2. ಮತ್ತು ಸತ್ಯದಲ್ಲಿ ನಂಬಿಕೆ ಇಟ್ಟು ಸತ್ಕರ್ಮಗಳನ್ನು ಮಾಡಿದವರು ಹಾಗೂ ಮುಹಮ್ಮದರಿಗೆ ಇಳಿಸಿ ಕೊಡಲಾಗಿರುವ ಸಂದೇಶವು ತಮ್ಮ ಒಡೆಯನ ಕಡೆಯಿಂದ (ಬಂದ) ಸತ್ಯವೆಂದು ನಂಬಿದವರು – ಅವರ ಪಾಪಗಳನ್ನು ಅವನು (ಅಲ್ಲಾಹನು) ಪರಿಹರಿಸಿದನು ಮತ್ತು ಅವರ ಸ್ಥಿತಿಯನ್ನು ಸುಧಾರಿಸಿದನು.
3. ಏಕೆಂದರೆ, ಧಿಕ್ಕಾರಿಗಳು ಮಿಥ್ಯವನ್ನು ಅನುಸರಿಸಿದರು ಹಾಗೂ ವಿಶ್ವಾಸಿಗಳು ತಮ್ಮ ಒಡೆಯನ ಕಡೆಯಿಂದ ಬಂದ ಸತ್ಯವನ್ನು ಅನುಸರಿಸಿದರು. ಅಲ್ಲಾಹನು ಈ ರೀತಿ ಮಾನವರಿಗಾಗಿ ಉದಾಹರಣೆಗಳನ್ನು ಮುಂದಿಡುತ್ತಾನೆ.
4. (ಯುದ್ಧದಲ್ಲಿ) ನೀವು ಧಿಕ್ಕಾರಿಗಳನ್ನು ಎದುರಿಸಿದಾಗ, ಕೊರಳುಗಳನ್ನು ಕತ್ತರಿಸಿರಿ. ಅವರನ್ನು ಚೆನ್ನಾಗಿ ಸದೆಬಡಿದ ಬಳಿಕ (ಉಳಿದವರನ್ನು) ಬಿಗಿಯಾಗಿ ಕಟ್ಟಿ ಹಾಕಿರಿ ಆ ಬಳಿಕ ನೀವು (ಅವರ ಮೇಲೆ) ಔದಾರ್ಯ ತೋರಬಹುದು ಅಥವಾ ಪರಿಹಾರ ಪಡೆಯಬಹುದು. ಯುದ್ಧವು ಮುಗಿಯುವ ತನಕ (ಪಾಲಿಸಬೇಕಾದ ನಿಯಮ) ಇದು. ಅಲ್ಲಾಹನು ಬಯಸಿದ್ದರೆ, ಅವರ ವಿರುದ್ಧ ಪ್ರತೀಕಾರ ತೀರಿಸುತ್ತಿದ್ದನು. ಆದರೆ ಅವನು ನಿಮ್ಮಲ್ಲಿ ಕೆಲವರನ್ನು ಮತ್ತೆ ಕೆಲವರ ಮೂಲಕ ಪರೀಕ್ಷಿಸ ಬಯಸುತ್ತಾನೆ. ಅಲ್ಲಾಹನ ಮಾರ್ಗದಲ್ಲಿ ಹತರಾದವರ ಕರ್ಮಗಳು ವ್ಯರ್ಥವಾಗಲಾರವು.
5. ಅಲ್ಲಾಹನು ಅವರಿಗೆ ದಾರಿ ತೋರಿಸುವನು ಮತ್ತು ಅವರ ಸ್ಥಿತಿಯನ್ನು ಸುಧಾರಿಸುವನು.
6. ಮತ್ತು ಅವನು ಅವರಿಗೆ ಪರಿಚಯಿಸಿರುವ ಸ್ವರ್ಗದೊಳಗೆ ಅವರನ್ನು ಸೇರಿಸುವನು.
7. ವಿಶ್ವಾಸಿಗಳೇ, ನೀವು ಅಲ್ಲಾಹನಿಗೆ ನೆರವಾದರೆ ಅಲ್ಲಾಹನು ನಿಮಗೆ ನೆರವಾಗುವನು ಹಾಗೂ ನಿಮ್ಮ ಹೆಜ್ಜೆಗಳನ್ನು ಸ್ಥಿರಗೊಳಿಸುವನು.
8. ಧಿಕ್ಕರಿಸಿದವರಿಗೆ ವಿನಾಶವಿದೆ ಮತ್ತು (ಅವನು) ಅವರ ಕರ್ಮಗಳನ್ನೆಲ್ಲಾ ವ್ಯರ್ಥಗೊಳಿಸಿ ಬಿಡುವನು.
9. ಏಕೆಂದರೆ, ಅಲ್ಲಾಹನು ಇಳಿಸಿಕೊಟ್ಟ ಸಂದೇಶದ ಕುರಿತು ಅವರು ಜಿಗುಪ್ಸೆ ತೋರಿದರು ಮತ್ತು (ಅವನು) ಅವರ ಕರ್ಮಗಳನ್ನು ನಿರ್ನಾಮಗೊಳಿಸಿಬಿಟ್ಟನು.
10. ಅವರೇನು, ತಮಗಿಂತ ಹಿಂದಿನವರ ಗತಿ ಏನಾಯಿತೆಂಬುದನ್ನು ಕಾಣಲು, ಭೂಮಿಯಲ್ಲಿ ತಿರುಗಾಡುವುದಿಲ್ಲವೇ? ಅಲ್ಲಾಹನು ಅವರ ಮೇಲೆ ವಿನಾಶವನ್ನು ಎರಗಿಸಿದನು. ಧಿಕ್ಕಾರಿಗಳಿಗೆ ಹೀಗೆಯೇ ಆಗಲಿದೆ.
11. ಏಕೆಂದರೆ, ಅಲ್ಲಾಹನು ವಿಶ್ವಾಸಿಗಳ ಪೋಷಕನಾಗಿರುತ್ತಾನೆ ಮತ್ತು ಧಿಕ್ಕಾರಿಗಳಿಗೆ ಯಾರೂ ಪೋಷಕರಿಲ್ಲ.
12. ವಿಶ್ವಾಸಿಗಳಾಗಿದ್ದು ಸತ್ಕರ್ಮಗಳನ್ನು ಮಾಡುತ್ತಿದ್ದವರನ್ನು ಅಲ್ಲಾಹನು ಖಂಡಿತವಾಗಿಯೂ, ತಳದಲ್ಲಿ ನದಿಗಳು ಹರಿಯುತ್ತಿರುವ ಸ್ವರ್ಗ ತೋಟಗಳೊಳಗೆ ಸೇರಿಸುವನು. ಧಿಕ್ಕಾರಿಗಳು ಮೋಜು ಮಾಡುತ್ತಿದ್ದಾರೆ ಮತ್ತು ಜಾನುವಾರುಗಳು ತಿಂದಂತೆ ತಿನ್ನುತ್ತಿದ್ದಾರೆ. ನರಕವೇ ಅವರ ನೆಲೆಯಾಗಿರುವುದು.
13. ನಿಮ್ಮನ್ನು ಹೊರಹಾಕಿದ ನಿಮ್ಮ ನಾಡಿಗಿಂತ ಬಲಿಷ್ಠವಾಗಿದ್ದ ಅದೆಷ್ಟೋ ನಾಡುಗಳಿದ್ದವು. ನಾವು ಅವರನ್ನು (ಆ ನಾಡುಗಳ ಜನರನ್ನು) ನಾಶ ಮಾಡಿದೆವು. ಅವರಿಗೆ ನೆರವಾಗುವವರು ಯಾರೂ ಇರಲಿಲ್ಲ.
14. ತನ್ನ ಒಡೆಯನ ಕಡೆಯಿಂದ (ತೋರಲಾದ) ಸ್ಪಷ್ಟವಾದ ಮಾರ್ಗದಲ್ಲಿರುವವನು, ಯಾರಿಗೆ ತನ್ನ ದುಷ್ಟ ಕರ್ಮಗಳನ್ನು ಚಂದಗಾಣಿಸಲಾಗಿದೆಯೋ ಅವನಂತಾಗಬಲ್ಲನೇ? ಅವರಂತು ತಮ್ಮ ಸ್ವೇಚ್ಛೆಗಳನ್ನಷ್ಟೇ ಅನುಸರಿಸುತ್ತಾರೆ.
15. ಧರ್ಮನಿಷ್ಠರಿಗೆ ವಾಗ್ದಾನ ಮಾಡಲಾಗಿರುವ ಸ್ವರ್ಗವು (ಹೀಗಿರುತ್ತದೆ); ಅದರಲ್ಲಿ ಎಂದೂ ಮಲಿನವಾಗದ ನೀರಿರುವ ನದಿಗಳಿರುವವು ಹಾಗೂ ರುಚಿ ಬದಲಾಗದ ಹಾಲಿನ ನದಿಗಳು, ಕುಡಿಯುವವರಿಗೆ ತುಂಬಾ ಸ್ವಾದಿಷ್ಟವಾಗಿರುವ ಮದಿರೆಯ ನದಿಗಳು ಮತ್ತು ಶುದ್ಧ ಜೇನಿನ ನದಿಗಳಿರುವವು. ಅಲ್ಲಿ ಅವರಿಗಾಗಿ ಎಲ್ಲ ಬಗೆಯ ಫಲಗಳಿರುವವು ಮತ್ತು ಅವರ ಒಡೆಯನ ಕಡೆಯಿಂದ ಕ್ಷಮಾದಾನ ಸಿಗುವುದು. ಇಂಥವರು (ಸ್ವರ್ಗವಾಸಿಗಳು), ಸದಾಕಾಲ ನರಕದಲ್ಲೇ ಇರುವ ಹಾಗೂ ಕರುಳುಗಳನ್ನು ಚೂರು ಚೂರಾಗಿಸುವಂತಹ ಕುದಿಯುವ ನೀರನ್ನು ಕುಡಿಸಲಾಗುವ ವ್ಯಕ್ತಿಗೆ ಸಮನಾಗಬಲ್ಲರೇ?
16. (ದೂತರೇ,) ಅವರಲ್ಲಿ ಕೆಲವರು, ನಿಮ್ಮ ಮಾತನ್ನು ಆಲಿಸುತ್ತಾರೆ. ತರುವಾಯ ನಿಮ್ಮ ಬಳಿಯಿಂದ ಹೊರಟು ಹೋದ ಬಳಿಕ, ಜ್ಞಾನ ನೀಡಲಾಗಿರುವವರೊಡನೆ, (ಏನನ್ನೂ ಕೇಳದವರಂತೆ) ‘‘ಆತ ಈಗ ತಾನೇ ಹೇಳಿದ್ದೇನನ್ನು?’’ ಎಂದು ಕೇಳುತ್ತಾರೆ. ಅಲ್ಲಾಹನು ಅಂಥವರ ಮನಸ್ಸುಗಳಿಗೆ ಮುದ್ರೆ ಒತ್ತಿರುತ್ತಾನೆ ಮತ್ತು ಅವರು ತಮ್ಮ ಸ್ವೇಚ್ಛೆಯನ್ನೇ ಅನುಸರಿಸುತ್ತಾರೆ.
17. ಸನ್ಮಾರ್ಗವನ್ನು ಅನುಸರಿಸುವವರಿಗೆ ಅಲ್ಲಾಹನು ಇನ್ನಷ್ಟು ಮಾರ್ಗದರ್ಶನ ನೀಡುತ್ತಾನೆ ಮತ್ತು ಅವರಿಗೆ ಧರ್ಮನಿಷ್ಠೆಯನ್ನೂ ದಯಪಾಲಿಸುತ್ತಾನೆ.
18. ಅವರು ಕಾಯುತ್ತಿರುವುದು ಲೋಕಾಂತ್ಯದ ಕ್ಷಣವು ಹಠಾತ್ತನೆ ತಮ್ಮ ಮೇಲೆ ಬಂದೆರಗುವುದಕ್ಕೆ ತಾನೇ? ಅದರ ಮುನ್ಸೂಚನೆಗಳು ಈಗಾಗಲೇ ಬಂದಿವೆ. ಅದು ಬಂದು ಬಿಟ್ಟ ಬಳಿಕ ಅವರಿಗೆ ಉಪದೇಶ ಸ್ವೀಕರಿಸುವ ಅವಕಾಶವೇ ಎಲ್ಲಿರುವುದು?
19. ನಿಮಗೆ ತಿಳಿದಿರಲಿ. ಆ ಅಲ್ಲಾಹನ ಹೊರತು ಬೇರೆ ದೇವರಿಲ್ಲ. ನೀವು ನಿಮ್ಮ ಹಾಗೂ ಎಲ್ಲ ವಿಶ್ವಾಸಿ ಪುರುಷರ ಹಾಗೂ ವಿಶ್ವಾಸಿ ಸ್ತ್ರೀಯರ ಪರವಾಗಿ ಕ್ಷಮೆ ಬೇಡಿರಿ. ನೀವು ನಡೆದಾಡುವ ಸ್ಥಳಗಳನ್ನೂ ನೀವು ವಿರಮಿಸುವ ಸ್ಥಳಗಳನ್ನೂ ಅಲ್ಲಾಹನು ಚೆನ್ನಾಗಿ ಬಲ್ಲನು.
20. (ದೂತರೇ,) ವಿಶ್ವಾಸಿಗಳಾದವರು, ಒಂದು ಅಧ್ಯಾಯವನ್ನೇಕೆ ಇಳಿಸಲಾಗಿಲ್ಲ ಎಂದು ಕೇಳುತ್ತಾರೆ. ಕೊನೆಗೆ, ಬಹಳ ಸ್ಪಷ್ಟ ಆದೇಶವಿರುವ ಹಾಗೂ ಯುದ್ಧದ ಪ್ರಸ್ತಾಪವಿರುವ ಒಂದು ಅಧ್ಯಾಯವನ್ನು ಇಳಿಸಲಾದಾಗ, ಮನದಲ್ಲಿ ರೋಗವಿರುವವರು, ಮಾರಣಾಂತಿಕ ಮೂರ್ಛೆಗೊಳಗಾದವರು ನೋಡುವಂತೆ ನಿಮ್ಮತ್ತ ನೋಡ ತೊಡಗುತ್ತಾರೆ. ಅವರಿಗೆ ವಿನಾಶ ಕಾದಿದೆ.
21. ಅನುಸರಣೆ ಹಾಗೂ ಸೌಜನ್ಯದ ಮಾತು (ಇದು ಅವರ ಕರ್ತವ್ಯ). ಮತ್ತು ವಿಷಯವು ನಿರ್ಧಾರವಾದ ಬಳಿಕ ಅವರು, ಅಲ್ಲಾಹನ ಜೊತೆಗಿನ ತಮ್ಮ ಕರಾರಿನ ಪಾಲನೆ ಮಾಡಿದ್ದರೆ – ಅವರ ಪಾಲಿಗೆ ಅದುವೇ ಚೆನ್ನಾಗಿರುತ್ತಿತ್ತು.
22. ಇನ್ನು ನೀವು ತಿರುಗಿ ನಿಂತರೆ, ನೀವು ಅಧಿಕಾರಸ್ಥರಾದಾಗ ನೀವು ಭೂಮಿಯಲ್ಲಿ ಅಶಾಂತಿಯನ್ನು ಮೆರೆದು ನಿಮ್ಮ ಬಾಂಧವ್ಯಗಳನ್ನೆಲ್ಲಾ ಮುರಿದು ಬಿಡುವ ಸಾಧ್ಯತೆ ಇಲ್ಲವೇ?
23. ಅವರೇ, ಅಲ್ಲಾಹನ ಶಾಪಕ್ಕೆ ತುತ್ತಾದವರು. ಅವನು ಅವರನ್ನು ಕಿವುಡರಾಗಿಸಿರುವನು ಮತ್ತು ಅವರ ಕಣ್ಣುಗಳನ್ನು ಕುರುಡಾಗಿಸಿರುವನು.
24. ಅವರೇನು, ಕುರ್ಆನಿನ ಕುರಿತು ಚಿಂತನೆ ನಡೆಸುವುದಿಲ್ಲವೇ? ಅವರ ಮನಸ್ಸುಗಳಿಗೇನು ಬೀಗ ಜಡಿದಿದೆಯೇ?
25. ಸನ್ಮಾರ್ಗವು ತಮಗೆ ಸ್ಪಷ್ಟವಾದ ಬಳಿಕ (ಅದರಿಂದ) ಬೆನ್ನು ತಿರುಗಿಸಿ ಹೊರಟವರನ್ನು ಖಂಡಿತವಾಗಿಯೂ ಶೈತಾನನು ವಂಚಿಸಿದನು ಮತ್ತು ಅವರಲ್ಲಿ ಹುಸಿ ನಿರೀಕ್ಷೆಗಳನ್ನು ಬೆಳೆಸಿದನು.
26. ಏಕೆಂದರೆ ಅವರು, ಅಲ್ಲಾಹನು ಇಳಿಸಿ ಕೊಟ್ಟಿರುವ ಸಂದೇಶವನ್ನು (ಕುರ್ಆನನ್ನು) ದ್ವೇಷಿಸುವವರೊಡನೆ, ‘‘ನಾವು ಕೆಲವು ವಿಷಯಗಳಲ್ಲಿ ನಿಮ್ಮ ಆದೇಶ ಪಾಲಿಸುವೆವು’’ ಎಂದು ಹೇಳಿರುವರು. ಅವರ ಗುಪ್ತ ಮಾತುಗಳನ್ನು ಅಲ್ಲಾಹನು ಬಲ್ಲನು.
27. ಮಲಕ್ಗಳು, ಅವರ ಮುಖ ಮತ್ತು ಅವರ ಬೆನ್ನುಗಳಿಗೆ ಹೊಡೆಯುತ್ತಾ ಅವರ ಜೀವವನ್ನು ವಶಪಡಿಸಿಕೊಳ್ಳುವಾಗ (ಅವರ ಸ್ಥಿತಿ) ಹೇಗಿದ್ದೀತು?
28. ಇದೇಕೆಂದರೆ, ಅವರು ಅಲ್ಲಾಹನನ್ನು ಕೋಪಗೊಳಿಸಿದವರನ್ನು ಅನುಸರಿಸಿದರು ಮತ್ತು ಅವನ ಮೆಚ್ಚುಗೆಯು ಅವರಿಗೆ ಅಪ್ರಿಯವಾಗಿತ್ತು. ಅವನು ಅವರ ಕರ್ಮಗಳನ್ನೆಲ್ಲಾ ವ್ಯರ್ಥಗೊಳಿಸಿಬಿಟ್ಟನು.
29. ಮನಸ್ಸುಗಳಲ್ಲಿ ರೋಗವಿರುವವರು, ತಮ್ಮೊಳಗೆ ಅಡಗಿರುವ ದ್ವೇಷವನ್ನು ಅಲ್ಲಾಹನು ಹೊರ ತರಲಾರನೆಂದು ಭಾವಿಸಿದ್ದಾರೆಯೇ?
30. (ದೂತರೇ,) ನಾವು ಬಯಸಿದರೆ, ಅವರನ್ನು ನಿಮಗೆ ತೋರಿಸಿ ಬಿಡುವೆವು. ಆಗ ನೀವು ಅವರ ಮುಖಗಳಿಂದಲೇ ಅವರನ್ನು ಅರಿಯುವಿರಿ ಹಾಗೂ ಅವರ ಮಾತಿನ ಶೈಲಿಯಿಂದ ನೀವು ಅವರನ್ನು ಗುರುತಿಸುವಿರಿ. ಅಲ್ಲಾಹನು ನಿಮ್ಮ ಕರ್ಮಗಳನ್ನು ಬಲ್ಲನು.
31. ನಿಮ್ಮಲ್ಲಿ ಹೋರಾಟಗಾರರು ಯಾರು ಹಾಗೂ ಸಹನಶೀಲರು ಯಾರು ಎಂಬುದು ನಮಗೆ ತಿಳಿಯುವ ತನಕ ನಾವು ನಿಮ್ಮನ್ನು ಪರೀಕ್ಷಿಸುವೆವು ಮತ್ತು ನಾವು ನಿಮ್ಮ ಸ್ಥಿತಿಗತಿಗಳನ್ನು ಪರೀಕ್ಷಿಸುತ್ತಿರುವೆವು.
32. ಸನ್ಮಾರ್ಗವು ತಮಗೆ ಸ್ಪಷ್ಟವಾದ ಬಳಿಕ (ಅದನ್ನು) ಧಿಕ್ಕರಿಸಿದವರು, ಅಲ್ಲಾಹನ ಮಾರ್ಗದಿಂದ (ಜನರನ್ನು) ತಡೆದವರು ಮತ್ತು ದೂತರನ್ನು ವಿರೋಧಿಸಿದವರು, ಅಲ್ಲಾಹನಿಗೆ ಖಂಡಿತ ಯಾವ ಹಾನಿಯನ್ನೂ ಮಾಡಲಾರರು. ಅವನು ಅವರ ಕರ್ಮಗಳನ್ನು ವ್ಯರ್ಥಗೊಳಿಸುವನು.
33. ವಿಶ್ವಾಸಿಗಳೇ, ಅಲ್ಲಾಹನ ಆಜ್ಞಾಪಾಲನೆ ಮಾಡಿರಿ ಹಾಗೂ ದೂತರ ಆಜ್ಞಾಪಾಲನೆ ಮಾಡಿರಿ ಮತ್ತು ನಿಮ್ಮ ಕರ್ಮಗಳನ್ನು ವ್ಯರ್ಥಗೊಳಿಸಬೇಡಿ.
34. (ಸತ್ಯವನ್ನು) ಧಿಕ್ಕರಿಸಿದವರು ಹಾಗೂ ಅಲ್ಲಾಹನ ಮಾರ್ಗದಿಂದ (ಜನರನ್ನು) ತಡೆದವರು ಮತ್ತು ಧಿಕ್ಕಾರಿಗಳಾಗಿಯೇ ಸತ್ತು ಹೋದವರು – ಅಲ್ಲಾಹನು ಅವರನ್ನು ಖಂಡಿತ ಕ್ಷಮಿಸಲಾರನು.
35. ನೀವಿನ್ನು ಎದೆಗುಂದಬೇಡಿ ಹಾಗೂ ಸಂಧಾನಕ್ಕಾಗಿ ಮೊರೆ ಇಡಬೇಡಿ. ನೀವೇ ವಿಜಯಿಗಳಾಗುವಿರಿ. ಅಲ್ಲಾಹನು ನಿಮ್ಮ ಜೊತೆಗಿದ್ದಾನೆ. ಅವನು ನಿಮ್ಮ ಕರ್ಮಗಳನ್ನು (ಅವುಗಳ ಪ್ರತಿಫಲವನ್ನು) ಕಡಿಮೆಗೊಳಿಸಲಾರನು.
36. ಇಹಲೋಕದ ಬದುಕು ಕೇವಲ ಆಟ ಹಾಗೂ ಮೋಜಾಗಿದೆ. ನೀವು ವಿಶ್ವಾಸಿಗಳೂ ಧರ್ಮನಿಷ್ಠರೂ ಆಗಿದ್ದರೆ ಅವನು ನಿಮಗೆ ನಿಮ್ಮ ಪ್ರತಿಫಲವನ್ನು ನೀಡುವನು ಹಾಗೂ ಅವನು ನಿಮ್ಮೊಡನೆ ನಿಮ್ಮ ಸಂಪತ್ತನ್ನು ಕೇಳಲಾರನು.
37. ಅವನು ನಿಮ್ಮೊಡನೆ ಅದನ್ನು (ನಿಮ್ಮ ಸಂಪತ್ತನ್ನು) ಕೇಳಿದರೆ ಮತ್ತು ಬೆನ್ನು ಬಿಡದೆ ಕೇಳುತ್ತಲೇ ಇದ್ದರೆ, ನೀವು ಜಿಪುಣತೆ ತೋರುವಿರಿ ಮತ್ತು ನಿಮ್ಮ ಒಳಗಿನ ದ್ವೇಷವೆಲ್ಲಾ ಪ್ರಕಟವಾಗಿ ಬಿಡುವುದು.
38. ಹೌದು ನೀವು ಅಂಥವರು. ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡಿರೆಂದು ನಿಮಗೆ ಕರೆ ನೀಡಲಾದಾಗ, ನಿಮ್ಮಲ್ಲಿ ಕೆಲವರು ಜಿಪುಣತೆ ತೋರುತ್ತಾರೆ. ನಿಜವಾಗಿ ಜಿಪುಣತೆ ತೋರುವವನು ಸ್ವತಃ ತನ್ನ ವಿರುದ್ಧವೇ ಜಿಪುಣತೆ ತೋರುತ್ತಾನೆ. ಅಲ್ಲಾಹನಂತು ಸಂಪನ್ನನಾಗಿದ್ದಾನೆ ಮತ್ತು ನೀವು ಬಡವರು. ನೀವು ಮುಖ ತಿರುಗಿಸಿಕೊಂಡರೆ, ಅವನು ನಿಮ್ಮ ಬದಲಿಗೆ ಬೇರೊಂದು ಸಮುದಾಯವನ್ನು ಮುಂದೆ ತರುವನು. ಅವರು ನಿಮ್ಮಂತಿರಲಾರರು.