73. Al Muzzammil

ಅಲ್ ಮುಝ್ಝಮ್ಮಿಲ್ (ಹೊದಿಕೆಹೊದ್ದವರು)

ವಚನಗಳು – 20, ಮಕ್ಕಃ

ಅಲ್ಲಾಹನ ಹೆಸರಿಂದ – ಅವನು ಅಪಾರ ದಯಾಳು, ಕರುಣಾಮಯಿ.

1. ಹೊದಿಕೆ ಹೊದ್ದವರೇ (ದೂತರೇ),

2. ರಾತ್ರಿಯ ವೇಳೆ (ನಮಾಝ್‌ಗೆ) ನಿಲ್ಲಿರಿ – ಸ್ವಲ್ಪ ಹೊತ್ತಿನ ಹೊರತು.

3. ಅದರ (ರಾತ್ರಿಯ) ಅರ್ಧ ಭಾಗವನ್ನು ಅಥವಾ ಅದನ್ನು ತುಸು ಕಡಿತ ಗೊಳಿಸಿ (ಅದಕ್ಕಿಂತ ತುಸು ಕಡಿಮೆ ಭಾಗವನ್ನು) –

4. – ಅಥವಾ ಅದನ್ನು ಸ್ವಲ್ಪ ಹೆಚ್ಚಿಸಿಕೊಂಡು, (ನಮಾಝ್‌ನಲ್ಲಿ) ಕುರ್‌ಆನನ್ನು ನೆಮ್ಮದಿಯಿಂದ, ಕ್ರಮಬದ್ಧವಾಗಿ ಓದಿರಿ.

5. ನಾವು ನಿಮ್ಮ ಮೇಲೆ ಒಂದು ಘನವಾದ ಸಂದೇಶವನ್ನು ಇಳಿಸಲಿದ್ದೇವೆ.

6. ರಾತ್ರಿಯ ವೇಳೆ (ಆರಾಧನೆಗಾಗಿ ನಡೆಸುವ) ಜಾಗರಣೆಯು ಖಂಡಿತ ಚಿತ್ತಕ್ಕೆ ಸ್ಥಿರತೆಯನ್ನೊದಗಿಸುತ್ತದೆ ಮತ್ತು ಮಾತನ್ನು ಪರಿಣಾಮಕಾರಿಯಾಗಿಸುತ್ತದೆ.

7. ಹಗಲಲ್ಲಂತೂ ನಿಮ್ಮ ಮೇಲೆ ಹಲವಾರು ಹೊಣೆಗಾರಿಕೆಗಳಿರುತ್ತವೆ.

8. ನೀವು ನಿಮ್ಮ ಒಡೆಯನ ನಾಮವನ್ನು ಸ್ಮರಿಸಿರಿ ಮತ್ತು (ಇತರ) ಎಲ್ಲರನ್ನೂ ತೊರೆದು ಅವನಲ್ಲಿ ಒಲವು ತೋರಿರಿ.

9. ಅವನೇ ಪೂರ್ವ ಮತ್ತು ಪಶ್ಚಿಮಗಳ ಒಡೆಯನು. ಅವನ ಹೊರತು ಬೇರೆ ದೇವರಿಲ್ಲ. ಕಾರ್ಯಸಾಧಕನಾಗಿ ನೀವು ಅವನನ್ನೇ ನೆಚ್ಚಿಕೊಳ್ಳಿರಿ.

10. ಅವರಾಡುವ ಮಾತುಗಳ ವಿಷಯದಲ್ಲಿ ಸಂಯಮ ಪಾಲಿಸಿರಿ. ಮತ್ತು ಅತ್ಯುತ್ತಮ ರೀತಿಯಲ್ಲಿ ಅವರಿಂದ ಬೇರ್ಪಡಿರಿ.

11. ಬಿಟ್ಟು ಬಿಡಿರಿ ನನ್ನನ್ನು, ಮತ್ತು ಸತ್ಯವನ್ನು ತಿರಸ್ಕರಿಸುವ ಸ್ಥಿತಿವಂತರನ್ನು. (ಅವರನ್ನು ನಾನು ನೋಡಿಕೊಳ್ಳುವೆನು). ಮತ್ತು ಅವರಿಗೆ ಇನ್ನಷ್ಟು ಕಾಲಾವಕಾಶ ನೀಡಿರಿ.

12. ನಮ್ಮ ಬಳಿ (ಅವರಿಗಾಗಿ) ಕೈಕೋಳಗಳು ಮತ್ತು ಧಗಧಗಿಸುವ ಬೆಂಕಿ ಇದೆ.

13. ಗಂಟಲಲ್ಲೇ ಉಳಿಯುವ ಆಹಾರ ಮತ್ತು ಕಠಿಣ ಶಿಕ್ಷೆ ಇದೆ.

14. ಭೂಮಿ ಮತ್ತು ಪರ್ವತಗಳು ನಡುಗಲಾರಂಭಿಸುವ ಆ ದಿನ, ಪರ್ವತಗಳು ಕೇವಲ ಮರಳ ರಾಶಿಗಳಂತಾಗಿ ಬಿಡುವವು.

15. (ಜನರೇ,) ನಾವು ಫಿರ್‌ಔನನ ಕಡೆಗೆ ದೂತರನ್ನು ಕಳುಹಿಸಿದಂತೆ ನಿಮ್ಮ ಕಡೆಗೆ ದೂತರನ್ನು ಕಳುಹಿಸಿರುವೆವು. ಅವರು ನಿಮ್ಮ ವಿಷಯದಲ್ಲಿ ಸಾಕ್ಷಿಯಾಗುವರು.

16. ಫಿರ್‌ಔನನು ದೇವದೂತರಿಗೆ ಅವಿಧೇಯತೆ ತೋರಿದಾಗ ನಾವು ಅವನನ್ನು ಹಿಡಿದೆವು ಮತ್ತು ಭಾರೀ ಸಂಕಟಕ್ಕೆ ಸಿಲಕಿಸಿದೆವು.

17. ನೀವು ಧಿಕ್ಕರಿಸಿದರೆ, ಮಕ್ಕಳನ್ನು ವೃದ್ಧರಾಗಿಸುವ ಆ ದಿನ, ನೀವು ಹೇಗೆ ತಾನೇ ಸುರಕ್ಷಿತರಾಗಿ ಉಳಿಯುವಿರಿ?

18. ಅಂದು ಆಕಾಶವು ಬಿರಿದು ಬೀಳಲಿದೆ. ಇದು ಅವನ (ಅಲ್ಲಾಹನ) ವಾಗ್ದಾನ. ಇದು ಈಡೇರುವುದು ಖಚಿತ.

19. ಇದು (ಕುರ್‌ಆನ್) ಒಂದು ಉಪದೇಶ. ಇಷ್ಟ ಉಳ್ಳವನು ತನ್ನ ಒಡೆಯನ ಕಡೆಗಿರುವ ದಾರಿಯನ್ನು ಅನುಸರಿಸಲಿ.

20. ನಿಮ್ಮ ಒಡೆಯನಿಗೆ ಖಂಡಿತ ತಿಳಿದಿದೆ; ನೀವು ಮತ್ತು ನಿಮ್ಮ ಜೊತೆಗಿರುವ ಕೆಲವರು, ಕೆಲವೊಮ್ಮೆ ರಾತ್ರಿಯ ಸುಮಾರು ಮೂರನೇ ಎರಡು ಭಾಗವನ್ನು, ಇನ್ನು ಕೆಲವೊಮ್ಮೆ ಅರ್ಧ ಭಾಗವನ್ನು ಮತ್ತೆ ಕೆಲವೊಮ್ಮೆ ಮೂರನೇ ಒಂದು ಭಾಗವನ್ನು (ನಮಾಝ್‌ನಲ್ಲಿ) ನಿಂತುಕೊಂಡು ಕಳೆಯುತ್ತೀರಿ. ಅಲ್ಲಾಹನೇ ರಾತ್ರಿ ಮತ್ತು ಹಗಲನ್ನು ರೂಪಿಸಿದವನು. ಅದನ್ನು (ಈ ಆದೇಶವನ್ನು) ಬಹುಕಾಲ ಪಾಲಿಸಲು ನಿಮಗೆ ಸಾಧ್ಯವಾಗದೆಂಬುದು ಅವನಿಗೆ ತಿಳಿದಿದೆ. ಆದ್ದರಿಂದ ಅವನು ನಿಮ್ಮ ಮೇಲೆ ದಯೆ ತೋರಿರುವನು. ನೀವಿನ್ನು ಕುರ್‌ಆನ್‌ನಿಂದ, ಸುಲಭವಾಗಿ ಓದಲು ಸಾಧ್ಯವಾಗುವಷ್ಟನ್ನು ಓದಿರಿ. ನಿಮ್ಮಲ್ಲಿ ಕೆಲವರು ರೋಗಿಗಳಿದ್ದಾರೆ, ಇನ್ನು ಕೆಲವರು ಅಲ್ಲಾಹನ ಅನುಗ್ರಹವನ್ನರಸುತ್ತಾ ಭೂಮಿಯಲ್ಲಿ ಸಂಚರಿಸುತ್ತಿರುತ್ತಾರೆ ಮತ್ತು ಕೆಲವರು ಅಲ್ಲಾಹನ ಮಾರ್ಗದಲ್ಲಿ ಹೋರಾಟನಿರತರಾಗಿರುತ್ತಾರೆ. ಆದ್ದರಿಂದ ನೀವು, ಅದರಿಂದ (ಕುರ್‌ಆನಿನಿಂದ) ಸುಲಭವಾಗಿ ಓದಬಹುದಾದಷ್ಟನ್ನು ಓದಿರಿ ಹಾಗೂ ನಮಾಝನ್ನು ಪಾಲಿಸಿರಿ, ಝಕಾತನ್ನು ಪಾವತಿಸಿರಿ. ಮತ್ತು ಅಲ್ಲಾಹನಿಗೆ ಸತ್ಕರ್ಮಗಳ ಸಾಲವನ್ನು ನೀಡಿರಿ. ನೀವು ನಿಮಗಾಗಿ ಮುಂದೆ ಕಳುಹಿಸಿರುವ ಪ್ರತಿಯೊಂದು ಸತ್ಕರ್ಮವನ್ನು ಅಲ್ಲಾಹನ ಬಳಿ ಕಾಣುವಿರಿ. ಆಗ ಅದು ಇನ್ನಷ್ಟು ಉತ್ತಮ ರೂಪದಲ್ಲಿರುವುದು ಮತ್ತು ಭಾರೀ ಪ್ರತಿಫಲದಾಯಕವಾಗಿರುವುದು. ಅಲ್ಲಾಹನಲ್ಲಿ ಕ್ಷಮೆಯಾಚಿಸಿರಿ. ಅಲ್ಲಾಹನು ಖಂಡಿತ ಕ್ಷಮಿಸುವವನೂ ಕರುಣಾಮಯಿಯೂ ಆಗಿರುತ್ತಾನೆ.