1. ಅಲಿಫ್, ಲಾಮ್, ರಾ. (ದೂತರೇ,) ಇದು, ನಿಮಗೆ ನಾವು ಇಳಿಸಿಕೊಟ್ಟಿರುವ ಗ್ರಂಥ. ನೀವು ಮಾನವರನ್ನು ಅವರ ಒಡೆಯನ ಆದೇಶದಂತೆ, ಕತ್ತಲುಗಳಿಂದ ಹೊರತಂದು ಬೆಳಕಿನೆಡೆಗೆ ನಡೆಸಬೇಕೆಂದು (ಹಾಗೂ) ಅತ್ಯಂತ ಪ್ರಬಲನೂ ಹೊಗಳಿಕೆಗೆ ಅರ್ಹನೂ ಆಗಿರುವಾತನ (ಅಲ್ಲಾಹನ) ಮಾರ್ಗದತ್ತ ನಡೆಸಬೇಕೆಂದು (ಇದನ್ನು ಕಳಿಸಲಾಗಿದೆ).
2. ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿ ಇರುವ ಎಲ್ಲವೂ ಅಲ್ಲಾಹನಿಗೇ ಸೇರಿದೆ. ಇನ್ನು, ಧಿಕ್ಕಾರಿಗಳಿಗೆ ಕಠೋರ ಶಿಕ್ಷೆಯ ಮೂಲಕ ವಿನಾಶವಿದೆ.
3. ಅವರು ಪರಲೋಕಕ್ಕಿಂತ ಹೆಚ್ಚಾಗಿ ಈ ಲೋಕದ ಬದುಕನ್ನು ಪ್ರೀತಿಸುತ್ತಾರೆ, (ಜನರನ್ನು) ಅಲ್ಲಾಹನ ಮಾರ್ಗದಿಂದ ತಡೆಯುತ್ತಾರೆ ಮತ್ತು ಅದರಲ್ಲಿ ವಕ್ರತೆಯನ್ನು ಹುಡುಕುತ್ತಿರುತ್ತಾರೆ. ಅವರು ದುರ್ಮಾರ್ಗದಲ್ಲಿ ಬಹುದೂರ ಸಾಗಿಬಿಟ್ಟಿದ್ದಾರೆ.
4. ನಾವು ಜನರಿಗೆ (ಸತ್ಯವನ್ನು) ವಿವರಿಸಲಿಕ್ಕಾಗಿ ಪ್ರತಿಯೊಬ್ಬ ದೂತನನ್ನೂ ಆತನ ಸಮುದಾಯದ ಭಾಷೆಯಲ್ಲೇ ಕಳಿಸಿರುವೆವು. ಅಲ್ಲಾಹನು ತಾನಿಚ್ಛಿಸಿದವರನ್ನು ದಾರಿಗೆಡಿಸುತ್ತಾನೆ ಮತ್ತು ತಾನಿಚ್ಛಿಸಿದವರನ್ನು ಸರಿದಾರಿಯಲ್ಲಿ ನಡೆಸುತ್ತಾನೆ. ಅವನು ಅತ್ಯಂತ ಪ್ರಬಲನೂ ಯುಕ್ತಿವಂತನೂ ಆಗಿದ್ದಾನೆ.
5. ನಿಮ್ಮ ಜನಾಂಗವನ್ನು ಕತ್ತಲುಗಳಿಂದ ಹೊರತಂದು ಬೆಳಕಿನೆಡೆಗೆ ನಡೆಸಿರಿ ಹಾಗೂ ಅವರಿಗೆ ಅಲ್ಲಾಹನ ದಿನಗಳನ್ನು ನೆನಪಿಸಿರಿ ಎನ್ನುತ್ತಾ ನಾವು ಮೂಸಾರನ್ನು ನಮ್ಮ ಸೂಚನೆಗಳ ಜೊತೆ ಕಳುಹಿಸಿದ್ದೆವು. ಇದರಲ್ಲಿ, ಪ್ರತಿಯೊಬ್ಬ ಸಹನಶೀಲ, ಕೃತಜ್ಞ ವ್ಯಕ್ತಿಗೆ ಖಂಡಿತ ಸೂಚನೆಗಳಿವೆ,
6. ಮೂಸಾ, ತಮ್ಮ ಜನಾಂಗದವರೊಡನೆ ಹೇಳಿದರು; ನಿಮಗೆ ಅಲ್ಲಾಹನು ನೀಡಿರುವ ಅನುಗ್ರಹಗಳನ್ನು ನೆನಪಿಸಿಕೊಳ್ಳಿರಿ. (ವಿಶೇಷವಾಗಿ) ಅವನು ನಿಮ್ಮನ್ನು ಫಿರ್‌ಔನನ ಜನಾಂಗದವರಿಂದ ವಿಮೋಚಿಸಿದನು. ಅವರು ನಿಮ್ಮನ್ನು ಬಹಳ ಕೆಟ್ಟದಾಗಿ ಪೀಡಿಸುತ್ತಿದ್ದರು, ನಿಮ್ಮ ಪುತ್ರರ ಕೊರಳು ಕೊಯ್ಯುತ್ತಿದ್ದರು ಮತ್ತು ನಿಮ್ಮ ಪುತ್ರಿಯರನ್ನು ಮಾತ್ರ ಜೀವಂತ ವಿಡುತ್ತಿದ್ದರು. ಅದು ನಿಮ್ಮ ಒಡೆಯನ ಕಡೆಯಿಂದ (ನಿಮ್ಮ ಪಾಲಿಗೆ) ಭಾರೀ ಪರೀಕ್ಷೆಯಾಗಿತ್ತು.
7. ಮತ್ತು ‘‘ನೀವು ಕೃತಜ್ಞತೆ ಸಲ್ಲಿಸಿದರೆ ನಾನು ನಿಮಗೆ ಇನ್ನಷ್ಟು ಹೆಚ್ಚಿಸಿ ಕೊಡುವೆನು ಮತ್ತು ನೀವು ಕೃತಘ್ನರಾದರೆ ಖಂಡಿತವಾಗಿಯೂ ನನ್ನ ಶಿಕ್ಷೆಯು ಬಹಳ ತೀವ್ರ ತರದ್ದಾಗಿದೆ’’ ಎಂದು ನಿಮ್ಮೊಡೆಯನು ನಿಮ್ಮನ್ನು ಎಚ್ಚರಿಸಿದ್ದನು.
8. ಮತ್ತು ಮೂಸಾ ಹೇಳಿದರು; ನೀವು ಮಾತ್ರವಲ್ಲ, ಭೂಮಿಯಲ್ಲಿರುವ ಎಲ್ಲರೂ ಕೃತಘ್ನರಾದರೂ (ನಿಮಗೆ ತಿಳಿದಿರಲಿ;) ಅಲ್ಲಾಹನು ಖಂಡಿತವಾಗಿಯೂ ಎಲ್ಲ ಅಪೇಕ್ಷೆಗಳಿಂದ ಮುಕ್ತ್ತನೂ ಪ್ರಶಂಸಾರ್ಹನೂ ಆಗಿದ್ದಾನೆ.
9. ನಿಮಗೇನು, ನಿಮ್ಮ ಹಿಂದಿನ ನೂಹ್‌ರ ಜನಾಂಗ, ಆದ್ ಹಾಗೂ ಸಮೂದ್ ಜನಾಂಗಗಳು ಮತ್ತು ಅವರ ಅನಂತರದವರ ಸುದ್ದಿ ತಲುಪಿಲ್ಲವೇ? ನಿಜವಾಗಿ ಅವರ ಕುರಿತು (ವಾಸ್ತವವು) ಅಲ್ಲಾಹನ ಹೊರತು ಬೇರಾರಿಗೂ ತಿಳಿದಿಲ್ಲ. ಅವರ (ಕಾಲದ) ದೇವದೂತರು ಸ್ಪಷ್ಟ ಪುರಾವೆಗಳೊಂದಿಗೆ ಅವರ ಬಳಿಗೆ ಬಂದಿದ್ದರು. ಆದರೆ ಅವರು ತಮ್ಮ ಕೈಗಳನ್ನು ಅವರ (ದೂತರ) ಬಾಯಿಗಳಿಗೆ ತಳ್ಳಿದರು ಮತ್ತು ‘‘ಯಾವುದರೊಂದಿಗೆ ನಿಮ್ಮನ್ನು ಕಳಿಸಲಾಗಿದೆಯೋ ಅವನ್ನು ನಾವು ಧಿಕ್ಕರಿಸುತ್ತೇವೆ ಮತ್ತು ಯಾವುದರ ಕಡೆಗೆ ನೀವು ನಮ್ಮನ್ನು ಆಮಂತ್ರಿಸುತ್ತಿರುವಿರೋ ಆ ಕುರಿತು ನಾವು ಘೋರ ಸಂಶಯದಲ್ಲಿದ್ದೇವೆ’’ ಎಂದರು.
10. ಅವರ (ಕಾಲದ) ದೇವದೂತರು, ‘‘ಆಕಾಶಗಳನ್ನು ಮತ್ತು ಭೂಮಿಯನ್ನು ರೂಪಿಸಿದ ಅಲ್ಲಾಹನ ಕುರಿತು ಸಂಶಯವೇ? ಅವನಂತು ನಿಮ್ಮನ್ನು ನಿಮ್ಮ ಪಾಪಗಳಿಂದ ಮುಕ್ತ ಗೊಳಿಸಲಿಕ್ಕಾಗಿ ಮತ್ತು ಒಂದು ನಿರ್ದಿಷ್ಟ ಅವಧಿಯ ತನಕ ನಿಮಗೆ ಕಾಲಾವಕಾಶ ನೀಡಲಿಕ್ಕಾಗಿ ನಿಮ್ಮನ್ನು ಆಮಂತ್ರಿಸುತ್ತಿದ್ದಾನೆ’’ ಎಂದರು. ಅದಕ್ಕವರು ಹೇಳಿದರು; ನೀವು ಕೇವಲ ನಮ್ಮಂತಹ ಮಾನವರು. ನಮ್ಮ ತಂದೆ ತಾತಂದಿರು ಪೂಜಿಸುತ್ತಿದ್ದವುಗಳಿಂದ ನೀವು ನಮ್ಮನ್ನು ತಡೆಯ ಬಯಸುತ್ತೀರಿ. ನೀವೀಗ ನಮ್ಮ ಬಳಿಗೆ ಸ್ಪಷ್ಟವಾದ ಪುರಾವೆಯನ್ನು (ಪವಾಡವನ್ನು) ತನ್ನಿರಿ.
11. ಅವರ (ಕಾಲದ) ದೇವದೂತರು ಅವರೊಡನೆ ಹೇಳಿದರು; ಖಂಡಿತವಾಗಿಯೂ ನಾವು ನಿಮ್ಮಂತಹ ಮಾನವರು, ಆದರೆ ಅಲ್ಲಾಹನು ತನ್ನ ದಾಸರ ಪೈಕಿ ತಾನಿಚ್ಛಿಸಿದವರ ಮೇಲೆ ಉಪಕಾರ ತೋರುತ್ತಾನೆ. ಅಲ್ಲಾಹನ ಅಪ್ಪಣೆ ಇಲ್ಲದೆ ನಿಮ್ಮ ಬಳಿಗೆ ಸ್ಪಷ್ಟವಾದ ಪುರಾವೆಯನ್ನು (ಪವಾಡವನ್ನು) ತರಲು ನಮಗೆ ಸಾಧ್ಯವಿಲ್ಲ. ವಿಶ್ವಾಸಿಗಳು, ಅಲ್ಲಾಹನಲ್ಲಿ ಮಾತ್ರ ಭರವಸೆ ಇಡಬೇಕು.
12. ಇನ್ನು, ನಾವು ಅಲ್ಲಾಹನಲ್ಲಿ ಭರವಸೆ ಯಾಕಿಡಬಾರದು? ನಿಜವಾಗಿ, ನಮಗೆ ನಮ್ಮ ದಾರಿಗಳನ್ನು ತೋರಿಸಿಕೊಟ್ಟವನು ಅವನೇ. ನೀವು ನಮಗೆ ನೀಡುವ ಸಕಲ ಕಿರುಕುಳಗಳನ್ನು ನಾವು ಸಹಿಸಿಕೊಳ್ಳುವೆವು. ಭರವಸೆ ಇಡುವವರೆಲ್ಲಾ ಅಲ್ಲಾಹನಲ್ಲೇ ಭರವಸೆ ಇಡಬೇಕು.
13. ಧಿಕ್ಕಾರಿಗಳು, ತಮ್ಮ (ಕಾಲದ) ದೂತರೊಡನೆ, ‘‘ನಾವು ಖಂಡಿತ ನಿಮ್ಮನ್ನು ನಮ್ಮ ನಾಡಿನಿಂದ ಹೊರಗಟ್ಟುವೆವು. ಅನ್ಯಥಾ ನೀವು ನಮ್ಮ ಸಮಾಜಕ್ಕೆ ಮರಳಿ ಬರಬೇಕು’’ ಎಂದರು. ಆಗ ಅವರೆಡೆಗೆ (ದೂತರೆಡೆಗೆ) ಅವರ ಒಡೆಯನು ಹೀಗೆಂದು ದಿವ್ಯ ಸಂದೇಶವನ್ನು ಕಳಿಸಿದನು; ನಾವು ಅಕ್ರಮಿಗಳನ್ನು ಖಂಡಿತ ನಾಶಮಾಡುವೆವು –
14. ಮತ್ತು ಅವರ ಬಳಿಕ ನಾವು ಭೂಮಿಯಲ್ಲಿ ನಿಮ್ಮನ್ನು ನೆಲೆಸುವೆವು. ಇದು, ನನ್ನೆದುರು ನಿಲ್ಲುವ ಭಯ ಹಾಗೂ ನನ್ನ ಎಚ್ಚರಿಕೆಗಳ ಭಯ ಉಳ್ಳವರಿಗೆ (ಇರುವ ಶುಭವಾರ್ತೆ).
15. ಅವರು ಒಂದು ತೀರ್ಪನ್ನು ಅಪೇಕ್ಷಿಸಿದರು ಮತ್ತು ಪ್ರತಿಯೊಬ್ಬ ಹಠಮಾರಿ, ಅಹಂಕಾರಿಯು ನಾಶವಾದನು.
16. ಅವನ ಮುಂದೆ ನರಕವಿದೆ – (ಅಲ್ಲಿ) ಅವನಿಗೆ ಕೀವು ತುಂಬಿದ ಪಾನೀಯವನ್ನು ಕುಡಿಸಲಾಗುವುದು.
17. ಅವನು ಅದನ್ನು ನುಂಗಲು ಯತ್ನಿಸುವನು. ಆದರೆ ಅದನ್ನು ಗಂಟಲಿಂದ ಕೆಳಗಿಳಿಸಲು ಅವನಿಂದಾಗದು. ಮರಣವು ಎಲ್ಲೆಡೆಯಿಂದಲೂ ಅವನೆಡೆಗೆ ಧಾವಿಸಿ ಬರುವುದು. ಆದರೆ ಅವನು ಸಾಯಲಾರನು. ಭಾರೀ ಘೋರವಾದ ಇನ್ನೊಂದು ಶಿಕ್ಷೆಯನ್ನು ಅವನು ಎದುರಿಸಬೇಕಾಗುವುದು.
18. ತಮ್ಮ ಒಡೆಯನನ್ನು ಧಿಕ್ಕರಿಸಿದವರ ಸ್ಥಿತಿಯು ಹೀಗಿದೆ; ಅವರ ಕರ್ಮಗಳು, ಬಿರುಗಾಳಿ ಬೀಸಿದ ದಿನ ಅದರ ಜೊತೆ ಹಾರಿ ಹೋಗುವ ಬೂದಿಗೆ ಸಮಾನವಾಗಿವೆ. ತಮ್ಮ ಯಾವ ಸಂಪಾದನೆಯ ಮೇಲೂ ಅವರಿಗೆ ಯಾವುದೇ ನಿಯಂತ್ರಣ ಇರಲಾರದು. ಇದುವೇ ದುರ್ಮಾರ್ಗದಲ್ಲಿನ ಬಹುದೂರದ ಹಂತವಾಗಿದೆ.
19. ಅಲ್ಲಾಹನು ಆಕಾಶಗಳನ್ನು ಹಾಗೂ ಭೂಮಿಯನ್ನು ಕರಾರುವಕ್ಕಾಗಿ ಸೃಷ್ಟಿಸಿರುವುದನ್ನು ನೀವು ಕಾಣುತ್ತಿಲ್ಲವೇ,? ಅವನು ಬಯಸಿದರೆ, ನಿಮ್ಮನ್ನು ತೊಲಗಿಸಿ ಹೊಸ ಜೀವ ಜಾತಿಯೊಂದನ್ನು ತರಬಲ್ಲನು.
20. ಅಲ್ಲಾಹನ ಮಟ್ಟಿಗೆ ಅದು ಕಷ್ಟದ ಕೆಲಸವೇನಲ್ಲ.
21. ಅವರೆಲ್ಲರೂ ಅಲ್ಲಾಹನೆದುರು ಹಾಜರಾಗುವರು. (ಆಗ) ದೊಡ್ಡಸ್ತಿಕೆ ತೋರುತ್ತಿದ್ದವರೊಡನೆ ದುರ್ಬಲರು, ‘‘ನಾವು ನಿಮಗೆ ಅಧೀನರಾಗಿದ್ದೆವು. ನೀವೀಗ ನಮ್ಮ ಮೇಲಿಂದ ಅಲ್ಲಾಹನ ಶಿಕ್ಷೆಯನ್ನು ಸ್ವಲ್ಪವಾದರೂ ನಿವಾರಿಸಬಲ್ಲಿರಾ?’’ ಎಂದು ಕೇಳುವರು. ಅವರು ಹೇಳುವರು; ಒಂದುವೇಳೆ ಅಲ್ಲಾಹನು ನಮಗೆ ಸರಿ ದಾರಿಯನ್ನು ತೋರಿದ್ದರೆ ನಾವು ನಿಮಗೆ ಸರಿ ದಾರಿ ತೋರಿಸುತ್ತಿದ್ದೆವು. ಈಗ ನಾವು ರೋದಿಸಿದರೂ ಒಂದೇ, ಸಹಿಸಿಕೊಂಡರೂ ಒಂದೇ. ನಮಗೆ ಉಳಿವಂತೂ ಇಲ್ಲ.
22. (ಅಂತಿಮ ವಿಚಾರಣೆಯ ದಿನ) ಎಲ್ಲವೂ ತೀರ್ಮಾನವಾದ ಬಳಿಕ ಶೈತಾನನು ಹೇಳುವನು; ನಿಮಗೆ ಅಲ್ಲಾಹನು ಮಾಡಿದ ವಾಗ್ದಾನವೇ ಸತ್ಯದ ವಾಗ್ದಾನವಾಗಿತ್ತು. ನಾನೂ ನಿಮಗೆ ವಾಗ್ದಾನ ಮಾಡಿದ್ದೆನು. ಆದರೆ ನಾನು ಅದನ್ನು ಮುರಿದು ಬಿಟ್ಟೆನು. ನನಗೆ ನಿಮ್ಮ ಮೇಲೆ ಯಾವುದೇ ನಿಯಂತ್ರಣವಿರಲಿಲ್ಲ. ನಾನು ನಿಮ್ಮನ್ನು ಆಮಂತ್ರಿಸಿದೆ. ನೀವು ನನ್ನ ಕರೆಗೆ ಓಗೊಟ್ಟಿರಿ. (ಇಂದು) ನನ್ನನ್ನು ದೂಷಿಸಬೇಡಿ. ನೀವು ಸ್ವತಃ ನಿಮ್ಮನ್ನೇ ದೂಷಿಸಿರಿ. (ಇಂದು) ನಿಮ್ಮ ನೋವನ್ನು ನಾನು ನೀಗಿಸಲಾರೆ ಮತ್ತು ನನ್ನ ನೋವನ್ನು ನೀವು ನೀಗಿಸಲಾರಿರಿ. ಈ ಹಿಂದೆ ನೀವು ನನ್ನನ್ನು (ದೇವರ) ಪಾಲುದಾರನಾಗಿಸಿದ್ದನ್ನು ನಾನು ಧಿಕ್ಕರಿಸುತ್ತೇನೆ. ಅಕ್ರಮಿಗಳಿಗೆ ಖಂಡಿತ ಕಠಿಣ ಶಿಕ್ಷೆ ಕಾದಿದೆ.
23. ಸತ್ಯವನ್ನು ನಂಬಿದ್ದವರು ಹಾಗೂ ಸತ್ಕರ್ಮವೆಸಗಿದವರು, ತಳಭಾಗದಲ್ಲಿ ನದಿಗಳು ಹರಿಯುವಂತಹ ಉದ್ಯಾನಗಳೊಳಗೆ ಸೇರಿಸಲ್ಪಡುವರು. ಅಲ್ಲಿ ಅವರು ತಮ್ಮ ಒಡೆಯನ ಅಪ್ಪಣೆಯಂತೆ ಸದಾ ಕಾಲ ಇರುವರು. ಅಲ್ಲಿ ‘ಸಲಾಮ್’ (ಶಾಂತಿ) ಎಂಬುದೇ ಅವರ ಶುಭಾಶಯವಾಗಿರುವುದು.
24. ಅಲ್ಲಾಹನು ಎಂತಹ ಉದಾಹರಣೆ ನೀಡಿರುವನೆಂದು ನೀವು ಕಂಡಿರಾ? ಪಾವನ ವಚನವು, ಕಾಂಡವು ಬಲಿಷ್ಠವಾಗಿರುವ ಹಾಗೂ ಗೆಲ್ಲುಗಳು ಆಕಾಶದ ವರೆಗಿರುವ ಒಂದು ಪಾವನ ಮರದಂತಿದೆ.
25. ಅದು ತನ್ನ ಒಡೆಯನ (ಅಲ್ಲಾಹನ ) ಅಪ್ಪಣೆಯಂತೆ. ಪ್ರತಿಯೊಂದು ಕೊಯ್ಲಿನ ವೇಳೆ ತನ್ನ ಫಲವನ್ನು ನೀಡುತ್ತಲೇ ಇರುತ್ತದೆ. (ಈರೀತಿ) ಅಲ್ಲಾಹನು, ಮಾನವರು ಪಾಠ ಕಲಿಯಬೇಕೆಂದು ಅವರಿಗೆ ಉದಾಹರಣೆಗಳನ್ನು ನೀಡುತ್ತಾನೆ.
26. ಅತ್ತ, ಮಲಿನ ವಚನದ ಸ್ಥಿತಿಯು, ನೆಲದ ಮೇಲಿಂದ ಕೀಳಲಾದ ಮಲಿನ ಗಿಡದಂತಿದೆ. ಅದಕ್ಕೆ ಸ್ಥಿರತೆ ಎಂಬುದಿಲ್ಲ.
27. ಅಲ್ಲಾಹನು ವಿಶ್ವಾಸಿಗಳನ್ನು ಈ ಲೋಕದಲ್ಲೂ ಪರಲೋಕದಲ್ಲೂ ಸ್ಥಿರವಾದ ಮಾತಿನಲ್ಲಿ (ಸನ್ಮಾರ್ಗದಲ್ಲಿ) ಸ್ಥಿರವಾಗಿಡುತ್ತಾನೆ ಮತ್ತು ಅಲ್ಲಾಹನು ಅಕ್ರಮಿಗಳನ್ನು ದಾರಿಗೆಡಿಸಿಬಿಡುತ್ತಾನೆ. ಅಲ್ಲಾಹನು ತಾನಿಚ್ಛಿಸಿದ್ದನ್ನೇ ಮಾಡುತ್ತಾನೆ.
28. ಅಲ್ಲಾಹನ ಅನುಗ್ರಹಗಳಿಗೆ ಪ್ರತಿಯಾಗಿ ಕೃತಘ್ನತೆ ತೋರಿದವರನ್ನು ಹಾಗೂ ತಮ್ಮ ಜನಾಂಗವನ್ನು ವಿನಾಶದ ಮನೆಗೆ ಇಳಿಸಿದವರನ್ನು ನೀವು ಕಂಡಿರಾ?
29. ನರಕ! ಅವರು ಅದರೊಳಗೆ ಪ್ರವೇಶಿಸುವರು ಮತ್ತು ಅದು ತೀರಾ ಕೆಟ್ಟ ನೆಲೆಯಾಗಿದೆ.
30. ಅವರು ಅಲ್ಲಾಹನ ಹಾದಿಯಿಂದ ತಮ್ಮನ್ನು ದೂರಗೊಳಿಸಲಿಕ್ಕಾಗಿ ಅವನಿಗೆ ಪಾಲುದಾರರನ್ನು ನೇಮಿಸಿಕೊಂಡರು. ಹೇಳಿರಿ; ಸದ್ಯ ಸುಖ ಅನುಭವಿಸಿಕೊಳ್ಳಿರಿ. ಆದರೆ ಅಂತಿಮವಾಗಿ ನೀವು ಖಂಡಿತ ಬೆಂಕಿಯ ಕಡೆಗೇ ಮರಳಬೇಕಾಗುವುದು.
31. ಸತ್ಯದಲ್ಲಿ ನಂಬಿಕೆ ಇಟ್ಟಿರುವ ನನ್ನ ದಾಸರೊಡನೆ ಹೇಳಿರಿ; ಯಾವುದೇ ವ್ಯವಹಾರಕ್ಕಾಗಲಿ ಸ್ನೇಹಕ್ಕಾಗಲಿ ಅವಕಾಶವಿಲ್ಲದ ದಿನವು ಬರುವುದಕ್ಕೆ ಮುನ್ನ ಅವರು ನಮಾಝ್ ಅನ್ನು ಪಾಲಿಸಲಿ ಮತ್ತು ನಾವು ಅವರಿಗೆ ಏನನ್ನು ನೀಡಿರುವೆವೋ ಅದರಿಂದ ಗುಪ್ತವಾಗಿಯೂ ಬಹಿರಂಗವಾಗಿಯೂ ಖರ್ಚುಮಾಡಲಿ.
32. ಅಲ್ಲಾಹನೇ, ಆಕಾಶಗಳನ್ನು ಹಾಗೂ ಭೂಮಿಯನ್ನು ಸೃಷ್ಟಿಸಿದವನು, ಆಕಾಶದಿಂದ ನೀರನ್ನು ಸುರಿಸಿದವನು, ಅದರ ಮೂಲಕ ನಿಮಗೆ ಆಹಾರವಾಗಿ ಬೆಳೆಗಳನ್ನು ಬೆಳೆಸಿದವನು ಮತ್ತು ತನ್ನ ಆದೇಶ ಪ್ರಕಾರ ಕಡಲಲ್ಲಿ ಚಲಿಸುವಂತೆ ಹಡಗನ್ನು ನಿಮಗೆ ಅಧೀನಗೊಳಿಸಿದವನು ಮತ್ತು (ಅವನೇ) ನದಿಗಳನ್ನು ನಿಮಗೆ ಅಧೀನಗೊಳಿಸಿದವನು.
33. (ಅವನೇ) ನಿರ್ದಿಷ್ಟ ಕಕ್ಷೆಯಲ್ಲಿ ಚಲಿಸುವ ಸೂರ್ಯ ಮತ್ತು ಚಂದ್ರರನ್ನು ನಿಮಗೆ ಅಧೀನಗೊಳಿಸಿದವನು ಹಾಗೂ ರಾತ್ರಿ ಮತ್ತು ಹಗಲನ್ನು ನಿಮಗೆ ಅಧೀನಗೊಳಿಸಿದವನು.
34. (ಅವನೇ) ನೀವು ಕೇಳಿದ ಎಲ್ಲವನ್ನೂ ನಿಮಗೆ ನೀಡಿದವನು. ನೀವು ಅಲ್ಲಾಹನ ಅನುಗ್ರಹಗಳನ್ನು ಎಣಿಸಲಾರಂಭಿಸಿದರೆ ಅದನ್ನು ಪೂರ್ತಿಗೊಳಿಸಲಾರಿರಿ. ಖಂಡಿತವಾಗಿಯೂ ಮಾನವನು ಮಹಾ ಅಕ್ರಮಿ ಹಾಗೂ ಕೃತಘ್ನನಾಗಿದ್ದಾನೆ.
35. ಇಬ್ರಾಹೀಮರು ಹೇಳಿದ್ದರು; ನನ್ನೊಡೆಯಾ, ಈ ನಾಡನ್ನು ಶಾಂತಿಯ ನಾಡಾಗಿ ಮಾಡು ಹಾಗೂ ನನ್ನನ್ನು ಮತ್ತು ನನ್ನ ಸಂತತಿಯನ್ನು ಮೂರ್ತಿ ಪೂಜೆಯಿಂದ ದೂರವಿಡು.
36. ನನ್ನೊಡೆಯಾ, ಖಂಡಿತವಾಗಿಯೂ ಅವರು ಬಹಳಷ್ಟು ಮಾನವರನ್ನು ದಾರಿಗೆಡಿಸಿದ್ದಾರೆ. ನನ್ನನ್ನು ಅನುಸರಿಸಿದವನು ಖಂಡಿತ ನನ್ನವನು. ಇನ್ನು, ನನಗೆ ಅವಿಧೇಯನಾದವನು – ನೀನು ಖಂಡಿತವಾಗಿಯೂ ಕ್ಷಮಿಸುವವನು ಮತ್ತು ಕರುಣಾಳುವಾಗಿರುವೆ.
37. ನಮ್ಮೊಡೆಯಾ, ನಾನು ನನ್ನ ಮಕ್ಕಳನ್ನು ನಿನ್ನ ಪವಿತ್ರ ಭವನದ ಬಳಿ, ಬೆಳೆ ಇಲ್ಲದ ಬಯಲಲ್ಲಿ ನೆಲೆಸುತ್ತಿದ್ದೇನೆ. ನಮ್ಮೊಡೆಯಾ, ಅವರು ನಮಾಝ್‌ಅನ್ನು ಪಾಲಿಸಬೇಕೆಂದು (ಹೀಗೆ ಮಾಡಿದ್ದೇನೆ). ಅವರು ಕೃತಜ್ಞರಾಗಲೆಂದು, ನೀನು, ಜನರ ಮನಗಳು ಅವರೆಡೆಗೆ ಒಲಿಯುವಂತೆ ಮಾಡು ಮತ್ತು ಅವರಿಗೆ ಫಲಗಳ ಆಹಾರವನ್ನು ಒದಗಿಸು.
38. ನಮ್ಮೊಡೆಯಾ, ಖಂಡಿತವಾಗಿಯೂ ನಾವು ಬಚ್ಚಿಡುವ ಮತ್ತು ನಾವು ಬಹಿರಂಗಗೊಳಿಸುವ ಎಲ್ಲವನ್ನೂ ನೀನು ಬಲ್ಲೆ. ಭೂಮಿಯಲ್ಲಾಗಲಿ ಆಕಾಶದಲ್ಲಾಗಲಿ ಯಾವ ವಸ್ತುವೂ ಅಲ್ಲಾಹನಿಂದ ಅಡಗಿರುವುದಿಲ್ಲ.
39. ನನ್ನ ಮುದಿ ವಯಸ್ಸಿನಲ್ಲಿ ನನಗೆ ಇಸ್ಮಾಈಲ್ ಮತ್ತು ಇಸ್ಹಾಕ್‌ರನ್ನು ದಯಪಾಲಿಸಿದ ಅಲ್ಲಾಹನಿಗೆ ಎಲ್ಲ ಪ್ರಶಂಸೆಗಳು. ಖಂಡಿತವಾಗಿಯೂ ನನ್ನ ಒಡೆಯನು ಪ್ರಾರ್ಥನೆಯನ್ನು ಕೇಳುವವನಾಗಿದ್ದಾನೆ.
40. ನನ್ನೊಡೆಯಾ, ನನ್ನನ್ನು ಹಾಗೂ ನನ್ನ ಸಂತತಿಗಳನ್ನು ನಮಾಝ್‌ನ ಪಾಲಕರಾಗಿ ಮಾಡು. ಮತ್ತು ನಮ್ಮೊಡೆಯಾ, ಪ್ರಾರ್ಥನೆಯನ್ನು ಸ್ವೀಕರಿಸು.
41. ನಮ್ಮೊಡೆಯಾ, ವಿಚಾರಣೆಯ ದಿನ ನನ್ನನ್ನು, ನನ್ನ ತಂದೆ ತಾಯಿಯನ್ನು ಮತ್ತು ವಿಶ್ವಾಸಿಗಳನ್ನು ಕ್ಷಮಿಸು.
42. ಅಕ್ರಮಿಗಳು ಮಾಡುತ್ತಿರುವ ಕೃತ್ಯಗಳ ಕುರಿತು ಅಲ್ಲಾಹನಿಗೇನೂ ತಿಳಿದಿಲ್ಲವೆಂದು ನೀವು ಭಾವಿಸಬೇಡಿ. ನಿಜವಾಗಿ ಅವನು, ಕಣ್ಣುಗಳು ಕೋರೈಸುವ ಒಂದು ದಿನದ ತನಕ ಅವರಿಗೆ ಕಾಲಾವಕಾಶ ನೀಡುತ್ತಿದ್ದಾನೆ.
43. ಅಂದು ಅವರು ತಮ್ಮ ತಲೆಗಳನ್ನು ಮೇಲೆತ್ತಿ ಓಡುತ್ತಿರುವರು, ಅವರ ದೃಷ್ಟಿಗಳು ಅವರೆಡೆಗೆ ಮರಳಲಾರವು ಮತ್ತು ಅವರ ಮನಸ್ಸುಗಳು ತೀರಾ ಹತಾಶವಾಗಿರುವವು.
44. ಅವರ ಮೇಲೆ ಶಿಕ್ಷೆಯು ಬಂದೆರಗುವ ಆ ದಿನದ ಕುರಿತು ಜನರನ್ನು ಎಚ್ಚರಿಸಿರಿ. ಅಂದು ಅಕ್ರಮಿಗಳು ಹೇಳುವರು; ನಮ್ಮೊಡೆಯಾ, ನಮಗೆ ಸ್ವಲ್ಪ ಸಮಯದ ಮಟ್ಟಿಗೆ ಕಾಲಾವಕಾಶವನ್ನು ನೀಡು. ನಾವು ನಿನ್ನ ಕರೆಯನ್ನು ಸ್ವೀಕರಿಸುವೆವು ಮತ್ತು ನಿನ್ನ ದೂತರನ್ನು ಅನುಸರಿಸುವೆವು. (ಅವರಿಗೆ ಉತ್ತರಸಿಗುವುದು;) ‘‘ನಿಮಗೆ ಅಂತ್ಯವೇ ಇಲ್ಲವೆಂದು ನೀವು ಈ ಹಿಂದೆ ಆಣೆ ಹಾಕುತ್ತಿರಲಿಲ್ಲವೇ?’’
45. ಸ್ವತಃ ತಮ್ಮ ಮೇಲೆ ಅಕ್ರಮವೆಸಗಿದ್ದವರ ನಿವಾಸಗಳಲ್ಲಿ ನೀವು ವಾಸವಾಗಿದ್ದಿರಿ. ಅವರಿಗೆ ನಾವೇನು ಮಾಡಿದೆವು ಎಂಬುದನ್ನು ನಾವು ನಿಮಗೆ ವಿವರಿಸಿರುವೆವು. ನಾವು(ಅವರನ್ನು) ನಿಮ್ಮ ಪಾಲಿಗೆ ಪಾಠವಾಗಿಸಿದ್ದೆವು.
46. ಅವರು ಸಂಚುಗಳನ್ನು ಹೂಡಿದ್ದರು. ಅವು ಪರ್ವತಗಳನ್ನು ನಡುಗಿಸಬಲ್ಲ ಸಂಚುಗಳಾಗಿದ್ದರೂ, (ಇದೀಗ) ಅವರ ಸಂಚುಗಳೆಲ್ಲಾ ಅಲ್ಲಾಹನ ಮುಂದಿವೆ.
47. ಅಲ್ಲಾಹನು ತನ್ನ ದೂತರಿಗೆ ನೀಡಿದ ವಚನವನ್ನು ಉಲ್ಲಂಘಿಸುವನೆಂದು ನೀವೆಂದೂ ಭಾವಿಸಬೇಡಿ. ಖಂಡಿತವಾಗಿಯೂ ಅಲ್ಲಾಹನು ಭಾರೀ ಬಲಿಷ್ಠ ಪ್ರತೀಕಾರ ತೀರಿಸುವವನಾಗಿದ್ದಾನೆ.
48. ಭೂಮಿಯನ್ನು ಬೇರೊಂದು ಭೂಮಿಯಾಗಿ ಬದಲಿಸಲಾಗುವ ಮತ್ತು ಆಕಾಶಗಳನ್ನು (ಬದಲಿಸಲಾಗುವ) ಆ ದಿನ ಅವರೆಲ್ಲರೂ ಆ ಪ್ರಚಂಡ ಶಕ್ತಿವಂತನಾದ ಏಕಮಾತ್ರ ಅಲ್ಲಾಹನೆಡೆಗೆ ಧಾವಿಸುವರು.
49. ಅಂದು ನೀವು ಕಾಣುವಿರಿ, ಅಪರಾಧಿಗಳನ್ನು ಪರಸ್ಪರರ ಜೊತೆಗೆ, ಸರಪಣಿಗಳಿಂದ ಬಿಗಿದಿಡಲಾಗುವುದು.
50. ಅವರ ಉಡುಗೆಗಳು ಗಂಧಕದ್ದಾಗಿರುವವು ಮತ್ತು ಬೆಂಕಿಯ ಜ್ವಾಲೆಗಳು ಅವರ ಮುಖಗಳನ್ನು ಆವರಿಸಿರುವವು.
51. ಅಲ್ಲಾಹನು ಪ್ರತಿಯೊಬ್ಬ ಜೀವಿಗೂ ಅವನ ಸಂಪಾದನೆಯ ಫಲ ನೀಡಲಿಕ್ಕಾಗಿ (ಹೀಗಾಗುವುದು). ಖಂಡಿತವಾಗಿಯೂ ಅಲ್ಲಾಹನು ಬಹಳ ಕ್ಷಿಪ್ರವಾಗಿ ವಿಚಾರಣೆ ನಡೆಸುವವನಾಗಿದ್ದಾನೆ.
52. ಇದು (ಕುರ್‌ಆನ್) ಎಲ್ಲ ಮಾನವರಿಗಾಗಿ ಇರುವ ಒಂದು ಪ್ರಕಟಣೆಯಾಗಿದೆ. ಈ ಮೂಲಕ ಅವರು ಎಚ್ಚರಗೊಳ್ಳಲಿ ಹಾಗೂ ಅವನೊಬ್ಬನು (ಅಲ್ಲಾಹನು) ಮಾತ್ರ ಪೂಜೆಗೆ ಅರ್ಹನು ಎಂಬುದನ್ನು ಅವರು ಅರಿಯಲಿ ಮತ್ತು ಬುದ್ಧಿಯುಳ್ಳವರು ಪಾಠಕಲಿಯಲಿ ಎಂದು (ಇದನ್ನು ಕಳಿಸಲಾಗಿದೆ).