87. Al Ala

87. ಅಲ್ ಅಅ್ಲಾ  (ಉನ್ನತ)

ವಚನಗಳು – 19, ಮಕ್ಕಃ

ಅಲ್ಲಾಹನ ಹೆಸರಿಂದ – ಅವನು ಅಪಾರ ದಯಾಳು, ಕರುಣಾಮಯಿ.

1. (ದೂತರೇ,) ಉನ್ನತನಾಗಿರುವ ನಿಮ್ಮ ಒಡೆಯನ ಪಾವಿತ್ರವನ್ನು ಜಪಿಸಿರಿ.

2. (ಅವನು) ನಿಮ್ಮನ್ನು ಸೃಷ್ಟಿಸಿದವನು ಮತ್ತು ರೂಪಿಸಿದವನು.

3. ವಿಧಿಯನ್ನು ನಿರ್ಣಯಿಸಿದವನು, ಸರಿದಾರಿಯನ್ನು ತೋರಿದವನು.

4. ಮೇವನ್ನು ಬೆಳೆಸಿದವನು.

5. ಕೊನೆಗೆ ಅವನು ಅದನ್ನು ಕಪ್ಪಗಿನ ಕಸವಾಗಿಸಿದನು.

6. ನಾವು ನಿಮಗೆ ಓದಿಸುವೆವು ಮತ್ತೆ ನೀವು ಮರೆಯಲಾರಿರಿ.

7. ಅಲ್ಲಾಹನು ಇಚ್ಛಿಸಿದ್ದರ ಹೊರತು. ಅವನು ಬಹಿರಂಗವಾದುದನ್ನು ಮತ್ತು ಗುಪ್ತವಾದುದನ್ನು ಖಂಡಿತ ಬಲ್ಲನು.

8. ನಾವು ನಿಮ್ಮ ಪಾಲಿಗೆ ಸುಲಭದ ಹಾದಿಯನ್ನು ಸುಗಮ ಗೊಳಿಸುವೆವು.

9. ಉಪದೇಶದಿಂದ ಲಾಭವಿದ್ದಲ್ಲಿ ನೀವು ಉಪದೇಶಿಸಿ.

10. (ದೇವರ) ಭಯ ಉಳ್ಳವನು ಉಪದೇಶ ಸ್ವೀಕರಿಸುವನು.

11. ದುಷ್ಟನು ಅದರಿಂದ ದೂರ ಉಳಿಯುವನು.

12. ಅವನು (ಪರಲೋಕದಲ್ಲಿ) ಮಹಾ ಅಗ್ನಿ ಕುಂಡವನ್ನು ಸೇರುವನು.

13. ಅದರಲ್ಲಿ ಅವನಿಗೆ ಸಾಯಲಿಕ್ಕೂ ಆಗದು ಬದುಕಲಿಕ್ಕೂ ಆಗದು.

14. ಖಂಡಿತ ವಿಜಯಿಯಾದನು – ಶುದ್ಧನಾದವನು

15. ಮತ್ತು ತನ್ನೊಡೆಯನ ಹೆಸರನ್ನು ಸ್ಮರಿಸಿದವನು ಮತ್ತು ನಮಾಝನ್ನು ಸಲ್ಲಿಸಿದವನು.

16. ಆದರೆ ನೀವು ಇಹಲೋಕದ ಜೀವನಕ್ಕೆ ಪ್ರಾಶಸ್ತ್ಯ ನೀಡುತ್ತೀರಿ.

17. ನಿಜವಾಗಿ ಪರಲೋಕವು ಉತ್ತಮವಾಗಿದೆ – ಮತ್ತು ಅದು ಸದಾ ಉಳಿದಿರುತ್ತದೆ.

18. ಗತಕಾಲದ ಗ್ರಂಥಗಳಲ್ಲಿ ಇದನ್ನೇ ಹೇಳಲಾಗಿದೆ –

19. – ಇಬ್ರಾಹೀಮ್ ಮತ್ತು ಮೂಸಾರ ಗ್ರಂಥಗಳಲ್ಲಿ.

Quran in Kannada, Quran, Quran Kannada,