15. Al Hijr

15. ಅಲ್ ಹಿಜ್ರ್

ವಚನಗಳು – 99, ಮಕ್ಕಃ

ಅಲ್ಲಾಹನ ಹೆಸರಿಂದ – ಅವನು ಅಪಾರ ದಯಾಳು, ಕರುಣಾಮಯಿ.

1. ಅಲಿಫ್ ಲಾಮ್ ರಾ – ಇವು ಗ್ರಂಥದ ಹಾಗೂ ಬಹಳ ಸ್ಪಷ್ಟವಾಗಿರುವ ಕುರ್‌ಆನ್‌ನ ವಚನಗಳು.

ಕಾಂಡ-14

2. ತಾವು ಮುಸ್ಲಿಮರಾಗಿದ್ದರೆ ಎಷ್ಟು ಚೆನ್ನಾಗಿತ್ತು ಎಂದು ಧಿಕ್ಕಾರಿಗಳು ಅಪಾರ ಆಶೆ ಪಡುವರು.

3. ಸದ್ಯ ಅವರನ್ನು ಬಿಟ್ಟು ಬಿಡಿರಿ. ಅವರು ತಿನ್ನುತ್ತಲೂ, ಸುಖ ಭೋಗಗಳಲ್ಲೂ ತಲ್ಲೀನರಾಗಿರಲಿ. ಅವರ ಹುಸಿ ನಿರೀಕ್ಷೆಯು ಅವರನ್ನು ಭ್ರಮೆಯಲ್ಲಿರಿಸಲಿ. (ವಾಸ್ತವವನ್ನು) ಅವರು ಬಹುಬೇಗನೇ ಅರಿಯುವರು.

4. ಒಂದು ಲಿಖಿತ ಕಾಲವನ್ನು ನಿಗದಿಪಡಿಸದೆ ನಾವು ಯಾವ ಜನಾಂಗವನ್ನೂ ನಾಶ ಮಾಡಿದ್ದಿಲ್ಲ.

 5. ತನ್ನ ನಿಗದಿತ ಅವಧಿಯನ್ನು ಮೀರಿ ಮುನ್ನಡೆಯಲು ಅಥವಾ ಅದರಿಂದ ಹಿಂದೆ ಉಳಿಯಲು ಯಾವ ಸಮುದಾಯಕ್ಕೂ ಸಾಧ್ಯವಾಗದು.

6. ಅವರು (ಧಿಕ್ಕಾರಿಗಳು) ಹೇಳಿದರು; ‘‘ದಿವ್ಯ ಉಪದೇಶ ಇಳಿಸಿ ಕೊಡಲಾಗಿರು ವವನೇ, ನೀನೊಬ್ಬ ಹುಚ್ಚನೇ ಸರಿ.

7. ನೀನು ಸತ್ಯವಂತನಾಗಿದ್ದರೆ, ನೀನೇಕೆ ನಮ್ಮ ಬಳಿಗೆ ಮಲಕ್‌ಗಳನ್ನು ಕರೆತರುವುದಿಲ್ಲ?’’

8. ನಿಜವಾಗಿ ನಾವು ಮಲಕ್‌ಗಳನ್ನು ಸತ್ಯದೊಂದಿಗೆ ಮಾತ್ರ ಕಳುಹಿಸುತ್ತೇವೆ. ಆದರೆ ಆಗ ಅವರಿಗೆ (ಧಿಕ್ಕಾರಿಗಳಿಗೆ) ಹೆಚ್ಚಿನ ಕಾಲಾವಧಿ ನೀಡಲಾಗುವುದಿಲ್ಲ.

9. ಖಂಡಿತವಾಗಿಯೂ ನಾವೇ ಈ ದಿವ್ಯ ಬೋಧನೆಯನ್ನು ಇಳಿಸಿ ಕೊಟ್ಟವರು ಮತ್ತು ಖಂಡಿತವಾಗಿಯೂ ನಾವೇ ಇದರ ಸಂರಕ್ಷಕರಾಗಿದ್ದೇವೆ.

10. ನಿಮಗಿಂತ ಹಿಂದಿನ ಜನವರ್ಗಗಳಲ್ಲೂ ನಾವು (ದೂತರನ್ನು) ರವಾನಿಸಿದ್ದೆವು.

11. ಅವರ ಬಳಿಗೆ ಬಂದ ದೂತರಲ್ಲಿ ಯಾರೂ ಅಪಹಾಸ್ಯಕ್ಕೆ ತುತ್ತಾಗದೆ ಇರಲಿಲ್ಲ.

12. ಈ ರೀತಿ ನಾವು ಅದನ್ನು (ಅಪಹಾಸ್ಯವನ್ನು) ಅಪರಾಧಿಗಳ ಮನಸ್ಸುಗಳೊಳಗೆ ಬಿತ್ತಿರುತ್ತೇವೆ.

13. ಅವರು ಇದನ್ನು (ಈ ಉಪದೇಶವನ್ನು) ನಂಬಲಾರರು. ಅದುವೇ, ಹಿಂದಿನವರ ಸಂಪ್ರದಾಯವಾಗಿದೆ.

14. ಒಂದು ವೇಳೆ ನಾವು ಅವರ ಪಾಲಿಗೆ ಆಕಾಶದ ಒಂದು ಬಾಗಿಲನ್ನು ತೆರೆದಿದ್ದರೆ ಮತ್ತು ಅವರು ಆ ಮೂಲಕ ಮೇಲೇರುತ್ತಲೇ ಇದ್ದಿದ್ದರೆ –

15. ಆಗಲೂ ಅವರು, ‘‘ನಮ್ಮ ದೃಷ್ಟಿಗಳನ್ನು ವಂಚಿಸಲಾಗಿದೆ, ನಿಜವಾಗಿ ನಮ್ಮನ್ನು ಮಂತ್ರ ಮುಗ್ಧಗೊಳಿಸಲಾಗಿದೆ’’ ಎಂದೇ ಹೇಳುತ್ತಿದ್ದರು.

16. ಖಂಡಿತವಾಗಿಯೂ ನಾವು ಆಕಾಶದಲ್ಲಿ ತಾರಾ ಮಂಡಲಗಳನ್ನು ನಿರ್ಮಿಸಿದೆವು ಮತ್ತು ನಾವು ಅವುಗಳನ್ನು ನೋಡುವವರ ಪಾಲಿಗೆ ಅಲಂಕಾರವಾಗಿಸಿದೆವು.

17. ಮತ್ತು ನಾವು ಅವುಗಳನ್ನು ಎಲ್ಲ ಶಪಿತ ಶೈತಾನರಿಂದ ಸುರಕ್ಷಿತವಾಗಿಟ್ಟೆವು.

18. ಕದ್ದು ಆಲಿಸಲು ಪ್ರಯತ್ನಿಸುವಾತನನ್ನು ಒಂದು ಉಜ್ವಲ ಬೆಂಕಿಯು ಹಿಂಬಾಲಿಸುತ್ತದೆ.

19. ಹಾಗೆಯೇ ನಾವು ಭೂಮಿಯನ್ನು ಹರಡಿದೆವು ಮತ್ತು ಅದರಲ್ಲಿ ಬೆಟ್ಟಗಳನ್ನು ನೆಟ್ಟೆವು ಹಾಗೂ ಅದರಲ್ಲಿ ಎಲ್ಲವನ್ನೂ ಸಮರ್ಪಕ ಪ್ರಮಾಣದಲ್ಲಿ ಬೆಳೆಸಿದೆವು.

20. ಅದರಲ್ಲಿ ನಾವು ನಿಮಗೂ ನೀವು ಯಾರ ಅನ್ನದಾತರಲ್ಲವೋ ಅವರಿಗೂ ಜೀವನೋಪಾಯಗಳನ್ನು ಒದಗಿಸಿದೆವು.

21. ನಮ್ಮ ಬಳಿ ಪ್ರತಿಯೊಂದು ವಸ್ತುವಿನ ಭಂಡಾರಗಳೇ ಇವೆ. (ಆದರೆ) ನಾವು ಅವುಗಳನ್ನು ಒಂದು ನಿರ್ದಿಷ್ಟ ಪ್ರಮಾಣದಲ್ಲಿ ಮಾತ್ರ ಇಳಿಸಿಕೊಡುತ್ತೇವೆ.

22. ನಾವು ನೀರು ತುಂಬಿದ ಗಾಳಿಯನ್ನು ರವಾನಿಸಿದೆವು ಮತ್ತು ನಾವು ಆಕಾಶದಿಂದ ನೀರನ್ನು ಇಳಿಸಿ ಅದನ್ನು ನಿಮಗೆ ಕುಡಿಸಿದೆವು. ಅದೇನೂ ನಿಮ್ಮ ಸಂಗ್ರಹದಲ್ಲಿರಲಿಲ್ಲ.

23. ಖಂಡಿತ ನಾವೇ (ಎಲ್ಲರನ್ನೂ) ಜೀವಂತಗೊಳಿಸುವವರು ಹಾಗೂ ಸಾಯಿಸುವವರಾಗಿದ್ದೇವೆ ಮತ್ತು (ಅಂತಿಮವಾಗಿ) ನಾವೇ ಎಲ್ಲರ ಉತ್ತರಾಧಿಕಾರಿಗಳಾಗಿರುತ್ತೇವೆ.

24. ನಿಮ್ಮಲ್ಲಿ ಮುಂದೆ ದಾಟಿ ಹೋದವರನ್ನೂ ನಾವು ಖಂಡಿತ ಬಲ್ಲೆವು ಮತ್ತು ಹಿಂದೆ ಉಳಿದಿರುವವರನ್ನೂ ನಾವು ಖಂಡಿತ ಬಲ್ಲೆವು.

 25. ಖಂಡಿತ ನಿಮ್ಮ ಒಡೆಯನೇ ಅವರೆಲ್ಲರನ್ನೂ ಒಂದೆಡೆ ಸೇರಿಸುವನು. ಅವನು ಖಂಡಿತ ತುಂಬಾ ಯುಕ್ತಿವಂತನೂ ಅರಿವು ಉಳ್ಳವನೂ ಆಗಿದ್ದಾನೆ.

26. ಖಂಡಿತವಾಗಿಯೂ ನಾವೇ ಮಾನವನನ್ನು ಕರಿ ಆವೆ ಮಣ್ಣಿನ ಒಣಗಾರೆಯಿಂದ ಸೃಷ್ಟಿಸಿರುವೆವು.

27. ಅದಕ್ಕಿಂತಲೂ ಮುನ್ನ ನಾವು ತೀಕ್ಷ್ಣವಾದ ಬೆಂಕಿಯಿಂದ ಜಿನ್ನ್‌ಗಳನ್ನು ಸೃಷ್ಟಿಸಿದ್ದೆವು.

 28. ನಿಮ್ಮ ಒಡೆಯನು, ಮಲಕ್‌ಗಳೊಡನೆ ಹೀಗೆಂದಿದ್ದನು; ನಾನು ಕರಿ ಆವೆ ಮಣ್ಣಿನ ಒಣಗಾರೆಯಿಂದ ಒಬ್ಬ ಮಾನವನನ್ನು ಸೃಷ್ಟಿಸಲಿದ್ದೇನೆ-

29. ನಾನು ಅವನನ್ನು ಸಜ್ಜುಗೊಳಿಸಿ ಅವನಲ್ಲಿ ನನ್ನ ಆತ್ಮವನ್ನು ಊದಿದಾಗ ನೀವು ಅವನಿಗೆ ಸಾಷ್ಟಾಂಗವೆರಗಿರಿ.

30. ಅದರಂತೆ, ಎಲ್ಲ ಮಲಕ್‌ಗಳೂ ಸಾಷ್ಟಾಂಗವೆರಗಿದರು.

31. ಆದರೆ ಇಬ್ಲೀಸನ ಹೊರತು. ಅವನು, ಸಾಷ್ಟಾಂಗ ವೆರಗಿದವರ ಜೊತೆ ಸೇರಲು ನಿರಾಕರಿಸಿದನು.

32. ಅವನು (ಅಲ್ಲಾಹನು) ಕೇಳಿದನು; ಓ ಇಬ್ಲೀಸ್, ನೀನೇಕೆ ಸಾಷ್ಟಾಂಗವೆರಗಿದವರ ಜೊತೆ ಸೇರಲಿಲ್ಲ?

33. ಅವನು (ಇಬ್ಲೀಸ್) ಹೇಳಿದನು; ನೀನು ಆವೆಮಣ್ಣಿನ ಒಣಗಾರೆಯಿಂದ ಸೃಷ್ಟಿಸಿರುವ ಮಾನವನಿಗೆ ಸಾಷ್ಟಾಂಗ ವೆರಗುವವನು ನಾನಲ್ಲ.

34. ಅವನು (ಅಲ್ಲಾಹನು) ಹೇಳಿದನು; ನೀನು ಇಲ್ಲಿಂದ ತೊಲಗು. ಖಂಡಿತವಾಗಿಯೂ ನೀನು ಶಪಿತನು.

35. ಅಂತಿಮ ವಿಚಾರಣೆಯ ದಿನದವರೆಗೂ ನಿನ್ನ ಮೇಲೆ ಶಾಪವಿರುವುದು.

36. ಅವನು ಹೇಳಿದನು; ‘‘ನನ್ನೊಡೆಯಾ, (ಎಲ್ಲ ನಿರ್ಜೀವಿಗಳನ್ನು) ಜೀವಂತಗೊಳಿಸಲಾಗುವ ದಿನದ ತನಕ ನನಗೆ ಕಾಲಾವಕಾಶವನ್ನು ನೀಡು.’’

37. ಅವನು (ಅಲ್ಲಾಹನು) ಹೇಳಿದನು; ಇದೋ, ನಿನಗೆ ಕಾಲಾವಕಾಶ ನೀಡಲಾಗಿದೆ-

38. – ಒಂದು ನಿರ್ದಿಷ್ಟ ದಿನದ ವರೆಗೆ.

 39. ಅವನು (ಇಬ್ಲೀಸ್) ಹೇಳಿದನು; ನನ್ನೊಡೆಯಾ, ನೀನು ನನ್ನನ್ನು ದಾರಿ ತಪ್ಪಿಸಿರುವುದರಿಂದ ನಾನು (ತಪ್ಪು ದಾರಿಯನ್ನು) ಭೂಮಿಯಲ್ಲಿರುವವರಿಗೆ ಚಂದಗಾಣಿಸುವೆನು ಮತ್ತು ಅವರೆಲ್ಲರನ್ನೂ ದಾರಿತಪ್ಪಿಸಿ ಬಿಡುವೆನು.

 40. ಅವರ ಪೈಕಿ ನಿನ್ನ ಆಯ್ದ ದಾಸರ ಹೊರತು.

41. ಅವನು (ಅಲ್ಲಾಹನು) ಹೇಳಿದನು; ಇದು ನನ್ನ ಕಡೆಗಿರುವ ನೇರ ಮಾರ್ಗ.

  42. ಖಂಡಿತವಾಗಿಯೂ ಆ ನನ್ನ ದಾಸರ ಮೇಲೆ ನಿನ್ನ ಅಧಿಕಾರವೇನೂ ನಡೆಯದು – ನಿನ್ನನ್ನು ಅನುಸರಿಸಿದ ದಾರಿಗೇಡಿಗಳ ಹೊರತು.

 43. ಖಂಡಿತವಾಗಿಯೂ, ನರಕವೇ ಅವರೆಲ್ಲರಿಗೆ ವಾಗ್ದಾನ ಮಾಡಲಾದ ನೆಲೆಯಾಗಿದೆ.

44. ಅದಕ್ಕೆ ಏಳು ಬಾಗಿಲುಗಳಿರುವವು. ಪ್ರತಿಯೊಂದು ಬಾಗಿಲಿಗೂ ಅವರಲ್ಲಿನ ಒಂದು ಪಾಲು ನಿಗದಿತವಾಗಿದೆ.

45. ಧರ್ಮನಿಷ್ಠರು ಖಂಡಿತ ತೋಟಗಳಲ್ಲಿ ಹಾಗೂ ಝರಿಗಳಲ್ಲಿ ಇರುವರು.

46. ‘‘ಶಾಂತಿಯೊಂದಿಗೆ ಹಾಗೂ ಸುರಕ್ಷಿತರಾಗಿ ಇವುಗಳೊಳಗೆ ಪ್ರವೇಶಿಸಿರಿ’’ (ಎನ್ನುತ್ತಾ ಅವರನ್ನು ಸ್ವಾಗತಿಸಲಾಗುವುದು).

47. ಅವರ ಎದೆಗಳಲ್ಲಿ ಉಳಿದಿದ್ದ ವೈಷಮ್ಯವನ್ನೆಲ್ಲಾ ನಾವು ಕಿತ್ತೆಸೆದೆವು – ಅವರು ಸಹೋದರರಾಗಿ ಆಸನಗಳಲ್ಲಿ ಎದುರು ಬದುರಾಗಿ ಕುಳಿತಿರುವರು.

48. ಅಲ್ಲಿ ಯಾವ ಸಂಕಟವೂ ಅವರನ್ನು ಬಾಧಿಸದು ಮತ್ತು ಅವರನ್ನೆಂದೂ ಅಲ್ಲಿಂದ ಹೊರ ಹಾಕಲಾಗದು.

49. ನನ್ನ ದಾಸರಿಗೆ ತಿಳಿಸಿ ಬಿಡಿರಿ; ನಾನು ಖಂಡಿತ ತುಂಬಾ ಕ್ಷಮಿಸುವವನು ಮತ್ತು ತುಂಬಾ ಕರುಣಾಳುವೆಂದು.

50. ಮತ್ತು ನನ್ನ ಶಿಕ್ಷೆಯೂ ತುಂಬಾ ಕಠೋರ ಶಿಕ್ಷೆಯಾಗಿರುವುದೆಂದು.

51. ಇಬ್ರಾಹೀಮರ ಅತಿಥಿಗಳ ಕುರಿತು ಅವರಿಗೆ ತಿಳಿಸಿರಿ.

52. ಅವರು, ಅವರ ಬಳಿಗೆ ಬಂದಾಗ ‘ಸಲಾಮ್’ (ಶಾಂತಿ) ಎಂದರು. ಆಗ ಅವರು (ಇಬ್ರಾಹೀಮರು), ನಮಗೆ ನಿಮ್ಮ ಕುರಿತು ಆತಂಕವಿದೆ ಎಂದರು.

53. ಅವರು ಹೇಳಿದರು; ಆತಂಕ ಪಡಬೇಡಿ. ನಾವು ನಿಮಗೆ ಒಬ್ಬ ಜ್ಞಾನವಂತ ಪುತ್ರನ ಶುಭವಾರ್ತೆ ನೀಡುತ್ತೇವೆ.

 54. ಅವರು (ಇಬ್ರಾಹೀಮ್) ಹೇಳಿದರು; ನೀವೇನು ಮುದಿತನ ಆವರಿಸಿರುವ ನನಗೆ ಶುಭವಾರ್ತೆ ನೀಡುತ್ತಿರುವಿರಾ – ಅದೆಂತಹ ಶುಭವಾರ್ತೆ ನೀಡುತ್ತಿರುವಿರಿ ನೀವು?

55. ಅವರು ಹೇಳಿದರು; ನಾವು ನಿಮಗೆ ಸತ್ಯದ ಶುಭವಾರ್ತೆ ನೀಡುತ್ತಿದ್ದೇವೆ. ನೀವು ನಿರಾಶರ ಸಾಲಿಗೆ ಸೇರಬೇಡಿ.

56. ಅವರು (ಇಬ್ರಾಹೀಮ್) ಹೇಳಿದರು; ದಾರಿಗೆಟ್ಟವರ ಹೊರತು ಇನ್ನಾರು ತಾನೇ ತನ್ನ ಒಡೆಯನ ಅನುಗ್ರಹದ ಬಗ್ಗೆ ನಿರಾಶನಾಗಬಲ್ಲನು?

57. ಅವರು (ಇಬ್ರಾಹೀಮ್) ಕೇಳಿದರು; ದೂತರುಗಳೇ, ನಿಮ್ಮ ಹೊಣೆಗಾರಿಕೆ ಏನು?

58. ಅವರು ಹೇಳಿದರು; ನಮ್ಮನ್ನು ಅಪರಾಧಿ ಜನಾಂಗದೆಡೆಗೆ ಕಳಿಸಲಾಗಿದೆ.

59. ಲೂತ್‌ರ ಮನೆಯವರ ಹೊರತು – ಅವರನ್ನೆಲ್ಲಾ ನಾವು ರಕ್ಷಿಸುವೆವು –

60. ಆದರೆ, ಅವರ ಪತ್ನಿಯ ಹೊರತು. ಖಂಡಿತವಾಗಿಯೂ ಆಕೆಯು ಹಿಂದುಳಿದವರಲ್ಲಿ ಒಬ್ಬಳಾಗಿರುವಳೆಂದು ನಾವು ತೀರ್ಮಾನಿಸಿರುವೆವು.

61. ಕೊನೆಗೆ ಆ ದೂತರು ಲೂತ್‌ರ ಮನೆಯವರ ಬಳಿಗೆ ಬಂದರು.

62. ಅವರು (ಲೂತ್); ನೀವು ತೀರಾ ಅಪರಿಚಿತರು! ಎಂದರು.

63. ಅವರು ಹೇಳಿದರು; ನಿಜವಾಗಿ, ಅವರು (ಲೂತ್‌ರ ನಾಡಿನವರು) ಯಾವುದರ ಕುರಿತು ಸಂಶಯದಲ್ಲಿದ್ದರೋ ಅದನ್ನೇ (ದೇವರ ಶಿಕ್ಷೆಯನ್ನೇ) ನಾವು ತಂದಿರುವೆವು.

64. ಮತ್ತು ನಾವು ಸತ್ಯದೊಂದಿಗೆ ನಿಮ್ಮ ಬಳಿಗೆ ಬಂದಿರುವೆವು – ನಾವು ಖಂಡಿತ ಸತ್ಯವಂತರು.

65. ನೀವು ರಾತ್ರಿಯ ಒಂದು ಹಂತದಲ್ಲಿ ನಿಮ್ಮ ಮನೆಯವರ ಜೊತೆ ಹೊರಟು ಹೋಗಿರಿ ಮತ್ತು ನೀವು ಸ್ವತಃ ಅವರನ್ನು ಹಿಂಬಾಲಿಸುತ್ತಾ ಅವರ ಬೆನ್ನು ಬೆನ್ನಿಗೇ ನಡೆಯಿರಿ. ನಿಮ್ಮಲ್ಲಿ ಯಾರೂ ಹಿಂದಿರುಗಿ ನೋಡಬಾರದು ಮತ್ತು ನೀವು ನಿಮಗೆ ಆದೇಶಿಸಲಾಗಿರುವ ಕಡೆಗೇ ಹೋಗಿರಿ.

66. ಬೆಳಗಾಗುವ ಹೊತ್ತಿಗೆ ಆ ಜನರ ಮೂಲವನ್ನೇ ಕಡಿದು ಬಿಡಲಾಗಿರುವುದು ಎಂಬ ಆ ವಿಷಯವನ್ನು ನಾವು ಅವರಿಗೆ (ಲೂತ್‌ರಿಗೆ) ಖಚಿತವಾಗಿ ತಿಳಿಸಿದೆವು.

67. ನಗರದವರು ಸಂಭ್ರಮಿಸುತ್ತಾ ಬಂದರು.

 68. ಅವರು (ಲೂತ್) ಹೇಳಿದರು; ಇವರು ನನ್ನ ಅತಿಥಿಗಳು . ನೀವು ನನ್ನನ್ನು ನಗೆಪಾಟಲಿಗೆ ಗುರಿಮಾಡಬೇಡಿ.

69. ಮತ್ತು ನೀವು ಅಲ್ಲಾಹನಿಗೆ ಅಂಜಿರಿ ಹಾಗೂ ನನ್ನನ್ನು ಅಪಮಾನಿಸಬೇಡಿ.

70. ಅವರು (ನಾಡಿನವರು) ಹೇಳಿದರು; ನೀವು ಸರ್ವ ಜಗತ್ತಿನವರ ಬೆಂಬಲಕ್ಕೆ ನಿಲ್ಲಬಾರದೆಂದು ನಾವು ನಿಮ್ಮನ್ನು ತಡೆದಿರಲಿಲ್ಲವೇ?

71. ಅವರು (ಲೂತ್) ಹೇಳಿದರು; ನೀವೇನಾದರೂ (ವಿವಾಹ) ಮಾಡಿ ಕೊಳ್ಳುವುದಿದ್ದರೆ, ಇದೋ ನನ್ನ ಪುತ್ರಿಯರು ಇಲ್ಲಿದ್ದಾರೆ.

72. (ದೂತರೇ,) ನಿಮ್ಮ ವಯಸ್ಸಿನಾಣೆ, ಆ ಜನರು ತಮ್ಮ ಮದದಲ್ಲಿ ಖಂಡಿತ ಕುರುಡಾಗಿದ್ದರು.

73. ಕೊನೆಗೆ, ಸೂರ್ಯೋದಯದ ವೇಳೆಗೆ ಒಂದು ಭಾರೀ ಸ್ಫೋಟವು ಅವರನ್ನು ಆವರಿಸಿಕೊಂಡಿತು.

74. ನಾವು ಆ ನಾಡನ್ನು ಬುಡಮೇಲು ಗೊಳಿಸಿಬಿಟ್ಟೆವು ಮತ್ತು ನಾವು ಅವರ ಮೇಲೆ ಬೆಂದ ಕಣಗಳ ಮಳೆ ಸುರಿಸಿದೆವು.

75. ಚಿಂತನೆ ನಡೆಸುವವರಿಗೆ ಖಂಡಿತವಾಗಿಯೂ ಇದರಲ್ಲಿ ಸೂಚನೆಗಳಿವೆ.

76. ಅದು (ಆ ನಾಡು) ಒಂದು ಪರಿಚಿತ ದಾರಿಯಲ್ಲೇ ಇದೆ.

77. ವಿಶ್ವಾಸಿಗಳಿಗೆ ಖಂಡಿತವಾಗಿಯೂ ಇದರಲ್ಲಿ ಸೂಚನೆ ಇದೆ.

78. ಇನ್ನು, ‘ಐಕಃ’ ದವರು ಖಂಡಿತ ಅಕ್ರಮಿಗಳಾಗಿದ್ದರು.

79. ನಾವು ಅವರ ವಿರುದ್ಧವೂ ಪ್ರತೀಕಾರ ತೀರಿಸಿದೆವು – ಆ ಎರಡೂ ನಾಡುಗಳು ಹೆದ್ದಾರಿಯಲ್ಲೇ ಇವೆ.

80. ‘ಹಿಜ್ರ್’ ಎಂಬಲ್ಲಿನವರು ದೂತರನ್ನು ಧಿಕ್ಕರಿಸಿದ್ದರು.

81. ನಾವು ಅವರಿಗೆ ನಮ್ಮ ಅನೇಕ ಸೂಚನೆಗಳನ್ನು ನೀಡಿದೆವು. ಆದರೆ ಅವರು ಅವುಗಳನ್ನು ಕಡೆಗಣಿಸಿ ಬಿಟ್ಟರು.

82. ಅವರು ನಿರ್ಭೀತರಾಗಿ ಪರ್ವತಗಳಲ್ಲಿ ನಿವಾಸಗಳನ್ನು ಕೊರೆಯುತ್ತಿದ್ದರು.

83. (ಒಂದು ದಿನ) ಸೂರ್ಯೋದಯದ ವೇಳೆಗೆ, ಒಂದು ಭಾರೀ ಸ್ಫೋಟವು ಅವರನ್ನು ಆವರಿಸಿತು.

84. ಅವರ ಯಾವ ಸಂಪಾದನೆಯೂ ಅವರ ಯಾವ ಕೆಲಸಕ್ಕೂ ಬರಲಿಲ್ಲ.

 85. ಆಕಾಶಗಳನ್ನು ಹಾಗೂ ಭೂಮಿಯನ್ನು ಹಾಗೂ ಅವುಗಳ ನಡುವೆ ಇರುವ ಎಲ್ಲವನ್ನೂ ನಾವು ಸತ್ಯದೊಂದಿಗೇ ಸೃಷ್ಟಿಸಿದ್ದೇವೆ. ಅಂತಿಮ ಘಳಿಗೆಯು ಖಂಡಿತ ಬರಲಿದೆ. ನೀವು (ಜನರನ್ನು) ಕ್ಷಮಿಸಿರಿ – ಅದು ಅತ್ಯಂತ ಸುಂದರ ಕ್ಷಮೆಯಾಗಿರಲಿ.

86. (ದೂತರೇ,) ಖಂಡಿತವಾಗಿಯೂ ನಿಮ್ಮ ಒಡೆಯನೇ ಮಹಾನ್ ಸೃಷ್ಟಿಕರ್ತನೂ ಎಲ್ಲವನ್ನೂ ಬಲ್ಲವನೂ ಆಗಿದ್ದಾನೆ.

 87. ಖಂಡಿತವಾಗಿಯೂ ನಾವು ನಿಮಗೆ ಮತ್ತೆ ಮತ್ತೆ ಓದಲಾಗುವ ಏಳು ವಾಕ್ಯಗಳನ್ನು (ಪ್ರಥಮ ಅಧ್ಯಾಯವನ್ನು) ಮತ್ತು ಭವ್ಯವಾದ ಕುರ್‌ಆನನ್ನು ನೀಡಿರುವೆವು.

  88. ಅವರಲ್ಲಿನ ( ಧಿಕ್ಕಾರಿಗಳಲ್ಲಿನ) ವಿವಿಧ ವರ್ಗಗಳಿಗೆ ನಾವು ಏನನ್ನು ನೀಡಿರುವೆವೋ ಅವುಗಳೆಡೆಗೆ ನೀವು ಕಣ್ಣೆತ್ತಿಯೂ ನೋಡಬೇಡಿ ಮತ್ತು ನೀವು ಅವರ ಕುರಿತು ದುಃಖಿಸಬೇಡಿ. ಹಾಗೆಯೇ, ವಿಶ್ವಾಸಿಗಳ ಪಾಲಿಗೆ ನೀವು (ವಿನಯದೆೊಂದಿಗೆ) ನಿಮ್ಮ ಭುಜವನ್ನು ತಗ್ಗಿಸಿಡಿರಿ.

 89. ಮತ್ತು ನೀವು ‘‘ಖಂಡಿತವಾಗಿಯೂ ನಾನು, ಸುಸ್ಪಷ್ಟ ಎಚ್ಚರಿಕೆ ನೀಡು ವವನಾಗಿದ್ದೇನೆ’’ ಎಂದು ಸಾರಿ ಬಿಡಿರಿ.

90. (ಈ ಹಿಂದೆ) ವಿಭಜನವಾದಿಗಳ ಮೇಲೆ ನಾವು (ಶಿಕ್ಷೆಯನ್ನು) ಎರಗಿಸಿದ್ದೆವು.

  91. ಅವರು ಕುರ್‌ಆನನ್ನು ಛಿದ್ರಗೊಳಿಸಿದ್ದರು (ತಾವಿಚ್ಛಿಸಿದ್ದನ್ನು ಪಾಲಿಸಿ, ಉಳಿದುದನ್ನು ತಿರಸ್ಕರಿಸಿದ್ದರು).

92. ನಿಮ್ಮಡೆಯನಾಣೆ! ನಾವು ಅವರೆಲ್ಲರನ್ನೂ ಖಂಡಿತ ಪ್ರಶ್ನಿಸುವೆವು –

93. – ಅವರು ಮಾಡುತ್ತಿದ್ದ ಕರ್ಮಗಳ ಕುರಿತು.

94. ನಿಮಗೆ ಆದೇಶಿಸಲಾಗಿರುವುದನ್ನು ನೀವು ಸ್ಪಷ್ಟವಾಗಿ ಸಾರಿ ಬಿಡಿರಿ ಮತ್ತು ಬಹುದೇವಾರಾಧಕರನ್ನು ಲೆಕ್ಕಿಸಬೇಡಿ.

95. ಗೇಲಿ ಮಾಡುವವರ ವಿಷಯದಲ್ಲಿ ನಿಮಗೆ ನಾವೇ ಸಾಕು.

96. ಅವರು ಅಲ್ಲಾಹನ ಜೊತೆ ಇತರರನ್ನು ದೇವರಾಗಿಸಿ ಕೊಂಡಿದ್ದಾರೆ. (ಇದರ ಫಲಿತಾಂಶವನ್ನು) ಬಹುಬೇಗನೇ ಅವರು ಅರಿಯುವರು.

97. ನಮಗೆ ತಿಳಿದಿದೆ – ಅವರು ಆಡುವ ಮಾತುಗಳಿಂದ ನಿಮ್ಮ ಮನಸ್ಸಿಗೆ ತುಂಬಾ ಸಂಕಟವಾಗುತ್ತದೆಂದು.

   98. ನೀವು ನಿಮ್ಮ ಒಡೆಯನನ್ನು ಸ್ತುತಿಸುತ್ತಾ ಅವನ ಪಾವಿತ್ರವನ್ನು ಜಪಿಸಿರಿ ಮತ್ತು ಸಾಷ್ಟಾಂಗ ವಂದಿಸುವವರಾಗಿರಿ.

99. ಇನ್ನು, ಖಚಿತವಾದ ಆ ಘಳಿಗೆ (ಮರಣ) ಬರುವ ತನಕವೂ ನೀವು ನಿಮ್ಮ ಒಡೆಯನ ಆರಾಧನೆ ನಡೆಸಿರಿ.