1. ತ್ವಾ ಸೀನ್. ಇವು ಕುರ್ಆನಿನ ಮತ್ತು ಬಹಳ ಸ್ಪಷ್ಟವಾಗಿರುವ ಗ್ರಂಥದ ವಚನಗಳು.
2. ನಂಬುವವರ ಪಾಲಿಗೆ ಮಾರ್ಗದರ್ಶನ ಹಾಗೂ ಶುಭವಾರ್ತೆ ಇದರಲ್ಲಿದೆ.
3. ಅವರು ನಮಾಝನ್ನು ಪಾಲಿಸುವವರು, ಝಕಾತನ್ನು ಪಾವತಿಸುವವರು ಮತ್ತು ಪರಲೋಕದಲ್ಲಿ ನಂಬಿಕೆ ಉಳ್ಳವರಾಗಿರುತ್ತಾರೆ.
4. ನಾವು, ಪರಲೋಕವನ್ನು ನಂಬದವರ ಪಾಲಿಗೆ, ಅವರ ಕರ್ಮಗಳನ್ನು ಖಂಡಿತ, ಚಂದಗಾಣಿಸಿ ಬಿಟ್ಟಿದ್ದೇವೆ. ಆದ್ದರಿಂದ ಅವರು ಕುರುಡಾಗಿ ಅಲೆಯುತ್ತಲೇ ಇರುತ್ತಾರೆ.
5. ಅವರೇ, ಭಾರೀ ಕೆಟ್ಟ ಶಿಕ್ಷೆಗೆ ಗುರಿಯಾಗುವವರು ಮತ್ತು ಪರಲೋಕದಲ್ಲಿ ಅವರು ಅತ್ಯಧಿಕ ನಷ್ಟ ಅನುಭವಿಸುವರು.
6. ಖಂಡಿತವಾಗಿಯೂ ಈ ಕುರ್ಆನನ್ನು ನಿಮಗೆ, ಅತ್ಯಂತ ಯುಕ್ತಿವಂತ, ಜ್ಞಾನಿಯ ಕಡೆಯಿಂದ ನೀಡಲಾಗುತ್ತಿದೆ.
7. ಮೂಸಾ ತಮ್ಮ ಮನೆಯವರೊಡನೆ ಹೇಳಿದರು; ನಾನು ಬೆಂಕಿಯನ್ನು ನೋಡಿದ್ದೇನೆ. ನಾನೀಗ ನಿಮಗಾಗಿ ಅಲ್ಲಿಂದ ಏನಾದರೂ ಸುದ್ದಿಯನ್ನು ತರುವೆನು ಅಥವಾ ನಿಮಗೆ ಚಳಿ ಕಾಯಿಸಿಕೊಳ್ಳುವುದಕ್ಕಾಗಿ ಕೆಂಡವನ್ನಾದರೂ ತರುವೆನು.
8. ಕೊನೆಗೆ ಅವರು ಅದರ ಬಳಿಗೆ ಬಂದಾಗ ಕರೆ ನೀಡಲಾಯಿತು; ‘‘ಈ ಬೆಂಕಿಯ ಒಳಗಿರುವವರು (ಮಲಕ್ಗಳು) ಹಾಗೂ ಅದರ ಸುತ್ತ ಇರುವವರನ್ನು (ಮೂಸಾರನ್ನು) ಸಮೃದ್ಧಗೊಳಿಸಲಾಗಿದೆ. ಮತ್ತು ಎಲ್ಲ ಲೋಕಗಳ ಒಡೆಯನಾದ ಅಲ್ಲಾಹನು ಪರಮ ಪಾವನನು.’’
9. ‘‘ಓ ಮೂಸಾ, ನಾನೇ, ಮಹಾ ಪ್ರಬಲನೂ ಯುಕ್ತಿವಂತನೂ ಆಗಿರುವ ಅಲ್ಲಾಹ್’’.
10. ‘‘ನೀವು ನಿಮ್ಮ ಊರುಗೋಲನ್ನು ಕೆಳ ಹಾಕಿರಿ.’’ (ಮೂಸಾ ತಮ್ಮ ಊರುಗೋಲನ್ನು ಎಸೆದಾಗ) ಅದು ಹಾವಿನಂತೆ ಸರಿದಾಡುವುದನ್ನು ಕಂಡು, ಅವರು ಮರಳಿ ಹೊರಟರು ಮತ್ತು ಹಿಂದಿರುಗಿ ನೋಡಲಿಲ್ಲ. ಅವರೊಡನೆ ಹೇಳಲಾಯಿತು; ‘‘ಓ ಮೂಸಾ, ಅಂಜಬೇಡಿ. ದೂತರು ನನ್ನ ಬಳಿ ಖಂಡಿತ ಅಂಜುವುದಿಲ್ಲ’’
11. ‘‘ಅಕ್ರಮವೆಸಗಿದವನ ಹೊರತು. ಆದರೆ ಹಾಗೆ ಕೆಡುಕನ್ನು ಮಾಡಿದ ಬಳಿಕ ಅದನ್ನು ಒಳಿತಾಗಿ ಪರಿವರ್ತಿಸಿದವನ ಪಾಲಿಗೆ ನಾನು ಖಂಡಿತ, ಕ್ಷಮಾಶೀಲನೂ ಕರುಣಾಮಯಿಯೂ ಆಗಿರುತ್ತೇನೆ’’.
12. ‘‘ನೀವೀಗ ನಿಮ್ಮ ಕೈಯನ್ನು ನಿಮ್ಮ ಅಂಗಿಯೊಳಗೆ ಹಾಕಿರಿ. ಅದು ಸುಲಭವಾಗಿ, ಪ್ರಕಾಶಿಸುತ್ತಾ ಹೊರಬರುವುದು. ಇದು ಫಿರ್ಔನ್ ಮತ್ತು ಅವನ ಜನಾಂಗದವರಿಗಾಗಿ ಇರುವ ಒಂಭತ್ತು ಪುರಾವೆಗಳಲ್ಲೊಂದು. ಅವರು ಖಂಡಿತ ಒಂದು ಅವಿಧೇಯ ಜನಾಂಗವಾಗಿದ್ದಾರೆ’’.
13. ಕೊನೆಗೆ, ಕಣ್ಣು ತೆರೆಸುವಂತಹ ನಮ್ಮ ಪುರಾವೆಗಳು ಅವರಿಗೆ (ಫಿರ್ಔನನ ಜನರಿಗೆ) ತಲುಪಿದಾಗ ಅವರು, ‘‘ಇದೆಲ್ಲಾ ಸ್ಪಷ್ಟ ಇಂದ್ರಜಾಲ’’ ಎಂದರು.
14. ನಿಜವಾಗಿ ಅವರ ಮನಸ್ಸುಗಳಲ್ಲಿ ಆ ಕುರಿತು ನಂಬಿಕೆ ಇದ್ದರೂ ಅವರು ಅಕ್ರಮ ಹಾಗೂ ಅಹಂಕಾರದೊಂದಿಗೆ ಅದನ್ನು ತಿರಸ್ಕರಿಸಿದರು. ಕೊನೆಗೆ ಆ ಗೊಂದಲಕೋರರ ಗತಿ ಏನಾಯಿತೆಂದು ನೋಡಿರಿ.
15. ಮುಂದೆ ನಾವು ದಾವೂದ್ ಮತ್ತು ಸುಲೈಮಾನರಿಗೆ ಜ್ಞಾನವನ್ನು ನೀಡಿದೆವು. ಅವರಿಬ್ಬರೂ ಹೇಳಿದರು; ಪ್ರಶಂಸೆಗಳೆಲ್ಲಾ, ತನ್ನ ಹೆಚ್ಚಿನ ವಿಶ್ವಾಸಿ ದಾಸರಿಗಿಂತ ನಮಗೆ ಹಿರಿಮೆಯನ್ನು ಅನುಗ್ರಹಿಸಿದ ಅಲ್ಲಾಹನಿಗೇ ಮೀಸಲು.
16. ಸುಲೈಮಾನರು, ದಾವೂದರ ಉತ್ತರಾಧಿಕಾರಿಯಾದರು. ಅವರು ಹೇಳಿದರು; ಮಾನವರೇ, ನಮಗೆ ಪಕ್ಷಿಗಳ ಭಾಷೆಯನ್ನು ಕಲಿಸಲಾಗಿದೆ ಮತ್ತು ನಮಗೆ ಎಲ್ಲ ವಸ್ತು
ಗಳನ್ನೂ ನೀಡಲಾಗಿದೆ. ಇದು ಖಂಡಿತ ಒಂದು ಸ್ಪಷ್ಟ ಅನುಗ್ರಹವಾಗಿದೆ.
17. ಮತ್ತು ಸುಲೈಮಾನರಿಗಾಗಿ ಜಿನ್ನ್ಗಳು, ಮಾನವರು ಮತ್ತು ಪಕ್ಷಿಗಳನ್ನು ಒಳಗೊಂಡ ಒಂದು ಸೇನೆಯನ್ನು ಸಂಘಟಿಸಲಾಯಿತು ಮತ್ತು ಅವರನ್ನೆಲ್ಲಾ ಶಿಸ್ತಿಗೆ ಒಳಪಡಿಸಲಾಗಿತ್ತು.
18. ಮುಂದೆ, ಒಮ್ಮೆ ಅವರು ಇರುವೆಗಳಿದ್ದ ಒಂದು ಬಯಲಿಗೆ ಬಂದಾಗ ಒಂದು ಇರುವೆ ಹೇಳಿತು; ಇರುವೆಗಳೇ, ನೀವು ನಿಮ್ಮ ಮನೆಗಳೊಳಗೆ ಸೇರಿಕೊಳ್ಳಿರಿ. ಸುಲೈಮಾನ್ ಮತ್ತು ಅವರ ಪಡೆಗಳು ನಿಮ್ಮನ್ನು ತುಳಿದು ನಾಶಮಾಡದಿರಲಿ. ಅವರಿಗೆ ಅದರ ಅರಿವೂ ಇರುವುದಿಲ್ಲ.
19. ಅದರ ಮಾತನ್ನು ಕೇಳಿ ಅವರು (ಸುಲೈಮಾನ್) ನಕ್ಕುಬಿಟ್ಟರು ಮತ್ತು ಹೇಳಿದರು; ನನ್ನೊಡೆಯಾ, ನೀನು ನನಗೆ ಹಾಗೂ ನನ್ನ ಹೆತ್ತವರಿಗೆ ಕರುಣಿಸಿರುವ ಅನುಗ್ರಹಗಳಿಗಾಗಿ ನಿನಗೆ ಕೃತಜ್ಞತೆ ಸಲ್ಲಿಸುವ ಮತ್ತು ನೀನು ಮೆಚ್ಚುವಂತಹ ಕರ್ಮಗಳನ್ನು ಮಾಡುವ ಸೌಭಾಗ್ಯವನ್ನು ನನಗೆ ಕರುಣಿಸು ಮತ್ತು ನಿನ್ನ ಅನುಗ್ರಹದಿಂದ ನೀನು ನನ್ನನ್ನು ನಿನ್ನ ಸಜ್ಜನ ದಾಸರ ಸಾಲಿಗೆ ಸೇರಿಸು.
20. ಆ ಬಳಿಕ ಅವರು ಪಕ್ಷಿಗಳ ಸಮೀಕ್ಷೆ ನಡೆಸಿ ಹೇಳಿದರು; ಇದೇನು, ‘ಹುದ್ಹುದ್’ (ಪಕ್ಷಿ) ನನಗೆ ಕಾಣಿಸುತ್ತಿಲ್ಲವಲ್ಲಾ? ಅದೇನು ಕಣ್ಮರೆಯಾಗಿ ಬಿಟ್ಟಿತೇ?
21. ಅದು ಸ್ಪಷ್ಟವಾದ ಪುರಾವೆಯನ್ನು ತರದಿದ್ದರೆ, ನಾನು ಅದಕ್ಕೆ ಉಗ್ರ ಶಿಕ್ಷೆ ನೀಡುವೆನು ಅಥವಾ ಅದರ ಕೊರಳು ಕೊಯ್ದು ಬಿಡುವೆನು.
22. ಅದು (ಹುದ್ಹುದ್ ಪಕ್ಷಿ) ಹೆಚ್ಚು ತಡಮಾಡಲಿಲ್ಲ. ಅದು ಹೇಳಿತು; ನೀವು ಅರಿತಿಲ್ಲದ್ದನ್ನು ನಾನು ಅರಿತಿದ್ದೇನೆ ಮತ್ತು ನಾನು ನಿಮ್ಮ ಬಳಿಗೆ ಸಬಾದಿಂದ ಒಂದು ಖಚಿತ ಸುದ್ದಿಯನ್ನು ತಂದಿದ್ದೇನೆ.
23. ಅಲ್ಲಿ ನಾನು ಅವರ ರಾಣಿಯಾಗಿರುವ ಒಬ್ಬ ಮಹಿಳೆಯನ್ನು ನೋಡಿದೆ. ಆಕೆಗೆ ಎಲ್ಲವನ್ನೂ ನೀಡಲಾಗಿದೆ ಮತ್ತು ಆಕೆಯ ಬಳಿ ಒಂದು ದೊಡ್ಡ ಸಿಂಹಾಸನವಿದೆ.
24. ಆಕೆ ಮತ್ತು ಆಕೆಯ ಜನಾಂಗದವರು ಅಲ್ಲಾಹನನ್ನು ಬಿಟ್ಟು ಸೂರ್ಯನಿಗೆ ಸಾಷ್ಟಾಂಗವೆರಗುವುದನ್ನು ನಾನು ನೋಡಿದೆ. ಶೈತಾನನು ಅವರಿಗೆ ಅವರ ಕರ್ಮಗಳನ್ನು ಚಂದಗಾಣಿಸಿದ್ದಾನೆ ಮತ್ತು ಸರಿದಾರಿಯಿಂದ ಅವರನ್ನು ತಡೆದಿದ್ದಾನೆ. ಅವರು ಸನ್ಮಾರ್ಗವನ್ನು ಆನುಸರಿಸುತ್ತಿಲ್ಲ.
25. ಆಕಾಶಗಳಲ್ಲಿ ಹಾಗೂ ಭೂಮಿಯಲ್ಲಿ ಅಡಗಿರುವವುಗಳನ್ನು ಹೊರ ತರ ಬಲ್ಲ ಮತ್ತು ನೀವು ಗುಪ್ತವಾಗಿಡುವ ಹಾಗೂ ಬಹಿರಂಗಗೊಳಿಸುವ ಎಲ್ಲವನ್ನೂ ಬಲ್ಲ ಅಲ್ಲಾಹನಿಗೆ ಅವರು ಸಾಷ್ಟಾಂಗವೆರಗುವುದಿಲ್ಲ!
26. ಅಲ್ಲಾಹನ ಹೊರತು ಬೇರೆ ದೇವರಿಲ್ಲ. ಅವನು ಮಹಾನ್ ವಿಶ್ವ ಸಿಂಹಾಸನದ ಒಡೆಯನು.
27. ಅವರು (ಸುಲೈಮಾನ್) ಹೇಳಿದರು; ನೀನು ಹೇಳುತ್ತಿರುವುದು ಸತ್ಯವೋ ಅಥವಾ ನೀನು ಸುಳ್ಳು ಹೇಳುತ್ತಿರುವೆಯೋ ಎಂಬುದನ್ನು ನಾವೀಗ ನೋಡಿಕೊಳ್ಳುವೆವು.
28. ನೀನೀಗ ನನ್ನ ಪತ್ರದೊಂದಿಗೆ ಹೋಗು ಮತ್ತು ಅದನ್ನು ಆ ಜನರ ಕಡೆಗೆ ಎಸೆ. ಆ ಬಳಿಕ ಅವರಿಂದ ದೂರನಿಂತು, ಅವರು ಯಾವ ರೀತಿ ಪ್ರತಿಕ್ರಿಯೆ ತೋರುತ್ತಾರೆಂದು ನೋಡು.
29. ಆಕೆ (ರಾಣಿ) ಹೇಳಿದಳು; ಸರದಾರರೇ, ನನ್ನ ಬಳಿಗೆ ಖಂಡಿತವಾಗಿಯೂ ಗೌರವಾನ್ವಿತವಾದ ಒಂದು ಪತ್ರವನ್ನು ಕಳಿಸಲಾಗಿದೆ.
30. ಅದು ಸುಲೈಮಾನರ ಕಡೆಯಿಂದ ಬಂದಿದೆ. ಮತ್ತು ಅದರಲ್ಲಿ ‘‘ಅಲ್ಲಾಹನ ಹೆಸರಿಂದ – ಅವನು ಅಪಾರ ದಯಾಳು, ಕರುಣಾಮಯಿ’’ ಎಂದಿದೆ.
31. (ಮತ್ತು) ನನ್ನೆದುರು ಬಂಡಾಯದ ನೀತಿ ತೋರದೆ, ಶರಣಾಗಿ ನನ್ನ ಬಳಿಗೆ ಬನ್ನಿರಿ ಎಂದು (ಹೇಳಲಾಗಿದೆ).
32. (ಮತ್ತೆ) ಆಕೆ ಹೇಳಿದಳು; ಸರದಾರರೇ, ಈ ವಿಷಯದಲ್ಲಿ ನೀವು ನನಗೆ ಸಲಹೆ ನೀಡಿರಿ. ನಿಮ್ಮ ಉಪಸ್ಥಿತಿ ಇಲ್ಲದೆ ನಾನು ಯಾವುದೇ ತೀರ್ಮಾನ ಕೈಗೊಳ್ಳುವುದಿಲ್ಲ.
33. ಅವರು ಹೇಳಿದರು; ನಾವು ತುಂಬಾ ಶಕ್ತಿವಂತರು ಮತ್ತು ಉಗ್ರ ಹೋರಾಟ
ಗಾರರು. ತೀರ್ಮಾನ ನಿಮ್ಮ ಕೈಯಲ್ಲಿದೆ. ನಮಗೆ ಏನನ್ನು ಆದೇಶಿಸಬೇಕೆಂದು ನೀವೇ ನಿರ್ಧರಿಸಿರಿ.
34. ಆಕೆ ಹೇಳಿದಳು; ದೊರೆಗಳು ಯಾವುದಾದರೂ ನಾಡನ್ನು ಪ್ರವೇಶಿಸುವಾಗ ಅವರು ಅದನ್ನು ಖಂಡಿತ ನಾಶಮಾಡಿ ಬಿಡುತ್ತಾರೆ ಮತ್ತು ಅವರು ಅಲ್ಲಿನ ಗೌರವಾನ್ವಿತರನ್ನು ಅಪಮಾನಿಸಿ ಬಿಡುತ್ತಾರೆ. ಅವರು ಮಾಡುವುದೇ ಹಾಗೆ.
35. ನಾನು ಅವರೆಡೆಗೆ ಒಂದು ಉಡುಗೊರೆಯನ್ನು ಕಳಿಸಿಕೊಡುತ್ತೇನೆ ಮತ್ತು (ನಮ್ಮ) ದೂತನು ಮರಳಿ ಏನನ್ನು ತರುತ್ತಾನೆಂದು ಕಾದು ನೋಡುತ್ತೇನೆ.
36. ಆತನು (ದೂತನು) ಸುಲೈಮಾನರ ಬಳಿ ಬಂದಾಗ ಅವರು ಹೇಳಿದರು; ನೀವೇನು ಸಂಪತ್ತಿನಿಂದ ನನಗೆ ನೆರವಾಗ ಬಯಸುತ್ತೀರಾ? ನನಗಂತು ಅಲ್ಲಾಹನು ನಿಮಗೆ ನೀಡಿದ್ದಕ್ಕಿಂತ ಉತ್ತಮವಾದುದನ್ನು ನೀಡಿದ್ದಾನೆ. ನೀವು ಮಾತ್ರ ನಿಮ್ಮ ಉಡುಗೊರೆಯಲ್ಲೇ ಸಂತುಷ್ಟರಾಗಿರುವಿರಿ.
37. ನೀನು ಮರಳಿ ಹೋಗು. ಅವರಿಗೆಂದೂ ಎದುರಿಸಲು ಸಾಧ್ಯವಾಗದ ಪಡೆಯೊಂದಿಗೆ ನಾವು ಅವರಲ್ಲಿಗೆ ಬರಲಿದ್ದೇವೆ ಮತ್ತು ನಾವು ಅವರನ್ನು ಅಪಮಾನಿತರಾಗಿಸಿ ಅಲ್ಲಿಂದ ಹೊರಹಾಕಲಿದ್ದೇವೆ. ಆಗ ಅವರು ಸೋತಿರುವರು.
38. ಸರದಾರರೇ, ಆಕೆ ಶರಣಾಗಿ ನನ್ನ ಬಳಿಗೆ ಬರುವ ಮುನ್ನ ನಿಮ್ಮ ಪೈಕಿ ಯಾರು ಆಕೆಯ ಸಿಂಹಾಸನವನ್ನು ನನ್ನ ಬಳಿಗೆ ತರಬಲ್ಲರು? ಎಂದು ಅವರು ಕೇಳಿದರು.
39. ಜಿನ್ನ್ಗಳ ಪೈಕಿ ಇಫ್ರೀತ್ ಹೇಳಿದನು; ನೀವು ನಿಮ್ಮ ಸ್ಥಾನದಿಂದ ಎದ್ದೇಳುವ ಮುನ್ನ ನಾನು ಅದನ್ನು ನಿಮ್ಮ ಬಳಿಗೆ ತಂದು ಬಿಡುತ್ತೇನೆ. ನಾನು ಈ ಕೆಲಸವನ್ನು ಮಾಡುವುದಕ್ಕೆ ಖಂಡಿತ ಶಕ್ತನಾಗಿದ್ದೇನೆ ಹಾಗೂ ವಿಶ್ವಾಸಾರ್ಹನಾಗಿದ್ದೇನೆ.
40. ಗ್ರಂಥದ ಜ್ಞಾನವಿದ್ದವನೊಬ್ಬನು, ‘‘ನೀವು ಕಣ್ಮುಚ್ಚಿ ತೆರೆಯುವ ಮುನ್ನ ನಾನು ಅದನ್ನು ನಿಮ್ಮ ಬಳಿಗೆ ತಂದು ಬಿಡುತ್ತೇನೆ‘‘ಎಂದನು. ಅವರು (ಸುಲೈಮಾನ್) ಅದನ್ನು ತನ್ನ ಸಮೀಪ ಇಟ್ಟಿರುವುದಾಗಿ ಕಂಡಾಗ ಹೇಳಿದರು; ಇದು, ನಾನು ಕೃತಜ್ಞನಾಗುತ್ತೇನೋ ಕೃತಘ್ನತೆ ತೋರುತ್ತೇನೋ ಎಂದು ಪರೀಕ್ಷಿಸಲಿಕ್ಕಾಗಿ ನನ್ನ ಒಡೆಯನ ಕಡೆಯಿಂದ ಸಿಕ್ಕಿರುವ ಒಂದು ಅನುಗ್ರಹವಾಗಿದೆ. ಕೃತಜ್ಞನಾದವನು ಸ್ವತಃ ತನ್ನ ಲಾಭಕ್ಕಷ್ಟೇ ಕೃತಜ್ಞನಾಗುತ್ತಾನೆ ಮತ್ತು ಯಾರಾದರೂ ಕೃತಘ್ನತೆ ತೋರಿದರೆ – ನನ್ನ ಒಡೆಯನಂತು ಸಂಪೂರ್ಣ ನಿರಪೇಕ್ಷ ಹಾಗೂ ಉದಾರಿಯಾಗಿದ್ದಾನೆ.
41. ಅವರು (ಸುಲೈಮಾನ್) ಹೇಳಿದರು; ನೀವು ಆಕೆಯ ಸಿಂಹಾಸನದ ಸ್ವರೂಪವನ್ನು ಬದಲಿಸಿ ಬಿಡಿರಿ. ಆಕೆಗೆ ವಾಸ್ತವದ ಅರಿವಾಗುವುದೋ ಅಥವಾ ಆಕೆ ಸತ್ಯವನ್ನು ಕಾಣಲಾಗದವರ ಸಾಲಿಗೆ ಸೇರುವಳೋ ನೋಡೋಣ.
42. ಆಕೆ ಬಂದಾಗ, ನಿನ್ನ ಸಿಂಹಾಸನ ಇದುವೇ? ಎಂದು ಕೇಳಲಾಯಿತು. ಆಕೆ ಹೇಳಿದಳು; ಇದು ಅದರಂತೆಯೇ ಇದೆ. ನಮಗೆ ಈ ಹಿಂದೆಯೇ ಮಾಹಿತಿ ನೀಡಲಾಗಿತ್ತು ಮತ್ತು ನಾವು ಶರಣಾಗಿರುವೆವು.
43. ಅವರು (ಸುಲೈಮಾನರು) ಈ ಹಿಂದೆ ಆಕೆಯು ಅಲ್ಲಾಹನನ್ನು ಬಿಟ್ಟು ಪೂಜಿಸುತ್ತಿದ್ದವುಗಳಿಂದ ಆಕೆಯನ್ನು ತಡೆದರು. ಈ ಹಿಂದೆ ಆಕೆ ನಿಜಕ್ಕೂ ಒಂದು ಧಿಕ್ಕಾರಿ ಜನಾಂಗದವಳಾಗಿದ್ದಳು.
44. ಅರಮನೆಯನ್ನು ಪ್ರವೇಶಿಸು ಎಂದು ಆಕೆಯೊಡನೆ ಹೇಳಲಾಯಿತು. ಆಕೆ ಅದನ್ನು (ಅಲ್ಲಿಯ ನೆಲವನ್ನು) ಕಂಡಾಗ, ಅದು ಆಳವಾದ ನೀರೆಂದು ಭಾವಿಸಿ ತನ್ನ ವಸ್ತ್ರವನ್ನು ತನ್ನ ಪಾದಮಟ್ಟದಿಂದ ಮೇಲಕ್ಕೆ ಎಳೆದುಕೊಂಡಳು. ಅವರು (ಸುಲೈಮಾನ್) ಹೇಳಿದರು; ಇದು ಗಾಜುಗಳನ್ನು ಜೋಡಿಸಿ ಕಟ್ಟಿದ ಅರಮನೆ. ಆಕೆ ಹೇಳಿದಳು; ನನ್ನೊಡೆಯಾ, ನಾನು ನನ್ನ ಮೇಲೆಯೇ ಅಕ್ರಮವೆಸಗಿದ್ದೇನೆ ಮತ್ತು ಸುಲೈಮಾನರ ಜೊತೆ ನಾನು ಎಲ್ಲ ಲೋಕಗಳ ಒಡೆಯನಾದ ಅಲ್ಲಾಹನಿಗೆ ಶರಣಾಗುತ್ತೇನೆ.
45. ಮುಂದೆ ನಾವು, ಸಮೂದ್ ಜನಾಂಗದೆಡೆಗೆ ಅವರ ಸಹೋದರ ಸ್ವಾಲಿಹ್ರನ್ನು ಕಳಿಸಿದ್ದೆವು – ಅಲ್ಲಾಹನನ್ನೇ ಪೂಜಿಸಿರಿ (ಎಂಬ ಸಂದೇಶದೊಂದಿಗೆ). ಅಷ್ಟರಲ್ಲೇ ಅವರು ಜಗಳಾಡುವ ಎರಡು ಪಂಗಡಗಳಾಗಿ ಬಿಟ್ಟರು.
46. ಅವರು (ಸ್ವಾಲಿಹ್) ಹೇಳಿದರು; ನನ್ನ ಜನಾಂಗದವರೇ, ನೀವು ಒಳಿತಿಗಿಂತ ಮುನ್ನವೇ ಕೆಡುಕಿಗಾಗಿ ಆತುರ ಪಡುತ್ತಿರುವುದೇಕೆ? ನಿಮ್ಮ ಮೇಲೆ ಕರುಣೆ ತೋರುವಂತಾಗಲು ನೀವೇಕೆ ಅಲ್ಲಾಹನೊಡನೆ ಕ್ಷಮೆಯಾಚಿಸುವುದಿಲ್ಲ?
47. ಅವರು (ಜನಾಂಗದವರು) ಹೇಳಿದರು; ನಾವಂತು, ನಿಮ್ಮನ್ನು ಹಾಗೂ ನಿಮ್ಮ ಜೊತೆಗೆ ಇರುವವರನ್ನು ಅಪಶಕುನವೆಂದೇ ತಿಳಿಯುತ್ತೇವೆ. ಅವರು (ಸ್ವಾಲಿಹ್) ಹೇಳಿದರು; ನಿಮ್ಮ ಅಪಶಕುನವೆಲ್ಲಾ ಅಲ್ಲಾಹನ ಬಳಿ ಇದೆ. ನಿಜವಾಗಿ ನೀವು ಪರೀಕ್ಷೆಗೆ ತುತ್ತಾಗಿರುವ ಜನಾಂಗವಾಗಿದ್ದೀರಿ.
48. ಮತ್ತು ನಗರದಲ್ಲಿ ಒಂಭತ್ತು ಮಂದಿ ಇದ್ದರು. ಅವರು ಭೂಮಿಯಲ್ಲಿ ಅಶಾಂತಿಯನ್ನೇ ಹಬ್ಬುತ್ತಿದ್ದರು. ಯಾವುದೇ ಸುಧಾರಣೆಯ ಕೆಲಸ ಮಾಡುತ್ತಿರಲಿಲ್ಲ.
49. ಅವರು ಹೇಳತೊಡಗಿದರು; ನೀವೆಲ್ಲಾ ಅಲ್ಲಾಹನ ಆಣೆ ಹಾಕಿಕೊಳ್ಳಿರಿ. ನಾವು ರಾತ್ರಿಯ ವೇಳೆ ಆತನ ಮೇಲೂ ಆತನ ಮನೆಯವರ ಮೇಲೂ ಧಾಳಿ ಮಾಡೋಣ ಮತ್ತು ಅವನ ಮನೆಯವರು ನಾಶವಾದಾಗ ನಾವು ಹಾಜರಿರಲಿಲ್ಲವೆಂದೂ ನಾವು ಖಂಡಿತ ಸತ್ಯವಂತರೆಂದೂ ಅವನ ಉತ್ತರಾಧಿಕಾರಿಗಳೊಡನೆ ಹೇಳೋಣ.
50. ಹೀಗೆ ಅವರು ಒಂದು ಸಂಚು ಹೂಡಿದರು ಮತ್ತು ನಾವೂ (ಅಲ್ಲಾಹ್) ಒಂದು ಸಂಚು ಹೂಡಿದೆವು. ಅವರಿಗೆ ಅದರ ಅರಿವೇ ಇರಲಿಲ್ಲ.
51. ಕೊನೆಗೆ ಅವರ ಸಂಚಿನ ಗತಿ ಏನಾಯಿತೆಂದು ನೋಡಿರಿ; ನಾವು ಅವರನ್ನು ಹಾಗೂ ಅವರ ಸಂಪೂರ್ಣ ಜನಾಂಗವನ್ನು ನಾಶಮಾಡಿಬಿಟ್ಟೆವು.
52. ಇದೋ ಅವರ ನಿವಾಸಗಳು! ಅವರ ಅಕ್ರಮಗಳ ಕಾರಣ, ಅವು ತಲೆ ಕೆಳಗಾಗಿ ಬಿದ್ದುಕೊಂಡಿವೆ. ಬಲ್ಲವರಿಗೆ, ಇದರಲ್ಲಿ ಖಂಡಿತ ಪಾಠವಿದೆ.
53. ವಿಶ್ವಾಸಿಗಳನ್ನು ಮತ್ತು ಧರ್ಮನಿಷ್ಠರಾಗಿದ್ದವರನ್ನು ನಾವು ರಕ್ಷಿಸಿದೆವು.
54. ಮತ್ತು ಲೂತ್ ತಮ್ಮ ಜನಾಂಗದವರೊಡನೆ ಹೇಳಿದರು; ನೀವೇನು ಕಣ್ಣಾರೆ ಕಂಡೂ ಅಶ್ಲೀಲತೆಯಲ್ಲಿ ತೊಡಗಿರುವಿರಾ?
55. ನೀವೇನು, ಮಹಿಳೆಯರನ್ನು ಬಿಟ್ಟು, ಕಾಮದ ಈಡೇರಿಕೆಗಾಗಿ ಪುರುಷರ ಬಳಿಗೆ ಹೋಗುವಿರಾ? ನಿಜಕ್ಕೂ ನೀವು ಅಜ್ಞಾನಿ ಜನಾಂಗವಾಗಿರುವಿರಿ.
56. ಅವರ ಜನಾಂಗದವರು ನೀಡಿದ ಉತ್ತರ ಕೇವಲ ಇಷ್ಟೇ; ಲೂತ್ ಮತ್ತು ಅವರ ಜೊತೆಗಾರರನ್ನು ನಿಮ್ಮ ನಾಡಿನಿಂದ ಹೊರದಬ್ಬಿ ಬಿಡಿರಿ. ಅವರು ಭಾರೀ ಪಾವಿತ್ರ ಬಯಸುವ ಜನರಾಗಿದ್ದಾರೆ.
57. ಕೊನೆಗೆ ನಾವು ಅವರನ್ನೂ (ಲೂತ್ರನ್ನೂ) ಅವರ ಜೊತೆಗಿದ್ದವರನ್ನೂ ರಕ್ಷಿಸಿದೆವು. ಅವರ ಪತ್ನಿಯ ಹೊರತು. ಆಕೆಯನ್ನು ನಾವು ಹಿಂದೆ ಉಳಿದುಕೊಳ್ಳುವವರ ಸಾಲಿಗೆ ಸೇರಿಸಿದೆವು.
58. ನಾವು ಅವರ ಮೇಲೆ ಒಂದು ಮಳೆಯನ್ನು ಸುರಿಸಿದೆವು. ಎಚ್ಚರಿಸಲ್ಪಟ್ಟವರ ಮೇಲೆ ಸುರಿಸಲಾದ ಆ ಮಳೆ ಎಷ್ಟೊಂದು ಕೆಟ್ಟದಾಗಿತ್ತು!
59. ಹೇಳಿರಿ; ಎಲ್ಲ ಪ್ರಶಂಸೆಗಳು ಅಲ್ಲಾಹನಿಗೆ. ಮತ್ತು ಅವನು ಆರಿಸಿಕೊಂಡ ಅವನ ದಾಸರಿಗೆ ಶಾಂತಿ. ಅಲ್ಲಾಹನು ಶ್ರೇಷ್ಠನೋ ಅಥವಾ ಅವರು ನೇಮಿಸಿಕೊಂಡಿರುವ ಪಾಲುದಾರರೋ?
ಕಾಂಡ – 20
60. ಆಕಾಶಗಳನ್ನು ಮತ್ತು ಭೂಮಿಯನ್ನು ಸೃಷ್ಟಿಸಿದವನು ಮತ್ತು ನಿಮಗಾಗಿ ಆಕಾಶದಿಂದ ನೀರನ್ನು ಸುರಿಸಿದವನು (ಯಾರು)? ಮುಂದೆ ನಾವು ಅದರಿಂದ, ಭವ್ಯ ತೋಟಗಳನ್ನು ಬೆಳೆಸಿದೆವು. ಅವುಗಳಲ್ಲಿರುವ ಮರಗಳನ್ನು ಬೆಳೆಸಲು ನಿಮಗಂತು ಸಾಧ್ಯವಿರಲಿಲ್ಲ. (ಇದನ್ನೆಲ್ಲಾ ಮಾಡಲು) ಅಲ್ಲಾಹನ ಜೊತೆಗೇನು ಬೇರೆ ದೇವರಿದ್ದಾರೆಯೇ? ನಿಜವಾಗಿ ಅವರು ಜಗಳಗಂಟರಾಗಿದ್ದಾರೆ.
61. ಭೂಮಿಯನ್ನು ವಾಸಕ್ಕೆ ಯೋಗ್ಯಗೊಳಿಸಿದವನು, ಅದರ ನಡುವೆ ನದಿ ನಾಲೆಗಳನ್ನು ಹರಿಸಿದವನು ಹಾಗೂ ಅದಕ್ಕಾಗಿ (ಭೂಮಿಗಾಗಿ) ಪರ್ವತಗಳನ್ನು ನಿರ್ಮಿಸಿದವನು ಮತ್ತು ಎರಡು ಸಮುದ್ರಗಳ ನಡುವೆ ತೆರೆಯನ್ನು ಕಟ್ಟಿರುವವನು ಯಾರು? (ಇದನ್ನೆಲ್ಲಾ ಮಾಡಲು) ಅಲ್ಲಾಹನ ಜೊತೆಗೇನು ಬೇರೆ ದೇವರಿದ್ದಾರೆಯೇ? ಆದರೆ ಅವರಲ್ಲಿ ಹೆಚ್ಚಿನವರು ಬಲ್ಲವರಲ್ಲ.
62. ನೊಂದವನು ತನ್ನನ್ನು ಪ್ರಾರ್ಥಿಸಿದಾಗ ಅವನ ಮೊರೆಯನ್ನು ಕೇಳಿ ಸಂಕಟವನ್ನು ನಿವಾರಿಸುವವನು ಮತ್ತು ನಿಮ್ಮನ್ನು ಭೂಮಿಯ ಪ್ರತಿನಿಧಿಗಳಾಗಿ ಮಾಡಿದವನು ಯಾರು? ಅಲ್ಲಾಹನ ಜೊತೆಗೇನು ಬೇರೆ ದೇವರಿದ್ದಾರೆಯೇ? ಕೆಲವರು ಮಾತ್ರ ಉಪದೇಶವನ್ನು ಸ್ವೀಕರಿಸುತ್ತಾರೆ.
63. ನೆಲಭಾಗದ ಹಾಗೂ ಸಮುದ್ರದ ಕತ್ತಲುಗಳಲ್ಲಿ ನಿಮಗೆ ದಾರಿತೋರಿಸುವವನು ಮತ್ತು ತನ್ನ ಅನುಗ್ರಹಕ್ಕೆ (ಮಳೆಗೆ) ಮುನ್ನ ಶುಭವಾರ್ತೆಯಾಗಿ ಗಾಳಿಯನ್ನು ಕಳಿಸುವವನು ಯಾರು? (ಇದನ್ನೆಲ್ಲಾ ಮಾಡಲು) ಆ ಅಲ್ಲಾಹನ ಜೊತೆಗೇನು ಬೇರೆ ದೇವರಿದ್ದಾರೆಯೇ? ನೀವು ಅವನ ಜೊತೆ ಪಾಲು ಗೊಳಿಸುವ ಎಲ್ಲರಿಗಿಂತಲೂ ಅವನು ತುಂಬಾ ಉನ್ನತನು.
64. ಸೃಷ್ಟಿ ಕ್ರಿಯೆಯನ್ನು ಆರಂಭಿಸಿದವನು ಮತ್ತು ಅದನ್ನು ಪುನರಾವರ್ತಿಸುವವನು ಯಾರು? ಮತ್ತು ನಿಮಗೆ ಆಕಾಶದಿಂದಲೂ ಭೂಮಿಯಿಂದಲೂ ಆಹಾರ ಒದಗಿಸುತ್ತಲಿರುವವನು ಯಾರು? (ಇದನ್ನೆಲ್ಲಾ ಮಾಡಲು) ಅಲ್ಲಾಹನ ಜೊತೆಗೇನು ಬೇರೆ ದೇವರಿದ್ದಾರೆಯೇ? ಹೇಳಿರಿ; ನೀವು ಸತ್ಯವಂತರಾಗಿದ್ದರೆ ನಿಮ್ಮ ಪುರಾವೆಯನ್ನು ತನ್ನಿರಿ.
65. ಹೇಳಿರಿ; ಅಲ್ಲಾಹನೊಬ್ಬನ ಹೊರತು, ಗುಪ್ತ ವಿಷಯಗಳನ್ನು ಬಲ್ಲವನು ಆಕಾಶಗಳಲ್ಲಾಗಲಿ ಭೂಮಿಯಲ್ಲಾಗಲಿ ಯಾರೂ ಇಲ್ಲ. ತಮ್ಮನ್ನು ಯಾವಾಗ ಮತ್ತೆ ಜೀವಂತಗೊಳಿಸಲಾಗುವುದು ಎಂಬ ಅರಿವೂ ಅವರಿಗೆ (ಇತರರಿಗೆ) ಇಲ್ಲ.
66. ನಿಜವಾಗಿ, ಪರಲೋಕದ ವಿಷಯದಲ್ಲಂತು ಅವರ ಜ್ಞಾನವು ನಿಸ್ತೇಜವಾಗಿ ಬಿಟ್ಟಿದೆ! ನಿಜವಾಗಿ ಅವರು ಆ ಕುರಿತು ಸಂಶಯದಲ್ಲಿದ್ದಾರೆ. ನಿಜವಾಗಿ, ಅವರು ಅದರ ಪಾಲಿಗೆ ಕುರುಡರಾಗಿಬಿಟ್ಟಿದ್ದಾರೆ.
67. ಧಿಕ್ಕಾರಿಗಳು ಹೇಳುತ್ತಾರೆ; ನಾವು ಮತ್ತು ನಮ್ಮ ತಾತ ಮುತ್ತಾತಂದಿರು ಮಣ್ಣಾಗಿ ಮಾಪರ್ಟ್ಟ ಬಳಿಕ, ನಮ್ಮನ್ನೇನು (ನಮ್ಮ ಗೋರಿಗಳಿಂದ) ಹೊರ ತೆಗೆಯಲಾಗುವುದೇ?
68. ಈ ಹಿಂದೆಯೂ ನಮಗೆ ಹಾಗೂ ನಮ್ಮ ತಾತ ಮುತ್ತಾತಂದಿರಿಗೆ, ಇಂತಹದೆ ಆಶ್ವಾಸನೆ ನೀಡಲಾಗಿತ್ತು. ನಿಜವಾಗಿ ಅವೆಲ್ಲಾ ಕೇವಲ ಗತಕಾಲದ ಕತೆಗಳು.
69. ಹೇಳಿರಿ; ನೀವು ಭೂಮಿಯಲ್ಲಿ ಸುತ್ತಾಡಿರಿ ಮತ್ತು ಅಪರಾಧಿಗಳ ಗತಿ ಏನಾಯಿತೆಂಬುದನ್ನು ನೋಡಿರಿ.
70. (ದೂತರೇ,) ಅವರ ಕುರಿತು ನೀವೇನೂ ಚಿಂತಿಸಬೇಡಿ ಮತ್ತು ಅವರ ಸಂಚುಗಳ ಬಗ್ಗೆ ಕಳವಳ ಪಡಬೇಡಿ.
71. ‘‘ನೀವು ಸತ್ಯವಂತರಾಗಿದ್ದರೆ ಈ ಆಶ್ವಾಸನೆ ಈಡೇರುವುದು ಯಾವಾಗ?’’ ಎಂದು ಅವರು ಕೇಳುತ್ತಾರೆ.
72. ಹೇಳಿರಿ; ನೀವು ಯಾವುದಕ್ಕಾಗಿ ಆತುರ ಪಡುತ್ತಿರುವಿರೋ ಅದರ ಕೆಲವು ಭಾಗಗಳು ನಿಮ್ಮ ಸಮೀಪವೇ ಇರಬಹುದು.
73. ನಿಮ್ಮ ಒಡೆಯನಂತು ಖಂಡಿತವಾಗಿಯೂ ಎಲ್ಲ ಮಾನವರ ಪಾಲಿಗೆ ಅನುಗ್ರಹಶಾಲಿಯಾಗಿದ್ದಾನೆ. ಆದರೆ ಅವರಲ್ಲಿ ಹೆಚ್ಚಿನವರು ಕೃತಜ್ಞತೆ ಸಲ್ಲಿಸುವುದಿಲ್ಲ.
74. ಮತ್ತು ನಿಮ್ಮ ಒಡೆಯನು, ಅವರ ಹೃದಯಗಳಲ್ಲಿ ಅಡಗಿರುವ ವಿಷಯಗಳನ್ನೂ ಅವರು ಪ್ರಕಟಿಸುವ ವಿಷಯಗಳನ್ನೂ ಖಂಡಿತ ಬಲ್ಲನು.
75. ಆಕಾಶಗಳಲ್ಲಿನ ಮತ್ತು ಭೂಮಿಯಲ್ಲಿನ ಯಾವ ರಹಸ್ಯವೂ ಒಂದು ವ್ಯಕ್ತ ಗಂಥದಲ್ಲಿ ದಾಖಲಾಗದೆ ಉಳಿದಿಲ್ಲ.
76. ಖಂಡಿತವಾಗಿಯೂ ಈ ಕುರ್ಆನ್, ಇಸ್ರಾಈಲರ ಸಂತತಿಗಳಿಗೆ, ಅವರು ಪರಸ್ಪರ ಭಿನ್ನತೆ ತಾಳಿರುವ ಹೆಚ್ಚಿನೆಲ್ಲ ವಿಷಯಗಳನ್ನು ವಿವರಿಸಿಕೊಡುತ್ತದೆ.
77. ಮತ್ತು ಇದು, ನಂಬುವವರ ಪಾಲಿಗೆ ಖಂಡಿತ ಮಾರ್ಗದರ್ಶನ ಹಾಗೂ ಅನುಗ್ರಹವಾಗಿದೆ.
78. ಖಂಡಿತವಾಗಿಯೂ ನಿಮ್ಮ ಒಡೆಯನು ತನ್ನ ಅಧಿಕಾರದಿಂದ ಅವರ ನಡುವೆ ತೀರ್ಪು ನೀಡುವನು. ಅವನು ಭಾರೀ ಪ್ರಬಲನೂ ಜ್ಞಾನವಂತನೂ ಆಗಿರುತ್ತಾನೆ.
79. ನೀವು ಅಲ್ಲಾಹನಲ್ಲಿ ಭರವಸೆ ಇಡಿರಿ. ಖಂಡಿತವಾಗಿಯೂ ನೀವು ಬಹಳ ವ್ಯಕ್ತವಾದ ಸತ್ಯದಲ್ಲಿರುವಿರಿ.
80. ಸತ್ತವರಿಗೆ ಕೇಳಿಸಲು ನಿಮಗೆ ಖಂಡಿತ ಸಾಧ್ಯವಿಲ್ಲ ಮತ್ತು ಕಿವುಡರು ಬೆನ್ನು ತಿರುಗಿಸಿ ಹೊರಟು ಬಿಟ್ಟಾಗ, ಅವರಿಗೆ ಕೇಳಿಸಲಿಕ್ಕೂ ನಿಮಗೆ ಸಾಧ್ಯವಿಲ್ಲ.
81. ನೀವಿರುವುದು ಕುರುಡರನ್ನು ಅವರ ದಾರಿಗೇಡಿತನದಿಂದ ಹೊರತಂದು ಅವರಿಗೆ ದಾರಿತೋರಿಸುವುದಕ್ಕಲ್ಲ. ನಮ್ಮ ವಚನಗಳನ್ನು ನಂಬುವವರು ಹಾಗೂ ಶರಣಾಗುವವರಿಗೆ ಮಾತ್ರ ನೀವು ಕೇಳಿಸಬಲ್ಲಿರಿ.
82. ಅವರ ವಿಷಯದಲ್ಲಿ (ಅಲ್ಲಾಹನ) ತೀರ್ಪು ಪ್ರಕಟವಾಗುವ ಸಮಯ ಬಂದಾಗ ನಾವು ಅವರಿಗಾಗಿ ಭೂಮಿಯಿಂದ ಒಂದು ಪ್ರಾಣಿಯನ್ನು ಹೊರಡಿಸುವೆವು. ಅದು ಅವರೊಡನೆ ಮಾತನಾಡುವುದು. ಅನ್ಯಥಾ ಜನರು ನಮ್ಮ ವಚನಗಳನ್ನು ದಿಟವಾಗಿ ನಂಬುತ್ತಿರಲಿಲ್ಲ.
83. ನಾವು ಪ್ರತಿಯೊಂದು ಸಮುದಾಯದಿಂದ, ನಮ್ಮ ವಚನಗಳನ್ನು ತಿರಸ್ಕರಿಸುತ್ತಿದ್ದವರ ಒಂದು ದಂಡನ್ನು ಸೇರಿಸುವ ದಿನ ಅವರನ್ನು ಸಾಲುಗಟ್ಟಿಸಲಾಗುವುದು.
84. ಅವರೆಲ್ಲರೂ ಬಂದು ಬಿಟ್ಟಾಗ ಅವನು (ಅಲ್ಲಾಹನು) ಹೇಳುವನು; ನಿಮಗೆ ನನ್ನ ವಚನಗಳ ಕುರಿತು ಜ್ಞಾನದ ಸುಳಿವೇ ಇಲ್ಲದಿದ್ದರೂ ನೀವು ಅವುಗಳನ್ನು ತಿರಸ್ಕರಿಸಿದ್ದಿರಾ? ನೀವು ಅದೇನೆಲ್ಲಾ ಮಾಡುತ್ತಿದ್ದಿರಿ?
85. ಅವರು ಎಸಗಿದ ಅಕ್ರಮದಿಂದಾಗಿ ಅವರ ವಿರುದ್ಧ (ಶಿಕ್ಷೆಯ) ತೀರ್ಪು ಜಾರಿಗೊಳ್ಳಲಿದೆ ಮತ್ತು ಅವರಿಗೆ ಮಾತನಾಡಲಿಕ್ಕೂ ಸಾಧ್ಯವಾಗದು.
86. ಅವರು ವಿಶ್ರಮಿಸಲೆಂದು ನಾವು ರಾತ್ರಿಯನ್ನು ಹಾಗೂ ಎಲ್ಲವನ್ನೂ ಕಾಣಲೆಂದು ಹಗಲನ್ನು ನಿರ್ಮಿಸಿರುವುದನ್ನು ಅವರು ಕಾಣುತ್ತಿಲ್ಲವೇ? ನಂಬುವವರಿಗೆ ಇದರಲ್ಲಿ ಖಂಡಿತ ಪಾಠಗಳಿವೆ.
87. ಮತ್ತು (ಲೋಕಾಂತ್ಯದ) ಕಹಳೆ ಊದಲಾಗುವ ಆ ದಿನ, ಅಲ್ಲಾಹನು ಇಚ್ಛಿಸಿದವರ ಹೊರತು, ಆಕಾಶಗಳಲ್ಲಿ ಹಾಗೂ ಭೂಮಿಯಲ್ಲಿ ಇರುವವರೆಲ್ಲಾ ಭಯಭೀತರಾಗಿರುವರು ಮತ್ತು ಎಲ್ಲರೂ ವಿಧೇಯರಾಗಿ ಅವನ ಮುಂದೆ ಬರುವರು.
88. (ಇಂದು) ನೀವು ಪರ್ವತಗಳನ್ನು ಕಂಡು, ಅವು ಬಹಳ ಸ್ಥಿರವಾಗಿವೆ ಎಂದು ಭಾವಿಸುತ್ತೀರಿ. ಆದರೆ (ಅಂದು) ಅವುಗಳು ಮೋಡಗಳಂತೆ ಚಲಿಸುವವು. ಇದೆಲ್ಲಾ ಅಲ್ಲಾಹನ ಕೈಗಾರಿಕೆ. ಅವನು ಎಲ್ಲವನ್ನೂ ಬಹಳ ಪಕ್ವವಾಗಿಯೇ ರೂಪಿಸಿದ್ದಾನೆ. ನೀವು ಮಾಡುವುದೆಲ್ಲವನ್ನೂ ಅವನು ಖಂಡಿತವಾಗಿ ಬಲ್ಲನು.
89. (ಅಂದು) ಒಳಿತನ್ನು ತರುವಾತನಿಗೆ ಅದಕ್ಕಿಂತ ಉತ್ತಮವಾದುದು ಸಿಗಲಿದೆ ಮತ್ತು ಅಂಥವರು ಅಂದು ಎಲ್ಲ ಭಯಗಳಿಂದ ಮುಕ್ತರಾಗಿ ಸುರಕ್ಷಿತರಾಗಿರುವರು.
90. ಇನ್ನು (ಅಂದು) ಕೆಡುಕನ್ನು ತಂದವನು – ಅಂಥವರನ್ನು ಮುಖ ಕೆಳಗಾಗಿಸಿ ಬೆಂಕಿಗೆ ಎಸೆಯಲಾಗುವುದು. ನಿಮಗೇನು, ನೀವು ಮಾಡುತ್ತಿದ್ದ ಕರ್ಮಗಳಿಗಿಂತ ಭಿನ್ನ ಪ್ರತಿಫಲ ಸಿಗಲಿಕ್ಕುಂಟೇ?
91. (ದೂತರೇ, ಹೇಳಿರಿ;) ನನಗಂತೂ, ಪಾವನಗೊಳಿಸಲಾಗಿರುವ ಈ ನಗರದ ಒಡೆಯನನ್ನೇ ಪೂಜಿಸಬೇಕೆಂದು ಆದೇಶಿಸಲಾಗಿದೆ – ಮತ್ತು ಎಲ್ಲವೂ ಅವನಿಗೇ ಸೇರಿದೆ. ಇನ್ನು ನನಗಂತೂ ನಾನು ಸದಾ (ಅವನಿಗೆ) ಶರಣಾಗಿರಬೇಕೆಂದು ಆದೇಶಿಸಲಾಗಿದೆ.
92. ಮತ್ತು ನಾನು ಕುರ್ಆನ್ಅನ್ನು ಓದಬೇಕೆಂದು (ನನಗೆ ಆದೇಶಿಸಲಾಗಿದೆ). ಸರಿ ದಾರಿಗೆ ಬರುವವನು ಸ್ವತಃ ತನ್ನ ಹಿತಕ್ಕಾಗಿಯಷ್ಟೇ ಸರಿ ದಾರಿಗೆ ಬರುತ್ತಾನೆ. ಇನ್ನು ಯಾರಾದರೂ ದಾರಿಗೆಟ್ಟಿದ್ದರೆ, ನಾನಂತು ಕೇವಲ ಎಚ್ಚರಿಸುವವನಾಗಿದ್ದೇನೆ.
93. ಮತ್ತು (ದೂತರೇ,) ನೀವು ಹೇಳಿರಿ; ಅಲ್ಲಾಹನಿಗೆ ಪ್ರಶಂಸೆಗಳು. ಅವನು ನಿಮಗೆ ತನ್ನ ಪುರಾವೆಗಳನ್ನು ತೋರಿಸುವನು ಮತ್ತು ನೀವು ಅವುಗಳನ್ನು ಗುರುತಿಸುವಿರಿ. ನೀವು ಮಾಡುತ್ತಿರುವ ಕೃತ್ಯಗಳ ಕುರಿತು ನಿಮ್ಮ ಒಡೆಯನು ಅಜ್ಞನಲ್ಲ.