1. ದೂತರೇ, ಅಲ್ಲಾಹನಿಗೆ ಅಂಜಿರಿ ಮತ್ತು ಧಿಕ್ಕಾರಿಗಳನ್ನು ಹಾಗೂ ಕಪಟಿಗಳನ್ನು ಅನುಸರಿಸಬೇಡಿ. ಅಲ್ಲಾಹನು ಖಂಡಿತ ಎಲ್ಲವನ್ನೂ ಬಲ್ಲ ಯುಕ್ತಿವಂತನಾಗಿದ್ದಾನೆ.
2. ದಿವ್ಯವಾಣಿಯ ಮೂಲಕ ನಿಮ್ಮೊಡೆಯನ ಕಡೆಯಿಂದ ನಿಮಗೆ ನೀಡಲಾಗಿರುವುದನ್ನು ಅನುಸರಿಸಿರಿ. ನೀವು ಮಾಡುವ ಎಲ್ಲ ಕಾರ್ಯಗಳ ಅರಿವು ಅಲ್ಲಾಹನಿಗಿದೆ.
3. ನೀವು ಅಲ್ಲಾಹನಲ್ಲಿ ಭರವಸೆ ಇಡಿರಿ. ಕಾರ್ಯ ಸಾಧಕನಾಗಿ ಅಲ್ಲಾಹನೇ ಸಾಕು.
4. ಅಲ್ಲಾಹನು ಯಾರ ಎದೆಯಲ್ಲೂ ಎರಡು ಹೃದಯಗಳನ್ನು ಇಟ್ಟಿಲ್ಲ. ನೀವು ತಾಯಿ ಎಂದು ಕರೆದು ಬಿಟ್ಟ ನಿಮ್ಮ ಪತ್ನಿಯರನ್ನು ಅವನು ನಿಮ್ಮ ತಾಯಂದಿರಾಗಿ ಮಾಡಿಲ್ಲ. ಮತ್ತು ನೀವು ಪುತ್ರರೆಂದು ಕರೆದವರನ್ನು (ದತ್ತು ಪುತ್ರರನ್ನು) ಅವನು ನಿಮ್ಮ ಪುತ್ರರಾಗಿ ಮಾಡಿಲ್ಲ. ಇವೆಲ್ಲಾ ಕೇವಲ ನಿಮ್ಮ ಬಾಯಿ ಮಾತುಗಳು. ಅಲ್ಲಾಹನು ಸತ್ಯವಾಗಿರುವುದನ್ನೇ ಹೇಳುತ್ತಾನೆ ಮತ್ತು ಸರಿದಾರಿಯನ್ನು ತೋರುತ್ತಾನೆ.
5. ನೀವು ಅವರನ್ನು (ದತ್ತು ಸಂತತಿಯನ್ನು) ಅವರ ತಂದೆಯರ ಹೆಸರಿನಿಂದಲೇ ಕರೆಯಿರಿ. ಅಲ್ಲಾಹನ ದೃಷ್ಟಿಯಲ್ಲಿ ಅದುವೇ ಹೆಚ್ಚು ನ್ಯಾಯೋಚಿತವಾಗಿದೆ. ಅವರ ತಂದೆ ಯಾರೆಂದು ನಿಮಗೆ ತಿಳಿದಿಲ್ಲದಿದ್ದರೂ ಅವರು ಧರ್ಮದಲ್ಲಿ ನಿಮ್ಮ ಸಹೋದರರು ಮತ್ತು ನಿಮ್ಮ ಸಂಗಾತಿಗಳಾಗಿರುವರು. ಅಪ್ಪಿತಪ್ಪಿ ನಿಮ್ಮಿಂದ ಪ್ರಮಾದವೇನಾದರೂ ಸಂಭವಿಸಿದರೆ ನೀವು ಹೊಣೆಗಾರರಲ್ಲ . ಆದರೆ ನೀವು ಮನಃಪೂರ್ವಕ ಮಾಡುವ ತಪ್ಪುಗಳಿಗೆ ಮಾತ್ರ (ನೀವೇ ಹೊಣೆಗಾರರು). ಅಲ್ಲಾಹನು ಸದಾ ಕ್ಷಮಿಸುವವನು ಮತ್ತು ಕರುಣೆ ತೋರುವವನಾಗಿದ್ದಾನೆ.
6. ವಿಶ್ವಾಸಿಗಳ ಪಾಲಿಗೆ ದೇವದೂತರು ಸ್ವತಃ ತಮ್ಮ ಜೀವಕ್ಕಿಂತ ಹೆಚ್ಚು ಪ್ರಿಯರಾಗಿರುತ್ತಾರೆ ಮತ್ತು ಅವರ (ದೂತರ) ಪತ್ನಿಯರು, ಅವರ ಪಾಲಿಗೆ ಮಾತೆಯರಾಗಿರುತ್ತಾರೆ. ಇನ್ನು, ಅಲ್ಲಾಹನ ಗ್ರಂಥದ ಪ್ರಕಾರ, ಇತರ ವಿಶ್ವಾಸಿಗಳು ಮತ್ತು ವಲಸಿಗರಿಗಿಂತ ರಕ್ತ ಸಂಬಂಧಿಗಳು, ಪರಸ್ಪರ ಹೆಚ್ಚು ಹಕ್ಕುದಾರರಾಗಿರುತ್ತಾರೆ. ನೀವು ನಿಮ್ಮ ಆಪ್ತ ಮಿತ್ರರಿಗೆ ಮಾಡುವ ಉಪಕಾರವು ಇದಕ್ಕೆ ಹೊರತಾಗಿದೆ. ಇದು ಗ್ರಂಥದಲ್ಲಿ ಬರೆದಿರುವ ನಿಯಮ.
7. (ದೂತರೇ,) ನಾವು ಇತರ ದೂತರಿಂದ, ಅವರ ಪ್ರತಿಜ್ಞೆಯನ್ನು ಪಡೆದೆವು. ಹಾಗೆಯೇ ನಿಮ್ಮಿಂದ, ನೂಹರಿಂದ, ಇಬ್ರಾಹೀಮರಿಂದ, ಮೂಸಾರಿಂದ ಮತ್ತು ಮರ್ಯಮರ ಪುತ್ರ ಈಸಾರಿಂದಲೂ ನಾವು ಪಕ್ವವಾದ ಪ್ರತಿಜ್ಞೆಯನ್ನು ಪಡೆದೆವು.
8. ಅವನು ಆ ಸತ್ಯವಂತರೊಡನೆ (ಪ್ರಸ್ತುತ ಪ್ರತಿಜ್ಞೆಯ ವಿಷಯದಲ್ಲಿ) ಅವರ ಸತ್ಯವಂತಿಕೆಯ ಕುರಿತು ವಿಚಾರಿಸುವನು. ಇನ್ನು, ಧಿಕ್ಕಾರಿಗಳಿಗಾಗಿ ಅವನು ಯಾತನಾಮಯ ಶಿಕ್ಷೆಯನ್ನು ಸಿದ್ಧಗೊಳಿಸಿರುವನು.
9. ವಿಶ್ವಾಸಿಗಳೇ, ಅಲ್ಲಾಹನು ನಿಮಗೆ ದಯಪಾಲಿಸಿರುವ ಅನುಗ್ರಹಗಳನ್ನು ಸ್ಮರಿಸಿರಿ. ಹಲವು ಪಡೆಗಳು ನಿಮ್ಮ ವಿರುದ್ಧ ಏರಿ ಬಂದಾಗ ನಾವು ಅವರ ಮೇಲೆ, ಬಿರುಗಾಳಿಯನ್ನು ಹಾಗೂ ನಿಮಗೆ ಕಾಣಿಸದಂತಹ ಪಡೆಗಳನ್ನು ಎರಗಿಸಿದೆವು. ಅಲ್ಲಾಹನಂತು ನೀವು ಮಾಡುತ್ತಿರುವ ಎಲ್ಲವನ್ನೂ ನೊಡುತ್ತಲೇ ಇರುತ್ತಾನೆ.
10. ಅವರು ನಿಮ್ಮ ಮೇಲಿಂದಲೂ ನಿಮ್ಮ ಕೆಳಗಿಂದಲೂ ನಿಮ್ಮ ವಿರುದ್ಧ ಏರಿಬಂದ, ಮತ್ತು (ನಿಮ್ಮ) ಕಣ್ಣುಗಳು ನಿಶ್ಚಲವಾಗಿ ಬಿಟ್ಟಿದ್ದ, ಹೃದಯಗಳು ಕೊರಳನ್ನು ತಲುಪಿದ್ದ ಮತ್ತು ನೀವು ಅಲ್ಲಾಹನ ಕುರಿತು ಏನೇನೋ ಆಲೋಚಿಸಿಕೊಂಡಿದ್ದ ಸಂದರ್ಭ (ನೆನಪಿರಲಿ).
11. ಈ ರೀತಿ ವಿಶ್ವಾಸಿಗಳನ್ನು ಪರೀಕ್ಷೆಗೆ ಗುರಿಪಡಿಸಲಾಯಿತು ಹಾಗೂ ಅವರನ್ನು ತೀವ್ರವಾಗಿ ಝರ್ಝರಿತಗೊಳಿಸಿ ಬಿಡಲಾಯಿತು.
12. ಆಗ ಕಪಟಿಗಳು ಮತ್ತು ರೋಗಗ್ರಸ್ತ ಮನಸ್ಸಿನವರು ‘‘ಅಲ್ಲಾಹನು ಮತ್ತು ಅವನ ದೂತರು ನಮಗೆ ನೀಡಿದ್ದ ಭರವಸೆ ಕೇವಲ ಮೋಸವಾಗಿತ್ತು’’ ಎನ್ನತೊಡಗಿದ್ದರು.
13. ಮತ್ತು ಅವರಲ್ಲಿನ ಒಂದು ಗುಂಪಿನವರು ‘‘ಮದೀನಾದವರೇ, ನಿಮಗಿನ್ನು ಯಾವ ಅವಕಾಶವೂ ಇಲ್ಲ, ನೀವು ಮರಳಿ ಹೋಗಿರಿ’’ ಎನ್ನುತ್ತಿದ್ದರು. ಹಾಗೆಯೇ ಅವರಲ್ಲಿನ ಇನ್ನೊಂದು ಪಂಗಡವು – ‘‘ನಮ್ಮ ಮನೆಗಳು ಅಭದ್ರವಾಗಿವೆ’’ ಎನ್ನುತ್ತಾ (ಯುದ್ಧರಂಗದಿಂದ ಮರಳಿಹೋಗಲು) ದೇವದೂತರ ಬಳಿ ಅನುಮತಿ ಕೇಳತೊಡಗಿತ್ತು. ನಿಜವಾಗಿ ಅವುಗಳು ಅಭದ್ರವಾಗಿರಲಿಲ್ಲ. ಅವರು ಪಲಾಯನ ಮಾಡಬಯಸಿದ್ದರು, ಅಷ್ಟೇ.
14. ಒಂದು ವೇಳೆ (ಶತ್ರು ಸೇನೆಯು) ಎಲ್ಲ ದಿಕ್ಕುಗಳಿಂದ ಅವರ ಮೇಲೆ ಆಕ್ರಮಣ ಮಾಡಿದ್ದರೆ ಹಾಗೂ (ಸನ್ನಿವೇಶವು) ಅವರನ್ನು ವಿದ್ರೋಹಿಗಳಾಗಲು ಆಗ್ರಹಿಸಿದ್ದರೆ, ಅವರು (ತಮ್ಮ ನಂಬಿಕೆಯನ್ನು) ಬಿಟ್ಟುಕೊಡುತ್ತಿದ್ದರು ಮತ್ತು ಅವರು ಹೆಚ್ಚೇನೂ ವಿಳಂಬಿಸದೆ ಅದನ್ನು (ವಿದ್ರೋಹವನ್ನು) ಮಾಡಿ ಬಿಡುತ್ತಿದ್ದರು.
15. ನಿಜವಾಗಿ ಅವರು ಈ ಹಿಂದೆ, ತಾವು ಪಲಾಯನ ಮಾಡುವುದಿಲ್ಲ ಎಂದು ಅಲ್ಲಾಹನೊಂದಿಗೆ ಕರಾರು ಮಾಡಿಕೊಂಡಿದ್ದರು. ಅಲ್ಲಾಹನೊಂದಿಗೆ ಮಾಡಿದ ಕರಾರಿನ ಕುರಿತು ಖಂಡಿತ (ಅವರನ್ನು) ಪ್ರಶ್ನಿಸಲಾಗುವುದು.
16. ಹೇಳಿರಿ; ನೀವು ಪಲಾಯನ ಮಾಡುತ್ತಿರುವುದು ಮರಣದಿಂದ ಅಥವಾ ಹತ್ಯೆಯಿಂದ ಎಂದಾದರೆ, ಆ ನಿಮ್ಮ ಪಲಾಯನದಿಂದ ನಿಮಗೆ ಯಾವ ಲಾಭವೂ ಆಗದು. ಹೆಚ್ಚೆಂದರೆ ತೀರಾ ಅಲ್ಪಕಾಲ ಮಾತ್ರ ನೀವು ಸುಖಿಸಬಲ್ಲಿರಿ.
17. (ದೂತರೇ,) ಹೇಳಿರಿ; ಒಂದು ವೇಳೆ ಅಲ್ಲಾಹನು ನಿಮಗೇನಾದರೂ ಹಾನಿ ಮಾಡಬಯಸಿದರೆ ಯಾರು ತಾನೇ ನಿಮ್ಮನ್ನು ಅವನಿಂದ ರಕ್ಷಿಸಬಲ್ಲರು? ಅಥವಾ ಅವನು ನಿಮ್ಮನ್ನು ಅನುಗ್ರಹಿಸಲು ಬಯಸಿದರೆ (ಅದನ್ನು ಯಾರು ತಾನೇ ತಡೆಯಬಲ್ಲರು)? ಅವರು ತಮಗಾಗಿ ಅಲ್ಲಾಹನ ಹೊರತು ಯಾವ ರಕ್ಷಕನನ್ನೂ ಯಾವ ಸಹಾಯಕನನ್ನೂ ಕಾಣಲಾರರು.
18. ನಿಮ್ಮ ಪೈಕಿ, ಜನರನ್ನು ಹೋರಾಟದಿಂದ ತಡೆಯುವವರು ಮತ್ತು ತಮ್ಮ ಸಹೋದರರೊಡನೆ, ನೀವು ನಮ್ಮ ಕಡೆಗೆ ಬನ್ನಿ ಎಂದು ಹೇಳುವವರನ್ನು ಅಲ್ಲಾಹನು ಚೆನ್ನಾಗಿ ಬಲ್ಲನು. ಅವರು ಹೋರಾಟದಲ್ಲಿ ಭಾಗವಹಿಸುವುದು ತೀರಾ ಅಪರೂಪ.
19. ನಿಮ್ಮ (ಜೊತೆ ಸೇರುವ) ವಿಷಯದಲ್ಲಿ ಅವರು ತುಂಬಾ ಜಿಪುಣತೆ ತೋರುತ್ತಾರೆ. ಅವರಿಗೆ ಏನಾದರೂ ಅಪಾಯ ಎದುರಾದಾಗ ಅವರು ನಿಮ್ಮೆಡೆಗೆ ನೋಡ ತೊಡಗುತ್ತಾರೆ. ಆಗ ಅವರ ಕಣ್ಣುಗಳು ಮರಣದ ಮೂರ್ಛೆಯು ಬಾಧಿಸಿರುವಂತೆ ಚಲಿಸುತ್ತಿರುತ್ತವೆ. ಅಪಾಯ ದೂರವಾದೊಡನೆ ಅವರು ತಮ್ಮ ಹರಿತವಾದ ನಾಲಿಗೆಗಳಿಂದ ನಿಮ್ಮನ್ನು ದೂಷಿಸಲಾರಂಭಿಸುತ್ತಾರೆ. ಸತ್ಕಾರ್ಯದ ವಿಷಯದಲ್ಲಿ ಅವರು ತೀರಾ ಜಿಪುಣರಾಗಿರುತ್ತಾರೆ. ಅವರು ವಿಶ್ವಾಸ ಉಳ್ಳವರಲ್ಲ. ಅಲ್ಲಾಹನು ಅವರ ಕರ್ಮಗಳನ್ನೆಲ್ಲಾ ವ್ಯರ್ಥಗೊಳಿಸಿರುವನು. ಅದು ಅಲ್ಲಾಹನ ಮಟ್ಟಿಗೆ ಸುಲಭದ ಕೆಲಸವಾಗಿದೆ.
20. ಶತ್ರು ಸೇನೆಗಳಿನ್ನೂ ಹೊರಟುಹೋಗಿಲ್ಲ ಎಂದು ಅವರು ಭಾವಿಸಿದ್ದಾರೆ. ಒಂದು ವೇಳೆ ಆ ಸೇನೆಗಳು ಧಾಳಿ ನಡೆಸಿದರೂ, ಅವರು, ತಾವು ಎಲ್ಲಾದರೂ ಹಳ್ಳಿಗಳಲ್ಲಿ ಅವಿತುಕೊಂಡು (ಅಲ್ಲಿಂದಲೇ) ನಿಮ್ಮ ಕುರಿತು ವಿಚಾರಿಸುತ್ತಾ ಇದ್ದಿದ್ದರೆ ಚೆನ್ನಾಗಿತ್ತು ಎಂದು ಅಪೇಕ್ಷಿಸುವರು. ಇನ್ನು ಅವರು ನಿಮ್ಮ ನಡುವೆಯೇ ಇದ್ದರೂ, ಅವರು ಹೋರಾಟದಲ್ಲಿ ಭಾಗವಹಿಸುವುದು ತೀರಾ ಅಪರೂಪ.
21. ಖಂಡಿತವಾಗಿಯೂ ಅಲ್ಲಾಹನ ದೂತರಲ್ಲಿ ನಿಮಗೆ ಅತ್ಯುತ್ತಮ ಆದರ್ಶವಿದೆ. ಅಲ್ಲಾಹನ ಕುರಿತು ಹಾಗೂ ಆ ಅಂತಿಮ ದಿನದ ಕುರಿತು ಶುಭ ನಿರೀಕ್ಷೆ ಉಳ್ಳವರಿಗೆ ಮತ್ತು ಅಲ್ಲಾಹನನ್ನು ಪದೇ ಪದೇ ಸ್ಮರಿಸುತ್ತಿರುವವರಿಗೆ (ಇದು ಅನ್ವಯಿಸುತ್ತದೆ).
22. ವಿಶ್ವಾಸಿಗಳು, ಶತ್ರು ಪಡೆಗಳನ್ನು ಕಂಡಾಗ, ‘‘ಇದುವೇ ಅಲ್ಲಾಹನು ಮತ್ತು ಅವನ ದೂತರು ನಮಗೆ ನೀಡಿದ್ದ ವಾಗ್ದಾನ. ಅಲ್ಲಾಹ್ ಮತ್ತವನ ದೂತರು ಸತ್ಯವನ್ನೇ ಹೇಳಿದ್ದರು’’ ಎನ್ನುತ್ತಾರೆ. ಅದರಿಂದ ಅವರ ವಿಶ್ವಾಸ ಮತ್ತು ಅರ್ಪಣಾಭಾವವು ಮತ್ತಷ್ಟು ಹೆಚ್ಚುತ್ತದೆ.
23. ವಿಶ್ವಾಸಿಗಳ ಪೈಕಿ, ಅಲ್ಲಾಹನ ಜೊತೆ ತಾವು ಮಾಡಿರುವ ಪ್ರತಿಜ್ಞೆ ಪ್ರಾಮಾಣಿಕವೆಂದು ಸಾಬೀತು ಪಡಿಸಿರುವ ಕೆಲವರಿದ್ದಾರೆ. ಅವರಲ್ಲಿ ಕೆಲವರು ತಮ್ಮ ಹರಕೆಯನ್ನು ಪೂರ್ತಿಗೊಳಿಸಿದ್ದಾರೆ ಮತ್ತು ಕೆಲವರು ಕಾಯುತ್ತಿದ್ದಾರೆ. ಅವರು (ತಮ್ಮ ಸಂಕಲ್ಪವನ್ನು) ಬದಲಿಸಿಲ್ಲ.
24. ಅಲ್ಲಾಹನು ಸತ್ಯನಿಷ್ಠರಿಗೆ ಅವರ ಸತ್ಯನಿಷ್ಠೆಯ ಪ್ರತಿಫಲವನ್ನು ನೀಡುವನು ಮತ್ತು ತಾನಿಚ್ಛಿಸಿದರೆ ಕಪಟಿಗಳನ್ನು ಶಿಕ್ಷಿಸುವನು ಅಥವಾ ಅವರ ಪಶ್ಚಾತ್ತಾಪವನ್ನು ಸ್ವೀಕರಿಸುವನು. ಖಂಡಿತವಾಗಿಯೂ ಅಲ್ಲಾಹನು ಕ್ಷಮಿಸುವವನು ಹಾಗೂ ಕರುಣಾಮಯಿ ಯಾಗಿದ್ದಾನೆ.
25. ಧಿಕ್ಕಾರಿಗಳು ಆಕ್ರೋಶಿತರಾಗಿದ್ದ ಸ್ಥಿತಿಯಲ್ಲೇ ಅಲ್ಲಾಹನು ಅವರನ್ನು ಮರಳಿಸಿಬಿಟ್ಟನು. ಅವರಿಗೆ ಯಾವ ಲಾಭವೂ ಸಿಗಲಿಲ್ಲ. ಯುದ್ಧದಲ್ಲಿ ವಿಶ್ವಾಸಿಗಳಿಗೆ ಅಲ್ಲಾಹನೇ ಸಾಕು. ಅಲ್ಲಾಹನು ತುಂಬಾ ಶಕ್ತಿಶಾಲಿ ಹಾಗೂ ಪ್ರಬಲನಾಗಿದ್ದಾನೆ.
26. ಗ್ರಂಥದವರ ಪೈಕಿ, ಅವರಿಗೆ (ಧಿಕ್ಕಾರಿಗಳಿಗೆ) ನೆರವಾದವರನ್ನು ಅವನು ಅವರ ಕೋಟೆಗಳಿಂದ ಕೆಳಗಿಳಿಸಿಬಿಟ್ಟಿರುವನು ಮತ್ತು ಅವರ ಮನಸ್ಸುಗಳಲ್ಲಿ ಭಯವನ್ನು ನೆಟ್ಟಿರುವನು. ಇದೀಗ ಅವರಲ್ಲಿ ಕೆಲವರನ್ನು ನೀವು ಕೊಂದಿರುವಿರಿ ಮತ್ತು ಕೆಲವರನ್ನು ಬಂಧಿಸಿರುವಿರಿ.
27. ಅವನು (ಅಲ್ಲಾಹನು) ನಿಮ್ಮನ್ನು ಅವರ ಭೂಮಿ, ಅವರ ಮನೆಗಳು, ಅವರ ಸಂಪತ್ತು ಹಾಗೂ ನೀವು ಈವರೆಗೂ ಕಾಲಿಟ್ಟಿಲ್ಲದ ನೆಲದ ಉತ್ತರಾಧಿಕಾರಿಗಳಾಗಿಸಿರುವನು. ಅಲ್ಲಾಹನಂತು ಎಲ್ಲವನ್ನೂ ಮಾಡಲು ಸಮರ್ಥನಾಗಿದ್ದಾನೆ.
28. ದೂತರೇ, ನಿಮ್ಮ ಪತ್ನಿಯರೊಡನೆ ಹೇಳಿರಿ; ನೀವು ಕೇವಲ ಈ ಲೋಕದ ಬದುಕನ್ನು ಮತ್ತು ಅದರ ವೈಭವವನ್ನು ಬಯಸುವುದಾದರೆ, ಬನ್ನಿ, ನಾನು ನಿಮಗೆ ಒಂದಿಷ್ಟು ಸಂಪತ್ತನ್ನು ಕೊಟ್ಟು ಉತ್ತಮ ರೀತಿಯಲ್ಲಿ ನಿಮ್ಮನ್ನು ಬಿಟ್ಟು ಬಿಡುತ್ತೇನೆ.
29. ಇನ್ನು, ನೀವು ಅಲ್ಲಾಹನನ್ನು, ಅವನ ದೂತನನ್ನು ಹಾಗೂ ಪರಲೋಕದ ನಿವಾಸವನ್ನು ಬಯಸುವುದಾದರೆ, ಖಂಡಿತವಾಗಿಯೂ ಅಲ್ಲಾಹನು ನಿಮ್ಮ ಪೈಕಿ ಸತ್ಕರ್ಮಿಗಳಿಗಾಗಿ ಮಹಾನ್ ಪ್ರತಿಫಲವನ್ನು ಸಿದ್ಧಗೊಳಿಸಿಟ್ಟಿರುವನು.
30. ದೂತರ ಪತ್ನಿಯರೇ, ನಿಮ್ಮ ಪೈಕಿ ಯಾರಾದರೂ ವ್ಯಕ್ತವಾದ ಅಶ್ಲೀಲ ಕೃತ್ಯವನ್ನು ಎಸಗಿದರೆ ಆಕೆಗೆ ದುಪ್ಪಟ್ಟು ಶಿಕ್ಷೆ ಸಿಗಲಿದೆ. ಅಲ್ಲಾಹನ ಪಾಲಿಗೆ ಅದು ಸುಲಭವಾಗಿರುತ್ತದೆ.
ಕಾಂಡ – 22
31. ಇನ್ನು, ನಿಮ್ಮ ಪೈಕಿ ಅಲ್ಲಾಹನಿಗೆ ಹಾಗೂ ಅವನ ದೂತರಿಗೆ ವಿಧೇಯರಾಗಿದ್ದು, ಸತ್ಕರ್ಮಗಳನ್ನು ಮಾಡುತ್ತಿರುವವರಿಗೆ ನಾವು ದುಪ್ಪಟ್ಟು ಪ್ರತಿಫಲವನ್ನು ನೀಡುವೆವು. ಮತ್ತು ನಾವು ಅಂಥವರಿಗಾಗಿ ಗೌರವಾರ್ಹವಾದ ಸಂಪನ್ನತೆಯನ್ನು ಸಜ್ಜುಗೊಳಿಸಿಟ್ಟಿರುವೆವು.
32. ದೂತರ ಪತ್ನಿಯರೇ, ನೀವು ಇತರ ಮಹಿಳೆಯರಂತಲ್ಲ. ನೀವು ನೀವಿನ್ನು, ಮನದಲ್ಲಿ ರೋಗವಿರುವವನು ದುರಾಶೆ ಪಡುವ ರೀತಿಯಲ್ಲಿ ಅತಿನಯವಾಗಿ ಮಾತನಾಡಬೇಡಿ. ನಿಯಮಾನುಸಾರ ಮಾತನಾಡಿರಿ.
33. ನೀವು ನಿಮ್ಮ ಮನೆಗಳಲ್ಲಿ ಸಂತೃಪ್ತರಾಗಿರಿ ಮತ್ತು ಹಿಂದಿನ, ಅಜ್ಞಾನ ಕಾಲದಂತಹ ಆಡಂಬರ ಮೆರೆಯುತ್ತಾ ತಿರುಗಬೇಡಿ. ನಮಾಝನ್ನು ಪಾಲಿಸಿರಿ, ಝಕಾತ್‌ಅನ್ನು ಪಾವತಿಸಿರಿ ಮತ್ತು ಅಲ್ಲಾಹನಿಗೆ ಹಾಗೂ ಅವನ ದೂತರಿಗೆ ವಿಧೇಯರಾಗಿರಿ. (ದೂತರ) ಮನೆಯವರೇ, ಅಲ್ಲಾಹನು ನಿಮ್ಮ ಮೇಲಿನ ಕಳಂಕವನ್ನು ನಿವಾರಿಸಿ ನಿಮ್ಮನ್ನು ಸಂಪೂರ್ಣ ನಿರ್ಮಲಗೊಳಿಸ ಬಯಸುತ್ತಾನೆ.
34. ನಿಮ್ಮ ಮನೆಗಳಲ್ಲಿ ಓದಲಾಗುವ ಅಲ್ಲಾಹನ ವಚನಗಳನ್ನೂ ಯುಕ್ತಿಪೂರ್ಣ ನುಡಿಗಳನ್ನೂ ನೆನಪಿಡಿರಿ. ಖಂಡಿತವಾಗಿಯೂ ಅಲ್ಲಾಹನು ಅತ್ಯಂತ ಸೂಕ್ಷ್ಮ ದೃಷ್ಟಿಯುಳ್ಳವನು ಹಾಗೂ ಎಲ್ಲ ವಿಷಯಗಳ ಅರಿವುಳ್ಳವನಾಗಿದ್ದಾನೆ.
35. ಖಂಡಿತವಾಗಿಯೂ (ಅಲ್ಲಾಹನಿಗೆ) ಶರಣಾದ ಪುರುಷರು ಮತ್ತು ಶರಣಾದ ಸ್ತ್ರೀಯರು, ವಿಶ್ವಾಸಿ ಪುರುಷರು ಮತ್ತು ವಿಶ್ವಾಸಿ ಸ್ತ್ರೀಯರು, ವಿಧೇಯ ಪುರುಷರು ಮತ್ತು ವಿಧೇಯ ಸ್ತ್ರೀಯರು, ಸತ್ಯವಂತ ಪುರುಷರು ಮತ್ತು ಸತ್ಯವಂತ ಸ್ತ್ರೀಯರು, ಸಹನಶೀಲ ಪುರುಷರು ಮತ್ತು ಸಹನಶೀಲ ಸ್ತ್ರೀಯರು, ಭಯ ಭಕ್ತಿ ಉಳ್ಳ ಪುರುಷರು ಮತ್ತು ಭಯ ಭಕ್ತಿ ಉಳ್ಳ ಸ್ತ್ರೀಯರು, ದಾನಶೀಲ ಪುರುಷರು ಮತ್ತು ದಾನಶೀಲ ಸ್ತ್ರೀಯರು, ಉಪವಾಸಿ ಪುರುಷರು ಮತ್ತು ಉಪವಾಸಿ ಸ್ತ್ರೀಯರು, ತಮ್ಮ ಮಾನವನ್ನು ಸಂರಕ್ಷಿಸುವ ಪುರುಷರು ಮತ್ತು ಅಂತಹ ಸ್ತ್ರೀಯರು ಮತ್ತು ಪದೇ ಪದೇ ಅಲ್ಲಾಹನನ್ನು ಸ್ಮರಿಸುತ್ತಿರುವ ಪುರುಷರು ಮತ್ತು ಅಂತಹ ಸ್ತ್ರೀಯರು – ಅವರಿಗಾಗಿ ಅಲ್ಲಾಹನು ಕ್ಷಮೆಯನ್ನು ಹಾಗೂ ಭವ್ಯ ಪ್ರತಿಫಲವನ್ನು ಸಿದ್ಧ ಪಡಿಸಿರುವನು.
36. ಅಲ್ಲಾಹನು ಮತ್ತು ಅವನ ದೂತರು ಒಂದು ವಿಷಯದಲ್ಲಿ ತೀರ್ಪು ನೀಡಿ ಬಿಟ್ಟ ಬಳಿಕ ವಿಶ್ವಾಸಿ ಪುರುಷರಿಗಾಗಲಿ ವಿಶ್ವಾಸಿ ಸ್ತ್ರೀಯರಿಗಾಗಲಿ ಆ ತಮ್ಮ ವಿಷಯದಲ್ಲಿ ಬೇರೆ ಯಾವುದೇ ಆಯ್ಕೆ ಉಳಿಯುವುದಿಲ್ಲ. ಅಲ್ಲಾಹ್ ಮತ್ತು ಅವನ ದೂತರ ಆದೇಶವನ್ನು ಮೀರಿ ನಡೆದವನು ಸ್ಪಷ್ಟವಾಗಿ ದಾರಿಗೆಟ್ಟವನಾಗಿದ್ದಾನೆ.
37. (ದೂತರೇ,) ಅಲ್ಲಾಹನು ಬಹಳಷ್ಟು ಅನುಗ್ರಹಿಸಿರುವ ಹಾಗೂ ನಿಮ್ಮ ಔದಾರ್ಯಕ್ಕೂ ಪಾತ್ರನಾಗಿರುವ ಒಬ್ಬ ವ್ಯಕ್ತಿಯೊಡನೆ (ಝೈದ್‌ರೊಡನೆ) ನೀವು, ‘‘ನಿನ್ನ ಪತ್ನಿಯನ್ನು ನಿನ್ನ ಬಳಿಯೇ ತಡೆದಿಟ್ಟುಕೋ ಮತ್ತು ಅಲ್ಲಾಹನಿಗೆ ಅಂಜುತ್ತಿರು’’ ಎಂದು ಹೇಳುತ್ತಿದ್ದಾಗ ನೀವು ನಿಮ್ಮ ಮನಸ್ಸಿನಲ್ಲಿದ್ದ ಒಂದು ವಿಷಯವನ್ನು ಅಡಗಿಸಿಟ್ಟಿದ್ದಿರಿ. ಅಲ್ಲಾಹನು ಅದನ್ನು ಬಹಿರಂಗಗೊಳಿಸ ಬಯಸಿದ್ದನು. ನೀವು ಜನರಿಗೆ ಅಂಜಿದಿರಿ. ನಿಜವಾಗಿ ಅಲ್ಲಾಹನು ಅಂಜಿಕೆಗೆ ಹೆಚ್ಚು ಅರ್ಹನು. ಕೊನೆಗೆ ಝೈದ್ ಆಕೆಯ ಜೊತೆ ತನ್ನ ಅಗತ್ಯವನ್ನು ಪೂರೈಸಿ ಕೊಂಡಾಗ (ಆಕೆಯನ್ನು ವಿಚ್ಛೇಧಿಸಿದಾಗ), ನಾವು ನಿಮ್ಮ ಜೊತೆ ಆಕೆಯ ವಿವಾಹ ಮಾಡಿಸಿದೆವು. ತಮ್ಮ ದತ್ತು ಪುತ್ರರು ತಮ್ಮ ಅಗತ್ಯವನ್ನು ಪೂರೈಸಿಕೊಂಡ (ವಿಚ್ಛೇದಿಸಿದ) ಪತ್ನಿಯರ ವಿಷಯದಲ್ಲಿ ವಿಶ್ವಾಸಿಗಳಿಗೆ ಯಾವುದೇ ಅಡೆ ತಡೆ ಇರಬಾರದು ಎಂಬುದೇ ಇದರ ಉದ್ದೇಶವಾಗಿತ್ತು. ಅಲ್ಲಾಹನಂತು ತನ್ನ ಆದೇಶವನ್ನು ಅನುಷ್ಠಾನಿಸಿಯೇ ಬಿಡುತ್ತಾನೆ.
38. ತನಗೆ ಅಲ್ಲಾಹನು ಕಡ್ಡಾಯಗೊಳಿಸಿರುವ ವಿಷಯದಲ್ಲಿ ದೂತರಿಗೆ ಯಾವುದೇ ಹಿಂಜರಿಕೆ ಇರಬಾರದು. ಗತಕಾಲಗಳ ಜನರ ವಿಷಯದಲ್ಲಿ ಅಲ್ಲಾಹನ ನಿಯಮ ಇದೇ ಆಗಿತ್ತು. ಇನ್ನು ಅಲ್ಲಾಹನ ಆದೇಶಗಳು ಅತ್ಯಂತ ಪರಿಪಕ್ವ ಸ್ವರೂಪದಲ್ಲಿ ರೂಪಿತವಾಗಿರುತ್ತವೆ.
39. ಅಲ್ಲಾಹನ ಸಂದೇಶಗಳನ್ನು ತಲುಪಿಸುವವರು ಅವನನ್ನು ಅಂಜುತ್ತಿರುತ್ತಾರೆ ಮತ್ತು ಅವರು ಅಲ್ಲಾಹನ ಹೊರತು ಬೇರೆ ಯಾರನ್ನೂ ಅಂಜುವುದಿಲ್ಲ. ಇನ್ನು, ವಿಚಾರಣೆಗೆ ಅಲ್ಲಾಹನೇ ಸಾಕು.
40. ಮುಹಮ್ಮದ್(ಸ) ನಿಮ್ಮ ಪೈಕಿ ಯಾವುದೇ ಪುರುಷನ ತಂದೆಯಲ್ಲ. ಅವರು ಅಲ್ಲಾಹನ ದೂತ ಮತ್ತು ಕೊನೆಯ ಪ್ರವಾದಿಯಾಗಿರುವರು. ಅಲ್ಲಾಹನು ಎಲ್ಲ ವಿಷಯಗಳ ಜ್ಞಾನ ಉಳ್ಳವನಾಗಿದ್ದಾನೆ.
41. ವಿಶ್ವಾಸಿಗಳೇ, ಅಲ್ಲಾಹನನ್ನು ಪದೇ ಪದೇ ಸ್ಮರಿಸುತ್ತಲಿರಿ.
42. ಮತ್ತು ಮುಂಜಾವಿನಲ್ಲೂ ಸಂಜೆ ಹೊತ್ತಿನಲ್ಲೂ ಅವನ ಪಾವಿತ್ರವನ್ನು ಜಪಿಸಿರಿ.
43. ನಿಮ್ಮನ್ನು ಕತ್ತಲೆಯಿಂದ ಹೊರತೆಗೆದು ಬೆಳಕಿನೆಡೆಗೆ ನಡೆಸುವುದಕ್ಕಾಗಿ, ಅವನು ಮತ್ತು ಅವನ ಮಲಕ್‌ಗಳು ನಿಮಗೆ ಶುಭ ಹಾರೈಸುತ್ತಾ ಇರುತ್ತಾರೆ. ಅವನು ವಿಶ್ವಾಸಿಗಳ ಪಾಲಿಗೆ ಸದಾ ಕರುಣಾಮಯಿಯಾಗಿದ್ದಾನೆ.
44. ಅವರು ಅವನನ್ನು ಕಾಣುವ ದಿನ ಅವರನ್ನು ‘ಸಲಾಮ್’(ಶಾಂತಿ) ಎಂದು ಹರಸಲಾಗುವುದು ಮತ್ತು ಅವನು ಅವರಿಗಾಗಿ ಬಹಳ ಶ್ರೇಷ್ಠ ಪ್ರತಿಫಲವನ್ನು ಸಿದ್ಧಗೊಳಿಸಿಟ್ಟಿರುವನು.
45. ದೂತರೇ, ನಾವು ನಿಮ್ಮನ್ನು ಸಾಕ್ಷಿಯಾಗಿ, ಶುಭವಾರ್ತೆ ನೀಡುವವರಾಗಿ ಮತ್ತು ಎಚ್ಚರಿಸುವವರಾಗಿ ಕಳಿಸಿರುವೆವು.
46. (ಹಾಗೆಯೇ,) ಅಲ್ಲಾಹನ ಆದೇಶ ಪ್ರಕಾರ ಜನರನ್ನು ಅವನೆಡೆಗೆ ಕರೆಯುವವರಾಗಿ ಮತ್ತು ಉಜ್ವಲ ಸೂರ್ಯನಾಗಿ (ಕಳಿಸಿರುವೆವು).
47. ವಿಶ್ವಾಸಿಗಳಿಗಾಗಿ ಅಲ್ಲಾಹನ ಕಡೆಯಿಂದ ಭಾರೀ ಉದಾರ ಪ್ರತಿಫಲ ಇದೆಯೆಂದು ನೀವು ಅವರಿಗೆ ಶುಭವಾರ್ತೆ ನೀಡಿರಿ.
48. ಮತ್ತು ನೀವು ಧಿಕ್ಕಾರಿಗಳ ಹಾಗೂ ಕಪಟಿಗಳ ಆದೇಶ ಪಾಲಿಸಬೇಡಿ ಮತ್ತು ಅವರ ಕಿರುಕುಳಗಳ ಕುರಿತು ಚಿಂತಿಸಬೇಡಿ. ನೀವು ಅಲ್ಲಾಹನಲ್ಲಿ ಭರವಸೆ ಇಡಿರಿ. ಕಾರ್ಯ ಸಾಧಕನಾಗಿ ಅಲ್ಲಾಹನೇ ಸಾಕು.
49. ವಿಶ್ವಾಸಿಗಳೇ, ನೀವು ವಿಶ್ವಾಸಿ ಸ್ತ್ರೀಯರನ್ನು ವಿವಾಹವಾಗಿ, ಅವರನ್ನು ಸ್ಪರ್ಶಿಸುವ ಮುನ್ನ ಅವರನ್ನು ವಿಚ್ಛೇದಿಸಿದರೆ, ಅವರು ‘ಇದ್ದತ್’(ಅವಧಿ) ಪೂರ್ತಿಗೊಳಿಸಬೇಕೆಂದು ಆಗ್ರಹಿಸುವ ಅಧಿಕಾರ ನಿಮಗಿಲ್ಲ. ಅವರಿಗೆ ಒಂದಷ್ಟು ಸಂಪತ್ತನ್ನು ಕೊಟ್ಟು ಅತ್ಯುತ್ತಮ ರೀತಿಯಲ್ಲಿ ಅವರನ್ನು ಕಳಿಸಿಕೊಡಿರಿ.
50. ದೂತರೇ, ನೀವು ಯಾರಿಗೆ ಅವರ ಮೆಹ್ರ್ ಅನ್ನು ಪಾವತಿಸಿರುವಿರೋ ಆ ನಿಮ್ಮ ಪತ್ನಿಯರು ಮತ್ತು ಅಲ್ಲಾಹನು ಯುದ್ಧ ಪ್ರಾಪ್ತಿಯಾಗಿ ನಿಮಗೊಪ್ಪಿಸಿರುವ ದಾಸಿಯರು, ಮತ್ತು ನಿಮ್ಮ ತಂದೆಯ ಸಹೋದರರ ಪುತ್ರಿಯರು ಮತ್ತು ನಿಮ್ಮ ತಂದೆಯ ಸಹೋದರಿಯರ ಪುತ್ರಿಯರು, ಮತ್ತು ನಿಮ್ಮ ತಾಯಿಯ ಸಹೋದರರ ಪುತ್ರಿಯರು ಮತ್ತು ನಿಮ್ಮ ತಾಯಿಯ ಸಹೋದರಿಯರ ಪುತ್ರಿಯರು, ನಿಮ್ಮ ಜೊತೆಗೆ ವಲಸೆ ಹೋದವರು, ತಮ್ಮನ್ನು ದೇವದೂತರಿಗೆಂದೇ ಮುಡಿಪಾಗಿಡುವ ಹರಕೆ ಹೊತ್ತವರು – ದೇವದೂತರು ಅವರನ್ನು ವಿವಾಹವಾಗ ಬಯಸುವುದಾದರೆ – ಅವರನ್ನು ನಾವು ನಿಮ್ಮ ಪಾಲಿಗೆ ಸಮ್ಮತಗೊಳಿಸಿರುವೆವು. ಇದು ಇತರ ವಿಶ್ವಾಸಿಗಳಿಗೆ ಅನ್ವಯವಾಗದ, ನಿಮಗೆ ಮಾತ್ರ ಇರುವ ನಿಯಮ. ಅವರ ಪತ್ನಿಯರು ಹಾಗೂ ದಾಸಿಯರ ವಿಷಯದಲ್ಲಿ ನಾವು ಅವರಿಗೆ ವಿಧಿಸಿರುವ ನಿಯಮಗಳ ಕುರಿತು ನಾವು ಬಲ್ಲೆವು. ನಿಮ್ಮ ಪಾಲಿನ ಅಡೆ ತಡೆಗಳ ನಿವಾರಣೆಗಾಗಿ (ಇದನ್ನು ತಿಳಿಸಲಾಗಿದೆ). ಅಲ್ಲಾಹನು ಕ್ಷಮಿಸುವವನು ಹಾಗೂ ಕರುಣಾಳುವಾಗಿದ್ದಾನೆ.
51. (ದೂತರೇ,) ನೀವು ಅವರ (ನಿಮ್ಮ ಪತ್ನಿಯರ) ಪೈಕಿ ನೀವಿಚ್ಛಿಸುವವರನ್ನು ದೂರವಿಡಬಹುದು ಮತ್ತು ನೀವಿಚ್ಛಿಸುವವರನ್ನು ನಿಮ್ಮ ಜೊತೆಗೆ ಉಳಿಸಿಕೊಳ್ಳಬಹುದು. ಇನ್ನು, ಅವರ ಪೈಕಿ, ನೀವು ದೂರಗೊಳಿಸಿದವರನ್ನೇ ಮತ್ತೆ ನೀವು ನಿಮ್ಮ ಬಳಿಗೆ ಕರೆಸಿಕೊಳ್ಳುವುದಕ್ಕೆ ತಡೆಯೇನೂ ಇಲ್ಲ. ಅವರ (ದೂತರ ಪತ್ನಿಯರ) ಕಣ್ಣುಗಳು ತಂಪಾಗಿರುವುದಕ್ಕೆ ಹಾಗೂ ಅವರು ದುಃಖಿತರಾಗದೆ ಇರುವುದಕ್ಕೆ ಮತ್ತು ಅವರು ನೀವು ಕೊಟ್ಟದ್ದರಲ್ಲೇ ಸಂತೃಪ್ತರಾಗಿರುವುದಕ್ಕೆ ಇದು ಸಮರ್ಪಕ ಧೋರಣೆಯಾಗಿದೆ. ನಿಮ್ಮ ಮನಸ್ಸುಗಳಲ್ಲಿ ಇರುವುದನ್ನೆಲ್ಲಾ ಅಲ್ಲಾಹನು ಚೆನ್ನಾಗಿ ಬಲ್ಲನು. ಅಲ್ಲಾಹನು ಜ್ಞಾನ ಉಳ್ಳವನೂ ಯುಕ್ತಿವಂತನೂ ಆಗಿದ್ದಾನೆ.
52. (ದೂತರೇ,) ಇದರ ಬಳಿಕ ಬೇರೆ ಮಹಿಳೆಯರು ನಿಮ್ಮ ಪಾಲಿಗೆ ಸಮ್ಮತರಲ್ಲ ಮತ್ತು ನಿಮಗೆ ಯಾರದಾದರೂ ಸೌಂದರ್ಯವು ಎಷ್ಟೇ ಆಕರ್ಷಕವೆನಿಸಿದರೂ ನೀವು ಇವರ (ಹಾಲಿ ಪತ್ನಿಯರ) ಸ್ಥಾನದಲ್ಲಿ ಇತರರನ್ನು ತರುವಂತಿಲ್ಲ – ನಿಮ್ಮ ದಾಸಿಯರ ಹೊರತು. ಅಲ್ಲಾಹನಂತು ಎಲ್ಲ ವಿಷಯಗಳ ಮೇಲ್ವಿಚಾರಕನಾಗಿದ್ದಾನೆ.
53. ವಿಶ್ವಾಸಿಗಳೇ, ಭೋಜನಕ್ಕಾಗಿ ಆಮಂತ್ರಣ ಸಿಗದೆ ನೀವು ದೇವದೂತರ ಮನೆಗಳೊಳಗೆ ಪ್ರವೇಶಿಸಬೇಡಿ ಮತ್ತು ಭೋಜನ ಸಿದ್ಧವಾಗುವುದಕ್ಕಾಗಿ ಕಾಯುತ್ತಾ ಕೂತಿರಬೇಡಿ. ನಿಮ್ಮನ್ನು ಕರೆಯಲಾದಾಗ ನೀವು ಪ್ರವೇಶಿಸಿರಿ ಮತ್ತು ಭೋಜನ ಮುಗಿದೊಡನೆ, ಹೊರಟು ಹೋಗಿರಿ ಮತ್ತು ಸುಮ್ಮನೆ ಮಾತುಕತೆಯಲ್ಲಿ ತೊಡಗಿರಬೇಡಿ. ನಿಮ್ಮ ಈ ತರದ ವರ್ತನೆಯಿಂದ ದೇವದೂತರಿಗೆ ಕಿರುಕುಳವಾಗುತ್ತದೆ. ಆದರೆ ಅವರು ನಿಮ್ಮ ಮುಂದೆ ಸಂಕೋಚ ಪಡುತ್ತಾರೆ. ಅಲ್ಲಾಹನು ಸತ್ಯವನ್ನು ಮುಂದಿಡುವುದಕ್ಕೆ ಹಿಂಜರಿಯುವುದಿಲ್ಲ. ನೀವು ಅವರೊಡನೆ (ದೂತರ ಪತ್ನಿಯರೊಡನೆ) ಯಾವುದೇ ವಸ್ತುವನ್ನು ಕೇಳುವಾಗ, ತೆರೆಯ ಮರೆಯಿಂದಲೇ ಕೇಳಿರಿ. ಇದು ನಿಮ್ಮ ಮನಸ್ಸುಗಳಿಗೂ ಅವರ ಮನಸ್ಸುಗಳಿಗೂ ಒಳ್ಳೆಯದು. ನೀವು ದೂತರಿಗೆ ಕಿರುಕುಳ ನೀಡಬಾರದು ಮತ್ತು ಅವರ ನಿಧನಾನಂತರ ಅವರ ಪತ್ನಿಯರನ್ನು ನೀವೆಂದೂ ವಿವಾಹವಾಗಬಾರದು. ಖಂಡಿತವಾಗಿಯೂ ಇವೆಲ್ಲಾ ಅಲ್ಲಾಹನ ದೃಷ್ಟಿಯಲ್ಲಿ ದೊಡ್ಡ ವಿಷಯಗಳಾಗಿವೆ.
54. ನೀವು ಯಾವುದಾದರೂ ವಿಷಯವನ್ನು ಬಹಿರಂಗಗೊಳಿಸಿದರೂ ಗುಪ್ತವಾಗಿಟ್ಟರೂ ಅಲ್ಲಾಹನಂತು ಖಂಡಿತ ಎಲ್ಲ ವಿಷಯಗಳನ್ನು ಬಲ್ಲವನಾಗಿದ್ದಾನೆ.
55. ಅವರು (ಮಹಿಳೆಯರು) ತಮ್ಮ ತಂದೆಯರು, ತಮ್ಮ ಪುತ್ರರು, ತಮ್ಮ ಸಹೋದರರು, ತಮ್ಮ ಸಹೋದರರ ಪುತ್ರರು, ತಮ್ಮ ಸಹೋದರಿಯರ ಪುತ್ರರು, ತಮ್ಮ ಬಳಗದ ಸ್ತ್ರೀಯರು ಮತ್ತು ತಮ್ಮ ದಾಸಿಯರ ಮುಂದೆ (ಹಿಜಾಬ್‌ನ ನಿಯಮಗಳನ್ನು) ಪಾಲಿಸದಿದ್ದರೆ ಅವರ ಮೇಲೆ ಪಾಪವೇನಿಲ್ಲ. ನೀವು (ಮಹಿಳೆಯರು) ಅಲ್ಲಾಹನಿಗೆ ಅಂಜುತ್ತಲಿರಿ. ಅಲ್ಲಾಹನು ಎಲ್ಲ ವಿಷಯಗಳಿಗೂ ಸಾಕ್ಷಿಯಾಗಿರುತ್ತಾನೆ.
56. ಖಂಡಿತವಾಗಿಯೂ ಅಲ್ಲಾಹ್ ಮತ್ತು ಅವನ ಮಲಕ್‌ಗಳು, ಪ್ರವಾದಿವರ್ಯರಿಗೆ ಶುಭ ಹಾರೈಸುತ್ತಿರುತ್ತಾರೆ. ವಿಶ್ವಾಸಿಗಳೇ, ನೀವೂ ಅವರಿಗೆ ಶುಭ ಹಾರೈಸಿರಿ ಹಾಗೂ ಶಾಂತಿಯನ್ನು ಕೋರಿರಿ.
57. ಅಲ್ಲಾಹ್ ಮತ್ತು ಅವನ ದೂತರಿಗೆ ಕಿರುಕುಳ ನೀಡಲು ಯತ್ನಿಸುವವರನ್ನು ಅಲ್ಲಾಹನು ಈ ಲೋಕದಲ್ಲಿ ಖಂಡಿತ ಶಪಿಸುವನು ಮತ್ತು ಪರಲೋಕದಲ್ಲಿ ಅವರಿಗಾಗಿ ಅಪಮಾನಾತ್ಮಕ ಶಿಕ್ಷೆಯನ್ನು ಸಿದ್ಧಗೊಳಿಸಿಟ್ಟಿರುವನು.
58. ಸತ್ಯವಿಶ್ವಾಸಿ ಪುರುಷರು ಹಾಗೂ ಸ್ತ್ರೀಯರು ಏನನ್ನೂ (ಯಾವ ದುಷ್ಕೃತ್ಯವನ್ನೂ) ಮಾಡಿಲ್ಲದಿರುವಾಗ, ಅವರಿಗೆ ಕಿರುಕುಳ ನೀಡುವವರು ಭಾರೀ ಅಪರಾಧ ಹಾಗೂ ಸ್ಪಷ್ಟ ಪಾಪದ ಹೊರೆ ಹೊರುತ್ತಿದ್ದಾರೆ.
59. ದೂತರೇ, ನಿಮ್ಮ ಪತ್ನಿಯರು, ನಿಮ್ಮ ಪುತ್ರಿಯರು ಮತ್ತು ವಿಶ್ವಾಸಿ ಸ್ತ್ರೀಯರೊಡನೆ, ತಮ್ಮ ಶಾಲುಗಳ ಭಾಗವನ್ನು ತಮ್ಮ ಮೇಲೆ ಹೊದ್ದುಕೊಳ್ಳಲು ಹೇಳಿರಿ. ಅವರನ್ನು ಗುರುತಿಸುವುದಕ್ಕೆ ಮತ್ತು ಯಾರೂ ಅವರನ್ನು ಪೀಡಿಸದೆ ಇರುವುದಕ್ಕೆ ಇದು ಹೆಚ್ಚು ಸಮರ್ಪಕವಾಗಿದೆ. ಅಲ್ಲಾಹನು ಕ್ಷಮಿಸುವವನೂ ಕರುಣಾಮಯಿಯೂ ಆಗಿದ್ದಾನೆ.
60. ಕಪಟಿಗಳು, ತಮ್ಮ ಮನಸ್ಸುಗಳಲ್ಲಿ ರೋಗವಿರುವವರು ಮತ್ತು ಮದೀನಾದಲ್ಲಿ ಸುಳ್ಳು ವದಂತಿಗಳನ್ನು ಹಬ್ಬುವವರು (ಈ ಕೃತ್ಯಗಳಿಂದ) ದೂರ ಉಳಿಯದಿದ್ದರೆ, ಖಂಡಿತ ನಾವು ನಿಮ್ಮನ್ನು ಅವರ ಮೇಲೆ ಹೇರುವೆವು ಮತ್ತು ಅವರು ಇಲ್ಲಿ (ಮದೀನಾದಲ್ಲಿ) ನಿಮ್ಮ ಪಕ್ಕದಲ್ಲಿ ಬಹುಕಾಲ ಉಳಿಯಲಾರರು.
61. ಅವರು ಶಾಪಗ್ರಸ್ತರಾಗಿರುವರು. ಅವರು ಸಿಕ್ಕಿದಲ್ಲೆಲ್ಲಾ ಬಂಧಿಸಲ್ಪಡುವರು ಹಾಗೂ ಬಹಳ ಕ್ರೂರವಾಗಿ ಕೊಲ್ಲಲ್ಪಡುವರು.
62. ಹಿಂದಿನವರ ವಿಷಯದಲ್ಲೂ ಇದುವೇ ಅಲ್ಲಾಹನ ನಿಯಮವಾಗಿತ್ತು. ನೀವು ಅಲ್ಲಾಹನ ನಿಯಮದಲ್ಲಿ ಯಾವುದೇ ಬದಲಾವಣೆಯನ್ನು ಕಾಣಲಾರಿರಿ.
63. (ದೂತರೇ,) ಜನರು ನಿಮ್ಮೊಡನೆ (ಲೋಕಾಂತ್ಯದ) ಆ ಕ್ಷಣದ ಕುರಿತು ವಿಚಾರಿಸುತ್ತಾರೆ. ಹೇಳಿರಿ; ಅದರ ಜ್ಞಾನವಿರುವುದು ಅಲ್ಲಾಹನಿಗೆ ಮಾತ್ರ. ನಿಮಗೇನು ಗೊತ್ತು? ಆ ಕ್ಷಣವು ತೀರಾ ಹತ್ತಿರವೇ ಇರಬಹುದು.
64. ಅಲ್ಲಾಹನು ಧಿಕ್ಕಾರಿಗಳನ್ನು ಶಪಿಸಿರುವನು ಮತ್ತು ಅವರಿಗಾಗಿ ಭುಗಿಲೇಳುವ ಬೆಂಕಿಯನ್ನು ಸಜ್ಜುಗೊಳಿಸಿಟ್ಟಿರುವನು.
65. ಅವರು ಅದರಲ್ಲಿ ಸದಾಕಾಲ ಇರುವರು. ಅವರಿಗೆ ಪೋಷಕನಾಗಲಿ, ಸಹಾಯಕನಾಗಲಿ ಸಿಗಲಾರನು.
66. ಅವರ (ಧಿಕ್ಕಾರಿಗಳ) ಮುಖಗಳನ್ನು ನರಕದ ಬೆಂಕಿಯಲ್ಲಿ ತಿರುಚಿ ಮಗುಚಿ, ಸುಡಲಾಗುವ ಆ ದಿನ ಅವರು, ‘‘ಅಯ್ಯೋ, ನಾವು ಅಲ್ಲಾಹನ ಹಾಗೂ ಅವನ ದೂತರ ಆಜ್ಞೆಗಳನ್ನು ಪಾಲಿಸಿದ್ದರೆ ಎಷ್ಟು ಚೆನ್ನಾಗಿತ್ತು’’ ಎನ್ನುವರು.
67. ಮತ್ತು ಅವರು ಹೇಳುವರು; ‘‘ನಮ್ಮೊಡೆಯಾ, ನಾವು ನಮ್ಮ ನಾಯಕರು ಮತ್ತು ನಮ್ಮ ದೊಡ್ಡವರ ಆಜ್ಞೆಗಳನ್ನು ಪಾಲಿಸಿದೆವು ಮತ್ತು ಅವರು ನಮ್ಮನ್ನು ದಾರಿಗೆಡಿಸಿ ಬಿಟ್ಟರು’’.
68. ‘‘ನಮ್ಮೊಡೆಯಾ, ನೀನು ಅವರಿಗೆ ದುಪ್ಪಟ್ಟು ಶಿಕ್ಷೆಯನ್ನು ನೀಡು ಮತ್ತು ಅವರನ್ನು ಮಹಾಶಾಪಕ್ಕೆ ಗುರಿಪಡಿಸು’’.
69. ವಿಶ್ವಾಸಿಗಳೇ, ಮೂಸಾರನ್ನು ಪೀಡಿಸಿದವರಂತೆ ನೀವಾಗಬೇಡಿ. ಅವರ ಆರೋಪಗಳಿಂದ ಅಲ್ಲಾಹನು, ಅವರನ್ನು (ಮೂಸಾರನ್ನು) ಮುಕ್ತಗೊಳಿಸಿದನು. ಅಲ್ಲಾಹನ ದೃಷ್ಟಿಯಲ್ಲಿ ಅವರು (ಮೂಸಾ) ಬಹಳ ಗೌರವಾನ್ವಿತರಾಗಿದ್ದರು.
70. ವಿಶ್ವಾಸಿಗಳೇ, ಅಲ್ಲಾಹನಿಗೆ ಅಂಜಿರಿ ಮತ್ತು ಸದಾ ನೇರವಾದ ಮಾತನ್ನೇ ಆಡಿರಿ.
71. ಅಲ್ಲಾಹನು ನಿಮ್ಮ ಕರ್ಮಗಳನ್ನು ಸುಧಾರಿಸುವನು ಮತ್ತು ನಿಮ್ಮ ಪಾಪಗಳನ್ನು ಕ್ಷಮಿಸುವನು. ಅಲ್ಲಾಹನ ಹಾಗೂ ಅವನ ದೂತರ ಆಜ್ಞೆಗಳನ್ನು ಪಾಲಿಸಿದವನು ನಿಜಕ್ಕೂ ಮಹಾ ವಿಜಯವನ್ನು ಸಾಧಿಸಿದನು.
72. ನಾವು ಈ ಹೊಣೆಯನ್ನು ಆಕಾಶಗಳ, ಭೂಮಿಯ ಹಾಗೂ ಪರ್ವತಗಳ ಮುಂದಿಟ್ಟೆವು. ಅವುಗಳು ಈ ಹೊಣೆ ಹೊರುವುದಕ್ಕೆ ಹಿಂಜರಿದವು ಮತ್ತು ಇದಕ್ಕೆ ಅಂಜಿದವು. ಕೊನೆಗೆ ಮನುಷ್ಯನು ಈ ಹೊಣೆಯನ್ನು ಹೊತ್ತನು. ನಿಜಕ್ಕೂ ಅವನು ಅಕ್ರಮಿ ಹಾಗೂ ಅಜ್ಞಾನಿಯಾಗಿದ್ದಾನೆ.
73. ಅಲ್ಲಾಹನು ಕಪಟ ಪುರುಷರು ಹಾಗೂ ಸ್ತ್ರೀಯರನ್ನು ಮತ್ತು ಬಹುದೇವಾರಾಧಕ ಪುರುಷರು ಹಾಗೂ ಸ್ತ್ರೀಯರನ್ನು ಶಿಕ್ಷಿಸುವನು ಮತ್ತು ವಿಶ್ವಾಸಿ ಪುರುಷರು ಹಾಗೂ ವಿಶ್ವಾಸಿ ಸ್ತ್ರೀಯರ ಪಶ್ಚಾತ್ತಾಪವನ್ನು ಸ್ವೀಕರಿಸುವನು. ಅಲ್ಲಾಹನಂತು ಅತ್ಯಂತ ಕ್ಷಮಾಶೀಲನೂ ಕರುಣಾಮಯಿಯೂ ಆಗಿದ್ದಾನೆ.