02. Al Baqarah

 

ಅಲ್ ಬಕರಃ (ದನ)

ವಚನಗಳು – 286, ಮದೀನಃ

ಅಲ್ಲಾಹನ ಹೆಸರಿಂದ – ಅವನು ಅಪಾರ ದಯಾಳು, ಕರುಣಾಮಯಿ.

1. ಅಲಿಫ್ ಲಾಮ್ ಮ್ಮೀಮ್.

2. ಇದು ಗ್ರಂಥ. ಇದರಲ್ಲಿ ಸಂಶಯವಿಲ್ಲ. ಇದು ಧರ್ಮನಿಷ್ಠರಿಗೆ ಸರಿದಾರಿಯನ್ನು ತೋರಿಸುತ್ತದೆ.

3. ಅವರು ಕಾಣದ್ದನ್ನು ನಂಬುವವರು, ಸ್ಥಿರವಾಗಿ ‘ನಮಾಝ್’ ಅನ್ನು ಪಾಲಿಸುವವರು ಮತ್ತು ನಾವು ಅವರಿಗೆ ಏನನ್ನು ನೀಡಿರುವೆವೋ ಅದರಿಂದ ಖರ್ಚು ಮಾಡುವವರಾಗಿರುತ್ತಾರೆ.

4. ಮತ್ತು ಅವರು, ನಿಮಗೆ (ದೇವದೂತರಿಗೆ) ಇಳಿಸಿಕೊಡಲಾಗಿರುವ ಹಾಗೂ ನಿಮಗಿಂತ ಹಿಂದೆ ಇಳಿಸಿಕೊಡಲಾಗಿದ್ದ ಸಂದೇಶಗಳಲ್ಲಿ ನಂಬಿಕೆಯುಳ್ಳವರು ಮತ್ತು ಪರಲೋಕದ ಕುರಿತು ದೃಢ ವಿಶ್ವಾಸ ಉಳ್ಳವರಾಗಿರುತ್ತಾರೆ.

5. ಅವರೇ, ತಮ್ಮ ಒಡೆಯನ ಕಡೆಯಿಂದ (ಬಂದಿರುವ) ಸರಿದಾರಿಯಲ್ಲಿರುವವರು ಮತ್ತು ಅವರೇ ವಿಜಯಿಗಳು.

6. (ಸತ್ಯವನ್ನು) ಧಿಕ್ಕರಿಸಿದವರಿಗೆ ನೀವು ಎಚ್ಚರಿಕೆ ನೀಡಿದರೂ ಒಂದೇ, ನೀಡದಿದ್ದರೂ ಒಂದೇ. ಅವರು ಖಂಡಿತ ನಂಬುವವರಲ್ಲ.

7. ಅಲ್ಲಾಹನು ಅವರ ಹೃದಯಗಳ ಮೇಲೆ ಹಾಗೂ ಅವರ ಕಿವಿಗಳ ಮೇಲೆ ಮುದ್ರೆಯೊತ್ತಿದ್ದಾನೆ. ಅವರ ಕಣ್ಣುಗಳ ಮೇಲೆ ತೆರೆ ಬಿದ್ದಿದೆ ಮತ್ತು ಅವರಿಗೆ ಭಾರೀ ದೊಡ್ಡ ಶಿಕ್ಷೆ ಸಿಗಲಿದೆ.

8. ಜನರಲ್ಲಿ ಕೆಲವರು ‘‘ನಾವು ಅಲ್ಲಾಹನನ್ನು ಮತ್ತು ಅಂತಿಮ ದಿನವನ್ನು ನಂಬಿದ್ದೇವೆ’’ಎನ್ನುತ್ತಾರೆ. ನಿಜವಾಗಿ, ಅವರು ನಂಬಿಕೆ ಉಳ್ಳವರಲ್ಲ.

9. (ಮೇಲುನೋಟಕ್ಕೆ) ಅವರು ಅಲ್ಲಾಹನನ್ನು ಮತ್ತು ವಿಶ್ವಾಸಿಗಳನ್ನು ವಂಚಿಸುತ್ತಿದ್ದಾರೆ. ನಿಜವಾಗಿ ಅವರು ಸ್ವತಃ ತಮ್ಮನ್ನೇ ವಂಚಿಸುತ್ತಿದ್ದಾರೆ. ಆದರೆ ಅವರಿಗೆ ಅದರ ಅರಿವಿಲ್ಲ.

10. ಅವರ ಮನಸುಗಳಲ್ಲಿ ರೋಗವಿದೆ. ಅಲ್ಲಾಹನು ಅವರ ರೋಗವನ್ನು ಹೆಚ್ಚಿಸಿದ್ದಾನೆ. ಅವರು ಸುಳ್ಳು ಹೇಳುತ್ತಿದ್ದುದಕ್ಕಾಗಿ ಅವರಿಗೆ ಕಠಿಣ ಶಿಕ್ಷೆ ಸಿಗಲಿದೆ.

11. ‘‘ಭೂಮಿಯಲ್ಲಿ ಅಶಾಂತಿ ಹರಡಬೇಡಿ’’ ಎಂದು ಅವರೊಡನೆ ಹೇಳಿದಾಗ ಅವರು ‘‘ನಾವು ಕೇವಲ ಸುಧಾರಕರು’’ ಎನ್ನುತ್ತಾರೆ.

12. ನಿಮಗೆ ತಿಳಿದಿರಲಿ! ಖಂಡಿತವಾಗಿಯೂ, ಅವರೇ ಅಶಾಂತಿ ಹರಡುವವರು. ಆದರೆ ಅವರಿಗೆ ಅದರ ಅರಿವಿಲ್ಲ.

13. ‘‘ಇತರರು ನಂಬಿದಂತೆ ನೀವು ನಂಬಿರಿ’’ ಎಂದು ಅವರೊಡನೆ ಹೇಳಿದಾಗ ಅವರು, ‘‘ನಾವೇನು, ಮೂರ್ಖರು ನಂಬಿದಂತೆ ನಂಬಬೇಕೇ?’’ ಎನ್ನುತ್ತಾರೆ. ತಿಳಿದಿರಲಿ, ನಿಜವಾಗಿ ಅವರೇ ಮೂರ್ಖರು. ಆದರೆ ಅವರಿಗೆ ಅದು ತಿಳಿದಿಲ್ಲ.

14. ಅವರು ವಿಶ್ವಾಸಿಗಳನ್ನು ಕಂಡಾಗ ‘‘ನಾವು ನಂಬಿದೆವು’’ ಎನ್ನುತ್ತಾರೆ ಮತ್ತು ತಮ್ಮ ಶೈತಾನರುಗಳ ಜೊತೆ ಏಕಾಂತದಲ್ಲಿದ್ದಾಗ ‘‘ನಾವಂತು ನಿಮ್ಮ ಜೊತೆಗೇ ಇದ್ದೇವೆ, ಅವರ ಜೊತೆ ನಾವು ಕೇವಲ ಗೇಲಿ ಮಾಡುತ್ತಿದ್ದೆವು’’ ಎನ್ನುತ್ತಾರೆ.

15. ನಿಜವಾಗಿ ಅಲ್ಲಾಹನು ಅವರನ್ನು ಗೇಲಿ ಮಾಡುತ್ತಿದ್ದಾನೆ ಮತ್ತು ಅವರನ್ನು ಅವರ ವಿದ್ರೋಹದಲ್ಲಿ ಮುಂದುವರಿಸುತ್ತಿದ್ದಾನೆ – ಅವರು ಕುರುಡಾಗಿ ವರ್ತಿಸುತ್ತಿದ್ದಾರೆ.

16. ಅವರೇ ನಿಜವಾಗಿ ಸನ್ಮಾರ್ಗದ ಬದಲು ದಾರಿಗೇಡಿತನವನ್ನು ಖರೀದಿಸಿಕೊಂಡವರು. ಅವರ ಈ ವ್ಯಾಪಾರದಿಂದ ಅವರಿಗೆ ಯಾವ ಲಾಭವೂ ಆಗಿಲ್ಲ ಮತ್ತು ಅವರು ಮಾರ್ಗದರ್ಶನವನ್ನೂ ಪಡೆಯಲಿಲ್ಲ.

17. ಅವರ (ಸ್ಥಿತಿಯ) ಉದಾಹರಣೆ ಹೀಗಿದೆ; ಒಬ್ಬನು ಬೆಂಕಿ ಉರಿಸಿದ್ದಾನೆ. ಅದು ತನ್ನ ಸುತ್ತಮುತ್ತಲನ್ನೆಲ್ಲಾ ಬೆಳಗಿ ಬಿಟ್ಟಾಗ ಅಲ್ಲಾಹನು ಅವರ ದೃಷ್ಟಿಯನ್ನು ಕಿತ್ತುಕೊಂಡನು ಮತ್ತು ಅವರನ್ನು ಕತ್ತಲಲ್ಲಿ ಬಿಟ್ಟು ಬಿಟ್ಟನು. ಅವರಿಗೇನೂ ಕಾಣಿಸುವುದಿಲ್ಲ.

18. ಅವರು ಕಿವುಡರು, ಮೂಗರು ಮತ್ತು ಕುರುಡರು. ಅವರು (ಸತ್ಯದೆಡೆಗೆ) ಮರಳುವವರಲ್ಲ.

19. ಅಥವಾ ಅವರ ಸ್ಥಿತಿಯು ಆಕಾಶದಿಂದ ಸುರಿಯುವ ಮಳೆಯಂತಿದೆ. ಅದರೊಳಗೆ ಕತ್ತಲುಗಳು, ಸಿಡಿಲಬ್ಬರ ಮತ್ತು ಮಿಂಚುಗಳಿವೆ. ಅವರು ಗುಡುಗಿನಿಂದಾಗಿ, ಮರಣ ಭಯದಿಂದ ತಮ್ಮ ಬೆರಳುಗಳನ್ನು ತಮ್ಮ ಕಿವಿಗಳೊಳಗೆ ತುರುಕಿಕೊಳ್ಳುತ್ತಾರೆ. ಅಲ್ಲಾಹನು ಸತ್ಯ ಧಿಕ್ಕಾರಿಗಳನ್ನು ಆವರಿಸಿಕೊಂಡಿದ್ದಾನೆ.

20. ಮಿಂಚು ಅವರ ದೃಷ್ಟಿಗಳನ್ನು ಕಿತ್ತುಕೊಳ್ಳುವುದೋ ಎಂಬಂತಿದೆ. ಅದು ಅವರ ಮುಂದೆ ಬೆಳಗಿದಾಗಲೆಲ್ಲ ಅವರು ಅದರಲ್ಲಿ (ಆ ಬೆಳಕಿನಲ್ಲಿ) ನಡೆಯತೊಡಗುತ್ತಾರೆ. ಮತ್ತೆ ಅವರ ಮೇಲೆ ಕತ್ತಲು ಕವಿದಾಗ ಅವರು ನಿಂತು ಬಿಡುತ್ತಾರೆ. ಅಲ್ಲಾಹನು ಬಯಸಿದ್ದರೆ, ಅವರ ಕೇಳುವ ಮತ್ತು ನೋಡುವ ಸಾಮರ್ಥ್ಯವನ್ನು ಕಿತ್ತುಕೊಳ್ಳುತ್ತಿದ್ದನು. ಅಲ್ಲಾಹನು ಖಂಡಿತ ಎಲ್ಲವನ್ನೂ ಮಾಡಬಲ್ಲವನಾಗಿದ್ದಾನೆ.

21. ಜನರೇ, ನಿಮ್ಮನ್ನು ಮತ್ತು ನಿಮ್ಮ ಹಿಂದಿನವರನ್ನು ಸೃಷ್ಟಿಸಿದ ನಿಮ್ಮ ಒಡೆಯನನ್ನೇ ಪೂಜಿಸಿರಿ – ನೀವು ಸುರಕ್ಷಿತರಾಗಬಹುದು.

22. ಅವನೇ, ನಿಮಗಾಗಿ ಭೂಮಿಯನ್ನು ಹಾಸಾಗಿ ಹಾಗೂ ಆಕಾಶವನ್ನು ಚಪ್ಪರವಾಗಿ ಮಾಡಿದವನು ಮತ್ತು ಆಕಾಶದಿಂದ ನೀರನ್ನು ಇಳಿಸಿದವನು ಹಾಗೂ ಆ ಮೂಲಕ ನಿಮಗೆ ಆಹಾರವಾಗಿ ಫಲಗಳನ್ನು ಬೆಳೆಸಿದವನು. ನೀವು (ಇದನ್ನೆಲ್ಲಾ) ತಿಳಿದಿರುತ್ತಾ, ಯಾರನ್ನೂ ಅಲ್ಲಾಹನಿಗೆ ಸಾಟಿಯಾಗಿಸಬೇಡಿ.

23. ನಾವು ನಮ್ಮ ದಾಸನಿಗೆ ಇಳಿಸಿ ಕೊಟ್ಟಿರುವುದರ (ಕುರ್‌ಆನಿನ) ಕುರಿತು ನಿಮಗೆ ಸಂಶಯವಿದ್ದರೆ, ಅಂತಹ ಒಂದು ಅಧ್ಯಾಯವನ್ನಾದರೂ ನೀವು ರಚಿಸಿ ತನ್ನಿರಿ ಮತ್ತು ಅದಕ್ಕಾಗಿ ಅಲ್ಲಾಹನ ಹೊರತು ನಿಮ್ಮೆಲ್ಲ ಸಹಾಯಕರನ್ನೂ ಕರೆಯಿರಿ – ನೀವು ಸತ್ಯವಂತರಾಗಿದ್ದರೆ (ಇಷ್ಟನ್ನು ಮಾಡಿರಿ).

24. ನಿಮಗೆ ಅದನ್ನು ಮಾಡಲಾಗದಿದ್ದರೆ – ಮತ್ತು ಖಂಡಿತ ನಿಮಗೆ ಅದನ್ನು ಮಾಡಲಾಗುವುದಿಲ್ಲ – ಮನುಷ್ಯರು ಮತ್ತು ಕಲ್ಲುಗಳೇ ಇಂಧನವಾಗಿರುವ (ನರಕದ) ಬೆಂಕಿಗೆ ಅಂಜಿರಿ – ಸತ್ಯ ಧಿಕ್ಕಾರಿಗಳಿಗಾಗಿ ಅದನ್ನು ಸಿದ್ಧ ಪಡಿಸಲಾಗಿದೆ.

25. ಸತ್ಯದಲ್ಲಿ ನಂಬಿಕೆ ಇಟ್ಟವರಿಗೆ ಹಾಗೂ ಸತ್ಕರ್ಮ ಮಾಡಿದವರಿಗೆ ಸುವಾರ್ತೆ ನೀಡಿರಿ; ಅವರಿಗಾಗಿ (ಸ್ವರ್ಗದಲ್ಲಿ) ತಳದಲ್ಲಿ ನದಿಗಳು ಹರಿಯುವಂತಹ ತೋಟಗಳಿವೆ. ಅವರಿಗೆ ಆ ತೋಟದ ಯಾವುದಾದರೂ ಫಲವನ್ನು ತಿನಿಸಿದಾಗಲೆಲ್ಲ ಅವರು ‘‘ಹಿಂದೆಯೂ ನಮಗೆ ಇದನ್ನೇ ತಿನಿಸಲಾಗಿತ್ತು’’ ಎನ್ನುವರು. ನಿಜವಾಗಿ (ಈ ಹಿಂದೆ) ಅವರಿಗೆ, ಅದಕ್ಕೆ ಹೋಲುವಂತಹದನ್ನು ನೀಡಲಾಗಿತ್ತು. ಅಲ್ಲಿ ಅವರಿಗೆ, ಪಾವನ ಪತ್ನಿಯರಿರುವರು ಮತ್ತು ಅವರು ಅದರಲ್ಲಿ ಸದಾಕಾಲ ಇರುವರು.

26. ಅಲ್ಲಾಹನಂತು ಸೊಳ್ಳೆ ಅಥವಾ ಅದಕ್ಕಿಂತಲೂ ಆಚಿನ ವಸ್ತುಗಳನ್ನು ಉದಾಹರಿಸುವುದಕ್ಕೆ ನಾಚುವುದಿಲ್ಲ. ವಿಶ್ವಾಸಿಗಳು, ಅದು ತಮ್ಮ ಒಡೆಯನ ಕಡೆಯಿಂದ ಬಂದಿರುವ ಸತ್ಯ ಎಂಬುದನ್ನು ಅರಿತಿರುತ್ತಾರೆ ಮತ್ತು ಧಿಕ್ಕಾರಿಗಳು, ‘‘ಈ ಉದಾಹರಣೆಯ ಮೂಲಕ ಅಲ್ಲಾಹನು ಬಯಸುವುದೇನನ್ನು?’’ ಎನ್ನುತ್ತಾರೆ. (ನಿಜವಾಗಿ), ಅವನು ಈ ಮೂಲಕ ಅನೇಕರನ್ನು ದಾರಿಗೆಡಿಸಿ ಬಿಡುತ್ತಾನೆ ಮತ್ತು ಅನೇಕರಿಗೆ ಸರಿದಾರಿಯನ್ನು ತೋರುತ್ತಾನೆ ಮತ್ತು ಅವನು ಅವಿಧೇಯರ ಹೊರತು ಇನ್ನಾರನ್ನೂ ಈ ಮೂಲಕ ದಾರಿಗೆಡಿಸುವುದಿಲ್ಲ.

27. ಅವರು (ಅವಿಧೇಯರು) ಅಲ್ಲಾಹನೊಂದಿಗೆ ಪಕ್ವವಾದ ಕರಾರು ಮಾಡಿಕೊಂಡ ಬಳಿಕ ಅದನ್ನು ಮುರಿಯುತ್ತಾರೆ ಮತ್ತು ಅಲ್ಲಾಹನು ಜೋಡಿಸಬೇಕೆಂದು ಆದೇಶಿಸಿರುವ ಸಂಬಂಧವನ್ನು ಕಡಿದು ಹಾಕುತ್ತಾರೆ ಮತ್ತು ಭೂಮಿಯಲ್ಲಿ ಅಶಾಂತಿಯನ್ನು ಹಬ್ಬುತ್ತಾರೆ. ಅವರೇ, ನಷ್ಟ ಅನುಭವಿಸುವವರು.

28. (ಮಾನವರೇ,) ಅಲ್ಲಾಹನನ್ನು ಧಿಕ್ಕರಿಸಲು ನಿಮಗೆ ಹೇಗೆ ತಾನೇ ಸಾಧ್ಯವಾಗುತ್ತದೆ? ನೀವು ಜೀವರಹಿತರಾಗಿದ್ದಾಗ ನಿಮಗೆ ಜೀವ ಕೊಟ್ಟವನು ಅವನು. ಮತ್ತೆ ಅವನು ನಿಮ್ಮನ್ನು ಸಾಯಿಸುವನು ಮತ್ತು ಆ ಬಳಿಕ ಪುನಃ ಅವನು ನಿಮ್ಮನ್ನು ಜೀವಂತಗೊಳಿಸುವನು. ಕೊನೆಗೆ ಅವನ ಕಡೆಗೇ ನಿಮ್ಮನ್ನು ಮರಳಿಸಲಾಗುವುದು.

29. ಭೂಮಿಯಲ್ಲಿರುವ ಎಲ್ಲವನ್ನೂ ನಿಮಗಾಗಿ ಸೃಷ್ಟಿಸಿದವನು ಅವನೇ. ತರುವಾಯ ಅವನು ಆಕಾಶದೆಡೆಗೆ ಗಮನ ಹರಿಸಿ, ಆ ಏಳು ಆಕಾಶಗಳನ್ನು ರೂಪಿಸಿದನು. ಅವನು ಎಲ್ಲವನ್ನೂ ಬಲ್ಲವನಾಗಿದ್ದಾನೆ.

30. ನಿಮ್ಮೊಡೆಯನು ‘ಮಲಕ್’ಗಳೊಡನೆ ‘‘ನಾನು ಭೂಮಿಯಲ್ಲಿ ಒಬ್ಬ ಪ್ರತಿನಿಧಿಯನ್ನು ನೇಮಿಸಲಿದ್ದೇನೆ’’ ಎಂದಾಗ ಅವರು ‘‘ಅಲ್ಲಿ ಅಶಾಂತಿಯನ್ನು ಹಬ್ಬುವ ಮತ್ತು ರಕ್ತ ಹರಿಸುವವನನ್ನು ನೀನು ನೇಮಿಸುವೆಯಾ? ನಾವಂತು, ನಿನ್ನನ್ನು ಪ್ರಶಂಸಿಸುತ್ತಾ ನಿನ್ನ ಪಾವಿತ್ರವನ್ನು ಜಪಿಸುತ್ತಾ ನಿನ್ನ ಪಾವಿತ್ರವನ್ನು ಕೊಂಡಾಡುತ್ತಾ ಇರುತ್ತೇವೆ’’ ಎಂದರು. ಅವನು (ಅಲ್ಲಾಹನು), ‘‘ಖಂಡಿತವಾಗಿಯೂ ನಿಮಗೆ ತಿಳಿಯದೆ ಇರುವುದು ನನಗೆ ತಿಳಿದಿದೆ’’ ಎಂದನು.

31. ಅವನು ಆದಮರಿಗೆ ಎಲ್ಲ (ವಸ್ತುಗಳ) ಹೆಸರುಗಳನ್ನು ಕಲಿಸಿಕೊಟ್ಟನು. ತರುವಾಯ ಅವುಗಳನ್ನು ಮಲಕ್‌ಗಳ ಮುಂದಿಟ್ಟು, ನೀವು ಸತ್ಯವಂತರಾಗಿದ್ದರೆ, ನನಗೆ ಇವುಗಳ ಹೆಸರುಗಳನ್ನು ತಿಳಿಸಿರಿ ಎಂದನು.

32. ಅವರು ಹೇಳಿದರು; ‘‘ನೀನು ಪಾವನನು. ನೀನು ನೀಡಿದ ಜ್ಞಾನದ ಹೊರತು ಬೇರಾವ ಜ್ಞಾನವೂ ನಮ್ಮ ಬಳಿ ಇಲ್ಲ. ಖಂಡಿತವಾಗಿಯೂ ನೀನು ಬಲ್ಲವನು ಮತ್ತು ಯುಕ್ತಿವಂತನು’’.

33. ಅವನು ( ಅಲ್ಲಾಹನು) ‘‘ಆದಮರೇ, ಅವರಿಗೆ (ಮಲಕ್‌ಗಳಿಗೆ) ಅವುಗಳ ಹೆಸರುಗಳನ್ನು ತಿಳಿಸಿರಿ’’ ಎಂದನು. ಅವರು (ಆದಮರು) ಅವರಿಗೆ ಅವುಗಳ ಹೆಸರುಗಳನ್ನು ತಿಳಿಸಿದಾಗ ಅವನು (ಅಲ್ಲಾಹನು) ಹೇಳಿದನು; ‘‘ಆಕಾಶದಲ್ಲಿ ಮತ್ತು ಭೂಮಿಯಲ್ಲಿ, ಅಡಗಿರುವ ಎಲ್ಲವನ್ನೂ ನಾನು ಬಲ್ಲೆನೆಂದು ಮತ್ತು ನೀವು ಪ್ರಕಟಿಸುವ ಹಾಗೂ ಅಡಗಿಸುವ ಎಲ್ಲವೂ ನನಗೆ ತಿಳಿದಿದೆಯೆಂದು ನಾನು ನಿಮಗೆ ಹೇಳಿರಲಿಲ್ಲವೇ?’’

34. ನಾವು (ಅಲ್ಲಾಹು) ‘ಮಲಕ್’ಗಳೊಡನೆ, ಆದಮರಿಗೆ ಸಾಷ್ಟಾಂಗ ವಂದಿಸಿರಿ ಎಂದಾಗ, ಅವರು ವಂದಿಸಿದರು. ಆದರೆ ಇಬ್ಲೀಸನ ಹೊರತು – ಅವನು ನಿರಾಕರಿಸಿದನು ಹಾಗೂ ಅಹಂಕರಿಸಿದನು ಮತ್ತು ಅವನು ಧಿಕ್ಕಾರಿಗಳ ಸಾಲಿಗೆ ಸೇರಿಕೊಂಡನು.

35. ನಾವು ಹೇಳಿದೆವು; ‘‘ಆದಮರೆ, ನೀವು ಮತ್ತು ನಿಮ್ಮ ಪತ್ನಿ ಸ್ವರ್ಗದಲ್ಲಿ ನೆಲೆಸಿರಿ ಮತ್ತು ನೀವಿಬ್ಬರೂ, ನೀವಿಚ್ಛಿಸುವಲ್ಲೆಲ್ಲಾ ಇದರಿಂದ ನಿಶ್ಚಿಂತರಾಗಿ ತಿನ್ನಿರಿ. ಆದರೆ ಆ ಮರದ ಹತ್ತಿರ ಹೋಗದಿರಿ, (ಹೋದರೆ) ನೀವಿಬ್ಬರೂ ಅಕ್ರಮಿಗಳ ಸಾಲಿಗೆ ಸೇರುವಿರಿ’’.

36. ತರುವಾಯ, ಶೈತಾನನು ಅವರಿಬ್ಬರನ್ನೂ ಪುಸಲಾಯಿಸಿದನು ಹಾಗೂ ಅವರನ್ನು, ಅವರು ಇದ್ದಲ್ಲಿಂದ ಹೊರ ಹಾಕಿಸಿದನು ಮತ್ತು ನಾವು ಹೇಳಿದೆವು; ‘‘ತೊಲಗಿ ಹೋಗಿರಿ. ನೀವು (ಮಾನವರು ಮತ್ತು ಶೈತಾನ್) ಪರಸ್ಪರ ಶತ್ರುಗಳು. ಒಂದು ನಿರ್ದಿಷ್ಟ ಕಾಲದವರೆಗೆ ನಿಮಗೆ ಭೂಮಿಯಲ್ಲಿ ವಸತಿ ಹಾಗೂ ಅಗತ್ಯದ ವಸ್ತುಗಳು ಇವೆ’’.

37. ಆ ಬಳಿಕ ಆದಮರು ತಮ್ಮಡೆಯನಿಂದ (ಕ್ಷಮೆ ಬೇಡುವ) ಕೆಲವು ಪದಗಳನ್ನು ಕಲಿತುಕೊಂಡರು (ಮತ್ತು ಪಶ್ಚಾತ್ತಾಪ ಪ್ರಕಟಿಸಿದರು). ಅವನು (ಅಲ್ಲಾಹನು) ಅವರ ಪಶ್ಚಾತ್ತಾಪವನ್ನು ಸ್ವೀಕರಿಸಿದನು. ಅವನು ಖಂಡಿತ ಪಶ್ಚಾತ್ತಾಪ ಸ್ವೀಕರಿಸುವವನು ಮತ್ತು ಕರುಣಾಮಯಿಯಾಗಿದ್ದಾನೆ.

38. ನಾವು (ಅಲ್ಲಾಹು) ಹೇಳಿದೆವು; ‘‘ನೀವೆಲ್ಲರೂ ಇಲ್ಲಿಂದ ಇಳಿದು ಹೋಗಿರಿ. ನನ್ನ ಕಡೆಯಿಂದ ನಿಮ್ಮ ಬಳಿಗೆ ಏನಾದರೂ ಮಾರ್ಗದರ್ಶನ ತಲುಪಿದಾಗ, ಯಾರು ನಾನು ತೋರಿದ ಮಾರ್ಗವನ್ನು ಅನುಸರಿಸುವರೋ ಅವರಿಗೆ ಯಾವ ಭಯವೂ ಇರದು ಮತ್ತು ಅವರು ದುಃಖಿಸಲಾರರು’’.

39. ‘‘ಇನ್ನು (ಸತ್ಯವನ್ನು) ಧಿಕ್ಕರಿಸುವವರು ಮತ್ತು ನಮ್ಮ ವಚನಗಳನ್ನು ತಿರಸ್ಕರಿಸುವವರೇ ನರಕಾಗ್ನಿಯವರು ಮತ್ತು ಅವರು ಅದರಲ್ಲಿ ಸದಾಕಾಲ ಇರುವರು’’.

40. ಇಸ್ರಾಈಲರ ಸಂತತಿಗಳೇ, ನಾನು ನಿಮಗೆ ನೀಡಿದ ನನ್ನ ಅನುಗ್ರಹಗಳನ್ನು ನೆನಪಿಸಿಕೊಳ್ಳಿರಿ ಮತ್ತು ನನ್ನ ಜೊತೆ ನೀವು ಮಾಡಿದ್ದ ಕರಾರನ್ನು ಪಾಲಿಸಿರಿ. (ಆಗ) ನಿಮ್ಮ ಜೊತೆ ನಾನು ಮಾಡಿರುವ ಕರಾರನ್ನು ನಾನು ಪಾಲಿಸುವೆನು ಮತ್ತು ನೀವು ನನಗೆ ಮಾತ್ರ ಅಂಜಿರಿ.

41. ಮತ್ತು ನಾನು ಇಳಿಸಿರುವ ಸಂದೇಶದಲ್ಲಿ ನೀವು ನಂಬಿಕೆ ಇಡಿರಿ. ಅದು ಈಗಾಗಲೇ ನಿಮ್ಮ ಬಳಿ ಇರುವ ಸಂದೇಶವನ್ನು ಸಮರ್ಥಿಸುತ್ತದೆ. ಇನ್ನು, ಅದನ್ನು ಧಿಕ್ಕರಿಸುವವರಲ್ಲಿ ನೀವೇ ಮೊದಲಿಗರಾಗಬೇಡಿ ಹಾಗೂ ನನ್ನ ವಚನಗಳನ್ನು ಅಗ್ಗದ ಬೆಲೆಗೆ ಮಾರದಿರಿ ಮತ್ತು ನೀವು ನನಗೆ ಮಾತ್ರ ಅಂಜಿರಿ.

42. ನೀವು ಸತ್ಯವನ್ನು ಮಿಥ್ಯದ ಜೊತೆ ಬೆರೆಸಬೇಡಿ ಹಾಗೂ ಸತ್ಯವನ್ನು ತಿಳಿದಿರುತ್ತಾ ಅದನ್ನು ಅಡಗಿಸಿಡಬೇಡಿ.

43. ಮತ್ತು ನೀವು ಸ್ಥಿರವಾಗಿ ನಮಾಝನ್ನು ಪಾಲಿಸಿರಿ ಹಾಗೂ ಝಕಾತನ್ನು ಪಾವತಿಸಿರಿ ಮತ್ತು (ಅಲ್ಲಾಹನೆದುರು) ಬಾಗುವವರ ಜೊತೆ ಸೇರಿ ಬಾಗಿರಿ.

44. ನೀವೇನು ಜನರಿಗೆ ಒಳಿತನ್ನು ಆದೇಶಿಸಿ, ಸ್ವತಃ ನಿಮ್ಮನ್ನೇ ಮರೆತು ಬಿಡುತ್ತೀರಾ? ನೀವಂತೂ ಗ್ರಂಥವನ್ನು ಓದುವವರಾಗಿದ್ದೀರಿ – ಇಷ್ಟಾಗಿಯೂ ನೀವು ಅರ್ಥ ಮಾಡಿಕೊಳ್ಳುವುದಿಲ್ಲವೇ?

 

45. ನೀವು ಸಹನೆ ಮತ್ತು ನಮಾಝ್‌ನಿಂದ ನೆರವು ಪಡೆಯಿರಿ. ಖಂಡಿತವಾಗಿಯೂ ಅದು ಭಯಭಕ್ತಿ ಉಳ್ಳವರ ಹೊರತು ಇತರರ ಪಾಲಿಗೆ ಕಷ್ಟದ ಕೆಲಸವಾಗಿದೆ.

46.(ಏಕೆಂದರೆ) ಅವರು, (ಭಯಭಕ್ತಿಯುಳ್ಳವರು) ತಾವು ತಮ್ಮ ಒಡೆಯನನ್ನು ಭೇಟಿಯಾಗಲಿಕ್ಕಿದೆ ಮತ್ತು ತಾವು ಅವನ ಕಡೆಗೆ ಮರಳಿ ಹೋಗಬೇಕಾದವರು ಎಂದು ನಂಬುವವರಾಗಿದ್ದಾರೆ.

47. ಇಸ್ರಾಈಲರ ಸಂತತಿಗಳೇ, ನಾನು (ಅಲ್ಲಾಹು) ನಿಮಗೆ ನೀಡಿದ್ದ ಅನುಗ್ರಹಗಳನ್ನು ಮತ್ತು ಜಗತ್ತಿನ ಇತರರ ಮೇಲೆ ನಾನು ನಿಮಗೆ ಹಿರಿಮೆ ನೀಡಿದ್ದನ್ನು ನೆನಪಿಸಿಕೊಳ್ಳಿರಿ.

48. ಮತ್ತು ನೀವು – ಯಾರಿಗೂ ಯಾರಿಂದಲೂ ಸ್ವಲ್ಪವೂ ಪ್ರಯೋಜನವಾಗದ, ಯಾರಿಂದಲೂ ಶಿಫಾರಸನ್ನು ಸ್ವೀಕರಿಸಲಾಗದ, ಯಾರಿಂದಲೂ ಯಾವುದೇ ಪರಿಹಾರವನ್ನು ಪಡೆಯಲಾಗದ ಮತ್ತು ಅವರಿಗೆ (ಅಪರಾಧಿಗಳಿಗೆ) ಯಾವುದೇ ಸಹಾಯ ಸಿಗಲಾರದ ಆ ದಿನದ ಕುರಿತು ಎಚ್ಚರವಾಗಿರಿ.

49. ಮತ್ತು ನಾವು ನಿಮ್ಮನ್ನು (ಇಸ್ರಾಈಲರ ಸಂತತಿಗಳನ್ನು) ಫಿರ್‌ಔನನ ಜನರ ಕೈಯಿಂದ ವಿಮೋಚಿಸಿದ ಆ ಸಂದರ್ಭ(ವನ್ನು ನೆನಪಿಸಿಕೊಳ್ಳಿರಿ)- ಅವರಂತೂ ನಿಮ್ಮನ್ನು ಅತ್ಯಂತ ದಾರುಣ ಪೀಡನೆಗೆ ಒಳಪಡಿಸಿದ್ದರು. ಅವರು ನಿಮ್ಮ ಪುತ್ರರನ್ನು ಕಡಿದು ಹಾಕುತ್ತಿದ್ದರು ಮತ್ತು ನಿಮ್ಮ ಮಹಿಳೆಯರನ್ನು ಜೀವಂತವಿಡುತ್ತಿದ್ದರು. – ಅದರಲ್ಲಿ ನಿಮಗೆ ನಿಮ್ಮ ಒಡೆಯನ ಕಡೆಯಿಂದ ಒಂದು ದೊಡ್ಡ ಪರೀಕ್ಷೆಯಿತ್ತು.

50. ನಾವು ನಿಮಗಾಗಿ ಸಮುದ್ರವನ್ನು ಸೀಳಿದೆವು ಹಾಗೂ ನಿಮ್ಮನ್ನು ರಕ್ಷಿಸಿದೆವು ಮತ್ತು ನೀವು ನೋಡುತ್ತಿದ್ದಂತೆಯೇ ನಾವು ಫಿರ್‌ಔನನ ಜನರನ್ನು ಮುಳುಗಿಸಿ ಬಿಟ್ಟೆವು.

51. ಮತ್ತು ನಾವು ಮೂಸಾರ ಜೊತೆ ನಲ್ವತ್ತು ರಾತ್ರಿಗಳ ಕರಾರು ಮಾಡಿಕೊಂಡಿದ್ದಾಗ – ನೀವು ಅವರ ಬೆನ್ನ ಹಿಂದೆ ಒಂದು ಕರುವನ್ನು (ದೇವರಾಗಿ) ನೆಚ್ಚಿಕೊಂಡಿರಿ – ಮತ್ತು (ಆ ಮೂಲಕ) ನೀವು ಅಕ್ರಮಿಗಳಾಗಿ ಬಿಟ್ಟಿರಿ.

52. ಇಷ್ಟಾದ ಬಳಿಕವೂ ನೀವು ಕೃತಜ್ಞರಾಗಬಹುದೆಂದು ನಾವು ನಿಮ್ಮನ್ನು ಕ್ಷಮಿಸಿದೆವು.

53. ಮತ್ತು ನಾವು ಮೂಸಾರಿಗೆ ಗ್ರಂಥವನ್ನು ಹಾಗೂ ‘ಫುರ್ಕಾನ್’ ಅನ್ನು ನೀಡಿದ ಸಂದರ್ಭ (ನೆನಪಿರಲಿ)- ನೀವು ಸರಿದಾರಿಯಲ್ಲಿ ನಡೆಯಬೇಕೆಂದು (ಅದನ್ನು ನೀಡಲಾಗಿತ್ತು).

54. ಮತ್ತು ಮೂಸಾ ತಮ್ಮ ಜನಾಂಗದೊಡನೆ; ‘‘ನನ್ನ ಜನಾಂಗದವರೇ, ನೀವು ಕರುವನ್ನು ಪೂಜಿಸುವ ಮೂಲಕ ಸ್ವತಃ ನಿಮಗೇ ಅನ್ಯಾಯ ಮಾಡಿಕೊಂಡಿರುವಿರಿ. ಇದೀಗ ನೀವು ನಿಮ್ಮ ಸೃಷ್ಟಿಕರ್ತನೆದುರು ಪಶ್ಚಾತ್ತಾಪ ಪಡಿರಿ ಮತ್ತು ನಿಮ್ಮೊಳಗಿನ (ಅಪರಾಧಿಗಳ) ಜೀವಗಳನ್ನು ನೀವೇ ವಧಿಸಿರಿ. ನಿಮ್ಮ ಸೃಷ್ಟಿಕರ್ತನ ದೃಷ್ಟಿಯಲ್ಲಿ ಇದುವೇ ನಿಮ್ಮ ಪಾಲಿಗೆ ಉತ್ತಮವಾಗಿದೆ’’ ಎಂದಿದ್ದರು. ತರುವಾಯ ಅವನು (ಅಲ್ಲಾಹನು) ನಿಮ್ಮ ಪಶ್ಚಾತ್ತಾಪವನ್ನು ಸ್ವೀಕರಿಸಿದನು. ನಿಜಕ್ಕೂ ಅವನು ಪಶ್ಚಾತ್ತಾಪವನ್ನು ಸ್ವೀಕರಿಸುವ ಕರುಣಾಮಯಿಯಾಗಿದ್ದಾನೆ.

55. ಮತ್ತು ನೀವು ‘‘ಓ ಮೂಸಾ, ನಾವು ಅಲ್ಲಾಹನನ್ನು ನೇರವಾಗಿ ನೋಡುವ ತನಕ ನಿಮ್ಮನ್ನು ನಾವು ನಂಬಲಾರೆವು’’ ಎಂದು ಹೇಳಿದ್ದ ಸಂದರ್ಭ(ವನ್ನು ಸ್ಮರಿಸಿರಿ). ತರುವಾಯ ನೀವು ನೋಡುತ್ತಿದ್ದಂತೆಯೇ ಒಂದು ಭೀಕರ ಸಿಡಿಲು ನಿಮ್ಮನ್ನು ಆವರಿಸಿಕೊಂಡಿತು.

56. ಮುಂದೆ, ನಿಮ್ಮ ಮರಣಾನಂತರ ನಿಮ್ಮನ್ನು ನಾವು ಜೀವಂತಗೊಳಿಸಿದೆವು – ನೀವು ಕೃತಜ್ಞರಾಗಬೇಕೆಂದು.

57. ಮತ್ತು ನಾವು ನಿಮಗೆ ಮೋಡದ ನೆರಳನ್ನು ಒದಗಿಸಿದೆವು ಹಾಗೂ ನಾವು ಒದಗಿಸಿದ ಶುದ್ಧ ಆಹಾರದಿಂದ ಉಣ್ಣಿರೆಂದು ‘ಮನ್ನ್’ ಮತ್ತು ‘ಸಲ್ವಾ’ಗಳನ್ನು ನಿಮಗೆ ಇಳಿಸಿಕೊಟ್ಟೆವು. ಅವರು (ನಿಮ್ಮ ಪೂರ್ವಜರು) ನಮ್ಮ ಮೇಲೇನೂ ಅಕ್ರಮವೆಸಗಲಿಲ್ಲ. ನಿಜವಾಗಿ ಅವರು ಸ್ವತಃ ತಮ್ಮ ಮೇಲೆಯೇ ಅಕ್ರಮವೆಸಗಿಕೊಂಡರು.

58. ಮತ್ತು ನಾವು ಹೇಳಿದೆವು; ‘‘ಈ ನಾಡನ್ನು (ಜೆರುಸಲೇಮನ್ನು) ಪ್ರವೇಶಿಸಿರಿ ಹಾಗೂ ನಿಮ್ಮಿಚ್ಛೆಯಂತೆ, ಅದರ ಯಾವುದೇ ಭಾಗದಿಂದ ಧಾರಾಳ ಉಣ್ಣಿರಿ ಹಾಗೂ ವಿನಯಪೂರ್ವಕ ಬಾಗಿಕೊಂಡು ಅದರ ದ್ವಾರದೊಳಗೆ ಪ್ರವೇಶಿಸಿರಿ ಮತ್ತು ‘ಹಿತ್ತಃ’ (ನಮ್ಮನ್ನು ಕ್ಷಮಿಸು) ಎಂದು ಹೇಳುತ್ತಲಿರಿ – ನಾವು ನಿಮ್ಮ ಪಾಪಗಳನ್ನು ಕ್ಷಮಿಸಿಬಿಡುವೆವು ಮತ್ತು ನಾವು ಸತ್ಕರ್ಮಿಗಳಿಗೆ ಮತ್ತಷ್ಟು ನೀಡುವೆವು’’.

59. ಆದರೆ ಅಕ್ರಮಿಗಳು, ತಮಗೆ ಹೇಳಲಾಗಿದ್ದ ಮಾತನ್ನು ಬೇರೆಯೇ ಮಾತಾಗಿ ಬದಲಿಸಿಕೊಂಡರು. ಕೊನೆಗೆ ನಾವು ಅಕ್ರಮಿಗಳ ಅವಿಧೇಯತೆಯ ಫಲವಾಗಿ ಅವರ ಮೇಲೆ ಆಕಾಶದಿಂದ ಒಂದು ಶಿಕ್ಷೆಯನ್ನು ಇಳಿಸಿದೆವು.

60. ಮತ್ತು ಮೂಸಾ ತಮ್ಮ ಜನಾಂಗಕ್ಕಾಗಿ ನೀರನ್ನು ಬೇಡಿದಾಗ ನಾವು, ‘‘ನಿಮ್ಮ ಊರುಗೋಲಿನಿಂದ ಆ ಬಂಡೆಗೆ ಹೊಡೆಯಿರಿ’’ ಎಂದೆವು. ಅದರಿಂದ ಹನ್ನೆರಡು ಚಿಲುಮೆಗಳು ಹೊರಟವು. ಎಲ್ಲ ಜನರು (ಎಲ್ಲ ಗೋತ್ರದವರು) ತಾವು ನೀರು ಪಡೆಯಬೇಕಾದ ಸ್ಥಳವನ್ನು ಗುರುತಿಸಿಕೊಂಡರು – ‘‘ಅಲ್ಲಾಹನು ಏನನ್ನು ಅನುಗ್ರಹಿಸಿರುವನೋ ಅದರಿಂದ ಉಣ್ಣಿರಿ ಹಾಗೂ ಕುಡಿಯಿರಿ ಮತ್ತು ಭೂಮಿಯಲ್ಲಿ ಅಶಾಂತಿ ಹರಡುವವರಾಗಿ ತಿರುಗಬೇಡಿ’’ (ಎಂದು ಆಗ ನಿಮಗೆ ಆದೇಶಿಸಲಾಗಿತ್ತು).

61. ಮತ್ತು (ಸ್ಮರಿಸಿರಿ), ‘‘ಓ ಮೂಸಾ, ಒಂದೇ ಆಹಾರದಲ್ಲಿ ತೃಪ್ತಿಪಟ್ಟುಕೊಳ್ಳಲು ನಮ್ಮಿಂದಾಗದು. ನೀವಿನ್ನು ನಮಗಾಗಿ, ಭೂಮಿಯಲ್ಲಿ ಬೆಳೆಯುವ ಹಸಿರು ತರಕಾರಿ, ಸೌತೆ, ಗೋಧಿ, ತೊಗರಿ, ಈರುಳ್ಳಿ (ಇತ್ಯಾದಿ)ಗಳನ್ನು ಒದಗಿಸಬೇಕೆಂದು ನಿಮ್ಮ ದೇವರನ್ನು ಪ್ರಾರ್ಥಿಸಿರಿ’’- ಎಂದು ನೀವು ಹೇಳಿದ್ದಿರಿ. ಆಗ ಅವರು (ಮೂಸಾ) ‘‘ನೀವೇನು ಶ್ರೇಷ್ಠವಾದ ವಸ್ತುಗಳ ಬದಲಿಗೆ ಕೆಳಸ್ತರದ ವಸ್ತುಗಳನ್ನು ಅಪೇಕ್ಷಿಸುವಿರಾ? ಹಾಗಾದರೆ, ನೀವು (ಯಾವುದಾದರೂ ಬೇರೆ) ನಗರಕ್ಕೆ ಹೊರಟು ಹೋಗಿರಿ, ನೀವು ಬೇಡಿದ್ದು ಅಲ್ಲಿ ನಿಮಗೆ ಸಿಗುವುದು’’ಎಂದಿದ್ದರು. ಕೊನೆಗೆ ಅಪಮಾನ ಹಾಗೂ ದಾರಿದ್ರಗಳು ಅವರನ್ನು (ಇಸ್ರಾಈಲರ ಸಂತತಿಗಳನ್ನು) ಆವರಿಸಿಕೊಂಡವು ಮತ್ತು ಅವರು ಅಲ್ಲಾಹನ ಕ್ರೋಧಕ್ಕೆ ಪಾತ್ರರಾಗಿ ಬಿಟ್ಟರು. ಅದು, ಅವರು ಅಲ್ಲಾಹನ ಪುರಾವೆಗಳನ್ನು ಧಿಕ್ಕರಿಸಿದ ಮತ್ತು ಅನ್ಯಾಯವಾಗಿ ಪ್ರವಾದಿಗಳನ್ನು ಕೊಂದುಬಿಟ್ಟ (ಕೃತ್ಯದ) ಫಲವಾಗಿತ್ತು. ಹಾಗೆಯೇ ಅದು, ಅವರ ಅವಿಧೇಯತೆಯ ಹಾಗೂ ಎಲ್ಲೆ ಮೀರಿದ ನಡವಳಿಕೆಯ ಪರಿಣಾಮವಾಗಿತ್ತು.

62. (ಗತಕಾಲದ) ವಿಶ್ವಾಸಿಗಳು, ಯಹೂದಿಗಳು, ಕ್ರೈಸ್ತರು ಮತ್ತು ಸಬಯನರ ಪೈಕಿ ಅಲ್ಲಾಹನಲ್ಲಿ ಮತ್ತು ಅಂತಿಮ ದಿನ (ಪರಲೋಕ)ದಲ್ಲಿ ನಂಬಿಕೆಯಿಟ್ಟ ಹಾಗೂ ಸತ್ಕರ್ಮ ಮಾಡಿದ ಜನರಿಗಾಗಿ, ಅವರ ಒಡೆಯನ ಬಳಿ ಅವರ ಪ್ರತಿಫಲ ಇದ್ದೇ ಇದೆ ಮತ್ತು ಅವರಿಗೆ ಯಾವುದೇ ಭಯವೂ ಇರದು, ದುಃಖವೂ ಇರದು.

63. ಮತ್ತು ನಾವು ತೂರ್ ಪರ್ವತವನ್ನು ನಿಮ್ಮ (ಇಸ್ರಾಈಲರ ಸಂತತಿಗಳ) ಮೇಲೆ ಎತ್ತರಿಸಿ, ನಿಮ್ಮಿಂದ ಕರಾರು ಪಡೆದ ಸಂದರ್ಭದಲ್ಲಿ -‘‘ನಾವು ನಿಮಗೆ ಕೊಡುತ್ತಿರುವುದನ್ನು (ಮಾರ್ಗದರ್ಶಕ ಗ್ರಂಥವನ್ನು) ನೀವು ಭದ್ರವಾಗಿ ಹಿಡಿದುಕೊಳ್ಳಿರಿ ಮತ್ತು ಇದರಲ್ಲಿರುವ ವಿಷಯಗಳನ್ನು ನೆನಪಿಟ್ಟುಕೊಳ್ಳಿರಿ, ನೀವು ಧರ್ಮನಿಷ್ಠರಾಗಬಹುದು’’ (ಎಂದು ನಾವು ಹೇಳಿದ್ದೆವು).

 

64. ಆ ಬಳಿಕ ನೀವು, ವಿಮುಖರಾಗಿ ಬಿಟ್ಟಿರಿ. ಒಂದು ವೇಳೆ ನಿಮ್ಮ ಮೇಲೆ ಅಲ್ಲಾಹನ ಅನುಗ್ರಹ ಮತ್ತು ಕರುಣೆ ಇಲ್ಲದೆ ಇದ್ದಿದ್ದರೆ, (ಅಂದೇ) ನೀವು ಸೋತವರ ಸಾಲಿಗೆ ಸೇರಿ ಬಿಡುತ್ತಿದ್ದಿರಿ.

65. ನಿಮ್ಮ ಪೈಕಿ ‘ಸಬ್ತ್’ (ಶನಿವಾರದ) ನಿಯಮವನ್ನು ಉಲ್ಲಂಘಿಸಿದವರ ಕುರಿತು ನಿಮಗೆ ತಿಳಿದೇ ಇದೆ. ನಾವು ಅವರೊಡನೆ ‘‘ನೀವು ನಿಂದಿತ ಕೋತಿಗಳಾಗಿ ಬಿಡಿರಿ’’ ಎಂದೆವು.

66. ಕೊನೆಗೆ ನಾವು ಆ ಘಟನೆಯನ್ನು ಅವರ ಪಾಲಿಗೂ ಅವರ ಮುಂದಿನ ಪೀಳಿಗೆಗಳ ಪಾಲಿಗೂ ಒಂದು ಪಾಠವಾಗಿಸಿದೆವು ಮತ್ತು ಭಕ್ತಿಭಾವವಿರುವವರ ಪಾಲಿಗೆ ಅದನ್ನು ಒಂದು ಉಪದೇಶವಾಗಿಸಿದೆವು.

67. ಮತ್ತು ಮೂಸಾ, ತಮ್ಮ ಜನಾಂಗದವರೊಡನೆ ‘‘ಒಂದು ದನವನ್ನು ಬಲಿಕೊಡಲು ಅಲ್ಲಾಹನು ನಿಮಗೆ ಆದೇಶಿಸಿದ್ದಾನೆ’’ ಎಂದಾಗ ಅವರು ‘‘ನೀವೇನು ನಮ್ಮೊಂದಿಗೆ ತಮಾಶೆ ಮಾಡುತ್ತಿರುವಿರಾ?’’ ಎಂದರು. (ಮೂಸಾ) ಹೇಳಿದರು: ‘’ನಾನು ಅಜ್ಞಾನಿಗಳ ಸಾಲಿಗೆ ಸೇರುವುದರ ವಿರುದ್ಧ ಅಲ್ಲಾಹನ ರಕ್ಷಣೆ ಕೋರುತ್ತೇನೆ’’.

68. ಅವರು ‘‘ನಮಗಾಗಿ ನಿಮ್ಮ ದೇವರನ್ನು ಪ್ರಾರ್ಥಿಸಿ, ಆ ದನ ಎಂತಹದ್ದಾಗಿರಬೇಕು ಎಂಬುದನ್ನು ನಮಗೆ ವಿವರಿಸಲು ಹೇಳಿರಿ’’ ಎಂದರು. ಮೂಸಾ ಹೇಳಿದರು; ‘‘ಆ ದನ ಹೆಚ್ಚು ವಯಸ್ಸಾದುದಾಗಲಿ, ತೀರಾ ಎಳೆಯದಾಗಲಿ ಆಗಿರಬಾರದು – ಅದರ ನಡುವಿನ, ಮಧ್ಯಮ ವಯಸ್ಸಿನದ್ದಾಗಿರಬೇಕೆಂದು ದೇವರು ಹೇಳುತ್ತಿದ್ದಾನೆ. ಇನ್ನಾದರೂ ನೀವು ನಿಮಗೆ ಆದೇಶಿಸಿದ್ದನ್ನು ಮಾಡಿಬಿಡಿ’’.

69. ಅವರು (ಮತ್ತೆ) ‘‘ನಮಗಾಗಿ ನಿಮ್ಮ ದೇವರನ್ನು ಪ್ರಾರ್ಥಿಸಿ, ಅದರ ಬಣ್ಣ ಹೇಗಿರಬೇಕೆಂದು ವಿವರಿಸಲು ಹೇಳಿರಿ’’ ಎಂದರು. ಅವರು (ಮೂಸಾ) ಹೇಳಿದರು: ‘‘ಅದು ಹಳದಿ ಬಣ್ಣದ, ಉಜ್ವಲ ರಂಗುಳ್ಳ, ಕಂಡವರಿಗೆ ಸಂತೋಷ ನೀಡುವಂತಹ ದನವಾಗಿರಬೇಕು ಎಂದವನು ಹೇಳುತ್ತಿದ್ದಾನೆ’’.

70. ಅವರು (ಇಷ್ಟಕ್ಕೂ ತೃಪ್ತರಾಗದೆ) ‘‘ನಮಗಾಗಿ ನಿಮ್ಮ ದೇವರನ್ನು ಪ್ರಾರ್ಥಿಸಿ ಅದು ಹೇಗಿರಬೇಕೆಂದು (ಇನ್ನಷ್ಟು)ವಿವರಿಸಲು ಹೇಳಿರಿ. ಖಂಡಿತವಾಗಿಯೂ ನಮಗೆ ಆ ದನದ ವಿಷಯದಲ್ಲಿ ಗೊಂದಲವಾಗಿದೆ ಮತ್ತು ಅಲ್ಲಾಹನು ಇಚ್ಛಿಸಿದರೆ (ಈ ಕುರಿತು) ನಮಗೆ ಮಾರ್ಗದರ್ಶನ ಸಿಗಬಹುದು’’ ಎಂದರು.

71. ಮೂಸಾ ಹೇಳಿದರು: ‘‘ಅದು ಕೆಲಸಕ್ಕೆ ಹಚ್ಚಲಾದ ದನವಾಗಿರಬಾರದು ಹಾಗೂ ನೆಲವನ್ನು ಉಳುವುದಕ್ಕಾಗಿ ಮತ್ತು ಹೊಲಕ್ಕೆ ನೀರೆತ್ತುವುದಕ್ಕಾಗಿ ಬಳಸಿದ್ದೂ ಆಗಿರಬಾರದು. ಸಂಪೂರ್ಣ ಸುಸ್ಥಿತಿಯಲ್ಲಿರುವ, ಕಲೆಯಿಲ್ಲದ ದನವಾಗಿರಬೇಕು ಎಂದವನು ಹೇಳುತ್ತಿದ್ದಾನೆ’’. ಆಗ ಅವರು, ‘‘ಈಗ ನೀವು ಸತ್ಯವನ್ನು ತಂದಿರುವಿರಿ’’ ಎಂದರು. ಕೊನೆಗೂ ಅವರು ಅದನ್ನು ಬಲಿಕೊಟ್ಟರು. ನಿಜವಾಗಿ ಅವರಿಗೆ ಅದನ್ನು ಮಾಡಲು ಮನಸ್ಸಿರಲಿಲ್ಲ.

72. ಮತ್ತು ನೀವು (ಇಸ್ರಾಈಲರ ಸಂತತಿಗಳು) ಒಬ್ಬ ವ್ಯಕ್ತಿಯನ್ನು ಕೊಂದು, ಆ ಬಳಿಕ ಆ ಕುರಿತು ಪರಸ್ಪರ ದೂಷಣೆಯಲ್ಲಿ ನಿರತರಾಗಿದ್ದಿರಿ. ಆಗ ಅಲ್ಲಾಹನು ನೀವು ಬಚ್ಚಿಟ್ಟಿದ್ದನ್ನು ಹೊರ ಹಾಕಲು ತೀರ್ಮಾನಿಸಿದ್ದನು.

73. ಕೊನೆಗೆ ನಾವು ಹೇಳಿದೆವು; ‘‘ಅದಕ್ಕೆ (ಶವಕ್ಕೆ) ಅದರಿಂದ (ದನದ ಮಾಂಸದಿಂದ) ತಟ್ಟಿರಿ, ಇದೇ ರೀತಿ ಅಲ್ಲಾಹನು ಸತ್ತವರನ್ನು ಜೀವಂತಗೊಳಿಸುತ್ತಾನೆ ಮತ್ತು ನೀವು ಅರ್ಥಮಾಡಿಕೊಳ್ಳಬೇಕೆಂದು ಅವನು ನಿಮಗೆ ತನ್ನ ದೃಷ್ಟಾಂತಗಳನ್ನು ತೋರಿಸಿ ಕೊಡುತ್ತಾನೆ’’.

74. ಆ ಬಳಿಕ ನಿಮ್ಮ ಹೃದಯಗಳು ಕಠೋರವಾಗಿ ಬಿಟ್ಟವು – ಕಲ್ಲುಗಳಂತೆ ಅಥವಾ ಅವುಗಳಿಗಿಂತಲೂ ಹೆಚ್ಚು ಕಠೋರ. ನಿಜವಾಗಿ, ಕೆಲವು ಕಲ್ಲುಗಳೊಳಗಿಂದ ಚಿಲುಮೆಗಳು ಹೊಮ್ಮುತ್ತವೆ ಹಾಗೂ ಕೆಲವು ಕಲ್ಲುಗಳು ಸಿಡಿದು ಅವುಗಳಿಂದ ನೀರಿನ ಧಾರೆ ಹರಿಯುತ್ತದೆ ಮತ್ತು ಕೆಲವು ಕಲ್ಲುಗಳು ಅಲ್ಲಾಹನ ಭಯದಿಂದ ಉರುಳಿ ಬೀಳುವುದೂ ಇದೆ. ನೀವು ಮಾಡುತ್ತಿರುವ ಕೆಲಸಗಳ ಬಗ್ಗೆ ಅಲ್ಲಾಹನು ಅಜ್ಞನಾಗಿಲ್ಲ.

75. (ವಿಶ್ವಾಸಿಗಳೇ,) ನೀವೇನು, ಅವರು ನಿಮ್ಮಲ್ಲಿ ನಂಬಿಕೆಯಿಡುವರೆಂದು ನಿರೀಕ್ಷಿಸುತ್ತಿರುವಿರಾ? ಅವರಲ್ಲಿನ ಒಂದು ಪಂಗಡವಂತು, ಅಲ್ಲಾಹನ ಸಂದೇಶವನ್ನು ಕೇಳಿದ ಬಳಿಕ ಮತ್ತು ಅದನ್ನು ಅರ್ಥ ಮಾಡಿಕೊಂಡ ಬಳಿಕ ತಿಳಿದೂ ತಿಳಿದೂ ಅದನ್ನು ತಿರುಚಿ ಬಿಡುತ್ತದೆ.

76. ಅವರು ವಿಶ್ವಾಸಿಗಳನ್ನು ಭೇಟಿಯಾದಾಗ ‘‘ನಾವು ನಂಬಿದೆವು’’ ಎನ್ನುತ್ತಾರೆ. ಆ ಬಳಿಕ ಗುಟ್ಟಾಗಿ ಪರಸ್ಪರ ಸಂಧಿಸಿದಾಗ ‘‘ಅಲ್ಲಾಹನು ನಿಮಗೆ ತಿಳಿಸಿದ್ದನ್ನು ನೀವು ಅವರಿಗೆ ತಿಳಿಸಿ, ಅವರು ಅದನ್ನೇ ನಿಮ್ಮ ದೇವರ ಬಳಿ ನಿಮ್ಮ ವಿರುದ್ಧ ಪುರಾವೆಯಾಗಿ ಬಳಸುವಂತೆ ಮಾಡುತ್ತೀರಾ? ನಿಮಗೆ ಅಷ್ಟೂ ಅರ್ಥವಾಗುವುದಿಲ್ಲವೇ?’’ ಎನ್ನುತ್ತಾರೆ.

77. ಅವರು ಗುಟ್ಟಾಗಿಡುವ ಮತ್ತು ಬಹಿರಂಗಗೊಳಿಸುವ ಎಲ್ಲ ವಿಚಾರಗಳೂ ಅಲ್ಲಾಹನಿಗೆ ತಿಳಿದಿವೆ ಎಂಬುದು ಅವರಿಗೆ ತಿಳಿಯದೇ?

78. ಅವರಲ್ಲಿ ಕೆಲವರು ‘ಉಮ್ಮಿ’ (ನಿರಕ್ಷರಿ)ಗಳಿದ್ದಾರೆ. ಅವರಿಗೆ ಗ್ರಂಥದ ಜ್ಞಾನವಿಲ್ಲ. ಅವರ ಬಳಿ ಕೇವಲ ಆಶೆಗಳ ಹೊರತು ಬೇರೇನೂ ಇಲ್ಲ ಮತ್ತು ಅವರು ಕೇವಲ ಊಹಾಪೋಹಗಳನ್ನಷ್ಟೇ ಅವಲಂಬಿಸಿಕೊಂಡಿದ್ದಾರೆ.

79. ತಮ್ಮದೇ ಕೈಗಳಿಂದ ಗ್ರಂಥವನ್ನು ಬರೆದು, ಆ ಬಳಿಕ ಅದನ್ನು ಅಗ್ಗದ ಬೆಲೆಗೆ ಮಾರುವುದಕ್ಕಾಗಿ ‘‘ಇದು ಅಲ್ಲಾಹನ ಕಡೆಯಿಂದ ಬಂದಿದೆ’’ ಎನ್ನುವ ಜನರಿಗೆ ವಿನಾಶ ಕಾದಿದೆ. ತಮ್ಮ ಕೈಗಳಿಂದ ಅವರು ಏನನ್ನು ಬರೆದರೋ ಅದಕ್ಕಾಗಿಯೂ ಅವರಿಗೆ ವಿನಾಶವಿದೆ ಮತ್ತು ಆ ಮೂಲಕ ಅವರು ಏನನ್ನು ಸಂಪಾದಿಸಿರುವರೋ ಅದಕ್ಕಾಗಿಯೂ ಅವರಿಗೆ ವಿನಾಶ ಕಾದಿದೆ.

80. ಅವರು ‘‘(ನರಕದ) ಬೆಂಕಿಯು ನಮ್ಮನ್ನು ಮುಟ್ಟಲಾರದು. (ಹೆಚ್ಚೆಂದರೆ) ಕೆಲವು ನಿರ್ದಿಷ್ಟ ದಿನಗಳ ಹೊರತು’’ ಎನ್ನುತ್ತಾರೆ. ಹೇಳಿರಿ; ನೀವೇನು, ಅಲ್ಲಾಹನಿಗೆ ಮುರಿಯಲಾಗದ ವಾಗ್ದಾನವನ್ನೇನಾದರೂ ಅಲ್ಲಾಹನಿಂದ ಪಡೆದುಕೊಂಡಿರುವಿರಾ? ನೀವೇನು, ನಿಮಗೆ ತಿಳಿದಿಲ್ಲದ್ದನ್ನು, ಅಲ್ಲಾಹನ ಮೇಲೆ ಆರೋಪಿಸುತ್ತಿರುವಿರಾ?’’

81. ನಿಜವಾಗಿ, ಪಾಪಗಳನ್ನು ಸಂಪಾದಿಸಿದವನು ಮತ್ತು ತನ್ನ ಪಾಪಗಳ ಸುಳಿಯೊಳಗೆ ಸಿಕ್ಕಿಕೊಂಡಿರುವವನು – ಅವರೇ ನರಕಾಗ್ನಿಯವರು. ಅವರು ಅದರಲ್ಲಿ ಸದಾಕಾಲ ಇರುವರು.

82. ಇನ್ನು, ಸತ್ಯದಲ್ಲಿ ನಂಬಿಕೆಯಿಟ್ಟವರು ಮತ್ತು ಸತ್ಕರ್ಮ ಮಾಡಿದವರು – ಅವರೇ ಸ್ವರ್ಗದವರು. ಅದರಲ್ಲಿ ಅವರು ಸದಾಕಾಲ ಇರುವರು.

83. ಮತ್ತು ನಾವು ಇಸ್ರಾಈಲರ ಸಂತತಿಗಳಿಂದ ‘‘ನೀವು ಅಲ್ಲಾಹನ ಹೊರತು ಬೇರಾರನ್ನೂ ಆರಾಧಿಸಬಾರದು. ತಂದೆ-ತಾಯಿಯ ಜೊತೆ ವಿಶೇಷ ಸೌಜನ್ಯ ತೋರಬೇಕು ಮತ್ತು ಬಂಧುಗಳು, ಅನಾಥರು ಹಾಗೂ ದೀನರ ಜೊತೆಗೂ (ಸೌಜನ್ಯ ತೋರಬೇಕು) ಮತ್ತು ಜನರೊಡನೆ ಸೌಜನ್ಯದ ಮಾತನ್ನಾಡಬೇಕು, ನಮಾಝನ್ನು ಪಾಲಿಸಬೇಕು ಹಾಗೂ ಝಕಾತನ್ನು ಪಾವತಿಸಬೇಕು’’ ಎಂದು ಕರಾರನ್ನು ಪಡೆದಿದ್ದೆವು. ಆದರೆ ಆ ಬಳಿಕ ನಿಮ್ಮಲ್ಲಿನ ಕೆಲವೇ ಜನರ ಹೊರತು, ನೀವೆಲ್ಲರೂ ಆ ಕರಾರಿನಿಂದ ಹಿಂದೆ ಸರಿದು ಬಿಟ್ಟಿರಿ ಮತ್ತು ನೀವು ಅದನ್ನು ಕಡೆಗಣಿಸಿದಿರಿ.

84. (ಇಸ್ರಾಈಲರ ಸಂತತಿಗಳೇ) ‘‘ಪರಸ್ಪರ ರಕ್ತ ಹರಿಸಬೇಡಿ ಮತ್ತು ನಿಮ್ಮವರನ್ನೇ ನಿಮ್ಮ ನಾಡುಗಳಿಂದ ಹೊರಗೋಡಿಸಬೇಡಿ’’ ಎಂದು ನಾವು ನಿಮ್ಮಿಂದ ಕರಾರನ್ನು ಪಡೆದುಕೊಂಡಿದ್ದೆವು. ನೀವು ಅದನ್ನು ಒಪ್ಪಿಕೊಂಡಿದ್ದಿರಿ ಮತ್ತು ನೀವೇ ಅದಕ್ಕೆ ಸಾಕ್ಷಿಗಳು.

85. ಇಷ್ಟಾಗಿಯೂ, ಸ್ವತಃ ನೀವೇ ನಿಮ್ಮವರ ಕೊಲೆ ಮಾಡುತ್ತೀರಿ ಮತ್ತು ನಿಮ್ಮಾಳಗಿನ ಒಂದು ಪಂಗಡವನ್ನು ಅವರ ನಾಡುಗಳಿಂದ ಹೊರದಬ್ಬುತ್ತೀರಿ ಮತ್ತು ಅವರ ವಿರುದ್ಧ ಪಾಪಕೃತ್ಯ ಹಾಗೂ ಅಕ್ರಮವೆಸಗುವುದರಲ್ಲಿ ನೀವು (ಶತ್ರುಗಳಿಗೆ) ನೆರವಾಗುತ್ತೀರಿ ಮತ್ತು ಅವರು ನಿಮ್ಮವರ ಬಳಿಗೆ ಯುದ್ಧ ಕೈದಿಗಳಾಗಿ ಬಂದಾಗ, ನೀವು ಪರಿಹಾರ ಧನ ಕೊಟ್ಟು ಅವರನ್ನು ಬಿಡಿಸಿಕೊಳ್ಳುತ್ತೀರಿ. ಮೂಲತಃ ಅವರನ್ನು (ನಾಡಿನಿಂದ) ಹೊರಹಾಕುವುದೇ ನಿಮ್ಮ ಪಾಲಿಗೆ ನಿಷಿದ್ಧವಾಗಿತ್ತು. ನೀವೇನು, ಗ್ರಂಥದ ಕೆಲವು ಭಾಗಗಳಲ್ಲಿ ನಂಬಿಕೆಯಿಟ್ಟು ಮತ್ತೆ ಕೆಲವು ಭಾಗಗಳನ್ನು ಧಿಕ್ಕರಿಸುವಿರಾ? ನಿಮ್ಮ ಪೈಕಿ ಹಾಗೆ ಮಾಡುವವರಿಗೆ ಇರುವ ಪ್ರತಿಫಲವೇನೆಂದರೆ – ಇಹ ಜೀವನದಲ್ಲಿ ಅವರು ನಷ್ಟಕ್ಕೊಳಗಾಗುವರು ಮತ್ತು ಪುನರುತ್ಥಾನದ ದಿನ ಅವರನ್ನು ತೀವ್ರ ತರದ ಶಿಕ್ಷೆಯೆಡೆಗೆ ಮರಳಿಸಲಾಗುವುದು. ನೀವು ಎಸಗುತ್ತಿರುವ ಕರ್ಮಗಳ ಬಗ್ಗೆ ಅಲ್ಲಾಹನು ಅಜ್ಞನಾಗಿಲ್ಲ.

86. ಅವರು ಪರಲೋಕದ ಬದಲಿಗೆ ಈ ಲೌಕಿಕ ಬದುಕನ್ನು ಖರೀದಿಸಿ ಕೊಂಡವರಾಗಿದ್ದಾರೆ. ಅವರ ಶಿಕ್ಷೆಯನ್ನು ಕಿಂಚಿತ್ತೂ ಕಡಿಮೆಗೊಳಿಸಲಾಗದು ಮತ್ತು ಅವರಿಗೆ ಎಲ್ಲಿಂದಲೂ ಸಹಾಯ ಸಿಗದು.

87. ನಾವು (ಅಲ್ಲಾಹ್) ಮೂಸಾರಿಗೆ ಗ್ರಂಥವನ್ನು ನೀಡಿದ್ದೆವು ಮತ್ತು ಆ ಬಳಿಕವೂ ಬೆನ್ನು ಬೆನ್ನಿಗೆ ದೂತರನ್ನು ಕಳಿಸುತ್ತಲೇ ಇದ್ದೆವು. ಮತ್ತು ನಾವು ಮರ್ಯಮರ ಪುತ್ರ ಈಸಾರಿಗೆ ಸ್ಪಷ್ಟ ಪುರಾವೆಗಳನ್ನು ನೀಡಿದೆವು ಹಾಗೂ ಪವಿತ್ರ ಆತ್ಮದ ಮೂಲಕ ಅವರಿಗೆ ಶಕ್ತಿಯನ್ನೊದಗಿಸಿದೆವು. ಆದರೆ ನೀವೇನು, ದೂತರು ನಿಮ್ಮ ಚಿತ್ತಕ್ಕೆ ಇಷ್ಟವಿಲ್ಲದ್ದನ್ನು ತಂದಾಗಲೆಲ್ಲಾ ಅಹಂಕಾರ ತೋರುವಿರಾ? ಅವರಲ್ಲಿ ಕೆಲವರನ್ನು ನೀವು ಧಿಕ್ಕರಿಸಿದಿರಿ ಮತ್ತು ಕೆಲವರನ್ನು ಕೊಂದು ಬಿಟ್ಟಿರಿ.

88.‘‘ನಮ್ಮ ಹೃದಯಗಳು ಸುರಕ್ಷಿತವಾಗಿವೆ’’ ಎಂದವರು ಹೇಳುತ್ತಾರೆ. ನಿಜವಾಗಿ ಅವರ ಧಿಕ್ಕಾರದ ಕಾರಣ ಅವರನ್ನು ಅಲ್ಲಾಹನು ಶಪಿಸಿದ್ದಾನೆ. ಅವರು ನಂಬುವುದು ಬಹಳ ಕಡಿಮೆ.

89. ಈ ಹಿಂದೆ, ಧಿಕ್ಕಾರಿಗಳ ವಿರುದ್ಧ ತಮಗೆ ವಿಜಯ ನೀಡಬೇಕೆಂದು ಪ್ರಾರ್ಥಿಸುತ್ತಿದ್ದ ಅದೇ ಮಂದಿ – ಇದೀಗ, ಅಲ್ಲಾಹನ ಕಡೆಯಿಂದ, ಈಗಾಗಲೇ ತಮ್ಮ ಬಳಿ ಇರುವ ಗ್ರಂಥಗಳನ್ನು ಸಮರ್ಥಿಸುವ ಗ್ರಂಥವು ತಮ್ಮ ಬಳಿಗೆ ಬಂದಿರುವಾಗ ಮತ್ತು ತಮಗೆ ಪರಿಚಯವಿರುವ ಸತ್ಯ ಗ್ರಂಥವು ತಮ್ಮ ಬಳಿಗೆ ಬಂದಿರುವಾಗ, ಅದನ್ನು ಧಿಕ್ಕರಿಸುತ್ತಿದ್ದಾರೆ. ಧಿಕ್ಕಾರಿಗಳ ಮೇಲೆ ಅಲ್ಲಾಹನ ಶಾಪವಿದೆ.

90. ಎಷ್ಟೊಂದು ಕೆಟ್ಟ ವಸ್ತುವಿಗಾಗಿ ಅವರು ತಮ್ಮನ್ನು ಮಾರಿಕೊಂಡಿದ್ದಾರೆ! ಅಲ್ಲಾಹನು ತನ್ನ ಅನುಗ್ರಹದಿಂದ (ತನ್ನ ಸಂದೇಶವನ್ನು) ತನ್ನ ದಾಸರ ಪೈಕಿ ತನಗಿಷ್ಟವಿದ್ದವರಿಗೆ ಇಳಿಸಿಕೊಟ್ಟನೆಂಬ ಹಗೆತನದಿಂದ ಅವರು, ಅಲ್ಲಾಹನು ಇಳಿಸಿದ್ದನ್ನು (ಕುರ್‌ಆನನ್ನು) ಧಿಕ್ಕರಿಸಿದ್ದಾರೆ. ಈ ರೀತಿ ಅವರು ಬೆನ್ನು ಬೆನ್ನಿಗೆ (ಅಲ್ಲಾಹನ) ಕೋಪಕ್ಕೆ ಪಾತ್ರರಾಗಿ ಬಿಟ್ಟಿದ್ದಾರೆ. ಧಿಕ್ಕಾರಿಗಳಿಗೆ ಒಂದು ಅಪಮಾನಕಾರಿ ಶಿಕ್ಷೆ ಸಿಗಲಿದೆ.

91. ‘‘ಅಲ್ಲಾಹನು ಇಳಿಸಿ ಕೊಟ್ಟಿರುವ ಸಂದೇಶವನ್ನು ನಂಬಿರಿ’’ ಎಂದು ಅವರೊಡನೆ ಹೇಳಿದಾಗ ಅವರು, ‘‘ಅಲ್ಲಾಹನು ನಮಗೆ ಇಳಿಸಿಕೊಟ್ಟಿರುವುದನ್ನು ನಾವು ನಂಬಿದ್ದೇವೆ’’ ಎನ್ನುತ್ತಾರೆ ಮತ್ತು ಅದರಾಚೆಗಿರುವ ಎಲ್ಲವನ್ನೂ ಅವರು ಧಿಕ್ಕರಿಸುತ್ತಾರೆ – ನಿಜವಾಗಿ ಇದು ಅವರ ಬಳಿ ಇರುವುದನ್ನು ಸಮರ್ಥಿಸುವ ಸತ್ಯವೇ ಆಗಿದೆ. ‘‘ನೀವು ನಿಜಕ್ಕೂ ಸತ್ಯವನ್ನು ನಂಬುವವರಾಗಿದ್ದರೆ, ಈ ಹಿಂದೆ ನೀವು ಅಲ್ಲಾಹನ ದೂತರುಗಳನ್ನು ಕೊಂದದ್ದೇಕೆ?’’ ಎಂದು (ಅವರೊಡನೆ) ಕೇಳಿರಿ.

 

92. ಖಂಡಿತವಾಗಿಯೂ, ಮೂಸಾ ನಿಮ್ಮ ಬಳಿಗೆ ಬಹಳ ಸ್ಪಷ್ಟ ಪುರಾವೆಗಳೊಂದಿಗೆ ಬಂದಿದ್ದರು. ಆದರೆ ಆ ಬಳಿಕ (ಪೂಜೆಗಾಗಿ) ನೀವು ಕರುವನ್ನು ನೆಚ್ಚಿಕೊಂಡಿರಿ ಮತ್ತು (ಆ ಮೂಲಕ) ನೀವು ಅಕ್ರಮಿಗಳಾಗಿ ಬಿಟ್ಟಿರಿ.

93. ಮತ್ತು ನಾವು ನಿಮ್ಮ (ಇಸ್ರಾಈಲರ ಸಂತತಿಗಳ) ಮೇಲೆ ಪರ್ವತವನ್ನೆತ್ತಿ ‘‘ನಾವು ನಿಮಗೆ ನೀಡುತ್ತಿರುವುದನ್ನು ಭದ್ರವಾಗಿ ಹಿಡಿದುಕೊಳ್ಳಿರಿ ಮತ್ತು ಆಲಿಸಿರಿ’’ ಎಂದು ನಿಮ್ಮಿಂದ ಕರಾರನ್ನು ಪಡೆದುಕೊಂಡಿದ್ದೆವು. ಅದಕ್ಕೆ ಅವರು (ನಿಮ್ಮ ಪೂರ್ವಜರು) ‘‘ನಾವು ಆಲಿಸಿದೆವು ಮತ್ತು ಉಲ್ಲಂಘಿಸಿದೆವು’’ ಎಂದರು. ಅವರ ಧಿಕ್ಕಾರಿ ಧೋರಣೆಯ ಕಾರಣ ಅವರ ಹೃದಯಗಳಲ್ಲಿ ಕರುವೇ ನೆಲೆಸಿಬಿಟ್ಟಿತ್ತು. (ದೂತರೇ,) ‘‘ನೀವು ನಂಬುವವರಾಗಿದ್ದರೆ, ಆ ನಿಮ್ಮ ನಂಬಿಕೆಯು ನಿಮಗೆ ನೀಡುತ್ತಿರುವ ಆದೇಶಗಳು ಎಷ್ಟು ನಿಕೃಷ್ಟವಾಗಿವೆ!’’ ಎಂದು (ಅವರೊಡನೆ) ಹೇಳಿರಿ.

94. ಹೇಳಿರಿ; ‘‘ಅಲ್ಲಾಹನ ಬಳಿ, ಪರಲೋಕದ ಮನೆಯು, ಇತರೆಲ್ಲ ಮಾನವರನ್ನು ಬಿಟ್ಟು ಕೇವಲ ನಿಮಗಾಗಿಯೇ ಮೀಸಲಾಗಿದ್ದರೆ, (ಮತ್ತು ಹಾಗೆನ್ನುವ) ನೀವು ನಿಜಕ್ಕೂ ಸತ್ಯವಂತರಾಗಿದ್ದರೆ, ನೀವು ಮರಣಕ್ಕಾಗಿ ಹಾತೊರೆಯಿರಿ’’.

95. ಅವರ ಕೈಗಳು ಸಂಪಾದಿಸಿ ಮುಂದಕ್ಕೆ ಕಳಿಸಿರುವ ಕರ್ಮಗಳಿಂದಾಗಿ ಅವರು ಎಂದೆಂದೂ ಅದಕ್ಕಾಗಿ (ಮರಣಕ್ಕಾಗಿ) ಹಾತೊರೆಯಲಾರರು. ಅಲ್ಲಾಹನು ಅಕ್ರಮಿಗಳನ್ನು ಚೆನ್ನಾಗಿ ಬಲ್ಲನು.

96. ಖಂಡಿತವಾಗಿಯೂ ನೀವು ಅವರನ್ನು, ಮಾನವರ ಪೈಕಿ, ಬದುಕಿಗಾಗಿ ಅತಿ ಹೆಚ್ಚು ಆಶೆ ಪಡುವವರಾಗಿ ಕಾಣುವಿರಿ. ಈ ವಿಷಯದಲ್ಲಿ ಅವರು ಬಹುದೇವಾರಾಧಕರಿಗಿಂತಲೂ ಮುಂದಿದ್ದಾರೆ. ಅವರಲ್ಲಿನ ಪ್ರತಿಯೊಬ್ಬನೂ ಸಾವಿರ ವರ್ಷ ಬದುಕ ಬಯಸುತ್ತಾನೆ. ಅವನ ಆ ದೀರ್ಘ ಆಯುಷ್ಯವು ಅವನನ್ನು ಶಿಕ್ಷೆಯಿಂದ ರಕ್ಷಿಸಲಾರದು. ಅಲ್ಲಾಹನು, ಅವರು ಮಾಡುತ್ತಿರುವುದನ್ನೆಲ್ಲಾ ನೋಡುತ್ತಲೇ ಇದ್ದಾನೆ.

97. ಹೇಳಿರಿ; ಜಿಬ್ರೀಲರ ಶತ್ರುವಾಗಿರುವವನು (ತಿಳಿದಿರಲಿ) – ಅವರಂತು, ಅಲ್ಲಾಹನ ಆದೇಶದಂತೆ, (ಅವನ ಸಂದೇಶವನ್ನು) ನಿಮ್ಮ (ಮುಹಮ್ಮದರ) ಹೃದಯಕ್ಕೆ ಇಳಿಸುವವರಾಗಿದ್ದಾರೆ. ಅದು ತನಗಿಂತ ಹಿಂದೆ ಬಂದಿರುವ ಸತ್ಯವನ್ನು ಸಮರ್ಥಿಸುವ ಮಾರ್ಗದರ್ಶನವಾಗಿದೆ ಮತ್ತು ಸತ್ಯದಲ್ಲಿ ನಂಬಿಕೆ ಇಟ್ಟವರಿಗೆ ಶುಭವಾರ್ತೆಯಾಗಿದೆ.

98. ಅಲ್ಲಾಹನ ಹಾಗೂ ಅವನ ಮಲಕ್‌ಗಳ ಹಾಗೂ ಅವನ ದೂತರುಗಳ ಮತ್ತು ಜಿಬ್ರೀಲ್ ಹಾಗೂ ಮೀಕಾಯೀಲರ ಶತ್ರುವಾಗಿರುವವನು (ತಿಳಿದಿರಲಿ) – ಖಂಡಿತವಾಗಿಯೂ ಅಲ್ಲಾಹನು ಸತ್ಯಧಿಕ್ಕಾರಿಗಳ ಶತ್ರುವಾಗಿದ್ದಾನೆ.

99. (ದೂತರೇ,) ನಾವು ನಿಮ್ಮೆಡೆಗೆ ಬಹಳ ಸ್ಪಷ್ಟವಾದ ವಾಕ್ಯಗಳನ್ನು ಇಳಿಸಿಕೊಟ್ಟಿರುತ್ತೇವೆ. ಅವಿಧೇಯರ ಹೊರತು ಬೇರಾರೂ ಅವುಗಳನ್ನು ಧಿಕ್ಕರಿಸುವುದಿಲ್ಲ.

100. ಅವರು ಏನಾದರೊಂದು ಕರಾರನ್ನು ಮಾಡಿಕೊಂಡಾಗಲೆಲ್ಲಾ ಅವರಲ್ಲಿನ ಯಾವುದಾದರೂ ಪಂಗಡವು ಅದನ್ನು ಮೂಲೆಗೆಸೆಯಲಿಲ್ಲವೆ? ನಿಜವಾಗಿ ಅವರಲ್ಲಿ ಹೆಚ್ಚಿನವರು ನಂಬುವವರೇ ಅಲ್ಲ.

101. ಮತ್ತು ಈ ಹಿಂದೆ ಗ್ರಂಥ ನೀಡಲಾಗಿದ್ದವರ ಪೈಕಿ ಒಂದು ಗುಂಪಿನವರು, ಈಗಾಗಲೇ ತಮ್ಮ ಬಳಿಯಿರುವ ಸತ್ಯವನ್ನು ಸಮರ್ಥಿಸುವ ದೂತನೊಬ್ಬನು ಅಲ್ಲಾಹನ ಕಡೆಯಿಂದ ತಮ್ಮ ಬಳಿಗೆ ಬಂದಾಗಲೆಲ್ಲಾ, ಆ ಕುರಿತು ತಮಗೆ ಏನೂ ತಿಳಿಯದು ಎಂಬಂತೆ, ಅಲ್ಲಾಹನ ಗ್ರಂಥವನ್ನು ತಮ್ಮ ಬೆನ್ನ ಹಿಂದಕ್ಕೆ ಎಸೆದು ಬಿಟ್ಟರು.

102. ಮತ್ತು ಅವರು, ಸುಲೈಮಾನರ ಸಾಮ್ರಾಜ್ಯದ ಹೆಸರಲ್ಲಿ ಶೈತಾನರು ಪಠಿಸುತ್ತಿದ್ದವುಗಳ (ಮಾಟ, ಮಂತ್ರಗಳ) ಬೆನ್ನು ಹತ್ತಿದ್ದರು. ನಿಜವಾಗಿ ಸುಲೈಮಾನರು ಸತ್ಯವನ್ನು ಧಿಕ್ಕರಿಸಿರಲಿಲ್ಲ. ಆ ಶೈತಾನರೇ ಸತ್ಯವನ್ನು ಧಿಕ್ಕರಿಸಿದ್ದರು. ಅವರು ಜನರಿಗೆ ಮಾಟಮಂತ್ರವನ್ನು ಕಲಿಸುತ್ತಿದ್ದರು. ಮತ್ತು ಅವರು ಬಾಬಿಲ್‌ನಲ್ಲಿ (ಬ್ಯಾಬಿಲೋನಿಯಾದಲ್ಲಿ) ಹಾರೂತ್ ಮತ್ತು ಮಾರೂತ್ ಎಂಬ ‘ಮಲಕ್’ಗಳಿಗೆ ನೀಡಲಾಗಿದ್ದ ವಿದ್ಯೆಯ ಹಿಂದೆ ಬಿದ್ದಿದ್ದರು. ನಿಜವಾಗಿ ಅವರು (ಹಾರೂತ್ ಮತ್ತು ಮಾರೂತ್)- ‘‘ನಾವು ಒಂದು ಪರೀಕ್ಷೆಯಾಗಿದ್ದೇವೆ. ನೀನು ಧಿಕ್ಕಾರಿಯಾಗಿ ಬಿಡಬಾರದು’’ ಎಂದು ಮುಂಗಡ ಎಚ್ಚರಿಕೆ ನೀಡದೆ ಯಾರಿಗೂ ಅದನ್ನು ಕಲಿಸುತ್ತಿರಲಿಲ್ಲ. ಇಷ್ಟಾಗಿಯೂ ಈ ಜನರು, ಅವರಿಂದ, ಪತಿ-ಪತ್ನಿಯರ ನಡುವೆ ಬಿಕ್ಕಟ್ಟು ಮೂಡಿಸುವ ವಿದ್ಯೆಯನ್ನು ಕಲಿಯುತ್ತಿದ್ದರು. ನಿಜವಾಗಿ, ಅಲ್ಲಾಹನ ಅನುಮತಿ ಇಲ್ಲದೆ, ಆ ಮೂಲಕ ಯಾರೊಬ್ಬರಿಗೂ ಯಾವುದೇ ಹಾನಿಯುಂಟು ಮಾಡಲು ಅವರಿಗೆ ಸಾಧ್ಯವಿರಲಿಲ್ಲ. ನಿಜವಾಗಿ ಅವರು ತಮಗೆ ಹಾನಿಕರವಾದ ಮತ್ತು ತಮಗೆ ಯಾವ ಲಾಭವನ್ನೂ ತರದ ವಿದ್ಯೆಯನ್ನು ಕಲಿಯುತ್ತಿದ್ದರು. ಹಾಗೆಂದು, ಅಂತಹದನ್ನು ಕೊಂಡು ಕೊಂಡವರಿಗೆ ಪರಲೋಕದ ಸುಖದಲ್ಲಿ ಯಾವ ಪಾಲೂ ಇರುವುದಿಲ್ಲವೆಂಬುದು ಅವರಿಗೆ ತಿಳಿದಿತ್ತು. ಮತ್ತು ಅವರು ತಮ್ಮನ್ನು ಮಾರಿಕೊಂಡು ಖರೀದಿಸಿದ ವಸ್ತು ತೀರಾ ಕೆಟ್ಟದಾಗಿತ್ತು. ಅವರು ಅದನ್ನು ಅರಿತಿದ್ದರೆ ಚೆನ್ನಾಗಿತ್ತು.

103. ಅವರು ನಂಬಿಕೆಯಿಟ್ಟಿದ್ದರೆ ಮತ್ತು ಧರ್ಮ ನಿಷ್ಠರಾಗಿದ್ದರೆ, ಅಲ್ಲಾಹನ ಬಳಿ ಅವರಿಗೆ, ಎಷ್ಟೋ ಶ್ರೇಷ್ಠ ಪ್ರತಿಫಲ ಸಿಗುತ್ತಿತ್ತು. ಅವರು ಅದನ್ನು ಅರಿತಿದ್ದರೆ ಚೆನ್ನಾಗಿತ್ತು.

104. ವಿಶ್ವಾಸಿಗಳೇ, ‘ರಾಇನಾ’ ಎನ್ನಬೇಡಿ, ‘ಉನ್‌ಲ್ಹುರ್ನಾ’ ಎನ್ನಿರಿ ಮತ್ತು ಆಲಿಸಿರಿ. ಧಿಕ್ಕಾರಿಗಳಿಗೆ ಯಾತನಾಮಯ ಶಿಕ್ಷೆ ಕಾದಿದೆ.

105. ಗ್ರಂಥದವರಲ್ಲಿನ ಧಿಕ್ಕಾರಿಗಳು ಮತ್ತು ಬಹುದೇವಾರಾಧಕರು, ನಿಮ್ಮ ಒಡೆಯನ ಕಡೆಯಿಂದ ನಿಮ್ಮೆಡೆಗೆ ಯಾವುದೇ ಒಳಿತು ಇಳಿದು ಬರುವುದನ್ನು ಇಷ್ಟಪಡುವುದಿಲ್ಲ. ಆದರೆ ಅಲ್ಲಾಹನಂತು ತನ್ನ ಅನುಗ್ರಹದಿಂದ ತಾನಿಚ್ಛಿಸಿದವರನ್ನು ಆರಿಸಿಕೊಳ್ಳುತ್ತಾನೆ. ಅಲ್ಲಾಹನು ಮಹಾ ಉದಾರಿಯಾಗಿದ್ದಾನೆ.

106. ನಾವು (ಕುರ್‌ಆನಿನ) ಯಾವುದೇ ವಚನವನ್ನು ಅನೂರ್ಜಿತಗೊಳಿಸಿದರೆ ಅಥವಾ ಮರೆಸಿಬಿಟ್ಟರೆ, (ಅದರ ಬದಲಿಗೆ) ಅದಕ್ಕಿಂತ ಉತ್ತಮವಾದ ಅಥವಾ ಅದಕ್ಕೆ ಸಮನಾದ ವಚನವನ್ನು ತರದೆ ಇರುವುದಿಲ್ಲ. ಅಲ್ಲಾಹನು ಎಲ್ಲವನ್ನೂ ಮಾಡಬಲ್ಲವನೆಂಬುದು ನಿಮಗೆ ತಿಳಿಯದೇ?

107. ಆಕಾಶಗಳ ಮತ್ತು ಭೂಮಿಯ ಆಧಿಪತ್ಯವೆಲ್ಲಾ ಅಲ್ಲಾಹನಿಗೆ ಮಾತ್ರ ಸೇರಿದೆ ಮತ್ತು ನಿಮಗೆ ಅಲ್ಲಾಹನ ಹೊರತು ಬೇರೆ ಯಾರೂ ಪೋಷಕರಾಗಲಿ ಸಹಾಯಕರಾಗಲಿ ಇಲ್ಲ ಎಂಬುದು ನಿಮಗೆ ತಿಳಿಯದೇ?

108. (ವಿಶ್ವಾಸಿಗಳೇ,) ನೀವೇನು, ಈ ಹಿಂದೆ ಮೂಸಾರೊಡನೆ ಕೇಳಲಾದ ಪ್ರಶ್ನೆಗಳನ್ನೇ ನಿಮ್ಮ ದೇವದೂತರೊಡನೆ ಕೇಳ ಬಯಸುವಿರಾ? (ಈ ರೀತಿ) ವಿಶ್ವಾಸವನ್ನು ಧಿಕ್ಕಾರವಾಗಿ ಬದಲಿಸಿಕೊಂಡವನು ನಿಜಕ್ಕೂ ನೇರ ಮಾರ್ಗದಿಂದ ಬಹಳ ದೂರ ಹೋಗಿ ಬಿಟ್ಟನು.

109. ಗ್ರಂಥದವರಲ್ಲಿ ಹೆಚ್ಚಿನವರು, ನೀವು ವಿಶ್ವಾಸಿಗಳಾದ ಬಳಿಕ ನಿಮ್ಮನ್ನು ಮತ್ತೆ ಧಿಕ್ಕಾರದೆಡೆಗೆ ಮರಳಿಸಬಯಸಿದ್ದರು. ಸತ್ಯವು ಅವರಿಗೆ ಸ್ಪಷ್ಟವಾದ ಬಳಿಕವೂ ಅವರು ತಮ್ಮೊಳಗಿನ ಅಸೂಯೆಯಿಂದಾಗಿ (ಹೀಗೆ ಮಾಡುತ್ತಿದ್ದಾರೆ). ನೀವು ಮಾತ್ರ, ಈ ಕುರಿತು ಅಲ್ಲಾಹನು ತನ್ನ ಆದೇಶವನ್ನು ಪ್ರಕಟಿಸುವ ತನಕವೂ (ಅವರನ್ನು) ಕ್ಷಮಿಸುತ್ತಲೂ (ಅವರ ತಪ್ಪನ್ನು) ಕಡೆಗಣಿಸುತ್ತಲೂ ಇರಿ. ಅಲ್ಲಾಹನು ಖಂಡಿತ ಎಲ್ಲವನ್ನು ಮಾಡಬಲ್ಲವನಾಗಿದ್ದಾನೆ.

110. ಮತ್ತು ನೀವು ನಮಾಝನ್ನು ಪಾಲಿಸಿರಿ ಮತ್ತು ಝಕಾತ್‌ಅನ್ನು ಪಾವತಿಸಿರಿ. ನೀವು ನಿಮಗಾಗಿ ಮುಂದೆ ಕಳಿಸುವ ಎಲ್ಲ ಸತ್ಕಾರ್ಯಗಳನ್ನು ಅಲ್ಲಾಹನ ಬಳಿ ಕಾಣುವಿರಿ. ನೀವು ಮಾಡುತ್ತಿರುವುದನ್ನೆಲ್ಲಾ ಅಲ್ಲಾಹನು ಖಂಡಿತ ನೋಡುತ್ತಿದ್ದಾನೆ.

111.ಯಹೂದಿಯಾದವನ ಅಥವಾ ಕ್ರೈಸ್ತನಾದವನ ಹೊರತು ಬೇರಾರೂ ಸ್ವರ್ಗವನ್ನು ಪ್ರವೇಶಿಸಲಾರನೆಂದು ಅವರು ಹೇಳುತ್ತಾರೆ. ಅದು ಕೇವಲ ಅವರ ಆಶೆಯಾಗಿದೆ. ‘‘ನೀವು ಸತ್ಯವಂತರಾಗಿದ್ದರೆ ನಿಮ್ಮ ಪುರಾವೆಯನ್ನು ತನ್ನಿರಿ’’ ಎಂದು ಅವರೊಡನೆ ಹೇಳಿರಿ.

112. ನಿಜವಾಗಿ, ತನ್ನನ್ನು ಅಲ್ಲಾಹನಿಗೆ ಶರಣಾಗಿಸಿಕೊಂಡು, ಸತ್ಕರ್ಮಗಳನ್ನು ಮಾಡುತ್ತಲಿದ್ದವನ ಪ್ರತಿಫಲವು ಅವನ ಒಡೆಯನ ಬಳಿ ಇದೆ. ಅಂಥವರಿಗೆ ಯಾವ ಭಯವೂ ಇರದು. ಯಾವ ವ್ಯಥೆಯೂ ಇರದು.

113. ಕ್ರೈಸ್ತರ ಬಳಿ ಏನೂ (ಯಾವ ಸತ್ಯವೂ) ಇಲ್ಲವೆಂದು ಯಹೂದಿಗಳು ಹೇಳುತ್ತಾರೆ ಮತ್ತು ಯಹೂದಿಗಳ ಬಳಿ ಏನೂ ಇಲ್ಲವೆಂದು ಕ್ರೈಸ್ತರು ಹೇಳುತ್ತಾರೆ. ಹಾಗೆಂದು, ಅವರು (ಇಬ್ಬರೂ) ಗ್ರಂಥವನ್ನು ಓದುವವರಾಗಿದ್ದಾರೆ. ತಿಳುವಳಿಕೆ ಇಲ್ಲದವರೂ ಇದೇ ರೀತಿ, ಅವರು ಆಡುತ್ತಿರುವಂತಹ ಮಾತನ್ನೇ ಆಡುತ್ತಾರೆ. ಅವರು ಭಿನ್ನತೆಗೊಳಗಾಗಿದ್ದ ವಿಷಯಗಳಲ್ಲಿ ಪುನರುತ್ಥಾನ ದಿನ, ಅಲ್ಲಾಹನೇ ಅವರ ನಡುವೆ ತೀರ್ಪು ನೀಡುವನು.

114. ಅಲ್ಲಾಹನ ಮಸೀದಿಗಳಲ್ಲಿ ಅವನ ಹೆಸರನ್ನು ಪ್ರಸ್ತಾಪಿಸದಂತೆ ತಡೆಯುವವನಿಗಿಂತ ಹಾಗೂ ಅವುಗಳನ್ನು ಪಾಳುಬೀಳಿಸಲು ಶ್ರಮಿಸುವವನಿಗಿಂತ ದೊಡ್ಡ ಅಕ್ರಮಿ ಯಾರಿದ್ದಾನೆ? ಅಂಥವರು, ಭಯ ಭಕ್ತಿಯಿಲ್ಲದೆ ಅವುಗಳೊಳಗೆ ಪ್ರವೇಶಿಸಲೇ ಬಾರದಾಗಿತ್ತು. ಅವರಿಗೆ ಇಹಲೋಕದಲ್ಲಿ ನಷ್ಟವಿದೆ ಮತ್ತು ಪರಲೋಕದಲ್ಲೂ ಅವರಿಗೆ ಮಹಾ ಯಾತನೆ ಸಿಗಲಿದೆ.

115. ಪೂರ್ವ ಮತ್ತು ಪಶ್ಚಿಮವು ಅಲ್ಲಾಹನಿಗೇ ಸೇರಿದೆ. ನೀವು ಯಾವೆಡೆಗೆ ತಿರುಗಿದರೂ, ಅಲ್ಲಾಹನ ಸಾನ್ನಿಧ್ಯವು ಅಲ್ಲಿದೆ. ಅಲ್ಲಾಹನು ಖಂಡಿತ ಸರ್ವವ್ಯಾಪಿಯಾಗಿದ್ದಾನೆ ಮತ್ತು ಬಲ್ಲವನಾಗಿದ್ದಾನೆ.

116. ಮತ್ತು ಅವರು ‘‘ಅಲ್ಲಾಹನು ಒಬ್ಬನನ್ನು ತನ್ನ ಪುತ್ರನಾಗಿಸಿಕೊಂಡಿದ್ದಾನೆ’’ ಎನ್ನುತ್ತಾರೆ. ಅವನು ಪಾವನನು. ನಿಜವಾಗಿ ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವುದೆಲ್ಲವೂ ಅವನಿಗೇ ಸೇರಿದೆ. ಎಲ್ಲವೂ ಅವನಿಗೆ ವಿಧೇಯವಾಗಿದೆ.

117. ಅವನೇ ಆಕಾಶಗಳಿಗೆ ಮತ್ತು ಭೂಮಿಗೆ ಚಾಲನೆ ನೀಡಿದವನು. ಅವನು ಒಂದು ನಿರ್ಧಾರ ಮಾಡಿದಾಗ, ಆದಕ್ಕೆ ‘ಆಗು’ ಎಂದಷ್ಟೇ ಹೇಳುತ್ತಾನೆ ಮತ್ತು ಅದು ಆಗಿ ಬಿಡುತ್ತದೆ.

118. ಅರಿವಿಲ್ಲದವರು, ‘‘ಅಲ್ಲಾಹನೇಕೆ ನಮ್ಮೊಡನೆ ಮಾತನಾಡುವುದಿಲ್ಲ? ಅಥವಾ ನಮ್ಮ ಬಳಿಗೊಂದು ಪುರಾವೆಯಾದರೂ ಯಾಕೆ ಬರುವುದಿಲ್ಲ?’’ ಎನ್ನುತ್ತಾರೆ. ಅವರಿಗಿಂತ ಹಿಂದಿನವರೂ ಅವರು ಹೇಳಿದಂತಹ ಮಾತನ್ನೇ ಹೇಳಿದ್ದರು. ಅವರ ಮನಸ್ಸುಗಳು ಒಂದೇ ತರದ್ದಾಗಿವೆ. ದೃಢ ವಿಶ್ವಾಸವಿರುವ ಜನರಿಗಂತೂ ನಾವು ಪುರಾವೆಗಳನ್ನು ಈಗಾಗಲೇ ವಿವರಿಸಿ ಬಿಟ್ಟಿದ್ದೇವೆ.

119. (ದೂತರೇ,) ಖಂಡಿತವಾಗಿಯೂ ನಿಮ್ಮನ್ನು ನಾವು ಸತ್ಯದೊಂದಿಗೆ ಕಳಿಸಿರುತ್ತೇವೆ – ಶುಭ ವಾರ್ತೆ ನೀಡುವವರಾಗಿ ಮತ್ತು ಎಚ್ಚರಿಸುವವರಾಗಿ. ನರಕದವರ ಕುರಿತು ನಿಮ್ಮನ್ನು ಪ್ರಶ್ನಿಸಲಾಗದು.

120. ಇನ್ನು, ಯಹೂದಿಗಳಾಗಲಿ, ಕ್ರೈಸ್ತರಾಗಲಿ, ನೀವು ಅವರ ಮಾರ್ಗವನ್ನು ಅನುಸರಿಸುವ ತನಕವೂ ಅವರು ನಿಮ್ಮಿಂದ ಸಂತುಷ್ಟರಾಗಲಾರರು. ‘‘ಅಲ್ಲಾಹನ ಮಾರ್ಗದರ್ಶನವೇ ನೈಜ ಮಾರ್ಗದರ್ಶನವಾಗಿದೆ’’ ಎಂದು (ಅವರೊಡನೆ) ಹೇಳಿರಿ. ಒಂದು ವೇಳೆ ನಿಮ್ಮ ಬಳಿಗೆ (ಸತ್ಯದ) ಜ್ಞಾನವು ಬಂದ ಬಳಿಕವೂ ನೀವು ಆ ಜನರ ಅಪೇಕ್ಷೆಗಳನ್ನು ಅನುಸರಿಸಿದರೆ, ಅಲ್ಲಾಹನೆದುರು ನಿಮಗೆ ಯಾವ ಆಪ್ತರೂ ಸಹಾಯಕರೂ ಇರಲಾರರು.

121. ನಾವು ಯಾರಿಗೆ ಗ್ರಂಥವನ್ನು ನೀಡಿರುವೆವೋ ಅವರು ಅದನ್ನು ಓದಬೇಕಾದ ರೀತಿಯಲ್ಲಿ ಓದುತ್ತಾರೆ (ಮತ್ತು) ಅವರು ಅದನ್ನು ನಂಬುತ್ತಾರೆ. ಇನ್ನು, ಅದನ್ನು ಯಾರು ತಿರಸ್ಕರಿಸುವರೋ ಅವರೇ ನಿಜವಾಗಿ ನಷ್ಟಕ್ಕೊಳಗಾಗುವವರು.

122. ಇಸ್ರಾಈಲರ ಸಂತತಿಗಳೇ, ನಾನು ನಿಮಗೆ ನೀಡಿದ ಅನುಗ್ರಹವನ್ನು ಮತ್ತು ಜಗತ್ತಿನ ಎಲ್ಲರೆದುರು ನಿಮಗೆ ಶ್ರೇಷ್ಠತೆ ನೀಡಿದ್ದನ್ನು ಸ್ಮರಿಸಿರಿ.

123. ಮತ್ತು ಯಾರಿಗೂ ಯಾರಿಂದಲೂ ಯಾವುದೇ ಪ್ರಯೋಜನವಾಗದ ಹಾಗೂ ಯಾರಿಂದಲೂ ಪರಿಹಾರ ಧನ ಸ್ವೀಕರಿಸಲಾಗದ, ಯಾರಿಗೂ ಯಾರದೇ ಶಿಫಾರಸ್ಸಿನಿಂದ ಲಾಭವಾಗದ ಮತ್ತು ಅವರಿಗೆ (ಅಪರಾಧಿಗಳಿಗೆ) ಯಾವುದೇ ಸಹಾಯ ಸಿಗಲಾರದ ಆ ದಿನದ ಬಗ್ಗೆ ಎಚ್ಚರವಾಗಿರಿ.

124. ಮತ್ತು ಇಬ್ರಾಹೀಮರನ್ನು ಅವರ ಒಡೆಯನು (ಅಲ್ಲಾಹನು) ಕೆಲವು ಆದೇಶಗಳ ಮೂಲಕ ಪರೀಕ್ಷೆಗೆ ಒಳಪಡಿಸಿದಾಗ, ಅವರು ಅವುಗಳನ್ನು ಪೂರ್ಣವಾಗಿ ಪಾಲಿಸಿದರು. (ಅಲ್ಲಾಹನು ಅವರೊಡನೆ) ‘‘ನಾನು ನಿಮ್ಮನ್ನು ಎಲ್ಲ ಮಾನವರ ನಾಯಕನಾಗಿ ನೇಮಿಸಲಿದ್ದೇನೆ’’ ಎಂದಾಗ ಅವರು ‘‘ಮತ್ತು ನನ್ನ ಸಂತತಿಯವರನ್ನೂ (ನಾಯಕರಾಗಿಸುವೆಯಾ?)’’ ಎಂದು ಕೇಳಿದರು. ಆಗ ಅವನು (ಅಲ್ಲಾಹನು) ‘‘ನನ್ನ ವಾಗ್ದಾನವು ಅಕ್ರಮಿಗಳಿಗೆ ಅನ್ವಯವಾಗುವುದಿಲ್ಲ’’ ಎಂದನು.

125. ನಾವು ಆ ಭವನ (ಕಅಬ)ವನ್ನು ಜನರಿಗಾಗಿ, ಪರಸ್ಪರ ಒಟ್ಟು ಸೇರುವ ಹಾಗೂ ಸುರಕ್ಷಿತ ಸ್ಥಳವಾಗಿ ಮಾಡಿದೆವು. ಇಬ್ರಾಹೀಮರು ನಿಂತ ಸ್ಥಾನವನ್ನು ನೀವು ನಮಾಝಿನ ಸ್ಥಳವಾಗಿ ಬಳಸಿರಿ (ಎಂದು ನಾವು ಆದೇಶಿಸಿದ್ದೆವು). ಮತ್ತು ತವಾಫ್ (ಪ್ರದಕ್ಷಿಣೆ) ಮಾಡುವವರು, ‘ಇಅ್ತಿಕಾಫ್’ ಮಾಡುವವರು, ಬಾಗುವವರು ಹಾಗೂ ಸಾಷ್ಟಾಂಗವೆರಗುವವರಿಗಾಗಿ ನನ್ನ ಭವನವನ್ನು ನಿರ್ಮಲವಾಗಿಡಬೇಕೆಂದು ನಾವು ಇಬ್ರಾಹೀಮ್ ಮತ್ತು ಇಸ್ಮಾಈಲರಿಗೆ ಆದೇಶ ನೀಡಿದ್ದೆವು.

126. ಮತ್ತು ಇಬ್ರಾಹೀಮರು ‘‘ನನ್ನೊಡೆಯಾ! ಈ ನಗರವನ್ನು ಶಾಂತಿಧಾಮವಾಗಿ ಮಾಡು ಮತ್ತು ಇಲ್ಲಿಯವರ ಪೈಕಿ ಅಲ್ಲಾಹನಲ್ಲಿ ಹಾಗೂ ಪರಲೋಕದಲ್ಲಿ ನಂಬಿಕೆ ಇಟ್ಟಿರುವವರಿಗೆ, ವಿವಿಧ ಫಲಗಳನ್ನು ಆಹಾರವಾಗಿ ನೀಡು’’ ಎಂದು ಪ್ರಾರ್ಥಿಸಿದಾಗ, ಅವನು (ಅಲ್ಲಾಹನು) ಹೇಳಿದನು; ‘‘ಅಲ್ಪ ಕಾಲಕ್ಕಾಗಿ (ಇಹಲೋಕದ ಮಟ್ಟಿಗೆ) ನಾನು ಅದನ್ನೆಲ್ಲಾ ಧಿಕ್ಕಾರಿಗೂ ಕೊಡುವೆನು. ಆದರೆ ಆ ಬಳಿಕ ಆತನನ್ನು ಎಳೆದೊಯ್ದು ನರಕದ ಶಿಕ್ಷೆಗೆ ತುತ್ತಾಗಿಸುವೆನು. ಅದು ತೀರಾ ಕೆಟ್ಟ ನೆಲೆಯಾಗಿದೆ.’’

127.ಇಬ್ರಾಹೀಮರು ಹಾಗೂ ಇಸ್ಮಾಈಲರು ಆ ಭವನದ ಗೋಡೆಗಳನ್ನು ಎತ್ತರಿಸುತ್ತಾ (ಹೀಗೆಂದು ಪ್ರಾರ್ಥಿಸಿದರು;)- ‘‘ನಮ್ಮೊಡೆಯಾ (ಈ ಸೇವೆಯನ್ನು) ನಮ್ಮಿಂದ ಸ್ವೀಕರಿಸು. ಖಂಡಿತವಾಗಿಯೂ ನೀನು ಎಲ್ಲವನ್ನೂ ಕೇಳುವವನು ಮತ್ತು ಬಲ್ಲವನು.‘‘

128. ‘‘ನಮ್ಮೊಡೆಯಾ, ನಮ್ಮಿಬ್ಬರನ್ನೂ ಮುಸ್ಲಿಮರಾಗಿಸು ಮತ್ತು ನಮ್ಮ ಸಂತತಿಗಳಲ್ಲಿ ಒಂದು ಮುಸ್ಲಿಮ್ (ನಿನಗೆ ಶರಣಾದ) ಸಮುದಾಯವನ್ನು ಬೆಳೆಸು ಹಾಗೂ ನಮಗೆ ನಮ್ಮ ಆರಾಧನಾ ವಿಧಾನಗಳನ್ನು ಕಲಿಸಿಕೊಡು ಮತ್ತು ನಮ್ಮ ಪಶ್ಚಾತ್ತಾಪವನ್ನು ಸ್ವೀಕರಿಸು. ನೀನು ಪಶ್ಚಾತ್ತಾಪ ಸ್ವೀಕರಿಸುವವನೂ ಕರುಣಾಳುವೂ ಆಗಿರುವೆ.’’

129. ‘‘ನಮ್ಮೊಡೆಯಾ, ಅವರ ನಡುವೆ, ಅವರಿಗೆ ನಿನ್ನ ವಚನಗಳನ್ನು ಓದಿ ಕೇಳಿಸುವ ಹಾಗೂ ಅವರಿಗೆ ಗ್ರಂಥವನ್ನೂ ಯುಕ್ತಿಯನ್ನೂ ಕಲಿಸಿಕೊಡುವ ಮತ್ತು ಅವರನ್ನು ಸಂಸ್ಕರಿಸುವ ಒಬ್ಬ ದೂತನನ್ನು ಅವರೊಳಗಿಂದಲೇ ಬೆಳೆಸು. ಖಂಡಿತವಾಗಿಯೂ ನೀನು ಅತ್ಯಂತ ಸಮರ್ಥನೂ ಯುಕ್ತಿವಂತನೂ ಆಗಿರುವೆ.’’

130. ಸ್ವತಃ ತನ್ನನ್ನೇ ವಂಚಿಸುವವನ ಹೊರತು ಬೇರೆ ಯಾರು ತಾನೇ ಇಬ್ರಾಹೀಮರ ಮಾರ್ಗದಿಂದ ವಿಮುಖನಾಗಬಲ್ಲನು? ನಾವು ಈ ಲೋಕದಲ್ಲೇ ಅವರನ್ನು ಆರಿಸಿಕೊಂಡಿದ್ದೆವು. ಪರಲೋಕದಲ್ಲಿ ಅವರು ಖಂಡಿತ ಸಜ್ಜನರ ಸಾಲಲ್ಲಿರುವರು.

131. ಅವರ ಒಡೆಯನು ಅವರೊಡನೆ ‘‘ಮುಸ್ಲಿಮನಾಗು’’ (ಶರಣಾಗು) ಎಂದಾಗಲೇ ಅವರು ‘‘ನಾನು ವಿಶ್ವದೊಡೆಯನಿಗೆ ಮುಸ್ಲಿಮನಾದೆ (ಶರಣಾದೆ)’’ ಎಂದರು.

132. ಇದೇ ಮಾರ್ಗವನ್ನು ಇಬ್ರಾಹೀಮರು ತಮ್ಮ ಸಂತತಿಗೆ ಬೋಧಿಸಿದ್ದರು. ಮತ್ತು ಯಅ್ಕೂಬರೂ ಅಷ್ಟೇ. ‘‘ನನ್ನ ಪುತ್ರರೇ, ಅಲ್ಲಾಹನು ನಿಮಗಾಗಿ ಇದೇ ಧರ್ಮವನ್ನು ಆರಿಸಿದ್ದಾನೆ. ನೀವಿನ್ನು ಮುಸ್ಲಿಮರಲ್ಲದ ಸ್ಥಿತಿಯಲ್ಲಿ ಸಾಯಬಾರದು’’ (ಎಂದು ಅವರು ಬೋಧಿಸಿದ್ದರು).

133. ಯಅ್ಕೂಬರು ಮರಣದ ಅಂಚಿನಲ್ಲಿದ್ದಾಗ ನೀವು ನೋಡಿದ್ದಿರಾ? ಅವರು ತಮ್ಮ ಪುತ್ರರೊಡನೆ ‘‘ನನ್ನ (ಮರಣದ) ಬಳಿಕ ನೀವು ಯಾರನ್ನು ಆರಾಧಿಸುವಿರಿ?’’ ಎಂದು ಕೇಳಿದಾಗ ಅವರು, ( ಪುತ್ರರು) ‘‘ನಿಮ್ಮ ಒಡೆಯನೂ, ನಿಮ್ಮ ಪೂರ್ವಜರಾದ ಇಬ್ರಾಹೀಮ್, ಇಸ್ಮಾಈಲ್ ಮತ್ತು ಇಸ್ಹಾಕ್‌ರ ಒಡೆಯನೂ ಆಗಿರುವ ಆ ಏಕ ಮಾತ್ರ ಆರಾಧ್ಯನನ್ನು ಮಾತ್ರ ಆರಾಧಿಸುವೆವು ಮತ್ತು ನಾವು ಅವನಿಗೇ ಶರಣಾಗಿರುವೆವು’’ ಎಂದರು.

134. ಅದು ಗತಿಸಿ ಹೋದ ಒಂದು ಸಮುದಾಯ. ಅವರು ಸಂಪಾದಿಸಿದ್ದು ಅವರಿಗೆ ಮತ್ತು ನೀವು ಸಂಪಾದಿಸಿದ್ದು ನಿಮಗೆ. ಅವರು ಮಾಡುತ್ತಿದ್ದ ಕರ್ಮಗಳ ಬಗ್ಗೆ ನಿಮ್ಮನ್ನು ಪ್ರಶ್ನಿಸಲಾಗದು.

135. ‘‘ನೀವು ಯಹೂದಿಗಳಾಗಿರಿ ಅಥವಾ ಕ್ರೈಸ್ತರಾಗಿರಿ, (ಆಗ ಮಾತ್ರ) ನೀವು ಸನ್ಮಾರ್ಗ ಪಡೆದವರಾಗುವಿರಿ’’ ಎಂದು ಅವರು ಹೇಳುತ್ತಾರೆ. ಹೇಳಿರಿ; ‘‘ನಿಜವಾಗಿ ಸತ್ಯದಲ್ಲಿ ಏಕಾಗ್ರಚಿತ್ತರಾಗಿದ್ದ ಇಬ್ರಾಹೀಮರ ಮಾರ್ಗವೇ (ಸನ್ಮಾರ್ಗವಾಗಿದೆ). ಅವರಂತೂ ‘ಮುಶ್ರಿಕ್’ (ಬಹುದೇವಾರಾಧಕ) ಆಗಿರಲಿಲ್ಲ.’’

136. ‘‘ಅಲ್ಲಾಹನನ್ನು, ಅವನು ನಮಗೆ ಕಳಿಸಿಕೊಟ್ಟಿರುವ ಸಂದೇಶವನ್ನು ಮತ್ತು ಅವನು ಇಬ್ರಾಹೀಮ್, ಇಸ್ಮಾಯೀಲ್, ಇಸ್ಹಾಕ್, ಯಅ್ಕೂಬ್ ಹಾಗೂ ಅವರ (ಯಅ್ಕೂಬ್‌ರ) ಸಂತತಿಗಳಿಗೆ ಕಳಿಸಿಕೊಟ್ಟಿದ್ದ ಸಂದೇಶವನ್ನು ಮತ್ತು ಮೂಸಾ ಹಾಗೂ ಈಸಾರಿಗೆ ಮತ್ತು ಇತರೆಲ್ಲ ಪ್ರವಾದಿಗಳಿಗೆ ಅವರ ಒಡೆಯನ ಕಡೆಯಿಂದ ಏನನ್ನು ನೀಡಲಾಗಿತ್ತೋ ಅದನ್ನು ನಾವು ನಂಬಿದ್ದೇವೆ. ನಾವು ಅವರ ಪೈಕಿ ಯಾರ ನಡುವೆಯೂ ತಾರತಮ್ಯ ಮಾಡುವುದಿಲ್ಲ ಮತ್ತು ನಾವು ಅವನಿಗೆ ‘ಮುಸ್ಲಿಮ್’ ಆಗಿರುವೆವು (ಶರಣಾಗಿರುವೆವು)’’ಎಂದು ನೀವು ಘೋಷಿಸಿರಿ .

137. ಈ ಸತ್ಯವನ್ನು ನೀವು ನಂಬಿದಂತೆ ಅವರೂ ನಂಬಿದರೆ ಅವರು ಸನ್ಮಾರ್ಗದಲ್ಲಿರುವರು. ಇನ್ನು ಅವರು ತಿರುಗಿ ನಿಂತರೆ ಅವರೇ ಹಠಮಾರಿಗಳು. ನಿಮಗಂತು, ಅವರೆದುರು ಅಲ್ಲಾಹನೇ ಸಾಕು. ಅವನು ಎಲ್ಲವನ್ನೂ ಕೇಳವವನು ಮತ್ತು ಎಲ್ಲವನ್ನೂ ತಿಳಿದವನಾಗಿದ್ದಾನೆ.

138. ‘‘ಅಲ್ಲಾಹನ ಬಣ್ಣ (ಧರ್ಮ)! ಬೇರಾರ ಬಣ್ಣ ತಾನೇ ಅಲ್ಲಾಹನದಕ್ಕಿಂತ ಉತ್ತಮವಾಗಿರಲು ಸಾಧ್ಯ? ನಾವಂತು, ಅವನನ್ನೇ ಪೂಜಿಸುವವರಾಗಿದ್ದೇವೆ’’ (ಎಂದು ನೀವು ಘೋಷಿಸಿರಿ).

139. ಹೇಳಿರಿ; ‘‘ನೀವು ನಮ್ಮೊಂದಿಗೆ ಜಗಳಾಡುತ್ತಿರುವುದು ಅಲ್ಲಾಹನ ವಿಷಯದಲ್ಲೇ? (ಹಾಗಾದರೆ) ಅವನು ನಮ್ಮ ಒಡೆಯನೂ ಹೌದು, ನಿಮ್ಮ ಒಡೆಯನೂ ಹೌದು. ಇನ್ನು ನಮ್ಮ ಕರ್ಮಗಳು ನಮಗೆ, ನಿಮ್ಮ ಕರ್ಮಗಳು ನಿಮಗೆ. ನಾವಂತು, ನಮ್ಮನ್ನು ಅವನಿಗೆ ಅರ್ಪಿಸಿಕೊಂಡಿದ್ದೇವೆ.’’

140. ‘‘ಇಬ್ರಾಹೀಮ್, ಇಸ್ಮಾಈಲ್, ಇಸ್ಹಾಕ್, ಯಅ್ಕೂಬ್ ಮತ್ತು ಅವರ ಸಂತತಿಗಳೆಲ್ಲಾ ಯಹೂದಿಗಳು ಅಥವಾ ಕ್ರೈಸ್ತರಾಗಿದ್ದರೆಂದು ನೀವು ಹೇಳುತ್ತೀರಾ? ಹೇಳಿರಿ; ಹೆಚ್ಚು ತಿಳುವಳಿಕೆ ಇರುವುದು ನಿಮಗೋ ಅಲ್ಲಾಹನಿಗೋ? ತನ್ನ ಬಳಿ ಇರುವ, ಅಲ್ಲಾಹನ ಕಡೆಯಿಂದ ಬಂದ ಪುರಾವೆಯನ್ನು ಬಚ್ಚಿಡುವವನಿಗಿಂತ ದೊಡ್ಡ ಅಕ್ರಮಿ ಯಾರಿದ್ದಾನೆ? ನಿಮ್ಮ ಕೃತ್ಯಗಳ ಕುರಿತು ಅಲ್ಲಾಹನು ಅಜ್ಞನಾಗಿಲ್ಲ.

 

141. ಅದು ಗತಿಸಿ ಹೋದ ಒಂದು ಸಮುದಾಯ. ಅವರು ಸಂಪಾದಿಸಿದ್ದು ಅವರಿಗೆ ಮತ್ತು ನೀವು ಸಂಪಾದಿಸಿದ್ದು ನಿಮಗೆ. ಅವರೇನು ಮಾಡುತ್ತಿದ್ದರೆಂದು ನಿಮ್ಮನ್ನು ಪ್ರಶ್ನಿಸಲಾಗದು.

 

ಕಾಂಡ – 2

142. ಜನರ ಪೈಕಿ ಕೆಲವು ಮೂರ್ಖರು ‘‘ಅವರೇಕೆ(ನಮಾಝ್‌ನಲ್ಲಿ) ತಮ್ಮ ಈ ಹಿಂದಿನ ‘ಕಿಬ್ಲಾ’ದಿಂದ (ದಿಕ್ಕಿನಿಂದ) ಬೇರೆಡೆಗೆ ತಿರುಗಿಕೊಂಡರು?’’ ಎಂದು ಪ್ರಶ್ನಿಸುತ್ತಾರೆ. ಹೇಳಿರಿ; ‘‘ಪೂರ್ವವೂ ಪಶ್ಚಿಮವೂ ಅಲ್ಲಾಹನಿಗೇ ಸೇರಿವೆ. ಅವನು ತಾನಿಚ್ಛಿಸಿದವರಿಗೆ ಸ್ಥಿರವಾದ ಸನ್ಮಾರ್ಗವನ್ನು ತೋರಿಸಿಕೊಡುತ್ತಾನೆ.’’

143. ಈ ರೀತಿ, ಜನರ ಕುರಿತು ನೀವು (ಮುಸ್ಲಿಮರು) ಸಾಕ್ಷಿಯಾಗಬೇಕೆಂದು ಮತ್ತು ದೇವದೂತರು ನಿಮ್ಮ ಕುರಿತು ಸಾಕ್ಷಿಯಾಗಬೇಕೆಂದು, ನಿಮ್ಮನ್ನು ನಾವು ಒಂದು ಮಧ್ಯಮ ಸಮುದಾಯವಾಗಿಸಿದ್ದೇವೆ. ಯಾರು ದೇವದೂತರನ್ನು ಅನುಸರಿಸುತ್ತಾರೆ ಮತ್ತು ಯಾರು ಬೆನ್ನು ತಿರುಗಿಸಿಕೊಳ್ಳುತ್ತಾರೆ ಎಂಬುದನ್ನು ತಿಳಿಯುವುದಕ್ಕಾಗಿಯಷ್ಟೇ ಈ ಹಿಂದೆ ನೀವಿದ್ದ ‘ಕಿಬ್ಲಾ’ವನ್ನು (ದಿಕ್ಕನ್ನು) ನಾವು ನಿಶ್ಚಯಿಸಿಕೊಟ್ಟಿದ್ದೆವು. ಸ್ವತಃ ಅಲ್ಲಾಹನೇ ದಾರಿ ತೋರಿದವರ ಹೊರತು ಇತರರ ಪಾಲಿಗೆ ಅದು ದೊಡ್ಡ ಸಮಸ್ಯೆಯಾಗಿತ್ತು. ಅಲ್ಲಾಹನು ಎಂದೂ ನಿಮ್ಮ ನಂಬಿಕೆಯನ್ನು ವ್ಯರ್ಥಗೊಳಿಸಲು ಬಯಸಿರಲಿಲ್ಲ. ಖಂಡಿತವಾಗಿಯೂ ಅಲ್ಲಾಹನು ಮಾನವರ ಪಾಲಿಗೆ ವಾತ್ಸಲ್ಯಪೂರ್ಣನೂ ಕರುಣಾಮಯಿಯೂ ಆಗಿದ್ದಾನೆ.

144. (ದೂತರೇ,) ನಿಮ್ಮ ಮುಖವು ಪದೇ ಪದೇ ಬಾನಿನೆಡೆಗೆ ಹೊರಳುತ್ತಿರುವುದನ್ನು ನಾವು ನೋಡಿರುವೆವು ಮತ್ತು ಖಂಡಿತ ನಾವು ನಿಮ್ಮನ್ನು ನೀವಿಚ್ಛಿಸುವ ದಿಕ್ಕಿನೆಡೆಗೆ ತಿರುಗಿಸುವೆವು. ಸರಿ, ನೀವಿನ್ನು ನಿಮ್ಮ ಮುಖವನ್ನು ‘ಮಸ್ಜಿದುಲ್‌ಹರಾಮ್’ನೆಡೆಗೆ ತಿರುಗಿಸಿಕೊಳ್ಳಿರಿ. ನೀವೆಲ್ಲ ಎಲ್ಲಿದ್ದರೂ (ನಮಾಝ್‌ನ ವೇಳೆ) ನಿಮ್ಮ ಮುಖಗಳನ್ನು ಅದರೆಡೆಗೆ ತಿರುಗಿಸಿಕೊಳ್ಳಿರಿ. ಇದು, ತಮ್ಮ ಒಡೆಯನ ಕಡೆಯಿಂದ ಬಂದಿರುವ ಸತ್ಯವೆಂಬುದು ಗ್ರಂಥದವರಿಗೆ ಖಂಡಿತ ತಿಳಿದಿದೆ. ಅವರು ಎಸಗುತ್ತಿರುವ ಕೃತ್ಯಗಳ ಬಗ್ಗೆ ಅಲ್ಲಾಹನು ಅಜ್ಞನಾಗಿಲ್ಲ.

145. ನೀವು ಗ್ರಂಥದವರಿಗೆ, ಎಲ್ಲ ಬಗೆಯ ಪುರಾವೆಗಳನ್ನು ಒದಗಿಸಿದರೂ ಅವರು ನಿಮ್ಮ ದಿಕ್ಕನ್ನು ಅನುಸರಿಸಲಾರರು. ಹಾಗೆಯೇ, ನೀವೂ ಅವರ ದಿಕ್ಕನ್ನು ಅನುಸರಿಸಲಾರಿರಿ. ಅವರು (ಯಹೂದಿಗಳು ಮತ್ತು ಕ್ರೈಸ್ತರು) ಪರಸ್ಪರರ ದಿಕ್ಕನ್ನೂ ಅನುಸರಿಸಲಾರರು. ಇನ್ನು ನಿಮ್ಮ ಬಳಿಗೆ ಜ್ಞಾನವು ಬಂದು ಬಿಟ್ಟ ಬಳಿಕವೂ ನೀವು ಆ ಜನರ ಇಚ್ಛೆಗಳನ್ನು ಅನುಸರಿಸಿದರೆ, ನೀವು ಅಕ್ರಮಿಗಳ ಸಾಲಿಗೆ ಸೇರುವಿರಿ.

146. ಯಾರಿಗೆ ನಾವು ಗ್ರಂಥವನ್ನು ನೀಡಿರುವೆವೋ ಅವರು, ತಮ್ಮ ಸ್ವಂತ ಪುತ್ರರನ್ನು ಬಲ್ಲಂತೆ ಅದನ್ನು (ಸತ್ಯವನ್ನು) ಬಲ್ಲರು. ಅವರಲ್ಲೊಂದು ಗುಂಪು, ತಿಳಿದೂ ತಿಳಿದೂ ಸತ್ಯವನ್ನು ಬಚ್ಚಿಡುತ್ತಿದೆ.

147. ಇದು ನಿಮ್ಮ ಒಡೆಯನ ಕಡೆಯಿಂದಲೇ ಬಂದಿರುವ ಸತ್ಯ. ನೀವಿನ್ನು ಸಂಶಯಿಸುವವರ ಸಾಲಿಗೆ ಸೇರಬೇಡಿ.

148. ಪ್ರತಿಯೊಂದು ಸಮುದಾಯಕ್ಕೆ, ಅವರು (ಪ್ರಾರ್ಥನೆಗಾಗಿ) ತಿರುಗುವ ಒಂದು ದಿಕ್ಕಿದೆ. ನೀವು ಸತ್ಕಾರ್ಯಗಳಲ್ಲಿ ಪರಸ್ಪರ ಸ್ಪರ್ಧಿಸಿರಿ, ನೀವು ಎಲ್ಲೇ ಇದ್ದರೂ, ಅಲ್ಲಾಹನು ನಿಮ್ಮೆಲ್ಲರನ್ನೂ (ವಿಚಾರಣೆಗಾಗಿ) ಒಟ್ಟುಗೂಡಿಸುವನು. ಅಲ್ಲಾಹನು ಖಂಡಿತ ಎಲ್ಲವನ್ನೂ ಮಾಡಬಲ್ಲವನಾಗಿದ್ದಾನೆ.

149. (ದೂತರೇ,) ನೀವು ಎಲ್ಲಿಂದ ಹೊರಟರೂ (ನಮಾಝ್‌ನ ವೇಳೆ) ನಿಮ್ಮ ಮುಖವನ್ನು ‘ಮಸ್ಜಿದುಲ್ ಹರಾಮ್’ನೆಡೆಗೆ ತಿರುಗಿಸಿಕೊಳ್ಳಿರಿ. ಇದು ನಿಮ್ಮ ಒಡೆಯನ ಕಡೆಯಿಂದ (ಬಂದಿರುವ) ಸತ್ಯ, ನಿಮ್ಮೆಲ್ಲರ ಕರ್ಮಗಳ ಕುರಿತು ಅಲ್ಲಾಹನು ಅಜ್ಞನಲ್ಲ.

150. ನೀವು ಎಲ್ಲಿಂದ ಹೊರಟರೂ (ನಮಾಝ್‌ನ ವೇಳೆ) ನಿಮ್ಮ ಮುಖವನ್ನು ‘ಮಸ್ಜಿದುಲ್ ಹರಾಮ್’ನೆಡೆಗೆ ತಿರುಗಿಸಿಕೊಳ್ಳಿರಿ ಮತ್ತು ನೀವೂ (ವಿಶ್ವಾಸಿಗಳೂ) ಎಲ್ಲೇ ಇದ್ದರೂ, ನಿಮ್ಮ ಮುಖವನ್ನು ಆ ದಿಕ್ಕಿಗೆ ತಿರುಗಿಸಿಕೊಳ್ಳಿರಿ. ಜನರ ಪೈಕಿ ಅಕ್ರಮಿಗಳ ಹೊರತು ಬೇರಾರ ಬಳಿಯೂ ನಿಮ್ಮ ವಿರುದ್ಧ ಯಾವುದೇ ವಾದ ಉಳಿಯಬಾರದೆಂದು (ಈ ಆದೇಶ ನೀಡಲಾಗಿದೆ). ನಿಮ್ಮ ಪಾಲಿಗೆ ನಾನು ನನ್ನ ಅನುಗ್ರಹಗಳನ್ನು ಪೂರ್ತಿಗೊಳಿಸುವಂತಾಗಲು ಮತ್ತು ನೀವು ಸನ್ಮಾರ್ಗ ಪಡೆದವರಾಗಲು – ನೀವು ಅವರಿಗೆ ಅಂಜಬೇಡಿ, ನನಗೆ ಅಂಜಿರಿ.

151. ಈ ರೀತಿ ನಾವು ನಿಮ್ಮ ನಡುವೆ ನಿಮ್ಮಿಂದಲೇ ಒಬ್ಬನನ್ನು ‘ರಸೂಲ್’ ಆಗಿ (ದೂತನಾಗಿ) ನೇಮಿಸಿರುವೆವು. ಅವರು ನಿಮಗೆ ನಮ್ಮ ವಚನಗಳನ್ನು ಓದಿ ಕೇಳಿಸುತ್ತಾರೆ. ನಿಮ್ಮನ್ನು ಸಂಸ್ಕರಿಸುತ್ತಾರೆ ಮತ್ತು ನಿಮಗೆ ಗ್ರಂಥವನ್ನು ಹಾಗೂ ಯುಕ್ತಿಯನ್ನು ಕಲಿಸುತ್ತಾರೆ ಮತ್ತು ಈ ಹಿಂದೆ ನಿಮಗೆ ತಿಳಿಯದೆ ಇದ್ದ ವಿಚಾರಗಳನ್ನು ನಿಮಗೆ ಕಲಿಸಿಕೊಡುತ್ತಾರೆ.

152. ನೀವು ನನ್ನನ್ನು ಸ್ಮರಿಸಿರಿ, ನಾನು ನಿಮ್ಮನ್ನು ಸ್ಮರಿಸುವೆನು. ನೀವು ನನಗೆ ಕೃತಜ್ಞತೆ ತೋರಿರಿ, ಮತ್ತು ನನಗೆ ಕೃತಘ್ನತೆ ತೋರಬೇಡಿ.

153. ವಿಶ್ವಾಸಿಗಳೇ, ಸಹನೆಯಿಂದ ಮತ್ತು ನಮಾಝ್‌ನಿಂದ ನೆರವನ್ನು ಪಡೆಯಿರಿ. ಖಂಡಿತ, ಅಲ್ಲಾಹನು ಸಹನಶೀಲರ ಜೊತೆಗಿರುತ್ತಾನೆ.

154. ಅಲ್ಲಾಹನ ಮಾರ್ಗದಲ್ಲಿ ಹತರಾದವರನ್ನು ಸತ್ತವರೆನ್ನಬೇಡಿ. ನಿಜವಾಗಿ ಅವರು ಜೀವಂತವಿದ್ದಾರೆ. ಆದರೆ ನಿಮಗೆ ಅದರ ಅರಿವಿಲ್ಲ.

155. ಭಯ ಹಾಗೂ ಹಸಿವುಗಳ ಮೂಲಕ ಹಾಗೂ ಸೊತ್ತುಗಳ, ಜೀವಗಳ ಮತ್ತು ಬೆಳೆಗಳ ನಷ್ಟದ ಮೂಲಕ ನಾವು ನಿಮ್ಮನ್ನು ಖಂಡಿತ ಪರೀಕ್ಷಿಸಲಿದ್ದೇವೆ. ಸಹನಶೀಲರಿಗೆ ಶುಭವಾರ್ತೆ ನೀಡಿರಿ.

156. ಅವರು ತಮಗೇನಾದರೂ ವಿಪತ್ತು ಎದುರಾದಾಗ ‘‘ನಾವು ಅಲ್ಲಾಹನಿಗೆ ಸೇರಿದವರು ಮತ್ತು ನಾವು ಅವನೆಡೆಗೇ ಮರಳಲಿಕ್ಕಿರುವವರು’’ ಎನ್ನುತ್ತಾರೆ.

157. ಅವರೇ, ತಮ್ಮ ಒಡೆಯನ ಅನುಗ್ರಹ ಮತ್ತು ಕರುಣೆಗೆ ಪಾತ್ರರಾದವರು ಮತ್ತು ಅವರೇ ಸನ್ಮಾರ್ಗ ಪಡೆದವರು.

158. ಖಂಡಿತ, ‘ಸಫಾ’ ಮತ್ತು ‘ಮರ್ವಃ’ಗಳು ಅಲ್ಲಾಹನ ಸಂಕೇತಗಳ ಸಾಲಿಗೆ ಸೇರಿವೆ. ಅಲ್ಲಾಹನ ಭವನದ ‘ಹಜ್ಜ್’ (ಕಡ್ಡಾಯ ಯಾತ್ರೆ) ಅಥವಾ ‘ಉಮ್ರಃ’ (ಐಚ್ಛಿಕ ಯಾತ್ರೆ) ನಡೆಸುವವನು ಅವೆರಡರ ನಡುವೆ ನಡೆಯುವುದರಲ್ಲಿ ತಪ್ಪಿಲ್ಲ. ಸ್ವಇಚ್ಛೆಯಿಂದ ಒಳಿತನ್ನು ಮಾಡ ಹೊರಟವನು (ತಿಳಿದಿರಲಿ); ಅಲ್ಲಾಹನು (ಒಳಿತಿನ) ಪ್ರಶಂಸಕನೂ ಜ್ಞಾನಿಯೂ ಆಗಿದ್ದಾನೆ.

159. ನಾವು ಇಳಿಸಿಕೊಟ್ಟಿರುವ ಸ್ಪಷ್ಟ ಸಂದೇಶಗಳನ್ನು ಹಾಗೂ ಮಾರ್ಗದರ್ಶನವನ್ನು- ನಾವು ಮಾನವರಿಗಾಗಿ ಒಂದು ಗ್ರಂಥದಲ್ಲಿ ಸ್ಪಷ್ಟವಾಗಿ ವಿವರಿಸಿದ ಬಳಿಕ (ಅವುಗಳನ್ನು) ಬಚ್ಚಿಡುವವರನ್ನು ಅಲ್ಲಾಹನು ಶಪಿಸುತ್ತಾನೆ ಮತ್ತು ಶಪಿಸುವವರೆಲ್ಲರೂ ಶಪಿಸುತ್ತಾರೆ –

160. – ಪಶ್ಚಾತ್ತಾಪ ಪಟ್ಟು, ತಮ್ಮನ್ನು ಸುಧಾರಿಸಿಕೊಂಡು (ತಾವು ಬಚ್ಚಿಟ್ಟ ಸತ್ಯವನ್ನು) ಸ್ಪಷ್ಟವಾಗಿ ವಿವರಿಸಿದವರ ಹೊರತು. ನಾನು ಅವರ ಪಶ್ಚಾತ್ತಾಪವನ್ನು ಸ್ವೀಕರಿಸುತ್ತೇನೆ. ನಾನಂತು ಪಶ್ಚಾತ್ತಾಪವನ್ನು ಸ್ವೀಕರಿಸುವವನು ಮತ್ತು ಕರುಣಾಳುವೇ ಆಗಿದ್ದೇನೆ.

161. ಸತ್ಯವನ್ನು ಧಿಕ್ಕರಿಸಿದವರು ಮತ್ತು ಸತ್ಯವನ್ನು ಧಿಕ್ಕರಿಸಿದ್ದ ಸ್ಥಿತಿಯಲ್ಲೇ ಮರಣಗೊಂಡವರ ಮೇಲೆ ಅಲ್ಲಾಹನ, ಅವನ ಮಲಕ್‌ಗಳ ಮತ್ತು ಸಕಲ ಮಾನವರ ಶಾಪವಿದೆ.

162. ಅವರು ಶಾಶ್ವತವಾಗಿ ಆ ಸ್ಥಿತಿಯಲ್ಲೇ ಇರುವರು. ಅವರ ಶಿಕ್ಷೆಯನ್ನು ಕಡಿಮೆಗೊಳಿಸಲಾಗದು ಮತ್ತು ಅವರಿಗೆ ಮರು ಅವಕಾಶವನ್ನೂ ನೀಡಲಾಗದು.

163. ನಿಮ್ಮ ದೇವರು ಏಕಮಾತ್ರನು. ಅವನ ಹೊರತು ಬೇರಾರೂ ದೇವರಿಲ್ಲ. ಅವನು ಅಪಾರ ದಯಾಳುವೂ ಕರುಣಾಮಯಿಯೂ ಆಗಿದ್ದಾನೆ.

 

164. ಖಂಡಿತವಾಗಿಯೂ ಆಕಾಶಗಳ ಹಾಗೂ ಭೂಮಿಯ ಸೃಷ್ಟಿಯಲ್ಲಿ ಮತ್ತು ಇರುಳು ಹಾಗೂ ಹಗಲಿನ ಪರಿವರ್ತನೆಯಲ್ಲಿ ಮತ್ತು ಜನರಿಗೆ ಲಾಭದಾಯಕವಾದ ವಸ್ತುಗಳನ್ನು ಹೊತ್ತು ಕಡಲಲ್ಲಿ ತೇಲುತ್ತಾ ಸಾಗುವ ಹಡಗುಗಳಲ್ಲಿ ಮತ್ತು ಅಲ್ಲಾಹನು ಆಕಾಶದಿಂದ ಇಳಿಸುವ ನೀರಿನಲ್ಲಿ ಮತ್ತು ಆ ಮೂಲಕ ಅವನು ಭೂಮಿಯನ್ನು ಅದರ ಮರಣಾ ನಂತರ ಮತ್ತೆ ಜೀವಂತಗೊಳಿಸುವುದರಲ್ಲಿ ಹಾಗೂ ಅದರಲ್ಲಿ ಎಲ್ಲ ಜೀವಿಗಳನ್ನು ಹರಡುವುದರಲ್ಲಿ ಹಾಗೂ ಗಾಳಿಯ ಚಲನೆಯಲ್ಲಿ ಮತ್ತು ಆಕಾಶ ಹಾಗೂ ಭೂಮಿಯ ನಡುವೆ ವಿಧೇಯ ಸ್ಥಿತಿಯಲ್ಲಿರುವ ಮೋಡಗಳಲ್ಲಿ – ಬುದ್ಧಿಯುಳ್ಳವರಿಗಾಗಿ ಅನೇಕ ನಿದರ್ಶನಗಳಿವೆ.

165. (ಇಷ್ಟಾಗಿಯೂ) ಅನ್ಯರನ್ನು ಅಲ್ಲಾಹನಿಗೆ ಸಾಟಿಗಳಾಗಿ ಪರಿಗಣಿಸುವ ಕೆಲವರಿದ್ದಾರೆ. ಅವರು ಅಲ್ಲಾಹನನ್ನು ಪ್ರೀತಿಸಬೇಕಾದ ರೀತಿಯಲ್ಲಿ ಅವರನ್ನು (ಆ ಅನ್ಯರನ್ನು) ಪ್ರೀತಿಸುತ್ತಾರೆ. ಆದರೆ ವಿಶ್ವಾಸಿಗಳು ಮಾತ್ರ ಅಲ್ಲಾಹನನ್ನೇ ಅತ್ಯಧಿಕ ಪ್ರೀತಿಸುತ್ತಾರೆ. ಆ ಅಕ್ರಮಿಗಳು, ತಾವು (ನಾಳೆ) ಕಾಣಲಿರುವ ಶಿಕ್ಷೆಯನ್ನು ಇಂದೇ ಕಂಡಿದ್ದರೆ, ಶಕ್ತಿಯೆಲ್ಲವೂ ಅಲ್ಲಾಹನಿಗೇ ಸೇರಿದೆ ಮತ್ತು ಅಲ್ಲಾಹನು ಅತ್ಯಂತ ಕಠಿಣ ಶಿಕ್ಷೆ ನೀಡುವವನಾಗಿದ್ದಾನೆ (ಎಂಬುದನ್ನು ಮನಗಾಣುತ್ತಿದ್ದರು).

166. (ಇಲ್ಲಿ ಮಿಥ್ಯದ) ಮುಂದಾಳುಗಳಾಗಿದ್ದವರು, ಅಂದು (ಪರಲೋಕದಲ್ಲಿ) ತಮ್ಮ ಅನುಯಾಯಿಗಳೊಂದಿಗೆ (ತಮಗಿದ್ದ) ಸಂಬಂಧವನ್ನು ನಿರಾಕರಿಸುವರು. (ಆದರೂ) ಅವರು ಶಿಕ್ಷೆಯನ್ನು ಕಂಡೇ ತೀರುವರು ಮತ್ತು ಸಕಲ ಸಾಧನಗಳು ಅವರಿಂದ ಕಳೆದು ಹೋಗುವವು.

167. ಅವರ ಅನುಯಾಯಿಗಳಾಗಿದ್ದವರು ‘‘ನಮಗೆ ಇನ್ನೊಂದು ಅವಕಾಶ ಸಿಕ್ಕಿ ಬಿಟ್ಟರೆ, ಅವರೀಗ ನಮ್ಮಿಂದಿಗಿನ ತಮ್ಮ ಸಂಬಂಧವನ್ನು ನಿರಾಕರಿಸಿದಂತೆ, ನಾವೂ ಅವರಿಂದ ಸಂಬಂಧ ಕಡಿದುಕೊಳ್ಳುವೆವು’’ ಎನ್ನುವರು. ಈ ರೀತಿ ಅಲ್ಲಾಹನು, ಅವರಿಗೆ ಶೋಕವಾಗುವಂತೆ ಅವರ ಕರ್ಮಗಳನ್ನೆಲ್ಲಾ ಅವರಿಗೆ ತೋರಿಸಿ ಕೊಡುವನು. ನರಕಾಗ್ನಿಯಿಂದ ಹೊರಬರಲು ಮಾತ್ರ ಅವರಿಗೆಂದೂ ಸಾಧ್ಯವಾಗದು.

168. ಮಾನವರೇ, ಭೂಮಿಯಲ್ಲಿರುವ ಸಮ್ಮತವಾಗಿರುವ, ಶುದ್ಧ ವಸ್ತುಗಳನ್ನು ತಿನ್ನಿರಿ ಮತ್ತು ನೀವು ಶೈತಾನನ ಹೆಜ್ಜೆ ಗುರುತುಗಳನ್ನು ಅನುಸರಿಸಬೇಡಿ. ಅವನು ನಿಮ್ಮ ಸುಸ್ಪಷ್ಟ ಶತ್ರುವಾಗಿದ್ದಾನೆ.

169. ದುಷ್ಟ ಹಾಗೂ ಅಶ್ಲೀಲ ಕೃತ್ಯಗಳನ್ನು ಎಸಗುವಂತೆ ಮತ್ತು ನಿಮಗೆ ತಿಳಿದಿಲ್ಲದ ವಿಷಯಗಳನ್ನು ಅಲ್ಲಾಹನ ಮೇಲೆ ಆರೋಪಿಸುವಂತೆ ಅವನು ನಿಮ್ಮನ್ನು ಪ್ರೇರೇಪಿಸುತ್ತಾನೆ.

170. ‘‘ಅಲ್ಲಾಹನು ಕಳುಹಿಸಿರುವ ಸಂದೇಶವನ್ನು ಅನುಸರಿಸಿರಿ’’ ಎಂದು ಅವರೊಡನೆ ಹೇಳಿದಾಗ ಅವರು ‘‘ನಾವು ನಮ್ಮ ತಾತ ಮುತ್ತಾತಂದಿರನ್ನು ಯಾವ ದಾರಿಯಲ್ಲಿ ಕಂಡಿದ್ದೆವೋ ಆ ದಾರಿಯನ್ನು ಮಾತ್ರ ಅನುಸರಿಸುವೆವು’’ ಎನ್ನುತ್ತಾರೆ. ಅವರ ತಾತ ಮುತ್ತಾತಂದಿರು ಸ್ವಲ್ಪವೂ ಬುದ್ಧಿ ಇಲ್ಲದವರಾಗಿದ್ದರೂ ಮತ್ತು ದಾರಿಗೆಟ್ಟವರಾಗಿದ್ದರೂ (ಅವರು ಅವರನ್ನೇ ಅನುಸರಿಸುವರೇ)?

171. ಧಿಕ್ಕಾರಿಗಳ ಸ್ಥಿತಿಯು, ಕೂಗಾಟ ಮತ್ತು ಕಿರುಚಾಟದ ಹೊರತು ಬೇರೇನನ್ನೂ ಕೇಳಿಸಿಕೊಳ್ಳದ್ದನ್ನು (ಪ್ರಾಣಿಯನ್ನು) ಕೂಗಿ ಕರೆಯುವಾತನಂತಿದೆ. ಅವರು ಕಿವುಡರು, ಮೂಗರು ಮತ್ತು ಕುರುಡರು. ಅವರಿಗೆ ಏನೂ ಅರ್ಥವಾಗುವುದಿಲ್ಲ.

172. ವಿಶ್ವಾಸಿಗಳೇ, ನೀವು ನಿಜಕ್ಕೂ ಅವನನ್ನೇ (ಅಲ್ಲಾಹನನ್ನೇ) ಆರಾಧಿಸುವವರಾಗಿದ್ದರೆ, ನಾವು ನಿಮಗೆ ನೀಡಿರುವ ಶುದ್ಧ ವಸ್ತುಗಳನ್ನು ತಿನ್ನಿರಿ ಮತ್ತು ಅಲ್ಲಾಹನಿಗೆ ಕೃತಜ್ಞತೆ ಸಲ್ಲಿಸುತ್ತಲಿರಿ.

173. ಶವ, ರಕ್ತ ಹಾಗೂ ಹಂದಿಯ ಮಾಂಸವನ್ನು ಮತ್ತು ಅಲ್ಲಾಹನ ಹೊರತು ಅನ್ಯರ ಹೆಸರಲ್ಲಿ ಕಡಿಯಲಾದವುಗಳನ್ನು (ಅಂತಹ ಪ್ರಾಣಿಗಳನ್ನು) ನಿಮ್ಮ ಪಾಲಿಗೆ ನಿಷೇಧಿಸಲಾಗಿದೆ. ಇನ್ನು ಒಬ್ಬ ವ್ಯಕ್ತಿ ತೀರಾ ಅಸಹಾಯಕ ಸ್ಥಿತಿಯಲ್ಲಿ, ವಿದ್ರೋಹದ ಇರಾದೆಯಿಲ್ಲದೆ, ಹಾಗೂ ಮಿತಿಮೀರದೆ (ಅದರಿಂದೇನಾದರೂ ತಿಂದು ಬಿಟ್ಟರೆ) ಅವನ ಮೇಲೆ ಪಾಪವೇನಿಲ್ಲ. ಅಲ್ಲಾಹನು ಖಂಡಿತ ಕ್ಷಮಿಸುವವನು ಮತ್ತು ಕರುಣಾಳುವಾಗಿದ್ದಾನೆ.

174. ಅಲ್ಲಾಹನು ಕಳಿಸಿಕೊಟ್ಟಿರುವ ಗ್ರಂಥದಲ್ಲಿನ ಆದೇಶಗಳನ್ನು ಬಚ್ಚಿಡುವವರು ಮತ್ತು ಸಣ್ಣ ಲಾಭಕ್ಕೆ ಅವುಗಳನ್ನು ಮಾರುವವರು ತಮ್ಮ ಹೊಟ್ಟೆಗಳಿಗೆ ಬೆಂಕಿಯನ್ನಷ್ಟೇ ತುಂಬುತ್ತಿದ್ದಾರೆ. ಪುನರುತ್ಥಾನ ದಿನ ಅಲ್ಲಾಹನು ಅವರೊಡನೆ ಮಾತನಾಡಲಾರನು ಮತ್ತು ಅವರನ್ನು ಪರಿಶುದ್ಧಗೊಳಿಸಲಾರನು. ಅವರಿಗೆ ಯಾತನಾಮಯ ಶಿಕ್ಷೆ ಕಾದಿದೆ.

175. ಅವರೇ ನಿಜವಾಗಿ ಸನ್ಮಾರ್ಗದ ಬದಲು ದಾರಿಗೇಡಿತನವನ್ನು ಮತ್ತು ಕ್ಷಮೆಯ ಬದಲು ಶಿಕ್ಷೆಯನ್ನು ಖರೀದಿಸಿಕೊಂಡವರು. ನರಕಾಗ್ನಿಯನ್ನೆದುರಿಸಲು ಅವರಿಗೆ ಅದೆಷ್ಟು ಹಠ!

176. ಇದಕ್ಕೆ ಕಾರಣವಿಷ್ಟೇ; ಅಲ್ಲಾಹನಂತು ಸತ್ಯದೊಂದಿಗೇ ಗ್ರಂಥವನ್ನು ಕಳಿಸಿದ್ದನು. ಆದರೆ ಆ ಬಳಿಕ ಆ ಗ್ರಂಥದ ವಿಷಯದಲ್ಲಿ ಭಿನ್ನತೆ ತಾಳಿದವರು, ತಮ್ಮ ಜಗಳಗಳ ಭರದಲ್ಲಿ (ಸತ್ಯದಿಂದ) ಬಹಳ ದೂರ ಸಾಗಿಬಿಟ್ಟಿದ್ದಾರೆ.

177. ಧಾರ್ಮಿಕತೆಯು, ನೀವು (ಆರಾಧನೆಗಾಗಿ) ನಿಮ್ಮ ಮುಖಗಳನ್ನು ಪೂರ್ವದೆಡೆಗೆ ತಿರುಗಿಸುವಿರೋ ಪಶ್ಚಿಮದೆಡೆಗೆ ತಿರುಗಿಸುವಿರೋ ಎಂಬುದರಲ್ಲಿಲ್ಲ. ನಿಜವಾಗಿ ಒಬ್ಬ ವ್ಯಕ್ತಿ ಅಲ್ಲಾಹನಲ್ಲಿ, ಪರಲೋಕದಲ್ಲಿ, ಮಲಕ್‌ಗಳಲ್ಲಿ, ಗ್ರಂಥದಲ್ಲಿ ಮತ್ತು ಪ್ರವಾದಿಗಳಲ್ಲಿ ನಂಬಿಕೆ ಇಟ್ಟು, ಅವನ ಪ್ರೀತಿಯನ್ನು ಸಂಪಾದಿಸಲಿಕ್ಕಾಗಿ ತನ್ನ ಸಂಪತ್ತನ್ನು ಬಂಧುಗಳು, ಅನಾಥರು, ಬಡವರು, ಪ್ರಯಾಣಿಕರು ಮತ್ತು ಯಾಚಕರಿಗಾಗಿ ಹಾಗೂ ದಾಸ್ಯದಲ್ಲಿರುವವರ ವಿಮೋಚನೆಗಾಗಿ ಖರ್ಚು ಮಾಡುತ್ತಾ, ನಮಾಝನ್ನು ಪಾಲಿಸುತ್ತಾ, ಝಕಾತ್ ಅನ್ನು ಪಾವತಿಸುತ್ತಾ ಇರುವುದು ಮತ್ತು ಕರಾರು ಮಾಡಿದ ಮೇಲೆ ತಮ್ಮ ಕರಾರಿನ ಪಾಲಕರಾಗಿರುವುದು ಹಾಗೂ ಸಂಕಷ್ಟದಲ್ಲ್ಲೂ ಕಾಠಿಣ್ಯದಲ್ಲೂ ಹೋರಾಟದ ವೇಳೆಯೂ ಸಹನಶೀಲರಾಗಿರುವುದೇ ನಿಜವಾದ ಧಾರ್ಮಿಕತೆಯಾಗಿದೆ. ಅಂಥವರೇ ನಿಜವಾದ ಸತ್ಯವಂತರು ಮತ್ತು ಅಂಥವರೇ ನಿಜವಾದ ದೇವಭಕ್ತರು.

178. ವಿಶ್ವಾಸಿಗಳೇ, ಕೊಲೆಯ ಪ್ರಕರಣಗಳಲ್ಲಿ ನಿಮಗೆ ‘ಕಿಸಾಸ್’ (ಪ್ರತೀಕಾರದ) ನಿಯಮವನ್ನು ಕಡ್ಡಾಯಗೊಳಿಸಲಾಗಿದೆ. ಸ್ವತಂತ್ರನ ಬದಲಿಗೆ ಸ್ವತಂತ್ರ, ಗುಲಾಮನ ಬದಲಿಗೆ ಗುಲಾಮ ಮತ್ತು ಸ್ತ್ರೀಯ ಬದಲಿಗೆ ಸ್ತ್ರೀ. ಇನ್ನು ಆತನಿಗೆ (ಕೊಲೆಗಾರನಿಗೆ) ಅವನ (ಕೊಲೆಯಾದವನ) ಸಹೋದರನು ಏನಾದರೂ ರಿಯಾಯ್ತಿ ತೋರಲು ಬಯಸಿದರೆ, ಉತ್ತಮ ರೀತಿಯಲ್ಲಿ (ನಿಯಮ ಪ್ರಕಾರ) ಪ್ರಕರಣವು ಇತ್ಯರ್ಥಗೊಳ್ಳಬೇಕು ಮತ್ತು ಕೊಲೆಗಾರನು ಅವನಿಗೆ (ಕೊಲೆಯಾದವನ ಬಂಧುವಿಗೆ) ಉದಾರ ರೀತಿಯಲ್ಲಿ ಪರಿಹಾರ ಧನವನ್ನು ಪಾವತಿಸಬೇಕು. ಇದು ನಿಮ್ಮ ಒಡೆಯನ ಕಡೆಯಿಂದ ನೀಡಲಾಗುತ್ತಿರುವ ರಿಯಾಯ್ತಿ ಮತ್ತು ಅನುಗ್ರಹವಾಗಿದೆ. ಇಷ್ಟಾದ ಬಳಿಕವೂ ಅತಿರೇಕವೆಸಗುವವನಿಗೆ ಯಾತನಾಮಯ ಶಿಕ್ಷೆಯಿದೆ.

179. ಬುದ್ಧಿವಂತರೇ, ಈ ‘ಕಿಸಾಸ್’ ನಿಯಮದಲ್ಲೇ ನಿಮಗೆ ಜೀವನವಿದೆ – ನೀವು ಧರ್ಮನಿಷ್ಠರಾಗಿರಬೇಕೆಂದು (ಇದನ್ನು ವಿಧಿಸಲಾಗಿದೆ).

180. ನಿಮ್ಮಲ್ಲೊಬ್ಬನು ಮರಣವನ್ನು ಸಮೀಪಿಸಿದ್ದು, ಸಂಪತ್ತನ್ನು ಬಿಟ್ಟು ಹೋಗುತ್ತಿದ್ದರೆ, ಅವನು ತನ್ನ ತಂದೆ ತಾಯಿ ಮತ್ತು ಬಂಧುಗಳ ಪರವಾಗಿ ನಿಯಮಾನುಸಾರ ‘ವಸಿಯ್ಯತ್’ (ಉಯಿಲು) ಮಾಡಬೇಕೆಂಬುದನ್ನು ನಿಮಗೆ ಕಡ್ಡಾಯಗೊಳಿಸಲಾಗಿದೆ. ಇದು ಧರ್ಮ ನಿಷ್ಠರ ಮೇಲಿರುವ ಹೊಣೆ.

181. ಯಾರಾದರೂ ಅದನ್ನು (ವಸಿಯ್ಯತ್ ಅನ್ನು) ಕೇಳಿಸಿಕೊಂಡ ಬಳಿಕ ಅದನ್ನು ತಿರುಚಿದರೆ, ಅದರ ಪಾಪದ ಹೊರೆಯು, ಆ ರೀತಿ ತಿರುಚುವವರ ಮೇಲೆಯೇ ಇರುವುದು. ಅಲ್ಲಾಹನಂತು ಎಲ್ಲವನ್ನೂ ಕೇಳುವವನು ಮತ್ತು ಅರಿಯುವವನಾಗಿದ್ದಾನೆ.

182. ಆದರೆ ವಸಿಯ್ಯತ್ ಮಾಡಿದವನು (ತನ್ನ ಉಯಿಲಿನಲ್ಲಿ) ಪಕ್ಷಪಾತ ಅಥವಾ ಪಾಪಕೃತ್ಯ ಮಾಡಿರಬಹುದೆಂಬ ಭಯವುಳ್ಳವನು, ಅವರ (ಹಕ್ಕುದಾರರ) ನಡುವೆ ಸಂಧಾನ ಏರ್ಪಡಿಸಿದರೆ, ಅವನ ಮೇಲೆ ಪಾಪವಿಲ್ಲ. ಅಲ್ಲಾಹನು ಖಂಡಿತ ಕ್ಷಮಿಸುವವನು ಮತ್ತು ಕರುಣೆಯುಳ್ಳವನಾಗಿದ್ದಾನೆ.

183. ವಿಶ್ವಾಸಿಗಳೇ, ನೀವು ಧರ್ಮನಿಷ್ಠರಾಗಬೇಕೆಂದು, ನಿಮಗಿಂತ ಹಿಂದಿನವರಿಗೆ ಕಡ್ಡಾಯಗೊಳಿಸಿದಂತೆ ನಿಮಗೂ ಉಪವಾಸಗಳನ್ನು ಕಡ್ಡಾಯಗೊಳಿಸಲಾಗಿದೆ.

184. (ಅವು) ಕೆಲವು ನಿಗದಿತ ದಿನಗಳು. ನಿಮ್ಮ ಪೈಕಿ (ಆ ದಿನಗಳಲ್ಲಿ) ರೋಗಿಯಾಗಿರುವವನು ಅಥವಾ ಪ್ರಯಾಣದಲ್ಲಿರುವವನು, ಬೇರೆ ದಿನಗಳಲ್ಲಿ ಎಣಿಕೆ ಪೂರ್ತಿಗೊಳಿಸಲಿ ಮತ್ತು ತುಂಬಾ ಕಷ್ಟ ಪಟ್ಟು ಅದನ್ನು ಆಚರಿಸಬಲ್ಲವರು (ಉಪವಾಸ ಆಚರಿಸದಿದ್ದರೆ) ಪರಿಹಾರವಾಗಿ ಒಬ್ಬ ಬಡವನಿಗೆ ಊಟ ನೀಡಬೇಕು. ಯಾರಾದರೂ ತನ್ನಿಚ್ಛೆಯಿಂದ (ಇನ್ನಷ್ಟು) ದಾನ ಮಾಡಿದರೆ ಅದು ಅವನ ಪಾಲಿಗೆ ಹಿತವಾಗಿರುವುದು. ಇನ್ನು ನೀವು ತಿಳಿದವರಾಗಿದ್ದರೆ ಉಪವಾಸ ಆಚರಿಸುವುದೇ ನಿಮ್ಮ ಪಾಲಿಗೆ ಒಳ್ಳೆಯದು.

185. ರಮಝಾನ್ ತಿಂಗಳಲ್ಲೇ ಕುರ್‌ಆನ್‌ಅನ್ನು ಇಳಿಸಿಕೊಡಲಾಯಿತು. ಅದು ಮಾನವರಿಗೆಲ್ಲ ಮಾರ್ಗದರ್ಶಿಯಾಗಿದೆ. (ಅದರಲ್ಲಿ) ಸನ್ಮಾರ್ಗದ ಸ್ಪಷ್ಟ ವಿವರಗಳಿಗೆ ಮತ್ತು ಅದು (ಸತ್ಯ-ಮಿಥ್ಯಗಳನ್ನು ಪ್ರತ್ಯೇಕಿಸುವ) ಒರೆಗಲ್ಲಾಗಿದೆ. ನಿಮ್ಮಲ್ಲಿ ಈ ತಿಂಗಳನ್ನು ಕಂಡವನು ಉಪವಾಸ ಆಚರಿಸಬೇಕು. (ಈ ತಿಂಗಳಲ್ಲಿ) ರೋಗಿಯಾಗಿದ್ದವನು ಅಥವಾ ಪ್ರಯಾಣದಲ್ಲಿದ್ದವನು ಇತರ ದಿನಗಳಲ್ಲಿ ಎಣಿಕೆ ಪೂರ್ತಿಗೊಳಿಸಬೇಕು. ಅಲ್ಲಾಹನು ನಿಮಗಾಗಿ (ಧರ್ಮವನ್ನು) ಸರಳಗೊಳಿಸಬಯಸುತ್ತಾನೆ. ಅವನು ನಿಮ್ಮನ್ನು ಇಕ್ಕಟ್ಟಿಗೆ ಗುರಿಪಡಿಸಬಯಸುವುದಿಲ್ಲ. ನೀವು (ಉಪವಾಸಗಳ) ಸಂಖ್ಯೆಯನ್ನು ಪೂರ್ತಿಗೊಳಿಸಿ, ಅಲ್ಲಾಹನು ನಿಮಗೆ ಒದಗಿಸಿದ ಮಾರ್ಗದರ್ಶನಕ್ಕಾಗಿ ಅವನ ಮಹಿಮೆಯನ್ನು ಕೊಂಡಾಡಬೇಕು ಮತ್ತು ನೀವು ಅವನಿಗೆ ಕೃತಜ್ಞತೆ ಸಲ್ಲಿಸಬೇಕೆಂದು (ಇದನ್ನು ವಿಧಿಸಲಾಗಿದೆ).

186. (ದೂತರೇ,) ನನ್ನ (ಅಲ್ಲಾಹನ) ದಾಸರು ನನ್ನ ಕುರಿತು ನಿಮ್ಮನ್ನು ವಿಚಾರಿಸಿದಾಗ (ಅವರಿಗೆ ತಿಳಿಸಿರಿ); ನಾನು ಅವರ ಹತ್ತಿರವೇ ಇದ್ದೇನೆ ಮತ್ತು ಕೂಗುವಾತನು ನನ್ನನ್ನು ಕೂಗಿದಾಗ ನಾನು ಅದಕ್ಕೆ ಉತ್ತರ ನೀಡುತ್ತೇನೆ. ಅವರಿನ್ನು ನನ್ನ ಕರೆಗೆ ಉತ್ತರ ನೀಡಲಿ ಮತ್ತು ನನ್ನಲ್ಲಿ ನಂಬಿಕೆ ಇಡಲಿ – ಅವರು ಸರಿದಾರಿಯನ್ನು ಪಡೆದವರಾಗಬಹುದು.

 187. ಉಪವಾಸದ ದಿನಗಳಲ್ಲಿ ರಾತ್ರಿ ಹೊತ್ತು ನೀವು ನಿಮ್ಮ ಪತ್ನಿಯರ ಬಳಿ ಹೋಗುವುದನ್ನು ಸಮ್ಮತಿಸಲಾಗಿದೆ. ಅವರು ನಿಮಗೆ ಉಡುಗೆಯಾಗಿರುವರು ಮತ್ತು ನೀವು ಅವರಿಗೆ ಉಡುಗೆಯಾಗಿರುವಿರಿ. ನೀವು ಸ್ವತಃ ನಿಮ್ಮನ್ನು ವಂಚಿಸುತ್ತಿದ್ದ ವಿಷಯವನ್ನು ಅಲ್ಲಾಹನು ಅರಿತಿರುವನು ಮತ್ತು ನಿಮ್ಮ ಪಶ್ಚಾತ್ತಾಪವನ್ನು ಮನ್ನಿಸಿ ಅವನು ನಿಮ್ಮನ್ನು ಕ್ಷಮಿಸಿರುವನು. ಇನ್ನು ನೀವು ಅವರ ಜೊತೆ ಲೈಂಗಿಕ ಸಂಪರ್ಕ ಬೆಳೆಸಿರಿ ಹಾಗೂ ಅಲ್ಲಾಹನು ನಿಮಗಾಗಿ ವಿಧಿಸಿರುವ ಸುಖವನ್ನು ಅರಸಿರಿ ಮತ್ತು ಮುಂಜಾವಿನಲ್ಲಿ ನಿಮಗೆ ಕಪ್ಪು ನೂಲಿಗೆದುರಾಗಿ ಬಿಳಿ ನೂಲನ್ನು ಗುರುತಿಸಲು ಸಾಧ್ಯವಾಗುವ ತನಕ ನೀವು ತಿನ್ನಿರಿ ಮತ್ತು ಕುಡಿಯಿರಿ. ಬಳಿಕ ರಾತ್ರಿಯತನಕ ಉಪವಾಸ ಪೂರ್ತಿಗೊಳಿಸಿರಿ ಮತ್ತು ನೀವು ಇಅ್ತಿಕಾಫ್’ನಲ್ಲಿರುವಾಗ, ಅವರ ಜೊತೆ ಲೈಂಗಿಕ ಸಂಪರ್ಕ ಮಾಡಬಾರದು. ಇವು ಅಲ್ಲಾಹನು ನಿಶ್ಚಯಿಸಿರುವ ಮೇರೆಗಳು. ಅವುಗಳ ಹತ್ತಿರವೂ ಸುಳಿಯಬೇಡಿ. ಈ ರೀತಿ, ಜನರು ಧರ್ಮ ನಿಷ್ಠರಾಗಬೇಕೆಂದು ಅಲ್ಲಾಹನು ಅವರಿಗೆ ತನ್ನ ವಚನಗಳನ್ನು ವಿವರಿಸಿಕೊಡುತ್ತಾನೆ.

188. ನೀವು ಪರಸ್ಪರರ ಸಂಪತ್ತನ್ನು ಅಕ್ರಮವಾಗಿ ಕಬಳಿಸಬೇಡಿ ಮತ್ತು ತಿಳಿದೂ ತಿಳಿದೂ ಜನರ ಸಂಪತ್ತನ್ನು ಪಾಪಮಾರ್ಗದಿಂದ ಕಬಳಿಸುವುದಕ್ಕಾಗಿ ಅದನ್ನು (ಅದರ ವ್ಯಾಜ್ಯವನ್ನು) ಅಧಿಕಾರಿಗಳ ಬಳಿಗೆ ಒಯ್ಯಬೇಡಿ.

189. (ದೂತರೇ) ಅವರು ನಿಮ್ಮೊಡನೆ, ಬಾಲಚಂದ್ರನ ಕುರಿತು ಪ್ರಶ್ನಿಸುತ್ತಾರೆ. ಹೇಳಿರಿ; ಇವು ಮನುಷ್ಯರಿಗೆ ಕಾಲವನ್ನು ಸೂಚಿಸುವ ಮತ್ತು ಹಜ್ಜ್ ಯಾತ್ರೆಯ (ಕಾಲ ತಿಳಿಸುವ) ಸಾಧನಗಳಾಗಿವೆ. ಶ್ರೇಷ್ಠತೆಯು, ನೀವು ಮನೆಗಳಿಗೆ ಹಿಂಬಾಗಿಲಿನಿಂದ ಪ್ರವೇಶಿಸುವುದನ್ನು ಅವಲಂಬಿಸಿಲ್ಲ. ನಿಜವಾಗಿ, ಭಯ ಭಕ್ತಿ ಉಳ್ಳವನೇ ಶ್ರೇಷ್ಠನು. ನೀವಿನ್ನು ಮನೆಗಳಿಗೆ ಮುಂಬಾಗಿಲಿನಿಂದಲೇ ಪ್ರವೇಶಿಸಿರಿ ಮತ್ತು ಅಲ್ಲಾಹನಿಗೆ ಅಂಜುತ್ತಲಿರಿ – ನೀವು ವಿಜಯಿಗಳಾಗಲಿಕ್ಕಾಗಿ.

190. ನಿಮ್ಮ ವಿರುದ್ಧ ಯುದ್ಧ ಮಾಡುವವರ ವಿರುದ್ಧ ನೀವು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಿರಿ. ಆದರೆ ಅತಿರೇಕವೆಸಗಬೇಡಿ. ಖಂಡಿತವಾಗಿಯೂ ಅಲ್ಲಾಹನು, ಅತಿರೇಕವೆಸಗುವವರನ್ನು ಮೆಚ್ಚುವುದಿಲ್ಲ.

191. ಮತ್ತು ಅಂಥವರನ್ನು (ಅತಿರೇಕವೆಸಗಿದವರನ್ನು) ನೀವು ಕಂಡಲ್ಲಿ ವಧಿಸಿರಿ ಮತ್ತು ಅವರು ಎಲ್ಲಿಂದ ನಿಮ್ಮನ್ನು ಹೊರದಬ್ಬಿರುವರೋ ಅಲ್ಲಿಂದ ನೀವು ಅವರನ್ನು ಹೊರದಬ್ಬಿರಿ. ಅಶಾಂತಿಯು ಕೊಲೆಗಿಂತ ಕೆಟ್ಟದಾಗಿದೆ. ಇನ್ನು, ಮಸ್ಜಿದುಲ್ ಹರಾಮ್‌ನ ಬಳಿ – ಅವರು ನಿಮ್ಮ ವಿರುದ್ಧ ಯುದ್ಧ ಮಾಡುವ ತನಕ ನೀವು ಅವರ ವಿರುದ್ಧ ಯುದ್ಧ ಮಾಡಬೇಡಿ. ಅಲ್ಲಿ ಅವರು ನಿಮ್ಮ ವಿರುದ್ಧ ಯುದ್ಧ ಮಾಡಿದರೆ, ನೀವು ಅವರನ್ನು ವಧಿಸಿರಿ. ಇದುವೇ ಸತ್ಯವನ್ನು ಧಿಕ್ಕರಿಸಿದವರಿಗಿರುವ ಪ್ರತಿಫಲ.

192. ಒಂದು ವೇಳೆ ಅವರು ತಡೆದು ನಿಂತರೆ, ಖಂಡಿತವಾಗಿಯೂ ಅಲ್ಲಾಹನು ಕ್ಷಮಿಸುವವನು ಮತ್ತು ಕರುಣೆ ತೋರುವವನಾಗಿದ್ದಾನೆ.

193. ಯಾವುದೇ ಅಶಾಂತಿ ಇಲ್ಲವಾಗಿ ಬಿಡುವ ತನಕ ಹಾಗೂ ಧರ್ಮವು ಸಂಪೂರ್ಣವಾಗಿ ಅಲ್ಲಾಹನಿಗೆ ಮೀಸಲಾಗಿ ಬಿಡುವ ತನಕ ನೀವು ಅವರ ವಿರುದ್ಧ ಯುದ್ಧ ಮಾಡಿರಿ. ಇನ್ನು, ಅವರು ತಡೆದು ನಿಂತರೆ, ಅಕ್ರಮವೆಸಗಿದವರ ಹೊರತು ಇನ್ನಾರ ಮೇಲೂ ಆಕ್ರಮಣಕ್ಕೆ ಅವಕಾಶವಿಲ್ಲ.

194. ಪವಿತ್ರ ತಿಂಗಳುಗಳಿಗೆ ಪವಿತ್ರ ತಿಂಗಳುಗಳೇ ಪರಿಹಾರ. ಹಾಗೆಯೇ, ಎಲ್ಲ ಪಾವಿತ್ರಗಳು ‘ಕಿಸಾಸ್’ನ (ಪ್ರತೀಕಾರದ) ನಿಯಮಗಳಿಗೆ ಅಧೀನವಾಗಿವೆ. ನಿಮ್ಮ ಮೇಲೆ ಅತಿಕ್ರಮವೆಸಗಿದವರ ಮೇಲೆ ನೀವು, (ಹೆಚ್ಚೆಂದರೆ) ಅವರು ನಿಮ್ಮ ಮೇಲೆ ಎಸಗಿದಷ್ಟೇ ಪ್ರತಿಕ್ರಮವನ್ನೆಸಗಿರಿ ಮತ್ತು ಅಲ್ಲಾಹನಿಗೆ ಅಂಜಿರಿ. ಅಲ್ಲಾಹನು ಧರ್ಮ ನಿಷ್ಠರ ಜೊತೆಗಿದ್ದಾನೆಂಬುದು ನಿಮಗೆ ತಿಳಿದಿರಲಿ.

195. ನೀವು ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡಿರಿ ಮತ್ತು ನಿಮ್ಮನ್ನು ಸ್ವತಃ ನಿಮ್ಮ ಕೈಯಾರೆ ವಿನಾಶಕ್ಕೆ ತಳ್ಳಬೇಡಿ. ನೀವು ಸೌಜನ್ಯ ತೋರಿರಿ. ಖಂಡಿತವಾಗಿಯೂ ಅಲ್ಲಾಹನು ಸೌಜನ್ಯಶೀರಲರನ್ನು ಪ್ರೀತಿಸುತ್ತಾನೆ.

196. ನೀವು ‘ಹಜ್ಜ್‌ ಹಾಗೂ ‘ಉಮ್ರಃ’ (ಯಾತ್ರೆ)ಗಳನ್ನು ಅಲ್ಲಾಹನಿಗಾಗಿ ಪೂರ್ತಿಗೊಳಿಸಿರಿ. ಒಂದು ವೇಳೆ ನಿಮ್ಮನ್ನು ತಡೆಯಲಾದರೆ, ನಿಮಗೆ ಸುಲಭವಾಗಿ ಲಭ್ಯವಿರುವುದನ್ನು (ಆಡು, ಗೋವು ಅಥವಾ ಒಂಟೆಯನ್ನು) ಬಲಿ ನೀಡಿರಿ. ಬಲಿ ಪ್ರಾಣಿಯು ತನ್ನ ಬಲಿಸ್ಥಾನವನ್ನು ತಲುಪುವ ತನಕ ನೀವು ನಿಮ್ಮ ತಲೆಗಳನ್ನು ಬೋಳಿಸಿಕೊಳ್ಳಬೇಡಿ. ಆದರೆ ನಿಮ್ಮ ಪೈಕಿ ರೋಗಿಯಾಗಿರುವವನು ಅಥವಾ ತಲೆಯಲ್ಲೇನಾದರೂ ಸಂಕಟವಿರುವವನು (ಸಮಯಕ್ಕೆ ಮುನ್ನ ತಲೆ ಬೋಳಿಸಿಕೊಂಡರೆ, ಅದಕ್ಕೆ) ಪರಿಹಾರವಾಗಿ ಉಪವಾಸ ಆಚರಿಸಲಿ ಅಥವಾ ದಾನ ನೀಡಲಿ ಅಥವಾ ಪ್ರಾಣಿ ಬಲಿ ಅರ್ಪಿಸಲಿ. ಆ ಬಳಿಕ ನಿಮಗೆ ಭದ್ರತೆ ಒದಗಿದಾಗ, ಹಜ್ಜ್‌ಗೆ ಮುಂಚಿತವಾಗಿ ‘ಉಮ್ರಃ’ ಮಾಡಬಯಸುವವನು, ತನಗೆ ಸುಲಭವಾಗಿ ಲಭ್ಯವಿರುವುದನ್ನು ಬಲಿ ನೀಡಲಿ. ಅದು ಲಭ್ಯವಾಗದವನು ಹಜ್ಜ್‌ನ ಅವಧಿಯಲ್ಲೇ ಮೂರು ದಿನ ಮತ್ತು ನೀವು (ಹಜ್ಜ್‌ನಿಂದ) ಮರಳಿದಾಗ ಏಳು ದಿನ ಉಪವಾಸ ಆಚರಿಸಲಿ. ಹೀಗೆ ಇವು ಪೂರ್ಣ ಹತ್ತು ದಿನಗಳಾಗುತ್ತವೆ. ಯಾರ ಪರಿವಾರವು ಮಸ್ಜಿದುಲ್ ಹರಾಮ್‌ನಲ್ಲಿ ಇಲ್ಲವೋ (ಯಾರು ಮಕ್ಕಃದ ನಿವಾಸಿಗಳಲ್ಲವೋ) ಅವರಿಗಾಗಿ ಇರುವ ನಿಯಮ ಇದು. ನೀವು ಸದಾ ಅಲ್ಲಾಹನಿಗೆ ಅಂಜುತ್ತಲಿರಿ. ಅಲ್ಲಾಹನ ಹಿಡಿತವು ತುಂಬಾ ಕಠಿಣವಾಗಿರುತ್ತದೆ ಎಂಬುದು ನಿಮಗೆ ತಿಳಿದಿರಲಿ.

197. ಹಜ್ಜ್‌ಗಾಗಿ ನಿರ್ದಿಷ್ಟ ತಿಂಗಳುಗಳಿವೆ. ಆ ಅವಧಿಯಲ್ಲಿ ಹಜ್ಜ್ ಯಾತ್ರೆಯ ಹೊಣೆ ಹೊತ್ತವನು (ತಿಳಿದಿರಲಿ;) ಹಜ್ಜ್‌ನಲ್ಲಿ ಅಶ್ಲೀಲತೆ ಸಲ್ಲದು, ಯಾವುದೇ ಪಾಪಕೃತ್ಯ ಸಲ್ಲದು ಮತ್ತು ಜಗಳ ಸಲ್ಲದು. ನೀವು ಮಾಡುವ ಪ್ರತಿಯೊಂದು ಸತ್ಕಾರ್ಯವನ್ನೂ ಅಲ್ಲಾಹನು ತಿಳಿದಿರುತ್ತಾನೆ. (ಯಾತ್ರೆಯ ವೇಳೆ) ಅವಶ್ಯಕ ಯಾತ್ರಾಸಾಧನಗಳನ್ನು ಜೊತೆಗಿಟ್ಟುಕೊಳ್ಳಿರಿ. ನಿಜವಾಗಿ, ಧರ್ಮನಿಷ್ಠೆಯೇ ಅತ್ಯುತ್ತಮ ಯಾತ್ರಾಸಾಧನವಾಗಿದೆ. ಬುದ್ಧಿಯುಳ್ಳವರೇ, ನನಗೆ ಮಾತ್ರ ಅಂಜಿರಿ.

198. ನೀವು (ಯಾತ್ರೆಯ ನಡುವೆ) ನಿಮ್ಮೊಡೆಯನ ಅನುಗ್ರಹವನ್ನು ಹುಡುಕುವುದು ತಪ್ಪಲ್ಲ. ಮತ್ತು ನೀವು ಅರಫಾತ್‌ನಿಂದ ಮರಳುವಾಗ (ವಿಶೇಷವಾಗಿ) ‘ಮಶ್‌ಅರಿಲ್ ಹರಾಮ್’ ಬಳಿ ಅಲ್ಲಾಹನನ್ನು ಸ್ಮರಿಸಿರಿ ಮತ್ತು ಅವನು ನಿಮಗೆ ಕಲಿಸಿಕೊಟ್ಟಿರುವ ರೀತಿಯಲ್ಲೇ ನೀವು ಅವನನ್ನು ಸ್ಮರಿಸಿರಿ. ನಿಜವಾಗಿ ಈ ಹಿಂದೆ ನೀವು ದಾರಿಗೆಟ್ಟವರ ಸಾಲಿಗೆ ಸೇರಿದ್ದಿರಿ.

199. ತರುವಾಯ ಇತರೆಲ್ಲ ಜನರು ಮರಳಿ ಬರುವಲ್ಲಿಂದ ನೀವು ಮರಳಿರಿ ಮತ್ತು ಅಲ್ಲಾಹನೊಡನೆ ಕ್ಷಮೆಯನ್ನು ಬೇಡಿರಿ. ಖಂಡಿತವಾಗಿಯೂ ಅಲ್ಲಾಹನು ಕ್ಷಮಿಸುವವನು ಮತ್ತು ಕರುಣಾಮಯಿಯಾಗಿದ್ದಾನೆ.

200. ನೀವು ನಿಮ್ಮ (ಹಜ್ಜ್‌ನ) ಕರ್ಮಗಳನ್ನೆಲ್ಲಾ ಮುಗಿಸಿಕೊಂಡ ಬಳಿಕ, (ಈ ಹಿಂದೆ) ನೀವು ನಿಮ್ಮ ಪೂರ್ವಜರನ್ನು ಸ್ಮರಿಸುತ್ತಿದ್ದ ರೀತಿಯಲ್ಲಿ ಅಥವಾ ಅದಕ್ಕಿಂತಲೂ ಅಧಿಕವಾಗಿ ಅಲ್ಲಾಹನನ್ನು ಸ್ಮರಿಸಿರಿ. ಜನರಲ್ಲಿ ಕೆಲವರು ‘‘ನಮ್ಮೊಡೆಯಾ, ನಮಗೆ ಈ ಲೋಕದಲ್ಲಿ ನೀಡು’’ ಎಂದು (ಮಾತ್ರ) ಪ್ರಾರ್ಥಿಸುತ್ತಾರೆ. ಅವರಿಗೆ ಪರಲೋಕದಲ್ಲಿ ಯಾವ ಪಾಲೂ ಇರದು.

201. ಅವರಲ್ಲಿ ‘‘ನಮ್ಮೊಡೆಯಾ ನಮಗೆ ಇಹಲೋಕದಲ್ಲೂ ಹಿತವನ್ನು ನೀಡು ಪರಲೋಕದಲ್ಲೂ ಹಿತವನ್ನು ನೀಡು ಮತ್ತು ನಮ್ಮನ್ನು ಬೆಂಕಿಯ ಶಿಕ್ಷೆಯಿಂದ ರಕ್ಷಿಸು’’ ಎಂದು ಪ್ರಾರ್ಥಿಸುವವರೂ ಇದ್ದಾರೆ.

202. ಅಂಥವರಿಗೆ ಅವರು ಶ್ರಮಿಸಿ ಗಳಿಸಿದ ಪಾಲು ಸಿಗಲಿದೆ ಮತ್ತು ಅಲ್ಲಾಹನು ವೇಗವಾಗಿ ವಿಚಾರಣೆ ನಡೆಸುವವನಾಗಿದ್ದಾನೆ.

203. (ವಿಶೇಷವಾಗಿ) ಆ ನಿರ್ದಿಷ್ಟ ದಿನಗಳಲ್ಲಿ ನೀವು ಅಲ್ಲಾಹನನ್ನು ಸ್ಮರಿಸಿರಿ. ಯಾರಾದರೂ ಅವಸರಪಟ್ಟು ಎರಡೇ ದಿನಗಳಲ್ಲಿ (ಹಜ್ಜ್‌ನಿಂದ) ತೆರಳಿದರೆ ಅವರ ಮೇಲೆ ಪಾಪವೇನಿಲ್ಲ. ಹಾಗೆಯೇ, ತುಸು ವಿಳಂಬಿಸಿದವನ ಮೇಲೂ ಪಾಪವೇನಿಲ್ಲ. ಇದು ಧರ್ಮನಿಷ್ಠರಿಗಾಗಿ (ಇರುವ ನಿಯಮ). ನೀವು ಅಲ್ಲಾಹನಿಗೆ ಅಂಜಿರಿ ಮತ್ತು ನಿಮಗೆ ತಿಳಿದಿರಲಿ, ಒಂದು ದಿನ ನಿಮ್ಮೆಲ್ಲರನ್ನೂ ಅವನ ಮುಂದೆ ಸೇರಿಸಲಾಗುವುದು.

204. (ದೂತರೇ,) ಜನರ ಪೈಕಿ ಒಬ್ಬನ ಮಾತು ಈ ಲೌಕಿಕ ಜೀವನದ ದೃಷ್ಟಿಯಿಂದ ನಿಮಗೆ ತುಂಬಾ ಹಿತಕರವೆನಿಸುತ್ತದೆ. ತನ್ನ ಮನಸ್ಸಿನಲ್ಲೇನಿದೆ ಎಂಬುದಕ್ಕೆ ಅವನು ಅಲ್ಲಾಹನನ್ನು ಸಾಕ್ಷಿಯಾಗಿಸುತ್ತಾನೆ. ನಿಜವಾಗಿ ಅವನೊಬ್ಬ ಬದ್ಧ ವೈರಿಯಾಗಿದ್ದಾನೆ.

205. ಅವನು (ನಿಮ್ಮ ಬಳಿಯಿಂದ) ಹೊರಟು ಹೋದ ಬಳಿಕ ಭೂಮಿಯಲ್ಲಿ ವಿಧ್ವಂಸ ಮೆರೆಯುತ್ತಾ, ಬೆಳೆಗಳನ್ನು ಹಾಗೂ ಜಾನುವಾರುಗಳನ್ನು ನಾಶ ಮಾಡುತ್ತಾ ಓಡಾಡುತ್ತಾನೆ. ಅಲ್ಲಾಹನು ವಿಧ್ವಂಸವನ್ನು ಮೆಚ್ಚುವುದಿಲ್ಲ.

206. ಅವನೊಡನೆ ‘‘ನೀನು ಅಲ್ಲಾಹನಿಗೆ ಅಂಜು’’ ಎನ್ನಲಾದಾಗ, ಅವನ ದುರಭಿಮಾನವು ಅವನನ್ನು ಪಾಪ ಕಾರ್ಯದಲ್ಲಿ ಮತ್ತಷ್ಟು ಸ್ಥಿರಗೊಳಿಸಿ ಬಿಡುತ್ತದೆ. ಅವನಿಗೆ ನರಕವೇ ಸಾಕು. ಅದು ತುಂಬಾ ಕೆಟ್ಟ ನೆಲೆಯಾಗಿದೆ.

207. ಮತ್ತು ಜನರಲ್ಲಿ, ಅಲ್ಲಾಹನ ಮೆಚ್ಚುಗೆ ಗಳಿಸಲಿಕ್ಕಾಗಿ ಸ್ವತಃ ತಮ್ಮನ್ನೇ ಮಾರಿಕೊಳ್ಳುವವರೂ ಇದ್ದಾರೆ. ನಿಜವಾಗಿ ಅಲ್ಲಾಹನು ದಾಸರ ಪಾಲಿಗೆ ವಾತ್ಸಲ್ಯಮಯಿಯಾಗಿದ್ದಾನೆ.

208. ವಿಶ್ವಾಸಿಗಳೇ, ಇಸ್ಲಾಮಿನೊಳಗೆ ಪೂರ್ಣವಾಗಿ ಪ್ರವೇಶಿಸಿರಿ ಮತ್ತು ಶೈತಾನನ ಹೆಜ್ಜೆಗಳನ್ನು ಅನುಸರಿಸಬೇಡಿ. ಖಂಡಿತವಾಗಿಯೂ ಅವನು ನಿಮ್ಮ ಬಹಿರಂಗ ಶತ್ರು.

209. ನಿಮ್ಮ ಬಳಿಗೆ ಸ್ಪಷ್ಟ ಆದೇಶಗಳು ಬಂದ ಬಳಿಕವೂ ನೀವು ಹೆಜ್ಜೆ ತಪ್ಪಿದರೆ, ಅಲ್ಲಾಹನು ಪ್ರಚಂಡನು ಮತ್ತು ಯುಕ್ತಿವಂತನೆಂಬುದು ನಿಮಗೆ ತಿಳಿದಿರಲಿ.

210. ಅವರು ನಿರೀಕ್ಷಿಸುತ್ತಿರುವುದು, ಸಾಕ್ಷಾತ್ ಅಲ್ಲಾಹನೇ ಮೋಡಗಳ ನೆರಳಲ್ಲಿ, ಮಲಕ್‌ಗಳೊಂದಿಗೆ ತಮ್ಮ ಬಳಿಗೆ ಬಂದು ಎಲ್ಲವೂ ಇತ್ಯರ್ಥವಾಗಿ ಬಿಡಬೇಕೆಂದಲ್ಲವೇ? ನಿಜವಾಗಿ, ಎಲ್ಲ ವಿಷಯಗಳೂ ಅಂತಿಮವಾಗಿ ಅಲ್ಲಾಹನ ಬಳಿಗೇ ಮರಳಲಿವೆ.

211. ನಾವು ಅವರಿಗೆ ಅದೆಷ್ಟು ಸ್ಪಷ್ಟ ಪುರಾವೆಗಳನ್ನು ಒದಗಿಸಿದ್ದೆವೆಂದು, ಇಸ್ರಾಈಲರ ಸಂತತಿಗಳೊಂದಿಗೆ ನೀವು ವಿಚಾರಿಸಿರಿ. ನಿಜವಾಗಿ, ಅಲ್ಲಾಹನ ಅನುಗ್ರಹವು ತನ್ನ ಬಳಿಗೆ ಬಂದ ಬಳಿಕ ಅದನ್ನು (ಶಾಪವಾಗಿ) ಪರಿವರ್ತಿಸಿಕೊಂಡವನು (ತಿಳಿದಿರಲಿ); ಖಂಡಿತವಾಗಿಯೂ ಅಲ್ಲಾಹನು ಬಹಳ ಕಠಿಣ ಶಿಕ್ಷೆ ನೀಡುವವನಾಗಿದ್ದಾನೆ.

212. ಧಿಕ್ಕಾರಿಗಳಿಗೆ ಇಹಲೋಕದ ಬದುಕನ್ನು ಚಂದಗಾಣಿಸಲಾಗಿದೆ. ಅವರು ವಿಶ್ವಾಸಿಗಳನ್ನು ಗೇಲಿ ಮಾಡುತ್ತಾರೆ. ನಿಜವಾಗಿ, ಪುನರುತ್ಥಾನದ ದಿನ ಧರ್ಮನಿಷ್ಠರು ಅವರಿಗಿಂತ ಮೇಲಿರುವರು. ಅಲ್ಲಾಹನು ತಾನಿಚ್ಛಿಸಿದವರಿಗೆ ಎಣಿಸಲಾಗದಷ್ಟು ಅನುಗ್ರಹವನ್ನು ನೀಡುತ್ತಾನೆ.

213. (ಮೂಲತಃ) ಜನರೆಲ್ಲಾ ಒಂದೇ ಸಮುದಾಯವಾಗಿದ್ದರು. ತರುವಾಯ ಅಲ್ಲಾಹನು, ಶುಭವಾರ್ತೆ ನೀಡುವ ಹಾಗೂ ಎಚ್ಚರಿಸುವ ದೂತರನ್ನು ಕಳುಹಿಸಿದನು ಮತ್ತು ಜನರು ಪರಸ್ಪರ ಭಿನ್ನಾಭಿಪ್ರಾಯ ತಾಳಿದ್ದ ವಿಷಯಗಳಲ್ಲಿ ಅವರ ನಡುವೆ ನ್ಯಾಯ ತೀರ್ಮಾನ ಮಾಡಲೆಂದು ಅವರ ಜೊತೆ, ಸತ್ಯವಿರುವ ಗ್ರಂಥವನ್ನಿಳಿಸಿದನು. ಆದರೆ ಯಾರಿಗೆ ಗ್ರಂಥ ನೀಡಲಾಗಿತ್ತೋ ಅದೇ ಜನರು, ತಮ್ಮ ಬಳಿಗೆ ಸ್ಪಷ್ಟ ಪುರಾವೆಗಳು ಬಂದ ಬಳಿಕ, ಪರಸ್ಪರ ವಿದ್ವೇಷದ ಕಾರಣ, ಆ ಕುರಿತು ಭಿನ್ನಾಭಿಪ್ರಾಯ ತಾಳಿದರು. ಕೊನೆಗೆ ಅಲ್ಲಾಹನು ವಿಶ್ವಾಸಿಗಳಿಗೆ, ಸತ್ಯದ ಕುರಿತಾಗಿ ಅವರು ಭಿನ್ನಾಭಿಪ್ರಾಯ ತಾಳಿದ್ದ ವಿಷಯಗಳಲ್ಲಿ ತನ್ನಿಚ್ಛೆಯಿಂದ ಮಾರ್ಗದರ್ಶನ ನೀಡಿದನು. ಅಲ್ಲಾಹನು ತಾನಿಚ್ಛಿಸಿದವರಿಗೆ, ನೇರ ಮಾರ್ಗವನ್ನು ತೋರಿಸಿ ಕೊಡುತ್ತಾನೆ.

214. ನೀವೇನು (ಸುಲಭವಾಗಿ) ನೀವು ಸ್ವರ್ಗ ಪ್ರವೇಶಿಸುವಿರೆಂದು ಕೊಂಡಿರುವಿರಾ? ನಿಜವಾಗಿ, ನಿಮಗಿಂತ ಹಿಂದೆ ಗತಿಸಿದವರಿಗೆ ಎದುರಾಗಿದ್ದ ಸನ್ನಿವೇಶಗಳು ನಿಮಗಿನ್ನೂ ಎದುರಾಗಿಲ್ಲ. ಅವರು ತೀವ್ರ ಸಂಕಷ್ಟಗಳನ್ನು ಹಾಗೂ ಹಿಂಸೆಯನ್ನು ಅನುಭವಿಸಿದ್ದರು ಮತ್ತು ಅವರನ್ನು ಅದೆಷ್ಟು ನರಳಿಸಲಾಗಿತ್ತೆಂದರೆ, (ಅಂದಿನ) ದೇವದೂತರು ಹಾಗೂ ಅವರ ಜೊತೆಗಿದ್ದ ವಿಶ್ವಾಸಿಗಳು, ‘‘ಯಾವಾಗ ಬಂದೀತು ಅಲ್ಲಾಹನ ಸಹಾಯ?’’ ಎನ್ನುವಂತಾಗಿತ್ತು. ತಿಳಿದಿರಲಿ, ಖಂಡಿತವಾಗಿಯೂ ಅಲ್ಲಾಹನ ಸಹಾಯವು ಹತ್ತಿರವೇ ಇದೆ.

215. (ದೂತರೇ,) ಅವರು ನಿಮ್ಮೊಡನೆ, ತಾವು ಏನನ್ನು ಖರ್ಚು ಮಾಡಬೇಕು ಎಂದು ವಿಚಾರಿಸುತ್ತಾರೆ. ಹೇಳಿರಿ; ನೀವು ಖರ್ಚು ಮಾಡುವ ಸಂಪತ್ತು ತಂದೆ ತಾಯಿಗೆ, ಬಂಧುಗಳಿಗೆ, ಅನಾಥರಿಗೆ ಹಾಗೂ ಬಡವರಿಗೆ ಮತ್ತು ಪ್ರಯಾಣಿಕರಿಗೆ (ತಲುಪಲಿ). ನೀವು ಮಾಡುವ ಪ್ರತಿಯೊಂದು ಸತ್ಕಾರ್ಯವನ್ನೂ ಅಲ್ಲಾಹನು ಖಂಡಿತ ಅರಿತಿರುತ್ತಾನೆ.

216. ನಿಮಗೆ ಯುದ್ಧವನ್ನು ಕಡ್ಡಾಯಗೊಳಿಸಲಾಗಿದೆ ಮತ್ತು ಅದು ನಿಮಗೆ ಅಪ್ರಿಯವಾಗಿದೆ. ಆದರೆ ನಿಮಗೆ ಅಪ್ರಿಯವಾಗಿರುವ ಸಂಗತಿಯೊಂದು ನಿಮ್ಮ ಪಾಲಿಗೆ ಹಿತಕರವಾಗಿರಲೂ ಬಹುದು. ಹಾಗೆಯೇ, ನೀವು ತುಂಬಾ ಪ್ರೀತಿಸುವ ಸಂಗತಿಯೊಂದು ನಿಮ್ಮ ಪಾಲಿಗೆ ಕೆಟ್ಟದಾಗಿರಲೂಬಹುದು. ಅಲ್ಲಾಹನಿಗೆ ತಿಳಿದಿದೆ ಮತ್ತು ನಿಮಗೆ ತಿಳಿದಿಲ್ಲ.

217. (ದೂತರೇ,) ಅವರು ನಿಮ್ಮೊಡನೆ, ಪವಿತ್ರ ತಿಂಗಳಲ್ಲಿ ಯುದ್ಧ ಮಾಡುವ ಕುರಿತು ವಿಚಾರಿಸುತ್ತಾರೆ. ಹೇಳಿರಿ; ಆ ತಿಂಗಳಲ್ಲಿ ಯುದ್ಧ ಮಾಡುವುದು ದೊಡ್ಡ ಅಪರಾಧವಾಗಿದೆ. ಆದರೆ ಅಲ್ಲಾಹನ ಮಾರ್ಗದಿಂದ (ಜನರನ್ನು) ತಡೆಯುವುದು, ಅವನನ್ನು (ಅಲ್ಲಾಹನನ್ನು) ಧಿಕ್ಕರಿಸುವುದು, ಮಸ್ಜಿದುಲ್ ಹರಾಮ್‌ನಿಂದ ಜನರನ್ನು ತಡೆಯುವುದು ಮತ್ತು ಅದರ ನಿವಾಸಿಗಳನ್ನು ಅಲ್ಲಿಂದ ಹೊರದಬ್ಬುವುದು – ಇವೆಲ್ಲಾ ಅಲ್ಲಾಹನ ದೃಷ್ಟಿಯಲ್ಲಿ ಇನ್ನೂ ದೊಡ್ಡ ಪಾಪಗಳಾಗಿವೆ. ಅಶಾಂತಿಯಂತು ಕೊಲೆಗಿಂತಲೂ ಕೆಟ್ಟದು. ಅವರು (ಧಿಕ್ಕಾರಿಗಳು) ತಮಗೆ ಸಾಧ್ಯವಾದರೆ, ನಿಮ್ಮನ್ನು ನಿಮ್ಮ ಧರ್ಮದಿಂದ ವಿಮುಖರಾಗಿಸಿ ಬಿಡುವ ತನಕವೂ ನಿಮ್ಮ ವಿರುದ್ಧ ಯುದ್ಧ ಹೂಡುತ್ತಲೇ ಇರುವರು. ಇನ್ನು ನಿಮ್ಮ ಪೈಕಿ, ಧರ್ಮದಿಂದ ವಿಮುಖನಾದವನ ಮತ್ತು (ಅದೇ ಸ್ಥಿತಿಯಲ್ಲಿ) ಮೃತನಾದವನ ಕರ್ಮಗಳೆಲ್ಲಾ ಈ ಲೋಕದಲ್ಲೂ ಪರಲೋಕದಲ್ಲೂ ವ್ಯರ್ಥವಾಗಿ ಬಿಟ್ಟವು. ಅಂಥವರು ನರಕದವರು ಮತ್ತು ಅವರು ಅಲ್ಲೇ ಸದಾಕಾಲ ಇರುವರು.

218. ವಿಶ್ವಾಸಿಗಳು ಹಾಗೂ ಅಲ್ಲಾಹನ ಮಾರ್ಗದಲ್ಲಿ ವಲಸೆ ಹೋದವರು ಮತ್ತು ಹೋರಾಡಿದವರೇ, ಅಲ್ಲಾಹನ ಅನುಗ್ರಹವನ್ನು ನಿರೀಕ್ಷಿಸುತ್ತಿರುವವರಾಗಿದ್ದಾರೆ. ಅಲ್ಲಾಹನಂತು ಕ್ಷಮಿಸುವವನು ಮತ್ತು ಕರುಣೆ ತೋರುವವನಾಗಿದ್ದಾನೆ.

219. ಅವರು ನಿಮ್ಮೊಡನೆ, ಮದ್ಯ ಮತ್ತು ಜೂಜಿನ ಕುರಿತು ವಿಚಾರಿಸುತ್ತಾರೆ. ಹೇಳಿರಿ; ಅವೆರಡರಲ್ಲೂ ದೊಡ್ಡ ಪಾಪವಿದೆ ಮತ್ತು ಜನರಿಗೆ ಕೆಲವು ಲಾಭಗಳೂ ಇವೆ. ಆದರೆ ಅವುಗಳ ಪಾಪವು ಅವುಗಳ ಲಾಭಕ್ಕಿಂತ ದೊಡ್ಡದು. ಹಾಗೆಯೇ ಅವರು ನಿಮ್ಮೊಡನೆ (ಸತ್ಕಾರ್ಯಕ್ಕೆ) ತಾವೇನು ಖರ್ಚು ಮಾಡಬೇಕು ಎಂದು ವಿಚಾರಿಸುತ್ತಾರೆ. ‘‘ಅಗತ್ಯಕ್ಕಿಂತ ಹೆಚ್ಚಿನದನ್ನು (ಖರ್ಚು ಮಾಡಿರಿ)’’ ಎಂದು ಹೇಳಿರಿ. ಇದೇ ರೀತಿ, ನೀವು ಚಿಂತನೆ ನಡೆಸಬೇಕೆಂದು ಅಲ್ಲಾಹನು ನಿಮಗಾಗಿ ತನ್ನ ಆದೇಶಗಳನ್ನು ವಿವರಿಸಿಕೊಡುತ್ತಾನೆ.

220. ಇಹಲೋಕಕ್ಕೂ ಪರಲೋಕಕ್ಕೂ (ಅವು ಅನ್ವಯಿಸುತ್ತವೆ). (ದೂತರೇ,) ಅವರು ನಿಮ್ಮೊಡನೆ ಅನಾಥರ ಕರಿತು ವಿಚಾರಿಸುತ್ತಾರೆ. ಹೇಳಿರಿ; ಅವರ ಹಿತಾಸಕ್ತಿಯನ್ನು ಪರಿಗಣಿಸುವುದೊಳ್ಳೆಯದು. ಇನ್ನು ನೀವು ಅವರನ್ನು (ಖರ್ಚಿನಲ್ಲಿ) ನಿಮ್ಮ ಜೊತೆ ಸೇರಿಸಿಕೊಳ್ಳುವುದಾದರೆ, ಅವರು ನಿಮ್ಮ ಸಹೋದರರು. ಅಲ್ಲಾಹನಂತು, ಯಾರು ಹಾಳುಗೆಡಹುವವರು ಮತ್ತು ಯಾರು ಸುಧಾರಕರೆಂಬುದನ್ನು ಚೆನ್ನಾಗಿ ಬಲ್ಲನು. ಅಲ್ಲಾಹನು ಬಯಸಿದ್ದರೆ, ನಿಮ್ಮನ್ನು ಇಕ್ಕಟ್ಟಿಗೆ ಸಿಲುಕಿಸಬಹುದಿತ್ತು. ಖಂಡಿತವಾಗಿಯೂ ಅಲ್ಲಾಹನು ಪ್ರಚಂಡನೂ ಯುಕ್ತಿವಂತನೂ ಆಗಿರುವನು.

221. (ವಿಶ್ವಾಸಿಗಳೇ,) ಬಹುದೇವಾರಾಧಕಿಯರು ವಿಶ್ವಾಸಿನಿಯರಾಗುವ ತನಕ ಅವರನ್ನು ನೀವು ವಿವಾಹವಾಗಬೇಡಿ. ನಿಜವಾಗಿ ವಿಶ್ವಾಸಿ ದಾಸಿಯು, (ಸ್ವತಂತ್ರ) ಬಹು ದೇವರಾಧಕಿಗಿಂತ ಉತ್ತಮಳು – ಆಕೆ ನಿಮಗೆಷ್ಟು ಇಷ್ಟವಿದ್ದರೂ ಸರಿಯೇ. ಹಾಗೆಯೇ, ಬಹುದೇವಾರಾಧಕ ಪುರುಷರು ವಿಶ್ವಾಸಿಗಳಾಗುವ ತನಕ ಅವರನ್ನು ವಿವಾಹವಾಗಬಾರದು. ವಿಶ್ವಾಸಿ ದಾಸನು, (ಸ್ವತಂತ್ರ) ಬಹು ದೇವಾರಾಧಕನಿಗಿಂತ ಉತ್ತಮನು – ಅವನು ನಿಮಗೆಷ್ಟು ಇಷ್ಟವಿದ್ದರೂ ಸರಿಯೇ. ಅವರು (ಬಹುದೇವಾರಾಧಕರು) ನರಕದೆಡೆಗೆ ಕರೆಯುತ್ತಾರೆ. ಆದರೆ ಅಲ್ಲಾಹನು ತನ್ನಿಚ್ಛೆಯಿಂದ ಸ್ವರ್ಗದೆಡೆಗೆ ಮತ್ತು ಕ್ಷಮೆಯೆಡೆಗೆ ಕರೆಯುತ್ತಾನೆ ಮತ್ತು ಅವನು ಜನರಿಗಾಗಿ ತನ್ನ ಆದೇಶಗಳನ್ನು ಸ್ಪಷ್ಟಪಡಿಸುತ್ತಾನೆ – ಅವರು ಉಪದೇಶ ಸ್ವೀಕರಿಸಲೆಂದು.

222. ಮತ್ತು ಅವರು ನಿಮ್ಮೊಡನೆ ರಜಸ್ಸಿನ (ಋತು ಸ್ರಾವದ) ಕುರಿತು ವಿಚಾರಿಸುತ್ತಾರೆ. (ದೂತರೇ) ಹೇಳಿರಿ; ಅದೊಂದು ನರಳಿಕೆಯಾಗಿದೆ. ರಜಸ್ಸಿನ ಅವಧಿಯಲ್ಲಿ ಮಹಿಳೆಯರಿಂದ ದೂರವಿರಿ ಮತ್ತು ಅವರು ಶುದ್ಧರಾದಾಗ ಅಲ್ಲಾಹನು ನಿಮಗೆ ಆದೇಶಿಸಿರುವ ರೀತಿಯಲ್ಲಿ ಅವರ ಬಳಿಗೆ ಹೋಗಿರಿ. ಅಲ್ಲಾಹನು ಪಶ್ಚಾತ್ತಾಪ ಪಡುವವರನ್ನು ಪ್ರೀತಿಸುತ್ತಾನೆ ಮತ್ತು ಅವನು ನಿರ್ಮಲರಾಗಿರುವವರನ್ನು ಪ್ರೀತಿಸುತ್ತಾನೆ.

223. ನಿಮ್ಮ ಪತ್ನಿಯರು ನಿಮ್ಮ ಪಾಲಿಗೆ, ತೋಟಗಳಾಗಿದ್ದಾರೆ. ನೀವು ನಿಮಗೆ ಬೇಕಾದಂತೆ ನಿಮ್ಮ ತೋಟವನ್ನು ಪ್ರವೇಶಿಸಿರಿ. ಮತ್ತು ನಿಮ್ಮ ಸ್ವಂತಕ್ಕಾಗಿ (ಸತ್ಕರ್ಮಗಳನ್ನು) ಮುಂದೆ ಕಳುಹಿಸಿರಿ ಹಾಗೂ ಅಲ್ಲಾಹನಿಗೆ ಅಂಜಿರಿ. ನೀವು ಅವನನ್ನು ಭೇಟಿಯಾಗಲಿಕ್ಕಿದೆ ಎಂಬುದು ನಿಮಗೆ ತಿಳಿದಿರಲಿ. ವಿಶ್ವಾಸಿಗಳಿಗೆ ನೀವು ಶುಭವಾರ್ತೆ ಕೊಟ್ಟು ಬಿಡಿರಿ.

224. ಸತ್ಕಾರ್ಯದಿಂದ, ಧರ್ಮನಿಷ್ಠೆಯಿಂದ ಹಾಗೂ ಜನರ ನಡುವೆ ಸಂಧಾನ ಏರ್ಪಡಿಸುವ ಕೆಲಸದಿಂದ ನಿಮ್ಮನ್ನು ತಡೆಯುವಂತಹ ಪ್ರತಿಜ್ಞೆಗಳಿಗಾಗಿ ನೀವು ಅಲ್ಲಾಹನ ಹೆಸರನ್ನು ನೆಪವಾಗಿ ಬಳಸಬೇಡಿ. ಅಲ್ಲಾಹನು ಎಲ್ಲವನ್ನೂ ಕೇಳುವವನು ಮತ್ತು ಬಲ್ಲವನಾಗಿದ್ದಾನೆ.

225. ನೀವು ಮಾಡಿರುವ ತಮಾಶೆಯ (ಗಂಭೀರವಲ್ಲದ) ಪ್ರತಿಜ್ಞೆಗಳಿಗಾಗಿ ಅಲ್ಲಾಹನು ನಿಮ್ಮನ್ನು ವಿಚಾರಿಸಲಾರನು. ಆದರೆ ನೀವು ನಿಮ್ಮ ಮನಸಾರೆ ಮಾಡಿದವುಗಳ (ಗಂಭೀರ ಪ್ರತಿಜ್ಞೆಗಳ) ಕುರಿತು ಅವನು ಖಂಡಿತ ನಿಮ್ಮ ವಿಚಾರಣೆ ನಡೆಸುವನು. ಅಲ್ಲಾಹನು ಕ್ಷಮಿಸುವವನೂ ಸಂಯಮಿಯೂ ಆಗಿದ್ದಾನೆ.

226. ತಮ್ಮ ಪತ್ನಿಯರಿಂದ ದೂರವಿರುವುದಾಗಿ ಪ್ರತಿಜ್ಞೆ ಮಾಡಿಕೊಂಡವರು ನಾಲ್ಕು ತಿಂಗಳ ತನಕ ಕಾಯಲಿ. ಆ ಬಳಿಕ ಅವರು (ತಮ್ಮ ನಿರ್ಧಾರದಿಂದ) ಮರಳಿದರೆ, ಅಲ್ಲಾಹನು (ಅವರ ಪಾಲಿಗೆ) ಖಂಡಿತ ಕ್ಷಮಿಸುವವನು ಮತ್ತು ಕರುಣಾಮಯಿ ಯಾಗಿದ್ದಾನೆ.

227. ಇನ್ನು ಅವರು ವಿಚ್ಛೇದನವನ್ನೇ ತೀರ್ಮಾನಿಸಿಕೊಂಡಿದ್ದರೆ, (ಅವರಿಗೆ ತಿಳಿದಿರಲಿ) ಅಲ್ಲಾಹನು ಖಂಡಿತ ಎಲ್ಲವನ್ನೂ ಕೇಳುವವನು ಮತ್ತು ಬಲ್ಲವನಾಗಿದ್ದಾನೆ.

228. ವಿಚ್ಛೇದನ ಪಡೆದ ಸ್ತ್ರೀಯರು ಮೂರು (ಮಾಸಿಕ ಸ್ರಾವದ) ಅವಧಿಗಳ ತನಕ ತಮ್ಮನ್ನು ತಡೆದುಕೊಂಡಿರಬೇಕು (ಬೇರೆ ವಿವಾಹವಾಗಬಾರದು). ಅವರು ಅಲ್ಲಾಹನಲ್ಲಿ ಮತ್ತು ಪರಲೋಕದಲ್ಲಿ ನಂಬಿಕೆ ಉಳ್ಳವರಾಗಿದ್ದರೆ, ಅಲ್ಲಾಹನು ತಮ್ಮ ಗರ್ಭಗಳಲ್ಲಿ ಏನನ್ನು ಸೃಷ್ಟಿಸಿರುವನೆಂಬುದನ್ನು ಬಚ್ಚಿಡುವುದು ಅವರ ಪಾಲಿಗೆ ಸಮ್ಮತವಲ್ಲ. ಅವರ ಪತಿಯು, ಸಂಬಂಧದಲ್ಲಿ ಸುಧಾರಣೆ (ಪುನರ್ಮಿಲನ) ಬಯಸಿದ್ದರೆ ಈ ಅವಧಿಯಲ್ಲಿ ಆ ಸ್ತ್ರೀಯರನ್ನು (ಪತ್ನಿಯರಾಗಿ) ಮರಳಿ ಪಡೆಯಲು ಅವರೇ ಹೆಚ್ಚು ಹಕ್ಕುದಾರರು. ಸ್ತ್ರೀಯರಿಗೆ ಕರ್ತವ್ಯಗಳಿರುವಂತೆಯೇ ಅವರಿಗೆ ಅಧಿಕಾರಗಳೂ ಇವೆ ಮತ್ತು ಸ್ತ್ರೀಯರ ಮೇಲೆ ಪುರುಷರಿಗೆ ಒಂದು ಮಟ್ಟದ ಹಿರಿಮೆ ಇದೆ. ಅಲ್ಲಾಹನಂತು ತುಂಬಾ ಪ್ರಚಂಡನೂ ಯುಕ್ತಿವಂತನೂ ಆಗಿದ್ದಾನೆ.

229. ‘ತಲಾಕ್’ (ವಿಚ್ಛೇದನ) ಎರಡು ಬಾರಿ (ಎರಡು ಹಂತಗಳಲ್ಲಿ). ಆ ಬಳಿಕ (ಪತಿಯು ಪತ್ನಿಯನ್ನು ಪತ್ನಿಯಾಗಿ) ಉತ್ತಮ ರೀತಿಯಲ್ಲಿ ಉಳಿಸಿಕೊಳ್ಳಬೇಕು ಅಥವಾ ಉದಾರವಾಗಿ ಬಿಡುಗಡೆಗೊಳಿಸಬೇಕು. ಮತ್ತು ನೀವು ಅವರಿಗೆ (ಪುರುಷರು ಸ್ತ್ರೀಯರಿಗೆ) ಕೊಟ್ಟಿರುವ ಏನನ್ನೂ ಮರಳಿ ಪಡೆಯುವುದು ನಿಮ್ಮ ಪಾಲಿಗೆ ಸಮ್ಮತವಲ್ಲ – ಅವರಿಬ್ಬರಿಗೂ, ಅಲ್ಲಾಹನು ವಿಧಿಸಿರುವ ಮಿತಿಗಳನ್ನು ಪಾಲಿಸಲು ತಮಗೆ ಸಾಧ್ಯವಾಗಲಾರದೆಂಬ ಭಯವಿರುವ ಸ್ಥಿತಿಯ ಹೊರತು. ಇನ್ನು ನಿಮಗೆ, ಅವರಿಬ್ಬರೂ ಅಲ್ಲಾಹನು ವಿಧಿಸಿರುವ ಮಿತಿಗಳನ್ನು ಪಾಲಿಸಲಾರರೆಂಬ ಭಯವಿರುವಾಗ, ಪತ್ನಿಯು ಪರಿಹಾರ ನೀಡಿ ಬಿಡುಗಡೆ ಪಡೆದರೆ ಅವರಿಬ್ಬರಿಗೂ ದೋಷವಿಲ್ಲ. ಇವು ಅಲ್ಲಾಹನು ವಿಧಿಸಿರುವ ಮಿತಿಗಳು. ಇವುಗಳನ್ನು ಮೀರಬೇಡಿ. ಅಲ್ಲಾಹನು ವಿಧಿಸಿರುವ ಮಿತಿಗಳನ್ನು ಮೀರುವವರೇ ಅಕ್ರಮಿಗಳು.

230. ಇನ್ನು ಅವನು ಆಕೆಗೆ (ಮೂರನೆಯ) ‘ತಲಾಕ್’ ಕೊಟ್ಟು ಬಿಟ್ಟರೆ, ತರುವಾಯ ಆಕೆ ಬೇರೊಬ್ಬ ಪತಿಯನ್ನು ವಿವಾಹವಾಗುವ (ಹಾಗೂ ಆತನಿಂದ ಬಿಡುಗಡೆ ಪಡೆಯುವ) ತನಕವೂ ಆಕೆ ಆತನ (ಮೊದಲ ಪತಿಯ) ಪಾಲಿಗೆ ಸಮ್ಮತಳಾಗುವುದಿಲ್ಲ. ಆ ಬಳಿಕ ಆತ (ಎರಡನೇ ಪತಿ) ಆಕೆಯನ್ನು ವಿಚ್ಛೇದಿಸಿದರೆ – ತಾವು ಅಲ್ಲಾಹನು ವಿಧಿಸಿರುವ ಮಿತಿಗಳನ್ನು ಪಾಲಿಸಬಲ್ಲೆವೆಂದು ಅವರಿಬ್ಬರೂ ಭಾವಿಸುವುದಾದರೆ – ಅವರಿಬ್ಬರೂ (ಆಕೆ ಮತ್ತು ಮೊದಲನೇ ಪತಿ) ಮತ್ತೆ ಪರಸ್ಪರ ಕೂಡಿಕೊಳ್ಳುವುದರಲ್ಲಿ ದೋಷವಿಲ್ಲ. ಇವು ಅಲ್ಲಾಹನು ವಿಧಿಸಿರುವ ಮಿತಿ ಮೇರೆಗಳು. ತಿಳುವಳಿಕೆ ಉಳ್ಳವರಿಗಾಗಿ ಅವನು ಇವುಗಳನ್ನು ವಿವರಿಸುತ್ತಿದ್ದಾನೆ.

231. ನೀವು ಸ್ತ್ರೀಯರಿಗೆ ತಲಾಕ್ ನೀಡಿರುವಾಗ ಅವರು ತಮ್ಮ ನಿರ್ದಿಷ್ಟ ಅವಧಿಯನ್ನು ಪೂರ್ತಿಗೊಳಿಸಿದ ಬಳಿಕ ಉತ್ತಮ ರೀತಿಯಲ್ಲಿ ಅವರನ್ನು ಉಳಿಸಿಕೊಳ್ಳಿರಿ ಅಥವಾ ಉತ್ತಮ ರೀತಿಯಲ್ಲಿ ಅವರನ್ನು ಬಿಡುಗಡೆಗೊಳಿಸಿರಿ. ಅವರಿಗೆ ಹಾನಿ ಮಾಡುವುದಕ್ಕಾಗಿ ಹಾಗೂ ಕಿರುಕುಳ ನೀಡುವುದಕ್ಕಾಗಿ ನೀವು ಅವರನ್ನು ತಡೆದಿಟ್ಟುಕೊಳ್ಳಬೇಡಿ. ಹಾಗೆ ಮಾಡಿದವನು ನಿಜವಾಗಿ ಸ್ವತಃ ತನ್ನ ಮೇಲೆಯೇ ಅಕ್ರಮ ವೆಸಗಿಕೊಂಡನು. ನೀವು ಅಲ್ಲಾಹನ ವಚನಗಳನ್ನು ಅಪಹಾಸ್ಯದ ವಸ್ತುವಾಗಿಸಿಕೊಳ್ಳಬೇಡಿ. ಮತ್ತು ನೀವು, ಅಲ್ಲಾಹನು ನಿಮಗೆ ಒದಗಿಸಿರುವ ಅನುಗ್ರಹಗಳನ್ನು ಹಾಗೂ ಅವನು ನಿಮಗೆ ಗ್ರಂಥವನ್ನೂ ಯುಕ್ತಿಯನ್ನೂ ಇಳಿಸಿಕೊಟ್ಟಿರುವುದನ್ನು ಮತ್ತು ಆ ಮೂಲಕ ಅವನು ನಿಮಗೆ ಉಪದೇಶಿಸುತ್ತಿದ್ದಾನೆ ಎಂಬುದನ್ನು ನೆನಪಿಡಿರಿ. ನೀವು, ಅಲ್ಲಾಹನಿಗೆ ಅಂಜಿರಿ ಹಾಗೂ ಅಲ್ಲಾಹನು ಎಲ್ಲವನ್ನೂ ಬಲ್ಲವನೆಂಬುದು ನಿಮಗೆ ತಿಳಿದಿರಲಿ.

232. ಮತ್ತು ನೀವು ಪತ್ನಿಯರಿಗೆ ತಲಾಕ್ ನೀಡಿರುವಾಗ, ಅವರು ತಮ್ಮ ಅವಧಿಯನ್ನು ಪೂರ್ತಿಗೊಳಿಸಿದ ಬಳಿಕ, ನಿಯಮಾನುಸಾರ, ಪರಸ್ಪರ ಒಪ್ಪಿಗೆಯೊಂದಿಗೆ ತಮ್ಮ (ಆಯ್ಕೆಯ) ಬೇರೆ ಪತಿಯರನ್ನು ವಿವಾಹವಾಗುವುದಕ್ಕೆ ನೀವು ತಡೆಯೊಡ್ಡಬೇಡಿ. ನಿಮ್ಮ ಪೈಕಿ, ಅಲ್ಲಾಹನಲ್ಲಿ ಮತ್ತು ಅಂತಿಮ ದಿನದಲ್ಲಿ ನಂಬಿಕೆ ಉಳ್ಳವರಿಗಾಗಿ ಇದನ್ನು ಬೋಧಿಸಲಾಗುತ್ತಿದೆ. ಇದು ನಿಮ್ಮ ಪಾಲಿಗೆ ಹೆಚ್ಚು ಶುದ್ಧ ಹಾಗೂ ನಿರ್ಮಲ ಧೋರಣೆಯಾಗಿದೆ. ಅಲ್ಲಾಹನು ಬಲ್ಲನು ಆದರೆ, ನೀವು ಅರಿತಿಲ್ಲ.

233. ಮತ್ತು ತಾಯಂದಿರು ತಮ್ಮ ಮಕ್ಕಳಿಗೆ ಪೂರ್ತಿ ಎರಡು ವರ್ಷ ಎದೆ ಹಾಲುಣಿಸಲಿ – ಎದೆಹಾಲುಣಿಸುವ ಅವಧಿಯನ್ನು ಪೂರ್ತಿಗೊಳಿಸಲು ಬಯಸುವವರಿಗಾಗಿ ಇರುವ ನಿಯಮವಿದು. ಅಂತಹ ತಾಯಂದಿರಿಗೆ ಅವರ ಆಹಾರ ಮತ್ತು ಉಡುಗೆಯನ್ನು ನಿಯಮ ಪ್ರಕಾರ ಒದಗಿಸುವುದು ಮಗುವಿನ ತಂದೆಯ ಕರ್ತವ್ಯವಾಗಿದೆ. ಯಾರ ಮೇಲೂ ಅವರ ಸಾಮರ್ಥ್ಯಕ್ಕಿಂತ ಹೆಚ್ಚಿನ ಹೊಣೆಯನ್ನು ಹೊರಿಸಲಾಗುವುದಿಲ್ಲ. ತಾಯಿಗೆ ಆಕೆಯ ಮಗುವಿನ ಕಾರಣ ಕಿರುಕುಳ ನೀಡಬಾರದು. ಹಾಗೆಯೇ, ತಂದೆಗೂ ಆತನ ಮಗುವಿನ ಕಾರಣ ಕಿರುಕುಳ ನೀಡಬಾರದು. ಉತ್ತರಾಧಿಕಾರಿಗೂ ಇದೇ ನಿಯಮ ಅನ್ವಯವಾಗುತ್ತದೆ. ಇನ್ನು ಅವರಿಬ್ಬರೂ (ತಂದೆ-ತಾಯಿ) ಪರಸ್ಪರ ಒಪ್ಪಿಗೆ ಹಾಗೂ ಸಮಾಲೋಚನೆಯ ಬಳಿಕ (ಮಗುವಿಗೆ) ಎದೆ ಹಾಲು ಬಿಡಿಸಲು ಬಯಸಿದಲ್ಲಿ ಅವರಿಬ್ಬರ ಮೇಲೂ ದೋಷವಿಲ್ಲ. ಮತ್ತು ನೀವು ನಿಮ್ಮ ಮಕ್ಕಳಿಗೆ (ಪರ ಸ್ತ್ರೀಯರಿಂದ) ಎದೆಹಾಲುಣಿಸಲು ಬಯಸಿದ್ದರೆ, ನಿಯಮ ಪ್ರಕಾರ ಅವರಿಗೆ (ಹಾಲುಣಿಸುವವರಿಗೆ) ಕೊಡಬೇಕಾದುದನ್ನು ಕೊಟ್ಟು ಹಾಗೆ ಮಾಡಿಸುವುದರಲ್ಲಿ ನಿಮ್ಮ ಮೇಲೆ ದೋಷವೇನಿಲ್ಲ. ಮತ್ತು ನೀವು ಅಲ್ಲಾಹನಿಗೆ ಅಂಜಿರಿ ಹಾಗೂ ನೀವು ಮಾಡುವ ಸಕಲವನ್ನೂ ಅಲ್ಲಾಹನು ನೋಡುತ್ತಲೇ ಇದ್ದಾನೆಂಬುದು ನಿಮಗೆ ತಿಳಿದಿರಲಿ.

234. ನಿಮ್ಮ ಪೈಕಿ ಯಾರಾದರೂ ಪತ್ನಿಯರನ್ನು ಬಿಟ್ಟು ಮೃತರಾಗಿದ್ದರೆ ಆ ಪತ್ನಿಯರು ನಾಲ್ಕು ತಿಂಗಳು ಮತ್ತು ಹತ್ತು ದಿನಗಳ ಕಾಲ ತಮ್ಮನ್ನು ತಡೆದಿಟ್ಟುಕೊಳ್ಳಲಿ. ಆ ತಮ್ಮ ಅವಧಿಯನ್ನು (ಇದ್ದತ್) ಪೂರ್ತಿಗೊಳಿಸಿದ ಬಳಿಕ ಅವರು ತಮ್ಮ ವಿಷಯದಲ್ಲಿ, ನಿಯಮ ಪ್ರಕಾರ, ಏನು ಮಾಡಿದರೂ ನಿಮ್ಮ ಮೇಲೇನೂ ದೋಷವಿಲ್ಲ. ನೀವು ಮಾಡುವ ಎಲ್ಲವನ್ನೂ ಅಲ್ಲಾಹನು ಅರಿತಿರುತ್ತಾನೆ.

235. (ಇದ್ದತ್ ಅವಧಿಯಲ್ಲಿ) ನೀವು ಆ ಮಹಿಳೆಯರಿಗೆ ಸೂಚ್ಯವಾಗಿ ವಿವಾಹ ಪ್ರಸ್ತಾಪ ನೀಡಿದರೂ (ಆ ಅಪೇಕ್ಷೆಯನ್ನು) ನಿಮ್ಮೊಳಗೇ ಬಚ್ಚಿಟ್ಟುಕೊಂಡರೂ, ನಿಮ್ಮ ಮೇಲೆ ದೋಷವೇನಿಲ್ಲ. ನೀವು ಸದ್ಯದಲ್ಲೇ ಅವರೊಡನೆ ಈ ವಿಷಯ ಪ್ರಸ್ತಾಪಿಸುವಿರೆಂಬುದನ್ನು ಅಲ್ಲಾಹನು ಬಲ್ಲನು. ಏನಿದ್ದರೂ ನೀವು ಅವರೊಡನೆ (ಈ ವಿಷಯವನ್ನು) ನಿಯಮ ಪ್ರಕಾರ ಹೇಳಬೇಕೇ ಹೊರತು, ಅವರಿಗೆ ರಹಸ್ಯ ವಾಗ್ದಾನ ಮಾಡಬಾರದು ಮತ್ತು ನಿರ್ದಿಷ್ಟ ಅವಧಿಯು (ಇದ್ದತ್) ಮುಗಿಯುವ ತನಕ ನೀವು ವಿವಾಹ ಬಂಧನದ ನಿರ್ಧಾರ ಕೈಗೊಳ್ಳಬಾರದು. ನಿಮ್ಮ ಮನದೊಳಗಿರುವ ವಿಚಾರಗಳನ್ನು ಅಲ್ಲಾಹನು ಬಲ್ಲನೆಂಬುದು ನಿಮಗೆ ತಿಳಿದಿರಲಿ ಮತ್ತು ನೀವು ಅವನ (ಅಲ್ಲಾಹನ) ವಿಷಯದಲ್ಲಿ ಎಚ್ಚರವಾಗಿರಿ. ಹಾಗೆಯೇ ಅಲ್ಲಾಹನು ತುಂಬಾ ಕ್ಷಮಿಸುವವನು ಹಾಗೂ ಸಂಯಮಿ ಎಂಬುದು ನಿಮಗೆ ತಿಳಿದಿರಲಿ.

236. ನೀವು ನಿಮ್ಮ ಮಹಿಳೆಯರನ್ನು ಮುಟ್ಟುವ ಮುನ್ನವೇ ಅಥವಾ ಅವರಿಗೆ ಕೊಡಬೇಕಾದ ‘ಮಹ್ರ್’ಅನ್ನು ನಿಗದಿ ಪಡಿಸುವ ಮುನ್ನವೇ ಅವರನ್ನು ವಿಚ್ಛೇದಿಸಿದರೆ ನಿಮ್ಮ ಮೇಲೆ ದೋಷವಿಲ್ಲ. ಆದರೆ (ಆ ವೇಳೆ) ನೀವು ಅವರಿಗೆ, ಒಂದು ಸೂಕ್ತ ಮೊತ್ತವನ್ನು ಕೊಡಿರಿ, (ಈ ವಿಷಯದಲ್ಲಿ) ಸಂಪನ್ನನಿಗೆ ಅವನ ಶಕ್ತಿಯನುಸಾರ ಮತ್ತು ಬಡವನಿಗೆ ಅವನ ಶಕ್ತಿಯನುಸಾರ ಹೊಣೆಗಾರಿಕೆ ಇದೆ. ನಿಯಮ ಪ್ರಕಾರ ನೀಡಬೇಕಾದ ಈ ಕೊಡುಗೆ ನೀಡುವುದು ಸಜ್ಜನರ ಕರ್ತವ್ಯವಾಗಿದೆ.

237. ನೀವು ಅವರನ್ನು ಮುಟ್ಟುವ ಮುನ್ನವೇ ವಿಚ್ಛೇದಿಸಿದರೆ ಮತ್ತು ಅವರಿಗೆ ಕೊಡಬೇಕಾದ ‘ಮಹ್ರ್’ ಅನ್ನು ನೀವು ಮೊದಲೇ ನಿಗದಿಗೊಳಿಸಿದ್ದರೆ, ನಿಗದಿತ ಮೊತ್ತದ ಅರ್ಧಾಂಶವನ್ನು ಕಡ್ಡಾಯವಾಗಿ ಪಾವತಿಸಬೇಕು – ಆ ಮಹಿಳೆಯರೇ ಅದನ್ನು ಕ್ಷಮಿಸಿಬಿಟ್ಟ ಅಥವಾ ವಿವಾಹದ ನಿಯಂತ್ರಣ ಹೊತ್ತವನು ಅದನ್ನು ಕ್ಷಮಿಸಿ ಬಿಟ್ಟ ಹೊರತು. ಮತ್ತು ನೀವು ಕ್ಷಮಿಸಿದರೆ (ಪೂರ್ಣ ಮೊತ್ತ ಪಾವತಿಸಿದರೆ) ಅದು ಧರ್ಮನಿಷ್ಠೆಗೆ ಹತ್ತಿರವಿರುವ ಧೋರಣೆಯಾಗಿದೆ. ನೀವು ಪರಸ್ಪರ (ವ್ಯವಹಾರಗಳಲ್ಲಿ) ಔದಾರ್ಯವನ್ನು ಮರೆಯಬಾರದು. ಖಂಡಿತವಾಗಿಯೂ ಅಲ್ಲಾಹನು ನೀವು ಮಾಡುವ ಎಲ್ಲವನ್ನೂ ನೋಡುತ್ತಿದ್ದಾನೆ.

238. ನೀವು ನಮಾಝನ್ನು ಎಚ್ಚರಿಕೆಯಿಂದ ಪಾಲಿಸಿರಿ. ವಿಶೇಷವಾಗಿ ಮಧ್ಯದ ನಮಾಝನ್ನು (ಪಾಲಿಸಿರಿ) ಮತ್ತು ಅಲ್ಲಾಹನ ಮುಂದೆ ವಿಧೇಯರಾಗಿ (ಆರಾಧನೆಗೆ) ನಿಲ್ಲಿರಿ.

239. ನಿಮಗೆ (ಆಕ್ರಮಣದ) ಭಯವಿದ್ದರೆ (ಅಂತಹ ತುರ್ತು ಸನ್ನಿವೇಶದಲ್ಲೂ) ಕಾಲ್ನಡಿಗೆಯಲ್ಲಿರುವ ಅಥವಾ ಸವಾರರಾಗಿರುವ ಸ್ಥಿತಿಯಲ್ಲೇ (ನಮಾಝ್ ಸಲ್ಲಿಸಿರಿ). ಆ ಬಳಿಕ ನಿಮಗೆ ಶಾಂತಿ ದೊರೆತಾಗ, ಈ ಹಿಂದೆ ನಿಮಗೆ ತಿಳಿಯದೆ ಇದ್ದಾಗ ಅವನು ನಿಮಗೆ ಕಲಿಸಿಕೊಟ್ಟ ಪ್ರಕಾರ ಅಲ್ಲಾಹನನ್ನು ಸ್ಮರಿಸಿರಿ.

240. ನಿಮ್ಮ ಪೈಕಿ, ಪತ್ನಿಯರನ್ನು ಬಿಟ್ಟು ಮೃತರಾಗುವವರು ತಮ್ಮ ಪತ್ನಿಯರ ಪರವಾಗಿ- ಅವರಿಗೆ ಒಂದು ವರ್ಷ ಜೀವನಾಂಶ ಒದಗಿಸಬೇಕೆಂದು ಮತ್ತು ಅವರನ್ನು ಮನೆಯಿಂದ ಹೊರ ಹಾಕಬಾರದೆಂದು ಉಯಿಲು ಮಾಡಿರಬೇಕು. ಇನ್ನು, ಅವರು ತಾವಾಗಿಯೇ ಹೊರಟು ಹೋದಲ್ಲಿ – ಅವರು ನಿಯಮ ಪ್ರಕಾರ ತಮ್ಮ ಸ್ವಂತದ ವಿಷಯದಲ್ಲಿ ಏನೇ ಮಾಡಿದರೂ ನಿಮ್ಮ ಮೇಲೆ ದೋಷವೇನಿಲ್ಲ. ಅಲ್ಲಾಹನು ಪ್ರಚಂಡನೂ ಯುಕ್ತಿವಂತನೂ ಆಗಿದ್ದಾನೆ.

241. ಮತ್ತು ವಿಚ್ಛೇದಿತ ಮಹಿಳೆಯರಿಗೆ ನಿಯಮಾನುಸಾರ ಏನಾದರೂ ಕೊಡುಗೆ ನೀಡಬೇಕು. ಅದು ಧರ್ಮ ನಿಷ್ಠರ ಕರ್ತವ್ಯವಾಗಿದೆ.

242. ನೀವು ಅರ್ಥ ಮಾಡಿಕೊಳ್ಳಬೇಕೆಂದು ಈ ರೀತಿ ಅಲ್ಲಾಹನು ತನ್ನ ವಚನಗಳನ್ನು ನಿಮಗೆ ವಿವರಿಸಿ ಕೊಡುತ್ತಾನೆ.

243. ತಮ್ಮ ನೆಲೆಗಳನ್ನು ಬಿಟ್ಟು ಹೊರಟ ಆ ಮಂದಿಯನ್ನು ನೀವು ಕಂಡಿರಾ? ಅವರು ಸಾವಿರಾರು ಸಂಖ್ಯೆಯಲ್ಲಿದ್ದರು, ಆದರೆ ಮರಣಕ್ಕೆ ಅಂಜಿದ್ದರು. ಅಲ್ಲಾಹನು ಅವರೊಡನೆ ‘‘ಸಾಯಿರಿ’’ ಎಂದನು. ಆ ಬಳಿಕ ಅವರನ್ನು ಜೀವಂತಗೊಳಿಸಿದನು. ಖಂಡಿತವಾಗಿಯೂ ಅಲ್ಲಾಹನು ಮಾನವರ ಪಾಲಿಗೆ ತುಂಬಾ ಉದಾರನಾಗಿದ್ದಾನೆ. ಆದರೆ ಮಾನವರಲ್ಲಿ ಹೆಚ್ಚಿನವರು ಕೃತಜ್ಞತೆ ಸಲ್ಲಿಸುವುದಿಲ್ಲ.

244. ನೀವು ಅಲ್ಲಾಹನ ಮಾರ್ಗದಲ್ಲೇ ಯುದ್ಧ ಮಾಡಿರಿ ಮತ್ತು ನಿಮಗೆ ತಿಳಿದಿರಲಿ, ಅಲ್ಲಾಹನು ಎಲ್ಲವನ್ನೂ ಕೇಳುವವನು ಮತ್ತು ತಿಳಿದಿರುವವನಾಗಿದ್ದಾನೆ.

245. ಯಾರಿದ್ದಾರೆ, ಅಲ್ಲಾಹನಿಗೆ ಒಳಿತಿನ ಸಾಲವನ್ನು ನೀಡುವವರು? ಅವನು ಅದನ್ನು ಹಲವು ಪಟ್ಟು ಹೆಚ್ಚಿಸಿ ಅವನಿಗೆ (ಮರಳಿಸುವನು). (ಸಂಪತ್ಸಾಧನಗಳನ್ನು) ಸೀಮಿತಗೊಳಿಸುವವನೂ, ವಿಶಾಲಗೊಳಿಸುವವನೂ ಅಲ್ಲಾಹನೇ. ಕೊನೆಗೆ ನೀವು ಅವನೆಡೆಗೇ ಮರಳಿಸಲ್ಪಡುವಿರಿ.

246. ಇಸ್ರಾಈಲರ ಸಂತತಿಯಲ್ಲಿನ, ಮೂಸಾರ ಅನಂತರದ ಒಂದು ಪಂಗಡವನ್ನು ನೀವು ಕಾಣಲಿಲ್ಲವೇ? ಅವರು ತಮ್ಮ ಪ್ರವಾದಿಯೊಡನೆ, ‘‘ನಾವು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡುವಂತಾಗಲು, ನಮಗಾಗಿ ಒಬ್ಬ ದೊರೆಯನ್ನು ನೇಮಿಸಿರಿ’’ ಎಂದರು. ‘‘ನಿಮ್ಮ ಮೇಲೆ ಯುದ್ಧವು ಕಡ್ಡಾಯವಾಗಿ ಬಿಟ್ಟಾಗ ನೀವು ಯುದ್ಧ ಮಾಡದೆ ಇರುವುದಿಲ್ಲ ತಾನೇ?’’ ಎಂದು ಅವರು (ಪ್ರವಾದಿ) ಕೇಳಿದರು. ಆಗ ಅವರು, ‘‘ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡದೆ ಇರಲು ನಮಗೇನಾಗಿದೆ? ನಮ್ಮನ್ನಂತು ನಮ್ಮ ನೆಲೆಗಳಿಂದ ಹೊರದಬ್ಬಲಾಗಿದೆ ಮತ್ತು ನಮ್ಮ ಮಕ್ಕಳಿಂದ ನಮ್ಮನ್ನು ದೂರಗೊಳಿಸಲಾಗಿದೆ’’ ಎಂದರು. ಕೊನೆಗೆ ಅವರ ಮೇಲೆ ಯುದ್ಧವನ್ನು ಕಡ್ಡಾಯಗೊಳಿಸಲಾದಾಗ ಅವರಲ್ಲಿನ ಕೇವಲ ಕೆಲವರ ಹೊರತು ಉಳಿದವರು ಮುಖ ತಿರುಗಿಸಿಕೊಂಡರು. ಅಲ್ಲಾಹನು ಅಕ್ರಮಿಗಳನ್ನು ಚೆನ್ನಾಗಿ ಬಲ್ಲನು.

247. ‘‘ಅಲ್ಲಾಹನು ನಿಮಗಾಗಿ, ತಾಲೂತ್‌ರನ್ನು ದೊರೆಯಾಗಿ ನೇಮಿಸಿದ್ದಾನೆ’’ ಎಂದು ಅವರೊಡನೆ, ಅವರ ಪ್ರವಾದಿಯು ಹೇಳಿದರು. ಆಗ ಅವರು ‘‘ನಮ್ಮ ಮೇಲೆ ಅವನ ದೊರೆತನ ನಡೆಯಲು ಹೇಗೆ ಸಾಧ್ಯ? ದೊರೆತನಕ್ಕಂತು ನಾವೇ ಅವನಿಗಿಂತ ಹೆಚ್ಚು ಅರ್ಹರಾಗಿದ್ದೇವೆ. ಅವನಿಗಂತೂ, ಸಂಪತ್ತಿನಲ್ಲೂ ವೈಶಾಲ್ಯ ನೀಡಲಾಗಿಲ್ಲ’’ ಎಂದರು. ಅವರು (ಪ್ರವಾದಿ) ಹೇಳಿದರು; ‘‘ಖಂಡಿತವಾಗಿಯೂ ಅಲ್ಲಾಹನೇ ನಿಮ್ಮ ಮೇಲೆ ಅವನನ್ನು ಆರಿಸಿಕೊಂಡಿದ್ದಾನೆ ಮತ್ತು ಜ್ಞಾನದಲ್ಲೂ ಶರೀರದಲ್ಲೂ ಅವನಿಗೆ ಹೆಚ್ಚಿನ ಸಾಮರ್ಥ್ಯ ನೀಡಿದ್ದಾನೆ. ಅಲ್ಲಾಹನಂತು ತನ್ನ ಸಾಮ್ರಾಜ್ಯವನ್ನು ತಾನಿಚ್ಛಿಸಿದವರಿಗೆ ನೀಡುತ್ತಾನೆ ಮತ್ತು ಅಲ್ಲಾಹನು ತುಂಬಾ ವಿಶಾಲನೂ ಜ್ಞಾನಿಯೂ ಆಗಿದ್ದಾನೆ’’.

248. ಅವರೊಡನೆ ಅವರ ಪ್ರವಾದಿ ಹೇಳಿದರು; ‘‘ಖಂಡಿತವಾಗಿಯೂ ಅವನ ಆಳ್ವಿಕೆಯ (ಸಿಂಧುತ್ವಕ್ಕೆ) ಪುರಾವೆಯಾಗಿ, ಆ ಪೆಟ್ಟಿಗೆಯು ನಿಮ್ಮ ಬಳಿಗೆ ಬರುವುದು. ಅದರಲ್ಲಿ ನಿಮ್ಮೊಡೆಯನ ಕಡೆಯಿಂದ ಬಂದ ನೆಮ್ಮದಿಯ ಸಾಧನಗಳಿವೆ ಮತ್ತು ಮೂಸಾರ ಸಂತತಿ ಹಾಗೂ ಹಾರೂನರ ಸಂತತಿಯು ಬಿಟ್ಟು ಹೋದ ಉಳಿಕೆಗಳಿವೆ. ಅದನ್ನು ಮಲಕ್‌ಗಳು ಹೊತ್ತಿದ್ದಾರೆ. ನೀವು ವಿಶ್ವಾಸಿಗಳಾಗಿದ್ದರೆ ಖಂಡಿತವಾಗಿಯೂ ಅದರಲ್ಲಿ ನಿಮಗಾಗಿ ಪುರಾವೆ ಇದೆ’’.

249. ತಾಲೂತ್, ಸೇನೆಯೊಂದಿಗೆ ಹೊರಟಾಗ ಹೇಳಿದರು; ‘‘ಅಲ್ಲಾಹನು ಒಂದು ನದಿಯ ಮೂಲಕ ನಿಮ್ಮನ್ನು ಪರೀಕ್ಷಿಸುವನು. ಅದರ ನೀರು ಕುಡಿಯುವವನು ನನ್ನವನಲ್ಲ. ಅದರ ರುಚಿಯನ್ನೇ ನೋಡದವನು ಮಾತ್ರ ಖಂಡಿತ ನನ್ನವನು – ಯಾರಾದರೂ ತನ್ನ ಕೈಯಿಂದ, ಒಂದು ಬೊಗಸೆಯಷ್ಟು ಮಾತ್ರ ಕುಡಿದರೆ ತಪ್ಪಲ್ಲ’. ಆದರೆ ಅವರಲ್ಲಿನ ಕೇವಲ ಕೆಲವರ ಹೊರತು ಇತರೆಲ್ಲರೂ ಆ ಹೊಳೆಯ ನೀರನ್ನು ಕುಡಿದರು. ಕೊನೆಗೆ, ಆತ (ತಾಲೂತ್) ಮತ್ತು ಆತನ ಜೊತೆಗಿದ್ದ ವಿಶ್ವಾಸಿಗಳು ನದಿಯನ್ನು ದಾಟಿದಾಗ, ಆ ಮಂದಿ, ‘‘ಇಂದು ನಮ್ಮ ಬಳಿ, ಜಾಲೂತ್ ಮತ್ತವನ ಪಡೆಗಳನ್ನು ಎದುರಿಸುವ ಶಕ್ತಿ ಉಳಿದಿಲ್ಲ’’ ಎಂದು ಬಿಟ್ಟರು. ಆದರೆ ತಾವು ಅಲ್ಲಾಹನನ್ನು ಭೇಟಿಯಾಗಲಿಕ್ಕಿದೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದವರು ‘‘ಅದೆಷ್ಟೋ ಬಾರಿ, ಸಣ್ಣ ಪಡೆಗಳು ಅಲ್ಲಾಹನ ಅನುಗ್ರಹದಿಂದ ದೊಡ್ಡ ಪಡೆಗಳನ್ನು ಸೋಲಿಸಿದ್ದುಂಟು. ಅಲ್ಲಾಹನಂತು ಸಹನಶೀಲರ ಜೊತೆಗಿದ್ದಾನೆ’’ ಎಂದರು.

250. ಹೀಗೆ, ಜಾಲೂತ್ ಮತ್ತವನ ಸೇನೆಯೊಂದಿಗೆ ಅವರ ಮುಖಾಮುಖಿಯಾದಾಗ, ಅವರು ‘‘ನಮ್ಮೊಡೆಯಾ, ನಮಗೆ ಸಹನೆಯನ್ನು ದಯಪಾಲಿಸು ಹಾಗೂ ನಮ್ಮ ಹೆಜ್ಜೆಗಳನ್ನು ಸ್ಥಿರಗೊಳಿಸು ಮತ್ತು ಧಿಕ್ಕಾರಿ ಸಮೂಹದ ವಿರುದ್ಧ ನಮಗೆ ವಿಜಯ ನೀಡು’’ ಎಂದು ಪ್ರಾರ್ಥಿಸಿದರು.

251. ಕೊನೆಗೆ ಅವರು (ತಾಲೂತರ ಪಡೆ) ಅಲ್ಲಾಹನ ಅನುಗ್ರಹದಿಂದ ಅವರನ್ನು (ಜಾಲೂತನ ಪಡೆಯನ್ನು) ಸೋಲಿಸಿ ಬಿಟ್ಟರು ಮತ್ತು ದಾವೂದರು ಜಾಲೂತನನ್ನು ಕೊಂದರು. ಆ ಬಳಿಕ ಅಲ್ಲಾಹನು ಅವರಿಗೆ (ದಾವೂದರಿಗೆ) ಸಾಮ್ರಾಜ್ಯವನ್ನು ಮತ್ತು ಯುಕ್ತಿಯನ್ನು ನೀಡಿದನು ಮತ್ತು ತಾನಿಚ್ಛಿಸಿದ್ದನ್ನು ಅವರಿಗೆ ಕಲಿಸಿಕೊಟ್ಟನು. ಈ ರೀತಿ ಅಲ್ಲಾಹನು ಕೆಲವರನ್ನು ಮತ್ತೆ ಕೆಲವರ ಮೂಲಕ ತೊಲಗಿಸದೆ ಇದ್ದಿದ್ದರೆ, ಭೂಮಿಯಲ್ಲಿ ಖಂಡಿತ ವಿನಾಶ ಮೆರೆಯುತ್ತಿತ್ತು. ನಿಜವಾಗಿ ಅಲ್ಲಾಹನು ಸಕಲ ಲೋಕಗಳ ಪಾಲಿಗೆ ಉದಾರನಾಗಿದ್ದಾನೆ.

252. (ದೂತರೇ,) ಇವು, ನಾವು ನಿಮಗೆ ಸರಿಯಾಗಿ ಓದಿ ಕೇಳಿಸುತ್ತಿರುವ ಅಲ್ಲಾಹನ ವಚನಗಳು. ಮತ್ತು ನೀವು ನಿಸ್ಸಂದೇಹವಾಗಿ ಅಲ್ಲಾಹನ ಒಬ್ಬ ದೂತರಾಗಿರುವಿರಿ.

ಕಾಂಡ– 3

 253. ಆ ದೂತರಲ್ಲಿ ಕೆಲವರಿಗೆ ನಾವು ಇತರ ಕೆಲವರಿಗಿಂತ ಹೆಚ್ಚಿನ ಹಿರಿಮೆಯನ್ನು ನೀಡಿರುವೆವು. ಅವರಲ್ಲಿ ಒಬ್ಬರೊಡನೆ ಅಲ್ಲಾಹನು ಮಾತನಾಡಿದ್ದನು ಹಾಗೂ ಅವರಲ್ಲಿ ಕೆಲವರ ಸ್ಥಾನವನ್ನು ಅವನು ಉನ್ನತಗೊಳಿಸಿದ್ದನು. ನಾವು ಮರ್ಯಮರ ಪುತ್ರ ಈಸಾರಿಗೆ ಸ್ಪಷ್ಟ ಪುರಾವೆಗಳನ್ನು ನೀಡಿದ್ದೆವು ಮತ್ತು ಪವಿತ್ರ ಆತ್ಮದ (ಜಿಬ್ರೀಲ್‌ರ) ಮೂಲಕ ಅವರಿಗೆ ಬಲ ಒದಗಿಸಿದ್ದನು. ಅಲ್ಲಾಹನು ಬಯಸಿದ್ದರೆ, ಅವರ (ಆ ದೂತರ) ಬಳಿಕ ಬಂದವರು (ಮುಂದಿನ ಪೀಳಿಗೆಗಳು) ಸತ್ಯದ ಸ್ಪಷ್ಟ ಪುರಾವೆಗಳು ತಮ್ಮ ಬಳಿಗೆ ಬಂದ ಬಳಿಕ ಪರಸ್ಪರ ರಕ್ತಪಾತ ನಡೆಸುತ್ತಿರಲಿಲ್ಲ. ಆದರೂ ಅವರು ಪರಸ್ಪರ ಭಿನ್ನಾಭಿಪ್ರಾಯ ತಾಳಿದರು. ಅವರಲ್ಲಿ ವಿಶ್ವಾಸಿಗಳೂ ಇದ್ದರು ಧಿಕ್ಕಾರಿಗಳೂ ಇದ್ದರು. ಅಲ್ಲಾಹನು ಬಯಸಿದ್ದರೆ ಅವರು ಪರಸ್ಪರ ರಕ್ತಪಾತ ನಡೆಸುತ್ತಿರಲಿಲ್ಲ. ಆದರೆ ಅಲ್ಲಾಹನು ತಾನು ಬಯಸಿದ್ದನ್ನೇ ಮಾಡುತ್ತಾನೆ.

254. ವಿಶ್ವಾಸಿಗಳೇ, ಯಾವುದೇ ವ್ಯಾಪಾರವಾಗಲಿ ಸ್ನೇಹವಾಗಲಿ ಶಿಫಾರಸ್ಸಾಗಲಿ ನಡೆಯದ ದಿನವೊಂದು ಬರುವ ಮುನ್ನವೇ, ನಾವು ನಿಮಗೆ ಏನನ್ನು ನೀಡಿರುವೆವೋ ಅದರಿಂದ (ಸತ್ಕಾರ್ಯಕ್ಕೆ) ಖರ್ಚು ಮಾಡಿರಿ. ಧಿಕ್ಕಾರಿಗಳೇ ಅಕ್ರಮಿಗಳು.

255. ಅಲ್ಲಾಹ್ – ಅವನ ಹೊರತು ಪೂಜೆಗೆ ಅರ್ಹರು ಬೇರಾರೂ ಇಲ್ಲ. ಅವನು ಸದಾ ಜೀವಂತನು, ಎಲ್ಲರ ನಿಯಂತ್ರಕನು. ತೂಕಡಿಕೆಯಾಗಲಿ ನಿದ್ದೆಯಾಗಲಿ ಅವನನ್ನು ಬಾಧಿಸುವುದಿಲ್ಲ. ಆಕಾಶಗಳಲ್ಲಿರುವ ಮತ್ತು ಭೂಮಿಯಲ್ಲಿರುವ ಎಲ್ಲವೂ ಅವನದೇ. ಅವನ ಮುಂದೆ, ಅವನ ಅಪ್ಪಣೆ ಇಲ್ಲದೆ ಶಿಫಾರಸು ಮಾಡಬಲ್ಲವರು ಯಾರು? ಅವರ (ಜನರ) ಮುಂದಿರುವ ಮತ್ತು ಅವರ ಹಿಂದಿರುವ ಎಲ್ಲವನ್ನೂ ಅವನು ಬಲ್ಲನು. ಅವನ ಜ್ಞಾನದ ಯಾವ ಅಂಶವನ್ನೂ ಗ್ರಹಿಸಲು ಅವರಿಗೆ ಸಾಧ್ಯವಿಲ್ಲ – ಅವನೇ ಇಚ್ಛಿಸುವಷ್ಟರ ಹೊರತು. ಅವನ ಅಧಿಕಾರ ಪೀಠವು ಆಕಾಶಗಳನ್ನು ಮತ್ತು ಭೂಮಿಯನ್ನು ಆವರಿಸಿದೆ. ಅವುಗಳ ಸಂರಕ್ಷಣೆಯ ಕೆಲಸವು ಅವನನ್ನು ದಣಿಸುವುದಿಲ್ಲ. ಮತ್ತು ಅವನು ಅತ್ಯುನ್ನತನೂ, ಮಹಾನನೂ ಆಗಿದ್ದಾನೆ.

256. ಧರ್ಮದಲ್ಲಿ ಬಲವಂತವಿಲ್ಲ. ಖಂಡಿತವಾಗಿಯೂ ಸರಿದಾರಿಯು ತಪ್ಪು ದಾರಿಗಳಿಂದ ಪ್ರತ್ಯೇಕವಾಗಿದೆ. ಎಲ್ಲ ಮಿಥ್ಯ ಶಕ್ತಿಗಳನ್ನು ಧಿಕ್ಕರಿಸಿ ಅಲ್ಲಾಹನಲ್ಲಿ ನಂಬಿಕೆ ಇಟ್ಟವನು ಬಲಿಷ್ಠ ಆಶ್ರಯವೊಂದನ್ನು ಅವಲಂಬಿಸಿದನು. ಅದು ಎಂದಿಗೂ ಮುರಿಯದ ಆಶ್ರಯವಾಗಿದೆ ಮತ್ತು ಅಲ್ಲಾಹನು ಎಲ್ಲವನ್ನೂ ಕೇಳುವವನೂ ಎಲ್ಲವನ್ನೂ ಬಲ್ಲವನೂ ಆಗಿದ್ದಾನೆ.

257. ಅಲ್ಲಾಹನು ವಿಶ್ವಾಸಿಗಳ ಪೋಷಕನಾಗಿದ್ದಾನೆ. ಅವನು ಅವರನ್ನು ಕತ್ತಲುಗಳಿಂದ ಹೊರತೆಗೆದು ಬೆಳಕಿನೆಡೆಗೆ ನಡೆಸುತ್ತಾನೆ ಮತ್ತು ಸತ್ಯವನ್ನು ಧಿಕ್ಕರಿಸಿದವರ ಪಾಲಿಗೆ, ಮಿಥ್ಯ ಶಕ್ತಿಗಳೇ ಪರಮಮಿತ್ರರು. ಅವು ಅವರನ್ನು ಬೆಳಕಿನಿಂದ ಹೊರತೆಗೆದು ಕತ್ತಲುಗಳೆಡೆಗೆ ನಡೆಸುತ್ತವೆ. ಅವರು ನರಕದವರು. ಅವರು ಸದಾಕಾಲ ಅಲ್ಲೇ ಇರುವರು.

258. ಇಬ್ರಾಹೀಮರೊಡನೆ ಅವರ ಒಡೆಯನ ಕುರಿತು ಜಗಳಕ್ಕಿಳಿದಾತನನ್ನ್ನು ನೀವು ಕಾಣಲಿಲ್ಲವೇ? ಅಲ್ಲಾಹನು ಆತನಿಗೆ ಸಾಮ್ರಾಜ್ಯವನ್ನು ನೀಡಿದ್ದನು. ‘‘ಜೀವಂತ ಗೊಳಿಸುವವನು ಮತ್ತು ಸಾಯಿಸುವವನೇ ನನ್ನ ದೇವರು’’ ಎಂದು ಇಬ್ರಾಹೀಮರು ಹೇಳಿದಾಗ ಆತನು ‘‘ನಾನೂ ಜೀವ ನೀಡುತ್ತೇನೆ ಮತ್ತು ನಾನೂ ಸಾಯಿಸುತ್ತೇನೆ’’ ಎಂದನು. ಆಗ ಇಬ್ರಾಹೀಮರು ‘‘ಅಲ್ಲಾಹನು ಸೂರ್ಯವನ್ನು ಪೂರ್ವದಿಂದ ಉದಯಿಸುತ್ತಾನೆ ನೀನು ಅದನ್ನು ಪಶ್ಚಿಮದಿಂದ ಉದಯಿಸು’’ ಎಂದರು. ಆ ಧಿಕ್ಕಾರಿ ಬೆಚ್ಚಿಬಿದ್ದನು. ಅಲ್ಲಾಹನು ಅಕ್ರಮಿಗಳ ಪಂಗಡಕ್ಕೆ ಮಾರ್ಗದರ್ಶನ ನೀಡುವುದಿಲ್ಲ.

259. ಅಥವಾ, ತನ್ನ ಚಪ್ಪರಗಳ ಮೇಲೆ ಕುಸಿದು ಬಿದ್ದಿದ್ದ (ಸಂಪೂರ್ಣ ಬುಡಮೇಲಾಗಿದ್ದ) ಒಂದು ಊರಿನಿಂದ ಹಾದು ಹೋಗುತ್ತಿದ್ದ ವ್ಯಕ್ತಿಯನ್ನು (ನೀವು ಕಾಣಲಿಲ್ಲವೇ)? ಅವನು ‘‘ಇದು (ಈ ಊರು, ಹೀಗೆ) ಸತ್ತು ಬಿದ್ದ ಬಳಿಕ ಇದನ್ನು ಅಲ್ಲಾಹನು ಹೇಗೆ ತಾನೇ ಮತ್ತೆ ಜೀವಂತಗೊಳಿಸುತ್ತಾನೆ?’’ ಎಂದನು. ಅಲ್ಲಾಹನು ಆತನನ್ನು ನೂರು ವರ್ಷಗಳ ಅವಧಿಗೆ ಸಾಯಿಸಿದನು. ಆ ಬಳಿಕ ಅವನನ್ನು ಮತ್ತೆ ಜೀವಂತಗೊಳಿಸಿ ‘‘ನೀನು (ಸತ್ತ ಸ್ಥಿತಿಯಲ್ಲಿ) ಎಷ್ಟು ಕಾಲ ಇದ್ದೆ ?’’ ಎಂದು ವಿಚಾರಿಸಿದನು. ‘‘ನಾನು ಒಂದು ದಿನ ಅಥವಾ ದಿನದ ಒಂದು ಭಾಗದಷ್ಟು ಕಾಲ ಆ ಸ್ಥಿತಿಯಲ್ಲಿದ್ದೆ ’’ ಎಂದು ಆತನು ಹೇಳಿದನು. ಆಗ ಅವನು (ಅಲ್ಲಾಹನು) ಹೇಳಿದನು; ‘‘ನಿಜವಾಗಿ ನೀನು ನೂರು ವರ್ಷ (ಆ ಸ್ಥಿತಿಯಲ್ಲಿ) ಇದ್ದೆ. ಇದೀಗ ನೀನು ನಿನ್ನ ಆಹಾರ ಮತ್ತು ನಿನ್ನ ಪಾನೀಯವನ್ನು ನೋಡು. ಅವು ಹಳಸಲಾಗಿಲ್ಲ. ಹಾಗೆಯೇ ನಿನ್ನ ಕತ್ತೆಯನ್ನೊಮ್ಮೆ ನೋಡು. ನಾವು ನಿನ್ನನ್ನು ಜನರ ಪಾಲಿಗೆ ಒಂದು ಪುರಾವೆಯಾಗಿಸುವೆವು. ಮತ್ತು (ಆ ಸತ್ತ ಕತ್ತೆಯ) ಎಲುಬುಗಳನ್ನು ನಾವು ಯಾವ ರೀತಿ ಮತ್ತೆ ಜೋಡಿಸುತ್ತೇವೆ ಮತ್ತು ಅವುಗಳಿಗೆ ಯಾವ ರೀತಿ ಮಾಂಸದ ಪೋಷಾಕನ್ನು ತೊಡಿಸುತ್ತೇವೆಂದು ನೋಡು’’. ಕೊನೆಗೆ ಆತನಿಗೆ (ಸತ್ಯವು) ಸ್ಪಷ್ಟವಾದಾಗ ಅವನು ‘‘ಅಲ್ಲಾಹನು ಎಲ್ಲವನ್ನೂ ಮಾಡಲು ಶಕ್ತನೆಂಬುದು ನನಗೆ ತಿಳಿಯಿತು’’ ಎಂದನು.

260. ಮತ್ತು ಇಬ್ರಾಹೀಮರು, ‘‘ನನ್ನೊಡೆಯಾ, ನೀನು ಸತ್ತವರನ್ನು ಜೀವಂತ ಗೊಳಿಸುವುದು ಹೇಗೆ ಎಂಬುದನ್ನು ನನಗೆ ತೋರಿಸಿಕೊಡು’’ ಎಂದಾಗ ಅವನು (ಅಲ್ಲಾಹನು) ‘‘ನಿಮಗೆ ನಂಬಿಕೆ ಇಲ್ಲವೇ?’’ ಎಂದು ಕೇಳಿದನು. ಅವರು, ‘‘(ನಂಬಿಕೆ) ಖಂಡಿತ ಇದೆ. ಆದರೂ ನನ್ನ ಮನಸ್ಸಿನ ತೃಪ್ತಿಗಾಗಿ (ಕೇಳುತ್ತಿದ್ದೇನೆ)’’ ಎಂದರು. ಅವನು ಹೇಳಿದನು; ‘‘ನೀವೀಗ ನಾಲ್ಕು ಪಕ್ಷಿಗಳನ್ನು ಹಿಡಿದು ತನ್ನಿರಿ ಮತ್ತು ಅವು ನಿಮ್ಮನ್ನು ಗುರುತಿಸುವಂತೆ ಅವುಗಳನ್ನು ಪಳಗಿಸಿರಿ. ಆ ಬಳಿಕ, (ಅವುಗಳನ್ನು ತುಂಡರಿಸಿ) ಅವುಗಳ ಭಾಗಗಳನ್ನು ಪ್ರತ್ಯೇಕ ಬೆಟ್ಟಗಳ ಮೇಲಿಟ್ಟು, ಅವುಗಳನ್ನು ಕೂಗಿ ಕರೆಯಿರಿ. ಅವು ಓಡೋಡಿ ನಿಮ್ಮ ಬಳಿಗೆ ಬರುವವು. ನಿಮಗೆ ತಿಳಿದಿರಲಿ, ಅಲ್ಲಾಹನು ಮಹಾ ಪ್ರಬಲನು ಮತ್ತು ಯುಕ್ತಿವಂತನಾಗಿದ್ದಾನೆ ’’.

261. ತಮ್ಮ ಸಂಪತ್ತನ್ನು ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡುವವರ ಉದಾಹರಣೆಯು, ಒಂದೊಂದು ತೆನೆಯಲ್ಲೂ ತಲಾ ನೂರು ಕಾಳುಗಳು ಇರುವ ಏಳೇಳು ತೆನೆಗಳನ್ನು ಮೊಳೆಯಿಸುವ ಒಂದು ಕಾಳಿನಂತಿದೆ. ಅಲ್ಲಾಹನು ತಾನಿಚ್ಛಿಸಿದವರಿಗೆ ಅಭಿವೃದ್ಧಿಯನ್ನು ನೀಡುತ್ತಾನೆ. ಅಲ್ಲಾಹನು ಬಹಳ ವೈಶಾಲ್ಯ ಉಳ್ಳವನೂ ಜ್ಞಾನಿಯೂ ಆಗಿದ್ದಾನೆ.

262. ತಮ್ಮ ಸಂಪತ್ತನ್ನು ಅಲ್ಲಾಹನ ಮಾರ್ಗದಲ್ಲಿ ಖರ್ಚು (ದಾನ) ಮಾಡುವವರು ಮತ್ತು ತಾವು ಖರ್ಚು (ದಾನ) ಮಾಡಿದ ಬೆನ್ನಿಗೇ, (ಫಲಾನುಭವಿಗಳ ಮೇಲೆ) ಋಣಭಾರ ಹೊರಿಸದವರು ಹಾಗೂ (ಅವರನ್ನು)ಪೀಡಿಸದವರು – ಅವರಿಗಾಗಿ ಅವರ ಪ್ರತಿಫಲವು, ಅವರ ಒಡೆಯನ ಬಳಿ ಇದೆ. ಅವರಿಗೆ ಯಾವ ಭಯವೂ ಇರದು ಮತ್ತು ಅವರು ದುಃಖಿಸಲಾರರು.

263. ಒಂದು ಒಳ್ಳೆಯ ಮಾತು ಮತ್ತು ಕ್ಷಮಾಯಾಚನೆಯು, ದಾನ ನೀಡಿ ಪೀಡಿಸುವುದಕ್ಕಿಂತ ಉತ್ತಮ. ಅಲ್ಲಾಹನಂತು ಸಕಲ ಅಪೇಕ್ಷೆಗಳಿಂದ ಮುಕ್ತನೂ ಅಪಾರ ಸಂಯಮಿಯೂ ಆಗಿದ್ದಾನೆ.

264. ವಿಶ್ವಾಸಿಗಳೇ, ಜನರಿಗೆ ತೋರಿಸುವುದಕ್ಕಾಗಿ ತನ್ನ ಸಂಪತ್ತನ್ನು ಖರ್ಚು ಮಾಡುವವನಂತೆ ಮತ್ತು ಅಲ್ಲಾಹನಲ್ಲಾಗಲಿ, ಅಂತಿಮ ದಿನದಲ್ಲಾಗಲಿ ನಂಬಿಕೆ ಇಲ್ಲದವನಂತೆ, ನೀವು ಋಣಭಾರ ಹೊರಿಸುವ ಹಾಗೂ ಪೀಡಿಸುವ ಮೂಲಕ ನಿಮ್ಮ ದಾನಗಳನ್ನು ವ್ಯರ್ಥಗೊಳಿಸಬೇಡಿ. ಅಂಥವನ ಉದಾಹರಣೆಯು, ಮಣ್ಣು ಮುಚ್ಚಿದ, ನುಣುಪಾದ ಬಂಡೆಯಂತಿದೆ. ಅದರ ಮೇಲೆ ಸುರಿಯುವ ಬಿರುಸಾದ ಮಳೆಯು ಅದನ್ನು ಶುಭ್ರಗೊಳಿಸಿಬಿಡುತ್ತದೆ. ತಮ್ಮ ಯಾವ ಸಂಪಾದನೆಯ ಮೇಲೂ ಅವರಿಗೆ ನಿಯಂತ್ರಣವಿಲ್ಲ. ಅಲ್ಲಾಹನು, ಧಿಕ್ಕಾರಿಗಳಿಗೆ ಸರಿದಾರಿಯನ್ನು ತೋರಿಸುವುದಿಲ್ಲ.

265. ಇನ್ನು, ಅಲ್ಲಾಹನ ಮೆಚ್ಚುಗೆಯನ್ನರಸಿ ಹಾಗೂ ಸ್ಥಿರಚಿತ್ತದೊಂದಿಗೆ ತಮ್ಮ ಸಂಪತ್ತನ್ನು ಖರ್ಚು ಮಾಡುವವರ ಉದಾಹರಣೆಯು, ಎತ್ತರದ ನೆಲದಲ್ಲಿರುವ ಒಂದು ತೋಟದಂತಿದೆ. ಅದರ ಮೇಲೆ ಬಿರುಸಾದ ಮಳೆ ಸುರಿದಾಗ, ಅದು ಎರಡು ಪಟ್ಟು ಫಲ ನೀಡುತ್ತದೆ. ಬಿರುಸಾದ ಮಳೆ ಸುರಿಯದಿದ್ದರೆ, ಕೇವಲ ಜಿನುಗು ಮಳೆಯೂ ಅದಕ್ಕೆ ಸಾಕಾಗಿ ಬಿಡುತ್ತದೆ. ಅಲ್ಲಾಹನಂತು, ನೀವು ಮಾಡುತ್ತಿರುವ ಎಲ್ಲವನ್ನೂ ನೋಡುತ್ತಿದ್ದಾನೆ.

266. ನಿಮ್ಮಲ್ಲಿ, ಎಲ್ಲ ಬಗೆಯ ಹಣ್ಣು ಹಂಪಲುಗಳಿರುವ ಹಾಗೂ ತಳ ಭಾಗದಲ್ಲಿ ನದಿಗಳು ಹರಿಯುತ್ತಿರುವ, ಖರ್ಜೂರ ಮತ್ತು ದ್ರಾಕ್ಷಿಗಳ ಒಂದು ತೋಟವಿರುವ ಯಾರಾದರೂ ತಾನು ವೃದ್ಧನಾಗಿ, ತನ್ನ ಮಕ್ಕಳು ದುರ್ಬಲರಾಗಿರುವಾಗ, ಆ ತೋಟದ ಮೇಲೆ ಬೆಂಕಿ ತುಂಬಿದ ಬಿರುಗಾಳಿಯು ಅಪ್ಪಳಿಸಿ, ಆ ತೋಟವು ಸುಟ್ಟು ಹೋಗುವುದನ್ನು ಇಷ್ಟಪಡುವನೇ? ಈ ರೀತಿ, ನೀವು ಚಿಂತನೆ ನಡೆಸಬೇಕೆಂದು ಅಲ್ಲಾಹನು ತನ್ನ ವಚನಗಳನ್ನು ನಿಮಗೆ ವಿವರಿಸಿಕೊಡುತ್ತಾನೆ.

267. ವಿಶ್ವಾಸಿಗಳೇ, ನಿಮ್ಮ ಸಂಪಾದನೆಯಲ್ಲಿನ ಶುದ್ಧ ಭಾಗವನ್ನು ಹಾಗೂ ನಾವು ನಿಮಗಾಗಿ ಭೂಮಿಯಿಂದ ಉತ್ಪಾದಿಸುವ ಬೆಳೆಗಳ ಒಂದು ಭಾಗವನ್ನು (ಸತ್ಕಾರ್ಯಗಳಿಗೆ) ಖರ್ಚು ಮಾಡಿರಿ. ಮತ್ತು ಯಾವುದನ್ನು ಸ್ವತಃ ನೀವು ಕಣ್ಣು ಮುಚ್ಚಿಕೊಳ್ಳದೆ ಸ್ವೀಕರಿಸಲಾರಿರೋ, ಅಂತಹ ಮಲಿನ ಭಾಗವನ್ನು (ಹೀನ ವಸ್ತುಗಳನ್ನು, ಇತರರಿಗೆ) ನೀಡುವ ಸಂಕಲ್ಪ ಮಾಡಬೇಡಿ. ಅಲ್ಲಾಹನು ಸರ್ವ ಅಪೇಕ್ಷೆಗಳಿಂದ ಮುಕ್ತನಾಗಿರುವನು ಮತ್ತು ಪ್ರಸಂಸೆಗೆ ಪಾತ್ರನಾಗಿರುವನೆಂಬುದು ನಿಮಗೆ ತಿಳಿದಿರಲಿ.

268. ಶೈತಾನನು ನಿಮಗೆ ಬಡತನದ ಬೆದರಿಕೆ ಒಡ್ಡುತ್ತಾನೆ ಮತ್ತು ನಿಮಗೆ ಅನೈತಿಕತೆಯನ್ನು ಆದೇಶಿಸುತ್ತಾನೆ. ಅತ್ತ ಅಲ್ಲಾಹನು ನಿಮಗೆ ತನ್ನ ಕಡೆಯಿಂದ ಕ್ಷಮೆ ಮತ್ತು ಅನುಗ್ರಹದ ವಾಗ್ದಾನ ನೀಡುತ್ತಾನೆ. ಅಲ್ಲಾಹನಂತು ವಿಶಾಲನೂ ಜ್ಞಾನವುಳ್ಳವನೂ ಆಗಿದ್ದಾನೆ.

269. ಅವನು (ಅಲ್ಲಾಹನು) ತಾನಿಚ್ಛಿಸಿದವರಿಗೆ ಯುಕ್ತಿಯನ್ನು ನೀಡುತ್ತಾನೆ. ಇನ್ನು, ಯುಕ್ತಿಯನ್ನು ಪಡೆದವನು ಧಾರಾಳ ಒಳಿತನ್ನು ಪಡೆದನು. ಬುದ್ಧಿವಂತರ ಹೊರತು ಬೇರಾರೂ ಪಾಠ ಕಲಿಯುವುದಿಲ್ಲ.

270. ಮತ್ತು ನೀವು ಮಾಡುವ ಪ್ರತಿಯೊಂದು ಖರ್ಚನ್ನೂ ನೀವು ಹೊರುವ ಪ್ರತಿಯೊಂದು ಹರಕೆಯನ್ನೂ ಅಲ್ಲಾಹನು ಖಂಡಿತ ಅರಿತಿರುತ್ತಾನೆ. ಅಕ್ರಮಿಗಳಿಗೆ ಯಾರೂ ಸಹಾಯಕರಿಲ್ಲ.

271. ನೀವು ದಾನವನ್ನು ಬಹಿರಂಗವಾಗಿ ನೀಡಿದರೂ ಒಳ್ಳೆಯದೇ. ಆದರೆ ನೀವು ಅದನ್ನು ಗುಟ್ಟಾಗಿ ಬಡವರಿಗೆ ತಲುಪಿಸಿದರೆ ಅದು ನಿಮ್ಮ ಪಾಲಿಗೆ ಉತ್ತಮವಾಗಿದೆ. ಆಗ ಅವನು ನಿಮ್ಮಿಂದ ನಿಮ್ಮ ಪಾಪಗಳನ್ನು ನಿವಾರಿಸುವನು. ಅಲ್ಲಾಹನು ನೀವು ಮಾಡುವ ಎಲ್ಲವನ್ನೂ ಅರಿತಿರುತ್ತಾನೆ.

272. (ದೂತರೇ,) ಅವರನ್ನು ಸನ್ಮಾರ್ಗದಲ್ಲಿ ನಡೆಸುವ ಹೊಣೆಯೇನೂ ನಿಮ್ಮ ಮೇಲಿಲ್ಲ. ನಿಜವಾಗಿ, ಅಲ್ಲಾಹನೇ ತಾನಿಚ್ಛಿಸಿದವರನ್ನು ಸನ್ಮಾರ್ಗದಲ್ಲಿ ನಡೆಸುತ್ತಾನೆ. (ವಿಶ್ವಾಸಿಗಳೇ, ಸತ್ಕಾರ್ಯಕ್ಕೆ) ನೀವು ಮಾಡುವ ಎಲ್ಲ ಖರ್ಚುಗಳ ಲಾಭವು ನಿಮಗೇ ಸಿಗಲಿದೆ. ನೀವು ಅಲ್ಲಾಹನ ಮೆಚ್ಚುಗೆಗಾಗಿ ಮಾತ್ರ ಖರ್ಚು ಮಾಡಿರಿ. ಇನ್ನು, ನೀವು ಮಾಡುವ ಪ್ರತಿಯೊಂದು ಖರ್ಚು ಕೂಡಾ ಪೂರ್ಣ (ಪ್ರತಿಫಲದ) ರೂಪದಲ್ಲಿ ನಿಮಗೇ ಸಿಗಲಿದೆ ಮತ್ತು ನಿಮ್ಮ ಮೇಲೆ ಯಾವ ಅಕ್ರಮವೂ ನಡೆಯದು.

273. (ನಿಮ್ಮ ದಾನ ಧರ್ಮವು) ಅಲ್ಲಾಹನ ಮಾರ್ಗದಲ್ಲಿ ನಿರ್ಬಂಧಿತರಾಗಿರುವ ಮಂದಿಗೆ ಸಲ್ಲಲಿ. (ಧನ ಸಂಪಾದನೆಗಾಗಿ) ಭೂಮಿಯಲ್ಲಿ ಓಡಾಡುವ ಸಾಮರ್ಥ್ಯ ಅವರಿಗಿಲ್ಲ. ಅವರ ಸಂಕೋಚದ ಕಾರಣ, ಅಜ್ಞಾನಿಗಳು ಅವರನ್ನು ಶ್ರೀಮಂತರೆಂದು ಗ್ರಹಿಸುತ್ತಾರೆ. ಆದರೆ ನೀವು (ದೂತರು) ಅವರನ್ನು ಅವರ ಮುಖದಿಂದಲೇ ಗುರುತಿಸಬಲ್ಲರಿ. ಅವರು ಜನರ ಬೆನ್ನು ಹಿಡಿದು ಭಿಕ್ಷೆ ಬೇಡುವುದಿಲ್ಲ. ನೀವು ಸತ್ಕಾರ್ಯದಲ್ಲಿ ಮಾಡುವ ಎಲ್ಲ ಖರ್ಚುಗಳ ಕುರಿತು, ಅಲ್ಲಾಹನು ಖಂಡಿತ ಅರಿತಿರುತ್ತಾನೆ.

274. ತಮ್ಮ ಸಂಪತ್ತನ್ನು ಇರುಳಲ್ಲೂ ಹಗಲಲ್ಲೂ, ಗುಟ್ಟಾಗಿಯೂ ಬಹಿರಂಗವಾಗಿಯೂ ಖರ್ಚು ಮಾಡುವವರಿಗೆ, ಅವರ ಪ್ರತಿಫಲವು ಅವರ ಒಡೆಯನ ಬಳಿ ಇದೆ. ಅವರಿಗೆ ಯಾವ ಭಯವೂ ಇರದು ಮತ್ತು ಅವರು ದುಃಖಿಸಲಾರರು.

275. ಬಡ್ಡಿ ತಿನ್ನುವವರು (ಪುನರುತ್ಥಾನ ದಿನ), ಶೈತಾನನ ಸೋಂಕಿನಿಂದಾಗಿ ಹುಚ್ಚು ಹಿಡಿದವನು ನಿಂತಂತೆ ನಿಲ್ಲುವರು. ಏಕೆಂದರೆ ಅವರು, ವ್ಯಾಪಾರವೂ ಬಡ್ಡಿಯೂ ಸಮಾನವೆಂದು ಹೇಳುತ್ತಾರೆ. ನಿಜವಾಗಿ, ಅಲ್ಲಾಹನು ವ್ಯಾಪಾರವನ್ನು ಸಮ್ಮತಿಸಿದ್ದಾನೆ ಮತ್ತು ಬಡ್ಡಿಯನ್ನು ನಿಷೇಧಿಸಿದ್ದಾನೆ. ಇನ್ನು, ತನಗೆ ತನ್ನ ಒಡೆಯನ ಉಪದೇಶವು ತಲುಪಿದ ಬಳಿಕ ಅದರಿಂದ (ಬಡ್ಡಿಯಿಂದ) ದೂರ ಉಳಿದವನ ಗತಕಾಲದ ಸಂಪಾದನೆಯು ಅವನಿಗೇ ಸೇರಿದೆ ಮತ್ತು ಅವನ ವಿಷಯವು ಅಲ್ಲಾಹನಿಗೆ ಬಿಟ್ಟಿದೆ. ಆದರೆ ಅದನ್ನು (ಬಡ್ಡಿ ತಿನ್ನುವ ಪಾಪವನ್ನು) ಪುನರಾವರ್ತಿಸುವವರು, ನರಕಾಗ್ನಿಯವರಾಗಿರುತ್ತಾರೆ. ಅವರು ಶಾಶ್ವತವಾಗಿ ಅಲ್ಲೇ ಇರುವರು.

276. ಅಲ್ಲಾಹನು ಬಡ್ಡಿಯನ್ನು ಅಳಿಸುತ್ತಾನೆ ಹಾಗೂ ದಾನಧರ್ಮಕ್ಕೆ ಸಮೃದ್ಧಿಯನ್ನು ಒದಗಿಸುತ್ತಾನೆ ಮತ್ತು ಅಲ್ಲಾಹನು ಕೃತಘ್ನ ಪಾಪಿಗಳನ್ನು ಪ್ರೀತಿಸುವುದಿಲ್ಲ.

277. ಸತ್ಯದಲ್ಲಿ ನಂಬಿಕೆಯುಳ್ಳವರು, ಸತ್ಕರ್ಮಗಳನ್ನು ಮಾಡಿದವರು ಮತ್ತು ನಮಾಝನ್ನು ಪಾಲಿಸಿದವರು ಹಾಗೂ ಝಕಾತ್‌ಅನ್ನು ಪಾವತಿಸಿದವರು – ಅವರಿಗಾಗಿ ಅವರ ಒಡೆಯನ ಬಳಿ ಪ್ರತಿಫಲವಿದೆ ಮತ್ತು ಅವರಿಗೆ ಯಾವ ಭಯವೂ ಇರದು ಹಾಗೂ ಅವರು ದುಃಖಿಸಲಾರರು.

278. ವಿಶ್ವಾಸಿಗಳೇ, ಅಲ್ಲಾಹನಿಗೆ ಅಂಜಿರಿ ಮತ್ತು ನೀವು ನಿಜಕ್ಕೂ ನಂಬಿಕೆ ಉಳ್ಳವರಾಗಿದ್ದರೆ, (ನಿಮಗೆ ಬರಲು) ಬಾಕಿ ಇರುವ ಬಡ್ಡಿಯನ್ನು ಬಿಟ್ಟು ಬಿಡಿರಿ.

279. ನೀವು ಹಾಗೆ ಮಾಡುವುದಿಲ್ಲವೆಂದಾದರೆ, (ನಿಮ್ಮ ವಿರುದ್ಧ) ಅಲ್ಲಾಹನ ಮತ್ತು ಅವನ ದೂತನ ಕಡೆಯಿಂದ ಯುದ್ಧ ಘೋಷಿತವಾಗಿದೆ ಎಂಬುದನ್ನು ಅರಿತುಕೊಳ್ಳಿರಿ. ನೀವಿನ್ನು ಪಶ್ಚಾತ್ತಾಪ ಪಡುವುದಾದರೆ, ನಿಮ್ಮ ಸಂಪತ್ತಿನ ಅಸಲು ನಿಮಗೇ ಸೇರಿರುತ್ತದೆ. ನೀವು ಅಕ್ರಮವೆಸಗಲೂ ಬಾರದು ಮತ್ತು ಅಕ್ರಮಕ್ಕೆ ತುತ್ತಾಗಲೂಬಾರದು.

280. ಇನ್ನು ಅವನು (ಸಾಲ ಪಡೆದವನು) ಕಷ್ಟದಲ್ಲಿದ್ದರೆ, ಸುಸ್ಥಿತಿ ಬರುವ ತನಕ (ಅವನಿಗೆ) ಕಾಲಾವಕಾಶ ಕೊಡಿರಿ. ನೀವು ಬಲ್ಲವರಾಗಿದ್ದರೆ (ಆ ಸಾಲವನ್ನು) ದಾನ ಮಾಡಿ ಬಿಡುವುದು ನಿಮ್ಮ ಪಾಲಿಗೆ ಉತ್ತಮವಾಗಿದೆ.

281. ನಿಮ್ಮನ್ನು ಅಲ್ಲಾಹನೆಡೆಗೆ ಮರಳಿಸಲಾಗುವ ದಿನದ ಕುರಿತು ಜಾಗೃತರಾಗಿರಿ. ಅಂದು ಪ್ರತಿಯೊಬ್ಬನಿಗೂ ಅವನ ದುಡಿಮೆಯ ಪೂರ್ಣ ಪ್ರತಿಫಲವನ್ನು ನೀಡಲಾಗುವುದು ಮತ್ತು ಅವರ ಮೇಲೆ ಅನ್ಯಾಯವಾಗದು.

282. ವಿಶ್ವಾಸಿಗಳೇ, ನೀವು ಒಂದು ನಿಶ್ಚಿತ ಅವಧಿಗಾಗಿ ಸಾಲದ ವ್ಯವಹಾರ ಮಾಡುವಾಗ ಅದನ್ನು ಬರೆದಿಡಿರಿ. ನಿಮ್ಮ ನಡುವೆ (ವ್ಯವಹಾರವನ್ನು) ಬರೆಯುವವನು ನ್ಯಾಯವಾಗಿ ಬರೆಯಲಿ. ಬರೆಯುವವನು ಅಲ್ಲಾಹನು ತನಗೆ ಕಲಿಸಿರುವ ಪ್ರಕಾರ ಬರೆಯುವುದಕ್ಕೆ ನಿರಾಕರಿಸಬಾರದು. ಅವನು ಬರೆಯಬೇಕು ಮತ್ತು ಹಕ್ಕುದಾರನು ಬರೆಸಬೇಕು. ಅವನು ತನ್ನ ಒಡೆಯನಾದ ಅಲ್ಲಾಹನಿಗೆ ಅಂಜುತ್ತಿರಬೇಕು ಮತ್ತು ಅವನು ಅದರಲ್ಲಿ ಏನನ್ನೂ ಕಡಿತಗೊಳಿಸಬಾರದು. ಒಂದು ವೇಳೆ ಹಕ್ಕುದಾರನು ಮಂದ ಬುದ್ಧಿಯವನಾಗಿದ್ದರೆ ಅಥವಾ ದುರ್ಬಲನಾಗಿದ್ದರೆ ಅಥವಾ ಸ್ವತಃ ಬರೆಸಲು ಅಸಮರ್ಥನಾಗಿದ್ದರೆ, ಅವನ ಪೋಷಕನು ನ್ಯಾಯೋಚಿತವಾಗಿ ಬರೆಸಲಿ ಮತ್ತು ನೀವು (ಇಂತಹ ಒಪ್ಪಂದಗಳಿಗೆ) ನಿಮ್ಮ ಪುರುಷರ ಪೈಕಿ ಇಬ್ಬರನ್ನು ಸಾಕ್ಷಿಗಳಾಗಿಸಿರಿ. ಇನ್ನು, ಇಬ್ಬರು ಪುರುಷರು ಲಭ್ಯರಾಗದಿದ್ದರೆ, ನೀವು ಒಪ್ಪುವ ಒಬ್ಬ ಪುರುಷ ಹಾಗೂ ಇಬ್ಬರು ಸ್ತ್ರೀಯರನ್ನು ಸಾಕ್ಷಿಗಳಾಗಿಸಿರಿ – ಅವರಲ್ಲಿ ಒಬ್ಬಾಕೆ ಮರೆತರೆ ಇನ್ನೊಬ್ಬಾಕೆಯು ಆಕೆಗೆ ನೆನಪಿಸಲಿಕ್ಕಾಗಿ. ಮತ್ತು ಸಾಕ್ಷಿಗಳು ತಮ್ಮನ್ನು ಕರೆಯಲಾದಾಗ ನಿರಾಕರಿಸಬಾರದು. (ವ್ಯವಹಾರವು) ಒಂದು ನಿಶ್ಚಿತ ಅವಧಿಗಾಗಿರುವಾಗ, ಅದು ಸಣ್ಣದಿರಲಿ, ದೊಡ್ಡದಿರಲಿ, ಅದನ್ನು ಬರೆಯುವ ವಿಷಯದಲ್ಲಿ ಆಲಸ್ಯ ತೋರಬೇಡಿ. ಇದು ಅಲ್ಲಾಹನ ದೃಷ್ಟಿಯಲ್ಲಿ ಹೆಚ್ಚು ನ್ಯಾಯೋಚಿತವಾದ ಹಾಗೂ ಸಾಕ್ಷಕ್ಕೆ ಹೆಚ್ಚು ಪೂರಕವಾದ ಮತ್ತು ನೀವು ಗೊಂದಲಕ್ಕೆ ಸಿಲುಕದಂತಾಗಲು ಹೆಚ್ಚು ಸಮರ್ಪಕವಾದ ವಿಧಾನವಾಗಿದೆ. ಸಾಮಾನ್ಯವಾಗಿ ನೀವು ಪರಸ್ಪರ ನಡೆಸುವ (ಪ್ರತ್ಯಕ್ಷ ವ್ಯವಹಾರವು) ಇದಕ್ಕೆ ಹೊರತಾಗಿದೆ – ಅದನ್ನು ನೀವು ಬರೆಯದಿದ್ದರೂ ನಿಮ್ಮ ಮೇಲೆ ಪಾಪವೇನಿಲ್ಲ. ನೀವು ವ್ಯವಹಾರ ಮಾಡುವಾಗ ಸಾಕ್ಷಿಗಳನ್ನು ನೇಮಿಸಿರಿ ಮತ್ತು ಬರೆಯುವವನನ್ನಾಗಲಿ, ಸಾಕ್ಷಿಯನ್ನಾಗಲಿ ಯಾರೂ ಪೀಡಿಸಬಾರದು. ನೀವು ಹಾಗೆ ಮಾಡಿದರೆ, ಖಂಡಿತವಾಗಿಯೂ ಅದು ನಿಮ್ಮ ಪಾಲಿಗೆ ಪಾಪಕೃತ್ಯವೆನಿಸಿಕೊಳ್ಳುವುದು. ನೀವು ಅಲ್ಲಾಹನಿಗೆ ಅಂಜಿರಿ. ಅಲ್ಲಾಹನೇ (ಇದನ್ನೆಲ್ಲಾ) ನಿಮಗೆ ಕಲಿಸುತ್ತಿದ್ದಾನೆ ಮತ್ತು ಅಲ್ಲಾಹನು ಎಲ್ಲವನ್ನೂ ಬಲ್ಲವನಾಗಿದ್ದಾನೆ.

283. ನೀವು ಪ್ರಯಾಣದಲ್ಲಿದ್ದರೆ ಮತ್ತು ನಿಮಗೆ ಬರೆಯುವವರು ಸಿಗದಿದ್ದರೆ, ಭದ್ರತೆಯ ಅಡವು ಪಡೆಯಿರಿ. ಇನ್ನು ನಿಮ್ಮಲ್ಲೊಬ್ಬರು ಇನ್ನೊಬ್ಬರ ಮೇಲೆ ಭರವಸೆ ಇಟ್ಟಿದ್ದರೆ, ಯಾರ ಮೇಲೆ ಭರವಸೆ ಇಡಲಾಗಿತ್ತೋ ಆತನು ತನಗೆ ವಹಿಸಿಕೊಡಲಾಗಿದ್ದ ವಸ್ತುವನ್ನು (ಅದರ ಹಕ್ಕುದಾರರಿಗೆ) ಮರಳಿಸಬೇಕು ಮತ್ತು ಅವನು ತನ್ನ ಒಡೆಯನಾದ ಅಲ್ಲಾಹನಿಗೆ ಅಂಜುತ್ತಿರಬೇಕು. ಮತ್ತು ನೀವು ಸಾಕ್ಷವನ್ನು ಬಚ್ಚಿಡಬಾರದು. ಸಾಕ್ಷವನ್ನು ಬಚ್ಚಿಡುವವನ ಮನಸ್ಸು ಖಂಡಿತ ಪಾಪಮಯವಾಗುವುದು. ಅಲ್ಲಾಹನು ನೀವು ಮಾಡುವ ಎಲ್ಲವನ್ನೂ ಅರಿಯುತ್ತಾನೆ.

284. ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಎಲ್ಲವೂ ಅಲ್ಲಾಹನಿಗೇ ಸೇರಿದೆ. ನೀವು ನಿಮ್ಮ ಮನದೊಳಗಿನ ಸಂಗತಿಗಳನ್ನು ವ್ಯಕ್ತಪಡಿಸಿದರೂ ಗುಪ್ತವಾಗಿಟ್ಟರೂ, ಅಲ್ಲಾಹನಂತೂ ಆ ಕುರಿತು ನಿಮ್ಮಡನೆ ವಿಚಾರಣೆ ನಡೆಸುವನು. ಆ ಬಳಿಕ ಅವನು ತಾನಿಚ್ಛಿಸಿದವರನ್ನು ಕ್ಷಮಿಸುವನು ಮತ್ತು ತಾನಿಚ್ಛಿಸಿದವರನ್ನು ಶಿಕ್ಷಿಸುವನು. ಅಲ್ಲಾಹನು ಎಲ್ಲವನ್ನೂ ಮಾಡಬಲ್ಲವನಾಗಿದ್ದಾನೆ.

285. ದೂತರು ತಮ್ಮ ಒಡೆಯನ ಕಡೆಯಿಂದ ತಮ್ಮೆಡೆಗೆ ಇಳಿಸಿಕೊಡಲಾಗಿರುವ ಸಂದೇಶದಲ್ಲಿ ನಂಬಿಕೆಯಿಟ್ಟಿದ್ದಾರೆ. ವಿಶ್ವಾಸಿಗಳೂ ಅಷ್ಟೇ. ಅವರೆಲ್ಲ, ಅಲ್ಲಾಹನಲ್ಲಿ, ಅವನ ಮಲಕ್‌ಗಳಲ್ಲಿ, ಅವನ ಗ್ರಂಥಗಳಲ್ಲಿ ಮತ್ತು ಅವನ ದೂತರುಗಳಲ್ಲಿ ನಂಬಿಕೆ ಇಟ್ಟಿರುತ್ತಾರೆ. ‘‘ನಾವು ಅವನ ದೂತರ ನಡುವೆ ಯಾವುದೇ ತಾರತಮ್ಯ ಮಾಡುವುದಿಲ್ಲ’’ (ಎಂದು ಅವರು ಹೇಳುತ್ತಾರೆ). ಮತ್ತು ಅವರು ‘‘ನಾವು ಕೇಳಿದೆವು ಮತ್ತು ಅನುಸರಿಸಿದೆವು. ನಮ್ಮೊಡೆಯಾ, ನಿನ್ನೊಡನೆ ನಾವು ಕ್ಷಮೆ ಕೋರುತ್ತೇವೆ ಮತ್ತು ಅಂತಿಮವಾಗಿ (ಎಲ್ಲರೂ) ನಿನ್ನೆಡೆಗೇ ಮರಳಬೇಕಾಗಿದೆ’’ಎನ್ನುತ್ತಾರೆ.

286. ಅಲ್ಲಾಹನು ಯಾರ ಮೇಲೂ ಅವರ ಸಾಮರ್ಥ್ಯಕ್ಕಿಂತ ಹೆಚ್ಚಿನ ಹೊರೆಯನ್ನು ಹೊರಿಸುವುದಿಲ್ಲ. ಪ್ರತಿಯೊಬ್ಬನಿಗೂ ಅವನು ಸಂಪಾದಿಸಿದ ಒಳಿತಿನ ಫಲವು ಸಿಗಲಿದೆ ಮತ್ತು ಅವನು ಗಳಿಸಿದ ಕೆಡುಕಿನ ಪ್ರತಿಫಲವೂ ಸಿಗಲಿದೆ. ‘‘ನಮ್ಮೊಡೆಯಾ, ನಾವು ಮರೆತರೆ ಅಥವಾ ನಮ್ಮಿಂದ ಪ್ರಮಾದವಾಗಿ ಬಿಟ್ಟರೆ ನಮ್ಮನ್ನು ದಂಡಿಸಬೇಡ. ನಮ್ಮೊಡೆಯಾ, ನಮಗಿಂತ ಹಿಂದಿನವರ ಮೇಲೆ ನೀನು ಹೊರಿಸಿದಂತಹ ಹೊರೆಗಳನ್ನು ನಮ್ಮ ಮೇಲೆ ಹೊರಿಸಬೇಡ. ನಮ್ಮೊಡೆಯಾ, ನಮಗೆ ಹೊರಲಾಗದ ಹೊರೆಗಳನ್ನೂ ನಮ್ಮ ಮೇಲೆ ಹೊರಿಸಬೇಡ ಮತ್ತು ನೀನು ನಮ್ಮನ್ನು ಮನ್ನಿಸು, ನಮ್ಮನ್ನು ಕ್ಷಮಿಸು ಮತ್ತು ನಮ್ಮ ಮೇಲೆ ಕರುಣೆ ತೋರು. ನೀನೇ ನಮ್ಮ ರಕ್ಷಕನು. ಧಿಕ್ಕಾರಿಗಳ ವಿರುದ್ಧ ನೀನು ನಮಗೆ ನೆರವಾಗು’’(ಎಂದು ಪ್ರಾರ್ಥಿಸಿರಿ).