1. ಅಲಿಫ್ ಲಾಮ್ ರಾ. ಇದು ಪಕ್ವ ವಚನಗಳಿರುವ ಗ್ರಂಥ. ಇದು ಪರಮ ಮುಕ್ತಿವಂತ ಹಾಗೂ ಎಲ್ಲವುಗಳ ಅರಿವು ಉಳ್ಳವನ ಕಡೆಯಿಂದ ಖಚಿತ ತೀರ್ಪನ್ನು ತಲುಪಿಸುತ್ತದೆ.
2. ಅಲ್ಲಾಹನ ಹೊರತು ಬೇರೆ ಯಾರನ್ನೂ ಪೂಜಿಸಬೇಡಿ (ಎಂದು ಇದು ಬೋಧಿಸುತ್ತದೆ). ನಾನಂತು, ಅವನ ಕಡೆಯಿಂದ ನಿಮ್ಮನ್ನು ಎಚ್ಚರಿಸುವವನು ಮತ್ತು ನಿಮಗೆ ಶುಭವಾರ್ತೆ ನೀಡುವವನಾಗಿದ್ದೇನೆ.
3. ನೀವು ನಿಮ್ಮೊಡೆಯನ ಬಳಿ ಕ್ಷಮೆಯಾಚಿಸಿರಿ ಮತ್ತು ಅವನೆಡೆಗೆ ಒಲಿಯಿರಿ. ಅವನು ನಿಮಗೆ ಒಂದು ನಿರ್ದಿಷ್ಟ ಅವಧಿಯ ತನಕ ಶ್ರೇಷ್ಠ ಸಂಪತ್ಸಾಧನಗಳನ್ನು ದಯಪಾಲಿಸುವನು ಮತ್ತು ಪ್ರತಿಯೊಬ್ಬ ಅನುಗ್ರಹಶಾಲಿಗೆ ತನ್ನ ಅನುಗ್ರಹವನ್ನು ಕರುಣಿಸುವನು. ನೀವು (ಅವನನ್ನು ) ಕಡೆಗಣಿಸಿದರೆ, ಒಂದು ಮಹಾ ದಿನದ ಶಿಕ್ಷೆಯು ನಿಮ್ಮ ಮೇಲೆ ಎರಗುವ ಭಯ ನನಗಿದೆ.
4. ಅಲ್ಲಾಹನ ಕಡೆಗೇ ನೀವು ಮರಳುವಿರಿ. ಅವನು ಎಲ್ಲವನ್ನೂ ಮಾಡಬಲ್ಲವನು.
5. ನಿಮಗೆ ತಿಳಿದಿರಲಿ; ಅವರು ಅವನಿಂದ ಅಡಗಿಸಲಿಕ್ಕಾಗಿ ತಮ್ಮ ಹೃದಯಗಳನ್ನು ಮುಚ್ಚಿಕೊಳ್ಳುತ್ತಾರೆ. ನಿಮಗೆ ತಿಳಿದಿರಲಿ; ಅವರು ತಮ್ಮ ಉಡುಪುಗಳಿಂದ ತಮ್ಮನ್ನು ಮುಚ್ಚಿಕೊಂಡಿರುವಾಗಲೂ, ಅವರು ಗುಪ್ತವಾಗಿಡುವ ಮತ್ತು ಅವರು ಬಹಿರಂಗ ಪಡಿಸುವ ಎಲ್ಲವನ್ನೂ ಅವನು ಅರಿತಿರುತ್ತಾನೆ. ಖಂಡಿತವಾಗಿಯೂ ಅವನು ಮನಸ್ಸಿನಾಳದಲ್ಲಿರುವ ವಿಷಯಗಳನ್ನೂ ಬಲ್ಲವನು.
ಕಾಂಡ – 12
6. ಭೂಮಿಯಲ್ಲಿನ ಪ್ರತಿಯೊಂದು ಜೀವಿಯ ಆಹಾರದ ಹೊಣೆಯು ಅಲ್ಲಾಹನ ಮೇಲಿದೆ. ಅದರ ವಾಸಸ್ಥಾನವನ್ನು ಮತ್ತು ಅದರ ಅಂತಿಮ ನೆಲೆಯನ್ನು ಅವನು ಚೆನ್ನಾಗಿ ಬಲ್ಲನು. ಎಲ್ಲವೂ ಒಂದು ಸ್ಪಷ್ಟವಾದ ಗ್ರಂಥದಲ್ಲಿದೆ.
7. ಅವನೇ, ಆರು ದಿನಗಳ ಅವಧಿಯಲ್ಲಿ ಆಕಾಶಗಳನ್ನು ಮತ್ತು ಭೂಮಿಯನ್ನು ಸೃಷ್ಟಿಸಿದವನು. ಅವನ ಸಿಂಹಾಸನವು ನೀರಿನ ಮೇಲಿತ್ತು. ನಿಮ್ಮಲ್ಲಿ ಯಾರು ಅತ್ಯುತ್ತಮ ಕರ್ಮಗಳನ್ನು ಮಾಡುವವರೆಂದು ಪರೀಕ್ಷಿಸಲಿಕ್ಕಾಗಿ (ಅವನು ನಿಮ್ಮನ್ನು ಸೃಷ್ಟಿಸಿದನು). (ದೂತರೇ,) ‘‘ಮರಣದ ಬಳಿಕ ನಿಮ್ಮನ್ನು ಮತ್ತೆ ಜೀವಂತಗೊಳಿಸಲಾಗುವುದು’’ ಎಂದು ನೀವು ಹೇಳಿದರೆ, ಧಿಕ್ಕಾರಿಗಳು, ‘‘ಇದು ಸ್ಪಷ್ಟ ಮಾಟಗಾರಿಕೆಯಲ್ಲದೆ ಬೇರೇನಲ್ಲ’’ ಎನ್ನುತ್ತಾರೆ.
8. ಒಂದು ವೇಳೆ ನಾವು ಒಂದು ನಿರ್ದಿಷ್ಟ ಅವಧಿಗಾಗಿ ಶಿಕ್ಷೆಯನ್ನು ಅವರಿಂದ ನಿವಾರಿಸಿದರೆ, ‘‘ಅದನ್ನು ಯಾವ ವಸ್ತು ತಡೆದಿಟ್ಟಿದೆ?’’ ಎಂದು ಅವರು ಕೇಳುವರು. ನಿಮಗೆ ತಿಳಿದಿರಲಿ; ಅದು ಅವರ ಮೇಲೆ ಬಂದೆರಗುವ ದಿನ, ಯಾರೂ ಅದನ್ನು ಅವರಿಂದ ನಿವಾರಿಸಲಾರರು. ಅವರು ಯಾವುದನ್ನು ಗೇಲಿಮಾಡುತ್ತಿದ್ದರೋ ಅದುವೇ ಅವರನ್ನು ಆವರಿಸಿ ಬಿಡುವುದು.
9. ನಾವು ಮನುಷ್ಯನಿಗೆ ನಮ್ಮ ಅನುಗ್ರಹದ ರುಚಿ ಕಾಣಿಸಿ ಆ ಬಳಿಕ ಅದನ್ನು ಅವನಿಂದ ಕಿತ್ತುಕೊಂಡರೆ – ಅವನು ತೀರಾ ನಿರಾಶನೂ ಕೃತಘ್ನನೂ ಆಗಿಬಿಡುತ್ತಾನೆ.
10. ಇನ್ನು, ಅವನಿಗೆ ಸಂಕಟ ತಗಲಿದ ಬಳಿಕ ನಾವು ಅವನಿಗೆ ಅನುಗ್ರಹಗಳ ರುಚಿ ಉಣಿಸಿದರೆ, ಅವನು ಸಕಲ ಸಂಕಟಗಳೂ ನನ್ನಿಂದ ದೂರವಾಗಿ ಬಿಟ್ಟವು ಎನ್ನುತ್ತಾನೆ ಮತ್ತು ಅವನು ಸಂತಸದಿಂದ ಬೀಗಿ, ತನ್ನನ್ನೇ ಹೊಗಳತೊಡಗುತ್ತಾನೆ.
11. ಸಹನಶೀಲರು ಮತ್ತು ಸತ್ಕರ್ಮಿಗಳು ಮಾತ್ರ ಹಾಗಿರುವುದಿಲ್ಲ. ಅವರಿಗೆ ಕ್ಷಮೆ ಹಾಗೂ ಮಹಾ ಪ್ರತಿಫಲವಿದೆ.
12. (ದೂತರೇ,) ನಿಮಗೆ ಕಳಿಸಲಾಗಿರುವ ದಿವ್ಯವಾಣಿಯ ಕೆಲವು ಭಾಗಗಳನ್ನು ನೀವು ಬಿಟ್ಟು ಬಿಡಬಹುದು ಮತ್ತು ಈ (ಸತ್ಯ ಪ್ರಸಾರದ) ವಿಷಯದಲ್ಲಿ ನಿಮ್ಮ ಮನಸ್ಸು ರೋಸಿ ಹೋಗಬಹುದು (ಎಂದು ಧಿಕ್ಕಾರಿಗಳು ನಿರೀಕ್ಷಿಸುತ್ತಿದ್ದಾರೆ). ‘‘ ಈತನಿಗೆ ಯಾವುದೇ ಭಂಡಾರವನ್ನೇಕೆ ಇಳಿಸಿಕೊಡಲಾಗಿಲ್ಲ? ಅಥವಾ ಈತನ ಜೊತೆ ಯಾವುದೇ ‘ಮಲಕ್’ ಯಾಕೆ ಬಂದಿಲ್ಲ?’’ ಎಂಬ ಅವರ (ಧಿಕ್ಕಾರಿಗಳ) ಮಾತುಗಳು ನಿಮ್ಮ ಮನಸ್ಸನ್ನು ನೋಯಿಸುತ್ತಿವೆ. ನೀವು ಕೇವಲ ಎಚ್ಚರಿಸುವವರಾಗಿರುವಿರಿ. ಅಲ್ಲಾಹನೇ ಎಲ್ಲ ವಿಷಯಗಳ ಮೇಲ್ವಿಚಾರಕನಾಗಿದ್ದಾನೆ.
13. ಇದನ್ನು (ಕುರ್‌ಆನ್‌ಅನ್ನು) ಈತನೇ ಸ್ವತಃ ರಚಿಸಿದ್ದಾನೆ ಎಂದು ಅವರು ಹೇಳುತ್ತಾರೆಯೇ? ನೀವು ಹೇಳಿರಿ; ನೀವು ಹೇಳುತ್ತಿರುವುದು ಸತ್ಯವಾಗಿದ್ದರೆ, ಇಂತಹ ಹತ್ತು ಅಧ್ಯಾಯಗಳನ್ನು ನೀವು ರಚಿಸಿ ತನ್ನಿರಿ ಮತ್ತು (ನಿಮ್ಮ ನೆರವಿಗಾಗಿ) ಅಲ್ಲಾಹನ ಹೊರತು ನಿಮಗೆ ಸಾಧ್ಯವಿರುವ ಎಲ್ಲರನ್ನೂ ಕರೆಯಿರಿ.
14. ನಿಮಗೆ ಉತ್ತರ ನೀಡಲು ಅವರಿಗೆ ಸಾಧ್ಯವಾಗದಿದ್ದರೆ, ನಿಮಗೆ ತಿಳಿದಿರಲಿ; ಅಲ್ಲಾಹನ ಜ್ಞಾನದ ಆಧಾರದಲ್ಲಿ ಇದನ್ನು ಇಳಿಸಿಕೊಡಲಾಗಿದೆ ಮತ್ತು ಅವನ ಹೊರತು ಬೇರಾರೂ ದೇವರಿಲ್ಲ. (ಇನ್ನಾದರೂ) ನೀವು ಮುಸ್ಲಿಮರಾಗುವಿರಾ?
15. ಈ ಲೋಕದ ಬದುಕನ್ನು ಮತ್ತು ಇಲ್ಲಿಯ ಅಲಂಕಾರಗಳನ್ನೇ ಗುರಿಯಾಗಿಸಿಕೊಂಡವರಿಗೆ ನಾವು ಅವರ ಕರ್ಮಗಳ ಪ್ರತಿಫಲವನ್ನು ಇಲ್ಲೇ ಕೊಟ್ಟು ಬಿಡುತ್ತೇವೆ. ಈ ವಿಷಯದಲ್ಲಿ ಅವರಿಗೆ ಯಾವ ಕೊರತೆಯೂ ಆಗದು.
16. ಆದರೆ ಅವರಿಗೆ ಪರಲೋಕದಲ್ಲಿ (ನರಕದ) ಬೆಂಕಿಯ ಹೊರತು ಬೇರೇನೂ ಸಿಗದು. ಇಲ್ಲಿ ಅವರು ನಡೆಸಿದ್ದ ಎಲ್ಲ ಶ್ರಮಗಳೂ ವ್ಯರ್ಥವಾಗಿ ಬಿಡುವವು ಮತ್ತು ಅವರು ಮಾಡಿದ್ದ ಎಲ್ಲ ಕರ್ಮಗಳೂ ತಿರಸ್ಕೃತವಾಗುವವು.
17. ತಮ್ಮ ಒಡೆಯನ ಕಡೆಯಿಂದ (ಬಂದ) ಸ್ಪಷ್ಟ ಸನ್ಮಾರ್ಗದಲ್ಲಿದ್ದು, ಅದನ್ನು (ದಿವ್ಯ ಸಂದೇಶವನ್ನು) ಸದಾ ಓದುತ್ತಾ, ಅದರ ಪರವಾಗಿಯೂ ಈ ಹಿಂದೆ ಮೂಸಾರ ಬಳಿಗೆ ಮಾರ್ಗದರ್ಶಿ ಹಾಗೂ ಅನುಗ್ರಹವಾಗಿ ಬಂದಿದ್ದ ಗ್ರಂಥದ ಪರವಾಗಿಯೂ ಸಾಕ್ಷಿಯಾದವರೇ ನಿಜವಾಗಿ ಅದನ್ನು ನಂಬುವವರು. ಇನ್ನು, ವಿವಿಧ ಪಂಗಡಗಳ ಪೈಕಿ ಇದನ್ನು ಧಿಕ್ಕರಿಸಿದವರ ಪಾಲಿಗೆ (ನರಕದ) ಬೆಂಕಿಯೇ ಅಂತಿಮ ನೆಲೆಯಾಗಿರುವುದು. ನೀವು ಈ ಕುರಿತು ಕಿಂಚಿತ್ತೂ ಸಂಶಯ ತಾಳಬೇಡಿ. ಖಂಡಿತವಾಗಿಯೂ ಇದು ನಿಮ್ಮ ಒಡೆಯನ ಕಡೆಯಿಂದಲೇ ಬಂದಿರುವ ಸತ್ಯವಾಗಿದೆ. ಆದರೆ ಮಾನವರಲ್ಲಿ ಹೆಚ್ಚಿನವರು ಇದನ್ನು ನಂಬುವುದಿಲ್ಲ.
18. ಸುಳ್ಳನ್ನು ರಚಿಸಿ ಅಲ್ಲಾಹನ ಮೇಲೆ ಆರೋಪಿಸುವವನಿಗಿಂತ ದೊಡ್ಡ ಅಕ್ರಮಿ ಯಾರಿದ್ದಾನೆ? ಅವರನ್ನು ಅವರ ಒಡೆಯನ ಮುಂದೆ ಹಾಜರುಪಡಿಸಲಾದಾಗ, ‘‘ತಮ್ಮ ಒಡೆಯನ ಮೇಲೆ ಸುಳ್ಳನ್ನು ಆರೋಪಿಸಿದವರು ಇವರೇ’’ ಎಂದು ಸಾಕ್ಷಿಗಳು ಹೇಳುವರು. ನಿಮಗೆ ತಿಳಿದಿರಲಿ; ಅಕ್ರಮಿಗಳ ಮೇಲೆ ಅಲ್ಲಾಹನ ಶಾಪವಿದೆ.
19. ಅವರು ಅಲ್ಲಾಹನ ಮಾರ್ಗದಿಂದ (ಜನರನ್ನು) ತಡೆಯುತ್ತಾರೆ ಮತ್ತ್ತು ಅದರಲ್ಲಿ ವಕ್ರತೆಯನ್ನು ಹುಡುಕುತ್ತಾರೆ. ಅವರೇ ಪರಲೋಕವನ್ನು ಧಿಕ್ಕರಿಸುವವರು.
20. ಭೂಮಿಯಲ್ಲಿ ಅವರೆಂದೂ (ಅಲ್ಲಾಹನನ್ನು) ಸೋಲಿಸಿರಲಿಲ್ಲ ಮತ್ತು ಅವರಿಗೆ ಅಲ್ಲಾಹನಲ್ಲದೆ ಬೇರೆ ಯಾರೂ ಪೋಷಕರಾಗಿರಲಿಲ್ಲ. ಅವರಿಗೆ ದುಪ್ಪಟ್ಟು ಶಿಕ್ಷೆಯನ್ನು ನೀಡಲಾಗುವುದು. (ಭೂಮಿಯಲ್ಲಿ) ಅವರು ಕೇಳಬಲ್ಲವರೂ ಆಗಿರಲಿಲ್ಲ, ನೋಡಬಲ್ಲವರೂ ಆಗಿರಲಿಲ್ಲ.
21. ಅವರೇ, ಸ್ವತಃ ತಮಗೆ ನಷ್ಟಮಾಡಿಕೊಂಡವರು. ಅವರು ರಚಿಸಿಕೊಂಡಿದ್ದ ಮಿಥ್ಯಗಳೆಲ್ಲವೂ ಅವರಿಂದ ಕಳೆದುಹೋದವು.
22. ಖಂಡಿತವಾಗಿಯೂ ಅವರೇ, ಪರಲೋಕದಲ್ಲಿ ಅತ್ಯಧಿಕ ನಷ್ಟದಲ್ಲಿರುವರು.
23. ಸತ್ಯದಲ್ಲಿ ವಿಶ್ವಾಸವಿಟ್ಟು ಸತ್ಕರ್ಮಗಳನ್ನು ಮಾಡಿದವರು ಮತ್ತು ಸದಾ ತಮ್ಮ ಒಡೆಯನೆದುರು ವಿನಯಶೀಲರಾಗಿದ್ದವರು – ಖಂಡಿತವಾಗಿಯೂ ಅವರೇ ಸ್ವರ್ಗದವರು. ಅದರಲ್ಲಿ ಅವರು ಸದಾಕಾಲ ಇರುವರು.
24. ಆ ಎರಡು ಗುಂಪುಗಳ ಉದಾಹರಣೆಯು ಹೀಗಿದೆ; ಒಬ್ಬನು ಕುರುಡ ಹಾಗೂ ಕಿವುಡನಾಗಿದ್ದಾನೆ. ಇನ್ನೊಬ್ಬನು ನೋಡಬಲ್ಲನು ಹಾಗೂ ಕೇಳಬಲ್ಲನು. ಅವರಿಬ್ಬರ ಸ್ಥಿತಿಯೂ ಸಮಾನವಾಗಿರಲು ಸಾಧ್ಯವೇ? ನೀವೇನು, ಚಿಂತನೆ ನಡೆಸುವುದಿಲ್ಲವೇ?
25. ನಾವು ನೂಹ್‌ರನ್ನು ಅವರ ಜನಾಂಗದೆಡೆಗೆ ಕಳುಹಿಸಿದ್ದೆವು. (ಅವರು ಹೇಳಿದರು;) ನಾನು ನಿಮಗೆ, ಸ್ಪಷ್ಟ ಎಚ್ಚರಿಕೆ ನೀಡುವವನಾಗಿದ್ದೇನೆ.
26. ನೀವು ಅಲ್ಲಾಹನ ಹೊರತು ಬೇರೆ ಯಾರನ್ನೂ ಪೂಜಿಸಬಾರದು. ನೀವು ಒಂದು ಯಾತನಾಮಯ ದಿನದ ಶಿಕ್ಷೆಗೆ ತುತ್ತಾಗುವಿರೆಂಬ ಭಯ ನನಗಿದೆ.
27. ಅವರ ಜನಾಂಗದ ಧಿಕ್ಕಾರಿ ನಾಯಕರು ಹೇಳಿದರು; ನಾವಂತು ನಿಮ್ಮನ್ನು ನಮ್ಮಂತಹ ಕೇವಲ ಒಬ್ಬ ಮಾನವನಾಗಿ ಕಾಣುತ್ತಿದ್ದೇವೆ. ಇನ್ನು ನಿಮ್ಮ ಅನುಯಾಯಿಗಳಲ್ಲೂ, ನಮ್ಮಲ್ಲಿನ ಕೆಲವು ಅಪ್ರಬುದ್ಧ ಹೀನರ ಹೊರತು ಬೇರಾರನ್ನೂ ನಾವು ಕಾಣುತ್ತಿಲ್ಲ. ಹಾಗೆಯೇ, ಯಾವುದೇ ವಿಷಯದಲ್ಲಿ ನೀವು ನಮಗಿಂತ ಶ್ರೇಷ್ಠರಾಗಿರುವುದು ನಮಗೆ ಕಾಣಿಸುತ್ತಿಲ್ಲ. ನಿಜವಾಗಿ ನೀವು ಸುಳ್ಳರೆಂದು ನಾವು ಭಾವಿಸುತ್ತೇವೆ.
28. ಅವರು (ನೂಹ್) ಹೇಳಿದರು; ನನ್ನ ಜನಾಂಗದವರೇ, ನೀವು ನೋಡುತ್ತಿಲ್ಲವೇ, ನಾನು ನನ್ನ ಒಡೆಯನ ಕಡೆಯಿಂದ (ತೋರಿಸಲಾದ) ಸ್ಪಷ್ಟ ಸನ್ಮಾರ್ಗದಲ್ಲಿದ್ದೇನೆ ಮತ್ತು ಅವನು ತನ್ನ ಕಡೆಯಿಂದ ನನಗೆ ವಿಶೇಷ ಅನುಗ್ರಹವನ್ನು ದಯಪಾಲಿಸಿದ್ದಾನೆ. ಅದನ್ನು ನಿಮಗೆ ಕಾಣದಂತೆ ಮಾಡಲಾಗಿದೆ. ನಿಮಗೆ ಅದು (ಆ ಸನ್ಮಾರ್ಗವು) ಅಷ್ಟೊಂದು ಅಸಹ್ಯವಾಗಿರುವಾಗ ಅದನ್ನು ಒಪ್ಪುವಂತೆ ನಾವೇನು ನಿಮ್ಮನ್ನು ಬಲಾತ್ಕರಿಸಬೇಕೇ?
29. ಮತ್ತು ನನ್ನ ಜನಾಂಗದವರೇ, ಈ ವಿಷಯದಲ್ಲಿ ನಾನು ನಿಮ್ಮಿಂದ ಯಾವುದೇ ಸಂಪತ್ತನ್ನು ಕೇಳುತ್ತಿಲ್ಲ. ನನ್ನ ಪ್ರತಿಫಲದ ಹೊಣೆ ಇರುವುದು ಅಲ್ಲಾಹನ ಮೇಲೆ ಮಾತ್ರ. ಇನ್ನು ನಾನು ವಿಶ್ವಾಸಿಗಳನ್ನು ದೂರಗೊಳಿಸಲಾರೆ. ಖಂಡಿತವಾಗಿಯೂ ಅವರು ತಮ್ಮ ಒಡೆಯನನ್ನು ಭೇಟಿಯಾಗಲಿದ್ದಾರೆ. ನಿಮ್ಮನ್ನು ನಾನು ಒಂದು ಅಜ್ಞಾನಿ ಜನಾಂಗವಾಗಿ ಕಾಣುತ್ತಿದ್ದೇನೆ.
30. ಮತ್ತು ನನ್ನ ಜನಾಂಗದವರೇ, ಒಂದು ವೇಳೆ ನಾನು ಅವರನ್ನು ದೂರಗೊಳಿಸಿಬಿಟ್ಟರೆ, ನನ್ನನ್ನು ಅಲ್ಲಾಹನಿಂದ ಯಾರು ತಾನೇ ರಕ್ಷಿಸಬಲ್ಲನು? ನೀವೇನು ಚಿಂತನೆ ನಡೆಸುವುದಿಲ್ಲವೇ?
31. ನನ್ನೊಡನೆ ಅಲ್ಲಾಹನ ಭಂಡಾರಗಳಿವೆ ಎಂದೇನೂ ನಾನು ನಿಮ್ಮೊಡನೆ ಹೇಳಿಲ್ಲ. ಅದೃಶ್ಯದ ಜ್ಞಾನವೂ ನನಗಿಲ್ಲ. ನಾನು ‘ಮಲಕ್’ ಎಂದು ನಾನು ನಿಮ್ಮೊಡನೆ ಹೇಳಿಕೊಂಡಿಲ್ಲ. ಹಾಗೆಯೇ, ನಿಮ್ಮ ಕಣ್ಣುಗಳಿಗೆ ಹೀನರಾಗಿ ಕಾಣಿಸುವವರಿಗೆ ಅಲ್ಲಾಹನು ಯಾವುದೇಹಿತವನ್ನು ನೀಡುವುದಿಲ್ಲ ಎಂದೂ ನಾನು ಹೇಳಿಲ್ಲ, ಅವರ ಮನಸ್ಸಿನಲ್ಲೇನಿದೆ ಎಂಬುದನ್ನು ಅಲ್ಲಾಹನೇ ಚೆನ್ನಾಗಿ ಬಲ್ಲನು. ಹೀಗಿರುತ್ತಾ (ನಾನು ಅವರನ್ನು ದೂರಗೊಳಿಸಿದರೆ) ಖಂಡಿತವಾಗಿಯೂ ನಾನು ಅಕ್ರಮಿಯಾಗುವೆನು.
32. ಅವರು ಹೇಳಿದರು; ನೂಹರೇ, ನೀವು ನಮ್ಮೊಡನೆ ವಾದಿಸಿದಿರಿ, ಮಾತ್ರವಲ್ಲ, ನಮ್ಮ ಜೊತೆ ಬಹಳಷ್ಟು ಜಗಳಾಡಿದಿರಿ. ನೀವು ಸತ್ಯವಂತರಾಗಿದ್ದರೆ, ಇನ್ನಾದರೂ, ನೀವು ನಮ್ಮನ್ನು ಬೆದರಿಸುತ್ತಿರುವ ಆ ಶಿಕ್ಷೆಯನ್ನು ತಂದುಬಿಡಿರಿ.
33. ಅವರು (ನೂಹರು) ಹೇಳಿದರು; ಅಲ್ಲಾಹನು ಇಚ್ಛಿಸಿದರೆ, ಅದನ್ನು (ಶಿಕ್ಷೆಯನ್ನು) ನಿಮ್ಮ ಮೇಲೆರಗಿಸುವನು. ಮತ್ತು ನಿಮಗೆ ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದು.
34. ಒಂದು ವೇಳೆ ಅಲ್ಲಾಹನು ನಿಮ್ಮನ್ನು ದಾರಿಗೆಟ್ಟ ಸ್ಥಿತಿಯಲ್ಲಿಡಲು ನಿರ್ಧರಿಸಿದ್ದರೆ, ನಾನು ನಿಮಗೆ ಹಿತವನ್ನು ಮಾಡಬಯಸಿದರೂ ನನ್ನ ಹಿತಾಕಾಂಕ್ಷೆಯಿಂದ ನಿಮಗೆ ಯಾವ ಲಾಭವೂ ಆಗದು. ಅವನೇ ನಿಮ್ಮ ಒಡೆಯನು ಮತ್ತು ಅವನ ಕಡೆಗೇ ನೀವು ಮರಳುವಿರಿ.
35. (ದೂತರೇ,) ಇದನ್ನು (ಕುರ್‌ಆನ್‌ಅನ್ನು) ಈತನು ಸ್ವತಃ ರಚಿಸಿದ್ದಾನೆಂದು ಅವರು ಹೇಳುತ್ತಾರೆಯೇ? ನೀವು ಹೇಳಿರಿ; ಒಂದು ವೇಳೆ ಇದನ್ನು ನಾನೇ ರಚಿಸಿದ್ದರೆ, ನನ್ನ ಅಪರಾಧದ ಹೊಣೆಯು ನನ್ನ ಮೇಲಿದೆ ಮತ್ತು ನೀವು ಎಸಗುತ್ತಿರುವ ಅಪರಾಧಗಳ ಹೊಣೆಯಿಂದ ನಾನು ಮುಕ್ತನಾಗಿದ್ದೇನೆ.
36. ನೂಹ್‌ರ ಕಡೆಗೆ ಹೀಗೆಂದು ದಿವ್ಯವಾಣಿಯನ್ನು ಕಳಿಸಲಾಯಿತು; ನಿಮ್ಮ ಜನಾಂಗದವರ ಪೈಕಿ ಈಗಾಗಲೇ ನಂಬಿಕೆ ಇಟ್ಟವರ ಹೊರತು ಬೇರೆ ಯಾರೂ (ಸತ್ಯವನ್ನು) ನಂಬುವವರಲ್ಲ. ನೀವಿನ್ನು ಅವರ ಕೃತ್ಯಗಳ ಕುರಿತು ದುಃಖಿಸಬೇಡಿ.
37. ನೀವು ನಮ್ಮ ಕಣ್ಣೆದುರು ಹಾಗೂ ನಮ್ಮ ದಿವ್ಯ ಸಂದೇಶದ ಪ್ರಕಾರ ಒಂದು ಹಡಗನ್ನು ನಿರ್ಮಿಸಿರಿ ಮತ್ತು ಅಕ್ರಮಿಗಳ ಕುರಿತು ನನ್ನೊಡನೆ ಮಾತನಾಡಬೇಡಿ. ಅವರು ಖಂಡಿತ (ಪ್ರವಾಹದಲ್ಲಿ) ಮುಳುಗಲಿದ್ದಾರೆ.
38. ಅವರು (ನೂಹ್) ಹಡಗನ್ನು ನಿರ್ಮಿಸತೊಡಗಿದರು. ಅವರ ಜನಾಂಗದ ಸರದಾರರು, ಅದರ ಪಕ್ಕದಿಂದ ಹಾದು ಹೋಗುವಾಗಲೆಲ್ಲಾ ಅದನ್ನು ಲೇವಡಿ ಮಾಡುತ್ತಿದ್ದರು. ಆಗ ಅವರು (ನೂಹ್) ಹೇಳಿದರು; (ಇಂದು) ನೀವು ನಮ್ಮನ್ನು ಲೇವಡಿ ಮಾಡುತ್ತೀರಾದರೆ, ಖಂಡಿತ, ನೀವು ಲೇವಡಿ ಮಾಡಿದಂತೆಯೇ, ನಾವೂ ನಿಮ್ಮನ್ನು ಲೇವಡಿ ಮಾಡಲಿದ್ದೇವೆ.
39. ಅಪಮಾನಕಾರಿ ಶಿಕ್ಷೆಯು ಯಾರ ಮೇಲೆ ಬಂದೆರಗಲಿದೆ ಎಂಬುದು ಬಹುಬೇಗನೇ ನಿಮಗೆ ತಿಳಿಯಲಿದೆ. ಅದು ಸದಾಕಾಲ ಆತನ ಮೇಲೆ ಹೇರಿ ಕೊಂಡಿರುವ ಯಾತನೆಯಾಗಿರುವುದು.
40. ಕೊನೆಗೆ ನಮ್ಮ ಆದೇಶವು ಬಂದು ಬಿಟ್ಟಿತು ಮತ್ತು ಕುದಿಯುತ್ತಿದ್ದ ಪಾತ್ರೆಯು ಉಕ್ಕಿ ಹರಿಯಿತು. ಆಗ ನಾವು (ಅಲ್ಲಾಹನು, ನೂಹ್‌ರಿಗೆ) ಹೇಳಿದೆವು; ‘‘ನೀವೀಗ ಎಲ್ಲವುಗಳ (ಎಲ್ಲ ಜೀವಿಗಳ) ಜೊತೆಗಳನ್ನು (ಗಂಡು-ಹೆಣ್ಣನ್ನು) ಹಾಗೂ ಯಾರ ಪರವಾಗಿ ಈಗಾಗಲೇ ತೀರ್ಮಾನ ಆಗಿಬಿಟ್ಟಿದೆಯೋ ಆತನ (ನಿಮ್ಮ ಪುತ್ರನ) ಹೊರತು ನಿಮ್ಮ ಮನೆಯವರನ್ನು ಮತ್ತು ಸತ್ಯದಲ್ಲಿ ವಿಶ್ವಾಸವಿಟ್ಟವರನ್ನು ಅದರಲ್ಲಿ (ಹಡಗಿನಲ್ಲಿ) ಹತ್ತಿಸಿಕೊಳ್ಳಿರಿ’’. ನಿಜವಾಗಿ, ಅವರ ಜೊತೆ ಕೇವಲ ಕೆಲವರು ಮಾತ್ರ ವಿಶ್ವಾಸವಿಟ್ಟಿದ್ದರು.
41. ಮತ್ತು ಅವರು (ನೂಹ್) ಹೇಳಿದರು; ನೀವು ಇದರಲ್ಲಿ ಹತ್ತಿಕೊಳ್ಳಿರಿ. ಇದು ಚಲಿಸುವುದೂ ನಿಲ್ಲುವುದೂ ಅಲ್ಲಾಹನ ಹೆಸರಲ್ಲಿ. ಖಂಡಿತವಾಗಿಯೂ ನನ್ನ ಒಡೆಯನು ಕ್ಷಮಿಸುವವನೂ ಕರುಣಾಳುವೂ ಆಗಿದ್ದಾನೆ.
42. ಅದು (ಆ ಹಡಗು) ಅವರನ್ನು ಹೊತ್ತು, ಬೆಟ್ಟದಂತಹ ಅಲೆಗಳಲ್ಲಿ ಚಲಿಸತೊಡಗಿತು. ಆಗ ನೂಹರು, ದಡದಲ್ಲಿದ್ದ ತಮ್ಮ ಪುತ್ರನನ್ನು ಕೂಗಿ ಕರೆದು, ನನ್ನ ಪುತ್ರ! ನಮ್ಮ ಜೊತೆ (ಹಡಗನ್ನು) ಹತ್ತಿಕೋ. ನೀನು ಧಿಕ್ಕಾರಿಗಳ ಸಾಲಿಗೆ ಸೇರಬೇಡ ಎಂದರು.
43. ಅವನು ಹೇಳಿದನು; ನಾನು ಬಹುಬೇಗನೇ ಯಾವುದಾದರೂ ಬೆಟ್ಟದ ಬಳಿ ಆಶ್ರಯ ಪಡೆಯುವೆನು. ಅದು ನನ್ನನ್ನು ನೀರಿನಿಂದ ರಕ್ಷಿಸುವುದು. ಅವರು (ನೂಹ್) ಹೇಳಿದರು; ‘‘ಇಂದು ಅಲ್ಲಾಹನ ಅಪ್ಪಣೆಗೆದುರಾಗಿ ರಕ್ಷಿಸುವವರು ಯಾರೂ ಇಲ್ಲ – ಸ್ವತಃ ಅವನ ಕರುಣೆಗೆ ಪಾತ್ರರಾದವರ ಹೊರತು’’. ಕೊನೆಗೆ ಅವರ ನಡುವೆ ತೆರೆಯೊಂದು ಅಡ್ಡಬಂದಿತು ಮತ್ತು ಅವನು (ನೂಹ್‌ರ ಪುತ್ರನು) ಮುಳುಗಿದವರ ಸಾಲಿಗೆ ಸೇರಿಬಿಟ್ಟನು.
44. ಆ ಬಳಿಕ ‘‘ಭೂಮಿಯೇ, ನಿನ್ನ ನೀರನ್ನು ನುಂಗಿಬಿಡು, ಆಕಾಶವೇ, ಶಮನವಾಗು’’ ಎನ್ನಲಾಯಿತು ಮತ್ತು ನೀರನ್ನು ಒಣಗಿಸಲಾಯಿತು. ಅದಾಗಲೇ ಕಾರ್ಯವು ಪೂರ್ತಿಯಾಗಿತ್ತು ಮತ್ತು ಅದು (ಹಡಗು) ‘ಜೂದೀ’ ಬೆಟ್ಟವನ್ನು ತಲುಪಿತ್ತು. ಅಕ್ರಮಿಗಳ ಜನಾಂಗದೊಡನೆ ‘‘ತೊಲಗಿರಿ’’ ಎನ್ನಲಾಯಿತು.
45. ನೂಹರು ತಮ್ಮ ಒಡೆಯನನ್ನು ಕೂಗಿದರು ಮತ್ತು ಹೇಳಿದರು; ನನ್ನೊಡೆಯಾ, ನನ್ನ ಪುತ್ರನು ಖಂಡಿತ ನನ್ನ ಮನೆಯವನು. ಆದರೂ ನಿನ್ನ ವಚನವೇ ಸತ್ಯ ಮತ್ತು ನೀನೇ ಎಲ್ಲ ಅಧಿಪತಿಗಳಿಗಿಂತ ದೊಡ್ಡ ಅಧಿಪತಿ.
46. ಅವನು (ಅಲ್ಲಾಹನು) ಹೇಳಿದನು; ನೂಹರೇ, ಅವನು (ಪುತ್ರನು) ಖಂಡಿತ ನಿಮ್ಮ ಮನೆಯವನಲ್ಲ. ಅವನು ಕೇವಲ ಒಂದು ದುಷ್ಟ ಕರ್ಮ ಮಾತ್ರ. ನೀವು ನಿಮಗೆ ತಿಳಿದಿಲ್ಲದ ವಿಚಾರವನ್ನು ನನ್ನೊಡನೆ ಬೇಡಬಾರದು. ನೀವು ಅಜ್ಞಾನಿಗಳ ಸಾಲಿಗೆ ಸೇರಬಾರದೆಂದು ನಾನು ನಿಮಗೆ ಉಪದೇಶಿಸುತ್ತಿದ್ದೇನೆ.
47. ಅವರು (ನೂಹ್) ಹೇಳಿದರು; ನನ್ನೊಡೆಯಾ, ನನಗೆ ಅರಿವಿಲ್ಲದ ವಿಷಯವನ್ನು ನಿನ್ನೊಡನೆ ಬೇಡುವುದರ ವಿರುದ್ಧ ನಾನು ನಿನ್ನ ರಕ್ಷಣೆ ಕೋರುತ್ತೇನೆ. ಇನ್ನು, ನೀನು ನನ್ನನ್ನು ಕ್ಷಮಿಸದಿದ್ದರೆ ಹಾಗೂ ನೀನು ನನ್ನ ಮೇಲೆ ಕರುಣೆ ತೋರದಿದ್ದರೆ, ನಾನು ನಷ್ಟ ಅನುಭವಿಸಿದವರ ಸಾಲಿಗೆ ಸೇರುವೆನು.
48. ಅವರೊಡನೆ ಹೇಳಲಾಯಿತು; ನೂಹರೇ, (ಹಡಗಿನಿಂದ) ಇಳಿಯಿರಿ. ನಿಮಗೆ ಹಾಗೂ ನಿಮ್ಮ ಜೊತೆಗಿರುವ ಸಮುದಾಯಗಳಿಗೆ ನಮ್ಮ ಕಡೆಯಿಂದ ಶಾಂತಿ ಹಾಗೂ ಸಮೃದ್ಧಿಗಳಿವೆ. ಇತರ ಕೆಲವು ಸಮುದಾಯಗಳಿಗೂ ನಾವು (ಲೌಕಿಕ) ಸುಖಸಂಪತ್ತನ್ನು ನೀಡುವೆವು. ಕೊನೆಗೆ ನಮ್ಮ ಕಡೆಯಿಂದ, ಯಾತನಾಮಯ ಶಿಕ್ಷೆಯು ಅವರನ್ನು ಆವರಿಸಲಿದೆ.
49. (ದೂತರೇ,) ಇವೆಲ್ಲಾ ಗುಪ್ತ ಮಾಹಿತಿಗಳು. ನಾವು (ಈ ಕುರಿತು) ದಿವ್ಯವಾಣಿಯನ್ನು ನಿಮ್ಮ ಕಡೆಗೆ ಕಳಿಸುತ್ತಿದ್ದೇವೆ. ಈ ವಿಷಯಗಳನ್ನು ಈ ಮುಂಚೆ ನೀವಾಗಲಿ ನಿಮ್ಮ ಜನಾಂಗವಾಗಲಿ ಅರಿತಿರಲಿಲ್ಲ. ನೀವೀಗ ಸಹನಶೀಲರಾಗಿರಿ. ಅಂತಿಮ ಫಲಿತಾಂಶವು ಖಂಡಿತ ಸತ್ಯನಿಷ್ಠರ ಪರವಾಗಿರುತ್ತದೆ.
50. ಇನ್ನು, ಆದ್ ಜನಾಂಗದ ಕಡೆಗೆ (ದೂತರಾಗಿ) ಅವರ ಸಹೋದರ ಹೂದ್ ಬಂದರು. ಅವರು ಹೇಳಿದರು; ನನ್ನ ಜನಾಂಗದವರೇ, ಅಲ್ಲಾಹನನ್ನೇ ಆರಾಧಿಸಿರಿ. ನಿಮಗೆ ಅವನ ಹೊರತು ಬೇರೆ ಯಾರೂ ದೇವರಿಲ್ಲ. ನೀವು ಕೇವಲ ಸುಳ್ಳುಗಳನ್ನು ರಚಿಸಿಕೊಂಡಿರುವಿರಿ.
51. ನನ್ನ ಜನಾಂಗದವರೇ, ನಾನು ನಿಮ್ಮೊಡನೆ ಯಾವುದೇ ಪ್ರತಿಫಲವನ್ನು ಕೇಳುತ್ತಿಲ್ಲ. ನನ್ನ ಪ್ರತಿಫಲವು ನನ್ನನ್ನು ರೂಪಿಸಿದವನ ಬಳಿಯಲ್ಲೇ ಇದೆ. ನೀವೇನು ಆಲೋಚಿಸುವುದಿಲ್ಲವೇ?
52. ನನ್ನ ಜನಾಂಗದವರೇ, ನೀವು ನಿಮ್ಮ ಒಡೆಯನ ಬಳಿ ಕ್ಷಮೆಯನ್ನು ಬೇಡಿರಿ ಮತ್ತು ಅವನ ಕಡೆಗೇ ಸಂಪೂರ್ಣವಾಗಿ ಒಲಿದು ಬಿಡಿರಿ. ಅವನೇ ಆಕಾಶದಿಂದ ನಿಮ್ಮ ಮೇಲೆ ಧಾರಾಳ ಮಳೆಯನ್ನು ಸುರಿಸುವವನು ಮತ್ತು ನಿಮ್ಮ ಶಕ್ತಿಗೆ ಇನ್ನಷ್ಟು ಶಕ್ತಿಯನ್ನು ಸೇರಿಸುವವನು. ನೀವಿನ್ನು ಅಪರಾಧಿಗಳಾಗಿ (ಸತ್ಯವನ್ನು) ಕಡೆಗಣಿಸಬೇಡಿ.
53. ಅವರು (ಹೂದ್‌ರ ಜನಾಂಗದವರು) ಹೇಳಿದರು; ಹೂದರೇ, ನೀವು ನಮ್ಮ ಬಳಿಗೆ ಸ್ಪಷ್ಟ ಪುರಾವೆಯನ್ನೇನೂ ತಂದಿಲ್ಲ. ನಾವೇನೂ ನಿಮ್ಮ ಮಾತು ಕೇಳಿ ನಮ್ಮ ದೇವರುಗಳನ್ನು ತ್ಯಜಿಸಿಬಿಡುವವರಲ್ಲ ಮತ್ತು ನಾವು ನಿಮ್ಮಲ್ಲಿ ನಂಬಿಕೆ ಇಡಲಾರೆವು.
54. ನಮ್ಮ ದೇವರುಗಳ ಪೈಕಿ ಯಾರೋ ಒಬ್ಬರು ನಿಮ್ಮ ಮೇಲೆ ಮಾಡಿರುವ ಬಹಳ ಕೆಟ್ಟ ಸ್ವರೂಪದ ಮಾಟಕ್ಕೆ ನೀವು ತುತ್ತಾಗಿದ್ದೀರಿ ಎಂದೇ ನಾವು ಹೇಳುತ್ತೇವೆ. ಅವರು (ಹೂದ್) ಹೇಳಿದರು; ಖಂಡಿತವಾಗಿಯೂ ನಾನು ಅಲ್ಲಾಹನನ್ನು ಸಾಕ್ಷಿಯಾಗಿಸುತ್ತೇನೆ ಮತ್ತು ನೀವೂ ಸಾಕ್ಷಿಗಳಾಗಿರಿ – ನೀವು (ಅಲ್ಲಾಹನ ಜೊತೆ) ಯಾರನ್ನೆಲ್ಲಾ ಪಾಲುದಾರರಾಗಿಸುತ್ತಿರುವಿರೋ ಅವರೆಲ್ಲರಿಂದ ನಾನು ಮುಕ್ತನಾಗಿದ್ದೇನೆ.
55. ಅವನ (ಅಲ್ಲಾಹನ) ಹೊರತು. ನೀವೀಗ ನನ್ನ ವಿರುದ್ಧ ಎಲ್ಲ ಬಗೆಯ ಸಂಚುಗಳನ್ನು ಹೂಡಿರಿ ಮತ್ತು ನನಗೆ ಸ್ವಲ್ಪವೂ ಕಾಲಾವಕಾಶವನ್ನು ನೀಡಬೇಡಿ.
56. ಖಂಡಿತವಾಗಿಯೂ ನಾನು ಅಲ್ಲಾಹನಲ್ಲೇ ಅಚಲ ಭರವಸೆ ಇಟ್ಟಿದ್ದೇನೆ. ಅವನೇ ನನ್ನ ಒಡೆಯನು ಮತ್ತು ನಿಮ್ಮ ಒಡೆಯನು, ಚಲಿಸುವ ಪ್ರತಿಯೊಂದು ಜೀವಿಯ ಜುಟ್ಟು ಅವನ ಹಿಡಿತದಲ್ಲೇ ಇದೆ. ಖಂಡಿತವಾಗಿಯೂ ನನ್ನ ಒಡೆಯನು ಸ್ಥಿರವಾದ ಸನ್ಮಾರ್ಗದಲ್ಲಿದ್ದಾನೆ.
57. ನೀವೀಗ (ಸತ್ಯವನ್ನು) ಕಡೆಗಣಿಸುವಿರಾದರೆ (ನಿಮಗೆ ತಿಳಿದಿರಲಿ;) ಯಾವ ಸತ್ಯದೊಂದಿಗೆ ನನ್ನನ್ನು ನಿಮ್ಮ ಕಡೆಗೆ ಕಳಿಸಲಾಗಿತ್ತೋ ಅದನ್ನು ನಾನು ನಿಮಗೆ ತಲುಪಿಸಿ ಬಿಟ್ಟಿದ್ದೇನೆ. (ಈಗ) ನನ್ನ ಒಡೆಯನು ನಿಮ್ಮ ಸ್ಥಾನದಲ್ಲಿ ಬೇರೊಂದು ಜನಾಂಗವನ್ನು (ನಾಡಿನ) ಉತ್ತರಾಧಿಕಾರಿಯಾಗಿ ಮಾಡುವನು. ಅವನಿಗೆ (ಅಲ್ಲಾಹನಿಗೆ) ಯಾವ ಹಾನಿಯನ್ನೂ ಮಾಡಲು ನಿಮಗೆ ಸಾಧ್ಯವಾಗದು. ಖಂಡಿತವಾಗಿಯೂ ನನ್ನ ಒಡೆಯನು ಎಲ್ಲವುಗಳ ಸಂರಕ್ಷಕನಾಗಿದ್ದಾನೆ.
58. ಕೊನೆಗೆ, ನಮ್ಮ ಆದೇಶವು ಬಂದು ಬಿಟ್ಟಾಗ, ನಾವು ನಮ್ಮ ಅನುಗ್ರಹದಿಂದ ಹೂದ್‌ರನ್ನು ಮತ್ತು ಅವರ ಜೊತೆಗೆ, ಸತ್ಯದಲ್ಲಿ ನಂಬಿಕೆ ಇಟ್ಟಿದ್ದ ಜನರನ್ನು ರಕ್ಷಿಸಿದೆವು ಮತ್ತು ನಾವು ಅವರನ್ನು ಭಾರೀ ಕಠಿಣ ಶಿಕ್ಷೆಯಿಂದಲೂ ಪಾರುಗೊಳಿಸಿದೆವು.
59. ಹೀಗಿದ್ದರು ಆದ್ (ಜನಾಂಗದವರು). ಅವರು ತಮ್ಮ ಒಡೆಯನ ವಚನಗಳನ್ನು ತಿರಸ್ಕರಿಸಿದರು ಹಾಗೂ ಅವನ ದೂತರ ಆಜ್ಞೆಗಳನ್ನು ಮೀರಿ ನಡೆದರು ಮತ್ತು ಅವರು ಪ್ರತಿಯೊಬ್ಬ ಮರ್ದಕ ವಿದ್ರೋಹಿಯನ್ನು ಅನುಸರಿಸಿದರು.
60. ಈ ಲೋಕದಲ್ಲೂ ಪರಲೋಕದಲ್ಲೂ ಶಾಪವನ್ನು ಅವರ ಬೆನ್ನುಹತ್ತಿಸಲಾಯಿತು. ನಿಮಗೆ ತಿಳಿದಿರಲಿ! ಖಂಡಿತವಾಗಿಯೂ ಆದ್ ಜನಾಂಗದವರು ತಮ್ಮ ಒಡೆಯನನ್ನು ಧಿಕ್ಕ್ಕರಿಸಿದರು. ನಿಮಗೆ ತಿಳಿದಿರಲಿ! ಛೀಮಾರಿ ಇದೆ, ಹೂದ್‌ರ ಆದ್ ಜನಾಂಗಕ್ಕೆ.
61. ಇನ್ನು, ಸಮೂದ್ ಜನಾಂಗದೆಡೆಗೆ, (ದೂತರಾಗಿ) ಅವರ ಸಹೋದರ ಸಾಲಿಹ್ ಬಂದರು. ಅವರು ಹೇಳಿದರು; ನನ್ನ ಜನಾಂಗದವರೇ, ಅಲ್ಲಾಹನನ್ನು ಮಾತ್ರ ಆರಾಧಿಸಿರಿ, ನಿಮಗೆ ಅವನ ಹೊರತು ಬೇರೆ ಯಾರೂ ದೇವರಿಲ್ಲ. ಅವನೇ ನಿಮ್ಮನ್ನು ಭೂಮಿಯಿಂದ ಸೃಷ್ಟಿಸಿದನು ಮತ್ತು ಅದರಲ್ಲಿ ನಿಮ್ಮನ್ನು ನೆಲೆಸಿದನು. ನೀವು ಅವನಲ್ಲಿ ಕ್ಷಮೆಯನ್ನು ಬೇಡಿರಿ ಮತ್ತು ಅವನೆದುರು ಪಶ್ಚಾತ್ತಾಪ ಪಡಿರಿ. ಖಂಡಿತವಾಗಿಯೂ ನನ್ನ ಒಡೆಯನು ತುಂಬಾ ನಿಕಟನೂ ಸ್ಪಂದಿಸುವವನೂ ಆಗಿದ್ದಾನೆ.
62. ಅವರು (ಜನಾಂಗದವರು) ಹೇಳಿದರು; ಸಾಲಿಹರೇ, ನೀವು ಈ ಹಿಂದೆ ನಮ್ಮ ನಡುವೆ ನಿರೀಕ್ಷೆಯ ಕೇಂದ್ರವಾಗಿದ್ದಿರಿ. ಇದೀಗ ನಮ್ಮ ತಾತ – ಮುತ್ತಾತಂದಿರು ಪೂಜಿಸಿದವುಗಳನ್ನು ನಾವು ಪೂಜಿಸಬಾರದೆಂದು ನೀವು ನಮ್ಮನ್ನು ತಡೆಯುತ್ತಿರುವಿರಾ? ನೀವು ನಮ್ಮನ್ನು ಯಾವುದರೆಡೆಗೆ ಕರೆಯುತ್ತಿರುವಿರೋ ಆ ಕುರಿತು ನಮಗೆ ಭಾರೀ ಸಂಶಯವಿದೆ.
63. ಅವರು (ಸಾಲಿಹ್) ಹೇಳಿದರು; ನನ್ನ ಜನಾಂಗದವರೇ, ನೀವು (ಚಿಂತಿಸಿ) ನೋಡಿದಿರಾ, ಒಂದು ವೇಳೆ ನಾನು ನನ್ನ ಒಡೆಯನ ಕಡೆಯಿಂದ (ತೋರಲಾದ) ಸ್ಪಷ್ಟವಾದ ಸರಿ ದಾರಿಯಲ್ಲಿದ್ದು, ಅವನು ತನ್ನ ಕಡೆಯಿಂದ ನನಗೆ ವಿಶೇಷ ಅನುಗ್ರಹವನ್ನು ದಯಪಾಲಿಸಿರುವಾಗ, ನಾನು ಅವನ ಆಜ್ಞೆಯನ್ನು ಮೀರಿನಡೆದರೆ, ಅಲ್ಲಾಹನಿಂದ ಯಾರು ತಾನೇ ನನ್ನನ್ನು ರಕ್ಷಿಸಬಲ್ಲರು? ನೀವಂತು ನನ್ನ ಪಾಲಿಗೆ ಕೇವಲ ನಷ್ಟವನ್ನು ಮಾತ್ರ ಹೆಚ್ಚಿಸುತ್ತಿರುವಿರಿ.
64. ನನ್ನ ಜನಾಂಗದವರೇ, ಇದು ಅಲ್ಲಾಹನ ಒಂಟೆ, ಇದು ನಿಮ್ಮ ಪಾಲಿಗೆ ಒಂದು ಸೂಚನೆಯಾಗಿದೆ. ಅಲ್ಲಾಹನ ಭೂಮಿಯಲ್ಲಿ ಮೇಯುತ್ತಿರಲು ಇದನ್ನು ಬಿಟ್ಟುಬಿಡಿರಿ. ಯಾವುದೇ ದುರುದ್ದೇಶದಿಂದ ಇದನ್ನು ಮುಟ್ಟಬೇಡಿ. ಅನ್ಯಥಾ ಬಹುಬೇಗನೇ ನಿಮ್ಮ ಮೇಲೆ ಶಿಕ್ಷೆಯು ಎರಗಲಿದೆ.
65. ಆದರೆ ಅವರು (ಸಾಲಿಹ್‌ರ ಜನಾಂಗದವರು) ಅದನ್ನು ಕೊಂದುಬಿಟ್ಟರು. ಆಗ ಅವರು (ಸಾಲಿಹ್) ಹೇಳಿದರು; ಇನ್ನು ಮೂರು ದಿನಗಳ ಮಟ್ಟಿಗೆ ನೀವು ನಿಮ್ಮ ಮನೆಗಳಲ್ಲಿ ಸುಖವಾಗಿರಿ. ಇದು ಸುಳ್ಳಾಗದ ಎಚ್ಚರಿಕೆಯಾಗಿದೆ.
66. ಕೊನೆಗೆ ನಮ್ಮ ಆದೇಶ ಬಂದು ಬಿಟ್ಟಾಗ ನಾವು ನಮ್ಮ ಅನುಗ್ರಹದಿಂದ ಸಾಲಿಹ್‌ರನ್ನು ಮತ್ತು ಅವರ ಜೊತೆಗೆ ಸತ್ಯದಲ್ಲಿ ನಂಬಿಕೆ ಇಟ್ಟಿದ್ದ ಜನರನ್ನು ರಕ್ಷಿಸಿದೆವು ಮತ್ತು ಅವರನ್ನು ಆ ದಿನದ ಅಪಮಾನದಿಂದ ಕಾಪಾಡಿದೆವು. ನಿಮ್ಮ ಒಡೆಯನು ಖಂಡಿತ ಅತ್ಯಂತ ಬಲಿಷ್ಠನೂ ಪ್ರಚಂಡನೂ ಆಗಿರುವನು.
67. ಅತ್ತ ಒಂದು ಭೀಕರ ಶಬ್ದವು ಅಕ್ರಮಿಗಳನ್ನು ಆವರಿಸಿಕೊಂಡಿತು ಮತ್ತು ಬೆಳಗಾದಾಗ, ಅವರು ತಮ್ಮ ಮನೆಗಳಲ್ಲೇ ಅಧೋಮುಖರಾಗಿ ಬಿದ್ದುಕೊಂಡಿದ್ದರು.
68. ಅವರು ಅಲ್ಲಿ ಎಂದೂ ವಾಸಿಸಿಯೇ ಇರಲಿಲ್ಲ ಎಂಬಂತಿತ್ತು ಅವರ ಸ್ಥಿತಿ. ನಿಮಗೆ ತಿಳಿದಿರಲಿ! ಸಮೂದ್ ಜನಾಂಗದವರು ತಮ್ಮ ಒಡೆಯನನ್ನು ಧಿಕ್ಕರಿಸಿದ್ದರು. ನಿಮಗೆ ತಿಳಿದಿರಲಿ! ಧಿಕ್ಕಾರವಿದೆ, ಸಮೂದ್ ಜನಾಂಗದವರಿಗೆ.
69. ನಮ್ಮ ದೂತರು (ಮಲಕ್‌ಗಳು) ಶುಭವಾರ್ತೆಯೊಂದಿಗೆ, ಇಬ್ರಾಹೀಮ್‌ರ ಬಳಿಗೆ ಬಂದರು. ಅವರು ಸಲಾಮ್ (ಶಾಂತಿ) ಎಂದರು. ಅವರು (ಇಬ್ರಾಹೀಮರು) ‘ಸಲಾಮ್’ ಎಂದು ಹೇಳಿದರು ಮತ್ತು ತಡಮಾಡದೆ, ಹುರಿದ ಒಂದು ಕರುವನ್ನು ತಂದರು.
70. ಆದರೆ ಅವರ (ಅತಿಥಿಗಳ) ಕೈಗಳು ಅದರ (ಆಹಾರದ) ಕಡೆಗೆ ತಲುಪದಿರುವುದನ್ನು ಕಂಡಾಗ ಅವರು (ಇಬ್ರಾಹೀಮರು) ಅವರ ಕುರಿತು ಗಾಬರಿಗೊಂಡರು ಮತ್ತು ಭೀತರಾದರು. ಆಗ ಅವರು (ಅತಿಥಿಗಳು) ಹೇಳಿದರು; ಅಂಜಬೇಡಿ. ನಿಜವಾಗಿ, ನಮ್ಮನ್ನು ಲೂತ್‌ರ ಜನಾಂಗದೆಡೆಗೆ ಕಳಿಸಲಾಗಿದೆ.
71. ಆಗ ಅವರ (ಇಬ್ರಾಹೀಮರ) ಪತ್ನಿಯು ನಿಂತಿದ್ದರು ಮತ್ತು ನಕ್ಕು ಬಿಟ್ಟರು. ನಾವು ಆಕೆಗೆ ಇಸ್‌ಹಾಕ್‌ರ (ಜನನದ) ಹಾಗೂ ಇಸ್‌ಹಾಕ್‌ರ ಪೀಳಿಗೆಯಿಂದ ಯಾಕೂಬ್‌ರ (ಜನನದ) ಶುಭವಾರ್ತೆ ನೀಡಿದೆವು.
72. ಆಕೆ ಹೇಳಿದರು; ಅಯ್ಯೋ! ನನಗೆ ಮಗು ಹುಟ್ಟಲಿದೆಯೇ? ನಾನಂತು ಮುದುಕಿಯಾಗಿದ್ದೇನೆ ಮತ್ತು ಈ ನನ್ನ ಪತಿಯೂ ಮುದುಕರಾಗಿದ್ದಾರೆ. ಇದು ಅಚ್ಚರಿಯ ವಿಷಯವೇ ಸರಿ.
73. ಅವರು ಹೇಳಿದರು; ನೀವೇನು ಅಲ್ಲಾಹನ ಆದೇಶದ ಕುರಿತು ಅಚ್ಚರಿ ಪಡುತ್ತಿರುವಿರಾ? ಮನೆಯವರೇ, ಅಲ್ಲಾಹನ ಅನುಗ್ರಹ ಹಾಗೂ ಸಮೃದ್ಧಿಗಳು ನಿಮ್ಮ ಮೇಲಿವೆ. ಖಂಡಿತವಾಗಿಯೂ ಅವನು ಹೊಗಳಿಕೆಗೆ ಅರ್ಹ ಹಾಗೂ ಗೌರವಾನ್ವಿತನಾಗಿದ್ದಾನೆ.
74. ಹೀಗೆ, ಇಬ್ರಾಹೀಮರ ಆತಂಕವು ತೊಲಗಿ, ಶುಭವಾರ್ತೆಯು ಅವರಿಗೆ ಸಿಕ್ಕಾಗ ಅವರು ಲೂತ್‌ರ ಜನಾಂಗದ ಕುರಿತು ನಮ್ಮೊಡನೆ ವಾದಿಸತೊಡಗಿದರು.
75. ಖಂಡಿತವಾಗಿಯೂ ಇಬ್ರಾಹೀಮರು ತುಂಬಾ ಸಂಯಮಿ, ಮೃದು ಮನಸ್ಸಿನವರು ಮತ್ತು ಸದಾ ನಮ್ಮತ್ತ ಒಲವು ಉಳ್ಳವರಾಗಿದ್ದರು.
76. (ಅವರೊಡನೆ ಹೇಳಲಾಯಿತು;) ಇಬ್ರಾಹೀಮರೇ, ನೀವು ಇದನ್ನು ಬಿಟ್ಟುಬಿಡಿ. ನಿಮ್ಮ ಒಡೆಯನ ಆದೇಶವು ಖಂಡಿತ ಬಂದು ಬಿಟ್ಟಿದೆ. ಹಿಂದೆಗೆಯಲಾಗದ ಶಿಕ್ಷೆಯು ಅವರ (ಲೂತ್‌ರ ಜನಾಂಗದ) ಮೇಲೆ ಬಂದೆರಗುವುದು ಖಚಿತವಾಗಿದೆ.
77. ನಮ್ಮ ದೂತರು ಲೂತ್‌ರ ಬಳಿಗೆ ಬಂದಾಗ ಅವರಿಂದಾಗಿ ಅವರು (ಲೂತರು) ಚಿಂತೆಗೀಡಾದರು ಮತ್ತು ಅವರ ಮನಸ್ಸು ದುಃಖಿತವಾಗಿತ್ತು. ಅವರು ‘‘ಇದು ಭಾರೀ ಕಠಿಣ ದಿನವಾಗಿದೆ’’ ಎಂದರು.
78. ಅವರ ಜನಾಂಗದವರು ಅವರ ಬಳಿಗೆ ಧಾವಿಸಿ ಬಂದರು. ಅವರು ಈ ಹಿಂದೆ ಪಾಪ ಕಾರ್ಯಗಳಲ್ಲಿ ತೊಡಗಿದ್ದರು. ಅವರು (ಲೂತ್) ಹೇಳಿದರು; ನನ್ನ ಜನಾಂಗದವರೇ, ಇವರು ನನ್ನ ಪುತ್ರಿಯರು. ನಿಮ್ಮ ಪಾಲಿಗೆ ಇವರು ಹೆಚ್ಚು ಪಾವನರಾಗಿದ್ದಾರೆ. ನೀವು ಅಲ್ಲಾಹನಿಗೆ ಅಂಜಿರಿ ಮತ್ತು ನನ್ನ ಅತಿಥಿಗಳ ನಡುವೆ ನನ್ನನ್ನು ಅಪಮಾನಿಸಬೇಡಿ. ನಿಮ್ಮಲ್ಲಿ ಚಾರಿತ್ರ್ಯ ಸರಿ ಇರುವ ಒಬ್ಬ ಪುರುಷನೂ ಇಲ್ಲವೇ?
79. ಅವರು ಹೇಳಿದರು; ನಿಮ್ಮ ಪುತ್ರಿಯರ ಮೇಲೆ ನಮಗೆ ಯಾವ ಹಕ್ಕೂ ಇಲ್ಲವೆಂಬುದು ನಿಮಗೆ ತಿಳಿದಿದೆ ಮತ್ತು ನಾವು ಬಯಸುವುದು ಏನನ್ನು ಎಂಬುದು ಕೂಡಾ ನಿಮಗೆ ಖಂಡಿತ ತಿಳಿದಿದೆ.
80. ಅವರು (ಲೂತ್) ಹೇಳಿದರು; ನನಗೆ ನಿಮ್ಮ ಮೇಲೆ ಪ್ರಾಬಲ್ಯ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಅಥವಾ ಒಂದು ಭದ್ರ ಸ್ಥಳದಲ್ಲಿ ನಾನು ಆಶ್ರಯ ಪಡೆಯಬೇಕಿತ್ತು.
81. ಅವರು (ಅತಿಥಿಗಳು) ಹೇಳಿದರು; ಲೂತರೇ, ನಾವು ನಿಮ್ಮ ಒಡೆಯನ ದೂತರು. ಅವರು (ಧಿಕ್ಕಾರಿಗಳು) ನಿಮ್ಮನ್ನು ತಲುಪರಾರರು. ನೀವೀಗ ರಾತ್ರಿಯ ಒಂದು ಭಾಗದಲ್ಲಿ, ನಿಮ್ಮ ಮನೆಯವರೊಂದಿಗೆ ಹೊರಟು ಬಿಡಿರಿ – ನಿಮ್ಮ ಪತ್ನಿಯ ಹೊರತು ನಿಮ್ಮಲ್ಲಿ ಒಬ್ಬರೂ ಹಿಂದಿರುಗಿ ನೋಡಬಾರದು. ಅವರಿಗೆ (ಧಿಕ್ಕಾರಿಗಳಿಗೆ) ಸಂಭವಿಸಿದ್ದೆಲ್ಲವೂ ಖಂಡಿತ ಆಕೆಗೂ ಸಂಭವಿಸುವುದು. ಅವರಿಗೆ (ಧಿಕ್ಕಾರಿಗಳ ವಿನಾಶಕ್ಕೆ) ಮುಂಜಾನೆಯ ಸಮಯವು ನಿಶ್ಚಿತವಾಗಿದೆ. ಮುಂಜಾನೆ ಏನು ಸಮೀಪವಿಲ್ಲವೇ?
82. ಕೊನೆಗೆ ನಮ್ಮ ಆದೇಶವು ಬಂದು ಬಿಟ್ಟಾಗ ನಾವು ಅದನ್ನು (ಆ ನಾಡನ್ನು) ಬುಡಮೇಲುಗೊಳಿಸಿ ಬಿಟ್ಟೆವು ಮತ್ತು ಅದರ ಮೇಲೆ ಬೆಂದ ಕಲ್ಲಿನ ಹರಳುಗಳ ಮಳೆಯನ್ನು ನಿರಂತರ ಸುರಿಸಿದೆವು. 83. ಅವುಗಳನ್ನು ನಿಮ್ಮ ಒಡೆಯನ ಬಳಿ ಗುರುತಿಸಲಾಗಿತ್ತು ಮತ್ತು ಅದು (ಆ ಪ್ರದೇಶವು) ಅಕ್ರಮಿಗಳಿಂದ ದೂರವೇನಿಲ್ಲ.
84. ಮುಂದೆ ಮದ್‌ಯನ್‌ನ ಕಡೆಗೆ ಅವರ ಸಹೋದರ ಶುಐಬ್‌ರನ್ನು ಕಳಿಸಲಾಯಿತು. ಅವರು ಹೇಳಿದರು; ನನ್ನ ಜನಾಂಗದವರೇ, ನೀವು ಅಲ್ಲಾಹನನ್ನೇ ಪೂಜಿಸಿರಿ. ನಿಮಗೆ ಅವನ ಹೊರತು ಬೇರೆ ದೇವರಿಲ್ಲ. ನೀವು ಅಳತೆ, ತೂಕದಲ್ಲಿ ಕಡಿತ ಮಾಡಬೇಡಿ. ಸದ್ಯ ನೀವು ಸುಖದಲ್ಲಿರುವುದನ್ನು ನಾನು ಖಂಡಿತ ಕಾಣುತ್ತಿದ್ದೇನೆ. ಆದರೆ ಸಂಪೂರ್ಣವಾಗಿ ಆವರಿಸಿ ಬಿಡುವ ದಿನವೊಂದರ ಶಿಕ್ಷೆಯು ನಿಮ್ಮ ಮೇಲೆ ಬಂದೆರಗುವ ಭಯ ನನಗಿದೆ.
85. ನನ್ನ ಜನಾಂಗದವರೇ, ನೀವು ನ್ಯಾಯೋಚಿತವಾಗಿ ಅಳೆಯಿರಿ ಮತ್ತು ತೂಗಿರಿ. ನೀವೆಂದೂ ಜನರಿಗೆ ಅವರ ವಸ್ತುಗಳನ್ನು ಕಡಿತಗೊಳಿಸಿ ಕೊಡಬೇಡಿ ಮತ್ತು ನೀವು ಭೂಮಿಯಲ್ಲಿ ಅಶಾಂತಿ ಹರಡುತ್ತಾ ಅಲೆಯಬೇಡಿ.
86. ನೀವು ನಿಜಕ್ಕೂ ನಂಬಿಕೆ ಉಳ್ಳವರಾಗಿದ್ದರೆ, ಅಲ್ಲಾಹನು ಏನನ್ನು ಉಳಿಸಿಕೊಡುತ್ತಾನೋ ಅದುವೇ ನಿಮ್ಮ ಪಾಲಿಗೆ ಉತ್ತಮವಾಗಿದೆ. ನಾನು ನಿಮ್ಮ ಮೇಲಿನ ಕಾವಲುಗಾರನೇನೂ ಅಲ್ಲ.
87. ಅವರು (ಜನಾಂಗದವರು) ಹೇಳಿದರು; ಶುಐಬರೇ, ನಮ್ಮ ತಾತ ಮುತ್ತಾತಂದಿರು ಪೂಜಿಸುತ್ತಿದ್ದ ದೇವರುಗಳನ್ನು ನಾವು ಬಿಟ್ಟು ಬಿಡಬೇಕೆಂದು ಹಾಗೂ ಸ್ವತಃ ನಮ್ಮ ಸಂಪತ್ತಿನ ವಿಷಯದಲ್ಲಿ ನಾವು ನಮ್ಮಿಚ್ಛೆಯಂತೆ ವರ್ತಿಸಬಾರದು ಎಂದು ನಿಮ್ಮ ನಮಾಝ್ ನಿಮಗೆ ಆದೇಶಿಸುತ್ತಿದೆಯೇ? ನೀವು ಭಾರೀ ಬುದ್ಧಿವಂತರೂ, ದಾರ್ಶನಿಕರೂ ಆಗಿಬಿಟ್ಟಿದ್ದೀರಿ!
88. ಅವರು ಹೇಳಿದರು; ನನ್ನ ಜನಾಂಗದವರೇ, ನೀವು ನೋಡುತ್ತಿರುವಿರಾ? ನಾನಂತು ನನ್ನ ಒಡೆಯನ ಕಡೆಯಿಂದ (ಬಂದಿರುವ) ಸ್ಪಷ್ಟ ಪುರಾವೆಯನ್ನು ಅನುಸರಿಸುತ್ತಿದ್ದೇನೆ. ಅವನು ತನ್ನ ಕಡೆಯಿಂದ ನನಗೆ ಉತ್ತಮ ಆಹಾರವನ್ನು ನೀಡಿದ್ದಾನೆ. ನಾನು ಯಾವುದರಿಂದ ನಿಮ್ಮನ್ನು ತಡೆಯುತ್ತಿರುವೆನೋ ಅದನ್ನು ಸ್ವತಃ ಉಲ್ಲಂಘಿಸುವ ಇರಾದೆ ನನಗಿಲ್ಲ. ನಾನಂತು, ನನಗೆ ಸಾಧ್ಯವಿರುವಷ್ಟು ಮಟ್ಟಿಗೆ ಸುಧಾರಣೆಯನ್ನಷ್ಟೇ ಬಯಸುತ್ತೇನೆ. ಇನ್ನು, ನನಗೆ ನನ್ನ ಭಾಗ್ಯವನ್ನು ನೀಡುವವನು ಅಲ್ಲಾಹನ ಹೊರತು ಬೇರೆ ಯಾರೂ ಇಲ್ಲ. ನಾನು ಅವನಲ್ಲೇ ಭರವಸೆ ಇಟ್ಟಿದ್ದೇನೆ ಮತ್ತು ನಾನು ಅವನ ಕಡೆಗೇ ಮರಳುತ್ತೇನೆ.
89. ನನ್ನ ಜನಾಂಗದವರೇ, ನನ್ನ ಮೇಲಿನ ಹಗೆತನವು, ನೂಹ್‌ರ ಜನಾಂಗ ಅಥವಾ ಹೂದ್‌ರ ಜನಾಂಗ ಅಥವಾ ಸಾಲಿಹ್‌ರ ಜನಾಂಗದವರ ಮೇಲೆ ಬಂದೆರಗಿದಂತಹ ಶಿಕ್ಷೆಯು ನಿಮ್ಮ ಮೇಲೆ ಬಂದೆರಗುವುದಕ್ಕೆ ಕಾರಣವಾಗುವಂತಹ ಕೆಲಸಗಳನ್ನು ನಿಮ್ಮಿಂದ ಮಾಡಿಸದಿರಲಿ. ಲೂತ್‌ರ ಜನಾಂಗವಂತೂ ನಿಮ್ಮಿಂದ ಹೆಚ್ಚು ದೂರವೇನಿಲ್ಲ.
90. ನೀವು ನಿಮ್ಮ ಒಡೆಯನಲ್ಲಿ ಕ್ಷಮೆ ಬೇಡಿರಿ ಮತ್ತು ಅವನ ಕಡೆಗೆ ಒಲಿಯಿರಿ. ಖಂಡಿತವಾಗಿಯೂ ನನ್ನ ಒಡೆಯನು ತುಂಬಾ ಕರುಣಾಳು ಹಾಗೂ ಪ್ರೀತಿಸುವವನಾಗಿದ್ದಾನೆ.
91. ಅವರು (ಜನಾಂಗದವರು) ಹೇಳಿದರು; ಶುಐಬರೇ, ನೀವು ಹೇಳುವ ಹೆಚ್ಚಿನ ವಿಷಯಗಳು ನಮಗೆ ಅರ್ಥವಾಗುವುದಿಲ್ಲ. ನಾವು ನಿಮ್ಮನ್ನು ನಮ್ಮ ನಡುವಿನ ತೀರಾ ದುರ್ಬಲ ವ್ಯಕ್ತಿಯಾಗಿ ಕಾಣುತ್ತಿದ್ದೇವೆ. ನಿಮ್ಮ ಮನೆತನದ ಮುಲಾಜೆ ಇಲ್ಲದಿರುತ್ತಿದ್ದರೆ ನಾವು ನಿಮ್ಮ ಮೇಲೆ ಕಲ್ಲೆಸೆಯುತ್ತಿದ್ದೆವು. ನೀವು ನಮ್ಮ ಮೇಲೆ ಯಾವುದೇ ಪ್ರಾಬಲ್ಯ ಉಳ್ಳವರಲ್ಲ.
92. ಅವರು (ಶುಐಬ್) ಹೇಳಿದರು; ನನ್ನ ಜನಾಂಗದವರೇ, ನನ್ನ ಮನೆತನವೇನು ನಿಮ್ಮ ಪಾಲಿಗೆ ಅಲ್ಲಾಹನಿಗಿಂತ ಹೆಚ್ಚು ಬಲಿಷ್ಠ ವಾಗಿದೆಯೇ? ನಿಜವಾಗಿ ನೀವು ಅವನನ್ನು (ಅಲ್ಲಾಹನನ್ನು) ನಿಮ್ಮ ಬೆನ್ನ ಹಿಂದೆ ಹಾಕಿ ನಿರ್ಲಕ್ಷಿಸಿ ಬಿಟ್ಟಿರುವಿರಿ. ಖಂಡಿತವಾಗಿಯೂ ನನ್ನ ಒಡೆಯನು ನೀವು ಮಾಡುತ್ತಿರುವ ಎಲ್ಲವನ್ನು ಆವರಿಸಿಕೊಂಡಿದ್ದಾನೆ.
93. ನನ್ನ ಜನಾಂಗದವರೇ, ನಿಮ್ಮ ನೆಲೆಯಲ್ಲಿ ನೀವು ಸಕ್ರಿಯರಾಗಿರಿ, ನಾನೂ ಸಕ್ರಿಯನಾಗಿರುತ್ತೇನೆ. ಅಪಮಾನಕಾರಿ ಶಿಕ್ಷೆಯು ಯಾರ ಮೇಲೆ ಬಂದೆರಗಲಿದೆ ಮತ್ತು ಸುಳ್ಳುಗಾರ ಯಾರು ಎಂಬುದು ನಿಮಗೆ ಶೀಘ್ರವೇ ತಿಳಿಯಲಿದೆ. ನೀವು ಕಾಯಿರಿ, ನಿಮ್ಮ ಜೊತೆ ನಾನೂ ಕಾಯುತ್ತೇನೆ.
94. ಕೊನೆಗೆ ನಮ್ಮ ಆದೇಶವು ಬಂದು ಬಿಟ್ಟಾಗ, ನಾವು ಶುಐಬರನ್ನು ಹಾಗೂ ಅವರ ಜೊತೆ ಸತ್ಯದಲ್ಲಿ ನಂಬಿಕೆ ಇಟ್ಟಿದ್ದ ಜನರನ್ನು ನಮ್ಮ ವಿಶೇಷ ಅನುಗ್ರಹದಿಂದ ರಕ್ಷಿಸಿದೆವು. ಅಕ್ರಮಿಗಳನ್ನು ಒಂದು ಭೀಕರ ಶಬ್ದವು ಆವರಿಸಿಕೊಂಡಿತು ಮತ್ತು ಅವರ ಪಾಲಿಗೆ ಬೆಳಗಾದಾಗ ಅವರು ತಮ್ಮ ಮನೆಗಳಲ್ಲೇ ಅಧೋಮುಖರಾಗಿ ಬಿದ್ದುಕೊಂಡಿದ್ದರು.
95. ಅವರು ಅಲ್ಲಿ ಎಂದೂ ವಾಸಿಸಿಯೇ ಇರಲಿಲ್ಲ ಎಂಬಂತಿತ್ತು ಅವರ ಸ್ಥಿತಿ. ನಿಮಗೆ ತಿಳಿದಿರಲಿ! ಸಮೂದರು ಶಾಪಗ್ರಸ್ತರಾದಂತೆ ಮದ್‌ಯನರು ಶಾಪಗ್ರಸ್ತರಾದರು.
96. ಮತ್ತು ನಾವು ನಮ್ಮ ವಚನಗಳೊಂದಿಗೆ ಹಾಗೂ ಸ್ಪಷ್ಟ ಪುರಾವೆಯೊಂದಿಗೆ ಮೂಸಾರನ್ನು ಕಳಿಸಿದೆವು.
97. ಫಿರ್‌ಔನ್ ಮತ್ತು ಅವನ ಸರದಾರರ ಕಡೆಗೆ. ಅವರು ಫಿರ್‌ಔನ್‌ನ ಆದೇಶವನ್ನೇ ಪಾಲಿಸುತ್ತಿದ್ದರು. ಇನ್ನು ಫಿರ್ಔನನ ಆದೇಶವು ನೇರವಾದುದಾಗಿರಲಿಲ್ಲ.
98. ಪುನರುತ್ಥಾನ ದಿನ ಅವನು ತನ್ನ ಜನಾಂಗದವರಿಗಿಂತ ಮುಂದಿರುವನು ಮತ್ತು ಅವನೇ ಅವರನ್ನು ನರಕದ ಬೆಂಕಿಗೆ ಇಳಿಸುವನು – ಬಹಳ ಕೆಟ್ಟದಾಗಿರುವುದು, ಇಳಿಯುವ ಆ ಸ್ಥಳ.
99. ಈ ಲೋಕದಲ್ಲೂ ಶಾಪವನ್ನು ಅವರ ಬೆನ್ನು ಹತ್ತಿಸಲಾಗಿತ್ತು. ಇನ್ನು ಪರಲೋಕದಲ್ಲಿ ಅವರಿಗೆ ಸಿಗುವ ಬಹುಮಾನವು ತೀರಾ ಕೆಟ್ಟದಾಗಿರುವುದು.
100. (ದೂತರೇ,) ಈ ರೀತಿ ನಾವು ನಿಮಗೆ ಕೆಲವು ನಾಡುಗಳ ಸಮಾಚಾರವನ್ನು ಕೇಳಿಸುತ್ತಿದ್ದೇವೆ. ಆ ಪೈಕಿ ಕೆಲವು ನಾಡುಗಳು ಇಂದಿಗೂ ಇವೆ ಮತ್ತು ಕೆಲವು ನಿರ್ಮೂಲವಾಗಿವೆ.
101. ಅವರ (ನಾಶವಾದ ಜನಾಂಗಗಳ) ಮೇಲೆ ನಾವು ಅಕ್ರಮ ವೆಸಗಲಿಲ್ಲ. ಸ್ವತಃ ಅವರೇ ತಮ್ಮ ಮೇಲೆ ಅಕ್ರಮ ವೆಸಗಿಕೊಂಡರು. ಕೊನೆಗೆ ನಿಮ್ಮ ಒಡೆಯನ ಆದೇಶವು ಬಂದು ಬಿಟ್ಟಾಗ, ಅವರು ಅಲ್ಲಾಹನನ್ನು ಬಿಟ್ಟು ಕೂಗಿ ಪ್ರಾರ್ಥಿಸುತ್ತಿದ್ದ ದೇವರುಗಳು ಯಾರೂ ಅವರ ಯಾವ ಕೆಲಸಕ್ಕೂ ಬರಲಿಲ್ಲ. ಅವರು (ಆ ದೇವರುಗಳು) ಅವರ ಪಾಲಿಗೆ, ವಿನಾಶದ ಹೊರತು ಬೇರೇನನ್ನೂ ಹೆಚ್ಚಿಸಲಿಲ್ಲ.
102. ಹೀಗಿರುತ್ತದೆ, ಯಾವುದೇ ನಾಡಿನವರು ಅಕ್ರಮದಲ್ಲಿ ನಿರತರಾದಾಗ, ಅವರನ್ನು ಹಿಡಿಯುವ ನಿಮ್ಮ ಒಡೆಯನ ಹಿಡಿತ. ಖಂಡಿತವಾಗಿಯೂ ಅವನ ಹಿಡಿತವು ತುಂಬಾ ಯಾತನಾಮಯವೂ ಕಠೋರವೂ ಆಗಿರುತ್ತದೆ.
103. ಪರಲೋಕದ ಶಿಕ್ಷೆಯ ಭಯ ಉಳ್ಳವನಿಗೆ ಇದರಲ್ಲಿ ಖಂಡಿತ ಪಾಠವಿದೆ. ಅದು, ಎಲ್ಲ ಮಾನವರೂ ಒಂದೆಡೆ ಸೇರುವ ದಿನವಾಗಿರುವುದು ಮತ್ತು ಅದು (ಪ್ರತಿಯೊಬ್ಬರ ಪಾಲಿಗೆ) ಹಾಜರಿಯ ದಿನವಾಗಿರುವುದು.
104. ನಾವು ಅದನ್ನು ಒಂದು ನಿರ್ದಿಷ್ಟ ಅವಧಿಗಾಗಿ ಮಾತ್ರ ಮುಂದೂಡಿರುವೆವು .
105. ಅದು ಬಂದು ಬಿಡುವ ದಿನ, ಅವನ ಅನುಮತಿ ಇಲ್ಲದೆ ಯಾರಿಗೂ ಮಾತನಾಡಲಿಕ್ಕಾಗದು. ಅವರಲ್ಲಿ ಕೆಲವರು ತೀರಾ ಭಾಗ್ಯಹೀನರಾಗಿರುವರು ಮತ್ತು ಕೆಲವರು ತುಂಬಾ ಭಾಗ್ಯಶಾಲಿಗಳಾಗಿರುವರು.
106. ಭಾಗ್ಯಹೀನರು ನರಕಾಗ್ನಿಯಲ್ಲಿರುವರು ಮತ್ತು ಅಲ್ಲಿ ಅವರ ಪಾಲಿಗೆ ಚೀರಾಟ ಹಾಗೂ ಅಬ್ಬರ ಮಾತ್ರ ಇರುವುದು.
107. ಅವರು, ಆಕಾಶಗಳು ಮತ್ತು ಭೂಮಿಯು ಇರುವ ತನಕ ಅದರಲ್ಲಿ ಸದಾಕಾಲ ಇರುವರು – ನಿಮ್ಮ ಒಡೆಯನು ಇಚ್ಛಿಸಿದ್ದರ ಹೊರತು. ಖಂಡಿತವಾಗಿಯೂ ನಿಮ್ಮ ಒಡೆಯನು ತಾನಿಚ್ಛಿಸಿದ್ದನ್ನು ಮಾಡಿಯೇ ಬಿಡುತ್ತಾನೆ.
108. ಇನ್ನು, ಭಾಗ್ಯಶಾಲಿಗಳು ಸ್ವರ್ಗದಲ್ಲಿರುವರು. ಅವರು ಆಕಾಶಗಳು ಮತ್ತು ಭೂಮಿಯು ಇರುವ ತನಕ ಅದರಲ್ಲಿ ಸದಾಕಾಲ ಇರುವರು – ನಿಮ್ಮ ಒಡೆಯನು ಇಚ್ಛಿಸಿದ್ದರ ಹೊರತು. ಅದು ಎಂದೂ ಕೊನೆಗಾಣದ ಕೊಡುಗೆ.
109. ಅವರು (ಧಿಕ್ಕಾರಿಗಳು) ಪೂಜಿಸುವವುಗಳ ಕುರಿತು ನೀವು ಸಂಶಯ ತಾಳಬೇಡಿ. ಅವರು ಈ ಹಿಂದೆ ತಮ್ಮ ತಂದೆ – ತಾತಂದಿರು ಪೂಜಿಸಿದಂತೆಯೇ ಪೂಜಿಸುತ್ತಿದ್ದಾರೆ. ನಾವು ಖಂಡಿತ ಅವರ ಪಾಲನ್ನು ಕಡಿತಗೊಳಿಸದೆ ಅವರಿಗೆ (ಅವರ ಕೃತ್ಯದ) ಪೂರ್ಣ ಪ್ರತಿಫಲ ನೀಡಲಿದ್ದೇವೆ.
110. ನಾವು ಮೂಸಾರಿಗೆ ಗ್ರಂಥವನ್ನು ನೀಡಿದ್ದೆವು. ಅದರಲ್ಲಿ ಭಿನ್ನತೆ ತೋರಲಾಯಿತು. ನಿಮ್ಮ ಒಡೆಯನ ಕಡೆಯಿಂದ ಒಂದು ವಿಷವು ಮೊದಲೇ ನಿಗದಿಯಾಗದೆ ಇದ್ದಿದ್ದರೆ, ಅವರ ನಡುವೆ ತೀರ್ಪು ನೀಡಿ ಬಿಡಲಾಗುತ್ತಿತ್ತು. ಆದರೆ ಅವರು ಈ ಕುರಿತು ಭಾರೀ ಸಂಶಯದಲ್ಲಿದ್ದಾರೆ.
111. ನಿಮ್ಮ ಒಡೆಯನು ಅವರಲ್ಲಿ ಪ್ರತಿಯೊಬ್ಬರಿಗೂ ಅವರ ಕರ್ಮಗಳ ಪೂರ್ಣ ಪ್ರತಿಫಲವನ್ನು ನೀಡುವನು. ಖಂಡಿತವಾಗಿಯೂ ಅವರು ಮಾಡುತ್ತಿರುವ ಎಲ್ಲ ಕರ್ಮಗಳ ಅರಿವು ಅವನಿಗಿದೆ.
112. ಇದೀಗ ನೀವು ಮತ್ತು ನಿಮ್ಮ ಜೊತೆ ಪಶ್ಚಾತ್ತಾಪ ಪಟ್ಟವರು, ನಿಮಗೆ ಆದೇಶಿಸಲಾಗಿರುವಂತೆ ಸ್ಥಿರವಾಗಿ ನಿಲ್ಲಿರಿ ಮತ್ತು ವಿದ್ರೋಹವೆಸಗಬೇಡಿ. ಖಂಡಿತವಾಗಿಯೂ ನೀವು ಮಾಡುತ್ತಿರುವ ಎಲ್ಲವನ್ನು ಅವನು ನೋಡುತ್ತಿದ್ದಾನೆ.
113. ಅಕ್ರಮವೆಸಗಿದವರ ಕಡೆಗೆ ನೀವು ವಾಲಬೇಡಿ , (ಅನ್ಯಥಾ) ಬೆಂಕಿಯು ನಿಮಗೆ ತಗಲುವುದು ಮತ್ತು ನಿಮಗೆ ಅಲ್ಲಾಹನ ಹೊರತು ಬೇರಾರೂ ಪೋಷಕರು ಸಿಗಲಾರರು, ನಿಮಗೆ ಸಹಾಯವೂ ಸಿಗದು.
114. ನೀವು ಹಗಲಿನ ಎರಡು ಕೊನೆಗಳಲ್ಲಿ (ಮುಂಜಾನೆ ಹಾಗೂ ಸಂಜೆ) ಮತ್ತು ರಾತ್ರಿಯ ಒಂದು ಭಾಗದಲ್ಲಿ ನಮಾಝನ್ನು ಪಾಲಿಸಿರಿ. ಖಂಡಿತವಾಗಿಯೂ ಒಳಿತುಗಳು – ಕೆಡುಕುಗಳನ್ನು ತೊಲಗಿಸುತ್ತವೆ. ಇದು ಉಪದೇಶ ಸ್ವೀಕರಿಸುವವರಿಗಾಗಿ ಇರುವ ಉಪದೇಶವಾಗಿದೆ.
115. ನೀವು ಸಹನಶೀಲರಾಗಿರಿ. ಅಲ್ಲಾಹನು ಸತ್ಕರ್ಮಿಗಳ ಪ್ರತಿಫಲವನ್ನು ಖಂಡಿತ ವ್ಯರ್ಥಗೊಳಿಸುವುದಿಲ್ಲ.
116. ನಿಮ್ಮ ಹಿಂದಿನ ಜನಾಂಗಗಳಲ್ಲಿ , ಭೂಮಿಯಲ್ಲಿ ಅಶಾಂತಿಯನ್ನು ಮೆರೆಯದಂತೆ ಜನರನ್ನು ತಡೆಯುವ ಸಜ್ಜನರು (ದೊಡ್ಡ ಸಂಖ್ಯೆಯಲ್ಲಿ) ಇರಬೇಕಿತ್ತು. ಆದರೆ ಅಂತಹ ಕೇವಲ ಕೆಲವರು ಮಾತ್ರ ಇದ್ದರು . ನಾವು ಅವರನ್ನು ಅವರಿಂದ (ದುಷ್ಟರಿಂದ) ರಕ್ಷಿಸಿದೆವು. ಅಕ್ರಮಿಗಳು ತಮಗೆ ನೀಡಲಾಗಿದ್ದ ಸುಖ ಭೋಗಗಳ ಹಿಂದೆಯೇ ಬಿದ್ದಿದ್ದರು. ಅವರು ಅಪರಾಧಿಗಳಾಗಿದ್ದರು.
117. ಇನ್ನು, ಒಂದು ನಾಡಿನ ಜನರು ಸುಧಾರಕರಾಗಿರುವಾಗ, ನಿಮ್ಮ ಒಡೆಯನು ಅನ್ಯಾಯವಾಗಿ ಅಂತಹ ನಾಡನ್ನು ನಾಶಮಾಡುವವನಲ್ಲ.
118. ನಿಮ್ಮ ಒಡೆಯನು ಬಯಸಿದ್ದರೆ, ಎಲ್ಲ ಮಾನವರನ್ನೂ ಒಂದೇ ಸಮುದಾಯವಾಗಿಸಿ ಬಿಡುತ್ತಿದ್ದನು. ಅವರಂತು (ಸತ್ಯದ ವಿರುದ್ಧ) ಸದಾ ಭಿನ್ನತೆ ತಾಳುತ್ತಲೇ ಇರುತ್ತಾರೆ –
119. – ನಿಮ್ಮ ಒಡೆಯನು ಕರುಣೆ ತೋರಿದವರ ಹೊರತು. ಇದಕ್ಕಾಗಿಯೇ ಅವರನ್ನು ಸೃಷ್ಟಿಲಾಗಿದೆ – ನಾನು ಜಿನ್ನ್‌ಗಳನ್ನು ಮತ್ತು ಮಾನವರನ್ನು ಒಟ್ಟು ಸೇರಿಸಿ ಅವರಿಂದ ನರಕವನ್ನು ತುಂಬಲಿದ್ದೇನೆ ಎಂಬ ನಿಮ್ಮ ಒಡೆಯನ ಮಾತು ಪೂರ್ಣವಾಗಬೇಕಾಗಿದೆ.
120. (ಈ ರೀತಿ) ನಾವು ನಿಮ್ಮ ಮನಸ್ಸಿನ ಸ್ಥಿರತೆಗಾಗಿ (ಗತಕಾಲದ) ದೂತರ ವೃತ್ತಾಂತಗಳನ್ನೆಲ್ಲಾ ನಿಮಗೆ ಕೇಳಿಸುತ್ತಿದ್ದೇವೆ ಮತ್ತು ಈ ಮೂಲಕ ನಿಮ್ಮ ಬಳಿಗೆ ಸತ್ಯವು ಬಂದಿದೆ. ಇದು ವಿಶ್ವಾಸಿಗಳ ಪಾಲಿಗೆ ಉಪದೇಶ ಹಾಗೂ ಬೋಧನೆಯಾಗಿದೆ.
121. (ಸತ್ಯವನ್ನು) ನಂಬದ ಜನರೊಡನೆ ನೀವು ಹೇಳಿರಿ; ನೀವು ನಿಮ್ಮ ಸ್ಥಾನದಲ್ಲಿ ಸಕ್ರಿಯರಾಗಿರಿ, ನಾವೂ ಸಕ್ರಿಯರಾಗಿರುವೆವು.
122. ಆ ಬಳಿಕ ನೀವು ಕಾಯಿರಿ, ನಾವೂ ಕಾಯುತ್ತಿರುವೆವು.
123. ಆಕಾಶಗಳ ಮತ್ತು ಭೂಮಿಯ ಎಲ್ಲ ಗುಟ್ಟುಗಳು ಅಲ್ಲಾಹನ ಬಳಿಯಲ್ಲಿವೆ. ಕೊನೆಗೆ ಎಲ್ಲ ವಿಷಯಗಳೂ ಅವನ ಕಡೆಗೇ ಮರಳಲಿವೆ. ನೀವು ಅವನನ್ನೇ ಪೂಜಿಸಿರಿ ಮತ್ತು ಅವನಲ್ಲೇ ಭರವಸೆ ಇಡಿರಿ. ನೀವೇನು ಮಾಡುತ್ತಿರುವಿರೋ ಆ ಕುರಿತು ಅವನು ಅಜ್ಞನಾಗಿಲ್ಲ.