1. ವಿಶ್ವಾಸಿಗಳೇ, ನೀವು ಅಲ್ಲಾಹನನ್ನು ಮತ್ತು ಅವನ ದೂತರನ್ನು ಮೀರಿ ಹೋಗಬೇಡಿ. ಅಲ್ಲಾಹನಿಗೆ ಅಂಜಿರಿ, ಅಲ್ಲಾಹನು ಖಂಡಿತ ಎಲ್ಲವನ್ನೂ ಕೇಳುವವನೂ ಬಲ್ಲವನೂ ಆಗಿದ್ದಾನೆ.
2. ವಿಶ್ವಾಸಿಗಳೇ, ಪ್ರವಾದಿಯ ಮಾತಿಗೆ ಎದುರಾಗಿ ನೀವು ಧ್ವನಿ ಏರಿಸಬೇಡಿ ಮತ್ತು ನೀವು ಪರಸ್ಪರರೊಡನೆ ಧ್ವನಿಯೇರಿಸಿ ಮಾತನಾಡುವಂತೆ ಅವರೆದುರು ಧ್ವನಿಯೇರಿಸಿ ಮಾತನಾಡಬೇಡಿ. (ತಪ್ಪಿದರೆ) ನಿಮಗೆ ಅರಿವೇ ಇಲ್ಲದಂತೆ ನಿಮ್ಮ ಕರ್ಮಗಳು ವ್ಯರ್ಥವಾಗಬಹುದು.
3. ಅಲ್ಲಾಹನ ದೂತರ ಮುಂದೆ ಸೌಮ್ಯ ಧ್ವನಿಯಲ್ಲಿ ಮಾತನಾಡುವವರ ಮನಸ್ಸುಗಳನ್ನು ಅಲ್ಲಾಹನು ಧರ್ಮನಿಷ್ಠೆಯ ವಿಷಯದಲ್ಲಿ ಪರೀಕ್ಷಿಸಿರುವನು. ಅವರಿಗೆ ಕ್ಷಮೆ ಹಾಗೂ ಮಹಾ ಪುರಸ್ಕಾರ ಸಿಗಲಿದೆ.
4. (ದೂತರೇ,) ಕೊಠಡಿಗಳ ಹೊರಗಿನಿಂದ ನಿಮ್ಮನ್ನು ಕೂಗುವವರಲ್ಲಿ ಹೆಚ್ಚಿನವರು ಖಂಡಿತ ಬುದ್ಧಿವಂತರಲ್ಲ.
5. ನೀವು ಹೊರಟು ಅವರೆಡೆಗೆ ಹೋಗುವ ತನಕ ಅವರು ಕಾದಿದ್ದರೆ, ಅದು ಅವರ ಪಾಲಿಗೆ ಉತ್ತಮವಾಗಿತ್ತು. ಅಲ್ಲಾಹನು ಕ್ಷಮಾಶೀಲನೂ ಕರುಣಾಮಯಿಯೂ ಆಗಿದ್ದಾನೆ.
6. ವಿಶ್ವಾಸಿಗಳೇ, ದುಷ್ಟನೊಬ್ಬನು ನಿಮ್ಮ ಬಳಿಗೆ ಒಂದು ಸುದ್ದಿಯನ್ನು ತಂದರೆ ಆ ಕುರಿತು ಸಾಕಷ್ಟು ತನಿಖೆ ನಡೆಸಿರಿ. (ತಪ್ಪಿದರೆ,) ನೀವು ಅರಿವಿಲ್ಲದೆ ಯಾವುದಾದರೂ ಜನಾಂಗಕ್ಕೆ ಹಾನಿ ಮಾಡಿ, ಆ ಬಳಿಕ ನಿಮ್ಮ ಕೃತ್ಯಕ್ಕಾಗಿ ಪಶ್ಚಾತ್ತಾಪ ಪಡಬೇಕಾದೀತು.
7. ನಿಮಗೆ ತಿಳಿದಿರಲಿ, ಅಲ್ಲಾಹನ ದೂತರು ನಿಮ್ಮ ನಡುವೆ ಇದ್ದಾರೆ. ಹೆಚ್ಚಿನ ವಿಷಯಗಳಲ್ಲಿ ಅವರು ನಿಮ್ಮ ಇಚ್ಛೆಯಂತೆ ನಡೆದರೆ, ನೀವೇ ಸಂಕಟಕ್ಕೆ ಸಿಲುಕುವಿರಿ. ಆದರೆ ಅಲ್ಲಾಹನು ವಿಶ್ವಾಸವನ್ನು ನಿಮಗೆ ಪ್ರಿಯವಾಗಿಸಿರುವನು ಹಾಗೂ ಅದನ್ನು ನಿಮ್ಮ ಮನಸ್ಸುಗಳೊಳಗೆ ಅಲಂಕರಿಸಿರುವನು ಮತ್ತು ಅವನು ಧಿಕ್ಕಾರ ಹಾಗೂ ಪಾಪಕೃತ್ಯಗಳನ್ನು ಹಾಗೂ ಅವಿಧೇಯತೆಯನ್ನು ನಿಮಗೆ ಅಪ್ರಿಯವಾಗಿಸಿರುವನು. ಇಂಥವರೇ, ಸನ್ಮಾರ್ಗದಲ್ಲಿರುವವರು.
8. (ಇದು) ಅಲ್ಲಾಹನ ಅನುಗ್ರಹ ಮತ್ತು ಕೊಡುಗೆ. ಅಲ್ಲಾಹನು ಬಲ್ಲವನೂ ಯುಕ್ತಿವಂತನೂ ಆಗಿದ್ದಾನೆ.
9. ವಿಶ್ವಾಸಿಗಳಲ್ಲಿನ ಎರಡು ಗುಂಪುಗಳು ಪರಸ್ಪರ ಜಗಳಾಡಿದರೆ ಅವರ ನಡುವೆ ಸಂಧಾನ ಏರ್ಪಡಿಸಿರಿ. ಇನ್ನು, ಅವರಲ್ಲಿನ ಒಂದು ಗುಂಪು ಇನ್ನೊಂದು ಗುಂಪಿನ ಮೇಲೆ ಅತಿರೇಕವೆಸಗುತ್ತಿದ್ದರೆ. ಅತಿರೇಕ ಎಸಗುತ್ತಿರುವವರು ಅಲ್ಲಾಹನ ಆದೇಶದೆಡೆಗೆ ಮರಳುವ ತನಕವೂ ಅವರ ವಿರುದ್ಧ ನೀವು ಹೋರಾಡಿರಿ. ಕೊನೆಗೆ ಅವರು (ಅಲ್ಲಾಹನ ಆದೇಶದೆಡೆಗೆ) ಮರಳಿದಾಗ, ಆ ಎರಡು ಗುಂಪುಗಳ ನಡುವೆ ನ್ಯಾಯೋಚಿತ ರೀತಿಯಲ್ಲಿ ಸಂಧಾನವನ್ನು ಏರ್ಪಡಿಸಿರಿ. ಮತ್ತು ನೀವು ಸದಾ ನ್ಯಾಯ ಪಾಲಿಸಿರಿ. ಅಲ್ಲಾಹನು ನ್ಯಾಯವಂತರನ್ನು ಖಂಡಿತ ಪ್ರೀತಿಸುತ್ತಾನೆ.
10. ವಿಶ್ವಾಸಿಗಳು ಪರಸ್ಪರ ಸಹೋದರರು. ನೀವು ನಿಮ್ಮ ಇಬ್ಬರು ಸಹೋದರರ ನಡುವೆ ಸಂಧಾನ ಏರ್ಪಡಿಸಿರಿ ಮತ್ತು ಅಲ್ಲಾಹನಿಗೆ ಅಂಜಿರಿ. ನೀವು ಅವನ ಕರುಣೆಗೆ ಪಾತ್ರರಾಗಬಹುದು.
11. ವಿಶ್ವಾಸಿಗಳೇ, (ನಿಮ್ಮಲ್ಲಿನ ಪುರುಷರ) ಒಂದು ಗುಂಪು ಇನ್ನೊಂದು ಗುಂಪನ್ನು ಗೇಲಿ ಮಾಡಬಾರದು. ಏಕೆಂದರೆ, ಅವರು, ಇವರಿಗಿಂತ ಉತ್ತಮರಾಗಿರಬಹುದು. ಹಾಗೆಯೇ, ಸ್ತ್ರೀಯರು ಇತರ ಸ್ತ್ರೀಯರನ್ನು ಗೇಲಿ ಮಾಡಬಾರದು. ಏಕೆಂದರೆ, ಅವರು ಇವರಿಗಿಂತ ಉತ್ತಮರಾಗಿರಬಹುದು. ಇನ್ನು ನೀವು, ಪರಸ್ಪರರ ದೋಷ ಹುಡುಕುತ್ತಿರಬೇಡಿ ಮತ್ತು ಯಾರನ್ನೂ ಅಡ್ಡ ಹೆಸರುಗಳಿಂದ ಕರೆಯಬೇಡಿ. ವಿಶ್ವಾಸಿಗಳಾದ ಬಳಿಕ ದುಷ್ಟ ಕೃತ್ಯಗಳಲ್ಲಿ ಹೆಸರುಗಳಿಸುವುದು ಪಾಪವಾಗಿದೆ. (ತಪ್ಪು ಮಾಡಿ) ಪಶ್ಚಾತ್ತಾಪ ಪಡದವರೇ ಅಕ್ರಮಿಗಳು.
12. ವಿಶ್ವಾಸಿಗಳೇ, ಹೆಚ್ಚಿನ ಸಂಶಯಗಳಿಂದ ದೂರವಿರಿ. ಕೆಲವು ಸಂಶಯಗಳು ಪಾಪಗಳಾಗಿವೆ. ಮತ್ತು ನೀವು ಪರಸ್ಪರ ಬೇಹುಗಾರಿಕೆ ನಡೆಸಬೇಡಿ ಹಾಗೂ ನಿಮ್ಮಲ್ಲಿ ಯಾರೂ ಇನ್ನೊಬ್ಬರನ್ನು ಅವರ ಬೆನ್ನ ಹಿಂದೆ ದೂಷಿಸಬಾರದು. ನಿಮ್ಮಲ್ಲಿ ಯಾರಾದರೂ ತನ್ನ ಮೃತ ಸಹೋದರನ ಮಾಂಸ ತಿನ್ನುವುದನ್ನು ಮೆಚ್ಚುತ್ತಾನೆಯೇ? ಖಂಡಿತ, ಅದು ನಿಮಗೆ ತೀರಾ ಅಪ್ರಿಯವಾಗಿದೆ. ಹಾಗಾದರೆ, ಅಲ್ಲಾಹನಿಗೆ ಅಂಜಿರಿ. ಖಂಡಿತವಾಗಿಯೂ ಅಲ್ಲಾಹನು ಪಶ್ಚಾತ್ತಾಪ ಸ್ವೀಕರಿಸುವವನು ಮತ್ತು ಕರುಣಾಳುವಾಗಿದ್ದಾನೆ.
13. ಮಾನವರೇ, ಖಂಡಿತವಾಗಿಯೂ ನಾವು ನಿಮ್ಮೆಲ್ಲರನ್ನೂ ಒಬ್ಬ ಪುರುಷ ಹಾಗೂ ಒಬ್ಬ ಸ್ತ್ರೀಯಿಂದ ಸೃಷ್ಟಿಸಿರುವೆವು. ತರುವಾಯ, ನೀವು ಪರಸ್ಪರ ಗುರುತಿಸುವಂತಾಗಲು ನಿಮ್ಮನ್ನು (ವಿವಿಧ) ಜನಾಂಗಗಳಾಗಿ ಹಾಗೂ ಪಂಗಡಗಳಾಗಿ ರೂಪಿಸಿರುವೆವು. ಅಲ್ಲಾಹನ ದೃಷ್ಟಿಯಲ್ಲಿ ನಿಮ್ಮ ಪೈಕಿ ಅತ್ಯಧಿಕ ಧರ್ಮನಿಷ್ಠನಾಗಿರುವವನೇ ನಿಮ್ಮಲ್ಲಿನ ಅತ್ಯುತ್ತಮನಾಗಿರುವನು. ಅಲ್ಲಾಹನು ಖಂಡಿತವಾಗಿಯೂ ಬಲ್ಲವನು ಹಾಗೂ ಅರಿವು ಉಳ್ಳವನಾಗಿದ್ದಾನೆ.
14. ಆ ಹಳ್ಳಿಗರು, ‘‘ನಾವು ವಿಶ್ವಾಸಿಗಳಾದೆವು’’ ಎನ್ನುತ್ತಾರೆ. ಹೇಳಿರಿ; ‘‘ನೀವು ವಿಶ್ವಾಸಿಗಳೇನೂ ಆಗಿಲ್ಲ. ನಾವು ಶರಣಾಗಿರುವೆವು ಎಂದಷ್ಟೆ ಹೇಳಿರಿ. ಏಕೆಂದರೆ ವಿಶ್ವಾಸವು ಇನ್ನೂ ನಿಮ್ಮ ಮನಸ್ಸುಗಳನ್ನು ಪ್ರವೇಶಿಸಿಲ್ಲ. ನೀವು ಅಲ್ಲಾಹ್ ಮತ್ತು ಅವನ ದೂತರ ಆದೇಶಗಳನ್ನು ಪಾಲಿಸಿದರೆ, ನಿಮ್ಮ ಕರ್ಮಗಳಲ್ಲಿ ಏನೂ ಕಡಿತವಾಗದು. ಅಲ್ಲಾಹನು ಖಂಡಿತ ಕ್ಷಮಾಶೀಲನೂ ಕರುಣಾಳುವೂ ಆಗಿದ್ದಾನೆ’’.
15. ನಿಜವಾದ ವಿಶ್ವಾಸಿಗಳು, ಅಲ್ಲಾಹನಲ್ಲಿ ಹಾಗೂ ಅವನ ದೂತರಲ್ಲಿ ನಂಬಿಕೆ ಇಟ್ಟ ಬಳಿಕ ಎಂದೂ ಸಂಶಯಪಡುವುದಿಲ್ಲ ಮತ್ತು ಅವರು ತಮ್ಮ ಸಂಪತ್ತುಗಳನ್ನೂ ತಮ್ಮ ಜೀವಗಳನ್ನೂ ತೊಡಗಿಸಿ ಅಲ್ಲಾಹನ ಮಾರ್ಗದಲ್ಲಿ ಹೋರಾಡುತ್ತಾರೆ. ಅವರೇ ಸತ್ಯವಂತರು.
16. ಹೇಳಿರಿ; ನೀವೇನು, ನಿಮ್ಮ ಧಾರ್ಮಿಕತೆಯನ್ನು ಅಲ್ಲಾಹನಿಗೆ ತಿಳಿಸಬಯಸುವಿರಾ? ಅಲ್ಲಾಹನಂತು ಆಕಾಶಗಳಲ್ಲಿ ಹಾಗೂ ಭೂಮಿಯಲ್ಲಿರುವ ಎಲ್ಲವನ್ನೂ ಬಲ್ಲವನಾಗಿದ್ದಾನೆ ಮತ್ತು ಅಲ್ಲಾಹನು ಎಲ್ಲ ವಿಷಯಗಳ ಜ್ಞಾನ ಉಳ್ಳವನಾಗಿದ್ದಾನೆ.
17. (ದೂತರೇ,) ಅವರು, ತಾವು ಮುಸ್ಲಿಮರಾಗಿದ್ದೇವೆಂದು ನಿಮ್ಮ ಮೇಲೆ ಋಣ ಹೊರಿಸುತ್ತಿದ್ದಾರೆ. ಹೇಳಿರಿ; ನೀವು ಮುಸ್ಲಿಮರಾದುದಕ್ಕೆ ನನ್ನ ಮೇಲೇನೂ ಋಣ ಹೊರಿಸಬೇಡಿ. ನೀವು ಸತ್ಯವಂತರಾಗಿದ್ದರೆ, ನಿಮ್ಮನ್ನು ವಿಶ್ವಾಸದೆಡೆಗೆ ಮುನ್ನಡೆಸಿದ್ದಕ್ಕಾಗಿ, ನಿಮ್ಮ ಮೇಲೆ ಅಲ್ಲಾಹನು ತನ್ನ ಋಣವನ್ನು ಹೊರಿಸುತ್ತಾನೆ.
18. ಅಲ್ಲಾಹನು ಆಕಾಶಗಳ ಮತ್ತು ಭೂಮಿಯ ರಹಸ್ಯಗಳನ್ನೆಲ್ಲಾ ಖಂಡಿತ ಬಲ್ಲನು ಮತ್ತು ಅಲ್ಲಾಹನು ನೀವು ಮಾಡುತ್ತಿರುವ ಎಲ್ಲವನ್ನೂ ನೋಡುತ್ತಿದ್ದಾನೆ.