46. Al Ahqaf

46. ಅಲ್ ಅಹ್ಕ್ವಾಫ್ (ಮರಳ ದಿಣ್ಣೆಗಳು)

ವಚನಗಳು – 35, ಮಕ್ಕಃ

ಅಲ್ಲಾಹನ ಹೆಸರಿಂದ – ಅವನು ಅಪಾರ ದಯಾಳು, ಕರುಣಾಮಯಿ.

1. ಹಾ ಮೀಮ್.

2. ಇದು, ಅಲ್ಲಾಹನ ಕಡೆಯಿಂದ ಇಳಿಸಲಾಗಿರುವ ಗ್ರಂಥ. ಅವನು ಪ್ರಬಲನೂ ಯುಕ್ತಿವಂತನೂ ಆಗಿರುವನು.

3. ಆಕಾಶಗಳನ್ನು ಹಾಗೂ ಭೂಮಿಯನ್ನು ಮತ್ತು ಅವುಗಳ ನಡುವೆ ಇರುವ ಎಲ್ಲವನ್ನೂ ನಾವು ನ್ಯಾಯೋಚಿತವಾಗಿ ಹಾಗೂ ಒಂದು ನಿರ್ದಿಷ್ಟ ಅವಧಿಗಾಗಿ ಸೃಷ್ಟಿಸಿರುವೆವು. (ಆದರೆ) ಧಿಕ್ಕಾರಿಗಳು ತಮಗೆ ನೀಡಲಾದ ಎಚ್ಚರಿಕೆಯನ್ನು ಕಡೆಗಣಿಸುತ್ತಾರೆ.

4. ಹೇಳಿರಿ; ನೀವು ಅಲ್ಲಾಹನ ಹೊರತು ಯಾರನ್ನೆಲ್ಲಾ ಕರೆದು ಪ್ರಾರ್ಥಿಸುತ್ತೀರೋ, ಅವರನ್ನೊಮ್ಮೆ ಕಂಡಿರಾ? ಭೂಮಿಯಲ್ಲಿನ ಯಾವ ವಸ್ತುವನ್ನು ತಾನೇ ಅವರು ಸೃಷ್ಟಿಸಿದ್ದಾರೆ ಎಂಬುದನ್ನು ನನಗೆ ತೋರಿಸಿರಿ. ಅಥವಾ ಆಕಾಶಗಳಲ್ಲಾದರೂ ಅವರಿಗೇನಾದರೂ ಪಾಲಿದೆಯೇ? ನೀವು ಸತ್ಯವಂತರಾಗಿದ್ದರೆ, ಇದಕ್ಕಿಂತ (ಕುರ್‌ಆನ್‌ಗಿಂತ) ಹಿಂದಿನ ಯಾವುದಾದರೂ ಗ್ರಂಥವನ್ನು ಅಥವಾ ಜ್ಞಾನದ ಯಾವುದಾದರೂ ಉಳಿಕೆಯನ್ನು ತಂದು ನನಗೆ (ಪುರಾವೆಯಾಗಿ) ತೋರಿಸಿರಿ.

5. ಅಲ್ಲಾಹನನ್ನು ಬಿಟ್ಟು, ಪುನರುತ್ಥಾನ ದಿನದವರೆಗೂ ತನ್ನ ಪ್ರಾರ್ಥನೆಗೆ ಯಾವುದೇ ಉತ್ತರ ನೀಡಲಾಗದವರನ್ನು (ಮಿಥ್ಯದೇವರುಗಳನ್ನು) ಕರೆದು ಪ್ರಾರ್ಥಿಸುವಾತನಿಗಿಂತ ಹೆಚ್ಚು ದಾರಿಗೆಟ್ಟವನು ಯಾರಿದ್ದಾನೆ? ಅವುಗಳಿಗಂತು ಅವರ ಪ್ರಾರ್ಥನೆಗಳ ಕುರಿತು ಅರಿವೇ ಇಲ್ಲ.

6. (ಅಂತಿಮ ತೀರ್ಪಿಗಾಗಿ) ಎಲ್ಲ ಮಾನವರನ್ನು ಒಟ್ಟು ಸೇರಿಸಲಾಗುವ ದಿನ ಅವರು (ಆ ಮಿಥ್ಯ ದೇವರುಗಳು) ಅವರ ಶತ್ರುಗಳಾಗಿ ಬಿಡುವರು ಹಾಗೂ ಅವರು ತಮ್ಮನ್ನು ಪೂಜಿಸಿದ್ದರೆಂಬುದನ್ನೇ ನಿರಾಕರಿಸಿ ಬಿಡುವರು.

7. ಧಿಕ್ಕಾರಿಗಳ ಮುಂದೆ ನಮ್ಮ ಸ್ಪಷ್ಟವಾದ ವಚನಗಳನ್ನು ಓದಿ ಕೇಳಿಸಲಾದಾಗ, ಅವರು ತಮ್ಮ ಮುಂದೆ ಬಂದ ಸತ್ಯವನ್ನು-ಇದು ಶುದ್ಧ ಮಾಟಗಾರಿಕೆಯಾಗಿದೆ ಎನ್ನುತ್ತಾರೆ.

8. (ದೂತರೇ,) ಆತನು ಇದನ್ನು ಸ್ವತಃ ರಚಿಸಿದ್ದಾನೆ, ಎಂದು ಅವರು ಹೇಳುತ್ತಾರೆಯೇ? ಹೇಳಿರಿ; ಒಂದು ವೇಳೆ ಇದನ್ನು ನಾನೇ ರಚಿಸಿದ್ದರೆ, ನನ್ನನ್ನು ಅಲ್ಲಾಹನಿಂದ ರಕ್ಷಿಸುವ ಯಾವ ಅಧಿಕಾರವೂ ನಿಮಗಿಲ್ಲ. ಇದರ ಕುರಿತು ನೀವು ಹೊರಿಸುವ ಆರೋಪಗಳನ್ನು ಅವನು ಚೆನ್ನಾಗಿ ಬಲ್ಲನು. ನನ್ನ ಹಾಗೂ ನಿಮ್ಮ ನಡುವೆ ಸಾಕ್ಷಿಯಾಗಿ ಅವನೇ ಸಾಕು. ಅವನು ಕ್ಷಮಾಶೀಲನೂ ಕರುಣಾಳುವೂ ಆಗಿದ್ದಾನೆ.

9. ಹೇಳಿರಿ; ನಾನೊಬ್ಬ ಹೊಸ ಬಗೆಯ ದೂತನೇನೂ ಅಲ್ಲ. ನಾಳೆ ನನಗೇನಾಗಲಿದೆ ಎಂಬುದಾಗಲಿ ನಿಮಗೇನಾಗಲಿದೆ ಎಂಬುದಾಗಲಿ ನನಗೆ ತಿಳಿಯದು. ನಾನಂತು ನನಗೆ ಇಳಿಸಿ ಕೊಡಲಾಗಿರುವ ಸಂದೇಶವನ್ನಷ್ಟೇ ಅನುಸರಿಸುತ್ತೇನೆ. ನಾನು ಸ್ಪಷ್ಟವಾಗಿ ಎಚ್ಚರಿಸುವವನೇ ಹೊರತು ಬೇರೇನೂ ಅಲ್ಲ.

10. ಹೇಳಿರಿ; ನೀವು (ಚಿಂತಿಸಿ) ನೋಡಿದಿರಾ? ಒಂದು ವೇಳೆ ಇದು (ಕುರ್‌ಆನ್) ನಿಜಕ್ಕೂ ಅಲ್ಲಾಹನ ಕಡೆಯಿಂದ ಬಂದಿದ್ದು, ನೀವು ಇದನ್ನು ಧಿಕ್ಕರಿಸಿದರೆ ಮತ್ತು ಇಸ್ರಾಈಲರ ಸಂತತಿಯವನೊಬ್ಬನು ಈ ಬಗೆಯ ಗ್ರಂಥದ ಪರವಾಗಿ ಸಾಕ್ಷಿ ಹೇಳಿ ವಿಶ್ವಾಸಿಯಾಗಿ ಬಿಟ್ಟ ಬಳಿಕವೂ ನೀವು ಮಾತ್ರ ಅಹಂಕಾರ ತೋರಿದರೆ (ನಿಮ್ಮ ಗತಿ ಏನಾದೀತು)? ಅಲ್ಲಾಹನು ಖಂಡಿತ ಅಕ್ರಮಿಗಳಿಗೆ ಸರಿದಾರಿಯನ್ನು ತೋರುವುದಿಲ್ಲ.

11. ಧಿಕ್ಕಾರಿಗಳು, ವಿಶ್ವಾಸಿಗಳ ಕುರಿತು, ‘‘ಒಂದು ವೇಳೆ ಅದು (ಕುರ್‌ಆನ್) ನಿಜಕ್ಕೂ ಶ್ರೇಷ್ಠವಾಗಿದ್ದರೆ (ಅದನ್ನು ನಂಬುವ ವಿಷಯದಲ್ಲಿ) ಅವರು ನಮಗಿಂತ ಮುಂದಿರುತ್ತಿರಲಿಲ್ಲ’’ ಎನ್ನುತ್ತಾರೆ. ನಿಜವಾಗಿ, ಅವರಿಗೆ ಅದರಿಂದ (ಕುರ್‌ಆನ್‌ನಿಂದ) ಮಾರ್ಗದರ್ಶನ ಸಿಕ್ಕಿಲ್ಲವಾದ್ದರಿಂದ ಅವರು, ‘‘ಇದೊಂದು ಹಳೆಯ ಸುಳ್ಳು’’ ಎನ್ನುತ್ತಿದ್ದಾರೆ.

12. ಇದಕ್ಕೆ ಮುನ್ನ ಮೂಸಾರ ಗ್ರಂಥವು (ತೌರಾತ್), ಸನ್ಮಾರ್ಗದರ್ಶಿ ಹಾಗೂ ಅನುಗ್ರಹವಾಗಿತ್ತು. ಇದೀಗ (ಅದನ್ನು) ಸಮರ್ಥಿಸುವ (ಹಾಗೂ) ಅರಬಿ ಭಾಷೆಯಲ್ಲಿರುವ ಈ ಗ್ರಂಥವು, ಅಕ್ರಮಿಗಳಿಗೆ ಮುನ್ನೆಚ್ಚರಿಕೆ ನೀಡಲಿಕ್ಕಾಗಿ ಮತ್ತು ಸಜ್ಜನರಿಗೆ ಶುಭವಾರ್ತೆ ನೀಡಲಿಕ್ಕಾಗಿ ಬಂದಿದೆ.

13. ಅಲ್ಲಾಹನೇ ನಮ್ಮ ಒಡೆಯನೆನ್ನುವವರು ಹಾಗೂ (ಅದರಲ್ಲಿ) ಸ್ಥಿರವಾಗಿರುವವರು – ಅವರಿಗೆ ಯಾವ ಭಯವೂ ಇರದು ಮತ್ತು ಅವರು ದುಃಖಿಸಲಾರರು.

14. ಅವರೇ ಸ್ವರ್ಗವಾಸಿಗಳು. ಅವರು ಸದಾಕಾಲ ಅದರಲ್ಲೇ ಇರುವರು. ಅವರು ಮಾಡುತ್ತಿದ ಕರ್ಮಗಳ ಪ್ರತಿಫಲವಿದು.

15. ತನ್ನ ಹೆತ್ತವರ ಜೊತೆ ಅತ್ಯುತ್ತಮವಾಗಿ ವರ್ತಿಸಬೇಕೆಂದು ನಾವು ಮಾನವನಿಗೆ ಆದೇಶಿಸಿರುವೆವು. ಅವನ ಮಾತೆಯು ಬಹಳ ಕಷ್ಟಪಟ್ಟು ಅವನನ್ನು (ತನ್ನ ಗರ್ಭದಲ್ಲಿ) ಹೊತ್ತು ನಡೆದಳು ಮತ್ತು ಬಹಳ ಸಂಕಟ ಸಹಿಸಿ ಆತನನ್ನು ಹೆತ್ತಳು. ಹೀಗೆ, ಅವನು ಗರ್ಭದಲ್ಲಿದ್ದು ಆ ಬಳಿಕ ಸ್ತನಪಾನವನ್ನು ತ್ಯಜಿಸುವ ತನಕ (ಒಟ್ಟು) ಮೂವತ್ತು ತಿಂಗಳುಗಳು ತಗಲಿದವು. ಮುಂದೆ ಅವನು ಯುವಕನಾಗಿ ಆ ಬಳಿಕ ನಲ್ವತ್ತು ವರ್ಷದವನಾದಾಗ (ಹೀಗೆಂದು) ಪ್ರಾರ್ಥಿಸಿದನು; ‘‘ನನ್ನೊಡೆಯಾ, ನೀನು ನನಗೆ ಹಾಗೂ ನನ್ನ ತಂದೆ ತಾಯಿಗೆ ದಯಪಾಲಿಸಿರುವ ಅನುಗ್ರಹಗಳಿಗಾಗಿ ಕೃತಜ್ಞತೆ ಸಲ್ಲಿಸುವ ಸೌಭಾಗ್ಯವನ್ನು ನನಗೆ ಕರುಣಿಸು ನೀನು ಮೆಚ್ಚುವ ಸತ್ಕಾರ್ಯಗಳನ್ನು ಮಾಡುವ ಭಾಗ್ಯವನ್ನು ನನಗೆ ನೀಡು ಮತ್ತು ನನ್ನ ಸಂತತಿಗಳನ್ನು ಸಜ್ಜನರಾಗಿ ಮಾಡು. ನಾನು ಪಶ್ಚಾತ್ತಾಪ ಪಟ್ಟು ನಿನ್ನೆಡೆಗೆ ಒಲಿಯುತ್ತಿದ್ದೇನೆ ಮತ್ತು ನಾನು ಖಂಡಿತ ಮುಸ್ಲಿಮ (ಶರಣಾಗತ)ನಾಗಿರುವೆನು’’.

16. ಅವರು ಮಾಡಿದ ಅತ್ಯುತ್ತಮ ಕರ್ಮಗಳನ್ನು ನಾವು ಸ್ವೀಕರಿಸುವೆವು ಮತ್ತು ಅವರ ಪಾಪಗಳನ್ನು ಕ್ಷಮಿಸಿ ಬಿಡುವೆವು. ಅವರು ಸ್ವರ್ಗವಾಸಿಗಳಾಗುವರು. ಅವರಿಗೆ ನೀಡಲಾದ ವಾಗ್ದಾನವು ಸತ್ಯವಾಗಿತ್ತು.

17. ಅತ್ತ ಇನ್ನೊಬ್ಬನು ತನ್ನ ಹೆತ್ತವರೊಡನೆ ಹೇಳುತ್ತಾನೆ; ‘‘ಛೀಮಾರಿ ನಿಮಗೆ! ನನ್ನನ್ನು (ಮರಣಾನಂತರ) ಜೀವಂತಗೊಳಿಸಲಾಗುವುದೆಂದು ನೀವು ನನಗೆ ತಿಳಿಸುತ್ತಿರುವಿರಾ? ನನಗಿಂತ ಹಿಂದೆ ಹಲವು ಗುಂಪುಗಳು ಗತಿಸಿ ಹೋಗಿವೆಯಲ್ಲಾ?’’ ಆಗ ಅವರಿಬ್ಬರೂ ಅಲ್ಲಾಹನ ನೆರವನ್ನು ಕೋರುತ್ತಾ (ಪುತ್ರನೊಡನೆ) ಹೇಳಿದರು; ‘‘ನಿನಗೆ ವಿನಾಶ ಕಾದಿದೆ. ನೀನು ವಿಶ್ವಾಸಿಯಾಗಿ ಬಿಡು. ಅಲ್ಲಾಹನ ವಾಗ್ದಾನವು ಖಂಡಿತ ಸತ್ಯ’’. ಅವನು ಹೇಳಿದನು; ‘‘ಇವೆಲ್ಲಾ ಕೇವಲ ಗತಕಾಲದವರ ಕಟ್ಟು ಕತೆಗಳು’’.

18. ಅವರ ಹಿಂದೆ ಗತಿಸಿದ ಜಿನ್ನ್ ಹಾಗೂ ಮಾನವರ ಸಮುದಾಯಗಳ ಪೈಕಿ ಇಂಥವರ ವಿರುದ್ಧವೇ (ಅಲ್ಲಾಹನ) ತೀರ್ಪು ಅನುಷ್ಠಾನವಾಗಿತ್ತು. ಅವರೇ ನಷ್ಟ ಅನುಭವಿಸುವವರ ಸಾಲಿಗೆ ಸೇರಿದವರು.

19. ಪ್ರತಿಯೊಬ್ಬರಿಗೂ ಅವರ ಕರ್ಮಗಳಿಗನುಸಾರ ಸ್ಥಾನಮಾನ ಸಿಗಲಿದೆ. ಅವರಿಗೆ ಅವರ ಕರ್ಮಗಳ ಪ್ರತಿಫಲ ಸಿಗಲಿದೆ. ಅವರ ಮೇಲೆ ಅನ್ಯಾಯವಂತೂ ಆಗದು.

20. ಧಿಕ್ಕಾರಿಗಳನ್ನು ನರಕದೆದುರು ತರಲಾಗುವ ದಿನ (ಅವರೊಡನೆ ಹೇಳಲಾಗುವುದು); ನೀವು ನಿಮ್ಮ ಪಾಲಿನ, ಒಳ್ಳೆಯ ವಸ್ತುಗಳನ್ನೆಲ್ಲಾ ನಿಮ್ಮ ಇಹಲೋಕ ಜೀವನದಲ್ಲೇ ಪಡೆದಿರಿ ಮತ್ತು ಅವುಗಳನ್ನು ಧಾರಾಳ ಭೋಗಿಸಿದಿರಿ. ಇಂದು ನಿಮಗೆ ಅಪಮಾನಕಾರಿ ಶಿಕ್ಷೆ ಮಾತ್ರ ಸಿಗಲಿದೆ. ಇದು, ನೀವು ಭೂಮಿಯಲ್ಲಿ ಅನ್ಯಾಯವಾಗಿ ಮೆರೆದ ಅಹಂಕಾರ ಮತ್ತು ನಿಮ್ಮ ಅವಿಧೇಯತೆಯ ಪ್ರತಿಫಲವಾಗಿದೆ.

21. ನೆನಪಿಸಿಕೊಳ್ಳಿರಿ, ಆದ್ ಜನಾಂಗದವರ ಸಹೋದರ (ಹೂದ್)ರನ್ನು, ಅವರು ‘ಅಹ್‌ಕಾಫ್’ನಲ್ಲಿ (ಮರಳ ದಿಣ್ಣೆಗಳಿದ್ದ ನಾಡಿನಲ್ಲಿ) ತಮ್ಮ ಜನಾಂಗದವರನ್ನು ಎಚ್ಚರಿಸಿದರು. ಅವರಿಗಿಂತ ಮುನ್ನವೂ ಅವರ ಅನಂತರವೂ, ‘‘ಅಲ್ಲಾಹನ ಹೊರತು ಬೇರೆ ಯಾರನ್ನೂ ಪೂಜಿಸಬೇಡಿ. ಒಂದು ಮಹಾನ್ ದಿನದ ಶಿಕ್ಷೆಗೆ ನೀವು ತುತ್ತಾಗುವಿರೆಂಬ ಭಯ ನನಗಿದೆ’’ ಎಂದು ಎಚ್ಚರಿಸುವವರು ಬಂದಿದ್ದರು.

22. ಅವರು (ಜನಾಂಗದವರು), ‘‘ನೀನೇನು ನಮ್ಮನ್ನು ನಮ್ಮ ದೇವರುಗಳಿಂದ ದೂರಗೊಳಿಸಲು ಬಂದಿರುವೆಯಾ? ನೀನು ಸತ್ಯವಂತನಾಗಿದ್ದರೆ, ನೀನು ನಮಗೆ ವಾಗ್ದಾನ ಮಾಡಿರುವುದನ್ನು (ಶಿಕ್ಷೆಯನ್ನು) ಈಗಲೇ ತಂದು ಬಿಡು’’ ಎಂದಿದ್ದರು.

23. ‘‘(ಶಿಕ್ಷೆ ಯಾವಾಗ ಬರುವುದೆಂಬ) ಜ್ಞಾನವಿರುವುದು ಅಲ್ಲಾಹನ ಬಳಿ ಮಾತ್ರ. ನನ್ನ ಜೊತೆ ಕಳಿಸಲಾಗಿರುವ ಸಂದೇಶವನ್ನು ನಾನು ನಿಮಗೆ ತಲುಪಿಸಿದ್ದೇನೆ. ಆದರೆ ನೀವು ತೀರಾ ಅಜ್ಞಾನಿಗಳಾಗಿರುವುದನ್ನು ನಾನು ಕಾಣುತ್ತಿದ್ದೇನೆ’’ ಎಂದು ಅವರು (ಹೂದ್) ಹೇಳಿದರು.

24. ಕೊನೆಗೆ ಒಂದು ಮೋಡವು ತಮ್ಮ ಬಯಲುಗಳ ಕಡೆಗೆ ಸಾಗಿ ಬರುತ್ತಿರುವುದನ್ನು ಕಂಡು ಅವರು (ಜನಾಂಗದವರು) ‘‘ಇದೋ ನಮ್ಮ ಮೇಲೆ ಮಳೆ ಸುರಿಯಲಿದೆ’’ ಎಂದರು. ನಿಜವಾಗಿ, ನೀವು ಯಾವುದಕ್ಕಾಗಿ ಆತುರ ಪಡುತ್ತಿದ್ದಿರೋ ಅದು ಇದುವೇ – ಕಠಿಣ ಶಿಕ್ಷೆಯನ್ನೊಳಗೊಂಡ ಚಂಡಮಾರುತ.

25. ಅದು ತನ್ನ ಒಡೆಯನ ಆದೇಶದಂತೆ ಎಲ್ಲವನ್ನೂ ನುಚ್ಚುನೂರು ಮಾಡಲಿದೆ. ಕೊನೆಗೆ (ಅಲ್ಲಿ) ಅವರ ನಿವಾಸಗಳ ಹೊರತು ಬೇರೇನೂ ಕಾಣಿಸುತ್ತಿರಲಿಲ್ಲ. ಅಪರಾಧಿಗಳಿಗೆ ನಾವು ಇಂತಹದೇ ಪ್ರತಿಫಲ ನೀಡುತ್ತೇವೆ.

 26. ನಿಮಗೆ ನೀಡಿಲ್ಲದ ಹಲವು ಸಾಮರ್ಥ್ಯಗಳನ್ನು ನಾವು ಅವರಿಗೆ ನೀಡಿದ್ದೆವು ಮತ್ತು ನಾವು ಅವರಿಗೆ ಕಿವಿಗಳನ್ನೂ ಕಣ್ಣುಗಳನ್ನೂ ಮನಸ್ಸುಗಳನ್ನೂ ನೀಡಿದ್ದೆವು. ಆದರೆ ಅವರು ಅಲ್ಲಾಹನ ವಚನಗಳ ವಿರುದ್ಧ ಜಗಳಾಡುತ್ತಿದ್ದಾಗ ಅವರಿಗೆ ತಮ್ಮ ಕಿವಿಗಳಿಂದಾಗಲಿ, ಕಣ್ಣುಗಳಿಂದಾಗಲಿ, ಮನಸ್ಸುಗಳಿಂದಾಗಲಿ ಯಾವ ಲಾಭವೂ ಆಗಲಿಲ್ಲ. ಅವರು ಯಾವುದನ್ನು ಗೇಲಿ ಮಾಡುತ್ತಿದ್ದರೋ ಅದುವೇ ಅವರನ್ನು ಆವರಿಸಿಕೊಂಡಿತು.

 27. ನಾವು ನಿಮ್ಮ ಸುತ್ತಮುತ್ತಲಿನ ಇತರ ಕೆಲವು ನಾಡುಗಳನ್ನು ನಾಶಮಾಡಿದೆವು. ಅವರು (ಸತ್ಯದೆಡೆಗೆ) ಮರಳಬೇಕೆಂದು ನಾವು ಪದೇಪದೇ ನಮ್ಮ ಪುರಾವೆಗಳನ್ನು (ಅವರಿಗೆ) ತೋರಿಸಿದ್ದೆವು.

28. ಅವರು (ಅಲ್ಲಾಹನ) ಸಾಮೀಪ್ಯಕ್ಕಾಗಿ ನೆಚ್ಚಿಕೊಂಡಿರುವ, ಅಲ್ಲಾಹನ ಹೊರತಾದ ಇತರ ದೇವರುಗಳು ಅವರಿಗೇಕೆ ನೆರವಾಗಲಿಲ್ಲ? ಅವುಗಳಂತು ಅವರಿಂದ ಕಣ್ಮರೆಯಾಗಿ ಬಿಟ್ಟವು. ನಿಜವಾಗಿ ಅದೆಲ್ಲಾ ಅವರೇ ಸೃಷ್ಟಿಸಿಕೊಂಡ ಸುಳ್ಳಾಗಿತ್ತು.

29. (ದೂತರೇ,) ನಾವು ಜಿನ್ನ್‌ಗಳ ಒಂದು ಗುಂಪನ್ನು ನಿಮ್ಮ ಕಡೆಗೆ ಕಳಿಸಿದೆವು ಮತ್ತು ಅವರು ಕುರ್‌ಆನನ್ನು ಆಲಿಸುತ್ತಿದ್ದರು. ಅವರು ನಿಮ್ಮ ಬಳಿ ಬಂದಾಗ (ಪರಸ್ಪರರೊಡನೆ) ‘‘ವೌನವಾಗಿರಿ’’ ಎಂದರು. ಕೊನೆಗೆ ಆ ಕಾರ್ಯವು ಮುಗಿದಾಗ ಅವರು ಎಚ್ಚರಿಸುವವರಾಗಿ ತಮ್ಮ ಜನರೆಡೆಗೆ ಮರಳಿದರು.

30. ಅವರು ಹೇಳಿದರು; ನಮ್ಮ ಜನಾಂಗದವರೇ, ಮೂಸಾರ ಬಳಿಕ ಇಳಿಸಿ ಕೊಡಲಾಗಿರುವ ಗ್ರಂಥವನ್ನು ನಾವು ಆಲಿಸಿದ್ದೇವೆ. ಅದು ಹಿಂದಿನದ್ದನ್ನು (ಗತ ಕಾಲದ ಗ್ರಂಥವನ್ನು) ಸಮರ್ಥಿಸುತ್ತದೆ ಹಾಗೂ ಸತ್ಯದೆಡೆಗೆ ಮತ್ತು ಸ್ಥಿರವಾದ ಸನ್ಮಾರ್ಗದೆಡೆಗೆ ದಾರಿ ತೋರುತ್ತದೆ.

31. ನಮ್ಮ ಜನಾಂಗದವರೇ, ಅಲ್ಲಾಹನೆಡೆಗೆ ಕರೆಯುವಾತನಿಗೆ (ಅವನ ಕರೆಗೆ), ಓಗೊಡಿರಿ ಮತ್ತು ಅವನಲ್ಲಿ ವಿಶ್ವಾಸವಿಡಿರಿ. ಅವನು(ಅಲ್ಲಾಹನು) ನಿಮ್ಮ ಪಾಪಗಳನ್ನು ಕ್ಷಮಿಸುವನು ಮತ್ತು ನಿಮ್ಮನ್ನು ಕಠಿಣ ಶಿಕ್ಷೆಯಿಂದ ರಕ್ಷಿಸುವನು.

32. ಅಲ್ಲಾಹನೆಡೆಗೆ ಕರೆಯುವಾತನಿಗೆ (ಅವನ ಕರೆಗೆ) ಓಗೊಡದವನು ಭೂಮಿಯಲ್ಲಿ ಅಲ್ಲಾಹನನ್ನೇನೂ ಮಣಿಸಲಾರನು ಮತ್ತು ಅವನ ಹೊರತು ಆತನಿಗೆ ಪೋಷಕರು ಯಾರೂ ಇಲ್ಲ. ಅಂಥವರು ಸ್ಪಷ್ಟವಾಗಿ ದಾರಿಗೆಟ್ಟ ಸ್ಥಿತಿಯಲ್ಲಿದ್ದಾರೆ.

33. ಆಕಾಶಗಳನ್ನು ಹಾಗೂ ಭೂಮಿಯನ್ನು ಅಲ್ಲಾಹನೇ ಸೃಷ್ಟಿಸಿರುವನೆಂಬುದನ್ನು ಅವರು ಕಾಣುತ್ತಿಲ್ಲವೇ? ಅವುಗಳನ್ನು ಸೃಷ್ಟಿಸಿದ್ದರಿಂದ ಅವನೇನೂ ದಣಿದಿಲ್ಲ. ಅವನು ಸತ್ತವರನ್ನು ಪುನಃ ಜೀವಂತಗೊಳಿಸಲು ಶಕ್ತನಾಗಿದ್ದಾನೆ. ಯಾಕಿಲ್ಲ? ಅವನಂತು ಎಲ್ಲವನ್ನೂ ಮಾಡಲು ಖಂಡಿತ ಶಕ್ತನಾಗಿದ್ದಾನೆ.

 34. ಧಿಕ್ಕಾರಿಗಳನ್ನು ನರಕದ ಮುಂದೆ ತರಲಾದಾಗ, ‘‘ಇದು ಸತ್ಯವಲ್ಲವೇ?’’ (ಎಂದು ಕೇಳಲಾಗುವುದು). ಅವರು, ‘‘ಯಾಕಲ್ಲ? ನಮ್ಮೊಡೆಯನಾಣೆ (ಇದು ಸತ್ಯ)’’ ಎನ್ನುವರು. (ಆಗ) ‘‘ನೀವು ಧಿಕ್ಕರಿಸಿದ್ದರ ಪ್ರತಿಫಲವನ್ನು ಸವಿಯಿರಿ’’ ಎನ್ನಲಾಗುವುದು.

35. ಸಾಹಸಿ ದೂತರು ಸಹನಶೀಲರಾಗಿದ್ದಂತೆ, ನೀವು ಸಹಿಸಿಕೊಳ್ಳಿರಿ ಮತ್ತು ಅವರ ವಿಷಯದಲ್ಲಿ (ಶಿಕ್ಷೆಗಾಗಿ) ಆತುರ ಪಡಬೇಡಿ. ಅವರು ತಮಗೆ ಎಚ್ಚರಿಕೆ ನೀಡಲಾಗಿರುವುದನ್ನು (ಶಿಕ್ಷೆಯನ್ನು) ಕಾಣುವ ದಿನ, ತಾವು (ಲೋಕದಲ್ಲಿ) ಬದುಕಿದ್ದುದು ದಿನದ ಒಂದು ಕ್ಷಣ ಮಾತ್ರ ಎಂದು ಅವರಿಗೆ ತೋಚುವುದು. ಸಂದೇಶ ತಲುಪಿಸುವುದು (ನಿಮ್ಮ ಕೆಲಸ). ಅವಿಧೇಯರ ಹೊರತು ಇನ್ನಾರಾದರೂ ನಾಶವಾಗುವರೇ?