83. ಅಲ್ ಮುತಫ್ಫಿಫೀನ್ (ಕಡಿಮೆ ಕೊಡುವವರು)
ವಚನಗಳು – 36, ಮಕ್ಕಃ
ಅಲ್ಲಾಹನ ಹೆಸರಿಂದ – ಅವನು ಅಪಾರ ದಯಾಳು, ಕರುಣಾಮಯಿ.
1. ವಿನಾಶವಿದೆ ತೂಕದಲ್ಲಿ ಕೊರತೆ ಮಾಡುವವರಿಗೆ.
2. ಅವರು ಜನರಿಂದ ಅಳೆದು ಪಡೆಯುವಾಗ ಪೂರ್ಣವಾಗಿ ಪಡೆಯುತ್ತಾರೆ.
3. ಆದರೆ ಇತರರಿಗೆ ಅಳೆದು ಅಥವಾ ತೂಗಿ ಕೊಡುವಾಗ ಕಡಿಮೆಗೊಳಿಸಿ ಕೊಡುತ್ತಾರೆ.
4. ಅವರನ್ನು ಮತ್ತೆ ಜೀವಂತ ಗೊಳಿಸಲಾಗುವುದೆಂದು ಅವರಿಗೇನು ತಿಳಿಯದೇ?
5. ಒಂದು ಮಹಾದಿನ ಅದು ಸಂಭವಿಸುವುದು.
6. ಅಂದು ಮಾನವರೆಲ್ಲಾ ವಿಶ್ವದೊಡೆಯನ ಮುಂದೆ ನಿಲ್ಲುವರು.
7. ನಿಮಗೆ ತಿಳಿದಿರಲಿ, ದುಷ್ಟರ ಕರ್ಮಗಳು ‘ಸಿಜ್ಜೀನ್’ನಲ್ಲಿವೆ.
8. ಸಿಜ್ಜೀನ್ ಅಂದರೆ ಏನೆಂದು ನಿಮಗೇನು ಗೊತ್ತು?.
9. ಅದೊಂದು ಲಿಖಿತ ಗ್ರಂಥ.
10. ಅಂದು ವಿನಾಶವಿದೆ – ಧಿಕ್ಕಾರಿಗಳಿಗೆ.
11. ಅವರು ಪ್ರತಿಫಲದ ದಿನವನ್ನು ತಿರಸ್ಕರಿಸುತ್ತಾರೆ.
12. ನಿಜವಾಗಿ, ಎಲ್ಲೆ ಮೀರಿದ ಪಾಪಿ ಮಾತ್ರ ಅದನ್ನು ಧಿಕ್ಕರಿಸುತ್ತಾನೆ.
13. ಅವನಿಗೆ ನಮ್ಮ ವಚನಗಳನ್ನು ಓದಿ ಕೇಳಿಸಲಾದಾಗ ಅವನು, ಇವೆಲ್ಲ ಗತಕಾಲದ ಕಥೆಗಳು ಎನ್ನುತ್ತಾನೆ.
14. ಹಾಗಲ್ಲ – ನಿಜವಾಗಿ ಅವರು ಮಾಡಿದ್ದ ಕರ್ಮಗಳು ಅವರ ಮನಸ್ಸುಗಳಿಗೆ ತುಕ್ಕು ಹಿಡಿಸಿವೆ.
15. ಹಾಗಲ್ಲ – ಅಂದು ಅವರು ತನ್ನ ಒಡೆಯನಿಂದ ಮರೆಯಲ್ಲಿರುವರು.
16. ತರುವಾಯ ಅವರು ನರಕವನ್ನು ಸೇರುವರು
17. ನೀವು ತಿರಸ್ಕರಿಸುತ್ತಿದ್ದುದು ಇದನ್ನೇ ಎಂದು ಅವರೊಡನೆ ಹೇಳಲಾಗುವುದು.
18. ನಿಮಗೆ ತಿಳಿದಿರಲಿ ಸಜ್ಜನರ ಕರ್ಮ ಪತ್ರವು ‘ಇಲ್ಲಿಯ್ಯೀನ್’ನಲ್ಲಿರುವುದು.
19. ಇಲ್ಲಿಯ್ಯೀನ್ ಅಂದರೇನೆಂದು ನಿಮಗೇನು ಗೊತ್ತು?
20. ಅದೊಂದು (ಕರ್ಮಗಳ) ಲಿಖಿತ ಗ್ರಂಥ.
21. (ಅಲ್ಲಾಹನಿಗೆ) ನಿಕಟರಾಗಿರುವವರು ಅದರ ಬಳಿ ಹಾಜರಿರುವರು.
22. ಸಜ್ಜನರು ಖಂಡಿತ ಐಶಾರಾಮದಲ್ಲಿರುವರು.
23. ವೈಭವದ ಆಸನಗಳಲ್ಲಿದ್ದು ದೃಶ್ಯಗಳನ್ನು ಆಸ್ವದಿಸುವರು.
24. ನೀವು ಅವರ ಮುಖಗಳಲ್ಲಿ ಸುಖದ ಉಲ್ಲಾಸವನ್ನು ಕಾಣುವಿರಿ.
25. ಅವರಿಗೆ ಮುದ್ರೆ ಹಾಕಿ ಮುಚ್ಚಿಟ್ಟಿದ್ದ ಶುದ್ಧ ಮದಿರೆಯನ್ನು ಕುಡಿಸಲಾಗುವುದು.
26. ಅದರ ಮುದ್ರೆ ಕಸ್ತೂರಿಯದ್ದಾಗಿರುವುದು, ಸ್ಪರ್ಧಿಸುವವರು ಇದನ್ನು ಪಡೆಯಲು ಸ್ಪರ್ಧಿಸಲಿ.
27. ಅದರಲ್ಲಿ ತಸ್ನೀಮ್‌ನ ಮಿಶ್ರಣವಿರುವುದು.
28. ಅದೊಂದು ಚಿಲುಮೆ. ಅಲ್ಲಾಹನ ಆಪ್ತರಾಗಿರುವವರು (ಸ್ವರ್ಗವಾಸಿಗಳು) ಅದನ್ನು ಸೇವಿಸುವರು.
29. ಅಪರಾಧಿಗಳು (ಇಹಲೋಕದಲ್ಲಿ) ವಿಶ್ವಾಸಿಗಳನ್ನು ಕಂಡು (ಗೇಲಿ ಮಾಡಿ) ನಗುತ್ತಿದ್ದರು.
30. ಅವರ ಬಳಿಯಿಂದ ಹಾದು ಹೋಗುವಾಗ ತಾತ್ಸಾರದಿಂದ ಕೈ ಸನ್ನೆಗಳನ್ನು ಮಾಡುತ್ತಿದ್ದರು.
31. ಅವರು ತಮ್ಮ ಮನೆಯವರ ಬಳಿಗೆ ಮರಳುವಾಗ ಹೆಮ್ಮೆಯಿಂದ ಬೀಗುತ್ತಾ ಮರಳುತ್ತಿದ್ದರು.
32. ಅವರು ಇವರನ್ನು (ವಿಶ್ವಾಸಿಗಳನ್ನು) ಕಂಡಾಗ, ಇವರು ದಾರಿಗೆಟ್ಟವರು ಎನ್ನುತ್ತಿದ್ದರು.
33. ನಿಜವಾಗಿ ಅವರನ್ನು ಇವರ ಮೇಲ್ವಿಚಾರಣೆಗೇನೂ ಕಳಿಸಲಾಗಿರಲಿಲ್ಲ.
34. ಆದರೆ ಇಂದು ವಿಶ್ವಾಸಿಗಳು ಧಿಕ್ಕಾರಿಗಳನ್ನು ಕಂಡು ನಗುವರು.
35. ವೈಭವದ ಆಸನದಲ್ಲಿದ್ದು (ಧಿಕ್ಕಾರಿಗಳ ಗತಿಯನ್ನು) ಕಾಣುತ್ತಿರುವರು.
36. ಧಿಕ್ಕಾರಿಗಳಿಗೆ ಸಿಕ್ಕಿ ಬಿಟ್ಟಿತೇ, ಅವರು ಮಾಡುತ್ತಿದ್ದ ಕೃತ್ಯಗಳ ಪ್ರತಿಫಲ?