50. Qaf

50. ಕ್ವಾಫ್

ವಚನಗಳು – 45, ಮಕ್ಕಃ

ಅಲ್ಲಾಹನ ಹೆಸರಿಂದ. ಅವನು ಅಪಾರ ದಯಾಳು, ಕರುಣಾಮಯಿ.

1. ಕ್ವಾಫ್. ಗೌರವಾನ್ವಿತ ಕುರ್‌ಆನಿನ ಆಣೆ.

2. ಅವರಲ್ಲೇ ಒಬ್ಬನು ಎಚ್ಚರಿಸುವವನಾಗಿ ಅವರ ಬಳಿಗೆ ಬಂದ ಕುರಿತು ಅವರು ಅಚ್ಚರಿ ಪಡುತ್ತಿದ್ದಾರೆ. ಆದ್ದರಿಂದಲೇ ಧಿಕ್ಕಾರಿಗಳು ಹೇಳುತ್ತಾರೆ; ‘‘ಇದು ತೀರಾ ವಿಚಿತ್ರವಾಗಿದೆ’’.

3. ‘‘ನಾವು ಸತ್ತು ಮಣ್ಣಾದ ಬಳಿಕ (ಮತ್ತೆ ಜೀವ ಪಡೆಯುವುದೇ)? ಆ ಪುನರಾಗಮನ ತೀರಾ ದೂರದ ಸಾಧ್ಯತೆಯಾಗಿದೆ (ಅಸಾಧ್ಯವಾಗಿದೆ)’’.

4. ಭೂಮಿಯು ಅವರಿಂದ (ಅವರ ಮೃತ ಶರೀರದಿಂದ) ಏನನ್ನು ಕಿತ್ತುಕೊಂಡಿದೆ ಎಂಬುದನ್ನು ನಾವು ಚೆನ್ನಾಗಿ ಬಲ್ಲೆವು ಮತ್ತು ನಮ್ಮ ಬಳಿ ಎಲ್ಲವನ್ನೂ ಸುರಕ್ಷಿತವಾಗಿ ದಾಖಲಿಸಿಡುವ ಗ್ರಂಥವಿದೆ.

5. ನಿಜವಾಗಿ, ಸತ್ಯವು ತಮ್ಮ ಬಳಿಗೆ ಬಂದಾಗ ಅವರು ಅದನ್ನು ತಿರಸ್ಕರಿಸಿರುವರು ಮತ್ತು ಅವರು ಗೊಂದಲದಲ್ಲಿದ್ದಾರೆ.

6. ಅವರೇನು, ತಮ್ಮ ಮೇಲಿರುವ ಆಕಾಶದೆಡೆಗೆ, ನಾವು ಅದನ್ನು ಹೇಗೆ ರಚಿಸಿದ್ದೇವೆ ಮತ್ತು ಹೇಗೆ ಅದನ್ನು ಅಲಂಕರಿಸಿದ್ದೇವೆಂದು ನೋಡುವುದಿಲ್ಲವೇ? ಅದರಲ್ಲಿ ಯಾವ ಕುಂದು ಕೊರತೆಯೂ ಇಲ್ಲ.

7. ಭೂಮಿಯನ್ನು ನಾವು ಹರಡಿ ಬಿಟ್ಟರುವೆವು ಮತ್ತು ನಾವು ಅದರಲ್ಲಿ ಪರ್ವತಗಳನ್ನು ನೆಟ್ಟಿರುವೆವು. ಹಾಗೂ ಅದರಲ್ಲಿ ಎಲ್ಲ ಬಗೆಯ ಸುಂದರ ವಸ್ತುಗಳನ್ನು ಬೆಳೆಸಿರುವೆವು.

8. ಇವು (ಅಲ್ಲಾಹನೆಡೆಗೆ) ಒಲಿಯುವ ಪ್ರತಿಯೊಬ್ಬ ದಾಸನ ಕಣ್ಣು ತೆರೆಸುವ ಮತ್ತು ಅವನಿಗೆ ಪಾಠವಾಗುವ ಸಾಧನಗಳಾಗಿವೆ.

9. ಅದೇ ರೀತಿ, ನಾವು ಆಕಾಶದಿಂದ ಸಮೃದ್ಧ ನೀರನ್ನು ಇಳಿಸಿರುವೆವು ಹಾಗೂ ಆ ಮೂಲಕ ತೋಟಗಳನ್ನು ಮತ್ತು ಹೊಲಗಳ ಧಾನ್ಯಗಳನ್ನು ಬೆಳೆಸಿರುವೆವು.

10. ಮತ್ತು (ಅದರಿಂದಲೇ), ಸಂಪನ್ನ ಗೊಂಚಲುಗಳಿರುವ, ಎತ್ತರದ ಖರ್ಜೂರದ ಗಿಡಗಳನ್ನು ಬೆಳೆಸಿರುವೆವು.

11. ಇವೆಲ್ಲಾ (ನಮ್ಮ) ದಾಸರಿಗಾಗಿರುವ ಆಹಾರಗಳು. ಮತ್ತು ನಾವು, ನಿರ್ಜೀವವಾಗಿರುವ ನಾಡುಗಳಿಗೆ ಆ (ನೀರಿನ) ಮೂಲಕ, ಮರು ಜೀವ ನೀಡುವೆವು. ಹೀಗೆಯೇ ನಡೆಯಲಿದೆ ಸತ್ತವರನ್ನು (ಮತ್ತೆ ಜೀವಂತಗೊಳಿಸಿ) ಹೊರತೆಗೆಯುವ ಕ್ರಿಯೆ.

12. ಅವರಿಗಿಂತ ಹಿಂದೆ ನೂಹರ ಜನಾಂಗದವರು, ರಸ್ಸ್‌ನ ನಿವಾಸಿಗಳು ಮತ್ತು ಸಮೂದ್ ಜನಾಂಗದವರು ತಿರಸ್ಕರಿಸಿದ್ದರು.

13. ಹಾಗೆಯೇ, ಆದ್ ಜನಾಂಗದವರು, ಫಿರ್‌ಔನ್ ಹಾಗೂ ಲೂತ್‌ರ ಬಂಧುಗಳು,

14. ಐಕಃದವರು ಹಾಗೂ ತುಬ್ಬಅ್ ಜನಾಂಗದವರು – ಅವರೆಲ್ಲರೂ ದೇವದೂತರನ್ನು ತಿರಸ್ಕರಿಸಿದ್ದರು. ಅವರಿಗೆ ನೀಡಲಾಗಿದ್ದ (ಶಿಕ್ಷೆಯ) ಮುನ್ನೆಚ್ಚರಿಕೆಯು ಅನುಷ್ಠಾನವಾಗಿಬಿಟ್ಟಿತ್ತು.

15. ನಾವೇನು ಪ್ರಥಮ ಬಾರಿಯ ಸೃಷ್ಟಿ ಕ್ರಿಯೆಯಿಂದ ದಣಿದು ಹೋಗಿದ್ದೇವೆಯೇ? ನಿಜವಾಗಿ, (ಮತ್ತೆ) ಹೊಸದಾಗಿ ಸೃಷ್ಟಿಯಾಗುವ ಕುರಿತು ಅವರು ಸಂಶಯದಲ್ಲಿದ್ದಾರೆ.

16. ನಾವೇ ಮನುಷ್ಯನನ್ನು ಸೃಷ್ಟಿಸಿರುವೆವು ಮತ್ತು ಅವನ ಮನಸ್ಸಿನೊಳಗಿನ ಗೊಂದಲಗಳನ್ನೂ ನಾವು ಚೆನ್ನಾಗಿ ಬಲ್ಲೆವು. ನಿಜವಾಗಿ ನಾವು ಅವನ ಜೀವನಾಡಿಗಿಂತಲೂ ಅವನಿಗೆ ಹತ್ತಿರವಾಗಿರುವೆವು.

17. ಅವನ ಬಲಭಾಗದಲ್ಲೂ ಎಡ ಭಾಗದಲ್ಲೂ ಕುಳಿತಿರುವ ಇಬ್ಬರು ಬರಹಗಾರರು (ಅವನ ಎಲ್ಲ ಕರ್ಮಗಳನ್ನು) ಬರೆದಿಡುತ್ತಾರೆ.

18. ಅವನು ಆಡುವ ಯಾವ ಮಾತನ್ನೂ, ಸದಾ ಜಾಗೃತನಾಗಿರುವ ಕಾವಲುಗಾರನೊಬ್ಬನು ದಾಖಲಿಸದೆ ಇರುವುದಿಲ್ಲ.

19. ಕೊನೆಗೆ, ನಿಜಕ್ಕೂ ಮರಣದ ಅಮಲು ಬಂದುಬಿಟ್ಟಾಗ (ಅವನೊಡನೆ), ‘‘ನೀನು ಅಂಜುತ್ತಿದ್ದುದು ಇದನ್ನೇ’’ ಎನ್ನಲಾಗುವುದು.

20. ಮತ್ತು ಕಹಳೆಯನ್ನು ಊದಲಾಗುವುದು. ಅದುವೇ, ಮುನ್ನೆಚ್ಚರಿಕೆ ನೀಡಲಾಗಿದ್ದ ದಿನ.

21. ಅಂದು ಪ್ರತಿಯೊಬ್ಬನೂ (ಅಲ್ಲಾಹನ ಮುಂದೆ) ಹಾಜರಾಗುವನು. ಅವನ ಜೊತೆ (ಅವನನ್ನು) ನಡೆಸುವ ಒಬ್ಬನಿರುವನು ಮತ್ತು ಒಬ್ಬ ಸಾಕ್ಷಿಯೂ ಇರುವನು.

 22. (ಅವನೊಡನೆ ಹೇಳಲಾಗುವುದು;) ‘‘ನೀನು ಈ (ದಿನದ) ಕುರಿತು ನಿಶ್ಚಿಂತನಾಗಿದ್ದೆ. ಇದೀಗ ನಾವು ನಿನ್ನ ತೆರೆಯನ್ನು ನಿನ್ನಿಂದ ಸರಿಸಿ ಬಿಟ್ಟಿರುವೆವು. ಇದೋ, ಇಂದು ನಿನ್ನ ದೃಷ್ಟಿ ಬಹಳ ತೀಕ್ಷ್ಣವಾಗಿದೆ’’.

23. ಅವನ ಜೊತೆಗಿರುವವನು ಹೇಳುವನು; ‘‘ಇದು ನನ್ನ ಬಳಿ ಸಿದ್ಧವಾಗಿರುವ, (ಅವನ ಕರ್ಮಗಳ) ದಾಖಲೆ’’.

24. (ಅಪ್ಪಣೆಯಾಗುವುದು;) ‘‘ನೀವಿಬ್ಬರು, ಪ್ರತಿಯೊಬ್ಬ ಕೃತಘ್ನ, ವಿದ್ರೋಹಿಯನ್ನು ನರಕದೊಳಕ್ಕೆ ಎಸೆದು ಬಿಡಿರಿ’’

25. ‘‘ಸತ್ಕಾರ್ಯಕ್ಕೆ ತಡೆಯೊಡ್ಡುತ್ತಿದ್ದ, ಅತಿರೇಕವೆಸಗುತ್ತಿದ್ದ (ಹಾಗೂ) ಸಂಶಯ ಬಿತ್ತುತ್ತಿದ್ದಾತನನ್ನು (ನರಕದೊಳಕ್ಕೆ ಎಸೆಯಿರಿ)’’.

26. ‘‘ಅವನು ಅಲ್ಲಾಹನ ಜೊತೆ ಇತರರನ್ನು ದೇವರಾಗಿಸಿಕೊಂಡಿದ್ದನು. ಇದೀಗ ಅವನನ್ನು ಕಠಿಣ ಶಿಕ್ಷೆಯೊಳಕ್ಕೆ (ನರಕಕ್ಕೆ) ಎಸೆದುಬಿಡಿರಿ’’.

27. ಅವನ ಸಂಗಾತಿಯಾಗಿದ್ದವನು ಹೇಳುವನು; ‘‘ನಮ್ಮೊಡೆಯಾ, ಅವನನ್ನು ವಿದ್ರೋಹಿಯಾಗಿಸಿದವನು ನಾನಲ್ಲ. ಸ್ವತಃ ಅವನೇ ತಪ್ಪು ದಾರಿಯಲ್ಲಿ ಬಹುದೂರ ಹೊರಟು ಹೋಗಿದ್ದನು’’.

28. (ಅಲ್ಲಾಹನು) ಹೇಳುವನು; ನೀವು ನನ್ನ ಮುಂದೆ ಜಗಳಾಡಬೇಡಿ, ನಿಮಗೆ ನಾನು ಮುನ್ನೆಚ್ಚರಿಕೆಯನ್ನು ಹಿಂದೆಯೇ ಕಳಿಸಿಕೊಟ್ಟಿದ್ದೆ.

29. ನನ್ನ ಬಳಿ ಮಾತು ಬದಲಾಗುವುದಿಲ್ಲ. ಮತ್ತು ನಾನು ದಾಸರ ಮೇಲೆ ಅಕ್ರಮವೆಸಗುವವನಲ್ಲ.

30. ಅಂದು ನಾವು ನರಕದೊಡನೆ, ‘‘ನೀನು ತುಂಬಿದೆಯಾ?’’ ಎಂದು ಕೇಳುವೆವು. ಅದು ‘‘ಇನ್ನಷ್ಟು ಇದೆಯೇ?’’ ಎನ್ನುವುದು.

31. ಮತ್ತು ನಾವು ಸ್ವರ್ಗವನ್ನು ನಿಕಟಗೊಳಿಸುವೆವು. ಅದೆಂದೂ (ಅವರಿಂದ) ದೂರವಾಗದು.

32. ಇದನ್ನೇ ವಾಗ್ದಾನ ಮಾಡಲಾಗಿತ್ತು; ನಿಮಗೆ ಹಾಗೂ (ಅಲ್ಲಾಹನತ್ತ) ಒಲವು ತೋರುತ್ತಲಿರುವ ಮತ್ತು ಸದಾ ಜಾಗೃತನಾಗಿರುವ ಪ್ರತಿಯೊಬ್ಬನಿಗೆ.

33. (ಹಾಗೆಯೇ) ಕಣ್ಣಾರೆ ಕಾಣದೆಯೇ, ಆ ಅಪಾರ ದಯಾಮಯನ ಭಕ್ತನಾಗಿರುವವನಿಗೆ ಮತ್ತು ಪದೇ ಪದೇ (ಅಲ್ಲಾಹನತ್ತ) ಒಲಿಯುವ ಮನಸ್ಸಿನೊಂದಿಗೆ ಬಂದಿರುವವನಿಗೆ.

34. (ಅವರೊಡನೆ ಹೇಳಲಾಗುವುದು;) ಶಾಂತಿಯೊಂದಿಗೆ ಇದನ್ನು ಪ್ರವೇಶಿಸಿರಿ. ಇದುವೇ, ಶಾಶ್ವತ ದಿನ.

35. ಅಲ್ಲಿ ಅವರಿಗೆ ಅವರು ಬಯಸಿದ್ದೆಲ್ಲವೂ ಸಿಗಲಿದೆ, ಮಾತ್ರವಲ್ಲ, ನಮ್ಮ ಬಳಿ ಮತ್ತಷ್ಟಿದೆ.

36. ಅವರಿಗಿಂತ (ಮಕ್ಕಃದವರಿಗಿಂತ) ಹಿಂದೆ ನಾವು ಅದೆಷ್ಟೋ ಜನಾಂಗಗಳನ್ನು ನಾಶ ಮಾಡಿರುವೆವು. ಅವರು ಇವರಿಗಿಂತ ತುಂಬಾ ಆದರೆ, ಕೊನೆಗೆ ‘‘ಪಲಾಯನಕ್ಕೆ ದಾರಿಯುಂಟೇ?’’ ಎನ್ನುತ್ತಾ ಅವರು ನಾಡು ನಾಡು ಅಲೆಯ ತೊಡಗಿದರು.

37. ಇದರಲ್ಲಿ ಖಂಡಿತ ಪಾಠವಿದೆ, ಮನಸ್ಸುಳ್ಳವರಿಗೆ ಅಥವಾ ಕಿವಿಗೊಟ್ಟು ಕೇಳುವವರು ಮತ್ತು ನೋಡುವವರಿಗೆ.

38. ಆಕಾಶಗಳನ್ನು ಹಾಗೂ ಭೂಮಿಯನ್ನು ಮತ್ತು ಅವುಗಳ ನಡುವೆ ಇರುವ ಎಲ್ಲವನ್ನೂ ನಾವು ಆರು ದಿನಗಳಲ್ಲಿ ಸೃಷ್ಟಿಸಿರುವೆವು ಮತ್ತು ನಮ್ಮನ್ನು ಯಾವ ದಣಿವೂ ಬಾಧಿಸಲಿಲ್ಲ.

39. ಅವರಾಡುವ ಮಾತುಗಳ ಕುರಿತು ನೀವು ಸಹನಶೀಲರಾಗಿರಿ. ಮತ್ತು ಸೂರ್ಯೋದಯಕ್ಕೆ ಮುನ್ನವೂ ಸೂರ್ಯಾಸ್ತಮಾನಕ್ಕೆ ಮುನ್ನವೂ ನಿಮ್ಮ ಒಡೆಯನನ್ನು ಪ್ರಶಂಸಿಸುತ್ತಾ ಅವನ ಪಾವಿತ್ರವನ್ನು ಜಪಿಸಿರಿ.

40. ಮತ್ತು ರಾತ್ರಿಯ ವೇಳೆಯಲ್ಲೂ ಸಾಷ್ಟಾಂಗವೆರಗಿದ ಬಳಿಕವೂ ಅವನ ಪಾವಿತ್ರವನ್ನು ಜಪಿಸಿರಿ.

41. ಕೇಳಿರಿ, ಕೂಗುವವನು ಹತ್ತಿರದಿಂದಲೇ ಕೂಗುವ ಒಂದು ದಿನ (ಬರಲಿದೆ).

42. ಅಂದು ಅವರು ನಿಜಕ್ಕೂ ಒಂದು ಆರ್ಭಟವನ್ನು ಕೇಳುವರು. ಅದುವೇ,

(ಗೋರಿಗಳಿಂದ) ಹೊರಡುವ ದಿನವಾಗಿರುವುದು.

43. ಖಂಡಿತ ನಾವೇ ಜೀವನವನ್ನು ನೀಡುತ್ತೇವೆ ಮತ್ತು ನಾವೇ ಸಾಯಿಸುತ್ತೇವೆ ಮತ್ತು ನಮ್ಮೆಡೆಗೇ (ಎಲ್ಲರೂ) ಮರಳಬೇಕಾಗಿದೆ.

44. ಅವರ ಮೇಲಿಂದ ಭೂಮಿಯು ಬಿರಿದು ಬಿಡುವ ದಿನ ಅವರು  (ಅದರೊಳಗಿಂದ) ಧಾವಿಸುವರು. ಈ ಜಮಾವಣೆಯು ನಮ್ಮ ಮಟ್ಟಿಗೆ ಸುಲಭವಾಗಿದೆ.

 45. ಅವರು ಹೇಳುತ್ತಿರುವುದನ್ನೆಲ್ಲಾ ನಾವು ಚೆನ್ನಾಗಿ ಬಲ್ಲೆವು. ನೀವು ಅವರನ್ನು ಬಲವಂತ ಪಡಿಸುವವರಲ್ಲ. ನನ್ನ ಮುನ್ನೆಚ್ಚರಿಕೆಯನ್ನು ಅಂಜುವವರಿಗೆ ನೀವು ಕುರ್‌ಆನಿನ ಮೂಲಕ ಉಪದೇಶಿಸಿರಿ.