89. Al Fajr

89. ಅಲ್ಫಜ್ರ್ (ಮುಂಜಾವು)

ವಚನಗಳು – 30, ಮಕ್ಕಃ

ಅಲ್ಲಾಹನ ಹೆಸರಿಂದ – ಅವನು ಅಪಾರ ದಯಾಳು, ಕರುಣಾಮಯಿ

1. ಮುಂಜಾವಿನಾಣೆ.

2. ಮತ್ತು ಹತ್ತು ರಾತ್ರಿಗಳಾಣೆ.

3. ಮತ್ತು ಸಮ ಹಾಗೂ ಬೆಸ ಸಂಖ್ಯೆಗಳಾಣೆ.

4. ಮತ್ತು ರಾತ್ರಿಯು ತೆರಳುವಾಗಿನಾಣೆ.

5. ಬುದ್ಧಿಜೀವಿಗಳಿಗೆ ಈ ಪ್ರಮಾಣಗಳು ಸಾಕೇ?

6. ನೀವು ನೋಡಿದಿರಾ, ನಿಮ್ಮ ಒಡೆಯನು ಆದ್ ಜನಾಂಗದವರಿಗೆ ಏನು ಮಾಡಿದನೆಂಬುದನ್ನು?

7. ಇರಮ್‌ನ ಸ್ತಂಭದವರನ್ನು?

8. ನಾಡುಗಳ ಪೈಕಿ ಅಂತಹ ಇನ್ನೊಂದು ನಾಡು ಸೃಷ್ಟಿಯಾಗಿಲ್ಲ.

9. ಬಯಲುಗಳಲ್ಲಿ ಕಠೋರ ಕಲ್ಲುಗಳನ್ನು ಕೆತ್ತಿದ್ದ ಸಮೂದರು –

10. ಮತ್ತು ಬೃಹತ್ ಮೊಳೆಗಳ ಫಿರ್‌ಔನ್

11. ಅವರೆಲ್ಲಾ (ತಮ್ಮ) ನಾಡುಗಳಲ್ಲಿ ಬಂಡಾಯವೆದ್ದಿದ್ದರು.

12. ಮತ್ತು ಅವರು ಅಲ್ಲಿ ಅಶಾಂತಿಯನ್ನು ಮೆರೆದಿದ್ದರು.

13. ಕೊನೆಗೆ ನಿಮ್ಮೊಡೆಯನು ಅವರ ಮೇಲೆ ಶಿಕ್ಷೆಯ ಚಾಟಿಯನ್ನು ಬೀಸಿದನು.

14. ನಿಮ್ಮ ಒಡೆಯನಂತು ಹೊಂಚಿನಲ್ಲಿದ್ದಾನೆ.

15. ಮನುಷ್ಯನನ್ನು ಅವನ ಒಡೆಯನು ಪರೀಕ್ಷೆಗೊಳಪಡಿಸಿ ಅವನಿಗೆ ಗೌರವವನ್ನೂ. ಅನುಗ್ರಹವನ್ನೂ ದಯಪಾಲಿಸಿದಾಗ ಅವನು, ನನ್ನೊಡೆಯನು ನನ್ನನ್ನು ಗೌರವಾನ್ವಿತನಾಗಿಸಿದ್ದಾನೆ ಎನ್ನುತ್ತಾನೆ.

16. ಇನ್ನು ಅವನು ಆತನನ್ನು ಪರೀಕ್ಷೆಗೊಳಪಡಿಸಿ ಅವನ ಆದಾಯವನ್ನು ಸೀಮಿತ ಗೊಳಿಸಿದಾಗ ಅವನು ನನ್ನೊಡೆಯನು ನನ್ನನ್ನು ನೀಚನಾಗಿಸಿದ್ದಾನೆ ಎನ್ನುತ್ತಾನೆ.

17. ಹಾಗಲ್ಲ, ನಿಜವಾಗಿ ನೀವು ಅನಾಥನನ್ನು ಗೌರವಿಸುವುದಿಲ್ಲ.

18. ಬಡವನಿಗೆ ಉಣಿಸುವಂತೆ (ಪರಸ್ಪರ) ಪ್ರೋತ್ಸಾಹಿಸುವುದಿಲ್ಲ.

19. ಮತ್ತು ನೀವು ವಾರೀಸು ಸೊತ್ತನ್ನು (ಅಕ್ರಮವಾಗಿ) ಕಬಳಿಸುತ್ತೀರಿ.

20. ನೀವು ಸಂಪತ್ತನ್ನು ಅಪಾರವಾಗಿ ಪ್ರೀತಿಸುತ್ತೀರಿ.

21. ಹಾಗಲ್ಲ, ಭೂಮಿಯನ್ನು ಕುಟ್ಟಿ ಕುಟ್ಟಿ ತಗ್ಗಿಸಲಾದಾಗ

22. ನಿಮ್ಮೊಡೆಯನು ಬಂದಾಗ, ಹಾಗೂ ಮಲಕ್‌ಗಳು ಸಾಲುಗಟ್ಟಿದಾಗ

23. ಅಂದು ನರಕವನ್ನು ಮುಂದೆ ತರಲಾಗುವುದು. ಅಂದು ಮನುಷ್ಯನಿಗೆ ವಿಷಯವು ಅರ್ಥವಾಗುವುದು. ಆದರೆ ಅಂದು ಅರ್ಥವಾದರೆ ಅವನಿಗೇನು ಲಾಭ?

24. ಅವನು ಹೇಳುವನು; ಅಯ್ಯೋ, ನಾನು ಈ ಬದುಕಿಗೆ ಪೂರ್ವ ಸಿದ್ಧತೆ ನಡೆಸಬೇಕಿತ್ತು.

25. ಅಂದು ಅವನು (ಅಲ್ಲಾಹನು) ನೀಡುವಂತಹ ಶಿಕ್ಷೆಯನ್ನು ಬೇರೆ ಯಾರೂ ನೀಡಲಾರರು.

26. ಮತ್ತು ಅವನು ಕಟ್ಟಿಡುವ ರೀತಿಯಲ್ಲಿ ಬೇರೆ ಯಾರೂ ಕಟ್ಟಿಡಲಾರನು.

27. (ಸಜ್ಜನರೊಡನೆ ಹೇಳಲಾಗುವುದು;) ಸಂತೃಪ್ತ ಚಿತ್ತವೇ,

28. ಸಂತೃಪ್ತನಾಗಿ ಮರಳು ನಿನ್ನ ಒಡೆಯನೆಡೆಗೆ – ಅವನೂ ನಿನ್ನಿಂದ ಸಂತೃಪ್ತ ನಾಗಿರುವನು.

29. ನನ್ನ ದಾಸರ ಜೊತೆ ಪ್ರವೇಶಿಸು.

30. ನನ್ನ ಸ್ವರ್ಗವನ್ನೂ ಪ್ರವೇಶಿಸು.

Quran in Kannada, Quran, Quran Kannada,