39. Az Zumar

39. ಅಝ್ಝುಮರ್ (ದಂಡುಗಳು)

 ವಚನಗಳು – 75. ಮಕ್ಕಃ

ಅಲ್ಲಾಹನ ಹೆಸರಿನಿಂದ. ಅವನು ಅಪಾರ ದಯಾಳು, ಕರುಣಾಮಯಿ.

1. (ಇದು) ಪ್ರಬಲನೂ ಯುಕ್ತಿವಂತನೂ ಆಗಿರುವ ಅಲ್ಲಾಹನ ಕಡೆಯಿಂದ ಇಳಿಸಿ ಕೊಡಲಾಗಿರುವ ಗ್ರಂಥ.

2. (ದೂತರೇ,) ಖಂಡಿತವಾಗಿಯೂ ನಾವು ಇದನ್ನು ಸತ್ಯದೊಂದಿಗೆ ನಿಮ್ಮೆಡೆಗೆ ಇಳಿಸಿಕೊಟ್ಟಿರುತ್ತೇವೆ. ನೀವಿನ್ನು ನಿಷ್ಠೆಯನ್ನು ಅವನಿಗೇ ಮೀಸಲಾಗಿಟ್ಟು, ಅವನನ್ನು ಆರಾಧಿಸಿರಿ.

3. ನೆನಪಿರಲಿ, ನಿಷ್ಠೆಯು ಅಲ್ಲಾಹನಿಗೇ ಮೀಸಲಾಗಿರಲಿ. ಅಲ್ಲಾಹನ ಹೊರತು ಇತರರನ್ನು ತಮ್ಮ ಪೋಷಕರಾಗಿಸಿಕೊಂಡವರು, ‘‘ಅವರು ನಮ್ಮನ್ನು ಅಲ್ಲಾಹನಿಗೆ ನಿಕಟಗೊಳಿಸುವರೆಂದು ಮಾತ್ರ ನಾವು ಅವರನ್ನು ಪೂಜಿಸುತ್ತೇವೆ’’ ಎನ್ನುತ್ತಾರೆ. ಅವರು ಭಿನ್ನತೆ ತಾಳಿರುವ ವಿಷಯಗಳಲ್ಲಿ ಅಲ್ಲಾಹನೇ ಅವರ ನಡುವೆ ತೀರ್ಮಾನ ಮಾಡುವನು. ಸುಳ್ಳುಗಾರನಾಗಿರುವ ಕೃತಘ್ನನಿಗೆ ಅಲ್ಲಾಹನು ಖಂಡಿತ ಸರಿ ದಾರಿಯನ್ನು ತೋರುವುದಿಲ್ಲ.

4. ಅಲ್ಲಾಹನು ಯಾರನ್ನಾದರೂ ತನ್ನ ಪುತ್ರನಾಗಿಸಿಕೊಳ್ಳಲು ಬಯಸಿದ್ದರೆ, ಅವನು ತನ್ನ ಸೃಷ್ಟಿಗಳ ಪೈಕಿ ತಾನಿಚ್ಛಿಸಿದವರನ್ನು ಆರಿಸಿಕೊಳ್ಳುತ್ತಿದ್ದನು. ಅವನು ಪಾವನನು. ಆ ಅಲ್ಲಾಹನು, ಅನುಪಮನಾಗಿದ್ದಾನೆ ಹಾಗೂ ಭಾರೀ ಶಕ್ತಿಶಾಲಿಯಾಗಿದ್ದಾನೆ.

5. ಅವನು ಆಕಾಶಗಳನ್ನು ಹಾಗೂ ಭೂಮಿಯನ್ನು ಕ್ರಮಬದ್ಧವಾಗಿ ಸೃಷ್ಟಿಸಿರುವನು. ಅವನೇ ರಾತ್ರಿಯನ್ನು ಹಗಲ ಮೇಲೆ ಆವರಿಸುತ್ತಾನೆ ಹಾಗೂ ಹಗಲನ್ನು ರಾತ್ರಿಯ ಮೇಲೆ ಆವರಿಸುತ್ತಾನೆ ಮತ್ತು ಸೂರ್ಯ ಹಾಗೂ ಚಂದ್ರನನ್ನು ವಿಧೇಯಗೊಳಿಸಿದ್ದಾನೆ. ಎಲ್ಲವೂ ಒಂದು ನಿರ್ದಿಷ್ಟ ಅವಧಿಗಾಗಿ ಚಲನೆಯಲ್ಲಿದೆ. ನೆನಪಿರಲಿ, ಅವನು ಪ್ರಚಂಡನೂ ಮಹಾ ಕ್ಷಮಾಶೀಲನೂ ಆಗಿದ್ದಾನೆ.

6. ಅವನು ನಿಮ್ಮನ್ನು ಒಂದು ಜೀವದಿಂದ ಸೃಷ್ಟಿಸಿದನು ಹಾಗೂ ಅದರಿಂದ ಅದರ ಜೋಡಿಯನ್ನು ಸೃಷ್ಟಿಸಿದನು ಮತ್ತು ಜಾನುವಾರುಗಳಲ್ಲಿ ನಿಮಗಾಗಿ ಎಂಟು ಜೋಡಿಗಳನ್ನು ತಯಾರಿಸಿದನು. ಅವನು ನಿಮ್ಮನ್ನು ನಿಮ್ಮ ತಾಯಂದಿರ ಗರ್ಭಗಳಲ್ಲಿ, ಮೂರು ಕತ್ತಲುಗಳಲ್ಲಿ, ಹಂತ ಹಂತವಾಗಿ ಸೃಷ್ಟಿಸಿರುವನು. ಆ ಅಲ್ಲಾಹನೇ ನಿಮ್ಮ ಒಡೆಯನು. ಅಧಿಕಾರವೆಲ್ಲವೂ ಅವನಿಗೇ ಸೇರಿದೆ. ಅವನ ಹೊರತು ಬೇರೆ ದೇವರಿಲ್ಲ. ನೀವು ಅದೆಲ್ಲಿ ಅಲೆಯುತ್ತಿರುವಿರಿ?

7. ನೀವು ಕೃತಘ್ನತೆ ತೋರಿದರೆ, ಅಲ್ಲಾಹನಂತು ನಿಮ್ಮ ಅಗತ್ಯವೇ ಇಲ್ಲದವನಾಗಿದ್ದಾನೆ. ಆದರೆ ಅವನು ತನ್ನ ದಾಸರ ಪಾಲಿಗೆ ಕೃತಘ್ನತೆಯ ನಿಲುವನ್ನು ಮೆಚ್ಚುವುದಿಲ್ಲ. ನೀವು ಕೃತಜ್ಞತೆ ತೋರುವುದಾದರೆ ಅದನ್ನೇ ಅವನು ನಿಮ್ಮ ಪಾಲಿಗೆ ಮೆಚ್ಚುತ್ತಾನೆ. ಹೊರೆ ಹೊರುವ ಯಾರು ಇನ್ನೊಬ್ಬರ ಹೊರೆಯನ್ನು ಹೊರಲಾರನು. ಕೊನೆಗೊಮ್ಮೆ ನೀವು ನಿಮ್ಮ ಒಡೆಯನ ಬಳಿಗೇ ಮರಳಿ ಹೋಗುವಿರಿ ಮತ್ತು ಅವನು, ನೀವು ಏನೆಲ್ಲಾ ಮಾಡುತ್ತಿದ್ದಿರೆಂಬುದನ್ನು ನಿಮಗೆ ತಿಳಿಸುವನು. ಖಂಡಿತವಾಗಿಯೂ ಅವನು ಮನಸ್ಸಿನೊಳಗಿನ ವಿಚಾರಗಳನ್ನೂ ಬಲ್ಲವನಾಗಿದ್ದಾನೆ.

8. ಮತ್ತು ಮಾನವನಿಗೆ ಸಂಕಟವೇನಾದರೂ ತಟ್ಟಿದರೆ, ಅವನು ತನ್ನೊಡೆಯನೆಡೆಗೆ ಒಲಿದು, ಅವನಿಗೆ ಮೊರೆ ಇಡುತ್ತಾನೆ. ತರುವಾಯ ಅವನು (ಅಲ್ಲಾಹನು) ಆತನಿಗೆ ತನ್ನ ಅನುಗ್ರಹವನ್ನು ದಯ ಪಾಲಿಸಿದಾಗ, ಆತನು ಈ ಹಿಂದೆ ತಾನು ಯಾರಿಗೆ ಮೊರೆ ಇಟ್ಟಿದ್ದೆನೆಂಬುದನ್ನೇ ಮರೆತು ಬಿಡುತ್ತಾನೆ ಮತ್ತು ಅಲ್ಲಾಹನಿಗೆ ಪಾಲುದಾರರನ್ನು ನೇಮಿಸುತ್ತಾನೆ – ಅವರು ಆತನನ್ನು ಅವನ (ಅಲ್ಲಾಹನ) ದಾರಿಯಿಂದ ದೂರಗೊಳಿಸಿ ಬಿಡುತ್ತಾರೆ. (ಅಂಥವನಿಗೆ) ಹೇಳಿರಿ; ತುಸುಕಾಲ ನೀನು ನಿನ್ನ ಕೃತಘ್ನತೆಯ ಸುಖವನ್ನು ಅನುಭವಿಸು. ನೀನು ಖಂಡಿತ ನರಕವಾಸಿಯಾಗಿರುವೆ.

9. (ಅವನು ಶ್ರೇಷ್ಠನೋ, ಅಥವಾ) ರಾತ್ರಿಯ ವೇಳೆ ಸಾಷ್ಟಾಂಗವೆರಗಿಕೊಂಡೂ, ನಿಂತುಕೊಂಡೂ ಆರಾಧಿಸುತ್ತಾ, ಪರಲೋಕದ ಕುರಿತು ಸದಾ ಜಾಗೃತನಾಗಿದ್ದು, ತನ್ನ ಒಡೆಯನ ಅನುಗ್ರಹವನ್ನು ನಿರೀಕ್ಷಿಸುತ್ತಿರುವವನು ಶ್ರೇಷ್ಠನೋ? ಹೇಳಿರಿ; ಅರಿತಿಲ್ಲದವರು ಮತ್ತು ಅರಿತಿರುವವರು ಸಮಾನರಾಗಬಲ್ಲರೇ? ಬುದ್ಧಿಯುಳ್ಳವರು ಮಾತ್ರ ಉಪದೇಶವನ್ನು ಸ್ವೀಕರಿಸುತ್ತಾರೆ.

10. ಹೇಳಿರಿ; ನನ್ನ (ಅಲ್ಲಾಹನ) ವಿಶ್ವಾಸಿ ದಾಸರೇ, ನಿಮ್ಮ ಒಡೆಯನಿಗೆ ಅಂಜಿರಿ. ಈ ಲೋಕದಲ್ಲಿ ಒಳಿತನ್ನು ಮಾಡಿದವರಿಗೆ, ಒಳಿತು ಸಿಗಲಿದೆ. ಅಲ್ಲಾಹನ ಭೂಮಿಯು ವಿಶಾಲವಾಗಿದೆ. ಸಹನಶೀಲರಿಗೆ ಅಪಾರ ಪ್ರತಿಫಲ ಸಿಗಲಿದೆ.

11. ಹೇಳಿರಿ; ನನಗಂತು, ನಿಷ್ಠೆಯನ್ನು ಅಲ್ಲಾಹನಿಗೇ ಮಿಸಲಾಗಿಟ್ಟು, ಅವನನ್ನು ಆರಾಧಿಸಲು ಆದೇಶಿಸಲಾಗಿದೆ.

12. ಮತ್ತು ನಾನೇ ಪ್ರಥಮವಾಗಿ ಮುಸ್ಲಿಮ (ಶರಣಾಗತ)ನಾಗಬೇಕೆಂದು ನನಗೆ ಆದೇಶಿಸಲಾಗಿದೆ.

13. ಹೇಳಿರಿ; ನಾನು ನನ್ನ ಒಡೆಯನ ಆದೇಶವನ್ನು ಮೀರಿ ನಡೆದರೆ ಒಂದು ಮಹಾ ದಿನದ ಶಿಕ್ಷೆಗೆ ತುತ್ತಾಗುವ ಭಯ ನನಗಿದೆ.

14. ಹೇಳಿರಿ; ನಾನು ನನ್ನ ನಿಷ್ಠೆಯನ್ನು ಅಲ್ಲಾಹನಿಗೇ ಮೀಸಲಾಗಿಟ್ಟು ಅವನನ್ನೇ ಆರಾಧಿಸುತ್ತೇನೆ.

15. ನೀವು ಅವನ ಹೊರತು ಯಾರನ್ನು ಬೇಕಾದರೂ ಆರಾಧಿಸಿರಿ. ಹೇಳಿರಿ; ತಮ್ಮನ್ನು ಹಾಗೂ ತಮ್ಮ ಮನೆಯವರನ್ನು ಪುನರುತ್ಥಾನ ದಿನ ನಷ್ಟಕ್ಕೊಳಪಡಿಸಿಕೊಂಡವರೇ ನಿಜವಾಗಿ ನಷ್ಟ ಅನುಭವಿಸುವವರಾಗಿದ್ದಾರೆ. (ನಿಮಗೆ) ತಿಳಿದಿರಲಿ; ಅದುವೇ ಸ್ಪಷ್ಟವಾದ ನಷ್ಟ.

16. ಅವರಿಗಾಗಿ (ನರಕದಲ್ಲಿ), ಅವರ ಮೇಲೂ ಅವರನ್ನು ಆವರಿಸುವ ಬೆಂಕಿಯ ಜ್ವಾಲೆಗಳಿರುವವು ಮತ್ತು ಅವರ ಕೆಳಗೂ ಅವರನ್ನು ಆವರಿಸುವ ಜ್ವಾಲೆಗಳಿರುವವು. ಅಲ್ಲಾಹನು ಆ ಕುರಿತು ತನ್ನ ದಾಸರನ್ನು ಎಚ್ಚರಿಸುತ್ತಾನೆ. ನನ್ನ ದಾಸರೇ, ನನಗೆ ಅಂಜಿರಿ.

17. ಅವನ ಆರಾಧನೆಗಾಗಿ, ಮಿಥ್ಯ ಶಕ್ತಿಗಳನ್ನೆಲ್ಲಾ ತೊರೆದು ಅಲ್ಲಾಹನೆಡೆಗೆ ಒಲವು ತೋರಿದವರಿಗೆ ಶುಭವಾರ್ತೆ ಇದೆ. ಅಂತಹ ನನ್ನ ಭಕ್ತರಿಗೆ ಶುಭವಾರ್ತೆ ನೀಡಿರಿ.

18. ಅವರು ಮಾತನ್ನು ಸರಿಯಾಗಿ ಆಲಿಸಿ, ಅದರ ಅತ್ಯುತ್ತಮ ಆಯಾಮವನ್ನು ಅನುಸರಿಸುತ್ತಾರೆ. ಅವರೇ ಅಲ್ಲಾಹನಿಂದ ಮಾರ್ಗದರ್ಶನ ಪಡೆದವರು ಮತ್ತು ಅವರೇ ಬುದ್ಧಿವಂತರು.

19. ಈಗಾಗಲೇ ಶಿಕ್ಷೆಯ ತೀರ್ಪು ವಿಧಿಸಲ್ಪಟ್ಟವನನ್ನು ಮತ್ತು ಈಗಾಗಲೇ ಬೆಂಕಿಗೆ ಬಿದ್ದು ಬಿಟ್ಟಿರುವವನನ್ನು ನೀವು ರಕ್ಷಿಸಬಲ್ಲಿರಾ?

20. ಆದರೆ, ತಮ್ಮ ಒಡೆಯನ ಭಕ್ತರಾಗಿದ್ದವರಿಗಾಗಿ, ಮಾಳಿಗೆಗಳು ಮತ್ತು ಅವುಗಳ ಮೇಲೆ ಮತ್ತಷ್ಟು ಸಿದ್ಧ ಮಾಳಿಗೆಗಳು ಇರುವವು. ಅವುಗಳ ತಳದಲ್ಲಿ ಹರಿಯುವ ನದಿಗಳಿರುವವು. ಇದು ಅಲ್ಲಾಹನ ವಾಗ್ದಾನ. ಅಲ್ಲಾಹನೆಂದೂ ತಾನು ಕೊಟ್ಟ ಮಾತನ್ನು ಮೀರುವುದಿಲ್ಲ.

21. ನೀವು ಕಾಣಲಿಲ್ಲವೇ? ಅಲ್ಲಾಹನು ಆಕಾಶದಿಂದ ನೀರನ್ನು ಸುರಿಸಿ, ಅದನ್ನು ಚಿಲುಮೆಗಳಾಗಿಸಿ ಭೂಮಿಯಲ್ಲಿ ಹರಿಸುತ್ತಾನೆ. ತರುವಾಯ ಅವನು ಅಲ್ಲಿಂದ ವಿವಿಧ ಬಣ್ಣದ ಬೆಳೆಗಳನ್ನು ಹೊರತೆಗೆಯುತ್ತಾನೆ. ಆ ಬಳಿಕ ಅದು ಒಣಗಿ ಬಿಡುತ್ತದೆ ಮತ್ತು ಅದು ಹಳದಿಯಾಗುವುದನ್ನು ನೀವು ಕಾಣುತ್ತೀರಿ. ಆ ಬಳಿಕ ಅವನು ಅದನ್ನು ಚೂರು ಚೂರಾಗಿಸಿ ಬಿಡುತ್ತಾನೆ. ಇದರಲ್ಲಿ ಬುದ್ಧಿವಂತರಿಗೆ ಖಂಡಿತ ಪಾಠವಿದೆ.

22. ಅಲ್ಲಾಹನು ಯಾರ ಹೃದಯವನ್ನು ಇಸ್ಲಾಮಿಗಾಗಿ ತೆರೆದು ಬಿಟ್ಟನೋ, ಅವನು ತನ್ನ ಒಡೆಯನ ಕಡೆಯಿಂದ ಬೆಳಕಿನಲ್ಲಿದ್ದಾನೆ. ಅಲ್ಲಾಹನನ್ನು ನೆನಪಿಸಲಾಗದಷ್ಟು ಹೃದಯವು ಕಠಿಣವಾಗಿ ಬಿಟ್ಟವರಿಗೆ ವಿನಾಶ ಕಾದಿದೆ. ಅವರು ಸ್ಪಷ್ಟವಾಗಿ ದಾರಿಗೆಟ್ಟ ಸ್ಥಿತಿಯಲ್ಲಿದ್ದಾರೆ.

23. ಅಲ್ಲಾಹನು, ಸಮರೂಪದ, ಆವರ್ತಿತ ವಚನಗಳಿರುವ ಅತ್ಯುತ್ತಮ ಗ್ರಂಥವನ್ನು ಇಳಿಸಿಕೊಟ್ಟಿದ್ದಾನೆ. ತಮ್ಮ ಒಡೆಯನ ಭಕ್ತಿ ಉಳ್ಳವರಿಗೆ ಅದರಿಂದ ರೋಮಾಂಚನವಾಗುತ್ತದೆ. ತರುವಾಯ ಅವರ ಚರ್ಮಗಳೂ (ಬಾಹ್ಯವೂ) ಹೃದಯಗಳೂ (ಅಂತರಂಗವೂ)ಅಲ್ಲಾಹನ ನೆನಪಿನೆಡೆಗೆ ವಾಲಿ ಬಿಡುತ್ತವೆ. ಇದು ಅಲ್ಲಾಹನ ಮಾರ್ಗದರ್ಶನ. ಅವನು ತಾನಿಚ್ಛಿಸಿದವರಿಗೆ ಸರಿದಾರಿಯನ್ನು ತೋರುತ್ತಾನೆ. ಇನ್ನು ಅಲ್ಲಾಹನೇ ದಾರಿ ತಪ್ಪಿಸಿದವನಿಗೆ ಸರಿ ದಾರಿ ತೋರಬಲ್ಲವರು ಯಾರೂ ಇಲ್ಲ.

24. ಪುನರುತ್ಥಾನ ದಿನ, ತನ್ನ ಮುಖವನ್ನು ಆ ಕೆಟ್ಟ ಶಿಕ್ಷೆಯಿಂದ ರಕ್ಷಿಸಲು ಹೆಣಗುತ್ತಿರುವವನು (ಸ್ವರ್ಗವಾಸಿಗಳಿಗೆ ಸಮಾನನಾಗಬಲ್ಲನೇ)? ಅಂದು ಅಕ್ರಮಿಗಳೊಡನೆ ‘‘ಸವಿಯಿರಿ, ನೀವು ಮಾಡುತ್ತಿದ್ದ ಕರ್ಮಗಳ ಫಲವನ್ನು’’ ಎನ್ನಲಾಗುವುದು.

25. ಅವರಿಗಿಂತ ಹಿಂದಿನವರೂ (ಸತ್ಯವನ್ನು) ತಿರಸ್ಕರಿಸಿದ್ದರು. ಕೊನೆಗೆ ಅವರಿಗೆ ಅರಿವೇ ಇಲ್ಲದಂತೆ, ಅವರ ಮೇಲೆ ಶಿಕ್ಷೆಯು ಬಂದೆರಗಿತು.

26. ಅಲ್ಲಾಹನು ಈ ಲೋಕದ ಬದುಕಿನಲ್ಲೇ ಅವರಿಗೆ ನಷ್ಟದ ರುಚಿಯನ್ನು ಉಣಿಸಿದನು. ಇನ್ನು ಪರಲೋಕದ ಶಿಕ್ಷೆಯಂತು ಇದಕ್ಕಿಂತ ತುಂಬಾ ದೊಡ್ಡದಾಗಿರುವುದು. ಅವರು ಇದನ್ನು ಅರಿತಿರಬೇಕಿತ್ತು.

27. ಖಂಡಿತವಾಗಿಯೂ ನಾವು ಈ ಕುರ್‌ಆನ್‌ನಲ್ಲಿ ಮಾನವರಿಗಾಗಿ ಎಲ್ಲ ಬಗೆಯ ಉದಾಹರಣೆಗಳನ್ನು ಮುಂದಿಟ್ಟಿರುವೆವು – ಅವರು ಉಪದೇಶವನ್ನು ಸ್ವೀಕರಿಸಬೇಕೆಂದು.

28. ಅರಬೀ ಭಾಷೆಯಲ್ಲಿರುವ, ಯಾವ ವಕ್ರತೆಯೂ ಇಲ್ಲದ ಕುರ್‌ಆನ್. ಅವರು ಧರ್ಮನಿಷ್ಠರಾಗಬೇಕೆಂದು (ಇದನ್ನು ಕಳುಹಿಸಲಾಗಿದೆ.).

29. ಅಲ್ಲಾಹನು ಒಂದು ಉದಾಹರಣೆಯನ್ನು ಮುಂದಿಡುತ್ತಾನೆ: ಒಬ್ಬನು ಪರಸ್ಪರರ ಪಾಲಿಗೆ ತೀರಾ ಹಠಮಾರಿಗಳಾಗಿರುವ ಹಲವರ ದಾಸನಾಗಿದ್ದಾನೆ ಮತ್ತು ಇನ್ನೊಬ್ಬನು ಕೇವಲ ಒಬ್ಬನ ದಾಸನಾಗಿದ್ದಾನೆ. ಅವರಿಬ್ಬರ ಸ್ಥಿತಿಯು ಸಮಾನವಾಗಿರಲು ಸಾಧ್ಯವೇ? ಅಲ್ಲಾಹನಿಗೆ ಸ್ತುತಿಗಳು. ಆದರೆ, ಹೆಚ್ಚಿನವರು ಅರಿತಿಲ್ಲ.

30. (ದೂತರೇ,) ನೀವು ಖಂಡಿತ ಸಾಯುವಿರಿ ಮತ್ತು ಅವರೂ (ವಿರೋಧಿಗಳೂ) ಖಂಡಿತ ಸಾಯುವರು.

 

31. ಮತ್ತು ನೀವು (ವಿರೋಧಿಗಳು) ಪುನರುತ್ಥಾನದಿನ ನಿಮ್ಮ ಒಡೆಯನ ಮುಂದೆ ಖಂಡಿತ ಪರಸ್ಪರ ಜಗಳಾಡುವಿರಿ. ಕಾಂಡ – 24

32. ಅಲ್ಲಾಹನ ಮೇಲೆ ಸುಳ್ಳಾರೋಪ ಹೊರಿಸಿದ ಹಾಗೂ ಸತ್ಯವು ತನ್ನ ಬಳಿಗೆ ಬಂದಾಗ ಅದನ್ನು ತಿರಸ್ಕರಿಸಿದವನಿಗಿಂತ ದೊಡ್ಡ ಅಕ್ರಮಿ ಯಾರು? ಧಿಕ್ಕಾರಿಗಳ ನೆಲೆ ಇರುವುದು ನರಕದಲ್ಲೇ ತಾನೇ?

33. ಸತ್ಯವನ್ನು ತಂದವನು ಮತ್ತು ಅದನ್ನು ಸಮರ್ಥಿಸಿದವನು – ಅವರೇ ಧರ್ಮನಿಷ್ಠರು.

34. ಅವರಿಗಾಗಿ ಅವರ ಒಡೆಯನ ಬಳಿ, ಅವರು ಬಯಸಿದ್ದೆಲ್ಲವೂ ಇದೆ. ಅದುವೇ ಸತ್ಕರ್ಮಿಗಳ ಪ್ರತಿಫಲ.

35. ಅಲ್ಲಾಹನು ಅವರ ಕರ್ಮಗಳಲ್ಲಿನ ದೋಷಗಳನ್ನು ನಿವಾರಿಸುವನು ಮತ್ತು ಅವರು ಮಾಡುತ್ತಿದ್ದ ಅತ್ಯುತ್ತಮ ಕರ್ಮಗಳಿಗನುಸಾರ ಅವರಿಗೆ ಅವರ ಪ್ರತಿಫಲವನ್ನು ನೀಡುವನು.

36. ತನ್ನ ದಾಸರ ಪಾಲಿಗೆ ಅಲ್ಲಾಹನು ಸಾಕಾಗಲಾರನೇ? ಅವರು ನಿಮ್ಮನ್ನು ಅವನ ಹೊರತು ಇತರರ ಹೆಸರಲ್ಲಿ ಹೆದರಿಸುತ್ತಾರೆ. ಅಲ್ಲಾಹನೇ ದಾರಿ ತಪ್ಪಿಸಿ ಬಿಟ್ಟವರಿಗೆ ಯಾರೂ ಸರಿ ದಾರಿಯನ್ನು ತೋರಲಾರರು.

37. ಇನ್ನು, ಅಲ್ಲಾಹನೇ ಸರಿದಾರಿಯಲ್ಲಿ ನಡೆಸಿದವರನ್ನು ಯಾರೂ ದಾರಿ ತಪ್ಪಿಸಲಾರರು. ಪ್ರಬಲನಾದ ಅಲ್ಲಾಹನೇನು ಪ್ರತೀಕಾರ ತೀರಿಸಲಾರನೇ?

38. ಆಕಾಶಗಳನ್ನು ಹಾಗೂ ಭೂಮಿಯನ್ನು ಸೃಷ್ಟಿಸಿದವನು ಯಾರು? ಎಂದು ನೀವು ಅವರೊಡನೆ ಕೇಳಿದರೆ. ಖಂಡಿತ ಅಲ್ಲಾಹನೆಂದೇ ಅವರು ಹೇಳುವರು. ಹೇಳಿರಿ; ಅಲ್ಲಾಹನ ಹೊರತು ನೀವು ಯಾರನ್ನೆಲ್ಲಾ ಕರೆದು ಪ್ರಾರ್ಥಿಸುತ್ತೀರೋ ಅವರನ್ನು ನೀವು ನೋಡಿದಿರಾ? ಅಲ್ಲಾಹನು ನನಗೇನಾದರೂ ಹಾನಿ ಮಾಡ ಬಯಸಿದರೆ, ಅವರು ಅವನ ಹಾನಿಯನ್ನು ನಿವಾರಿಸಬಲ್ಲರೇ? ಅಥವಾ ಅವನು ನನ್ನನ್ನು ಅನುಗ್ರಹಿಸಲು ಬಯಸಿದರೆ, ಅವರು ಆತನ ಅನುಗ್ರಹವನ್ನು ತಡೆಯಬಲ್ಲರೇ? ಹೇಳಿರಿ; ನನಗಂತು ಅಲ್ಲಾಹನೇ ಸಾಕು. ಅವಲಂಬಿಸುವವರು ಅವನನ್ನೇ ಅವಲಂಬಿಸುತ್ತಾರೆ.

39. ಹೇಳಿರಿ; ನನ್ನ ಜನಾಂಗದವರೇ, ನಿಮ್ಮ ಸ್ಥಾನದಲ್ಲಿ ನೀವು ಸಕ್ರಿಯರಾಗಿರಿ. ನಾನೂ ಸಕ್ರಿಯನಾಗಿರುತ್ತೇನೆ. ನಿಮಗೆ ಬೇಗನೇ ತಿಳಿಯಲಿದೆ –

40. – ಅಪಮಾನಿಕಾರಿಯಾದ ಶಿಕ್ಷೆ ಹಾಗೂ ಶಾಶ್ವತವಾದ ಶಿಕ್ಷೆಯು ಯಾರ ಮೇಲೆ ಬಂದೆರಗುವುದೆಂದು.

41. (ದೂತರೇ,) ಖಂಡಿತವಾಗಿಯೂ ನಾವು ನಿಮಗೆ ಮಾನವರಿಗಾಗಿ, ಸತ್ಯದೊಂದಿಗೆ, ಗ್ರಂಥವನ್ನು ಇಳಿಸಿ ಕೊಟ್ಟಿರುವೆವು. ಇದೀಗ ಯಾರಾದರೂ ಸನ್ಮಾರ್ಗವನ್ನು ಅನುಸರಿಸಿದರೆ ಅದು ಅವನದೇ ಹಿತಕ್ಕಾಗಿರುವುದು ಮತ್ತು ಯಾರಾದರೂ ತಪ್ಪುದಾರಿ ಹಿಡಿದರೆ, ಅದರ ಹೊಣೆಯೂ ಅವನ ಮೇಲೆಯೇ ಇರುವುದು. ನೀವು ಅವರ ಮೇಲಿನ ಕಾವಲುಗಾರರೇನೂ ಅಲ್ಲ.

42. ಅಲ್ಲಾಹನು ಜೀವಗಳನ್ನು ಅವುಗಳ ಮರಣದ ವೇಳೆ ವಶಪಡಿಸಿಕೊಳ್ಳುತ್ತಾನೆ. ಮತ್ತು ಮೃತವಾಗದ ಜೀವಗಳನ್ನೂ ಅವನು, ಅವುಗಳ ನಿದ್ದೆಯ ವೇಳೆಯಲ್ಲಿ ವಶಪಡಿಸಿಕೊಳ್ಳುತ್ತಾನೆ – ಆ ಪೈಕಿ ಮರಣವು ವಿಧಿಸಲ್ಪಟ್ಟಿರುವ ಜೀವವನ್ನು ಮಾತ್ರ ಅವನು ತಡೆದಿಟ್ಟು ಕೊಳ್ಳುತ್ತಾನೆ ಹಾಗೂ ಇತರ ಜೀವಗಳನ್ನು ಒಂದು ನಿರ್ದಿಷ್ಟ ಅವಧಿಗಾಗಿ ಮರಳಿಸುತ್ತಾನೆ. ಚಿಂತಿಸುವ ಜನರಿಗೆ ಇದರಲ್ಲಿ ಖಂಡಿತ ಪಾಠಗಳಿವೆ.

43. ಅವರೇನು ಅಲ್ಲಾಹನ ಹೊರತು ಅನ್ಯರನ್ನು ಶಿಫಾರಸ್ಸುದಾರರಾಗಿಸಿಕೊಂಡಿರುವರೇ? ಹೇಳಿರಿ; ಅವರ ಬಳಿ ಯಾವುದೇ ಅಧಿಕಾರವಿಲ್ಲದಿದ್ದರೂ, ಅವರಿಗೆ ಏನೂ ಅರ್ಥವಾಗದಿದ್ದರೂ (ನೀವೇನು ಅವರನ್ನೇ ಅವಲಂಬಿಸುವಿರಾ)?

44. ಹೇಳಿರಿ; ಶಿಫಾರಸಿನ ಅಧಿಕಾರವು ಸಂಪೂರ್ಣವಾಗಿ ಅಲ್ಲಾಹನಿಗೇ ಸೇರಿದೆ. ಆಕಾಶಗಳ ಹಾಗೂ ಭೂಮಿಯ ಆಧಿಪತ್ಯವೂ ಅವನಿಗೇ ಸೇರಿದೆ. ಕೊನೆಗೆ ನೀವೆಲ್ಲಾ ಅವನೆಡೆಗೇ ಮರಳುವಿರಿ.

45. ಏಕಮಾತ್ರನಾದ ಅಲ್ಲಾಹನ ಪ್ರಸ್ತಾಪವೆತ್ತಿದೊಡನೆ, ಪರಲೋಕದಲ್ಲಿ ನಂಬಿಕೆ ಇಲ್ಲದವರ ಮನಸ್ಸುಗಳಲ್ಲಿ ಜಿಗುಪ್ಸೆ ಉಕ್ಕುತ್ತದೆ ಮತ್ತು ಅವನ ಹೊರತು ಇತರರನ್ನು ಪ್ರಸ್ತಾಪಿಸಿದೊಡನೆ ಅವರು ಸಂತುಷ್ಟರಾಗಿ ಬಿಡುತ್ತಾರೆ.

46. ಹೇಳಿರಿ; ಆಕಾಶಗಳನ್ನು ಹಾಗೂ ಭೂಮಿಯನ್ನು ರೂಪಿಸಿರುವ, ಗುಪ್ತ ಹಾಗೂ ವ್ಯಕ್ತವಾದ ಎಲ್ಲವನ್ನೂ ಅರಿತಿರುವ ಅಲ್ಲಾಹನೇ, ನಿನ್ನ ದಾಸರು ಪರಸ್ಪರ ಭಿನ್ನತೆ ತಾಳಿದ್ದ ಎಲ್ಲ ವಿಷಯಗಳಲ್ಲಿ ಅವರ ನಡುವೆ ತೀರ್ಪು ನೀಡುವವನು ನೀನೇ.

47. ಅಕ್ರಮವೆಸಗಿದವರ ಬಳಿ, ಭೂಮಿಯಲ್ಲಿರುವ ಎಲ್ಲವೂ ಹಾಗೂ ಅಷ್ಟೇ ಪ್ರಮಾಣದ ಇನ್ನಷ್ಟು (ಸಂಪತ್ತು) ಇದ್ದರೂ ಪುನರುತ್ಥಾನ ದಿನದ ಶಿಕ್ಷೆಯಿಂದ ಮುಕ್ತರಾಗಲು ಅವರು ಅದೆಲ್ಲವನ್ನೂ ಕೊಟ್ಟು ಬಿಡಲು ಮುಂದಾಗುವರು. ಆದರೆ, ಅವರು ಊಹಿಸಿಯೂ ಇಲ್ಲದ್ದನ್ನು (ಅಂತಹ ಘೋರ ಶಿಕ್ಷೆಯನ್ನು) ಅಲ್ಲಾಹನು ಅವರ ಮುಂದೆ ಅನಾವರಣಗೊಳಿಸುವನು.

48. ಮತ್ತು ಆ ದಿನ, ಅವರು ಮಾಡುತ್ತಿದ್ದ ಎಲ್ಲ ದುಷ್ಟ ಕೃತ್ಯಗಳು ಅವರ ಮುಂದೆ ಪ್ರಕಟವಾಗುವವು ಹಾಗೂ ಅವರು ಏನನ್ನು ಗೇಲಿ ಮಾಡುತ್ತಿದ್ದರೋ ಅದುವೇ ಅವರನ್ನು ಆವರಿಸಿಕೊಳ್ಳುವುದು.

49. ಮನುಷ್ಯನಿಗೆ ಏನಾದರೂ ಸಂಕಟವಾದಾಗ ಅವನು ನಮ್ಮನ್ನು ಪ್ರಾರ್ಥಿಸುತ್ತಾನೆ. ಆ ಬಳಿಕ ನಾವು ನಮ್ಮ ಕಡೆಯಿಂದ ಆತನಿಗೇನಾದರೂ ಕೊಡುಗೆಯನ್ನು ದಯಪಾಲಿಸಿದರೆ ಅವನು, ಅದನ್ನು ನನಗೆ ನನ್ನ ಜ್ಞಾನದ ಆಧಾರದಲ್ಲಿ ನೀಡಲಾಗಿದೆ ಎನ್ನುತ್ತಾನೆ. ನಿಜವಾಗಿ ಅದೊಂದು ಪರೀಕ್ಷೆಯಾಗಿದೆ. ಆದರೆ, ಹೆಚ್ಚಿನವರು ಇದನ್ನು ತಿಳಿದಿಲ್ಲ.

50. ಅವರಿಗಿಂತ ಹಿಂದಿನವರೂ ಖಂಡಿತ, ಇದನ್ನೇ ಹೇಳಿದ್ದರು. ಆದರೆ, ತಮ್ಮ ಕೃತ್ಯಗಳಿಂದ ಅವರಿಗೆ ಯಾವ ಲಾಭವೂ ಆಗಲಿಲ್ಲ.

51. ಅವರು ಮಾಡಿದ ದುಷ್ಟ ಕೃತ್ಯಗಳು ಅವರ ಮೇಲೆಯೇ ಬಂದೆರಗಿದವು. (ಇದೀಗ) ಆ ಜನರ ಪೈಕಿ ಅಕ್ರಮವೆಸಗಿದವರು ಮಾಡಿರುವ ದುಷ್ಟ ಕೃತ್ಯಗಳು ಬಹು ಬೇಗನೇ ಅವರ ಮೇಲೆ ಬಂದೆರಗಲಿವೆ. (ಅಲ್ಲಾಹನನ್ನು) ನಿರ್ಬಂಧಿಸಲು ಅವರಿಂದ ಸಾಧ್ಯವಿಲ್ಲ.

52. ಸಂಪನ್ನತೆಯನ್ನು ಅಲ್ಲಾಹನು ತಾನಿಚ್ಛಿಸಿದವರ ಪಾಲಿಗೆ ವಿಶಾಲಗೊಳಿಸುತ್ತಾನೆ ಹಾಗೂ ತಾನಿಚ್ಛಿಸಿದವರ ಪಾಲಿಗೆ ಸೀಮಿತಗೊಳಿಸುತ್ತಾನೆ ಎಂಬುದು ಅವರಿಗೆ ತಿಳಿಯದೇ? ಖಂಡಿತವಾಗಿಯೂ ವಿಶ್ವಾಸಿಗಳಿಗೆ ಇದರಲ್ಲಿ ಧಾರಾಳ ಪಾಠಗಳಿವೆ.

53. ಹೇಳಿರಿ; ಸ್ವತಃ ತಮ್ಮ ಮೇಲೆ ಅಕ್ರಮವೆಸಗಿಕೊಂಡಿರುವ ನನ್ನ (ಅಲ್ಲಾಹನ) ದಾಸರೇ, ಅಲ್ಲಾಹನ ಅನುಗ್ರಹದ ಕುರಿತಂತೆ ನಿರಾಶರಾಗಬೇಡಿ. ಅಲ್ಲಾಹನು ಖಂಡಿತ ಎಲ್ಲ ಪಾಪಗಳನ್ನೂ ಕ್ಷಮಿಸುತ್ತಾನೆ. ಅವನು ಖಂಡಿತ ತುಂಬಾ ಕ್ಷಮಿಸುವವನು ಮತ್ತು ಕರುಣೆ ತೋರುವವನಾಗಿದ್ದಾನೆ.

54. ನೀವಿನ್ನು ನಿಮ್ಮ ಒಡೆಯನ ಕಡೆಗೆ ಗಮನ ಹರಿಸಿರಿ ಮತ್ತು ನಿಮ್ಮ ಮೇಲೆ ಶಿಕ್ಷೆಯು ಬಂದೆರಗುವ ಹಾಗೂ ನಿಮಗೆ ಎಲ್ಲಿಂದಲೂ ನೆರವು ಸಿಗದ ಸ್ಥಿತಿ ಬರುವುದಕ್ಕಿಂತ ಮುನ್ನ ಅವನಿಗೆ ಶರಣಾಗಿ ಬಿಡಿರಿ.

55. ಮತ್ತು ನಿಮಗೆ ಅರಿವೇ ಇಲ್ಲದಂತೆ, ಹಠಾತ್ತನೆ ನಿಮ್ಮ ಮೇಲೆ ಶಿಕ್ಷೆಯು ಬಂದೆರಗುವುದಕ್ಕೆ ಮುನ್ನ, ನೀವು ನಿಮ್ಮ ಒಡೆಯನ ಕಡೆಯಿಂದ ನಿಮಗೆ ಇಳಿಸಿ ಕೊಡಲಾಗಿರುವ ಸಂದೇಶದ ಅತ್ಯುತ್ತಮ ವ್ಯಾಖ್ಯಾನವನ್ನು ಅನುಸರಿಸಿರಿ.

56. ಏಕೆಂದರೆ ಅಂದು ಯಾರೂ, ಅಯ್ಯೋ ನನ್ನ ದುಸ್ಥಿತಿ! ಅಲ್ಲಾಹನ ವಿಷಯದಲ್ಲಿ ನನ್ನಿಂದ ಪ್ರಮಾದಗಳಾದವು ಹಾಗೂ ನಾನು (ಸತ್ಯವನ್ನು) ಗೇಲಿ ಮಾಡಿದ್ದೆ, ಎನ್ನುವಂತಾಗಬಾರದು.

57. ಅಥವಾ ಯಾರೂ, ಅಲ್ಲಾಹನು ನನಗೆ ಸರಿದಾರಿ ತೋರಿದ್ದರೆ ನಾನು ಧರ್ಮ ನಿಷ್ಠನಾಗಿರುತ್ತಿದ್ದೆ ಎನ್ನುವಂತಾಗಬಾರದು.

58. ಅಥವಾ ಯಾರೂ, ಶಿಕ್ಷೆಯನ್ನು ಕಂಡು, ನನಗೆ ಇನ್ನೊಂದು ಅವಕಾಶ ಸಿಕ್ಕಿದ್ದರೆ ನಾನು ಸಜ್ಜನನಾಗಿ ಬುದುಕುತ್ತಿದ್ದೆ ಎನ್ನುವಂತಾಗಬಾರದು.

59. (ಆಗ ಅಲ್ಲಾಹನು ಹೇಳುವನು;) ನಿನ್ನ ಬಳಿಗೆ ನನ್ನ ವಚನಗಳು ಬಂದಿದ್ದವು. ಆದರೆ, ನೀನು ಅವುಗಳನ್ನು ತಿರಸ್ಕರಿಸಿದೆ, ಅಹಂಕಾರ ತೋರಿದೆ ಮತ್ತು ನೀನು ಧಿಕ್ಕಾರಿಯಾಗಿದ್ದೆ.

60. ಪುನರುತ್ಥಾನ ದಿನ ನೀವು ಕಾಣುವಿರಿ; ಅಲ್ಲಾಹನ ಕುರಿತು ಸುಳ್ಳು ಹೇಳಿದವರ ಮುಖಗಳು ಕರಾಳವಾಗಿರುವವು. ಅಹಂಕಾರಿಗಳ ನೆಲೆ ಇರುವುದು ನರಕದಲ್ಲೇ ತಾನೇ?

61. ಧರ್ಮನಿಷ್ಠರಾಗಿದ್ದವರಿಗೆ ಅಲ್ಲಾಹನು ಯಶಸ್ಸಿನ ಜೊತೆ ಮುಕ್ತಿಯನ್ನು ನೀಡುವನು. ಯಾವ ಸಂಕಟವೂ ಅವರನ್ನು ತಟ್ಟದು ಮತ್ತು ಅವರು ದುಃಖಿತರಾಗಲಾರರು.

62. ಅಲ್ಲಾಹನೇ ಎಲ್ಲ ವಸ್ತುಗಳ ಸೃಷ್ಟಿಕರ್ತನು ಮತ್ತು ಅವನೇ ಎಲ್ಲ ವಸ್ತುಗಳ ಮೇಲ್ವಿಚಾರಕನು.

63. ಆಕಾಶಗಳ ಹಾಗೂ ಭೂಮಿಯ ಚಾವಿಗಳು ಅವನ ಬಳಿ ಇವೆ. ಅಲ್ಲಾಹನ ವಚನಗಳನ್ನು ಧಿಕ್ಕರಿಸಿದವರೇ ನಷ್ಟ ಅನುಭವಿಸುವವರಾಗಿದ್ದಾರೆ.

64. ಹೇಳಿರಿ; ಅಜ್ಞಾನಿಗಳೇ, ನಾನು ಅಲ್ಲಾಹನ ಹೊರತು ಅನ್ಯರನ್ನು ಆರಾಧಿಸಬೇಕೆಂದು ನೀವು ನನಗೆ ಆದೇಶಿಸುತ್ತೀರಾ?

65. (ದೂತರೇ,) ನೀವು ಹಲವರ ಆರಾಧಕರಾಗಿ ಬಿಟ್ಟರೆ ನಿಮ್ಮ ಎಲ್ಲ ಕರ್ಮಗಳು ವ್ಯರ್ಥವಾಗುವವು ಮತ್ತು ನೀವು ನಷ್ಟ ಅನುಭವಿಸಿದವರ ಸಾಲಿಗೆ ಸೇರುವಿರೆಂದು ನಿಮಗೂ ನಿಮ್ಮ ಹಿಂದಿನವರಿಗೂ ದಿವ್ಯವಾಣಿಯನ್ನು ಕಳಿಸಲಾಗಿತ್ತು;.

66. ನೀವು ಅಲ್ಲಾಹನನ್ನು ಮಾತ್ರ ಆರಾಧಿಸಿರಿ ಮತ್ತು ಕೃತಜ್ಞರ ಸಾಲಿಗೆ ಸೇರಿರಿ.

67. ಅವರು ಅಲ್ಲಾಹನನ್ನು ಗುರುತಿಸಬೇಕಾದ ರೀತಿಯಲ್ಲಿ ಗುರುತಿಸಿಲ್ಲ. ಪುನರುತ್ಥಾನ ದಿನ ಸಂಪೂರ್ಣ ಭೂಮಿಯು ಅವನ ಮುಷ್ಠಿಯೊಳಗಿರುವುದು ಮತ್ತು ಆಕಾಶಗಳೆಲ್ಲಾ ಮಡಚಿದ ಸ್ಥಿತಿಯಲ್ಲಿ ಅವನ ಬಲಗೈಯಲ್ಲಿರುವವು. ಅವನು ಪರಿಶುದ್ಧನು ಹಾಗೂ ಅವರು (ಅವನೊಂದಿಗೆ) ಪಾಲುಗೊಳಿಸುವ ಎಲ್ಲವುಗಳಿಗಿಂತ ತುಂಬಾ ಉನ್ನತನಾಗಿರುವನು.

68. ಅಂತಿಮ ಕಹಳೆ ಊದಲಾದಾಗ ಆಕಾಶಗಳಲ್ಲಿ ಹಾಗೂ ಭೂಮಿಯಲ್ಲಿರುವ ಪ್ರತಿಯೊಬ್ಬನೂ ಪ್ರಜ್ಞಾಹೀನನಾಗಿ ಬಿಡುವನು – ಅಲ್ಲಾಹನಿಚ್ಛಿಸಿದವನ ಹೊರತು. ಮತ್ತೊಮ್ಮೆ ಕಹಳೆ ಊದಲಾದಾಗ ಅವರೆಲ್ಲರೂ ಎದ್ದು ನಿಂತು (ಅಚ್ಚರಿಯಿಂದ) ನೋಡ ತೊಡಗುವರು.

69. ಮತ್ತು ಭೂಮಿಯು ತನ್ನ ಒಡೆಯನ ಪ್ರಕಾಶದಿಂದ ಬೆಳಗಿ ಬಿಡುವುದು ಹಾಗೂ (ಕರ್ಮಗಳ) ಗ್ರಂಥವನ್ನು ತೆರೆದಿಡಲಾಗುವುದು ಮತ್ತು ದೂತರನ್ನೂ ಸಾಕ್ಷಿಗಳನ್ನೂ ಮುಂದೆ ತರಲಾಗುವುದು ಹಾಗೂ ಅವರ (ಜನರ) ನಡುವೆ ನ್ಯಾಯೋಚಿತವಾಗಿ ತೀರ್ಪು ನೀಡಲಾಗುವುದು. ಅವರ ಮೇಲೆ ಕಿಂಚಿತ್ತೂ ಅನ್ಯಾಯವಾಗದು.

70. (ಅಂದು) ಪ್ರತಿಯೊಬ್ಬನಿಗೂ ಅವನು ಮಾಡಿದ ಕರ್ಮಗಳ ಪ್ರತಿಫಲವು ಸಿಗುವುದು. ಅವರು ಏನೆಲ್ಲಾ ಮಾಡುತ್ತಿದ್ದರೆಂಬುದನ್ನು ಅವನು ಚೆನ್ನಾಗಿ ಅರಿತಿರುವನು.

71. (ಅಂದು) ಧಿಕ್ಕಾರಿಗಳನ್ನು ದಂಡು ದಂಡುಗಳಾಗಿ ಅಟ್ಟಿಸಿಕೊಂಡು ನರಕದೆಡೆಗೆ ಸಾಗಿಸಲಾಗುವುದು. ಅವರು ಅಲ್ಲಿಗೆ ತಲುಪಿದಾಗ ನರಕದ ಬಾಗಿಲುಗಳನ್ನು ತೆರೆದು ಬಿಡಲಾಗುವುದು. ಆಗ ಅಲ್ಲಿನ (ನರಕದ) ಪಾಲಕರು ಅವರೊಡನೆ, ‘‘ನಿಮ್ಮ ಒಡೆಯನ ವಚನಗಳನ್ನು ನಿಮಗೆ ಓದಿ ಕೇಳಿಸುವ ಮತ್ತು ಈ ದಿನವನ್ನು ಎದುರಿಸಲಿಕ್ಕಿದೆ ಎಂದು ನಿಮ್ಮನ್ನು ಎಚ್ಚರಿಸುವ ದೂತರು ಯಾರೂ ನಿಮ್ಮ ಬಳಿಗೆ ಬಂದಿರಲಿಲ್ಲವೇ?’’ ಎಂದು ಕೇಳುವರು. ಅವರು ‘‘ಖಂಡಿತ ಬಂದಿದ್ದರು’’ ಎನ್ನುವರು. ಆದರೆ, ಅದಾಗಲೇ ಧಿಕ್ಕಾರಿಗಳ ವಿರುದ್ಧ ಶಿಕ್ಷೆಯ ಆದೇಶವು ಜಾರಿಯಾಗಿರುವುದು.

72. ಅವರೊಡನೆ, ‘‘ನರಕದ ಬಾಗಿಲುಗಳೊಳಗೆ ಪ್ರವೇಶಿಸಿ, ಶಾಶ್ವತವಾಗಿ ಅದರೊಳಗೆ ವಾಸಿಸಿರಿ’’ ಎನ್ನಲಾಗುವುದು. ಹೀಗೆ, ಅಹಂಕಾರಿಗಳ ಅಂತಿಮ ನೆಲೆಯು ತೀರಾ ಕೆಟ್ಟದಾಗಿರುವುದು.

73. ತಮ್ಮ ಒಡೆಯನಿಗೆ ನಿಷ್ಠರಾಗಿದ್ದವರನ್ನು ದಂಡು ದಂಡುಗಳಾಗಿ ಸ್ವರ್ಗದೆಡೆಗೆ ಕರೆದೊಯ್ಯಲಾಗುವುದು. ಅವರು ಅಲ್ಲಿಗೆ ತಲುಪಿದಾಗ, ಅದರ ಬಾಗಿಲುಗಳನ್ನು ತೆರೆಯಲಾಗುವುದು ಮತ್ತು ಅದರ ಪಾಲಕರು ಅವರೊಡನೆ ಹೇಳುವರು; ‘‘ನಿಮಗೆ ಶಾಂತಿ ಸಿಗಲಿ. ನೀವು ಸಜ್ಜನರು. ಶಾಶ್ವತವಾಗಿ ಇದರೊಳಗೆ ಪ್ರವೇಶಿಸಿರಿ’’.

74. ಅವರು ಹೇಳುವರು; ಪ್ರಶಂಸೆಗಳೆಲ್ಲಾ, ನಮಗೆ ನೀಡಿದ ತನ್ನ ವಾಗ್ದಾನವನ್ನು ಈಡೇರಿಸಿದ ಹಾಗೂ ನಮ್ಮನ್ನು ಭೂಮಿಯ ಉತ್ತರಾಧಿಕಾರಿಗಳಾಗಿಸಿದ ಅಲ್ಲಾಹನಿಗೆ ಸಲ್ಲಲಿ. ನಾವೀಗ ಸ್ವರ್ಗದಲ್ಲಿ ನಾವಿಚ್ಛಿಸುವಲ್ಲಿ ನೆಲೆಸಬಹುದು. ಎಷ್ಟೊಂದು ಚೆನ್ನಾಗಿದೆ ಸತ್ಕರ್ಮಿಗಳ ಪ್ರತಿಫಲ!

75. ಮತ್ತು ನೀವು ಕಾಣುವಿರಿ, ಮಲಕ್‌ಗಳು ವಿಶ್ವ ಸಿಂಹಾಸನದ ಸುತ್ತ ಸಾಲುಗಟ್ಟಿಕೊಂಡು, ತಮ್ಮ ಒಡೆಯನನ್ನು ಪ್ರಶಂಸಿಸುತ್ತಾ ಅವನ ಪಾವಿತ್ರವನ್ನು ಜಪಿಸುತ್ತಿರುವರು. ಅವರ (ಜನರ) ನಡುವೆ ಅಂದು ನ್ಯಾಯೋಚಿತವಾಗಿ ತೀರ್ಪು ನೀಡಲಾಗುವುದು ಮತ್ತು ಹೇಳಲಾಗುವುದು; ‘‘ಎಲ್ಲ ಪ್ರಶಂಸೆಗಳು ಸರ್ವಲೋಕಗಳ ಒಡೆಯನಾದ ಅಲ್ಲಾಹನಿಗೆ ಮೀಸಲು’’.