84. ಅಲ್ ಇನ್ಶಿಕಾಕ್ (ಸ್ಫೋಟ)
ವಚನಗಳು – 25, ಮಕ್ಕಃ
ಅಲ್ಲಾಹನ ಹೆಸರಿಂದ – ಅವನು ಅಪಾರ ದಯಾಳು, ಕರುಣಾಮಯಿ.
1. ಆಕಾಶವು ಸ್ಫೋಟಿಸುವಾಗ.
2. ಅದು ತನ್ನ ಒಡೆಯನ ಆದೇಶವನ್ನು ಪಾಲಿಸುವುದು ಮತ್ತು ಅದು ಅದರ ಕರ್ತವ್ಯವಾಗಿರುವುದು.
3. ಭೂಮಿಯನ್ನು ಸಮ ತಟ್ಟಾಗಿಸಲಾಗುವುದು.
4. ಅದು ತನ್ನೊಳಗಿರುವ ಎಲ್ಲವನ್ನೂ ಹೊರ ಹಾಕಿ ಖಾಲಿಯಾಗಿ ಬಿಡುವುದು.
5. ಅದು ತನ್ನ ಒಡೆಯನ ಆದೇಶವನ್ನು ಪಾಲಿಸುವುದು ಮತ್ತು ಅದು ಅದರ ಕರ್ತವ್ಯವಾಗಿರುವುದು.
6. ಮಾನವನೇ, ನೀನು ಕ್ರಮೇಣ ನಿನ್ನೊಡೆಯನ ಕಡೆಗೇ ಹೋಗುತ್ತಿರುವೆ, ನೀನು ಖಂಡಿತ ಅವನನ್ನು ಭೇಟಿಯಾಗುವೆ.
7. ಯಾರ ಕರ್ಮ ಪತ್ರವನ್ನು ಅವನ ಬಲಗೈಯಲ್ಲಿ ನೀಡಲಾಯಿತೋ –
8. ಅವನ ವಿಚಾರಣೆಯು ಸುಲಭವಾಗಿ ನಡೆಯುವುದು.
9. ಮತ್ತು ಅವನು ತನ್ನ ಮನೆಯವರ ಜೊತೆ ಸಂತುಷ್ಟನಾಗಿರುವನು.
10. ಯಾರಿಗೆ ಅವನ ಗ್ರಂಥವನ್ನು ಅವನ ಬೆನ್ನ ಹಿಂದಿನಿಂದ ನೀಡಲಾಯಿತೋ
11. ಅವನು ಮರಣಕ್ಕಾಗಿ ಪ್ರಾರ್ಥಿಸುವನು.
12. ಮತ್ತು ಅವನು ನರಕವನ್ನು ಪ್ರವೇಶಿಸುವನು.
13. (ಇಹಲೋಕದಲ್ಲಿ) ಅವನು ತನ್ನ ಮನೆಯವರ ಜೊತೆ ಮೈ ಮರೆತಿದ್ದನು.
14. ತಾನೆಂದೂ (ತನ್ನ ಒಡೆಯನ ಬಳಿಗೆ) ಹೋಗಲಿಕ್ಕೇ ಇಲ್ಲವೆಂದು ಭಾವಿಸಿದ್ದನು.
15. ಯಾಕಿಲ್ಲ; ಅವನ ಒಡೆಯನಂತೂ ಅವನನ್ನು ನೋಡುತ್ತಲೇ ಇದ್ದನು.
16. ಅಲ್ಲ; ನಾನು ಸಂಜೆಯ ಕೆಂಬಣ್ಣದ ಆಣೆ ಹಾಕುತ್ತೇನೆ.
17. ಮತ್ತು ಇರುಳಿನ ಹಾಗೂ ಅದು ಏನನ್ನೆಲ್ಲಾ ಆವರಿಸುತ್ತದೋ ಅವುಗಳ ಆಣೆ.
18. ಮತ್ತು ಚಂದ್ರನ ಹಾಗೂ ಅದು ಪೂರ್ಣವಾಗುವಾಗಿನಾಣೆ.
19. ನೀವು ಹಂತ ಹಂತವಾಗಿ ಮೇಲೇರುವಿರಿ.
20. ಜನರಿಗೇನಾಗಿದೆ, ಅವರೇಕೆ ನಂಬುವುದಿಲ್ಲ?
21. ಅವರ ಮುಂದೆ ಕುರ್‌ಆನನ್ನು ಓದಲಾದಾಗ ಅವರೇಕೆ ಸಾಷ್ಟಾಂಗ ವೆರಗುವುದಿಲ್ಲ?
22. ನಿಜವಾಗಿ, ಧಿಕ್ಕಾರಿಗಳು ಇದನ್ನು ಸುಳ್ಳೆನ್ನುತ್ತಾರೆ.
23. ಅವರು ತಮ್ಮ ಮನಸ್ಸುಗಳಲ್ಲಿ ಅಡಗಿಸಿರುವ ಎಲ್ಲವನ್ನೂ ಅಲ್ಲಾಹನು ಬಲ್ಲನು.
24. ಅವರಿಗೆ ಒಂದು ಕಠಿಣ ಶಿಕ್ಷೆಯ ಶುಭವಾರ್ತೆ ನೀಡಿರಿ.
25. ವಿಶ್ವಾಸವಿಟ್ಟು ಸತ್ಕರ್ಮ ಮಾಡಿದವರ ಹೊರತು – ಅವರಿಗೆ ಅಪಾರ ಪ್ರತಿಫಲವಿದೆ.