23. Al Muminun

23. ಅಲ್ ಮೂಮಿನೂನ್ (ವಿಶ್ವಾಸಿಗಳು)

ವಚನಗಳು – 118, ಮಕ್ಕಃ

ಅಲ್ಲಾಹನ ಹೆಸರಿಂದ – ಅವನು ಅಪಾರ ದಯಾಳು, ಕರುಣಾಮಯಿ.

1. ವಿಶ್ವಾಸಿಗಳು ಖಂಡಿತ ವಿಜಯಿಗಳಾದರು.

2. ಅವರು ತಮ್ಮ ನಮಾಝ್‌ಗಳಲ್ಲಿ ಭಯಭಕ್ತಿ ಉಳ್ಳವರಾಗಿರುತ್ತಾರೆ.

3. ಅನಗತ್ಯ ಕಾರ್ಯಗಳಿಂದ ದೂರ ಉಳಿದಿರುತ್ತಾರೆ.

4. ಶುಚಿತ್ವವನ್ನು ಪಾಲಿಸುತ್ತಾರೆ.

5. ತಮ್ಮ ಮಾನವನ್ನು ಕಾಪಾಡಿಕೊಂಡಿರುತ್ತಾರೆ.

6. ತಮ್ಮ ಪತ್ನಿಯರು ಮತ್ತು ದಾಸಿಯರ ವಿಷಯದಲ್ಲಿ ಮಾತ್ರ ಅವರು ನಿಂದನೀಯರಲ್ಲ.

7. ಅದರಾಚೆಗೆ ಏನನ್ನಾದರೂ ಅಪೇಕ್ಷಿಸುವವರೇ ಅತಿಕ್ರಮಿಗಳು.

8. ಅವರು (ವಿಜಯಿ ವಿಶ್ವಾಸಿಗಳು) ತಮ್ಮ ಮೇಲಿಡಲಾದ ನಂಬಿಕೆಯನ್ನು ಉಳಿಸಿಕೊಳ್ಳುವವರು ಹಾಗೂ ತಾವು ಮಾಡಿದ ಒಪ್ಪಂದವನ್ನು ಪಾಲಿಸುವವರಾಗಿರುತ್ತಾರೆ.

9. ಅವರು ತಮ್ಮ ನಮಾಝ್‌ಗಳನ್ನು ಕಾಪಾಡುತ್ತಾರೆ.

10. ಅವರೇ ಉತ್ತರಾಧಿಕಾರಿಗಳು.

11. ಅವರು ಫಿರ್‌ದೌಸ್‌ನ (ಸ್ವರ್ಗದ) ಉತ್ತರಾಧಿಕಾರಿಗಳಾಗುವರು ಮತ್ತು ಅದರಲ್ಲಿ ಸದಾಕಾಲ ಇರುವರು.

12. ನಾವು ಮನುಷ್ಯನನ್ನು ಮಣ್ಣಿನ ಸತ್ವದಿಂದ ಸೃಷ್ಟಿಸಿದೆವು.

13. ಆ ಬಳಿಕ ನಾವು ಅವನನ್ನು ವೀರ್ಯದ ರೂಪದಲ್ಲಿ ಒಂದು ಸ್ಥಿರವಾದ ಸ್ಥಾನದಲ್ಲಿ ನೆಲೆಸಿದೆವು.

14. ತರುವಾಯ ನಾವು ವೀರ್ಯವನ್ನು ರಕ್ತದ ಪಿಂಡವಾಗಿಸಿದೆವು ಮತ್ತು ಆ ರಕ್ತದ ಪಿಂಡವನ್ನು ಮಾಂಸಪಿಂಡವಾಗಿಸಿದೆವು ಮತ್ತು ಆ ಮಾಂಸಪಿಂಡದಿಂದ ಎಲುಬುಗಳನ್ನು ಸೃಷ್ಟಿಸಿದೆವು ಮತ್ತು ಎಲುಬುಗಳಿಗೆ ಮಾಂಸದ ಉಡುಗೆಯನ್ನು ತೊಡಿಸಿದೆವು. ಅನಂತರ ನಾವು ಆತನನ್ನು ಒಂದು ಹೊಸ ರೂಪದಲ್ಲಿ ಹುಟ್ಟಿಸಿದೆವು. ಅಲ್ಲಾಹನು ಸಮೃದ್ಧನು ಮತ್ತು ಅವನು ಅತ್ಯುತ್ತಮ ಸೃಷ್ಟಿಕರ್ತನು.

15. ಇದಾದ ಬಳಿಕ ನೀವು ಖಂಡಿತ ಸಾಯುವಿರಿ.

16. ಮತ್ತೆ ಪುನರುತ್ಥಾನ ದಿನ ನಿಮ್ಮನ್ನು ಖಂಡಿತ ಜೀವಂತಗೊಳಿಸಿ ಎಬ್ಬಿಸಲಾಗುವುದು.

17. ನಿಮ್ಮ ಮೇಲೆ ನಾವು ಏಳು ದಾರಿಗಳನ್ನು ನಿರ್ಮಿಸಿರುವೆವು. ಸೃಷ್ಟಿಗಳ ಕುರಿತು ನಾವೆಂದೂ ಅಜಾಗೃತರಾಗಿರಲಿಲ್ಲ.

18. ಮತ್ತು ನಾವು ಆಕಾಶದಿಂದ ನಿರ್ದಿಷ್ಟ ಪ್ರಮಾಣದಲ್ಲಿ ನೀರನ್ನು ಇಳಿಸುವೆವು ಹಾಗೂ ಅದನ್ನು ಭೂಮಿಯಲ್ಲಿ ಉಳಿಸುವೆವು. ಅದನ್ನು ತೊಲಗಿಸುವುದಕ್ಕೂ ನಾವು ಶಕ್ತರಾಗಿದ್ದೇವೆ.

19. ಅದರ (ನೀರಿನ) ಮೂಲಕ ನಾವು ನಿಮಗಾಗಿ ಖರ್ಜೂರ ಹಾಗೂ ದ್ರಾಕ್ಷಿಯ ತೋಟಗಳನ್ನು ಬೆಳೆಸುತ್ತೇವೆ. ಅದರಿಂದ ಇನ್ನೂ ಅನೇಕ ಫಲಗಳು ಬೆಳೆಯುತ್ತವೆ ಮತ್ತು ನೀವು ಅವುಗಳನ್ನು ತಿನ್ನುತ್ತೀರಿ.

20. ಇನ್ನು, ಸಿನಾಯ್ ಪರ್ವತದಲ್ಲಿ ಹುಟ್ಟುವ (ಝೈತೂನ್) ಮರವು, ತೈಲದೊಂದಿಗೆ ಹಾಗೂ ತಿನ್ನುವವರಿಗಾಗಿ, ಸ್ವಾದಿಷ್ಟ ಖಾದ್ಯಗಳೊಂದಿಗೆ ಬೆಳೆಯುತ್ತದೆ.

21. ಜಾನುವಾರುಗಳಲ್ಲೂ ನಿಮಗೆ ಖಂಡಿತ ಪಾಠವಿದೆ. ಅವುಗಳ ಹೊಟ್ಟೆಯಲ್ಲಿರುವುದನ್ನು (ಹಾಲನ್ನು) ನಾವು ನಿಮಗೆ ಕುಡಿಸುತ್ತೇವೆ. ಅವುಗಳಲ್ಲಿ ನಿಮಗೆ (ಇತರ) ಹಲವಾರು ಪ್ರಯೋಜನಗಳಿವೆ ಮತ್ತು ಅವುಗಳಲ್ಲಿ (ಕೆಲವನ್ನು) ನೀವು ತಿನ್ನುತ್ತೀರಿ.

22. ಅವುಗಳ ಮೇಲೂ ಹಡಗುಗಳಲ್ಲೂ ನೀವು ಪ್ರಯಾಣಿಸುತ್ತೀರಿ.

23. ಈ ಹಿಂದೆ ನಾವು ನೂಹ್‌ರನ್ನು ಅವರ ಜನಾಂಗದವರೆಡೆಗೆ ರವಾನಿಸಿದ್ದೆವು. ‘‘ನನ್ನ ಜನಾಂಗದವರೇ, ನೀವು ಅಲ್ಲಾಹನನ್ನು ಮಾತ್ರ ಆರಾಧಿಸಿರಿ. ಅವನ ಹೊರತು ನಿಮಗೆ ಬೇರೆ ದೇವರಿಲ್ಲ. ನೀವೇನು ಅಂಜುವುದಿಲ್ಲವೇ?’’ ಎಂದು ಅವರು ಉಪದೇಶಿಸಿದರು.

24. ಅವರ ಜನಾಂಗದಲ್ಲಿದ್ದ ಕೆಲವು ಧಿಕ್ಕಾರಿ ನಾಯಕರು ಹೇಳಿದರು; ಅವನು ಕೇವಲ ಒಬ್ಬ ಮನುಷ್ಯ. ಅವನು ನಿಮಗಿಂತ ಹಿರಿಮೆ ಉಳ್ಳವನಾಗಬಯಸುತ್ತಾನೆ. ಅಲ್ಲಾಹನು ಬಯಸಿದ್ದರೆ (ದೂತರಾಗಿ) ಮಲಕ್‌ಗಳನ್ನು ಕಳುಹಿಸುತ್ತಿದ್ದನು. ನಾವು ನಮ್ಮ ಪೂರ್ವಜರಿಂದ ಇಂತಹದೇನನ್ನೂ ಕೇಳಿಲ್ಲ.

25. ಅವನು ಖಂಡಿತ ಹುಚ್ಚು ಹಿಡಿದ ವ್ಯಕ್ತಿ. ನೀವು ಸ್ವಲ್ಪಕಾಲ ಕಾದು ನೋಡಿರಿ.

26. ಅವರು (ನೂಹ್) ಹೇಳಿದರು; ನನ್ನೊಡೆಯಾ, ಅವರು ನನ್ನನ್ನು ತಿರಸ್ಕರಿಸಿದ್ದಾರೆ. ಈಗ ನೀನೇ ನನಗೆ ನೆರವಾಗು.

27. ಆಗ ನಾವು ಅವರೆಡೆಗೆ (ಹೀಗೆಂದು) ದಿವ್ಯವಾಣಿಯನ್ನು ಕಳಿಸಿದೆವು; ನೀವು ನಮ್ಮ ಮೇಲ್ವಿಚಾರಣೆಯಲ್ಲಿ ಹಾಗೂ ನಮ್ಮ ದಿವ್ಯವಾಣಿಯನುಸಾರ ಒಂದು ಹಡಗನ್ನು ನಿರ್ಮಿಸಿರಿ. ತರುವಾಯ, ನಮ್ಮ ಆದೇಶ ಬಂದಾಗ ಹಾಗೂ ಚಿಲುಮೆಯು ಉಕ್ಕಿ ಹರಿದಾಗ, ಎಲ್ಲ ಜಾತಿಯ ಜೋಡಿ (ಗಂಡು ಹೆಣ್ಣು) ಗಳನ್ನು ಮತ್ತು ನಿಮ್ಮ ಮನೆಯವರ ಪೈಕಿ, ಈಗಾಗಲೇ ತೀರ್ಮಾನವಾಗಿರುವವರ ಹೊರತು, ಇತರರನ್ನು ಅದರಲ್ಲಿ ಕೂರಿಸಿರಿ. ಮತ್ತು ನೀವು ಅಕ್ರಮಿಗಳ ಕುರಿತು ನನ್ನೊಡನೆ ಮಾತನಾಡಬೇಡಿ. ಅವರನ್ನು ಖಂಡಿತ ಮುಳುಗಿಸಲಾಗುವುದು.

28. ಹೀಗೆ ನೀವು ಮತ್ತು ನಿಮ್ಮ ಜೊತೆಗಿರುವವರು, ಹಡಗನ್ನೇರಿದ ಬಳಿಕ, ‘‘ಹೊಗಳಿಕೆಗಳೆಲ್ಲವೂ ನಮ್ಮನ್ನು ಅಕ್ರಮಿಗಳಿಂದ ರಕ್ಷಿಸಿದ ಅಲ್ಲಾಹನಿಗೆ ಸಲ್ಲಲಿ’’ ಎಂದು ಹೇಳಿರಿ.

29. ಮತ್ತು ಹೇಳಿರಿ; ‘‘ನನ್ನೊಡೆಯಾ, ನನ್ನನ್ನು ಒಂದು ಸಮೃದ್ಧ ನೆಲೆಗೆ ತಲುಪಿಸು. ನೀನೇ ಅತ್ಯುತ್ತಮ ನೆಲೆಯನ್ನು ಒದಗಿಸುವವನು’’.

30. ಇದರಲ್ಲಿ ಖಂಡಿತವಾಗಿಯೂ ಪಾಠಗಳಿವೆ ಮತ್ತು ನಾವು ಪರೀಕ್ಷಿಸುತ್ತಲೇ ಇರುತ್ತೇವೆ.

31. ಮುಂದೆ ನಾವು ಅವರ ಬಳಿಕ ಬೇರೊಂದು ಪೀಳಿಗೆಯನ್ನು ಸೃಷ್ಟಿಸಿದೆವು.

32. ಮತ್ತು ನಾವು ಅವರೆಡೆಗೆ, ಅವರೊಳಗಿಂದಲೇ, ‘‘ಅಲ್ಲಾಹನನ್ನು ಮಾತ್ರ ಆರಾಧಿಸಿರಿ, ನಿಮಗೆ ಅವನ ಹೊರತು ಬೇರೆ ದೇವರಿಲ್ಲ. ನೀವೇನು ಅಂಜುವುದಿಲ್ಲವೇ?‘‘ (ಎಂದು ಸಾರುವ) ದೂತರನ್ನು ಕಳಿಸಿದೆವು.

33. ಅವರ ಜನಾಂಗದಲ್ಲಿನ, ಧಿಕ್ಕಾರಿಗಳಾಗಿದ್ದ ನಾಯಕರು, ಪರಲೋಕದ ಭೇಟಿಯನ್ನು ಸುಳ್ಳೆಂದು ತಿರಸ್ಕರಿಸಿದ್ದರು. ಮತ್ತು ಇಹ ಜೀವನದಲ್ಲಿ ನಾವು ಅವರಿಗೆ ಭಾರೀ ಸಂಪನ್ನತೆಯನ್ನು ನೀಡಿದ್ದೆವು. (ಅವರು) ಹೇಳಿದರು; ಅವನು ಕೇವಲ ನಿಮ್ಮಂತಹ ಒಬ್ಬ ಮನುಷ್ಯ. ನೀವು ತಿನ್ನುವಂತಹದ್ದನ್ನೇ ಅವನೂ ತಿನ್ನುತ್ತಾನೆ ಮತ್ತು ನೀವು ಕುಡಿಯುವಂತಹದ್ದನ್ನೇ ಅವನೂ ಕುಡಿಯುತ್ತಾನೆ.

34. (ಹೀಗಿರುತ್ತಾ) ನೀವು ನಿಮ್ಮಂತಹ ಒಬ್ಬ ಮಾನವನನ್ನು ಅನುಸರಿಸಿದರೆ ಖಂಡಿತ ನಷ್ಟ ಅನುಭವಿಸುವಿರಿ.

35. ಅವನೇನು, ನೀವು ಸತ್ತು ಮಣ್ಣಾಗಿಯೂ ಎಲುಬುಗಳಾಗಿಯೂ ಮಾರ್ಪಟ್ಟ ಬಳಿಕ ನಿಮ್ಮನ್ನು ಮತ್ತೆ ಜೀವಂತಗೊಳಿಸಲಾಗುವುದೆಂದು ಹೇಳುತ್ತಿದ್ದಾನೆಯೇ?

36. ನಿಮಗೆ ನೀಡಲಾಗುತ್ತಿರುವ ಈ ಆಶ್ವಾಸನೆ ತೀರಾ ಅಸಂಭವನೀಯ!

37. ನಮ್ಮ ಬದುಕು ಏನಿದ್ದರೂ ಈ ಲೋಕದ್ದು ಮಾತ್ರ. ನಾವು (ಇಲ್ಲೇ) ಸಾಯುತ್ತೇವೆ ಮತ್ತು (ಇಲ್ಲೇ) ಬದುಕುತ್ತೇವೆ. ನಮ್ಮನ್ನು ಮತ್ತೆ ಜೀವಂತಗೊಳಿಸಲಾಗುವುದಿಲ್ಲ.

38. ಈ ವ್ಯಕ್ತಿ ಅಲ್ಲಾಹನ ಮೇಲೆ ಸುಳ್ಳಾರೋಪ ಹೊರಿಸುತ್ತಿದ್ದಾನೆ. ನಾವಂತು ಅವನನ್ನು ನಂಬುವವರಲ್ಲ.

39. ಅವರು (ದೂತರು) ಹೇಳಿದರು; ನನ್ನೊಡೆಯಾ, ನನಗೆ ನೆರವಾಗು. ಅವರು ನನ್ನನ್ನು ತಿರಸ್ಕರಿಸುತ್ತಿದ್ದಾರೆ.

40. ಅವನು (ಅಲ್ಲಾಹನು) ಹೇಳಿದನು; ಬಹಳ ಅಲ್ಪಾವಧಿಯಲ್ಲೇ ಅವರು ಪರಿತಪಿಸಲಿದ್ದಾರೆ.

41. ಕೊನೆಗೆ ನ್ಯಾಯ ಪ್ರಕಾರ ಒಂದು ಹಠಾತ್ ಸ್ಫೋಟವು ಅವರನ್ನು ಆವರಿಸಿಕೊಂಡಿತು. ಮತ್ತು ನಾವು ಅವರನ್ನು ಕೇವಲ ಕಸಗಳಾಗಿಸಿಬಿಟ್ಟೆವು. ಅಕ್ರಮಿ ಜನಾಂಗಗಳಿಗೆ ವಿನಾಶ ಕಾದಿದೆ.

42. ಮುಂದೆ, ಅವರ ಬಳಿಕ ನಾವು ಇತರ ಪೀಳಿಗೆಗಳನ್ನು ಸೃಷ್ಟಿಸಿದೆವು.

43. ಯಾವುದೇ ಸಮುದಾಯವು ತನ್ನ ನಿರ್ದಿಷ್ಟ ಅವಧಿಗಿಂತ ಮುಂಚೆ ಹೊರಟು ಹೋದದ್ದೂ ಇಲ್ಲ. ಆ ಬಳಿಕ ಉಳಿದದ್ದೂ ಇಲ್ಲ.

44. ತರುವಾಯ ನಾವು ಬೆನ್ನು ಬೆನ್ನಿಗೇ ನಮ್ಮ ದೂತರನ್ನು ಕಳಿಸಿದೆವು. ಪ್ರತಿಯೊಂದು ಸಮುದಾಯದವರೂ ತಮ್ಮ ಬಳಿಗೆ ತಮ್ಮ ದೂತನು ಬಂದಾಗ ಆತನನ್ನು ತಿರಸ್ಕರಿಸಿದರು. ನಾವು ಅವರನ್ನು ಒಬ್ಬರ ಹಿಂದೆ ಇನ್ನೊಬ್ಬರಂತೆ ನಿಲ್ಲಿಸಿದೆವು ಮತ್ತು ನಾವು ಅವರೆಲ್ಲರನ್ನೂ ಕೇವಲ ಕತೆಗಳಾಗಿ ಮಾರ್ಪಡಿಸಿ ಬಿಟ್ಟೆವು. (ಸತ್ಯವನ್ನು) ನಂಬದ ಜನಾಂಗಗಳಿಗೆ ವಿನಾಶ ಕಾದಿದೆ.

45. ಮುಂದೆ ನಾವು ಮೂಸಾ ಮತ್ತು ಅವರ ಸಹೋದರ ಹಾರೂನರನ್ನು ನಮ್ಮ ವಚನಗಳೊಂದಿಗೆ ಹಾಗೂ ಸ್ಪಷ್ಟ ಪುರಾವೆಗಳೊಂದಿಗೆ ಕಳಿಸಿದೆವು –

46. – ಫಿರ್‌ಔನ್ ಮತ್ತು ಅವನ ಅಧಿಕಾರಿಗಳ ಕಡೆಗೆ. ಆದರೆ ಅವರು ದೊಡ್ಡಸ್ತಿಕೆ ತೋರಿದರು. ಅವರು ಮಹಾ ಅಹಂಕಾರಿಗಳಾಗಿದ್ದರು.

47. ಅವರು ಹೇಳಿದರು; ನಾವೇನು, ನಮ್ಮಂತಹ ಇಬ್ಬರು ವ್ಯಕ್ತಿಗಳನ್ನು ನಂಬಬೇಕೇ? ಅವರ ಜನಾಂಗದವರಂತು ನಮ್ಮ ದಾಸರಾಗಿದ್ದಾರೆ.

48. ಅವರು ಅವರಿಬ್ಬರನ್ನೂ ತಿರಸ್ಕರಿಸಿದರು. ಕೊನೆಗೆ ಅವರನ್ನು ನಾಶ ಮಾಡಲಾಯಿತು.

49. ನಿಜವಾಗಿ, ಆ ಜನರು ಸರಿದಾರಿಯನ್ನು ಕಾಣಲೆಂದು ನಾವು, ಮೂಸಾರಿಗೆ ಗ್ರಂಥವನ್ನು ನೀಡಿದ್ದೆವು.

50. ಮುಂದೆ, ನಾವು ಮರ್ಯಮರ ಪುತ್ರ (ಈಸಾ)ರನ್ನು ಹಾಗೂ ಅವರ (ಈಸಾರ) ಮಾತೆಯನ್ನು (ಮರ್ಯಮರನ್ನು) ಪುರಾವೆಯಾಗಿಸಿದೆವು ಮತ್ತು ನಾವು ಚಿಲುಮೆಗಳಿದ್ದ ಎತ್ತರದ ನೆಲೆಯೊಂದರಲ್ಲಿ ಅವರಿಗೆ ಆಶ್ರಯ ನೀಡಿದೆವು.

51. ದೂತರೇ, ಶುದ್ಧವಾದುದನ್ನೇ ತಿನ್ನಿರಿ ಮತ್ತು ಸತ್ಕರ್ಮಗಳನ್ನು ಮಾಡಿರಿ. ನೀವು ಮಾಡುತ್ತಿರುವ ಎಲ್ಲವನ್ನೂ ನಾನು ಖಂಡಿತ ಬಲ್ಲೆನು.

52. ಖಂಡಿವಾಗಿಯೂ ಈ ನಿಮ್ಮ (ಮಾನವ) ಸಮುದಾಯವು ಒಂದೇ ಸಮುದಾಯವಾಗಿದೆ ಮತ್ತು ನಾನೇ ನಿಮ್ಮ ಒಡೆಯನು. ನೀವು ನನಗೇ ಅಂಜಿರಿ.

53. ತರುವಾಯ ಅವರು ತಮ್ಮ ನಡುವೆ ತಮ್ಮ ಧರ್ಮವನ್ನು ಛಿದ್ರಗೊಳಿಸಿ ಬಿಟ್ಟರು. ಪ್ರತಿಯೊಂದು ಗುಂಪಿನವರೂ ತಮ್ಮ ಬಳಿ ಏನಿದೆಯೋ ಅದರಲ್ಲೇ ಸಂತುಷ್ಟರಾಗಿದ್ದಾರೆ.

54. ಒಂದು ನಿರ್ದಿಷ್ಟ ಸಮಯದ ತನಕ ನೀವು ಅವರನ್ನು ಅವರದೇ ಭ್ರಮೆಯಲ್ಲಿರಲು ಬಿಟ್ಟು ಬಿಡಿರಿ.

55. ಸಂಪತ್ತು ಮತ್ತು ಸಂತಾನಗಳ ಮೂಲಕ ನಾವು ಅವರಿಗೆ ನೀಡುತ್ತಿರುವ ನೆರವಿನ ಕುರಿತು ಅವರು ಏನೆಂದು ಭಾವಿಸಿದ್ದಾರೆ?

56. ಅವರಿಗೆ ಹಿತವನ್ನು ಮಾಡಲು ನಾವು ಆತುರಪಡುತ್ತಿದ್ದೇವೆಂದೇ? ನಿಜವಾಗಿ ಅವರಿಗೆ ಅರಿವಿಲ್ಲ.

57. ಅವರು (ಹಿತಕ್ಕೆ ಅರ್ಹರಾದವರು) ತಮ್ಮ ಒಡೆಯನ ಭಯದಿಂದ ಸದಾ ವಿನಮ್ರರಾಗಿರುತ್ತಾರೆ.

58. ಮತ್ತು ಅವರು ತಮ್ಮ ಒಡೆಯನ ವಚನಗಳನ್ನು ನಂಬುತ್ತಾರೆ.

59. ಅವರು ತಮ್ಮ ಒಡೆಯನ ಜೊತೆ ಯಾರನ್ನೂ ಪಾಲುಗೊಳಿಸುವುದಿಲ್ಲ.

60. ಅವರು (ದಾನವಾಗಿ) ತಾವು ಕೊಡುವುದನ್ನು ಕೊಡುತ್ತಲೇ ಇರುತ್ತಾರೆ ಮತ್ತು ಇಷ್ಟಾಗಿಯೂ ತಾವು ತಮ್ಮ ಒಡೆಯನ ಕಡೆಗೆ ಮರಳಲಿಕ್ಕಿದೆ ಎಂದು ಅವರ ಮನಸ್ಸುಗಳು ಅಂಜುತ್ತಿರುತ್ತವೆ.

61. ಅವರೇ, ಸತ್ಕಾರ್ಯಗಳನ್ನು ಮಾಡಲು ಆತುರ ಪಡುವವರು ಮತ್ತು ಅವುಗಳೆಡೆಗೆ ಸ್ಪರ್ಧಾತ್ಮಕವಾಗಿ ಧಾವಿಸಿ ಹೋಗುವವರು.

62. ನಾವಂತು ಯಾವ ಜೀವದ ಮೇಲೂ ಅದರ ಸಾಮರ್ಥ್ಯಕ್ಕಿಂತ ಹೆಚ್ಚಿನ ಹೊಣೆಯನ್ನು ಹೊರಿಸುವುದಿಲ್ಲ ಮತ್ತು ಸತ್ಯವನ್ನು ಮಾತ್ರ ಹೇಳುವ ಒಂದು ಗ್ರಂಥವು ನಮ್ಮ ಬಳಿ ಇದೆ. (ಆದ್ದರಿಂದ) ಅವರ ಮೇಲೆ ಸ್ವಲ್ಪವೂ ಅನ್ಯಾಯವಾಗದು.

63. ನಿಜವಾಗಿ, ಅವರ (ಧಿಕ್ಕಾರಿಗಳ) ಮನಸ್ಸುಗಳು ಈ (ಸತ್ಯದ) ಕುರಿತು ನಿರಾಸಕ್ತವಾಗಿವೆ. ಇದಲ್ಲದೆ ಅವರು ಇನ್ನೂ ಹಲವು (ದುಷ್ಟ) ಕೃತ್ಯಗಳನ್ನು ಮಾಡುತ್ತಿದ್ದಾರೆ.

64. ಕೊನೆಗೆ, ನಾವು ಅವರಲ್ಲಿನ ಸಂಪನ್ನ ಜನರನ್ನು ಹಿಡಿದು ಶಿಕ್ಷಿಸಿದಾಗ ಅವರು ಮೊರೆ ಇಡಲಾರಂಭಿಸುವರು.

65. (ಆಗ ಅವರೊಡನೆ ಹೇಳಲಾಗುವುದು;) ಇಂದು ನೀವು ಮೊರೆ ಇಡಬೇಡಿ. ನಮ್ಮ ಕಡೆಯಿಂದ ನಿಮಗೆ ಖಂಡಿತ ಯಾವ ನೆರವೂ ಸಿಗದು.

66. ನಮ್ಮ ವಚನಗಳನ್ನು ನಿಮಗೆ ಓದಿ ಕೇಳಿಸಲಾಗುತ್ತಿತ್ತು. ಆಗ ನೀವು ಬೆನ್ನು ತಿರುಗಿಸಿ ಹೊರಟು ಬಿಡುತ್ತಿದ್ದಿರಿ.

67. ಆ ಕುರಿತು ನೀವು ಅಹಂಕಾರ ತೋರುತ್ತಿದ್ದಿರಿ ಮತ್ತು (ಸುಳ್ಳು) ಕತೆಗಳನ್ನು ಕಟ್ಟಿ ತೀರಾ ಕೆಟ್ಟ ಮಾತುಗಳನ್ನು ಆಡುತ್ತಿದ್ದಿರಿ.

68. ಅವರೇನು ಈ ಸಂದೇಶದ ಕುರಿತು ಚಿಂತನೆ ನಡೆಸುವುದಿಲ್ಲವೇ? ಅಥವಾ ಅವರ ಪೂರ್ವಜರ ಬಳಿಗೆ ಬಂದಿರದಿದ್ದ ಏನಾದರೂ ಅವರ ಬಳಿಗೆ ಬಂದಿದೆಯೇ?

69. ಅಥವಾ ಅವರೇನು ತಮ್ಮ ದೇವದೂತನನ್ನು ಗುರುತಿಸದ ಕಾರಣ ಆತನನ್ನು ತಿರಸ್ಕರಿಸುತ್ತಿರುವರೇ?

70. ಅಥವಾ, ಆತನಿಗೆ ಹುಚ್ಚು ಹಿಡಿದಿದೆ ಎಂದು ಅವರು ಹೇಳುತ್ತಿದ್ದಾರೆಯೇ? ನಿಜವಾಗಿ ಅವರು (ದೂತರು) ಸತ್ಯದೊಂದಿಗೆ ಅವರ ಬಳಿಗೆ ಬಂದಿದ್ದಾರೆ. ಆದರೆ ಅವರಲ್ಲಿ ಹೆಚ್ಚಿನವರು ಸತ್ಯವನ್ನು ದ್ವೇಷಿಸುತ್ತಾರೆ.

71. ಒಂದು ವೇಳೆ ಸತ್ಯವು ಅವರ ಅಪೇಕ್ಷೆಗಳಿಗೆ ವಿಧೇಯವಾಗಿದ್ದರೆ, ಆಕಾಶಗಳೂ ಭೂಮಿಯೂ, ಅವುಗಳಲ್ಲಿ ಇರುವ ಎಲ್ಲರೂ ವಿನಾಶಕ್ಕೆ ತುತ್ತಾಗಿ ಬಿಡುತ್ತಿದ್ದರು. ನಿಜವಾಗಿ, ನಾವು ಅವರ ಬಳಿಗೆ ಅವರಿಗಾಗಿಯೇ ಇರುವ ಉಪದೇಶವನ್ನು ತಂದಿರುವೆವು. ಆದರೆ ಅವರು ತಮಗಾಗಿಯೇ ಇರುವ ಉಪದೇಶವನ್ನು ಕಡೆಗಣಿಸುತ್ತಿದ್ದಾರೆ.

72. (ದೂತರೇ,) ನೀವೇನು ಅವರೊಡನೆ ಏನಾದರೂ ಪಾವತಿಯನ್ನು ಕೇಳುತ್ತೀರಾ? ನಿಮ್ಮ ಒಡೆಯನ ವೇತನವೇ ನಿಮ್ಮ ಪಾಲಿಗೆ ಉತ್ತಮವಾಗಿದೆ ಮತ್ತು ಅವನು ಅತ್ಯುತ್ತಮ ಅನ್ನದಾತನಾಗಿದ್ದಾನೆ.

73. ನೀವು ಅವರನ್ನು ಸರಿಯಾದ ದಾರಿಯ ಕಡೆಗೆ ಕರೆಯುತ್ತಿರುವಿರಿ.

74. ಪರಲೋಕದಲ್ಲಿ ನಂಬಿಕೆ ಇಲ್ಲದವರು ಖಂಡಿತವಾಗಿಯೂ ನೇರ ಮಾರ್ಗದಿಂದ ದೂರವಿದ್ದಾರೆ.

75. ನಾವು ಅವರ ಮೇಲೆ ಕರುಣೆ ತೋರಿದರೆ ಮತ್ತು ಅವರ ಸಂಕಟವನ್ನು ನಿವಾರಿಸಿದರೆ ಅವರು ತಮ್ಮ ವಿದ್ರೋಹ ಧೋರಣೆಯಲ್ಲಿ ಮತ್ತಷ್ಟು ಸ್ಥಿರಗೊಳ್ಳುವರು ಮತ್ತು (ಸತ್ಯದಿಂದ, ಇನ್ನಷ್ಟು ದೂರ) ಅಲೆದಾಡುವರು.

76. ನಾವು ಶಿಕ್ಷಿಸುವುದಕ್ಕಾಗಿ ಅವರನ್ನು ಹಿಡಿಯುವವರೆಗೂ ಅವರು ವಿನಯ ತೋರಲಿಲ್ಲ ಮತ್ತು ತಮ್ಮ ಒಡೆಯನೆದುರು ಭಕ್ತಿ ಭಾವವನ್ನು ಪ್ರಕಟಿಸಲಿಲ್ಲ.

77. ಕೊನೆಗೆ ನಾವು ಅವರ ಪಾಲಿಗೆ ನಮ್ಮ ಕಠಿಣಶಿಕ್ಷೆಯ ಬಾಗಿಲನ್ನು ತೆರೆದು ಬಿಟ್ಟಾಗ ಅವರು ನಿರಾಶರಾಗಿ ಬಿಡುವರು.

78. ಅವನೇ, ನಿಮಗಾಗಿ ಕಿವಿಗಳನ್ನೂ ಕಣ್ಣುಗಳನ್ನೂ ಮನಸ್ಸುಗಳನ್ನೂ ನಿರ್ಮಿಸಿದವನು. ಆದರೆ ನೀವು ಕೃತಜ್ಞತೆ ಸಲ್ಲಿಸುವುದು ತೀರಾ ಕಡಿಮೆ.

79. ಅವನೇ ನಿಮ್ಮನ್ನು ಭೂಮಿಯಲ್ಲಿ ಹರಡಿ ಬಿಟ್ಟವನು ಮತ್ತು ಅವನ ಬಳಿಯೇ ನಿಮ್ಮನ್ನು ಒಟ್ಟು ಸೇರಿಸಲಾಗುವುದು.

80. ಅವನೇ ಬದುಕಿಸುವವನು ಮತ್ತು ಸಾಯಿಸುವವನು. ಅವನ ಆದೇಶಾನುಸಾರವೇ ಇರುಳು ಹಗಲುಗಳು ಬದಲಾಗುತ್ತಿರುತ್ತವೆ. ನೀವೇನು ಆಲೋಚಿಸುವುದಿಲ್ಲವೇ?

81. ನಿಜವಾಗಿ ಹಿಂದಿನವರು ಹೇಳಿದ್ದನ್ನೇ ಅವರೂ ಹೇಳುತ್ತಿದ್ದಾರೆ.

82. ಅವರು ಹೇಳುತ್ತಾರೆ; ನಾವು ಸತ್ತು ಮಣ್ಣಾಗಿಯೂ ಎಲುಬುಗಳಾಗಿಯೂ ಮಾರ್ಪಟ್ಟ ಬಳಿಕ ನಮ್ಮನ್ನೇನು ಮತ್ತೆ ಜೀವಂತಗೊಳಿಸಲಾಗುವುದೇ?

83. ನಮಗೆ ನೀಡಲಾಗುತ್ತಿರುವ ಇದೇ ವಾಗ್ದಾನವನ್ನು ಈ ಹಿಂದೆ ನಮ್ಮ ಪೂರ್ವಜರಿಗೂ ನೀಡಲಾಗಿತ್ತು. ಇದೆಲ್ಲಾ ಕೇವಲ ಗತಕಾಲದ ಕಟ್ಟು ಕತೆಗಳು.

84. ‘‘ನೀವು ಬಲ್ಲವರಾಗಿದ್ದರೆ ತಿಳಿಸಿರಿ, ಈ ಭೂಮಿ ಮತ್ತು ಇದರಲ್ಲಿರುವ ಎಲ್ಲರೂ ಯಾರಿಗೆ ಸೇರಿದವರು?’’ ಎಂದು ಅವರೊಡನೆ ಕೇಳಿರಿ.

85. ‘‘ಅಲ್ಲಾಹನಿಗೆ’’ ಎಂದು ಅವರು ಉತ್ತರಿಸುವರು. ಹೇಳಿರಿ; ನೀವೇನು ಚಿಂತಿಸುವುದಿಲ್ಲವೇ?

86. ಹೇಳಿರಿ; ‘‘ಏಳು ಆಕಾಶಗಳ ಒಡೆಯನು ಯಾರು? ಮತ್ತು ಮಹಾನ್ ವಿಶ್ವಸಿಂಹಾಸನದ ಒಡೆಯನು ಯಾರು?‘‘

87. ‘‘ಅವೆಲ್ಲಾ ಅಲ್ಲಾಹನಿಗೇ ಸೇರಿವೆ’’ ಎಂದು ಅವರು ಹೇಳುವರು. ಹೇಳಿರಿ; ಹಾಗಾದರೆ ನೀವು ಅಂಜುವುದಿಲ್ಲವೇ?

88. ಹೇಳಿರಿ; ಎಲ್ಲ ವಸ್ತುಗಳ ಮಾಲಕತ್ವವು ಯಾರ ಕೈಯಲ್ಲಿದೆ? ಆಶ್ರಯ ನೀಡುವವನು ಯಾರು? ಮತ್ತು ಯಾರ ವಿರುದ್ಧ ಆಶ್ರಯ ನೀಡಬಲ್ಲವರು ಯಾರೂ ಇಲ್ಲ? ನೀವು ಬಲ್ಲವರಾಗಿದ್ದರೆ ತಿಳಿಸಿರಿ.

89. ‘‘ಅಲ್ಲಾಹನು’’ ಎಂದು ಅವರು ಹೇಳುವರು. ನೀವು ಹೇಳಿರಿ; ಹಾಗಾದರೆ ನೀವು ಅದೆಂತಹ ಭ್ರಮೆಗೆ ತುತ್ತಾಗಿರುವಿರಿ?

90. ನಾವು ಸತ್ಯವನ್ನು ಅವರ ಬಳಿಗೆ ತಂದಿರುವೆವು. ಆದರೆ ಅವರು ಸುಳ್ಳು ಹೇಳುವವರಾಗಿದ್ದಾರೆ.

91. ಅಲ್ಲಾಹನು ಯಾರನ್ನೂ ತನ್ನ ಪುತ್ರನಾಗಿ ಆರಿಸಿಕೊಂಡಿಲ್ಲ ಮತ್ತು ಅವನ ಜೊತೆ ಬೇರಾವ ದೇವರೂ ಇಲ್ಲ. ಹಾಗೆ ಇದ್ದಿದ್ದರೆ ಅವರಲ್ಲಿ ಪ್ರತಿಯೊಬ್ಬರೂ ತಾವು ಸೃಷ್ಟಿಸಿದವುಗಳ ಜೊತೆ ಪ್ರತ್ಯೇಕ ಹೊರಟು ಬಿಡುತ್ತಿದ್ದರು ಮತ್ತು ಅವರೆಲ್ಲಾ ಪರಸ್ಪರರ ಮೇಲೆ ಆಕ್ರಮಣ ನಡೆಸುತ್ತಿದ್ದರು. ಅಲ್ಲಾಹನು ಪಾವನನು ಮತ್ತು ಅವರು ಹೊರಿಸುವ ಎಲ್ಲ ಆರೋಪಗಳಿಂದ ಮುಕ್ತನು.

92. ಅವನು ಗುಪ್ತವಾಗಿರುವ ಹಾಗೂ ವ್ಯಕ್ತವಾಗಿರುವ ಎಲ್ಲವನ್ನೂ ಬಲ್ಲವನು. ಮತ್ತು ನೀವು (ಅವನ ಜೊತೆ) ಪಾಲುಗೊಳಿಸುವ ಎಲ್ಲವುಗಳಿಗಿಂತ ಅವನು ತುಂಬಾ ಉನ್ನತನು.

93. (ದೂತರೇ,) ಹೇಳಿರಿ; ನನ್ನೊಡೆಯಾ, ಅವರಿಗೆ ವಾಗ್ದಾನ ಮಾಡಲಾಗಿರುವುದನ್ನು (ಶಿಕ್ಷೆಯನ್ನು) ನೀನು ನನಗೆ ತೋರಿಸಿ ಕೊಟ್ಟರೂ –

94. ನನ್ನೊಡೆಯಾ, ನನ್ನನ್ನು ಮಾತ್ರ (ಶಿಕ್ಷಾರ್ಹ) ಅಕ್ರಮಿಗಳ ಸಾಲಿಗೆ ಸೇರಿಸಬೇಡ.

95. ನಿಜವಾಗಿ ನಾವು, ಅವರಿಗೆ ವಾಗ್ದಾನ ಮಾಡಿರುವುದನ್ನು ನಿಮಗೆ ತೋರಿಸಿಕೊಡಲು ಖಂಡಿತ ಶಕ್ತರು.

96. (ಆದರೆ ನೀವು) ಕೆಡುಕನ್ನು ಅತ್ಯುತ್ತಮ ಕೃತ್ಯದ ಮೂಲಕವೇ ಎದುರಿಸಿರಿ. ಅವರು ಹೇಳುತ್ತಿರುವುದನ್ನೆಲ್ಲಾ ನಾವು ಚೆನ್ನಾಗಿ ಬಲ್ಲೆವು.

97. ಮತ್ತು ನೀವು ಹೇಳಿರಿ; ನನ್ನೊಡೆಯಾ, ಶೈತಾನರ ಎಲ್ಲ ಪ್ರಚೋದನೆಗಳ ವಿರುದ್ಧ ನಾನು ನಿನ್ನ ರಕ್ಷಣೆಯನ್ನು ಕೋರುತ್ತೇನೆ.

98. ಮತ್ತು ನನ್ನೊಡೆಯಾ, ಅವರು (ಶೈತಾನರು) ನನ್ನ ಬಳಿಗೆ ಬರುವುದರ ವಿರುದ್ಧ ನಾನು ನಿನ್ನ ರಕ್ಷಣೆಯನ್ನು ಕೋರುತ್ತೇನೆ.

99. ಅವರ ಪೈಕಿ ಯಾರಾದರೊಬ್ಬರ ಮರಣದ ಸಮಯವು ಬಂದು ಬಿಟ್ಟಾಗ ಅವನು ಹೇಳುತ್ತಾನೆ; ‘‘ನನ್ನೊಡೆಯಾ, ನನ್ನನ್ನು ಮರಳಿ (ಇಹಲೋಕಕ್ಕೆ) ಕಳಿಸು’’.

100. ‘‘ನಾನು ಬಿಟ್ಟು ಬಂದಿರುವ ಜಗತ್ತಿನಲ್ಲಿ ನಾನು ಏನಾದರೂ ಸತ್ಕರ್ಮಗಳನ್ನು ಮಾಡುತ್ತೇನೆ.’’ ಖಂಡಿತ ಇಲ್ಲ. ಅದೆಲ್ಲಾ ಕೇವಲ ಅವನಾಡುವ ಮಾತು ಮಾತ್ರ. ಪುನಃ ಜೀವಂತಗೊಳಿಸಲಾಗುವ ದಿನದವರೆಗೂ ಅವರ ಮುಂದೆ ಒಂದು ತೆರೆ ಇರುವುದು.

101. (ಲೋಕಾಂತ್ಯದ) ಆ ಕಹಳೆಯನ್ನು ಊದಲಾದಾಗ ಅವರ ನಡುವೆ ಯಾವ ಸಂಬಂಧವೂ ಉಳಿದಿರಲಾರದು ಮತ್ತು ಅವರು ಪರಸ್ಪರ ವಿಚಾರಿಸುವ ಗೊಡವೆಗೂ ಹೋಗಲಾರರು.

102. ಅಂದು ಯಾರ (ಸತ್ಕರ್ಮಗಳ) ತಟ್ಟೆಗಳು ಭಾರವಾಗಿರುವವೋ ಅವರೇ ವಿಜಯಿಗಳಾಗುವರು.

103. ಇನ್ನು ಯಾರ ತಟ್ಟೆಗಳು ಹಗುರವಾಗಿರುವವೋ ಅವರು ಸ್ವತಃ ತಮ್ಮನ್ನು ನಷ್ಟಕ್ಕೆ ತುತ್ತಾಗಿಸಿಕೊಂಡವರಾಗಿರುವರು. ಅವರು ನರಕದಲ್ಲಿ ಸದಾಕಾಲ ಇರುವರು.

104. ಬೆಂಕಿಯು ಅವರ ಮುಖಗಳನ್ನು ಸುಟ್ಟು ಬಿಟ್ಟಿರುವುದು ಮತ್ತು ಅವರು ಅದರಲ್ಲಿ ತೀರಾ ವಿಕೃತ ರೂಪಿಗಳಾಗಿ ಬಿಡುವರು.

105. (ಅವರೊಡನೆ ಹೇಳಲಾಗುವುದು;) ನಿಮಗೇನು, ನನ್ನ ವಚನಗಳನ್ನು ಓದಿ ಕೇಳಿಸಲಾಗಿರಲಿಲ್ಲವೇ? ನಿಜವಾಗಿ ನೀವು ಅವುಗಳನ್ನು ಸುಳ್ಳೆಂದು ತಿರಸ್ಕರಿಸಿದ್ದಿರಿ.

106. ಅವರು ಹೇಳುವರು; ನಮ್ಮೊಡೆಯಾ, ನಮ್ಮ ದೌರ್ಭಾಗ್ಯವು ನಮ್ಮನ್ನು ಸೋಲಿಸಿತು. ನಾವು ದಾರಿಗೆಟ್ಟಿದ್ದೆವು .

107. ನಮ್ಮೊಡೆಯಾ, ನಮ್ಮನ್ನು ಇಲ್ಲಿಂದ ಹೊರತೆಗೆ. ಆ ಬಳಿಕ ನಾವು (ಹಳೆಯ ಚಾಳಿಯನ್ನೇ) ಪುನರಾವರ್ತಿಸಿದರೆ, ಆಗ ಖಂಡಿತ ನಾವು ಅಕ್ರಮಿಗಳಾಗುವೆವು.

108. ಅವರೊಡನೆ ಹೇಳಲಾಗುವುದು; ನೀವು ಶಾಪ ಪೀಡಿತರಾಗಿ ಅಲ್ಲೇ (ನರಕದಲ್ಲೇ) ಬಿದ್ದು ಕೊಂಡಿರಿ ಮತ್ತು ನನ್ನೊಡನೆ ಮಾತನಾಡಬೇಡಿ.

109. ಅಲ್ಲಿ (ಇಹಲೋಕದಲ್ಲಿ) ನನ್ನ ದಾಸರ ಒಂದು ಗುಂಪಿತ್ತು. ‘‘ನಮ್ಮೊಡೆಯಾ, ನಾವು ನಂಬಿದೆವು ನಮ್ಮನ್ನು ಕ್ಷಮಿಸಿಬಿಡು ಮತ್ತು ನಮ್ಮ ಮೇಲೆ ಕರುಣೆತೋರು. ನೀನು ಅತ್ಯುತ್ತಮ ಕರುಣಾಳು’’ ಎಂದು ಅವರು ಮೊರೆ ಇಡುತ್ತಿದ್ದರು.

110. ಆಗ ನೀವು ಅವರನ್ನು ಕೇವಲ ತಮಾಷೆಯ ವಸ್ತುಗಳಾಗಿ ಕಂಡಿರಿ. ಎಷ್ಟೆಂದರೆ, ಅವರು ನಿಮಗೆ ನನ್ನ ನೆನಪನ್ನೇ ಮರೆಸಿ ಬಿಟ್ಟರು ಮತ್ತು ನೀವು ಅವರ ಕುರಿತು ನಗುತ್ತಿದ್ದಿರಿ.

111. ಇಂದು, ಅವರ ಸಹನೆಯ ಪ್ರತಿಫಲವನ್ನು ನಾನು ಅವರಿಗೆ ನೀಡಿರುವೆನು. ಅವರು ಖಂಡಿತ ವಿಜಯಿಗಳು.

112. ವರ್ಷಗಳ ಲೆಕ್ಕ ಪ್ರಕಾರ, ನೀವು ಭೂಮಿಯಲ್ಲಿ ಎಷ್ಟು ಕಾಲ ಇದ್ದಿರಿ? ಎಂದು ಅವನು (ಅಲ್ಲಾಹನು) ಕೇಳುವನು.

113. ಅವರು ಹೇಳುವರು; ನಾವು ಒಂದು ದಿನ ಅಥವಾ ದಿನದ ಒಂದು ಭಾಗದಷ್ಟು ಕಾಲ (ಭೂಮಿಯಲ್ಲಿ) ಇದ್ದೆವು. ನೀನು ಲೆಕ್ಕಾಚಾರ ಬಲ್ಲವರೊಡನೆ ಕೇಳಿ ನೋಡು.

114. ಅವನು (ಅಲ್ಲಾಹನು) ಹೇಳುವನು; ನೀವು ತೀರಾ ಅಲ್ಪಕಾಲ ಮಾತ್ರ ಇದ್ದಿರಿ. ನೀವು ಇದನ್ನು ಮೊದಲೇ (ಇಹಲೋಕದಲ್ಲೇ) ಅರಿತಿದ್ದರೆಷ್ಟು ಚೆನ್ನಾಗಿತ್ತು.

115. ನೀವೇನು, ನಾವು ನಿಮ್ಮನ್ನು ವ್ಯರ್ಥವಾಗಿ ಸೃಷ್ಟಿಸಿದ್ದೇವೆಂದೂ, ನಮ್ಮೆಡೆಗೆ ನೀವು ಮರಳಿ ಬರಲಾರಿರೆಂದೂ ಭಾವಿಸಿದ್ದಿರಾ?

116. ಅಲ್ಲಾಹನು ತುಂಬಾ ಉನ್ನತನು. ಅವನೇ ನೈಜ ದೊರೆ. ಅವನ ಹೊರತು ಬೇರೆ ದೇವರಿಲ್ಲ. ಅವನೇ, ಗೌರವಾನ್ವಿತ ವಿಶ್ವ ಸಿಂಹಾಸನದ ನೈಜ ಒಡೆಯನು.

117. ಅಲ್ಲಾಹನ ಜೊತೆ ಇತರರನ್ನು ಸೇರಿಸಿ ದೇವರೆಂದು ಪ್ರಾರ್ಥಿಸುವವನ ಬಳಿ, ಆ ಕುರಿತು ಯಾವ ಪುರಾವೆಯೂ ಇಲ್ಲ. ಅವನ ಕರ್ಮಗಳ ಲೆಕ್ಕವು ಅವನ ಒಡೆಯನ ಬಳಿ ಇದೆ. ಧಿಕ್ಕಾರಿಗಳು ಖಂಡಿತ ವಿಜಯಿಗಳಾಗುವುದಿಲ್ಲ.

118. ಮತ್ತು ಹೇಳಿರಿ; ನನ್ನೊಡೆಯಾ, ಕ್ಷಮಿಸು ಮತ್ತು ಕರುಣೆ ತೋರು. ನೀನೇ ಅತ್ಯುತ್ತಮ ಕರುಣಾಳು.