4. ಸಮೂದ್ ಮತ್ತು ಆದ್ ಜನಾಂಗದವರು ಆ ಹಠಾತ್ ಸಂಭವವನ್ನು ಅಲ್ಲಗಳೆದರು.
5. ಕೊನೆಗೆ ಸಮೂದರನ್ನು ಸಿಡಿಲಿಗೆ ತುತ್ತಾಗಿಸಿ ನಾಶ ಮಾಡಲಾಯಿತು.
6. ಇನ್ನು, ಆದ್ರನ್ನು ತೀವ್ರ ವೇಗದ ಬಿರುಗಾಳಿಯೊಂದರ ಮೂಲಕ ನಾಶ ಮಾಡಲಾಯಿತು.
7. ಅದನ್ನು ಸತತ ಏಳು ರಾತ್ರಿ ಹಾಗೂ ಎಂಟು ದಿನಗಳ ಕಾಲ ಅವರ ಮೇಲೆ ಹೇರಲಾಯಿತು. ಮತ್ತು ಅಲ್ಲಿದ್ದವರೆಲ್ಲರೂ ಟೊಳ್ಳಾದ ಖರ್ಜೂರದ ಕಾಂಡಗಳೋ ಎಂಬಂತೆ ಸತ್ತು ಬಿದ್ದಿರುವುದು ನಿಮಗೆ ಕಾಣಿಸುತ್ತಿತ್ತು.
8. ಅವರ ಪೈಕಿ ಉಳಿದಿರುವ ಯಾರಾದರೂ ನಿಮಗೆ ಕಾಣಿಸುತ್ತಿದ್ದಾರೆಯೇ?
9. ಫಿರ್ಔನ್ ಹಾಗೂ ಅವನಿಗಿಂತ ಹಿಂದಿನವರು ಮತ್ತು ಬುಡಮೇಲಾದ ನಾಡಿನವರು ಅಪರಾಧಗಳನ್ನು ಎಸಗಿದ್ದರು.
10. ಅವರು ತಮ್ಮ ಒಡೆಯನ (ಅಲ್ಲಾಹನ) ದೂತರ ಆದೇಶಗಳನ್ನು ಮೀರಿ ನಡೆದಾಗ ಅವನು ಅವರನ್ನು ಬಹಳ ಕಠೋರವಾಗಿ ದಂಡಿಸಿದನು
11. ಪ್ರವಾಹವು ಮಿತಿಮೀರಿದಾಗ ನಾವು ನಿಮ್ಮನ್ನು ಹಡಗಿಗೆ ಹತ್ತಿಸಿದೆವು.
12. ಅದನ್ನು ನಿಮ್ಮ ಪಾಲಿಗೆ ಸ್ಮಾರಕವಾಗಿಸಲಿಕ್ಕಾಗಿ ಮತ್ತು ನೆನಪಿಡುವ ಕಿವಿಗಳು ಅದನ್ನು ನೆನಪಿಡಲೆಂದು.
13. ಕಹಳೆಯನ್ನು ಒಂದು ಬಾರಿ ಊದಿದಾಗ,
14. ಭೂಮಿಯನ್ನೂ ಪರ್ವತಗಳನ್ನೂ ಮೇಲಕ್ಕೆತ್ತಲಾಗುವುದು ಮತ್ತು ಅವೆರಡನ್ನೂ ಪುಡಿಗಟ್ಟಿ ಒಮ್ಮೆಗೇ ನೆಲಸಮಗೊಳಿಸಲಾಗುವುದು.
15. ಅಂದು ಸಂಭವಿಸಲಿದೆ, ಆ ನೈಜ ಸಂಭವ.
16. ಆಕಾಶವು ಬಿರಿದು ಬಿಡುವುದು ಮತ್ತು ಅಂದು ಅದು ತೀರಾ ದುರ್ಬಲ ವಾಗಿರುವುದು.
17. ಮಲಕ್ಗಳು ಅದರ ಸುತ್ತಲೂ ಇರುವರು, ಮತ್ತು ಆ ದಿನ ಎಂಟು ಮಂದಿ (ಮಲಕ್ಗಳು) ನಿಮ್ಮೊಡೆಯನ ಪೀಠವನ್ನು ತಮ್ಮ ಮೇಲೆ ಹೊತ್ತಿರುವರು.
18. ಅಂದು ನಿಮ್ಮನ್ನು (ಎಲ್ಲರ ಮುಂದೆ) ಹಾಜರುಪಡಿಸಲಾಗುವುದು ಮತ್ತು ನಿಮ್ಮ ಯಾವ ವಿಷಯವೂ ಗುಪ್ತವಾಗಿ ಉಳಿಯದು.
19. ಕರ್ಮಪತ್ರವನ್ನು ಬಲಗೈಯಲ್ಲಿ ನೀಡಲಾದವನು (ಇತರರೊಡನೆ) ಹೇಳುವನು; ‘‘ಇದೋ ನನ್ನ ಕರ್ಮಪತ್ರವನ್ನು ಓದಿರಿ’’.
20. ‘‘ನಾನು ನನ್ನ ವಿಚಾರಣೆಯನ್ನು ಖಂಡಿತ ಎದುರಿಸಬೇಕಾಗುವುದು ಎಂದು ನಾನು ಮೊದಲೇ ನಂಬಿದ್ದೆ’’.
21. ಅವನು ಧಾರಾಳ ಸುಖಃದಲ್ಲಿರುವವನು.
22. ಎತ್ತರವಾದ ಸ್ವರ್ಗ ತೋಟಗಳಲ್ಲಿ.
23. ಅಲ್ಲಿಯ ಹಣ್ಣಿನ ಗೊಂಚಲುಗಳು ಬಾಗಿರುವವು.
24. (ಅವರೊಡನೆ ಹೇಳಲಾಗುವುದು;) ಕಳೆದು ಹೋದ ದಿನಗಳಲ್ಲಿ ನೀವು ಮಾಡಿದ್ದ ಕರ್ಮಗಳ ಫಲವಾಗಿ (ಇಂದು) ಮೋಜು ಮಾಡುತ್ತಾ ತಿನ್ನಿರಿ ಹಾಗೂ ಕುಡಿಯಿರಿ.
25. ಕರ್ಮ ಪತ್ರವನ್ನು ಎಡಗೈಯಲ್ಲಿ ನೀಡಲಾದವನು ಹೇಳುವನು; ‘‘ಅಯ್ಯೋ, ನನಗೆ ನನ್ನ ಕರ್ಮಪತ್ರವು ಸಿಗದೆ ಇದ್ದಿದ್ದರೆ ಚೆನ್ನಾಗಿತ್ತು!’’
26. ‘‘ಮತ್ತು ನನ್ನ ಫಲಿತಾಂಶ ಏನೆಂಬುದು ನನಗೆ ತಿಳಿಯದೆ ಇದ್ದಿದ್ದರೆ ಚೆನ್ನಾಗಿತ್ತು’’.
27. ‘‘ಅಯ್ಯೋ, ಆ ನನ್ನ ಮರಣವೇ ಅಂತಿಮವಾಗಿದ್ದರೆ ಚೆನ್ನಾಗಿತ್ತು’’.
28. ‘‘ಇಂದು ನನ್ನ ಸಂಪತ್ತಿನಿಂದ ನನಗೆ ಯಾವ ಲಾಭವೂ ಇಲ್ಲ’’.
29. ‘‘ನನ್ನ ಅಧಿಕಾರವೆಲ್ಲವೂ ನನ್ನಿಂದ ಕಳೆದು ಹೋಗಿದೆ’’.
30. ಆಗ ಆದೇಶಿಸಲಾಗುವುದು; ಅವನನ್ನು ಹಿಡಿಯಿರಿ ಮತ್ತು ನೊಗವನ್ನು ತೊಡಿಸಿರಿ.
31. ಮತ್ತು ಅವನನ್ನು ನರಕದ ಬೆಂಕಿಗೆ ಎಸೆದು ಬಿಡಿರಿ.
32. ಮತ್ತು ಅವನನ್ನು ಎಪ್ಪತ್ತು ಗಜ ಉದ್ದದ ಸಂಕೋಲೆಯಲ್ಲಿ ಬಿಗಿದು ಕಟ್ಟಿರಿ.
33. ಅವನು ಮಹೋನ್ನತನಾದ ಅಲ್ಲಾಹನಲ್ಲಿ ನಂಬಿಕೆ ಇಟ್ಟಿರಲಿಲ್ಲ.
34. ಮತ್ತು ಅವನು ಬಡವರಿಗೆ ಉಣಿಸುವುದಕ್ಕೆ ಯಾರನ್ನೂ ಪ್ರೇರೇಪಿಸುತ್ತಿರಲಿಲ್ಲ.
35. ಇಂದು, ಅವನಿಗಿಲ್ಲಿ ಮಿತ್ರರು ಯಾರೂ ಇಲ್ಲ.
36. ಕೀವಿನ ಹೊರತು ಬೇರೆ ಯಾವ ಆಹಾರವೂ ಅವನಿಗೆ ದಕ್ಕದು.
37. ಮತ್ತು ಅದನ್ನು ಅಪರಾಧಿಗಳ ಹೊರತು ಬೇರೆ ಯಾರೂ ತಿನ್ನಲಾರರು.
38. ನಾನು ನಿಮಗೆ ಕಾಣುವ ವಸ್ತುಗಳ ಆಣೆ ಹಾಕಿ ಹೇಳುತ್ತಿದ್ದೇನೆ,
39. ಮತ್ತು ನಾನು ನಿಮಗೆ ಕಾಣದ ವಸ್ತುಗಳ ಆಣೆ ಹಾಕಿ ಹೇಳುತ್ತಿದ್ದೇನೆ,
40. ಖಂಡಿತವಾಗಿಯೂ ಇದು ಒಬ್ಬ ಗೌರವಾನ್ವಿತ ದೂತನ ಮಾತು.
41. ಇದು ಯಾವುದೇ ಕವಿಯ ಮಾತಲ್ಲ. ಅದರೆ ನೀವು ನಂಬುವುದು ಮಾತ್ರ ಕಡಿಮೆ.
42. ಇದು ಯಾವುದೇ ಮಾಂತ್ರಿಕನ ಮಾತಲ್ಲ. ನೀವು ಪಾಠ ಕಲಿಯುವುದು ತುಂಬಾ ಕಡಿಮೆ.
43. ಇದು ಸಕಲ ಲೋಕಗಳ ಒಡೆಯನು ಇಳಿಸಿ ಕೊಟ್ಟಿರುವ ಸಂದೇಶ.
44. ಒಂದು ವೇಳೆ ಅವರು (ದೂತರು) ನಮ್ಮ ಕುರಿತು ಏನಾದರೂ ಸುಳ್ಳು ಹೇಳುತ್ತಿದ್ದರೆ,
45. ನಾವು ಅವರ ಬಲಗೈಯನ್ನು ಹಿಡಿಯುತ್ತಿದ್ದೆವು,
46. ಮತ್ತು ನಾವು ಅವರ ಜೀವನಾಡಿಯನ್ನು ಕತ್ತರಿಸಿ ಬಿಡುತ್ತಿದ್ದೆವು.
47. ನಿಮ್ಮ ಪೈಕಿ ಯಾರಿಗೂ ನಮ್ಮನ್ನು ತಡೆಯಲು ಸಾಧ್ಯವಿರಲಿಲ್ಲ.
48. ಇದು (ಈ ಗ್ರಂಥವು) ಖಂಡಿತ ಧರ್ಮನಿಷ್ಠರ ಪಾಲಿಗೆ ಒಂದು ಉಪದೇಶವಾಗಿದೆ.
49. ನಿಮ್ಮ ನಡುವೆ ಸುಳ್ಳುಗಾರರು ಇರುವ ಕುರಿತು ನಮಗೆ ತಿಳಿದಿದೆ.
50. ಖಂಡಿತವಾಗಿಯೂ ಇದು, ಧಿಕ್ಕಾರಿಗಳು ಪರಿತಪಿಸುವುದಕ್ಕೆ ಕಾರಣವಾಗಲಿದೆ..
51. ಇದು ನಿಸ್ಸಂದೇಹವಾಗಿಯೂ ನಂಬಲರ್ಹ ಸತ್ಯವಾಗಿದೆ.
52. ನೀವು ಮಹೋನ್ನತನಾದ ನಿಮ್ಮ ಒಡೆಯನ ನಾಮದ ಪಾವಿತ್ರವನ್ನು ಜಪಿಸಿರಿ.