1. ಅಲಿಫ್ ಲಾಮ್ ರಾ. ಇವು ಯುಕ್ತಿ ಪೂರ್ಣ ಗ್ರಂಥದ ವಾಕ್ಯಗಳು.
2. ‘‘ಮಾನವರನ್ನು ಎಚ್ಚರಿಸಿರಿ ಮತ್ತು ವಿಶ್ವಾಸಿಗಳಿಗೆ, ಅವರ ಒಡೆಯನ ಬಳಿ ಸ್ಥಿರವಾದ ನೆಲೆ ಇದೆ ಎಂಬ ಶುಭವಾರ್ತೆ ನೀಡಿರಿ’’ ಎಂಬ ದಿವ್ಯವಾಣಿಯನ್ನು ನಾವು ಅವರೊಳಗಿನ ಒಬ್ಬ ವ್ಯಕ್ತಿಗೆ ನೀಡಿದೆವೆಂದು ಜನರಿಗೆ ಅಚ್ಚರಿಯಾಗಿ ಬಿಟ್ಟಿತೇ? ಧಿಕ್ಕಾರಿಗಳು, ಖಂಡಿತವಾಗಿಯೂ ಇದೊಂದು ಸ್ಪಷ್ಟ ಮಾಟಗಾರಿಕೆಯಾಗಿದೆ ಎಂದು ಬಿಟ್ಟರು.
3. ಆರು ದಿನಗಳಲ್ಲಿ ಭೂಮಿ ಮತ್ತು ಆಕಾಶಗಳನ್ನು ಸೃಷ್ಟಿಸಿದ ಅಲ್ಲಾಹನೇ ನಿಮ್ಮ ಒಡೆಯನು. ತರುವಾಯ ಅವನು ವಿಶ್ವಸಿಂಹಾಸನವನ್ನು ಆವರಿಸಿ (ವಿಶ್ವ ವ್ಯವಸ್ಥೆಯನ್ನು) ನಡೆಸುತ್ತಿದ್ದಾನೆ. ಅವನಿಂದ ಸಮ್ಮತಿ ಪಡೆಯುವ ಮುನ್ನ ಶಿಫಾರಸು ಮಾಡುವವರು ಯಾರೂ ಇಲ್ಲ. ಆ ಅಲ್ಲಾಹನೇ ನಿಮ್ಮ ಒಡೆಯನು. ನೀವು ಅವನನ್ನೇ ಪೂಜಿಸಿರಿ. ನೀವೇನು ಪಾಠಕಲಿಯುವುದಿಲ್ಲವೇ?
4. ನೀವೆಲ್ಲರೂ ಅವನೆಡೆಗೇ ಮರಳುವಿರಿ. ಅಲ್ಲಾಹನ ವಾಗ್ದಾನವು ಖಚಿತ ಸತ್ಯವಾಗಿದೆ. ಖಂಡಿತವಾಗಿಯೂ ಅವನೇ ಸೃಷ್ಟಿಯನ್ನು ಆರಂಭಿಸುತ್ತಾನೆ ಮತ್ತು ಅವನೇ ಅದನ್ನು ಪುನರಾವರ್ತಿಸುತ್ತಾನೆ – ಸತ್ಯದಲ್ಲಿ ವಿಶ್ವಾಸವಿಟ್ಟು ಸತ್ಕರ್ಮಗಳನ್ನು ಮಾಡಿದವರಿಗೆ ನ್ಯಾಯ ಪ್ರಕಾರ ಪ್ರತಿಫಲ ನೀಡಲಿಕ್ಕಾಗಿ. ಅತ್ತ ಧಿಕ್ಕಾರಿಗಳಿಗೆ, ಕುದಿಯುವ ಪಾನೀಯ ಹಾಗೂ ಕಠಿಣ ಶಿಕ್ಷೆ ಇದೆ – ಅವರು ಧಿಕ್ಕರಿಸಿದ್ದಕ್ಕಾಗಿ.
5. ಅವನೇ, ಸೂರ್ಯನನ್ನು ಉಜ್ವಲವಾಗಿ ಹಾಗೂ ಚಂದ್ರನನ್ನು ಪ್ರಕಾಶಮಾನವಾಗಿ ಮಾಡಿದವನು ಮತ್ತು ಅದಕ್ಕೆ ಹಂತಗಳನ್ನು ನಿಶ್ಚಯಿಸಿದವನು – ನೀವು ವರ್ಷಗಳ ಎಣಿಕೆ ಮತ್ತು ಲೆಕ್ಕವನ್ನು ಅರಿಯುವಂತಾಗಲಿಕ್ಕಾಗಿ. ಅಲ್ಲಾಹನು ಇವೆಲ್ಲವನ್ನೂ ನ್ಯಾಯೋಚಿತವಾಗಿಯೇ ಸೃಷ್ಟಿಸಿರುವನು. ಅರಿವು ಉಳ್ಳವರಿಗಾಗಿ ಅವನು ತನ್ನ ನಿದರ್ಶನಗಳನ್ನು ವಿವರಿಸುತ್ತಾನೆ .
6. ಖಂಡಿತವಾಗಿಯೂ ರಾತ್ರಿ ಮತ್ತು ಹಗಲುಗಳ ಬದಲಾವಣೆಯಲ್ಲಿ ಮತ್ತು ಅಲ್ಲಾಹನು ಆಕಾಶಗಳಲ್ಲಿ ಹಾಗೂ ಭೂಮಿಯಲ್ಲಿ ಸೃಷ್ಟಿಸಿರುವ ಎಲ್ಲ ವಸ್ತುಗಳಲ್ಲಿ ಸತ್ಯನಿಷ್ಠರಿಗೆ ಸೂಚನೆಗಳಿವೆ.
7. ಖಂಡಿತವಾಗಿಯೂ, ನಮ್ಮನ್ನು ಭೇಟಿಯಾಗಲಿಕ್ಕಿದೆ ಎಂದು ನಿರೀಕ್ಷಿಸದವರು, ಇಹಲೋಕದ ಬದುಕಿನಲ್ಲೇ ಸಂತುಷ್ಟರಾಗಿದ್ದಾರೆ ಹಾಗೂ ಅದರಲ್ಲೇ ತೃಪ್ತರಾಗಿದ್ದಾರೆ. ಹಾಗೆಯೇ, ನಮ್ಮ ಸೂಚನೆಗಳ ಬಗ್ಗೆ ನಿಶ್ಚಿಂತರಾಗಿರುವವರು-
8. ಅವರೇ – ಅವರ ಸಂಪಾದನೆಯ ಫಲವಾಗಿ ನರಕಾಗ್ನಿಯೇ ಅವರ ಅಂತಿಮ ನೆಲೆ ಯಾಗಿರುವುದು.
9. ಸತ್ಯದಲ್ಲಿ ವಿಶ್ವಾಸವಿಟ್ಟು ಸತ್ಕರ್ಮ ಮಾಡಿದವರನ್ನು ಖಂಡಿತವಾಗಿಯೂ ಅವರ ಒಡೆಯನು ಅವರ ವಿಶ್ವಾಸದ ಕಾರಣ ಸರಿದಾರಿಯಲ್ಲಿ ನಡೆಸುವನು. ಕೊಡುಗೆಗಳು ತುಂಬಿದ ಸ್ವರ್ಗತೋಟಗಳಲ್ಲಿ. ಅವರ ತಳದಲ್ಲಿ ನದಿಗಳು ಹರಿಯುತ್ತಿರುವವು.
10. ‘‘ಅಲ್ಲಾಹನೇ, ನೀನು ಪರಮ ಪಾವನನು’’ ಎಂಬುದೇ ಅಲ್ಲಿ ಅವರ ಮೊರೆಯಾಗಿರುವುದು ಮತ್ತು ‘ಸಲಾಮ್’ (ಶಾಂತಿ) ಎಂಬುದೇ ಅಲ್ಲಿ ಅವರ (ಪರಸ್ಪರ) ಶುಭಾಶಯವಾಗಿರುವುದು ಮತ್ತು ‘‘ಎಲ್ಲ ಹೊಗಳಿಕೆಗಳು ಎಲ್ಲ ಜಗತ್ತುಗಳ ಒಡೆಯನಾದ ಅಲ್ಲಾಹನಿಗೇ ಮೀಸಲು’’ ಎಂಬುದು ಅವರ ಅಂತಿಮ ಮೊರೆಯಾಗಿರುವುದು.
11. ಜನರು ಅವಸರ ಪಡುತ್ತಾರೆಂದು ಅಲ್ಲಾಹನು ಅವಸರವಾಗಿ ಒಳಿತಿನ ಬದಲು ಕೆಡುಕನ್ನು ಕಳುಹಿಸಿ ಬಿಟ್ಟಿದ್ದರೆ, ಅವರ ಅವಧಿಯು ಈಗಾಗಲೇ ಮುಗಿದಿರುತ್ತಿತ್ತು. ನಮ್ಮನ್ನು ಭೇಟಿಯಾಗಲಿಕ್ಕಿದೆ ಎಂಬ ನಿರೀಕ್ಷೆ ಇಲ್ಲದವರನ್ನು ನಾವು ಅವರ ವಿದ್ರೋಹದಲ್ಲೇ ಅಲೆಯುತ್ತಿರಲು ಬಿಟ್ಟು ಬಿಡುತ್ತೇವೆ.
12. ಮನುಷ್ಯನಿಗೆ ಸಂಕಟವೇನಾದರೂ ಎದುರಾದಾಗ ಅವನು ಮಲಗಿದಲ್ಲೂ, ಕುಳಿತಲ್ಲೂ, ನಿಂತಲ್ಲೂ ನಮ್ಮನ್ನು ಕರೆಯಲಾರಂಭಿಸುತ್ತಾನೆ. ಆದರೆ ನಾವು ಅವನ ಆ ಸಂಕಟವನ್ನು ನಿವಾರಿಸಿದಾಗ ಅವನು, ತನ್ನ ಸಂಕಟದ ವೇಳೆ ತಾನೆಂದೂ ನಮ್ಮನ್ನು ಕರೆದೇ ಇರಲಿಲ್ಲವೋ ಎಂಬಂತೆ ನಡೆದು ಬಿಡುತ್ತಾನೆ. ಈ ರೀತಿ ಅತಿರೇಕವೆಸಗುವವರಿಗೆ, ಅವರು ಮಾಡುವುದೆಲ್ಲವನ್ನೂ ನಾವು ಚಂದಗಾಣಿಸಿಬಿಡುತ್ತೇವೆ.
13. ನಿಮಗಿಂತ ಹಿಂದೆ ನಾವು ಹಲವಾರು ಜನಾಂಗಗಳನ್ನು, ಅವರು ಅಕ್ರಮವೆಸಗಿದಾಗ ನಾಶಮಾಡಿರುವೆವು. ನಿಜವಾಗಿ, ಅವರ ಬಳಿಗೆ ಅವರ (ಕಾಲದ) ದೇವದೂತರುಗಳು ಸ್ಪಷ್ಟವಾದ ಪುರಾವೆಗಳೊಂದಿಗೆ ಬಂದಿದ್ದರು. ಆದರೆ ಅವರು ನಂಬುವವರಾಗಿರಲಿಲ್ಲ. ಅಪರಾಧಿ ಜನಾಂಗಗಳಿಗೆ ನಾವು ಇದೇ ರೀತಿ ಪ್ರತಿಫಲ ನೀಡುತ್ತೇವೆ.
14. ಅವರ ಬಳಿಕ, ನೀವು ಎಂತಹ ಕರ್ಮಗಳನ್ನು ಮಾಡುತ್ತೀರಿ ಎಂಬುದನ್ನು ನೋಡಲು ನಾವು ನಿಮ್ಮನ್ನು ಭೂಮಿಯಲ್ಲಿ ಉತ್ತರಾಧಿಕಾರಿಗಳಾಗಿ ಮಾಡಿದೆವು.
15. ಬಹಳ ಸ್ಪಷ್ಟವಾದ ನಮ್ಮ ವಚನಗಳನ್ನು ಅವರಿಗೆ ಓದಿ ಕೇಳಿಸಲಾದಾಗ, ನಮ್ಮನ್ನು ಭೇಟಿಯಾಗುವ ನಿರೀಕ್ಷೆ ಇಲ್ಲದವರು, ಇದರ ಬದಲಿಗೆ ಬೇರೊಂದು ಕುರ್ಆನ್ ಅನ್ನು ತನ್ನಿರಿ ಅಥವಾ ಇದನ್ನು ತಿದ್ದಿರಿ ಎನ್ನುತ್ತಾರೆ. (ದೂತರೇ,) ಹೇಳಿರಿ; ನನ್ನ ಇಚ್ಛೆಯಿಂದ ಇದನ್ನು ತಿದ್ದುವ ಅಧಿಕಾರ ನನಗಿಲ್ಲ. ನಾನಂತು ನನ್ನೆಡೆಗೆ ಕಳಿಸಲಾಗಿರುವ ದಿವ್ಯವಾಣಿಯನ್ನು ಮಾತ್ರ ಅನುಸರಿಸುತ್ತೇನೆ. ಒಂದು ವೇಳೆ ನಾನು ನನ್ನ ಒಡೆಯನ ಆಜ್ಞೆಯನ್ನು ಮೀರಿ ನಡೆದರೆ, ಒಂದು ಮಹಾನ್ ದಿನದ ಶಿಕ್ಷೆಯ ಭಯ ನನಗಿದೆ.
16. ಹೇಳಿರಿ; ಒಂದು ವೇಳೆ ಅಲ್ಲಾಹನು ಹಾಗೆ ಬಯಸಿದ್ದರೆ ನಾನು ಇದನ್ನು ನಿಮಗೆ ಓದಿ ಕೇಳಿಸುತ್ತಿರಲಿಲ್ಲ ಮತ್ತು ಇದರ ಕುರಿತು ನಿಮಗೆ ಮಾಹಿತಿಯನ್ನೂ ನೀಡುತ್ತಿರಲಿಲ್ಲ. ನಾನು ಈ ಹಿಂದೆ ನಿಮ್ಮ ನಡುವೆ ಒಂದು ಜೀವಮಾನವನ್ನೇ ಕಳೆದಿದ್ದೇನೆ. ನೀವೇನು ವಿವೇಚಿಸುವುದಿಲ್ಲವೇ?
17. ಅಲ್ಲಾಹನ ಮೇಲೆ ಸುಳ್ಳನ್ನು ಆರೋಪಿಸುವಾತನಿಗಿಂತ ಅಥವಾ ಅವನ ವಚನಗಳನ್ನು ಸುಳ್ಳೆಂದು ತಿರಸ್ಕರಿಸುವಾತನಿಗಿಂತ ದೊಡ್ಡ ಅಕ್ರಮಿ ಯಾರಿದ್ದಾನೆ? ಇಂತಹ ಅಪರಾಧಿಗಳು ಖಂಡಿತ ಸಫಲರಾಗಲಾರರು.
18. ಅವರು ಅಲ್ಲಾಹನ ಹೊರತಾಗಿ, ತಮಗೆ ಯಾವುದೇ ನಷ್ಟವನ್ನುಂಟು ಮಾಡಲಾಗದವರನ್ನು ಮತ್ತು ತಮಗೆ ಯಾವುದೇ ಲಾಭವನ್ನುಂಟು ಮಾಡಲಾಗದವರನ್ನು ಪೂಜಿಸುತ್ತಾರೆ ಮತ್ತು ‘‘ಇವರು ಅಲ್ಲಾಹನ ಬಳಿ ತಮ್ಮ ಶಿಫಾರಸ್ಸುದಾರರು’’ ಎನ್ನುತ್ತಾರೆ. ನೀವೇನು ಅಲ್ಲಾಹನಿಗೆ – ಆಕಾಶಗಳಲ್ಲಾಗಲಿ ಭೂಮಿಯಲ್ಲಾಗಲಿ ಅವನ ತಿಳುವಳಿಕೆಯಲ್ಲಿ ಇಲ್ಲದ ವಿಷಯವೊಂದನ್ನು ತಿಳಿಸುತ್ತಿರುವಿರಾ? ಅವನು (ಅಲ್ಲಾಹನು) ಪಾವನನಾಗಿದ್ದಾನೆ ಮತ್ತು ಅವರು ಪಾಲುದಾರರಾಗಿಸುವ ಎಲ್ಲವುಗಳಿಗಿಂತ ತುಂಬಾ ಉನ್ನತನಾಗಿದ್ದಾನೆ.
19. ಮಾನವರೆಲ್ಲರೂ ಒಂದೇ ಸಮುದಾಯವಾಗಿದ್ದರು. ತರುವಾಯ ಅವರು ಭಿನ್ನತೆ ತಾಳಿದರು. ನಿಮ್ಮ ಒಡೆಯನ ಕಡೆಯಿಂದ ಮೊದಲೇ ಒಂದು ನಿರ್ಧಾರ ಇಲ್ಲದೆ ಇದ್ದಿದ್ದರೆ, ಅವರು ಪರಸ್ಪರ ಭಿನ್ನತೆ ತಾಳಿರುವ ವಿಷಯವನ್ನು ಇತ್ಯರ್ಥಗೊಳಿಸಿ ಬಿಡಲಾಗುತ್ತಿತ್ತು.
20. ಆತನಿಗೆ (ದೂತರಿಗೆ) ಆತನ ಒಡೆಯನ ಕಡೆಯಿಂದ ಯಾವುದೇ ನಿದರ್ಶನವನ್ನು ಯಾಕೆ ಇಳಿಸಿಕೊಡಲಾಗಿಲ್ಲ? ಎಂದು ಅವರು ಕೇಳುತ್ತಾರೆ. ಹೇಳಿರಿ; ಗುಪ್ತ ವಿಚಾರಗಳೆಲ್ಲಾ ಅಲ್ಲಾಹನಿಗೇ ಸೇರಿವೆ. ಆದ್ದರಿಂದ ನೀವು ಕಾಯಿರಿ. ನಿಮ್ಮ ಜೊತೆ ನಾನೂ ಕಾಯುತ್ತೇನೆ.
21. ಜನರು ಯಾವುದಾದರೂ ಸಂಕಟದಲ್ಲಿ ಸಿಲುಕಿಕೊಂಡ ಬಳಿಕ ನಾವು ಅವರಿಗೆ ಅನುಗ್ರಹದ ರುಚಿ ಉಣಿಸಿದರೆ, ಆಗಲೇ ಅವರು ನಮ್ಮ ವಚನಗಳ ವಿರುದ್ಧ ಯೋಜನೆಗಳನ್ನು ರೂಪಿಸಲಾರಂಭಿಸುತ್ತಾರೆ. ಹೇಳಿರಿ; ಯೋಜನೆಗಳ ವಿಷಯದಲ್ಲಿ ಅಲ್ಲಾಹನು ಹೆಚ್ಚು ಕ್ಷಿಪ್ರನಾಗಿದ್ದಾನೆ. ನಮ್ಮ ದೂತರು (ಮಲಕ್ಗಳು) ನೀವು ಮಾಡುತ್ತಿರುವ ಎಲ್ಲ ಯೋಜನೆಗಳನ್ನು ದಾಖಲಿಸಿಡುತ್ತಿದ್ದಾರೆ.
22. ನಿಮ್ಮನ್ನು ನೆಲದಲ್ಲೂ ಜಲದಲ್ಲೂ ಸಾಗಿಸುವವನು ಅವನೇ. ನೀವು ಹಡಗುಗಳಲ್ಲಿರುವಾಗ – ಅವುಗಳು ಜನರನ್ನು ಹೊತ್ತು ಪೂರಕ ಗಾಳಿಯ ನೆರವಿನಿಂದ ಮುನ್ನಡೆಯುತ್ತವೆ ಮತ್ತು ಅವರು ಅದರಿಂದ ತುಂಬಾ ಸಂತುಷ್ಟರಾಗಿ ಬಿಡುತ್ತಾರೆ. (ಆ ಬಳಿಕ) ಹಠಾತ್ತನೆ ಸುಳಿಗಾಳಿಯು ಅವರನ್ನು ತಟ್ಟಿದಾಗ ಹಾಗೂ ಎಲ್ಲ ದಿಕ್ಕುಗಳಿಂದ ಅಲೆಗಳು ಅವರೆಡೆಗೆ ಏರಿ ಬಂದಾಗ, ತಾವು ಅವುಗಳೊಳಗೆ ಸಿಕ್ಕಿಕೊಂಡೆವು ಎಂದು ಅವರಿಗೆ ಅನಿಸುತ್ತದೆ. (ಆಗ) ಅವರು ಧರ್ಮವನ್ನು ಸಂಪೂರ್ಣವಾಗಿ ಅಲ್ಲಾಹನಿಗೆ ಮೀಸಲಾಗಿಟ್ಟು ಅವನಿಗೆ ಮೊರೆ ಇಡುತ್ತಾರೆ (ಮತ್ತು) ‘‘ನೀನು ನಮ್ಮನ್ನು ಇದರಿಂದ ರಕ್ಷಿಸಿದರೆ ನಾವು ಖಂಡಿತ ಕೃತಜ್ಞರ ಸಾಲಿಗೆ ಸೇರುವೆವು’’ (ಎನ್ನುತ್ತಾರೆ).
23. ಕೊನೆಗೆ ಅವನು ಅವರನ್ನು ರಕ್ಷಿಸಿದಾಗ, ಅವರು ಭೂಮಿಯಲ್ಲಿ ಅನ್ಯಾಯವಾಗಿ ಮೆರೆಯಲಾರಂಭಿಸುತ್ತಾರೆ. ಮಾನವರೇ, ನಿಮ್ಮ ಬಂಡಾಯವು ಖಂಡಿತ ನಿಮ್ಮ ಪಾಲಿಗೇ ವಿನಾಶಕಾರಿಯಾಗಿದೆ. ಇಹಲೋಕ ಜೀವನದ ಬಂಡವಾಳ (ತೀರಾ ಸೀಮಿತ). ಆ ಬಳಿಕ ನೀವು ನಮ್ಮ ಕಡೆಗೇ ಮರಳುವಿರಿ. ಆಗ, ನೀವು ಏನೆಲ್ಲಾ ಮಾಡುತ್ತಿದ್ದಿರಿ ಎಂಬುದನ್ನು ನಿಮಗೆ ನಾವು ತಿಳಿಸುವೆವು.
24. ಇಹಲೋಕ ಜೀವನದ ಉದಾಹರಣೆಯು ಹೀಗಿದೆ; ನಾವು ಆಕಾಶದಿಂದ ನೀರನ್ನು ಸುರಿಸಿದೆವು. ಅದರಿಂದ, ಮಾನವರು ಮತ್ತು ಜಾನುವಾರುಗಳು ತಿನ್ನುವಂತಹ ಭೂಮಿಯ ವಿವಿಧ ಬೆಳೆಗಳು ಬೆಳೆದವು. ಕೊನೆಗೆ, ಭೂಮಿಯು ತನ್ನ ಸಹಜ ಆಭರಣಗಳೊಂದಿಗೆ ಸಂಪನ್ನವಾಗಿ, ಅಲಂಕೃತವಾದಾಗ, ಭೂ ಮಾಲಕರುಗಳು, ಅದು ಸಂಪೂರ್ಣವಾಗಿ ತಮ್ಮ ನಿಯಂತ್ರಣದಲ್ಲಿದೆ ಎಂದು ಭಾವಿಸಿದರು. ಆಗಲೇ, ರಾತ್ರಿ ಅಥವಾ ಹಗಲಲ್ಲಿ ನಮ್ಮ ಆದೇಶ ಬಂದು ಬಿಟ್ಟಿತು ಮತ್ತು ನಾವು, ಅಲ್ಲಿ ನಿನ್ನೆ ಏನೂ ಇರಲೇ ಇಲ್ಲವೆಂಬಂತೆ ಅದನ್ನು ಧ್ವಂಸಗೊಳಿಸಿಬಿಟ್ಟೆವು. ಈ ರೀತಿ ನಾವು ನಮ್ಮ ದೃಷ್ಟಾಂತಗಳನ್ನು ವಿವರಿಸುತ್ತೇವೆ – ಚಿಂತಿಸುವವರಿಗಾಗಿ.
25. ಅಲ್ಲಾಹನು ಶಾಂತಿ ಭವನದೆಡೆಗೆ ಕರೆಯುತ್ತಾನೆ ಮತ್ತು ತಾನಿಚ್ಛಿಸುವವರನ್ನು ಸ್ಥಿರವಾದ ಸನ್ಮಾರ್ಗದೆಡೆಗೆ ನಡೆಸುತ್ತಾನೆ.
26. ಒಳಿತನ್ನು ಸಂಪಾದಿಸಿದವರಿಗೆ, ಒಳ್ಳೆಯ ಪ್ರತಿಫಲ, ಮಾತ್ರವಲ್ಲ, ಅದಕ್ಕಿಂತಲೂ ಹೆಚ್ಚಿನದು ಸಿಗಲಿದೆ. ಕರಾಳತೆಯಾಗಲಿ ಅಪಮಾನವಾಗಲಿ ಅವರ ಮುಖವನ್ನು ಆವರಿಸಲಾರದು. ಅವರೇ ಸ್ವರ್ಗದವರು. ಅದರಲ್ಲಿ ಅವರು ಸದಾಕಾಲ ಇರುವರು.
27. ಇನ್ನು ಕೆಡುಕುಗಳನ್ನು ಸಂಪಾದಿಸಿದವರು – ಅವರ ಪ್ರತಿಯೊಂದು ಕೆಡುಕಿಗೆ ಅಷ್ಟೇ ಪ್ರತಿಫಲ ಸಿಗುವುದು. ಅಪಮಾನವು ಅವರನ್ನು ಆವರಿಸಿರುವುದು. ಅಲ್ಲಾಹನಿಂದ ಅವರನ್ನು ರಕ್ಷಿಸುವವರು ಯಾರೂ ಇರಲಾರರು. ಕಾರ್ಗತ್ತಲು ತುಂಬಿದ ರಾತ್ರಿಯ ಒಂದು ಪದರವು ಅವರ ಮುಖಗಳನ್ನು ಮುಚ್ಚಿದಂತಿರುವುದು. ಅವರೇ ನರಕದವರು. ಅದರಲ್ಲಿ ಅವರು ಸದಾಕಾಲ ಇರುವರು.
28. ನಾವು ಅವರೆಲ್ಲರನ್ನೂ ಒಂದೆಡೆ ಸೇರಿಸುವ ದಿನ, ಬಹುದೇವಾರಾಧಕರೊಡನೆ ನಾವು ಹೇಳುವೆವು; ‘‘ನೀವು ಮತ್ತು ನಿಮ್ಮ ದೇವರುಗಳು ನಿಮ್ಮ ಸ್ಥಾನದಲ್ಲಿ ನಿಂತುಕೊಂಡಿರಿ.’’ ತರುವಾಯ ನಾವು ಅವರ ನಡುವೆ ಒಡಕು ಮೂಡಿಸುವೆವು. ಆಗ ಅವರ ದೇವರುಗಳು (ತಮ್ಮ ಭಕ್ತರೊಡನೆ) ಹೇಳುವರು; ‘‘ನೀವು ಎಂದೂ ನಮ್ಮನ್ನು ಪೂಜಿಸುತ್ತಿರಲಿಲ್ಲ’’.
29. ‘‘ನಿಮ್ಮ ಹಾಗೂ ನಮ್ಮ ನಡುವೆ ಸಾಕ್ಷಿಯಾಗಿ ಅಲ್ಲಾಹನೇ ಸಾಕು. ನಮಗಂತು ನೀವು ಮಾಡುತ್ತಿದ್ದ ಪೂಜೆಯ ಅರಿವೇ ಇರಲಿಲ್ಲ.’’
30. ಅಂದು ಪ್ರತಿಯೊಬ್ಬನೂ ತಾನು ಈ ಹಿಂದೆ ಮಾಡಿದ್ದೆಲ್ಲವನ್ನೂ ಸ್ವತಃ ಅನುಭವಿಸುವನು ಮತ್ತು ಎಲ್ಲವನ್ನೂ ಅವರ ನೈಜ ಪೋಷಕನಾದ ಅಲ್ಲಾಹನೆಡೆಗೆ ಮರಳಿಸಲಾಗುವುದು. ಅವರು ಕಟ್ಟಿಕೊಂಡಿದ್ದ ಎಲ್ಲ ಕೃತಕ ಆಶ್ರಯಗಳೂ ಅವರಿಂದ ಕಳೆದು ಹೋಗಿರುವವು.
31. ಹೇಳಿರಿ; ‘‘ಆಕಾಶದಿಂದಲೂ ಭೂಮಿಯಿಂದಲೂ ನಿಮಗೆ ಆಹಾರವನ್ನು ಒದಗಿಸುವವನು ಯಾರು? ಕೇಳುವ ಹಾಗೂ ನೋಡುವ ಸಾಮರ್ಥ್ಯಗಳ ಒಡೆಯನು ಯಾರು? ನಿರ್ಜೀವಿಯಿಂದ ಜೀವಿಯನ್ನು ಮತ್ತು ಜೀವಿಯಿಂದ ನಿರ್ಜೀವಿಯನ್ನು ಹೊರ ತೆಗೆಯುವವನು ಯಾರು? ಮತ್ತು ವಿಶ್ವ ವ್ಯವಸ್ಥೆಯನ್ನು ನಡೆಸುತ್ತಿರುವವನು ಯಾರು?’’- ಅವರು ‘‘ಅಲ್ಲಾಹ್’’ ಎಂದು ಹೇಳುವರು. ಹೇಳಿರಿ; ‘‘(ಇಷ್ಟಾಗಿಯೂ) ನೀವು ಅಂಜುವುದಿಲ್ಲವೇ?’’
32. ಆ ಅಲ್ಲಾಹನೇ ನಿಮ್ಮ ನಿಜವಾದ ಒಡೆಯನು. ಇನ್ನು ಸತ್ಯದ ಬಳಿಕ ಇರುವುದು ಮಿಥ್ಯವಲ್ಲದೆ ಮತ್ತೇನು? ಹೀಗಿರುತ್ತಾ ನೀವು ಅದೆಲ್ಲಿ ಅಲೆದಾಡುತ್ತಿರುವಿರಿ?’’
33. ಹೀಗೆ, ‘‘ಅವರು ನಂಬುವವರಲ್ಲ’’ ಎಂಬ ನಿಮ್ಮ ಒಡೆಯನ ಮಾತು, ಅವಿಧೇಯರ ಪಾಲಿಗೆ ಸತ್ಯವಾಯಿತು.
34. ಹೇಳಿರಿ; (ದೇವತ್ವದಲ್ಲಿನ) ನಿಮ್ಮ ಪಾಲುದಾರರ ಪೈಕಿ, ಸೃಷ್ಟಿಯನ್ನು ಆರಂಭಿಸುವವರು ಮತ್ತು ಅದನ್ನು ಪುನರಾವರ್ತಿಸುವವರು ಯಾರಾದರೂ ಇದ್ದಾರೆಯೇ? ಹೇಳಿರಿ; ಅಲ್ಲಾಹನೇ ಸೃಷ್ಟಿಯನ್ನು ಆರಂಭಿಸುತ್ತಾನೆ ಮತ್ತು ಅವನೇ ಅದನ್ನು ಪುನರಾವರ್ತಿಸುತ್ತಾನೆ. ಹೀಗಿರುತ್ತಾ ನೀವು ಅದೆಲ್ಲಿ ಅಲೆಯುತ್ತಿರುವಿರಿ?
35. ಹೇಳಿರಿ; (ದೇವತ್ವದಲ್ಲಿನ) ನಿಮ್ಮ ಪಾಲುದಾರರ ಪೈಕಿ, ಸತ್ಯದೆಡೆಗೆ ಮಾರ್ಗದರ್ಶನ ಮಾಡುವವರು ಯಾರಾದರೂ ಇದ್ದಾರೆಯೇ? ಹೇಳಿರಿ; ಅಲ್ಲಾಹನೇ ಸತ್ಯದೆಡೆಗೆ ಮಾರ್ಗದರ್ಶನ ಮಾಡುತ್ತಾನೆ. ಅನುಸರಣೆಗೆ ಹೆಚ್ಚು ಅರ್ಹನು, ಸತ್ಯದೆಡೆಗೆ ಮಾರ್ಗದರ್ಶನ ಮಾಡುವವನೋ ಅಥವಾ ಯಾರಾದರೂ ತನಗೆ ಸರಿದಾರಿ ತೋರದಿದ್ದರೆ ಸ್ವತಃ ಸರಿದಾರಿಯನ್ನು ಕಾಣಲಾಗದವನೋ? ನಿಮಗೇನಾಗಿದೆ? ನೀವು ಅದೆಂತಹ ನಿರ್ಧಾರಗಳನ್ನ್ನು ಕೈಗೊಳ್ಳುತ್ತಿರುವಿರಿ?
36. ಅವರಲ್ಲಿ ಹೆಚ್ಚಿನವರು ಕೇವಲ ಊಹೆಯನ್ನಷ್ಟೇ ಅನುಸರಿಸುತ್ತಿದ್ದಾರೆ. ಖಂಡಿತವಾಗಿಯೂ ಊಹೆಯು ಸತ್ಯಕ್ಕೆ ಕಿಂಚಿತ್ತೂ ಪರ್ಯಾಯವಾಗಲಾರದು. ಅವರು ಮಾಡುತ್ತಿರುವುದನ್ನೆಲ್ಲಾ ಅಲ್ಲಾಹನು ಚೆನ್ನಾಗಿ ಬಲ್ಲನು.
37. ಈ ಕುರ್ಆನ್, ಅಲ್ಲಾಹನ ಹೊರತು ಬೇರೆ ಯಾರಾದರೂ ರಚಿಸಬಹುದಾದ ಕೃತಿಯಲ್ಲ್ಲ . ನಿಜವಾಗಿ ಇದು, ಈಗಾಗಲೇ ತನ್ನ ಮುಂದಿರುವವುಗಳನ್ನು (ಗತಕಾಲದ ದಿವ್ಯ ಗ್ರಂಥಗಳನ್ನು) ಸಮರ್ಥಿಸುತ್ತದೆ ಮತ್ತು ದಿವ್ಯ ಆದೇಶಗಳನ್ನು ವಿವರಿಸುತ್ತದೆ. ಇದು ಸರ್ವಲೋಕಗಳ ಒಡೆಯನ ಕಡೆಯಿಂದ ಬಂದಿದೆ ಎಂಬ ಬಗ್ಗೆ ಸಂದೇಹವೇ ಇಲ್ಲ.
38. (ದೂತರೇ,) ‘‘ಈತನೇ ಇದನ್ನು ರಚಿಸಿದ್ದಾನೆ’’ ಎಂದು ಅವರು ಹೇಳುತ್ತಾರೆಯೇ? ನೀವು ಹೇಳಿರಿ; ನೀವು ಸತ್ಯವಂತರಾಗಿದ್ದರೆ, ಇಂತಹ ಒಂದು ಅಧ್ಯಾಯವನ್ನಾದರೂ ರಚಿಸಿ ತನ್ನಿರಿ ಮತ್ತು (ಅದಕ್ಕಾಗಿ) ಅಲ್ಲಾಹನ ಹೊರತು ನಿಮಗೆ ಸಾಧ್ಯವಿರುವ ಎಲ್ಲರನ್ನೂ ಕರೆಯಿರಿ.
39. ನಿಜವಾಗಿ ಅವರು, ತಮ್ಮ ಜ್ಞಾನದ ವ್ಯಾಪ್ತಿಗೆ ಮೀರಿದ ಮತ್ತು ತಮ್ಮ ಮುಂದೆ ಸಾಕ್ಷಾತ್ಕಾರವಾಗಿಲ್ಲದ ಎಲ್ಲವನ್ನೂ ಸುಳ್ಳೆಂದು ಧಿಕ್ಕರಿಸುತ್ತಾರೆ. ಅವರ ಹಿಂದಿನವರೂ ಇದೇ ರೀತಿ (ದಿವ್ಯ ಸಂದೇಶವನ್ನು) ಸುಳ್ಳೆಂದು ಧಿಕ್ಕರಿಸಿದ್ದರು. (ಇಂತಹ) ಅಕ್ರಮಿಗಳ ಗತಿ ಏನಾಯಿತೆಂಬುದನ್ನು ನೋಡಿರಿ.
40. ಇದರಲ್ಲಿ (ದಿವ್ಯ ಸಂದೇಶದಲ್ಲಿ) ನಂಬಿಕೆ ಉಳ್ಳವರೂ ಅವರಲ್ಲಿದ್ದಾರೆ ಮತ್ತು ಇದರಲ್ಲಿ ನಂಬಿಕೆ ಇಲ್ಲದವರೂ ಅವರಲ್ಲಿದ್ದಾರೆ. ನಿಮ್ಮ ಒಡೆಯನು ಗೊಂದಲಕೋರರನ್ನು ಚೆನ್ನಾಗಿ ಬಲ್ಲನು.
41. ಅವರು ನಿಮ್ಮನ್ನು ಸುಳ್ಳನೆಂದು ಧಿಕ್ಕರಿಸಿದರೆ ನೀವು ಹೇಳಿರಿ; ನನಗೆ ನನ್ನ ಕರ್ಮ ಮತ್ತು ನಿಮಗೆ ನಿಮ್ಮ ಕರ್ಮ. ನಾನು ಮಾಡುವ ಯಾವ ಕರ್ಮಕ್ಕೂ ನೀವು ಹೊಣೆಗಾರರಲ್ಲ ಮತ್ತು ನೀವು ಮಾಡುವ ಯಾವ ಕರ್ಮಕ್ಕೂ ನಾನು ಹೊಣೆಗಾರನಲ್ಲ.
42. ಅವರಲ್ಲಿ ಕೆಲವರು ನಿಮ್ಮೆಡೆಗೆ ಕಿವಿಗೊಟ್ಟಿರುತ್ತಾರೆ. ಆದರೆ ನೀವೇನು ಕಿವುಡರಿಗೆ ಕೇಳಿಸುವಿರಾ – ಅವರು ವಿವೇಚಿಸಲಾಗದವರಾಗಿದ್ದರೂ?
43. ಇನ್ನು, ಅವರಲ್ಲಿ ಕೆಲವರು ನಿಮ್ಮೆಡೆಗೆ ನೋಡುತ್ತಿರುತ್ತಾರೆ. ಆದರೆ, ನೀವೇನು ಕುರುಡರಿಗೆ ದಾರಿ ತೋರಿಸುವಿರಾ -ಅವರು ಏನನ್ನೂ ನೋಡಲಾಗದವರಾಗಿದ್ದರೂ?
44. ಅಲ್ಲಾಹನಂತು ಮಾನವರಿಗೆ ಖಂಡಿತ ಯಾವುದೇ ಅನ್ಯಾಯವನ್ನು ಮಾಡುವುದಿಲ್ಲ. ನಿಜವಾಗಿ ಮಾನವರೇ ತಮ್ಮ ಮೇಲೆ ಅನ್ಯಾಯವೆಸಗಿಕೊಳ್ಳುತ್ತಾರೆ.
45. ಅವನು ಅವರನ್ನೆಲ್ಲಾ ಒಟ್ಟು ಸೇರಿಸುವ ದಿನ, ತಾವು (ಇಹಲೋಕದಲ್ಲಿ) ಕಳೆದುದು, ಹಗಲಿನ ಕೇವಲ ಒಂದು ಕ್ಷಣಮಾತ್ರ ಎಂದು ಅವರಿಗೆ ಅನಿಸುವುದು ಮತ್ತು ಅವರು ಪರಸ್ಪರರನ್ನು ಗುರುತಿಸುವರು. ಅಲ್ಲಾಹನನ್ನು ಭೇಟಿಯಾಗಲಿಕ್ಕಿದೆ ಎಂಬುದನ್ನು ಸುಳ್ಳೆಂದು ತಿರಸ್ಕರಿಸಿದವರು ನಷ್ಟದಲ್ಲಿದ್ದಾರೆ. ಅವರು ಸರಿದಾರಿಗೆ ಬರುವವರೇ ಅಲ್ಲ.
46. (ದೂತರೇ,) ನಾವು ಅವರಿಗೆ ಆಶ್ವಾಸನೆ ನೀಡುತ್ತಿರುವ ಕೆಲವು ವಸ್ತುಗಳನ್ನು (ಈಗಲೇ) ನಿಮಗೆ ತೋರಿಸಿದರೂ, ಅಥವಾ (ಅದಕ್ಕೆ ಮುನ್ನ) ನಾವು ನಿಮ್ಮನ್ನು ಮೃತರಾಗಿಸಿದರೂ – ಅವರಂತು ನಮ್ಮ ಕಡೆಗೇ ಮರಳಿ ಬರಬೇಕಾಗಿದೆ. ಅವರು ಮಾಡುತ್ತಿರುವ ಎಲ್ಲದಕ್ಕೂ ಅಲ್ಲಾಹನೇ ಸಾಕ್ಷಿಯಾಗಿದ್ದಾನೆ.
47. ಪ್ರತಿಯೊಂದು ಸಮುದಾಯಕ್ಕೂ ಒಬ್ಬ ದೇವದೂತರಿದ್ದಾರೆ. ಅವರ ದೂತರು ಅವರ ಬಳಿಗೆ ಬಂದಾಗ, ಅವರ ನಡುವೆ ನ್ಯಾಯೋಚಿತವಾದ ತೀರ್ಮಾನ ನಡೆದು ಬಿಡುತ್ತದೆ. ಅವರ ಮೇಲೆ ಯಾವುದೇ ಅನ್ಯಾಯ ನಡೆಯುವುದಿಲ್ಲ.
48. ‘‘ನೀವು ಸತ್ಯವಂತರಾಗಿದ್ದರೆ ಆ ನಿಮ್ಮ ಆಶ್ವಾಸನೆಯು ಈಡೇರುವುದು ಯಾವಾಗ?’’ (ಎಂದು ಅವರು ಕೇಳುತ್ತಾರೆ)
49. (ದೂತರೇ,) ನೀವು ಹೇಳಿರಿ; ನನಗಂತು, ಅಲ್ಲಾಹನು ಇಚ್ಛಿಸದೆ ಸ್ವತಃ ನನ್ನ ಜೀವಕ್ಕೂ ಯಾವುದೇ ಲಾಭ ಅಥವಾ ನಷ್ಟವನ್ನುಂಟುಮಾಡುವ ಅಧಿಕಾರವಿಲ್ಲ. ಪ್ರತಿಯೊಂದು ಸಮುದಾಯಕ್ಕೂ ಒಂದು ಕಾಲ ನಿಶ್ಚಿತವಾಗಿದೆ. ಆ ಕಾಲವು ಬಂದು ಬಿಟ್ಟಾಗ ಅದನ್ನು ಕ್ಷಣಮಾತ್ರಕ್ಕಾದರೂ ಹಿಂದೂಡಲು ಅಥವಾ ಮುಂದೂಡಲು ಅವರಿಗೆ ಸಾಧ್ಯವಾಗದು.
50. ಹೇಳಿರಿ; ಅವನ ಶಿಕ್ಷೆಯು ರಾತ್ರಿ ಅಥವಾ ಹಗಲಲ್ಲಿ ನಿಮ್ಮ ಮೇಲೆ ಬಂದೆರಗಿದರೆ (ಏನಾದೀತೆಂದು) ನೀವು ಚಿಂತಿಸಿ ನೋಡಿರುವಿರಾ? ಅದರಲ್ಲಿ, ಅಪರಾಧಿಗಳು ಆತುರ ಪಡುವ ಅದಾವ ವಿಶೇಷತೆ ಇದೆ?
51. ನೀವೇನು, ಅದು ಬಂದು ಬಿಟ್ಟಾಗ ಮಾತ್ರವೇ ಅದನ್ನು ನಂಬುವಿರಾ? (ಆಗ ಹೇಳಲಾಗುವುದು;) ಈಗ ನಂಬುತ್ತಿರುವಿರಾ? ನೀವಂತು ಇದಕ್ಕಾಗಿ ತುಂಬಾ ಅವಸರ ಪಡುತ್ತಿದ್ದಿರಿ!
52. ಆ ಬಳಿಕ ಅಕ್ರಮಿಗಳೊಡನೆ ಹೇಳಲಾಗುವುದು; ಸವಿಯಿರಿ ಶಾಶ್ವತ ಯಾತನೆಯನ್ನು. ನಿಮ್ಮ ಶ್ರಮದ ಪ್ರತಿಫಲವಲ್ಲದೆ ಬೇರೇನಾದರೂ ನಿಮಗೆ ಸಿಗಲಿಕ್ಕಿದೆಯೇ?
53. ಅದು ಸತ್ಯವೇ? ಎಂದು ಅವರು ನಿಮ್ಮಿಂದ ತಿಳಿಯಬಯಸುತ್ತಾರೆ. ಹೇಳಿರಿ; ಹೌದು, ನನ್ನ ಒಡೆಯನ ಆಣೆ, ಅದು ಖಂಡಿತ ಸತ್ಯವಾಗಿದೆ ಮತ್ತು ಅದರಿಂದ ತಪ್ಪಿಸಿಕೊಳ್ಳಲು ನಿಮಗೆ ಖಂಡಿತ ಸಾಧ್ಯವಾಗದು.
54. ಅಕ್ರಮವೆಸಗಿದ ಪ್ರತಿಯೊಬ್ಬನ ಬಳಿ, ಭೂಮಿಯಲ್ಲಿರುವ ಎಲ್ಲವೂ ಇದ್ದು, ಅವನು ಅದನ್ನು ಪರಿಹಾರವಾಗಿ ಕೊಟ್ಟರೂ (ತಪ್ಪಿಸಿಕೊಳ್ಳಲು ಸಾಧ್ಯವಾಗದು). ಅವರು ಶಿಕ್ಷೆಯನ್ನು ಕಂಡಾಗ, ಒಳಗೊಳಗೇ ಪಶ್ಚಾತ್ತಾಪ ಪಡುವರು. ಅವರ ನಡುವೆ ನ್ಯಾಯೋಚಿತವಾಗಿ ತೀರ್ಮಾನ ನಡೆಸಿ ಬಿಡಲಾಗುವುದು ಮತ್ತು ಅವರ ಮೇಲೆ ಯಾವುದೇ ಅನ್ಯಾಯ ನಡೆಯದು.
55. ತಿಳಿಯಿರಿ! ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿ ಇರುವುದೆಲ್ಲವೂ ಅಲ್ಲಾಹನಿಗೇ ಸೇರಿದೆ. ತಿಳಿಯಿರಿ! ಅಲ್ಲಾಹನ ವಾಗ್ದಾನವು ಖಂಡಿತ ಸತ್ಯ. ಆದರೆ ಅವರಲ್ಲಿ ಹೆಚ್ಚಿನವರು ಅರಿತಿಲ್ಲ.
56. ಅವನೇ ಜೀವಂತಗೊಳಿಸುವವನು ಮತ್ತು ಅವನೇ ಮರಣ ನೀಡುವವನು, ನೀವೆಲ್ಲಾ ಅವನೆಡೆಗೇ ಮರಳಿಸಲ್ಪಡುವಿರಿ.
57. ಮಾನವರೇ, ಇದೋ ಬಂದಿದೆ ನಿಮ್ಮೆಡೆಗೆ, ನಿಮ್ಮ ಒಡೆಯನ ಕಡೆಯಿಂದ ಒಂದು ಉಪದೇಶ (ಕುರ್ಆನ್). ನಿಮ್ಮ ಮನಸ್ಸುಗಳಲ್ಲಿರುವ ಎಲ್ಲದಕ್ಕೂ ಇದು ಪರಿಹಾರವಾಗಿದೆ. ಹಾಗೆಯೇ, ಇದು ನಂಬುವವರ ಪಾಲಿಗೆ ಮಾರ್ಗದರ್ಶಿ ಹಾಗೂ ಅನುಗ್ರಹವಾಗಿದೆ.
58. ಹೇಳಿರಿ; ಇದು ಅಲ್ಲಾಹನ ಔದಾರ್ಯ ಮತ್ತು ಅವನ ಅನುಗ್ರಹದ ಫಲವಾಗಿದೆ. ಇದಕ್ಕಾಗಿ ಜನರು ಸಂಭ್ರಮಿಸಲಿ. ಅವರು ಸಂಗ್ರಹಿಸುತ್ತಿರುವ ಎಲ್ಲವುಗಳಿಗಿಂತ ಇದು ಉತ್ತಮವಾಗಿದೆ.
59. ಹೇಳಿರಿ; ಅಲ್ಲಾಹನು ನಿಮಗೆ ಇಳಿಸಿಕೊಟ್ಟಿರುವ ಆಹಾರವನ್ನು ನೀವು ನೋಡಿದಿರಾ? ಅದರಲ್ಲಿ ನೀವೇ ಕೆಲವನ್ನು ನಿಷಿದ್ಧ ಹಾಗೂ ಕೆಲವನ್ನು ಸಮ್ಮತವೆಂದು ಗುರುತಿಸಿಕೊಂಡಿರುವಿರಿ. (ಹಾಗೆಮಾಡಲು) ಅಲ್ಲಾಹನು ನಿಮಗೆ ಅನುಮತಿ ನೀಡಿರುವನೇ? ಅಥವಾ ನೀವು ಅವನ ಮೇಲೆ ಸುಳ್ಳನ್ನು ಆರೋಪಿಸುತ್ತಿರುವಿರಾ?
60. ಅಲ್ಲಾಹನ ಮೇಲೆ ಸುಳ್ಳನ್ನು ಆರೋಪಿಸುವವರು, ಪುನರುತ್ಥಾನ ದಿನದ ಕುರಿತು ಏನೆಂದು ಭಾವಿಸಿಕೊಂಡಿದ್ದಾರೆ? ಖಂಡಿತವಾಗಿಯೂ ಅಲ್ಲಾಹನು ಎಲ್ಲ ಮಾನವರ ಪಾಲಿಗೆ ಉದಾರನಾಗಿದ್ದಾನೆ. ಆದರೆ ಅವರಲ್ಲಿ ಹೆಚ್ಚಿನವರು ಕೃತಜ್ಞತೆ ಸಲ್ಲಿಸುವುದಿಲ್ಲ.
61. ನೀವು ಇರುವ ಪ್ರತಿಯೊಂದು ಸನ್ನಿವೇಶಕ್ಕೆ , ಕುರ್ಆನ್ನ ಯಾವುದೇ ಭಾಗವನ್ನು ನೀವು ಓದಿದ್ದಕ್ಕೆ , ಮತ್ತು ನೀವು ನಿರತರಾಗಿರುವ ಪ್ರತಿಯೊಂದು ಕರ್ಮಕ್ಕೆ ನಾವು (ಅಲ್ಲಾಹನು) ಸಾಕ್ಷಿಯಾಗದೆ ಇರುವುದಿಲ್ಲ. ಹಾಗೆಯೇ, ಭೂಮಿಯಲ್ಲಾಗಲಿ ಆಕಾಶದಲ್ಲಾಗಲಿ ಇರುವ, ಕಣಗಾತ್ರದ ವಸ್ತು ಕೂಡಾ ನಿಮ್ಮ ಒಡೆಯನಿಂದ ಮರೆಯಾಗಿರುವುದಿಲ್ಲ. ಮಾತ್ರವಲ್ಲ, ಅದಕ್ಕಿಂತಲೂ ಸಣ್ಣದಾದ ಅಥವಾ ದೊಡ್ಡದಾದ ಯಾವ ವಸ್ತುವೂ ಒಂದು ಸ್ಪಷ್ಟವಾದ ಗ್ರಂಥದಲ್ಲಿ ದಾಖಲಾಗದೆ ಉಳಿದಿರುವುದಿಲ್ಲ.
62. ತಿಳಿಯಿರಿ! ಅಲ್ಲಾಹನ ಮಿತ್ರರಿಗೆ ಯಾವ ಭಯವೂ ಇಲ್ಲ ಮತ್ತು ಅವರು ದುಃಖಿತರೂ ಆಗಲಾರರು.
63. ಅವರು ಸತ್ಯದಲ್ಲಿ ನಂಬಿಕೆ ಇಟ್ಟು, ಧರ್ಮನಿಷ್ಠರಾಗಿ ಬದುಕಿದವರು.
64. ಅವರಿಗೆ ಈ ಲೋಕದಲ್ಲೂ, ಪರಲೋಕದಲ್ಲೂ ಶುಭವಾರ್ತೆ ಇದೆ. ಅಲ್ಲಾಹನ ಮಾತುಗಳು ಬದಲಾಗುವುದಿಲ್ಲ. ಅದು (ಅವನ ಶುಭವಾರ್ತೆ) ನಿಜಕ್ಕೂ ಮಹಾ ಸಾಫಲ್ಯವಾಗಿದೆ.
65. ಅವರ (ಧಿಕ್ಕಾರಿಗಳ) ಮಾತು ನಿಮ್ಮನ್ನು ದುಃಖಿಸದಿರಲಿ. ಖಂಡಿತವಾಗಿಯೂ ಗೌರವವು ಸಂಪೂರ್ಣವಾಗಿ ಅಲ್ಲಾಹನಿಗೇ ಸೇರಿದೆ. ಅವನು ಎಲ್ಲವನ್ನೂ ಕೇಳುವವನು ಮತ್ತು ಬಲ್ಲವನಾಗಿದ್ದಾನೆ.
66. ನಿಮಗೆ ತಿಳಿದಿರಲಿ, ಆಕಾಶಗಳಲ್ಲಿ ಹಾಗೂ ಭೂಮಿಯಲ್ಲಿ ಇರುವುದೆಲ್ಲವೂ ಅಲ್ಲಾಹನಿಗೇ ಸೇರಿದೆ. ಅಲ್ಲಾಹನ ಹೊರತು ಸಹಭಾಗಿಗಳನ್ನು ಪ್ರಾರ್ಥಿಸುವವರು ಅದೇನನ್ನು ಅನುಸರಿಸುತ್ತಿದ್ದಾರೆ? ನಿಜವಾಗಿ ಅವರು ಅನುಸರಿಸುತ್ತಿರುವುದು ತಮ್ಮ ಊಹೆಯನ್ನು ಮಾತ್ರ. ಅವರು ಕೇವಲ ಭ್ರಮಿಸುತ್ತಿದ್ದಾರೆ.
67. ಅವನೇ, ನೀವು ವಿರಮಿಸಬೇಕೆಂದು ನಿಮಗಾಗಿ ರಾತ್ರಿಯನ್ನು ನಿರ್ಮಿಸಿದವನು ಮತ್ತು (ಅವನೇ) ಹಗಲನ್ನು ಪ್ರಕಾಶಮಾನವಾಗಿಸಿದವನು. ಕೇಳುವ ಜನರಿಗೆ ಇದರಲ್ಲಿ ಖಂಡಿತವಾಗಿಯೂ ನಿದರ್ಶನಗಳಿವೆ.
68. ಅಲ್ಲಾಹನು ಒಬ್ಬನನ್ನು ಪುತ್ರನಾಗಿಸಿಕೊಂಡಿದ್ದಾನೆ ಎಂದು ಅವರು ಹೇಳುತ್ತಾರೆ – ಅವನಂತು ತುಂಬಾ ಪಾವನನು. ಅವನು ಎಲ್ಲ ಅಗತ್ಯಗಳಿಂದ ಮುಕ್ತನು. ಆಕಾಶಗಳಲ್ಲಿ ಹಾಗೂ ಭೂಮಿಯಲ್ಲಿ ಇರುವುದೆಲ್ಲವೂ ಅವನಿಗೇ ಸೇರಿದೆ. (ಅಲ್ಲಾಹನಿಗೆ ಪುತ್ರನಿದ್ದಾನೆ ಎನ್ನುವವರೇ,) ನಿಮ್ಮ ಬಳಿ ಈ ಕುರಿತು ಯಾವ ಪುರಾವೆಯೂ ಇಲ್ಲ. ನೀವೇನು, ನಿಮಗೆ ತಿಳಿದಿಲ್ಲದ್ದನ್ನು ಅಲ್ಲಾಹನ ಮೇಲೆ ಆರೋಪಿಸುತ್ತೀರಾ?
69. ಹೇಳಿರಿ; ಅಲ್ಲಾಹನ ಮೇಲೆ ಸುಳ್ಳಾರೋಪಗಳನ್ನು ಹೊರಿಸುವವರು ಖಂಡಿತ ಸಫಲರಾಗುವುದಿಲ್ಲ.
70. (ಇದೆಲ್ಲಾ) ಈ ಲೋಕದ ಅಲ್ಪಕಾಲದ ಮೋಜು. ಆ ಬಳಿಕ ಅವರೆಲ್ಲರೂ ನಮ್ಮ ಬಳಿಗೆ ಮರಳಿ ಬರುವರು, ಆಗ ನಾವು, ಅವರ ಧಿಕ್ಕಾರದ ಫಲವಾಗಿ ಅವರಿಗೆ ಭಾರೀ ಕಠಿಣ ಶಿಕ್ಷೆಯ ಸವಿಯನ್ನು ಉಣಿಸುವೆವು.
71. ಅವರಿಗೆ ನೂಹ್ರ ಸಂಗತಿಯನ್ನು ಓದಿ ಕೇಳಿಸಿರಿ. ಅವರು ತಮ್ಮ ಜನಾಂಗದೊಡನೆ ಹೇಳಿದರು; ನನ್ನ ಜನಾಂಗದವರೇ, ನನ್ನ ಅಸ್ತಿತ್ವ ಹಾಗೂ ಅಲ್ಲಾಹನ ವಚನಗಳ ಮೂಲಕ ನಾನು ನಿಮಗೆ ನೀಡುತ್ತಿರುವ ಉಪದೇಶವು ನಿಮಗೆ ತುಂಬಾ ಭಾರವಾಗುತ್ತಿದ್ದರೆ (ನಿಮಗೆ ತಿಳಿದಿರಲಿ;) ನಾನಂತು ಅಲ್ಲಾಹನಲ್ಲಿ ಭರವಸೆ ಇಟ್ಟಿದ್ದೇನೆ. ನೀವು ಮತ್ತು (ದೇವತ್ವದಲ್ಲಿನ) ನಿಮ್ಮ ಪಾಲುದಾರರು ಸೇರಿ (ನನ್ನ ವಿರುದ್ಧ) ನಿಮ್ಮ ಯೋಜನೆಯನ್ನು ಪಕ್ವಗೊಳಿಸಿರಿ. ನಿಮ್ಮ ಯೋಜನೆಯಲ್ಲಿ ನಿಮಗೆ ಯಾವುದೇ ಗೊಂದಲ ಉಳಿಯದಿರಲಿ. ಆ ಬಳಿಕ ನೀವು ನನ್ನ ವಿರುದ್ಧ ಕಾರ್ಯಾಚರಣೆಗೆ ಇಳಿಯಿರಿ. ನನಗೆ ನೀವು ಯಾವುದೇ ಕಾಲಾವಕಾಶವನ್ನೂ ಕೊಡಬೇಡಿ.
72. ನೀವೀಗ ಮುಖ ತಿರುಗಿಸಿಕೊಳ್ಳುವಿರಾದರೆ, (ನಿಮಗೆ ತಿಳಿದಿರಲಿ;) ನಾನು ನಿಮ್ಮೊಡನೆ ಯಾವುದೇ ಪ್ರತಿಫಲವನ್ನು ಬೇಡಿಲ್ಲ. ನನ್ನ ಪ್ರತಿಫಲವು ಅಲ್ಲಾಹನ ಹೊರತು ಬೇರಾರ ಬಳಿಯೂ ಇಲ್ಲ. ನಾನು ಮುಸ್ಲಿಮನಾಗಿರಬೇಕು ಎಂದು ನನಗೆ, ಆದೇಶಿಸಲಾಗಿದೆ.
73. ಅವರು (ಜನಾಂಗದವರು) ಅವರನ್ನು (ನೂಹ್ರನ್ನು) ಸುಳ್ಳನೆಂದು ತಿರಸ್ಕರಿಸಿದರು. ಕೊನೆಗೆ ಅವರನ್ನು ಹಾಗೂ ಹಡಗಿನಲ್ಲಿ ಅವರ ಜೊತೆಗಿದ್ದವರನ್ನು ನಾವು ರಕ್ಷಿಸಿದೆವು ಮತ್ತು ಅವರನ್ನು ಭೂಮಿಯಲ್ಲಿ ಪ್ರತಿನಿಧಿಗಳಾಗಿ ಮಾಡಿದೆವು. ಇನ್ನು, ನಮ್ಮ ವಚನಗಳನ್ನು ಸುಳ್ಳೆಂದು ತಿರಸ್ಕರಿಸಿದವರನ್ನು ನಾವು ಮುಳುಗಿಸಿಬಿಟ್ಟೆವು. ನೋಡಿರಿ, ಎಚ್ಚರಿಸಲ್ಪಟ್ಟವರ ಗತಿ ಏನಾಯಿತೆಂದು.
74. ಅವರ ಬಳಿಕ ನಾವು ಹಲವು ದೂತರುಗಳನ್ನು ಅವರ ಜನಾಂಗಗಳೆಡೆಗೆ ಕಳಿಸಿದೆವು. ಅವರು (ದೂತರು) ಅವರ ಬಳಿಗೆ ಸ್ಪಷ್ಟ ನಿದರ್ಶನಗಳನ್ನು ತಂದರು. ಆದರೆ ಅವರು, ತಾವು ಈ ಹಿಂದೆ ಸುಳ್ಳೆಂದು ತಿರಸ್ಕರಿಸಿದ್ದನ್ನು ನಂಬಲು ಸಿದ್ಧರಿರಲಿಲ್ಲ. ಈ ರೀತಿ ನಾವು ಅಕ್ರಮಿಗಳ ಮನಸ್ಸುಗಳ ಮೇಲೆ ಮುದ್ರೆ ಒತ್ತಿರುತ್ತೇವೆ.
75. ಅವರ ಬಳಿಕ ನಾವು ಮೂಸಾ ಹಾಗೂ ಹಾರೂನ್ರನ್ನು ನಮ್ಮ ನಿದರ್ಶನಗಳೊಂದಿಗೆ, ಫಿರ್ಔನ್ ಮತ್ತವನ ಅಧಿಕಾರಿಗಳ ಕಡೆಗೆ ಕಳಿಸಿದೆವು. ಆದರೆ ಅವರು ಅಹಂಕಾರ ತೋರಿದರು. ಅವರು ಒಂದು ಅಪರಾಧಿ ಜನಾಂಗವಾಗಿದ್ದರು.
76. ನಮ್ಮ ಕಡೆಯಿಂದ ಅವರ ಬಳಿಗೆ ಸತ್ಯವು ಬಂದಾಗ ಅವರು, ಖಂಡಿತವಾಗಿಯೂ ಇದು ಸ್ಪಷ್ಟ ಮಾಟಗಾರಿಕೆಯಾಗಿದೆ ಎಂದು ಹೇಳಿದರು.
77. ಮೂಸಾ ಹೇಳಿದರು; ಸತ್ಯವು ನಿಮ್ಮ ಬಳಿಗೆ ಬಂದಿರುವಾಗ ನೀವು ಇದೇನು ಹೇಳುತ್ತಿರುವಿರಿ? ಇದು ಮಾಟಗಾರಿಕೆಯೇ? ಮಾಟಗಾರರು ಸಫಲರಾಗುವುದಿಲ್ಲ.
78. ಅವರು ಹೇಳಿದರು; ನಾವು ನಮ್ಮ ಪೂರ್ವಜರನ್ನು ಯಾವ ದಾರಿಯಲ್ಲಿ ಕಂಡಿದ್ದೆವೋ ಅದರಿಂದ ನಮ್ಮನ್ನು ದಾರಿಗೆಡಿಸಬೇಕೆಂದು ಮತ್ತು ಭೂಮಿಯಲ್ಲಿ ನಿಮಗಿಬ್ಬರಿಗೂ ಮೇಲ್ಮೆ ಪ್ರಾಪ್ತಿಯಾಗಬೇಕೆಂದು ನೀವು ನಮ್ಮ ಬಳಿಗೆ ಬಂದಿರುವಿರಾ? ನಾವಂತು ನಿಮ್ಮಿಬ್ಬರನ್ನೂ ನಂಬುವವರಲ್ಲ.
79. ಎಲ್ಲ ತಜ್ಞ ಮಾಟಗಾರರನ್ನು ನನ್ನ ಬಳಿಗೆ ಕರೆ ತನ್ನಿರಿ ಎಂದು ಫಿರ್ಔನ್ ಹೇಳಿದನು.
80. ಮಾಟಗಾರರು ಬಂದಾಗ ಅವರೊಡನೆ ಮೂಸಾ ಹೇಳಿದರು; ನೀವು ಎಸೆಯಬೇಕಾಗಿರುವುದನ್ನು ಎಸೆಯಿರಿ.
81. ಅವರು (ತಮ್ಮ ದಾಳಗಳನ್ನು) ಎಸೆದು ಬಿಟ್ಟಾಗ ಮೂಸಾ ಹೇಳಿದರು; ನೀವು ತಂದಿರುವುದೆಲ್ಲವೂ ಕೇವಲ ಇಂದ್ರಜಾಲವಾಗಿದೆ. ಖಂಡಿತವಾಗಿಯೂ ಅಲ್ಲಾಹನು ಅದನ್ನು ವ್ಯರ್ಥಗೊಳಿಸಿದನು. ಗೊಂದಲಕೋರರ ಕೃತ್ಯಗಳನ್ನು ಅಲ್ಲಾಹನು ಖಂಡಿತ ಸಫಲಗೊಳಿಸುವುದಿಲ್ಲ.
82. ಅಲ್ಲಾಹನು ತನ್ನ ವಚನಗಳ ಮೂಲಕ ಸತ್ಯವನ್ನು ಸತ್ಯವೆಂದು ಸಾಬೀತು ಪಡಿಸುತ್ತಾನೆ – ಅಪರಾಧಿಗಳಿಗೆ ಅದು ಎಷ್ಟೇ ಅಪ್ರಿಯವಾಗಿದ್ದರೂ ಸರಿಯೇ.
83. ಮೂಸಾರ ಜನಾಂಗದ ಹೊಸ ಪೀಳಿಗೆಯವರ ಹೊರತು ಬೇರಾರೂ ಅವರನ್ನು ನಂಬಲಿಲ್ಲ – ಏಕೆಂದರೆ, ಫಿರ್ಔನ್ ಮತ್ತವನ ಅಧಿಕಾರಿಗಳು ತಮ್ಮನ್ನು ಹಿಂಸಿಸುವರೆಂದು ಅವರು ಅಂಜಿದ್ದರು. ಖಂಡಿತವಾಗಿಯೂ ಫಿರ್ಔನನು ಭೂಮಿಯಲ್ಲಿ ದೊಡ್ಡಸ್ತಿಕೆ ಮೆರೆದಿದ್ದನು ಮತ್ತು ಖಂಡಿತವಾಗಿಯೂ ಅವನು ಅತಿಕ್ರಮಿಯಾಗಿದ್ದನು.
84. ಮೂಸಾ ಹೇಳಿದರು; ನನ್ನ ಜನಾಂಗದವರೇ, ನೀವು ಅಲ್ಲಾಹನಲ್ಲಿ ವಿಶ್ವಾಸ ಉಳ್ಳವರಾಗಿದ್ದರೆ ಅವನಲ್ಲೇ ಭರವಸೆ ಇಡಿರಿ – ನೀವು ಮುಸ್ಲಿಮರಾಗಿದ್ದರೆ (ಇದುವೇ ನಿಮಗಿರುವ ದಾರಿ).
85. ಅವರು (ಜನಾಂಗದವರು) ಹೇಳಿದರು; ನಾವು ಅಲ್ಲಾಹನಲ್ಲೇ ಭರವಸೆ ಇಟ್ಟಿರುವೆವು. ನಮ್ಮೊಡೆಯಾ, ನೀನು ನಮ್ಮನ್ನು ಅಕ್ರಮಿಗಳ ಪಾಲಿಗೆ ಪರೀಕ್ಷೆಯಾಗಿಸಬೇಡ.
86. ಮತ್ತು ನೀನು, ನಿನ್ನ ಅನುಗ್ರಹದಿಂದ ನಮ್ಮನ್ನು ಧಿಕ್ಕಾರಿಗಳಿಂದ ರಕ್ಷಿಸು.
87. ‘‘ನೀವಿಬ್ಬರೂ ಈಜಿಪ್ತ್ನಲ್ಲಿ ನಿಮ್ಮ ಜನಾಂಗದವರಿಗಾಗಿ ಮನೆಗಳನ್ನು ಒದಗಿಸಿರಿ, ನಿಮ್ಮ ಮನೆಗಳನ್ನು ಪ್ರಾರ್ಥನಾಲಯಗಳಾಗಿ ಬಳಸಿಕೊಳ್ಳಿರಿ ಮತ್ತು ನಮಾಝ್ ಅನ್ನು ಪಾಲಿಸಿರಿ. ಮತ್ತು ವಿಶ್ವಾಸಿಗಳಿಗೆ ಶುಭವಾರ್ತೆ ನೀಡಿರಿ’’ ಎಂದು ನಾವು ಮೂಸಾ ಮತ್ತು ಅವರ ಸಹೋದರನ ಕಡೆಗೆ ದಿವ್ಯವಾಣಿಯನ್ನು ಕಳಿಸಿದೆವು.
88. ಮೂಸಾ ಹೇಳಿದರು; ನಮ್ಮೊಡೆಯಾ, ನೀನು ಈ ಲೋಕದ ಬದುಕಿನಲ್ಲಿ ಫಿರ್ಔನ್ ಮತ್ತು ಅವನ ಅಧಿಕಾರಿಗಳಿಗೆ ಆಡಂಬರದ ವಸ್ತುಗಳನ್ನೂ ಸಂಪತ್ತನ್ನೂ ನೀಡಿರುವೆ. ನಮ್ಮೊಡೆಯಾ, ಅವರು ಜನರನ್ನು ನಿನ್ನ ಮಾರ್ಗದಿಂದ ದೂರ ಗೊಳಿಸಲಿಕ್ಕಾಗಿ (ಇದನ್ನೆಲ್ಲಾ ಬಳಸುತ್ತಿದ್ದಾರೆ). ನಮ್ಮೊಡೆಯಾ, ಅವರ ಸಂಪತ್ತುಗಳನ್ನು ನಾಶಪಡಿಸು ಮತ್ತು ಅವರು ಕಠಿಣ ಶಿಕ್ಷೆಯನ್ನು ಕಾಣುವ ತನಕವೂ ವಿಶ್ವಾಸವಿಡದಂತೆ, ಅವರ ಮನಸ್ಸುಗಳನ್ನು ಕಠೋರ ಗೊಳಿಸು.
89. ಅವನು (ಅಲ್ಲಾಹನು) ಹೇಳಿದನು; ನಿಮ್ಮಿಬ್ಬರ ಪ್ರಾರ್ಥನೆಯನ್ನು ಸ್ವೀಕರಿಸಲಾಗಿದೆ. ನೀವಿನ್ನು ಸ್ಥಿರವಾಗಿರಿ ಮತ್ತು ಅರಿವಿಲ್ಲದವರ ದಾರಿಯಲ್ಲಿ ಖಂಡಿತ ನಡೆಯಬೇಡಿ.
90. ಮುಂದೆ ನಾವು ಇಸ್ರಾಈಲರ ಸಂತತಿಗಳನ್ನು ಸಮುದ್ರದಿಂದ ಪಾರುಗೊಳಿಸಿದೆವು. ಫಿರ್ಔನ್ ಮತ್ತು ಅವನ ಪಡೆಗಳು ದ್ವೇಷ ಹಾಗೂ ವಿದ್ರೋಹದೊಂದಿಗೆ ಅವರನ್ನು ಹಿಂಬಾಲಿಸಿದರು. ಕೊನೆಗೆ ಅವನು ಮುಳುಗತೊಡಗಿದಾಗ, ‘‘ಇಸ್ರಾಈಲರ ಸಂತತಿಗಳು ಯಾರನ್ನು ನಂಬಿರುವರೋ ಅವನ ಹೊರತು ಬೇರೆ ದೇವರಿಲ್ಲ ಎಂದು ನಾನು ನಂಬುತ್ತೇನೆ ಮತ್ತು ನಾನು ಮುಸ್ಲಿಮನಾಗಿದ್ದೇನೆ’’ ಎಂದನು.
91. ಈಗ ನಂಬುವುದೇ? ನೀನಂತು ಈ ಹಿಂದೆ ಆಜ್ಞೆ ಮೀರುವವನಾಗಿದ್ದೆ ಮತ್ತು ಗೊಂದಲಕೋರನಾಗಿದ್ದೆ.
92. ನೀನು ನಿನ್ನ ಮುಂದಿನವರಿಗೆ ಒಂದು ಪಾಠವಾಗಬೇಕೆಂದು, ಇಂದು ನಾವು ನಿನ್ನ ಶರೀರವನ್ನು ರಕ್ಷಿಸುವೆವು . ಖಂಡಿತವಾಗಿಯೂ ಮಾನವರಲ್ಲಿ ಹೆಚ್ಚಿನವರು ನಮ್ಮ ನಿದರ್ಶನಗಳ ಕುರಿತು ಮೂಢರಾಗಿದ್ದಾರೆ.
93. ಮುಂದೆ ನಾವು ಇಸ್ರಾಈಲ್ ಸಂತತಿಗಳಿಗೆ ಒಂದು ಸ್ಥಿರವಾದ ನೆಲೆಯನ್ನು ಒದಗಿಸಿದೆವು ಮತ್ತು ಅವರಿಗೆ ನಿರ್ಮಲ ಆಹಾರವನ್ನು ನೀಡಿದೆವು. ಅವರ ಬಳಿಗೆ ಜ್ಞಾನವು ಬರುವ ತನಕವೂ ಅವರು ಪರಸ್ಪರ ಭಿನ್ನತೆ ತಾಳಿರಲಿಲ್ಲ. ಖಂಡಿತವಾಗಿಯೂ ಪುನರುತ್ಥಾನ ದಿನ ನಿಮ್ಮ ಒಡೆಯನು ಅವರು ಪರಸ್ಪರ ಭಿನ್ನತೆ ತಾಳಿದ್ದ ಎಲ್ಲ ವಿಷಯಗಳನ್ನು ಅವರ ನಡುವೆ ಇತ್ಯರ್ಥ ಗೊಳಿಸಿಬಿಡುವನು.
94. (ದೂತರೇ,) ಒಂದು ವೇಳೆ ನಾವು ನಿಮ್ಮೆಡೆಗೆ ಇಳಿಸಿ ಕೊಟ್ಟಿರುವ ಸಂದೇಶದ ಕುರಿತು ನಿಮಗೆ ಸಂಶಯವಿದ್ದರೆ, ನಿಮಗಿಂತ ಹಿಂದೆ ಬಂದ ಗ್ರಂಥಗಳನ್ನು ಓದುತ್ತಿರುವವರೊಡನೆ ವಿಚಾರಿಸಿರಿ. ನಿಮ್ಮ ಒಡೆಯನ ಕಡೆಯಿಂದ ನಿಮ್ಮ ಬಳಿಗೆ ಸತ್ಯವು ಬಂದು ಬಿಟ್ಟಿದೆ. ನೀವಿನ್ನು ಸಂಶಯಿಸುವವರಾಗಬೇಡಿ.
95. ಹಾಗೆಯೇ ನೀವು, ಅಲ್ಲಾಹನ ವಚನಗಳನ್ನು ಸುಳ್ಳೆಂದು ತಿರಸ್ಕರಿಸಿದವರ ಸಾಲಿಗೆ ಸೇರಬೇಡಿ. ಅನ್ಯಥಾ ನೀವು ಭಾರೀ ನಷ್ಟಕ್ಕೆ ತುತ್ತಾಗುವಿರಿ.
96. ಯಾರ ವಿರುದ್ಧ ಈಗಾಗಲೇ ನಿಮ್ಮ ಒಡೆಯನ ಆದೇಶವು ಪ್ರಕಟವಾಗಿದೆಯೋ ಅವರು ಖಂಡಿತ ನಂಬುವವರಲ್ಲ.
97. ಅವರ ಬಳಿಗೆ ಎಲ್ಲ ನಿದರ್ಶನಗಳು ಬಂದು ಬಿಟ್ಟರೂ, ಕಠಿಣ ಶಿಕ್ಷೆಯನ್ನು ಕಾಣುವ ತನಕವೂ ಅವರು (ನಂಬುವವರಲ್ಲ).
98. ಯೂನುಸ್ರ ಜನಾಂಗವೊಂದರ ಹೊರತು ಯಾವುದೇ ನಾಡಿನವರು, ತಮ್ಮ ನಂಬಿಕೆಯಿಂದ ತಮಗೆ ಪ್ರಯೋಜನವಾಗುವಂತೆ (ಕಾಲ ಮೀರುವ ಮುನ್ನ) ನಂಬಲಿಲ್ಲ . ಅವರು (ಯೂನುಸ್ರ ಜನಾಂಗದವರು) ನಂಬಿದಾಗ, ನಾವು ಈ ಲೋಕದ ಬದುಕಿನಲ್ಲಿ ಅವರಿಗೆ ವಿಧಿಸಲಾಗಿದ್ದ ಅಪಮಾನದ ಶಿಕ್ಷೆಯನ್ನು ಅವರಿಂದ ನಿವಾರಿಸಿದೆವು ಮತ್ತು ಒಂದು ಅವಧಿಯ ತನಕ ಅವರಿಗೆ ಸುಖ ನೀಡಿದೆವು.
99. ನಿಮ್ಮ ಒಡೆಯನು ಬಯಸಿದ್ದರೆ, ಭೂಮಿಯಲ್ಲಿರುವ ಎಲ್ಲರೂ ಜೊತೆಯಾಗಿ (ಸತ್ಯ ಧರ್ಮವನ್ನು) ನಂಬುವವರಾಗಿ ಬಿಡುತ್ತಿದ್ದರು. (ಅವನೇ ಹಾಗೆ ಮಾಡಿಲ್ಲದಿರುವಾಗ) ಜನರೆಲ್ಲಾ ನಂಬುವವರಾಗಿ ಬಿಡುವ ತನಕ ನೀವೇನು ಅವರನ್ನು ನಿರ್ಬಂಧಿಸುವಿರಾ?
100. ಅಲ್ಲಾಹನು ಅನುಮತಿಸದೆ, ವಿಶ್ವಾಸಿಯಾಗಲು ಯಾವ ಜೀವಿಗೂ ಸಾಧ್ಯವಿಲ್ಲ. ಬುದ್ಧಿಯನ್ನು ಬಳಸದ ಜನರ ಮೇಲೆ ಅವನು ಮಾಲಿನ್ಯವನ್ನು ಹೇರಿ ಬಿಡುತ್ತಾನೆ.
101. ಹೇಳಿರಿ; ಆಕಾಶಗಳಲ್ಲಿ ಹಾಗೂ ಭೂಮಿಯಲ್ಲಿ ಇರುವುದನ್ನೆಲ್ಲಾ ನೀವು ನೋಡಿರಿ. (ಇಲ್ಲಿರುವ) ಪಾಠಗಳು ಹಾಗೂ ಎಚ್ಚರಿಕೆಗಳಿಂದ, ನಂಬಿಕೆ ಇಲ್ಲದವರಿಗೆ ಯಾವ ಲಾಭವೂ ಆಗದು.
102. ಅವರು ಕಾಯುತ್ತಿರುವುದು, ಅವರ ಹಿಂದಿನವರಿಗೆ ಎದುರಾಗಿದ್ದಂತಹ ದಿನಗಳನ್ನೇ ತಾನೇ? ಹೇಳಿರಿ; ನೀವು ಕಾಯುತ್ತಲಿರಿ, ನಿಮ್ಮ ಜೊತೆ ನಾನೂ ಕಾಯುತ್ತೇನೆ.
103. ಕೊನೆಗೆ, ಈ ರೀತಿ ನಾವು ನಮ್ಮ ದೂತರನ್ನೂ ವಿಶ್ವಾಸಿಗಳನ್ನೂ ರಕ್ಷಿಸುತ್ತೇವೆ. ವಿಶ್ವಾಸಿಗಳನ್ನು ರಕ್ಷಿಸುವುದು ನಮ್ಮ ಮೇಲಿನ ಬಾಧ್ಯತೆಯಾಗಿದೆ.
104. (ದೂತರೇ,) ಹೇಳಿರಿ; ಜನರೇ, ನಿಮಗೆ ನನ್ನ ಧರ್ಮದ ಕುರಿತು ಸಂಶಯವಿದ್ದರೆ (ಕೇಳಿರಿ), ಅಲ್ಲಾಹನ ಹೊರತು ನೀವು ಯಾರನ್ನೆಲ್ಲಾ ಪೂಜಿಸುತ್ತೀರೋ ಅವರನ್ನು ನಾನು ಖಂಡಿತ ಪೂಜಿಸಲಾರೆ. ನಾನು ಪೂಜಿಸುವುದು, ನಿಮಗೆ ಮರಣವನ್ನು ನೀಡುವ ಅಲ್ಲಾಹನನ್ನು ಮಾತ್ರ. ನಾನು (ಆತನನ್ನು) ನಂಬುವವನಾಗಿರಬೇಕೆಂದು ನನಗೆ ಆದೇಶಿಸಲಾಗಿದೆ.
105. ನಿನ್ನ ಸಂಪೂರ್ಣ ಗಮನವನ್ನು, ಸ್ಥಿರವಾಗಿ, ಸತ್ಯ ಧರ್ಮದಲ್ಲಿ ಕೇಂದ್ರೀಕರಿಸಬೇಕು ಹಾಗೂ ಬಹುದೇವಾರಾಧಕನಾಗಬಾರದು (ಎಂದು ನನಗೆ ಆದೇಶಿಸಲಾಗಿದೆ).
106. (ದೂತರೇ,) ನೀವು, ಅಲ್ಲಾಹನ ಹೊರತಾಗಿ, ನಿಮಗೆ ಯಾವುದೇ ಲಾಭವನ್ನಾಗಲಿ ನಷ್ಟವನ್ನಾಗಲಿ ಮಾಡಲಾಗದವರನ್ನು ಕರೆದು ಪ್ರಾರ್ಥಿಸಬೇಡಿ. ಹಾಗೆ ಮಾಡಿದರೆ, ನೀವು ಅಕ್ರಮಿಗಳ ಸಾಲಿಗೆ ಸೇರುವಿರಿ.
107. ಒಂದು ವೇಳೆ ಅಲ್ಲಾಹನು ನಿಮಗೆ ಏನಾದರೂ ಹಾನಿಮಾಡ ಬಯಸಿದರೆ, ಅವನ ಹೊರತು ಬೇರೆ ಯಾರೂ ಅದನ್ನು ನಿವಾರಿಸಲಾರರು ಮತ್ತು ಅವನು ನಿಮಗೆ ಏನಾದರೂ ಹಿತವನ್ನು ಮಾಡಬಯಸಿದರೆ, ಅವನ ಔದಾರ್ಯವನ್ನು ತಡೆಯಲು ಯಾರಿಗೂ ಸಾಧ್ಯವಾಗದು. ಅವನು ತನ್ನ ದಾಸರ ಪೈಕಿ ತಾನಿಚ್ಛಿಸಿದವರಿಗೆ ಅದನ್ನು ತಲುಪಿಸುತ್ತಾನೆ. ಅವನು ತುಂಬಾ ಕ್ಷಮಿಸುವವನು ಮತ್ತು ಕರುಣಾಮಯಿಯಾಗಿದ್ದಾನೆ.
108. (ದೂತರೇ,) ಹೇಳಿರಿ; ಮಾನವರೇ, ನಿಮ್ಮ ಒಡೆಯನ ಕಡೆಯಿಂದ ನಿಮ್ಮ ಬಳಿಗೆ ಸತ್ಯವು ಬಂದು ಬಿಟ್ಟಿದೆ. ಸರಿದಾರಿಯನ್ನು ಅನುಸರಿಸುವವನು ಸ್ವತಃ ತನ್ನ ಲಾಭಕ್ಕಾಗಿಯೇ ಸರಿದಾರಿಯನ್ನು ಅನುಸರಿಸುತ್ತಾನೆ ಮತ್ತು ದಾರಿಗೆಟ್ಟವನ ದಾರಿಗೇಡಿತನದ ಹೊಣೆಯೂ ಸ್ವತಃ ಅವನ ಮೇಲೆಯೇ ಇರುವುದು. ನಾನು ನಿಮ್ಮ ಮೇಲಿನ ಕಾವಲುಗಾರನೇನೂ ಅಲ್ಲ.
109. (ದೂತರೇ,) ನಿಮಗೆ ನೀಡಲಾಗಿರುವ ದಿವ್ಯವಾಣಿಯನ್ನು ಅನುಸರಿಸಿರಿ ಮತ್ತು ಅಲ್ಲಾಹನು ತೀರ್ಪು ನೀಡುವ ತನಕ ಸಹನೆ ವಹಿಸಿರಿ. ಅವನೇ ಅತ್ಯುತ್ತಮ ತೀರ್ಪು ನೀಡುವವನು.