1. ಅಲಿಫ್ ಲಾಮ್ ರಾ. ಇವು ಸ್ಪಷ್ಟವಾಗಿರುವ ಗ್ರಂಥದ ವಚನಗಳು.
2. ನೀವು ಅರ್ಥಯಿಸಬೇಕೆಂದು ನಾವು ಇದನ್ನು ಅರಬೀ ಭಾಷೆಯ ಕುರ್ಆನ್ ಆಗಿ ಇಳಿಸಿರುವೆವು.
3. (ದೂತರೇ,) ನಾವೇ ನಿಮಗೆ ದಿವ್ಯವಾಣಿಯ ಮೂಲಕ ಈ ಕುರ್ಆನ್ಅನ್ನು ಕಳಿಸಿದ್ದು, ನಾವೇ ಈ ಮೂಲಕ ನಿಮಗೆ ಅತ್ಯುತ್ತಮ ವೃತ್ತಾಂತವನ್ನು ಕೇಳಿಸುತ್ತಿರುವೆವು. ಈ ಹಿಂದೆ ನೀವು ಅಜ್ಞರಾಗಿದ್ದಿರಿ.
4. ಯೂಸುಫ್, ತಮ್ಮ ತಂದೆಯೊಡನೆ, ‘‘ನನ್ನ ತಂದೆಯೇ, ನಾನು (ಕನಸಿನಲ್ಲಿ) ಹನ್ನೊಂದು ನಕ್ಷತ್ರಗಳನ್ನು, ಸೂರ್ಯನನ್ನು ಮತ್ತು ಚಂದ್ರನನ್ನು ನೋಡಿದೆ ಮತ್ತು ಅವುಗಳು ನನಗೆ ಸಾಷ್ಟಾಂಗ ವೆರಗುವುದನ್ನು ನಾನು ನೋಡಿದೆ‘‘.
5. ಅವರು (ತಂದೆ) ಹೇಳಿದರು; ನನ್ನ ಪುತ್ರನೇ, ನಿನ್ನ ಕನಸಿನ ವಿಚಾರವನ್ನು ನಿನ್ನ ಸಹೋದರರಿಗೆ ತಿಳಿಸಬೇಡ. ಅವರು ನಿನ್ನ ವಿರುದ್ಧ ಏನಾದರೂ ಸಂಚು ಹೂಡುವರು. ಖಂಡಿತವಾಗಿಯೂ ಶೈತಾನನು ಮಾನವನ ಪಾಲಿಗೆ ಸ್ಪಷ್ಟ ಶತ್ರುವಾಗಿದ್ದಾನೆ.
6. ಈ ರೀತಿ ನಿನ್ನ ಒಡೆಯನು ನಿನ್ನನ್ನು ಆರಿಸಿಕೊಳ್ಳುವನು ಹಾಗೂ ನಿನಗೆ ಘಟನೆಗಳನ್ನು ವ್ಯಾಖ್ಯಾನಿಸುವ ವಿದ್ಯೆಯನ್ನು ಕಲಿಸುವನು ಮತ್ತು ಅವನು ಈ ಹಿಂದೆ ನಿನ್ನ ಪೂರ್ವಜರಾದ ಇಬ್ರಾಹೀಮ್ ಮತ್ತು ಇಸ್ಹಾಕ್ರ ಪಾಲಿಗೆ ಪೂರ್ತಿಗೊಳಿಸಿದಂತೆ ನಿನ್ನ ಪಾಲಿಗೆ ಹಾಗೂ ಯಅ್ಕೂಬ್ರ ಸಂತತಿಯ ಪಾಲಿಗೆ ತನ್ನ ಅನುಗ್ರಹವನ್ನು ಪೂರ್ತಿಗೊಳಿಸುವನು . ನಿನ್ನ ಒಡೆಯನು ಖಂಡಿತ ಎಲ್ಲವನ್ನೂ ಬಲ್ಲವನು ಮತ್ತು ಯುಕ್ತಿವಂತನಾಗಿದ್ದಾನೆ.
7. ವಿಚಾರಿಸುವವರ ಪಾಲಿಗೆ, ಯೂಸುಫ್ ಮತ್ತು ಅವರ ಸಹೋದರರಲ್ಲಿ ಅನೇಕ ಪಾಠಗಳಿವೆ.
8. ಅವರು (ಸಹೋದರರು) ಹೇಳಿದರು; ಯೂಸುಫ್ ಮತ್ತು ಅವನ ಸಹೋದರನು ನಮ್ಮ ತಂದೆಗೆ ನಮಗಿಂತ ಹೆಚ್ಚು ಪ್ರಿಯರಾಗಿ ಬಿಟ್ಟಿದ್ದಾರೆ – ನಾವು ಒಂದು ಬಲಿಷ್ಠ ತಂಡವಾಗಿದ್ದೇವೆ. ನಮ್ಮ ತಂದೆ ಸ್ಪಷ್ಟವಾಗಿ ದಾರಿಗೆಟ್ಟಿದ್ದಾರೆ.
9. ನಿಮ್ಮ ತಂದೆಯ ಗಮನವೆಲ್ಲಾ ನಿಮ್ಮೆಡೆಗೆ ಮೀಸಲಾಗಿಬಿಡಲು, ನೀವು ಯೂಸುಫ್ನನ್ನು ಕೊಂದು ಬಿಡಿರಿ ಅಥವಾ ಅವನನ್ನು ಯಾವುದಾದರೂ ನಾಡಿನಲ್ಲಿ ಎಸೆದು ಬನ್ನಿರಿ. ಆ ಬಳಿಕ ನೀವು ಸಜ್ಜನರಾಗಿರಬಹುದು.
10. ಅವರಲ್ಲೊಬ್ಬನು ಹೇಳಿದನು; ಯೂಸುಫ್ನನ್ನು ಕೊಲ್ಲಬೇಡಿ. ನಿಮಗೇನಾದರೂ ಮಾಡಲೇ ಬೇಕಿದ್ದರೆ, ಅವನನ್ನು ಯಾವುದಾದರೂ ನೀರಿಲ್ಲದ ಬಾವಿಯೊಳಕ್ಕೆ ಎಸೆದು ಬನ್ನಿರಿ. ಯಾರಾದರೂ ಪ್ರಯಾಣಿಕರು ಅವನನ್ನು ಎತ್ತಿಕೊಳ್ಳಬಹುದು.
11. ಅವರು ಹೇಳಿದರು; ನಮ್ಮ ತಂದೆಯೇ, ಯೂಸುಫ್ನ ವಿಷಯದಲ್ಲಿ ನೀವೇಕೆ ನಮ್ಮ ಮೇಲೆ ಭರವಸೆ ಇಡುವುದಿಲ್ಲ? ನಾವಂತು ಆತನ ಹಿತೈಷಿಗಳೇ ಆಗಿದ್ದೇವೆ.
12. ನಾಳೆ ಅವನನ್ನು ನಮ್ಮ ಜೊತೆ ಕಳಿಸಿರಿ. ಏನಾದರೂ ತಿನ್ನಲಿ ಹಾಗೂ ಆಟೋಟ ನಡೆಸಲಿ. ನಾವು ಖಂಡಿತ ಅವನ ರಕ್ಷಕರಾಗಿರುವೆವು.
13. ಅವರು (ತಂದೆ) ಹೇಳಿದರು; ನೀವು ಆತನನ್ನು ಕರೆದೊಯ್ಯುವ ಕುರಿತು ನನಗೆ ತುಂಬಾ ಬೇಸರವಿದೆ ಏಕೆಂದರೆ, ನೀವು ಅವನ ಕುರಿತು ಅಜಾಗೃತರಾಗಿದ್ದಾಗ ಅವನನ್ನು ತೋಳವು ತಿಂದು ಬಿಡಬಹುದೆಂದು ನನಗೆ ಭಯವಾಗುತ್ತಿದೆ.
14. ಅವರು (ಮಕ್ಕಳು) ಹೇಳಿದರು; ನಾವು ಒಂದು ಬಲಿಷ್ಠ ತಂಡವಾಗಿರುವಾಗ ಅವನನ್ನು ತೋಳವು ತಿಂದು ಬಿಡುವುದಾದರೆ, ನಾವು ಖಂಡಿತ ಎಲ್ಲವನ್ನೂ ಕಳೆದು ಕೊಂಡವರೆನಿಸುವೆವು.
15. ಕೊನೆಗೆ ಅವರು ಆತನೊಂದಿಗೆ ಹೊರಟಾಗ, ಆತನನ್ನು ನೀರಿಲ್ಲದ ಬಾವಿಗೆ ಎಸೆಯಬೇಕೆಂದು ಅವರ ನಡುವೆ ಒಮ್ಮತವಾಗಿತ್ತು. ಆಗ ನಾವು ಅವರಿಗೆ (ಯೂಸುಫ್ರಿಗೆ) ಒಂದು ಸಂದೇಶವನ್ನು ಕಳಿಸಿದೆವು; ‘‘(ಒಂದು ದಿನ) ಅವರ ಈ ಕೃತ್ಯದ ಕುರಿತು ನೀವು ಅವರಿಗೆ ವಿವರಿಸುವಿರಿ – ಆಗ ಅವರಿಗೆ ಯಾವ ಅರಿವೂ ಇರದು.’’
16. ಕತ್ತಲು ಕವಿದಾಗ ಅವರು (ಸಹೋದರರು) ಅಳುತ್ತಾ ತಮ್ಮ ತಂದೆಯ ಬಳಿಗೆ ಬಂದರು.
17. ಅವರು ಹೇಳಿದರು; ಓ ನಮ್ಮ ತಂದೆಯೇ, ನಾವು ಓಟದ ಸ್ಪರ್ಧೆಯಲ್ಲಿದ್ದಾಗ, ಯೂಸುಫ್ನನ್ನು ನಮ್ಮ ಸೊತ್ತಿನ ಬಳಿ ಬಿಟ್ಟಿದ್ದೆವು. ಅಷ್ಟರಲ್ಲೇ ತೋಳವು ಆತನನ್ನು ತಿಂದು ಬಿಟ್ಟಿತು. ನಾವು ಎಷ್ಟೇ ಸತ್ಯವಂತರಾಗಿದ್ದರೂ ನೀವು ಮಾತ್ರ ನಮ್ಮನ್ನು ನಂಬುವವರಲ್ಲ.
18. ಮತ್ತು ಅವರು (ಸಹೋದರರು) ರಕ್ತದ ನಕಲಿ ಕಲೆಗಳಿದ್ದ, ಅವರ (ಯೂಸುಫ್ರ) ಅಂಗಿಯನ್ನು ತಂದರು. ಆಗ ಅವರು (ತಂದೆ) ಹೇಳಿದರು; ನಿಜವಾಗಿ ನಿಮ್ಮ ಚಿತ್ತಗಳು ನಿಮಗಾಗಿ ಒಂದು ವಿಷಯವನ್ನು (ಕಟ್ಟು ಕಥೆಯನ್ನು) ರಚಿಸಿಕೊಟ್ಟಿವೆ. (ಆದ್ದರಿಂದ) ಸಹನೆಯೇ ಉತ್ತಮ. ನೀವು ಏನನ್ನು ಹೇಳುತ್ತಿರುವಿರೋ ಆ ವಿಷಯದಲ್ಲಿ (ನನಗೆ) ಅಲ್ಲಾಹನು ನೆರವಾಗಲಿ.
19. ಅತ್ತ, ಪ್ರಯಾಣಿಕರ ಒಂದು ತಂಡವು ಬಂದು, ತಮಗಾಗಿ ನೀರು ತುಂಬುವಾತನನ್ನು (ಯೂಸುಫ್ರನ್ನು ಎಸೆಯಲಾಗಿದ್ದ ಬಾವಿಯ ಬಳಿಗೆ) ಕಳಿಸಿದರು. ಅವನು ತನ್ನ ಕೊಡವನ್ನು ಇಳಿಸಿದನು (ಮತ್ತು) ‘‘ಇದೋ ಇಲ್ಲಿದೆ ಶುಭವಾರ್ತೆ. ಇಲ್ಲೊಬ್ಬ ಬಾಲಕನಿದ್ದಾನೆ’’ ಎಂದು ಘೋಷಿಸಿದನು. ತರುವಾಯ ಅವರು ಅವರನ್ನು (ಯೂಸುಫ್ರನ್ನು) ವ್ಯಾಪಾರದ ಸರಕೆಂದು ಪರಿಗಣಿಸಿ ಅಡಗಿಸಿಟ್ಟರು. ಅವರು ಮಾಡುತ್ತಿದ್ದ ಎಲ್ಲವನ್ನೂ ಅಲ್ಲಾಹನು ಅರಿತಿದ್ದನು.
20. ಅವರು ಕೆಲವೇ ದಿರ್ಹಮ್ಗಳ ಹೀನ ಬೆಲೆಗೆ ಅವರನ್ನು ಮಾರಿಬಿಟ್ಟರು. ಈ ವಿಷಯದಲ್ಲಿ ಅವರು ನಿರಾಸಕ್ತರಾಗಿದ್ದರು.
21. ಅವರನ್ನು ಖರೀದಿಸಿದ್ದ ಈಜಿಪ್ತ್ನ ವ್ಯಕ್ತಿ ತನ್ನ ಪತ್ನಿಯೊಡನೆ ‘‘ಅವನಿಗೆ ಗೌರವದ ಸತ್ಕಾರ ನೀಡು. ನಮಗೆ ಅವನು ಲಾಭವನ್ನು ತರಬಹುದು ಅಥವಾ ನಾವು ಅವನನ್ನೇ ಪುತ್ರನಾಗಿಸಿಕೊಳ್ಳಬಹುದು’’ ಎಂದನು. ಈ ರೀತಿ ನಾವು ಯೂಸುಫ್ರಿಗೆ ಘಟನೆಗಳನ್ನು ವ್ಯಾಖ್ಯಾನಿಸುವ ವಿದ್ಯೆಯನ್ನು ಕಲಿಸಲಿಕ್ಕಾಗಿ ಅವರಿಗೆ ಭೂಮಿಯಲ್ಲೊಂದು ನೆಲೆಯನ್ನು ಒದಗಿಸಿದೆವು. ಅಲ್ಲಾಹನು ತನ್ನ ಎಲ್ಲ ವ್ಯವಹಾರಗಳ ಮೇಲೂ ಪೂರ್ಣ ಪ್ರಾಬಲ್ಯ ಹೊಂದಿರುತ್ತಾನೆ. ಆದರೆ ಮಾನವರಲ್ಲಿ ಹೆಚ್ಚಿನವರು ಬಲ್ಲವರಲ್ಲ.
22. ಅವರು (ಯೂಸುಫ್) ತಮ್ಮ (ಪ್ರಬುದ್ಧ) ವಯಸ್ಸನ್ನು ತಲುಪಿದಾಗ, ನಾವು ಅವರಿಗೆ ಜಾಣ್ಮೆಯನ್ನು ಮತ್ತು ಜ್ಞಾನವನ್ನು ನೀಡಿದೆವು. ಇದೇ ರೀತಿ ನಾವು ಸಜ್ಜನರನ್ನು ಪುರಸ್ಕರಿಸುತ್ತೇವೆ.
23. ಅವರು ಯಾರ ಮನೆಯಲ್ಲಿದ್ದರೋ ಆಕೆಯು ಅವರನ್ನು ತನ್ನೆಡೆಗೆ ಸೆಳೆಯ ಬಯಸಿದಳು ಮತ್ತು ಬಾಗಿಲುಗಳನ್ನೆಲ್ಲಾ ಮುಚ್ಚಿ ಅವರೊಡನೆ ‘‘ಬಂದು ಬಿಡು’’ ಎಂದಳು. ಅವರು ಹೇಳಿದರು; ಅಲ್ಲಾಹನು ರಕ್ಷಿಸಲಿ. ಆ ನನ್ನ ಒಡೆಯನು ಖಂಡಿತವಾಗಿಯೂ ನನಗೆ ಗೌರವದ ನಿವಾಸವನ್ನು ಒದಗಿಸಿದ್ದಾನೆ. ಅಕ್ರಮಿಗಳು ಖಂಡಿತ ವಿಜಯಿಗಳಾಗುವುದಿಲ್ಲ.
24. ಆಕೆಯಂತು ಅವರನ್ನು ಬಯಸಿದ್ದಳು. ಅತ್ತ ಅವರು ತಮ್ಮ ಒಡೆಯನ ಒಂದು ಎಚ್ಚರಿಕೆಯನ್ನು ಕಾಣದಿರುತ್ತಿದ್ದರೆ ಅವರೂ ಆಕೆಯನ್ನು ಬಯಸುತ್ತಿದ್ದರು. ಈ ರೀತಿ ನಾವು ಅವರಿಂದ (ಯೂಸುಫ್ರಿಂದ) ಒಂದು ಪಾಪ ಹಾಗೂ ಅಶ್ಲೀಲ ಕೃತ್ಯವನ್ನು ನಿವಾರಿಸಿ ಬಿಟ್ಟೆವು. ನಿಜಕ್ಕೂ ಅವರು ನಮ್ಮ ಆಯ್ದ ದಾಸರಲ್ಲೊಬ್ಬರಾಗಿದ್ದರು.
25. ಅವರಿಬ್ಬರೂ ಬಾಗಿಲಿನೆಡೆಗೆ ಧಾವಿಸಿದರು – ಆಕೆ ಅವರ (ಯೂಸುಫ್ರ) ಅಂಗಿಯನ್ನು ಹಿಂದಿನಿಂದ (ಎಳೆದು) ಹರಿದಳು ಮತ್ತು ಅವರಿಬ್ಬರಿಗೂ ಬಾಗಿಲ ಬಳಿ ಆಕೆಯ ಗಂಡನು ಎದುರಾದನು. ಆಕೆ ಹೇಳಿದಳು; ನಿನ್ನ ಪತ್ನಿಗೆ ಕೆಡುಕನ್ನು ಮಾಡಬಯಸಿದವನಿಗೆ, ಸೆರೆವಾಸ ಅಥವಾ ಭಾರೀ ಕಠಿಣ ಶಿಕ್ಷೆಯಲ್ಲದೆ ಬೇರೆ ಯಾವ ಪ್ರತಿಫಲವನ್ನು ತಾನೇ ನೀಡಬಹುದು?
26. ಅವರು (ಯೂಸುಫ್) ಹೇಳಿದರು; ಆಕೆ ನನ್ನನ್ನು ಪುಸಲಾಯಿಸ ಬಯಸಿದ್ದಳು. ಮತ್ತು ಆಕೆಯ ಪರಿವಾರದ ಸಾಕ್ಷಿಯೊಬ್ಬನು ಹೀಗೆ ಸಾಕ್ಷಿ ನುಡಿದನು; ಒಂದು ವೇಳೆ ಆತನ ಅಂಗಿಯು ಮುಂಭಾಗದಲ್ಲಿ ಹರಿದಿದ್ದರೆ ಆಕೆ ಸತ್ಯ ಹೇಳುತ್ತಿದ್ದಾಳೆ ಹಾಗೂ ಅವನು ಸುಳ್ಳುಗಾರನಾಗಿದ್ದಾನೆ.
27. ಇನ್ನು ಆತನ ಅಂಗಿಯು ಹಿಂಭಾಗದಲ್ಲಿ ಹರಿದಿದ್ದರೆ ಆಕೆ ಸುಳ್ಳು ಹೇಳುತ್ತಿದ್ದಾಳೆ ಮತ್ತು ಅವನು ಸತ್ಯವಂತನಾಗಿದ್ದಾನೆ.
28. ಅವರ (ಯೂಸುಫ್ರ) ಅಂಗಿಯು ಹಿಂಭಾಗದಲ್ಲಿ ಹರಿದಿರುವುದನ್ನು ಕಂಡಾಗ ಅವನು (ಆಕೆಯ ಪತಿ) ಹೇಳಿದನು; ‘‘ಖಂಡಿತವಾಗಿಯೂ ಇದು ನಿಮ್ಮ (ಮಹಿಳೆಯರ) ಸಂಚಾಗಿದೆ. ನಿಜಕ್ಕೂ ನಿಮ್ಮ (ಮಹಿಳೆಯರ) ಸಂಚು ತುಂಬಾ ಘೋರವಾಗಿರುತ್ತದೆ’’.
29. ‘‘ಯೂಸುಫ್! ನೀವು ಈ ವಿಷಯವನ್ನು ಬಿಟ್ಟು ಬಿಡಿರಿ. ಮತ್ತು ನೀನು (ಮಹಿಳೆ) ನಿನ್ನ ಪಾಪಕ್ಕಾಗಿ ಕ್ಷಮೆಯನ್ನು ಬೇಡು. ನೀನು ಖಂಡಿತ ತಪ್ಪಿತಸ್ಥಳು’’.
30. ನಗರದಲ್ಲಿನ ಕೆಲವು ಮಹಿಳೆಯರು ಹೇಳಿದರು; ಸರದಾರನ ಪತ್ನಿಯು ತನ್ನ ತರುಣ ದಾಸನನ್ನು ಪುಸಲಾಯಿಸಲು ಪ್ರಯತ್ನಿಸುತ್ತಿದ್ದಾಳೆ. ಅವನ ಮೇಲಿನ ಪ್ರೀತಿಯಲ್ಲಿ ಅವಳು ಮಾರು ಹೋಗಿದ್ದಾಳೆ. ಆಕೆ ಸ್ಪಷ್ಟವಾಗಿ ದಾರಿಗೆಟ್ಟಿರುವುದನ್ನು ನಾವು ಕಾಣುತ್ತಿದ್ದೇವೆ.
31. ಆಕೆಯು ಆ ಮಹಿಳೆಯರ ಈ ಪಿಸು ಮಾತುಗಳನ್ನು ಕೇಳಿದಾಗ ಅವರ ಬಳಿಗೆ ಆಮಂತ್ರಣ ಕಳುಹಿಸಿದಳು ಮತ್ತು ಅವರಿಗಾಗಿ, ಒರಗಿಕೂರುವ ಒಂದು ಸಭೆಯನ್ನು ಸಿದ್ಧಗೊಳಿಸಿದಳು. ಆಕೆ, ಅವರಲ್ಲಿ ಪ್ರತಿಯೊಬ್ಬರಿಗೂ (ಹಣ್ಣು ಮುರಿಯುವ) ಕತ್ತಿಯನ್ನು ಕೊಟ್ಟಳು ಮತ್ತು ಅವರೊಡನೆ (ಯೂಸುಫ್ರೊಡನೆ), ಆ ಮಹಿಳೆಯರ ಮುಂದೆ ಹಾದು ಹೋಗಲು ಹೇಳಿದಳು. ಆ ಮಹಿಳೆಯರು, ಅವರನ್ನು ಕಂಡಾಗ ದಂಗಾಗಿ ಬಿಟ್ಟರು ಹಾಗೂ (ಹಣ್ಣುಗಳ ಬದಲು) ತಮ್ಮ ಕೈಗಳನ್ನೇ ಮುರಿದುಕೊಂಡರು. ಅವರು ಹೇಳಿದರು; ಅಲ್ಲಾಹನು ಕಾಪಾಡಲಿ. ಅವನು (ಯೂಸುಫ್) ಮನುಷ್ಯನಂತು ಅಲ್ಲ. ಅವನು ಒಬ್ಬ ಗೌರವಾನ್ವಿತ ಮಲಕ್ ಆಗಿರಬೇಕು.
32. ಆಕೆ ಹೇಳಿದಳು; ನೀವು ನನ್ನನ್ನು ಮೂದಲಿಸುತ್ತಾ ಇದ್ದುದು ಆತನ ಕುರಿತೇ ಆಗಿತ್ತು. ನಾನು ಆತನನ್ನು ಪುಸಲಾಯಿಸಲು ಪ್ರಯತ್ನಿಸಿದಾಗ ಅವನು ತನ್ನನ್ನು ರಕ್ಷಿಸಿಕೊಂಡನು. ಇದೀಗ ಅವನು, ನನ್ನ ಆದೇಶದಂತೆ ನಡೆಯದಿದ್ದರೆ, ಅವನನ್ನು ಸೆರಮನೆಗೆ ಸೇರಿಸಲಾಗುವುದು ಅಥವಾ ಅವನು ತೀರಾ ಅಪಮಾನಿತನಾಗುವನು.
33. ಅವರು (ಯೂಸುಫ್) ಹೇಳಿದರು; ನನ್ನೊಡೆಯಾ, ಆಕೆ ಯಾವುದರೆಡೆಗೆ ನನ್ನನ್ನು ಕರೆಯುತ್ತಿರುವಳೋ ಅದಕ್ಕಿಂತ ಸೆರೆಮನೆಯೇ ನನಗೆ ಹೆಚ್ಚು ಪ್ರಿಯವಾಗಿದೆ. ಆ ಮಹಿಳೆಯರ ಜಾಲಗಳನ್ನು ನೀನು ನನ್ನಿಂದ ನಿವಾರಿಸದಿದ್ದರೆ, ನಾನು ಅವರೆಡೆಗೆ ಒಲಿದು ಬಿಡಬಹುದು ಮತ್ತು ನಾನು ಮೂಢರ ಸಾಲಿಗೆ ಸೇರಬಹುದು.
34. ಅವರ ಒಡೆಯನು ಅವರ ಪ್ರಾರ್ಥನೆಯನ್ನು ಸ್ವೀಕರಿಸಿದನು ಮತ್ತು ಆ ಮಹಿಳೆಯರ ಜಾಲಗಳನ್ನು ಅವರಿಂದ ನಿವಾರಿಸಿಬಿಟ್ಟನು. ಅವನು ಖಂಡಿತ ಎಲ್ಲವನ್ನೂ ಕೇಳುವವನು ಮತ್ತು ಎಲ್ಲವನ್ನೂ ಬಲ್ಲವನಾಗಿದ್ದಾನೆ.
35. ಹೀಗೆ ದಿವ್ಯ ಸೂಚನೆಗಳನ್ನೆಲ್ಲಾ ಕಂಡ ಬಳಿಕ ಅವರಿಗೆ (ಆ ನಾಡಿನವರಿಗೆ) ಅವರನ್ನು (ಯೂಸುಫ್ರನ್ನು) ಒಂದು ಅವಧಿಯ ತನಕ ಸೆರೆಮನೆಯಲ್ಲಿಡಬೇಕು ಎಂದು ತೋಚಿತು.
36. ಅವರ ಜೊತೆ ಬೇರಿಬ್ಬರು ಯುವಕರೂ ಸೆರೆಮನೆಯನ್ನು ಪ್ರವೇಶಿಸಿದರು. ಅವರಲ್ಲೊಬ್ಬನು ಹೇಳಿದನು; ನಾನು (ಕನಸಿನಲ್ಲಿ) ಸಾರಾಯಿ ಹಿಂಡುತ್ತಿರುವುದನ್ನು ನೋಡಿದೆ. ಇನ್ನೊಬ್ಬನು ಹೇಳಿದನು; ನಾನು (ಕನಸಿನಲ್ಲಿ) ನನ್ನ ತಲೆಯ ಮೇಲೆ ರೊಟ್ಟಿಯನ್ನು ಹೊತ್ತಿರುವುದಾಗಿ ನೋಡಿದೆ. ಅದರಿಂದ ಪಕ್ಷಿಗಳು ತಿನ್ನುತ್ತಿದ್ದವು. ನಮಗೆ ಇದರ ಅರ್ಥವನ್ನು ತಿಳಿಸಿರಿ. ನಿಮ್ಮನ್ನು ನಾವು ಒಬ್ಬ ಸಜ್ಜನನಾಗಿ ಕಾಣುತ್ತಿದ್ದೇವೆ.
37. ಅವರು (ಯೂಸುಫ್) ಹೇಳಿದರು; ನಿಮಗೆ (ನಿತ್ಯ) ನೀಡಲಾಗುವ ಆಹಾರವು ನಿಮ್ಮ ಬಳಿಗೆ ಬರುವ ಮುನ್ನವೇ ನಾನು ನಿಮಗೆ ಅದರ ಅರ್ಥವನ್ನು ತಿಳಿಸುತ್ತೇನೆ. ಅದು ನನ್ನ ಒಡೆಯನು ನನಗೆ ಕಲಿಸಿಕೊಟ್ಟಿರುವ ವಿದ್ಯೆಯಾಗಿದೆ. ಅಲ್ಲಾಹನಲ್ಲಿ ನಂಬಿಕೆ ಇಡದವರ ಹಾಗೂ ಪರಲೋಕವನ್ನು ಧಿಕ್ಕರಿಸುವವರ ಧರ್ಮವನ್ನು ನಾನು ಖಂಡಿತ ತೊರೆದಿದ್ದೇನೆ.
38. ನಾನು ನನ್ನ ಪೂರ್ವಜರಾದ ಇಬ್ರಾಹೀಮ್, ಇಸ್ಹಾಕ್ ಮತ್ತು ಯಅಕೂಬ್ರ ಧರ್ಮವನ್ನು ಅನುಸರಿಸಿದ್ದೇನೆ. ನಾವು ಯಾವುದನ್ನೂ ಅಲ್ಲಾಹನ ಜೊತೆ ಪಾಲುಗೊಳಿಸುವುದು ಸರಿಯಲ್ಲ. ಇದು (ಈ ಅರಿವು) ನಮ್ಮ ಮೇಲೆ ಹಾಗೂ ಎಲ್ಲ ಮಾನವರ ಮೇಲೆ ಅಲ್ಲಾಹನ ಅನುಗ್ರಹವಾಗಿದೆ. ಆದರೆ ಮಾನವರಲ್ಲಿ ಹೆಚ್ಚಿನವರು ಕೃತಜ್ಞತೆ ಸಲ್ಲಿಸುವುದಿಲ್ಲ.
39. ಸೆರೆಮನೆಯ ನನ್ನ ಸಂಗಡಿಗರೇ, ಹಲವು ವಿಭಿನ್ನ ದೇವರುಗಳು ಉತ್ತಮರೋ ಅಥವಾ ಎಲ್ಲರ ಮೇಲೆ ಪ್ರಾಬಲ್ಯವಿರುವ ಏಕಮಾತ್ರನಾದ ಅಲ್ಲಾಹನು ಉತ್ತಮನೋ?
40. ಅವನ ಹೊರತು ನೀವು ಯಾರನ್ನು ಪೂಜಿಸುತ್ತಿರುವಿರೋ ಅವರೆಲ್ಲ ನೀವು ಮತ್ತು ನಿಮ್ಮ ಪೂರ್ವಜರು ಇಟ್ಟುಕೊಂಡ ಕೇವಲ ಕೆಲವು ಹೆಸರುಗಳು ಮಾತ್ರ. ಅವುಗಳ ಪರವಾಗಿ ಅಲ್ಲಾಹನು ಯಾವುದೇ ಪುರಾವೆಯನ್ನು ಇಳಿಸಿಲ್ಲ. ಅಧಿಕಾರವು ಅಲ್ಲಾಹನಿಗೆ ಮಾತ್ರ ಸೇರಿದೆ. ತನ್ನ ಹೊರತು ಬೇರೆ ಯಾರನ್ನೂ ಪೂಜಿಸಬಾರದು ಎಂದು ಅವನು ಆದೇಶಿಸಿದ್ದಾನೆ. ಇದುವೇ ಸ್ಥಿರವಾದ ಧರ್ಮ – ಆದರೆ ಮಾನವರಲ್ಲಿ ಹೆಚ್ಚಿನವರು ಇದನ್ನು ಅರಿತಿಲ್ಲ.
41. ಸೆರೆಮನೆಯ ನನ್ನ ಸಂಗಡಿಗರೇ, ನಿಮ್ಮಲ್ಲಿ ಒಬ್ಬನು ತನ್ನ ಒಡೆಯನಿಗೆ ಮದ್ಯ ಕುಡಿಸುವನು. ಇನ್ನೊಬ್ಬನನ್ನು ಶಿಲುಬೆಗೆ ಏರಿಸಲಾಗುವುದು ಮತ್ತು ಹಕ್ಕಿಗಳು ಅವನ ತಲೆಯಿಂದ ತಿನ್ನುವವು. ಈ ರೀತಿ, ನೀವಿಬ್ಬರೂ ನನ್ನೊಡನೆ ವಿಚಾರಿಸಿದ್ದ ವಿಷಯದ ತೀರ್ಮಾನವಾಯಿತು.
42. ಅವರು (ಯೂಸುಫರು) ಅವರಿಬ್ಬರ ಪೈಕಿ ಯಾರು ಬಿಡುಗಡೆ ಪಡೆಯುವನೆಂದು ನಂಬಿದ್ದರೋ ಅವನೊಡನೆ, ನಿನ್ನ ಒಡೆಯನೊಡನೆ ನನ್ನ ವಿಷಯವನ್ನು ಪ್ರಸ್ತಾಪಿಸು ಎಂದರು. ಆದರೆ ಅವನು ತನ್ನ ಒಡೆಯನ ಬಳಿ ಇದನ್ನು ಪ್ರಸ್ತಾಪಿಸದಂತೆ ಶೈತಾನನು ಅವನಿಗೆ ಮರೆವು ಮೂಡಿಸಿದನು. ಹೀಗೆ ಅವರು (ಯೂಸುಫ್) ಕೆಲವು ವರ್ಷ ಸೆರೆಮನೆಯಲ್ಲಿದ್ದರು.
43. (ಒಮ್ಮೆ) ರಾಜನು ಹೇಳಿದನು; ನಾನು (ಕನಸಿನಲ್ಲಿ) ತೆಳುವಾದ ಏಳು ದನಗಳು ದಷ್ಟಪುಷ್ಟವಾದ ಏಳು ದನಗಳನ್ನು ತಿನ್ನುವುದನ್ನು ನೋಡಿದೆ ಮತ್ತು ಹಸಿರಾಗಿದ್ದ ಏಳು ತೆನೆಗಳನ್ನೂ ಒಣಗಿದ್ದ ಇತರ ತೆನೆಗಳನ್ನೂ ನೋಡಿದೆ. ನನ್ನ ಆಸ್ಥಾನ ಪ್ರಮುಖರೇ, ನೀವು ಸ್ವಪ್ನಗಳ ಅರ್ಥ ಬಲ್ಲವರಾಗಿದ್ದರೆ, ಇದರ ಅರ್ಥವನ್ನು ನನಗೆ ತಿಳಿಸಿರಿ.
44. ಅವರು ಹೇಳಿದರು; ಇವು ಗೊಂದಲದ ಕನಸುಗಳು. ನಾವು ಗೊಂದಲದ ಕನಸುಗಳ ಅರ್ಥವನ್ನು ವಿವರಿಸಬಲ್ಲ ತಜ್ಞರೇನಲ್ಲ.
45. ಆಗ (ಈ ಹಿಂದೆ ಸೆರೆಮನೆಯಲ್ಲಿದ್ದ) ಆ ಇಬ್ಬರ ಪೈಕಿ ಬಿಡುಗಡೆ ಪಡೆದಿದ್ದವನಿಗೆ ಬಹುಕಾಲದ ಬಳಿಕ ನೆನಪಾಯಿತು. ಅವನು ಹೇಳಿದನು; ಇದರ ಅರ್ಥವನ್ನು ನಾನು ನಿಮಗೆ ತಿಳಿಸುವೆನು. ನನ್ನನ್ನು ಕಳುಹಿಸಿರಿ.
46. (ಅವನು ಯೂಸುಫ್ರ ಬಳಿಗೆ ಬಂದು ಹೇಳಿದನು;) ನನ್ನ ಸತ್ಯವಂತ ಮಿತ್ರರಾದ ಯೂಸುಫರೇ, ತೆಳುವಾದ ಏಳು ದನಗಳು ಏಳು ದಷ್ಟಪುಷ್ಟ ದನಗಳನ್ನು ತಿನ್ನುವ ಹಾಗೂ ಹಸಿರಾದ ಏಳು ತೆನೆಗಳು ಮತ್ತು ಒಣಗಿದ್ದ ಇತರ ತೆನೆಗಳ ಅರ್ಥವನ್ನು ನಮಗೆ ತಿಳಿಸಿರಿ – ನಾನು ಆ ಸ್ಥಾನಿಗರ ಬಳಿಗೆ ಮರಳಿ ಅವರು ತಿಳಿಯುವಂತಾಗಬಹುದು.
47. ಅವರು (ಯೂಸುಫ್) ಹೇಳಿದರು; ನೀವು ಸತತ ಏಳು ವರ್ಷ ವ್ಯವಸಾಯ ಮಾಡಿರಿ. ಆ ಬಳಿಕ ನೀವು ಬೆಳೆ ಕೊಯ್ಯುವಾಗ, ನಿಮಗೆ ತಿನ್ನಲು ಬೇಕಾಗುವ ಒಂದಿಷ್ಟರ ಹೊರತು, ಉಳಿದ ಫಲವನ್ನು ತೆನೆಯಲ್ಲೇ ಬಿಟ್ಟು ಬಿಡಿರಿ.
48. ಮುಂದೆ, ಏಳು ಕಠಿಣ ವರ್ಷಗಳು ಬರಲಿವೆ. ನೀವು ಸುರಕ್ಷಿತವಾಗಿಟ್ಟ ಒಂದಿಷ್ಟರ ಹೊರತು, ನೀವು ಆ ಅವಧಿಗಾಗಿ ಉಳಿಸಿಟ್ಟಿದ್ದನ್ನೆಲ್ಲಾ ಅವು ತಿಂದು ಬಿಡುವವು.
49. ಆ ಬಳಿಕ ಮತ್ತೆ ಒಂದು ವರ್ಷ ಬರುವುದು. ಅದರಲ್ಲಿ ಜನರ ಮೇಲೆ ಧಾರಾಳ ಮಳೆ ಸುರಿಸಲಾಗುವುದು ಮತ್ತು ಅದರಲ್ಲಿ ಅವರು ರಸ ಹಿಂಡುವರು.
50. (ಈ ವ್ಯಾಖ್ಯಾನ ಕೇಳಿದ) ರಾಜನು, ಅವನನ್ನು ನನ್ನ ಬಳಿಗೆ ತನ್ನಿರಿ ಎಂದನು. (ರಾಜನ) ದೂತನು ಅವರ (ಯೂಸುಫ್ರ) ಬಳಿಗೆ ಬಂದಾಗ ಅವರು ಹೇಳಿದರು; ನಿನ್ನ ಒಡೆಯನ ಬಳಿಗೆ ಮರಳಿಹೋಗು ಮತ್ತು ತಮ್ಮ ಕೈಗಳನ್ನು ಕತ್ತರಿಸಿಕೊಂಡ ಮಹಿಳೆಯರ ಸಮಾಚಾರವೇನು? ಎಂದು ಅವನೊಡನೆ ಕೇಳು. ಖಂಡಿತವಾಗಿಯೂ ನನ್ನ ಒಡೆಯನು ಅವರ ಸಂಚುಗಳ ಕುರಿತು ಬಲ್ಲನು.
51. ಅವನು (ದೊರೆಯು, ಮಹಿಳೆಯರೊಡನೆ), ನೀವು ಯೂಸುಫ್ರನ್ನು ಪುಸಲಾಯಿಸಲು ಪ್ರಯತ್ನಿಸಿದಾಗ ನಿಮ್ಮ ಸ್ಥಿತಿ ಹೇಗಿತ್ತು? ಎಂದು ಕೇಳಿದನು. ಆ ಮಹಿಳೆಯರು, ‘‘ಅಲ್ಲಾಹನು ಕಾಪಾಡಲಿ. ನಾವಂತು ಅವನಲ್ಲಿ ಯಾವ ತಪ್ಪನ್ನೂ ಕಾಣಲಿಲ್ಲ’’ ಎಂದರು. ಆಗ ಸರದಾರನ ಪತ್ನಿ ಹೇಳಿದಳು; ‘‘ಈಗ ಸತ್ಯವು ಬಹಿರಂಗವಾಗಿಬಿಟ್ಟಿದೆ. ನಿಜವಾಗಿ ನಾನೇ ಅವನನ್ನು ಪುಸಲಾಯಿಸಲು ಪ್ರಯತ್ನಿಸಿದ್ದೆ. ಅವನು ಖಂಡಿತ ಸತ್ಯವಂತನೇ ಆಗಿದ್ದಾನೆ’’.
52. (ಯೂಸುಫ್ ಹೇಳಿದರು;) ‘‘ನಾನು ಆತನ (ಸರದಾರನ) ಅನುಪಸ್ಥಿತಿಯಲ್ಲೂ ಆತನನ್ನು ವಂಚಿಸಿಲ್ಲ ಮತ್ತು ಖಂಡಿತವಾಗಿಯೂ ಅಲ್ಲಾಹನು ವಂಚಕರ ಸಂಚುಗಳನ್ನು ಮುನ್ನಡೆಯಲು ಬಿಡುವುದಿಲ್ಲ ಎಂಬುದು ಆತನಿಗೆ ತಿಳಿಯಲು (ಇದೆಲ್ಲಾ ಸಂಭವಿಸಿದೆ).’’
ಕಾಂಡ -13
53. (ಯೂಸುಫ್ ಹೇಳಿದರು;) ನನ್ನ ಚಿತ್ತವು ಪಾವನವೆಂದು ನಾನೇನೂ ಹೇಳಿಕೊಳ್ಳುವುದಿಲ್ಲ. ಚಿತ್ತವು ಖಂಡಿತವಾಗಿಯೂ ಕೆಡುಕಿನ ಪ್ರೇರಣೆ ನೀಡುತ್ತದೆ – ನನ್ನ ಒಡೆಯನ ಕರುಣೆಗೆ ಪಾತ್ರರಾದವರ ಹೊರತು. ನನ್ನ ಒಡೆಯನು ಖಂಡಿತ ಕ್ಷಮಿಸುವವನು ಮತ್ತು ಕರುಣಾಮಯಿಯಾಗಿದ್ದಾನೆ.
54. ರಾಜನು ಹೇಳಿದನು; ಅವನನ್ನು ನನ್ನ ಬಳಿಗೆ ತನ್ನಿರಿ. ನಾನು ಆತನನ್ನು ನನಗಾಗಿಯೇ ಮೀಸಲಿಡುತ್ತೇನೆ. ಆತನು ಅವರೊಡನೆ ಮಾತನಾಡಿದ ಬಳಿಕ ಹೇಳಿದನು; ಖಂಡಿತವಾಗಿಯೂ ಇಂದು ನೀನು ನಮ್ಮ ಬಳಿ ಅತ್ಯಂತ ಗೌರವಾನ್ವಿತ ಹಾಗೂ ವಿಶ್ವಾಸಾರ್ಹ ವ್ಯಕ್ತಿಯಾಗಿರುವೆ.
55. ಅವರು (ಯೂಸುಫ್) ಹೇಳಿದರು; ನನ್ನನ್ನು ನಾಡಿನ ಬೊಕ್ಕಸಗಳ ಅಧಿಕಾರಿಯಾಗಿ ಮಾಡು. ನಾನು ಖಂಡಿತ ರಕ್ಷಕನೂ ಬಲ್ಲವನೂ ಆಗಿರುವೆನು.
56. ಈ ರೀತಿ ನಾವು ಯೂಸುಫ್ರಿಗೆ ಆ ನಾಡಿನಲ್ಲಿ ಅಧಿಕಾರವನ್ನು ನೀಡಿದೆವು. ಅದರಲ್ಲಿ ಅವರು ತಾವಿಚ್ಛಿಸಿದಲ್ಲಿ ಇರುತ್ತಿದ್ದರು. ನಾವು ನಮ್ಮ ಅನುಗ್ರಹವನ್ನು ನಾವಿಚ್ಛಿಸಿದವರಿಗೆ ತಲುಪಿಸುತ್ತೇವೆ ಮತ್ತು ನಾವು ಸತ್ಕರ್ಮವೆಸಗಿದವರ ಪ್ರತಿಫಲವನ್ನು ವ್ಯರ್ಥಗೊಳಿಸುವುದಿಲ್ಲ.
57. ವಿಸ್ವಾಸಿಗಳು ಮತ್ತು ಸತ್ಯನಿಷ್ಠರ ಪಾಲಿಗೆ ಪರಲೋಕದ ಪ್ರತಿಫಲವೇ ಉತ್ತಮವಾಗಿರುತ್ತದೆ.
58. ಯೂಸುಫ್ರ ಸಹೋದರರು ಬಂದರು ಮತ್ತು ಅವರು ಇರುವಲ್ಲಿಗೆ ಪ್ರವೇಶಿಸಿದರು. ಅವರು (ಯೂಸುಫರು), ಅವರನ್ನು ಗುರುತಿಸಿದರು. ಆದರೆ ಅವರು ಮಾತ್ರ ಅವರನ್ನು (ಯೂಸುಫರನ್ನು) ಗುರುತಿಸಲಿಲ್ಲ.
59. ಕೊನೆಗೆ ಅವರು (ಯೂಸುಫರು) ಅವರಿಗೆ (ಸಹೋದರರಿಗೆ) ಅವರ ಸರಕನ್ನು ಸಿದ್ಧಗೊಳಿಸಿಕೊಟ್ಟಾಗ ಹೇಳಿದರು; ನಿಮ್ಮ ತಂದೆಯಿಂದ ನಿಮಗಿರುವ (ಇನ್ನೊಬ್ಬ) ಸಹೋದರನನ್ನು ನನ್ನ ಬಳಿಗೆ ತನ್ನಿರಿ. ನಾನು ತೂಗುಪಾತ್ರವನ್ನು ತುಂಬಿಕೊಡುತ್ತೇನೆ ಮತ್ತು ಅತ್ಯುತ್ತಮ ಸತ್ಕಾರ ನೀಡುವವನಾಗಿದ್ದೇನೆಂಬುದನ್ನು ನೀವು ನೋಡುತ್ತಿಲ್ಲವೇ?
60. ನೀವು ಆತನನ್ನು ನನ್ನ ಬಳಿಗೆ ತರದಿದ್ದರೆ ನಿಮಗೆ ನನ್ನ ಬಳಿ ಯಾವ ಪಾಲೂ ಸಿಗದು ಮತ್ತು ನೀವು ನನ್ನ ಹತ್ತಿರವೂ ಬರಬಾರದು.
61. ಅವರು ಹೇಳಿದರು; ನಾವು ಅವನ ಕುರಿತು ಅವನ ತಂದೆಯನ್ನು ಒಲಿಸಲು ಪ್ರಯತ್ನಿಸುವೆವು ಮತ್ತು (ಅಷ್ಟನ್ನು) ನಾವು ಖಂಡಿತ ಮಾಡುವೆವು.
62. ಅವರು (ಯೂಸುಫ್) ತಮ್ಮ ಯುವಕರೊಡನೆ ಹೇಳಿದರು; ಅವರ ಮೊತ್ತವನ್ನು ನೀವು (ಗುಟ್ಟಾಗಿ) ಅವರ ಸರಕಿನಲ್ಲೇ ಇಟ್ಟು ಬಿಡಿರಿ. ಅವರು ತಮ್ಮವರ ಬಳಿಗೆ ಮರಳಿದಾಗ ಅದನ್ನು ಗುರುತಿಸಲಿ – ಹಾಗೆ ಅವರು ಮರಳಿ ಬರಲೂಬಹುದು.
63. ಅವರು ತಮ್ಮ ತಂದೆಯ ಬಳಿಗೆ ಮರಳಿದಾಗ ಹೇಳಿದರು; ನಮ್ಮ ತಂದೆಯೇ, ನಮ್ಮಿಂದ ಪಾಲನ್ನು ತಡೆದಿಡಲಾಗಿದೆ. ನೀವು ನಮ್ಮ ಸಹೋದರನನ್ನು ನಮ್ಮ ಜೊತೆ ಕಳಿಸಿರಿ. ನಾವು ಪಾಲನ್ನು ಪೂಣರ್ವಾಗಿ ತರುವೆವು ಮತ್ತು ಖಂಡಿತ ನಾವು ಅವರ ರಕ್ಷಕರಾಗಿರುವೆವು.
64. ಅವರು (ತಂದೆ) ಹೇಳಿದರು; ಈ ಹಿಂದೆ ಅವನ ಸಹೋದರನ (ಯೂಸುಫ್ರ) ವಿಷಯದಲ್ಲಿ ನಾನು ನಿಮ್ಮನ್ನು ನಂಬಿದ್ದಂತೆ ಅವನ ವಿಷಯದಲ್ಲೂ ನಂಬಬೇಕೇ? ಅಲ್ಲಾಹನೇ ಅತ್ಯುತ್ತಮ ರಕ್ಷಕನಾಗಿದ್ದಾನೆ ಮತ್ತು ಅವನೇ ಅತ್ಯಧಿಕ ಕರುಣೆ ತೋರುವವನಾಗಿದ್ದಾನೆ.
65. ಅವರು ತಮ್ಮ ಸರಕನ್ನು ತೆರೆದಾಗ ಅದರಲ್ಲಿ ತಮ್ಮ ಮೊತ್ತವನ್ನು ತಮಗೆ ಹಿಂದಿರುಗಿಸಲಾಗಿರುವುದನ್ನು ಕಂಡರು. ಅವರು ಹೇಳಿದರು; ನಮ್ಮ ತಂದೆಯೇ, ನಾವು ಇನ್ನೇನನ್ನು ತಾನೇ ಅಪೇಕ್ಷಿಸಬಲ್ಲೆವು? ನಮಗೆ ಮರಳಿಸಲಾಗಿರುವ ನಮ್ಮ ಮೊತ್ತವು ಇದೋ, ಇಲ್ಲಿದೆ. ನಾವು ನಮ್ಮ ಮನೆಯವರಿಗಾಗಿ ಧಾನ್ಯವನ್ನು ತರುವೆವು. ನಮ್ಮ ಸಹೋದರರನ್ನು ರಕ್ಷಿಸುವೆವು ಮತ್ತು ಒಂದು ಒಂಟೆಯ ಹೊರೆಯಷ್ಟು ಹೆಚ್ಚಿನದನ್ನು ತರುವೆವು. ಅದು ಸುಲಭವಾಗಿ ಸಿಗುವ ಹೊರೆಯಾಗಿರುವುದು.
66. ಅವರು (ತಂದೆ), ‘‘ನಿಮಗೆ ಸಂಪೂರ್ಣ ಮುತ್ತಿಗೆ ಬೀಳದಿದ್ದರೆ, ನೀವು ಅವನನ್ನು ನನ್ನ ಬಳಿಗೆ (ಮರಳಿ) ಕರೆದುತರುವಿರೆಂದು ನೀವು ಅಲ್ಲಾಹನ ಹೆಸರಲ್ಲಿ ನನಗೆ ಪಕ್ವವಾದ ವಚನ ಕೊಡುವ ತನಕ ನಾನು ಆತನನ್ನು ನಿಮ್ಮ ಜೊತೆ ಕಳಿಸಲಾರೆ’’ ಎಂದರು. ಕೊನೆಗೆ ಅವರು, ಅವರಿಗೆ ಪಕ್ವ ವಚನವನ್ನು ಕೊಟ್ಟಾಗ ಅವರು (ತಂದೆ) ‘‘ ನಾವು ಆಡಿರುವ ಮಾತುಗಳಿಗೆಲ್ಲಾ ಅಲ್ಲಾಹನೇ ಮೇಲ್ವಿಚಾರಕನಾಗಿದ್ದಾನೆ’’ ಎಂದರು.
67. ಮತ್ತು ಅವರು ಹೇಳಿದರು; ‘‘ನನ್ನ ಪುತ್ರರೇ, ನೀವೆಲ್ಲಾ ಒಂದೇ ಬಾಗಿಲಿಂದ ಪ್ರವೇಶೀಸಬೇಡಿ. ಪ್ರತ್ಯೇಕ ಬಾಗಿಲುಗಳಿಂದ ಪ್ರವೇಶಿಸಿರಿ. ಯಾವುದೇ ವಿಷಯದಲ್ಲಿ ನಿಮ್ಮನ್ನು ಅಲ್ಲಾಹನಿಂದ ರಕ್ಷಿಸಲು ಮಾತ್ರ ನನಗೆ ಸಾಧ್ಯವಿಲ್ಲ. ಅಧಿಕಾರವೆಲ್ಲವೂ ಅಲ್ಲಾಹನಿಗೇ ಸೇರಿದೆ. ನಾನು ಅವನಲ್ಲೇ ಭರವಸೆ ಇಟ್ಟಿದ್ದೇನೆ ಮತ್ತು ಭರವಸೆ ಇಡುವವರೆಲ್ಲರೂ ಅವನಲ್ಲೇ ಭರವಸೆ ಇಡಬೇಕು’’.
68. ಅವರು ತಮ್ಮ ತಂದೆಯು ಆದೇಶಿಸಿದ ರೀತಿಯಲ್ಲೇ ಪ್ರವೇಶಿಸಿದರು. ಆದರೆ ಯಾವುದೇ ವಿಷಯದಲ್ಲಿ ಅವರನ್ನು ಅಲ್ಲಾಹನಿಂದ ರಕ್ಷಿಸಲು ಅವರಿಗೆ (ತಂದೆಗೆ) ಸಾಧ್ಯವಿರಲಿಲ್ಲ. ಯಅ್ಕೂಬ್ರು ತಮ್ಮ ಮನದಲ್ಲಿ ಹುಟ್ಟಿದ್ದ ಒಂದು ಅಪೇಕ್ಷೆಯನ್ನಷ್ಟೇ ಪೂರ್ತಿಗೊಳಿಸಿದ್ದರು. ಖಂಡಿವಾಗಿಯೂ ಅವರು ನಾವು ನೀಡಿದ ಜ್ಞಾನದಿಂದ ಜ್ಞಾನಿಯಾಗಿದ್ದರು. ಆದರೆ ಮಾನವರಲ್ಲಿ ಹೆಚ್ಚಿನವರು ಅರಿತಿರುವುದಿಲ್ಲ.
69. ಅವರು ಯೂಸುಫ್ರ ಬಳಿಗೆ ಪ್ರವೇಶಿಸಿದಾಗ, ಅವರು ತನ್ನ ಸಹೋದರನನ್ನು ತನ್ನೆಡೆಗೆ ಕರೆದುಕೊಂಡು ‘‘ಖಂಡಿತವಾಗಿಯೂ ನಾನೇ ನಿನ್ನ ಸಹೋದರ, ಅವರು ಮಾಡುತ್ತಿದ್ದ ಕೃತ್ಯಗಳ ಬಗ್ಗೆ ನೀನು ದುಃಖಿತನಾಗಬೇಡ’’ ಎಂದರು.
70. ತರುವಾಯ ಅವರು, ಅವರ (ಸಹೋದರರ) ಸರಕನ್ನು ಸಿದ್ಧಗೊಳಿಸಿದಾಗ ತಮ್ಮ ಸಹೋದರನ ಸರಕಿನಲ್ಲಿ ಒಂದು ಪಾನಪಾತ್ರೆಯನ್ನು ಇಟ್ಟುಬಿಟ್ಟರು. ಆ ಬಳಿಕ ಘೋಷಿಸುವ ಒಬ್ಬಾತನು, ಯಾತ್ರಾ ತಂಡದವರೇ, ನೀವು ಖಂಡಿತ ಕಳ್ಳರು ಎಂದು ಘೋಷಿಸಿದನು.
71. ಅವರು (ಸಹೋದರರು), ಅವರೆಡೆಗೆ ತಿರುಗಿ, ನೀವು ಏನನ್ನು ಕಳೆದುಕೊಂಡಿರುವಿರಿ? ಎಂದು ಕೇಳಿದರು.
72. ಅವರು (ಯೂಸುಫ್), ‘‘ನಮ್ಮ ದೊರೆಯ ಪಾನಪಾತ್ರೆಯು ನಮ್ಮಿಂದ ಕಳೆದು ಹೋಗಿದೆ. ಅದನ್ನು ತಂದುಕೊಡುವಾತನಿಗೆ ಒಂದು ಒಂಟೆಹೊರುವಷ್ಟು ಸಿಗಲಿದೆ. ಅದಕ್ಕೆ ನಾನು ಹೊಣೆಗಾರನಾಗಿದ್ದೇನೆ’’ ಎಂದರು.
73. ಅವರು (ಸಹೋದರರು), ‘‘ಅಲ್ಲಾಹನಾಣೆ, ನಾವು ನಾಡಿನಲ್ಲಿ ಗೊಂದಲ ನಿರ್ಮಿಸುವುದಕ್ಕೆ ಬಂದವರಲ್ಲ ಮತ್ತು ನಾವು ಕಳ್ಳರಲ್ಲ ಎಂಬುದು ನಿಮಗೆ ಚೆನ್ನಾಗಿ ತಿಳಿದಿದೆ’’ ಎಂದರು.
74. ಅವರು (ಅಧಿಕಾರಿಗಳು) ಕೇಳಿದರು; ನೀವು ಸುಳ್ಳು ಹೇಳುತ್ತಿದ್ದರೆ, ಅದಕ್ಕೇನು ಶಿಕ್ಷೆ?
75. ಅವರು (ಸಹೋದರರು) ಹೇಳಿದರು; ಅದಕ್ಕೆ ಶಿಕ್ಷೆ ಇಷ್ಟೇ. ಯಾರ ಸರಕಿನಲ್ಲಿ ಅದು ಸಿಕ್ಕಿತೋ ಅವನೇ ಅದಕ್ಕೆ ಪರಿಹಾರವಾಗಲಿ. ನಾವು ಅಕ್ರಮಿಗಳನ್ನು ಇದೇ ರೀತಿ ಶಿಕ್ಷಿಸುತ್ತೇವೆ.
76. ಅವರು (ಯೂಸುಫರು) ತಮ್ಮ ಸಹೋದರನ ಸರಕಿಗೆ ಮುನ್ನ ಅವರ ಸರಕುಗಳ ಶೋಧ ಆರಂಭಿಸಿದರು. ಕೊನೆಗೆ ಅವರು ತಮ್ಮ ಸಹೋದರನ ಸರಕಿನಿಂದ ಅದನ್ನು (ಪಾನಪಾತ್ರೆಯನ್ನು) ಹೊರತೆಗೆದರು. ಈ ರೀತಿ ನಾವು ಯೂಸುಫ್ರಿಗೆ ಉಪಾಯ ಕಲಿಸಿದ್ದೆವು. ರಾಜನ ಧರ್ಮದ ಪ್ರಕಾರವಂತು ಅವರು ಆತನನ್ನು (ಸಹೋದರನನ್ನು) ಹಿಡಿಯಲು ಸಾಧ್ಯವಿರಲಿಲ್ಲ – ಅಲ್ಲಾಹನೇ ಇಚ್ಛಿಸಿದ್ದರ ಹೊರತು. ನಾವು, ನಾವಿಚ್ಛಿಸಿದವರ ಸ್ಥಾನವನ್ನು ಉನ್ನತಗೊಳಿಸುತ್ತೇವೆ. ಎಲ್ಲ ಜ್ಞಾನಿಗಳ ಮೇಲೊಬ್ಬ ಜ್ಞಾನಿ ಇರುತ್ತಾನೆ.
77. ಅವರು ಹೇಳಿದರು; ಈಗ ಇವನು ಕದ್ದಿದ್ದರೆ, ಈ ಹಿಂದೆ ಇವನ ಸಹೋದರನೂ ಕದ್ದಿದ್ದನು. ಯೂಸುಫರು ತಮ್ಮ ಮನದಲ್ಲಿದ್ದ ಮಾತನ್ನು ಗುಟ್ಟಾಗಿಟ್ಟರು ಮತ್ತು ಅದನ್ನು ಅವರ ಮುಂದೆ ಪ್ರಕಟಿಸಲಿಲ್ಲ. ಅವರು (ಯೂಸುಫರು) ‘‘ನಿಮ್ಮ ಸ್ಥಿತಿಯು ತೀರಾ ಹೀನವಾಗಿದೆ. ನೀವು ಹೇಳುತ್ತಿರುವುದನ್ನು ಅಲ್ಲಾಹನು ಚೆನ್ನಾಗಿಬಲ್ಲನು’’ ಎಂದಷ್ಟೇ ಹೇಳಿದರು.
78. ಅವರು (ಮಲ ಸಹೋದರರು), ‘‘ಸರದಾರನೇ, ಅವನಿಗೆ (ಸೆರೆ ಸಿಕ್ಕಿದ ಸಹೋದರನಿಗೆ) ತುಂಬಾ ವಯಸ್ಸಾದ ತಂದೆ ಇದ್ದಾರೆ. ನೀನು ಈತನ ಬದಲಿಗೆ ನಮ್ಮಲ್ಲಿ ಒಬ್ಬನನ್ನು ಇಟ್ಟುಕೋ. ನಿನ್ನನ್ನು ನಾವು ತುಂಬಾ ಉದಾರಿಯಾಗಿ ಕಾಣುತ್ತಿದ್ದೇವೆ’’ ಎಂದರು.
79. ಅವರು (ಯೂಸುಫರು) ಹೇಳಿದರು; ‘‘ಅಲ್ಲಾಹನು ಕಾಪಾಡಲಿ. ಯಾರ ಬಳಿ ನಮಗೆ ನಮ್ಮ ಸೊತ್ತು ಸಿಕ್ಕಿದೆಯೋ ಅವನ ಹೊರತು ಬೇರೊಬ್ಬನನ್ನು ನಾವು ಹಿಡಿದಿಟ್ಟರೆ ನಾವು ಅಕ್ರಮಿಗಳಾಗುವೆವು’’.
80. ಕೊನೆಗೆ ಅವರು ಆತನಿಂದ ನಿರಾಶರಾದಾಗ ಸಮಾಲೋಚಿಸಲೆಂದು ಸೇರಿ ಕುಳಿತರು. ಅವರಲ್ಲಿನ ಹಿರಿಯನು ಹೇಳಿದನು; ನಿಮ್ಮ ತಂದೆ ಅಲ್ಲಾಹನ ಹೆಸರಲ್ಲಿ ನಿಮ್ಮಿಂದ ಪಕ್ವವಾದ ವಚನವನ್ನು ಪಡೆದಿದ್ದರೆಂದು ಹಾಗೂ ಈ ಹಿಂದೆ ಯೂಸುಫನ ವಿಷಯದಲ್ಲಿ ನೀವು ಅದೆಂತಹ ತಪ್ಪು ಮಾಡಿದ್ದಿರೆಂದು ನಿಮಗೆ ತಿಳಿಯದೆ? ನಾನಂತು ನನ್ನ ತಂದೆ ನನಗೆ ಅನುಮತಿ ನೀಡುವ ತನಕ ಅಥವಾ ಅಲ್ಲಾಹನೇ ನನಗೆ ಒಂದು ಆದೇಶವನ್ನು ನೀಡುವ ತನಕ ಈ ನೆಲವನ್ನು ಬಿಟ್ಟು ಮಿಸುಕಾಡಲಾರೆ. ಅವನು ಅತ್ಯುತ್ತಮ ತೀರ್ಪು ನೀಡುವವನಾಗಿದ್ದಾನೆ.
81. ನೀವು ನಿಮ್ಮ ತಂದೆಯ ಬಳಿಗೆ ಮರಳಿರಿ ಮತ್ತು ಹೀಗೆಂದು ಹೇಳಿರಿ; ನಮ್ಮ ತಂದೆಯೇ, ನಿಮ್ಮ ಪುತ್ರನು ನಿಜಕ್ಕೂ ಕಳ್ಳತನ ಮಾಡಿದ್ದನು. ನಾವಂತು ನಮಗೆ ತಿಳಿದಷ್ಟು ಮಾತ್ರ ಸಾಕ್ಷ್ಯ ಹೇಳಿದ್ದೆವು. ಇನ್ನು, ಗುಪ್ತ ವಿಚಾರಗಳ ಮೇಲ್ವಿಚಾರಕರು ನಾವಾಗಿರಲಿಲ್ಲ.
82. ನಾವು ಇದ್ದ ಊರಲ್ಲಿ ಹಾಗೂ ನಾವು ಯಾವ ಯಾತ್ರಾ ತಂಡದ ಜೊತೆ ಬಂದಿದ್ದೆವೋ, ಅವರಲ್ಲಿ ಕೇಳಿ ನೋಡಿರಿ. ನಾವು ಖಂಡಿತ ಸತ್ಯವಂತರಾಗಿದ್ದೇವೆ.
83. ಅವರು (ತಂದೆ) ಹೇಳಿದರು; ನಿಜವಾಗಿ ನಿಮ್ಮ ಚಿತ್ತಗಳು ನಿಮಗೆ ಏನನ್ನೋ ರಚಿಸಿಕೊಟ್ಟಿವೆ. (ಆದ್ದರಿಂದ) ಸಹನೆಯೇ ಉತ್ತಮ. ಅಲ್ಲಾಹನು ಅವರೆಲ್ಲರನ್ನೂ ನನ್ನ ಬಳಿಗೆ ತರಬಹುದು. ಅವನು ಖಂಡಿತ ಎಲ್ಲವನ್ನೂ ಬಲ್ಲವನು ಹಾಗೂ ಜಾಣನಾಗಿದ್ದಾನೆ.
84. ಆ ಬಳಿಕ ಅವರು ಅವರಿಂದ ಮುಖ ತಿರುಗಿಸಿಕೊಂಡರು ಮತ್ತು ಅಯ್ಯೋ ಯೂಸುಫ್ ಎಂದರು. ದುಃಖದಿಂದ ಅವರ ಕಣ್ಣುಗಳು ಬಿಳಿಯಾಗಿಬಿಟ್ಟವು ಮತ್ತು ಅವರು ಎಲ್ಲವನ್ನೂ ಸಹಿಸಿಕೊಂಡಿದ್ದರು.
85. ಅವರು (ಸಹೋದರರು) ಹೇಳಿದರು; ಅಲ್ಲಾಹನಾಣೆ, ನೀವಂತು ಸಂಪೂರ್ಣ ರೋಗಪೀಡಿತರಾಗುವ ತನಕ ಅಥವಾ ಸಾಯುವ ತನಕವೂ ಸದಾ ಯೂಸುಫನನ್ನೇ ಸ್ಮರಿಸುತ್ತಾ ಇರುವಿರಿ.
86. ಅವರು (ತಂದೆ) ಹೇಳಿದರು; ನಾನು ನನ್ನ ಸಂಕಟ ಹಾಗೂ ನನ್ನ ದುಃಖವನ್ನಷ್ಟೇ ಅಲ್ಲಾಹನಲ್ಲಿ ಹೇಳಿಕೊಳ್ಳುತ್ತಿದ್ದೇನೆ. ನಿಜವಾಗಿ ನಿಮಗೆ ತಿಳಿದಿಲ್ಲದ ವಿಷಯಗಳು ಅಲ್ಲಾಹನ ಮೂಲಕ ನನಗೆ ತಿಳಿದಿವೆ.
87. ನನ್ನ ಪುತ್ರರೇ, ನೀವು ಹೋಗಿರಿ ಹಾಗೂ ಯೂಸುಫ್ ಮತ್ತು ಅವನ ಸಹೋದರನನ್ನು ಪತ್ತೆ ಹಚ್ಚಿರಿ. ಅಲ್ಲಾಹನ ಅನುಗ್ರಹದ ಕುರಿತು ನೀವೆಂದೂ ನಿರಾಶರಾಗಬೇಡಿ. ಧಿಕ್ಕಾರಿಗಳ ಹೊರತು ಬೇರಾರೂ ಅಲ್ಲಾಹನ ಅನುಗ್ರಹದ ಕುರಿತು ಖಂಡಿತ ನಿರಾಶರಾಗುವುದಿಲ್ಲ.
88. ಕೊನೆಗೆ ಆತನ (ಸರದಾರನ) ಬಳಿಗೆ ಹೋಗಿ ಅವರು (ಸಹೋದರರು) ಹೇಳಿದರು; ಸರದಾರರೇ, ನಮಗೆ ಹಾಗೂ ನಮ್ಮ ಪರಿವಾರಕ್ಕೆ ಸಂಕಟ ತಟ್ಟಿದೆ. ನಾವು ನಿಕೃಷ್ಟ ಬಂಡವಾಳದೊಂದಿಗೆ ನಿಮ್ಮ ಬಳಿಗೆ ಬಂದಿದ್ದೇವೆ. ನೀವು ನಮಗೆ ಪೂರ್ಣ ಪಾಲನ್ನು ಕೊಡಿರಿ ಮತ್ತು ನಮಗೆ ದಾನವನ್ನು ನೀಡಿರಿ. ಖಂಡಿತವಾಗಿಯೂ ಅಲ್ಲಾಹನು ದಾನಿಗಳಿಗೆ ಪ್ರತಿಫಲವನ್ನು ನೀಡುವನು.
89. ಅವರು (ಯೂಸುಫ್) ಹೇಳಿದರು; ನೀವು ಮೂಢರಾಗಿದ್ದಾಗ, ಯೂಸುಫ್ ಮತ್ತು ಆತನ ಸಹೋದರನಿಗೆ ನೀವು ಏನು ಮಾಡಿದ್ದಿರಿ ಎಂಬುದು ನಿಮಗೆ ಗೊತ್ತೇ?
90. ಅವರು ಹೇಳಿದರು; ನಿಜಕ್ಕೂ ನೀನೇ ಯೂಸುಫನೇ? ಅವರು (ಯೂಸುಫ್) ಹೇಳಿದರು; ನಾನೇ ಯೂಸುಫ್ ಮತ್ತು ಇವನು ನನ್ನ ಸಹೋದರನು. ಅಲ್ಲಾಹನು ನಮ್ಮ ಮೇಲೆ ಔದಾರ್ಯ ತೋರಿದ್ದಾನೆ. ಧರ್ಮನಿಷ್ಠರು ಮತ್ತು ಸಹನಶೀಲರಿಗೆ (ತಿಳಿದಿದೆ); ಅಲ್ಲಾಹನು ಸತ್ಕರ್ಮಿಗಳ ಪ್ರತಿಫಲವನ್ನು ಖಂಡಿತ ವ್ಯರ್ಥಗೊಳಿಸುವುದಿಲ್ಲ.
91. ಅವರು (ಸಹೋದರರು) ಹೇಳಿದರು; ಅಲ್ಲಾಹನಾಣೆ! ಅಲ್ಲಾಹನು ನಮ್ಮೆದುರು ನಿನಗೆ ಮೇಲ್ಮೆಯನ್ನು ನೀಡಿದ್ದಾನೆ. ನಾವು ನಿಜಕ್ಕೂ ತಪ್ಪಿತಸ್ಥರಾಗಿದ್ದೆವು.
92. ಅವರು (ಯೂಸುಫ್) ಹೇಳಿದರು; ಇಂದು ನಿಮ್ಮ ಮೇಲೆ ಯಾವ ದೋಷಾರೋಪವೂ ಇಲ್ಲ. ಅಲ್ಲಾಹನು ನಿಮ್ಮನ್ನು ಕ್ಷಮಿಸಲಿ. ಅವನು ಎಲ್ಲರಿಗಿಂತ ಹೆಚ್ಚು ಕರುಣೆ ತೋರುವವನಾಗಿದ್ದಾನೆ.
93. ನೀವು ಈ ನನ್ನ ಅಂಗಿಯನ್ನು ಕೊಂಡುಹೋಗಿ ನನ್ನ ತಂದೆಯ ಮುಖದ ಮೇಲೆ ಹಾಕಿರಿ. ಅವರ ದೃಷ್ಟಿಯು ಮರಳುವುದು ಮತ್ತು ನೀವು ನಿಮ್ಮ ಕುಟುಂಬದ ಎಲ್ಲರ ಜೊತೆ ನನ್ನ ಬಳಿಗೆ ಬನ್ನಿರಿ.
94. ಯಾತ್ರಾ ತಂಡವು ಹೊರಟುಬಿಟ್ಟಾಗ, ಅವರ ತಂದೆ ಹೇಳಿದರು; ನನಗೆ ಯೂಸುಫ್ರ ಸುವಾಸನೆ ಬರುತ್ತಿದೆ. ನೀವು ನನ್ನನ್ನು ಭ್ರಮೆಯಲ್ಲಿರುವವನೆಂದು ಭಾವಿಸಬೇಡಿ.
95. ಅವರು (ಸಹಯಾತ್ರಿಗಳು) ಹೇಳಿದರು; ಅಲ್ಲಾಹನಾಣೆ, ನೀವು ಖಂಡಿತ ಅದೇ ನಿಮ್ಮ ಹಳೆಯ ಭ್ರಮೆಯಲ್ಲಿದ್ದೀರಿ.
96. ಆ ಬಳಿಕ, ಶುಭವಾರ್ತೆ ತರುವವನೊಬ್ಬನು ಬಂದು ಅದನ್ನು (ಯೂಸುಫರ ಅಂಗಿಯನ್ನು) ಅವರ (ಯಾಕೂಬರ) ಮುಖದ ಮೇಲೆ ಹಾಕಿದಾಗ ಅವರು (ಯಅ್ಕೂಬ್ರು) ಮತ್ತೆ ನೋಡಬಲ್ಲವರಾದರು. ಅವರು ಹೇಳಿದರು; ‘‘ ನಿಮಗೆ ತಿಳಿದಿಲ್ಲದ ವಿಷಯಗಳು ಅಲ್ಲಾಹನ ಮೂಲಕ ನನಗೆ ತಿಳಿದಿರುತ್ತವೆಂದು ನಾನು ನಿಮ್ಮೆಡನೆ ಹೇಳಿರಲಿಲ್ಲವೇ?’’
97. ಅವರು ಹೇಳಿದರು; ನಮ್ಮ ತಂದೆಯೇ, ನಮ್ಮ ಪಾಪಗಳ ಕ್ಷಮೆಗಾಗಿ ಪ್ರಾರ್ಥಿಸಿರಿ. ನಾವು ಖಂಡಿತ ತಪ್ಪಿತಸ್ಥರಾಗಿದ್ದೆವು.
98. ಅವರು (ತಂದೆ) ಹೇಳಿದರು; ನಾನು ಬಹುಬೇಗನೇ ನಿಮ್ಮ ಕ್ಷಮೆಗಾಗಿ ನನ್ನ ಒಡೆಯನನ್ನು ಪ್ರಾರ್ಥಿಸುತ್ತೇನೆ. ಖಂಡಿತವಾಗಿಯೂ ಅವನು ಕ್ಷಮಿಸುವವನು ಮತ್ತು ಕರುಣಾಮಯಿಯಾಗಿದ್ದಾನೆ.
99. ಅವರು ಯೂಸುಫರ ಬಳಿಗೆ ಹೋದಾಗ, ಅವರು (ಯೂಸುಫರು) ತಮ್ಮ ತಂದೆ ತಾಯಿಗೆ ತಮ್ಮ ಬಳಿ ಸ್ಥಳ ಕೊಟ್ಟರು ಮತ್ತು ಅಲ್ಲಾಹನು ಇಚ್ಛಿಸಿದರೆ ನೀವು ಮನಃಶಾಂತಿಯೊಂದಿಗೆ ಈಜಿಪ್ತ್ ಅನ್ನು ಪ್ರವೇಶಿಸಿರಿ, ಎಂದರು.
100. ಅವರು ತಮ್ಮ ತಂದೆ ತಾಯಿಯನ್ನು ರಾಜಪೀಠದಲ್ಲಿ ಎತ್ತರದಲ್ಲಿ ಕೂರಿಸಿದರು ಮತ್ತು ಅವರು, (ಸಹೋದರರು) ಅವರ (ಯೂಸುಫ್ರ) ಮುಂದೆ ಸಾಷ್ಟ್ಟಾಂಗವೆರಗಿದರು, ಅವರು (ಯೂಸುಫ್) ಹೇಳಿದರು; ನನ್ನ ತಂದೆಯೇ, ಇದುವೇ ಈ ಹಿಂದಿನ ನನ್ನ ಕನಸಿನ ತಾತ್ಪರ್ಯ. ನನ್ನ ಒಡೆಯನು ಅದನ್ನು ಸತ್ಯವಾಗಿಸಿರುವನು. ಅವನು ನನ್ನನ್ನು ಸೆರೆಮನೆಯಿಂದ ಹೊರತೆಗೆದಾಗ ಮತ್ತು ಶೈತಾನನು ನನ್ನ ಹಾಗೂ ನನ್ನ ಸಹೋದರರ ನಡುವೆ ಜಗಳ ಬೆಳೆಸಿದ ಬಳಿಕ ನಿಮ್ಮನ್ನು ಗ್ರಾಮದಿಂದ (ಇಲ್ಲಿಗೆ) ತಂದಾಗ (ಆ ಮೂಲಕ) ಅವನು ನನ್ನ ಮೇಲೆ ಔದಾರ್ಯ ತೋರಿದ್ದನು. ನನ್ನ ಒಡೆಯನು ಖಂಡಿತ ತಾನಿಚ್ಛಿಸಿದವರ ಪಾಲಿಗೆ ಸೌಮ್ಯನಾಗಿರುತ್ತಾನೆ. ಅವನು ಖಂಡಿತ ಎಲ್ಲವನ್ನೂ ಬಲ್ಲವನೂ ಯುಕ್ತಿವಂತನೂ ಆಗಿದ್ದಾನೆ.
101. ನನ್ನೊಡೆಯಾ, ನೀನು ನನಗೆ ಒಂದು ಸಾಮ್ರಾಜ್ಯವನ್ನು ನೀಡಿರುವೆ ಮತ್ತು ವಿಷಯ (ಸ್ವಪ್ನ) ಗಳನ್ನು ವ್ಯಾಖ್ಯಾನಿಸುವ ವಿದ್ಯೆಯನ್ನು ನನಗೆ ಕಲಿಸಿರುವೆ. (ನೀನೇ) ಆಕಾಶಗಳನ್ನು ಹಾಗೂ ಭೂಮಿಯನ್ನು ರೂಪಿಸಿದವನು. ಈ ಲೋಕದಲ್ಲೂ ಪರಲೋಕದಲ್ಲೂ ನೀನೇ ನನ್ನ ಪೋಷಕನು. ನಿನಗೆ ಶರಣಾಗಿರುವ ಸ್ಥಿತಿಯಲ್ಲಿ (ಮುಸ್ಲಿಮನಾಗಿ) ನನ್ನನ್ನು ಸಾಯಿಸು ಮತ್ತು ಸಜ್ಜನರ ಸಾಲಿಗೆ ನನ್ನನ್ನು ಸೇರಿಸು.
102. (ದೂತರೇ,) ಇವು ನಿಮ್ಮೆಡೆಗೆ ದಿವ್ಯವಾಣಿಯನ್ನು ಕಳಿಸಿ ನಾವು ನಿಮಗೆ ತಿಳಿಸುತ್ತಿರುವ ಗುಪ್ತ ವಿಷಯಗಳು. ಅವರು ತಮ್ಮ ಯೋಜನೆಗಳನ್ನು ರೂಪಿಸುತ್ತಿದ್ದಾಗ ಹಾಗೂ ಅವರು ಸಂಚುಗಳನ್ನು ಹೂಡುತ್ತಿದ್ದಾಗ ನೀವೇನೂ ಅವರ ಬಳಿ ಇರಲಿಲ್ಲ.
103. ಹೆಚ್ಚಿನ ಮಾನವರು, ನೀವು ಎಷ್ಟೇ ಅಪೇಕ್ಷಿಸಿದರೂ ವಿಶ್ವಾಸಿಗಳಾಗುವುದಿಲ್ಲ.
104. ಇದಕ್ಕಾಗಿ ನೀವು ಅವರೊಡನೆ ಯಾವುದೇ ಪ್ರತಿಫಲವನ್ನು ಕೇಳುತ್ತಿಲ್ಲ. ಇದು, ಲೋಕದವರಿಗೆಲ್ಲಾ ಇರುವ ಉಪದೇಶವಾಗಿದೆ.
105. ಆಕಾಶಗಳಲ್ಲಿ ಹಾಗೂ ಭೂಮಿಯಲ್ಲಿ ಅವರು ಅದೆಷ್ಟೋ ಪುರಾವೆಗಳನ್ನು ಕಾಣುತ್ತಾರೆ. ಆದರೆ ಅವರು ಅವುಗಳನ್ನು ಕಡೆಗಣಿಸಿ ಬಿಡುತ್ತಾರೆ.
106. ಅವರಲ್ಲಿ ಹೆಚ್ಚಿನವರು, ಪಾಲುದಾರರನ್ನು ನೇಮಿಸದೆ ಅಲ್ಲಾಹನನ್ನು ನಂಬುವುದಿಲ್ಲ.
107. ಅವರೇನು, ಅಲ್ಲಾಹನ ಸರ್ವವ್ಯಾಪಿ ಶಿಕ್ಷೆಯೊಂದು ತಮ್ಮ ಮೇಲೆ ಬಂದೆರಗುವ ಕುರಿತು, ಅಥವಾ ಅವರಿಗೆ ಅರಿವೇ ಇಲ್ಲದಿರುವಾಗ ಹಠಾತ್ತನೆ ಅಂತಿಮ ಘಳಿಗೆಯು ಬಂದು ಬಿಡುವ ಕುರಿತು ನಿಶ್ಚಿಂತರಾಗಿರುವರೇ ?
108. ಹೇಳಿರಿ; ಇದುವೇ ನನ್ನ ಮಾರ್ಗ. ನಾನು ಅಲ್ಲಾಹನ ಕಡೆಗೆ ಕರೆಯುತ್ತಿದ್ದೇನೆ. ನಾನು ಹಾಗೂ ನನ್ನ ಅನುಯಾಯಿಗಳು ಸ್ಪಷ್ಟವಾದ ಸಾಕ್ಷಾಧಾರಗಳಿರುವ ದಾರಿಯಲ್ಲಿದ್ದೇವೆ. ಅಲ್ಲಾಹನು ಸಂಪೂರ್ಣ ನಿರ್ಮಲನು. ನಾನು (ಅಲ್ಲಾಹನಿಗೆ) ಪಾಲುದಾರರನ್ನು ಆರೋಪಿಸುವವನಲ್ಲ.
109. ನಿಮಗಿಂತ ಹಿಂದೆಯೂ ನಾವು ನಾಡಿನವರ ಪೈಕಿ ಪುರುಷರ ಕಡೆಗೇ ದಿವ್ಯ ಸಂದೇಶವನ್ನು ರವಾನಿಸಿದ್ದು ಅವರನ್ನೇ (ದೂತರಾಗಿ) ಕಳಿಸಿದ್ದೇವೆ. ಅವರೇನು ಭೂಮಿಯಲ್ಲಿ ಸಂಚರಿಸಿ, ಅವರಿಗಿಂತ ಹಿಂದಿನ ಜನರ ಗತಿ ಏನಾಯಿತೆಂಬುದನ್ನು ನೋಡುವುದಿಲ್ಲವೇ? ಪಾಲಿಗೆ ಪರಲೋಕದ ನೆಲೆಯೇ ಉತ್ತಮವಾಗಿದೆ. ನೀವೇನು ಅರ್ಥಮಾಡಿಕೊಳ್ಳುವುದಿಲ್ಲವೇ?
110. ಕೊನೆಗೆ ದೂತರುಗಳು ನಿರಾಶರಾಗಿ, ತಮ್ಮೊಡನೆ ಸುಳ್ಳುಹೇಳಲಾಗಿತ್ತೇ ಎಂದು ಸಂಶಯಿಸಲಾರಂಭಿಸುವಾಗಲೇ ನಮ್ಮ ನೆರವು ಬಂದು ಬಿಟ್ಟಿತು ಮತ್ತು ನಾವಿಚ್ಛಿಸಿದವರನ್ನು ನಾವು ರಕ್ಷಿಸಿದೆವು. ಅಪರಾಧಿಗಳ ಮೇಲಿಂದ ನಮ್ಮ ಶಿಕ್ಷೆಯನ್ನು ನಿವಾರಿಸಲಾಗುವುದಿಲ್ಲ.
111. ಬುದ್ಧಿ ಉಳ್ಳವರಿಗೆ ಅವರ ಕಥೆಗಳಲ್ಲಿ ಖಂಡಿತ ಪಾಠವಿದೆ. ಇದು ಸ್ವರಚಿತ ಹೇಳಿಕೆಯೇನಲ್ಲ. ನಿಜವಾಗಿ ಇದು ಈಗಾಗಲೇ ಇರುವುದರ (ಗತಕಾಲದ ಗ್ರಂಥಗಳಲ್ಲಿರುವ ಸತ್ಯದ) ಸಮರ್ಥನೆಯಾಗಿದೆ, ಎಲ್ಲ ವಿಷಯಗಳ ವಿವರವಾಗಿದೆ ಮತ್ತು ನಂಬುವವರ ಪಾಲಿಗೆ ಮಾರ್ಗದರ್ಶಿ ಹಾಗೂ ಅನುಗ್ರಹವಾಗಿದೆ.