44. Ad Dukhan

44. ಅದ್ದುಖಾನ್ (ಹೊಗೆ)

ವಚನಗಳು – 59, ಮಕ್ಕಃ

ಅಲ್ಲಾಹನ ಹೆಸರಿಂದ – ಅವನು ಅಪಾರ ದಯಾಳು, ಕರುಣಾಮಯಿ.

1. ಹಾ ಮೀಮ್.

2. ಸ್ಪಷ್ಟವಾಗಿರುವ ಗ್ರಂಥದಾಣೆ.

3. ನಾವಿದನ್ನು ಒಂದು ಸಮೃದ್ಧ ರಾತ್ರಿಯಲ್ಲಿ ಇಳಿಸಿ ಕೊಟ್ಟಿರುವೆವು. ಖಂಡಿತ ನಾವು ಎಚ್ಚರಿಸುವವರಾಗಿದ್ದೇವೆ.

4. ಇದರಲ್ಲಿ, ಎಲ್ಲ ವಿಷಯಗಳನ್ನು ಯುಕ್ತಿ ಪೂರ್ಣವಾಗಿ ಸ್ಪಷ್ಟಪಡಿಸಲಾಗಿದೆ.

5. ಇದು ನಮ್ಮ ಕಡೆಯಿಂದ ಬಂದಿರುವ ಆದೇಶ. ಖಂಡಿತ, ನಾವೇ ಇದನ್ನು ಕಳಿಸುವವರು.

6. ಇದು ನಿಮ್ಮ ಒಡೆಯನ ಅನುಗ್ರಹ. ಅವನು ಖಂಡಿತ ಎಲ್ಲವನ್ನೂ ಕೇಳುವವನು ಹಾಗೂ ಬಲ್ಲವನಾಗಿದ್ದಾನೆ.

7. ಅವನು ಆಕಾಶಗಳ ಹಾಗೂ ಭೂಮಿಯ ಮತ್ತು ಅವುಗಳ ನಡುವೆ ಇರುವ ಎಲ್ಲವುಗಳ ಒಡೆಯನಾಗಿದ್ದಾನೆ – ನೀವು ಅಚಲ ನಂಬಿಕೆ ಉಳ್ಳವರಾಗಿದ್ದರೆ (ಇದು ನಿಮಗೆ ಮನವರಿಕೆಯಾಗಿರುತ್ತದೆ.).

8. ಅವನ ಹೊರತು ಬೇರೆ ದೇವರಿಲ್ಲ. ಅವನೇ ಜೀವಂತಗೊಳಿಸುವವನು ಮತ್ತು ಮರಣ ನೀಡುವವನು. ಅವನೇ ನಿಮ್ಮೊಡೆಯನು ಮತ್ತು ನಿಮ್ಮ ಹಿಂದಿನ ಪೂರ್ವಜರ ಒಡೆಯನು.

9. ಇಷ್ಟಾಗಿಯೂ ಅವರು ಸಂಶಯಗ್ರಸ್ತರಾಗಿ, (ಸತ್ಯದೊಂದಿಗೆ) ಆಟವಾಡುತ್ತಿದ್ದಾರೆ.

10. ನೀವಿನ್ನು, ಆಕಾಶವು ಒಂದು ಪ್ರತ್ಯಕ್ಷ ಹೊಗೆಯನ್ನು ಹೊರ ತರುವ ದಿನಕ್ಕಾಗಿ ಕಾಯಿರಿ.

11. ಅದು ಮಾನವರನ್ನು ಆವರಿಸುವುದು. ಅದು ಕಠಿಣ ಶಿಕ್ಷೆಯಾಗಿರುವುದು.

12. ನಮ್ಮೊಡೆಯಾ, ನಮ್ಮಿಂದ ಶಿಕ್ಷೆಯನ್ನು ನಿವಾರಿಸು. ನಾವು ವಿಶ್ವಾಸಿಗಳಾಗಿರುವೆವು’’ (ಎಂದು ಅವರು ಮೊರೆ ಇಡುವರು).

13. ಅವರಿಗೆ ಇನ್ನೆಲ್ಲಿಯ ಉಪದೇಶ? ಎಲ್ಲವನ್ನೂ ಸ್ಪಷ್ಟವಾಗಿ ವಿವರಿಸುವ ದೂತರು ಈಗಾಗಲೇ ಅವರ ಬಳಿಗೆ ಬಂದಿದ್ದಾರೆ.

14. ಆದರೆ ಅವರು, ಅವರನ್ನು ಕಡೆಗಣಿಸಿದರು ಹಾಗೂ ಅವರನ್ನು, ಯಾರಿಂದಲೋ ಕಲಿತು ಬರುವ ಹುಚ್ಚನೆಂದು ಕರೆದರು.

15. ನಾವು ಸ್ವಲ್ಪ ಮಟ್ಟಿಗೆ ಶಿಕ್ಷೆಯನ್ನು ತೊಲಗಿಸುವೆವು. ಆದರೆ ನೀವು ಖಂಡಿತ (ಹಳೆಯ ಚಾಳಿಗೆ) ಮರಳುವಿರಿ.

16. ನಾವು ನಿಮ್ಮನ್ನು ಕಠೋರವಾಗಿ ಹಿಡಿಯುವ ದಿನ, ನಾವು ಖಂಡಿತ ಪ್ರತೀಕಾರ ತೀರಿಸುವೆವು.

17. ಅವರಿಗಿಂತ ಹಿಂದೆ ನಾವು ಫಿರ್‌ಔನ್‌ನ ಜನಾಂಗವನ್ನು ಪರೀಕ್ಷಿಸಿರುವೆವು. ಅವರ ಬಳಿಗೆ ಗೌರವಾನ್ವಿತ ದೂತರು ಬಂದಿದ್ದರು.

18. (ಅವರು ಹೇಳಿದ್ದರು;) ಅಲ್ಲಾಹನ ದಾಸರನ್ನು ನನ್ನ ವಶಕ್ಕೆ ಒಪ್ಪಿಸಿರಿ. ನಿಸ್ಸಂದೇಹವಾಗಿಯೂ ನಾನು ವಿಶ್ವಾಸಾರ್ಹ ದೂತನಾಗಿದ್ದೇನೆ.

 19. ಅಲ್ಲಾಹನೆದುರು ವಿದ್ರೋಹ ತೋರಬೇಡಿ. ನಾನು ಸ್ಪಷ್ಟ ಪ್ರಮಾಣದೊಂದಿಗೆ ನಿಮ್ಮ ಬಳಿಗೆ ಬಂದಿರುವೆನು.

20. ಮತ್ತು ನೀವು ನನ್ನನ್ನು ಕಲ್ಲೆಸೆದು ಕೊಲ್ಲುವ ವಿರುದ್ಧ ನಾನು ನನ್ನೊಡೆಯನೂ ನಿಮ್ಮೊಡೆಯನೂ ಆಗಿರುವಾತನ ರಕ್ಷಣೆಯನ್ನು ಕೋರುತ್ತೇನೆ.

21. ನೀವು ನನ್ನನ್ನು ನಂಬುವುದಿಲ್ಲವೆಂದಾದರೆ ನನ್ನಿಂದ ದೂರ ಉಳಿಯಿರಿ.

22. ಕೊನೆಗೆ ಅವರು (ದೂತರು) ‘‘ಇವರೊಂದು ಅಪರಾಧಿ ಜನಾಂಗವಾಗಿದ್ದಾರೆ’’ ಎಂದು ತಮ್ಮ ಒಡೆಯನಿಗೆ ಮೊರೆ ಇಟ್ಟರು.

23. (ಅಲ್ಲಾಹನು ಆದೇಶಿಸಿದನು;) ರಾತ್ರಿಯ ವೇಳೆ ನೀವು ನಮ್ಮ ದಾಸರನ್ನು ಕರೆದುಕೊಂಡು ಹೋಗಿರಿ. ನಿಮ್ಮನ್ನು ಖಂಡಿತ ಹಿಂಬಾಲಿಸಲಾಗುವುದು.

 

24. ಸಮುದ್ರವು ಪ್ರಶಾಂತವಾಗಿರುವ ಸ್ಥಿತಿಯಲ್ಲೇ ನೀವು ಅದನ್ನು ದಾಟಿ ಹೋಗಿರಿ. ಅವರು (ಶತ್ರುಗಳು) ಖಂಡಿತ ಮುಳುಗಿ ಹೋಗುವರು.

25. ಕೊನೆಗೆ ಅವರು (ಶತ್ರುಗಳು) ಬಿಟ್ಟು ಹೋದರು; ಅದೆಷ್ಟು ತೋಟಗಳನ್ನು ಹಾಗೂ ಚಿಲುಮೆಗಳನ್ನು!

26. ಮತ್ತು ಹೊಲಗಳನ್ನು ಹಾಗೂ ಭವ್ಯ ಮನೆಗಳನ್ನು!

27. ಮತ್ತು ತಾವು ಭೋಗಿಸುತ್ತಿದ್ದ ಕೊಡುಗೆಗಳನ್ನು!

28. ಹೀಗೆ, ನಾವು ಬೇರೊಂದು ಜನಾಂಗದವರನ್ನು ಅವರ ಉತ್ತರಾಧಿಕಾರಿಗಳಾಗಿಸಿದೆವು.

29. ಅವರಿಗಾಗಿ ಆಕಾಶವಾಗಲಿ ಭೂಮಿಯಾಗಲಿ ರೋದಿಸಲಿಲ್ಲ. ಅವರಿಗೆ ಹೆಚ್ಚಿನ ಕಾಲಾವಕಾಶವೂ ಸಿಗಲಿಲ್ಲ.

30. ನಾವು ಇಸ್ರಾಈಲರ ಸಂತತಿಯನ್ನು ಅಪಮಾನಕಾರಿ ಯಾತನೆಯಿಂದ ವಿಮೋಚಿಸಿದೆವು.

31. ಫಿರ್‌ಔನನಿಂದ (ಅವರನ್ನು ರಕ್ಷಿಸಿದೆವು). ಅವನು ಅತಿರೇಕವೆಸಗಿದ ವಿದ್ರೋಹಿಯಾಗಿದ್ದನು.

32. ನಾವು ಜ್ಞಾನದ ಆಧಾರದಲ್ಲಿ, ಎಲ್ಲ ಲೋಕಗಳವರ ಪೈಕಿ ಅವರನ್ನು ಆರಿಸಿಕೊಂಡಿದ್ದೆವು.

33. ಮತ್ತು ನಾವು ಅವರಿಗೆ ಪುರಾವೆಗಳನ್ನು ನೀಡಿದ್ದೆವು. ಅವುಗಳಲ್ಲಿ ಸ್ಪಷ್ಟ ಪರೀಕ್ಷೆ ಇತ್ತು.

34. ಅವರು ಖಂಡಿತ ಹೇಳುತ್ತಾರೆ;

35. ‘‘ಈ ನಮ್ಮ ಪ್ರಥಮ ಮರಣವೇ ಅಂತಿಮ. ನಮ್ಮನ್ನು ಮತ್ತೆ ಜೀವಂತ ಗೊಳಿಸಲಾಗುವುದಿಲ್ಲ’’.

36. ‘‘ನೀವು ಸತ್ಯವಂತರಾಗಿದ್ದರೆ, ನಮ್ಮ ಪೂರ್ವಜರನ್ನು (ಜೀವಂತಗೊಳಿಸಿ) ತನ್ನಿರಿ’’.

37. ಅವರು ಉತ್ತಮರೋ ಅಥವಾ ತುಬ್ಬಅ್ ಜನಾಂಗದವರು ಹಾಗೂ ಅವರಿಗಿಂತ ಹಿಂದೆ ಇದ್ದವರು ಉತ್ತಮರೋ? ನಾವು ಅವರನ್ನು ನಾಶ ಮಾಡಿದೆವು. ಅವರು ಅಪರಾಧಿಗಳಾಗಿದ್ದರು.

38. ಆಕಾಶಗಳನ್ನು ಹಾಗೂ ಭೂಮಿಯನ್ನು ಮತ್ತು ಅವುಗಳ ನಡುವೆ ಇರುವ ಎಲ್ಲವನ್ನೂ ನಾವೇನೂ ಮೋಜಿಗಾಗಿ ಸೃಷ್ಟಿಸಿಲ್ಲ.

39. ಅವುಗಳನ್ನು ನಾವು ನ್ಯಾಯೋಚಿತವಾಗಿಯೇ ಸೃಷ್ಟಿಸಿರುವೆವು. ಆದರೆ ಅವರಲ್ಲಿ ಹೆಚ್ಚಿನವರು ತಿಳಿದಿಲ್ಲ.

40. ಖಂಡಿತವಾಗಿಯೂ, ಅಂತಿಮ ತೀರ್ಪಿನ ದಿನವೇ ಅವರೆಲ್ಲರಿಗಿರುವ ನಿಶ್ಚಿತ ಅವಧಿಯಾಗಿದೆ.

41. ಆ ದಿನ ಯಾವ ಮಿತ್ರನೂ ತನ್ನ ಮಿತ್ರನಿಗೆ ಕಿಂಚಿತ್ತೂ ನೆರವಾಗಲಾರನು ಮತ್ತು ಅವರಿಗೆ ಸಹಾಯ ಸಿಗಲಾರದು –

42. – ಅಲ್ಲಾಹನೇ ಕೃಪೆ ತೋರಿದವರ ಹೊರತು. ಅವನು ಖಂಡಿತ, ಮಹಾ ಪ್ರಬಲನೂ ಕರುಣಾಮಯಿಯೂ ಆಗಿದ್ದಾನೆ.

43. ಖಂಡಿತವಾಗಿಯೂ, ಝಕ್ಕೂಮ್ ಮರ,

44. ಅದುವೇ ಪಾಪಿಗಳ ಆಹಾರವಾಗಿರುವುದು.

45. ಅದು ಹೊಟ್ಟೆಗಳೊಳಗೆ, ಕರಗಿದ ತಾಮ್ರದಂತೆ ಕುದಿಯುತ್ತಿರುವುದು.

46. ತೀವ್ರವಾಗಿ ಕುದಿಯುವ ನೀರಿನಂತೆ.

47. ಹಿಡಿಯಿರಿ ಅವನನ್ನು ಮತ್ತು ನರಕದ ಮಧ್ಯಭಾಗದವರೆಗೂ ಎಳೆದುಕೊಂಡು ಹೋಗಿರಿ.

48. ಮತ್ತು ಕುದಿಯುವ ನರಕದ ಭಾಗವನ್ನು ಅವನ ತಲೆಗೆ ಹಾಕಿರಿ.

49. ಸವಿ! ನೀನು ಭಾರೀ ಪ್ರಬಲ ಹಾಗೂ ಗೌರವಾನ್ವಿತನಾಗಿ ಮೆರೆಯುತ್ತಿದ್ದೆ.

50. ನೀವು ಸಂಶಯಿಸುತ್ತಿದ್ದುದು ಇದನ್ನೇ.

51. ಧರ್ಮ ನಿಷ್ಠರು ಅಂದು ಪ್ರಶಾಂತ ನೆಲೆಯಲ್ಲಿರುವರು.

52. ಸ್ವರ್ಗ ತೋಟಗಳಲ್ಲಿ ಮತ್ತು ಚಿಲುಮೆಗಳಲ್ಲಿ.

53. ಅವರು ಶುಭ್ರ ರೇಶ್ಮೆ ಹಾಗೂ ಅಲಂಕೃತ ರೇಶ್ಮೆಯ ಉಡುಗೆಗಳನ್ನು ಧರಿಸಿ ಪರಸ್ಪರರ ಮುಂದಿರುವರು.

54. ಹೀಗೆಯೇ ಇರುವುದು. ವಿಶಾಲ ಕಣ್ಣಿನ ಹೂರ್‌ಗಳನ್ನು ನಾವು ಅವರ ಜೊತೆಗಳಾಗಿಸುವೆವು.

55. ಅವರು ನೆಮ್ಮದಿಯಿಂದ ಎಲ್ಲ ಬಗೆಯ ಹಣ್ಣುಗಳನ್ನು ತರಿಸುವರು.

56. (ಇಹಲೋಕದ) ಪ್ರಥಮ ಮರಣದ ಹೊರತು, ಅಲ್ಲಿ ಅವರು ಮರಣವನ್ನು ಎದುರಿಸಲಾರರು. ಅವನು ಅವರನ್ನು ನರಕದ ಶಿಕ್ಷೆಯಿಂದ ರಕ್ಷಿಸಿರುವನು.

57. ಇದು ನಿಮ್ಮ ಒಡೆಯನ ಅನುಗ್ರಹ. ಇದು ನಿಜಕ್ಕೂ ಮಹಾ ವಿಜಯವಾಗಿದೆ.

58. ನಾವಿದನ್ನು ನಿಮ್ಮ ಭಾಷೆಯಲ್ಲಿ ಸುಲಭಗೊಳಿಸಿರುವೆವು. ಅವರು ಉಪದೇಶ ಸ್ವೀಕರಿಸಲೆಂದು.

59. ನೀವೀಗ ಕಾಯಿರಿ. ಅವರೂ ಖಂಡಿತ ಕಾಯುತ್ತಿದ್ದಾರೆ.