18. Al Khaf

18. ಅಲ್ ಕಹಫ್ (ಗುಹೆ)

ವಚನಗಳು – 110, ಮಕ್ಕಃ

ಅಲ್ಲಾಹನ ಹೆಸರಿಂದ – ಅವನು ಅಪಾರ ದಯಾಳು, ಕರುಣಾಮಯಿ.

1. ಎಲ್ಲ ಹೊಗಳಿಕೆ ಅಲ್ಲಾಹನಿಗೆ. ಅವನೇ ತನ್ನ ದಾಸನಿಗೆ ಗ್ರಂಥವನ್ನು (ಕುರ್‌ಆನ್‌ಅನ್ನು) ಇಳಿಸಿ ಕೊಟ್ಟವನು ಮತ್ತು ಅವನು ಅದರಲ್ಲಿ ಯಾವುದೇ ವಕ್ರತೆಯನ್ನಿಟ್ಟಿಲ್ಲ.

2. ಅದು (ಕುರ್‌ಆನ್) ಸಂಪೂರ್ಣ ನೇರವಾಗಿದೆ. ಅವನ ಕಡೆಯಿಂದ (ದುಷ್ಟರಿಗೆ) ತೀವ್ರ ಶಿಕ್ಷೆಯ ಎಚ್ಚರಿಕೆ ನೀಡಲಿಕ್ಕಾಗಿ ಮತ್ತು ಸತ್ಕರ್ಮ ಮಾಡುವ ವಿಶ್ವಾಸಿಗಳಿಗೆ ಶ್ರೇಷ್ಠ ಪ್ರತಿಫಲವಿದೆ ಎಂಬ ಶುಭವಾರ್ತೆ ನೀಡಲಿಕ್ಕಾಗಿ (ಅದನ್ನು ಕಳಿಸಲಾಗಿದೆ).

3. ಅವರು ಅದರಲ್ಲಿ ಸದಾಕಾಲ ಇರುವರು.

4. ಮತ್ತು ಅಲ್ಲಾಹನು ಒಬ್ಬನನ್ನು (ತನ್ನ) ಪುತ್ರನಾಗಿಸಿಕೊಂಡಿರುವನೆಂದು ಹೇಳುವವರನ್ನು ಎಚ್ಚರಿಸಲಿಕ್ಕಾಗಿ (ಅದನ್ನು ಕಳಸಿಲಾಗಿದೆ).

5. ನಿಜವಾಗಿ, ಅವರಿಗಾಗಲಿ ಅವರ ಪೂರ್ವಜರಿಗಾಗಲಿ ಆ ಕುರಿತು ಯಾವ ಜ್ಞಾನವೂ ಇಲ್ಲ. ಅವರ ಬಾಯಿಗಳಿಂದ ಹೊರಡುತ್ತಿರುವ ಆ ಮಾತು ತುಂಬಾ ಗಂಭೀರವಾದುದು. ಅವರು ಕೇವಲ ಸುಳ್ಳನ್ನು ಹೇಳುತ್ತಿದ್ದಾರೆ.

6. (ದೂತರೇ,) ಅವರು ಈ ಸಂದೇಶವನ್ನು ನಂಬುತ್ತಿಲ್ಲ ಎಂಬ ದುಃಖದಿಂದ, ಅವರ ಚಿಂತೆಯಲ್ಲಿ ಬಹುಶಃ ನೀವು ಸ್ವತಃ ನಿಮಗೇ ಹಾನಿಮಾಡಿಕೊಳ್ಳುವಿರಿ.

7. ಖಂಡಿತವಾಗಿಯೂ ನಾವು ಭೂಮಿಯಲ್ಲಿರುವ ಎಲ್ಲವನ್ನೂ ಅದಕ್ಕೇ (ಭೂಮಿಗೇ) ಭೂಷಣವಾಗಿಸಿದ್ದೇವೆ. ಅವರಲ್ಲಿ ಯಾರು ಅತ್ಯುತ್ತಮ ಕರ್ಮಗಳನ್ನು ಮಾಡುತ್ತಾರೆಂದು ಅವರನ್ನು ಪರೀಕ್ಷಿಸಲಿಕ್ಕಾಗಿ (ಹೀಗೆ ಮಾಡಲಾಗಿದೆ).

8. ನಾವು ಅದರ (ಭೂಮಿಯ) ಮೇಲಿರುವ ಎಲ್ಲವನ್ನೂ ಖಂಡಿತ ಬರಡು ಬಯಲಾಗಿಸಲಿದ್ದೇವೆ.

9. ನೀವೇನು, ಗುಹೆಯವರು ಮತ್ತು ರಕೀಮ್‌ನವರು ನಮ್ಮ ವಿಚಿತ್ರ ಪುರಾವೆಗಳ ಸಾಲಿಗೆ ಸೇರಿದ್ದರೆಂದು ಕೊಂಡಿರುವಿರಾ?

10. ಆ ಯುವಕರು ಒಂದು ಗುಹೆಯಲ್ಲಿ ಆಶ್ರಯ ಪಡೆದಿದ್ದರು ಮತ್ತು, ‘‘ನಮ್ಮೊಡೆಯಾ, ನಿನ್ನ ಬಳಿಯಿಂದ ನಮಗಾಗಿ ವಿಶೇಷ ಅನುಗ್ರಹವನ್ನು ಕರುಣಿಸು ಮತ್ತು ನಮ್ಮ ಸನ್ನಿವೇಶವನ್ನು ಸುಲಭಗೊಳಿಸು’’ ಎಂದು ಪ್ರಾರ್ಥಿಸಿದ್ದರು.

11. ನಾವು ಅವರ ಕಿವಿಗಳಿಗೆ ಹೊಡೆದು (ಮೂರ್ಛೆ ಬರಿಸಿ) ಅವರನ್ನು ಹಲವಾರು ವರ್ಷ ಗುಹೆಯಲ್ಲೇ ಉಳಿಸಿದೆವು.

12. ಮುಂದೆ, ಅವರು ಎಷ್ಟು ಕಾಲ ಹಾಗಿದ್ದರೆಂಬುದನ್ನು, ಎರಡು ಗುಂಪುಗಳ ಪೈಕಿ ಯಾರು ಹೆಚ್ಚು ಖಚಿತವಾಗಿ ಗ್ರಹಿಸುತ್ತಾರೆಂಬುದನ್ನು ಅರಿಯಲು – ನಾವು ಅವರನ್ನು ಎಬ್ಬಿಸಿದೆವು.

13. ನಾವಿದೋ ನಿಮಗೆ ಅವರ ನೈಜ ವೃತ್ತಾಂತವನ್ನು ತಿಳಿಸುತ್ತಿದ್ದೇವೆ; ಅವರು ನಿಜವಾಗಿ, ತಮ್ಮ ಒಡೆಯನಲ್ಲಿ ನಂಬಿಕೆ ಇಟ್ಟ ಕೆಲವು ಯುವಕರಾಗಿದ್ದರು. ನಾವು ಅವರಿಗೆ ಹೆಚ್ಚಿನ ಮಾರ್ಗದರ್ಶನ ನೀಡಿದ್ದೆವು.

14. ಅವರು ಎದ್ದು ನಿಂತಾಗ ನಾವು ಅವರ ಮನಸ್ಸುಗಳಿಗೆ ದೃಢತೆಯನ್ನೊದಗಿಸಿದೆವು ಮತ್ತು ಅವರು,‘‘ಆಕಾಶಗಳ ಹಾಗೂ ಭೂಮಿಯ ಒಡೆಯನೇ ನಮ್ಮ ಒಡೆಯ. ನಾವು ಅವನ ಹೊರತು ಬೇರಾವ ದೇವರನ್ನೂ ಪ್ರಾರ್ಥಿಸಲಾರೆವು. ಅನ್ಯಥಾ ನಾವು ಅರ್ಥಹೀನ ಮಾತನ್ನಾಡಿದಂತಾಗುವುದು’’ ಎಂದು ಘೋಷಿಸಿದರು.

15. ‘‘ಈ ನಮ್ಮ ಜನಾಂಗದ ಜನರು ಅವನ ಹೊರತು ಅನ್ಯರನ್ನು ದೇವರಾಗಿಸಿಕೊಂಡಿದ್ದಾರೆ. ಆದರೆ ಅವರು ಅವರ (ಆ ದೇವರುಗಳ) ಪರವಾಗಿ ಯಾವುದೇ ಸ್ಪಷ್ಟ ಪುರಾವೆಯನ್ನೇಕೆ ತರುವುದಿಲ್ಲ? ಅಲ್ಲಾಹನ ಕುರಿತು ಸುಳ್ಳನ್ನು ರಚಿಸುವವನಿಗಿಂತ ದೊಡ್ಡ ಅಕ್ರಮಿ ಯಾರಿದ್ದಾನೆ?’’ (ಎಂದು ಅವರು ಹೇಳಿದರು).

16. ‘‘ಇದೀಗ ನೀವು ಅವರನ್ನು ಮತ್ತು ಅವರು ಅಲ್ಲಾಹನನ್ನು ಬಿಟ್ಟು ಪೂಜಿಸುತ್ತಿದ್ದ ಎಲ್ಲವನ್ನೂ ತ್ಯಜಿಸಿ ಬಂದಿರುವುದರಿಂದ ಗುಹೆಯಲ್ಲಿ ಆಶ್ರಯ ಪಡೆಯಿರಿ. ನಿಮ್ಮ ಒಡೆಯನು ನಿಮಗಾಗಿ ತನ್ನ ಅನುಗ್ರಹವನ್ನು ವಿಸ್ತರಿಸುವನು ಮತ್ತು ನಿಮ್ಮ ಸನ್ನಿವೇಶದಲ್ಲಿ ನಿಮಗೆ ನೆರವನ್ನು ಒದಗಿಸುವನು’’ (ಎಂಬ ಶುಭವಾರ್ತೆಯನ್ನು ಅವರಿಗೆ ನೀಡಲಾಯಿತು).

17. ನೀವು ಕಾಣುವಿರಿ – ಸೂರ್ಯನು ಉದಯಿಸಿದಾಗ ಅದು (ಅದರ ಬೆಳಕು) ಅವರ ಗುಹೆಯ ಬಲಭಾಗದಿಂದ ಹಾದು ಹೋಗುತ್ತಿತ್ತು ಮತ್ತು ಅದು ಅಸ್ತಮಿಸುವಾಗ ಅವರನ್ನು ತಪ್ಪಿಸಿಕೊಂಡು ಅವರ ಎಡಭಾಗದಿಂದ ಹಾದು ಹೋಗುತ್ತಿತ್ತು. ಅವರು ಅದರ (ಗುಹೆಯ) ಒಂದು ವಿಶಾಲ ಭಾಗದಲ್ಲಿದ್ದರು. ಇವೆಲ್ಲಾ ಅಲ್ಲಾಹನ ಸೂಚನೆಗಳು. ಅಲ್ಲಾಹನು ಯಾರಿಗೆ ದಾರಿತೋರಿದನೋ ಅವನು ಸರಿದಾರಿಯನ್ನು ಪಡೆದನು. ಇನ್ನು ಅವನು ಯಾರನ್ನು ದಾರಿಗೆಡಿಸಿದನೋ ಅವನು ತನಗಾಗಿ ಯಾವುದೇ ರಕ್ಷಕ ಅಥವಾ ಮಾರ್ಗದರ್ಶಿಯನ್ನು ಕಾಣಲಾರನು.

18. ಅವರು ಎಚ್ಚರವಿದ್ದಾರೆಂದು ನೀವು ಗ್ರಹಿಸುತ್ತಿದ್ದಿರಿ. ಆದರೆ ಅವರು ನಿದ್ರಿಸುತ್ತಿದ್ದರು. ನಾವು ಅವರನ್ನು ಎಡಕ್ಕೂ ಬಲಕ್ಕೂ ಹೊರಳಿಸುತ್ತಿದ್ದೆವು. ಅವರ ನಾಯಿಯು ತನ್ನ ಮುಂದಿನ ಎರಡೂ ಕಾಲುಗಳನ್ನು ಊರಿ (ಗುಹೆಯ) ಬಾಗಿಲಲ್ಲೇ ಕುಳಿತಿರುತ್ತಿತ್ತು. ಒಂದು ವೇಳೆ ನೀವು ಅವರೆಡೆಗೆ ಇಣುಕಿ ನೋಡಿದ್ದರೆ ಅಲ್ಲಿಂದ ಓಡಿ ಬಿಡುತ್ತಿದ್ದಿರಿ ಮತ್ತು ಅವರ ಕುರಿತು ಅಂಜುತ್ತಿದ್ದಿರಿ.

19. ಹೀಗೆ, ಅವರು ಪರಸ್ಪರ ವಿಚಾರಿಸಲೆಂದು ನಾವು ಅವರನ್ನು ಎಬ್ಬಿಸಿದೆವು. ಅವರಲ್ಲೊಬ್ಬನು, ‘‘ನೀವು (ಇಲ್ಲಿ) ಎಷ್ಟುಕಾಲ ಇದ್ದಿರಿ?’’ ಎಂದು ವಿಚಾರಿಸಿದನು. ‘‘ಒಂದು ದಿನ ಅಥವಾ ಒಂದು ದಿನದ ಒಂದು ಭಾಗ’’ ಎಂದು ಅವರು ಹೇಳಿದರು. ತರುವಾಯ ಅವರು ಹೇಳಿದರು; ‘‘ನೀವೆಷ್ಟು ಕಾಲ (ಇಲ್ಲಿ) ಇದ್ದಿರೆಂಬುದನ್ನು ನಿಮ್ಮೊಡೆಯನೇ ಹೆಚ್ಚು ಬಲ್ಲನು. ನೀವೀಗ ಈ ನಿಮ್ಮ ಮೊತ್ತವನ್ನು ಕೊಟ್ಟು ನಿಮ್ಮಲ್ಲೊಬ್ಬನನ್ನು ನಗರಕ್ಕೆ ಕಳಿಸಿರಿ. ಅವನು (ಅಲ್ಲಿ) ಯಾವ ಆಹಾರ ಹೆಚ್ಚು ಶುದ್ಧವಾಗಿದೆ ಎಂದು ನೋಡಲಿ ಮತ್ತು ಅದರಿಂದ ನಿಮಗಾಗಿ ಆಹಾರವನ್ನು ತರಲಿ ಮತ್ತು ಯಾರಿಗೂ ನಿಮ್ಮ ಕುರಿತು ಮಾಹಿತಿ ದೊರೆಯದಂತೆ ಅವನು ಗೌಪ್ಯ ಕಾಪಾಡಲಿ’’.

20. ‘‘ಒಂದು ವೇಳೆ ಅವರಿಗೆ ನಿಮ್ಮ ಕುರಿತು ತಿಳಿದರೆ, ಅವರು ನಿಮ್ಮನ್ನು ಕಲ್ಲೆಸೆದು ಕೊಲ್ಲುವರು ಅಥವಾ ನಿಮ್ಮನ್ನು ತಮ್ಮ ಸಮುದಾಯಕ್ಕೆ ಮರಳಿಸುವರು. ಹಾಗಾಗಿ ಬಿಟ್ಟಲ್ಲಿ ನೀವೆಂದೂ ವಿಜಯಿಗಳಾಗಲಾರಿರಿ.

21. ಹೀಗೆ, ಅಲ್ಲಾಹನ ವಾಗ್ದಾನವು ಸತ್ಯವೆಂಬುದನ್ನು ಮತ್ತು (ಲೋಕಾಂತ್ಯದ) ಆ ಘಳಿಗೆ ಬರುವುದರಲ್ಲಿ ಸಂಶಯವಿಲ್ಲ ಎಂಬುದನ್ನು ಅವರು (ಊರವರು) ಅರಿಯಬೇಕೆಂದು ನಾವು ಅವರಿಗೆ, ಅವರ (ಗುಹೆಯವರ) ಕುರಿತು ಮಾಹಿತಿ ನೀಡಿದೆವು. (ನಿಮಗೆ ತಿಳಿದಿರಲಿ;) ಅವರು (ಊರವರು) ಅವರ ಕುರಿತು ಜಗಳಾಡಿದಾಗ,ಕೆಲವರು ‘‘ಅವರ (ಗುಹೆಯ) ಮೇಲೆ ಒಂದು ಕಟ್ಟಡವನ್ನು ನಿರ್ಮಿಸಿರಿ’’ ಎಂದರು. ಅವರನ್ನು ಅವರ ಒಡೆಯನು ಚೆನ್ನಾಗಿಬಲ್ಲನು. ಕೊನೆಗೆ ಅವರ ಮೇಲೆ ಪ್ರಾಬಲ್ಯ ಹೊಂದಿದ್ದ ಕೆಲವರು ‘‘ನಾವು ಅವರ (ಗುಹೆಯ) ಮೇಲೆಒಂದು ಮಸೀದಿಯನ್ನು ಕಟ್ಟೋಣ’’ ಎಂದರು.

22. (ದೂತರೇ), ಇದೀಗ ಕೆಲವರು, ‘‘ಅವರು ಮೂವರಿದ್ದರು, ನಾಲ್ಕನೆಯದು ಅವರ ನಾಯಿ’’ ಎನ್ನುವರು. ಮತ್ತೆ ಕೆಲವರು, ‘‘ಅವರು ಐವರಿದ್ದರು, ಆರನೆಯದು ಅವರ ನಾಯಿ’’ ಎಂದೂ ಹೇಳುವರು. ಇದೆಲ್ಲಾ ಕೇವಲ ಊಹೆಮಾತ್ರ. ಇನ್ನು, ‘‘ಅವರು ಏಳುಮಂದಿ ಇದ್ದರು ಮತ್ತು ಎಂಟನೆಯದು ಅವರ ನಾಯಿ’’ ಎಂದು ಕೂಡಾ ಕೆಲವರು ಹೇಳುವರು. ನೀವು ಹೇಳಿರಿ; ಅವರ ನೈಜ ಸಂಖ್ಯೆಯನ್ನು ನನ್ನ ಒಡೆಯನು ಮಾತ್ರ ಬಲ್ಲನು. ಅವರ ಕುರಿತು (ವಾಸ್ತವವನ್ನು)ಕೇವಲ ಕೆಲವರು ಮಾತ್ರ ಬಲ್ಲರು. ನೀವು ಸ್ಪಷ್ಟ ಪುರಾವೆ ಇಲ್ಲದೆ ಅವರ ಕುರಿತು ವಾದಿಸಬೇಡಿ ಮತ್ತು ಅವರ ಕುರಿತು ಯಾರನ್ನೂ ಪ್ರಶ್ನಿಸಬೇಡಿ.

23. ಯಾವುದೇ ವಿಷಯದಲ್ಲಿ ‘‘ನಾಳೆ ನಾನು ಖಂಡಿತ ಅದನ್ನು ಮಾಡಿ ಬಿಡುತ್ತೇನೆ’’ ಎನ್ನಬೇಡಿ.

24. ಅಲ್ಲಾಹನು ಇಚ್ಛಿಸಿದರೆ ಮಾತ್ರ (ನೀವು ಏನನ್ನಾದರೂ ಮಾಡಬಲ್ಲಿರಿ). ಮತ್ತು ನೀವು (ಇದನ್ನು) ಮರೆತಾಗಲೆಲ್ಲಾ ನಿಮ್ಮ ಒಡೆಯನನ್ನು ನೆನಪಿಸಿಕೊಳ್ಳಿರಿ ಮತ್ತು ‘‘ನನ್ನ ಒಡೆಯನು ನನಗೆ ಅದಕ್ಕಿಂತಲೂ ಉತ್ತಮವಾದುದನ್ನು ತೋರಿಸಿ ಕೊಡಬಹುದು’’ ಎಂದು ಹೇಳಿರಿ.

 25. ಅವರು ಮುನ್ನೂರು ವರ್ಷ ಹಾಗೂ ಇನ್ನೂ ಒಂಭತ್ತು ವರ್ಷಗಳ ಕಾಲ ಗುಹೆಯಲ್ಲಿದ್ದರು.

26. ಹೇಳಿರಿ; ಅವರು ಅದೆಷ್ಟು ಕಾಲ (ಅಲ್ಲಿ) ಇದ್ದರೆಂಬುದನ್ನು ಅಲ್ಲಾಹನೇ ಹೆಚ್ಚು ಬಲ್ಲನು. ಅವನು ಆಕಾಶಗಳ ಹಾಗೂ ಭೂಮಿಯ ಎಲ್ಲ ಗುಪ್ತ ಸಮಾಚಾರಗಳನ್ನೂ ಬಲ್ಲನು. ಅವನು ಇತರೆಲ್ಲರಿಗಿಂತ ಚೆನ್ನಾಗಿ ಅವುಗಳನ್ನು ನೋಡುತ್ತಾನೆ ಮತ್ತು ಕೇಳುತ್ತಾನೆ. ಅವುಗಳಿಗೆ (ಭೂಮ್ಯಾಕಾಶಗಳಿಗೆ) ಅವನ ಹೊರತು ಬೇರೆ ಪೋಷಕರಿಲ್ಲ. ಅವನು ತನ್ನ ಆಧಿಪತ್ಯದಲ್ಲಿ ಯಾರನ್ನೂ ಪಾಲುಗೊಳಿಸುವುದಿಲ್ಲ.

27. (ದೂತರೇ,) ನಿಮ್ಮ ಒಡೆಯನ ಗ್ರಂಥದಿಂದ ನಿಮ್ಮ ಕಡೆಗೆ ದಿವ್ಯವಾಣಿಯ ಮೂಲಕ ಕಳಿಸಲಾಗಿರುವ ಸಂದೇಶವನ್ನು ಓದಿರಿ. ಅವನ ವಚನವನ್ನು ಬದಲಿಸ ಬಲ್ಲವರು ಯಾರೂ ಇಲ್ಲ. ಅವನ ಬಳಿಯಲ್ಲಲ್ಲದೆ ಬೇರೆಲ್ಲೂ ನಿಮಗೆ ಆಶ್ರಯ ಸಿಗದು.

 28. ತಮ್ಮ ಒಡೆಯನ ಮೆಚ್ಚುಗೆಯನ್ನು ಅಪೇಕ್ಷಿಸುತ್ತಾ ಮುಂಜಾನೆಯೂ ಸಂಜೆಯೂ ಅವನನ್ನು ಕೂಗಿ ಪ್ರಾರ್ಥಿಸುತ್ತಿರುವವರ ಜೊತೆ ನೀವು ಸಂತೃಪ್ತರಾಗಿರಿ ಮತ್ತು ಅವರನ್ನು ಎಂದೂ ಕಡೆಗಣಿಸಬೇಡಿ. ನೀವೇನು, ಲೌಕಿಕ ಬದುಕಿನ ಮೆರುಗನ್ನು ಬಯಸುತ್ತೀರಾ? ನಾವು ಯಾರ ಮನಸ್ಸಿನಿಂದ ನಮ್ಮ ನೆನಪನ್ನು ಮರೆಸಿ ಬಿಟ್ಟಿರುವೆವೋ ಅವನನ್ನು, ತನ್ನ ಸ್ವೇಚ್ಛೆಯನ್ನೇ ಅನುಸರಿಸುವವನನ್ನು ಮತ್ತು ಎಲ್ಲೆ ಮೀರಿ ವರ್ತಿಸುವಾತನನ್ನು ನೀವೆಂದೂ ಅನುಸರಿಸಬೇಡಿ.

29. ನೀವು ಹೇಳಿ ಬಿಡಿ; ಇದು ನಿಮ್ಮ ಒಡೆಯನ ಕಡೆಯಿಂದ ಬಂದಿರುವ ಸತ್ಯ. (ಇದನ್ನು) ಇಷ್ಟ ಉಳ್ಳವನು ನಂಬಲಿ ಮತ್ತು ಧಿಕ್ಕರಿಸ ಬಯಸುವವನು ಧಿಕ್ಕರಿಸಲಿ. ನಾವಂತು ಅಕ್ರಮಿಗಳಿಗಾಗಿ ನರಕಾಗ್ನಿಯನ್ನು ಸಿದ್ಧಗೊಳಿಸಿಟ್ಟಿದ್ದೇವೆ. ಅದರ ಜ್ವಾಲೆಗಳು ಅವರನ್ನು ಸುತ್ತುವರಿದಿರುವವು. ಅವರು ನೀರಿಗಾಗಿ ಮೊರೆ ಇಟ್ಟರೆ, ಕರಗಿದ ತಾಮ್ರದಂತಹ ನೀರನ್ನು ಅವರಿಗೆ ಒದಗಿಸಲಾಗುವುದು. ಅದು ಅವರ ಮುಖಗಳನ್ನು ಸುಟ್ಟು ಬಿಡುವುದು – ಅದು ತುಂಬಾ ಕೆಟ್ಟ ಪಾನೀಯವಾಗಿರುವುದು ಮತ್ತು ಅದು ತುಂಬಾ ಕೆಟ್ಟ ನೆಲೆಯಾಗಿರುವುದು.

30. ನಂಬಿಕೆ ಇಟ್ಟವರು ಮತ್ತು ಸತ್ಕರ್ಮಗಳನ್ನು ಮಾಡಿದವರು – (ಇಂತಹ) ಶ್ರೇಷ್ಠ ಕೆಲಸಗಳನ್ನು ಮಾಡುವವರ ಪ್ರತಿಫಲವನ್ನು ನಾವು ಖಂಡಿತ ವ್ಯರ್ಥಗೊಳಿಸುವುದಿಲ್ಲ.

 31. ಶಾಶ್ವತವಾದ ತೋಟಗಳು ಅವರಿಗಾಗಿ ಕಾದಿವೆ. ಅವುಗಳ ತಳದಲ್ಲಿ ನದಿಗಳು ಹರಿಯುತ್ತಿರುವವು. ಅಲ್ಲಿ ಅವರಿಗೆ ಬಂಗಾರದ ಕಡಗಗಳನ್ನು ತೊಡಿಸಲಾಗುವುದು ಮತ್ತು ಅವರು ರೇಶ್ಮೆ ಹಾಗೂ ಜರತಾರಿಯ ಹಸಿರು ಉಡುಗೆಗಳನ್ನು ಧರಿಸಿ ಅಲ್ಲಿರುವ ದಿಂಬುಗಳ ಮೇಲೆ ಒರಗಿಕೊಂಡಿರುವರು. ಅದು ಬಹಳ ಶ್ರೇಷ್ಠವಾದ ಪ್ರತಿಫಲ ಮತ್ತು ಅತ್ಯುತ್ತಮ ವಿಶ್ರಾಂತಿಧಾಮವಾಗಿರುವುದು.

32. ಆ ಇಬ್ಬರ ಉದಾಹರಣೆಯನ್ನು ಅವರ ಮುಂದಿಡಿರಿ: ಅವರಲ್ಲೊಬ್ಬನಿಗೆ ನಾವು ದ್ರಾಕ್ಷಿಯ ಎರಡು ತೋಟಗಳನ್ನು ನೀಡಿದ್ದೆವು ಹಾಗೂ ಅವುಗಳ ಸುತ್ತಲೂ ಖರ್ಜೂರದ ಗಿಡಗಳನ್ನು ಬೆಳೆಸಿದ್ದೆವು ಮತ್ತು ಅವುಗಳ ನಡುವೆ ಹೊಲವನ್ನೂ ಬೆಳೆಸಿದ್ದೆವು.

 33. ಎರಡೂ ತೋಟಗಳು ಧಾರಾಳ ಫಲನೀಡಿದವು ಮತ್ತು ಆ ಮಟ್ಟಿಗೆ ಯಾವ ಕೊರತೆಯನ್ನೂ ಮಾಡಲಿಲ್ಲ. ನಾವು ಆ ಎರಡೂ ತೋಟಗಳ ಮಧ್ಯೆ ಒಂದು ಕಾಲುವೆಯನ್ನೂ ಹರಿಸಿದೆವು.

34. ಅವುಗಳು ಫಲ ನೀಡುವ ಸಮಯ ಬಂದಾಗ ಅವನು ತನ್ನ ಜೊತೆಗಾರನೊಂದಿಗೆ ಮಾತನಾಡುತ್ತಾ, ‘‘ನಾನು ಸಂಪತ್ತಿನಲ್ಲೂ ಜನಬಲದಲ್ಲೂ ನಿನಗಿಂತ ಹೆಚ್ಚು ಸಂಪನ್ನನಾಗಿದ್ದೇನೆ’’ ಎಂದನು;.

35. ಹೀಗೆ, ಅವನು ಸ್ವತಃ ತನ್ನ ಮೇಲೆ ಅಕ್ರಮವೆಸಗುತ್ತಾ ತನ್ನ ತೋಟವನ್ನು ಪ್ರವೇಶಿಸಿದನು. ಅವನು ಹೇಳಿದನು; ‘‘ಇದು (ಈ ತೋಟ) ಎಂದಾದರೂ ನಾಶವಾಗುವುದೆಂದು ನಾನು ಭಾವಿಸುವುದಿಲ್ಲ’’.

36. ‘‘ಲೋಕಾಂತ್ಯದ ಘಳಿಗೆಯೊಂದು ಇದೆಯೆಂದೂ ನಾನು ಭಾವಿಸುವುದಿಲ್ಲ. ಇನ್ನು, ಒಂದು ವೇಳೆ ನನ್ನನ್ನು ನನ್ನ ಒಡೆಯನ ಬಳಿಗೆ ಮರಳಿಸಲಾದರೂ ಅಲ್ಲಿ ಇದಕ್ಕಿಂತಲೂ ಉತ್ತಮ ನೆಲೆ ನನಗೆ ದೊರಕೀತು’’.

37. ಅವನ ಜೊತೆಗಾರನು ಅವನೊಡನೆ ಮಾತನಾಡುತ್ತಾ ಹೇಳಿದನು; ‘‘ನೀನೇನು, ನಿನ್ನನ್ನು ಮಣ್ಣಿನಿಂದಲೂ ಆ ಬಳಿಕ ವೀರ್ಯದಿಂದಲೂ ಸೃಷ್ಟಿಸಿ ಒಬ್ಬ ಪುರುಷನಾಗಿ ನಿನ್ನನ್ನು ಬೆಳೆಸಿದಾತನನ್ನು ಧಿಕ್ಕರಿಸುತ್ತಿರುವೆಯಾ?’’

38.‘‘ ನನಗೆ ಮಾತ್ರ ಆ ಅಲ್ಲಾಹನೇ ಒಡೆಯನು. ನಾನು ನನ್ನ ಒಡೆಯನ ಜೊತೆ ಯಾರೊಬ್ಬರನ್ನೂ ಪಾಲುಗೊಳಿಸುವುದಿಲ್ಲ.’’

39. ‘‘ನೀನು ನಿನ್ನ ತೋಟವನ್ನು ಪ್ರವೇಶಿಸುವಾಗ, ‘‘ಎಲ್ಲವೂ ಅಲ್ಲಾಹನ ಇಚ್ಛೆ. ಅಲ್ಲಾಹನ ಹೊರತು ಬೇರಾವ ಶಕ್ತಿಯೂ ಇಲ್ಲ’’ ಎಂದೇಕೆ ಹೇಳಲಿಲ್ಲ? ಸದ್ಯ ನೀನು ನನ್ನನ್ನು ಸಂಪತ್ತಿನಲ್ಲೂ ಸಂತಾನದಲ್ಲೂ ನಿನಗಿಂತ ಸಣ್ಣವನಾಗಿ ಕಾಣುತ್ತಿರುವೆ’’.

40. ‘‘ಆದರೆ ನನ್ನ ಒಡೆಯನು ನಿನ್ನ ತೋಟಕ್ಕಿಂತಲೂ ಉತ್ತಮವಾದುದನ್ನು ನನಗೆ ನೀಡಬಹುದು. ಹಾಗೆಯೇ ಅವನು ನಿನ್ನ ತೋಟದ ಮೇಲೆ ಆಕಾಶದಿಂದ ಸುಂಟರಗಾಳಿಯೊಂದನ್ನು ಕಳಿಸಿ ಅದನ್ನು ಬಟ್ಟಬಯಲಾಗಿಸಿ ಬಿಡಬಹುದು’’.

41.‘‘ಅಥವಾ ಅದರಲ್ಲಿನ ನೀರೆಲ್ಲವೂ ಆರಿ ಹೋಗಬಹುದು ಮತ್ತು ಅದನ್ನು ಮತ್ತೆ ಮೇಲೆ ತರಲು ನಿಮಗೆಂದೂ ಸಾಧ್ಯವಾಗದಿರಬಹುದು’’.

 42. ಕೊನೆಗೆ ಅದರ (ಆ ತೋಟದ) ಬೆಳೆಗಳಿಗೆ ಆಪತ್ತು ಆವರಿಸಿದಾಗ ಅವನು, ತಾನು ಅದಕ್ಕಾಗಿ ಮಾಡಿದ ಖರ್ಚಿನ ಕುರಿತು ಕೈ ಹೊಸೆದುಕೊಂಡು ಪರಿತಪಿಸ ತೊಡಗಿದನು. ಆ ತೋಟವು ಬುಡಮೇಲಾಗಿ ನಾಶವಾಯಿತು. ಆಗ ಅವನು, ಅಯ್ಯೋ, ನಾನು ನನ್ನ ಒಡೆಯನ ಜೊತೆ ಯಾರನ್ನೂ ಪಾಲುಗೊಳಿಸದೆ ಇದ್ದಿದ್ದರೆ ಅದೆಷ್ಟು ಚೆನ್ನಾಗಿರುತ್ತಿತ್ತು’’ ಎಂದನು.

43. ಆಗ ಅವನ ಬಳಿ, ಅವನಿಗೆ ನೆರವಾಗಲು ಅಲ್ಲಾಹನ ಹೊರತು ಬೇರೆ ಯಾವ ಪಡೆಯೂ ಇರಲಿಲ್ಲ. ಮತ್ತು ಪ್ರತೀಕಾರ ತೀರಿಸುವುದಕ್ಕೂ ಅವನು ಅಶಕ್ತನಾಗಿದ್ದನು.

44. ಇಲ್ಲಿ, ಅಧಿಕಾರವೆಲ್ಲಾ ಅಲ್ಲಾಹನಿಗೆ ಮಾತ್ರ ಸೇರಿದೆ. ಅವನು ಅತ್ಯುತ್ತಮ ಪ್ರತಿಫಲ ನೀಡುವವನು ಮತ್ತು ಅತ್ಯುತ್ತಮ ಫಲಿತಾಂಶ ಒದಗಿಸುವವನಾಗಿದ್ದಾನೆ.

45. ಈ ಲೋಕದ ಬದುಕಿನ ಕುರಿತು ಅವರಿಗೆ ಒಂದು ಉದಾಹರಣೆ ನೀಡಿರಿ. ಅದು, ನಾವು ಆಕಾಶದಿಂದ ಇಳಿಸಿದ ಮಳೆ ನೀರಿನಂತಿದೆ. ಭೂಮಿಯ ಸಸ್ಯಗಳೆಲ್ಲವೂ ಅದರಿಂದಾಗಿ ದಷ್ಟಪುಷ್ಟವಾಗಿ ಬೆಳೆಯುತ್ತವೆ. ಕೊನೆಗೆ ಅವೆಲ್ಲಾ ಒಣಗಿ ಚೂರು ಚೂರಾದಾಗ ಗಾಳಿಯು ಅವುಗಳನ್ನು ಎತ್ತಿಕೊಂಡು ಅಲೆದಾಡುತ್ತದೆ. ಅಲ್ಲಾಹನು ಖಂಡಿತ ಎಲ್ಲವನ್ನೂ ಮಾಡಬಲ್ಲನು.

46. ಸಂಪತ್ತು ಸಂತಾನಗಳೆಲ್ಲಾ ಕೇವಲ ಈ ಲೋಕದ ಮೆರುಗುಗಳಾಗಿವೆ. ನಿಜವಾಗಿ ಬಹುಕಾಲ ಉಳಿಯುವ ಸತ್ಕರ್ಮಗಳು ಮಾತ್ರವೇ ಬಹುಮಾನದ ದೃಷ್ಟಿಯಿಂದಲೂ ನಿರೀಕ್ಷೆಯ ದೃಷ್ಟಿಯಿಂದಲೂ ನಿಮ್ಮ ಒಡೆಯನ ಬಳಿ ಶ್ರೇಷ್ಠವಾಗಿವೆ.

47. ನಾವು ಪರ್ವತಗಳನ್ನು ಚಲಾಯಿಸುವ ಮತ್ತು ಭೂಮಿಯು ತೀರಾ ಸಮತಟ್ಟಾಗಿರುವುದನ್ನು ನೀವು ಕಾಣುವ ಆ ದಿನ ನಾವು ಅವರೆಲ್ಲರನ್ನೂ ಸೇರಿಸುವೆವು ಮತ್ತು ಅವರ ಪೈಕಿ ಯಾರನ್ನೂ ಬಿಡಲಾರೆವು.

  48. (ಅಂದು, ಪರಲೋಕದಲ್ಲಿ) ಅವರನ್ನೆಲ್ಲಾ ಸಾಲುಸಾಲಾಗಿ ನಿಮ್ಮ ಒಡೆಯನ ಮುಂದೆ ಒಪ್ಪಿಸಲಾಗುವುದು. (ಆಗ ಅವನು ಹೇಳುವನು;) ಇದೋ, ನಾವು ಪ್ರಥಮ ಬಾರಿಗೆ ನಿಮ್ಮನ್ನು ಸೃಷ್ಟಿಸಿದ್ದ ರೂಪದಲ್ಲೇ ನೀವೀಗ ನಮ್ಮ ಮುಂದೆ ಬಂದಿರುವಿರಿ. ನೀವಂತು, ನಾವು ನಿಮಗಾಗಿ ನಿಶ್ಚಯಿಸಿರುವ ಕಾಲವನ್ನು ನಾವೆಂದೂ ತರಲಾರೆವು ಎಂದುಕೊಂಡಿದ್ದಿರಿ.

 49. ಮತ್ತು (ಕರ್ಮಗಳ) ದಾಖಲೆ ಗ್ರಂಥವನ್ನು ಮುಂದೆ ತರಲಾದಾಗ, ಅಪರಾಧಿಗಳು ಅದರೊಳಗೆ ಏನಿದೆಯೆಂದು ಆತಂಕದಲ್ಲಿರುವುದನ್ನು ನೀವು ಕಾಣುವಿರಿ. ‘‘ಅಯ್ಯೋ,ಐ ನಮ್ಮ ದೌರ್ಭಾಗ್ಯ! ಇದೆಂತಹ ಗ್ರಂಥ! ಸಣ್ಣದಿರಲಿ ದೊಡ್ಡದಿರಲಿ ಯಾವ ವಿಷಯವನ್ನೂ ಇದು ದಾಖಲಿಸದೆ ಬಿಟ್ಟಿಲ್ಲ’’ ಎಂದು ಅವರು ಹೇಳುವರು. ತಾವು ಮಾಡಿದ್ದೆಲ್ಲವನ್ನೂ ಅವರು ತಮ್ಮ ಮುಂದೆಯೇ ಕಾಣುವರು. ನಿಮ್ಮ ಒಡೆಯನು ಯಾರ ಮೇಲೂ ಅಕ್ರಮವೆಸಗಲಾರನು.

 50. ನಾವು ಮಲಕ್‌ಗಳೊಡನೆ, ‘‘ಆದಮರಿಗೆ ಸಾಷ್ಟಾಂಗವೆರಗಿರಿ’’ ಎಂದಾಗ ಅವರು ಸಾಷ್ಟಾಂಗವೆರಗಿದರು – ಆದರೆ ಇಬ್ಲೀಸನ ಹೊರತು. ಅವನು ಜಿನ್ನ್‌ಗಳ ಸಾಲಿಗೆ ಸೇರಿದ್ದನು ಮತ್ತು ಅವನು ತನ್ನ ಒಡೆಯನ ಆದೇಶವನ್ನು ಮೀರಿ ನಡೆದನು. ಅವನು ನಿಮ್ಮ ಶತ್ರುವಾಗಿರುವಾಗ ನೀವೇನು, ನನ್ನನ್ನು ಬಿಟ್ಟು, ಅವನನ್ನು ಹಾಗೂ ಅವನ ಸಂತತಿಯನ್ನು ನಿಮ್ಮ ಪೋಷಕರಾಗಿಸಿಕೊಳ್ಳುವಿರಾ? ಅಕ್ರಮಿಗಳಿಗೆ ಬಹಳ ಕೆಟ್ಟ ಫಲ ಸಿಗಲಿದೆ.

51. ನಾನು ಆಕಾಶಗಳನ್ನು ಮತ್ತು ಭೂಮಿಯನ್ನು ಸೃಷ್ಟಿಸುವಾಗ ಅಥವಾ ಸ್ವತಃ ಅವರನ್ನು ಸೃಷ್ಟಿಸುವಾಗ ಅವರನ್ನು ಕರೆದಿರಲಿಲ್ಲ. ಅಕ್ರಮಿಗಳನ್ನು ನಾನೆಂದೂ ನನ್ನ ಆಪ್ತರಾಗಿಸಿಲ್ಲ.

52. ಅಂದು (ಪುನರುತ್ಥಾನ ದಿನ) ಅವನು ಹೇಳುವನು; ನೀವು ಯಾರನ್ನೆಲ್ಲಾ ನನ್ನ ಪಾಲುದಾರರೆಂದು ನಂಬಿದ್ದಿರೋ ಅವರನ್ನೆಲ್ಲಾ ಕರೆಯಿರಿ. ಜನರು ಅವರನ್ನು (ತಾವು ನಂಬಿದ್ದ ಹುಸಿ ದೇವರುಗಳನ್ನು) ಪ್ರಾರ್ಥಿಸಿ ಕರೆಯುವರು. ಆದರೆ ಅವರಲ್ಲಿ ಯಾರೂ ಅವರಿಗೆ ಉತ್ತರಿಸಲಾರರು. ನಾವು ಅವರ ನಡುವೆ ಒಂದು ತೆರೆಯನ್ನು ನಿರ್ಮಿಸುವೆವು.

53. ಅಪರಾಧಿಗಳು ನರಕಾಗ್ನಿಯನ್ನು ಕಂಡು, ಇದುವೇ ತಮ್ಮ ನೆಲೆ ಎಂಬುದನ್ನು ಮನಗಾಣುವರು ಮತ್ತು ಅಲ್ಲಿಂದ ಪರಾರಿಯಾಗಲು ಯಾವುದೇ ದಾರಿಯನ್ನು ಕಾಣಲಾರರು.

54. ನಾವು ಈ ಕುರ್‌ಆನ್‌ನಲ್ಲಿ ಜನರ ಮಾರ್ಗದರ್ಶನಕ್ಕೆಂದು ಎಲ್ಲ ಬಗೆಯ ಉದಾಹರಣೆಗಳನ್ನು ಮುಂದಿಟ್ಟಿರುವೆವು. ಇಷ್ಟಾಗಿಯೂ ಮಾನವನು ಅತ್ಯಧಿಕ ಜಗಳಗಂಟನಾಗಿದ್ದಾನೆ.

55. ಜನರ ಬಳಿಗೆ ಮಾರ್ಗದರ್ಶನ ಬಂದಾಗ ಅವರೇಕೆ ಅದನ್ನು ನಂಬಿ ತಮ್ಮ ಒಡೆಯನ ಮುಂದೆ ಕ್ಷಮೆ ಯಾಚಿಸುವುದಿಲ್ಲ? ನಿಜವಾಗಿ, ತಮಗಿಂತ ಹಿಂದಿನವರ ಬಳಿಗೆ ಬಂದವುಗಳು (ಪುರಾವೆಗಳು) ಅಥವಾ ಶಿಕ್ಷೆಯು ತಮ್ಮ ಮುಂದೆ ಬರಬೇಕು ಎಂಬ ಅವರ ಅಪೇಕ್ಷೆಯೇ (ಅವರ ಧೋರಣೆಗೆ ಕಾರಣವಾಗಿದೆ).

56.ನಾವು ದೂತರನ್ನು ಶುಭವಾರ್ತೆ ನೀಡುವವರಾಗಿ ಹಾಗೂ ಮುನ್ನೆಚ್ಚರಿಕೆ ನೀಡುವವರಾಗಿಯೇ ಕಳಿಸಿರುವೆವು. ಅದರೆ ಧಿಕ್ಕಾರಿಗಳು ಮಿಥ್ಯದ ಆಧಾರದಲ್ಲಿ ಜಗಳಾಡುತ್ತಾರೆ. ಅವರು ಆ ಮೂಲಕ ಸತ್ಯವನ್ನು ಹತ್ತಿಕ್ಕಲು ಶ್ರಮಿಸುತ್ತಾರೆ ಮತ್ತು ಅವರು ನಮ್ಮ ವಚನಗಳನ್ನು ಹಾಗೂ ತಮಗೆ ನೀಡಲಾಗಿರುವ ಎಚ್ಚರಿಕೆಯನ್ನು ಗೇಲಿ ಮಾಡುತ್ತಾರೆ.

 57. ತನಗೆ ತನ್ನ ಒಡೆಯನ ವಚನಗಳ ಮೂಲಕ ಎಚ್ಚರಿಸಲಾದಾಗ ಅದನ್ನು ಕಡೆಗಣಿಸುವ ಹಾಗೂ ತಾನೇ ಸಂಪಾದಿಸಿರುವ ತನ್ನ ಕರ್ಮಗಳನ್ನು ಮರೆತು ಬಿಡುವಾತನಿಗಿಂತ ದೊಡ್ಡ ಅಕ್ರಮಿ ಯಾರಿದ್ದಾನೆ? ಅವರಿಗೆ ಇದು ಅರ್ಥವಾಗದಂತೆ ನಾವು ಅವರ ಮನಸ್ಸುಗಳ ಮೇಲೆ ತೆರೆಯನ್ನು ಎಳೆದಿರುವೆವು. ಅವರ ಕಿವಿಗಳನ್ನು ಕಿವುಡಾಗಿಸಿರುವೆವು. ನೀವು ಅವರನ್ನು ಸನ್ಮಾರ್ಗದೆಡೆಗೆ ಎಷ್ಟು ಕರೆದರೂ ಅವರೆಂದೂ ಸರಿ ದಾರಿಯನ್ನು ಕಾಣಲಾರರು.

58. ಮತ್ತು ನಿಮ್ಮೊಡೆಯನು ಕ್ಷಮಾಶೀಲನೂ ಕರುಣಾಳುವೂ ಅವನು ಅವರ ಎಲ್ಲ ಕರ್ಮಗಳ ಆಧಾರದಲ್ಲಿ ಅವರನ್ನು ದಂಡಿಸಲು ಹೊರಟಿದ್ದರೆ, ಅವರ ಮೇಲೆ ಶಿಕ್ಷೆಯನ್ನೆರಗಿಸಲು ಆತುರಪಡುತ್ತಿದ್ದನು. ಆದರೆ ಅವನು ಅವರಿಗೆಂದು ಒಂದು ಸಮಯವನ್ನು ನಿಶ್ಚಯಿಸಿಟ್ಟಿರುವನು. ಅದರ ವಿರುದ್ಧ ಅವರಿಗೆ ಯಾವ ಆಶ್ರಯವೂ ಸಿಗದು.

59. ಅವು, ಅಕ್ರಮವಸಗಿದರೆಂಬ ಕಾರಣಕ್ಕಾಗಿ ನಾವು ನಾಶ ಮಾಡಿ ಬಿಟ್ಟ ನಾಡುಗಳು. ಇವರ ವಿನಾಶಕ್ಕೂ ನಾವು ಒಂದು ಕಾಲವನ್ನು ನಿಶ್ಚಯಿಸಿರುವೆವು.

 

60. ಮೂಸಾ, ತಮ್ಮ ಸೇವಕನೊಡನೆ, ‘‘ಎರಡು ಕಡಲುಗಳು ಒಂದುಗೂಡುವ ಸಂಗಮವು ಸಿಗುವ ತನಕ ನಾನು ವಿರಮಿಸಲಾರೆ. ಅನ್ಯಥಾ ನಾನು ವರ್ಷಗಟ್ಟಲೆ ನಡೆಯುತ್ತಲೇ ಇರುವೆನು’’ ಎಂದರು.

61. ಕೊನೆಗೆ ಅವರಿಬ್ಬರೂ ಎರಡು ಕಡಲುಗಳ ಸಂಗಮವನ್ನು ತಲುಪಿದಾಗ, ಅವರು ತಮ್ಮ ಮೀನನ್ನು ಮರೆತರು. ಅದು, ಸುರಂಗದಿಂದಲೋ ಎಂಬಂತೆ ಸಮುದ್ರದೊಳಕ್ಕೆ ತನ್ನ ದಾರಿಯನ್ನು ಕಂಡು ಕೊಂಡಿತ್ತು.

 62. ಹೀಗೆ, ಅವರಿಬ್ಬರೂ ಮುಂದೆ ಹೋದಾಗ ಅವರು ತಮ್ಮ ಶಿಷ್ಯನೊಡನೆ, ನಮಗೆ ನಮ್ಮ ಆಹಾರವನ್ನು ತಂದು ಕೊಡು. ನಾವು ಈ ನಮ್ಮ ಪ್ರಯಾಣದಲ್ಲಿ ತುಂಬಾ ದಣಿದಿದ್ದೇವೆ ಎಂದರು.

63. ಅವನು ಹೇಳಿದನು; ನೋಡಿದಿರಾ, ನಾವು ಆ ಬಂಡೆಯ ಬಳಿ ವಿಶ್ರಾಂತಿ ಪಡೆಯುತ್ತಿದ್ದಾಗ ನಾನು ಆ ಮೀನನ್ನು ಮರೆತುಬಿಟ್ಟಿದ್ದೆ ನಿಜವಾಗಿ ನಾನು ಅದನ್ನು ಮರೆಯಲು ಶೈತಾನನೇ ಕಾರಣ. ಅದು (ಮೀನು) ವಿಚಿತ್ರ ರೀತಿಯಲ್ಲಿ ನದಿಯೊಳಕ್ಕೆ ತನ್ನ ದಾರಿಯನ್ನು ಕಂಡುಕೊಂಡಿತು.

64. ಅವರು, ‘‘ನಾವು ಹುಡುಕುತ್ತಿದ್ದುದು ಅದೇ ಸ್ಥಳವನ್ನು’’ ಎಂದರು. ಹೀಗೆ, ಅವರು ತಾವು ಬಂದ ದಾರಿಯಲ್ಲೇ ಹಿಂದಕ್ಕೆ ಹೊರಟರು.

65. ಕೊನೆಗೆ ಅವರು, ನಮ್ಮ ಒಬ್ಬ ದಾಸನನ್ನು ಕಂಡರು. ನಾವು ನಮ್ಮ ಕಡೆಯಿಂದ ಆತನಿಗೆ ವಿಶೇಷ ಅನುಗ್ರಹವನ್ನು ನೀಡಿದ್ದೆವು ಮತ್ತು ನಮ್ಮ ಕಡೆಯಿಂದ ವಿಶೇಷ ಜ್ಞಾನವನ್ನು ದಯಪಾಲಿಸಿದ್ದೆವು.

66. ‘‘ನಿಮಗೆ ಕಲಿಸಲಾಗಿರುವ ಜ್ಞಾನವನ್ನು ನೀವು ನನಗೆ ಕಲಿಸುವಂತಾಗಲು ನಾನು ನಿಮ್ಮ ಜೊತೆಗೆ ಬರಲೇ?’’ ಎಂದು ಅವರೊಡನೆ ಮೂಸಾ ಕೇಳಿದರು.

67. ಅವರು ಹೇಳಿದರು; ‘‘ನನ್ನ ಜೊತೆ ಸಹನಶೀಲರಾಗಿರಲು ನಿಮಗೆ ಸಾಧ್ಯವಾಗದು.

68. ನಿಮ್ಮ ತಿಳುವಳಿಕೆಯ ವ್ಯಾಪ್ತಿಯಲ್ಲಿ ಇಲ್ಲದ ವಿಷಯಗಳ ಕುರಿತು ನೀವು ಸಹನೆ ತೋರುವುದಾದರೂ ಹೇಗೆ?’’

69. ಅವರು (ಮೂಸಾ) ಹೇಳಿದರು; ಅಲ್ಲಾಹನು ಇಚ್ಛಿಸಿದರೆ, ನೀವು ನನ್ನನ್ನು ಸಹನಶೀಲನಾಗಿ ಕಾಣುವಿರಿ ಮತ್ತು ನಾನು ನಿಮ್ಮ ಯಾವ ಆಜ್ಞೆಯನ್ನೂ ಮೀರಲಾರೆ.

 70. ‘‘ನೀವು ನನ್ನ ಜೊತೆಗಿರಬೇಕಿದ್ದರೆ, ಯಾವುದೇ ವಿಷಯದಲ್ಲಿ ನಾನೇ ನಿಮ್ಮೊಡನೆ ಪ್ರಸ್ತಾಪಿಸುವ ತನಕ ನೀವು ನನ್ನನ್ನು ಪ್ರಶ್ನಿಸಬಾರದು’’ ಎಂದು ಅವರು ಹೇಳಿದರು.

 

71. ಕೊನೆಗೆ ಅವರಿಬ್ಬರೂ ಹೊರಟರು. ಮುಂದೆ ಅವರು ಒಂದು ಹಡಗನ್ನೇರಿದಾಗ ಆ ವ್ಯಕ್ತಿಯು ಹಡಗಿನಲ್ಲಿ ಒಂದು ರಂಧ್ರವನ್ನು ಕೊರೆದರು. ಆಗ ಅವರು (ಮೂಸಾ) ‘‘ನೀವೇನು ಹಡಗಿನವರನ್ನು ಮುಳುಗಿಸಲಿಕ್ಕಾಗಿ ಆ ರಂಧ್ರವನ್ನು ಕೊರೆದಿರಾ? ನೀವು ತೀರಾ ವಿಚಿತ್ರ ಕೆಲಸ ಮಾಡಿದಿರಿ’’ ಎಂದರು.

72. ಅವರು ಹೇಳಿದರು; ‘‘ನನ್ನ ಜೊತೆ ಸಹನಶೀಲನಾಗಿರಲು ನಿಮಗೆ ಸಾಧ್ಯವಿಲ್ಲವೆಂದು ನಾನು ನಿಮಗೆ ಹೇಳಿರಲಿಲ್ಲವೇ?’’

 73. ಅವರು (ಮೂಸಾ) ‘‘ಮರೆವಿನಿಂದಾಗಿ ನನ್ನಿಂದ ಆದ ತಪ್ಪಿಗಾಗಿ ನೀವು ನನ್ನನ್ನು ದಂಡಿಸಬೇಡಿ ಮತ್ತು ನನ್ನ ವಿಷಯದಲ್ಲಿ ಕಠೋರ ನೀತಿಯನ್ನು ಅನುಸರಿಸಬೇಡಿ’’ ಎಂದರು.

74. ತರುವಾಯ ಅವರಿಬ್ಬರೂ ಮುಂದೆ ಸಾಗಿದರು. ಅವರೊಬ್ಬ ಹುಡುಗನನ್ನು ಎದುರುಗೊಂಡರು. ಆ ವ್ಯಕ್ತಿ ಆ ಹುಡುಗನನ್ನು ಕೊಂದು ಬಿಟ್ಟರು. ಆಗ ಅವರು (ಮೂಸಾ) ‘‘ಯಾರದೇ ಹತ್ಯೆ ನಡೆಸಿಲ್ಲದ ಒಬ್ಬ ಮುಗ್ಧ ಜೀವಿಯನ್ನು ನೀವು ಕೊಂದು ಬಿಟ್ಟಿರಾ? ನೀವು ನಿಜಕ್ಕೂ ಒಂದು ದೊಡ್ಡ ಪಾಪ ಕೃತ್ಯವನ್ನು ಮಾಡಿದಿರಿ’’ ಎಂದರು.

ಕಾಂಡ – 16

75. ಆ ವ್ಯಕ್ತಿ ಹೇಳಿದರು; ನನ್ನ ಜೊತೆ ಸಹನಶೀಲರಾಗಿರಲು ನಿಮಗೆ ಸಾಧ್ಯವಾಗದೆಂದು ನಾನು ನಿಮ್ಮೊಡನೆ ಹೇಳಿರಲಿಲ್ಲವೇ ?

  76. ಅವರು (ಮೂಸಾ) ಹೇಳಿದರು; ಇನ್ನು ನಾನು ನಿಮ್ಮೊಡನೆ ಏನಾದರೂ ಪ್ರಶ್ನೆ ಕೇಳಿದರೆ, ಮತ್ತೆ ನೀವು ನನ್ನನ್ನು ನಿಮ್ಮ ಜೊತೆಗಾರನಾಗಿ ಇಟ್ಟು ಕೊಳ್ಳಬೇಡಿ. ನಿಮ್ಮ ಮುಂದಿಡುವುದಕ್ಕೆ ನನ್ನ ಬಳಿ ಇನ್ನಾವುದೇ ನೆಪ ಉಳಿದಿಲ್ಲ.

77. ಅವರಿಬ್ಬರೂ ಮತ್ತೆ ಹೊರಟರು. ಅವರು ಒಂದು ಗ್ರಾಮದವರ ಬಳಿಗೆ ತಲುಪಿ, ಅವರೊಡನೆ ಆಹಾರವನ್ನು ಕೇಳಿದರು. ಆದರೆ ಅವರು ಇವರಿಗೆ ಆತಿಥ್ಯ ನೀಡಲು ನಿರಾಕರಿಸಿದರು. ಮುಂದೆ ಅವರು ಅಲ್ಲಿ ಒಂದು ಗೋಡೆಯನ್ನು ಕಂಡರು. ಅದು ಬೀಳುವುದರಲ್ಲಿತ್ತು. ಆ ವ್ಯಕ್ತಿ ಅದನ್ನು ಸ್ಥಿರಗೊಳಿಸಿದರು. ಆಗ ಅವರು (ಮೂಸಾ), ‘‘ನೀವು ಬಯಸಿದ್ದರೆ ಈ ಕೆಲಸಕ್ಕಾಗಿ ವೇತನ ಪಡೆಯ ಬಹುದಿತ್ತು’’ ಎಂದರು.

 78. ಆ ವ್ಯಕ್ತಿ ಹೇಳಿದರು; ಇದು ನನ್ನ ಮತ್ತು ನಿಮ್ಮ ನಡುವಿನ ವಿದಾಯದ ಹಂತವಾಗಿದೆ. ನಾನೀಗ, ನಿಮಗೆ ಅಸಹನೀಯವಾಗಿದ್ದ ವಿಷಯಗಳ ವಾಸ್ತವವನ್ನು ತಿಳಿಸುತ್ತೇನೆ.

  79. ಆ ಹಡಗು ಕಡಲಲ್ಲಿ ಶ್ರಮಿಸುವ ಕೆಲವು ಬಡವರದಾಗಿತ್ತು. ನಾನು ಅದಕ್ಕೆ ಹಾನಿ ಮಾಡಲು ಹೊರಟಿದ್ದೇಕೆಂದರೆ, (ಪ್ರಯಾಣದ) ಮುಂದಿನ ಹಂತದಲ್ಲಿ ಒಬ್ಬ ರಾಜನಿದ್ದನು – ಅವನು (ಸುಸ್ಥಿತಿಯಲ್ಲಿರುವ) ಪ್ರತಿಯೊಂದು ಹಡಗನ್ನೂ ಬಲವಂತವಾಗಿ ವಶಪಡಿಸಿಕೊಳ್ಳುತ್ತಿದ್ದನು.

 80. ಇನ್ನು ಆ ಬಾಲಕ. ಅವನ ತಾಯಿ – ತಂದೆ ವಿಶ್ವಾಸಿಗಳಾಗಿದ್ದರು. ಅವನು ತನ್ನ ವಿದ್ರೋಹ ಹಾಗೂ ಧಿಕ್ಕಾರದ ಮೂಲಕ ಅವರನ್ನು ಪೀಡಿಸಬಹುದೆಂಬ ಆಶಂಕೆ ನಮಗಿತ್ತು.

81. ಆದ್ದರಿಂದ ಆತನ ಬದಲಿಗೆ, ಆತನಿಗಿಂತ ಹೆಚ್ಚು ಶುದ್ಧ ಚರಿತನಾದ ಹಾಗೂ ಹೆಚ್ಚು ದಯೆ ಇರುವ ಒಬ್ಬಾತನನ್ನು ಅವರ ಒಡೆಯನು ಅವರಿಗೆ ಕೊಡಬೇಕೆಂದು ನಾವು ಬಯಸಿದೆವು.

82. ಇನ್ನು ಆ ಗೋಡೆಯ ಸಂಗತಿ ಏನೆಂದರೆ, ಅದು ಊರಿನ ಇಬ್ಬರು ಅನಾಥ ಬಾಲಕರಿಗೆ ಸೇರಿತ್ತು. ಅವರಿಗೆ ಸೇರಿದ ಖಜಾನೆಯೊಂದು ಅದರ ತಳದಲ್ಲಿತ್ತು. ಅವರ ತಂದೆ ಒಬ್ಬ ಸಜ್ಜನನಾಗಿದ್ದನು. ಅವರಿಬ್ಬರೂ ತಮ್ಮ ಯವ್ವನವನ್ನು ತಲುಪಿ, ತಮ್ಮ ಖಜಾನೆಯನ್ನು ಹೊರ ತೆಗೆಯಬೇಕೆಂಬುದು ನಿಮ್ಮ ಒಡೆಯನ ನಿರ್ಧಾರವಾಗಿತ್ತು. ಇದೆಲ್ಲಾ ನಿಮ್ಮ ಒಡೆಯನ ಕರುಣೆ. ನಾನು ಇದಾವುದನ್ನೂ ನನ್ನ ಇಚ್ಛೆಯಿಂದ ಮಾಡಿಲ್ಲ. ನಿಮಗೆ ಸಹಿಸಲಿಕ್ಕಾಗದ ವಿಷಯಗಳ ವಾಸ್ತವ ಇದು.

83. (ದೂತರೇ), ಅವರು ನಿಮ್ಮೊಡನೆ ‘ಝಲ್‌ಕರ್‌ನೈನ್’ ಕುರಿತು ವಿಚಾರಿಸುತ್ತಾರೆ. ಹೇಳಿರಿ; ನಾನಿದೋ ಅವರ ವಿಷಯವನ್ನು ನಿಮಗೆ ಕೇಳಿಸುತ್ತೇನೆ.

84. ನಾವು ಅವರಿಗೆ ಭೂಮಿಯಲ್ಲಿ ಭಾರೀ ಅಧಿಕಾರವನ್ನು ನೀಡಿದ್ದೆವು ಮತ್ತು ಎಲ್ಲ ಬಗೆಯ ಸಂಪತ್ಸಾಧನಗಳನ್ನು ಒದಗಿಸಿದ್ದೆವು.

85. ಒಮ್ಮೆ ಅವರು, ಒಂದು ಸಾಧನೆಗಾಗಿ ಹೊರಟರು.

86. ಕೊನೆಗೆ ಅವರು, ಸೂರ್ಯನು ಅಸ್ತಮಿಸುವ ಸ್ಥಳವನ್ನು ತಲುಪಿದರು. ಅದು ಕೆಸರು ತುಂಬಿದ ಒಂದು ಚಿಲುಮೆಯಲ್ಲಿ ಮುಳುಗುವುದನ್ನು ಅವರು ಕಂಡರು. ಅಲ್ಲಿ ಅವರಿಗೆ ಒಂದು ಜನಾಂಗವು ಸಿಕ್ಕಿತು. ನಾವು ಹೇಳಿದೆವು; ಓ ಝಲ್‌ಕರ್‌ನೈನ್, ನೀನು ಅವರನ್ನು ದಂಡಿಸಬಹುದು ಅಥವಾ ಅವರ ಜೊತೆ ಸೌಜನ್ಯದ ವರ್ತನೆಯನ್ನೂ ತೋರಬಹುದು.

87. ಅವರು ಹೇಳಿದರು; ಅಕ್ರಮವೆಸಗಿದಾತನನ್ನು ನಾವು ಶಿಕ್ಷಿಸುವೆವು ಮತ್ತು ಆ ಬಳಿಕ ಅವನನ್ನು ತನ್ನ ಒಡೆಯನ ಬಳಿಗೆ ಮರಳಿಸಲಾದಾಗ ಅವನು ಆತನಿಗೆ ತುಂಬಾ ಉಗ್ರ ಶಿಕ್ಷೆಯನ್ನು ನೀಡುವನು.

 88. ಇನ್ನು, ವಿಶ್ವಾಸವಿಟ್ಟು, ಸತ್ಕರ್ಮ ಮಾಡುವಾತನಿಗೆ (ಅಲ್ಲಾಹನ ಬಳಿ) ಅತ್ಯುತ್ತಮ ಪ್ರತಿಫಲವಿದೆ. ಜೊತೆಗೆ, ನಾವೂ ಆತನೊಂದಿಗೆ ಸೌಮ್ಯವಾಗಿ ವರ್ತಿಸುವೆವು.

 89. ಆ ಬಳಿಕ ಅವರು ಇನ್ನೊಂದು ಸಾಧನೆಗಾಗಿ ಹೊರಟರು.

90. ಕೊನೆಗೆ ಅವರು, ಸೂರ್ಯನು ಉದಯಿಸುವ ಸ್ಥಳವನ್ನು ತಲುಪಿದರು ಮತ್ತು ಅಲ್ಲಿ ಅದು, ಜನಾಂಗವೊಂದರ ಮೇಲೆ ಉದಯಿಸುವುದನ್ನು ಕಂಡರು. ಸೂರ್ಯನಿಂದ ಮರೆಯಾಗುವುದಕ್ಕೆ ಯಾವುದೇ ಆಶ್ರಯವನ್ನು ನಾವು ಆ ಜನಾಂಗದವರಿಗೆ ಒದಗಿಸಿರಲಿಲ್ಲ.

91. ಹೀಗಿತ್ತು ಅವರ ಸ್ಥಿತಿ. ಅತ್ತ, ಅವರ (ಝಲ್‌ಕರ್‌ನೈನ್‌ರ) ಬಳಿ ಏನಿತ್ತೆಂಬುದು ನಮಗೆ ಚೆನ್ನಾಗಿ ತಿಳಿದಿತ್ತು.

92. ಅವರು ಮತ್ತೊಂದು ಸಾಧನೆಗಾಗಿ ಹೊರಟರು.

 93. ಕೊನೆಗೆ ಅವರು ಎರಡು ಪರ್ವತಗಳ ನಡುವೆ ಇದ್ದ ಸ್ಥಳವನ್ನು ತಲುಪಿದರು ಮತ್ತು ಅವೆರಡರ ನಡುವೆ ಒಂದು ಜನಾಂಗವನ್ನು ಕಂಡರು. ಅವರಿಗೆ ಯಾವ ಮಾತೂ ಅರ್ಥವಾಗುತ್ತಿರಲಿಲ್ಲ.

 

94. ಅವರು (ಆ ನಾಡಿನವರು) ಹೇಳಿದರು; ಓ ಝಲ್‌ಕರ್‌ನೈನ್, ಯಾಜೂಜ್ ಮತ್ತು ಮಾಜೂಜ್ ಭೂಮಿಯಲ್ಲಿ ಅಶಾಂತಿ ಹಬ್ಬುತ್ತಿದ್ದಾರೆ. ನಾವು ನಿಮಗೆ ಶುಲ್ಕ ನೀಡಿದರೆ ನೀವು ನಮ್ಮ ಹಾಗೂ ಅವರ ನಡುವೆ ಒಂದು ಗೋಡೆಯನ್ನು ನಿರ್ಮಿಸುವಿರಾ?

95. ಅವರು ಹೇಳಿದರು; ‘‘ನನಗೆ ನನ್ನ ಒಡೆಯನು ಧಾರಾಳ ಕೊಡುಗೆಗಳನ್ನು ನೀಡಿದ್ದಾನೆ. ನೀವು ಜನ ಬಲದ ಮೂಲಕ ನನಗೆ ನೆರವಾಗಿರಿ. ನಾನು ನಿಮ್ಮ ಹಾಗೂ ಅವರ ನಡುವೆ ಒಂದು ತಡೆಗೋಡೆಯನ್ನು ನಿರ್ಮಿಸುವೆನು.’’

96. ‘‘ನೀವು ನನಗೆ ಉಕ್ಕಿನ ಹಾಳೆಗಳನ್ನು ತಂದು ಕೊಡಿರಿ.’’ ಹೀಗೆ, ಅವರು ಎರಡು ಪರ್ವತಗಳ ನಡುವಣ ಅಂತರವನ್ನು ಮುಚ್ಚಿದ ಬಳಿಕ, ‘‘ಇದನ್ನು ಚೆನ್ನಾಗಿ ಉರಿಸಿರಿ’’ ಎಂದು ಆದೇಶಿಸಿದರು. ಕೊನೆಗೆ ಅವರು ಅದನ್ನು ಬೆಂಕಿಯಾಗಿಸಿದರು. ಆಗ ಅವರು, ‘‘ಈಗ ನನ್ನ ಬಳಿಗೆ ಕರಗಿದ ತಾಮ್ರವನ್ನು ತನ್ನಿರಿ, ನಾನು ಅದನ್ನು ಇದರ ಮೇಲೆ ಸುರಿಯುತ್ತೇನೆ’’ ಎಂದರು.

97. ಅವರಿಗೆ (ಯಾಜೂಜ್, ಮಾಜೂಜ್ ಮತ್ತು ಅವರ ಪಡೆಗಳಿಗೆ) ಅದರ ಮೇಲೆ ಹತ್ತಿ ಬರಲಿಕ್ಕಾಗಲಿ, ಅದರಲ್ಲಿ ಕನ್ನ ಕೊರೆಯಲಿಕ್ಕಾಗಲಿ ಸಾಧ್ಯವಿರಲಿಲ್ಲ.

98. ಅವರು (ಝುಲ್ ಕರ್‌ನೈನ್) ಹೇಳಿದರು; ಇದೆಲ್ಲಾ ನನ್ನ ಒಡೆಯನ ಕೃಪೆ. ಅವನ ವಾಗ್ದಾನಿತ ಸಮಯ ಬಂದಾಗ ಅವನು ಇದನ್ನೆಲ್ಲಾ ನೆಲಸಮ ಗೊಳಿಸಿಬಿಡುವನು ಮತ್ತು ನನ್ನ ಒಡೆಯನ ವಾಗ್ದಾನ ಖಂಡಿತ ಸತ್ಯವಾಗಿರುತ್ತದೆ.

99. ಮತ್ತು ಆ ದಿನ ನಾವು ಜನರನ್ನು ಬಿಟ್ಟು ಬಿಡುವೆವು. ಅವರು ಅಲೆಗಳಂತೆ ಪರಸ್ಪರ ಘರ್ಷಿಸುವರು. ಕೊನೆಗೆ ಕಹಳೆಯನ್ನು ಊದಲಾಗುವುದು. ಮತ್ತು ನಾವು ಅವರೆಲ್ಲರನ್ನೂ ಒಟ್ಟು ಸೇರಿಸುವೆವು.

100. ಆ ದಿನ ನಾವು ನರಕವನ್ನು ಧಿಕ್ಕಾರಿಗಳ ಮುಂದೆಯೇ ತಂದಿಡುವೆವು.

101. ನಮ್ಮ ಉಪದೇಶಗಳ ಪಾಲಿಗೆ ಅವರ ಕಣ್ಣುಗಳ ಮೇಲೆ ತೆರೆ ಬಿದ್ದಿತ್ತು ಮತ್ತು ಏನನ್ನೂ ಕೇಳುವ ಸಾಮರ್ಥ್ಯ ಅವರಲ್ಲಿರಲಿಲ್ಲ.

102. ಧಿಕ್ಕಾರಿಗಳೇನು, ನನ್ನ ಬದಲಿಗೆ ನನ್ನ ದಾಸರನ್ನೇ ತಮ್ಮ ರಕ್ಷಕರಾಗಿಸಿಕೊಳ್ಳಬಹುದು ಎಂದು ಕೊಂಡಿರುವರೇ? ಖಂಡಿತವಾಗಿಯೂ ಈ ಧಿಕ್ಕಾರಿಗಳ ಆತಿಥ್ಯಕ್ಕಾಗಿಯೇ ನಾನು ನರಕವನ್ನು ಸಿದ್ಧಗೊಳಿಸಿಟ್ಟಿದ್ದೇನೆ.

103. ಹೇಳಿರಿ; ಕರ್ಮಗಳ ದೃಷ್ಟಿಯಿಂದ ಅತ್ಯಧಿಕ ನಷ್ಟದಲ್ಲಿರುವವರು ಯಾರೆಂದು ನಾವು ನಿಮಗೆ ತಿಳಿಸಬೇಕೇ?

104. ಅವರ ಶ್ರಮವೆಲ್ಲವೂ ಈ ಲೋಕದ ಬದುಕಿಗಾಗಿ ವ್ಯರ್ಥವಾಯಿತು. ಆದರೂ ಅವರು ತಾವು ಭಾರೀ ಸತ್ಕಾರ್ಯಗಳನ್ನೇ ಮಾಡುತ್ತಿದ್ದೇವೆ ಎಂದು ಕೊಂಡಿದ್ದರು.

105. ಅವರೇ, ತಮ್ಮ ಒಡೆಯನ ವಚನಗಳನ್ನು ಹಾಗೂ ಆತನನ್ನು ಭೇಟಿಯಾಗಲಿಕ್ಕಿದೆ ಎಂಬುದನ್ನು ಧಿಕ್ಕರಿಸಿದವರು. ಅವರ ಕರ್ಮಗಳೆಲ್ಲವೂ ವ್ಯರ್ಥವಾದವು ಮತ್ತು ಪುನರುತ್ಥಾನ ದಿನ ನಾವು ಅವರಿಗೆ (ಅವರ ಕರ್ಮಗಳಿಗೆ) ಯಾವ ಮಾನ್ಯತೆಯನ್ನೂ ನೀಡಲಾರೆವು.

 106. ಅವರು (ಸತ್ಯವನ್ನು) ಧಿಕ್ಕರಿಸಿದ್ದಕ್ಕಾಗಿ ಮತ್ತು ನನ್ನ ವಚನಗಳನ್ನೂ ನನ್ನ ದೂತರನ್ನೂ ಕೇವಲ ತಮಾಷೆಯಾಗಿ ಪರಿಗಣಿಸಿದ್ದಕ್ಕಾಗಿ, ಈ ನರಕವೇ ಅವರಿಗಿರುವ ಪ್ರತಿಫಲವಾಗಿದೆ.

107. ಇನ್ನು, ಧರ್ಮದಲ್ಲಿ ನಂಬಿಕೆ ಇಟ್ಟು ಸತ್ಕರ್ಮಗಳನ್ನು ಮಾಡಿದವರ ಆತಿಥ್ಯಕ್ಕಾಗಿ ಫಿರ್‌ದೌಸ್‌ನ (ಅತ್ಯುನ್ನತ ಸ್ವರ್ಗದ) ತೋಟಗಳಿವೆ.

108. ಅವರು ಅವುಗಳಲ್ಲಿ ಸದಾಕಾಲ ಇರುವರು ಮತ್ತು ಅವರು ಅಲ್ಲಿಂದ ಯಾವುದೇ ವರ್ಗಾವಣೆಯನ್ನು ಬಯಸಲಾರರು.

109. ಹೇಳಿರಿ; ಒಂದು ವೇಳೆ ನನ್ನ ಒಡೆಯನ ವಚನಗಳಿಗಾಗಿ (ಅವುಗಳನ್ನು ದಾಖಲಿಸಲಿಕ್ಕಾಗಿ), ಸಾಗರವೇ ಮಶಿಯಾಗಿ ಬಿಟ್ಟರೂ, ನನ್ನ ಒಡೆಯನ ವಚನಗಳು ಮುಗಿಯುವ ಮುನ್ನವೇ ಸಾಗರವು ಒಣಗಿ ಹೋದೀತು – ಅದರ ನೆರವಿಗಾಗಿ ನಾವು ಅಂತಹದೇ ಇನ್ನೊಂದು ಸಾಗರವನ್ನು ತಂದರೂ ಸರಿಯೇ!

110. (ದೂತರೇ), ಹೇಳಿರಿ; ನಾನಂತು ನಿಮ್ಮಂತೆ ಒಬ್ಬ ಮಾನವ ಮಾತ್ರನಾಗಿದ್ದೇನೆ. ಪೂಜೆಗರ್ಹನಾದ ನಿಮ್ಮ ದೇವನು ಒಬ್ಬನು ಮಾತ್ರನೆಂದು ನನಗೆ ದಿವ್ಯಸಂದೇಶವನ್ನು ನೀಡಲಾಗಿದೆ. ಇನ್ನು, ತನ್ನ ಒಡೆಯನನ್ನು ಭೇಟಿಯಾಗಲಿಕ್ಕಿದೆ ಎಂಬ ನಿರೀಕ್ಷೆ ಉಳ್ಳವನು, ಒಳ್ಳೆಯ ಕೆಲಸವನ್ನೇ ಮಾಡಲಿ ಮತ್ತು ತನ್ನ ಒಡೆಯನ ಪೂಜೆಯಲ್ಲಿ ಬೇರೆ ಯಾರನ್ನೂ ಪಾಲುಗೊಳಿಸದಿರಲಿ.