1. (ಲೋಕಾಂತ್ಯದ) ಆ ಕ್ಷಣವು ಸಮೀಪಿಸಿತು ಮತ್ತು ಚಂದ್ರವು ಸೀಳಿಹೋಯಿತು.
2. ಅವರು ಯಾವುದಾದರೂ ಪುರಾವೆಯನ್ನು ಕಂಡಾಗ ಮುಖ ತಿರುಗಿಸಿಕೊಳ್ಳುತ್ತಾರೆ ಮತ್ತು ಇದು ತೀರ ತಾತ್ಕಾಲಿಕ ಜಾದೂಗಾರಿಕೆ ಎನ್ನುತ್ತಾರೆ.
3. ಅವರು (ಸತ್ಯವನ್ನು) ತಿರಸ್ಕರಿಸಿದರು ಮತ್ತು ಸ್ವೇಚ್ಛೆಯನ್ನು ಅನುಸರಿಸಿದರು. ನಿಜವಾಗಿ, ಎಲ್ಲ ವಿಷಯಗಳಿಗೂ ಒಂದು ಕಾಲ ನಿಶ್ಚಿತವಾಗಿರುತ್ತದೆ.
4. ಖಂಡಿತ, ಪಾಠದಾಯಕ ಮಾಹಿತಿಗಳು ಅವರ ಬಳಿಗೆ ಬಂದಿವೆ.
5. ಪರಿಪೂರ್ಣ ಜಾಣ್ಮೆಯ (ಉಪದೇಶವು ತಲುಪಿದೆ). ಆದರೆ ಎಚ್ಚರಿಸುವವರಿಂದ ಅವರಿಗೇನೂ ಲಾಭವಾಗಿಲ್ಲ.
6. (ದೂತರೇ,) ನೀವು ಅವರನ್ನು ಕಡೆಗಣಿಸಿಬಿಡಿರಿ. (ಶೀಘ್ರದಲ್ಲೇ) ಕರೆಯುವವನೊಬ್ಬನು ತೀರಾ ಅಪ್ರಿಯವಾದುದರ ಕಡೆಗೆ (ಅವರನ್ನು) ಕರೆಯುವನು.
7. ಆಗ ಅವರ ದೃಷ್ಟಿಗಳು ತಗ್ಗಿರುವವು. ಅವರು ಚದುರಿದ ಮಿಡತೆಗಳೋ ಎಂಬಂತೆ ಗೋರಿಗಳಿಂದ ಎದ್ದು ಬರುವರು.
8. ಕೂಗುವಾತನೆಡೆಗೆ ಅವರು ಧಾವಿಸುತ್ತಿರುವರು. ಅಂದು ಧಿಕ್ಕಾರಿಯು ಹೇಳುವನು; ಇದು ತುಂಬಾ ಕಠಿಣ ದಿನ.
9. ಅವರಿಗಿಂತ ಹಿಂದೆ ನೂಹ್ರ ಜನಾಂಗವು (ಸತ್ಯವನ್ನು) ತಿರಸ್ಕರಿಸಿತ್ತು. ಅವರು, ನಮ್ಮ ದಾಸರನ್ನು ತಿರಸ್ಕರಿಸಿದ್ದರು ಮತ್ತು ಅವರನ್ನು ಹುಚ್ಚನೆಂದು ಕರೆದರು ಹಾಗೂ ಅವರಿಗೆ ಬೆದರಿಕೆ ಒಡ್ಡಿದರು.
10. ಕೊನೆಗೆ ಅವರು (ನೂಹರು), ನಾನಿದೋ ಸೋತು ಹೋಗಿದ್ದೇನೆ. ಇದೀಗ ನೀನೇ ಪ್ರತೀಕಾರ ತೀರಿಸು ಎಂದು ತಮ್ಮ ಒಡೆಯನಿಗೆ ಮೊರೆ ಇಟ್ಟರು.
11. ನಾವು, ಧಾರಾಳವಾಗಿ ಸುರಿಯುವ ಮಳೆಯ ಮೂಲಕ ಆಕಾಶದ ಬಾಗಿಲುಗಳನ್ನು ತೆರೆದುಬಿಟ್ಟೆವು.
12. ಮತ್ತು ನಾವು ಭೂಮಿಯಿಂದ ಚಿಲುಮೆಗಳನ್ನು ಹರಿಸಿಬಿಟ್ಟೆವು. ಕೊನೆಗೆ, ಮೊದಲೇ ನಿರ್ಧಾರವಾಗಿದ್ದ ಒಂದು ಕಾರ್ಯಕ್ಕಾಗಿ ನೀರು ಸಂಗ್ರಹವಾಯಿತು.
13. ಮತ್ತು ನಾವು ಅವರನ್ನು (ನೂಹರನ್ನು), ಹಲಗೆಗಳು ಹಾಗೂ ಮೊಳೆಗಳಿದ್ದ ವಸ್ತುವಿಗೆ (ಹಡಗಿಗೆ) ಹತ್ತಿಸಿದೆವು.
14. ಅದು ನಮ್ಮ ಕಣ್ಣ ಮುಂದೆಯೇ (ನಮ್ಮ ಕಾವಲಿನಲ್ಲಿ) ಚಲಿಸುತ್ತಿತ್ತು. (ಹೀಗಿತ್ತು) ಧಿಕ್ಕರಿಸಲ್ಪಟ್ಟವನ ಪರವಾಗಿ ತೀರಿಸಲಾದ ಪ್ರತೀಕಾರ.
15. ಮತ್ತು ನಾವು ಅದನ್ನು ಒಂದು ಪುರಾವೆಯಾಗಿ ಉಳಿಸಿದೆವು. ಪಾಠ ಕಲಿಯುವವರು ಯಾರಾದರೂ ಇದ್ದಾರೆಯೇ ?
16. (ನೋಡಿರಿ,) ಹೇಗಿತ್ತು ನನ್ನ ಶಿಕ್ಷೆ ಹಾಗೂ ಎಚ್ಚರಿಕೆ ?
17. ನಾವು ಉಪದೇಶಕ್ಕಾಗಿ ಕುರ್ಆನನ್ನು ಸರಳಗೊಳಿಸಿರುವೆವು. ಯಾರಾದರೂ ಇದ್ದಾರೆಯೇ, ಉಪದೇಶ ಸ್ವೀಕರಿಸುವವರು?
18. ಆದ್ ಜನಾಂಗದವರೂ (ಸತ್ಯವನ್ನು) ತಿರಸ್ಕರಿಸಿದ್ದರು. (ಅವರ ವಿಷಯದಲ್ಲೂ) ಹೇಗಿತ್ತು ನನ್ನ ಶಿಕ್ಷೆ ಹಾಗೂ ಎಚ್ಚರಿಕೆ?
19. ಒಂದು ಅಶುಭ ದಿನದಂದು, ನಾವು ಅವರ ವಿರುದ್ಧ ಪ್ರಚಂಡ ಬಿರುಗಾಳಿಯನ್ನು ಕಳಿಸಿದೆವು. ಅದು ಬೀಸುತ್ತಲೇ ಇತ್ತು.
20. ಅದು ಜನರನ್ನು, ಉರುಳಿ ಬಿದ್ದ ಖರ್ಜೂರ ಗಿಡದ ಬುಡಗಳೆಂಬಂತೆ ಕಿತ್ತೆಸೆಯುತ್ತಿತ್ತು.
21. ಹೇಗಿತ್ತು, ನನ್ನ ಶಿಕ್ಷೆ ಹಾಗೂ ಎಚ್ಚರಿಕೆ?
22. ಉಪದೇಶಕ್ಕಾಗಿ, ನಾವು ಕುರ್ಆನನ್ನು ಸರಳಗೊಳಿಸಿರುವೆವು. ಯಾರಾದರೂ ಇದ್ದಾರೆಯೇ, ಉಪದೇಶ ಸ್ವೀಕರಿಸುವವರು?