98. Al Bayyinah

98. ಅಲ್ ಬಯ್ಯಿನಃ (ಸ್ಪಷ್ಟ ಪುರಾವೆ)

ವಚನಗಳು – 8, ಮದೀನಃ

ಅಲ್ಲಾಹನ ಹೆಸರಿಂದ – ಅವನು ಅಪಾರ ದಯಾಳು, ಕರುಣಾಮಯಿ

1. ಗ್ರಂಥದವರ ಮತ್ತು ಬಹುದೇವಾರಾಧಕರ ಪೈಕಿ ಧಿಕ್ಕಾರಿಗಳು, ತಮ್ಮ ಬಳಿಗೆ ಸ್ಪಷ್ಟ ಪುರಾವೆಯು ಬಂದು ಬಿಡುವ ತನಕ (ತಮ್ಮ ಧೋರಣೆಯನ್ನು) ಕೈ ಬಿಡುವವರಾಗಿರಲಿಲ್ಲ.

2. (ಇದೀಗ) ಪಾವನ ಪುಟಗಳನ್ನು ಓದಿ ಕೇಳಿಸುವ ಅಲ್ಲಾಹನ ದೂತರು (ಅವರ ಬಳಿಗೆ ಬಂದಿರುವರು).

3. ಅದರಲ್ಲಿ ಖಚಿತ ಆದೇಶಗಳು ಲಿಖಿತವಾಗಿವೆ.

4. (ಈ ಹಿಂದೆಯೂ) ಗ್ರಂಥದವರು, ತಮ್ಮ ಬಳಿಗೆ ಸ್ಪಷ್ಟವಾದ ಪುರಾವೆಗಳು ಬಂದ ಬಳಿಕವಷ್ಟೇ, ಛಿನ್ನ ಭಿನ್ನರಾಗಿದ್ದರು.

5. ನಿಷ್ಠೆಯನ್ನು ಅವನಿಗೇ (ಅಲ್ಲಾಹನಿಗೇ) ಮೀಸಲಾಗಿಟ್ಟು, ಏಕಾಗ್ರತೆಯೊಂದಿಗೆ ಅಲ್ಲಾಹನನ್ನು ಆರಾಧಿಸಬೇಕು, ನಮಾಝನ್ನು ಸಲ್ಲಿಸಬೇಕು ಮತ್ತು ಝಕಾತನ್ನು ಪಾವತಿಸಬೇಕು – ಇದುವೇ ಸ್ಥಿರವಾದ ಧರ್ಮ ಎಂದೇ (ಈ ಹಿಂದೆಯೂ) ಅವರಿಗೆ ಆದೇಶಿಸಲಾಗಿತ್ತು.

6. ಗ್ರಂಥದವರ ಹಾಗೂ ಬಹುದೇವಾರಾಧಕರ ಪೈಕಿ ಧಿಕ್ಕಾರಿಗಳು ಸದಾಕಾಲ ನರಕದಲ್ಲಿರುವರು – ಅವರೇ ಅತ್ಯಂತ ನೀಚ ಜೀವಿಗಳು.

7. ವಿಶ್ವಾಸಿಗಳು ಮತ್ತು ಸತ್ಕರ್ಮಗಳನ್ನು ಮಾಡಿದವರು – ಖಂಡಿತ ಅವರೇ ಅತ್ಯುತ್ತಮ ಜೀವಿಗಳು.

8. ಅವರ ಪ್ರತಿಫಲವು ಅವರ ಒಡೆಯನ ಬಳಿ – ತಳದಲ್ಲಿ ನದಿಗಳು ಹರಿಯುವಂತಹ ಸ್ವರ್ಗದ ರೂಪದಲ್ಲಿದೆ. ಅದರಲ್ಲಿ ಅವರು ಸದಾಕಾಲ ಇರುವರು. ಅಲ್ಲಾಹನು ಅವರಿಂದ ಸಂತುಷ್ಟನಾಗಿರುವನು ಮತ್ತು ಅವರು ಅಲ್ಲಾಹನಿಂದ ಸಂತುಷ್ಟರಾಗಿರುವರು. ಇದು ತಮ್ಮ ಒಡೆಯನಿಗೆ ಅಂಜುತ್ತಿದ್ದವರಿಗಾಗಿ ಇರುವ ಪ್ರತಿಫಲ.