25. Al Furqan

25. ಅಲ್ಫುರ್ಕಾನ್ (ಒರೆಗಲ್ಲು)

ವಚನಗಳು – 77, ಮಕ್ಕಃ

ಅಲ್ಲಾಹನ ಹೆಸರಿಂದ – ಅವನು ಅಪಾರ ದಯಾಳು, ಕರುಣಾಮಯಿ.

1. ಬಹಳ ಸಮೃದ್ಧನು – ಸರ್ವಲೋಕಗಳನ್ನು ಎಚ್ಚರಿಸಲಿಕ್ಕೆಂದು ತನ್ನ ದಾಸನಿಗೆ ಫುರ್‌ಕಾನ್‌ಅನ್ನು (ಒಳಿತು ಕೆಡುಕುಗಳನ್ನು ಪ್ರತ್ಯೇಕಿಸಿ ತಿಳಿಸುವ ಒರೆಗಲ್ಲನ್ನು) ಇಳಿಸಿಕೊಟ್ಟವನು (ಅಲ್ಲಾಹನು).

2. ಆಕಾಶಗಳ ಹಾಗೂ ಭೂಮಿಯ ಆಧಿಪತ್ಯವೆಲ್ಲಾ ಅವನಿಗೇ ಸೇರಿದೆ. ಅವನು ಯಾರನ್ನೂ ತನ್ನ ಪುತ್ರನಾಗಿಸಿಕೊಂಡಿಲ್ಲ ಮತ್ತು ಆಧಿಪತ್ಯದಲ್ಲಿ ಯಾರೂ ಅವನ ಪಾಲುದಾರರಲ್ಲ. ಅವನೇ ಎಲ್ಲವನ್ನೂ ಸೃಷ್ಟಿಸಿದವನು ಮತ್ತು ಪ್ರತಿಯೊಂದರ ಇತಿಮಿತಿಗಳನ್ನು ನಿರ್ಧರಿಸಿದವನು.

3. ಅವರು (ಜನರು) ಅವನನ್ನು ಬಿಟ್ಟು ಇತರರನ್ನು ದೇವರಾಗಿಸಿಕೊಂಡರು. ನಿಜವಾಗಿ ಅವರು (ಆ ದೇವರುಗಳು) ಏನನ್ನೂ ಸೃಷ್ಟಿಸಿದವರಲ್ಲ – ಅವರನ್ನೇ ಸೃಷ್ಟಿಸಲಾಗಿದೆ. ಸ್ವತಃ ತಮಗೆ ಯಾವುದೇ ನಷ್ಟ ಅಥವಾ ಲಾಭ ಮಾಡಿಕೊಳ್ಳುವ ಅಧಿಕಾರವೂ ಅವರಿಗಿಲ್ಲ. ಮಾತ್ರವಲ್ಲ ಮರಣದ ಮೇಲಾಗಲಿ, ಜೀವನದ ಮೇಲಾಗಲಿ, ಮರಣಾನಂತರದ ಪುನರುಜ್ಜೀವನದ ಮೇಲಾಗಲಿ ಅವರಿಗೆ ಯಾವ ನಿಯಂತ್ರಣವೂ ಇಲ್ಲ.

4. ‘‘ಅದೆಲ್ಲಾ ಕೇವಲ ಕಟ್ಟುಕತೆ. ಅದನ್ನು ಆತನೇ ರಚಿಸಿಕೊಂಡಿದ್ದಾನೆ. ಇತರ ಕೆಲವರು ಅವನಿಗೆ ನೆರವಾಗಿದ್ದಾರೆ’’ ಎಂದು ಧಿಕ್ಕಾರಿಗಳು ಹೇಳುತ್ತಾರೆ. ಹೀಗೆ ಅವರು ಅಕ್ರಮ ಹಾಗೂ ಸುಳ್ಳು ಪ್ರಚಾರವನ್ನು ಆರಂಭಿಸಿದ್ದಾರೆ.

5. ಅವರು ಹೇಳುತ್ತಾರೆ; ‘‘ಅವೆಲ್ಲಾ ಕೇವಲ ಗತಕಾಲದ ಕತೆಗಳು. ಅವನೇ ಅದನ್ನು ಬರೆಸಿ ತರುತ್ತಾನೆ. ಮುಂಜಾನೆ ಹಾಗೂ ಸಂಜೆ ಇದನ್ನೆಲ್ಲಾ ಅವನಿಗೆ ಯಾರೋ ಕಲಿಸಿಕೊಡುತ್ತಾರೆ’’.

6. ಹೇಳಿರಿ; ಆಕಾಶಗಳ ಹಾಗೂ ಭೂಮಿಯ ಸಕಲ ರಹಸ್ಯಗಳನ್ನು ಬಲ್ಲವನು ಇದನ್ನು ಇಳಿಸಿಕೊಟ್ಟಿರುವನು ಖಂಡಿತವಾಗಿಯೂ ಅವನು ಕ್ಷಮಿಸುವವನು ಮತ್ತು ಕರುಣಾಳುವಾಗಿದ್ದಾನೆ.

7. ಅವರು ಹೇಳುತ್ತಾರೆ; ‘‘ಆಹಾರ ಸೇವಿಸುವ ಮತ್ತು ಪೇಟೆಗಳಲ್ಲಿ ನಡೆದಾಡುವ ಆತ ಅದೆಂತಹ ದೂತ? ಅವನ ಜೊತೆಗಿದ್ದು ಜನರನ್ನು ಹೆದರಿಸಲು ಒಬ್ಬ ಮಲಕ್‌ನನ್ನು ಅವನಿಗೇಕೆ ಇಳಿಸಿಕೊಡಲಾಗಿಲ್ಲ?’’

 8. ‘‘ಅಥವಾ ಅವನಿಗೆ ಒಂದು ನಿಧಿಯನ್ನೇಕೆ ನೀಡಲಾಗಿಲ್ಲ? ಅಥವಾ ಅವನಿಗೆ ತಿನ್ನುಣ್ಣುತ್ತಾ ಇರುವುದಕ್ಕೆ ಒಂದು ತೋಟವನ್ನಾದರೂ ಏಕೆ ನೀಡಲಾಗಿಲ್ಲ?’’ ಮತ್ತು ಅಕ್ರಮಿಗಳು (ಜನರೊಡನೆ), ‘‘ನೀವು ಕೇವಲ ಒಬ್ಬ ಮಾಟಪೀಡಿತನನ್ನು ಅನುಸರಿಸುತ್ತಿರುವಿರಿ’’ ಎನ್ನುತ್ತಾರೆ.

9. ನೋಡಿರಿ; ಅವರು ಎಂತೆಂತಹ ಹೋಲಿಕೆಗಳನ್ನು ನಿಮಗೆ ಅನ್ವಯಿಸುತ್ತಿದ್ದಾರೆ! ನಿಜವಾಗಿ ಅವರು ದಾರಿ ತಪ್ಪಿದ್ದಾರೆ ಮತ್ತು ಸರಿದಾರಿಗೆ ಬರಲು ಅವರಿಗೆ ಸಾಧ್ಯವಿಲ್ಲ.

10. ಆ ಮಹಾ ಸಮೃದ್ಧನು (ಅಲ್ಲಾಹನು) ತಾನಿಚ್ಛಿಸಿದರೆ ನಿಮಗೆ ಇವೆಲ್ಲವುಗಳಿಗಿಂತ ಉತ್ತಮವಾದುದನ್ನು ನೀಡಬಲ್ಲನು. ಅಂದರೆ, ತಳದಲ್ಲಿ ನದಿಗಳು ಹರಿಯುವಂತಹ ತೋಟಗಳನ್ನು ನೀಡಬಲ್ಲನು ಮತ್ತು ನಿಮಗಾಗಿ ಅರಮನೆಗಳನ್ನು ಒದಗಿಸಬಲ್ಲನು.

11. ನಿಜವಾಗಿ ಅವರು ಆ ಅಂತಿಮ ಕ್ಷಣವನ್ನು ಸುಳ್ಳೆಂದರು. ಆ ಕ್ಷಣವನ್ನು ಸುಳ್ಳೆಂದವರಿಗಾಗಿ ನಾವು ಅಗ್ನಿಕುಂಡವನ್ನು ಸಿದ್ಧಪಡಿಸಿಟ್ಟಿರುವೆವು.

12.ಅವರನ್ನು ದೂರದಿಂದ ಕಂಡಾಗಲೇ, ಅದು ರೋಷದಿಂದ ಅಬ್ಬರಿಸುವುದನ್ನು ಅವರು ಕೇಳುವರು.

13. ಅವರನ್ನು ಸರಪಣಿಗಳಲ್ಲಿ ಕಟ್ಟಿ ಅದರೊಳಗಿನ ಯಾವುದಾದರೂ ಇಕ್ಕಟ್ಟಾದ ಸ್ಥಳಕ್ಕೆ ಎಸೆದು ಬಿಡಲಾದಾಗ ಅಲ್ಲಿ ಅವರು ಮರಣಕ್ಕಾಗಿ ಹಾತೊರೆಯುತ್ತಿರುವರು.

14. ‘‘ಇಂದು ನೀವು ಕೇವಲ ಒಂದು ಮರಣವನ್ನು ಕೂಗಬೇಡಿ. ಹಲವಾರು ಮರಣಗಳನ್ನು ಕೂಗಿ ಕರೆಯಿರಿ’’ (ಎಂದು ಅವರೊಡನೆ ಹೇಳಲಾಗುವುದು).

15. ಹೇಳಿರಿ; ಇದು ಉತ್ತಮವೇ, ಅಥವಾ ಧರ್ಮನಿಷ್ಠರಿಗೆ ವಾಗ್ದಾನ ಮಾಡಲಾಗಿರುವ ಶಾಶ್ವತ ಸ್ವರ್ಗ ತೋಟಗಳು ಉತ್ತಮವೇ? ಅದುವೇ ಅವರ (ಧರ್ಮನಿಷ್ಠರ) ಪ್ರತಿಫಲವಾಗಿರುವುದು ಮತ್ತು ಅವರು ಮರಳುವ ತಾಣವಾಗಿರುವುದು.

16. ಅಲ್ಲಿ ಅವರು ಬಯಸಿದ್ದೆಲ್ಲವೂ ಅವರಿಗೆ ಲಭ್ಯವಿರುವುದು ಮತ್ತು ಅವರು ಅಲ್ಲಿ ಸದಾಕಾಲ ಇರುವರು. ಇದು ನಿಮ್ಮ ಒಡೆಯನ ಮೇಲೆ ಹೊಣೆಯಾಗಿರುವ ವಾಗ್ದಾನವಾಗಿದೆ – ಪ್ರಾರ್ಥಿಸಿ ಕೇಳಬೇಕಾದ ವಾಗ್ದಾನ.

  17. ಅಂದು ಅವನು ಅವರನ್ನೂ, ಅಲ್ಲಾಹನನ್ನು ಬಿಟ್ಟು ಅವರು ಪೂಜಿಸುತ್ತಿದ್ದ ಎಲ್ಲವುಗಳನ್ನೂ ಒಂದೆಡೆ ಸೇರಿಸಿ ‘‘ಈ ನನ್ನ ದಾಸರನ್ನು ನೀವು ದಾರಿಗೆಡಿಸಿದಿರಾ? ಅಥವಾ ಅವರು ಸ್ವತಃ ದಾರಿಗೆಟ್ಟಿದ್ದರೇ?’’ಎಂದು ಕೇಳುವನು.

18. ಅವರು ಹೇಳುವರು; ನೀನು ಪಾವನನು. ನಿನ್ನ ಹೊರತು ಬೇರೆ ಯಾರನ್ನೂ ನಮ್ಮ ಪೋಷಕರಾಗಿ ಪರಿಗಣಿಸುವುದು ನಮಗೆ ಭೂಷಣವಾಗಿರಲಿಲ್ಲ. ಆದರೆ ನೀನು, ಅವರು ನಿನ್ನ ಪ್ರಸ್ತಾಪವನ್ನೇ ಮರೆತು ಬಿಡುವಷ್ಟು ಸಂಪನ್ನತೆಯನ್ನು ಅವರಿಗೂ ಅವರ ಪೂರ್ವಜರಿಗೂ ದಯಪಾಲಿಸಿದೆ. ಅವರಂತೂ ನಾಶವಾಗಲೇಬೇಕಾದ ಜನರಾಗಿದ್ದರು.

19. ನೀವು ಹೇಳಿದ್ದನ್ನೆಲ್ಲಾ ಅವರು ಸುಳ್ಳೆಂದು ತಿರಸ್ಕರಿಸಿದರು. ಇದೀಗ ಅವರ ಮೇಲಿನ ಶಿಕ್ಷೆಯನ್ನು ನಿವಾರಿಸಲಿಕ್ಕಾಗಲಿ ಅವರಿಗೆ ನೆರವಾಗಲಿಕ್ಕಾಗಲಿ ನಿಮಗೆ ಸಾಧ್ಯವಿಲ್ಲ. ನಿಮ್ಮ ಪೈಕಿ ಅಕ್ರಮವೆಸಗಿದವನಿಗೆ ನಾವು ಭಾರೀ ಶಿಕ್ಷೆಯ ರುಚಿ ಉಣಿಸುವೆವು.

20. (ದೂತರೇ,) ನಾವು ನಿಮಗಿಂತ ಮುಂಚೆ ಕೂಡಾ ಆಹಾರ ಸೇವಿಸುತ್ತಿದ್ದವರನ್ನು ಮತ್ತು ಪೇಟೆಗಳಲ್ಲಿ ನಡೆದಾಡುತ್ತಿದ್ದವರನ್ನೇ ದೂತರಾಗಿ ಕಳಿಸಿದ್ದೆವು. ಮತ್ತು ನಾವು ನಿಮ್ಮಲ್ಲಿ ಕೆಲವರನ್ನು ಮತ್ತೆ ಕೆಲವರ ಪಾಲಿಗೆ ಪರೀಕ್ಷೆಯಾಗಿಸಿದ್ದೆವು. ನೀವೀಗ ಸಹನೆ ತೋರುವಿರಾ? ನಿಮ್ಮ ಒಡೆಯನು ಎಲ್ಲವನ್ನೂ ನೋಡುವವನಾಗಿದ್ದಾನೆ.

ಕಾಂಡ – 19

21. ನಮ್ಮನ್ನು ಭೇಟಿಯಾಗುವ ನಿರೀಕ್ಷೆ ಇಲ್ಲದವರು, ‘‘ನಮ್ಮ ಬಳಿಗೆ ಮಲಕ್‌ಗಳನ್ನೇಕೆ ಕಳಿಸಲಾಗಿಲ್ಲ ಅಥವಾ ನಾವು ನಮ್ಮ ದೇವರನ್ನು ನೋಡುವಂತಿಲ್ಲವೇಕೆ’’ ಎಂದು ಕೇಳುತ್ತಾರೆ. ನಿಜವಾಗಿ ಅವರು ತಮ್ಮ ಮನದೊಳಗೆ ಅಹಂಕಾರ ಪಡುತ್ತಿದ್ದಾರೆ ಮತ್ತು ಭಾರೀ ದೊಡ್ಡ ವಿದ್ರೋಹವೆಸಗುತ್ತಿದ್ದಾರೆ.

22. ಅವರು ಮಲಕ್‌ಗಳನ್ನು ಕಾಣುವ ದಿನ, ಅಪರಾಧಿಗಳಿಗೆ ಯಾವುದೇ ಶುಭವಾರ್ತೆ ಇರದು. ಅಂದು ಅವರು ‘‘ಎಲ್ಲಾದರೂ ಆಶ್ರಯವಿದೆಯೇ?’’ ಎನ್ನುತ್ತಿರುವರು.

23. ಅಂದು ನಾವು ಅವರು ಮಾಡಿರುವ ಕರ್ಮಗಳ ಕಡೆಗೆ ಗಮನ ಹರಿಸುವೆವು ಮತ್ತು ಅವುಗಳನ್ನೆಲ್ಲಾ ಧೂಳಿನಂತೆ ಹಾರಿಸಿ ಬಿಡುವೆವು.

24. ಅಂದು ಸ್ವರ್ಗದವರು ಬಹಳ ಶ್ರೇಷ್ಠ ನೆಲೆಯಲ್ಲಿರುವರು ಮತ್ತು ಅತ್ಯುತ್ತಮ ವಿಶ್ರಾಂತಿ ಧಾಮದಲ್ಲಿರುವರು.

25. ಅದು, ಮೋಡಗಳೊಂದಿಗೆ ಆಕಾಶವು ಬಿರಿದು ಹೋಗುವ ಮತ್ತು ಮಲಕ್‌ಗಳನ್ನು ಇಳಿಸಲಾಗುವ ದಿನವಾಗಿರುವುದು.

26. ಅಂದು ನೈಜ ಆಧಿಪತ್ಯವು ಆ ಪರಮ ದಯಾಮಯನಿಗೆ ಸೇರಿರುವುದು. ಆ ದಿನವು ಧಿಕ್ಕಾರಿಗಳ ಪಾಲಿಗೆ ತುಂಬಾ ಕಷ್ಟದ ದಿನವಾಗಿರುವುದು.

 27. ಅಂದು ಅಕ್ರಮಿಯು ತನ್ನ ಕೈಗಳನ್ನು ಕಚ್ಚಿಕೊಳ್ಳುತ್ತಾ ಹೇಳುವನು; ಅಯ್ಯೋ ನಾನು ದೇವದೂತರ ಜೊತೆ ಅವರ ಮಾರ್ಗದಲ್ಲಿ ನಡೆದಿದ್ದರೆ ಎಷ್ಟು ಚೆನ್ನಾಗಿತ್ತು!

28. ಅಯ್ಯೋ, ನಾನು ಆತನನ್ನು (ಶೈತಾನನನ್ನು) ಮಿತ್ರನಾಗಿಸದೆ ಇದ್ದಿದ್ದರೆ ಎಷ್ಟು ಚೆನ್ನಾಗಿತ್ತು.

29. ಉಪದೇಶವು ನನ್ನ ಬಳಿಗೆ ಬಂದ ಬಳಿಕವೂ ನಾನು ಅದನ್ನು ಸ್ವೀಕರಿಸದಂತೆ ಅವನು ನನ್ನನ್ನು ದಾರಿಗೆಡಿಸಿದ್ದನು. ಶೈತಾನನು ನಿಜಕ್ಕೂ ಮಾನವನ ಪಾಲಿಗೆ ವಿಶ್ವಾಸ ದ್ರೋಹಿಯಾಗಿದ್ದಾನೆ.

30. ದೂತರು, ‘‘ನನ್ನೊಡೆಯಾ, ನನ್ನ ಜನಾಂಗವು ಈ ಕುರ್‌ಆನನ್ನು ತಿರಸ್ಕಾರ ಯೋಗ್ಯವಾಗಿ ಪರಿಗಣಿಸಿತ್ತು’’ ಎನ್ನುವರು.

31. ಈ ರೀತಿ ನಾವು ಕೆಲವು ಅಪರಾಧಿಗಳನ್ನು ಎಲ್ಲ ಪ್ರವಾದಿಗಳ ಶತ್ರುಗಳಾಗಿಸಿರುವೆವು. ಮಾರ್ಗದರ್ಶನಕ್ಕೆ ಮತ್ತು ನೆರವಿಗೆ ನಿಮ್ಮ ಒಡೆಯನೇ ಸಾಕು.

 32. ಧಿಕ್ಕಾರಿಗಳು, ‘‘ಅವನಿಗೆ ಕುರ್‌ಆನನ್ನು ಒಂದೇ ಬಾರಿಗೆ ಯಾಕೆ ಇಳಿಸಿ ಕೊಡಲಾಗಿಲ್ಲ?’’ ಎಂದು ಕೇಳುತ್ತಾರೆ. ಅದು ಹಾಗೆಯೇ. ಆ ಮೂಲಕ ನಿಮ್ಮ ಮನಸ್ಸನ್ನು ಸ್ಥಿರಗೊಳಿಸಲಿಕ್ಕಾಗಿ, ನಾವು ಇದನ್ನು ಸ್ವಲ್ಪ ಸ್ವಲ್ಪವಾಗಿ ಓದಿ ಕೇಳಿಸುತ್ತೇವೆ.

33. ಅವರು ನಿಮ್ಮ ಬಳಿಗೆ ತರುವ ಪ್ರತಿಯೊಂದು ಆಕ್ಷೇಪದ ಕುರಿತೂ ನಾವು ನಿಮಗೆ ಸರಿಯಾದ ಉತ್ತರವನ್ನು ಮತ್ತು ಅತ್ಯುತ್ತಮ ವಿಶ್ಲೇಷಣೆಯನ್ನು ತಲುಪಿಸುತ್ತೇವೆ.

34. ಅವರ (ಧಿಕ್ಕಾರಿಗಳ) ಮುಖವನ್ನು ನೆಲಕ್ಕೊರಗಿಸಿ ನರಕದೆಡೆಗೆ ಎಳೆದೊಯ್ಯಲಾಗುವುದು. ಅವರೇ ಅತ್ಯಂತ ಕೆಟ್ಟ ಸ್ಥಾನದವರು ಮತ್ತು ನೇರ ಮಾರ್ಗದಿಂದ ತುಂಬಾ ದೂರ ಸಾಗಿದವರು.

35. ನಾವು ಮೂಸಾರಿಗೆ ಗ್ರಂಥವನ್ನು ನೀಡಿದ್ದೆವು ಮತ್ತು ಅವರ ಸಹೋದರ ಹಾರೂನರನ್ನು ಅವರ ಸಹಾಯಕರಾಗಿ ಅವರ ಜೊತೆ ಕಳಿಸಿದ್ದೆವು.

36. ‘‘ನೀವಿಬ್ಬರೂ, ನಮ್ಮ ವಚನಗಳನ್ನು ಸುಳ್ಳೆಂದು ತಿರಸ್ಕರಿಸಿರುವ ಜನಾಂಗದೆಡೆಗೆ ಹೋಗಿರಿ’’ ಎಂದು ನಾವು ಅವರಿಗೆ ಆದೇಶಿಸಿದೆವು. ಕೊನೆಗೆ ನಾವು, ಅವರನ್ನು (ಆ ಜನಾಂಗವನ್ನು) ಸಂಪೂರ್ಣ ನಾಶಮಾಡಿ ಬಿಟ್ಟೆವು.

37. (ಈ ಹಿಂದೆ) ನೂಹರ ಜನಾಂಗವು ದೇವದೂತರುಗಳನ್ನು ತಿರಸ್ಕರಿಸಿದಾಗ ನಾವು ಅವರನ್ನು ಮುಳುಗಿಸಿ ಬಿಟ್ಟೆವು ಮತ್ತು ಅವರನ್ನು ಜನರ ಪಾಲಿಗೆ ಪಾಠವಾಗಿಸಿದೆವು. ಮತ್ತು ನಾವು ಅಕ್ರಮಿಗಳಿಗಾಗಿ ಯಾತನಾಮಯ ಶಿಕ್ಷೆಯನ್ನು ಸಿದ್ಧಗೊಳಿಸಿಟ್ಟಿರುವೆವು.

38. ಹಾಗೆಯೇ, ಆದ್ ಮತ್ತು ಸಮೂದ್ ಜನಾಂಗದವರು, ಬಾವಿಯವರು ಮತ್ತು ಅವರ ನಡುವಿನ ಹಲವಾರು ಪಂಗಡಗಳು –

39. – ಅವರಲ್ಲಿ ಪ್ರತಿಯೊಬ್ಬರಿಗೂ ನಾವು ಉದಾಹರಣೆಗಳೊಂದಿಗೆ ಉಪದೇಶಿಸಿದೆವು. ಕೊನೆಗೆ ಅವರೆಲ್ಲರನ್ನೂ ನಿರ್ನಾಮಗೊಳಿಸಿಬಿಟ್ಟೆವು.

40. ಅವರು (ಧಿಕ್ಕಾರಿಗಳು), ವಿನಾಶಕಾರಿ ಮಳೆಯನ್ನು ಸುರಿಸಲಾಗಿದ್ದ (ಲೂತ್‌ರ) ನಾಡಿನಿಂದ ಹಾದು ಹೋಗುತ್ತಾರೆ. ಆದರೂ ಅವರೇನು ಅದನ್ನು ಕಾಣಲಿಲ್ಲವೇ? ನಿಜವಾಗಿ, ಅವರು ಮತ್ತೆ ಜೀವಂತಗೊಳ್ಳುವುದನ್ನು ನಿರೀಕ್ಷಿಸುತ್ತಿಲ್ಲ.

41. (ದೂತರೇ,) ನಿಮ್ಮನ್ನು ಕಂಡಾಗಲೆಲ್ಲಾ ಅವರು, ‘‘ಅಲ್ಲಾಹನು ದೂತನಾಗಿ ಕಳಿಸಿರುವುದು ಈತನನ್ನೇ?’’ ಎಂದು ನಿಮ್ಮನ್ನು ಗೇಲಿಮಾಡುತ್ತಾರೆ.

42. ‘‘ನಾವು ಸ್ಥಿರವಾಗಿಲ್ಲದೆ ಇದ್ದಿದ್ದರೆ ಇವನಂತು ನಮ್ಮನ್ನು ನಮ್ಮ ದೇವರುಗಳಿಂದ ದೂರಗೊಳಿಸಿ ಬಿಡುತ್ತಿದ್ದನು’’ (ಎಂದು ಅವರು ಹೇಳುತ್ತಾರೆ). ಬಹುಬೇಗನೇ, ಅವರು ಶಿಕ್ಷೆಯನ್ನು ಕಾಣುವಾಗ, ಸರಿದಾರಿಯಿಂದ ತೀರಾ ದೂರ ಸಾಗಿಬಿಟ್ಟವರು ಯಾರೆಂಬುದು ಅವರಿಗೆ ತಿಳಿಯಲಿದೆ.

43. ತನ್ನ ಚಿತ್ತವನ್ನೇ ತನ್ನ ದೇವರಾಗಿಸಿಕೊಂಡವನನ್ನು ನೀವು ಕಂಡಿರಾ? ನೀವೇನು ಅಂಥವನ ರಕ್ಷಕರಾಗುವಿರಾ?

44. ನೀವೇನು, ಅವರು ಕೇಳಬಲ್ಲರು ಹಾಗೂ ಆಲೋಚಿಸಬಲ್ಲರು ಎಂದು ಕೊಂಡಿದ್ದೀರಾ? ಅವರಂತು ಜಾನುವಾರುಗಳಿಗೆ ಸಮಾನರಾಗಿದ್ದಾರೆ ಮಾತ್ರವಲ್ಲ, ಅವುಗಳಿಗಿಂತ ಹೆಚ್ಚು ದಾರಿಗೆಟ್ಟವರಾಗಿದ್ದಾರೆ.

 45. ನಿಮ್ಮ ಒಡೆಯನು ಯಾವ ರೀತಿ ನೆರಳನ್ನು ವಿಸ್ತರಿಸುತ್ತಾನೆಂಬುದನ್ನು ನೀವು ಕಂಡಿರಾ? ಅವನು ಬಯಸಿದ್ದರೆ ಅದನ್ನು ನಿಶ್ಚಲಗೊಳಿಸಬಹುದಿತ್ತು. ಮತ್ತು ನಾವು ಸೂರ್ಯನನ್ನು ಅದರ (ನೆರಳಿನ) ಮಾರ್ಗದರ್ಶಿಯಾಗಿಸಿದ್ದೇವೆ.

46. ತರುವಾಯ ನಾವು ಅದನ್ನು ಕುಗ್ಗಿಸಿ ನಿಧಾನವಾಗಿ ನಮ್ಮ ಕಡೆಗೆ ಸೆಳೆದುಕೊಳ್ಳುತ್ತೇವೆ.

47. ಅವನೇ, ನಿಮ್ಮ ಪಾಲಿಗೆ ರಾತ್ರಿಯನ್ನು ಉಡುಗೆಯಾಗಿಸಿದವನು, ನಿದ್ದೆಯನ್ನು ವಿರಾಮವಾಗಿಸಿದವನು ಮತ್ತು ಹಗಲನ್ನು ಎಚ್ಚರದ ಸಮಯವಾಗಿಸಿದವನು.

48. ಅವನೇ, ತನ್ನ ಅನುಗ್ರಹಕ್ಕೆ ಮುನ್ನ ಶುಭವಾರ್ತೆ ನೀಡುವ ಗಾಳಿಯನ್ನು ಕಳಿಸುವವನು ಮತ್ತು ನಾವೇ ಆಕಾಶದಿಂದ ಶುದ್ಧವಾದ ನೀರನ್ನು ಇಳಿಸುತ್ತೇವೆ –

49. – ನಿರ್ಜೀವವಾಗಿದ್ದ ನಾಡನ್ನು ಆ ಮೂಲಕ ಜೀವಂತಗೊಳಿಸಲಿಕ್ಕಾಗಿ ಮತ್ತು ನಾವು ಸೃಷ್ಟಿಸಿರುವ ಹಲವಾರು ಜಾನುವಾರುಗಳಿಗೆ ಮತ್ತು ಮಾನವರಿಗೆ ಕುಡಿಸಲಿಕ್ಕಾಗಿ.

50. ಅವರು ಪಾಠಕಲಿಯಲೆಂದು, ನಾವು ಅದನ್ನು ಅವರ ನಡುವೆ ಹಂಚಿ ಬಿಡುತ್ತೇವೆ. ಆದರೆ ಹೆಚ್ಚಿನ ಮಾನವರು ಕೃತಘ್ನರೇ ಆಗಿರುತ್ತಾರೆ.

51. ನಾವು ಬಯಸಿದ್ದರೆ ಪ್ರತಿಯೊಂದು ನಾಡಿಗೂ ಒಬ್ಬ ಎಚ್ಚರಿಸುವಾತನನ್ನು ಕಳಿಸುತ್ತಿದ್ದೆವು.

52. ನೀವು ಧಿಕ್ಕಾರಿಗಳ ಆಜ್ಞೆಯನ್ನು ಪಾಲಿಸಬೇಡಿ. ಅವರ ವಿರುದ್ಧ ಹೋರಾಟ ನಡೆಸಿರಿ – ಮಹಾ ಹೋರಾಟ.

53. ಅವನೇ ಎರಡು ಕಡಲುಗಳನ್ನು ಜೋಡಿಸಿದವನು. ಇದು, ಹಿತಕರವಾದ ಸಿಹಿ ನೀರು ಮತ್ತು ಇದು, ರುಚಿಗೆಟ್ಟ ಉಪ್ಪು ನೀರು. ಅವನು ಅವೆರಡರ ನಡುವೆ ತೆರೆಯನ್ನು ಹಾಗೂ ಬಹಳ ಬಲಿಷ್ಠವಾದ ಒಂದು ತಡೆಯನ್ನು ನಿರ್ಮಿಸಿರುವನು.

54. ಅವನೇ ನೀರಿನಿಂದ ಮಾನವನನ್ನು ಸೃಷ್ಟಿಸಿದವನು ಮತ್ತು ಅವನಿಗೆ ರಕ್ತ ಸಂಬಂಧವನ್ನೂ ವಿವಾಹ ಸಂಬಂಧವನ್ನೂ ಒದಗಿಸಿದವನು. ನಿಮ್ಮೊಡೆಯನು ಸಮರ್ಥನು.

55. ಅವರು ಅಲ್ಲಾಹನನ್ನು ಬಿಟ್ಟು, ತಮಗೆ ಯಾವುದೇ ಲಾಭವನ್ನಾಗಲಿ ನಷ್ಟವನ್ನಾಗಲಿ ಮಾಡಲಾಗದ ವಸ್ತುಗಳನ್ನು ಪೂಜಿಸುತ್ತಾರೆ. ಮತ್ತು ಧಿಕ್ಕಾರಿಯು ತನ್ನ ನೈಜ ಒಡೆಯನ ವಿರೋಧಿಯಾಗಿದ್ದಾನೆ.

 56. (ದೂತರೇ,) ನಾವು ನಿಮ್ಮನ್ನು ಶುಭವಾರ್ತೆ ನೀಡುವವರಾಗಿ ಹಾಗೂ ಎಚ್ಚರಿಸುವವರಾಗಿ ಕಳುಹಿಸಿರುವೆವು.

57. ಹೇಳಿರಿ; ನಾನು ಇದಕ್ಕಾಗಿ ನಿಮ್ಮಿಂದ ಯಾವುದೇ ಪ್ರತಿಫಲವನ್ನು ಬೇಡುತ್ತಿಲ್ಲ. ಇಷ್ಟ ಉಳ್ಳವನು ತನ್ನ ಒಡೆಯನ ಕಡೆಗಿರುವ ದಾರಿಯನ್ನು ಸ್ವೀಕರಿಸಲಿ.

 58. ಎಂದೂ ಸಾಯದ, ಸದಾ ಜೀವಂತವಿರುವವನಲ್ಲಿ ಭರವಸೆ ಇಡಿರಿ ಮತ್ತು ಅವನನ್ನು ಹೊಗಳುತ್ತಾ ಅವನ ಪಾವಿತ್ರವನ್ನು ಜಪಿಸಿರಿ. ತನ್ನ ದಾಸರ ಪಾಪಗಳನ್ನು ಅರಿಯಲು ಅವನೇ ಸಾಕು.

59. ಅವನೇ, ಆಕಾಶಗಳನ್ನು, ಭೂಮಿಯನ್ನು ಮತ್ತು ಅವುಗಳ ನಡುವೆ ಇರುವ ಎಲ್ಲವನ್ನೂ ಆರು ದಿನಗಳಲ್ಲಿ ಸೃಷ್ಟಿಸಿ ಆ ಬಳಿಕ ವಿಶ್ವ ಸಿಂಹಾಸನದಲ್ಲಿ ಸ್ಥಾಪಿತನಾದವನು. ಅವನು ಪರಮ ದಯಾಳು. ಅವನ ಕುರಿತು, ಬಲ್ಲವರನ್ನು ಕೇಳಿರಿ.

60. ಆ ಪರಮ ದಯಾಳುವಿಗೆ ಸಾಷ್ಟಾಂಗವೆರಗಿರಿ ಎಂದು ಅವರೊಡನೆ ಹೇಳಿದಾಗ ಅವರು ಪರಮ ದಯಾಮಯನೆಂದರೆ ಏನು? ನಾವೇನು, ನೀನು ಆದೇಶಿಸಿದವರಿಗೆ ಸಾಷ್ಟಾಂಗವೆರಗಬೇಕೇ? ಎನ್ನುತ್ತಾರೆ. ಹೀಗೆ, ಇದು (ಈ ಕರೆಯು) ಅವರ ಜಿಗುಪ್ಸೆಯನ್ನಷ್ಟೇ ಹೆಚ್ಚಿಸಿತು.

61. ಆಕಾಶದಲ್ಲಿ ಭದ್ರಕೋಟೆಗಳನ್ನು (ನಕ್ಷತ್ರಗಳನ್ನು) ನಿರ್ಮಿಸಿದವನು ಮತ್ತು ಅದರಲ್ಲಿ ಸೂರ್ಯನನ್ನೂ ಉಜ್ವಲ ಚಂದ್ರನನ್ನೂ ನಿರ್ಮಿಸಿದವನು ತುಂಬಾ ಸಮೃದ್ಧನು.

62. ಇಷ್ಟ ಉಳ್ಳವನು ಉಪದೇಶ ಸ್ವೀಕರಿಸಲಿ ಅಥವಾ ಇಷ್ಟ ಉಳ್ಳವನು ಕೃತಜ್ಞನಾಗಲೆಂದು, ರಾತ್ರಿ ಹಗಲುಗಳನ್ನು ಪರಸ್ಪರರ ಹಿಂಬಾಲಕರಾಗಿಸಿದವನು, ಅವನೇ.

 63. ಆ ಪರಮ ದಯಾಳುವಿನ (ನಿಷ್ಠ) ದಾಸರು ಭೂಮಿಯಲ್ಲಿ ವಿನಯದ ನಡಿಗೆ ನಡೆಯುತ್ತಾರೆ ಮತ್ತು ತಮ್ಮೊಡನೆ ಅಜ್ಞಾನಿಗಳು ಮಾತಿಗಿಳಿದರೆ ಅವರು,‘ಸಲಾಮ್’ ಎಂದಷ್ಟೇ ಹೇಳುತ್ತಾರೆ.

64. ಅವರು ರಾತ್ರಿಯನ್ನು ತಮ್ಮ ಒಡೆಯನಿಗೆ ಸಾಷ್ಟಾಂಗ ವೆರಗುತ್ತಲೂ ನಿಲ್ಲುತ್ತಲೂ (ನಮಾಝ್‌ನಲ್ಲಿ) ಕಳೆಯುತ್ತಾರೆ.

65. ಅವರು ಹೇಳುತ್ತಾರೆ; ನಮ್ಮೊಡೆಯಾ, ನರಕದ ಶಿಕ್ಷೆಯನ್ನು ನಮ್ಮಿಂದ ದೂರವಿಡು. ಖಂಡಿತವಾಗಿಯೂ ಅದು ಬಿಡುಗಡೆ ಇಲ್ಲದ ಶಿಕ್ಷೆಯಾಗಿದೆ.

66. ಅದು ಖಂಡಿತ ತೀರಾ ಕೆಟ್ಟ ನೆಲೆಯಾಗಿದೆ ಹಾಗೂ ತೀರಾ ಕೆಟ್ಟ ಸ್ಥಳವಾಗಿದೆ.

67. ಅವರು ಖರ್ಚು ಮಾಡುವಾಗ ದುಂದು ವೆಚ್ಚವನ್ನು ಮಾಡುವುದಿಲ್ಲ, ಜಿಪುಣತೆಯನ್ನೂ ತೋರುವುದಿಲ್ಲ. ಅವೆರಡರ ನಡುವಣ ಮಾರ್ಗವನ್ನು ಪಾಲಿಸುತ್ತಾರೆ.

68. ಅವರು ಅಲ್ಲಾಹನ ಜೊತೆ ಬೇರೆ ಯಾವ ದೇವರನ್ನೂ ಪ್ರಾರ್ಥಿಸುವುದಿಲ್ಲ. ಅಲ್ಲಾಹನು ನಿಷೇಧಿಸಿರುವ ಯಾವುದೇ ಜೀವವನ್ನು ಅನ್ಯಾಯವಾಗಿ ಕೊಲ್ಲುವುದಿಲ್ಲ ಮತ್ತು ಅವರು ವ್ಯಭಿಚಾರ ಮಾಡುವುದಿಲ್ಲ. ಈ ಕೃತ್ಯಗಳನ್ನು ಮಾಡಿದವನು ಶಿಕ್ಷೆಯನ್ನು ಅನುಭವಿಸುವನು.

69. ಪುನರುತ್ಥಾನ ದಿನ ಅವನಿಗೆ ದುಪ್ಪಟ್ಟು ಶಿಕ್ಷೆ ವಿಧಿಸಲಾಗುವುದು ಮತ್ತು ಅವನು ಅಪಮಾನಿತನಾಗಿ ಸದಾ ಅದರಲ್ಲೇ ಬಿದ್ದಿರುವನು.

70. ಪಶ್ಚಾತ್ತಾಪ ಪಟ್ಟು, ಸತ್ಕರ್ಮ ಮಾಡಿದವರ ಹೊರತು. ಅಲ್ಲಾಹನು ಅವರ ಪಾಪ ಕೃತ್ಯಗಳನ್ನೆಲ್ಲಾ ಸತ್ಕರ್ಮಗಳಾಗಿ ಮಾರ್ಪಡಿಸುವನು. ಅಲ್ಲಾಹನು ಖಂಡಿತ ಕ್ಷಮಿಸುವವನು ಮತ್ತು ಕರುಣೆ ತೋರುವವನಾಗಿದ್ದಾನೆ.

71. ಪಶ್ಚಾತ್ತಾಪಪಟ್ಟು ಸತ್ಕರ್ಮ ಮಾಡುವವನು ನಿಜವಾಗಿ ಅಲ್ಲಾಹನೆಡೆಗೆ ಮರಳಬೇಕಾದ ರೀತಿಯಲ್ಲಿ ಮರಳುತ್ತಾನೆ.

 72. ಅವರು (ಅಲ್ಲಾಹನ ನಿಷ್ಠ ದಾಸರು) ಎಂದೂ ಸುಳ್ಳಿಗೆ ಸಾಕ್ಷಿಗಳಾಗುವುದಿಲ್ಲ ಮತ್ತು ಸಲ್ಲದ ಕಾರ್ಯಗಳ ಬಳಿಯಿಂದ ಹಾದು ಹೋಗ ಬೇಕಾದಾಗ ಅವರು ಸಭ್ಯ ರೀತಿಯಲ್ಲಿ ಹಾದು ಹೋಗುತ್ತಾರೆ.

73. ತಮ್ಮ ಒಡೆಯನ ವಚನಗಳ ಮೂಲಕ ಅವರಿಗೆ ಉಪದೇಶಿಸಲಾದಾಗ ಅವರು ಅವುಗಳ ಪಾಲಿಗೆ ಕಿವುಡರೂ ಕುರುಡರೂ ಆಗಿ ಬಿಡುವುದಿಲ್ಲ.

74. ನಮ್ಮೊಡೆಯಾ! ನಮ್ಮ ಮಡದಿಯರು ಮತ್ತು ನಮ್ಮ ಮಕ್ಕಳ ಮೂಲಕ ನಮ್ಮ ಕಣ್ಣುಗಳಿಗೆ ಶಾಂತಿಯನ್ನು ಒದಗಿಸು ಮತ್ತು ನಮ್ಮನ್ನು ಧರ್ಮ ನಿಷ್ಠರ ನೇತಾರರಾಗಿಸು, ಎಂದು ಅವರು ಪ್ರಾರ್ಥಿಸುತ್ತಿರುತ್ತಾರೆ.

75. ಅವರ ಸಹನೆಯ ಫಲವಾಗಿ ಅವರಿಗೆ (ಸ್ವರ್ಗದಲ್ಲಿ), ಉನ್ನತವಾದ ನಿವಾಸಗಳನ್ನು ನೀಡಲಾಗುವುದು. ಶುಭ ಹಾಗೂ ಶಾಂತಿಯನ್ನು ಹಾರೈಸುತ್ತಾ ಅವರನ್ನು ಸ್ವಾಗತಿಸಲಾಗುವುದು.

76. ಅವರು ಸದಾಕಾಲ ಅಲ್ಲೇ ಇರುವರು. ಅದು, ಬಹಳ ಸುಂದರ ನಿವಾಸ ಮತ್ತು ಬಹಳ ಉತ್ತಮ ನೆಲೆಯಾಗಿರುವುದು.

77. ಹೇಳಿರಿ; ನೀವು ನನ್ನ ಒಡೆಯನನ್ನು ಪ್ರಾರ್ಥಿಸದಿದ್ದರೆ ಅವನೇನೂ ನಿಮ್ಮನ್ನು ಲೆಕ್ಕಿಸುವವನಲ್ಲ. ನೀವು (ಸತ್ಯವನ್ನು) ತಿರಸ್ಕರಿಸಿರುವಿರಿ. ಅದರ ಶಿಕ್ಷೆ ನಿಮಗೆ ಸಿಗುವುದು ಖಚಿತ.