2. ಇದು ಎಲ್ಲ ಲೋಕಗಳ ಒಡೆಯನ ಕಡೆಯಿಂದ ಇಳಿಸಲಾಗಿರುವ ಗ್ರಂಥ. ಇದರಲ್ಲಿ ಸಂದೇಹವಿಲ್ಲ.
3. (ದೂತರೇ,) ಅವರೇನು, ಈತನೇ ಇದನ್ನು ರಚಿಸಿಕೊಂಡಿದ್ದಾನೆ ಎನ್ನುತ್ತಾರೆಯೇ? ನಿಜವಾಗಿ ಇದು ನಿಮ್ಮ ಒಡೆಯನ ಕಡೆಯಿಂದ ಬಂದಿರುವ ಸತ್ಯವಾಗಿದೆ. ನಿಮಗಿಂತ ಮೊದಲು, ತಮ್ಮ ಬಳಿಗೆ ಎಚ್ಚರಿಸುವವರು ಬಂದಿಲ್ಲದ ಜನಾಂಗವೊಂದನ್ನು ನೀವು ಎಚ್ಚರಿಸಬೇಕೆಂದು. ಮತ್ತು ಅವರು (ಈ ಮೂಲಕ) ಸರಿದಾರಿಗೆ ಬರಬಹುದೆಂದು (ಇದನ್ನು ಕಳಿಸಲಾಗಿದೆ).
4. ಆಕಾಶಗಳನ್ನು, ಭೂಮಿಯನ್ನು ಹಾಗೂ ಅವುಗಳ ನಡುವೆ ಇರುವ ಎಲ್ಲವನ್ನೂ ಅಲ್ಲಾಹನೇ ಆರು ದಿನಗಳಲ್ಲಿ ಸೃಷ್ಟಿಸಿದನು. ಆ ಬಳಿಕ ವಿಶ್ವಸಿಂಹಾಸನವನ್ನು ಆವರಿಸಿದನು. ಅವನ ಹೊರತು ನಿಮಗೆ ರಕ್ಷಕರಾಗಲಿ ಶಿಫಾರಸುದಾರರಾಗಲಿ ಯಾರೂ ಇಲ್ಲ. ನೀವೇನು ಚಿಂತನೆ ನಡೆಸುವುದಿಲ್ಲವೇ?
5. ಆಕಾಶದಿಂದ ಭೂಮಿಯವರೆಗಿನ ಎಲ್ಲ ವ್ಯವಹಾರಗಳನ್ನೂ ಅವನೇ ಯೋಜಿಸುತ್ತಾನೆ. ಕೊನೆಗೆ, ನಿಮ್ಮ ಲೆಕ್ಕಾಚಾರ ಪ್ರಕಾರ ಒಂದು ಸಾವಿರ ವರ್ಷಗಳಷ್ಟು ದೀರ್ಘವಾಗಿರುವ ಒಂದು ದಿನ ಇದೆಲ್ಲವೂ ಅವನೆಡೆಗೆ ಮರಳಲಿದೆ.
6. ಅವನು ಗುಪ್ತ ಹಾಗೂ ವ್ಯಕ್ತವಾಗಿರುವ ಎಲ್ಲವನ್ನೂ ಅರಿತಿರುವ, ಪ್ರಚಂಡನೂ ಕರುಣಾಮಯಿಯೂ ಆಗಿದ್ದಾನೆ.
7. ಅವನು ಎಲ್ಲ ವಸ್ತುಗಳನ್ನೂ ಸುಂದರವಾಗಿ ಸೃಷ್ಟಿಸಿರುವನು ಮತ್ತು ಅವನು ಮಾನವನ ಸೃಷ್ಟಿಯನ್ನು ಮಣ್ಣಿನಿಂದ ಆರಂಭಿಸಿದನು.
8. ಆ ಬಳಿಕ ಅವನು ಆತನ (ಮಾನವನ) ಸಂತತಿಯನ್ನು ತುಚ್ಛವಾದ ನೀರಿನಿಂದ ಸೃಷ್ಟಿಸಿದನು.
9. ಆ ಬಳಿಕ ಅವನು ಆತನಿಗೆ ಆಕಾರ ನೀಡಿದನು. ಮತ್ತು ಅವನೊಳಗೆ ತನ್ನ ಆತ್ಮವನ್ನು ಊದಿದನು ಮತ್ತು ನಿಮಗೆ ಕಿವಿಗಳನ್ನೂ ಕಣ್ಣುಗಳನ್ನೂ ಮನಸ್ಸುಗಳನ್ನೂ ನೀಡಿದನು. (ಇಷ್ಟಾಗಿಯೂ) ನೀವು ಕೃತಜ್ಞತೆ ಸಲ್ಲಿಸುವುದು ತೀರಾ ಕಡಿಮೆ.
10. ‘‘ನಾವು ಭೂಮಿಯೊಳಗೆ ಕಣ್ಮರೆಯಾಗಿ ಹೋದ ಬಳಿಕ ನಮ್ಮನ್ನೇನು ಹೊಸದಾಗಿ ಸೃಷ್ಟಿಸಲಾಗುವುದೇ?’’ ಎಂದು ಅವರು ಕೇಳುತ್ತಾರೆ. ನಿಜವಾಗಿ ಅವರು, ತಮ್ಮ ಒಡೆಯನನ್ನು ಭೇಟಿಯಾಗಲಿಕ್ಕಿದೆ ಎಂಬುದನ್ನು ನಿರಾಕರಿಸುವವರಾಗಿದ್ದಾರೆ.
11. ಹೇಳಿರಿ; ನಿಮ್ಮನ್ನು ಯಾವ ಮರಣ ದೂತನ ವಶಕ್ಕೆ ಒಪ್ಪಿಸಲಾಗಿದೆಯೋ ಅವನು ನಿಮ್ಮನ್ನು ಸಾಯಿಸುವನು. ಆ ಬಳಿಕ ನಿಮ್ಮನ್ನು ನಿಮ್ಮ ಒಡೆಯನ ಬಳಿಗೆ ಮರಳಿಸಲಾಗುವುದು.
12. ಅಪರಾಧಿಗಳು ತಮ್ಮ ಒಡೆಯನ ಮುಂದೆ ತಲೆಬಾಗಿ, ‘‘ನಮ್ಮೊಡೆಯಾ! ನಾವು ಎಲ್ಲವನ್ನೂ ನೋಡಿಕೊಂಡೆವು ಮತ್ತು ಕೇಳಿಕೊಂಡೆವು. ನಮ್ಮನ್ನೀಗ (ಭೂಮಿಗೆ) ಮರಳಿಸು. ನಾವು ಸತ್ಕರ್ಮಗಳನ್ನು ಮಾಡುವೆವು. ನಾವೀಗ ದೃಢನಂಬಿಕೆ ಉಳ್ಳವರಾಗಿದ್ದೇವೆ’’ ಎಂದು ಹೇಳುವುದನ್ನು ನೀವು ನೋಡುವಂತಿದ್ದರೆ ಚೆನ್ನಾಗಿತ್ತು.
13. ನಾವು ಬಯಸಿದ್ದರೆ ಪ್ರತಿಯೊಬ್ಬರಿಗೂ ನೇರಮಾರ್ಗವನ್ನು ಅನುಸರಿಸುವ ಭಾಗ್ಯವನ್ನು ನೀಡಿ ಬಿಡುತ್ತಿದ್ದೆವು. ಆದರೆ, ‘‘ಖಂಡಿತ ನಾನು ನರಕವನ್ನು, ಮಾನವರು ಹಾಗೂ ಜಿನ್ನ್ಗಳಿಂದ ತುಂಬಿ ಬಿಡಲಿದ್ದೇನೆ’’ ಎಂಬ ನನ್ನ ಮಾತು ನಿಜವಾಗಿ ಬಿಟ್ಟಿದೆ.
14. ನೀವು ಈ ದಿನದ ಭೇಟಿಯನ್ನು ಮರೆತು ಬಿಟ್ಟಿದ್ದರ ಫಲವನ್ನು ಇದೀಗ ಅನುಭವಿಸಿರಿ. ನಾವು ನಿಮ್ಮನ್ನು ಖಂಡಿತ ಮರೆತಿರುವೆವು. ನೀವು ಮಾಡುತ್ತಿದ್ದ ಕರ್ಮಗಳ ಫಲವಾಗಿ, ಶಾಶ್ವತವಾದ ಶಿಕ್ಷೆಯನ್ನು ಅನುಭವಿಸಿರಿ.
15. ನಮ್ಮ ವಚನಗಳನ್ನು ನಂಬುವವರು ಎಂಥವರೆಂದರೆ, ಅವರಿಗೆ ಅವುಗಳನ್ನು ನೆನಪಿಸಿದೊಡನೆ ಅವರು ಸಾಷ್ಟಾಂಗವೆರಗಿ ಬಿಡುತ್ತಾರೆ ಹಾಗೂ ತಮ್ಮ ಒಡೆಯನ ಪಾವಿತ್ರವನ್ನು ಕೊಂಡಾಡುತ್ತಾರೆ ಮತ್ತು ಅವರು ಅಹಂಕಾರ ತೋರುವುದಿಲ್ಲ.
16. ಅವರ ಬೆನ್ನುಗಳು ಅವರ ಚಾಪೆಗಳಿಂದ ದೂರವಿರುತ್ತವೆ. ಅವರು ಭಯ ಹಾಗೂ ನಿರೀಕ್ಷೆಯೊಂದಿಗೆ ತಮ್ಮ ಒಡೆಯನನ್ನು ಪ್ರಾರ್ಥಿಸುತ್ತಲಿರುತ್ತಾರೆ ಮತ್ತು ನಾವು ಅವರಿಗೆ ನೀಡಿರುವುದನ್ನು ಅವರು ಖರ್ಚು ಮಾಡುತ್ತಾರೆ.
17. ಅವರ ಕರ್ಮಗಳ ಫಲವಾಗಿ, ಅವರ ಕಣ್ಣುಗಳು ತಂಪಾಗಲು, ಅವರಿಗಾಗಿ ಏನನ್ನು ಗುಪ್ತವಾಗಿ ಸಿದ್ಧಗೊಳಿಸಿಡಲಾಗಿದೆ ಎಂಬುದು, ಯಾರಿಗೂ ತಿಳಿಯದು.
18. ವಿಶ್ವಾಸಿಯಾಗಿರುವವನು ದುಷ್ಕರ್ಮಿಯಂತಾಗಲು ಸಾಧ್ಯವೇ? ಅವರು ಖಂಡಿತ ಸಮಾನರಲ್ಲ.
19. ವಿಶ್ವಾಸಿಗಳಾಗಿದ್ದು ಸತ್ಕರ್ಮಗಳನ್ನು ಮಾಡುತ್ತಿದ್ದವರಿಗಾಗಿ, ಅವರು ಮಾಡುತ್ತಿದ್ದ ಕರ್ಮಗಳಿಗೆ ಪ್ರತಿಫಲವಾಗಿ, ಶಾಶ್ವತವಾದ ಭವ್ಯತೋಟಗಳಲ್ಲಿರುವ ನಿವಾಸಗಳಿವೆ.
20. ಇನ್ನು ಅವಿಧೇಯರಾಗಿದ್ದವರ ಪಾಲಿಗೆ ನರಕವೇ ನೆಲೆಯಾಗಿರುವುದು. ಅವರು ಅದರಿಂದ ಹೊರಹೋಗಲು ಬಯಸಿದಾಗಲೆಲ್ಲಾ ಅವರನ್ನು ಮತ್ತೆ ಅದರೊಳಕ್ಕೆ ಮರಳಿಸಿ ಬಿಡಲಾಗುವುದು ಮತ್ತು ಅವರೊಡನೆ, ‘‘ನೀವು ನಿರಾಕರಿಸುತ್ತಿದ್ದ ನರಕದ ಶಿಕ್ಷೆಯನ್ನು ಸವಿಯಿರಿ’’ ಎನ್ನಲಾಗುವುದು.
21. ನಾವು (ಪರಲೋಕದ) ದೊಡ್ಡ ಶಿಕ್ಷೆಗೆ ಮುನ್ನ ಅವರಿಗೆ (ಇಹಲೋಕದಲ್ಲಿ) ಸಣ್ಣ ಶಿಕ್ಷೆಗಳ ಸವಿ ಕಾಣಿಸುವೆವು – ಅವರು (ಸರಿದಾರಿಗೆ) ಮರಳಬಹುದೆಂದು.
22. ತನ್ನ ಒಡೆಯನ ವಚನಗಳ ಮೂಲಕ ಉಪದೇಶಿಸಲ್ಪಟ್ಟ ಬಳಿಕವೂ ಅದನ್ನು ಕಡೆಗಣಿಸಿ ಬಿಟ್ಟವನಿಗಿಂತ ದೊಡ್ಡ ಅಕ್ರಮಿ ಯಾರಿದ್ದಾನೆ? ಖಂಡಿತವಾಗಿಯೂ ನಾವು ಅಪರಾಧಿಗಳ ವಿರುದ್ಧ ಪ್ರತೀಕಾರ ತೀರಿಸುವೆವು.
23. ನಾವು ಈ ಹಿಂದೆ ಮೂಸಾರಿಗೆ, ಗ್ರಂಥವನ್ನು ನೀಡಿದ್ದೆವು. ಅವನನ್ನು (ಅಲ್ಲಾಹನನ್ನು) ಭೇಟಿಯಾಗಲಿರುವ ಕುರಿತು ನೀವು ಸಂಶಯ ತಾಳಬೇಡಿ (ಎಂದು ಅದರಲ್ಲಿ ಉಪದೇಶಿಸಲಾಗಿತ್ತು). ನಾವು ಅದನ್ನು (ಆ ಗ್ರಂಥವನ್ನು) ಬನೀ ಇಸ್ರಾಈಲರ ಸಂತತಿಗಳಿಗೆ ಮಾರ್ಗದರ್ಶಿಯಾಗಿಸಿದ್ದೆವು.
24. ಅವರು ಸಹನಶೀಲರಾಗಿದ್ದಾಗ, ನಾವು ಅವರಲ್ಲಿ ಕೆಲವರನ್ನು ನಾಯಕರಾಗಿಸಿದ್ದೆವು. ಅವರು ನಮ್ಮ ಆದೇಶದಂತೆ ಜನರಿಗೆ ಮಾರ್ಗದರ್ಶಿಗಳಾಗಿದ್ದರು ಮತ್ತು ನಮ್ಮ ವಚನಗಳಲ್ಲಿ ಅಚಲ ವಿಶ್ವಾಸ ಉಳ್ಳವರಾಗಿದ್ದರು.
25. ನಿಮ್ಮ ಒಡೆಯನು, ಅವರು ಪರಸ್ಪರ ಭಿನ್ನತೆ ತಾಳಿದ್ದ ಎಲ್ಲ ವಿಷಯಗಳನ್ನು ಪುನರುತ್ಥಾನ ದಿನ ಖಂಡಿತ ಇತ್ಯರ್ಥಗೊಳಿಸುವನು.
26. ನಾವು ಅವರಿಗಿಂತ ಹಿಂದಿನ ಅದೆಷ್ಟೋ ಸಮುದಾಯಗಳನ್ನು ನಾಶ ಮಾಡಿರುವುದು, ಅವರ ಪಾಲಿಗೆ ಮಾರ್ಗದರ್ಶಿಯಾಗಲಿಲ್ಲವೇ? ಅವರ (ಹಿಂದೆ ನಾಶಗೊಂಡವರ) ನೆಲೆಗಳಲ್ಲಿ ಅವರು ನಡೆದಾಡುತ್ತಾರೆ. ಇದರಲ್ಲಿ ಖಂಡಿತ ಪುರಾವೆಗಳಿವೆ. ಅವರೇನು ಕೇಳುತ್ತಿಲ್ಲವೇ?
27. ಅವರು ನೋಡಲಿಲ್ಲವೇ, ನಾವು ಒಣಗಿದ ನೆಲದ ಕಡೆಗೆ ನೀರನ್ನು ಹರಿಸುವುದನ್ನು? ಅದರಿಂದ ನಾವು ಬೆಳೆಯನ್ನು ಹೊರತೆಗೆಯುತ್ತೇವೆ. ಅದನ್ನು ಅವರ ಜಾನುವಾರುಗಳೂ ತಿನ್ನುತ್ತವೆ ಮತ್ತು ಸ್ವತಃ ಅವರೂ ತಿನ್ನುತ್ತಾರೆ. ಅವರೇನು (ಇದನ್ನೆಲ್ಲಾ) ನೋಡುತ್ತಿಲ್ಲವೇ?
28. ನೀವು ಸತ್ಯವಂತರಾಗಿದ್ದರೆ, ತೀರ್ಪಿನ ಆ ದಿನ ಯಾವಾಗ ಬಂದೀತು(ಎಂದು ತಿಳಿಸಿರಿ) ಎಂದು ಅವರು ಹೇಳುತ್ತಾರೆ.
29. ಹೇಳಿರಿ; ತೀರ್ಪಿನ ಆ ದಿನ, ಧಿಕ್ಕಾರಿಗಳಿಗೆ ಅವರ ನಂಬಿಕೆಯಿಂದ ಯಾವ ಲಾಭವೂ ಆಗದು ಮತ್ತು ಅವರಿಗೆ ಹೆಚ್ಚಿನ ಕಾಲಾವಕಾಶವೂ ಸಿಗದು.
30. (ದೂತರೇ,) ನೀವು ಅವರನ್ನು ಕಡೆಗಣಿಸಿರಿ ಮತ್ತು ಕಾಯಿರಿ. ಅವರೂ ಖಂಡಿತ ಕಾಯುತ್ತಿದ್ದಾರೆ.