16. An Nahl

16. ಅನ್ನಹ್ಲ್ (ಜೇನು)

ವಚನಗಳು – 128, ಮಕ್ಕಃ

ಅಲ್ಲಾಹನ ಹೆಸರಿಂದ – ಅವನು ಅಪಾರ ದಯಾಳು, ಕರುಣಾಮಯಿ.

1. ಬಂದು ಬಿಟ್ಟಿತು, ಅಲ್ಲಾಹನ ಆದೇಶ – ನೀವು ಅದಕ್ಕಾಗಿ ಆತುರ ಪಡಬೇಡಿ. ಅವನು ತುಂಬಾ ಪಾವನನು ಮತ್ತು ಅವರು (ಅವನ ಜೊತೆ) ಪಾಲುಗೊಳಿಸುವ ಎಲ್ಲವುಗಳಿಗಿಂತಲೂ ಅವನು ತುಂಬಾ ಉನ್ನತನು.

 2.‘‘ನನ್ನ ಹೊರತು ಬೇರೆ ಯಾರೂ ಪೂಜಾರ್ಹರಲ್ಲ ನನಗೆ ಮಾತ್ರ ಅಂಜಿರಿ’’ – ಎಂದು (ಜನರನ್ನು) ಎಚ್ಚರಿಸಲಿಕ್ಕಾಗಿ ಅವನು ತನ್ನ ಆದೇಶದಂತೆ ದಿವ್ಯವಾಣಿಯನ್ನು ಕೊಟ್ಟು, ತನ್ನ ದಾಸರ ಪೈಕಿ ತಾನಿಚ್ಛಿಸಿದವರ ಬಳಿಗೆ, ಮಲಕ್‌ಗಳನ್ನು ಇಳಿಸಿಕೊಡುತ್ತಾನೆ .

3. ಅವನು ಆಕಾಶಗಳನ್ನು ಹಾಗೂ ಭೂಮಿಯನ್ನು ಸತ್ಯದೊಂದಿಗೆ ಸೃಷ್ಟಿಸಿರುವನು. ಅವರು (ಅವನ ಜೊತೆ) ಪಾಲುಗೊಳಿಸುತ್ತಿರುವ ಎಲ್ಲವುಗಳಿಗಿಂತ ಅವನು ಉನ್ನತನು.

4. ಅವನು (ಅಲ್ಲಾಹನು) ಮಾನವನನ್ನು ವೀರ್ಯದ ಮೂಲಕ ಸೃಷ್ಟಿಸಿರುವನು. ಇಷ್ಟಾಗಿಯೂ ಅವನು (ಮಾನವನು) ಸ್ಪಷ್ಟ ಜಗಳಗಂಟನಾಗಿ ಬಿಟ್ಟಿರುವನು.

 5. ಇನ್ನು, ಜಾನುವಾರುಗಳನ್ನು ಅವನು ಸೃಷ್ಟಿಸಿದನು. ಅವುಗಳಲ್ಲಿ ನಿಮಗಾಗಿ ಬೆಚ್ಚನೆಯ ಉಡುಗೆ ಇದೆ, ಇತರ ಲಾಭಗಳೂ ಇವೆ ಮತ್ತು ಅವುಗಳಲ್ಲಿ ಕೆಲವನ್ನು ನೀವು ತಿನ್ನುತ್ತೀರಿ.

6. ಹಾಗೆಯೇ, ನೀವು ಸಂಜೆ ಅವುಗಳನ್ನು ತರುವಾಗ ಮತ್ತು ಮುಂಜಾನೆ ಅವುಗಳನ್ನು ಕೊಂಡೊಯ್ಯುವಾಗ ಅವುಗಳಲ್ಲಿ ನಿಮಗೆ ಸೌಂದರ್ಯವಿದೆ .

 7. ನಿಮಗೆ, ತುಂಬಾ ಪ್ರಯಾಸ ಪಡದೆ ತಲುಪಲು ಸಾಧ್ಯವಿಲ್ಲದ ನಾಡುಗಳಿಗೆ ಅವು ನಿಮ್ಮ ಸರಕುಗಳನ್ನು ತಲುಪಿಸುತ್ತವೆ. ಖಂಡಿತವಾಗಿಯೂ ನಿಮ್ಮ ಒಡೆಯನು ವಾತ್ಸಲ್ಯಮಯಿ ಹಾಗೂ ಕರುಣಾಳುವಾಗಿದ್ದಾನೆ.

 8. ನೀವು ಅವುಗಳ ಮೇಲೆ ಸವಾರಿ ನಡೆಸಬೇಕೆಂದು ಹಾಗೂ (ನಿಮಗೆ) ಭೂಷಣವಾಗಿರಲೆಂದು ಕುದುರೆಗಳನ್ನೂ, ಹೇಸರಗತ್ತೆಗಳನ್ನೂ, ಕತ್ತೆಗಳನ್ನೂ (ಅವನು ಸೃಷ್ಟಿಸಿದನು). ಮತ್ತು ನಿಮಗೆ ತಿಳಿದೇ ಇಲ್ಲದ ಇತರ ಹಲವನ್ನೂ ಅವನು ಸೃಷ್ಟಿಸಿರುತ್ತಾನೆ.

9. ನೇರ ಮಾರ್ಗವನ್ನು ತೋರಿಸಿ ಕೊಡುವ ಹೊಣೆ ಅಲ್ಲಾಹನ ಮೇಲಿದೆ. ಅದರಿಂದ ಕೆಲವು ವಕ್ರ ಮಾರ್ಗಗಳೂ ಹೊರಡುತ್ತವೆ. ಅವನು ಬಯಸಿದ್ದರೆ ನಿಮ್ಮೆಲ್ಲರನ್ನೂ ಸರಿದಾರಿಯಲ್ಲಿ ನಡೆಸುತ್ತಿದ್ದನು.

10. ಅವನೇ ನಿಮಗಾಗಿ ಆಕಾಶದಿಂದ ನೀರನ್ನು ಸುರಿಸಿದವನು. ಅದರಿಂದ ಪಾನೀಯ ದೊರೆಯುತ್ತದೆ ಮತ್ತು ಸಸ್ಯಗಳು ಬೆಳೆಯುತ್ತವೆ – ಅವುಗಳಲ್ಲಿ ನೀವು (ಜಾನುವಾರುಗಳನ್ನು) ಮೇಯಿಸುತ್ತೀರಿ.

11. ಅದರ (ಆ ನೀರಿನ) ಮೂಲಕವೇ ಅವನು ನಿಮಗಾಗಿ ಹೊಲಗಳನ್ನು ಹಾಗೂ ಝೈತೂನ್, ಖರ್ಜೂರ, ದ್ರಾಕ್ಷಿ ಹಾಗೂ ಎಲ್ಲ ಬಗೆಯ ಫಲಗಳನ್ನು ಬೆಳಸುತ್ತಾನೆ. ಖಂಡಿತವಾಗಿಯೂ, ಚಿಂತನೆ ನಡೆಸುವವರಿಗೆ ಇದರಲ್ಲಿ ಪಾಠವಿದೆ.

12. ಅವನು ಇರುಳು ಹಗಲುಗಳನ್ನು ನಿಮಗೆ ಅಧೀನಗೊಳಿಸಿರುವನು. ಹಾಗೆಯೇ ಸೂರ್ಯ, ಚಂದ್ರ ಮತ್ತು ನಕ್ಷತ್ರಗಳು ಅವನ ಆದೇಶದಂತೆ, ನಿಯಂತ್ರಿತವಾಗಿವೆ. ಖಂಡಿತವಾಗಿಯೂ ಬುದ್ಧಿವಂತರಿಗೆ ಇದರಲ್ಲಿ ಸೂಚನೆಗಳಿವೆ.

 13. ಹಾಗೆಯೇ, ಅವನು ನಿಮಗಾಗಿ ಭೂಮಿಯಲ್ಲಿ ವಿವಿಧ ಬಣ್ಣದ ಬೆಳಗಳನ್ನು ಬೆಳೆಸಿದನು. ಪಾಠ ಕಲಿಯುವವರಿಗೆ ಇದರಲ್ಲಿ ಒಂದು ದೊಡ್ಡ ಸೂಚನೆ ಇದೆ.

14. ಅವನೇ ಸಮುದ್ರವನ್ನು ನಿಯಂತ್ರಣಕ್ಕೆ ಒಳಪಡಿಸಿದವನು – ನೀವು ಅದರಿಂದ (ಮೀನಿನ) ತಾಜಾ ಮಾಂಸವನ್ನು ತೆಗೆದು ತಿನ್ನಬೇಕು ಮತ್ತು ಅದರೊಳಗಿಂದ (ವಿವಿಧ) ಆಭರಣಗಳನ್ನು ಹೊರ ತೆಗೆದು ಧರಿಸಬೇಕೆಂದು. ಹಾಗೆಯೇ ನೀವು ಅವನ ಅನುಗ್ರಹವನ್ನು ಹುಡುಕಲು, ಅದರೊಳಗೆ (ನೀರನ್ನು) ಸೀಳುತ್ತಾ ಸಾಗುವ ಹಡಗುಗಳನ್ನು ನೀವು ಕಾಣುತ್ತೀರಿ. (ಇವೆಲ್ಲಾ ಇರುವುದೇ) ನೀವು ಕೃತಜ್ಞರಾಗಬೇಕೆಂದು.

 15. ಅವನೇ, ಭೂಮಿಯು ನಿಮ್ಮ ಜೊತೆಗೆ ಉರುಳಿ ಬಿಡಬಾರದೆಂದು ಅದರಲ್ಲಿ ಭಾರೀ ಪರ್ವತಗಳನ್ನು ಸ್ಥಿರವಾಗಿ ನೆಟ್ಟಿರುವವನು. ಮತ್ತು ನೀವು ದಾರಿಕಾಣಬೇಕೆಂದು ಅವನು ನದಿಗಳನ್ನು ಹಾಗೂ (ಸಹಜ) ದಾರಿಗಳನ್ನು ನಿರ್ಮಿಸಿರುವನು.

16. ಹಾಗೆಯೇ ಅವನು (ನಿರ್ಮಿಸಿರುವ) ಗುರುತುಗಳ ಹಾಗೂ ನಕ್ಷತ್ರಗಳ ಮೂಲಕ ಅವರು ದಾರಿ ಕಂಡುಕೊಳ್ಳುತ್ತಾರೆ.

17. ಸೃಷ್ಟಿಸಿದವನು ಮತ್ತು ಸೃಷ್ಟಿಸಿಲ್ಲದವರು ಸಮಾನರಾಗಬಲ್ಲರೇ? ನೀವೇನು ಚಿಂತನೆ ನಡೆಸುವುದಿಲ್ಲವೇ?

18. ಇನ್ನು ನೀವು ಅಲ್ಲಾಹನ ಅನುಗ್ರಹಗಳನ್ನು ಎಣಿಸಲು ಹೊರಟರೆ, ಅವುಗಳನ್ನು ಪೂರ್ಣವಾಗಿ ಎಣಿಸಲು ನಿಮಗೆಂದೂ ಸಾಧ್ಯವಾಗದು. ಖಂಡಿತವಾಗಿಯೂ ಅಲ್ಲಾಹನು ತುಂಬಾ ಕ್ಷಮಾಶೀಲನು ಹಾಗೂ ಕರುಣಾಮಯಿಯಾಗಿದ್ದಾನೆ.

19. ನೀವು ಬಚ್ಚಿಡುವ ಹಾಗೂ ಬಹಿರಂಗ ಪಡಿಸುವ ಎಲ್ಲವನ್ನೂ ಅಲ್ಲಾಹನು ಅರಿತಿರುತ್ತಾನೆ.

20. ಅವರು ಅಲ್ಲಾಹನ ಹೊರತು ಯಾರನ್ನೆಲ್ಲಾ ಕೂಗಿ ಪ್ರಾರ್ಥಿಸುತ್ತಾರೋ ಅವರು ಏನನ್ನೂ ಸೃಷ್ಟಿಸಿದವರಲ್ಲ. ನಿಜವಾಗಿ ಸ್ವತಃ ಅವರೇ ಸೃಷ್ಟಿಸಲ್ಪಟ್ಟಿದ್ದಾರೆ.

21. ಅವರು ಸತ್ತವರು, ಜೀವಂತರಲ್ಲ. ತಮ್ಮನ್ನು ಮತ್ತೆ ಯಾವಾಗ ಎಬ್ಬಿಸಲಾಗುವುದು ಎಂಬುದರ ಅರಿವೂ ಅವರಿಗಿಲ್ಲ.

22. ಆ ಏಕಮಾತ್ರ ಒಡೆಯನೇ ನಿಮ್ಮ ಒಡೆಯನು. ಆದರೆ, ಪರಲೋಕದಲ್ಲಿ ನಂಬಿಕೆ ಇಲ್ಲದವರ ಮನಸ್ಸುಗಳು ವಿದ್ರೋಹಿಯಾಗಿವೆ ಮತ್ತು ಅವರು ಅಹಂಕಾರಿಗಳಾಗಿದ್ದಾರೆ.

23. ಅವರು ಬಚ್ಚಿಡುತ್ತಿರುವ ಮತ್ತು ಪ್ರಕಟಪಡಿಸುತ್ತಿರುವ ಎಲ್ಲವನ್ನೂ ಅಲ್ಲಾಹನು ಖಚಿತವಾಗಿ ಬಲ್ಲನು. ಖಂಡಿತವಾಗಿಯೂ ಅವನು ಅಹಂಕಾರಿಗಳನ್ನು ಮೆಚ್ಚುವುದಿಲ್ಲ.

24. ನಿಮ್ಮ ಒಡೆಯನು ಏನನ್ನು ಇಳಿಸಿ ಕೊಟ್ಟಿರುವನು ಎಂದು ಅವರೊಡನೆ ಕೇಳಲಾದಾಗ, ಅವರು, ಅವೆಲ್ಲಾ ಗತಕಾಲದವರ ಕತೆಗಳು – ಎನ್ನುತ್ತಾರೆ.

25. ಪುನರುತ್ಥಾನ ದಿನ ಅವರು ತಮ್ಮ ಹೊರೆಗಳನ್ನು ಪೂರ್ಣವಾಗಿ ತಾವೇ ಹೊರಲಿದ್ದಾರೆ. ಜೊತೆಗೇ, ಜ್ಞಾನವಿಲ್ಲದೆ ಅವರು ಯಾರನ್ನೆಲ್ಲಾ ದಾರಿ ತಪ್ಪಿಸಿದ್ದರೋ ಅವರೆಲ್ಲರ ಹೊರೆಗಳನ್ನೂ ಹೊರಲಿದ್ದಾರೆ. ನಿಮಗೆ ತಿಳಿದಿರಲಿ, ಅವರು ಹೊರುವ ಹೊರೆ ತುಂಬಾ ಕೆಟ್ಟದು.

26. ಅವರಿಗಿಂತ ಹಿಂದಿನವರೂ ಸಂಚುಗಳನ್ನು ಹೂಡಿದ್ದರು. ಕೊನೆಗೆ ಅಲ್ಲಾಹನು ಅವರ ಭವನಗಳ ಬುನಾದಿಗಳನ್ನೇ ನಾಶ ಮಾಡಿದನು ಮತ್ತು ಅವುಗಳ ಚಪ್ಪರಗಳು ಅವರ ಮೇಲೆ ಕುಸಿದು ಬಿದ್ದವು. ಇನ್ನು ಶಿಕ್ಷೆಯು, ಅವರೆಂದೂ ಊಹಿಸಿಯೂ ಇಲ್ಲದಿದ್ದ ಕಡೆಯಿಂದ ಅವರ ಮೇಲೆ ಬಂದೆರಗಿತು.

27. ಮುಂದೆ ಪುನರುತ್ಥಾನ ದಿನ ಅವನು ಅವರನ್ನು ಮತ್ತೆ ಅಪಮಾನಿಸುವನು ಮತ್ತು – ಯಾರ ವಿಷಯದಲ್ಲಿ ನೀವು ಜಗಳಾಡುತ್ತಿದ್ದಿರೋ ಆ ನನ್ನ ಪಾಲುದಾರರು ಎಲ್ಲಿದ್ದಾರೆ? ಎಂದು ಪ್ರಶ್ನಿಸುವನು. ಜ್ಞಾನ ನೀಡಲ್ಪಟ್ಟವರು ಹೇಳುವರು; ಇಂದಿನ ದಿನ ಧಿಕ್ಕಾರಿಗಳ ಪಾಲಿಗೆ ಅಪಮಾನ ಹಾಗೂ ಕಾಠಿಣ್ಯ ಮಾತ್ರವಿದೆ.

 28. ಅವರು (ಆ ಧಿಕ್ಕಾರಿಗಳು) ಸ್ವತಃ ತಮ್ಮ ಮೇಲೆ ಅಕ್ರಮವೆಸಗುತ್ತಿದ್ದ ಸ್ಥಿತಿಯಲ್ಲಿ ‘ಮಲಕ್’ಗಳು ಅವರ ಜೀವಗಳನ್ನು ವಶಪಡಿಸಿಕೊಳ್ಳುವರು. ಆಗ ಅವರು ಶರಣಾಗತಿಯ ಪ್ರಸ್ತಾಪ ಮಂಡಿಸಿ, ‘‘ನಾವು ಕೆಟ್ಟದೇನನ್ನೂ ಮಾಡುತ್ತಿರಲಿಲ್ಲ’’- ಎನ್ನುವರು. ಯಾಕಿಲ್ಲ? ನೀವು ಏನು ಮಾಡುತ್ತಿದ್ದಿರೆಂಬುದನ್ನು ಅಲ್ಲಾಹನು ಖಚಿತವಾಗಿ ಬಲ್ಲನು.

29. ನೀವೀಗ ನರಕದ ಬಾಗಿಲುಗಳೊಳಗೆ ಪ್ರವೇಶಿಸಿರಿ. ನೀವು ಅದರಲ್ಲಿ ಸದಾಕಾಲ ಇರುವಿರಿ. ಹೀಗೆ, ಅಹಂಕಾರಿಗಳ ಅಂತಿಮ ನೆಲೆಯು ತುಂಬಾ ಕೆಟ್ಟದಾಗಿರುವುದು. 30.ಧರ್ಮನಿಷ್ಠರಾಗಿದ್ದ ಮಂದಿಯೊಡನೆ, ‘‘ನಿಮ್ಮ ಒಡೆಯನು ಏನನ್ನು ಇಳಿಸಿ ಕೊಟ್ಟಿರುವನು?’’ ಎಂದು ಕೇಳಲಾದಾಗ ಅವರು, ‘‘ಅತ್ಯುತ್ತಮವಾದುದನ್ನು’’ ಎಂದು ಉತ್ತರಿಸುತ್ತಾರೆ. ಹಿತವಾದುದನ್ನು ಮಾಡಿದವರಿಗೆ ಈ ಲೋಕದಲ್ಲೂ ಹಿತವಿದೆ. ಇನ್ನು ಪರಲೋಕದ ನೆಲೆಯೇ ಅತ್ಯುತ್ತಮವಾಗಿದೆ ಮತ್ತು ಧರ್ಮ ನಿಷ್ಠರ ಅಂತಿಮ ನೆಲೆಯು ನಿಜಕ್ಕೂ ಶ್ರೇಷ್ಠವಾಗಿರುತ್ತದೆ.

 31. ಅವರು ಪ್ರವೇಶಿಸುವ ಶಾಶ್ವತ ತೋಟಗಳು – ಅವುಗಳ ತಳದಲ್ಲಿ ನದಿಗಳು ಹರಿಯುತ್ತಿರುವವು. ಅಲ್ಲಿ ಅವರಿಗೆ ಅವರು ಬಯಸಿದ್ದೆಲ್ಲವೂ ಸಿಗುವುದು. ಈ ರೀತಿ ಅಲ್ಲಾಹನು ಧರ್ಮ ನಿಷ್ಠರನ್ನು ಪುರಸ್ಕರಿಸುವನು.

 32. ಅವರು ನಿರ್ಮಲರಾಗಿರುವ ಸ್ಥಿತಿಯಲ್ಲಿ ಅವರ ಜೀವಗಳನ್ನು ಮಲಕ್‌ಗಳು ವಶಪಡಿಸಿಕೊಳ್ಳುವರು. (ಮತ್ತು)‘‘ನಿಮಗೆ ಸಲಾಮ್ (ಶಾಂತಿ). ನಿಮ್ಮ ಕರ್ಮಗಳ ಪ್ರತಿಫಲವಾಗಿ ನೀವು ಸ್ವರ್ಗವನ್ನು ಪ್ರವೇಶಿಸಿರಿ’’ ಎಂದು ಅವರು (ಮಲಕ್‌ಗಳು) ಹೇಳುವರು.

 33. ತಮ್ಮ ಬಳಿಗೆ ಮಲಕ್‌ಗಳು ಬರಬೇಕು ಅಥವಾ ನಿಮ್ಮ ಒಡೆಯನ ಆದೇಶವೇ ಬಂದು ಬಿಡಬೇಕು ಎಂಬುದಕ್ಕಲ್ಲವೇ ಅವರು (ಧಿಕ್ಕಾರಿಗಳು) ಕಾಯುತ್ತಿರುವುದು? ಅವರಿಗಿಂತ ಹಿಂದಿನವರೂ ಹಾಗೆಯೇ ಮಾಡಿದ್ದರು. ಅವರ ಮೇಲೆ ಅಲ್ಲಾಹನೇನೂ ಅಕ್ರಮವೆಸಗಲಿಲ್ಲ. ಸ್ವತಃ ಅವರೇ ತಮ್ಮ ಮೇಲೆ ಅಕ್ರಮವೆಸಗಿಕೊಂಡರು.

34. ಅವರು ಎಸಗುತ್ತಿದ್ದ ಕರ್ಮಗಳ ದುಷ್ಪರಿಣಾಮವು ಅವರನ್ನು ತಲುಪಿತು ಮತ್ತು ಅವರು ಏನನ್ನು ಗೇಲಿಮಾಡುತ್ತಿದ್ದರೋ (ದೇವರ ಶಿಕ್ಷೆ) ಅದುವೇ ಅವರನ್ನು ಆವರಿಸಿ ಕೊಂಡಿತು.

 35. ಬಹುದೇವಾರಾಧಕರು ‘‘ಒಂದು ವೇಳೆ ಅಲ್ಲಾಹನು ಹಾಗೆ ಬಯಸಿದ್ದರೆ, ನಾವಾಗಲಿ ನಮ್ಮ ಪೂರ್ವಜರಾಗಲಿ ಅವನ ಹೊರತು ಬೇರೆ ಯಾರನ್ನೂ ಪೂಜಿಸುತ್ತಿರಲಿಲ್ಲ ಮತ್ತು ಅವರು ಅವನ ಆದೇಶವಿಲ್ಲದೆ ಯಾವುದನ್ನೂ ನಿಷಿದ್ಧವೆಂದು ಪರಿಗಣಿಸುತ್ತಿರಲಿಲ್ಲ’’ ಎನ್ನುತ್ತಾರೆ. ಅವರಿಗಿಂತ ಹಿಂದಿನವರೂ ಹೀಗೆಯೇ ಮಾಡಿದ್ದರು. ಏನಿದ್ದರೂ, ದೂತರುಗಳಿಗೆ, ಸ್ಪಷ್ಟವಾಗಿ (ಸಂದೇಶ) ತಲುಪಿಸುವ ಹೊರತು ಬೇರೆ ಹೊಣೆಗಾರಿಕೆ ಇದೆಯೇ?

36.‘‘ಅಲ್ಲಾಹನನ್ನು ಮಾತ್ರ ಆರಾಧಿಸಿರಿ ಹಾಗೂ ಎಲ್ಲ ಮಿಥ್ಯ ದೇವರುಗಳಿಂದ ದೂರ ಉಳಿಯಿರಿ’’ ಎಂದು ಸಾರುವ ದೂತರನ್ನು ನಾವು ಎಲ್ಲ ಸಮುದಾಯಗಳಲ್ಲೂ ಕಳುಹಿಸಿದ್ದೇವೆ. ಅವರಲ್ಲಿ ಕೆಲವರಿಗೆ (ಕೆಲವು ಸಮುದಾಯಗಳಿಗೆ) ಅಲ್ಲಾಹನು ಸನ್ಮಾರ್ಗ ತೋರಿದರೆ ಮತ್ತೆ ಕೆಲವರ ಪಾಲಿಗೆ ದಾರಿಗೇಡಿತನವೇ ಗತಿಯಾಗಿ ಬಿಟ್ಟಿತು. ನೀವು ಭೂಮಿಯಲ್ಲಿ ನಡೆದಾಡಿ, (ಸತ್ಯವನ್ನು) ತಿರಸ್ಕರಿಸುವವರ ಅಂತ್ಯ ಏನಾಯಿತೆಂದು ನೋಡಿರಿ.

37. (ದೂತರೇ,) ನೀವು ಅವರ ಮಾರ್ಗದರ್ಶನಕ್ಕಾಗಿ ಆಶೆ ಪಟ್ಟ ಮಾತ್ರಕ್ಕೆ ಅಲ್ಲಾಹನು, ತಾನು ದಾರಿಗೆಡಿಸಿರುವವರಿಗೆ ಸರಿದಾರಿ ತೋರಲಾರನು. ಅವರಿಗೆ ಯಾರೂ ಸಹಾಯಕರಿಲ್ಲ.

38. ಅವರು ಜೋರು ಜೋರಾಗಿ ಅಲ್ಲಾಹನ ಆಣೆ ಹಾಕಿ, ‘‘ಸತ್ತವನನ್ನು ಅಲ್ಲಾಹನು ಜೀವಂತ ಗೊಳಿಸುವುದಿಲ್ಲ’’ ಎನ್ನುತ್ತಾರೆ. ಯಾಕಿಲ್ಲ? ಈ ಕುರಿತು ಅವನು ಮಾಡಿರುವ ವಾಗ್ದಾನವು ಸತ್ಯವಾಗಿದೆ. ಆದರೆ ಮಾನವನಲ್ಲಿ ಹೆಚ್ಚಿನವರು ಅರಿತಿಲ್ಲ.

39. ಅವರು ಭಿನ್ನತೆ ತಾಳಿರುವ ವಿಷಯಗಳಲ್ಲಿ ಅವರಿಗೆ (ಸತ್ಯವನ್ನು) ಸ್ಪಷ್ಟಪಡಿಸಲಿಕ್ಕಾಗಿ ಮತ್ತು ಧಿಕ್ಕಾರಿಗಳಿಗೆ, ಅವರು ಸುಳ್ಳರಾಗಿದ್ದರೆಂದು ಮವನರಿಕೆ ಮಾಡಿಸಲಿಕ್ಕಾಗಿ (ಸತ್ತವರನ್ನು ಜೀವಂತಗೊಳಿಸಲಾಗುವುದು.)

  40. ನಾವು ಏನನ್ನಾದರೂ ಮಾಡಲಿಚ್ಛಿಸಿದಾಗ, ಅದಕ್ಕೆ ನಾವು ‘‘ಆಗು’’ ಎಂಬ ಒಂದು ಮಾತನ್ನಷ್ಟೇ ಹೇಳಿ ಬಿಡುತ್ತೇವೆ – ಮತ್ತು ಅದು ಆಗಿ ಬಿಡುತ್ತದೆ.

41. ತಮ್ಮ ಮೇಲೆ ದೌರ್ಜನ್ಯ ನಡೆದ ಬಳಿಕ ಅಲ್ಲಾಹನ ಮಾರ್ಗದಲ್ಲಿ ವಲಸೆ ಹೋದವರಿಗೆ, ನಾವು ಈ ಲೋಕದಲ್ಲಿ ಉತ್ತಮ ನೆಲೆಯನ್ನು ಒದಗಿಸುತ್ತೇವೆ. ಇನ್ನು, ಪರಲೋಕದ ಪ್ರತಿಫಲವಂತು ಇದಕ್ಕಿಂತ ತುಂಬಾ ದೊಡ್ಡದಾಗಿರುತ್ತದೆ. ಅವರು ಇದನ್ನು ತಿಳಿದಿದ್ದರೆ ಎಷ್ಟು ಚೆನ್ನಾಗಿತ್ತು!

 

42. (ಅವರು) ಸಹನಶೀಲರು ಮತ್ತು ತಮ್ಮ ಒಡೆಯನ ಮೇಲೆ ಭರವಸೆ ಇಟ್ಟವರಾಗಿರುತ್ತಾರೆ

43. (ದೂತರೇ,) ನಿಮಗಿಂತ ಹಿಂದೆಯೂ ನಾವು ಪುರುಷರನ್ನೇ ದೂತರಾಗಿ ರವಾನಿಸಿ, ಅವರೆಡೆಗೆ ದಿವ್ಯ ಸಂದೇಶವನ್ನು ಕಳುಹಿಸಿದ್ದೆವು. ನಿಮಗೆ ತಿಳಿದಿಲ್ಲವಾದರೆ (ಈ ಹಿಂದಿನ ದಿವ್ಯ ಗ್ರಂಥಗಳನ್ನು) ಬಲ್ಲವರೊಡನೆ ಕೇಳಿ ನೋಡಿರಿ.

44. (ಅವರನ್ನೆಲ್ಲಾ) ಸ್ಪಷ್ಟ ಪುರಾವೆಗಳೊಂದಿಗೆ ಹಾಗೂ ಗ್ರಂಥಗಳೊಂದಿಗೆ (ಕಳಿಸಲಾಗಿತ್ತು). ಇನ್ನು ನಾವು ಜನರಿಗಾಗಿ ಇಳಿಸಿಕೊಟ್ಟಿರುವುದನ್ನು (ಸತ್ಯವನ್ನು) ನೀವು ಅವರಿಗೆ ವಿವರಿಸಬೇಕೆಂದು ಮತ್ತು ಅವರು ಚಿಂತನೆ ನಡೆಸಬೇಕೆಂದು ನಾವು ನಿಮ್ಮೆಡೆಗೆ ಈ ಉಪದೇಶವನ್ನು ಇಳಿಸಿಕೊಟ್ಟಿರುವೆವು.

 45. ದುಷ್ಟ ಸಂಚುಗಳನ್ನು ನಡೆಸುವವರೇನು, ಅಲ್ಲಾಹನು ಅವರನ್ನು ಭೂಮಿಯಲ್ಲಿ ಹೂತು ಬಿಡುವ ಅಥವಾ ಅವರೆಂದೂ ಊಹಿಸಿಲ್ಲದ ಕಡೆಯಿಂದ ಒಂದು ಶಿಕ್ಷೆಯು ಅವರ ಬಳಿಗೆ ಬಂದೆರಗುವ ಸಾಧ್ಯತೆಯ ಕುರಿತು ನಿಶ್ಚಿಂತರಾಗಿರುವರೇ ?

46. ಅಥವಾ ಅವರು ನಡೆದಾಡುತ್ತಿರುವಾಗಲೇ, ಅವರಿಗೆ ತಪ್ಪಿಸಿಕೊಳ್ಳಲಿಕ್ಕಾಗದ ಶಿಕ್ಷೆಯೊಂದು ಅವರನ್ನು ಆವರಿಸಿ ಬಿಡುವ ಕುರಿತು?

47. ಅಥವಾ ಅವರು ಭಯಭೀತರಾಗಿರುವ ಸ್ಥಿತಿಯಲ್ಲೇ ಅದು (ಆ ಶಿಕ್ಷೆಯು) ಅವರನ್ನು ಹಿಡಿದುಕೊಳ್ಳುವ ಕುರಿತು (ಅವರು ನಿಶ್ಚಿಂತರಾಗಿರುವರೇ)? ನಿಜವಾಗಿ ನಿಮ್ಮ ಒಡೆಯನು ವಾತ್ಸಲ್ಯಮಯಿಯೂ ಕರುಣಾಳುವೂ ಆಗಿದ್ದಾನೆ.

48. ಅಲ್ಲಾಹನು ಸೃಷ್ಟಿಸಿರುವ ವಿವಿಧ ವಸ್ತುಗಳೆಡೆಗೆ ಅವರು ನೋಡುವುದಿಲ್ಲವೇ? ಅವುಗಳ ನೆರಳುಗಳು ಬಲಗಡೆಗೂ ಎಡಗಡೆಗೂ ಬಾಗಿ ಅಲ್ಲಾಹನಿಗೆ ಸಾಷ್ಟಾಂಗ ವೆರಗುತ್ತಲಿರುತ್ತವೆ – ಮತ್ತು ಅವು ವಿಧೇಯವಾಗಿರುತ್ತವೆ.

49. ಆಕಾಶಗಳಲ್ಲಿ ಇರುವ ಎಲ್ಲವೂ ಮತ್ತು ಭೂಮಿಯಲ್ಲಿರುವ ಎಲ್ಲ ಜೀವಿಗಳು ಹಾಗೂ ಮಲಕ್‌ಗಳು ಅಲ್ಲಾಹನಿಗೇ ಸಾಷ್ಟಾಂಗ ವೆರಗುತ್ತಾರೆ ಮತ್ತು ಅವರು ಅಹಂಕಾರ ತೋರುವುದಿಲ್ಲ.

 50. ಅವರು ತಮ್ಮ ಮೇಲೆ ಪ್ರಾಬಲ್ಯ ಹೊಂದಿರುವ ತಮ್ಮ ಒಡೆಯನಿಗೆ ಅಂಜುತ್ತಾರೆ ಮತ್ತು ತಮಗೆ ಆದೇಶಿಸಲಾಗಿರುವುದನ್ನೇ ಮಾಡುತ್ತಾರೆ.

51. ಮತ್ತು ಅಲ್ಲಾಹನು ಹೇಳುತ್ತಾನೆ; ಇಬ್ಬರನ್ನು ಪೂಜಾರ್ಹರಾಗಿ ಪರಿಗಣಿಸಬೇಡಿ. ಏಕೆಂದರೆ ಕೇವಲ ಅವನೊಬ್ಬನು ಮಾತ್ರ ಪುಜಾರ್ಹನು. ನೀವಿನ್ನು ನನಗೆ ಮಾತ್ರ ಅಂಜಿರಿ.

52. ಆಕಾಶಗಳಲ್ಲಿ ಹಾಗೂ ಭೂಮಿಯಲ್ಲಿ ಇರುವುದೆಲ್ಲವೂ ಅವನಿಗೇ ಸೇರಿದೆ ಮತ್ತು ಅವನು ವಿಧಿಸಿದ ಧರ್ಮ ಮಾತ್ರ ಅನುಸರಣಾರ್ಹವಾಗಿದೆ. ಹೀಗಿರುತ್ತಾ, ನೀವೇನು ಅಲ್ಲಾಹನ ಹೊರತು ಅನ್ಯರ ಭಕ್ತರಾಗುತ್ತೀರಾ?

53. ನಿಮ್ಮ ಬಳಿ ಇರುವ ಅನುಗ್ರಹಗಳೆಲ್ಲವೂ ಅಲ್ಲಾಹನ ಕಡೆಯಿಂದಲೇ ಬಂದಿದೆ ಮತ್ತು ನಿಮಗೆ ಸಂಕಟವೇನಾದರೂ ತಟ್ಟಿದಾಗ ನೀವು ಅವನಲ್ಲೇ ಮೊರೆ ಇಡುತ್ತೀರಿ.

54. ಮುಂದೆ ಅವನು ನಿಮ್ಮಿಂದ ಸಂಕಟವನ್ನು ನಿವಾರಿಸಿದಾಗ ನಿಮ್ಮಲ್ಲಿನ ಒಂದು ಗುಂಪಿನವರು ತಮ್ಮ ಒಡೆಯನ ಜೊತೆ (ಅನ್ಯರನ್ನು) ಪಾಲುಗೊಳಿಸುತ್ತಾರೆ –

55. – ಅವರಿಗೆ ನಾವು ನೀಡಿದ ಕೊಡುಗೆಗಳಿಗೆ ಪ್ರತಿಯಾಗಿ ಕೃತಘ್ನತೆ ತೋರಲಿಕ್ಕಾಗಿ. ಸದ್ಯ ನೀವು ಸಂಭ್ರಮಿಸಿರಿ. ಆದರೆ ಬಹುಬೇಗನೇ ನೀವು ಅರಿಯುವಿರಿ.

56. ಅವರು, ನಾವು ಅವರಿಗೆ ನೀಡಿದ್ದರಲ್ಲಿ, ತಮಗೆ ತಿಳಿದಿಲ್ಲದವರಿಗಾಗಿ (ಮಿಥ್ಯ ದೇವರುಗಳಿಗಾಗಿ) ಒಂದು ಪಾಲನ್ನು ನಿಗದಿಪಡಿಸುತ್ತಾರೆ. ಅಲ್ಲಾಹನಾಣೆ! ನೀವು ಕಟ್ಟಿಕೊಂಡಿದ್ದ ಸುಳ್ಳುಗಳ ಕುರಿತು ಖಂಡಿತ ನಿಮ್ಮನ್ನು ಪ್ರಶ್ನಿಸಲಾಗುವುದು.

 57. ಅವರು ಅಲ್ಲಾಹನಿಗೆ ಪುತ್ರಿಯರಿದ್ದಾರೆಂದು ಆರೋಪಿಸುತ್ತಾರೆ. ಅವನು ಪಾವನನು. ಮತ್ತು ಅವರು ತಮಗೆ ಪ್ರಿಯವಾಗಿರುವುದನ್ನು ತಮ್ಮದೆನ್ನುತ್ತಾರೆ.

58. ಅವರಲ್ಲಿ ಯಾರಿಗಾದರೂ ಹೆಣ್ಣು ಮಗು ಹುಟ್ಟಿದ ಶುಭವಾರ್ತೆಯನ್ನು ತಲುಪಿಸಲಾದಾಗ ಅವನ ಮುಖವು ತೀರಾ ಕಪ್ಪಿಟ್ಟು ಬಿಡುತ್ತದೆ ಮತ್ತು ಅವನು ರೋಷಭರಿತನಾಗಿ ಬಿಡುತ್ತಾನೆ.

59. ತನಗೆ ನೀಡಲಾದ ಶುಭವಾರ್ತೆಯ ಅನಿಷ್ಟದ ಕಾರಣ ಅವನು, ಅದನ್ನು ಅಪಮಾನದೊಂದಿಗೆ ಇಟುಕೊಳ್ಳಲೇ ಅಥವಾ ಮಣ್ಣಲ್ಲಿ ಹೂತು ಬಿಡಲೇ (ಎಂದು ಆಲೋಚಿಸುತ್ತಾ) ತನ್ನ ಜನಾಂಗದವರಿಂದ ಮುಖಮುಚ್ಚಿಕೊಂಡು ಅಲೆಯುತ್ತಿರುತ್ತಾನೆ. ನಿಮಗೆ ತಿಳಿದಿರಲಿ – ಬಹಳ ಕೆಟ್ಟದು, ಅವರ ಆ ತೀರ್ಮಾನ!

60. ಕೆಟ್ಟ ಉಪಮೆಗಳು ಪರಲೋಕದಲ್ಲಿ ನಂಬಿಕೆ ಇಲ್ಲದವರಿಗೆ ಅನ್ವಯಿಸುತ್ತವೆ. ಅಲ್ಲಾಹನಿಗೆ ಮಾತ್ರ ಅತ್ಯುನ್ನತ ಉಪಮೆಗಳು ಅನ್ವಯಿಸುತ್ತವೆ. ಅವನು ಅತ್ಯಂತ ಪ್ರಚಂಡನೂ ಯುಕ್ತಿವಂತನೂ ಆಗಿದ್ದಾನೆ.

 61. ಒಂದು ವೇಳೆ ಅಲ್ಲಾಹನು, ಜನರು ಎಸಗುವ ಅಕ್ರಮಕ್ಕಾಗಿ ಅವರನ್ನು (ಆಗಲೇ) ದಂಡಿಸಲು ಹೊರಟಿದ್ದರೆ, ಅವನು ಇದರ (ಭೂಮುಖದ) ಮೇಲೆ ಯಾವ ಜೀವಿಯನ್ನೂ ಜೀವಂತ ಉಳಿಸುತ್ತಿರಲಿಲ್ಲ. ನಿಜವಾಗಿ ಅವನು ಒಂದು ನಿರ್ದಿಷ್ಟ ಅವಧಿಯ ತನಕ ಅವರಿಗೆ ಕಾಲಾವಕಾಶವನ್ನು ನೀಡುತ್ತಿದ್ದಾನೆ. ಕೊನೆಗೆ ಅವರ ಕಾಲವು ಬಂದು ಬಿಟ್ಟಾಗ, ಅದನ್ನು ಕ್ಷಣಮಾತ್ರಕ್ಕಾದರೂ ಮುಂದೂಡಲು ಅಥವಾ ಹಿಂದೂಡಲು ಅವರಿಂದ ಸಾಧ್ಯವಿಲ್ಲ.

 62. ಅವರು ಸ್ವತಃ ತಮಗಾಗಿ ತೀರಾ ಇಷ್ಟಪಡದವುಗಳನ್ನೆಲ್ಲಾ ಅಲ್ಲಾಹನ ಮೇಲೆ ಆರೋಪಿಸಿ ಬಿಡುತ್ತಾರೆ ಮತ್ತು ಅವರ ನಾಲಿಗೆಗಳು, (ಅವರೇನು ಮಾಡಿದರೂ) ಅವರಿಗೆ ಖಂಡಿತ ಹಿತವಿದೆ ಎಂಬ ಸುಳ್ಳನ್ನು ರಚಿಸುತ್ತವೆ. ಅವರ ಪಾಲಿಗೆ ನರಕಾಗ್ನಿಯೇ ಖಚಿತವಾಗಿದೆ ಮತ್ತು ಇತರರಿಗಿಂತ ಮೊದಲು ಅವರನ್ನೇ (ಅಲ್ಲಿಗೆ) ಕಳಿಸಲಾಗುವುದು.

  63. ಅಲ್ಲಾಹನಾಣೆ! ಖಂಡಿತವಾಗಿಯೂ ನಾವು ನಿಮಗಿಂತ ಹಿಂದಿನ ಸಮುದಾಯಗಳ ಕಡೆಗೂ ದೂತರನ್ನು ಕಳುಹಿಸಿದ್ದೆವು. ಆದರೆ ಶೈತಾನನು ಅವರಿಗೆ ತಮ್ಮ ಕರ್ಮಗಳನ್ನು ಚಂದಗಾಣಿಸಿದನು. ಇಂದು ಅವನೇ ಅವರ ಪರಮಾಪ್ತನಾಗಿರುವನು. ಅವರಿಗೆ ಯಾತನಾಮಯ ಶಿಕ್ಷೆ ಸಿಗಲಿದೆ.

64. ನೀವು ಈ ಗ್ರಂಥದ ಕುರಿತು ಭಿನ್ನತೆ ತಾಳುವವರಿಗೆ ಇದನ್ನು ಸ್ಪಷ್ಟವಾಗಿ ವಿವರಿಸಿಕೊಡಬೇಕೆಂದೇ ನಾವು ಇದನ್ನು ನಿಮಗೆ ಇಳಿಸಿಕೊಟ್ಟಿರುತ್ತೇವೆ. ಹಾಗೆಯೇ ಇದು, ವಿಶ್ವಾಸಿಗಳ ಪಾಲಿಗೆ ಮಾರ್ಗದರ್ಶಿ ಹಾಗೂ ಅನುಗ್ರಹವಾಗಿದೆ.

65. ಅಲ್ಲಾಹನೇ ಆಕಾಶದಿಂದ ನೀರನ್ನಿಳಿಸಿದನು ಮತ್ತು ಅದರ ಮೂಲಕ, ಭೂಮಿಗೆ ಅದರ ಮರಣಾನಂತರ ಜೀವ ನೀಡಿದನು. ಖಂಡಿತವಾಗಿಯೂ ಇದರಲ್ಲಿ ಕೇಳುವ ಜನರಿಗೆ ಪಾಠವಿದೆ.

66. ನಿಮಗೆ ಜಾನುವಾರುಗಳಲ್ಲಿ ಖಂಡಿತ ಪಾಠವಿದೆ. ಅವುಗಳ ಹೊಟ್ಟೆಗಳಲ್ಲಿರುವ ಮಲ ಹಾಗೂ ರಕ್ತಗಳ ಮಧ್ಯದಿಂದ ನಾವು ನಿಮಗೆ ಶುದ್ಧ ಹಾಲನ್ನು ಕುಡಿಸುತ್ತೇವೆ – ಅದು, ಕುಡಿಯುವವರಿಗೆ ತುಂಬಾ ಹಿತಕರವಾಗಿರುತ್ತದೆ.

67. ಹಾಗೆಯೇ ಖರ್ಜೂರ ಮತ್ತು ದ್ರಾಕ್ಷಿಯ ಫಲಗಳಿಂದ ನೀವು ಮಾದಕ ಪಾನೀಯಗಳನ್ನೂ ಉತ್ತಮ ಆಹಾರವನ್ನೂ ತಯಾರಿಸುತ್ತೀರಿ. ಇದರಲ್ಲೂ ಖಂಡಿತ ಪಾಠವಿದೆ – ಬುದ್ಧಿಯನ್ನು ಬಳಸುವವರಿಗೆ.

68. ಇನ್ನು ನಿಮ್ಮೊಡೆಯನು, ಜೇನು ನೊಣಗಳಿಗೆ (ಹೀಗೆಂದು) ದಿವ್ಯ ಸಂದೇಶವನ್ನು ಕಳಿಸಿದನು; ‘‘ಕೆಲವು ಬೆಟ್ಟಗಳಲ್ಲೂ, ಮರಗಳಲ್ಲೂ ಅವರು (ಜನರು) ನಿರ್ಮಿಸುವ ಚಪ್ಪರಗಳಲ್ಲೂ ನೀನು ಮನೆ (ಗೂಡು)ಗಳನ್ನು ನಿರ್ಮಿಸು’’.

69. ‘‘ತರುವಾಯ ನೀನು ಎಲ್ಲ ಬಗೆಯ ಫಲಗಳನ್ನು ತಿನ್ನು ಮತ್ತು ನಿನ್ನ ಒಡೆಯನು ಒದಗಿಸಿರುವ ಸುಗಮವಾದ ಹಾದಿಗಳಲ್ಲಿ ಚಲಿಸು.’’ ಅವುಗಳ ಹೊಟ್ಟೆಯಿಂದ ಒಂದು ಪಾನೀಯವು ಹೊರಡುತ್ತದೆ. ಅದು ವಿವಿಧ ಬಣ್ಣಗಳಲ್ಲಿರುತ್ತದೆ. ಅದರಲ್ಲಿ ಜನರಿಗೆ ಗುಣವಿದೆ. ಚಿಂತನೆ ನಡೆಸುವವರಿಗೆ ಇದರಲ್ಲಿ ಖಂಡಿತ ಪಾಠವಿದೆ.

 70. ಹಾಗೆಯೇ, ಅಲ್ಲಾಹನೇ ನಿಮ್ಮನ್ನು ಸೃಷ್ಟಿಸುತ್ತಾನೆ ಮತ್ತು (ಅವನೇ) ನಿಮ್ಮನ್ನು ಸಾಯಿಸುತ್ತಾನೆ. ಇನ್ನು ನಿಮ್ಮಲ್ಲಿ ಕೆಲವರನ್ನು ಅತಿ ವೃದ್ಧಾಪ್ಯಕ್ಕೆ – ಅಂದರೆ ಎಲ್ಲವನ್ನೂ ತಿಳಿದ ಬಳಿಕ ಏನೂ ತಿಳಿದಿಲ್ಲದಂತಹ ಸ್ಥಿತಿಗೆ ಮರಳಿಸಲಾಗುತ್ತದೆ. ಖಂಡಿತವಾಗಿಯೂ ಅಲ್ಲಾಹನು ಎಲ್ಲವನ್ನೂ ಬಲ್ಲವನೂ, ಸಮರ್ಥನೂ ಆಗಿದ್ದಾನೆ.

71. ಇನ್ನು ಅಲ್ಲಾಹನು ಸಂಪತ್ತಿನ ವಿಷಯದಲ್ಲಿ ನಿಮ್ಮಲ್ಲಿ ಕೆಲವರಿಗೆ ಮತ್ತೆ ಕೆಲವರಿಗಿಂತ ಮೇಲ್ಮೆಯನ್ನು ನೀಡಿದ್ದಾನೆ. ಆದರೆ ಮೇಲ್ಮೆ ನೀಡಲ್ಪಟ್ಟವರು ಯಾರೂ ತಮ್ಮ ಸಂಪತ್ತನ್ನು ತಮ್ಮ ದಾಸರಿಗೆ ಮರಳಿಸಿ, ಆ ವಿಷಯದಲ್ಲಿ ಅವರನ್ನು ತಮಗೆ ಸಮಾನರಾಗಿಸಿ ಕೊಳ್ಳುವುದಿಲ್ಲ. ಅವರೇನು ಅಲ್ಲಾಹನ ಅನುಗ್ರಹಗಳನ್ನು ತಿರಸ್ಕರಿಸುತ್ತಿರುವರೇ?

72. ಮತ್ತು ಅಲ್ಲಾಹನು ನಿಮಗಾಗಿ ನಿಮ್ಮಳಗಿಂದಲೇ ಜೊತೆಗಳನ್ನು ಸೃಷ್ಟಿಸಿದನು ಹಾಗೂ ಆ ನಿಮ್ಮ ಜೊತೆಗಳ ಮೂಲಕ ನಿಮಗೆ ಮಕ್ಕಳನ್ನೂ ಮೊಮ್ಮಕ್ಕಳನ್ನೂ ನೀಡಿದನು ಮತ್ತು ಅವನು ನಿಮಗೆ ಶುದ್ಧವಾದ ಜೀವನಾವಶ್ಯಕ ವಸ್ತುಗಳನ್ನು ನೀಡಿದನು. (ಹೀಗಿರುತ್ತಾ) ಅವರೇನು ಅಸತ್ಯವನ್ನು ನಂಬುತ್ತಾರೆಯೇ? ಮತ್ತು ಅಲ್ಲಾಹನ ಅನುಗ್ರಹಗಳನ್ನು ಅಲ್ಲಗಳೆಯುತ್ತಾರೆಯೇ?

73. ಮತ್ತು ಅವರೇನು ಅಲ್ಲಾಹನ ಹೊರತಾಗಿ, ಆಕಾಶದಿಂದಾಗಲಿ ಭೂಮಿಯಿಂದಾಗಲಿ ಅವರಿಗೆ ಯಾವ ಆಹಾರವನ್ನೂ ಒದಗಿಸುವ ಅಧಿಕಾರವಿಲ್ಲದವರನ್ನು ಮತ್ತು ಅಂತಹ ಸಾಮರ್ಥ್ಯವೂ ಇಲ್ಲದವರನ್ನು ಪೂಜಿಸುತ್ತಿದ್ದಾರೆಯೇ?

74. ಅಲ್ಲಾಹನಿಗೆ ಹೋಲಿಕೆಗಳನ್ನು ಕಲ್ಪಿಸಬೇಡಿ (ಏನನ್ನೂ ಅಲ್ಲಾಹನಿಗೆ ಹೋಲಿಸಬೇಡಿ). ಅಲ್ಲಾಹನು ಖಚಿತವಾಗಿ ಬಲ್ಲವನು ಮತ್ತು ನೀವು ಬಲ್ಲವರಲ್ಲ.

75. ಅಲ್ಲಾಹನು, ಒಂದು ಉದಾಹರಣೆಯನ್ನು ನೀಡುತ್ತಾನೆ; ಒಬ್ಬನು (ಯಾರದೋ) ಮಾಲಕತ್ವದಲ್ಲಿರುವ ಅಧಿಕಾರವಿಲ್ಲದ ದಾಸನಾಗಿದ್ದಾನೆ ಹಾಗೂ ಇನ್ನೊಬ್ಬನಿಗೆ ನಾವು ಉತ್ತಮ ಸಂಪತ್ತನ್ನು ದಯಪಾಲಿಸಿದ್ದು, ಅವನು ಅದರಿಂದ ಗುಟ್ಟಾಗಿಯೂ ಬಹಿರಂಗವಾಗಿಯೂ (ಸತ್ಕಾರ್ಯಕ್ಕೆ) ವೆಚ್ಚ ಮಾಡುತ್ತಾನೆ. ಅವರೇನು ಸಮಾನರೇ? ಪ್ರಶಂಸೆಗಳು ಅಲ್ಲಾಹನಿಗೆ. ಆದರೆ ಅವರಲ್ಲಿ ಹೆಚ್ಚಿನವರು ಅರಿತಿಲ್ಲ.

 76. ಮತ್ತೆ ಅಲ್ಲಾಹನು ಇಬ್ಬರು ಪುರುಷರ ಒಂದು ಉದಾಹರಣೆಯನ್ನು ನೀಡುತ್ತಾನೆ; ಒಬ್ಬನು ಮೂಗನಾಗಿದ್ದಾನೆ ಹಾಗೂ ಏನನ್ನೂ ಮಾಡುವ ಸಾಮರ್ಥ್ಯ ಇಲ್ಲದವನಾಗಿದ್ದಾನೆ. ಅವನು ತನ್ನ ಒಡೆಯನ ಪಾಲಿಗೆ ಹೊರೆಯಾಗಿದ್ದಾನೆ. ಅವನು (ಒಡೆಯನು) ಆತನನ್ನು ಎಲ್ಲಿಗೆ ಕಳಿಸಿದರೂ ಅವನು ಯಾವುದೇ ಹಿತವನ್ನು ತರುವುದಿಲ್ಲ. ಅವನು ಮತ್ತು ಸದಾ ನ್ಯಾಯವನ್ನು ಆದೇಶಿಸುವವನು ಹಾಗೂ ಸ್ವತಃ ಸನ್ಮಾರ್ಗದಲ್ಲಿ ಇರುವಾತನು ಸಮಾನರಾಗಬಲ್ಲರೇ?

77. ಇನ್ನು, ಆಕಾಶಗಳ ಮತ್ತು ಭೂಮಿಯ ಗುಪ್ತ ಜ್ಞಾನವೆಲ್ಲವೂ ಅಲ್ಲಾಹನಿಗೇ ಸೇರಿದೆ. (ಲೋಕಾಂತ್ಯದ) ಆ ಕ್ಷಣವು, ಕಣ್ಮುಚ್ಚಿ ತೆರೆಯುವ ಹೊತ್ತಿಗೆ ಅಥವಾ ಅದಕ್ಕಿಂತಲೂ ಬೇಗನೆ ಸಂಭವಿಸಲಿದೆ. ಖಂಡಿತವಾಗಿಯೂ ಅಲ್ಲಾಹನು ಎಲ್ಲವನ್ನೂ ಮಾಡಬಲ್ಲವನಾಗಿದ್ದಾನೆ.

  78. ಮತ್ತು ನಿಮಗೇನೂ ತಿಳಿಯದಿದ್ದಾಗ ಅಲ್ಲಾಹನು ನಿಮ್ಮನ್ನು ನಿಮ್ಮ ತಾಯಂದಿರ ಉದರಗಳಿಂದ ಹೊರ ತಂದನು ಮತ್ತು ನೀವು ಕೃತಜ್ಞರಾಗಬೇಕೆಂದು ನಿಮಗೆ ಕೇಳುವ ಸಾಮರ್ಥ್ಯವನ್ನೂ ನೋಡುವ ಸಾಮರ್ಥ್ಯವನ್ನೂ ಹೃದಯಗಳನ್ನೂ ರಚಿಸಿಕೊಟ್ಟನು.

79. ಅವರು ಕಾಣುವುದಿಲ್ಲವೇ, ಆಕಾಶ ಮಧ್ಯದಲ್ಲಿ ವಿಧೇಯ ಸ್ಥಿತಿಯಲ್ಲಿ ಹಾರಾಡುವ ಪಕ್ಷಿಗಳನ್ನು? ಅವುಗಳನ್ನು ಆಧರಿಸುವವನು ಅಲ್ಲಾಹನಲ್ಲದೆ ಬೇರಾರೂ ಅಲ್ಲ. ಖಂಡಿತವಾಗಿಯೂ ಇದರಲ್ಲಿ ಸೂಚನೆಗಳಿವೆ, ನಂಬುವ ಜನರಿಗೆ.

  80. ಮತ್ತು ಅಲ್ಲಾಹನು ನಿಮ್ಮ ನಿವಾಸಗಳನ್ನು ನಿಮ್ಮ ಪಾಲಿಗೆ ನೆಮ್ಮದಿಯ ನೆಲೆಗಳಾಗಿ ಮಾಡಿದನು ಮತ್ತು ಜಾನುವಾರುಗಳ ಚರ್ಮಗಳನ್ನು ನಿಮ್ಮ ಪಾಲಿನ ಪ್ರಯಾಣ ಶಿಬಿರಗಳಾಗಿ ಮಾಡಿದನು. ಪ್ರಯಾಣ ಹೊರಡುವ ದಿನ ಹಾಗೂ ವಿಶ್ರಾಮದ ದಿನ ನೀವು ಅವುಗಳನ್ನು ಹಗುರವಾಗಿ (ಅನುಕೂಲಕರವಾಗಿ) ಕಾಣುತ್ತೀರಿ. ಇನ್ನು ಅವನು ಅವುಗಳ (ಜಾನುವಾರುಗಳ) ಉಣ್ಣೆ, ಮೃದುರೋಮ ಮತ್ತು ರೋಮಗಳಿಂದ ನಿಮಗೆ ಹಲವು ನಿತ್ಯ ಬಳಕೆಯ ವಸ್ತುಗಳನ್ನೂ ನಿರ್ದಿಷ್ಟ ಕಾಲದ ವರೆಗೆ ಬಳಸುವ ವಸ್ತುಗಳನ್ನೂ ಒದಗಿಸಿದನು.

81. ಮತ್ತು ಅಲ್ಲಾಹನು, ತಾನು ಸೃಷ್ಟಿಸಿದ ವಸ್ತುಗಳ ಮೂಲಕ ನಿಮಗೆ ನೆರಳನ್ನು ಒದಗಿಸಿದನು ಹಾಗೂ ನಿಮಗಾಗಿ ಬೆಟ್ಟಗಳಲ್ಲಿ ಆಶ್ರಯಗಳನ್ನು ನಿರ್ಮಿಸಿದನು ಮತ್ತು ನಿಮಗಾಗಿ, ನಿಮ್ಮನ್ನು ಸೆಖೆಯಿಂದ ರಕ್ಷಿಸುವ ಉಡುಗೆಗಳನ್ನೂ, ನಿಮ್ಮನ್ನು ನಿಮ್ಮ ಯುದ್ಧಗಳಲ್ಲಿ ರಕ್ಷಿಸುವ ಕವಚಗಳನ್ನೂ ರಚಿಸಿಕೊಟ್ಟನು. ಈ ರೀತಿ ಅವನು ನಿಮ್ಮ ಪಾಲಿಗೆ ತನ್ನ ಅನುಗ್ರಹವನ್ನು ಪೂರ್ತಿಗೊಳಿಸಿರುವನು.

  82. (ದೂತರೇ,) ಇದೀಗ ಅವರು ಮುಖ ತಿರುಗಿಸಿಕೊಂಡರೆ, ನಿಮ್ಮ ಮೇಲಿರುವುದು, ಸ್ಪಷ್ಟವಾಗಿ ತಲುಪಿಸುವ ಹೊಣೆ ಮಾತ್ರ.

83. ಅವರು ಅಲ್ಲಾಹನ ಅನುಗ್ರಹಗಳನ್ನು ಗುರುತಿಸುತ್ತಾರೆ. ಆದರೆ ಆ ಬಳಿಕ ಅದನ್ನು ಅಲ್ಲಗಳೆದು ಬಿಡುತ್ತಾರೆ ಮತ್ತು ಅವರಲ್ಲಿ ಹೆಚ್ಚಿನವರು ಕೃತಘ್ನರು.

84. ನಾವು ಪ್ರತಿಯೊಂದು ಸಮುದಾಯದಿಂದ ಒಬ್ಬ ಸಾಕ್ಷಿಯನ್ನು ಎಬ್ಬಿಸುವ ದಿನ, ಯಾವ ಧಿಕ್ಕಾರಿಗೂ (ಸಬೂಬು ಮಂಡಿಸಲು) ಅನುಮತಿ ಸಿಗಲಾರದು ಮತ್ತು ಪರಿತಪಿಸಿ ಮರಳಿರೆಂಬ ಬೇಡಿಕೆಯನ್ನೂ ಅವರ ಮುಂದೆ ಮಂಡಿಸಲಾಗದು.

85. ಅಕ್ರಮಿಗಳು ಶಿಕ್ಷೆಯನ್ನು ಕಂಡ ಬಳಿಕ, ಅವರ ಪಾಲಿಗೆ ಅದನ್ನು ಹಗುರಗೊಳಿಸಲಾಗುವುದಿಲ್ಲ ಮತ್ತು ಅವರಿಗೆ ಹೆಚ್ಚಿನ ಕಾಲಾವಕಾಶವನ್ನೂ ನೀಡಲಾಗುವುದಿಲ್ಲ.

86. ಅನೇಕರನ್ನು ಪೂಜಿಸಿದ್ದವರು, ತಮ್ಮ ಪೂಜ್ಯರನ್ನು ಕಂಡಾಗ (ಅಲ್ಲಾಹನೊಡನೆ); ‘‘ನಮ್ಮೊಡೆಯಾ, ನಿನ್ನನ್ನು ಬಿಟ್ಟು ನಾವು ಕರೆದು ಪ್ರಾರ್ಥಿಸುತ್ತಿದ್ದ ನಮ್ಮ ಪಾಲುದಾರ ದೇವರುಗಳು ಇವರೇ’’ ಎನ್ನುವರು. ಆದರೆ ಅವರು (ಆ ಪಾಲುದಾರರು) ‘‘ಖಂಡಿತ ನೀವು ಸುಳ್ಳರು’’ ಎಂದು ಅವರಿಗೆ ಉತ್ತರಿಸುವರು.

87. ಮತ್ತು ಅವರು ಆ ದಿನ ಅಲ್ಲಾಹನ ಸನ್ನಿಧಿಯಲ್ಲಿ ಶರಣಾಗುವರು. ಅವರು ನಂಬಿಕೊಂಡಿದ್ದ ಎಲ್ಲ ಕೃತಕ ಆಶ್ರಯಗಳು ಅವರಿಂದ ಕಳೆದು ಹೋಗುವವು.

88. ಸತ್ಯವನ್ನು ಧಿಕ್ಕರಿಸಿದವರಿಗೆ ಮತ್ತು ಅಲ್ಲಾಹನ ಮಾರ್ಗದಿಂದ (ಜನರನ್ನು) ತಡೆದವರಿಗೆ, ಅವರು ಹಬ್ಬಿದ ಅಶಾಂತಿಯ ಕಾರಣ ನಾವು (ಪರಲೋಕದಲ್ಲಿ) ಹಿಂಸೆಯ ಮೇಲೆ ಮತ್ತಷ್ಟು ಹಿಂಸೆಯನ್ನು ಹೆಚ್ಚಿಸುವೆವು.

89. (ದೂತರೇ,) ನಾವು ಪ್ರತಿಯೊಂದು ಸಮುದಾಯದ ಕುರಿತು ಸಾಕ್ಷಿಯಾಗಿ ಅವರೊಳಗಿಂದಲೇ ಒಬ್ಬ ವ್ಯಕ್ತಿಯನ್ನು ಎಬ್ಬಿಸುವ ದಿನ, ಅವರೆಲ್ಲರ ಕುರಿತು ಸಾಕ್ಷಿಯಾಗಿ ನಿಮ್ಮನ್ನು ಮುಂದೆ ತರುವೆವು. ಎಲ್ಲ ವಿಷಯಗಳನ್ನೂ ವಿವರಿಸುವ ಗ್ರಂಥವನ್ನು (ಕುರ್‌ಆನ್‌ಅನ್ನು) ನಾವು ನಿಮಗೆ ಇಳಿಸಿಕೊಟ್ಟಿರುವೆವು – ಇದು ಶರಣಾಗಿರುವವರ ಪಾಲಿಗೆ ಮಾರ್ಗದರ್ಶಿಯೂ ಅನುಗ್ರಹವೂ ಶುಭವಾರ್ತೆಯೂ ಆಗಿದೆ.

90. ಖಂಡಿತವಾಗಿಯೂ ಅಲ್ಲಾಹನು ನಿಮಗೆ, ನ್ಯಾಯ ಪಾಲಿಸಬೇಕೆಂದೂ ಸೌಜನ್ಯ ತೋರಬೇಕೆಂದೂ ಬಂಧುಗಳಿಗೆ (ಅವರ ಹಕ್ಕನ್ನು) ನೀಡಬೇಕೆಂದೂ ಆದೇಶಿಸುತ್ತಾನೆ ಮತ್ತು ಅವನು ನಿಮ್ಮನ್ನು ಅಶ್ಲೀಲ ಕೃತ್ಯಗಳಿಂದಲೂ, ಅನ್ಯಾಯದಿಂದಲೂ ವಿದ್ರೋಹದಿಂದಲೂ ತಡೆಯುತ್ತಾನೆ. ನೀವುಪಾಠ ಕಲಿಯಬೇಕೆಂದು ಅವನು ನಿಮಗೆ ಉಪದೇಶಿಸುತ್ತಾನೆ.

91. ನೀವು ಅಲ್ಲಾಹನ ಜೊತೆ ಕರಾರು ಮಾಡಿರುವಾಗ ಆ ಕರಾರನ್ನು ತಪ್ಪದೆ ಪಾಲಿಸಿರಿ. ಮತ್ತು ಪ್ರತಿಜ್ಞೆ ಮಾಡಿ ಅದನ್ನು ದೃಢಪಡಿಸಿದ ಬಳಿಕ ಹಾಗೂ ನೀವು ಖಚಿತವಾಗಿ ಅಲ್ಲಾಹನನ್ನು ನಿಮ್ಮ ಮೇಲೆ ಸಾಕ್ಷಿಯಾಗಿಸಿಕೊಂಡ ಬಳಿಕ ಆ ಪ್ರತಿಜ್ಞೆಯನ್ನು ಮುರಿಯಬೇಡಿ. ನೀವು ಮಾಡುವುದೆಲ್ಲವನ್ನೂ ಅಲ್ಲಾಹನು ಖಂಡಿತ ಬಲ್ಲನು.

92. ತನ್ನ ನೂಲನ್ನು ಕಷ್ಟಪಟ್ಟು ನುಲಿದ ಬಳಿಕ ತಾನೇ ಅದನ್ನು ಚೂರು ಚೂರಾಗಿಸಿ ಬಿಟ್ಟವಳಂತೆ ನೀವಾಗಬೇಡಿ. ಒಂದು ಪಂಗಡವು ಇನ್ನೊಂದು ಪಂಗಡದೆದುರು ಮೇಲ್ಮೆ ಸಾಧಿಸಬಾರದೆಂದು, ಪರಸ್ಪರ ವಂಚಿಸಲಿಕ್ಕಾಗಿ ನೀವು ನಿಮ್ಮ ಪ್ರತಿಜ್ಞೆಗಳನ್ನು ನೆಪವಾಗಿ ಬಳಸುತ್ತೀರಿ. ನಿಜವಾಗಿ, ಈ (ಪ್ರತಿಜ್ಞೆಗಳ) ಮೂಲಕ ಅಲ್ಲಾಹನು ನಿಮ್ಮನ್ನು ಪರೀಕ್ಷಿಸುತ್ತಿದ್ದಾನೆ. ನೀವು (ಪರಸ್ಪರ) ಭಿನ್ನತೆ ತಾಳಿದ್ದ ಎಲ್ಲ ವಿಷಯಗಳನ್ನು ಅವನು ಪುನರುತ್ಥಾನ ದಿನ ನಿಮಗೆ ವಿವರಿಸಲಿದ್ದಾನೆ.

93. ಅಲ್ಲಾಹನು ಬಯಸಿದ್ದರೆ ನಿಮ್ಮನ್ನು ಒಂದೇ ಸಮುದಾಯವಾಗಿಸಿ ಬಿಡುತ್ತಿದ್ದನು. ಆದರೆ ಅವನು ತಾನಿಚ್ಛಿಸಿದವರನ್ನು ದಾರಿಗೆಡಿಸುತ್ತಾನೆ ಮತ್ತು ತಾನಿಚ್ಛಿಸಿದವರನ್ನು ಸನ್ಮಾರ್ಗದಲ್ಲಿ ನಡೆಸುತ್ತಿದ್ದಾನೆ. ನೀವು ಮಾಡುತ್ತಿದ್ದ ಕರ್ಮಗಳ ಕುರಿತು ನಿಮ್ಮನ್ನು ಖಂಡಿತ ಪ್ರಶ್ನಿಸಲಾಗುವುದು.

94. ಮತ್ತು ನೀವು ನಿಮ್ಮ ಪ್ರತಿಜ್ಞೆಗಳನ್ನು ಪರಸ್ಪರ ವಂಚನೆಯ ನೆಪವಾಗಿ ಬಳಸಿಕೊಳ್ಳಬೇಡಿ. ಅನ್ಯಥಾ ಹೆಜ್ಜೆಯು ಸ್ಥಿರವಾದ ಬಳಿಕ ಅಸ್ಥಿರವಾಗಿ ಬಿಡುವುದು ಮತ್ತು ನೀವು ಅಲ್ಲಾಹನ ಮಾರ್ಗದಿಂದ (ಜನರನ್ನು) ತಡೆದುದರ ದುಷ್ಫಲವನ್ನು ಅನುಭವಿಸುವಿರಿ ಮತ್ತು ನಿಮಗೆ ಭಾರೀ ಶಿಕ್ಷೆ ಸಿಗಲಿದೆ.

95. ಮತ್ತು ನೀವು ಅಲ್ಲಾಹನ ಜೊತೆಗಿನ ಕರಾರನ್ನು ಕ್ಷುಲ್ಲಕ ಬೆಲೆಗೆ ಮಾರಬೇಡಿ. ನೀವು ಬಲ್ಲವರಾಗಿದ್ದರೆ, ಅಲ್ಲಾಹನ ಬಳಿ ಏನಿದೆಯೋ ಅದುವೇ ನಿಮ್ಮ ಪಾಲಿಗೆ ಉತ್ತಮವಾಗಿದೆ.

96. ನಿಮ್ಮ ಬಳಿ ಇರುವುದೆಲ್ಲವೂ ಮುಗಿದು ಹೋಗುವುದು. ಆದರೆ ಅಲ್ಲಾಹನ ಬಳಿ ಇರುವ ಎಲ್ಲವೂ, ಸದಾಕಾಲ ಉಳಿದಿರುವುದು. ಖಂಡಿತವಾಗಿಯೂ ನಾವು, ಸಹನಶೀಲರಾಗಿದ್ದವರಿಗೆ, ಅವರು ಎಸಗಿದ ಕರ್ಮಕ್ಕಿಂತ ತುಂಬಾ ಶ್ರೇಷ್ಠವಾದ ಪ್ರತಿಫಲವನ್ನು ನೀಡಲಿದ್ದೇವೆ.

97. ಸತ್ಕರ್ಮವೆಸಗಿದ ವ್ಯಕ್ತಿ – ಪುರುಷನಿರಲಿ ಸ್ತ್ರೀ ಇರಲಿ – ವಿಶ್ವಾಸಿಯಾಗಿದ್ದಲ್ಲಿ, ನಾವು ಆತನಿಗೆ ಶುದ್ಧವಾದ ಬದುಕನ್ನು ನೀಡುವೆವು ಮತ್ತು ಅವರಿಗೆ ನಾವು ಅವರು ಎಸಗಿದ ಕರ್ಮಕ್ಕಿಂತಲೂ ತುಂಬಾ ಶ್ರೇಷ್ಠ ಪ್ರತಿಫಲವನ್ನು ನೀಡುವೆವು.

98. ನೀವು ಕುರ್‌ಆನ್‌ಅನ್ನು ಓದುವಾಗ, ಶಪಿತ ಶೈತಾನನ ವಿರುದ್ಧ ಅಲ್ಲಾಹನ ರಕ್ಷಣೆಯನ್ನು ಬೇಡಿರಿ.

99. ವಿಶ್ವಾಸಿಗಳ ಮೇಲೆ ಹಾಗೂ ತಮ್ಮ ಒಡೆಯನಲ್ಲಿ ಭರವಸೆ ಇಟ್ಟಿರುವವರ ಮೇಲೆ ಆತನಿಗೆ (ಶೈತಾನನಿಗೆ) ಖಂಡಿತ ಯಾವ ನಿಯಂತ್ರಣವೂ ಇಲ್ಲ.

100. ಅವನಿಗೆ (ಶೈತಾನನಿಗೆ) ನಿಯಂತ್ರಣವಿರುವುದು ಅವನನ್ನು ತಮ್ಮ ಆಪ್ತನಾಗಿಸಿಕೊಂಡವರು ಹಾಗೂ ಅವನ (ಅಲ್ಲಾಹನ) ಜೊತೆ ಇತರರನ್ನು ಪಾಲುಗೊಳಿಸುವವರ ಮೇಲೆ ಮಾತ್ರ.

 101. (ದೂತರೇ,) ನಾವು ಒಂದು ವಚನದ ಸ್ಥಾನದಲ್ಲಿ ಇನ್ನೊಂದು ವಚನವನ್ನು ತಂದಾಗ ಅವರು, ‘‘(ಇದನ್ನೆಲ್ಲಾ) ನೀವೇ ರಚಿಸುತ್ತೀರಿ’’ ಎನ್ನುತ್ತಾರೆ.- ತಾನು ಇಳಿಸಿರುವುದು ಏನೆಂಬುದನ್ನು ಅಲ್ಲಾಹನು ಚೆನ್ನಾಗಿ ಅರಿತಿರುತ್ತಾನೆ. ನಿಜವಾಗಿ ಅವರಲ್ಲಿ ಹೆಚ್ಚಿನವರು ಬಲ್ಲವರಲ್ಲ.

 102. ಸತ್ಯ ಸಹಿತವಾಗಿ, ವಿಶ್ವಾಸಿಗಳನ್ನು ಸ್ಥಿರಗೊಳಿಸಲಿಕ್ಕಾಗಿ ಹಾಗೂ ಶರಣಾದವರಿಗೆ ಮಾರ್ಗದರ್ಶನ ಮತ್ತು ಶುಭವಾರ್ತೆಯಾಗಿ ಇದನ್ನು ನಿಮ್ಮ ಒಡೆಯನ ಕಡೆಯಿಂದ, ಪವಿತ್ರ ಆತ್ಮ (ಜಿಬ್ರೀಲರು) ಇಳಿಸಿರುವರೆಂದು ನೀವು ಹೇಳಿರಿ.

  103. ಒಬ್ಬ ಮಾನವನು (ನಿಮಗೆ) ಇದನ್ನು ಕಲಿಸಿ ಕೊಡುತ್ತಾನೆಂದು ಅವರು ಆರೋಪಿಸುತ್ತಿರುವುದು ನಮಗೆ ಚೆನ್ನಾಗಿ ತಿಳಿದಿದೆ. ಆದರೆ ಅವರು ಆ ಸುಳ್ಳಾರೋಪವನ್ನು ಯಾರೆಡೆಗೆ ಸೂಚಿಸುತ್ತಿರುವರೋ ಆತನದು ‘ಅಜಮಿ’ (ಅರಬಿ ಅಲ್ಲದ) ಭಾಷೆಯಾಗಿದೆ ಮತ್ತು ಇದು (ಕುರ್‌ಆನ್) ಸ್ಪಷ್ಟವಾದ ಅರಬಿ ಭಾಷೆಯಲ್ಲಿದೆ.

104. ಅಲ್ಲಾಹನ ವಚನಗಳಲ್ಲಿ ನಂಬಿಕೆ ಇಲ್ಲದವರಿಗೆ ಖಂಡಿತವಾಗಿಯೂ ಅಲ್ಲಾಹನು ಸರಿದಾರಿಯನ್ನು ತೋರುವುದಿಲ್ಲ. ಅವರಿಗೆ ಯಾತನಾಮಯ ಶಿಕ್ಷೆ ಇದೆ.

105. ಅಲ್ಲಾಹನ ವಚನಗಳಲ್ಲಿ ನಂಬಿಕೆ ಇಲ್ಲದವರು ಮಾತ್ರವೇ, ಸುಳ್ಳಾರೋಪಗಳನ್ನು ಸೃಷ್ಟಿಸುತ್ತಾರೆ. ಅವರೇ ಸುಳ್ಳುಗಾರರು.

106. (ಧಿಕ್ಕಾರವನ್ನು ಪ್ರಕಟಿಸಲು) ನಿರ್ಬಂಧಿತನಾಗಿದ್ದು, ಮನಸಾರೆ ವಿಶ್ವಾಸದಲ್ಲೇ ಸಂತೃಪ್ತನಾಗಿರುವವನ ಹೊರತು – ಅಲ್ಲಾಹನಲ್ಲಿ ವಿಶ್ವಾಸವಿಟ್ಟ ಬಳಿಕ ಆತನನ್ನು ಧಿಕ್ಕರಿಸಿದವನು ಮತ್ತು ಧಿಕ್ಕಾರಕ್ಕಾಗಿ ತನ್ನ ಮನಸ್ಸನ್ನು ತೆರೆದವನು, ಅಲ್ಲಾಹನ ಕ್ರೋಧಕ್ಕೆ ತುತ್ತಾಗುವನು ಮತ್ತು ಅವರಿಗೆ ಭಾರೀ ಘೋರ ಶಿಕ್ಷೆ ಸಿಗಲಿದೆ.

107. ಇದೇಕೆಂದರೆ, ಅವರು ಪರಲೋಕದೆದುರು ಈ ಲೋಕವನ್ನು ಮೆಚ್ಚಿದರು. ಮತ್ತು ಅಲ್ಲಾಹನು ಧಿಕ್ಕಾರಿಗಳಿಗೆ ಸರಿದಾರಿ ತೋರುವುದಿಲ್ಲ.

108. ಅಲ್ಲಾಹನು ಅವರ ಮನಸ್ಸುಗಳ ಮೇಲೂ ಕಿವಿಗಳ ಮೇಲೂ ಕಣ್ಣುಗಳ ಮೇಲೂ ಮುದ್ರೆ ಒತ್ತಿರುವನು. ಅವರೇ ಅರಿವಿಲ್ಲದವರು.

109. ಪರಲೋಕದಲ್ಲಿ ನಷ್ಟ ಅನುಭವಿಸುವವರು ಅವರೇ ಎಂಬುದರಲ್ಲಿ ಸಂದೇಹವಿಲ್ಲ.

 110. ಅತ್ತ ಖಂಡಿತವಾಗಿಯೂ ನಿಮ್ಮ ಒಡೆಯನು, ಪರೀಕ್ಷೆಗೆ ತುತ್ತಾದ ಬಳಿಕ ವಲಸೆ ಹೋದ ಮತ್ತು ಆ ಬಳಿಕ ಹೋರಾಡಿದ ಹಾಗೂ ಸಹನಶೀಲರಾಗಿದ್ದವರ ಪರವಾಗಿದ್ದಾನೆ. ಖಂಡಿತವಾಗಿಯೂ ಇಷ್ಟಾದ ಬಳಿಕ ನಿಮ್ಮ ಒಡೆಯನು (ಅವರ ಪಾಲಿಗೆ) ಕ್ಷಮಾಶೀಲನೂ ಕರುಣಾಮಯಿಯೂ ಆಗಿರುತ್ತಾನೆ.

111. ಪ್ರತಿಯೊಬ್ಬನೂ ಕೇವಲ ತನ್ನ ಪರವಾಗಿ ಮಾತ್ರ ವಾದಿಸಲಿರುವ ಮತ್ತು ಪ್ರತಿಯೊಬ್ಬನಿಗೂ ತನ್ನ ಕರ್ಮದ ಪರಿಪೂರ್ಣ ಪ್ರತಿಫಲ ನೀಡಲಾಗುವ ಆ ದಿನ, ಅವರ ಮೇಲೆ ಅನ್ಯಾಯ ನಡೆಯದು.

112. ಅಲ್ಲಾಹನು ಒಂದು ನಾಡಿನ ಉದಾಹರಣೆ ನೀಡಿರುವನು; ಅದು ತುಂಬಾ ಶಾಂತ ಹಾಗೂ ಸಂತೃಪ್ತವಾಗಿತ್ತು. ಅದರ (ವಾಸಿಗಳ) ಆಹಾರವು ಧಾರಾಳವಾಗಿ ಅದರ ಬಳಿಗೆ ತಲುಪುತ್ತಿತ್ತು. ಮುಂದೆ ಅದು, ಅಲ್ಲಾಹನ ಅನುಗ್ರಹಗಳೆದುರು ಕೃತಘ್ನತೆ ತೋರಿತು. ಅವರ ಈ ಕೃತ್ಯಗಳ ಫಲವಾಗಿ ಅಲ್ಲಾಹನು ಅವರಿಗೆ ಹಸಿವು ಮತ್ತು ಭಯಗಳ ರುಚಿ ಉಣಿಸಿದನು.

113. ಖಂಡಿತವಾಗಿಯೂ ಅವರ ಬಳಿಗೆ, ಅವರೊಳಗಿಂದಲೇ ದೂತರು ಬಂದರು. ಆದರೆ ಅವರು (ನಾಡಿನವರು) ಅವರನ್ನು ತಿರಸ್ಕರಿಸಿದರು. ಕೊನೆಗೆ (ಅಲ್ಲಾಹನ) ಶಿಕ್ಷೆಯು ಅವರ ಮೇಲೆರಗಿತು. ಅವರು ಅಕ್ರಮಿಗಳಾಗಿದ್ದರು.

114. ನೀವು ನಿಜಕ್ಕೂ ಅವನನ್ನೇ (ಅಲ್ಲಾಹನನ್ನೇ) ಪೂಜಿಸುವವರಾಗಿದ್ದರೆ, ಅಲ್ಲಾಹನು ನಿಮಗೆ ನೀಡಿರುವ ಸಮ್ಮತ ಹಾಗೂ ಶುದ್ಧ ಆಹಾರವನ್ನು ತಿನ್ನಿರಿ ಮತ್ತು ಅಲ್ಲಾಹನ ಅನುಗ್ರಹಗಳಿಗಾಗಿ ಕೃತಜ್ಞತೆ ಸಲ್ಲಿಸಿರಿ.

115. ಶವ,ರಕ್ತ, ಹಂದಿಯ ಮಾಂಸ ಮತ್ತು ಅಲ್ಲಾಹನ ಹೊರತು ಅನ್ಯರ ಹೆಸರನ್ನು ಉಚ್ಚರಿಸಲಾದವುಗಳು ನಿಮ್ಮ ಪಾಲಿಗೆ ನಿಷಿದ್ಧವಾಗಿವೆ. ಇನ್ನು, ತೀರಾ ಅಸಹಾಯಕನಾಗಿ ಬಿಟ್ಟವನು ಅವಿಧೇಯತೆಯ ಅಥವಾ ವಿದ್ರೋಹದ ಇರಾದೆ ಇಲ್ಲದೆ (ತಪ್ಪು ಮಾಡಿದರೂ) ಅಲ್ಲಾಹನು ಖಂಡಿತ ಕ್ಷಮಿಸುವವನು ಮತ್ತು ಕರುಣಾಳುವಾಗಿದ್ದಾನೆ.

116. ಅಲ್ಲಾಹನ ಮೇಲೆ ಸುಳ್ಳಾರೋಪ ಹೊರಿಸಲು ‘‘ಇದು ಹಲಾಲ್’’ ಹಾಗೂ ‘‘ಇದು ಹರಾಮ್’’ ಎಂದು ನಿಮ್ಮ ನಾಲಿಗೆಗಳು ಸೃಷ್ಟಿಸುವ ಸುಳ್ಳುಗಳನ್ನು ನೀವು ಹೇಳಬೇಡಿ. ಅಲ್ಲಾಹನ ಮೇಲೆ ಸುಳ್ಳನ್ನು ಆರೋಪಿಸುವವರು ಎಂದೂ ವಿಜಯಿಗಳಾಗುವುದಿಲ್ಲ.

117. ತೀರಾ ಅಲ್ಪ ಲಾಭ(ವನ್ನು ಅವರು ಅರಸುತ್ತಿದ್ದಾರೆ). (ಕೊನೆಗೆ) ಅವರಿಗೆ ಯಾತನಾಮಯ ಶಿಕ್ಷೆ ಸಿಗಲಿದೆ.

118. ನಾವು ಈ ಹಿಂದೆ ನಿಮಗೆ ತಿಳಿಸಿರುವ ವಸ್ತುಗಳನ್ನು ನಾವು ಯಹೂದಿಗಳ ಪಾಲಿಗೆ ನಿಷೇಧಿಸಿದ್ದೆವು. ನಾವು ಅವರ ಮೇಲೆ ಯಾವ ಅಕ್ರಮವನ್ನೂ ಎಸಗಲಿಲ್ಲ. ಅವರು ತಾವೇ ತಮ್ಮ ಮೇಲೆ ಅಕ್ರಮ ವೆಸಗಿಕೊಂಡಿದ್ದರು.

119. ಖಂಡಿತವಾಗಿಯೂ ನಿಮ್ಮಡೆಯನು, ಅಜ್ಞಾನದಿಂದ ದುಷ್ಕರ್ಮಗಳನ್ನೆಸಗಿ ಆ ಬಳಿಕ ಪಶ್ಚಾತ್ತಾಪ ಪಟ್ಟು ತಮ್ಮನ್ನು ಸುಧಾರಿಸಿಕೊಂಡವರ ಪರವಾಗಿದ್ದಾನೆ. ಆ ಬಳಿಕ ನಿಮ್ಮ ಒಡೆಯನು (ಅವರ ಪಾಲಿಗೆ) ಖಂಡಿತ ಕ್ಷಮಾಶೀಲನೂ ಕರುಣಾಮಯಿಯೂ ಆಗಿರುತ್ತಾನೆ.

120. ನಿಜಕ್ಕೂ ಇಬ್ರಾಹೀಮರು ಸ್ವತಃ ತಾವೇ ಒಂದು ಸಮುದಾಯವಾಗಿದ್ದರು. ಅವರು ಸಂಪೂರ್ಣ ಏಕಾಗ್ರಚಿತ್ತರಾಗಿ ಅಲ್ಲಾಹನಿಗೆ ವಿಧೇಯರಾಗಿದ್ದರು. ಅವರು ಬಹುದೇವಾರಾಧಕರಾಗಿರಲಿಲ್ಲ.

121. ಅವರು ಅವನ ಅನುಗ್ರಹಗಳಿಗೆ ಕೃತಜ್ಞರಾಗಿದ್ದರು. ಅವನು ಅವರನ್ನು ಆರಿಸಿಕೊಂಡನು ಮತ್ತು ಅವರನ್ನು ನೇರಮಾರ್ಗದೆಡೆಗೆ ನಡೆಸಿದನು.

122. ಮತ್ತು ನಾವು ಅವರಿಗೆ ಈ ಲೋಕದಲ್ಲಿ ಹಿತವನ್ನು ನೀಡಿದೆವು. ಇನ್ನು ಪರಲೋಕದಲ್ಲಿ ಖಂಡಿತ ಅವರು ಸಜ್ಜನರ ಸಾಲಲ್ಲಿರುವರು.

123. ಮುಂದೆ, ನೀವು ಏಕಾಗ್ರಚಿತ್ತರಾಗಿದ್ದ ಇಬ್ರಾಹೀಮರ ದಾರಿಯನ್ನು ಅನುಸರಿಸಬೇಕೆಂದು ನಾವು ನಿಮ್ಮೆಡೆಗೆ ದಿವ್ಯವಾಣಿಯನ್ನು ರವಾನಿಸಿದೆವು. ಅವರು ಬಹುದೇವಾರಾಧಕರಾಗಿರಲಿಲ್ಲ.

124. ‘ಸಬ್ತ್’ನ (ಶನಿವಾರದ) ನಿರ್ಬಂಧಗಳನ್ನು, ಆಕುರಿತು ಭಿನ್ನಾಭಿಪ್ರಾಯ ತಾಳಿದವರ ಮೇಲೆ ಮಾತ್ರ ವಿಧಿಸಲಾಗಿತ್ತು. ಖಂಡಿತವಾಗಿಯೂ ನಿಮ್ಮ ಒಡೆಯನು, ಅವರು ಭಿನ್ನತೆ ತಾಳಿದ್ದ ಎಲ್ಲ ವಿಷಯಗಳನ್ನು, ಪುನರುತ್ಥಾನ ದಿನ, ಅವರ ನಡುವೆ ಇತ್ಯರ್ಥಗೊಳಿಸಿ ಬಿಡುವನು.

 125. ನೀವು (ಜನರನ್ನು) ಯುಕ್ತಿಯೊಂದಿಗೆ ಹಾಗೂ ಸದುಪದೇಶದೊಂದಿಗೆ ನಿಮ್ಮ ಒಡೆಯನ ಕಡೆಗೆ ಕರೆಯಿರಿ – ಮತ್ತು ಅತ್ಯುತ್ತಮ ರೀತಿಯಲ್ಲಿ ಅವರೊಡನೆ ವಾದಿಸಿರಿ. ಖಂಡಿತವಾಗಿಯೂ ತನ್ನ ದಾರಿಯಿಂದ ದೂರ ಸರಿದವನು ಯಾರು ಎಂಬುದನ್ನು ನಿಮ್ಮ ಒಡೆಯನು ಬಲ್ಲನು ಮತ್ತು ಸರಿದಾರಿಯಲ್ಲಿರುವವರನ್ನೂ ಅವನು ಬಲ್ಲನು.

126. ಒಂದು ವೇಳೆ ನೀವು ದಂಡಿಸುವುದಿದ್ದರೂ, ಅವರು ನಿಮ್ಮನ್ನು ನೋಯಿಸಿದಷ್ಟು ಮಾತ್ರ ನೀವು ಅವರನ್ನು ನೋಯಿಸಿರಿ. ಇನ್ನು ನೀವು ಸಹನೆಯನ್ನು ಪಾಲಿಸಿದರೆ, ಸಹನ ಶೀಲರ ಪಾಲಿಗೆ ಅದುವೇ ಉತ್ತಮ.

127. ನೀವು ಸಹನೆಯನ್ನು ಪಾಲಿಸಿರಿ – ನಿಮ್ಮ ಸಹನೆಯು ಅಲ್ಲಾಹನ ನೆರವಿನದೇ ಫಲವಾಗಿದೆ. ಮತ್ತು ನೀವು ಅವರ ವಿಷಯದಲ್ಲಿ ದುಃಖಿಸಬೇಡಿ ಹಾಗೂ ಅವರ ಕುತಂತ್ರಗಳ ಕುರಿತಂತೆ ಬೇಸರಿಸಬೇಡಿ.

128. ಖಂಡಿತವಾಗಿಯೂ ಅಲ್ಲಾಹನು ಧರ್ಮ ನಿಷ್ಠರ ಹಾಗೂ ಸತ್ಕರ್ಮಿಗಳ ಜೊತೆಗಿದ್ದಾನೆ.

ಜುಝ್-15