68. Al Qalam

68. ಅಲ್ ಕಲಮ್ (ಲೇಖನಿ)

ವಚನಗಳು – 52, ಮಕ್ಕಃ

ಅಲ್ಲಾಹನ ಹೆಸರಿಂದ – ಅವನು ಅಪಾರ ದಯಾಳು, ಕರುಣಾಮಯಿ.

1. ನೂನ್ – ಲೇಖನಿಯ ಮತ್ತು ಅವರ (ಮಲಕ್‌ಗಳ) ಬರಹದ ಆಣೆ.

2. (ದೂತರೇ,) ನಿಮ್ಮ ಒಡೆಯನ ಅನುಗ್ರಹದಿಂದ ನೀವು ಹುಚ್ಚರೇನಲ್ಲ.

3. ನಿಮಗೆ, ಎಂದೂ ಮುಗಿಯದ ಪ್ರತಿಫಲವು ಸಿಗಲಿದೆ.

4. ನೀವು ಖಂಡಿತ ಅತ್ಯುನ್ನತ ಮಟ್ಟದ ಚಾರಿತ್ರವಂತರು.

5. ಶೀಘ್ರವೇ ನೀವು ನೋಡುವಿರಿ ಮತ್ತು ಅವರೂ ನೋಡುವರು –

6. – ನಿಮ್ಮ ಪೈಕಿ ಹುಚ್ಚನು ಯಾರೆಂದು.

7. ತನ್ನ ದಾರಿಯಿಂದ ದೂರ ಸರಿದವನು ಯಾರೆಂಬುದನ್ನು ಚೆನ್ನಾಗಿ ಬಲ್ಲವನು ಆ ನಿಮ್ಮ ಒಡೆಯನು. ಯಾರು ಸರಿ ದಾರಿಯಲ್ಲಿದ್ದಾರೆ ಎಂಬುದನ್ನೂ ಅವನೇ ಬಲ್ಲನು.

8. ನೀವು ಸುಳ್ಳುಗಾರರನ್ನು ಅನುಸರಿಸಬೇಡಿರಿ.

9. ನೀವು ತುಸು ಮೃದು ಧೋರಣೆ ತಾಳಿದರೆ ತಾವೂ ಮೃದುವಾಗಬೇಕೆಂದು ಅವರು ಅಪೇಕ್ಷಿಸುತ್ತಿದ್ದಾರೆ.

10. ನೀವು ಖಂಡಿತ ಅನುಸರಿಸಬೇಡಿ – ಪದೇ ಪದೇ ಪ್ರಮಾಣ ಮಾಡುವ ನೀಚನನ್ನು.

11. ದೂಷಿಸುತ್ತಾ ನಿಂದಿಸುತ್ತಾ ತಿರುಗಾಡುವಾತನನ್ನು.

12. ಸತ್ಕಾರ್ಯಕ್ಕೆ ಖರ್ಚು ಮಾಡದವನನ್ನು, ಅತಿರೇಕ ವೆಸಗುವ ಪಾಪಿಯನ್ನು.

13. ಉಗ್ರ ಸ್ವಭಾವದವನನ್ನು, ಚಾರಿತ್ರಹೀನನನ್ನು.

14. ತನ್ನ ಬಳಿ ಸಂಪತ್ತಿದೆ ಮತ್ತು ಪುತ್ರರಿದ್ದಾರೆಂದು (ಅವನು ಅಹಂಕರಿಸುತ್ತಾನೆ).

 15. ಅವನಿಗೆ ನಮ್ಮ ವಚನಗಳನ್ನು ಓದಿ ಕೇಳಿಸಲಾದಾಗ ‘‘ಅವೆಲ್ಲಾ ಗತಕಾಲದ ಕಥೆಗಳು’’ ಎನ್ನುತ್ತಾನೆ.

16. ಶೀಘ್ರವೇ ನಾವು ಅವನ ಮೂಗಿನ ಮೇಲೆ ಬರೆ ಎಳೆಯಲಿದ್ದೇವೆ.

17. ಹಿಂದೆ ತೋಟದವರನ್ನು ಪರೀಕ್ಷಿಸಿದಂತೆ ನಾವು ಅವರನ್ನು ಪರೀಕ್ಷಿಸಿದ್ದೇವಷ್ಟೆ. ‘‘ನಾವು ಅದರ (ಆ ತೋಟದ) ಬೆಳೆಯನ್ನು ನಾಳೆ ಮುಂಜಾನೆ ಖಂಡಿತ ಕೊಯ್ಯುವೆವು’’ ಎಂದು ಅವರು ಪ್ರಮಾಣ ಮಾಡಿ ಘೋಷಿಸಿದ್ದರು.

18. ಇನ್ನೊಂದು ಸಾಧ್ಯತೆಯನ್ನು ಅವರು ಪ್ರಸ್ತಾಪಿಸಲಿಲ್ಲ. (‘ಅಲ್ಲಾಹನಿಚ್ಛಿಸಿದರೆ’ ಎನ್ನಲಿಲ್ಲ).

19. ಅವರು ನಿದ್ರಿಸುತ್ತಿದ್ದಾಗಲೇ ನಿಮ್ಮೊಡೆಯನ ಕಡೆಯಿಂದ ಅದರ (ಆ ತೋಟದ) ಮೇಲೊಂದು ವಿಪತ್ತು ಬಂದೆರಗಿತು.

20. ಬೆಳಗಾಗುವ ಹೊತ್ತಿಗೆ ಅದು ಬೆಳೆ ಕೊಯ್ದ ಹೊಲದಂತಾಗಿ ಬಿಟ್ಟಿತು.

21. ಬೆಳಿಗ್ಗೆ ಅವರು ಪರಸ್ಪರರನ್ನು ಕೂಗಿ ಕರೆಯಲಾರಂಭಿಸಿದರು.

22. ‘‘ನಿಮಗೆ ಫಲ ಕೊಯ್ಯಲಿಕ್ಕಿದ್ದರೆ ಮುಂಜಾವಿನಲ್ಲೇ ನಿಮ್ಮ ತೋಟವನ್ನು ತಲುಪಿರಿ’’ (ಎನ್ನ ತೊಡಗಿದರು).

 23. ಹೀಗೆ, ಅವರು ಹೊರಟರು ಮತ್ತು ಅವರು ಗುಟ್ಟಾಗಿ ಮಾತನಾಡಿಕೊಳ್ಳುತ್ತಿದ್ದರು.

24. ‘‘ಇಂದು ಯಾವ ಬಡ ವ್ಯಕ್ತಿಯೂ ನಿಮ್ಮ ಬಳಿಗೆ ಬರದಂತೆ ನೋಡಿಕೊಳ್ಳಿ’’ (ಎಂದು).

25. ಅವರು, ತಾವು ಭಾರೀ ಶಕ್ತರೆಂದು ಬೀಗುತ್ತಾ ಹೊರಟರು.

26. ಕೊನೆಗೆ ಅವರು, ಅದನ್ನು (ತೋಟವನ್ನು) ಕಂಡಾಗ, ‘‘ನಾವು ದಾರಿ ತಪ್ಪಿದ್ದೇವೆ’’ ಎನ್ನತೊಡಗಿದರು.

27. ‘‘ನಿಜವಾಗಿ, ನಾವು ಭಾಗ್ಯಹೀನರು’’ (ಎಂದು ಕೆಲವರು ಹೇಳಿದರು).

 28. ಅವರಲ್ಲಿನ ಸಂತುಲಿತ ವ್ಯಕ್ತಿಯೊಬ್ಬನು ಹೇಳಿದನು; ‘‘(ಹೀಗಾದೀತೆಂದು) ನಾನು ನಿಮಗೆ ಹೇಳಿರಲಿಲ್ಲವೇ? ನೀವೇಕೆ (ಅಲ್ಲಾಹನ) ಪಾವಿತ್ರವನ್ನು ಜಪಿಸುವುದಿಲ್ಲ?’’

29. ಮರುದಿನ (ಮುಂಜಾನೆ) ಅವರು ಹೇಳಿದರು; ‘‘ನಮ್ಮ ಒಡೆಯನು ಪಾವನನು. ನಾವು ಖಂಡಿತಾ ಅಕ್ರಮಿಗಳಾಗಿದ್ದೆವು’’.

30. ಆ ಬಳಿಕ ಅವರು ಪರಸ್ಪರರನ್ನು ದೂಷಿಸಲು ಆರಂಭಿಸಿದರು.

31. ಅವರು ಹೇಳಿದರು; ‘‘ಅಯ್ಯೋ ನಮ್ಮ ದೌರ್ಭಾಗ್ಯವೇ, ನಾವು ಎಲ್ಲೆ ಮೀರಿ ಬಿಟ್ಟಿದ್ದೆವು’’.

32. ‘‘ನಮ್ಮ ಒಡೆಯನು ನಮಗೆ ಇದಕ್ಕಿಂತ ಉತ್ತಮವಾದುದನ್ನು ನೀಡಬಹುದು. ನಾವು ನಮ್ಮೊಡೆಯನೆಡೆಗೆ ಒಲಿಯುತ್ತಿದ್ದೇವೆ’’.

33. ಹೀಗಿರುತ್ತದೆ, ನಮ್ಮ ಶಿಕ್ಷೆ. ಪರಲೋಕದ ಶಿಕ್ಷೆಯಂತೂ ಇದಕ್ಕಿಂತ ಹಿರಿದಾಗಿರುತ್ತದೆ. ಅದನ್ನು ಅವರು ಅರಿತಿದ್ದರೆ ಚೆನ್ನಾಗಿತ್ತು.

34. ಧರ್ಮನಿಷ್ಠರಿಗಾಗಿ, ಅವರ ಒಡೆಯನ ಬಳಿ ಅನುಗ್ರಹಗಳು ತುಂಬಿದ ಉದ್ಯಾನಗಳಿವೆ.

35. ನಾವೇನು, ಮುಸ್ಲಿಮರಿಗೆ (ಶರಣಾದವರಿಗೆ) ಮತ್ತು ಅಪರಾಧಿಗಳಿಗೆ ಒಂದೇ ಗತಿಯನ್ನು ಒದಗಿಸುವೆವೇ?

36. ನಿಮಗೇನಾಗಿದೆ? ನೀವು ಅದೆಂತಹ ತೀರ್ಮಾನಗಳನ್ನು ಕೈಗೊಳ್ಳುತ್ತೀರಿ.

37. ನಿಮ್ಮ ಬಳಿ ನೀವು ಓದುವ ದಿವ್ಯ ಗ್ರಂಥವೇನಾದರೂ ಇದೆಯೇ?

38. ಅದರಲ್ಲಿ ನಿಮಗೆ ಇಷ್ಟವಿರುವ ಎಲ್ಲವೂ ಸಿಗುತ್ತಿದೆಯೇ?

39. ಅಥವಾ ನೀವು ತೀರ್ಮಾನಿಸಿದ್ದನ್ನೆಲ್ಲಾ ನಾವು ನಿಮಗೆ ಕೊಟ್ಟು ಬಿಡಬೇಕೆಂದು, ಪುನರುತ್ಥಾನದ ದಿನದವರೆಗೂ ನಾವು ಪಾಲಿಸಲೇ ಬೇಕಾದ ಕರಾರನ್ನು ನೀವು ನಮ್ಮಿಂದ ಪಡೆದಿರುವಿರಾ?

40. ಅವರ ಪೈಕಿ ಅದರ ಹೊಣೆಯನ್ನು ವಹಿಸಿಕೊಂಡವರು ಯಾರೆಂದು ಅವರೊಡನೆ ಕೇಳಿರಿ.

41. ಅಥವಾ ಅವರ ಬಳಿ (ದೇವತ್ವದ) ಪಾಲುದಾರರು ಇದ್ದಾರೆಯೇ? ಅವರು ಸತ್ಯವಂತರಾಗಿದ್ದರೆ ಆ ತಮ್ಮ ಪಾಲುದಾರರನ್ನು ಹಾಜರುಪಡಿಸಲಿ

42. ಹಾಲಾಹಲ ಮೆರೆದಿರುವ (ಪುನರುತ್ಥಾನದ) ದಿನ, ಸಾಷ್ಟಾಂಗವೆರಗಲು ಅವರನ್ನು ಕರೆಯಲಾಗುವುದು. ಆದರೆ ಅವರಿಗೆ ಅದು ಸಾಧ್ಯವಾಗದು.

43. ಭಯದಿಂದ ಅವರ ದೃಷ್ಟಿಗಳು ತಗ್ಗಿರುವವು ಮತ್ತು ಅಪಮಾನವು ಅವರನ್ನು ಆವರಿಸಿರುವುದು. ಈ ಹಿಂದೆ ಅವರು ಸ್ವಸ್ಥರಾಗಿದ್ದಾಗ ಸಾಷ್ಟಾಂಗವೆರಗಲು ಅವರನ್ನು ಕರೆಯಲಾಗಿತ್ತು. (ಅವರು ಅದನ್ನು ಕಡೆಗಣಿಸಿದ್ದರು).

44. ನನ್ನನ್ನು ಬಿಟ್ಟು ಬಿಡಿ. ಈ ಸಂದೇಶವನ್ನು ತಿರಸ್ಕರಿಸಿದವನನ್ನು ನಾನು (ಅಲ್ಲಾಹ್) ನೋಡಿಕೊಳ್ಳುವೆನು. ಅವರಿಗೆ ಅರಿವೇ ಇಲ್ಲದಂತೆ ನಾವು ಕ್ರಮೇಣ ಅವರನ್ನು ಹಿಡಿದುಕೊಳ್ಳುವೆವು.

45. ಸದ್ಯ ನಾನು ಅವರಿಗೆ ಕಾಲಾವಕಾಶ ಕೊಡುತ್ತಿದ್ದೇನೆ. ನನ್ನ ಯೋಜನೆಯು ಖಂಡಿತ ಬಲಿಷ್ಠವಾಗಿರುತ್ತದೆ.

46. (ದೂತರೇ,) ನೀವೇನು ಅವರೊಡನೆ ಏನಾದರೂ ಸಂಭಾವನೆಯನ್ನು ಕೇಳಿರುವಿರಾ? ಮತ್ತು ಅವರು ಅದರ ಭಾರದಡಿಯಲ್ಲಿ ನರಳುತ್ತಿದ್ದಾರೆಯೇ?

47. ಅಥವಾ ಅವರ ಬಳಿ, ಅವರು ಬರೆದಿಡುತ್ತಿರುವ ಗುಪ್ತ ಜ್ಞಾನವೇನಾದರೂ ಇದೆಯೇ?

48. (ದೂತರೇ,) ನೀವು ನಿಮ್ಮೊಡೆಯನ ಆದೇಶ ಬರುವ ತನಕ ಸಹನಶೀಲರಾಗಿರಿ. ಮತ್ತು ನೀವು ಮೀನಿನವರಂತೆ (ಯೂನುಸರಂತೆ) ಆಗದಿರಿ. ಅವರು ಬಹಳ ನೊಂದ ಸ್ಥಿತಿಯಲ್ಲಿ (ಅಲ್ಲಾಹನಿಗೆ) ಮೊರೆ ಇಟ್ಟಿದ್ದರು.

49. ಅವರ ಒಡೆಯನ ಅನುಗ್ರಹವು ಅವರಿಗೆ ನೆರವಾಗದೆ ಇದ್ದಿದ್ದರೆ ಅವರು ತೀರಾ ಕೆಟ್ಟ ಸ್ಥಿತಿಯಲ್ಲಿ ಒಂದು ಬಟ್ಟ ಬಯಲಿಗೆ ಎಸೆಯಲ್ಪಡುತ್ತಿದ್ದರು.

50. ಅವರ ಒಡೆಯನು ಅವರನ್ನು ಆಯ್ದುಕೊಂಡನು ಮತ್ತು ಅವರನ್ನು ಸಜ್ಜನರ ಸಾಲಿಗೆ ಸೇರಿಸಿದನು.

51. (ದೂತರೇ,) ಧಿಕ್ಕಾರಿಗಳು ಉಪದೇಶವನ್ನು ಕೇಳಿದಾಗ ತಮ್ಮ ದೃಷ್ಟಿಯಿಂದಲೇ ನಿಮ್ಮನ್ನು ನುಚ್ಚುನೂರು ಮಾಡುವರೋ ಎಂಬಂತೆ ನಿಮ್ಮೆಡೆಗೆ ನೋಡುತ್ತಾರೆ ಮತ್ತು ‘‘ಅವನು ಖಂಡಿತ ಹುಚ್ಚ’’ ಎನ್ನುತ್ತಾರೆ.

52. ನಿಜವಾಗಿ, ಇದು ಸರ್ವಲೋಕಗಳಿಗಾಗಿ ಇರುವ ಒಂದು ಉಪದೇಶವಾಗಿದೆ.