮತ್ತೆ ಮಾಡುವರು. ಅವರು ಖಂಡಿತ ಸುಳ್ಳುಗಾರರು.

29. ‘‘ನಮ್ಮ ಬದುಕು ಇರುವುದು ಈ ಲೋಕದಲ್ಲಿ ಮಾತ್ರ. (ಮರಣಾನಂತರ) ನಮ್ಮನ್ನು ಮತ್ತೆ ಜೀವಂತಗೊಳಿಸಲಾಗುವುದಿಲ್ಲ’’ ಎಂದು ಅವರು ಹೇಳುತ್ತಾರೆ.

  30. ಅವರನ್ನು ಅವರ ಒಡೆಯನ ಮುಂದೆ ನಿಲ್ಲಿಸಲಾಗುವ ಸಂದರ್ಭವನ್ನು ನೀವು ಕಾಣಬೇಕಿತ್ತು! ಅವನು (ಅಲ್ಲಾಹನು) ಅವರೊಡನೆ ‘‘ಇದೆಲ್ಲಾ ಸತ್ಯವಲ್ಲವೆ?’’ ಎಂದು ಕೇಳುವನು. ಅವರು ‘‘ನಮ್ಮೊಡೆಯನಾಣೆ, ಇದೆಲ್ಲವೂ ಖಂಡಿತ ಸತ್ಯ’’ ಎನ್ನುವರು. ಆಗ ಅವನು ‘‘ನೀವು (ಇದನ್ನೆಲ್ಲಾ) ಧಿಕ್ಕರಿಸಿದ ಫಲಿತಾಂಶವಾಗಿ ಇದೀಗ ಶಿಕ್ಷೆಯನ್ನು ಸವಿಯಿರಿ’’ ಎಂದು ಹೇಳುವನು.

31. ಅಲ್ಲಾಹನನ್ನು ಭೇಟಿಯಾಗಲಿಕ್ಕಿದೆ ಎಂಬುದನ್ನು ನಿರಾಕರಿಸಿದವರು ಭಾರೀ ನಷ್ಟದಲ್ಲಿರುವರು. ಅಂತಿಮ ಘಳಿಗೆಯು ಹಠಾತ್ತನೆ ಅವರ ಮೇಲೆ ಬಂದೆರಗಿದಾಗ ಅವರು ‘‘ಅಯ್ಯೋ ನಮ್ಮ ದುಸ್ಥಿತಿ! ನಾವು ಇದನ್ನು ಕಡೆಗಣಿಸಿದ್ದೆವು’’ ಎನ್ನುವರು. ಅಂದು ಅವರು ತಮ್ಮ ಬೆನ್ನ ಮೇಲೆ ತಮ್ಮ (ಪಾಪಗಳ) ಭಾರವನ್ನು ಹೊತ್ತುಕೊಂಡಿರುವರು. ತಿಳಿದಿರಲಿ! ತೀರಾ ಕೆಟ್ಟದು, ಅವರ ಆ ಹೊರೆ.

32. ಇಹಲೋಕದ ಬದುಕೆಂಬುದು ಕೇವಲ ಆಟ ಹಾಗೂ ಮನರಂಜನೆಯಾಗಿದೆ. ಸತ್ಯನಿಷ್ಠರ ಪಾಲಿಗಂತು ಪರಲೋಕದ ನಿವಾಸವೇ ಶ್ರೇಷ್ಠವಾಗಿದೆ. ನೀವೇನು ಆಲೋಚಿಸುವುದಿಲ್ಲವೇ?

33. (ದೂತರೇ) ಅವರು ಆಡುತ್ತಿರುವ ಮಾತುಗಳಿಂದ ನಿಮಗೆ ದುಃಖವಾಗುತ್ತಿದೆ ಎಂಬುದು ನಮಗೆ ಖಂಡಿತ ತಿಳಿದಿದೆ. ನಿಜವಾಗಿ ಅವರು ಧಿಕ್ಕರಿಸುತ್ತಿರುವುದು ನಿಮ್ಮನ್ನಲ್ಲ. ಆ ಅಕ್ರಮಿಗಳು ಸಾಕ್ಷಾತ್ ಅಲ್ಲಾಹನ ವಚನಗಳನ್ನು ತಿರಸ್ಕರಿಸುತ್ತಿದ್ದಾರೆ.

 34. ನಿಮಗಿಂತ ಹಿಂದಿನ ದೂತರುಗಳನ್ನೂ ಧಿಕ್ಕರಿಸಲಾಗಿತ್ತು. ಆದರೆ ತಮ್ಮನ್ನು ಧಿಕ್ಕರಿಸಲಾದಾಗ ಹಾಗೂ ತಮಗೆ ಕಿರುಕುಳ ನೀಡಲಾದಾಗ ಅವರು ಸಹನೆ ತೋರಿದರು ಕೊನೆಗೆ ಅವರ ಬಳಿಗೆ ನಮ್ಮ ನೆರವು ಬಂದು ಬಿಟ್ಟಿತು. ಅಲ್ಲಾಹನ ವಚನಗಳನ್ನು ಯಾರೂ ಬದಲಿಸುವಂತಿಲ್ಲ. ದೂತರುಗಳ ವೃತ್ತಾಂತವು ಈಗಾಗಲೇ ನಿಮ್ಮ ಬಳಿಗೆ ಬಂದಿದೆ.

 35. ಅವರ ಅವಗಣನೆಯು ನಿಮಗೆ ಅಷ್ಟೊಂದು ಅಸಹನೀಯವಾಗಿದ್ದರೆ – ನಿಮಗೆ ಸಾಧ್ಯವಿದ್ದರೆ – ಭೂಮಿಯಲ್ಲೊಂದು ಸುರಂಗವನ್ನು ಅಗೆಯಿರಿ ಅಥವಾ ಆಕಾಶಕ್ಕೊಂದು ಏಣಿಯನ್ನು ಹುಡುಕಿರಿ ಹಾಗೂ (ಅವರಿಗೆ ಬೇಕಾಗಿರುವ) ಪುರಾವೆಯನ್ನು ಅವರಿಗೆ ತಂದು ಕೊಡಿರಿ. ಅಲ್ಲಾಹನು ಬಯಸಿದ್ದರೆ (ಅವನೇ) ಅವರೆಲ್ಲರನ್ನೂ ನೇರ ಮಾರ್ಗದಲ್ಲಿ ಒಂದು ಗೂಡಿಸುತ್ತಿದ್ದನು. ನೀವು ಅರಿವಿಲ್ಲದವರ ಸಾಲಿಗೆ ಸೇರಬೇಡಿ.

36. ನಿಜವಾಗಿ, ಆಲಿಸುವವರು ಮಾತ್ರ ಉತ್ತರಿಸುತ್ತಾರೆ. ಸತ್ತವರನ್ನು ಅಲ್ಲಾಹನು ಜೀವಂತ ಗೊಳಿಸುವನು ಮತ್ತು ಅವರು ಅವನೆಡೆಗೆ ಮರಳುವರು.

37. ‘‘ಅವನಿಗೆ ಅವನ ಒಡೆಯನ ಕಡೆಯಿಂದ ಯಾವುದೇ ಪುರಾವೆಯನ್ನು ಯಾಕೆ ಇಳಿಸಿಕೊಡಲಾಗಿಲ್ಲ?’’ ಎಂದು ಅವರು ಕೇಳುತ್ತಾರೆ. ‘‘ಅಲ್ಲಾಹನಂತು ಪುರಾವೆಯನ್ನು ಇಳಿಸಿಕೊಡಲು ಸದಾ ಶಕ್ತನಾಗಿದ್ದಾನೆ’’ ಎಂದು ಹೇಳಿರಿ; ಆದರೆ ಅವರಲ್ಲಿ ಹೆಚ್ಚಿನವರು ಬಲ್ಲವರಲ್ಲ.

38. ಭೂಮಿಯಲ್ಲಿ ಚಲಿಸುವ ಪ್ರತಿಯೊಂದು ಜೀವಿ ಹಾಗೂ ತನ್ನ ಎರಡು ರೆಕ್ಕೆಗಳ ಮೂಲಕ ಹಾರುವ ಪ್ರತಿಯೊಂದು ಪಕ್ಷಿ – ಅವೆಲ್ಲಾ ನಿಮ್ಮಂತಹದೇ ಸಮುದಾಯಗಳು. ನಾವು ಗ್ರಂಥದಲ್ಲಿ ಏನನ್ನೂ ದಾಖಲಿಸದೆ ಬಿಟ್ಟಿಲ್ಲ. ಕೊನೆಗೆ ಎಲ್ಲರನ್ನೂ ಅವರ ಒಡೆಯನ ಬಳಿ ಒಟ್ಟು ಸೇರಿಸಲಾಗುವುದು.

39. ನಮ್ಮ ಪುರಾವೆಗಳನ್ನು ತಿರಸ್ಕರಿಸಿದವರು (ಅಂದು) ಕಿವುಡರೂ, ಮೂಗರೂ ಆಗಿ ಕತ್ತಲಲ್ಲಿರುವರು. ಅಲ್ಲಾಹನು ತಾನಿಚ್ಛಿಸಿದವರನ್ನು ದಾರಿಗೆಡಿಸುತ್ತಾನೆ ಮತ್ತು ತಾನಿಚ್ಛಿಸಿದವನನ್ನು ಸ್ಥಿರವಾದ ನೇರ ಮಾರ್ಗಕ್ಕೆ ಒಯ್ಯುತ್ತಾನೆ.

40. ಹೇಳಿರಿ; ನೀವು ನೋಡಿದಿರಾ? ಒಂದು ವೇಳೆ ನಿಮ್ಮ ಬಳಿಗೆ ಅಲ್ಲಾಹನ ಶಿಕ್ಷೆಯು ಬಂದು ಬಿಟ್ಟರೆ ಅಥವಾ ಅಂತಿಮ ಘಳಿಗೆಯು ನಿಮ್ಮ ಮೇಲೆ ಬಂದೆರಗಿದರೆ, ನೀವೇನು ಅಲ್ಲಾಹನ ಹೊರತು ಬೇರೆ ಯಾರಿಗಾದರೂ ಮೊರೆ ಇಡುವಿರಾ? ನೀವು ಸತ್ಯವಂತರಾಗಿದ್ದರೆ (ಹೇಳಿರಿ).

41. ನೀವು ಅವನಿಗೆ (ಅಲ್ಲಾಹನಿಗೇ) ಮೊರೆ ಇಡುತ್ತೀರಿ ಮತ್ತು ಅವನು ಇಚ್ಛಿಸಿದರೆ, ಯಾವ (ವಿಪತ್ತಿನ) ಕಾರಣ ನೀವು ಮೊರೆ ಇಟ್ಟಿದ್ದಿರೋ ಅದನ್ನು ಅವನು ನಿಮ್ಮಿಂದ ನಿವಾರಿಸಿ ಬಿಡುತ್ತಾನೆ. ಆಗ ನೀವು, (ದೇವತ್ವದಲ್ಲಿ) ಪಾಲುಗೊಳಿಸಿದ್ದವರನ್ನೆಲ್ಲಾ ಮರೆತು ಬಿಡುತ್ತೀರಿ.

42. ನಿಮಗಿಂತ ಹಿಂದಿನ ಸಮುದಾಯಗಳ ಕಡೆಗೂ ನಾವು ದೂತರನ್ನು ಕಳುಹಿಸಿದ್ದೆವು ಮತ್ತು ಆ ಜನರು ವಿನಯಶೀಲರಾಗಲೆಂದು ನಾವು ಅವರನ್ನು ಕಾಠಿಣ್ಯಗಳಿಗೆ ಹಾಗೂ ಸಂಕಷ್ಟಗಳಿಗೆ ತುತ್ತಾಗಿಸಿದೆವು.

43. ನಾವು ಕಳುಹಿಸಿದ ಸಂಕಷ್ಟವು ಅವರನ್ನು ತಲುಪಿದಾಗ ಅವರು ವಿನಯಶೀಲರಾಗಬೇಕಿತ್ತು. ಆದರೆ ಅವರ ಮನಸ್ಸುಗಳು ಮತ್ತಷ್ಟು ಕಠಿಣಗೊಂಡವು ಮತ್ತು ಅವರು ಮಾಡುತ್ತಿದ್ದ ಎಲ್ಲವನ್ನೂ ಶೈತಾನನು ಅವರಿಗೆ ಚಂದಗಾಣಿಸಿದ್ದನು.

 44. ಅವರು ತಮಗೆ ನೀಡಲಾಗಿದ್ದ ಬೋಧನೆಯನ್ನು ಮರೆತು ಬಿಟ್ಟಾಗ ನಾವು ಅವರ ಪಾಲಿಗೆ ಎಲ್ಲ ವಸ್ತುಗಳ ಬಾಗಿಲುಗಳನ್ನು ತೆರೆದುಬಿಟ್ಟೆವು. ಕೊನೆಗೆ ಅವರು, ನಾವು ಅವರಿಗೆ ನೀಡಿದ ಕೊಡುಗೆಗಳಲ್ಲಿ ಮೈ ಮರೆತಾಗ ಹಠಾತ್ತನೆ ನಾವು ಅವರನ್ನು ಹಿಡಿದುಕೊಂಡೆವು – ಆಗ ಅವರು ತೀರಾ ನಿರಾಶರಾಗಿಬಿಟ್ಟರು.

45. ಕೊನೆಗೆ ಅಕ್ರಮಿ ಜನಾಂಗದ ಬುಡವನ್ನೇ ಕಡಿದು ಹಾಕಲಾಯಿತು. ಪ್ರಶಂಸೆಗಳೆಲ್ಲಾ ಸರ್ವಲೋಕಗಳ ಒಡೆಯನಾದ ಅಲ್ಲಾಹನಿಗೆ.

 46. (ದೂತರೇ,) ಹೇಳಿರಿ; ನೀವು ನೋಡಿದಿರಾ? ಒಂದು ವೇಳೆ ಅಲ್ಲಾಹನು ನಿಮ್ಮ ಶ್ರವಣ ಶಕ್ತಿಯನ್ನು ಹಾಗೂ ದೃಷ್ಟಿಯನ್ನು ಕಿತ್ತುಕೊಂಡರೆ ಮತ್ತು ನಿಮ್ಮ ಮನಸ್ಸುಗಳ ಮೇಲೆ ಮುದ್ರೆ ಒತ್ತಿ ಬಿಟ್ಟರೆ ಅಲ್ಲಾಹನ ಹೊರತು ಬೇರೆ ಯಾವ ದೇವರಿದ್ದಾರೆ, ಅವುಗಳನ್ನು ನಿಮಗೆ ತಂದು ಕೊಡಬಲ್ಲವರು? ನಾವು ಸತ್ಯದ ವಚನಗಳನ್ನು ಯಾವ ರೀತಿ ವಿಧವಿಧವಾಗಿ ವಿವರಿಸುತ್ತೇವೆ ಎಂಬುದನ್ನು ನೋಡಿರಿ – ಇಷ್ಟಾಗಿಯೂ ಅವರು (ಸತ್ಯದಿಂದ) ದೂರ ಉಳಿಯುತ್ತಿದ್ದಾರೆ.

 47. ಹೇಳಿರಿ; ನೀವು ತಿಳಿಸುವಿರಾ? ಒಂದು ವೇಳೆ ನಿಮ್ಮ ಮೇಲೆ ಅಲ್ಲಾಹನ ಶಿಕ್ಷೆಯು ಹಠಾತ್ತಾಗಿ ಅಥವಾ ಪೂರ್ವ ಸೂಚನೆಯೊಂದಿಗೆ ಬಂದೆರಗಿದರೆ, ಅಕ್ರಮಿಗಳ ಹೊರತು ಇನ್ನಾರಾದರೂ ನಾಶವಾಗುವರೇ?

48. ನಾವು ಎಲ್ಲ ದೂತರನ್ನೂ ಶುಭವಾರ್ತೆ ನೀಡುವವರು ಹಾಗೂ ಮುನ್ನೆಚ್ಚರಿಕೆ ನೀಡುವವರಾಗಿಯೇ ಕಳಿಸಿರುವೆವು. ಸತ್ಯದಲ್ಲಿ ನಂಬಿಕೆ ಇಟ್ಟು ತಮ್ಮನ್ನು ಸುಧಾರಿಸಿಕೊಂಡವರಿಗೆ ಯಾವುದೇ ಭಯವಿರದು ಮತ್ತು ಅವರು ದುಃಖಿಸಲಾರರು.

49. ಇನ್ನು, ನಮ್ಮ ವಚನಗಳನ್ನು ತಿರಸ್ಕರಿಸಿದರಿಗೆ ಅವರ ಅವಿಧೇಯತೆಯ ಕಾರಣ ಶಿಕ್ಷೆ ಸಿಗುವುದು.

50. (ದೂತರೇ), ಹೇಳಿರಿ; ನನ್ನ ಬಳಿ ಅಲ್ಲಾಹನ ಭಂಡಾರಗಳಿವೆ ಎಂದಾಗಲಿ, ಗುಪ್ತ ವಿಷಯಗಳ ಜ್ಞಾನ ನನಗಿದೆ ಎಂದಾಗಲಿ ನಾನು ನಿಮ್ಮೊಡನೆ ಹೇಳಿಲ್ಲ. ಹಾಗೆಯೇ ನಾನು ‘ಮಲಕ್’ ಎಂದು ಕೂಡಾ ನಿಮ್ಮೊಡನೆ ನಾನು ಹೇಳಿಕೊಂಡಿಲ್ಲ. ನಾನಂತು, ನನ್ನೆಡೆಗೆ ಕಳಿಸಲಾಗುತ್ತಿರುವ ದಿವ್ಯ ಸಂದೇಶವನ್ನಷ್ಟೇ ಅನುಸರಿಸುತ್ತಿದ್ದೇನೆ. ಹೇಳಿರಿ; ಕುರುಡರು ಮತ್ತು ಕಾಣಬಲ್ಲವರು ಸಮಾನರೇ? ನೀವೇನು ಚಿಂತಿಸುವುದಿಲ್ಲವೇ?

51. ತಮ್ಮನ್ನು ತಮ್ಮೊಡೆಯನ ಮುಂದೆ ಒಟ್ಟು ಸೇರಿಸಲಾಗುವುದು ಮತ್ತು ಅಲ್ಲಿ ಅವನ ಹೊರತು ತಮಗೆ ಯಾರೂ ರಕ್ಷಕರಾಗಲಿ ಶಿಫಾರಸುದಾರರಾಗಲಿ ಇರಲಾರರು ಎಂಬ ಭಯ ಉಳ್ಳವರಿಗೆ ನೀವು ಈ ಮೂಲಕ ಎಚ್ಚರಿಕೆ ನೀಡಿರಿ – ಅವರು ಸುರಕ್ಷಿತರಾಗಲೂ ಬಹುದು.

52. ಮುಂಜಾನೆಯೂ ಸಂಜೆ ಹೊತ್ತಿನಲ್ಲೂ ತಮ್ಮೊಡೆಯನ ಮೆಚ್ಚುಗೆಯನ್ನು ಅಪೇಕ್ಷಿಸುತ್ತಾ ಅವನನ್ನು ಪ್ರಾರ್ಥಿಸುತ್ತಿರುವ ಜನರನ್ನು ನೀವು ದೂರಗೊಳಿಸಬೇಡಿ. ಅವರ ವಿಚಾರಣೆಯ ಕುರಿತಾದ ಯಾವ ಹೊಣೆಯೂ ನಿಮ್ಮ ಮೇಲಿಲ್ಲ. ಹಾಗೆಯೇ ನಿಮ್ಮ ವಿಚಾರಣೆಯ ಕುರಿತಾದ ಯಾವುದೇ ಹೊಣೆ ಅವರ ಮೇಲಿಲ್ಲ. ನೀವಿನ್ನು ಅವರನ್ನು ದೂರ ಗೊಳಿಸಿದರೆ, ಅಕ್ರಮವೆಸಗಿದವರ ಸಾಲಿಗೆ ಸೇರುವಿರಿ.

53. ಅದೇ ರೀತಿ, ನಾವು ಅವರಲ್ಲಿನ ಕೆಲವರನ್ನು ಮತ್ತೆ ಕೆಲವರ ಮೂಲಕ ಪರೀಕ್ಷಿಸಿದೆವು – ‘‘ನಮ್ಮ ನಡುವೆ ಅಲ್ಲಾಹನು ಅನುಗ್ರಹಿಸಿರುವುದು ಇವರನ್ನೇ?’’ ಎಂದು ಅವರು ಕೇಳಲೆಂದು. ನಿಜವಾಗಿ ಕೃತಜ್ಞರನ್ನು ಹೆಚ್ಚು ಬಲ್ಲವನು ಅಲ್ಲಾಹನೇ ಅಲ್ಲವೇ?

 54. ನಮ್ಮ ವಚನಗಳಲ್ಲಿ ನಂಬಿಕೆ ಉಳ್ಳವರು ನಿಮ್ಮ ಬಳಿಗೆ ಬಂದಾಗ ಹೇಳಿರಿ; ನಿಮ್ಮ ಮೇಲೆ ಶಾಂತಿ ಇರಲಿ. ನಿಮ್ಮ ಒಡೆಯನು, ಕೃಪೆಯನ್ನು ತನ್ನ ಮೇಲೆ ಕಡ್ಡಾಯ ಗೊಳಿಸಿಕೊಂಡಿರುವನು. ಎಷ್ಟೆಂದರೆ, ನಿಮ್ಮ ಪೈಕಿ ಅಜ್ಞಾನದಿಂದ ಯಾವುದಾದರೂ ದುಷ್ಕರ್ಮವನ್ನೆಸಗಿದವನು, ಆ ಬಳಿಕ ಪಶ್ಚಾತ್ತಾಪ ಪಟ್ಟು ತನ್ನನ್ನು ಸರಿಪಡಿಸಿಕೊಂಡರೆ, ಅವನು (ಅಲ್ಲಾಹನು) ಖಂಡಿತ ಕ್ಷಮಾಶೀಲನೂ ಕರುಣಾಳುವೂ ಆಗಿರುವನು.

55. ಈ ರೀತಿ ನಾವು ನಮ್ಮ ವಚನಗಳನ್ನು ವಿವರಿಸುತ್ತೇವೆ – ಅಪರಾಧಿಗಳ ದಾರಿ ಯಾವುದೆಂಬುದು ಸ್ಪಷ್ಟವಾಗಲೆಂದು.

 56. ಹೇಳಿರಿ; ನೀವು ಅಲ್ಲಾಹನನ್ನು ಬಿಟ್ಟು ಕೂಗಿ ಪ್ರಾರ್ಥಿಸುವವುಗಳನ್ನು (ಮಿಥ್ಯ ದೇವರುಗಳನ್ನು) ಆರಾಧಿಸದಂತೆ ನನ್ನನ್ನು ತಡೆಯಲಾಗಿದೆ. ಹೇಳಿರಿ; ನಾನು ನಿಮ್ಮ ಅಪೇಕ್ಷೆಗಳನ್ನು ಅನುಸರಿಸಲಾರೆ. ಹಾಗೆ ಮಾಡಿದರೆ ನಾನು ಖಂಡಿತ ದಾರಿಗೆಟ್ಟು ಹೋಗುವೆನು ಮತ್ತು ನಾನೆಂದೂ ಸನ್ಮಾರ್ಗದರ್ಶನ ಪಡೆದವರ ಸಾಲಿಗೆ ಸೇರಲಾರೆನು.

 57. (ದೂತರೇ,) ಹೇಳಿರಿ; ನಾನಂತೂ ಖಂಡಿತವಾಗಿಯೂ ನನ್ನ ಒಡೆಯನ ಕಡೆಯಿಂದ ತೋರಲಾಗಿರುವ ಸ್ಪಷ್ಟ ಸನ್ಮಾರ್ಗದಲ್ಲಿದ್ದೇನೆ ಮತ್ತು ನೀವು ಅದನ್ನು ಸುಳ್ಳೆಂದು ತಿರಸ್ಕರಿಸುತ್ತಿರುವಿರಿ. ನೀವು ಯಾವುದಕ್ಕಾಗಿ ಆತುರ ಪಡುತ್ತಿರುವಿರೋ ಅದು (ಆ ದಿವ್ಯ ಶಿಕ್ಷೆ) ನನ್ನ ಕೈಯಲ್ಲಿಲ್ಲ. ಅಧಿಕಾರವು ಕೇವಲ ಅಲ್ಲಾಹನೊಬ್ಬನಿಗೇ ಸೇರಿದೆ. ಅವನೇ ಸತ್ಯವನ್ನು ತಿಳಿಸುತ್ತಾನೆ ಮತ್ತು ಅವನೇ ಅತ್ಯುತ್ತಮ ತೀರ್ಪು ನೀಡುವವನಾಗಿದ್ದಾನೆ.

58. (ದೂತರೇ,) ಹೇಳಿರಿ; ಒಂದು ವೇಳೆ, ನೀವು ಯಾವುದಕ್ಕಾಗಿ ಆತುರ ಪಡುತ್ತಿರುವಿರೋ ಅದು (ಆ ದಿವ್ಯ ಶಿಕ್ಷೆ) ನನ್ನ ಕೈಯಲ್ಲಿ ಇದ್ದಿದ್ದರೆ ನನ್ನ ಹಾಗೂ ನಿಮ್ಮ ನಡುವೆ ಈಗಾಗಲೇ ತೀರ್ಮಾನವು ಆಗಿ ಬಿಡುತ್ತಿತ್ತು. ಅಲ್ಲಾಹನಂತು ಅಕ್ರಮಿಗಳನ್ನು ಚೆನ್ನಾಗಿ ಬಲ್ಲನು.

59. ಗುಪ್ತ ಲೋಕಗಳ ಕೀಲಿ ಕೈಗಳೆಲ್ಲಾ ಅವನ ಬಳಿಯಲ್ಲೇ ಇವೆ. ಅವುಗಳನ್ನು ಬಲ್ಲವರು ಅವನ ಹೊರತು ಬೇರಾರೂ ಇಲ್ಲ. ಅವನಂತೂ ನೆಲಭಾಗ ಹಾಗೂ ಜಲಭಾಗದಲ್ಲಿರುವ ಎಲ್ಲವನ್ನೂ ಬಲ್ಲವನಾಗಿದ್ದಾನೆ. ಅವನ ಅರಿವಿಗೆ ಬರದೆ ಒಂದು ಎಲೆಯೂ ಉದುರಿ ಬೀಳುವುದಿಲ್ಲ. ಭೂಮಿಯ ಕತ್ತಲುಗಳಲ್ಲಿರುವ ಯಾವುದೇ ಧಾನ್ಯವಾಗಲಿ, ಯಾವುದೇ ಹಸಿ ವಸ್ತುವಾಗಲಿ, ಒಣ ವಸ್ತುವಾಗಲಿ ಒಂದು ಸ್ಪಷ್ಟ ಗ್ರಂಥದಲ್ಲಿ ದಾಖಲಾಗದೆ ಉಳಿದಿಲ್ಲ.

60. ಅವನೇ, ಇರುಳಲ್ಲಿ ನಿಮ್ಮನ್ನು ನಿರ್ಜೀವಗೊಳಿಸುವವನು ಹಾಗೂ ಹಗಲಲ್ಲಿ ನೀವು ಏನನ್ನು ಸಂಪಾದಿಸಿದಿರಿ ಎಂಬುದನ್ನು ಅರಿತಿರುವವನು ಮತ್ತು ನಿಗದಿತ ಕಾಲಾವಧಿ ಪೂರ್ತಿಯಾಗಲೆಂದು ನಿಮ್ಮನ್ನು ಅದರಲ್ಲಿ (ಇರುಳಿನ ಬಳಿಕ ಹಗಲಲ್ಲಿ) ಮತ್ತೆ ಜೀವಂತಗೊಳಿಸುವವನು. ಕೊನೆಗೆ ನೀವು ಅವನೆಡೆಗೇ ಮರಳುವಿರಿ ಮತ್ತು ನೀವು ಏನೆಲ್ಲಾ ಮಾಡುತ್ತಿದ್ದಿರೆಂಬುದನ್ನು ಅವನು ನಿಮಗೆ ತಿಳಿಸುವನು.

61. ಅವನು ತನ್ನ ದಾಸರ ಮೇಲೆ ಸಂಪೂರ್ಣ ನಿಯಂತ್ರಣ ಉಳ್ಳವನಾಗಿದ್ದಾನೆ ಮತ್ತು ಅವನು ನಿಮ್ಮ ಮೇಲೆ ಕಣ್ಣಿಡುವವರನ್ನು ಕಳುಹಿಸುತ್ತಾನೆ. ಕೊನೆಗೆ ನಿಮ್ಮ ಪೈಕಿ ಯಾರದಾದರೂ ಮರಣವು ಬಂದು ಬಿಟ್ಟಾಗ ನಮ್ಮ ಪ್ರತಿನಿಧಿಗಳು ಆತನ ಜೀವವನ್ನು ವಶಪಡಿಸಿಕೊಳ್ಳುತ್ತಾರೆ ಮತ್ತು ಅವರು ತಪ್ಪುವುದಿಲ್ಲ.

62. ಕೊನೆಗೆ ಎಲ್ಲರೂ ತಮ್ಮ ನೈಜ ಒಡೆಯನಾದ ಅಲ್ಲಾಹನೆಡೆಗೆ ಮರಳಿಸಲ್ಪಡುವರು. ತಿಳಿದಿರಲಿ! ಪರಮಾಧಿಕಾರವು ಅವನಿಗೇ ಸೇರಿದೆ ಮತ್ತು ಅವನು ಅತ್ಯಧಿಕ ವೇಗದಿಂದ ವಿಚಾರಣೆ ನಡೆಸುವವನಾಗಿದ್ದಾನೆ.

63. ಹೇಳಿರಿ; ನೆಲದ ಮತ್ತು ಜಲದ ಕಾರ್ಗತ್ತಲುಗಳಿಂದ ನಿಮ್ಮನ್ನು ರಕ್ಷಿಸುವವನು ಯಾರು? ನೀವಂತು (ಆಪತ್ತಿನಲ್ಲಿದ್ದಾಗ) – ‘‘ಇದರಿಂದ ನಮ್ಮನ್ನು ರಕ್ಷಿಸಿದರೆ ನಾವು ಕೃತಜ್ಞರ ಸಾಲಿಗೆ ಸೇರುವೆವು’’ (ಎನ್ನುತ್ತಾ) ನಡುಗುತ್ತಲೂ, ಗುಟ್ಟಾಗಿಯೂ ಅವನಿಗೆ ಮೊರೆ ಇಡುತ್ತೀರಿ.

64. ಹೇಳಿರಿ; ನಿಮ್ಮನ್ನು ಅದರಿಂದ ರಕ್ಷಿಸುವವನು ಮತ್ತು ಎಲ್ಲ ಸಂಕಷ್ಟಗಳಿಂದ ಕಾಪಾಡುವವನು ಅಲ್ಲಾಹನೇ. ಇಷ್ಟಾಗಿಯೂ ನೀವು (ಇತರರನ್ನು, ಅವನ) ಪಾಲುದಾರರಾಗಿಸುತ್ತೀರಿ.

65. ಹೇಳಿರಿ; ಅವನಿಚ್ಛಿಸಿದರೆ ನಿಮ್ಮ ಮೇಲ್ಭಾಗದಿಂದ ಅಥವಾ ನಿಮ್ಮ ಕಾಲಡಿಯಿಂದ ನಿಮ್ಮ ಮೇಲೆ ಶಿಕ್ಷೆಯನ್ನು ಎರಗಿಸಬಲ್ಲನು ಅಥವಾ ಅವನು ನಿಮ್ಮನ್ನು ವಿವಿಧ ಪಂಗಡಗಳಾಗಿ ವಿಂಗಡಿಸಿ ಕೆಲವರಿಗೆ ಮತ್ತೆ ಕೆಲವರ (ಶಕ್ತಿಯ) ರುಚಿಯನ್ನು ಉಣಿಸಬಲ್ಲನು. ಅವರು ಅರಿವು ಉಳ್ಳವರಾಗಬೇಕೆಂದು ನಾವು ಯಾವ ರೀತಿ ಪುರಾವೆಗಳನ್ನು ವಿವರಿಸುತ್ತೇವೆಂಬುದನ್ನು ನೋಡಿರಿ.

66. ಆದರೆ (ದೂತರೇ,) ನಿಮ್ಮ ಜನಾಂಗವು, ಇದು ಸತ್ಯವಾಗಿದ್ದರೂ ಇದನ್ನು ತಿರಸ್ಕರಿಸಿತು. ಹೇಳಿರಿ; ನಾನು ನಿಮ್ಮ ಮೇಲಿನ ಕಾವಲುಗಾರನೇನೂ ಅಲ್ಲ.

67. ಪ್ರತಿಯೊಂದು ಘಟನೆಯ ಸಂಭವಕ್ಕೂ ಒಂದು ನಿಗದಿತ ಸಮಯವಿದೆ. ಬೇಗನೇ ನಿಮಗೆ ತಿಳಿಯಲಿದೆ.

68. ನೀವು ನಮ್ಮ ವಚನಗಳ ಕುರಿತು ಜಗಳಾಡುವವರನ್ನು ಕಂಡಾಗ – ಅವರು ಬೇರೊಂದು ವಿಷಯದಲ್ಲಿ ಮಗ್ನರಾಗುವ ತನಕ ನೀವು ಅವರಿಂದ ದೂರ ಉಳಿಯಿರಿ. ಇನ್ನು, ಒಂದು ವೇಳೆ ಶೈತಾನನು ನಿಮಗೆ ಮರೆವನ್ನುಂಟು ಮಾಡಿದರೂ, ನೆನಪಾದ ಬಳಿಕವಂತೂ ಅಕ್ರಮಿಗಳ ಜೊತೆ ಕುಳಿತಿರಬೇಡಿ.

69. ಅವರ (ಅಕ್ರಮಿಗಳ) ಯಾವುದೇ ಕರ್ಮದ ಹೊಣೆಗಾರಿಕೆ ಸತ್ಯಸಂಧರ ಮೇಲಿಲ್ಲ. ಅವರ ಮೇಲಿರುವುದು ಅವರು ಸತ್ಯಸಂಧರಾಗಲೆಂದು ಬೋಧಿಸುವ ಹೊಣೆ ಮಾತ್ರ.

70. ತಮ್ಮ ಧರ್ಮವನ್ನು ಕೇವಲ ಆಟ ಹಾಗೂ ತಮಾಷೆಯಾಗಿ ಪರಿಗಣಿಸಿರುವವರನ್ನು (ಅವರ ಪಾಡಿಗೆ) ಬಿಟ್ಟು ಬಿಡಿರಿ. ಈ ಲೋಕದ ಜೀವನವು ಅವರನ್ನು ಮೋಸಗೊಳಿಸಿದೆ. ಯಾವ ಚೇತನವೂ ತನ್ನ ಕರ್ಮಗಳ ಫಲವಾಗಿ ವಿನಾಶಕ್ಕೆ ಗುರಿಯಾಗಬಾರದೆಂದು ನೀವು ಇದರ (ಈ ಕುರ್‌ಆನ್‌ನ) ಮೂಲಕ ಜನರಿಗೆ ಉಪದೇಶಿಸಿರಿ. ಅಂತಹ ಚೇತನಕ್ಕೆ ಅಲ್ಲಾಹನಲ್ಲದೆ ಬೇರಾರೂ ರಕ್ಷಕರು ಇರಲಾರರು ಮತ್ತು ಯಾವ ಶಿಫಾರಸ್ಸುದಾರರೂ ಸಿಗಲಾರರು. ಅದು (ಆ ಚೇತನವು) ಸರ್ವಸ್ವವನ್ನೂ ಪರಿಹಾರವಾಗಿ ನೀಡ ಬಯಸಿದರೂ ಅದನ್ನು ಸ್ವೀಕರಿಸಲಾಗದು. ಅವರೇ, ತಮ್ಮ ಕರ್ಮಗಳ ಕಾರಣ ವಿನಾಶಕ್ಕೆ ಗುರಿಯಾದವರು. ಅವರು ಧಿಕ್ಕಾರಿಗಳಾಗಿದ್ದುದಕ್ಕಾಗಿ ಅವರಿಗಾಗಿ ತೀವ್ರ ಕುದಿಯುವ ಪಾನೀಯ ಮತ್ತು ಅಪಾರ ನೋವಿನ ಶಿಕ್ಷೆ ಕಾದಿದೆ.

 71. ಹೇಳಿರಿ; ನಾವೇನು, ಅಲ್ಲಾಹನನ್ನು ಬಿಟ್ಟು ನಮಗೆ ಯಾವುದೇ ಲಾಭವನ್ನಾಗಲಿ, ನಷ್ಟವನ್ನಾಗಲಿ ಮಾಡಲಾಗದವರಿಗೆ ಮೊರೆ ಇಡಬೇಕೇ? ಮತ್ತು ಅಲ್ಲಾಹನು ನಮಗೆ ಸನ್ಮಾರ್ಗವನ್ನು ತೋರಿದ ಬಳಿಕ ನಾವೇನು ಮತ್ತೆ ಬೆನ್ನು ತಿರುಗಿಸಿ ಮರಳಬೇಕೇ? ತನ್ನ ಸಂಗಡಿಗರು ‘ನಮ್ಮೆಡೆಗೆ ಬಾ’ ಎಂದು ತನ್ನನ್ನು ಸರಿದಾರಿಯೆಡೆಗೆ ಕರೆಯುತ್ತಿದ್ದರೂ, ಶೈತಾನರು ಮಂಕುಗೊಳಿಸಿದ್ದರಿಂದ ಭೂಮಿಯಲ್ಲಿ ದಾರಿ ತಪ್ಪಿ ಅಲೆಯುತ್ತಿರುವವನಂತೆ (ನಾವಾಗಬೇಕೇ)? ಹೇಳಿರಿ; ಅಲ್ಲಾಹನು ತೋರಿದ ದಾರಿಯೊಂದೇ ಸರಿದಾರಿಯಾಗಿದೆ. ನಮಗಂತು, ಸಕಲ ವಿಶ್ವಗಳ ಒಡೆಯನಿಗೆ ಶರಣಾಗಬೇಕೆಂದು ಆದೇಶಿಸಲಾಗಿದೆ.

72. ಮತ್ತು ನಮಾಝ್ ಅನ್ನು ಪಾಲಿಸಬೇಕು ಹಾಗೂ ಸದಾ ಅವನ ಭಯಭಕ್ತಿ ಉಳ್ಳವರಾಗಿರಬೇಕು (ಎಂದು ನಮಗೆ ಆದೇಶಿಸಲಾಗಿದೆ) – ಕೊನೆಗೆ ನಿಮ್ಮೆಲ್ಲರನ್ನೂ ಅವನ ಬಳಿಯೇ ಸೇರಿಸಲಾಗುವುದು.

73. ಅವನೇ ಆಕಾಶಗಳನ್ನು ಮತ್ತು ಭೂಮಿಯನ್ನು ನಿಜಕ್ಕೂ ಸೃಷ್ಟಿಸಿದವನು. ಅವನು ‘ಆಗು’ ಎಂದು ಹೇಳುವ ದಿನವೇ ಎಲ್ಲವೂ ಆಗಿ ಬಿಡುತ್ತದೆ. ಅವನ ಮಾತೇ ಸತ್ಯ. (ಅಂತಿಮ) ಕಹಳೆ ಊದಲಾಗುವ ದಿನ ಅಧಿಕಾರವು ಸಂಪೂರ್ಣವಾಗಿ ಅವನಿಗೇ ಸೇರಿರುವುದು. ಅವನು ಗುಪ್ತ ಹಾಗೂ ವ್ಯಕ್ತವಾದ ಎಲ್ಲವನ್ನೂ ಬಲ್ಲವನು ಮತ್ತು ಅತ್ಯಂತ ಯುಕ್ತಿವಂತನೂ ಅರಿವು ಉಳ್ಳವನೂ ಆಗಿದ್ದಾನೆ.

 74. ಇಬ್ರಾಹೀಮರು ತಮ್ಮ ತಂದೆ ಆಝರ್‌ನೊಡನೆ ಹೇಳಿದರು; ‘‘ನೀವೇನು, ವಿಗ್ರಹಗಳನ್ನು ದೇವರಾಗಿಸಿಕೊಂಡಿರುವಿರಾ? ನಾನಂತು ನಿಮ್ಮನ್ನು ಹಾಗೂ ನಿಮ್ಮ ಜನಾಂಗವನ್ನು ಸ್ಪಷ್ಟವಾಗಿ ದಾರಿಗೆಟ್ಟ ಸ್ಥಿತಿಯಲ್ಲಿ ಕಾಣುತ್ತಿದ್ದೇನೆ’’.

75. ಈ ರೀತಿ ನಾವು ಇಬ್ರಾಹೀಮರು ಅಚಲ ನಂಬಿಕೆ ಉಳ್ಳವರಾಗಲೆಂದು ಅವರಿಗೆ ಆಕಾಶಗಳ ಹಾಗೂ ಭೂಮಿಯ ಆಳ್ವಿಕೆಯನ್ನು ತೋರಿಸಿಕೊಟ್ಟೆವು.

76. (ಒಂದು ಹಂತದಲ್ಲಿ) ಅವರ ಮೇಲೆ ಇರುಳು ಕವಿದಾಗ ಅವರು ನಕ್ಷತ್ರವನ್ನು ಕಂಡರು. ‘‘ಇದುವೇ ನನ್ನ ದೇವರು’’ ಎಂದರು. ಅದು ಮರೆಯಾದಾಗ ‘‘ನಾನು, ಮರೆಯಾಗಿ ಬಿಡುವವರನ್ನು ಮೆಚ್ಚುವುದಿಲ್ಲ’’ ಎಂದರು.

77. ತರುವಾಯ ಅವರು ಬೆಳಗಿದ ಚಂದ್ರನನ್ನು ಕಂಡು, ‘‘ಇದುವೇ ನನ್ನ ದೇವರು’’ ಎಂದರು. ಅದು ಕಣ್ಮರೆಯಾದಾಗ ‘‘ನನ್ನ ದೇವರೇ ನನಗೆ ಸರಿದಾರಿಯನ್ನು ತೋರದಿದ್ದರೆ ನಾನು ದಾರಿಗೆಟ್ಟ ಸಮುದಾಯವನ್ನು ಸೇರುವುದು ಖಚಿತ’’ ಎಂದರು.

78. ಮುಂದೆ ಅವರು ಉರಿಯುವ ಸೂರ್ಯನನ್ನು ಕಂಡಾಗ ‘‘ಇದುವೇ ನನ್ನ ದೇವರು. ಇದು ಇತರೆಲ್ಲರಿಗಿಂತ ದೊಡ್ಡದಾಗಿದೆ’’ ಎಂದರು. ಕೊನೆಗೆ ಅದು ಕಣ್ಮರೆಯಾದಾಗ ಅವರು ಹೇಳಿದರು; ‘‘ಓ ನನ್ನ ಜನಾಂಗದವರೇ, ನೀವು ದೇವರ ಜೊತೆಗೆ ಪಾಲುಗೊಳಿಸುತ್ತಿರುವ ಎಲ್ಲವುಗಳಿಂದಲೂ ನಾನು ಮುಕ್ತನು’’.

79. ‘‘ನಾನು ಏಕಾಗ್ರ ಚಿತ್ತನಾಗಿ ನನ್ನ ಮುಖವನ್ನು, ಆಕಾಶಗಳ ಹಾಗೂ ಭೂಮಿಯ ಸೃಷ್ಟಿಕರ್ತನೆಡೆಗೆ ತಿರುಗಿಸಿಕೊಂಡೆನು. ಖಂಡಿತವಾಗಿಯೂ ನಾನು (ದೇವರಿಗೆ) ಪಾಲುದಾರರನ್ನು ನೇಮಿಸುವವನಲ್ಲ’’.

80. ಅವರ ಜನಾಂಗವು ಅವರ ಜೊತೆ ಜಗಳಾಡಿತು. ಅವರು (ಇಬ್ರಾಹೀಮರು) ಹೇಳಿದರು; ‘‘ನೀವೇನು, ಅಲ್ಲಾಹನ ವಿಷಯದಲ್ಲಿ ನನ್ನೊಡನೆ ಜಗಳಾಡುತ್ತಿರುವಿರಾ? ಅವನೇ ನನಗೆ ಸನ್ಮಾರ್ಗವನ್ನು ತೋರಿರುವನು. ನೀವು ಅವನ ಜೊತೆ ಪಾಲುಗೊಳಿಸುವ ಯಾವುದಕ್ಕೂ ನಾನು ಅಂಜುವುದಿಲ್ಲ. ಸ್ವತಃ ನನ್ನ ಒಡೆಯನೇ ಏನನ್ನಾದರೂ ಮಾಡಲು ಇಚ್ಛಿಸದೆ (ಏನೂ ಆಗುವುದಿಲ್ಲ). ನನ್ನೊಡೆಯನ ಜ್ಞಾನವು ಎಲ್ಲವನ್ನೂ ಆವರಿಸಿಕೊಂಡಿದೆ. ನೀವೇನು ಚಿಂತಿಸುವುದಿಲ್ಲವೆ?’’

81. ‘‘ಅಲ್ಲಾಹನು ಯಾರ ಪರವಾಗಿ ಯಾವುದೇ ಪುರಾವೆಯನ್ನು ಇಳಿಸಿಲ್ಲವೋ ಅಂಥವರನ್ನು ಅವನ ಪಾಲುದಾರರೆನ್ನುವುದಕ್ಕೆ ನೀವು ಅಂಜದಿರುವಾಗ, ನೀವು ನೇಮಿಸಿಕೊಂಡ ಪಾಲುದಾರರಿಗೆ ನಾನೇಕೆ ಅಂಜಬೇಕು?’’ ನೀವು ತಿಳಿದವರಾಗಿದ್ದರೆ, ಈ ಎರಡು ಗುಂಪುಗಳ ಪೈಕಿ ಶಾಂತಿಗೆ ಹೆಚ್ಚು ಅರ್ಹರು ಯಾರು (ಎಂಬುದನ್ನು ನೀವೇ ತೀರ್ಮಾನಿಸಿರಿ).

82.ನಿಜವಾಗಿ, ಸತ್ಯದಲ್ಲಿ ನಂಬಿಕೆ ಇಟ್ಟು, ತಮ್ಮ ನಂಬಿಕೆಯನ್ನು ಅಕ್ರಮದ ಜೊತೆ ಬೆರೆಸಿಲ್ಲದವರು – ಶಾಂತಿಯು ಅವರಿಗೇ ಸೇರಿದೆ ಮತ್ತು ಅವರೇ ಸನ್ಮಾರ್ಗಿಗಳು.

83. ನಾವು ಇಬ್ರಾಹೀಮರಿಗೆ ಅವರ ಜನಾಂಗದೆದುರು ನೀಡಿದ ಪುರಾವೆ ಇದೇ ಆಗಿತ್ತು. ನಾವು, ನಾವಿಚ್ಛಿಸಿದವರ ಸ್ಥಾನವನ್ನು ಉನ್ನತಗೊಳಿಸುತ್ತೇವೆ. ಖಂಡಿತವಾಗಿಯೂ ನಿಮ್ಮೊಡೆಯನು ಯುಕ್ತಿವಂತನೂ ಜ್ಞಾನಿಯೂ ಆಗಿದ್ದಾನೆ.

84. ಮುಂದೆ ನಾವು ಅವರಿಗೆ (ಇಬ್ರಾಹೀಮರಿಗೆ) ಇಸ್‌ಹಾಕ್ ಮತ್ತು ಯಅ್ಕೂಬ್‌ರನ್ನು ದಯಪಾಲಿಸಿದೆವು. ಅವರಿಗೆಲ್ಲಾ ನಾವು ಮಾರ್ಗದರ್ಶನ ನೀಡಿದ್ದೆವು. ಈ ಹಿಂದೆ ನಾವು ನೂಹ್‌ರಿಗೆ, ಅವರ ಸಂತತಿಗಳಿಗೆ, ದಾವೂದರಿಗೆ, ಸುಲೈಮಾನ್, ಅಯ್ಯೂಬ್, ಯೂಸುಫ್, ಮೂಸಾ ಮತ್ತು ಹಾರೂನ್‌ರಿಗೆ ಮಾರ್ಗದರ್ಶನ ನೀಡಿದ್ದೆವು. ಸತ್ಕರ್ಮಿಗಳಿಗೆ ನಾವು ಇದೇ ರೀತಿ ಸತ್ಫಲ ನೀಡುತ್ತೇವೆ.

85. ಹಾಗೆಯೇ, ಝಕರಿಯ್ಯ, ಯಹ್ಯಾ, ಈಸಾ ಮತ್ತು ಇಲ್ಯಾಸ್(ರಿಗೂ ಮಾರ್ಗದರ್ಶನ ನೀಡಲಾಗಿತ್ತು). ಅವರೆಲ್ಲರೂ ಸಜ್ಜನರ ಸಾಲಿಗೆ ಸೇರಿದ್ದರು.

86. ಅದೇ ರೀತಿ, ಇಸ್ಮಾಈಲ್, ಅಲ್ ಯಸಅ್, ಯೂನುಸ್ ಮತ್ತು ಲೂತ್ – ಅವರಿಗೆಲ್ಲಾ ನಾವು ಎಲ್ಲ ಲೋಕಗಳವರಿಗಿಂತ ಹೆಚ್ಚಿನ ಶ್ರೇಷ್ಠತೆಯನ್ನು ನೀಡಿದ್ದೆವು.

87.ಅವರ ತಂದೆ-ತಾತಂದಿರು, ಅವರ ಮಕ್ಕಳು ಮತ್ತು ಅವರ ಅನೇಕ ಸೋದರರಲ್ಲೂ ಕೆಲವರಿಗೆ (ನಾವು ಶ್ರೇಷ್ಠತೆಯನ್ನು ನೀಡಿದ್ದೆವು) ಮತ್ತು ನಾವು ಅವರನ್ನು ಆರಿಸಿಕೊಂಡಿದ್ದೆವು ಹಾಗೂ ನಾವು ಅವರಿಗೆ ಸ್ಥಿರವಾದ ಸನ್ಮಾರ್ಗವನ್ನು ದಯಪಾಲಿಸಿದ್ದೆವು.

88. ಇದು ಅಲ್ಲಾಹನ ಮಾರ್ಗದರ್ಶನ – ಅವನು ಈ ಮೂಲಕ ತನ್ನ ದಾಸರ ಪೈಕಿ ತಾನಿಚ್ಛಿಸಿದವರಿಗೆ ಸರಿದಾರಿಯನ್ನು ತೋರುತ್ತಾನೆ. ಒಂದು ವೇಳೆ ಅವರು, (ಅಲ್ಲಾಹನ ಜೊತೆ) ಪಾಲುದಾರಿಕೆ ಮಾಡಿದ್ದರೆ, ಅವರು ಗಳಿಸಿದ್ದೆಲ್ಲವೂ ಅವರಿಂದ ಕಳೆದು ಹೋಗುತ್ತಿತ್ತು.

 89. ಅವರಿಗೆ ನಾವು – ಗ್ರಂಥವನ್ನು, ಅಧಿಕಾರವನ್ನು ಮತ್ತು ದೂತ ಪದವಿಯವನ್ನು ನೀಡಿದ್ದೆವು. ಇದೀಗ ಆ ಜನರು ಇದನ್ನು (ಸತ್ಯವನ್ನು) ಧಿಕ್ಕರಿಸಿದರೆ, ಇದನ್ನು ಧಿಕ್ಕರಿಸದ ಇನ್ನೊಂದು ಜನಾಂಗಕ್ಕೆ ನಾವಿದನ್ನು ಒಪ್ಪಿಸುವೆವು.

90. ಅವರೇ, ಅಲ್ಲಾಹನು ಸನ್ಮಾರ್ಗದಲ್ಲಿ ನಡೆಸಿದವರು – ನೀವು ಅವರ ದಾರಿಯನ್ನೇ ಅನುಸರಿಸಿರಿ. ಹೇಳಿರಿ; ಈ ಕುರಿತು ನಾನು ನಿಮ್ಮಿಂದ ಯಾವುದೇ ಪ್ರತಿಫಲವನ್ನು ಬೇಡುವುದಿಲ್ಲ. ಇದು ಸರ್ವಲೋಕಗಳಿಗಾಗಿ ಇರುವ ಬೋಧನೆ.

91. ಅವರು ಅಲ್ಲಾಹನನ್ನು ಅರಿಯಬೇಕಾದ ರೀತಿಯಲ್ಲಿ ಅರಿಯಲಿಲ್ಲ. ‘‘ಅಲ್ಲಾಹನು ಯಾವ ಮಾನವನಿಗೂ ಏನನ್ನೂ ಇಳಿಸಿ ಕೊಟ್ಟಿಲ್ಲ’’ – ಎಂದು ಅವರು ಹೇಳಿದಾಗ, ನೀವು ಹೇಳಿರಿ; ‘‘ಮೂಸಾ ಅವರು ತಂದಿದ್ದ , ಎಲ್ಲ ಜನರಿಗಾಗಿ ಪ್ರಕಾಶ ಮತ್ತು ಸನ್ಮಾರ್ಗವಿದ್ದ ಗ್ರಂಥವನ್ನು ಇಳಿಸಿದವರು ಯಾರು? ನೀವು (ಇಸ್ರಾಈಲರ ಸಂತತಿಗಳು) ಅದನ್ನು (ಆ ಗ್ರಂಥವನ್ನು) ಕೇವಲ ಛಿದ್ರ ಹಾಳೆಗಳಾಗಿ ಪರಿವರ್ತಿಸಿದಿರಿ – ಅದರ ತುಸು ಭಾಗವನ್ನು ಮಾತ್ರ ಬಹಿರಂಗ ಪಡಿಸಿ ಹೆಚ್ಚಿನ ಭಾಗವನ್ನು ಬಚ್ಚಿಟ್ಟಿರಿ. ನಿಮಗಾಗಲಿ, ನಿಮ್ಮ ಪೂರ್ವಜರಿಗಾಗಲಿ ತಿಳಿದಿರದ ಅನೇಕ ವಿಷಯಗಳನ್ನು (ಆ ಗ್ರಂಥದ ಮೂಲಕ) ನಿಮಗೆ ಕಲಿಸಿಕೊಟ್ಟವನು ಯಾರು?’’ ಹೇಳಿರಿ; ‘‘ಅಲ್ಲಾಹನು.’’ ತರುವಾಯ ನೀವು ಅವರನ್ನು ಬಿಟ್ಟು ಬಿಡಿರಿ – ಅವರು ತಮ್ಮ ಕುಚೇಷ್ಟೆಗಳಲ್ಲೇ ಮಗ್ನರಾಗಿರಲಿ.

92. ಇದು, ನಾವು ಇಳಿಸಿಕೊಟ್ಟಿರುವ ಸಮೃದ್ಧಿ ತುಂಬಿದ ಗ್ರಂಥ – ತನಗಿಂತ ಮೊದಲು ಬಂದಿದ್ದ ಗ್ರಂಥಗಳನ್ನು ಇದು ಸಮರ್ಥಿಸುತ್ತದೆ. ಇದರ ಮೂಲಕ ನೀವು ಮಕ್ಕಾದವರನ್ನು ಮತ್ತು ಅದರ ಸುತ್ತ ಮುತ್ತಲಿನವರನ್ನು ಎಚ್ಚರಿಸಬೇಕೆಂದು (ಇದನ್ನು ಕಳಿಸಲಾಗಿದೆ). ಪರಲೋಕದಲ್ಲಿ ನಂಬಿಕೆ ಉಳ್ಳವರು, ಇದರಲ್ಲಿ ನಂಬಿಕೆ ಇರಿಸುತ್ತಾರೆ ಮತ್ತು ಅವರು ತಮ್ಮ ನಮಾಝ್‌ಗಳನ್ನು ಕಾಪಾಡುತ್ತಾರೆ.

 93. ಅಲ್ಲಾಹನ ಮೇಲೆ ಸುಳ್ಳಾರೋಪ ಹೊರಿಸಿದವನಿಗಿಂತ ಅಥವಾ ತನಗೆ ಯಾವ ಸಂದೇಶವೂ ಸಿಗದೆಯೇ, ತನಗೆ ದಿವ್ಯ ಸಂದೇಶ ಸಿಕ್ಕಿದೆ ಎನ್ನುವವನಿಗಿಂತ ಮತ್ತು ಅಲ್ಲಾಹನು ಇಳಿಸಿದಂತಹದನ್ನೇ ತಾನೂ ಇಳಿಸುತ್ತೇನೆ ಎನ್ನುವವನಿಗಿಂತ ದೊಡ್ಡ ಅಕ್ರಮಿ ಯಾರಿದ್ದಾನೆ? ನೀವು ಆ ದೃಶ್ಯವನ್ನು ನೋಡಬೇಕಿತ್ತು; ಅಕ್ರಮಿಗಳು ಮರಣದ ಸಂಕಟದಲ್ಲಿ ಸಿಲುಕಿರುವಾಗ, ಮಲಕ್‌ಗಳು ತಮ್ಮ ಕೈಗಳನ್ನು ಚಾಚಿ ‘‘ಹೊರ ತೆಗೆಯಿರಿ ನಿಮ್ಮ ಪ್ರಾಣಗಳನ್ನು, ನೀವು ಅಲ್ಲಾಹನ ಕುರಿತು ಸತ್ಯವಲ್ಲದ್ದನ್ನು ಹೇಳುತ್ತಿದ್ದುದಕ್ಕಾಗಿ ಮತ್ತು ನೀವು ಅವನ ವಚನಗಳ ವಿಷಯದಲ್ಲಿ ಅಹಂಕಾರ ತೋರುತ್ತಿದ್ದುದಕ್ಕಾಗಿ ಇಂದು ನಿಮಗೆ ಭಾರೀ ಅಪಮಾನದ ಶಿಕ್ಷೆಯು ದೊರೆಯಲಿದೆ’’ ಎನ್ನುವರು.

94. ನಾವು ನಿಮ್ಮನ್ನು ಮೊದಲ ಬಾರಿಗೆ ಸೃಷ್ಟಿಸಿದಾಗ ಇದ್ದಂತೆ, (ಇಂದು) ನೀವು ಒಂಟಿಯಾಗಿ ನಮ್ಮ ಬಳಿಗೆ ಬಂದಿರುವಿರಿ ಮತ್ತು ನಾವು ನಿಮಗೆ ನೀಡಿದ್ದೆಲ್ಲವನ್ನೂ ನೀವು ನಿಮ್ಮ ಹಿಂದೆ ಬಿಟ್ಟು ಬಂದಿರುವಿರಿ. ಹಾಗೆಯೇ ನೀವು ಅಷ್ಟೊಂದು ನಂಬಿಕೊಂಡಿದ್ದ ಹಾಗೂ ನಿಮ್ಮ ನಡುವೆ (ದೇವರ) ಸಹಭಾಗಿಯಾಗಿದ್ದ ನಿಮ್ಮ ಶಿಫಾರಸುದಾರರನ್ನು ಇಂದು ನಾವು ನಿಮ್ಮ ಜೊತೆ ಕಾಣುತ್ತಿಲ್ಲವಲ್ಲಾ! ನಿಜವಾಗಿ ನಿಮ್ಮ ನಡುವಣ ನಂಟು ಮುರಿದು ಹೋಗಿದೆ ಮತ್ತು ನೀವು ಏನನ್ನು ಅವಲಂಬಿಸಿದ್ದಿರೋ ಅದು ನಿಮ್ಮಿಂದ ಕಳೆದು ಹೋಗಿದೆ.

 95. ಖಂಡಿತವಾಗಿಯೂ, ಕಾಳನ್ನು ಮತ್ತು ಗೊರಟನ್ನು ಸೀಳುವವನು ಅಲ್ಲಾಹನೇ. ಅವನೇ, ನಿರ್ಜೀವಿಯಿಂದ ಜೀವಿಯನ್ನು ಹೊರತೆಗೆಯುವವನು ಮತ್ತು ಜೀವಿಯಿಂದ ನಿರ್ಜೀವಿಯನ್ನು ಹೊರ ತೆಗೆಯುವವನು. ಅವನೇ ನಿಮ್ಮ ಅಲ್ಲಾಹ್ – ಹೀಗಿರುತ್ತಾ, ನೀವು ಅದೆಲ್ಲಿ ಅಲೆಯುತ್ತಿರುವಿರಿ?

96. (ಇರುಳಿನ ಕತ್ತಲನ್ನು ಸೀಳಿ) ಬೆಳಗನ್ನು ಹೊರ ತರುವವನು ಮತ್ತು ಇರುಳನ್ನು ವಿಶ್ರಾಂತಿಯ ಕಾಲವಾಗಿ ಮಾಡಿರುವವನು ಅವನೇ, ಅವನು ಸೂರ್ಯನನ್ನು ಹಾಗೂ ಚಂದ್ರನನ್ನು (ಕಾಲ) ಗಣನೆಯ ಉಪಾಧಿಗಳಾಗಿಸಿರುವನು. ಇದು ಆ ಪ್ರಚಂಡವಾದ ಜ್ಞಾನಿಯು ವಿಧಿಸಿರುವ ನಿಯಮ.

 97. ನೆಲ ಮತ್ತು ಜಲದ ಕತ್ತಲುಗಳಲ್ಲಿ ನೀವು ಮಾರ್ಗದರ್ಶನ ಪಡೆಯುವಂತಾಗಲು ನಿಮಗಾಗಿ ನಕ್ಷತ್ರಗಳನ್ನು ಇಟ್ಟಿರುವವನು ಅವನೇ. ಅರಿವು ಉಳ್ಳವರಿಗಾಗಿ ನಾವು ನಮ್ಮ ವಚನಗಳನ್ನು ಸಾಕಷ್ಟು ವಿವರಿಸಿರುವೆವು.

98. ಅವನೇ, ನಿಮ್ಮನ್ನು ಕೇವಲ ಒಂದು ಜೀವದಿಂದ ಸೃಷ್ಟಿಸಿದವನು. ಇನ್ನು ಪ್ರತಿಯೊಬ್ಬರಿಗೂ ಒಂದು ಶಾಶ್ವತ ನೆಲೆ ಇರುತ್ತದೆ. ಹಾಗೆಯೇ ಒಂದು ತಾತ್ಕಾಲಿಕ ನೆಲೆಯೂ ಇರುತ್ತದೆ. ಚಿಂತನೆ ನಡೆಸುವವರಿಗಾಗಿ ನಾವು ವಚನಗಳನ್ನು ವಿವರಿಸಿರುವೆವು.

99. ಅವನೇ ಆಕಾಶದಿಂದ ನೀರನ್ನು ಸುರಿಸಿದವನು ಮತ್ತು ಆ ಮೂಲಕ ನಾವು ಎಲ್ಲ ಬೆಳೆಗಳನ್ನು ಹೊರ ತೆಗೆದೆವು ಮತ್ತು ಅದರಿಂದಲೇ ನಾವು ಹಸಿರನ್ನು ಹೊರತೆಗೆದೆವು ಮತ್ತು ಅದರಿಂದಲೇ, ರಾಶಿರಾಶಿ ಧಾನ್ಯಗಳನ್ನು ಹೊರತೆಗೆದೆವು ಮತ್ತು ಖರ್ಜೂರದ ಗೊನೆಗಳಲ್ಲಿ ಭಾರದಿಂದ ಬಾಗಿರುವ ಗೊಂಚಲುಗಳನ್ನು ಹೊರತೆಗೆದೆವು – ಹಾಗೆಯೇ ದ್ರಾಕ್ಷಿ, ಝೈತೂನ್ ಮತ್ತು ದಾಳಿಂಬೆಗಳ ತೋಟಗಳನ್ನು ಬೆಳೆಸಿದೆವು – ಅವುಗಳಲ್ಲಿ ಕೆಲವು ಒಂದೇ ತೆರನಾಗಿ ಗೋಚರಿಸಿದರೆ ಮತ್ತೆ ಕೆಲವು ತೀರಾ ವಿಭಿನ್ನವಾಗಿ ಗೋಚರಿಸುತ್ತವೆ. ಅವು ಚಿಗುರುವಾಗ ಮತ್ತು ಬೆಳೆದು ಹಣ್ಣಾಗುವಾಗ ನೀವು ಅವುಗಳ ಫಲಗಳನ್ನು ನೋಡಿರಿ – ನಂಬಿಕೆ ಉಳ್ಳವರಿಗೆ ಇದರಲ್ಲಿ ಖಂಡಿತವಾಗಿಯೂ ದೊಡ್ಡ ಪಾಠಗಳಿವೆ.

100. ಅವರು ಜಿನ್ನ್‌ಗಳನ್ನು ಅಲ್ಲಾಹನ ಪಾಲುದಾರರಾಗಿಸಿದ್ದಾರೆ. ನಿಜವಾಗಿ ಅವನೇ ಅವುಗಳ ಸೃಷ್ಟಿಕರ್ತನಾಗಿದ್ದಾನೆ. ಅವರು ಅರಿವಿಲ್ಲದೆ, ಆತನಿಗೆ ಪುತ್ರರು ಹಾಗೂ ಪುತ್ರಿಯರಿದ್ದಾರೆಂದು ಕಥೆ ಕಟ್ಟುತ್ತಾರೆ. ನಿಜವಾಗಿ ಅವನು ಪಾವನನಾಗಿದ್ದಾನೆ ಮತ್ತು ಅವರು ಆರೋಪಿಸುವ ಗುಣಗಳಿಗಿಂತ ತುಂಬಾ ಉನ್ನತನಾಗಿದ್ದಾನೆ.

101. ಅವನೇ, ಆಕಾಶಗಳನ್ನು ಮತ್ತು ಭೂಮಿಯನ್ನು ಹೊಸದಾಗಿ ಆರಂಭಿಸಿದವನು. ಅವನಿಗೆ ಪತ್ನಿಯೇ ಇಲ್ಲವೆಂದ ಮೇಲೆ ಅವನಿಗೆ ಪುತ್ರನಿರಲು ಹೇಗೆ ಸಾಧ್ಯ? ಅವನಂತು ಪ್ರತಿಯೊಂದು ವಸ್ತುವಿನ ಸೃಷ್ಟಿಕರ್ತನಾಗಿದ್ದಾನೆ ಮತ್ತು ಪ್ರತಿಯೊಂದು ವಿಷಯವನ್ನು ಬಲ್ಲವನಾಗಿದ್ದಾನೆ.

102. ಆ ಅಲ್ಲಾಹನೇ ನಿಮ್ಮ ಒಡೆಯನು. ಅವನ ಹೊರತು ಬೇರೆ ದೇವರಿಲ್ಲ. ಅವನೇ ಎಲ್ಲ ವಸ್ತುಗಳ ಸೃಷ್ಟಿಕರ್ತನು. ಅವನನ್ನೇ ಪೂಜಿಸಿರಿ. ಅವನು ಎಲ್ಲ ವಸ್ತುಗಳ ಮೇಲ್ವಿಚಾರಕನು.

103. ಕಣ್ಣುಗಳು ಅವನನ್ನು ಗ್ರಹಿಸಲಾರವು. ಆದರೆ ಅವನು ಕಣ್ಣುಗಳನ್ನು ಗ್ರಹಿಸಬಲ್ಲನು. ಅವನು ತೀರಾ ಸೂಕ್ಷ್ಮ ಸಂಗತಿಗಳನ್ನೂ ಗುರುತಿಸುವವನು ಮತ್ತು ಅರಿವು ಉಳ್ಳವನಾಗಿದ್ದಾನೆ.

104. (ದೂತರೇ, ಹೇಳಿರಿ) ನಿಮ್ಮ ಬಳಿಗೆ ನಿಮ್ಮ ಒಡೆಯನ ಕಡೆಯಿಂದ ಪುರಾವೆಗಳು ಬಂದು ಬಿಟ್ಟಿವೆ. ಅವುಗಳಲ್ಲಿ (ಸತ್ಯವನ್ನು) ಕಾಣುವವನಿಗೆ ಅದರ ಲಾಭವು ಸಿಗುವುದು ಮತ್ತು ಯಾರು (ಅವುಗಳೆಡೆಗೆ) ಕುರುಡನಾಗುವವನು ಅದರ ನಷ್ಟವನ್ನು ಅನುಭವಿಸುವನು. ನಾನು ನಿಮ್ಮ ಮೇಲಿನ ಕಾವಲುಗಾರನೇನಲ್ಲ.

105. ‘‘ನೀವು (ಎಲ್ಲಿಂದಲೋ) ಕಲಿತು ಬಂದಿದ್ದೀರಿ’’ ಎಂದು ಅವರು (ಧಿಕ್ಕಾರಿಗಳು) ಹೇಳಲೆಂದು ಹಾಗೂ ಅರಿವು ಉಳ್ಳವರಿಗೆ ವಿಷಯವನ್ನು ಸ್ಪಷ್ಟ ಪಡಿಸಲೆಂದು ಈ ರೀತಿ ನಾವು ದಿವ್ಯ ವಚನಗಳನ್ನು ವಿಧವಿಧವಾಗಿ ವಿವರಿಸುತ್ತೇವೆ.

106. (ದೂತರೇ,) ನಿಮ್ಮ ಒಡೆಯನ ಕಡೆಯಿಂದ ನಿಮಗೆ ನೀಡಲಾಗಿರುವ ಸಂದೇಶವನ್ನು ಅನುಸರಿಸಿರಿ. ಅವನ ಹೊರತು ಬೇರೆ ದೇವರಿಲ್ಲ. ಹಲವರನ್ನು ಆರಾಧಿಸುವವರಿಂದ ದೂರ ಉಳಿಯಿರಿ.

107. ಅಲ್ಲಾಹನು ಬಯಸಿದ್ದರೆ, ಅವರು ಬಹುದೇವಾರಾಧನೆ ಮಾಡುತ್ತಿರಲಿಲ್ಲ. ನಾವು ನಿಮ್ಮನ್ನು ಅವರ ಕಾವಲುಗಾರನಾಗಿ ನೇಮಿಸಿಲ್ಲ. ನೀವು ಅವರ ಪೋಷಕರೂ ಅಲ್ಲ.

108. (ವಿಶ್ವಾಸಿಗಳೇ,) ಜನರು ಅಲ್ಲಾಹನ ಹೊರತು ಯಾರನ್ನೆಲ್ಲಾ ಪ್ರಾರ್ಥಿಸುತ್ತಾರೋ ಅವರನ್ನು ಮೂದಲಿಸಬೇಡಿ – (ನೀವು ಮೂದಲಿಸಿದರೆ) ಅವರು ಹಗೆತನದಿಂದ, ಅರಿವಿಲ್ಲದೆ ಅಲ್ಲಾಹನನ್ನು ಮೂದಲಿಸುವರು. ಈ ರೀತಿ ನಾವು ಪ್ರತಿಯೊಂದು ಸಮುದಾಯದ ಪಾಲಿಗೆ ಅದರ ಕೃತ್ಯವನ್ನು ಚಂದಗಾಣಿಸಿರುವೆವು. ಕೊನೆಗೆ ಅವರು ತಮ್ಮ ಒಡೆಯನ ಬಳಿಗೆ ಮರಳಲಿಕ್ಕಿದೆ. ಆಗ ಅವರು ಮಾಡುತ್ತಿದ್ದುದು ಏನೆಂಬುದನ್ನು ಅವನು ಅವರಿಗೆ ತಿಳಿಸುವನು.

 109. ತಮ್ಮ ಬಳಿಗೆ ಪುರಾವೆಯೇನಾದರೂ ಬಂದಿದ್ದರೆ ತಾವು ಖಂಡಿತ ನಂಬುತ್ತಿದ್ದೆವು ಎಂದು ಅವರು ಅಲ್ಲಾಹನ ಆಣೆ ಹಾಕಿ ಹೇಳುತ್ತಾರೆ. ‘‘ಪುರಾವೆಗಳೆಲ್ಲಾ ಅಲ್ಲಾಹನ ಬಳಿ ಇವೆ’’ ಎಂದು ಹೇಳಿರಿ. ನಿಮಗೇನು ಗೊತ್ತು? ಅವುಗಳು (ಪುರಾವೆಗಳು) ಬಂದ ಬಳಿಕವೂ ಅವರು ನಂಬಲಾರರು.

110. ಅವರು ಮೊದಲ ಬಾರಿಗೆ ಈ ಪುರಾವೆಗಳನ್ನು ನಂಬಲು ನಿರಾಕರಿಸಿದಂತೆ, ನಾವು ಅವರ ಮನಸ್ಸುಗಳನ್ನು ಹಾಗೂ ದೃಷ್ಟಿಗಳನ್ನು ತಿರುಚಿ ಬಿಡುವೆವು. ಮತ್ತು ನಾವು ಅವರನ್ನು, ತಮ್ಮ ವಿದ್ರೋಹ ನೀತಿಯಲ್ಲೇ ದಾರಿಗೆಟ್ಟು ಅಲೆಯುತ್ತಿರುವುದಕ್ಕೆ ಬಿಟ್ಟು ಬಿಡುವೆವು.

ಕಾಂಡ – 8

111. ಒಂದು ವೇಳೆ ನಾವು ಅವರಲ್ಲಿಗೆ ‘ಮಲಕ್’ಗಳನ್ನು ಇಳಿಸಿದ್ದರೆ ಹಾಗೂ ಶವಗಳು ಅವರ ಜೊತೆ ಮಾತನಾಡುತ್ತಿದ್ದರೆ ಮತ್ತು (ಅವರು ಬಯಸುವ) ಎಲ್ಲ ವಸ್ತುಗಳನ್ನು ನಾವು ಅವರ ಮುಂದೆ ರಾಶಿ ಹಾಕಿದ್ದರೆ – ಆಗಲೂ ಅವರು ನಂಬುತ್ತಿರಲಿಲ್ಲ – ಅಲ್ಲಾಹನು ಬಯಸಿದ್ದರ ಹೊರತು. ನಿಜವಾಗಿ ಅವರಲ್ಲಿ ಹೆಚ್ಚಿನವರು ಅಜ್ಞಾನಿಗಳು.

 112. ಈ ರೀತಿ ನಾವು ಪ್ರತಿಯೊಬ್ಬ ಪ್ರವಾದಿಯ ಪಾಲಿಗೆ, ಮಾನವರು ಹಾಗೂ ಜಿನ್ನ್‌ಗಳೊಳಗಿನ ಶೈತಾನರನ್ನು ಶತ್ರುಗಳಾಗಿಸಿರುವೆವು. ಅವರು ಮೋಸದ ಮಾತುಗಳ ಮೂಲಕ ಪರಸ್ಪರರನ್ನು ಪ್ರೋತ್ಸಾಹಿಸುತ್ತಲಿರುತ್ತಾರೆ. ನಿಜವಾಗಿ ನಿಮ್ಮ ಒಡೆಯನು ಬಯಸಿದ್ದರೆ, ಅವರು ಹಾಗೆ ಮಾಡುತ್ತಿರಲಿಲ್ಲ. ನೀವು ಬಿಟ್ಟು ಬಿಡಿರಿ – ಅವರನ್ನು ಮತ್ತು ಅವರ ಕಟ್ಟು ಕತೆಗಳನ್ನು.

113. ಪರಲೋಕದಲ್ಲಿ ನಂಬಿಕೆ ಇಲ್ಲದವರ ಮನಸ್ಸುಗಳು ಅವುಗಳೆಡೆಗೆ ಒಲಿದಿರಲಿ, ಅವರು ಅವುಗಳಲ್ಲೇ ತೃಪ್ತರಾಗಿರಲಿ ಮತ್ತು ಅವರು ಸದ್ಯ ಸಂಪಾದಿಸುತ್ತಿರುವುದನ್ನೇ (ಪಾಪವನ್ನೇ) ಸಂಪಾದಿಸುತ್ತಿರಲಿ.

 114. (ದೂತರೇ,) ‘‘ಅವನು (ಅಲ್ಲಾಹನು) ಸವಿಸ್ತಾರವಾದ ಗ್ರಂಥವನ್ನು ನಿಮ್ಮೆಡೆಗೆ ಇಳಿಸಿಕೊಟ್ಟಿರುವಾಗ, ನಾನೇನು ಅಲ್ಲಾಹನನ್ನು ಬಿಟ್ಟು ತೀರ್ಪುಗಾರನಾಗಿ ಬೇರೊಬ್ಬನನ್ನು ಹುಡುಕಬೇಕೇ?’’ ಎಂದು ಕೇಳಿರಿ. ನಾವು ಯಾರಿಗೆ ಗ್ರಂಥವನ್ನು ನೀಡಿರುವೆವೋ ಅವರಿಗೆ, ಅದು (ಕುರ್‌ಆನ್) ನಿಮ್ಮೊಡೆಯನ ಕಡೆಯಿಂದ, ಸತ್ಯದೊಂದಿಗೆ ಇಳಿಸಲಾಗಿರುವ ಗ್ರಂಥವೆಂದು ಖಚಿತವಾಗಿ ತಿಳಿದಿದೆ. ನೀವೀಗ ಸಂಶಯಿಸುವವರ ಸಾಲಿಗೆ ಸೇರಬೇಡಿ.

115. ಸತ್ಯದಲ್ಲೂ ನ್ಯಾಯದಲ್ಲೂ ನಿಮ್ಮೊಡೆಯನ ಮಾತೇ ಪರಿಪೂರ್ಣವಾಗಿದೆ. ಅವನ ಮಾತುಗಳಲ್ಲಿ ಬದಲಾವಣೆ ಇಲ್ಲ. ಅವನು ಎಲ್ಲವನ್ನೂ ಕೇಳುವವನು ಮತ್ತು ಎಲ್ಲವನ್ನೂ ಬಲ್ಲವನು.

116. ಭೂಮಿಯಲ್ಲಿರುವ ಹೆಚ್ಚಿನವರನ್ನು ನೀವು ಅನುಸರಿಸಿದರೆ ಅವರು ನಿಮ್ಮನ್ನು ಅಲ್ಲಾಹನ ಮಾರ್ಗದಿಂದ ದಾರಿ ತಪ್ಪಿಸಿ ಬಿಡುವರು. ಅವರು ಕೇವಲ ಊಹೆಯನ್ನು ಅನುಸರಿಸುತ್ತಾರೆ ಮತ್ತು ಸದಾ ಭ್ರಮೆಯ ಲೆಕ್ಕಾಚಾರಗಳಲ್ಲಿ ಮಗ್ನರಾಗಿರುತ್ತಾರೆ.

117. ಯಾರು ತನ್ನ ಮಾರ್ಗದಿಂದ ತಪ್ಪಿ ನಡೆದವರೆಂಬುದನ್ನು ನಿಮ್ಮೊಡೆಯನು ಚೆನ್ನಾಗಿಬಲ್ಲನು ಮತ್ತು ಸರಿ ದಾರಿಯಲ್ಲಿರುವವರನ್ನೂ ಅವನು ಚೆನ್ನಾಗಿ ಬಲ್ಲನು.

 118. ನೀವು ಅವನ (ಅಲ್ಲಾಹನ) ವಚನಗಳನ್ನು ನಂಬುವವರಾಗಿದ್ದರೆ, ಅಲ್ಲಾಹನ ಹೆಸರನ್ನು ಉಚ್ಚರಿಸಲಾದುದನ್ನು (ಹಲಾಲ್ ಮಾಂಸವನ್ನು) ತಿನ್ನಿರಿ.

  119. ನಿಮಗೇನಾಗಿದೆ? ಅಲ್ಲಾಹನ ಹೆಸರನ್ನು ಉಚ್ಚರಿಸಲಾಗಿರುವುದನ್ನು ನೀವೇಕೆ ತಿನ್ನುವುದಿಲ್ಲ? ಅವನಂತು, ತಾನು ನಿಮಗೆ ನಿಷಿದ್ಧಗೊಳಿಸಿರುವ ವಸ್ತುಗಳನ್ನು ನಿಮಗೆ ವಿವರವಾಗಿ ತಿಳಿಸಿರುವನು – ನೀವು ನಿರ್ಬಂಧಿತರಾದಾಗಿನ ಸ್ಥಿತಿಯು ಅದಕ್ಕೆ ಅತೀತವಾಗಿದೆ. ಹೆಚ್ಚಿನವರು ಜ್ಞಾನವಿಲ್ಲದೆ ಕೇವಲ ತಮ್ಮ ಇಚ್ಛೆಯನ್ನು ಅನುಸರಿಸಿ (ಜನರನ್ನು) ದಾರಿ ತಪ್ಪಿಸುತ್ತಾರೆ. (ಈ ರೀತಿ) ಮಿತಿ ಮೀರುವವರನ್ನು ನಿಮ್ಮ ಒಡೆಯನು ಚೆನ್ನಾಗಿ ಬಲ್ಲನು.

120. ವ್ಯಕ್ತ ಹಾಗೂ ಗುಪ್ತ ಪಾಪಕೃತ್ಯಗಳನ್ನು ನೀವು ಬಿಟ್ಟು ಬಿಡಿರಿ – ಪಾಪಗಳನ್ನು ಸಂಪಾದಿಸುತ್ತಿರುವವರು ಖಂಡಿತವಾಗಿಯೂ ತಮ್ಮ ಗಳಿಕೆಯ ಪ್ರತಿಫಲವನ್ನು ಪಡೆಯುವರು.

121. ಅಲ್ಲಾಹನ ಹೆಸರನ್ನು ಉಚ್ಚರಿಸಲಾಗಿಲ್ಲದ್ದನ್ನು ತಿನ್ನಬೇಡಿ – ಅದು ಪಾಪಕೃತ್ಯವಾಗಿದೆ. ಶೈತಾನರಂತು ನಿಮ್ಮೊಡನೆ ಜಗಳಾಡಬೇಕೆಂದು ತಮ್ಮ ಆಪ್ತರನ್ನು ಪ್ರಚೋದಿಸುತ್ತಲೇ ಇರುತ್ತಾರೆ. ನೀವು ಅವರನ್ನು ಅನುಸರಿಸಿದರೆ ಖಂಡಿತವಾಗಿಯೂ ಹಲವರ ಆರಾಧಕರಾಗುವಿರಿ.

  122. ಮೃತನಾಗಿದ್ದ ಒಬ್ಬ ವ್ಯಕ್ತಿಯನ್ನು ನಾವು ಜೀವಂತಗೊಳಿಸಿ, ಆತನಿಗೆ ಪ್ರಕಾಶವನ್ನು ಒದಗಿಸಿ, ಆತನು ಅದರೊಂದಿಗೆ ಜನರ ನಡುವೆ ನಡೆಯುವಂತೆ ಮಾಡಿದ್ದು, ಅಂತಹ ವ್ಯಕ್ತಿಯು, ಸದಾ ಕತ್ತಲಲ್ಲಿರುವ ಮತ್ತು ಅದರೊಳಗಿಂದ ಹೊರ ಬರಲಾಗದ ವ್ಯಕ್ತಿಗೆ ಸಮಾನನಾಗಲು ಸಾಧ್ಯವೇ? ಈ ರೀತಿ ಧಿಕ್ಕಾರಿಗಳಿಗೆ ಅವರು ಮಾಡುತ್ತಿರುವ ಎಲ್ಲವನ್ನೂ ಚಂದಗಾಣಿಸಲಾಗಿದೆ.

123. ಇದೇ ರೀತಿ ನಾವು ಪ್ರತಿಯೊಂದು ನಾಡಿನಲ್ಲಿ, ಅಲ್ಲಿನ ಮಹಾ ಅಪರಾಧಿಗಳನ್ನು, ಅಲ್ಲಿ ಸಂಚು ಹೂಡುತ್ತಿರಲು ಬಿಟ್ಟು ಬಿಟ್ಟಿದ್ದೇವೆ. ನಿಜವಾಗಿ ಅವರು ಸ್ವತಃ ತಮ್ಮ ವಿರುದ್ಧವೇ ಸಂಚು ಹೂಡುತ್ತಿದ್ದಾರೆ. ಆದರೆ ಅವರಿಗೆ ಅದರ ಅರಿವಿಲ್ಲ.

 124. ಅವರ ಬಳಿಗೆ ಒಂದು ಪುರಾವೆಯು ಬಂದಾಗ ಅವರು ‘‘ಅಲ್ಲಾಹನ ದೂತರುಗಳಿಗೆ ನೀಡಿರುವಂತಹದ್ದನ್ನೇ ನಮಗೆ ನೀಡಲಾಗುವ ತನಕ ನಾವು ನಂಬುವುದಿಲ್ಲ’’ ಎನ್ನುತ್ತಾರೆ. ತನ್ನ ದೌತ್ಯವನ್ನು ಹೇಗೆ ಕಳುಹಿಸಬೇಕೆಂದು ಅಲ್ಲಾಹನು ಚೆನ್ನಾಗಿ ಬಲ್ಲನು. ಆ ಅಪರಾಧಿಗಳು ಬೇಗನೇ ಅಲ್ಲಾಹನ ಬಳಿ ಘೋರ ಅಪಮಾನವನ್ನು ಎದುರಿಸಲಿದ್ದಾರೆ ಮತ್ತು ತಮ್ಮ ದುಷ್ಟ ಸಂಚುಗಳ ಕಾರಣ ಭಾರೀ ಯಾತನೆಗೆ ಗುರಿಯಾಗಲಿದ್ದಾರೆ.

 125. ಅಲ್ಲಾಹನು ಯಾರಿಗೆ ಸರಿದಾರಿ ತೋರಬಯಸುತ್ತಾನೋ ಅವನ ಮನಸ್ಸನ್ನು ಇಸ್ಲಾಮಿನ ಪಾಲಿಗೆ ತೆರೆದು ಬಿಡುತ್ತಾನೆ. ಮತ್ತು ಅವನು ಯಾರನ್ನು ದಾರಿಗೆಡಿಸ ಬಯಸುತ್ತಾನೋ ಆತನ ಮನಸ್ಸನ್ನು ಮುದುಡಿಸಿ ತೀರಾ ಸಂಕುಚಿತಗೊಳಿಸಿ ಬಿಡುತ್ತಾನೆ. (ಸತ್ಯ ದರ್ಶನವು) ಅವನ ಪಾಲಿಗೆ, ಆಕಾಶಕ್ಕೆ ಮೆಟ್ಟಿಲೇರುವುದೋ ಎಂಬಷ್ಟು ಕಠಿಣ ಕಾರ್ಯವಾಗಿ ಬಿಡುತ್ತದೆ. ಈ ರೀತಿ ಅಲ್ಲಾಹನು ಸತ್ಯವನ್ನು ನಂಬದವರ ಮೇಲೆ ಕಳಂಕವನ್ನು ಹೊರಿಸುತ್ತಾನೆ.

126. ನಿಮ್ಮೊಡೆಯನ ಈ ಮಾರ್ಗವೇ ನೇರ ಮಾರ್ಗವಾಗಿದೆ. ಪಾಠ ಕಲಿಯುವವರಿಗಾಗಿ ನಾವು ನಮ್ಮ ವಚನಗಳನ್ನು ಸವಿಸ್ತಾರವಾಗಿ ವಿವರಿಸಿರುವೆವು.

 127. ಅಂಥವರಿಗೆ ಅವರ ಒಡೆಯನ ಬಳಿ ಶಾಂತಿಯ ನಿವಾಸವಿದೆ ಮತ್ತು ಅವರ ಕರ್ಮಗಳ ಫಲವಾಗಿ ಅವನು (ಅಲ್ಲಾಹನು) ಅವರ ಪರಮಾಪ್ತನಾಗಿರುವನು.

128. ಅವನು ಅವರೆಲ್ಲರನ್ನೂ ಒಂದೆಡೆ ಸೇರಿಸುವ ದಿನ ‘‘ಜಿನ್ನ್‌ಗಳೇ, ನೀವು ಮಾನವರಲ್ಲಿ ಅನೇಕರನ್ನು ವಶೀಕರಿಸಿಕೊಂಡಿರಿ’’ ಎನ್ನಲಾಗುವುದು. ಆಗ ಮಾನವರ ಪೈಕಿ ಅವರ (ಜಿನ್ನ್‌ಗಳ) ಆಪ್ತರು ಹೇಳುವರು; ‘‘ನಮ್ಮೊಡೆಯಾ, ನಮ್ಮಲ್ಲಿನ ಕೆಲವರು ಮತ್ತೆ ಕೆಲವರಿಂದ ಪರಸ್ಪರ ಲಾಭ ಪಡೆದರು. ಕೊನೆಗೆ ನಾವು, ನೀನು ನಮಗಾಗಿ ನಿಗದಿಪಡಿಸಿದ ಅಂತಿಮ ಗಡುವನ್ನು ತಲುಪಿದೆವು.’’ ಅವನು ಹೇಳುವನು; ನರಕಾಗ್ನಿಯೇ ನಿಮ್ಮ ನೆಲೆಯಾಗಿದೆ. ಅಲ್ಲಾಹನು ಯಾರನ್ನು ರಕ್ಷಿಸಲಿಚ್ಛಿಸುವನೋ ಅವರ ಹೊರತು ನೀವೆಲ್ಲರೂ ಇದರಲ್ಲೇ ಶಾಶ್ವತವಾಗಿ ಇರುವಿರಿ. ಖಂಡಿತವಾಗಿಯೂ ನಿಮ್ಮೊಡೆಯನು ಯುಕ್ತಿವಂತನೂ ಜ್ಞಾನಿಯೂ ಆಗಿರುವನು.

129. ಈ ರೀತಿ ನಾವು ಅವರ ಗಳಿಕೆಯ ಫಲವಾಗಿ, ಕೆಲವು ಅಕ್ರಮಿಗಳನ್ನು ಮತ್ತೆ ಕೆಲವರ ಮೇಲೆ ಹೇರುತ್ತಲೇ ಇರುತ್ತೇವೆ.

  130. ‘‘ಜಿನ್ನ್‌ಗಳೇ ಮತ್ತು ಮಾನವರೇ, ನಿಮಗೆ ನಮ್ಮ ವಚನಗಳನ್ನು ವಿವರಿಸುವ ಮತ್ತು ಈ ದಿನವನ್ನು ನೀವು ಕಾಣಲಿರುವ ಕುರಿತು ನಿಮಗೆ ಮುನ್ನೆಚ್ಚರಿಕೆ ನೀಡುವ ದೂತರು ನಿಮ್ಮ ಬಳಿಗೆ ಬಂದಿರಲಿಲ್ಲವೇ?’’ (ಎಂದು ಕೇಳಲಾದಾಗ) ಅವರು ‘‘ನಮ್ಮ ವಿರುದ್ಧ ಇದೋ ನಾವೇ ಸಾಕ್ಷಿ ಹೇಳುತ್ತೇವೆ’’ ಎನ್ನುವರು. ನಿಜವಾಗಿ, ಇಹಲೋಕದ ಬದುಕು ಅವರನ್ನು ಮೋಸಗೊಳಿಸಿತ್ತು ಮತ್ತು ತಾವು ಧಿಕ್ಕಾರಿಗಳಾಗಿದ್ದೆವೆಂದು ಅವರೇ ತಮ್ಮ ವಿರುದ್ಧ ಸಾಕ್ಷಿ ಹೇಳುವರು.

 131. ಇದೇಕೆಂದರೆ, ನಿಮ್ಮ ಒಡೆಯನು, ಅಕ್ರಮಕ್ಕೆ ಶಿಕ್ಷೆಯಾಗಿ ಯಾವುದೇ ನಾಡನ್ನು, ಆ ನಾಡಿನವರಿಗೆ ಅರಿವೇ ಇಲ್ಲದ ಸ್ಥಿತಿಯಲ್ಲಿ (ಮುನ್ನೆಚರಿಕೆ ನೀಡದೆ) ನಾಶ ಮಾಡುವವನಲ್ಲ.

132. ಪ್ರತಿಯೊಬ್ಬರಿಗೂ ಅವರವರ ಕರ್ಮಗಳಿಗೆ ಅನುಸಾರವಾದ ಸ್ಥಾನವಿದೆ ಮತ್ತು ನಿಮ್ಮ ಒಡೆಯನು ಅವರ ಕರ್ಮಗಳ ಕುರಿತು ಅರಿವಿಲ್ಲದವನಲ್ಲ.

 133. ನಿಜವಾಗಿ, ನಿಮ್ಮೊಡೆಯನು ಧಾರಾಳ ಉಳ್ಳವನು ಮತ್ತು ಅನುಗ್ರಹಿಯಾಗಿರುವನು. ಅವನು ಬಯಸಿದರೆ, ಬೇರೊಂದು ಜನಾಂಗದ ಸಂತತಿಯಿಂದ ನಿಮ್ಮನ್ನು ಬೆಳೆಸಿದಂತೆ, ನಿಮ್ಮನ್ನು ತೊಲಗಿಸಿ, ನಿಮ್ಮ ಬಳಿಕ ತಾನಿಚ್ಛಿಸಿದವರನ್ನು ನಿಮ್ಮ ಉತ್ತರಾಧಿಕಾರಿಗಳಾಗಿ ಮಾಡಬಲ್ಲನು.

   134. ನಿಮಗೆ ಯಾವುದರ ವಾಗ್ದಾನ ನೀಡಲಾಗುತ್ತಿದೆಯೋ ಅದು ಖಂಡಿತವಾಗಿಯೂ ಬರಲಿದೆ ಮತ್ತು (ಅಲ್ಲಾಹನನ್ನು) ನಿರ್ಬಂಧಿಸಲು ನಿಮ್ಮಿಂದ ಸಾಧ್ಯವಿಲ್ಲ.

135. (ದೂತರೇ,) ಹೇಳಿರಿ; ನನ್ನ ಜನಾಂಗದವರೇ, ನಿಮ್ಮ ಸ್ಥಾನದಲ್ಲಿ ನೀವು ಸಕ್ರಿಯರಾಗಿರಿ; ನಾನೂ ಸಕ್ರಿಯನಾಗಿರುತ್ತೇನೆ. ಅಂತಿಮ ನೆಲೆಯು ಯಾರಿಗೆ ಸೇರಿದೆ ಎಂಬುದು ಬೇಗನೇ ನಿಮಗೆ ತಿಳಿಯಲಿದೆ. ಅಕ್ರಮಿಗಳು ಖಂಡಿತ ವಿಜಯಿಗಳಾಗುವುದಿಲ್ಲ.

136. ಅಲ್ಲಾಹನು ಸೃಷ್ಟಿಸಿರುವ ಹೊಲ ಮತ್ತು ಜಾನುವಾರುಗಳಲ್ಲಿ ಅವರು ಅಲ್ಲಾಹನಿಗೆ ಒಂದು ಪಾಲನ್ನು ನಿಗದಿಪಡಿಸಿ, ತಮ್ಮದೇ ಲೆಕ್ಕಾಚಾರ ಪ್ರಕಾರ, ಇದು ಅಲ್ಲಾಹನಿಗೆ ಮತ್ತು ಇದು ನಮ್ಮ ಸಹಭಾಗಿಗಳಿಗೆ ಎನ್ನುತ್ತಾರೆ. ನಿಜವಾಗಿ, ಅವರು ತಮ್ಮ ಪಾಲುದಾರರಿಗೆ ಏನನ್ನು ಮೀಸಲಿಟ್ಟಿರುವರೋ ಅದು ಅಲ್ಲಾಹನಿಗೆ ತಲುಪುವುದಿಲ್ಲ. ಆದರೆ ಅವರು ಅಲ್ಲಾಹನಿಗೆ ನಿಗದಿಪಡಿಸಿರುವ ಪಾಲು ಅವರ ಪಾಲುದಾರರಿಗೆ ತಲುಪಿ ಬಿಡುತ್ತದೆ. ತುಂಬಾ ಕೆಟ್ಟದಾಗಿದೆ, ಅವರ ತೀರ್ಮಾನ.

137. ಇದೇ ರೀತಿ, ಹೆಚ್ಚಿನ ಬಹುದೇವಾರಾಧಕರಿಗೆ, (ದೇವತ್ವದಲ್ಲಿನ) ಅವರ ಪಾಲುದಾರರು ತಮ್ಮ ಮಕ್ಕಳ ಹತ್ಯೆಯನ್ನು ಚಂದಗಾಣಿಸಿ ಬಿಟ್ಟಿದ್ದಾರೆ – ಅವರನ್ನು ನಾಶ ಪಡಿಸಲಿಕ್ಕಾಗಿ ಮತ್ತು ಅವರ ಧರ್ಮವನ್ನು ಅವರಿಗೆ ಅಸ್ಪಷ್ಟಗೊಳಿಸಲಿಕ್ಕಾಗಿ. ಅಲ್ಲಾಹನು ಇಚ್ಛಿಸಿದ್ದರೆ ಅವರು ಹಾಗೆ ಮಾಡುತ್ತಿರಲಿಲ್ಲ. ನೀವೀಗ ಅವರನ್ನು ಮತ್ತು ಅವರು ಕಟ್ಟುತ್ತಿರುವ ಸುಳ್ಳುಗಳನ್ನು ಅವರ ಪಾಡಿಗೆ ಬಿಟ್ಟು ಬಿಡಿರಿ.

138. ‘‘ಈ ಪ್ರಾಣಿಗಳು ಮತ್ತು ಈ ಬೆಳೆಗಳು ನಿಷಿದ್ಧವಾಗಿವೆ. ನಾವು ಬಯಸುವವರ ಹೊರತು ಬೇರಾರೂ ಇವುಗಳನ್ನು ತಿನ್ನಬಾರದು’’ ಎಂದು ಅವರು, ತಮ್ಮ ಭ್ರಮೆಯಲ್ಲಿ ಹೇಳುತ್ತಾರೆ. ಅದೇ ರೀತಿ, ಕೆಲವು ಪ್ರಾಣಿಗಳ ಮೇಲಿನ ಸವಾರಿಯನ್ನು ಅವರು ನಿಷಿದ್ಧಗೊಳಿಸಿದ್ದಾರೆ ಮತ್ತು ಕೆಲವು ಪ್ರಾಣಿಗಳನ್ನು ಅವರು ಅಲ್ಲಾಹನ ಹೆಸರಿನಲ್ಲಿ ವಧಿಸುವುದಿಲ್ಲ – ಇವೆಲ್ಲಾ ಅವರು ಅವನ (ಅಲ್ಲಾಹನ) ಮೇಲೆ ಹೊರಿಸುವ ಆರೋಪಗಳು. ಅವರು ಕಟ್ಟಿಕೊಂಡ ಈ ಸುಳ್ಳುಗಳ ಪ್ರತಿಫಲವನ್ನು ಅವನು (ಅಲ್ಲಾಹನು) ಅವರಿಗೆ ನೀಡಲಿದ್ದಾನೆ.

 139. ‘‘ಈ ಪ್ರಾಣಿಗಳ ಗರ್ಭದಲ್ಲೇನಿದೆಯೋ ಅದು ಕೇವಲ ನಮ್ಮ ಪುರುಷರಿಗೆ ಮಾತ್ರ ಮೀಸಲಾಗಿದೆ. ನಮ್ಮ ಪತ್ನಿಯರ ಪಾಲಿಗೆ ಅವು ನಿಷಿದ್ಧವಾಗಿವೆ. ಇನ್ನು ಅವು ಮೃತ ಸ್ಥಿತಿಯಲ್ಲಿ ಜನಿಸಿದರೆ ಮಾತ್ರ ಅವರೂ ಅದರಲ್ಲಿ ಪಾಲುದಾರರಾಗುವರು’’ ಎಂದು ಅವರು ಹೇಳುತ್ತಾರೆ. (ಈ ರೀತಿ) ಸುಳ್ಳುಗಳನ್ನು ಸೃಷ್ಟಿಸಿದ್ದರ ಪ್ರತಿಫಲವನ್ನು ಅವನು (ಅಲ್ಲಾಹನು) ಅವರಿಗೆ ನೀಡುವನು. ಅವನಂತು ಅಪಾರ ಯುಕ್ತಿವಂತನೂ ಜ್ಞಾನಿಯೂ ಆಗಿರುವನು.

140. ಮೂರ್ಖತನದಿಂದ, ಜ್ಞಾನವಿಲ್ಲದೆ ತಮ್ಮ ಮಕ್ಕಳನ್ನು ಕೊಂದವರು ಮತ್ತು ಅಲ್ಲಾಹನ ಮೇಲೆ ಸುಳ್ಳಾರೋಪವನ್ನು ಹೊರಿಸಿ, ಅಲ್ಲಾಹನು ತಮಗೆ ನೀಡಿದ್ದನ್ನು ತಮ್ಮ ಮೇಲೆ ನಿಷೇಧಿಸಿಕೊಂಡವರು ಖಂಡಿತ ನಷ್ಟಕ್ಕೊಳಗಾದರು. ಅವರು ಖಂಡಿತ ದಾರಿಗೆಟ್ಟಿದ್ದರು ಮತ್ತು ಅವರು ನೇರ ಮಾರ್ಗದಲ್ಲಿರಲಿಲ್ಲ.

 141. ಅವನೇ, ಮಂಟಪವಿರುವ (ಉದಾ: ದ್ರಾಕ್ಷಿ) ಹಾಗೂ ಮಂಟಪವಿಲ್ಲದ ತೋಟಗಳನ್ನು, ಖರ್ಜೂರವನ್ನು, ವಿವಿಧ ಬಗೆಯ ಬೆಳೆಗಳನ್ನು ಮತ್ತು ಸಮರೂಪಿಗಳಾಗಿಯೂ, ಭಿನ್ನ ರೂಪಿಗಳಾಗಿಯೂ ಇರುವ ಝೈತೂನ್ (ಇಪ್ಪೆ) ಹಾಗೂ ದಾಳಿಂಬೆಗಳನ್ನು ಸೃಷ್ಟಿಸಿದವನು. ಅವು ಫಲ ನೀಡಿದಾಗ ಅವುಗಳ ಫಲವನ್ನು ತಿನ್ನಿರಿ ಮತ್ತು ಅವುಗಳ ಬೆಳೆ ಕೊಯ್ಯುವ ದಿನ ಅವುಗಳ ಬಾಧ್ಯತೆಯನ್ನು (ಉಶ್ರ್ ಅಥವಾ ಹತ್ತನೇ ಒಂದಂಶ ದಾನವನ್ನು) ಪಾವತಿಸಿರಿ. ಅಪವ್ಯಯ ಮಾಡಬೇಡಿ. ಅಪವ್ಯಯ ಮಾಡುವವರನ್ನು ಅವನು (ಅಲ್ಲಾಹನು) ಖಂಡಿತ ಮೆಚ್ಚುವುದಿಲ್ಲ.

 142. ಅವನೇ, ಜಾನುವಾರುಗಳ ಪೈಕಿ ಹೊರೆ ಹೊರುವವುಗಳನ್ನು (ದೊಡ್ಡವುಗಳನ್ನು) ಮತ್ತು ಸಣ್ಣವುಗಳನ್ನು ಸೃಷ್ಟಿಸಿದವನು. ಅಲ್ಲಾಹನು ನಿಮಗೆ ದಯ ಪಾಲಿಸಿರುವವುಗಳಿಂದ ತಿನ್ನಿರಿ ಮತ್ತು ಶೈತಾನನ ಹೆಜ್ಜೆಗಳನ್ನು ಅನುಕರಿಸಬೇಡಿ. ಖಂಡಿತವಾಗಿಯೂ ಅವನು ನಿಮ್ಮ ಸ್ಪಷ್ಟ ಶತ್ರುವಾಗಿದ್ದಾನೆ.

 143. (ದೂತರೇ, ಅವನು) ಎಂಟು ಜೊತೆಗಳನ್ನು ಸೃಷ್ಟಿಸಿರುವನು. ಕುರಿಗಳಲ್ಲಿ ಎರಡು ಬಗೆ ಹಾಗೂ ಆಡುಗಳಲ್ಲಿ ಎರಡು ಬಗೆ. ನೀವು ಹೇಳಿರಿ; ‘‘ಈ ಪೈಕಿ ಅಲ್ಲಾಹನು ನಿಷೇಧಿಸಿರುವುದು ಎರಡೂ ಬಗೆಯ ಗಂಡು ವರ್ಗದವುಗಳನ್ನೋ ಅಥವಾ ಹೆಣ್ಣು ವರ್ಗದವುಗಳನ್ನೋ ಅಥವಾ ಎರಡೂ ಬಗೆಯ ಹೆಣ್ಣು ವರ್ಗದ ಪ್ರಾಣಿಗಳ ಗರ್ಭದಲ್ಲಿರುವವುಗಳನ್ನೋ? ನೀವು ಸತ್ಯವಂತರಾಗಿದ್ದರೆ. ಜ್ಞಾನದ ಆಧಾರದಲ್ಲಿ ನನಗೆ ತಿಳಿಸಿರಿ’’.

  144. ಹಾಗೆಯೇ, ಒಂಟೆಯ ಜಾತಿಯಲ್ಲಿ ಎರಡು ಹಾಗೂ ಗೋವಿನ ಜಾತಿಯಲ್ಲಿ ಎರಡು ಬಗೆಗಳಿವೆ. ಹೇಳಿರಿ; ‘‘ಈ ಪೈಕಿ ಅಲ್ಲಾಹನು ನಿಷೇಧಿಸಿರುವುದು ಗಂಡು ವರ್ಗದ ಎರಡನ್ನೋ ಅಥವಾ ಹೆಣ್ಣು ವರ್ಗದ ಎರಡನ್ನೋ? ಅಥವಾ ಈ ಪೈಕಿ ಎರಡೂ ಬಗೆಯ ಹೆಣ್ಣು ಪ್ರಾಣಿಗಳ ಗರ್ಭದಲ್ಲಿರುವುದನ್ನೋ? ಅಲ್ಲಾಹನು ಹಾಗೆಂದು ನಿಮಗೆ ಉಪದೇಶಿಸುವಾಗ ನೀವೇನು ಹಾಜರಿದ್ದಿರಾ? ಜ್ಞಾನವಿಲ್ಲದೆ ಜನರನ್ನು ದಾರಿ ತಪ್ಪಿಸಲಿಕ್ಕಾಗಿ ಅಲ್ಲಾಹನ ಮೇಲೆ ಸುಳ್ಳಾರೋಪ ಹೊರಿಸುವಾತನಿಗಿಂತ ದೊಡ್ಡ ಅಕ್ರಮಿ ಯಾರಿದ್ದಾನೆ? ಖಂಡಿತವಾಗಿಯೂ ಅಲ್ಲಾಹನು ಅಕ್ರಮಿಗಳಿಗೆ ಸರಿದಾರಿ ತೋರಿಸುವುದಿಲ್ಲ.’’

145. (ದೂತರೇ) ಹೇಳಿರಿ; ನನ್ನೆಡೆಗೆ ಇಳಿಸಿಕೊಡಲಾಗಿರುವ ದಿವ್ಯ ಸಂದೇಶದಲ್ಲಂತು ತಿನ್ನುವವನ ಪಾಲಿಗೆ ಶವ, ಹರಿಯುತ್ತಿರುವ ರಕ್ತ ಅಥವಾ ಹಂದಿಯ ಮಾಂಸದ ಹೊರತು – ಬೇರೇನನ್ನಾದರೂ ತಿನ್ನುವುದಕ್ಕೆ ನಿಷೇಧ ಹೇರಿರುವುದನ್ನು ನಾನು ಕಾಣುವುದಿಲ್ಲ. ಏಕೆಂದರೆ ಅವು ಮಲಿನ ವಸ್ತುಗಳಾಗಿವೆ. ಹಾಗೆಯೇ ಅಲ್ಲಾಹನ ಹೊರತು ಬೇರೆ ಯಾರದಾದರೂ ಹೆಸರಲ್ಲಿ ವಧಿಸಲಾದ (ಅಥವಾ ಬಲಿ ನೀಡಲಾದ) ಪ್ರಾಣಿಯೂ ನಿಷಿದ್ಧವಾಗಿದೆ. ಏಕೆಂದರೆ ಅದು ಪಾಪಕೃತ್ಯವಾಗಿದೆ. ಇಷ್ಟಾಗಿಯೂ ಒಬ್ಬ ವ್ಯಕ್ತಿ ತೀರಾ ಅಸಹಾಯಕನಾಗಿದ್ದರೆ ಮತ್ತು ಅವನು ಅವಿಧೇಯನಾಗಲಿ ಅಥವಾ ಬಂಡುಕೋರನಾಗಲಿ ಅಲ್ಲದಿದ್ದರೆ ನಿಮ್ಮ ಒಡೆಯನಂತು ಖಂಡಿತವಾಗಿಯೂ ಅಪಾರ ಕ್ಷಮಾಶೀಲನೂ ಕರುಣಾಳುವೂ ಆಗಿರುವನು.

  146. ಯಹೂದಿಗಳಾದವರ ಪಾಲಿಗೆ ನಾವು ಉಗುರುಳ್ಳ ಎಲ್ಲ ಜೀವಿಗಳನ್ನು ನಿಷೇಧಿಸಿದ್ದೆವು ಮತ್ತು ದನ ಹಾಗೂ ಆಡುಗಳ, ಬೆನ್ನಲ್ಲಿರುವ, ಕರುಳಲ್ಲಿರುವ ಹಾಗೂ ಮೂಳೆಗಳಿಗೆ ತಗಲಿರುವ ಕೊಬ್ಬಿನ ಹೊರತು ಇತರ ಕೊಬ್ಬನ್ನು ನಾವು ಅವರ ಪಾಲಿಗೆ ನಿಷೇಧಿಸಿದ್ದೆವು. ಇದು ನಾವು ಅವರ ಕಿಡಿಗೇಡಿತನಕ್ಕೆ ನೀಡಿದ ಪ್ರತಿಫಲ. ಖಂಡಿತ ನಾವೇ ಸತ್ಯವಂತರು.

147. (ದೂತರೇ,) ಅವರು ನಿಮ್ಮನ್ನು ತಿರಸ್ಕರಿಸುತ್ತಾರೆಂದಾದರೆ ಹೇಳಿರಿ; ನಿಮ್ಮ ಒಡೆಯನು ಭಾರೀ ವಿಶಾಲ ಅನುಗ್ರಹ ಉಳ್ಳವನಾಗಿದ್ದಾನೆ. ಆದರೆ, ಅಪರಾಧಿಗಳಿಂದ ಅವನ ಶಿಕ್ಷೆಯನ್ನು ನಿವಾರಿಸಲು ಯಾರಿಗೂ ಸಾಧ್ಯವಿಲ್ಲ.

 148. ‘‘ಅಲ್ಲಾಹನು ಹಾಗೆ ಬಯಸಿದ್ದರೆ ನಾವಾಗಲಿ ನಮ್ಮ ಪೂರ್ವಜರಾಗಲಿ ಬಹುದೇವಾರಾಧನೆ ಮಾಡುತ್ತಿರಲಿಲ್ಲ ಮತ್ತು ನಾವು ಯಾವುದನ್ನೂ ನಿಷಿದ್ಧವೆಂದು ಪರಿಗಣಿಸುತ್ತಿರಲಿಲ್ಲ’’- ಎಂದು ಬಹುದೇವಾರಾಧಕರು ಖಂಡಿತ ಹೇಳುವರು. ಅವರಿಗಿಂತ ಹಿಂದಿನವರೂ ನಮ್ಮ ಶಿಕ್ಷೆಯ ರುಚಿ ಕಾಣುವ ತನಕ ಇದೇ ರೀತಿಯ ಸುಳ್ಳನ್ನು ಹೇಳಿದ್ದರು. ಹೇಳಿರಿ; ನಿಮ್ಮ ಬಳಿ ಖಚಿತ ಜ್ಞಾನವೇನಾದರೂ ಇದ್ದರೆ ಅದನ್ನು ನಮ್ಮ ಮುಂದೆ ಪ್ರಕಟಿಸಿರಿ. ನೀವಂತು ಕೇವಲ ಊಹೆಯ ಹಿಂದೆ ನಡೆಯುತ್ತಿರುವಿರಿ ಮತ್ತು ಕೇವಲ ಭ್ರಮಿಸುತ್ತಿರುವಿರಿ.

149. (ದೂತರೇ,) ಹೇಳಿರಿ; ಅಂತಿಮ ವಾದವು ಅಲ್ಲಾಹನಿಗೇ ಸೇರಿದೆ. ಅವನು ಬಯಸಿದ್ದರೆ ನಿಮ್ಮೆಲ್ಲರನ್ನೂ ಸರಿದಾರಿಯಲ್ಲಿ ನಡೆಸುತ್ತಿದ್ದನು.

150. (ದೂತರೇ,) ‘‘ಇವುಗಳನ್ನು ಅಲ್ಲಾಹನು ನಿಷೇಧಿಸಿರುವನೆಂದು ಸಾಕ್ಷ್ಯ ಹೇಳಬಲ್ಲ ನಿಮ್ಮ ಸಾಕ್ಷಿಗಳನ್ನು ಕರೆ ತನ್ನಿರಿ’’ ಎಂದು ಹೇಳಿರಿ. ಒಂದು ವೇಳೆ ಅವರು ಹಾಗೆಂದು ಸಾಕ್ಷ್ಯ ಹೇಳಿದರೂ ನೀವು ಅವರ ಜೊತೆ ಸಾಕ್ಷ್ಯ ಹೇಳಬೇಡಿ. ಹಾಗೆಯೇ ನೀವು, ನಮ್ಮ ವಚನಗಳನ್ನು ಸುಳ್ಳೆಂದು ತಿರಸ್ಕರಿಸಿದವರ, ಪರಲೋಕದಲ್ಲಿ ವಿಶ್ವಾಸವಿಲ್ಲದವರ ಮತ್ತು (ಮಿಥ್ಯ ದೇವರುಗಳನ್ನು) ತಮ್ಮ ಒಡೆಯನಿಗೆ ಸಮಾನರಾಗಿ ಪರಿಗಣಿಸುವವರ ಅಪೇಕ್ಷೆಗಳನ್ನು ಅನುಸರಿಸಬೇಡಿ.

151. (ದೂತರೇ,) ಹೇಳಿರಿ; ಬನ್ನಿ, ನಿಮ್ಮ ಒಡೆಯನು ನಿಮ್ಮ ಪಾಲಿಗೆ ಏನನ್ನು ನಿಷೇಧಿಸಿರುವನು ಎಂಬುದನ್ನು ನಾನು ನಿಮಗೆ ಓದಿ ಕೇಳಿಸುತ್ತೇನೆ; ನೀವು ಏನನ್ನೂ ಅವನ ಜೊತೆ ಪಾಲುದಾರನಾಗಿ ಮಾಡಬಾರದು. ನಿಮ್ಮ ತಾಯಿ-ತಂದೆಯ ಜೊತೆ ಪರಮ ಸೌಜನ್ಯದ ನೀತಿಯನ್ನು ಪಾಲಿಸಿರಿ. ಬಡತನದ ಭಯದಿಂದ ನಿಮ್ಮ ಮಕ್ಕಳನ್ನು ಕೊಲ್ಲಬೇಡಿ. ನಾವು ನಿಮಗೆ ಆಹಾರವನ್ನು ಒದಗಿಸುತ್ತಿದ್ದೇವೆ, ಅವರಿಗೂ ಒದಗಿಸುವೆವು. ವ್ಯಕ್ತವಾಗಿರುವ ಅಥವಾ ಗುಪ್ತವಾಗಿರುವ ಯಾವುದೇ ಅಶ್ಲೀಲತೆಯ ಹತ್ತಿರವೂ ಸುಳಿಯಬೇಡಿ. ಅಲ್ಲಾಹನು ಮಾನ್ಯ ಗೊಳಿಸಿರುವ ಯಾವುದೇ ಜೀವವನ್ನು ಅನ್ಯಾಯವಾಗಿ ಕೊಲ್ಲಬೇಡಿ. ನೀವು ಬುದ್ಧಿವಂತರಾಗಬೇಕೆಂದು ಇದನ್ನೆಲ್ಲಾ ಅವನು ನಿಮಗೆ ಬೋಧಿಸಿರುವನು.

  152. ಅನಾಥನು ತನ್ನ ಯವ್ವನವನ್ನು ತಲುಪುವ ತನಕ ನೀವು ಅವನ ಸೊತ್ತನ್ನು ಸಮೀಪಿಸಬಾರದು – ಅತ್ಯುತ್ತಮ ವಿಧಾನದ ಹೊರತು. ಹಾಗೆಯೇ ನೀವು ಅಳತೆ ಮತ್ತು ತೂಕವನ್ನು ನ್ಯಾಯೋಚಿತವಾಗಿ ಪೂರ್ತಿಗೊಳಿಸಿರಿ. ನಾವು ಯಾವುದೇ ಜೀವದ ಮೇಲೆ ಅದರ ಸಾಮರ್ಥ್ಯಕ್ಕಿಂತ ಹೆಚ್ಚಿನ ಹೊರೆಯನ್ನು ಹೊರಿಸುವುದಿಲ್ಲ. ನೀವು ಮಾತನಾಡುವಾಗ ನ್ಯಾಯವಾದ ಮಾತನ್ನೇ ಆಡಿರಿ – ತೀರಾ ಆಪ್ತರ ವಿಷಯವಾಗಿದ್ದರೂ ಸರಿಯೇ. ಹಾಗೆಯೇ, ಅಲ್ಲಾಹನ ಜೊತೆಗಿನ ಕರಾರನ್ನು ಪೂರ್ಣವಾಗಿ ಪಾಲಿಸಿರಿ – ನೀವು ಉಪದೇಶ ಸ್ವೀಕರಿಸುವವರಾಗಬೇಕೆಂದು ಇದನ್ನೆಲ್ಲಾ ಅವನು ನಿಮಗೆ ಬೋಧಿಸಿರುವನು.

153. ಇದು ನನ್ನ ಸ್ಥಿರವಾದ, ನೇರಮಾರ್ಗ – ಇದನ್ನೇ ಅನುಸರಿಸಿ ಮತ್ತು ಇತರ ಮಾರ್ಗಗಳನ್ನು ಅನುಸರಿಸಬೇಡಿ. ಅವು ನಿಮ್ಮನ್ನು ಅವನ (ಅಲ್ಲಾಹನ) ಮಾರ್ಗದಿಂದ ದೂರಗೊಳಿಸುವವು. ನೀವು ಧರ್ಮನಿಷ್ಠರಾಗಬೇಕೆಂದು ಇದನ್ನೆಲ್ಲಾ ಅವನು ನಿಮಗೆ ಬೋಧಿಸಿರುವನು.

154. ನಾವು ಮೂಸಾರಿಗೆ ಗ್ರಂಥವನ್ನು ನೀಡಿದೆವು – ಸತ್ಕರ್ಮಿಯ ಪಾಲಿಗೆ ನಮ್ಮ ಅನುಗ್ರಹವನ್ನು ಪರಿಪೂರ್ಣಗೊಳಿಸಲಿಕ್ಕಾಗಿ, ಎಲ್ಲ ವಿಷಯಗಳ ವಿವರವನ್ನು ಒದಗಿಸಲಿಕ್ಕಾಗಿ ಮತ್ತು ಮಾರ್ಗದರ್ಶನ ಹಾಗೂ ಅನುಗ್ರಹವಾಗಿ – ಅವರು ತಮ್ಮ ಒಡೆಯನನ್ನು ಭೇಟಿಯಾಗಲಿಕ್ಕಿರುವುದನ್ನು ನಂಬಲೆಂದು.

155. (ಇದೀಗ) ಈ ಸಮೃದ್ಧಿ ತುಂಬಿದ ಗ್ರಂಥವನ್ನು ನಾವು ಇಳಿಸಿಕೊಟ್ಟಿರುವೆವು. ಇದನ್ನು ಅನುಸರಿಸಿರಿ ಮತ್ತು ಧರ್ಮ ನಿಷ್ಠರಾಗಿರಿ – ನೀವು ಕರುಣೆಗೆ ಪಾತ್ರರಾಗ ಬಹುದು.’’

156. ಈಗ ನೀವು – ‘‘ನಮಗಿಂತ ಹಿಂದಿನ ಎರಡು ಗುಂಪುಗಳಿಗೆ ಗ್ರಂಥವನ್ನು ಇಳಿಸಿಕೊಡಲಾಗಿತ್ತು. ಆದರೆ ಅವರಿಗೆ ನೀಡಲಾಗಿದ್ದ ಬೋಧನೆಗಳ ಕುರಿತು ನಮಗೇನೂ ತಿಳಿದಿರಲಿಲ್ಲ’’ – ಎಂದು ಹೇಳುವಂತಿಲ್ಲ.

 157. ಹಾಗೆಯೇ ನೀವೀಗ – ‘‘ಒಂದು ವೇಳೆ ನಮಗೆ ಗ್ರಂಥವನ್ನು ಇಳಿಸಿಕೊಟ್ಟಿದ್ದರೆ ನಾವು ಅವರಿಗಿಂತ ಹೆಚ್ಚು ಸನ್ಮಾರ್ಗದಲ್ಲಿರುತ್ತಿದ್ದೆವು’’-ಎಂದು ಹೇಳುವಂತಿಲ್ಲ. ಇದೀಗ ನಿಮ್ಮ ಒಡೆಯನ ಕಡೆಯಿಂದ, ವ್ಯಕ್ತವಾದ ಪುರಾವೆ, ಮಾರ್ಗದರ್ಶನ ಹಾಗೂ ಅನುಗ್ರಹವು ನಿಮ್ಮ ಬಳಿಗೆ ಬಂದಿದೆ. ಅಲ್ಲಾಹನ ವಚನಗಳನ್ನು ಸುಳ್ಳೆಂದು ತಿರಸ್ಕರಿಸುವ ಮತ್ತು ಅದರಿಂದ (ಜನರನ್ನು) ತಡೆಯುವಾತನಿಗಿಂತ ದೊಡ್ಡ ಅಕ್ರಮಿ ಯಾರಿದ್ದಾನೆ? ಈ ರೀತಿ ನಮ್ಮ ವಚನಗಳಿಂದ (ಜನರನ್ನು) ತಡೆದವರಿಗೆ ನಾವು, ಅವರು ತಡೆದುದರ ಫಲವಾಗಿ ಕಠಿಣ ಶಿಕ್ಷೆಯನ್ನು ನೀಡಲಿದ್ದೇವೆ.

158. ಅವರು ಕಾಯುತ್ತಿರುವುದು ಅವರ ಬಳಿಗೆ ಮಲಕ್‌ಗಳು ಬರಬೇಕು ಅಥವಾ ಸಾಕ್ಷಾತ್ ನಿಮ್ಮ ಒಡೆಯನೇ ಬರಬೇಕು ಅಥವಾ ನಿಮ್ಮ ಒಡೆಯನ ಕೆಲವು ಪುರಾವೆಗಳು ಬರಬೇಕು ಎಂಬುದಕ್ಕೆ ತಾನೇ? ನಿಜವಾಗಿ, ನಿಮ್ಮ ಒಡೆಯನ ಕೆಲವು ಪುರಾವೆಗಳು ಬಂದು ಬಿಡುವ ದಿನ, ಮೊದಲೇ ನಂಬಿಕೆ ಇಟ್ಟಿಲ್ಲದ ಅಥವಾ ತನ್ನ ನಂಬಿಕೆಯ ಮೂಲಕ ಒಳಿತನ್ನು ಸಂಪಾದಿಸಿಲ್ಲದ ಯಾರಿಗೂ ಅವರ ನಂಬಿಕೆಯಿಂದ ಯಾವುದೇ ಪ್ರಯೋಜನವಾಗದು. ಹೇಳಿರಿ; ನೀವು ಕಾಯುತ್ತಲಿರಿ – ನಾವೂ ಕಾಯುತ್ತಿದ್ದೇವೆ.

159. ಖಂಡಿತವಾಗಿಯೂ, ತಮ್ಮ ಧರ್ಮವನ್ನು ವಿಂಗಡಿಸಿದವರು ಮತ್ತು ವಿಚ್ಛಿದ್ರರಾಗಿ ಬಿಟ್ಟವರೊಂದಿಗೆ ನಿಮಗೆ ಯಾವುದೇ ಸಂಬಂಧವಿಲ್ಲ. ಅವರ ಪ್ರಕರಣವು ಅಲ್ಲಾಹನಿಗೆ ಸೇರಿದೆ. ಅವರು ಏನೆಲ್ಲಾ ಮಾಡುತ್ತಿದ್ದರೆಂಬುದನ್ನು ಅವನು ಅವರಿಗೆ ತಿಳಿಸುವನು.

 160. (ಅಲ್ಲಾಹನ ಬಳಿಗೆ) ಒಂದು ಸತ್ಕರ್ಮವನ್ನು ತಂದಾತನಿಗೆ ಅದರ ಹತ್ತು ಪಟ್ಟು ಪ್ರತಿಫಲ ಸಿಗಲಿದೆ. ಆದರೆ ಒಂದು ಪಾಪಕೃತ್ಯದೊಂದಿಗೆ ಬಂದಾತನಿಗೆ ಅಷ್ಟು ಮಾತ್ರ ಪ್ರತಿಫಲ ಸಿಗಲಿದೆ. ಅವರ ಮೇಲೆ ಖಂಡಿತ ಅನ್ಯಾಯವಾಗದು.

161. (ದೂತರೇ,) ಹೇಳಿರಿ; ನಿಸ್ಸಂದೇಹವಾಗಿಯೂ ನನ್ನ ಒಡೆಯನು ನನಗೆ ಸ್ಥಿರವಾದ ನೇರಮಾರ್ಗವನ್ನು ತೋರಿಸಿಕೊಟ್ಟಿದ್ದಾನೆ. ಇದುವೇ ಪಕ್ವ ಧರ್ಮವಾಗಿದೆ, ಏಕ ನಿಷ್ಠ ಇಬ್ರಾಹೀಮರ ಮಾರ್ಗ – ಅವರು ಖಂಡಿತ ಬಹುದೇವಾರಾಧಕರಾಗಿರಲಿಲ್ಲ.

162. (ದೂತರೇ) ಹೇಳಿರಿ; ಖಂಡಿತವಾಗಿಯೂ ನನ್ನ ನಮಾಝ್, ನನ್ನ ಬಲಿದಾನ, ನನ್ನ ಜೀವನ ಮತ್ತು ನನ್ನ ಮರಣವು ಸರ್ವಲೋಕಗಳ ಒಡೆಯನಾದ ಅಲ್ಲಾಹನಿಗೇ ಮೀಸಲಾಗಿದೆ.

163. ಅವನಿಗೆ ಯಾರೂ ಪಾಲುದಾರರಿಲ್ಲ. ನನಗೆ ಇದನ್ನೇ ಆದೇಶಿಸಲಾಗಿದೆ ಮತ್ತು ನಾನು ಇತರೆಲ್ಲರಿಗಿಂತ ಮುನ್ನ ಮುಸ್ಲಿಮನಾಗಿದ್ದೇನೆ.

164. ಹೇಳಿರಿ; ಅಲ್ಲಾಹನೇ ಎಲ್ಲ ವಸ್ತುಗಳ ಒಡೆಯನಾಗಿರುವಾಗ ನಾನೇನು ಅಲ್ಲಾಹನ ಹೊರತು ಬೇರೊಬ್ಬ ದೇವರನ್ನು ಹುಡುಕಬೇಕೇ? ಪ್ರತಿಯೊಬ್ಬನೂ ತಾನು ಸಂಪಾದಿಸಿರುವುದಕ್ಕೆಲ್ಲಾ ತಾನೇ ಹೊಣೆಗಾರನಾಗಿರುತ್ತಾನೆ. ಹೊರೆ ಹೊರುವ ಯಾರೊಬ್ಬರೂ ಇನ್ನೊಬ್ಬರ ಹೊರೆಯನ್ನು ಹೊರಲಾರರು. ಅಂತಿಮವಾಗಿ ನೀವು ನಿಮ್ಮ ಒಡೆಯನ ಕಡೆಗೇ ಮರಳಬೇಕಾಗಿದೆ. ನೀವು ಭಿನ್ನತೆ ತಾಳಿದ್ದ ಎಲ್ಲ ವಿಷಯಗಳ ವಾಸ್ತವವನ್ನು ಅವನು ನಿಮಗೆ ತಿಳಿಸುವನು.

165. ಅವನೇ, ಭೂಮಿಯಲ್ಲಿ ನಿಮ್ಮನ್ನು ಪ್ರತಿನಿಧಿಗಳಾಗಿ ಕಳುಹಿಸಿದವನು ಮತ್ತು ನಿಮಗೇನನ್ನು ನೀಡಲಾಗಿದೆಯೋ ಆ ಮೂಲಕ ನಿಮ್ಮನ್ನು ಪರೀಕ್ಷಿಸಲಿಕ್ಕಾಗಿ ನಿಮ್ಮಲ್ಲಿ ಕೆಲವರಿಗೆ ಇತರ ಕೆಲವರಿಗಿಂತ ಉನ್ನತ ಸ್ಥಾನಗಳನ್ನು ನೀಡಿದವನು. ಖಂಡಿತವಾಗಿಯೂ ನಿಮ್ಮೊಡೆಯನು ಕ್ಷಿಪ್ರವಾಗಿ ಶಿಕ್ಷಿಸುವವನಾಗಿದ್ದಾನೆ ಮತ್ತು ನಿಸ್ಸಂದೇಹವಾಗಿಯೂ ಅವನು ಕ್ಷಮಾಶೀಲನೂ ಕರುಣಾಮಯಿಯೂ ಆಗಿದ್ದಾನೆ.