Notes – ಟಿಪ್ಪಣಿಗಳು

ಕುರ್‌ಆನ್ ಎಂಬ ಒಂದು ಗ್ರಂಥಕ್ಕೆ ಪೂರಕವಾಗಿ ಮತ್ತು ಈ ಗ್ರಂಥವನ್ನು ಅಥವಾ ಇದರ ವಿವಿಧ ಆಯಾಮಗಳನ್ನು ಪರಿಚಯಿಸುವ ಹಾಗೂ ವಿವರಿಸುವ ಹೆಸರಲ್ಲಿ ಬರೆಯಲಾಗಿರುವ ವ್ಯಾಖ್ಯಾನ ಗ್ರಂಥಗಳ ಸಂಖ್ಯೆ ಈಗಾಗಲೇ ಲಕ್ಷಗಟ್ಟಲೆಯಷ್ಟಿದೆ. ಗತಕಾಲದಲ್ಲಿ ಮುಖ್ಯವಾಗಿ ಅರಬಿ, ಫಾರ್ಸಿ, ಉರ್ದು ಮತ್ತು ತುರ್ಕಿ ಭಾಷೆಗಳಲ್ಲಿ ಮತ್ತು ಇತ್ತೀಚಿನ ದಶಕಗಳಲ್ಲಿ ಇಂಗ್ಲಿಷ್‌ ಸೇರಿದಂತೆ ವಿವಿಧ ಪಾಶ್ಚಿಮಾತ್ಯ ಹಾಗೂ ಪೌರ್ವಾತ್ಯ ಭಾಷೆಗಳಲ್ಲಿ ಕುರ್‌ಆನಿನ ನೂರಾರು ತರ್ಜುಮೆಗಳು ಹಾಗೂ ವ್ಯಾಖ್ಯಾನಗ್ರಂಥಗಳು ಪ್ರಕಟವಾಗಿವೆ. ಜಗತ್ತಿನ ನಾನಾ ಭಾಗಗಳಲ್ಲಿ, ವಿವಿಧ ಕಾಲಗಳಲ್ಲಿ ರಚಿತವಾಗಿರುವ ಮತ್ತು ಹಲವೊಮ್ಮೆ ವಿಭಿನ್ನ ವಿಚಾರ ಧಾರೆಗಳನ್ನು ಉಪ ಧಾರೆಗಳನ್ನೂ ಪ್ರತಿನಿಧಿಸುವ ಈ ಗ್ರಂಥಗಳು ವಿವಿಧ ಅಭಿರುಚಿಯ ಜ್ಞಾನದಾಹಿಗಳ ದಾಹವನ್ನು ತಣಿಸುತ್ತಲೇ ಇವೆ.

ಕುರ್‌ಆನಿನಲ್ಲಿರುವ ವಿವಿಧ ಪದ, ವಚನ, ಉಪಮೆ, ಉಪದೇಶ, ಆದೇಶ, ನಿರ್ಬಂಧ, ಕಥೆ, ಸನ್ನಿವೇಶ ಇತ್ಯಾದಿಗಳ ಅರ್ಥ, ತಾತ್ಪರ್ಯ ಹಾಗೂ ಪೂರ್ವಾಪರಗಳನ್ನು ತಿಳಿಸುವ ಅತ್ಯಮೂಲ್ಯ ಸೇವೆಯನ್ನು ಅವು ಸಲ್ಲಿಸಿವೆ. ಆದರೆ ಪ್ರಾಥಮಿಕ ಮಟ್ಟದ ಓದುಗರು ಕುರ್ ಆನ್ ಅನ್ನು ಅರಿಯುವುದಕ್ಕೆ ವ್ಯಾಖ್ಯಾನ ಗ್ರಂಥಗಳನ್ನು ಅವಲಂಬಿಸಬೇಕೆಂಬ ಅನಿವಾರ್ಯತೆಯೇನೂ ಇಲ್ಲ. ಕುರ್‌ಆನ್, ಸ್ವಭಾವತಃ ಸರಳ ಗ್ರಂಥ. ಅದು ತನ್ನನ್ನು ಹಾಗೆಯೇ ಪರಿಚಯಿಸಿಕೊಂಡಿದೆ. ಅದರ ಹೆಚ್ಚಿನ ವಚನಗಳು, ಒಬ್ಬ ಸಾಮಾನ್ಯ ಮನುಷ್ಯನು ಯಾವುದೇ ವ್ಯಾಖ್ಯಾನದ ಹಂಗಿಲ್ಲದೆ ಅರ್ಥ ಮಾಡಿಕೊಳ್ಳಲು ಸಾಧ್ಯವಿರುವ ಸ್ವರೂಪದಲ್ಲಿವೆ. ಆದರೆ ಕೆಲವು ವಚನಗಳು ಮಾತ್ರ ತಮ್ಮ ಹಿನ್ನೆಲೆ, ಸನ್ನಿವೇಶ ಇತ್ಯಾದಿಗಳೊಂದಿಗೆ ಅವಿಭಾಜ್ಯ ಸಂಬಂಧ ಹೊಂದಿರುತ್ತವೆ. ಅಥವಾ ಕೆಲವು ಪದಗಳು ಅಸಾಮಾನ್ಯ ಅರ್ಥ ವ್ಯಾಪ್ತಿಯನ್ನು ಹೊಂದಿರುತ್ತವೆ. ಅಂತಹ ವಚನ ಹಾಗೂ ಪದಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದಕ್ಕೆ, ಗಹನವಾದ ಭಾಷಾ ಪರಿಜ್ಞಾನ ಹಾಗೂ ಪ್ರಸ್ತುತ ಹಿನ್ನೆಲೆ ಹಾಗೂ ಸನ್ನಿವೇಶದ ಅರಿವು ಅನಿವಾರ್ಯವಾಗಿ ಬಿಡುತ್ತದೆ. ಅನ್ಯಥಾ, ಓದುಗರು ಆ ವಚನದ ಕುರಿತು ಅಪಾರ್ಥಕ್ಕೆ ತುತ್ತಾಗುವ ಸಾಧ್ಯತೆ ಇದೆ. ಕೆಲವೊಮ್ಮೆ, ಅನುವಾದ ಪ್ರಕ್ರಿಯೆಯ ಇತಿಮಿತಿಗಳಿಂದಾಗಿಯೂ ಓದುಗರು ಕೆಲವು ಪದ ಅಥವಾ ವಚನಗಳ ಕುರಿತು ಗೊಂದಲಕ್ಕೆ ಸಿಲುಕಬಹುದಾದ್ದರಿಂದ ಅಂತಹ ಸ್ಥಾನಗಳಲ್ಲಿ ಮೂಲ ಪದಗಳು ಹಾಗೂ ಅವುಗಳ ಆಶಯಗಳ ಕುರಿತು ಸ್ಪಷ್ಟೀಕರಣದ ಅಗತ್ಯ ತಲೆದೋರುತ್ತದೆ.

ಈ ದೃಷ್ಟಿಯಿಂದ ಈ ಅನುವಾದ ಕೃತಿಯಲ್ಲಿ ಆಯ್ದ ಕೆಲವೇ ಕೆಲವು ವಚನ ಅಥವಾ ಪದಗಳ ಕುರಿತಂತೆ ಸಂಕ್ಷಿಪ್ತ ಟಿಪ್ಪಣಿಗಳನ್ನು ನೀಡಲಾಗಿದೆ.

ಈ ಅನುವಾದ ಕೃತಿಯ ಪ್ರಕಾಶನಕ್ಕೆ ಪೂರ್ವಭಾವಿಯಾಗಿ ಹಾಗೂ ಇದಕ್ಕೆ ಪೂರಕ ಸ್ವರೂಪದಲ್ಲಿ ಇಂಟರ್‌ನೆಟ್‌ನಲ್ಲಿ, http://quraninkannada.com ಬ್ಲಾಗನ್ನು ರಚಿಸಲಾಗಿದೆ. ಈ ಅನುವಾದವೇ ಆ ಬ್ಲಾಗ್‌ನಲ್ಲೂ ಅಧ್ಯಯನಕ್ಕೆ ಲಭ್ಯವಿದೆ. ಈ ಅನುವಾದ ಕೃತಿಯ ಕುರಿತಂತೆ ಸಲಹೆ ಸೂಚನೆಗಳನ್ನು ನೀಡ ಬಯಸುವವರು ಹಾಗೂ ಕುರ್‌ಆನಿನ ಕುರಿತಂತೆ ಯಾವುದೇ ವಿಷಯದಲ್ಲಿ ಹೆಚ್ಚಿನ ಮಾಹಿತಿ ಬೇಕಾದವರು ಪ್ರಸ್ತುತ ಬ್ಲಾಗ್ ಮೂಲಕ ಅನುವಾದಕನನ್ನು, ಪ್ರಕಾಶಕರನ್ನು ಅಥವಾ ಅವರ ಪ್ರತಿನಿಧಿಯನ್ನು ಸಂಪರ್ಕಿಸಬಹುದು.

* * * * *

ಅಧ್ಯಾಯ – 1: ಕುರ್‌ಆನಿನ ಈ ಪ್ರಥಮ ಅಧ್ಯಾಯದ ಹೆಸರು, ಅಲ್ ಫಾತಿಹಾ, ಅಂದರೆ, ಆರಂಭ. ಇದಕ್ಕೆ ಉಮ್ಮುಲ್ ಕುರ್‌ಆನ್, ಸೂರತುಶ್ಶಿಫಾಅ್ ಮುಂತಾದ ಹೆಸರುಗಳೂ ಇವೆ. ವಿಶ್ವದೊಡೆಯನ ಪ್ರಶಂಸೆ ಹಾಗೂ ಸನ್ಮಾರ್ಗಕ್ಕಾಗಿ ಪ್ರಾರ್ಥನೆಯೇ ಪ್ರಧಾನ ವಿಷಯವಾಗಿರುವ ಈ ಅಧ್ಯಾಯವನ್ನು ಕುರ್‌ಆನಿನ ಮುನ್ನುಡಿ ಎಂದು ಪರಿಗಣಿಸಲಾಗುತ್ತದೆ. ಕುರ್‌ಆನಿನ ಈ ಅಧ್ಯಾಯವು ಮಾರ್ಗದರ್ಶನಕ್ಕಾಗಿರುವ ದೀನ ಬೇಡಿಕೆಯಾಗಿದ್ದು, ಉಳಿದ ಅಧ್ಯಾಯಗಳು ಅ ಬೇಡಿಕೆಯ ಈಡೇರಿಕೆಯ ರೂಪದಲ್ಲಿವೆ ಎಂದೂ ಕೆಲವರು ವರ್ಣಿಸಿದ್ದಾರೆ. ಜಗತ್ತಿನೆಲ್ಲೆಡೆಯ ಮುಸ್ಲಿಮರು ಪ್ರತಿನಿತ್ಯ ತಾವು ಸಲ್ಲಿಸುವ ಪ್ರತಿಯೊಂದು ನಮಾಝ್‌ನಲ್ಲಿ ಈ ಅಧ್ಯಾಯವನ್ನು ಓದುತ್ತಾರೆ ಎಂಬುದು ಇದಕ್ಕಿರುವ ಅಸಾಮಾನ್ಯ ಮಹತ್ವಕ್ಕೆ ಪುರಾವೆಯಾಗಿದೆ.

ಅಧ್ಯಾಯ – 2:  ಇದು ಕುರ್‌ಆನಿನ ಅತ್ಯಂತ ದೀರ್ಘ ಅಧ್ಯಾಯ. ಅಲ್ ಬಕರಃ ಎಂಬ ಪದಕ್ಕೆ ದನ ಅಥವಾ ಹೋರಿ ಎಂಬ ಅರ್ಥವಿದೆ. ಕುರ್‌ಆನಿನ ಅತ್ಯಂತ ದೀರ್ಘ ವಚನವೂ (2: 282) ಇದೇ ಅಧ್ಯಾಯದಲ್ಲಿದೆ.

 2:8 ಇದು ಮೂಲತಃ ಅಂದಿನ ಮುಸ್ಲಿಮ್ ಸಮಾಜದೊಳಗಿನ ಮುನಾಫಿಕ್ ಎಂಬ ಒಂದು ದುಷ್ಟ ವರ್ಗದ ಕುರಿತಾದ ಸೂಚನೆ. ನಿಜವಾಗಿ ಅನಂತರದ ಕಾಲಗಳಲ್ಲೂ ಈ ವರ್ಗದವರು, ಸಮುದಾಯಕ್ಕೆ ಸಾಕಷ್ಟು ಅಪಚಾರ ಹಾಗೂ ಹಾನಿಯನ್ನು ಮಾಡಿರುವರು. ಸಾಮಾನ್ಯವಾಗಿ ಅವರಿಗೆ ಧರ್ಮದ ಕುರಿತಂತೆ ಯಾವುದೇ ಪ್ರಾಮಾಣಿಕ ಶೃದ್ಧೆ ಅಥವಾ ನಿಷ್ಠೆ ಇರುವುದಿಲ್ಲ. ಅವರು ತಮ್ಮ ಯಾವುದಾದರೂ ಸ್ವಾರ್ಥ ಸಾಧನೆಗಾಗಿ, ಅಧಿಕೃತವಾಗಿ ಇಸ್ಲಾಮ್ ಧರ್ಮ ಸ್ವೀಕರಿಸಿ ಮುಸ್ಲಿಮ್ ಸಮಾಜದ ಸದಸ್ಯರಾಗಿರುತ್ತಾರೆ. ಆದರೆ ಅವರ ಮನದೊಳಗೆ ಈ ಧರ್ಮದ ಮತ್ತು ಇದರ ನೈಜ ಅನುಯಾಯಿಗಳ ಕುರಿತು ಅಸಮಾಧಾನ, ತಾತ್ಸಾರ, ಸಂದೇಹ ಹಾಗೂ ಜಿಗುಪ್ಸೆ ತುಂಬಿರುತ್ತದೆ. ಸದಾ ದ್ವಂದ್ವ ನೀತಿಯನ್ನೇ ಪಾಲಿಸುವ ಹಾಗೂ ಮನದೊಳಗೆ ಕಾಪಟ್ಯವನ್ನು ಪೋಷಿಸುತ್ತಲಿರುವ ಈ ಕಪಟ ವರ್ಗವನ್ನು ಕುರ್‌ಆನ್‌ನಲ್ಲಿ ‘ಮುನಾಫಿಕ್’ ಗಳೆಂದು ಕರೆಯಲಾಗಿದೆ. (ಬಹುವಚನ-ಮುನಾಫಿಕೂನ್) ಕುರ್‌ಆನಿನ, ಮದೀನಾದಲ್ಲಿ ಅನಾವರಣಗೊಂಡ ಹಲವು ಅಧ್ಯಾಯಗಳಲ್ಲಿ ಈ ವರ್ಗದ ಕುರಿತು ಪ್ರಸ್ತಾಪಿಸಲಾಗಿದೆ. ಅಲ್ಲದೆ ಅಲ್‌ಮುನಾಫಿಕೂನ್ ಎಂಬ ಒಂದು ಪ್ರತ್ಯೇಕ ಅಧ್ಯಾಯವೂ (63) ಕುರ್‌ಆನ್‌ನಲ್ಲಿದೆ. ಕುರ್‌ಆನಿನಲ್ಲಿ ಈ ವರ್ಗದವರ ಕುರಿತು ಪ್ರಸ್ತಾಪಿಸಲಾಗಿರುವ ಕೆಲವು ವಚನಗಳು ಇಲ್ಲಿವೆ; 2:8 ರಿಂದ 20,80, 204 ರಿಂದ 206, / 3:154, 167-168, 4:62, 63, 72, 73, 81, 88, 89, 91, 138, 139, 141 ರಿಂದ 144 / 5:41, 52, 61/9:42, 43, 45, ರಿಂದ 49, 50ರಿಂದ 52, 55,58, 61, 66 ರಿಂದ 68, 74 ರಿಂದ 77, 79, 81, 97, 107, 110, 124, 125 ರಿಂದ 127/ 22:11ರಿಂದ 13 / 24:47 ರಿಂದ 50, 63 / 33:12 ರಿಂದ 20, 60 ರಿಂದ 62 / 47:16, 21 ರಿಂದ 30 / 57:8, 12 ರಿಂದ 15/ 58: 14 ರಿಂದ 19 / 59:11ರಿಂದ 17 / 63: 1 ರಿಂದ 8 / 68:10 ರಿಂದ 14, 107: 4 ರಿಂದ 7.

 2:104 ‘ರಾಇನಾ’ ದ್ವಂದ್ವಾರ್ಥ ಇರುವ ಪದ. ಇದಕ್ಕೆ, ‘ನಮ್ಮತ್ತ ಒಂದಿಷ್ಟು ಗಮನ ಹರಿಸಿ’ ಎಂಬ ಒಂದು ನೇರ ಅರ್ಥ ಇರುವ ಜೊತೆಗೇ ಉಚ್ಚಾರವನ್ನು ಸ್ವಲ್ಪ ತಿರುಚಿದರೆ, ತೀರಾ ಅಪಮಾನಾತ್ಮಕವಾದ ಇತರ ಕೆಲವು ಅರ್ಥಗಳೂ ಇದರಿಂದ ಮೂಡುತ್ತವೆ. ಪ್ರವಾದಿ ವರ್ಯ(ಸ)ರ ಕಾಲದಲ್ಲಿ ಮದೀನಾದ ಕೆಲವು ಯಹೂದಿಗಳು ಮುಸ್ಲಿಮರ ಜೊತೆ ಮಾತನಾಡುವಾಗ ಬೇಕು ಬೇಕೆಂದೇ ಇಂತಹ ಪದಗಳನ್ನು ಬಳಸುತ್ತಿದ್ದರು. ಇಲ್ಲಿ, ಮಾತಿನ ಆ ಶೈಲಿಯನ್ನು ವಿರೋಧಿಸಿ, ದ್ವಂದ್ವಾರ್ಥಗಳಿಗೆ ಆಸ್ಪದವಿಲ್ಲದ ಸ್ಪಷ್ಟ ಪದಗಳನ್ನು ಬಳಸಿ ನೇರವಾಗಿ ಮಾತನಾಡಿರೆಂದು ವಿಶ್ವಾಸಿಗಳಿಗೆ ಸೂಚಿಸಲಾಗಿದೆ. ‘ಉನ್‌ಝುರ್‌ನಾ’ ಎಂಬ ಪದಕ್ಕೆ ‘ನಮ್ಮನ್ನು ನೋಡಿರಿ’ ಎಂಬ ನೇರ ಹಾಗೂ ಸರಳ ಅರ್ಥ ಮಾತ್ರ ಇದೆ. ಆದ್ದರಿಂದ ಆ ಪದಕ್ಕೆ ಪ್ರಾಶಸ್ತ್ಯ ನೀಡಲಾಗಿದೆ. ನೋಡಿರಿ; 4:9/ 33:70.

 2:108 ಈ ಹಿಂದೆ ಪ್ರವಾದಿ ಮೂಸಾ (ಅ) ತಮ್ಮ ಜನಾಂಗಕ್ಕೆ ತೀರಾ ಸರಳವಾದ ಒಂದು ಆದೇಶವನ್ನು ನೀಡಿದ್ದರು. ಆದರೆ ಅವರ ಜನಾಂಗದವರು ತಕ್ಷಣವೇ ಮುಂದಾಗಿ ಆ ಸರಳ ಆದೇಶವನ್ನು ಪಾಲಿಸುವ ಬದಲು ಆ ಕುರಿತು ಹತ್ತು ಹಲವು ಪ್ರಶ್ನೆಗಳನ್ನು ಕೇಳಲಾರಂಬಿಸಿದರು. ಅವರ ಒಂದೊಂದೇ ಪ್ರಶ್ನೆಗೆ ಉತ್ತರ ಸಿಗುತ್ತಾ ಹೋದಂತೆ ಅವರಿಗೆ ನೀಡಲಾಗಿದ್ದ ಆದೇಶದ ಸ್ವರೂಪವೂ ಕಠಿಣವಾಗುತ್ತಾ ಸಾಗಿತು. ನೋಡಿರಿ; 2:67 ರಿಂದ 71, 5:101 ರಿಂದ 102. ಈ ಹಿನ್ನೆಲೆಯಲ್ಲಿ ಅನಗತ್ಯ ಪ್ರಶ್ನೆಗಳನ್ನು ನಿರುತ್ತೇಜಿಸಲಾಗಿದೆ. ಅದೇ ವೇಳೆ, ಜ್ಞಾನಾರ್ಜನೆಗಾಗಿ ಸ್ವಾಭಾವಿಕ ಕುತೂಹಲದಿಂದ ಪ್ರಶ್ನೆಗಳನ್ನು ಕೇಳುವುದನ್ನು ಕುರ್‌ಆನ್ ಪ್ರೋತ್ಸಾಹಿಸಲಾಗಿದೆ.; 21:7.

2:114 ನಿರಾಕಾರನಾದ ಏಕದೇವನ ಆರಾಧನೆಗೆಂದು ನಿರ್ಮಿಸಲಾಗಿದ್ದ ಮಕ್ಕಃದ ಪವಿತ್ರ ಕಅ್ಬ: ಮಸೀದಿಯನ್ನು ವಿಗ್ರಹಾರಾಧಕರು ಆಕ್ರಮಿಸಿಕೊಂಡಿದ್ದರು. ಅವರು ವಿಶ್ವದೊಡೆಯನ ಆರಾಧನಾಲಯವನ್ನು ವಿಗ್ರಹಾಲಯವಾಗಿ ಮಾರ್ಪಡಿಸಿದ್ದರು. ಸಾಲದ್ದಕ್ಕೆ, ಏಕದೇವಾರಾಧಕರು ಆ ಮಸೀದಿಯನ್ನು ಪ್ರವೇಶಿಸದಂತೆ ಅವರ ಮೇಲೆ ನಿರ್ಬಂಧಗಳನ್ನು ಹೇರಿದ್ದರು. ಇದು ಆ ಹಿನ್ನೆಲೆಯಲ್ಲಿ ಆಗಮಿಸಿದ ವಚನ.

2:142 ರಿಂದ 144- ಕಿಬ್ಲಃ ಅಂದರೆ, ಆಯ್ದುಕೊಂಡ ದಿಕ್ಕು. ಸಾಮಾನ್ಯವಾಗಿ ನಮಾಝ್ ಸಲ್ಲಿಸುವಾಗ ಎದುರಿಸುವ ದಿಕ್ಕನ್ನು ಕಿಬ್ಲಃ ಎನ್ನುತ್ತಾರೆ. ಈ ವಚನದ ಆಗಮನದವರೆಗೂ ಮುಸ್ಲಿಮರು ಜೆರುಸಲೇಮ್‌ನೆಡೆಗೆ (ಅಲ್ಲಿರುವ ಮಸ್ಜಿದ್ ಅಲ್ ಅಕ್ಸಾದೆಡೆಗೆ) ಮುಖಮಾಡಿ ನಮಾಝ್ ಸಲ್ಲಿಸುತ್ತಿದ್ದರು. ಇದೀಗ ಅವರಿಗೆ, ಮಕ್ಕಃದಲ್ಲಿರುವ ಕಅಬಃದ ಕಡೆಗೆ ಮುಖಮಾಡಿ ನಮಾಝ್ ಸಲ್ಲಿಸುವಂತೆ ಆದೇಶಿಸಲಾಗುತ್ತಿದೆ. ಮುಸ್ಲಿಮರು ಜಗತ್ತಿನ ಯಾವ ಭಾಗದಲ್ಲಿದ್ದರೂ ನಮಾಝ್ ಸಲ್ಲಿಸುವಾಗ ಕಅ್ಬ:ದೆಡೆಗೆ ತಿರುಗಿ ನಿಲ್ಲುತ್ತಾರೆ.

ನೋಡಿರಿ; 2:115, 125, 145 ರಿಂದ 150.

2:187 ಉಪವಾಸ ಆಚರಿಸುತ್ತಿರುವ ಪತಿ-ಪತ್ನಿಯರು ಉಪವಾಸದ ಅವಧಿಯಲ್ಲಿ ಪರಸ್ಪರ ಲೈಂಗಿಕ ಚಟುವಟಿಕೆಗಳಲ್ಲಿ ನಿರತರಾಗುವುದರಿಂದ ಉಪವಾಸ ಭಂಗವಾಗುತ್ತದೆ. ಆದರೆ ಉಪವಾಸದ ದಿನಗಳಲ್ಲಿ ಉಪವಾಸ ಮುಗಿದ ಬಳಿಕ ರಾತ್ರಿಯ ವೇಳೆ ಪತಿ-ಪತ್ನಿಯರು ಲೈಂಗಿಕ ಸಂಪರ್ಕ ನಡೆಸುವುದರಲ್ಲಿ ಯಾವ ತಪ್ಪೂ ಇಲ್ಲ. ಈ ವಚನದ ಆಗಮನಕ್ಕೆ ಮುನ್ನ ಕೆಲವು ದಂಪತಿಯರು ರಮಝಾನ್ ತಿಂಗಳ ರಾತ್ರಿಗಳಲ್ಲಿ ಲೈಂಗಿಕ ಚಟುವಟಿಕೆ ನಡೆಸಿ ತಾವು ಯಾವುದೋ ಅಪರಾಧ ಮಾಡುತ್ತಿದ್ದೇವೆ ಎಂಬ ಪಾಪ ಪ್ರಜ್ಞೆಯಿಂದ ಬಳಲುತ್ತಿದ್ದರು. ಅಂಥವರಿಗೆ, ನೀವು ಮಾಡಿದ್ದರಲ್ಲಿ ತಪ್ಪೇನೂ ಇಲ್ಲ, ಅನಗತ್ಯವಾಗಿ ಅಪರಾಧ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಡಿ ಎಂದು ಈ ವಚನದ ಮೂಲಕ ಸಾಂತ್ವನ ನೀಡಲಾಯಿತು. ಇಲ್ಲಿ ಇಅ್ ತಿಕಾಫ್ ನ ಪ್ರಸ್ತಾಪವೂ ಇದೆ. ಒಂದು ನಿರ್ದಿಷ್ಟ ಅವಧಿಗಾಗಿ, ಸಂಕಲ್ಪ ಮಾಡಿ, ಬೇರೆಲ್ಲ ಚಟುವಟಿಕೆಗಳಿಗೆ ವಿದಾಯ ಹೇಳಿ, ಮಸೀದಿಯೊಳಗೆ ತಂಗಿಕೊಂಡು, ವಿಶೇಷ ಶೃದ್ಧೆಯೊಂದಿಗೆ ವಿವಿಧ ಬಗೆಯ ಆರಾಧನೆಗಳಲ್ಲಿ ಹಾಗೂ ಚಿಂತನೆ, ಆತ್ಮಾವಲೋಕನಗಳಲ್ಲಿ ತಲ್ಲೀನರಾಗಿರುವುದನ್ನು ಇಅ್ ತಿಕಾಫ್ ಎನ್ನುತ್ತಾರೆ. ಇದನ್ನು ವರ್ಷದ ಯಾವುದೇ ಭಾಗದಲ್ಲಿ ನಡೆಸಬಹುದು. ಇಂತಿಷ್ಟು ದಿನಗಳೆಂಬ ನಿರ್ಬಂಧವೂ ಇಲ್ಲ. ಸಾಮಾನ್ಯವಾಗಿ ಹೆಚ್ಚಿನೆಡೆ ಮುಸ್ಲಿಮರು ರಮಝಾನ್ ತಿಂಗಳ ಕೊನೆಯ ದಿನಗಳಲ್ಲಿ ಇಅ್ ತಿಕಾಫ್ ನಡೆಸುತ್ತಾರೆ.

2:190 ರಿಂದ 194 ಇವು ಮದೀನಾದಲ್ಲಿ ಪ್ರವಾದಿ ಮುಹಮ್ಮದ್ (ಸ) ರ ನೇತೃತ್ವದಲ್ಲಿ ಸ್ಥಾಪಿತವಾಗಿದ್ದ ಇಸ್ಲಾಮೀ ಸರಕಾರಕ್ಕೆ ನೀಡಲಾಗಿದ್ದ ಆದೇಶಗಳು.

2:194 ಪವಿತ್ರ ತಿಂಗಳುಗಳೆಂದರೆ ದುಲ್‌ಕಅದ್, ದುಲ್‌ಹಜ್ಜ್, ಮುಹರ್ರಮ್ ಮತ್ತು ರಜಬ್ ಎಂಬ ಚಂದ್ರಮಾನದ ನಾಲ್ಕು ತಿಂಗಳುಗಳು. ಈ ನಾಲ್ಕು ತಿಂಗಳುಗಳಲ್ಲಿ ಯಾವುದೇ ಯುದ್ಧ, ರಕ್ತಪಾತ ನಡೆಸದೆ ಕಟ್ಟುನಿಟ್ಟಾಗಿ ಯುದ್ಧ ನಿಷೇಧ ಪಾಲಿಸಬೇಕು. ಆಗಲೇ ನಡೆಯುತ್ತಿರುವ ಯುದ್ಧಗಳನ್ನು ಈ ಅವಧಿಯಲ್ಲಿ ನಿಲ್ಲಿಸಬೇಕು ಮತ್ತು ಯಾವುದೇ ಹೊಸ ಯುದ್ಧವನ್ನು ಆರಂಭಿಸಬಾರದು ಎಂಬಿತ್ಯಾದಿ ನಿಯಮಗಳು ಅರಬ್ ನಾಡಿನಲ್ಲಿ ಪರಂಪರಾಗತವಾಗಿ ಚಲಾವಣೆಯಲ್ಲಿದ್ದವು. ಪ್ರವಾದಿ ಮುಹಮ್ಮದ್ (ಸ) ಈ ನಿಯಮಗಳಿಗೆ ಮಾನ್ಯತೆ ನೀಡಿ ಅವುಗಳನ್ನು ಗೌರವಿಸಿದ್ದರು. ಆದರೆ ಅದೇ ವೇಳೆ ಧಿಕ್ಕಾರಿಗಳು ಪ್ರಸ್ತುತ ನಿಯಮಗಳನ್ನು ಉಲ್ಲಂಘಿಸಿ ಬಿಟ್ಟರೆ, ಮುಸ್ಲಿಮರು ಸುಮ್ಮನಿರಬೇಕಾಗಿಲ್ಲ, ಅವರು ಪ್ರತಿ ಕ್ರಮ ಕೈಗೊಳ್ಳಬಹುದು ಎಂದು ಈ ವಚನಗಳ ಮೂಲಕ ಅಲ್ಲಾಹನು ಪ್ರಕಟಿಸಿದನು.

2:198 ಅಂದರೆ ಹಜ್ಜ್ ಯಾತ್ರೆಯ ನಡುವೆ ಯಾತ್ರಿಕರಾಗಲೀ ಇತರರಾಗಲೀ ಯಾವುದೇ ವ್ಯಾಪಾರ ವಹಿವಾಟುಗಳನ್ನು ನಡೆಸಬಾರದೆಂಬ ನಿರ್ಬಂಧವೇನೂ ಇಲ್ಲ. ಹಜ್ಜ್ ಸಂಬಂಧಿ ಕರ್ತವ್ಯಗಳಿಗೆ ಚ್ಯುತಿ ಬರದಂತೆ, ಸಕ್ರಮವಾಗಿ ಆದಾಯ ಸಂಪಾದಿಸುವ ವ್ಯಾಪಾರ, ವಾಣಿಜ್ಯ, ವಿನಿಮಯ ಇತ್ಯಾದಿ ಚಟುವಟಿಕೆಗಳನ್ನು ಹಜ್ಜ್ ಯಾತ್ರೆಯ ನಡುವೆ ನಡೆಸಬಹುದು.

 2:216 ಅಂದರೆ ವಿಶ್ವಾಸಿಗಳು ಸತ್ಯವನ್ನು ಕೇವಲ ನಂಬಿ ನಿಷ್ಕ್ರಿಯರಾಗಿ ಇರಬೇಕಾದವರಲ್ಲ. ಸತ್ಯವನ್ನು ರಕ್ಷಿಸುವ, ಅದನ್ನು ಎಲ್ಲೆಡೆಗೆ ತಲುಪಿಸುವ ಮತ್ತು ಎಲ್ಲೆಡೆ ಅದನ್ನು ಗೆಲ್ಲಿಸಿ ಸ್ಥಾಪಿಸುವ ಕರ್ತವ್ಯವೂ ಅವರಿಗೇ ಸೇರಿದೆ. ಅದಕ್ಕಾಗಿ ಅವರು ನಿತ್ಯವೂ ಸಕ್ರಿಯ ಹೋರಾಟ ನಡೆಸಬೇಕು. ಅಗತ್ಯ ಬಿದ್ದರೆ ಯುದ್ಧಕ್ಕೂ ಸನ್ನದ್ಧರಾಗಬೇಕು.

2:219 ನೋಡಿರಿ-2:173,178 / 3:154 / 4:14, 60, 61, 160/ 5: 3 ರಿಂದ 5, 45 ರಿಂದ 48/ 6:118 ರಿಂದ 121, 146, 151, 152/ 7:33/ 10:59, 60, 118/ 16:115 / 22:30.

2:223 ನಿಮ್ಮ ಪತ್ನಿಯರು ನಿಮ್ಮ ಪಾಲಿನ ತೋಟಗಳು ಎನ್ನುವ ಮೂಲಕ ಪತ್ನಿಯ ಸ್ಥಾನದ ಮಹತ್ವವನ್ನು ಪುರುಷರಿಗೆ ನೆನಪಿಸಲಾಗಿದೆ. ತನ್ನ ತೋಟದ ಜೊತೆ ತೋಟದವನ ಸಂಬಂಧವು ಪ್ರೀತಿಯ, ಪ್ರೇಮದ ಅಭಿಮಾನದ ಹಾಗೂ ಕಾಳಜಿ ತುಂಬಿದ ಸಂಬಂಧವಾಗಿರುತ್ತದೆ. ಪತ್ನಿಯ ಜೊತೆ ಬಹಳ ಜವಾಬ್ದಾರಿಯುತವಾಗಿ ವ್ಯವಹರಿಸಬೇಕು ಎಂಬುದನ್ನು ಈ ಮೂಲಕ ಪುರುಷರಿಗೆ ಸೂಚಿಸಲಾಗಿದೆ. ಕುರ್‌ಆನ್‌ನಲ್ಲೇ ಇನ್ನೊಂದೆಡೆ ಪುರುಷರನ್ನುದ್ದೇಶಿಸಿ ‘ಅವರು (ಪತ್ನಿಯರು) ನಿಮಗೆ ಉಡುಗೆಯಾಗಿರುವರು ಮತ್ತು ನೀವು ಅವರಿಗೆ ಉಡುಗೆಯಾಗಿರುವಿರಿ’ ಎಂದು ಹೇಳಲಾಗಿದೆ. (2:187)

2:275 ನೋಡಿರಿ- 2:160, 276, 279 / 3:130 / 30:39

3:35 ಇದು ಪ್ರವಾದಿ ಈಸಾ(ಅ)ರ ವೃತ್ತಾಂತಕ್ಕೆ ಪೀಠಿಕೆ. ಈಸಾ(ಅ)ರ ಪವಾಡ ಸದೃಶ ಜನನದ ಆಧಾರದಲ್ಲಿ ಅವರ ಮೇಲೆ ಅಕ್ರಮ ಜನನದ ಆರೋಪ ಹೊರಿಸುವವರಿಗೆ ಉತ್ತರವಾಗಿ ಇಲ್ಲಿ ಈಸಾ(ಅ)ರ ಮಾತೆ ಮರ್ಯಮ್ (ಅ)ರ ಜನನವನ್ನು ಪ್ರಸ್ತಾಪಿಸಲಾಗಿದೆ. ಆಕೆಯ ಜನನ ಕೂಡಾ ತೀರಾ ಸಾಮಾನ್ಯ ಸ್ವರೂಪದ್ದಾಗಿರಲಿಲ್ಲ. ಅಲ್ಲೂ ಅಲ್ಲಾಹನ ವಿಶೇಷ ಯೋಜನೆಗೆ ಪಾತ್ರವಿತ್ತು ಮತ್ತು ಅಲ್ಲಾಹನು ಆಕೆಯನ್ನು ತನ್ನ ವಿಶೇಷ ಮೇಲ್ವಿಚಾರಣೆಯಲ್ಲಿ ಸುರಕ್ಷಿತವಾಗಿ ಬೆಳೆಸಿದ್ದನು ಎಂಬುದನ್ನು ಈ ಮೂಲಕ ಸ್ಪಷ್ಟ ಪಡಿಸಲಾಗಿದೆ.

3:59 ಅಂದರೆ, ತಂದೆಯ ಪಾತ್ರವಿಲ್ಲದೆ ನೇರವಾಗಿ ಒಬ್ಬ ಕನ್ಯೆಯ ಉದರದಲ್ಲಿ ಜನಿಸಿದವರು ಎಂಬ ಕಾರಣಕ್ಕಾಗಿ ಈಸಾ (ಅ)ರನ್ನು ಆರಾಧಿಸುವವರು, ಆದಮ್(ಅ)ರನ್ನು ನೆನಪಿಸಿಕೊಳ್ಳಬೇಕು. ಆ ಪ್ರಥಮ ಮಾನವನ ಜನನದಲ್ಲಿ ತಂದೆಗಾಗಲಿ ತಾಯಿಗಾಗಲಿ ಪಾತ್ರವಿರಲಿಲ್ಲ. ಅವರನ್ನು ಅಲ್ಲಾಹನು ನೇರವಾಗಿ ಮಣ್ಣಿನಿಂದ ಸೃಷ್ಟಿಸಿದನು. ಅಂತಹ ಆದಮ್ (ಅ) ಪೂಜಾರ್ಹರಲ್ಲದಿರುವಾಗ ಕೇವಲ ಕನ್ಯೆಗೆ ಹುಟ್ಟಿದವರೆಂಬ ಕಾರಣಕ್ಕಾಗಿ ಈಸಾ (ಅ) ಪೂಜಾರ್ಹರಾಗುವುದು ಹೇಗೆ?

3:118 ಇದು ಪ್ರವಾದಿವರ್ಯ(ಸ)ರ ಸಮಕಾಲೀನರ ಪೈಕಿಒಂದು ನಿರ್ದಿಷ್ಟ ವರ್ಗದ ಕುರಿತಾಗಿರುವ ಆದೇಶವೆಂಬುದು ಹಾಗೂ ಯುದ್ಧದ ಸನ್ನಿವೇಶದಲ್ಲಿ ನೀಡಲಾದ ಆದೇಶವೆಂಬುದು ಮುಂದಿನ 3 ವಚನಗಳಿಂದ ಸ್ಪಷ್ಟವಾಗುತ್ತದೆ.

3:121 ರಿಂದ 127 ಇವು ಉಹುದ್ ಎಂಬ ಯುದ್ಧದ ಹಿನ್ನೆಲೆಯಲ್ಲಿರುವ ವಚನಗಳು.

 4:15 ಇದು ವ್ಯಭಿಚಾರದ ಕುರಿತು ನೀಡಲಾಗಿರುವ ಪ್ರಾಥಮಿಕ ಹಾಗೂ ತಾತ್ಕಾಲಿಕ ಆದೇಶ. ಮುಂದೆ ಈ ಕುರಿತು ಅಂತಿಮ ಆದೇಶವನ್ನು ಅನ್ನೂರ್ ಅಧ್ಯಾಯದಲ್ಲಿ ನೀಡಲಾಯಿತು. ನೋಡಿರಿ; 24:2. ಅಲ್ಲಿ ವ್ಯಭಿಚಾರಿ ಪುರುಷ ಹಾಗೂ ವ್ಯಭಿಚಾರಿ ಸ್ತ್ರೀಗೆ ತಲಾ 100 ಛಡಿಯೇಟು ಹೊಡೆಯುವ ಶಿಕ್ಷೆಯನ್ನು ಘೋಷಿಸಲಾಗಿದೆ. ಇದು ಅವಿವಾಹಿತ ವ್ಯಭಿಚಾರಿಗಳಿಗಿರುವ ಶಿಕ್ಷೆಯೆಂದೂ, ವಿವಾಹಿತ ವ್ಯಭಿಚಾರಿಗಳಿಗೆ ಕಲ್ಲೆಸೆದು ಕೊಲ್ಲುವ ಶಿಕ್ಷೆ ವಿಧಿಸಬೇಕೆಂದೂ ಮುಂದೆ ಹದೀಸ್ ಅಥವಾ ಪ್ರವಾದಿ ವಚನಗಳ ಮೂಲಕ ಸ್ಪಷ್ಟಪಡಿಸಲಾಯಿತು.

4:101 ಮತ್ತು 102 ಈ ಪೈಕಿ ಮೊದಲ ವಚನದಲ್ಲಿ, ಪ್ರಯಾಣದ ವೇಳೆ ನಮಾಝನ್ನು ಸಂಕ್ಷಿಪ್ತಗೊಳಿಸಲು ಅನುಮತಿ ನೀಡಲಾಗಿದೆ. ಈ ಕುರಿತು ಹೆಚ್ಚಿನ ವಿವರಗಳು ಹದೀಸ್ ಹಾಗೂ ಕರ್ಮಶಾಸ್ತ್ರ ಗ್ರಂಥಗಳಲ್ಲಿ ಸಿಗುತ್ತವೆ. ಇನ್ನು ಎರಡನೇ ವಚನದಲ್ಲಿ ಅಸಾಮಾನ್ಯ ಹಾಗೂ ಅಭದ್ರ ಸ್ಥಿತಿಯಲ್ಲಿ, ವಿಶೇಷವಾಗಿ, ಯುದ್ಧದ ಸನ್ನಿವೇಶದಲ್ಲಿ ನಮಾಝ್ ಸಲ್ಲಿಸುವ ಸುರಕ್ಷಿತ ವಿಧಾನವನ್ನು ಸೂಚಿಸಲಾಗಿದೆ. ಸನ್ನಿವೇಶವು ಪ್ರತಿಕೂಲವಾಗಿದ್ದರೆ ನಮಾಝ್‌ನ ಸ್ವರೂಪದಲ್ಲಿ ಬದಲಾವಣೆಯಾಗಬಹುದಷ್ಟೇ ಹೊರತು, ಯಾವ ಸನ್ನಿವೇಶದಲ್ಲೂ ನಮಾಝ್ ಎಂಬ ಕರ್ತವ್ಯದಿಂದ ವಿನಾಯಿತಿ ಇಲ್ಲ ಎಂಬುದು ಇದರಿಂದ ವ್ಯಕ್ತವಾಗುತ್ತದೆ.

5:103 ಅಜ್ಞಾನ ಕಾಲದಲ್ಲಿ ಅರಬರಲ್ಲಿ ಹಲವು ಕಂದಾಚಾರಗಳು ಆಚರಣೆಯಲ್ಲಿದ್ದವು. ಉದಾ: ಅವರು ಕೆಲವು ಒಂಟೆಗಳ ಹಾಲನ್ನು ನಿರ್ದಿಷ್ಟ ದೇವತೆಗಳಿಗೆ ಮೀಸಲಾಗಿಡುತ್ತಿದ್ದರು. ಹತ್ತು ಬಾರಿ ಹೆತ್ತು, ಆ ಪೈಕಿ ಕೊನೆಯ ಬಾರಿ ಗಂಡೊಂಟೆಗೆ ಜನ್ಮ ನೀಡಿದ ಹೆಣ್ಣೊಂಟೆಗೆ ಬಹೀರಃ ಎಂಬ ಹೆಸರಿಟ್ಟು, ಅದರ ಕಿವಿಗಳನ್ನು ಕತ್ತರಿಸಿ ಅದನ್ನು ಸ್ವತಂತ್ರವಾಗಿ ಅಲೆದಾಡಲು ಬಿಟ್ಟುಬಿಡಲಾಗುತ್ತಿತ್ತು. ಅದಕ್ಕೆ ವಿಶೇಷ ಗೌರವವನ್ನೂ ಸಲ್ಲಿಸಲಾಗುತ್ತಿತ್ತು. ಇಂತಹ ಒಂಟೆಗಳನ್ನು ಯಾವುದೇ ಕೆಲಸಕ್ಕಾಗಿ ಬಳಸಬಾರದು ಮತ್ತು ಯಾರೂ ಅವುಗಳ ಹಾಲು ಕರೆಯಬಾರದು ಎಂಬ ನಿರ್ದಂಧಗಳೂ ಇದ್ದವು. ಇನ್ನು ಸಾಯಿಬಃಗಳೆಂದರೆ ನಿರ್ದಿಷ್ಟ ದೇವತೆಗಳ ಹೆಸರಲ್ಲಿ ಹರಕೆಗೆ ಬಿಡಲಾದ ಹೆಣ್ಣೊಂಟೆಗಳು. ಸವಾರಿಗಾಗಲಿ, ಸರಕು ಹೇರುವುದಕ್ಕಾಗಲೀ ಆ ಒಂಟೆಗಳನ್ನು ಬಳಸುವುದು ನಿಷಿದ್ಧವಾಗಿತ್ತು. ವಸೀಲಃ ಎಂದರೆ, ತನ್ನ ಪ್ರಥಮ ಪ್ರಸವದಲ್ಲಿ ಹೆಣ್ಣು ಒಂಟೆಗೆ ಜನ್ಮ ನೀಡಿ, ಮುಂದಿನ ಪ್ರಸವದಲ್ಲಿ ಮತ್ತೆ ಹೆಣ್ಣು ಒಂಟೆಗೆ ಜನ್ಮ ನೀಡುವ ಒಂಟೆ. ಜನರು ಅಂತಹ ಒಂಟೆಗಳನ್ನು ದೇವತೆಗಳಿಗೆಂದು ಮೀಸಲಾಗಿಡುತ್ತಿದ್ದರು. ತಮ್ಮಿಚ್ಛೆಯಂತೆ ಯಾರ ಹೊಲವನ್ನಾದರೂ ಹೊಕ್ಕು ಮೇಯುವ ಅಧಿಕಾರ ಅವುಗಳಿಗೆ ಇದೆಯೆಂದು ಜನರು ನಂಬಿದ್ದರು. ಹಾಮ್ ಎಂದರೆ, ಇದೇ ರೀತಿ ಯಾವುದಾದರೂ ದೇವತೆಯ ಹೆಸರಲ್ಲಿ ಹರಕೆಗೆ ಬಿಟ್ಟು ಬಿಡಲಾದ ಗಂಡೊಂಟೆ.

9:107ರಿಂದ 110 ಮದೀನಾದಲ್ಲಿ ಕಪಟಿಗಳು ಅಥವಾ ಮುಸ್ಲಿಮ್ ಸಮಾಜದ ಆಂತರಿಕ ಶತ್ರುಗಳು ಸಾಕಷ್ಟು ಸಂಘಟಿತರಾಗಿ ಕಾರ್ಯಾಚರಿಸಲು ಆರಂಭಿಸಿದ್ದರು. ಅವರು ತಮ್ಮದೇ ಆದ ಒಂದು ಮಸೀದಿಯನ್ನು ನಿರ್ಮಿಸಿಕೊಂಡು, ಅದನ್ನು ತಮ್ಮ ಸಂಚುಗಾರಿಕೆ ಹಾಗೂ ವಿವಿಧ ಅಕ್ರಮ ಚಟುವಟಿಕೆಗಳ ಅಡ್ಡೆಯಾಗಿ ಬಳಸಿಕೊಳ್ಳತೊಡಗಿದ್ದರು. ಈ ದುಷ್ಟ ಕೂಟದ ಕುಚೇಷ್ಟೆಗಳು ತೀರಾ ವಿಪರೀತವಾಗಿ ಬಿಟ್ಟಾಗ ಈ ಅಡ್ಡೆಯನ್ನು ಧ್ವಂಸಗೊಳಿಸಲಾಯಿತು.

9:113 ಮತ್ತು 114 ನೋಡಿರಿ: 14:41/ 19:47.

13:20 ನೋಡಿರಿ 7:172

17:1 ಅಲ್ಲಾಹನು ಪ್ರವಾದಿ ಮುಹಮ್ಮದ್(ಸ)ರಿಗೆ ಸ್ವರ್ಗ, ನರಕ ಸೇರಿದಂತೆ ಅದೃಶ್ಯ ಲೋಕದ ಸಾಕ್ಷಾತ್ ದರ್ಶನ ಮಾಡಿಸಿದ್ದನು. ಸಾಮಾನ್ಯವಾಗಿ ಮಿಅ್ ರಾಜ್’ ಎಂದು ಕರೆಯಲಾಗುವ ಈ ಪ್ರಯಾಣದ ಪ್ರಾಥಮಿಕ ಭಾಗವನ್ನು ಮಾತ್ರ ಇಲ್ಲಿ ಪ್ರಸ್ತಾಪಿಸಲಾಗಿದೆ. ಹಲವು ವ್ಯಾಖ್ಯಾನಕಾರರ ಪ್ರಕಾರ 53ನೇ ಅಧ್ಯಾಯದ 18ರವರೆಗಿನ ವಚನಗಳು, ಆ ಪ್ರಯಾಣದ ಮುಂದಿನ ಹಂತಗಳಿಗೆ ಸಂಬಂಧಿಸಿವೆ.

ಕೆಲವರು, ಅದು ಸ್ವಪ್ನದಲ್ಲಿ ಸಂಭವಿಸಿದ ಒಂದು ಆಧ್ಯಾತ್ಮಿಕ ಅನುಭವವಾಗಿತ್ತು ಎಂದು ವ್ಯಾಖ್ಯಾನಿಸುತ್ತಾರೆ. ಆದರೆ ಆ ಅಸಾಮಾನ್ಯ ಪ್ರಯಾಣವು ಶರೀರ ಸಹಿತವಾದ ನೈಜ ಪ್ರಯಾಣವಾಗಿತ್ತು ಎಂಬುದು ಹಲವು ಅಧಿಕೃತ ಹದೀಸ್‌ಗಳಿಂದ ಸಾಬೀತಾಗುತ್ತದೆ. ಆದ್ದರಿಂದ ಹೆಚ್ಚಿನವರು ಹಾಗೆಂದೇ ನಂಬುತ್ತಾರೆ.

18:9 ಪ್ರವಾದಿ ಮುಹಮ್ಮದ್(ಸ) ಅಲ್ಲಾಹನ ನಿಯುಕ್ತ ದೂತರಲ್ಲ ಎಂದು ಪ್ರಚಾರ ಮಾಡುತ್ತಿದ್ದ ಕೆಲವು ಯಹೂದಿಗಳು, ಅವರು ಪ್ರವಾದಿಯ ಕುರಿತು ಜನರಲ್ಲಿ ಸಂಶಯ ಬಿತ್ತಲಿಕ್ಕಾಗಿ, ಗತ ಕಾಲದ ಕೆಲವು ಧಾರ್ಮಿಕ ಗ್ರಂಥಗಳಲ್ಲಿ ಸಿಗುವ ಐತಿಹ್ಯಗಳ ಕುರಿತು ಪ್ರವಾದಿವರ್ಯ(ಸ)ರೊಡನೆ ವಿಚಾರಿಸಿ ಆಮೂಲಕ ಅವರನ್ನು ಪರೀಕ್ಷಿಸಬೇಕೆಂದು ಪ್ರಚೋದಿಸುತ್ತಿದ್ದರು. ಪ್ರವಾದಿವರ್ಯರು (ಸ), ತಾವು ಎಲ್ಲವನ್ನೂ ಬಲ್ಲ ಸರ್ವಜ್ಞರೆಂದು, ಎಂದೂ ಯಾರೊಡನೆಯೂ ಹೇಳಿಕೊಂಡಿರಲಿಲ್ಲ. ಎಲ್ಲರ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡುವ ಹೊಣೆಗಾರಿಕೆಯನ್ನೂ ಅವರು ವಹಿಸಿಕೊಂಡಿರಲಿಲ್ಲ. ಆದರೂ ಅವರ ದೌತ್ಯವನ್ನೇ ಪ್ರಶ್ನಿಸುವ ಸನ್ನಿವೇಶಗಳು ಬಂದಾಗಲೆಲ್ಲಾ, ಅಲ್ಲಾಹನು ದಿವ್ಯಸಂದೇಶವನ್ನು ರವಾನಿಸಿ ಅವರಿಗೆ ನೆರವಾಗುತ್ತಿದ್ದನು. ಹೀಗೆ ದಿವ್ಯ ಮಾರ್ಗದರ್ಶನದ ಆಧಾರದಲ್ಲಿ ಅವರು, ಶತ್ರುಗಳ ಪ್ರಶ್ನೆಗಳಿಗೆ ಅವರೆಲ್ಲಾ ದಂಗಾಗಿ ಬಿಡುವಷ್ಟು ಸ್ಪಷ್ಟ ಹಾಗೂ ನಿಖರ ಉತ್ತರ ನೀಡಿ ಬಿಡುತ್ತಿದ್ದರು. ‘ಅಸ್ಹಾಬುಲ್ ಕಹಫ್’ (ಗುಹೆಯವರು) ಮತ್ತು ‘ಅಸ್ಹಾಬುರ್ರಕೀಮ್’ (ಶಿಲಾ ಫಲಕದವರು) ಇವರ ಕುರಿತು ಕೇಳಲಾಗಿದ್ದ ಪ್ರಶ್ನೆಯ ಉತ್ತರ ಇಲ್ಲಿದೆ. ಈ ಉತ್ತರವು, ಮುಹಮ್ಮದ್(ಸ) ನಿಜಕ್ಕೂ ಅಲ್ಲಾಹನ ದೂತರೆಂಬುದು ಅನೇಕರಿಗೆ ಮನವರಿಕೆ ಮಾಡಿಸಿತು. ಹಾಗೆಯೇ, ಗುಹೆಯವರ ಕುರಿತು ಜನರ ನಡುವೆ ಚಲಾವಣೆಯಲ್ಲಿದ್ದ ಅನೇಕ ಊಹಾಪೋಹ ಹಾಗೂ ಮೂಢನಂಬಿಕೆಗಳಿಗೆ ಇದರಿಂದ ತೆರೆ ಬಿದ್ದಂತಾಯಿತು. ಅವರು ಯಾವ ಕಾಲದವರೆಂಬ ನಿರ್ದಿಷ್ಟ ವಿವರವೇನೂ ಕುರ್‌ಆನ್ ಅಥವಾ ಹದೀಸ್‌ಗಳಲ್ಲಿ ಕಂಡು ಬರುವುದಿಲ್ಲ. ಕೆಲವು ವ್ಯಾಖ್ಯಾನಕಾರರು ಅವರನ್ನು, ಈಸಾ (ಅ) ರ ಅನುಯಾಯಿಗಳೆಂದು ಗುರುತಿಸಿದ್ದಾರೆ. ಅವರ ಪ್ರಕಾರ ಈ ಮಂದಿ, ತಮ್ಮ ಏಕದೇವ ವಿಶ್ವಾಸಕ್ಕಾಗಿ ತಮ್ಮ ಕಾಲದ ವಿಗ್ರಹಾರಾಧಕ ದೊರೆಯ ಕೈಯಲ್ಲಿ ಮರ್ದನಕ್ಕೆ ತುತ್ತಾಗಿದ್ದರು ಮತ್ತು ತಮ್ಮ ನಂಬಿಕೆಯನ್ನು ಉಳಿಸಿಕೊಳ್ಳಲಿಕ್ಕಾಗಿ ಸರ್ವಸ್ವವನ್ನು ತೊರೆದು ಅಜ್ಞಾತವಾಸಕ್ಕೆ ಶರಣಾಗಿದ್ದರು. ಕುರ್‌ಆನಿನಲ್ಲಿ ಅವರ ವೃತ್ತಾಂತ ಪ್ರಕಟವಾದಾಗ, ಮಕ್ಕಃ ಮತ್ತು ಪರಿಸರದಲ್ಲಿ ಸತ್ಯ ಸ್ವೀಕರಿಸಿದ್ದಕ್ಕಾಗಿ ಹಲವು ಬಗೆಯ ಮರ್ದನಗಳನ್ನು ಎದುರಿಸುತ್ತಿದ್ದ ಅನೇಕರು ಇದರಿಂದ ಸ್ಫೂರ್ತಿ ಪಡೆದು ತಮ್ಮ ಸತ್ಯನಿಷ್ಠೆಯನ್ನು ಹೆಚ್ಚಿಸಿಕೊಂಡರು.

18:62 ಕೆಲವು ವ್ಯಾಖ್ಯಾನಕಾರರು ಆ ಶಿಷ್ಯನ ಹೆಸರು ಯೂಶಅ್ ಬಿನ್ ನೂನ್ ಎಂದು ತಿಳಿಸಿದ್ದಾರೆ.

18:65 ಹದೀಸ್ ಗ್ರಂಥಗಳಲ್ಲಿ ಆ ವ್ಯಕ್ತಿಯನ್ನು ಖಿಝ್ರಿ ಅಥವಾ ಖಿಲ್ರ್ ಎಂದು ಗುರುತಿಸಲಾಗಿದೆ. ಇಲ್ಲಿ ಆ ವ್ಯಕ್ತಿಗೆ ಅಲ್ಲಾಹನ ಕಡೆಯಿಂದ ಅನುಗ್ರಹ ಹಾಗೂ ಜ್ಞಾನವನ್ನು ನೀಡಲಾಗಿತ್ತೆಂದು ತಿಳಿಸಲಾಗಿದೆ. ಆದರೆ ಅವರು ಪ್ರವಾದಿ ಅಥವಾ ದೂತರಾಗಿದ್ದರೆಂದು ಸ್ಪಷ್ಟವಾಗಿ ತಿಳಿಸಿಲ್ಲ.

18:83 ಈ ಮೇಲೆ 18:9 ರ ಟಿಪ್ಪಣಿಯಲ್ಲಿ ತಿಳಿಸಿದಂತೆ, ಇದು ಕೂಡಾ ವಿರೋಧಿಗಳು ಪ್ರವಾದಿವರ್ಯ(ಸ)ರನ್ನು ಪೇಚಿಗೆ ಸಿಲುಕಿಸಲು ಕೇಳಿದ ಪ್ರಶ್ನೆಯಾಗಿತ್ತು. ಝುಲ್ ಕರ್ನೈನ್ ಎಂದರೆ, ಎರಡು ಕೊಂಬಿನವನು, ಅಧಿಕಾರವುಳ್ಳವನು ಅಥವಾ ಶಕ್ತಿಶಾಲಿ ಎಂದರ್ಥ. ಇಲ್ಲಿನ ವಚನಗಳ ಧಾಟಿ ನೋಡಿದರೆ ಆ ವ್ಯಕ್ತಿ, ಮಕ್ಕಃ ಮತ್ತು ಪರಿಸರದವರಿಗೆ ಪರಿಚಿತರಾಗಿದ್ದ, ಪೂರ್ವಕಾಲದ ಒಬ್ಬ ಸಜ್ಜನ ಹಾಗೂ ಭಾರೀ ಶಕ್ತಿಶಾಲಿ ದೊರೆಯಾಗಿದ್ದರೆಂಬುದು ವ್ಯಕ್ತವಾಗುತ್ತದೆ.

18:94 ರಿಂದ 97 ಇಲ್ಲಿ ಯಅ್ ಜೂಜ್ ಮತ್ತು ಮಅ್ ಜೂಜ್ ಎಂದು ಗುರುತಿಸಲಾಗಿರುವ ಎರಡು ಕಿಡಿಗೇಡಿ ಪಡೆಗಳನ್ನು ಬೈಬಲ್‌ನಲ್ಲಿ ಗಾಗ್ ಮತ್ತು ಮೆಗಾಗ್ ಎಂದು ಕರೆಯಲಾಗಿದೆ. ಕುರ್‌ಆನಿನಲ್ಲಿ ಮುಂದೆ 21:96 ರಲ್ಲೂ ಅವರ ಪ್ರಸ್ತಾಪವಿದೆ. ಇವು ಒಂದು ಗಣ್ಯ ಭೂಭಾಗದಲ್ಲಿ ಭಾರೀ ವಿನಾಶ ಮೆರೆದ ಎರಡು ಕ್ರೂರ ಹಾಗೂ ದುಷ್ಟ ಪಡೆಗಳ ಹೆಸರಾಗಿರಬಹುದು ಅಥವಾ ಅವುಗಳ ನಾಯಕರ ಹೆಸರೂ ಆಗಿರಬಹುದು. ಅವರ ಕಿರುಕುಳದಿಂದ ತಮ್ಮನ್ನು ರಕ್ಷಿಸಬೇಕೆಂದು ಜನರು ಝುಲ್‌ಕರ್‌ನೈನ್‌ರ ಬಳಿ ಮೊರೆ ಇಟ್ಟಾಗ ಅವರು ಆ ಪಡೆಗಳಿಗೆ ತಡೆಯೊಡ್ಡುವ ಕ್ರಮಗಳನ್ನು ಕೈಗೊಂಡರು. ಲೋಕಾಂತ್ಯದ ಕಾಲವು ಸಮೀಪಿಸುವಾಗ ಈ ದುಷ್ಟ ಪಡೆಗಳು ಮತ್ತೆ ತಲೆ ಎತ್ತಲಿದ್ದು ಪ್ರವಾದಿ ಈಸಾ(ಅ) ತಮ್ಮ ಪುನರಾಗಮನದ ಅವಧಿಯಲ್ಲಿ ಅವುಗಳನ್ನು ಸಂಪೂರ್ಣ ನಾಶ ಮಾಡಿಬಿಡುವರೆಂದು ಕೆಲವು ಹದೀಸ್ ಗ್ರಂಥಗಳಿಂದ ತಿಳಿದು ಬರುತ್ತದೆ.

27:39 ಹಲವು ಶಕ್ತಿಶಾಲಿ ಜಿನ್ನ್‌ಗಳನ್ನು ಅಲ್ಲಾಹನು ಪ್ರವಾದಿ ಸುಲೈಮಾನ್(ಅ)ರ ವಶಕ್ಕೆ ಒಪ್ಪಿಸಿದ್ದನು. (ನೋಡಿರಿ – 34: 12,13). ಅವು ಅವರ ಆಸ್ಥಾನದಲ್ಲಿ ಅವರಿಗೆ ವಿಧೇಯವಾಗಿ ಸದಾ ಅವರ ಆದೇಶಕ್ಕಾಗಿ ಕಾಯುತ್ತಿದ್ದವು. ಆ ಪೈಕಿ ಒಂದು ಜಿನ್ನಿನ ಹೆಸರು ಇಫ್ರೀತ್.

28:27 ತಮ್ಮ ವಿವಾಹಕ್ಕಾಗಿ ಮಹ್ರ್ ಅನ್ನು (ವಿವಾಹ ಶುಲ್ಕವನ್ನು) ನಗದಿನ ರೂಪದಲ್ಲಿ ಪಾವತಿಸುವ ಸಾಮರ್ಥ್ಯ ಅಂದಿನ ಸನ್ನಿವೇಶದಲ್ಲಿ ಮೂಸಾ(ಅ) ಅವರಲ್ಲಿರಲಿಲ್ಲ. ಆದ್ದರಿಂದ ಅವರು ಕನಿಷ್ಠ ಎಂಟು ವರ್ಷ ತಮ್ಮ ಮಾವನ ನೌಕರನಾಗಿ ಸೇವೆ ಸಲ್ಲಿಸಲು ಒಪ್ಪಿಕೊಂಡರು. ಅವರ ಈ ಸೇವೆಗೆ ಯಾರಾದರೂ ಶುಲ್ಕ ನೀಡ ಬಯಸಿದರೆ ಆ ಶುಲ್ಕ ಎಷ್ಟು ಬೃಹತ್ ಮೊತ್ತದ್ದಾದೀತೆಂದು ಊಹಿಸಿ ನೋಡಿರಿ. ಮಹ್ರ್ ನ ಮಹತ್ವವನ್ನು ಅಂಗೀಕರಿಸಲು ನಿರಾಕರಿಸುವವರು ಮತ್ತು ಹೆಣ್ಣಿಗೆ ತೀರಾ ಜುಜುಬಿ ಮೊತ್ತವನ್ನು ಮಹ್ರ್‌ನ ಹೆಸರಲ್ಲಿ ಕೊಟ್ಟು ಅವರಿಂದ ದೊಡ್ಡ ಪ್ರಮಾಣದಲ್ಲಿ ವರದಕ್ಷಿಣೆಯನ್ನು ದೋಚಿ ಕಬಳಿಸುವವರು ಈ ಘಟನೆಯಿಂದ ಪಾಠ ಕಲಿಯಬೇಕು.

34:14 ಮಾನ್ಯ ಪ್ರವಾದಿವರ್ಯ(ಸ)ರ ಸಮಕಾಲೀನರಲ್ಲಿ ಅನೇಕರು, ಜಿನ್ನ್‌ಗಳ ಭಕ್ತರಾಗಿದ್ದರು. ಜಿನ್ನ್‌ಗಳ ಕುರಿತಂತೆ ಅವರಲ್ಲಿ ಅನೇಕ ಮೂಢ ನಂಬಿಕೆ ಗಳಿದ್ದವು. ಅವರು ಜಿನ್ನ್‌ಗಳಿಗೆ ಅಂಜಿ ಅವುಗಳಿಗೆ ಹರಕೆ ಕಾಣಿಕೆಗಳನ್ನು ಸಲ್ಲಿಸುತ್ತಿದ್ದರು.ಇತರೆಲ್ಲ ಸೃಷ್ಟಿಗಳಂತೆ ಜಿನ್ನ್‌ಗಳು ಅಲ್ಲಾಹನ ದಾಸರು ಮತ್ತು ಸಂಪೂರ್ಣವಾಗಿ ಅವನ ನಿಯಂತ್ರಣದಲ್ಲಿರುವವರು ಎಂಬ ಅರಿವು ಅವರಿಗಿರಲಿಲ್ಲ. ಅಂಥವರ ಕಣ್ಣು ತೆರೆಸಲು ಇಲ್ಲಿ ಈ ಘಟನೆಯನ್ನು ಪ್ರಸ್ತಾಪಿಸಲಾಗಿದೆ. ಈ ಘಟನೆಯಿಂದ ವ್ಯಕ್ತವಾಗುವ ಕೆಲವು ಪ್ರಮುಖ ಅಂಶಗಳನ್ನು ಗಮನಿಸಿ: 1. ಜಿನ್ನ್‌ಗಳು ಮಾನವರ ಸೇವಕರೇ ಹೊರತು ಮಾನವರು ಜಿನ್ನ್‌ಗಳ ಸೇವಕರಲ್ಲ. 2. ತಮ್ಮಿಚ್ಛೆಯಂತೆ ಮಾನವರಿಗೆ ಯಾವುದೇ ಲಾಭ ಅಥವಾ ನಷ್ಟವನ್ನುಂಟುಮಾಡುವ ಸಾಮರ್ಥ್ಯ ಅವುಗಳಿಗಿಲ್ಲ. 3. ಜಿನ್ನ್‌ಗಳಿಗೆ ಸ್ವತಃ ತಮ್ಮ ಸ್ಥಿತಿಗತಿಗಳ ಮೇಲೆ ನಿಯಂತ್ರಣವಿಲ್ಲ. ಆದ್ದರಿಂದಲೇ ಅವು ಸುಲೈಮಾನರ ಅಧೀನದಲ್ಲಿ ಅವರ ದಾಸರಾಗಿ ಸೇವೆ ಸಲ್ಲಿಸಲು ನಿರ್ಬಂಧಿತರಾಗಿದ್ದವು. 4. ತಮ್ಮ ಕಣ್ಣ ಮುಂದೆಯೇ ಇದ್ದ, ಸುಲೈಮಾನರು(ಅ) ನಿಧನರಾಗಿರುವ ವಿಷಯವು ಎಷ್ಟೋ ಕಾಲದ ತನಕ ಜಿನ್ನ್‌ಗಳಿಗೆ ತಿಳಿದೇ ಇರಲಿಲ್ಲ. ಇಂತಹ ಪ್ರತ್ಯಕ್ಷ ವಿಷಯವೊಂದರ ಜ್ಞಾನ ಕೂಡಾ ಇಲ್ಲದ ಜಿನ್ನ್‌ಗಳಿಗೆ ಅದೃಶ್ಯ ಹಾಗೂ ಅಜ್ಞಾತ ಲೋಕದ ಜ್ಞಾನವಿರಲು ಖಂಡಿತ ಸಾಧ್ಯವಿಲ್ಲ.

34:15 ಆ ಜನಾಂಗವು ಯಮನ್ ದೇಶದ ಸನಾ ನಗರದಿಂದ ಸುಮಾರು 60 ಕಿ.ಮೀ. ದೂರದಲ್ಲಿ ವಾಸವಾಗಿತ್ತು.

36:13 ಇದು ಸಿರಿಯಾ ದೇಶದಲ್ಲಿದ್ದ ಒಂದು ನಾಡಿನವರ ವೃತ್ತಾಂತವಾಗಿದ್ದು, ಪ್ರವಾದಿ ಈಸಾ(ಅ) ಆ ನಾಡಿನವರಿಗೆ ಸತ್ಯ ಸಂದೇಶವನ್ನು ತಲುಪಿಸಲಿಕ್ಕಾಗಿ ತಮ್ಮ ಅನುಯಾಯಿಗಳನ್ನು ಅವರ ಬಳಿಗೆ ಕಳಿಸಿದ್ದರೆಂದು ಕೆಲವು ತಫ್ಸೀರ್‌ಗಳಿಂದ ತಿಳಿದು ಬರುತ್ತದೆ.

44: 37 ಒಂದು ಕಾಲದಲ್ಲಿ ಈಜಿಪ್ತ್ ದೇಶದಲ್ಲಿ ಒಂದು ಭವ್ಯ ರಾಜಮನೆತನವು ಫಿರ್‌ಔನ್‌ ಎಂಬ ಬಿರುದು ಹೊತ್ತು ಮೆರೆದಿತ್ತು. ಆ ಮನೆತನದ ಎಲ್ಲ ದೊರೆಗಳು ತಮ್ಮನ್ನು ಫಿರ್‌ಔನ್ ಎಂದೇ ಕರೆದುಕೊಳ್ಳುತ್ತಿದ್ದರು. ಅದೇ ರೀತಿ ಅರೇಬಿಯಾದ ಯಮನ್ ದೇಶದಲ್ಲಿ, ಭಾರೀ ವಿಶಾಲ ಸಾಮ್ರಾಜ್ಯವೊಂದರ ಒಡೆಯರಿದ್ದರು. ಆ ಸಾಮ್ರಾಜ್ಯವನ್ನು ತುಬ್ಬಅ್ ಸಾಮ್ರಾಜ್ಯವೆಂದೂ ಅವರ ಜನಾಂಗವನ್ನು ತುಬ್ಬಅ್ ಜನಾಂಗವೆಂದೂ ಕರೆಯಲಾಗುತ್ತಿತ್ತು. ಪ್ರವಾದಿವರ್ಯ(ಸ)ರ ಕೆಲವು ಸಮಕಾಲೀನರು ತಮ್ಮ ಬಳಿ ಇದ್ದ ಸೀಮಿತ ಸೊತ್ತು ಸಂಪತ್ತುಗಳ ಆಧಾರದಲ್ಲಿ, ಅಹಂಕಾರ ಮೆರೆಯುತ್ತಾ ಸತ್ಯ ಸಂದೇಶದೆದುರು ತೀರಾ ಉದ್ಧಟತನದ ನಿಲುವು ತಾಳಿದಾಗ ಅವರ ಕಣ್ಣು ತೆರೆಸಲಿಕ್ಕಾಗಿ ಅವರಿಗೆ ಫಿರ್‌ಔನ್ (44:18), ತುಬ್ಬಅ್ ಮುಂತಾದ, ಗತಕಾಲದ ಕೆಲವು ಶಕ್ತಿ ಶಾಲಿ ಜನಾಂಗಗಳ ಕಥೆಯನ್ನು ಪ್ರಸ್ತಾಪಿಸಿ, ಅವರಿಗೆ ಒದಗಿದ ಹೀನ ಗತಿಯನ್ನು ನೆನಪಿಸಲಾಯಿತು.

46: 35 ಸಾಹಸಿ ದೂತರು ಅಥವಾ ‘ಉಲುಲ್ ಅಝ್ಮಾ‘ ಯಾರೆಂಬುದನ್ನು 57:26 ರಲ್ಲಿ ವಿವರಿಸಲಾಗಿದೆ.

53: 49 ಶಿಅ್ ರಾ ಅಂದರೆ ಇರುಳಲ್ಲಿ, ಕತ್ತಲು ತುಂಬಿದ ಆಕಾಶದಲ್ಲಿ, ಅತ್ಯಂತ ಉಜ್ವಲವಾಗಿ ಕಂಗೊಳಿಸುವ ಒಂದು ತಾರೆ. ಆ ತಾರೆಯಲ್ಲಿ ದಿವ್ಯ ಶಕ್ತಿ ಇದೆ ಎಂದು ನಂಬಿದ್ದ ಕೆಲವರು ಅದನ್ನು ಪೂಜಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಅಲ್ಲಾಹನನ್ನು ಶಿಅ್ ರಾದ ಒಡೆಯ ಅಥವಾ ಶಿಅ್ ರಾದ ದೇವರೆಂದು ಪರಿಚಯಿಸುವ ಮೂಲಕ ನೀವು ಶಿಅ್ ರಾವನ್ನು ಅಂಜುವ ಅಥವಾ ಅದನ್ನು ಆರಾಧಿಸುವ ಬದಲು ಶಿಅ್ ರಾದ ದೇವರನ್ನು, ಅಂದರೆ ಅಲ್ಲಾಹನನ್ನು ಆರಾಧಿಸಿರೆಂದು ಕರೆ ನೀಡಲಾಗಿದೆ.

58: 1 ರಿಂದ 5 ಆ ಮಹಿಳೆಯ ಹೆಸರು ಖೌಲಾ ಬಿನ್ತಿ ಸಅಲಬಃ(ರ). ಆಕೆಯ ಪತಿಯ ಹೆಸರು ಔಸ್ ಬಿನ್ ಸ್ವಾಮಿತ್(ರ). ಒಮ್ಮೆ ಆಕೆ ಹಾಗೂ ಆಕೆಯ ಪತಿಯ ನಡುವೆ ಜಗಳವಾಗಿ, ಪತಿಯು ಕೋಪದ ಭರದಲ್ಲಿ ಆಕೆಯೊಡನೆ, ‘‘ನನ್ನ ಪಾಲಿಗೆ ನೀನು ನನ್ನ ತಾಯಿಯ ಬೆನ್ನಿಗೆ ಸಮಾನ‘‘ಎಂದು ಬಿಟ್ಟರು. ಈ ಕೃತ್ಯವನ್ನು ಝಿಹಾರ್’ ಎಂದು ಕರೆಯಲಾಗುತ್ತಿತ್ತು. ಅಂದಿನ ಆ ಸಮಾಜದ ಸಂಪ್ರದಾಯದಂತೆ, ಒಬ್ಬ ಪತಿ ಹಾಗೆ ಹೇಳಿ ಬಿಟ್ಟರೆ ಆ ಕ್ಷಣದಿಂದಲೇ ಪತಿ- ಪತ್ನಿಯರ ಸಂಬಂಧವು ಶಾಶ್ವತವಾಗಿ ಮುರಿದು ಬೀಳುತ್ತಿತ್ತು. ಆದರೆ ಆಕೆ ಇದನ್ನು ಒಪ್ಪಲು ತಯಾರಿರಲಿಲ್ಲ. ಆಕೆ ಈ ಕುರಿತು ಪ್ರವಾದಿವರ್ಯ(ಸ)ರ ಬಳಿ ಬಂದು ದೂರಿ ಕೊಂಡಾಗ ಅವರ ಬಳಿಯೂ ಆಕೆಗೆ ಆ ಹಳೆಯ ಸಂಪ್ರದಾಯಕ್ಕಿಂತ ಭಿನ್ನವಾದ ಪರಿಹಾರವೇನೂ ಸಿಗಲಿಲ್ಲ. ಕೊನೆಗೆ ಆಕೆ ಈ ಕುರಿತು ಅಲ್ಲಾಹನಿಗೆ ಮೊರೆ ಇಟ್ಟಾಗ ಈ ಅಧ್ಯಾಯದ ಮೂಲಕ ಆಕೆಗೆ ಪರಿಹಾರ ದೊರಕಿತು.

80:1ರಿಂದ 11 ಮುಹಮ್ಮದ್(ಸ)ರ ಪ್ರವಾದಿತ್ವದ ಆರಂಭದ ದಿನಗಳಲ್ಲಿ ಒಮ್ಮೆ ಮಕ್ಕಃ ಪಟ್ಟಣದ ಹಲವು ಪ್ರಮುಖರು ಒಂದೆಡೆ ಸೇರಿದ್ದರು. ಪ್ರವಾದಿವರ್ಯರು (ಸ) ಅವರಿಗೆ ಸತ್ಯ ಸಂದೇಶವನ್ನು ಪರಿಚಯಿಸಿ ಅವರ ಮನ ಒಲಿಸುವ ಶ್ರಮದಲ್ಲಿ ನಿರತರಾಗಿದ್ದರು. ಆ ಪುರ ಪ್ರಮುಖರು ಸತ್ಯವನ್ನು ಸ್ವೀಕರಿಸಿ ಬಿಟ್ಟರೆ ಉಳಿದವರ ಪಾಲಿಗೆ ಸತ್ಯದ ಹಾದಿ ಸುಗಮವಾದೀತು ಎಂಬ ನಿರೀಕ್ಷೆಯಿಂದ ಪ್ರವಾದಿವರ್ಯರು(ಸ) ಆ ಮಂದಿಯ ಮನವೊಲಿಕೆಗೆ ಭಾರೀ ಮಹತ್ವ ನೀಡಿದ್ದರು. ಆ ಸಭೆಯು ಇನ್ನೂ ನಡೆಯುತ್ತಿದ್ದಾಗಲೇ ಅಬ್ದುಲ್ಲಾಹ್ ಬಿನ್ ಉಮ್ಮು ಮಕ್ತೂಮ್(ರ) ಎಂಬ ಓರ್ವ ಅಂಧ ಸಂಗಾತಿ ಅಲ್ಲಿಗೆ ಬಂದರು. ಅವರು ಪ್ರವಾದಿವರ್ಯ(ಸ)ರೊಡನೆ ಕೆಲವು ಪ್ರಶ್ನೆಗಳನ್ನು ಕೇಳ ತೊಡಗಿದರು. ಅವರ ಈ ವರ್ತನೆಯಿಂದ ಇತರ ಸಭಿಕರಿಗೆ ಮುಜುಗರವಾಗುತ್ತಿರುವುದನ್ನು ಗಮನಿಸಿದ ಪ್ರವಾದಿ (ಸ) ಆ ಸಂಗಾತಿಯನ್ನು ಹಾಗೂ ಅವರ ಪ್ರಶ್ನೆಗಳನ್ನು ಕಡೆಗಣಿಸಿ ತಮ್ಮ ಗಮನವನ್ನು ಸಭೆಯಲ್ಲಿದ್ದ ಪುರ ಪ್ರಮುಖರ ಕಡೆಗೆ ಕೇಂದ್ರೀಕರಿಸಿದರು. ಈ ಸನ್ನಿವೇಶವನ್ನೇ ಈ ಅಧ್ಯಾಯದಲ್ಲಿ ಕಟುವಾಗಿ ವಿಮರ್ಶಿಸಲಾಗಿದೆ. ಪ್ರಾಮಾಣಿಕ ಸತ್ಯನಿಷ್ಠೆಯೊಂದಿಗೆ ಬಂದ ವ್ಯಕ್ತಿಯೊಬ್ಬನನ್ನು ಕಡೆಗಣಿಸಿ ಉದ್ಧಟ ಧೋರಣೆಯ ಅನುಕೂಲಸ್ಥರನ್ನು ಮೆಚ್ಚಿಸುವ ಯಾವ ಅಗತ್ಯವೂ ಇಲ್ಲ. ಸತ್ಯ ಪ್ರಸಾರದ ಪ್ರಕ್ರಿಯೆಯಲ್ಲಿ ಸತ್ಯದೆಡೆಗೆ ಒಲವು ತೋರುವವರೇ ಪ್ರಾಶಸ್ತ್ಯಕ್ಕೆ ಅರ್ಹರು ಎಂಬುದನ್ನು ಪ್ರವಾದಿ (ಸ) ಮತ್ತು ಎಲ್ಲ ಸತ್ಯ ಪ್ರಚಾರಕರಿಗೆ ಈ ಮೂಲಕ ಮನವರಿಕೆ ಮಾಡಿಸಲಾಗಿದೆ.

81:8,9 ಪ್ರವಾದಿವರ್ಯ(ಸ)ರ ಸಮಕಾಲೀನ ಸಮಾಜದಲ್ಲಿ ಅನೇಕರಿಗೆ ಹೆಣ್ಣುವರ್ಗದ ಬಗ್ಗೆ ತೀವ್ರ ತಾತ್ಸಾರವಿತ್ತು. ಆ ತಾತ್ಸಾರ ಆ ಸಮಾಜದಲ್ಲಿ ಚಲಾವಣೆಯಲ್ಲಿದ್ದ ಕಥೆಗಳು, ಹಾಡುಗಳು, ನಾಣ್ಣುಡಿಗಳು, ಮತ್ತು ವಿವಿಧ ಸಂಪ್ರದಾಯಗಳ ಮೂಲಕ ಅಲ್ಲಲ್ಲಿ ಪದೇ ಪದೇ ಪ್ರಕಟವೂ ಆಗುತ್ತಿತ್ತು. ಕೆಲವರು ತಮ್ಮ ಮನೆಯಲ್ಲಿ ಹೆಣ್ಣು ಮಗು ಜನಿಸಿದರೆ ಆ ‘ದುರಂತ ವಾರ್ತೆ’ಯನ್ನು ಸಮಾಜಕ್ಕೆ ಹೇಗೆ ತಿಳಿಸುವುದೆಂದು ತೀವ್ರ ಸ್ವರೂಪದ ಅಪಮಾನ ಪ್ರಜ್ಞೆಯಿಂದ ನರಳುತ್ತಿದ್ದರು. ಕೆಲವರು, ಇಂತಹ ಅಪಮಾನವನ್ನು ಸಹಿಸುವುದಕ್ಕಿಂತ ಆ ಹೆಣ್ಣು ಮಗುವನ್ನು ಕೊಂದು ಹೂತು ಬಿಟ್ಟರೆ ಹೇಗೆ? ಎಂದು ಆಲೋಚಿಸುತ್ತಿದ್ದರು(16:58,59) . ಕೆಲವರು ನಿಜಕ್ಕೂ ತಮಗೆ ಹುಟ್ಟಿದ ಹೆಣ್ಣು ಮಗುವನ್ನು ಜೀವಂತ ಹೂತು ಬಿಡುತ್ತಿದ್ದರು. ಈ ಅಮಾನುಷ ಮಾನಸಿಕತೆಯ ವಿರುಧ್ಧ ಜನ ಜಾಗೃತಿ ಬೆಳೆಸಲಿಕ್ಕಾಗಿ ಕುರ್‌ಆನ್ ಈ ಅನುಪಮ ಶೈಲಿಯನ್ನು ಬಳಸಿದೆ. ಲೋಕಾಂತ್ಯದ ಭಯಾನಕ ದೃಶ್ಯಾವಳಿಯನ್ನು ಒಂದೊಂದಾಗಿ ಬಿಚ್ಚಿಡುತ್ತಾ, ಪರಲೋಕದಲ್ಲಿ ನಡೆಯಲಿರುವ ಸವಿಸ್ತಾರ ವಿಚಾರಣೆಯ ಪ್ರಸ್ತಾಪವನ್ನು ಆರಂಭಿಸುವುದಕ್ಕೆ ಮುನ್ನವೇ, ಹಠಾತ್ತಾಗಿ, ತೀರಾ ನಿರ್ಜೀವಿಗಳನ್ನೂ ಬೆಚ್ಚಿ ಬೀಳಿಸುವಂತಹ ಸನ್ನಿವೇಶವೊಂದನ್ನು ಚಿತ್ರಿಸಲಾಗಿದೆ. ಇಲ್ಲಿ, ಹೆಣ್ಣು ಮಗುವನ್ನು ಜೀವಂತ ಹೂತವರನ್ನು ವಿಚಾರಣೆಗೆ ಒಳ ಪಡಿಸಲಾಗುವುದು ಅಥವಾ ಅಪರಾಧಿಗಳನ್ನು ದಂಡಿಸಲಾಗುವುದು ಎಂಬ ಸಾಮಾನ್ಯ ಧಾಟಿಯನ್ನು ಬದಿಗಿಟ್ಟು, ಅಪರಾಧದ ಅಸಾಮಾನ್ಯ ಸ್ವರೂಪಕ್ಕೆ ಸಾಟಿಯಾಗುವಂತಹ ಅಸಾಮಾನ್ಯ ಧಾಟಿಯಲ್ಲಿ ಅಪರಾಧಿಗಳಿಗೆ ಎಚ್ಚರಿಕೆ ನೀಡಲಾಗಿದೆ.

92:5-10 ನೋಡಿರಿ – 90:10 -17

96; 1-5 ಹದೀಸ್ ವರದಿಗಳಿಂದ ತಿಳಿಯುವಂತೆ, ಇದು ಪ್ರವಾದಿ ಮುಹಮ್ಮದ್ (ಸ)ರಿಗೆ ಅಲ್ಲಾಹನ ಕಡೆಯಿಂದ ಪ್ರಾಪ್ತವಾದ ಪ್ರಥಮ ದಿವ್ಯ ಸಂದೇಶವಾಗಿತ್ತು. ಪ್ರವಾದಿ(ಸ) ಮಕ್ಕಃ ಪಟ್ಟಣದ ಹೊರವಲಯದಲ್ಲಿ ಹಿರಾ ಎಂಬೊಂದು ಗುಹೆಯೊಳಗೆ, ಏಕಾಂತದಲ್ಲಿ ಚಿಂತನಾ ಮಗ್ನರಾಗಿದ್ದಾಗ ಹಠಾತ್ತನೆ ಅವರ ಮುಂದೆ ಜಿಬ್ರಈಲ್(ಅ) ಎಂಬ ಮಲಕ್ ಪ್ರತ್ಯಕ್ಷರಾಗಿ ‘ಓದಿರಿ’ ಎಂದರು. ಈ ಅನಿರೀಕ್ಷಿತ ಘಟನೆಯಿಂದ ಆಘಾತಗೊಂಡ ಪ್ರವಾದಿ(ಸ) ‘ನಾನು ಓದಬಲ್ಲವನಲ್ಲ’ ಎಂದು ಉತ್ತರಿಸಿದರು. ಆಗ ಜಿಬ್ರಈಲರು ಪ್ರವಾದಿವರ್ಯ(ಸ)ರನ್ನು ಅಪ್ಪಿ ಅಮುಕಿದರು. ಆಬಳಿಕ ಮತ್ತೆ ’ಓದಿರಿ’ ಎಂದರು. ಪ್ರವಾದಿ(ಸ) ತಮ್ಮ ಈ ಹಿಂದಿನ ಉತ್ತರವನ್ನೇ ಪುನರಾವರ್ತಿಸಿದರು. ಈ ರೀತಿ ಒಟ್ಟು ಮೂರು ಬಾರಿ ನಡೆದ ಬಳಿಕ ಪ್ರವಾದಿವರ್ಯರು(ಸ), ಜಿಬ್ರಈಲ್(ಅ) ಹೇಳಿಕೊಟ್ಟ ವಚನಗಳನ್ನು ತಾವೂ ಆವರ್ತಿಸಲಾರಂಭಿಸಿದರು. ಅದು ಹಿಜರಿ ಪೂರ್ವದ 13ನೇ ವರ್ಷ (ಕ್ರಿ.ಶ.ಸುಮಾರು 610) ರಮಝಾನ್ ತಿಂಗಳಲ್ಲಿ ರಾತ್ರಿಯ ಹೊತ್ತು ನಡೆದ ಘಟನೆಯಾಗಿತ್ತು.