03. Ali Imran

3. ಆಲಿ ಇಮ್ರಾನ್ (ಇಮ್ರಾನರ ಸಂತತಿ)

ವಚನಗಳು – 200, ಮದೀನಃ

ಅಲ್ಲಾಹನ ಹೆಸರಿಂದ – ಅವನು ಅಪಾರ ದಯಾಳು, ಕರುಣಾಮಯಿ.

1. ಅಲಿಫ್ ಲಾಮ್ ಮ್ಮೀಮ್.

2. ಅಲ್ಲಾಹ್ – ಅವನ ಹೊರತು ಬೇರೆ ದೇವರಿಲ್ಲ. ಅವನು ಸದಾ ಜೀವಂತ ನಾಗಿರುತ್ತಾನೆ (ಮತ್ತು) ಎಲ್ಲವನ್ನೂ ನಿಯಂತ್ರಿಸಿಟ್ಟವನಾಗಿದ್ದಾನೆ.

3. (ದೂತರೇ,) ಅವನು ನಿಮಗೆ ಈ ಗ್ರಂಥವನ್ನು ಸತ್ಯದೊಂದಿಗೆ ಇಳಿಸಿಕೊಟ್ಟಿರುವನು. ಇದು ತನ್ನ ಹಿಂದಿನವುಗಳನ್ನು (ಗತ ಕಾಲದ ದಿವ್ಯ ಗ್ರಂಥಗಳನ್ನು) ಸಮರ್ಥಿಸುತ್ತದೆ. (ಈ ಹಿಂದೆ) ತೌರಾತ್ ಮತ್ತು ಇಂಜೀಲ್‌ಗಳನ್ನು ಇಳಿಸಿ ಕೊಟ್ಟವನೂ ಅವನೇ.

4. (ಅವು) ಈ ಹಿಂದೆ ಮಾನವರಿಗೆ ಮಾರ್ಗದರ್ಶಿಯಾಗಿದ್ದವು. (ಇದೀಗ) ಅವನು ಈ ‘ಫುರ್ಕಾನ್’ ಅನ್ನು ಇಳಿಸಿಕೊಟ್ಟಿದ್ದಾನೆ. ಖಂಡಿತವಾಗಿಯೂ, ಅಲ್ಲಾಹನ ವಚನಗಳನ್ನು ಧಿಕ್ಕರಿಸುವವರಿಗೆ ಕಠಿಣ ಶಿಕ್ಷೆ ಕಾದಿದೆ. ಅಲ್ಲಾಹನಂತೂ ಪ್ರಚಂಡನೂ (ಕೆಡುಕಿಗೆ) ಪ್ರತೀಕಾರ ತೀರಿಸುವವನೂ ಆಗಿದ್ದಾನೆ.

5. ಭೂಮಿಯಲ್ಲಾಗಲಿ ಆಕಾಶದಲ್ಲಾಗಲಿ ಇರುವ ಯಾವ ವಸ್ತುವೂ ಅಲ್ಲಾಹನಿಂದ ಖಂಡಿತ ಮರೆಯಾಗಿಲ್ಲ.

6. ಗರ್ಭದೊಳಗೇ ನಿಮ್ಮನ್ನು ತಾನಿಚ್ಛಿಸಿದಂತೆ ಚಿತ್ರಿಸಿ ರೂಪಿಸುವವನು ಅವನೇ. ಅವನ ಹೊರತು ಪೂಜಾರ್ಹರು ಬೇರಿಲ್ಲ. ಅವನು ಅಪಾರ ಶಕ್ತಿಶಾಲಿ ಹಾಗೂ ತುಂಬಾ ಯುಕ್ತಿವಂತನಾಗಿದ್ದಾನೆ.

 7. ಅವನೇ, ಈ ಗ್ರಂಥವನ್ನು ನಿಮಗೆ ಇಳಿಸಿಕೊಟ್ಟವನು. ಇದರಲ್ಲಿ ಖಚಿತ ವಚನಗಳಿವೆ – ಅವುಗಳೇ ಈ ಗ್ರಂಥದ ಸಾರ. ಇನ್ನು, ಇದರಲ್ಲಿ ಬಹು ಅರ್ಥದ ವಚನಗಳೂ ಇವೆ. ತಮ್ಮ ಮನಸ್ಸುಗಳಲ್ಲಿ ವಕ್ರತೆ ಉಳ್ಳವರು, ಈ ಪೈಕಿ ಬಹು ಅರ್ಥದ ವಚನಗಳ ಹಿಂದೆ ನಡೆಯುತ್ತಾರೆ. ಅವರು ಈ ಮೂಲಕ ಗೊಂದಲದ ಬೆನ್ನು ಹಿಡಿಯುತ್ತಾರೆ ಮತ್ತು ವಿಕೃತ ವ್ಯಾಖ್ಯಾನಗಳನ್ನು ಅರಸುತ್ತಿರುತ್ತಾರೆ. ನಿಜವಾಗಿ, ಅವುಗಳ ಸರಿಯಾದ ವ್ಯಾಖ್ಯಾನವನ್ನು ಬಲ್ಲವನು ಅಲ್ಲಾಹನ ಹೊರತು ಬೇರಾರೂ ಇಲ್ಲ. ಪಕ್ವವಾದ ಜ್ಞಾನ ಉಳ್ಳವರು ಮಾತ್ರ, ‘‘ನಾವು ಇದನ್ನು ನಂಬಿರುವೆವು, ಇದೆಲ್ಲವೂ ನಮ್ಮೊಡೆಯನ ಕಡೆಯಿಂದಲೇ ಬಂದಿದೆ’’ ಎನ್ನುತ್ತಾರೆ. ನಿಜವಾಗಿ ಬುದ್ಧಿವಂತರ ಹೊರತು ಬೇರಾರೂ ಪಾಠ ಕಲಿಯುವುದಿಲ್ಲ.

8. (ಅಂಥವರು ಈ ರೀತಿ ಪ್ರಾರ್ಥಿಸುತ್ತಾರೆ;) ‘‘ನಮ್ಮೊಡೆಯಾ, ನೀನು ನಮಗೆ ಸರಿದಾರಿಯನ್ನು ತೋರಿದ ಬಳಿಕ ನಮ್ಮ ಮನಸ್ಸುಗಳನ್ನು ವಕ್ರಗೊಳಿಸಬೇಡ. ನಿನ್ನ ಕಡೆಯಿಂದ ನಮಗೆ ಅನುಗ್ರಹವನ್ನು ಕರುಣಿಸು. ನೀನು ಖಂಡಿತ ಮಹಾ ಉದಾರಿಯಾಗಿರುವೆ’’.

9. ‘‘ನಮ್ಮೊಡೆಯಾ, ನಿಸ್ಸಂದೇಹವಾಗಿಯೂ ಬರಲಿರುವ ಒಂದು ದಿನ ನೀನು ಖಂಡಿತ ಎಲ್ಲ ಮಾನವರನ್ನು ಒಂದೆಡೆ ಸೇರಿಸಲಿರುವೆ’’. ಅಲ್ಲಾಹನಂತು ಎಂದಿಗೂ ತನ್ನ ಮಾತನ್ನು ಮೀರುವವನಲ್ಲ.

10. ಧಿಕ್ಕಾರಿಗಳ ಸಂಪತ್ತಾಗಲಿ, ಸಂತಾನವಾಗಲಿ ಅಲ್ಲಾಹನೆದುರು ಅವರ ಯಾವ ನೆರವಿಗೂ ಬಾರದು. ಅವರು ನರಕದ ಇಂಧನವಾಗುವರು.

11. ಫಿರ್‌ಔನನ ಜನರಿಗೆ ಮತ್ತು ಅವರಿಗಿಂತ ಹಿಂದಿನವರಿಗೆ ಒದಗಿದ ಗತಿಯೇ ಅವರಿಗೂ ಒದಗುವುದು. ಅವರು ನಮ್ಮ ವಚನಗಳನ್ನು ಸುಳ್ಳೆಂದು ತಿರಸ್ಕರಿಸಿದ್ದರು. ಅಲ್ಲಾಹನು ಅವರ ಪಾಪಗಳ ಕಾರಣ ಅವರನ್ನು ಶಿಕ್ಷಿಸಿದನು. ನಿಜಕ್ಕೂ ಅಲ್ಲಾಹನು ಬಹಳ ಕಠಿಣವಾಗಿ ದಂಡಿಸುವವನಾಗಿದ್ದಾನೆ.

12. ಧಿಕ್ಕಾರಿಗಳೊಡನೆ ಹೇಳಿರಿ; ‘‘ಶೀಘ್ರವೇ ನೀವು ಸೋತು ಹೋಗುವಿರಿ ಮತ್ತು ನರಕದೆಡೆಗೆ ನಿಮ್ಮನ್ನು ಅಟ್ಟಲಾಗುವುದು. ಅದು ತೀರಾ ಕೆಟ್ಟ ನೆಲೆಯಾಗಿದೆ’’.

13. (ಬದ್ರ್ ಯುದ್ಧದಲ್ಲಿ) ಪರಸ್ಪರ ಯುದ್ಧ ನಿರತರಾಗಿದ್ದ ಆ ಎರಡು ಪಂಗಡಗಳಲ್ಲಿ ನಿಮಗೊಂದು ಸೂಚನೆಯಿತ್ತು. ಅವರಲ್ಲಿ ಒಂದು ಗುಂಪು ಅಲ್ಲಾಹನ ಮಾರ್ಗದಲ್ಲಿ ಹೋರಾಡುತ್ತಿದ್ದರೆ, ಇನ್ನೊಂದು ಗುಂಪು ಧಿಕ್ಕಾರಿಗಳದ್ದಾಗಿತ್ತು. ಅವರು (ಧಿಕ್ಕಾರಿಗಳು) ತಮಗಿಂತ ದುಪ್ಪಟ್ಟು ಇರುವುದನ್ನು ಅವರು (ವಿಶ್ವಾಸಿಗಳು) ಕಣ್ಣಾರೆ ಕಾಣುತ್ತಿದ್ದರು. ಆದರೆ, ಅಲ್ಲಾಹನು ತಾನಿಚ್ಛಿಸಿದವರಿಗೆ ತನ್ನ ನೆರೆವಿನ ಮೂಲಕ ಬಲವನ್ನು ಒದಗಿಸುತ್ತಾನೆ. ದೃಷ್ಟಿ ಉಳ್ಳವರಿಗೆ ಇದರಲ್ಲಿ ಖಂಡಿತ ಪಾಠವಿದೆ.

14. ಜನರ ಪಾಲಿಗೆ, ಅವರ ಪ್ರೀತಿಪಾತ್ರರಾದ ಮಹಿಳೆಯರು, ಪುತ್ರರು, ಚಿನ್ನ ಮತ್ತು ಬೆಳ್ಳಿಯ ರಾಶಿಗಳು, ಬರೆ ಎಳೆದ (ಪಳಗಿಸಿದ) ಕುದುರೆಗಳು, ಸಾಕು ಪ್ರಾಣಿಗಳು ಮತ್ತು ವ್ಯವಸಾಯದ ಜಮೀನುಗಳು – ಇವುಗಳನ್ನೆಲ್ಲಾ ಚಂದಗಾಣಿಸಲಾಗಿದೆ. ಆದರೆ ಇವೆಲ್ಲಾ ಕೇವಲ ಇಹಲೋಕದ ಬದುಕಿನ ಸಾಧನಗಳು. ನಿಜಕ್ಕೂ ಅತ್ಯುತ್ತಮ ನೆಲೆಯು ಅಲ್ಲಾಹನ ಬಳಿ ಇದೆ.

15. ಹೇಳಿರಿ; ಇವೆಲ್ಲಕ್ಕಿಂತ ಉತ್ತಮವಾದುದನ್ನು ನಾನು ನಿಮಗೆ ತಿಳಿಸಲೇ? ಧರ್ಮನಿಷ್ಠರಿಗಾಗಿ ಅವರ ಒಡೆಯನ ಬಳಿ, ತಳದಲ್ಲಿ ನದಿಗಳು ಹರಿಯುತ್ತಿರುವ ಸ್ವರ್ಗತೋಟಗಳಿವೆ. ಅಲ್ಲಿ ಅವರು ಸದಾಕಾಲ ಇರುವರು. ಅಲ್ಲಿ ಅವರಿಗಾಗಿ ಪಾವನ ಪತ್ನಿಯರಿರುವರು ಮತ್ತು (ಅವರಿಗೆ) ಅಲ್ಲಾಹನ ಮೆಚ್ಚುಗೆಯು ಪ್ರಾಪ್ತವಾಗುವುದು. ಅಲ್ಲಾಹನಂತು ತನ್ನ ದಾಸರ ಮೇಲೆ ಸದಾ ಕಣ್ಣಿಟ್ಟಿರುತ್ತಾನೆ.

 16. ಅವರು (ಧರ್ಮನಿಷ್ಠರು) ‘‘ನಮ್ಮೊಡೆಯಾ, ನಾವು ಖಂಡಿತ ನಂಬಿರುವೆವು. ನೀನಿನ್ನು ನಮ್ಮ ಪಾಪಗಳನ್ನು ಕ್ಷಮಿಸು ಮತ್ತು ನಮ್ಮನ್ನು ನರಕಾಗ್ನಿಯ ಹಿಂಸೆಯಿಂದ ರಕ್ಷಿಸು’’ ಎಂದು ಪ್ರಾರ್ಥಿಸುತ್ತಿರುತ್ತಾರೆ.

17. ಅವರು ಸಹನಶೀಲರಾಗಿರುತ್ತಾರೆ. ಸತ್ಯನಿಷ್ಠರಾಗಿರುತ್ತಾರೆ. ಆರಾಧನಾ ನಿರತರಾಗಿರುತ್ತಾರೆ, ದಾನಿಗಳಾಗಿರುತ್ತಾರೆ, ಮತ್ತು ನಿತ್ಯ ಮುಂಜಾವಿಗೆ ಮುನ್ನ (ಅಲ್ಲಾಹನೊಡನೆ) ಕ್ಷಮೆ ಯಾಚಿಸುತ್ತಾರೆ.

18. ತನ್ನ ಹೊರತು ಬೇರೆ ದೇವರಿಲ್ಲವೆಂದು ಅಲ್ಲಾಹನು ಘೋಷಿಸಿರುವನು. ಮಲಕ್‌ಗಳು ಮತ್ತು ಸ್ಥಿರವಾಗಿ ನ್ಯಾಯಮಾರ್ಗದಲ್ಲಿರುವ ಜ್ಞಾನಿಗಳೆಲ್ಲರೂ (ಇದನ್ನೇ ಘೋಷಿಸುತ್ತಾರೆ). ಪ್ರಚಂಡನೂ ಯುಕ್ತಿವಂತನೂ ಆಗಿರುವ ಆತನ ಹೊರತು ಬೇರೆ ದೇವರಿಲ್ಲ.

19. ಖಂಡಿತವಾಗಿಯೂ ಅಲ್ಲಾಹನ ದೃಷ್ಟಿಯಲ್ಲಿ ಇಸ್ಲಾಮ್ (ಶರಣಾಗತಿ) ನೈಜ ಧರ್ಮವಾಗಿದೆ. ಈ ಹಿಂದೆ ಗ್ರಂಥ ನೀಡಲಾದವರು, ತಮ್ಮ ಬಳಿಗೆ ಜ್ಞಾನವು ಬಂದ ಬಳಿಕ ಕೇವಲ ಪರಸ್ಪರ ದ್ವೇಷದ ಕಾರಣ ಭಿನ್ನಮತ ತಾಳಿದ್ದರು. ಅಲ್ಲಾಹನ ವಚನಗಳನ್ನು ಧಿಕ್ಕರಿಸುವವರು (ತಿಳಿದಿರಲಿ), ಅಲ್ಲಾಹನು ಬಹಳ ವೇಗವಾಗಿ ವಿಚಾರಣೆ ಮುಗಿಸುವವನಾಗಿದ್ದಾನೆ.

20. ಅವರು ನಿಮ್ಮೊಡನೆ ಜಗಳಾಡಲು ಬಂದರೆ ‘‘ನಾನು ಮತ್ತು ನನ್ನ ಅನುಯಾಯಿಗಳಂತು ಅಲ್ಲಾಹನಿಗೆ ಸಂಪೂರ್ಣ ಶರಣಾಗಿರುವೆವು’’ಎಂದು ಬಿಡಿರಿ. ಹಾಗೆಯೇ, ಗ್ರಂಥ ನೀಡಲಾದವರೊಡನೆ ಮತ್ತು ಉಮ್ಮೀ (ನಿರಕ್ಷರಿ)ಗಳೊಡನೆ ‘‘ನೀವೂ ಶರಣಾದಿರಾ?’’ ಎಂದು ಕೇಳಿರಿ. ಅವರು ಶರಣಾದರೆ, ಸನ್ಮಾರ್ಗವನ್ನು ಪಡೆದರು. ಇನ್ನು ಅವರು ಮುಖ ತಿರುಗಿಸಿಕೊಂಡರೆ, ನಿಮ್ಮ ಮೇಲಿರುವುದು, ಕೇವಲ (ಸತ್ಯವನ್ನು) ತಲುಪಿಸುವ ಹೊಣೆ ಮಾತ್ರ. ಅಲ್ಲಾಹನು ತನ್ನ ದಾಸರನ್ನು ಸದಾ ನೋಡುತ್ತಿರುತ್ತಾನೆ.

21. ಅಲ್ಲಾಹನ ವಚನಗಳನ್ನು ಧಿಕ್ಕರಿಸುವವರು, ಪ್ರವಾದಿಗಳನ್ನು ಅನ್ಯಾಯವಾಗಿ ಕೊಲ್ಲುವವರು ಮತ್ತು ಮಾನವರ ಪೈಕಿ ನ್ಯಾಯವನ್ನು ಆದೇಶಿಸುವವರನ್ನು ಕೊಲ್ಲುವವರು – ಅವರಿಗೆಲ್ಲಾ ಭಾರೀ ಕಠಿಣ ಶಿಕ್ಷೆಯ ಸುವಾರ್ತೆ ನೀಡಿರಿ.

22. ಅಂಥವರ ಕರ್ಮಗಳೆಲ್ಲಾ ಇಹಲೋಕದಲ್ಲೂ ಪರಲೋಕದಲ್ಲೂ ವ್ಯರ್ಥವಾಗಿ ಬಿಡುವವು ಮತ್ತು ಅವರಿಗೆ ಸಹಾಯಕರು ಯಾರೂ ಇರಲಾರರು.

23. ಗ್ರಂಥದ ಭಾಗವೊಂದನ್ನು ನೀಡಲಾಗಿದ್ದವರನ್ನು ನೀವು ನೋಡಲಿಲ್ಲವೆ? ಅವರ ನಡುವಣ ತೀರ್ಪಿಗಾಗಿ ಅವರನ್ನು ಅಲ್ಲಾಹನ ಗ್ರಂಥದೆಡೆಗೆ ಕರೆಯಲಾದಾಗ, ಅವರಲ್ಲಿನ ಕೆಲವರು ಕಡೆಗಣಿಸುತ್ತಾರೆ ಮತ್ತು ತಪ್ಪಿಸಿಕೊಳ್ಳುತ್ತಾರೆ.

24. ಇದೇಕೆಂದರೆ ಅವರು ‘‘ನರಕಾಗ್ನಿಯು ನಮ್ಮನ್ನು ಮುಟ್ಟದು, (ಹೆಚ್ಚೆಂದರೆ) ಕೆಲವು ದಿನಗಳ ಹೊರತು’’ ಎನ್ನುತ್ತಾರೆ ಮತ್ತು ಅವರು ಸ್ವತಃ ರಚಿಸಿಕೊಂಡಿರುವ ಕೆಲವು ಅಂಶಗಳು ಅವರನ್ನು ಧರ್ಮದ ವಿಷಯದಲ್ಲಿ ಭ್ರಮೆಗೆ ಒಳಪಡಿಸಿವೆ.

25. ನಿಸ್ಸಂದೇಹವಾಗಿ ಬರಲಿರುವ ಒಂದು ದಿನ, ಅವರನ್ನೆಲ್ಲಾ ಒಂದೆಡೆ ಸೇರಿಸಲಾದಾಗ (ಅವರ ಸ್ಥಿತಿ) ಹೇಗಿದ್ದೀತು? (ಅಂದು) ಪ್ರತಿಯೊಬ್ಬ ವ್ಯಕ್ತಿಗೂ ಅವನ ಶ್ರಮದ ಪ್ರತಿಫಲವನ್ನು ನೀಡಲಾಗುವುದು. ಆದರೆ ಅವರ ಮೇಲೆ ಅನ್ಯಾಯ ನಡೆಯದು.

26. ಹೇಳಿರಿ; ‘‘ವಿಶ್ವ ಸಾಮ್ರಾಜ್ಯದ ಒಡೆಯನಾದ ಅಲ್ಲಾಹನೇ, ನೀನು ನೀನಿಚ್ಛಿಸಿದವರಿಗೆ ಅಧಿಕಾರವನ್ನು ನೀಡುವೆ ಮತ್ತು ನೀನಿಚ್ಛಿಸಿದವರಿಂದ ಅಧಿಕಾರವನ್ನು ಕಿತ್ತುಕೊಳ್ಳುವೆ. ಹಾಗೆಯೇ ನೀನಿಚ್ಛಿಸಿದವರಿಗೆ ನೀನು ಗೌರವವನ್ನು ದಯಪಾಲಿಸುವೆ ಮತ್ತು ನೀನಿಚ್ಛಿಸಿದವರನ್ನು ಅಪಮಾನಿತರಾಗಿಸುವೆ. ಒಳಿತೆಲ್ಲವೂ ನಿನ್ನ ಕೈಯಲ್ಲೇ ಇದೆ. ಖಂಡಿತವಾಗಿಯೂ ನೀನು ಎಲ್ಲವನ್ನೂ ಮಾಡಲು ಶಕ್ತನು’’.

 27. ‘‘ಹಗಲಿನೊಳಗೆ ರಾತ್ರಿಯನ್ನು ಪೋಣಿಸುವವನು ನೀನೇ ಹಾಗೂ ರಾತ್ರಿಯೊಳಗೆ ಹಗಲನ್ನು ಪೋಣಿಸುವವನು ನೀನೇ. ನಿರ್ಜೀವಿಯೊಳಗಿಂದ ಜೀವಿಯನ್ನು ಹೊರ ತೆಗೆಯುವವನೂ ನೀನೇ ಹಾಗೂ ಜೀವಿಯೊಳಗಿಂದ ನಿರ್ಜೀವಿಯನ್ನು ಹೊರತೆಗೆಯುವವನೂ ನೀನೇ. ನೀನು ನೀನಿಚ್ಛಿಸಿದವರಿಗೆ ಅಪಾರ ಸಂಪತ್ಸಾಧನಗಳನ್ನು ಒದಗಿಸುವೆ’’.

28. ವಿಶ್ವಾಸಿಗಳು, ವಿಶ್ವಾಸಿಗಳನ್ನು ಬಿಟ್ಟು ಧಿಕ್ಕಾರಿಗಳನ್ನು ತಮ್ಮ ಪೋಷಕ ರಾಗಿಸಿಕೊಳ್ಳಬಾರದು. ಹಾಗೆ ಮಾಡಿದಾತನಿಗೆ ಅಲ್ಲಾಹನೊಂದಿಗೆ ಯಾವ ನಂಟೂ ಉಳಿಯದು – ನೀವು ಅವರಿಂದ ಸುರಕ್ಷಿತರಾಗಿರಲು ಕೇವಲ ಭದ್ರತೆಯ ಕ್ರಮವಾಗಿ ಹಾಗೆ ಮಾಡಿದ್ದರೆ ಅದು ಕ್ಷಮ್ಯ. ಅಲ್ಲಾಹನು ತನ್ನ ಕುರಿತು ನಿಮ್ಮನ್ನು ಎಚ್ಚರಿಸುತ್ತಾನೆ. ಕೊನೆಗೆ ನೀವು ಅಲ್ಲಾಹನೆಡೆಗೇ ಮರಳಬೇಕಾಗಿದೆ.

29. ಹೇಳಿರಿ; ‘‘ನೀವು ನಿಮ್ಮ ಮನದಲ್ಲಿರುವುದನ್ನು ಗುಟ್ಟಾಗಿಟ್ಟರೂ ಪ್ರಕಟಪಡಿಸಿದರೂ ಅಲ್ಲಾಹನು ಖಂಡಿತ ಅದನ್ನು ಅರಿಯುವನು. ಅವನಂತು, ಆಕಾಶಗಳಲ್ಲಿನ ಮತ್ತು ಭೂಮಿಯಲ್ಲಿನ ಎಲ್ಲವನ್ನೂ ಅರಿತಿರುತ್ತಾನೆ. ಹಾಗೆಯೇ, ಅಲ್ಲಾಹನು ಎಲ್ಲವನ್ನೂ ಮಾಡಲು ಶಕ್ತನಾಗಿದ್ದಾನೆ’’.

  30. (ಅಂತಿಮ ವಿಚಾರಣೆಯ) ಆ ದಿನ, ಪ್ರತಿಯೊಬ್ಬನೂ ತಾನು ಮಾಡಿರುವ ಪ್ರತಿಯೊಂದು ಸತ್ಕರ್ಮವನ್ನು ಹಾಗೂ ತಾನು ಮಾಡಿರುವ ಪ್ರತಿಯೊಂದು ದುಷ್ಕರ್ಮವನ್ನು ತನ್ನ ಮುಂದೆ ಕಾಣುವನು. ಆಗ ಅವನು, ತನ್ನ ಹಾಗೂ ಅವುಗಳ (ಆ ತನ್ನ ಪಾಪಗಳ) ನಡುವೆ ಭಾರೀ ಅಂತರವಿರಬೇಕಿತ್ತು ಎಂದು ಹಂಬಲಿಸುವನು. ಅಲ್ಲಾಹನು ತನ್ನ ಕುರಿತು ನಿಮ್ಮನ್ನು ಎಚ್ಚರಿಸುತ್ತಾನೆ. ಅಲ್ಲಾಹನು ತನ್ನ ದಾಸರ ಪಾಲಿಗೆ ತುಂಬಾ ವಾತ್ಸಲ್ಯಮಯಿಯಾಗಿದ್ದಾನೆ.

  31. (ದೂತರೇ) ಹೇಳಿರಿ; (ಜನರೇ,) ನೀವು ನಿಜಕ್ಕೂ ಅಲ್ಲಾಹನನ್ನು ಪ್ರೀತಿಸುವವರಾಗಿದ್ದರೆ ನನ್ನನ್ನು ಅನುಸರಿಸಿರಿ. ಆಗ ಅಲ್ಲಾಹನು ನಿಮ್ಮನ್ನು ಪ್ರೀತಿಸುವನು ಮತ್ತು ನಿಮಗಾಗಿ ನಿಮ್ಮ ಪಾಪಗಳನ್ನು ಕ್ಷಮಿಸುವನು. ಅಲ್ಲಾಹನಂತು ತುಂಬಾ ಕ್ಷಮಾಶೀಲನೂ ಕರುಣಾಮಯಿಯೂ ಆಗಿದ್ದಾನೆ.

32. (ದೂತರೇ,) ‘‘ಅಲ್ಲಾಹನ ಹಾಗೂ (ಅವನ) ದೂತರ ಆಜ್ಞಾಪಾಲನೆ ಮಾಡಿರಿ’’ ಎಂದು ಆದೇಶಿಸಿರಿ. ಅವರು ಕಡೆಗಣಿಸಿದರೆ (ಅವರಿಗೆ ತಿಳಿದಿರಲಿ;) ಅಲ್ಲಾಹನು ಅಂತಹ ಧಿಕ್ಕಾರಿಗಳನ್ನು ಖಂಡಿತ ಪ್ರೀತಿಸುವುದಿಲ್ಲ.

33. ಅಲ್ಲಾಹನು ಸಮಸ್ತ ಲೋಕದವರಲ್ಲಿ ಆದಮ್, ನೂಹ್, ಇಬ್ರಾಹೀಮ್‌ರ ಸಂತತಿ ಮತ್ತು ಇಮ್ರಾನ್‌ರ ಸಂತತಿಯನ್ನು ವಿಶೇಷವಾಗಿ ಆಯ್ದುಕೊಂಡನು.

 34. ಅವರಲ್ಲಿ ಕೆಲವರು ಇತರ ಕೆಲವರ ಸಂತತಿಗಳಾಗಿದ್ದರು (ಅವರೆಲ್ಲಾ ಒಂದೇ ಪರಂಪರೆಯವರಾಗಿದ್ದರು). ಅಲ್ಲಾಹನು ಎಲ್ಲವನ್ನೂ ಆಲಿಸುವವನು ಮತ್ತು ಎಲ್ಲವನ್ನೂ ಬಲ್ಲವನಾಗಿದ್ದಾನೆ.

35. ಇಮ್ರಾನ್‌ರ ಪತ್ನಿ ಹೇಳಿದರು; ‘‘ನನ್ನೊಡೆಯಾ, ನಾನಿದೋ ನನ್ನ ಗರ್ಭದಲ್ಲಿರುವುದನ್ನು (ಮಗುವನ್ನು) ಸಂಪೂರ್ಣವಾಗಿ ನಿನ್ನ ಸೇವೆಗೆ ಮುಡಿಪಾಗಿ ಇಡುವುದಾಗಿ ಹರಕೆ ಹೊತ್ತಿದ್ದೇನೆ. ನೀನಿದನ್ನು ನನ್ನಿಂದ ಸ್ವೀಕರಿಸು. ನೀನು ಖಂಡಿತ ಎಲ್ಲವನ್ನೂ ಆಲಿಸುವವನು ಮತ್ತು ಎಲ್ಲವನ್ನೂ ಬಲ್ಲವನು.’’

36. ಕೊನೆಗೆ ಆಕೆ ಅದನ್ನು (ಶಿಶುವನ್ನು) ಹೆತ್ತಾಗ ‘‘ಒಡೆಯಾ, ನಾನು ಹೆಣ್ಣು ಮಗುವನ್ನು ಹೆತ್ತಿರುವೆನು’’ ಎಂದರು. ನಿಜವಾಗಿ ಆಕೆ ಏನನ್ನು ಹೆತ್ತಿದ್ದಳೆಂಬುದು ಅಲ್ಲಾಹನಿಗೆ ಚೆನ್ನಾಗಿ ತಿಳಿದಿತ್ತು. ಅಲ್ಲದೆ ಗಂಡು ಮಗು ಹೆಣ್ಣಿನಂತಿರುವುದಿಲ್ಲ. (ಆಕೆ ಹೇಳಿದರು;) ‘‘ನಾನು ಈ ಮಗುವನ್ನು ಮರ್ಯಮ್ ಎಂದು ಹೆಸರಿಸಿದ್ದೇನೆ ಮತ್ತು ಇವಳನ್ನು ಹಾಗೂ ಇವಳ ಸಂತತಿಯನ್ನು ಶಪಿತ ಶೈತಾನನಿಂದ ಕಾಪಾಡಲಿಕ್ಕಾಗಿ ನಿನ್ನ ರಕ್ಷಣೆಗೆ ಒಪ್ಪಿಸುತ್ತಿದ್ದೇನೆ’’.

 37. ಕೊನೆಗೆ ಆಕೆಯ ಒಡೆಯನು ಆಕೆಯನ್ನು (ಮರ್ಯಮ್‌ರನ್ನು) ಉದಾರವಾಗಿ ಸ್ವೀಕರಿಸಿದನು ಹಾಗೂ ಆಕೆಯನ್ನು ಶ್ರೇಷ್ಠ ರೀತಿಯಲ್ಲಿ ಬೆಳೆಸಿದನು. ತರುವಾಯ ಅವನು ಆಕೆಯ ಪೋಷಣೆಯನ್ನು ಝಕರಿಯ್ಯಾರಿಗೆ ಒಪ್ಪಿಸಿದನು. ಝಕರಿಯ್ಯಾ ಆಕೆಯ ಕೊಠಡಿಯ ಬಳಿಗೆ ಬಂದಾಗಲೆಲ್ಲಾ ಆಕೆಯ ಬಳಿ ಆಹಾರವನ್ನು ಕಾಣುತ್ತಿದ್ದರು. ಒಮ್ಮೆ ಅವರು ‘‘ಓ ಮರ್ಯಮ್! ಇದು ನಿನ್ನ ಬಳಿಗೆ ಎಲ್ಲಿಂದ ಬಂತು?’’ ಎಂದು ಕೇಳಿದರು. ಆಕೆ ‘‘ಇದು ಅಲ್ಲಾಹನ ಕಡೆಯಿಂದ ಬಂದಿದೆ. ಖಂಡಿತವಾಗಿಯೂ ಅಲ್ಲಾಹನು ತಾನಿಚ್ಛಿಸಿದವರಿಗೆ ಅಪಾರ ಸಂಪನ್ನತೆಯನ್ನು ದಯಪಾಲಿಸುತ್ತಾನೆ’’ ಎಂದರು.

 38. ಆಗ ಝಕರಿಯ್ಯಾ ‘‘ನನ್ನೊಡೆಯಾ! ನಿನ್ನ ವತಿಯಿಂದ ನನಗೆ ಸಜ್ಜನ ಸಂತಾನವನ್ನು ಕರುಣಿಸು. ಖಂಡಿತವಾಗಿಯೂ ನೀನು ಪ್ರಾರ್ಥನೆಯನ್ನು ಆಲಿಸುವವನು’’ ಎಂದು ತಮ್ಮೊಡೆಯನನ್ನು ಪ್ರಾರ್ಥಿಸಿದರು.

39. ಅವರು ಕೊಠಡಿಯಲ್ಲಿ ನಿಂತು ನಮಾಝ್ ಸಲ್ಲಿಸುತ್ತಿದ್ದಾಗ ಮಲಕ್‌ಗಳು ಅವರನ್ನು ಕರೆದು ‘‘ಅಲ್ಲಾಹನು ನಿಮಗೆ ಯಹ್ಯಾರ ಶುಭವಾರ್ತೆ ನೀಡುತ್ತಿದ್ದಾನೆ. ಅವರು ಅಲ್ಲಾಹನ ಕಡೆಯಿಂದ ಬರುವ ವಚನವನ್ನು ಸಮರ್ಥಿಸುವವರು, ಜನನಾಯಕರು, ಆತ್ಮ ನಿಯಂತ್ರಣ ಉಳ್ಳವರು, ಮತ್ತು ಒಬ್ಬ ಸಜ್ಜನ ಪ್ರವಾದಿಯಾಗುವರು’’ಎಂದರು

40. ಆಗ ಅವರು (ಝಕರಿಯ್ಯ) ‘‘ನನ್ನೊಡೆಯಾ, ನನಗೊಬ್ಬ ಪುತ್ರನು ಜನಿಸುವುದಾದರೂ ಹೇಗೆ? ನಾನು ತುಂಬಾ ವೃದ್ಧನಾಗಿಬಿಟ್ಟಿದ್ದೇನೆ ಮತ್ತು ನನ್ನ ಪತ್ನಿಯಂತು ಬಂಜೆಯಾಗಿದ್ದಾಳೆ ’’ ಎಂದರು. ಅವನು (ಅಲ್ಲಾಹನು) ಹೇಳಿದನು; ‘‘ಹಾಗೆಯೇ ಆಗುವುದು – ಅಲ್ಲಾಹನು ತಾನಿಚ್ಛಿಸಿದ್ದನ್ನು ಮಾಡುತ್ತಾನೆ’’.

  41. ಅವರು ‘‘ನನ್ನೊಡೆಯಾ, ನನಗೊಂದು ಪುರಾವೆಯನ್ನು ಒದಗಿಸು’’ ಎಂದರು. ಅವನು ಹೇಳಿದನು; ‘‘ನಿಮಗಿರುವ ಪುರಾವೆಯೇನೆಂದರೆ ಮೂರು ದಿನಗಳ ಕಾಲ ನಿಮಗೆ, ಜನರೊಡನೆ ಕೈಸನ್ನೆಗಳನ್ನು ಮಾಡುವ ಹೊರತು ಬೇರೇನೂ ಮಾತನಾಡಲಿಕ್ಕಾಗದು. (ನೀವೀಗ) ನಿಮ್ಮೊಡೆಯನನ್ನು ಪದೇ ಪದೇ ಸ್ಮರಿಸಿರಿ ಹಾಗೂ ಮುಂಜಾವಿನಲ್ಲೂ ಇರುಳಲ್ಲೂ ಅವನ ಪಾವಿತ್ರವನ್ನು ಜಪಿಸಿರಿ’’.

42. (ಮುಂದೆ) ಮಲಕ್‌ಗಳು ಹೇಳಿದರು; ‘‘ಓ ಮರ್ಯಮ್, ಅಲ್ಲಾಹನು ನಿಮ್ಮನ್ನು ಆರಿಸಿಕೊಂಡಿರುವನು ಹಾಗೂ ನಿಮ್ಮನ್ನು ನಿರ್ಮಲಗೊಳಿಸಿರುವನು ಮತ್ತು ಜಗತ್ತಿನ ಸರ್ವ ಮಹಿಳೆಯರ ಪೈಕಿ ನಿಮ್ಮನ್ನು ಆಯ್ದುಕೊಂಡಿರುವನು’’.

43. ‘‘ಓ ಮರ್ಯಮ್, ನೀವು ನಿಮ್ಮೊಡೆಯನ ಆದೇಶಗಳನ್ನು ಪಾಲಿಸುತ್ತಾ ಅವನಿಗೆ ಸಾಷ್ಟಾಂಗವೆರಗುತ್ತಲೂ ಅವನ ಮುಂದೆ ಬಾಗುವವರ ಜೊತೆ ಸೇರಿ ಬಾಗುತ್ತಲೂ ಇರಿ’’.

44. (ದೂತರೇ,) ಇವೆಲ್ಲಾ ನಾವು ನಿಮಗೆ ದಿವ್ಯ ಸಂದೇಶದ ಮೂಲಕ ತಲುಪಿಸುತ್ತಿರುವ ಗುಪ್ತ ಮಾಹಿತಿಗಳು. ಯಾರು ಮರ್ಯಮರ ಪೋಷಕರಾಗಬೇಕೆಂದು ನಿರ್ಧರಿಸಲು ಅವರು ತಮ್ಮ ಲೇಖನಿಗಳನ್ನು ಎಸೆಯುತ್ತಿದ್ದ ವೇಳೆ ನೀವು ಅವರ ಜೊತೆಗಿರಲಿಲ್ಲ. ಹಾಗೆಯೇ, ಅವರು ಪರಸ್ಪರ ಜಗಳಾಡುತ್ತಿದ್ದಾಗಲೂ ನೀವು ಅವರ ಬಳಿ ಇರಲಿಲ್ಲ.

45. ಮಲಕ್‌ಗಳು ಹೇಳಿದರು; ‘‘ಓ ಮರ್ಯಮ್, ಅಲ್ಲಾಹನು ನಿಮಗೆ ತನ್ನೆಡೆಯಿಂದ ಒಂದು ‘ವಚನ’ದ ಶುಭವಾರ್ತೆ ನೀಡುತ್ತಾನೆ. ಅವರ ಹೆಸರು ‘ಮಸೀಹ್ ಈಸಾ ಇಬ್ನು ಮರ್ಯಮ್’ (ಮರ್ಯಮರ ಪುತ್ರ ಈಸಾ ಮಸೀಹ್) ಎಂದಾಗಿರುವುದು. ಅವರು ಇಹಲೋಕದಲ್ಲೂ ಪರಲೋಕದಲ್ಲೂ ಗೌರವಾನ್ವಿತರಾಗಿರುವರು ಮತ್ತು (ಅಲ್ಲಾಹನ) ಆಪ್ತರಾಗಿರುವರು’’.

46. ‘‘ಅವರು ತೊಟ್ಟಿಲಲ್ಲೂ, ವೃದ್ಧಾಪ್ಯದಲ್ಲೂ ಜನರೊಡನೆ ಮಾತನಾಡುವರು ಮತ್ತು ಅವರು ಸಜ್ಜನರಾಗಿರುವರು’’.

 47. ‘‘ನನ್ನೊಡೆಯಾ, ಯಾವ ಪುರುಷನೂ ನನ್ನನ್ನು ಸ್ಪರ್ಶಿಸಿಯೇ ಇಲ್ಲದಿರುವಾಗ ನನಗೊಬ್ಬ ಪುತ್ರನು ಜನಿಸುವುದಾದರೂ ಹೇಗೆ?’’ ಎಂದು ಆಕೆ (ಮರ್ಯಮ್) ಕೇಳಿದರು. ಅವನು ಹೇಳಿದನು; ‘‘ಹಾಗೆಯೇ ಆಗುವುದು, ಅಲ್ಲಾಹನು ತಾನಿಚ್ಛಿಸಿದ್ದನ್ನು ಸೃಷ್ಟಿಸುತ್ತಾನೆ. ಅವನು ಒಂದು ನಿರ್ಧಾರ ಕೈಗೊಂಡರೆ, ಅದಕ್ಕೆ ‘ಆಗು’ ಎಂದಷ್ಟೇ ಹೇಳುತ್ತಾನೆ ಮತ್ತು ಅದು ಆಗಿ ಬಿಡುತ್ತದೆ’’.

 48. (ಮಲಕ್‌ಗಳು ಹೇಳಿದರು;) ‘‘ಅವನು (ಅಲ್ಲಾಹನು) ಅವರಿಗೆ ಗ್ರಂಥವನ್ನು ಮತ್ತು ಯುಕ್ತಿಯನ್ನು ಹಾಗೂ ತೌರಾತ್ ಮತ್ತು ಇಂಜೀಲ್‌ಗಳನ್ನು ಕಲಿಸುವನು’’.

49. ‘‘ಮತ್ತು ಅವನು ಅವರನ್ನು ಇಸ್ರಾಈಲರ ಸಂತತಿಯೆಡೆಗೆ ತನ್ನ ದೂತನಾಗಿ ನೇಮಿಸುವನು’’. (ಅವರು ಹೇಳುವರು;) ‘‘ನಾನು ನಿಮ್ಮೊಡೆಯನ ಕಡೆಯಿಂದ ಒಂದು ಪುರಾವೆಯೊಂದಿಗೆ ನಿಮ್ಮ ಬಳಿಗೆ ಬಂದಿರುವೆನು. ನಾನಿದೋ ನಿಮಗಾಗಿ ಮಣ್ಣಿನಿಂದ ಒಂದು ಪಕ್ಷಿಯ ರೂಪವನ್ನು ನಿರ್ಮಿಸುವೆನು ಮತ್ತು ಅದರೊಳಗೆ ಊದುವೆನು. ಅದು ಅಲ್ಲಾಹನ ಅಪ್ಪಣೆಯಿಂದ (ಜೀವಂತ) ಪಕ್ಷಿಯಾಗಿ ಬಿಡುವುದು. ಹಾಗೆಯೇ ನಾನು, ಅಲ್ಲಾಹನ ಆದೇಶಾನುಸಾರ ಹುಟ್ಟು ಕುರುಡನನ್ನು ಹಾಗೂ ಕುಷ್ಟರೋಗಿಯನ್ನು ಗುಣಪಡಿಸುವೆನು ಮತ್ತು ಮೃತನನ್ನು ಜೀವಂತಗೊಳಿಸುವೆನು. ನೀವು ಏನನ್ನು ತಿನ್ನುತ್ತೀರಿ ಮತ್ತು ನಿಮ್ಮ ಮನೆಗಳಲ್ಲಿ ಏನನ್ನು ಸಂಗ್ರಹಿಸಿಡುತ್ತೀರಿ ಎಂಬುದನ್ನು ನಾನು ನಿಮಗೆ ತಿಳಿಸುವೆನು. ನೀವು ನಂಬುವವರಾಗಿದ್ದರೆ ಇದರಲ್ಲಿ ನಿಮಗೆ ಪುರಾವೆ ಇದೆ’’.

 50. ‘‘ನಾನು ನನಗಿಂತ ಹಿಂದೆ ಇದ್ದ ತೌರಾತ್‌ನ ಭಾಗವನ್ನು ಸಮರ್ಥಿಸುವವನಾಗಿದ್ದೇನೆ ಹಾಗೂ ನಿಮ್ಮ ಮೇಲೆ ನಿಷಿದ್ಧ ಗೊಳಿಸಲಾಗಿದ್ದ ಕೆಲವು ವಿಷಯಗಳನ್ನು ನಿಮ್ಮ ಪಾಲಿಗೆ ಸಮ್ಮತಗೊಳಿಸಲಿಕ್ಕಾಗಿ ಬಂದಿರುತ್ತೇನೆ. ನಾನು ನಿಮ್ಮ ಬಳಿಗೆ ನಿಮ್ಮ ಒಡೆಯನ ಕಡೆಯಿಂದ ಪುರಾವೆಯನ್ನು ತಂದಿರುತ್ತೇನೆ. (ಆದುದರಿಂದ) ನೀವು ಅಲ್ಲಾಹನಿಗೆ ಅಂಜಿರಿ ಮತ್ತು ನನ್ನ ಆದೇಶ ಪಾಲಿಸಿರಿ’’.

51. ‘‘ಖಂಡಿತವಾಗಿಯೂ ನನ್ನೊಡೆಯನೂ ನಿಮ್ಮೊಡೆಯನೂ ಅಲ್ಲಾಹನೇ. ನೀವು ಅವನನ್ನೇ ಆರಾಧಿಸಿರಿ. ಅದುವೇ ಸನ್ಮಾರ್ಗವಾಗಿದೆ’’.

 52. (ಇಷ್ಟಾಗಿಯೂ) ಅವರ ಕಡೆಯಿಂದ ಧಿಕ್ಕಾರವೇ ಕಂಡಾಗ ಈಸಾ, ‘‘ಯಾರಿದ್ದಾರೆ, ಅಲ್ಲಾಹನ ಮಾರ್ಗದಲ್ಲಿ ನನ್ನ ಸಹಾಯಕರು?’’ ಎಂದು ಕೇಳಿದರು. (ಅವರ) ನಿಷ್ಠ ಅನುಯಾಯಿಗಳು ಹೇಳಿದರು; ‘‘ನಾವು ಅಲ್ಲಾಹನ ಸಹಾಯಕರು. ನಾವು ಅಲ್ಲಾಹನಲ್ಲಿ ನಂಬಿಕೆ ಇಟ್ಟಿರುವೆವು. ನಾವು ಮುಸ್ಲಿಮರಾಗಿದ್ದೇವೆಂಬುದಕ್ಕೆ ನೀವು ಸಾಕ್ಷಿಯಾಗಿರಿ’’

53. ‘‘ನಮ್ಮೊಡೆಯಾ, ನೀನು ಇಳಿಸಿಕೊಟ್ಟಿರುವುದನ್ನು (ಸತ್ಯ ಸಂದೇಶವನ್ನು) ನಾವು ನಂಬಿದ್ದೇವೆ ಮತ್ತು ನಾವು ದೇವದೂತರ ಅನುಯಾಯಿಗಳಾಗಿದ್ದೇವೆ. ನೀನು ನಮ್ಮನ್ನು (ಸತ್ಯದ ಪರ) ಸಾಕ್ಷಿಗಳಾಗಿರುವವರ ಸಾಲಲ್ಲಿ ಸೇರಿಸು’’.

54. ಅವರು (ವಿರೋಧಿಗಳು, ಈಸಾರ ಹತ್ಯೆಗೆ) ಒಂದು ಯೋಜನೆಯನ್ನು ರೂಪಿಸಿದರು. ಅತ್ತ ಅಲ್ಲಾಹನೂ ಒಂದು ಯೋಜನೆಯನ್ನು ರೂಪಿಸಿದನು. ಅಲ್ಲಾಹನೇ ಅತ್ಯುತ್ತಮ ಯೋಜನೆಯನ್ನು ರೂಪಿಸುವವನಾಗಿದ್ದಾನೆ.

55. ಅಲ್ಲಾಹನು ಹೇಳಿದನು; ‘‘ಓ ಈಸಾ, ನಾನು ನಿಮ್ಮ ಅವಧಿಯನ್ನು ಪೂರ್ಣಗೊಳಿಸಲಿದ್ದೇನೆ ಹಾಗೂ ನಿಮ್ಮನ್ನು ನನ್ನೆಡೆಗೆ ಎತ್ತಿಕೊಳ್ಳಲಿದ್ದೇನೆ ಮತ್ತು ಧಿಕ್ಕಾರಿಗಳಿಂದ (ಅವರ ಕಿರುಕುಳಗಳಿಂದ) ನಿಮ್ಮನ್ನು ಮುಕ್ತಗೊಳಿಸಲಿದ್ದೇನೆ. ಅಲ್ಲದೆ ಪುನರುತ್ಥಾನ ದಿನದ ತನಕ ನಾನು ನಿಮ್ಮ ಅನುಯಾಯಿಗಳಿಗೆ, ಧಿಕ್ಕಾರಿಗಳೆದುರು ಪ್ರಾಬಲ್ಯವನ್ನು ನೀಡಲಿದ್ದೇನೆ. ಕೊನೆಗೆ ನೀವೆಲ್ಲರೂ ನನ್ನೆಡೆಗೆ ಮರಳಿ ಬರುವಿರಿ. ಆಗ, ನೀವು ಭಿನ್ನತೆ ತಾಳಿದ್ದ ಎಲ್ಲ ವಿಷಯಗಳಲ್ಲಿ ನಾನು ನಿಮ್ಮ ನಡುವೆ ತೀರ್ಮಾನ ಮಾಡಲಿದ್ದೇನೆ’’.

56. ಧಿಕ್ಕಾರಿಗಳಿಗೆ ನಾನು ಇಹಲೋಕದಲ್ಲೂ ಪರ ಲೋಕದಲ್ಲೂ ಭಾರೀ ಕಠಿಣ ಶಿಕ್ಷೆ ನೀಡಲಿದ್ದೇನೆ – ಅವರಿಗೆ ಸಹಾಯಕರು ಯಾರೂ ಸಿಗಲಾರರು.

  57. ವಿಶ್ವಾಸಿಗಳಾಗಿದ್ದು ಸತ್ಕರ್ಮಗಳನ್ನು ಮಾಡುತ್ತಲಿರುವವರಿಗೆ ಅವನು (ಅಲ್ಲಾಹನು) ಅವರ ಪೂರ್ಣ ಪ್ರತಿಫಲವನ್ನು ನೀಡುವನು. ಅಲ್ಲಾಹನು ಅಕ್ರಮಿಗಳನ್ನು ಮೆಚ್ಚುವುದಿಲ್ಲ.

58. ಇವೆಲ್ಲಾ ನಾವು ನಿಮಗೆ (ದೂತರಿಗೆ) ಓದಿ ಕೇಳಿಸುತ್ತಿರುವ ದಿವ್ಯ ವಚನಗಳು ಹಾಗೂ ಯುಕ್ತಿ ತುಂಬಿದ ಬೋಧನೆಗಳಾಗಿವೆ.

59. ಅಲ್ಲಾಹನ ಬಳಿ, ಈಸಾರ ಉದಾಹರಣೆಯು ಆದಮ್‌ರಂತಿದೆ. ಅವನು ಅವರನ್ನು ಮಣ್ಣಿನಿಂದ ಸೃಷ್ಟಿಸಿದ್ದನು ಮತ್ತು ಅವರೊಡನೆ ‘‘ಆಗು’’ ಎಂದಷ್ಟೇ ಹೇಳಿದ್ದನು, ಅವರು ಆಗಿ ಬಿಟ್ಟಿದ್ದರು.

60. ಇದು (ಕುರ್‌ಆನ್) ನಿಮ್ಮೊಡೆಯನ ಕಡೆಯಿಂದ ಬಂದಿರುವ ಸತ್ಯ. ನೀವು ಈ ಕುರಿತು ಸಂಶಯಿಸುವವರ ಸಾಲಿಗೆ ಸೇರಬೇಡಿ.

61. ನಿಮ್ಮ ಬಳಿಗೆ ಸತ್ಯವು ಬಂದು ಬಿಟ್ಟ ಬಳಿಕ ಈ ಕುರಿತು ನಿಮ್ಮೊಡನೆ ಜಗಳಾಡುವವರೊಡನೆ ಹೇಳಿರಿ; ‘‘ಬನ್ನಿ, ನಾವು ನಮ್ಮ ಪುತ್ರರನ್ನೂ ನಿಮ್ಮ ಪುತ್ರರನ್ನೂ, ನಮ್ಮ ಮಹಿಳೆಯರನ್ನೂ, ನಿಮ್ಮ ಮಹಿಳೆಯರನ್ನೂ ಕರೆಯೋಣ ಮತ್ತು ಸ್ವತಃ ನಾವೂ ನೀವೂ ಸೇರಿ – ಸುಳ್ಳುಗಾರರ ಮೇಲೆ ಅಲ್ಲಾಹನ ಶಾಪವಿರಲಿ – ಎಂದು ಮೊರೆಯಿಡೋಣ’’.

62. ಇವೆಲ್ಲಾ ನೈಜ ವೃತ್ತಾಂತಗಳಾಗಿವೆ. ಅಲ್ಲಾಹನ ಹೊರತು ಪೂಜಾರ್ಹರು ಬೇರಾರೂ ಇಲ್ಲ. ಅಲ್ಲಾಹನು ಖಂಡಿತ ಅತ್ಯಂತ ಪ್ರಬಲನೂ ಯುಕ್ತಿವಂತನೂ ಆಗಿದ್ದಾನೆ.

63. ಇಷ್ಟಾಗಿಯೂ ಅವರು (ಸತ್ಯವನ್ನು) ಕಡೆಗಣಿಸುತ್ತಾರೆಂದಾದರೆ (ಅವರಿಗೆ ತಿಳಿದಿರಲಿ) ಅಲ್ಲಾಹನು ಗೊಂದಲ ಹಬ್ಬುವವರನ್ನು ಚೆನ್ನಾಗಿ ಬಲ್ಲನು.

 64. ‘‘ಗ್ರಂಥದವರೇ, ನಮ್ಮ ಮತ್ತು ನಿಮ್ಮ ನಡುವೆ ಸಮಾನವಾಗಿರುವ ಅಂಶದೆಡೆಗೆ ಬನ್ನಿರಿ. ನಾವು ಅಲ್ಲಾಹನ ಹೊರತು ಬೇರಾರನ್ನೂ ಪೂಜಿಸದಿರೋಣ ಮತ್ತು ಯಾರನ್ನೂ ಅವನ ಜೊತೆ ಪಾಲುಗೊಳಿಸದಿರೋಣ. ಹಾಗೆಯೇ ನಮ್ಮಲ್ಲಿ ಯಾರೂ ಅಲ್ಲಾಹನ ಹೊರತು ಬೇರೆ ಯಾರನ್ನೂ ದೇವರುಗಳಾಗಿಸಬಾರದು’’ ಎಂದು ಹೇಳಿರಿ. ಇಷ್ಟಾಗಿಯೂ ಅವರು ಹಠಮಾರಿತನವನ್ನೇ ತೋರಿದರೆ, ‘‘ನೀವು ಸಾಕ್ಷಿಗಳಾಗಿರಿ, ನಾವಂತು ಖಂಡಿತ ಮುಸ್ಲಿಮರಾಗಿರುವೆವು (ಅಲ್ಲಾಹನಿಗೆ ಶರಣಾಗಿರುವೆವು)’’ ಎಂದು ಘೋಷಿಸಿರಿ.

65. (ಮತ್ತು ಹೇಳಿರಿ:) ‘‘ಗ್ರಂಥದವರೇ, ನೀವೇಕೆ ನಮ್ಮೊಡನೆ ಇಬ್ರಾಹೀಮ್‌ರ ಕುರಿತು ಜಗಳಾಡುತ್ತೀರಿ? ತೌರಾತ್ ಮತ್ತು ಇಂಜೀಲ್‌ಗಳನ್ನು ಅವರ ಅನಂತರವಷ್ಟೇ ಇಳಿಸಲಾಗಿತ್ತು. ನೀವು ಆಲೋಚಿಸುವುದಿಲ್ಲವೇ?’’

66. ‘‘ನಿಮಗೆ ಅಲ್ಪಸ್ವಲ್ಪ ತಿಳಿದಿರುವ ವಿಷಯಗಳಲ್ಲಂತು ನೀವು ಸಾಕಷ್ಟು ಜಗಳಾಡಿದ್ದಾಯಿತು. (ಇದೀಗ) ನಿಮಗೆ ಏನೇನೂ ತಿಳಿದಿಲ್ಲದ ವಿಷಯದಲ್ಲಿ ನೀವು ಜಗಳಾಡುವುದೇಕೆ? ಬಲ್ಲವನು ಅಲ್ಲಾಹನು ಮಾತ್ರ, ನೀವು ಬಲ್ಲವರಲ್ಲ.

67. ಇಬ್ರಾಹೀಮರು ಯಹೂದಿಯಾಗಲಿ ಕ್ರೈಸ್ತನಾಗಲಿ ಆಗಿರಲಿಲ್ಲ. ಅವರು ನಿಷ್ಠಾವಂತ ಮುಸ್ಲಿಮರಾಗಿದ್ದರು. ಅವರು ಖಂಡಿತ ಬಹುದೇವಾರಾಧಕರಾಗಿರಲಿಲ್ಲ.

68. ಜನರ ಪೈಕಿ ಇಬ್ರಾಹೀಮರೊಂದಿಗೆ ನಿಜವಾದ ನಂಟಿರುವುದು, ಅವರನ್ನು ಅನುಸರಿಸುವವರಿಗೆ – (ಅಂದರೆ) ಈ ದೇವದೂತರಿಗೆ ಮತ್ತು ವಿಶ್ವಾಸಿಗಳಿಗೆ ಮಾತ್ರ. ಅಲ್ಲಾಹನೇ ವಿಶ್ವಾಸಿಗಳ ಪೋಷಕನಾಗಿದ್ದಾನೆ.

 69. ಗ್ರಂಥದವರಲ್ಲಿನ ಒಂದು ಪಂಗಡವು, ಹೇಗಾದರೂ ನಿಮ್ಮನ್ನು ದಾರಿ ತಪ್ಪಿಸಲು ಹಂಬಲಿಸುತ್ತಿದೆ. ನಿಜವಾಗಿ ಅವರು ಸ್ವತಃ ತಮ್ಮನ್ನೇ ದಾರಿಗೆಡಿಸುತ್ತಿದ್ದಾರಷ್ಟೇ. ಆದರೆ ಅವರಿಗೆ ಅದರ ಅರಿವಿಲ್ಲ.

 70. ಗ್ರಂಥದವರೇ, ಅಲ್ಲಾಹನ ವಚನಗಳಿಗೆ (ಅವು ಸತ್ಯವೆಂಬುದಕ್ಕೆ) ನೀವೇ ಸಾಕ್ಷಿಗಳಾಗಿರುವಾಗ ನೀವೇಕೆ ಅವುಗಳನ್ನು ಧಿಕ್ಕರಿಸುತ್ತಿರುವಿರಿ?

71. ಗ್ರಂಥದವರೇ, ನೀವು ತಿಳಿದವರಾಗಿರುತ್ತಾ ಸತ್ಯವನ್ನು ಅಸತ್ಯದ ಜೊತೆಗೇಕೆ ಬೆರೆಸುತ್ತೀರಿ? ಮತ್ತು ಸತ್ಯವನ್ನು ನೀವೇಕೆ ಬಚ್ಚಿಡುತ್ತೀರಿ?

72. ಗ್ರಂಥದವರಲ್ಲಿನ ಒಂದು ಗುಂಪಿನವರು ‘‘ನೀವು ಹಗಲಿನ ಮೊದಲ ಭಾಗದಲ್ಲಿ (ಮುಂಜಾನೆ), ಸತ್ಯವಿಶ್ವಾಸಿಗಳಿಗೆ ಇಳಿಸಿ ಕೊಡಲಾಗಿರುವ ಸಂದೇಶದಲ್ಲಿ ನಂಬಿಕೆ ಪ್ರಕಟಿಸಿರಿ ಮತ್ತು ಅದರ ಕೊನೆಯ ಭಾಗದಲ್ಲಿ (ಸಂಜೆ) ಅದನ್ನು ಧಿಕ್ಕರಿಸಿರಿ. ಇದರಿಂದ ಅವರು (ತಮ್ಮ ಧರ್ಮವನ್ನು) ತೊರೆಯಬಹುದು’’ ಎನ್ನುತ್ತಾರೆ.

73. ‘‘ನಿಮ್ಮ ಧರ್ಮದ ಅನುಯಾಯಿಗಳ ಹೊರತು ಬೇರೆ ಯಾರನ್ನೂ ನಂಬಬೇಡಿ’’ (ಎಂದು ಅವರು ಹೇಳುತ್ತಾರೆ). ನೀವು ಹೇಳಿರಿ; ‘‘ಅಲ್ಲಾಹನು ತೋರಿಸಿದ ಮಾರ್ಗವೇ ಖಚಿತ ಸನ್ಮಾರ್ಗವಾಗಿದೆ. ಅದನ್ನು ಅವನು (ಹಿಂದೊಮ್ಮೆ) ನಿಮಗೆ ನೀಡಿದಂತೆ ಬೇರೊಬ್ಬರಿಗೂ ನೀಡಬಲ್ಲನು. ಅಥವಾ ನಿಮ್ಮೊಡೆಯನ ಬಳಿ ಅವರನ್ನು ನಿಮ್ಮ ವಿರುದ್ಧ ಸಾಕ್ಷಿಯಾಗಿಸಬಲ್ಲನು’’. ಹೇಳಿರಿ; ಅನುಗ್ರಹವು ಖಂಡಿತ ಅಲ್ಲಾಹನ ಕೈಯಲ್ಲಿದೆ. ಅವನು ಅದನ್ನು ತಾನಿಚ್ಛಿಸಿದವರಿಗೆ ದಯಪಾಲಿಸುತ್ತಾನೆ. ಅಲ್ಲಾಹನು ತುಂಬಾ ವಿಶಾಲನೂ ಜ್ಞಾನಿಯೂ ಆಗಿದ್ದಾನೆ’’.

74. ಅವನು ತಾನಿಚ್ಛಿಸಿದವರನ್ನು ತನ್ನ ಅನುಗ್ರಹಕ್ಕಾಗಿ ವಿಶೇಷವಾಗಿ ಆಯ್ದುಕೊಳ್ಳುತ್ತಾನೆ. ಅಲ್ಲಾಹನಂತು ಭಾರೀ ಭವ್ಯ ಅನುಗ್ರಹಿಯಾಗಿದ್ದಾನೆ.

 

 75. ನೀವು ನಂಬಿಕೆ ಇಟ್ಟು ರಾಶಿಗಟ್ಟಲೆ ಸಂಪತ್ತನ್ನು ವಶಕ್ಕೊಪ್ಪಿಸಿದರೆ ಅದನ್ನು (ಸುರಕ್ಷಿತವಾಗಿ) ನಿಮಗೆ ಮರಳಿಸುವವರೂ ಗ್ರಂಥದವರಲ್ಲಿದ್ದಾರೆ. ಹಾಗೆಯೇ, ನೀವು ನಂಬಿಕೆ ಇಟ್ಟು ಕೇವಲ ಒಂದು ಚಿನ್ನದ ನಾಣ್ಯವನ್ನು ವಶಕ್ಕೊಪ್ಪಿಸಿದರೆ, ನೀವು ಸತತವಾಗಿ ಬೆನ್ನು ಹಿಡಿಯದಿದ್ದರೆ, ಅದನ್ನು ನಿಮಗೆ ಮರಳಿಸದವರೂ ಅವರಲ್ಲಿದ್ದಾರೆ. ಇದೇಕೆಂದರೆ ಅವರು ‘‘ಉಮ್ಮೀಗಳಿಗೆ (ಅನ್ಯ ಸಮುದಾಯದವರಿಗೆ) ನಮ್ಮ ವಿರುದ್ಧ ಯಾವ ಹಕ್ಕೂ ಇಲ್ಲ’’ ಎನ್ನುವವರಾಗಿದ್ದಾರೆ. ನಿಜವಾಗಿ ಅವರು (ಸತ್ಯವು) ತಮಗೆ ತಿಳಿದಿದ್ದರೂ ಅಲ್ಲಾಹನ ಕುರಿತು ಸುಳ್ಳು ಹೇಳುತ್ತಿದ್ದಾರೆ.

76. ವಾಸ್ತವದಲ್ಲಿ ತಾನು ಕೊಟ್ಟ ಮಾತನ್ನು ಪಾಲಿಸುತ್ತಾ ಭಯಭಕ್ತಿಯೊಂದಿಗೆ ಬದುಕುವ ಧರ್ಮನಿಷ್ಠರನ್ನೇ ಅಲ್ಲಾಹನು ಪ್ರೀತಿಸುತ್ತಾನೆ.

77. ತಾವು ಅಲ್ಲಾಹನ ಜೊತೆ ಮಾಡಿಕೊಂಡ ಕರಾರುಗಳನ್ನು ಹಾಗೂ ತಮ್ಮ ಪ್ರತಿಜ್ಞೆಗಳನ್ನು ಸಣ್ಣ ಬೆಲೆಗೆ ಮಾರಿ ಬಿಡುವವರಿಗೆ ಪರಲೋಕದಲ್ಲಿ ಯಾವ ಪಾಲೂ ಸಿಗದು. ಪುನರುತ್ಥಾನ ದಿನ ಅಲ್ಲಾಹನು ಅವರ ಜೊತೆ ಮಾತನಾಡಲಾರನು, ಅವರನ್ನು ನೋಡಲಾರನು ಮತ್ತು ಅವರನ್ನು ಶುದ್ಧೀಕರಿಸಲಾರನು. ಅವರಿಗೆ ಯಾತನಾಮಯ ಶಿಕ್ಷೆ ಕಾದಿದೆ.

78. ಅವರ ಪ್ಯೆಕಿ ಒಂದು ಗುಂಪಿನವರು (ಗ್ರಂಥವನ್ನೋದುವಾಗ, ತಾವು ಓದುತ್ತಿರುವುದು) ಗ್ರಂಥದ ಭಾಗವೆಂದು ನಿಮ್ಮನ್ನು ನಂಬಿಸಲಿಕ್ಕಾಗಿ ತಮ್ಮ ನಾಲಿಗೆಯನ್ನು ತಿರುಚುತ್ತಾರೆ. ನಿಜವಾಗಿ ಅದು ಗ್ರಂಥದ ಭಾಗವಾಗಿರುವುದಿಲ್ಲ. ಅದು ಅಲ್ಲಾಹನ ಕಡೆಯಿಂದ ಬಂದುದೆಂದು ಅವರು ಹೇಳುತ್ತಾರೆ. ನಿಜವಾಗಿ ಅದು ಅಲ್ಲಾಹನ ಕಡೆಯಿಂದ ಬಂದಿರುವುದಿಲ್ಲ. ಅವರು (ಸತ್ಯವನ್ನು) ತಿಳಿದಿರುತ್ತಾ, ಅಲ್ಲಾಹನ ಕುರಿತು ಸುಳ್ಳು ಹೇಳುತ್ತಾರೆ.

 79. ಅಲ್ಲಾಹನಿಂದ ಗ್ರಂಥವನ್ನು, ಅಧಿಕಾರವನ್ನು ಮತ್ತು ದೂತಸ್ಥಾನವನ್ನು ಪಡೆದಿರುವ ಯಾವ ಮನುಷ್ಯನೂ ಜನರೊಡನೆ ‘‘ನೀವು ಅಲ್ಲಾಹನನ್ನು ಬಿಟ್ಟು ನನ್ನ ದಾಸರಾಗಿರಿ’’ ಎಂದು ಖಂಡಿತ ಹೇಳಲಾರನು. ಅವನಂತು ‘‘ದಿವ್ಯ ಗ್ರಂಥವನ್ನು (ಇತರರಿಗೆ) ಕಲಿಸುತ್ತಿರುವ ಮತ್ತು ಸ್ವತಃ ಅದನ್ನು ಓದುತ್ತಿರುವ ನೀವು ದೇವರ ನಿಷ್ಠಾವಂತ ದಾಸರಾಗಿರಿ’’ ಎಂದೇ ಹೇಳುವನು.

80. ನೀವು ಮಲಕ್‌ಗಳನ್ನು ಹಾಗೂ ಪ್ರವಾದಿಗಳನ್ನು ದೇವರುಗಳಾಗಿಸಿಕೊಳ್ಳಬೇಕೆಂದೂ ಅವನು ಖಂಡಿತ ನಿಮಗೆ ಆದೇಶಿಸಲಾರನು. ಅವನೇನು, ನೀವು ಮುಸ್ಲಿಮರಾದ (ಅಲ್ಲಾಹನಿಗೆ ಶರಣಾದ) ಬಳಿಕ ನಿಮಗೆ ಧಿಕ್ಕಾರವನ್ನು ಆದೇಶಿಸುವನೇ?

  81. ‘‘ನಾನು ನಿಮಗೆ ಗ್ರಂಥ ಹಾಗೂ ಯುಕ್ತಿಯನ್ನು ನೀಡಿರುವೆನು. ತರುವಾಯ ನಿಮ್ಮ ಬಳಿ ಇರುವುದನ್ನು (ಸತ್ಯವನ್ನು) ಸಮರ್ಥಿಸುವ ದೇವದೂತರು ನಿಮ್ಮ ಬಳಿಗೆ ಬಂದಾಗ ನೀವು ಖಚಿತವಾಗಿ ಅವರಲ್ಲಿ ವಿಶ್ವಾಸವಿರಿಸಬೇಕು ಹಾಗೂ ಅವರಿಗೆ ನೆರವಾಗಬೇಕು’’ ಎಂದು ಅಲ್ಲಾಹನು ಪ್ರವಾದಿಗಳಿಂದ ಕರಾರನ್ನು ಪಡೆದಿದ್ದನು. ‘‘ನೀವೇನು ಕರಾರನ್ನು ಒಪ್ಪಿಕೊಂಡಿರಾ? ಮತ್ತು ಈ ಕುರಿತು ನನ್ನ ಪ್ರಮಾಣವನ್ನು (ಬಾಧ್ಯತೆಯಾಗಿ) ಸ್ವೀಕರಿಸಿದಿರಾ?’’ ಎಂದು ಅವನು ಕೇಳಿದನು. ‘‘ನಾವು ಕರಾರನ್ನು ಒಪ್ಪಿ ಕೊಂಡೆವು’’ ಎಂದು ಅವರು ಹೇಳಿದರು. ಅವನು, ‘‘ನೀವು ಸಾಕ್ಷಿಗಳಾಗಿರಿ. ನಿಮ್ಮ ಜೊತೆ ನಾನೂ ಸಾಕ್ಷಿಯಾಗಿರುತ್ತೇನೆ’’ ಎಂದನು.

82. ಇಷ್ಟಾದ ಬಳಿಕ, (ಸತ್ಯವನ್ನು) ಕಡೆಗಣಿಸಿದವರೇ ನಿಜವಾದ ಅವಿಧೇಯರು.

83. ಆಕಾಶಗಳಲ್ಲಿ ಹಾಗೂ ಭೂಮಿಯಲ್ಲಿರುವ ಎಲ್ಲವೂ ತಮ್ಮಿಚ್ಛೆಯಿಂದಲೂ, ಅನಿವಾರ್ಯವಾಗಿಯೂ ಅವನಿಗೆ (ಅಲ್ಲಾಹನಿಗೆ) ಶರಣಾಗಿ ಬಿಟ್ಟಿರುವಾಗ ಮತ್ತು ಅಂತಿಮವಾಗಿ ಎಲ್ಲರೂ ಅವನೆಡೆಗೇ ಮರಳಬೇಕಾಗಿರುವಾಗ, ಅವರೇನು ಅಲ್ಲಾಹನ ಧರ್ಮದ ಬದಲು ಬೇರೇನನ್ನಾದರೂ ಹುಡುಕುತ್ತಿದ್ದಾರೆಯೇ?

 84. ಹೇಳಿರಿ; ‘‘ನಾವು ಅಲ್ಲಾಹನಲ್ಲಿ ಹಾಗೂ ನಮಗೆ ಏನನ್ನು ಇಳಿಸಿಕೊಡಲಾಗಿದೆಯೋ ಅದರಲ್ಲಿ ಹಾಗೂ ಇಬ್ರಾಹೀಮ್, ಇಸ್ಮಾಈಲ್, ಇಸ್‌ಹಾಕ್, ಯಅ್ಕೂಬ್ ಮತ್ತು ಅವರ ಸಂತತಿಗಳಿಗೆ ಏನನ್ನು ಇಳಿಸಿಕೊಡಲಾಗಿತ್ತೋ ಅದರಲ್ಲಿ ಹಾಗೂ ಮೂಸಾ, ಈಸಾ ಮತ್ತು ಇತರ ಪ್ರವಾದಿಗಳಿಗೆ ಅವರ ಒಡೆಯನು ಏನನ್ನು ದಯಪಾಲಿಸಿದ್ದನೋ ಅದರಲ್ಲಿ ವಿಶ್ವಾಸವಿರಿಸಿರುವೆವು. ನಾವು ಅವರ ಪ್ಯೆಕಿ ಯಾರ ವಿಷಯದಲ್ಲೂ ತಾರತಮ್ಯ ತೋರುವುದಿಲ್ಲ. ನಾವು ಅವನಿಗೆ (ಅಲ್ಲಾಹನಿಗೆ) ಮುಸ್ಲಿಮರಾಗಿರುವೆವು (ಶರಣಾಗಿರುವೆವು)’’.

85. ಯಾರಾದರೂ ಇಸ್ಲಾಮ್‌ನ (ಸಂಪೂರ್ಣವಾಗಿ ಅಲ್ಲಾಹನಿಗೆ ಶರಣಾಗುವುದರ) ಹೊರತು ಬೇರಾವುದಾದರೂ ಧರ್ಮವನ್ನು ಬಯಸಿದರೆ ಅದು ಅವನಿಂದ ಖಂಡಿತ ಸ್ವೀಕೃತವಾಗದು ಮತ್ತು ಪರಲೋಕದಲ್ಲಿ ಅವನು ಎಲ್ಲವನ್ನೂ ಕಳೆದು ಕೊಂಡವರ ಸಾಲಲ್ಲಿರುವನು.

86. ಒಮ್ಮೆ ವಿಶ್ವಾಸಿಗಳಾದ ಬಳಿಕ ಹಾಗೂ ದೇವದೂತರು ಸತ್ಯವಂತರೆಂದೂ ತಮ್ಮ ಬಳಿಗೆ ಸ್ಪಷ್ಟ ಪುರಾವೆಗಳು ಬಂದಿವೆಯೆಂದೂ ಸಾಕ್ಷ ಹೇಳಿದ ಬಳಿಕ ಮತ್ತೆ ಧಿಕ್ಕಾರಿಗಳಾಗುವವರಿಗೆ ಅಲ್ಲಾಹನು ಸನ್ಮಾರ್ಗ ತೋರುವುದಾದರೂ ಏಕೆ? ಅಲ್ಲಾಹನು ಅಕ್ರಮಿಗಳಿಗೆ ಸನ್ಮಾರ್ಗ ತೋರುವುದಿಲ್ಲ.

87. ಅಂಥವರ ಮೇಲೆ ಅಲ್ಲಾಹನ ಹಾಗೂ ಮಲಕ್‌ಗಳ ಮತ್ತು ಸಕಲ ಮಾನವರ ಶಾಪವಿದೆ. ಇದುವೇ ಅವರಿಗಿರುವ ಪ್ರತಿಫಲ.

88. ಅವರು ಸದಾಕಾಲ ಅದರಲ್ಲೇ (ನರಕದಲ್ಲೇ) ಇರುವರು. ಅವರ ಶಿಕ್ಷೆಯನ್ನು ಕಿಂಚಿತ್ತೂ ಕಡಿತಗೊಳಿಸಲಾಗದು ಮತ್ತು ಅವರಿಗೆ ಕಾಲಾವಕಾಶವೂ ಸಿಗದು.

89. ಆದರೆ, ಆ ಬಳಿಕ ಪಶ್ಚಾತ್ತಾಪ ಪಟ್ಟು ತಮ್ಮನ್ನು ಸುಧಾರಿಸಿಕೊಂಡವರ ಪಾಲಿಗೆ ಅಲ್ಲಾಹನು ಕ್ಷಮಾಶೀಲನೂ ದಯಾಳುವೂ ಆಗಿರುವನು.

90. ವಿಶ್ವಾಸಿಗಳಾದ ಬಳಿಕ ಧಿಕ್ಕಾರಿಗಳಾದವರು ಮತ್ತು ತಮ್ಮ ಧಿಕ್ಕಾರದ ಧೋರಣೆಯಲ್ಲೇ ಮುನ್ನಡೆದವರ ಪಶ್ಚಾತ್ತಾಪವು ಖಂಡಿತ ಸ್ವೀಕೃತವಾಗದು. ಅವರೇ ನಿಜವಾಗಿ ದಾರಿಗೆಟ್ಟವರು.

 91. ಧಿಕ್ಕಾರಿಗಳಾದವರು ಹಾಗೂ ಧಿಕ್ಕಾರಿಗಳಾಗಿಯೇ ಮೃತರಾದವರಲ್ಲಿ ಯಾರಾದರೂ ಸಂಪೂರ್ಣ ಭೂಮಿಯಷ್ಟು ಬಂಗಾರವನ್ನು ಪರಿಹಾರವಾಗಿ ನೀಡಬಯಸಿದರೂ ಅದನ್ನು ಆತನಿಂದ ಖಂಡಿತ ಸ್ವೀಕರಿಸಲಾಗದು. ಅವರೇ ಕಠೋರ ಶಿಕ್ಷೆಗೆ ಪಾತ್ರರಾಗುವವರು ಮತ್ತು ಅವರಿಗೆ ಯಾರೂ ಸಹಾಯಕರಿರಲಾರರು.

ಕಾಂಡ – 4

92. ನೀವು ನಿಮಗೆ ಪ್ರಿಯವಾಗಿರುವುದನ್ನು (ಅಲ್ಲಾಹನ ಮಾರ್ಗದಲ್ಲಿ) ಖರ್ಚು ಮಾಡುವ ತನಕ ನಿಮಗೆ ಶ್ರೇಷ್ಠತೆ ಪ್ರಾಪ್ತವಾಗದು. ನೀವು ಖರ್ಚು ಮಾಡುವ ಪ್ರತಿಯೊಂದು ವಸ್ತುವಿನ ಕುರಿತು ಅಲ್ಲಾಹನು ಅರಿತಿರುತ್ತಾನೆ.

93. ಇಸ್ರಾಈಲರ ಸಂತತಿಗಳ ಪಾಲಿಗೆ (ಅವರಿಂದು ನಿಷಿದ್ದವೆನ್ನುತ್ತಿರುವ) ಎಲ್ಲ ಭೋಜನಗಳೂ ಸಮ್ಮತವಾಗಿದ್ದುವು – ತೌರಾತ್ ಗ್ರಂಥದ ಆಗಮನಕ್ಕೆ ಮುನ್ನ ಇಸ್ರಾಈಲರು (ಪ್ರವಾದಿ ಯಅ್ಕೂಬರು, ಅನಾರೋಗ್ಯದ ಕಾರಣ) ಸ್ವತಃ ತಮ್ಮ ಮೇಲೆ ನಿಷೇಧಿಸಿಕೊಂಡವುಗಳ ಹೊರತು. ‘‘ನೀವು ಸತ್ಯವಂತರಾಗಿದ್ದರೆ ತೌರಾತನ್ನು ತಂದು ಅದನ್ನು ಓದಿ ತೋರಿಸಿರಿ’’ ಎಂದು (ಅವರೊಡನೆ) ಹೇಳಿರಿ.

94. ಇಷ್ಟಾದ ಬಳಿಕವೂ ಅಲ್ಲಾಹನ ಮೇಲೆ ಸುಳ್ಳಾರೋಪ ಹೊರಿಸುವವರೇ ಅಕ್ರಮಿಗಳಾಗಿದ್ದಾರೆ.

95. ಹೇಳಿರಿ; ‘‘ಅಲ್ಲಾಹನು ಸತ್ಯವನ್ನೇ ಹೇಳಿರುವನು. ಏಕನಿಷ್ಠರಾಗಿದ್ದ ಇಬ್ರಾಹೀಮರ ಮತವನ್ನೇ ಅನುಸರಿಸಿರಿ. ಅವರು ಬಹುದೇವಾರಾಧಕರಾಗಿರಲಿಲ್ಲ’’.

96. ಮಾನವರಿಗಾಗಿ (ಸಾಮೂಹಿಕ ಆರಾಧನೆಗೆಂದು) ನಿಗದಿಯಾದ ಪ್ರಥಮ ಭವನವು, ಸಮೃದ್ಧಿ ತುಂಬಿದ ಮಕ್ಕಃದಲ್ಲಿದೆ ಮತ್ತು ಅದು ಲೋಕಕ್ಕೆಲ್ಲಾ ಮಾರ್ಗದರ್ಶಿಯಾಗಿದೆ.

97. ಅದರಲ್ಲಿ ಸ್ಪಷ್ಟವಾದ ದೃಷ್ಟಾಂತಗಳಿವೆ. ಇಬ್ರಾಹೀಮರ ಸ್ಥಾನವಿದೆ. ಅದರೊಳಗೆ ಪ್ರವೇಶಿಸಿದವನು ಸುರಕ್ಷಿತನಾದನು. ಅಲ್ಲಾಹನ ಮೆಚ್ಚುಗೆಗಾಗಿ ಈ ಭವನದ ಹಜ್ಜ್ (ಯಾತ್ರೆ) ಮಾಡುವುದು, (ಇಲ್ಲಿಗೆ) ಪ್ರಯಾಣಿಸಬಲ್ಲ ಜನರ ಕರ್ತವ್ಯವಾಗಿದೆ. ಇದನ್ನು ಧಿಕ್ಕರಿಸುವವನು (ತಿಳಿದಿರಲಿ) – ಖಂಡಿತವಾಗಿಯೂ ಅಲ್ಲಾಹನು ಸರ್ವಲೋಕಗಳಿಂದ ನಿರಪೇಕ್ಷನಾಗಿದ್ದಾನೆ.

98. ಹೇಳಿರಿ; ‘‘ಗ್ರಂಥದವರೇ, ನೀವೇಕೆ ಅಲ್ಲಾಹನ ವಚನಗಳನ್ನು ತಿರಸ್ಕರಿಸುತ್ತೀರಿ? ಅಲ್ಲಾಹನಂತೂ ನೀವು ಮಾಡುತ್ತಿರುವ ಎಲ್ಲವನ್ನೂ ಬಲ್ಲವನಾಗಿದ್ದಾನೆ.’’

99. ಹೇಳಿರಿ; ‘‘ಗ್ರಂಥದವರೇ, ವಿಶ್ವಾಸಿಗಳನ್ನು ನೀವೇಕೆ ಅಲ್ಲಾಹನ ಮಾರ್ಗದಿಂದ ತಡೆಯುತ್ತೀರಿ? (ಅವರು ಸನ್ಮಾರ್ಗದಲ್ಲಿದ್ದಾರೆಂಬುದಕ್ಕೆ) ನೀವೇ ಸಾಕ್ಷಿಗಳಾಗಿದ್ದರೂ ನೀವು ವಕ್ರತೆಯನ್ನು ಹುಡುಕುತ್ತೀರಿ. ನಿಮ್ಮ ಕೃತ್ಯಗಳ ಬಗ್ಗೆ ಅಲ್ಲಾಹನೇನೂ ಅಜ್ಞನಾಗಿಲ್ಲ’’.

 100. ವಿಶ್ವಾಸಿಗಳೇ, ನೀವು ಗ್ರಂಥ ನೀಡಲಾಗಿರುವವರ ಯಾವ ಪಂಗಡವನ್ನು ಅನುಸರಿಸಿದರೂ ಅವರು ನಿಮ್ಮನ್ನು ವಿಶ್ವಾಸದ ಬಳಿಕ ಮತ್ತೆ ಧಿಕ್ಕಾರಿಗಳಾಗಿ ಮಾರ್ಪಡಿಸುವರು.

101. ನಿಮಗೆ ಅಲ್ಲಾಹನ ವಚನಗಳನ್ನು ಓದಿ ಕೇಳಿಸಲಾಗುತ್ತಿರುವಾಗ ಮತ್ತು ಅಲ್ಲಾಹನ ದೂತನು ನಿಮ್ಮ ನಡುವೆ ಇರುವಾಗ ನೀವು ಹೇಗೆ ತಾನೇ ಧಿಕ್ಕಾರಿಗಳಾಗಬಲ್ಲಿರಿ? ಸ್ಥಿರವಾಗಿ ಅಲ್ಲಾಹನನ್ನು ಅವಲಂಬಿಸಿದಾತನಿಗೆ ಸನ್ಮಾರ್ಗದರ್ಶನ ಪ್ರಾಪ್ತವಾಗುತ್ತದೆ.

102. ವಿಶ್ವಾಸಿಗಳೇ, ಅಂಜಬೇಕಾದ ರೀತಿಯಲ್ಲಿ ಅಲ್ಲಾಹನಿಗೆ ಅಂಜಿರಿ ಮತ್ತು ನೀವು ಮುಸ್ಲಿಮರಲ್ಲದ ಸ್ಥಿತಿಯಲ್ಲಿ ಮೃತರಾಗಬಾರದು.

103. ನೀವೆಲ್ಲಾ ಜೊತೆಯಾಗಿ ಅಲ್ಲಾಹನ ಪಾಶವನ್ನು ಭದ್ರವಾಗಿ ಹಿಡಿಯಿರಿ ಹಾಗೂ ನೀವು ಭಿನ್ನರಾಗಬೇಡಿ. ನಿಮ್ಮ ಮೇಲಿರುವ ಅಲ್ಲಾಹನ ಅನುಗ್ರಹಗಳನ್ನು ಸ್ಮರಿಸಿರಿ. ನೀವು ಪರಸ್ಪರ ಶತ್ರುಗಳಾಗಿದ್ದಾಗ ಅಲ್ಲಾಹನು ನಿಮ್ಮ ಮನಸ್ಸುಗಳನ್ನು ಪರಸ್ಪರ ಪ್ರೀತಿಯಿಂದ ಬೆಸೆದನು ಮತ್ತು ಅವನ ಅನುಗ್ರಹದಿಂದ ನೀವು ಸಹೋದರರಾದಿರಿ. ಹಾಗೆಯೇ ನೀವು ಒಂದು ಅಗ್ನಿಕುಂಡದ ಅಂಚಿನಲ್ಲಿದ್ದಿರಿ. ಅವನು ನಿಮ್ಮನ್ನು ಅದರಿಂದ ರಕ್ಷಿಸಿದನು. ನೀವು ಸನ್ಮಾರ್ಗವನ್ನು ಪಡೆಯಬೇಕೆಂದು ಈ ರೀತಿ ಅಲ್ಲಾಹನು ನಿಮಗೆ ತನ್ನ ದೃಷ್ಟಾಂತಗಳನ್ನು ವಿವರಿಸುತ್ತಾನೆ.

104. ನಿಮ್ಮೊಳಗೆ, (ಜನರನ್ನು) ಒಳಿತಿನೆಡೆಗೆ ಆಮಂತ್ರಿಸುತ್ತಿರುವ, ಸತ್ಕಾರ್ಯವನ್ನು ಆದೇಶಿಸುತ್ತಿರುವ ಮತ್ತು ದುಷ್ಟ ಕೃತ್ಯಗಳಿಂದ ತಡೆಯುತ್ತಿರುವ ಗುಂಪೊಂದು ಸದಾ ಇರಬೇಕು. ಅವರೇ ವಿಜಯಿಗಳಾಗುವರು.

105. ತಮ್ಮ ಬಳಿಗೆ ಬಹಳ ಸ್ಪಷ್ಟವಾದ ಮಾರ್ಗದರ್ಶನವು ಬಂದ ಬಳಿಕ ವಿಂಗಡಿತರಾದ ಹಾಗೂ ಪರಸ್ಪರ ಭಿನ್ನತೆ ತಾಳಿದ ಜನರಂತೆ ನೀವಾಗಬೇಡಿ. ಅವರಿಗಾಗಿ ಭಾರೀ ಘೋರ ಶಿಕ್ಷೆ ಕಾದಿದೆ.

 106. (ಪುನರುತ್ಥಾನದ) ಆ ದಿನ ಕೆಲವು ಮುಖಗಳು ಬೆಳಗಿರುವವು ಮತ್ತು ಕೆಲವು ಮುಖಗಳು ಕರಾಳವಾಗಿರುವವು. ಮುಖವು ಕರಾಳವಾಗಿರುವವರೊಡನೆ ‘‘ನೀವೇನು, ಧರ್ಮವನ್ನು ನಂಬಿದ ಬಳಿಕ ಮತ್ತೆ ಧಿಕ್ಕಾರಿಗಳಾದಿರಾ? ಹಾಗಾದರೆ ನೀವೆಸಗಿದ ಧಿಕ್ಕಾರದ ಫಲವಾಗಿ ಇದೀಗ ಶಿಕ್ಷೆಯನ್ನು ಸವಿಯಿರಿ’’ (ಎನ್ನಲಾಗುವುದು).

107. (ಅಂದು) ಮುಖ ಬೆಳಗಿರುವವರು ಅಲ್ಲಾಹನ ವಿಶೇಷ ಅನುಗ್ರಹದ ಒಳಗಿರುವರು ಮತ್ತು ಅವರು ಸದಾಕಾಲ ಅಲ್ಲೇ ಇರುವರು.

108. ಇವು ಅಲ್ಲಾಹನ ವಚನಗಳು – ನಾವು ಇವುಗಳನ್ನು ನಿಮಗೆ ಸರಿಯಾಗಿ ಓದಿ ಕೇಳಿಸುತ್ತಿದ್ದೇವೆ. ಅಲ್ಲಾಹನಂತೂ ಲೋಕವಾಸಿಗಳ ಮೇಲೆ ಯಾವುದೇ ಅನ್ಯಾಯ ಎಸಗಬಯಸುವುದಿಲ್ಲ.

109. ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಎಲ್ಲವೂ ಅಲ್ಲಾಹನಿಗೆ ಸೇರಿದೆ ಮತ್ತು ಎಲ್ಲ ವಿಚಾರಗಳು ಅಂತಿಮವಾಗಿ ಅಲ್ಲಾಹನೆಡೆಗೇ ಮರಳಲಿವೆ.

 110. ನೀವು ಅತ್ಯುತ್ತಮ ಸಮುದಾಯದವರು. ನಿಮ್ಮನ್ನು ಸಂಪೂರ್ಣ ಮಾನವ ಸಮಾಜಕ್ಕಾಗಿ ನಿಯೋಜಿಸಲಾಗಿದೆ. ನೀವು (ಜನರಿಗೆ) ಸತ್ಕಾರ್ಯಗಳನ್ನು ಆದೇಶಿಸುವವರು ಹಾಗೂ (ಅವರನ್ನು) ಕೆಟ್ಟ ಕೃತ್ಯಗಳಿಂದ ತಡೆಯುವವರು ಮತ್ತು ಅಲ್ಲಾಹನಲ್ಲಿ ವಿಶ್ವಾಸ ಉಳ್ಳವರು. ಗ್ರಂಥದವರು (ಸತ್ಯ ಧರ್ಮವನ್ನು) ನಂಬಿದ್ದರೆ, ಅದು ಅವರ ಪಾಲಿಗೆ ಉತ್ತಮವಾಗಿರುತ್ತಿತ್ತು. ಅವರಲ್ಲೂ ಕೆಲವು ವಿಶ್ವಾಸಿಗಳಿದ್ದಾರೆ – ಆದರೆ ಅವರಲ್ಲಿ ಹೆಚ್ಚಿನವರು ಅವಿಧೇಯರು.

111. ನಿಮಗೆ ಒಂದಿಷ್ಟು ಕಿರುಕುಳ ನೀಡುವ ಹೊರತು ಬೇರಾವ ಹಾನಿಯನ್ನೂ ಮಾಡಲು ಅವರಿಗೆ ಸಾಧ್ಯವಾಗದು. ಅವರು ನಿಮ್ಮ ವಿರುದ್ಧ ಯುದ್ಧಕ್ಕಿಳಿದರೂ (ಬೇಗನೇ) ನಿಮಗೆ ಬೆನ್ನು ತೋರಿಸಿ ಓಡುವರು ಮತ್ತು ಅವರಿಗೆ ಯಾವ ನೆರವೂ ಸಿಗದು.

112. ಅವರು ಎಲ್ಲೇ ಇರಲಿ, ಅವರ ಮೇಲೆ ಅಪಮಾನವನ್ನು ಹೇರಲಾಗಿದೆ – ಅಲ್ಲಾಹನ ಜೊತೆಗಿನ ಕರಾರು ಅಥವಾ ಜನರ ಜೊತೆಗಿನ ಕರಾರಿನ ಆಧಾರದಲ್ಲಿ ಅವರು ಪಡೆಯುವ ತಾತ್ಕಾಲಿಕ ರಕ್ಷಣೆಯು ಮಾತ್ರ ಇದಕ್ಕೆ ಹೊರತಾಗಿದೆ. ಅವರು ಅಲ್ಲಾಹನ ಕ್ರೋಧವನ್ನು ಸಂಪಾದಿಸಿಕೊಂಡಿದ್ದಾರೆ ಮತ್ತು ಅವರ ಮೇಲೆ ದಾರಿದ್ರವನ್ನು ಹೇರಿ ಬಿಡಲಾಗಿದೆ. ಏಕೆಂದರೆ ಅವರು ಅಲ್ಲಾಹನ ವಚನಗಳನ್ನು ಧಿಕ್ಕರಿಸುತ್ತಿದ್ದರು ಹಾಗೂ ಅನ್ಯಾಯವಾಗಿ ಪ್ರವಾದಿಗಳ ಹತ್ಯೆ ನಡೆಸುತ್ತಿದ್ದರು ಮತ್ತು ಅವರು ಅವಿಧೇಯರಾಗಿದ್ದರು ಹಾಗೂ ಮಿತಿ ಮೀರುವವರಾಗಿದ್ದರು.

113. ಅವರೆಲ್ಲರೂ ಸಮಾನರಲ್ಲ. ಗ್ರಂಥದವರಲ್ಲಿ ಒಂದು ಗುಂಪು (ಸನ್ಮಾರ್ಗದಲ್ಲಿ) ಸ್ಥಿರವಾಗಿದೆ. ರಾತ್ರಿ ವೇಳೆ ಅವರು ಅಲ್ಲಾಹನ ವಚನಗಳನ್ನು ಓದುತ್ತಿರುತ್ತಾರೆ ಮತ್ತು ಸಾಷ್ಟಾಂಗವೆರಗುತ್ತಿರುತ್ತಾರೆ.

 114. ಅವರು ಅಲ್ಲಾಹನಲ್ಲಿ ಮತ್ತು ಪರಲೋಕದಲ್ಲಿ ವಿಶ್ವಾಸವಿಟ್ಟಿರುತ್ತಾರೆ, ಒಳಿತನ್ನು ಆದೇಶಿಸುತ್ತಾರೆ, ಕೆಡುಕಿನಿಂದ ತಡೆಯುತ್ತಾರೆ ಮತ್ತು ಸತ್ಕಾರ್ಯಗಳಲ್ಲಿ ಸ್ಪರ್ಧಾತ್ಮಕವಾಗಿ ಪಾಲುಗೊಳ್ಳುತ್ತಾರೆ. ಅವರೇ ಸಜ್ಜನರ ಸಾಲಿನವರು.

115. ಅವರು ಮಾಡುವ ಯಾವುದೇ ಸತ್ಕಾರ್ಯವು ತಿರಸ್ಕೃತವಾಗದು. ಅಲ್ಲಾಹನಂತೂ ಧರ್ಮನಿಷ್ಠರನ್ನು ಚೆನ್ನಾಗಿ ಬಲ್ಲನು.

  116. ಧಿಕ್ಕಾರಿಗಳಿಗೆ ಅಲ್ಲಾಹನೆದುರು ಅವರ ಸಂಪತ್ತಿನಿಂದಾಗಲಿ, ಸಂತಾನದಿಂದಾಗಲಿ ಯಾವ ಪ್ರಯೋಜನವೂ ಆಗದು ಮತ್ತು ಅವರು ನರಕದವರು. ಅವರು ಶಾಶ್ವತವಾಗಿ ಅಲ್ಲೇ ಉಳಿಯುವರು.

 117. ಕೇವಲ ಈ ಲೋಕದ ಬದುಕಿಗಾಗಿ ಖರ್ಚು ಮಾಡುವವರ ಉದಾಹರಣೆಯು, ಹಿಮ ತುಂಬಿದ ಗಾಳಿಯಂತಿದೆ. ಅದು ಸ್ವತಃ ತಮ್ಮ ಮೇಲೆ ಅಕ್ರಮವೆಸಗಿದ್ದವರ ಹೊಲದ ಮೇಲೆರಗಿ ಅದನ್ನು ನಾಶ ಮಾಡಿತು. ನಿಜವಾಗಿ (ಈ ಮೂಲಕ) ಅಲ್ಲಾಹನೇನೂ ಅವರ ಮೇಲೆ ಅಕ್ರಮವೆಸಗಲಿಲ್ಲ. ಸ್ವತಃ ಅವರೇ ತಮ್ಮ ಮೇಲೆ ಅಕ್ರಮವೆಸಗಿಕೊಂಡರು.

118. ವಿಶ್ವಾಸಿಗಳೇ, ನಿಮ್ಮವರ ಹೊರತು ಅನ್ಯರನ್ನು ನಿಮ್ಮ ಪರಮ ನಂಬಿಗಸ್ಥರಾಗಿಸಿಕೊಳ್ಳಬೇಡಿ. ಅವರು ನಿಮಗೆ ಹಾನಿ ಮಾಡದೆ ಇರುವುದಿಲ್ಲ. ಅವರು ನಿಮಗೆ ಕಿರುಕುಳ ನೀಡಬಯಸುತ್ತಾರೆ. ಅವರ ಹಗೆತನವು ಈಗಾಗಲೇ ಅವರ ಬಾಯಿಗಳಿಂದ ಪ್ರಕಟವಾಗಿದೆ. ಇನ್ನು ಅವರ ಮನದೊಳಗೆ ಅಡಗಿರುವ ಹಗೆತನವು ಇದಕ್ಕಿಂತಲೂ ಮಿಗಿಲಾಗಿದೆ. ನಾವು ನಿಮಗೆ ಸತ್ಯ ವಚನಗಳನ್ನು ವಿವರಿಸುತ್ತಿದ್ದೇವೆ. ನೀವು ಬುದ್ಧಿಯುಳ್ಳವರಾಗಿದ್ದರೆ (ಇದರ ಔಚಿತ್ಯವನ್ನು ಅರಿಯಿರಿ).

119. ನೀವು ಎಂಥವರೆಂದರೆ, ಅವರು ನಿಮ್ಮನ್ನು ಪ್ರೀತಿಸುವುದಿಲ್ಲವಾದರೂ ನೀವು ಅವರನ್ನು ಪ್ರೀತಿಸುತ್ತೀರಿ ಮತ್ತು ನೀವು ಎಲ್ಲ ಗ್ರಂಥಗಳಲ್ಲಿ ನಂಬಿಕೆ ಇಡುತ್ತೀರಿ. (ಇಷ್ಟಾಗಿಯೂ) ಅವರು ನಿಮ್ಮನ್ನು ಭೇಟಿಯಾದಾಗ ‘‘ನಾವು ನಂಬಿದೆವು’’ ಎನ್ನುತ್ತಾರೆ, ಆದರೆ ತಾವು ಒಂಟಿಯಾಗಿರುವಾಗ ನಿಮ್ಮ ವಿರುದ್ಧ ಆಕ್ರೋಶದಿಂದ ಬೆರಳುಗಳನ್ನು ಕಚ್ಚಿಕೊಳ್ಳುತ್ತಾರೆ. ಹೇಳಿರಿ; ‘‘ನೀವು ಆ ನಿಮ್ಮ ಕೋಪದಲ್ಲೇ ಸಾಯಿರಿ. ಖಂಡಿತವಾಗಿಯೂ ಅಲ್ಲಾಹನು ಮನದೊಳಗಿನ ವಿಷಯಗಳನ್ನೂ ಅರಿತಿರುತ್ತಾನೆ’’.

 120. ನಿಮಗೇನಾದರೂ ಹಿತವಾದಾಗ ಅವರಿಗೆ ಬೇಸರವಾಗುತ್ತದೆ ಮತ್ತು ನಿಮಗೇನಾದರೂ ಅಹಿತವಾದಾಗ ಅವರು ಸಂಭ್ರಮಿಸುತ್ತಾರೆ. ನೀವಿನ್ನು ಸಹನಶೀಲರಾಗಿದ್ದರೆ ಹಾಗೂ ಧರ್ಮನಿಷ್ಠರಾಗಿದ್ದರೆ, ಅವರ ಸಂಚು ನಿಮಗೆ ಯಾವ ಹಾನಿಯನ್ನೂ ಮಾಡದು. ಅವರು ಮಾಡುತ್ತಿರುವ ಎಲ್ಲವನ್ನೂ ಅಲ್ಲಾಹನು ಆವರಿಸಿಕೊಂಡಿದ್ದಾನೆ.

121. (ದೂತರೇ,) ಮುಂಜಾನೆ ನೀವು ನಿಮ್ಮ ಮನೆಯಿಂದ ಹೊರಟು, ವಿಶ್ವಾಸಿಗಳನ್ನು ಯುದ್ಧಕ್ಕಾಗಿ ನಿರ್ದಿಷ್ಟ ನೆಲೆಗಳಲ್ಲಿ ನಿಯೋಜಿಸುತ್ತಿದ್ದಿರಿ. ಅಲ್ಲಾಹನು ಎಲ್ಲವನ್ನೂ ಆಲಿಸುವವನು ಮತ್ತು ಅರಿಯುವವನಾಗಿದ್ದಾನೆ.

 

122. ನಿಮ್ಮಲ್ಲಿನ ಎರಡು ಗುಂಪುಗಳು, ಅಲ್ಲಾಹನೇ ತಮ್ಮ ಪೋಷಕನಾಗಿದ್ದರೂ (ಶತ್ರುಗಳಿಗೆ ಅಂಜಿ) ಹಿಂದೆ ಸರಿಯ ಹೊರಟಿದ್ದರು. ನಿಜವಾಗಿ ವಿಶ್ವಾಸಿಗಳು ಸದಾ ಅಲ್ಲಾಹನಲ್ಲಿ ಭರವಸೆ ಇಟ್ಟಿರಬೇಕು.

123. ಈ ಹಿಂದೆ ‘ಬದ್ರ್’ನಲ್ಲಿ ನೀವು ತೀರಾ ದುರ್ಬಲರಾಗಿದ್ದಾಗ ಅಲ್ಲಾಹನು ನಿಮಗೆ ನೆರವಾಗಿರುವನು. ಅಲ್ಲಾಹನಿಗೆ ಅಂಜಿರಿ. ನೀವು ಕೃತಜ್ಞರಾಗಬಹುದು.

 124. (ದೂತರೇ,) ನೀವು ವಿಶ್ವಾಸಿಗಳೊಡನೆ ‘‘ನಿಮ್ಮೊಡೆಯನು ಮೂರು ಸಾವಿರ ಮಲಕ್‌ಗಳನ್ನು ಇಳಿಸುವ ಮೂಲಕ ನಿಮಗೆ ನೆರವಾದರೆ ಸಾಲದೇ?’’ ಎಂದು ಕೇಳಿದ್ದಿರಿ.

125. ಯಾಕಿಲ್ಲ? ನೀವೆಲ್ಲಾ ಸಹನಶೀಲರಾಗಿದ್ದರೆ ಮತ್ತು ಧರ್ಮನಿಷ್ಠರಾಗಿದ್ದರೆ ಅವರು (ಶತ್ರು ಸೇನೆ) ನಿಮ್ಮ ಮೇಲೆ ಮುಗಿ ಬಿದ್ದಾಗ ನಿಮ್ಮ ಒಡೆಯನು, ಗುರುತಿಸಬಹುದಾದ ಐದು ಸಾವಿರ ಮಲಕ್‌ಗಳ ಮೂಲಕ ನಿಮಗೆ ನೆರವಾಗುವನು.

 126. ಅಲ್ಲಾಹನು ನಿಮಗೆ ಶುಭವಾರ್ತೆಯಾಗಿ ಹಾಗೂ ನಿಮ್ಮ ಮನಸ್ಸುಗಳ ಸಂತೃಪ್ತಿಗಾಗಿ ಈ ಮಾಹಿತಿಯನ್ನು ಒದಗಿಸುತ್ತಿದ್ದಾನೆ. ನೆರವಂತು ಪ್ರಚಂಡನೂ, ಯುಕ್ತಿವಂತನೂ ಆಗಿರುವ ಅಲ್ಲಾಹನ ಹೊರತು ಬೇರೆ ಯಾರಿಂದಲೂ ಬರುವುದಿಲ್ಲ.

 127. ಧಿಕ್ಕಾರಿಗಳ ಒಂದು ಪಾರ್ಶ್ವವನ್ನೇ ಕಡಿದು ಹಾಕಲು ಅಥವಾ ಅವರನ್ನು ಸಂಪೂರ್ಣ ನಿಂದ್ಯರಾಗಿಸಿ, ಅವರು ಹತಾಶರಾಗಿ ಮರಳುವಂತೆ ಮಾಡಲು (ಅವನ ನೆರವೇ ಸಾಕು).

128. (ದೂತರೇ,) ಈ ವಿಷಯದಲ್ಲಿ ನಿಮಗೇನೂ ಪಾತ್ರವಿಲ್ಲ. ಅವನು (ಅಲ್ಲಾಹನು) ತಾನಿಚ್ಛಿಸಿದರೆ ಅವರ ಪಶ್ಚಾತ್ತಾಪವನ್ನು ಸ್ವೀಕರಿಸಬಹುದು ಅಥವಾ ಅವರನ್ನು ಶಿಕ್ಷಿಸಬಹುದು. ಏಕೆಂದರೆ ಅವರು ಅಕ್ರಮಿಗಳು.

129. ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಎಲ್ಲವೂ ಅಲ್ಲಾಹನಿಗೇ ಸೇರಿದೆ. ಅವನು ತಾನಿಚ್ಛಿಸಿದವರನ್ನು ಕ್ಷಮಿಸುತ್ತಾನೆ ಮತ್ತು ತಾನಿಚ್ಛಿಸಿದವರನ್ನು ಶಿಕ್ಷಿಸುತ್ತಾನೆ. ಅಲ್ಲಾಹನು ಕ್ಷಮಾಶೀಲನೂ ಕರುಣಾಮಯಿಯೂ ಆಗಿದ್ದಾನೆ.

130. ವಿಶ್ವಾಸಿಗಳೇ, ದುಪ್ಪಟ್ಟು ಅಥವಾ ಬಹುಪಟ್ಟು ಬಡ್ಡಿ ತಿನ್ನಬೇಡಿ. ಅಲ್ಲಾಹನಿಗೆ ಅಂಜಿರಿ. ನೀವು ವಿಜಯಿಗಳಾಗಬಲ್ಲಿರಿ.

131. ಮತ್ತು ನೀವು, ಧಿಕ್ಕಾರಿಗಳಿಗಾಗಿಯೇ ಸಜ್ಜುಗೊಳಿಸಿಡಲಾಗಿರುವ ನರಕದ ಕುರಿತು ಎಚ್ಚರವಾಗಿರಿ.

132. ನೀವು ಅಲ್ಲಾಹನ ಹಾಗೂ (ಅವನ) ದೂತರ ಆಜ್ಞಾಪಾಲಕರಾಗಿರಿ – ನೀವು (ಅವನ) ಕರುಣೆಗೆ ಪಾತ್ರರಾಗಬಲ್ಲಿರಿ. 133. ನೀವು ನಿಮ್ಮೊಡೆಯನ ಕ್ಷಮೆಯೆಡೆಗೆ ಹಾಗೂ ಭೂಮ್ಯಾಕಾಶಗಳಷ್ಟು ವ್ಯಾಪಕವಾಗಿರುವ ಸ್ವರ್ಗದೆಡೆಗೆ ಧಾವಿಸಿರಿ. ಅದನ್ನು ಧರ್ಮನಿಷ್ಠರಿಗಾಗಿಯೇ ಸಜ್ಜುಗೊಳಿಸಿಡಲಾಗಿದೆ.

134. ಅವರು ಸುಖದ ಸ್ಥಿತಿಯಲ್ಲೂ ಸಂಕಷ್ಟದಲ್ಲೂ (ಸತ್ಕಾರ್ಯಗಳಿಗಾಗಿ) ಖರ್ಚು ಮಾಡುವವರು, ಕೋಪವನ್ನು ನುಂಗಿ ಕೊಳ್ಳುವವರು ಮತ್ತು ಜನರನ್ನು ಕ್ಷಮಿಸುವವರಾಗಿರುತ್ತಾರೆ. ಅಲ್ಲಾಹನಂತು, ಸೌಜನ್ಯಶೀಲರನ್ನು ಪ್ರೀತಿಸುತ್ತಾನೆ.

135. ಅವರಿಂದ ಅನೈತಿಕ ಕೃತ್ಯವೇನಾದರೂ ಸಂಭವಿಸಿ ಬಿಟ್ಟರೆ ಅಥವಾ ಅವರು ತಮ್ಮ ಮೇಲೇನಾದರೂ ಅಕ್ರಮವೆಸಗಿಕೊಂಡರೆ (ತಕ್ಷಣವೇ) ಅಲ್ಲಾಹನನ್ನು ಸ್ಮರಿಸಿಕೊಳ್ಳುತ್ತಾರೆ ಮತ್ತು ತಮ್ಮಿಂದಾದ ಪಾಪಕ್ಕಾಗಿ ಕ್ಷಮೆಯಾಚಿಸುತ್ತಾರೆ. ಅಲ್ಲಾಹನಲ್ಲದೆ ಬೇರಾರಿದ್ದಾರೆ, ಪಾಪಗಳನ್ನು ಕ್ಷಮಿಸುವುದಕ್ಕೆ? – ಅವರು (ತಮ್ಮ ತಪ್ಪನ್ನು) ತಿಳಿದಿರುತ್ತಾ ತಮ್ಮ ಕೃತ್ಯದ ಕುರಿತು ಉದ್ಧಟರಾಗಿರುವುದಿಲ್ಲ.

 136. ಅಂಥವರಿಗೆ ಅವರ ಪ್ರತಿಫಲವಾಗಿ ಅವರ ಒಡೆಯನ ಕಡೆಯಿಂದ ಕ್ಷಮೆ ಹಾಗೂ ತಳದಲ್ಲಿ ನದಿಗಳು ಹರಿಯುತ್ತಿರುವ ಸ್ವರ್ಗ ತೋಟಗಳು ಸಿಗಲಿವೆ. ಅವರು ಅವುಗಳಲ್ಲಿ ಸದಾ ಕಾಲ ಇರುವರು. ಅದೆಷ್ಟು ಶ್ರೇಷ್ಠವಾಗಿದೆ, ಸತ್ಕರ್ಮಿಗಳ ಪ್ರತಿಫಲ!

137. ನಿಮಗಿಂತ ಹಿಂದೆಯೂ ಹಲವು ಯುಗಗಳು ಉರುಳಿವೆ. ನೀವು ಭೂಮಿಯಲ್ಲಿ ಪ್ರಯಾಣಿಸಿ – (ಸತ್ಯವನ್ನು) ತಿರಸ್ಕರಿಸಿದವರ ಗತಿ ಏನಾಯಿತೆಂದು ನೋಡಿರಿ.

138. ಇದು – ಎಲ್ಲ ಮಾನವರಿಗಾಗಿ ಒಂದು ಸ್ಪಷ್ಟ ಪ್ರಕಟಣೆಯಾಗಿದೆ ಮತ್ತು ಇದು ಧರ್ಮನಿಷ್ಠರಿಗಾಗಿ ಮಾರ್ಗದರ್ಶನ ಹಾಗೂ ಉಪದೇಶವಾಗಿದೆ.

139. ನೀವು ನಿರಾಶರಾಗಬೇಡಿ ಮತ್ತು ದುಃಖಿಸಬೇಡಿ – ನೀವು ವಿಶ್ವಾಸಿಗಳಾಗಿದ್ದರೆ ನೀವೇ ವಿಜಯಿಗಳಾಗುವಿರಿ.

 140. (ಇದೀಗ) ನಿಮಗೆ ಘಾಸಿಯಾಗಿದ್ದರೆ, ಈ ಹಿಂದೆ ಆ (ಎದುರಾಳಿ) ಗುಂಪಿಗೂ ಇಂತಹದೇ ಘಾಸಿಯಾಗಿತ್ತು. ಈ ರೀತಿ ನಾವು ಕಾಲವನ್ನು ಜನರ ಮಧ್ಯೆ ಪರಿವರ್ತಿಸುತ್ತಿರುತ್ತೇವೆ – ಅಲ್ಲಾಹನು ನೈಜ ವಿಶ್ವಾಸಿಗಳನ್ನು ಗುರುತಿಸುವಂತಾಗಲು ಹಾಗೂ ನಿಮ್ಮಲ್ಲಿ ಕೆಲವರನ್ನು ಸಾಕ್ಷಿಗಳಾಗಿಸಲು (ಹೀಗಾಗುತ್ತದೆ). ಅಲ್ಲಾಹನು ಅಕ್ರಮಿಗಳನ್ನು ಮೆಚ್ಚುವುದಿಲ್ಲ.

 141. ಅಲ್ಲಾಹನು ವಿಶ್ವಾಸಿಗಳನ್ನು ಸಂಸ್ಕರಿಸಲಿಕ್ಕಾಗಿ ಹಾಗೂ ಧಿಕ್ಕಾರಿಗಳ ಸದ್ದಡಗಿಸಲಿಕ್ಕಾಗಿ ಹೀಗೆ ಮಾಡುತ್ತಾನೆ.

142. ನೀವೇನು, ಅಲ್ಲಾಹನು ನಿಮ್ಮ ಪೈಕಿ ಹೋರಾಟ ನಡೆಸಿದವರನ್ನು ಮತ್ತು ಸಹನಶೀಲರನ್ನು ಗುರುತಿಸುವ ಮುನ್ನವೇ ನೀವು ಸ್ವರ್ಗ ಪ್ರವೇಶಿಸುವಿರಿ ಎಂದು ಕೊಂಡಿರುವಿರಾ?

143. ಮರಣವನ್ನು ಎದುರಿಸುವ ಮುನ್ನ ನೀವು ಅದಕ್ಕಾಗಿ ಹಂಬಲಿಸುತ್ತಿದ್ದಿರಿ. ಇದೀಗ ನೀವು ಅದನ್ನು ಕಣ್ಣಾರೆ ಕಾಣುತ್ತಿರುವಿರಿ.

144. ಮುಹಮ್ಮದರು ದೇವದೂತರಲ್ಲದೆ ಬೇರೇನೂ ಅಲ್ಲ. ಅವರಿಗಿಂತ ಹಿಂದೆಯೂ ಹಲವು ದೇವದೂತರು ಗತಿಸಿದ್ದಾರೆ. ಅವರೀಗ ಮೃತರಾದರೆ ಅಥವಾ ಹತರಾದರೆ ನೀವೇನು ಬೆನ್ನು ತಿರುಗಿಸಿ ಮರಳಿ ಹೋಗುವಿರಾ? ಹಾಗೆ ಬೆನ್ನು ತಿರುಗಿಸಿ ಮರಳುವ ಯಾರೂ (ಆ ಮೂಲಕ) ಅಲ್ಲಾಹನಿಗೆ ಯಾವ ಹಾನಿಯನ್ನೂ ಮಾಡಲಾರನು. ಅಲ್ಲಾಹನು ಕೃತಜ್ಞರಿಗೆ ಪ್ರತಿಫಲ ನೀಡುವನು.

145. ಲಿಖಿತವಾಗಿರುವ ಒಂದು ನಿರ್ದಿಷ್ಟ ಸಮಯದಲ್ಲಿ ಅಲ್ಲಾಹನು ಅಪ್ಪಣೆ ನೀಡದೆ ಯಾವ ವ್ಯಕ್ತಿಯೂ ಮೃತನಾಗಲಾರನು ಇಹಲೋಕದ ಲಾಭವನ್ನು ಬಯಸುವಾತನಿಗೆ ನಾವು ಅದರಿಂದಲೇ ನೀಡುವೆವು ಮತ್ತು ಪರಲೋಕದ ಲಾಭವನ್ನು ಬಯಸುವಾತನಿಗೆ ನಾವು ಅದರಿಂದ ನೀಡುವೆವು. ಕೃತಜ್ಞರಿಗೆ ನಾವು ಬೇಗನೇ ಪ್ರತಿಫಲವನ್ನು ನೀಡಲಿರುವೆವು.

146. (ಈ ಹಿಂದೆಯೂ) ಹಲವು ದೂತರಿದ್ದರು – ಅವರ ಜೊತೆ ಸೇರಿ ಅನೇಕ ದೇವಭಕ್ತರು (ಮಿಥ್ಯದ ವಿರುದ್ಧ) ಸಮರ ಹೂಡಿದ್ದರು. ಅಲ್ಲಾಹನ ಮಾರ್ಗದಲ್ಲಿ ತಮಗೆದುರಾದ ಸಂಕಷ್ಟಗಳಿಂದ ಅವರು ಖಿನ್ನರಾಗಲಿಲ್ಲ, ದುರ್ಬಲರಾಗಲಿಲ್ಲ ಮತ್ತು ತಲೆ ಬಾಗಲಿಲ್ಲ. (ಅಂತಹ) ಸಹನಶೀಲರನ್ನೇ ಅಲ್ಲಾಹನು ಪ್ರೀತಿಸುತ್ತಾನೆ.

147. ಅವರು ಹೇಳುತ್ತಿದ್ದುದು ಇಷ್ಟೇ; ‘‘ನಮ್ಮೊಡೆಯಾ, ನಮ್ಮ ಪಾಪಗಳನ್ನು ಮತ್ತು ನಮ್ಮ ವಿಷಯದಲ್ಲ್ಲಿ ನಮ್ಮಿಂದಾಗಿರುವ ಅತಿರೇಕಗಳನ್ನು ಕ್ಷಮಿಸು, ನಮ್ಮ ಹೆಜ್ಜೆಗಳನ್ನು ಸ್ಥಿರಗೊಳಿಸು ಮತ್ತು ಧಿಕ್ಕಾರಿಗಳೆದುರು ನಮಗೆ ನೆರವಾಗು.’’

148. ಅಲ್ಲಾಹನು ಅವರಿಗೆ ಇಹಲೋಕದ ಪುರಸ್ಕಾರವನ್ನೂ ನೀಡಿದನು ಮತ್ತು ಪರಲೋಕದ ಅತ್ಯುತ್ತಮ ಪುರಸ್ಕಾರವನ್ನೂ ನೀಡಿದನು. ಅಲ್ಲಾಹನಂತು ಸತ್ಕರ್ಮಗಳನ್ನು ಮಾಡುವವರನ್ನು ಪ್ರೀತಿಸುತ್ತಾನೆ.

149. ವಿಶ್ವಾಸಿಗಳೇ, ನೀವು ಧಿಕ್ಕಾರಿಗಳ ಆದೇಶ ಪಾಲಿಸಿದರೆ ಅವರು ನಿಮ್ಮನ್ನು ಹಿಂದಕ್ಕೆ (ಧಿಕ್ಕಾರದ ಪಂಥಕ್ಕೆ) ಮರಳಿಸುವರು ಮತ್ತು (ಹಾಗಾಗಿ ಬಿಟ್ಟರೆ) ನೀವು ಭಾರೀ ನಷ್ಟಕ್ಕೆ ಸಿಲುಕುವಿರಿ.

150. ನಿಜವಾಗಿ ಅಲ್ಲಾಹನೇ ನಿಮ್ಮ ಪೋಷಕನಾಗಿದ್ದಾನೆ ಮತ್ತು ಅವನು ಅತ್ಯುತ್ತಮ ಸಹಾಯಕನಾಗಿದ್ದಾನೆ.

151. ಧಿಕ್ಕಾರಿಗಳು ಅಲ್ಲಾಹನ ಜೊತೆ ಪಾಲುದಾರರನ್ನು ಸೇರಿಸಿದ್ದಕ್ಕಾಗಿ ಶೀಘ್ರವೇ ನಾವು ಅವರ ಮನದಲ್ಲಿ ಭಯವನ್ನು ಬಿತ್ತುವೆವು. ನಿಜವಾಗಿ ಅವನು ಅದರ (ಬಹುದೇವಾರಾಧನೆಯ) ಪರವಾಗಿ ಯಾವುದೇ ಪುರಾವೆಯನ್ನು ಇಳಿಸಿಕೊಟ್ಟಿಲ್ಲ. ನರಕವೇ ಅವರ ನೆಲೆಯಾಗಿದೆ. ಅಕ್ರಮಿಗಳ ಆ ನೆಲೆ ತುಂಬಾ ಕೆಟ್ಟದು.

152. ಅಲ್ಲಾಹನು ನಿಮಗೆ ನೀಡಿದ ತನ್ನ ಭರವಸೆಯನ್ನು ಈಡೇರಿಸಿರುವನು. (ಉಹುದ್ ಯುದ್ಧದ ಆರಂಭದಲ್ಲಿ) ನೀವು ಅವನ ಅನುಮತಿಯಂತೆ, ಅವರನ್ನು (ಶತ್ರು ಸೇನೆಯನ್ನು) ಧ್ವಂಸಗೊಳಿಸತೊಡಗಿದ್ದಿರಿ. ಆದರೆ ನೀವು ಬಯಸಿದ್ದನ್ನು (ಸಮರಾರ್ಜಿತ ಸಂಪತ್ತನ್ನು) ನಿಮಗೆ ತೋರಿಸಲಾದ ಬಳಿಕ ನೀವು ಅಧೈರ್ಯ ಪ್ರದರ್ಶಿಸಿದಿರಿ, (ರಣನೀತಿಗೆ ಸಂಬಂಧಿಸಿದ) ಆದೇಶದ ಕುರಿತು ಜಗಳಾಡತೊಡಗಿದಿರಿ ಮತ್ತು ಅವಿಧೇಯತೆ ತೋರಿದಿರಿ. ನಿಮ್ಮಲ್ಲಿ ಕೆಲವರು ಇಹಲೋಕವನ್ನು ಅಪೇಕ್ಷಿಸುತ್ತಿದ್ದರು ಮತ್ತು ಕೆಲವರು ಪರಲೋಕವನ್ನು ಅಪೇಕ್ಷಿಸುತ್ತಿದ್ದರು. ಕೊನೆಗೆ ಅಲ್ಲಾಹನು ನಿಮ್ಮನ್ನು ಪರೀಕ್ಷಿಸಲಿಕ್ಕಾಗಿ ಅವರೆದುರು ನಿಮಗೆ ಹಿನ್ನಡೆ ನೀಡಿದನು. ಅವನು ಖಂಡಿತ ನಿಮ್ಮನ್ನು ಕ್ಷಮಿಸಿರುವನು. ಅಲ್ಲಾಹನು ವಿಶ್ವಾಸಿಗಳ ಪಾಲಿಗೆ ಸದಾ ಉದಾರಿಯಾಗಿರುತ್ತಾನೆ.

153. (ನೆನಪಿಸಿಕೊಳ್ಳಿರಿ;) ದೇವದೂತರು ನಿಮ್ಮ ಹಿಂದಿನಿಂದ ನಿಮ್ಮನ್ನು ಕೂಗಿ ಕರೆಯುತ್ತಿದ್ದಾಗ ನೀವು ಯಾರ ಕಡೆಗೂ ತಿರುಗಿ ನೋಡದೆ ಧಾವಿಸಿ ಹೋಗುತ್ತಿದ್ದಿರಿ – ಆಗ ಅವನು (ಅಲ್ಲಾಹನು) ನಿಮ್ಮಿಂದ ಏನು ಕಳೆದು ಹೋದರೂ ನಿಮಗೆ ಎಂತಹ ಸಂಕಷ್ಟ ಬಂದೊದಗಿದರೂ ನೀವು ದುಃಖಿಸಬಾರದೆಂದು (ನಿಮಗೆ ಕಲಿಸಲಿಕ್ಕಾಗಿ) ನಿಮ್ಮನ್ನು ಬೆನ್ನು ಬೆನ್ನಿಗೇ ಸಂಕಟಕ್ಕೆ ಸಿಲುಕಿಸಿದನು. ಅಲ್ಲಾಹನಂತೂ ನೀವು ಮಾಡುವ ಎಲ್ಲವನ್ನೂ ಅರಿತಿರುತ್ತಾನೆ.

154. ಕೊನೆಗೆ ಅವನು ಸಂಕಟದ ಬಳಿಕ ನಿಮಗೆ ನೆಮ್ಮದಿಯನ್ನು ಇಳಿಸಿಕೊಟ್ಟನು ಮತ್ತು ನಿಮ್ಮಲ್ಲೊಂದು ಗುಂಪನ್ನು ತೂಕಡಿಕೆಯು ಆವರಿಸಿತು. ಆದರೆ ನಿಮ್ಮಲ್ಲಿನ ಇನ್ನೊಂದು ಗುಂಪಿಗೆ ತನ್ನ ಜೀವದ ಚಿಂತೆ ಕಾಡಿತ್ತು. ಅವರಿಗೆ ಅಲ್ಲಾಹನ ಕುರಿತು ಆಧಾರ ರಹಿತವಾದ ಅಪಗ್ರಹಿಕೆಗಳಿದ್ದುವು – ಅಜ್ಞಾನದ ಅಪಗ್ರಹಿಕೆಗಳು. ಅವರು ‘‘ಯಾವ ವಿಷಯದಲ್ಲೂ ನಮಗೇನೂ ಅಧಿಕಾರವಿಲ್ಲವೇ?’’ಎನ್ನುತ್ತಿದ್ದರು. ‘‘ಅಧಿಕಾರವೆಲ್ಲವೂ ಸಂಪೂರ್ಣವಾಗಿ ಅಲ್ಲಾಹನಿಗೇ ಸೇರಿದೆ’’ ಎಂದು ಹೇಳಿರಿ. ಅವರು ಹಲವು ವಿಷಯಗಳನ್ನು ತಮ್ಮ ಮನದೊಳಗೇ ಅಡಗಿಸಿಡುತ್ತಾರೆ ಮತ್ತು ಅವುಗಳನ್ನು ನಿಮ್ಮ ಮುಂದೆ ಪ್ರಕಟಿಸುವುದಿಲ್ಲ. ‘‘(ರಣನೀತಿಯ ನಿರ್ಧಾರದಲ್ಲಿ) ನಮಗೇನಾದರೂ ಅಧಿಕಾರ ಇದ್ದಿದ್ದರೆ ನಾವಿಲ್ಲಿ ಈ ರೀತಿ ಹತರಾಗುತ್ತಿರಲಿಲ್ಲ’’ ಎಂದು ಅವರು ಹೇಳುತ್ತಾರೆ. ‘‘ಒಂದು ವೇಳೆ ನೀವು ನಿಮ್ಮ ಮನೆಗಳಲ್ಲೇ ಇದ್ದಿದ್ದರೂ, ಯಾರ ವಿಧಿಯಲ್ಲಿ ಹತ್ಯೆ ಬರೆದಿದೆಯೋ ಅವರು ಖಂಡಿತ ತಮ್ಮ ಹತ್ಯೆಯ ಸ್ಥಾನಕ್ಕೆ ತಾವೇ ಧಾವಿಸಿ ಹೋಗುತ್ತಿದ್ದರು’’ ಎಂದು ಹೇಳಿರಿ. ಅಲ್ಲಾಹನು ನಿಮ್ಮ ಮನದಲ್ಲಿರುವುದನ್ನು ಪರೀಕ್ಷಿಸಲಿಕ್ಕಾಗಿ ಹಾಗೂ ನಿಮ್ಮ ಮನದಲ್ಲಿರುವುದನ್ನು ಶುದ್ಧೀಕರಿಸಲಿಕ್ಕಾಗಿ (ಇದೆಲ್ಲಾ ಸಂಭವಿಸಿದೆ). ಅಲ್ಲಾಹನು ಮನದಾಳದ ವಿಷಯಗಳನ್ನೂ ಬಲ್ಲವನಾಗಿದ್ದಾನೆ.

 155. ಎರಡು ಪಡೆಗಳು ಪರಸ್ಪರ ಎದುರಾದ ದಿನ, ನಿಮ್ಮ ಪೈಕಿ ತಿರುಗಿ ನಿಂತಿದ್ದವರನ್ನು, ಅವರ ಕೆಲವು ಕರ್ಮಗಳ ಕಾರಣ, ಶೈತಾನನು ದಾರಿ ತಪ್ಪಿಸಿದ್ದನು. ಕೊನೆಗೆ ಅಲ್ಲಾಹನು ಅವರನ್ನು ಕ್ಷಮಿಸಿ ಬಿಟ್ಟನು. ಅಲ್ಲಾಹನು ಖಂಡಿತ ಮಹಾ ಕ್ಷಮಾಶೀಲನೂ ಅಪಾರ ಸಂಯಮಿಯೂ ಆಗಿದ್ದಾನೆ.

 156. ವಿಶ್ವಾಸಿಗಳೇ, ನೀವು ಧಿಕ್ಕಾರಿಗಳಂತಾಗಬೇಡಿ. ಅವರಂತು, ತಮ್ಮ ಸಹೋದರರು ಭೂಮಿಯಲ್ಲಿ ಪ್ರಯಾಣದಲ್ಲಿದ್ದಾಗ ಅಥವಾ ಯುದ್ಧದಲ್ಲಿದ್ದಾಗ (ಮೃತಪಟ್ಟರೆ) ‘‘ಒಂದು ವೇಳೆ ಅವರು ನಮ್ಮ ಜೊತೆ ಇದ್ದಿದ್ದರೆ ಖಂಡಿತ ಮೃತರಾಗುತ್ತಿರಲಿಲ್ಲ ಅಥವಾ ಹತರಾಗುತ್ತಿರಲಿಲ್ಲ’’ ಎನ್ನುತ್ತಾರೆ. ಅಲ್ಲಾಹನು ಈ ಮೂಲಕ ಅವರ ಮನಗಳಲ್ಲಿ ಹತಾಶೆಯನ್ನಷ್ಟೇ ಬೆಳೆಸುತ್ತಾನೆ. ನಿಜವಾಗಿ ಜೀವನ ನೀಡುವವನೂ, ಮರಣ ನೀಡುವವನೂ ಅಲ್ಲಾಹನೇ. ಅಲ್ಲಾಹನು ನೀವು ಮಾಡುತ್ತಿರುವ ಎಲ್ಲವನ್ನೂ ನೋಡುತ್ತಿದ್ದಾನೆ.

157. ನೀವು ಅಲ್ಲಾಹನ ಮಾರ್ಗದಲ್ಲಿ ಹತರಾದರೆ ಅಥವಾ ಮೃತರಾದರೆ ಅಲ್ಲಾಹನ ಕಡೆಯಿಂದ ನಿಮಗೆ ಕ್ಷಮೆ ಹಾಗೂ ಕರುಣೆಯು ಪ್ರಾಪ್ತವಾಗುವುದು. ಅದು, ನೀವು ಸಂಗ್ರಹಿಸುತ್ತಿರುವ ಎಲ್ಲಕ್ಕಿಂತಲೂ ಉತ್ತಮವಾಗಿದೆ.

158. ನೀವು ಮೃತರಾದರೂ ಹತರಾದರೂ ನಿಮ್ಮೆಲ್ಲರನ್ನೂ ಅಲ್ಲಾಹನ ಬಳಿ ಒಟ್ಟು ಸೇರಿಸಲಾಗುವುದು.

159. (ದೂತರೇ,) ನೀವು ಅವರ (ವಿಶ್ವಾಸಿಗಳ) ಪಾಲಿಗೆ ಸೌಮ್ಯರಾಗಿರುವುದು ಅಲ್ಲಾಹನ ಕೃಪೆಯೇ ಆಗಿದೆ. ಒಂದು ವೇಳೆ ನೀವು ಒರಟು ಸ್ವಭಾವದವರೂ ಕಠೋರ ಹೃದಯದವರೂ ಆಗಿದ್ದರೆ, ಅವರೆಲ್ಲಾ ನಿಮ್ಮ ಬಳಿಯಿಂದ ಚದುರಿ ಹೋಗುತ್ತಿದ್ದರು. ನೀವು ಅವರನ್ನು ಕ್ಷಮಿಸಿರಿ. ಅವರ ಕ್ಷಮೆಗಾಗಿ (ಅಲ್ಲಾಹನಲ್ಲಿ) ಪ್ರಾರ್ಥಿಸಿರಿ ಮತ್ತು ವಿವಿಧ ವಿಷಯಗಳಲ್ಲಿ ಅವರ ಜೊತೆ ಸಮಾಲೋಚಿಸಿರಿ. ಇನ್ನು ನೀವು ಒಂದು ನಿರ್ಧಾರ ಕೈಗೊಂಡರೆ (ಆ ಕುರಿತು) ಅಲ್ಲಾಹನಲ್ಲಿ ಸಂಪೂರ್ಣ ಭರವಸೆ ಇಟ್ಟು ಬಿಡಿರಿ. (ತನ್ನಲ್ಲಿ) ಭರವಸೆ ಇಡುವವರನ್ನು ಅಲ್ಲಾಹನು ಖಂಡಿತ ಪ್ರೀತಿಸುತ್ತಾನೆ.

160. ಅಲ್ಲಾಹನು ನಿಮ್ಮ ನೆರವಿಗಿದ್ದರೆ ಯಾರೂ ನಿಮ್ಮನ್ನು ಸೋಲಿಸಲಾರರು. ಇನ್ನು ಅವನು ನಿಮ್ಮ ಕೈ ಬಿಟ್ಟರೆ, ಮತ್ತೆ ಯಾರಿದ್ದಾರೆ ನಿಮಗೆ ನೆರವಾಗುವವರು? ವಿಶ್ವಾಸಿಗಳಂತು ಅಲ್ಲಾಹನಲ್ಲೇ ಪೂರ್ಣ ಭರವಸೆ ಇಟ್ಟಿರಬೇಕು.

161. ಮೋಸವು ಯಾವುದೇ ಪ್ರವಾದಿಗೆ ಭೂಷಣವಲ್ಲ. ಮೋಸ ಮಾಡಿದವನು, ಪುನರುತ್ಥಾನ ದಿನ ತಾನು ಮಾಡಿದ್ದ ಆ ಮೋಸದೊಂದಿಗೆ ಹಾಜರಾಗುವನು. ತರುವಾಯ ಪ್ರತಿಯೊಬ್ಬನಿಗೂ ಅವನ ಕರ್ಮದ ಪ್ರತಿಫಲವು ಸಿಗುವುದು ಮತ್ತು ಅವರ ಮೇಲೆ ಅನ್ಯಾಯವಾಗದು.

162. ಸದಾ ಅಲ್ಲಾಹನ ಮೆಚ್ಚುಗೆಯನ್ನು ಅರಸುತ್ತಿರುವವನು, ಅಲ್ಲಾಹನ ಕೋಪಕ್ಕೆ ಪಾತ್ರನಾಗಿರುವ ಹಾಗೂ ನರಕವೇ ಅಂತಿಮ ನೆಲೆಯಾಗಿರುವ ವ್ಯಕ್ತಿಯಂತಾಗಬಲ್ಲನೇ? ಅದು (ನರಕವು) ತುಂಬಾ ಕೆಟ್ಟ ನೆಲೆಯಾಗಿದೆ.

163. ಅಲ್ಲಾಹನ ಬಳಿ ಅವರಿಗೆ ವಿಭಿನ್ನ ಸ್ಥಾನಗಳಿವೆ ಮತ್ತು ಅಲ್ಲಾಹನು ಅವರು ಮಾಡುತ್ತಿರುವ ಎಲ್ಲವನ್ನೂ ನೋಡುತ್ತಿರುತ್ತಾನೆ.

164. ಅಲ್ಲಾಹನು ವಿಶ್ವಾಸಿಗಳ ನಡುವೆ ಅವರಲ್ಲೇ ಒಬ್ಬರನ್ನು ದೂತರಾಗಿ ನೇಮಿಸುವ ಮೂಲಕ ಅವರಿಗೆ ಉಪಕಾರ ಮಾಡಿರುವನು. ಅವರು (ದೂತರು) ಅವರಿಗೆ ಅವನ (ಅಲ್ಲಾಹನ) ವಚನಗಳನ್ನು ಓದಿ ಕೇಳಿಸುತ್ತಾರೆ, ಅವರನ್ನು ಸಂಸ್ಕರಿಸುತ್ತಾರೆ ಮತ್ತು ಅವರಿಗೆ ಗ್ರಂಥ ಹಾಗೂ ಯುಕ್ತಿಯ ಜ್ಞಾನವನ್ನು ನೀಡುತ್ತಾರೆ. ಇದಕ್ಕೆ ಮುನ್ನ ಅವರು (ವಿಶ್ವಾಸಿಗಳು) ಸ್ಪಷ್ಟವಾಗಿ ದಾರಿಗೆಟ್ಟ ಸ್ಥಿತಿಯಲ್ಲಿದ್ದರು.

 165. ನಿಮಗೇನಾದರೂ ಹಾನಿ ಸಂಭವಿಸಿದಾಗ ನೀವು ‘‘(ಅಯ್ಯೋ) ಇದೆಲ್ಲಿಂದ ಬಂತು?’’ ಎನ್ನುತ್ತೀರಾ? ನಿಜವಾಗಿ ನೀವು (ಈ ಹಿಂದೆ ನಿಮ್ಮ ಶತ್ರುಗಳಿಗೆ) ಇದರ ದುಪ್ಪಟ್ಟು ಹಾನಿ ಮಾಡಿರುವಿರಿ. (ದೂತರೇ,) ಹೇಳಿರಿ ; ‘‘ಇದು ಸ್ವತಃ ನಿಮ್ಮಿಂದಾಗಿಯೇ ಸಂಭವಿಸಿದೆ. ಅಲ್ಲಾಹನು, ಎಲ್ಲವನ್ನೂ ಮಾಡಲು ಖಂಡಿತ ಶಕ್ತನಾಗಿದ್ದಾನೆ’’.

166. ಎರಡು ಪಡೆಗಳು ಪರಸ್ಪರ ಘರ್ಷಣೆಗಿಳಿದ ದಿನ ಸಂಭವಿಸಿದ ಹಾನಿಯು ಅಲ್ಲಾಹನ ಆದೇಶದಿಂದಲೇ ಸಂಭವಿಸಿತ್ತು. ನಿಜವಾಗಿ ಅದು, ಯಾರು ನೈಜ ವಿಶ್ವಾಸಿಗಳು ಎಂಬುದನ್ನು ತಿಳಿಯುವುದಕ್ಕಾಗಿತ್ತು.

 167. ಮತ್ತು ಅದು, ಯಾರು ಕಪಟಿಗಳು ಎಂಬುದನ್ನು ತಿಳಿಯುವುದಕ್ಕಾಗಿತ್ತು. ‘‘ಬನ್ನಿರಿ, ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಿರಿ ಅಥವಾ ರಕ್ಷಣಾತ್ಮಕ ಹೋರಾಟ ನಡೆಸಿರಿ’’ ಎಂದು ಅವರೊಡನೆ ಹೇಳಿದಾಗ ಅವರು ‘‘ಯುದ್ಧದ ಕುರಿತು ನಮಗೆ ಮೊದಲೇ ತಿಳಿದಿದ್ದರೆ ನಾವು ನಿಮ್ಮನ್ನು ಅನುಸರಿಸುತ್ತಿದ್ದೆವು’’ ಎಂದರು. ನಿಜವಾಗಿ ಅಂದು ಅವರು ವಿಶ್ವಾಸಕ್ಕಿಂತ ಧಿಕ್ಕಾರಕ್ಕೆ ಹೆಚ್ಚು ನಿಕಟರಾಗಿದ್ದರು. ಅವರು ತಮ್ಮ ಮನಸ್ಸುಗಳಲ್ಲಿ ಇಲ್ಲದ್ದನ್ನು ತಮ್ಮ ಬಾಯಿಗಳಿಂದ ಹೇಳುತ್ತಾರೆ. ಅವರು ಅಡಗಿಸುತ್ತಿರುವುದನ್ನು ಅಲ್ಲಾಹನು ಚೆನ್ನಾಗಿ ಬಲ್ಲನು.

168. ಸ್ವತಃ ಸುಮ್ಮನೆ ಕುಳಿತಿದ್ದು, ತಮ್ಮ ಸಹೋದರರ ಕುರಿತು ‘‘ಅವರು ನಮ್ಮ ಮಾತನ್ನು ಅನುಸರಿಸಿದ್ದರೆ ಹತರಾಗುತ್ತಿರಲಿಲ್ಲ’’ ಎನ್ನುವವರೊಡನೆ, ‘‘ನೀವು ಸತ್ಯವಂತರಾಗಿದ್ದರೆ, ಸ್ವತಃ ನಿಮ್ಮಿಂದ ಮರಣವನ್ನು ತೊಲಗಿಸಿ ತೋರಿಸಿರಿ’’ ಎಂದು ಹೇಳಿರಿ.

169. ಅಲ್ಲಾಹನ ಮಾರ್ಗದಲ್ಲಿ ಹತರಾದವರನ್ನು ನೀವು ಮೃತರೆಂದು ಪರಿಗಣಿಸಬೇಡಿ. ಅವರು ಜೀವಂತವಿದ್ದಾರೆ ಮತ್ತು ತಮ್ಮ ಒಡೆಯನ ಬಳಿ ಪೋಷಣೆಯನ್ನು ಪಡೆಯುತ್ತಿದ್ದಾರೆ.

170. ಅಲ್ಲಾಹನು ಅವನ ಅನುಗ್ರಹದಿಂದ ತಮಗೆ ನೀಡಿರುವುದರಲ್ಲಿ ಅವರು ಸಂಭ್ರಮಿಸುತ್ತಿದ್ದಾರೆ ಹಾಗೂ ಈವರೆಗೂ ತಮ್ಮ ಜೊತೆ ಸೇರಿಕೊಳ್ಳದೆ ಹಿಂದೆ ಉಳಿದಿರುವವರ (ಹುತಾತ್ಮರಾಗದ ಸತ್ಯವಿಶ್ವಾಸಿಗಳ) ವಿಷಯದಲ್ಲೂ ಅವರು ಸಂತಸದಲ್ಲಿದ್ದಾರೆ – ಅವರಿಗೆ ಯಾವುದೇ ಭಯವಿರದು ಮತ್ತು ಅವರು ದುಃಖಿಸಲಾರರು.

171. ಅಲ್ಲಾಹನು ತನ್ನ ಅನುಗ್ರಹದಿಂದ ಅವರಿಗೆ ನೀಡಿರುವ ಕೊಡುಗೆಗಳಿಂದ ಅವರು ಸಂತುಷ್ಟರಾಗಿದ್ದಾರೆ. ಅಲ್ಲಾಹನು ಸತ್ಯವಿಶ್ವಾಸಿಗಳ ಪ್ರತಿಫಲವನ್ನು ಎಂದೂ ವ್ಯರ್ಥಗೊಳಿಸುವುದಿಲ್ಲ.

172. ತಮಗೆ ಘಾಸಿಯಾದ ಬಳಿಕವೂ ಅಲ್ಲಾಹ್ ಮತ್ತವನ ದೂತರ ಕರೆಗೆ ಓಗೊಟ್ಟವರಿಗೆ ಹಾಗೂ ಅವರ ಪೈಕಿ ಸತ್ಕರ್ಮವೆಸಗಿದವರಿಗೆ ಮತ್ತು ಸತ್ಯನಿಷ್ಠರಾಗಿದ್ದವರಿಗೆ ಭವ್ಯ ಪ್ರತಿಫಲವು ಕಾದಿದೆ.

173. (ಅವರು ಎಂಥವರೆಂದರೆ) ಜನರು ಅವರೊಡನೆ ‘‘ನಿಮ್ಮ ವಿರುದ್ಧ ಒಂದು ಭಾರೀ ಪಡೆಯು ಸಜ್ಜಾಗಿ ನಿಂತಿದೆ. ಅವರಿಗೆ ಅಂಜಿರಿ’’ ಎಂದು ಹೇಳಿದಾಗ ಅವರ ವಿಶ್ವಾಸವು ಇನ್ನಷ್ಟು ಹೆಚ್ಚಿತು ಮತ್ತು ಅವರು ‘‘ನಮಗೆ ಅಲ್ಲಾಹನೇ ಸಾಕು. ಅವನು ಅತ್ಯುತ್ತಮ ಪೋಷಕನಾಗಿದ್ದಾನೆ’’ಎಂದರು.

174. ಕೊನೆಗೆ ಅವರು ಅಲ್ಲಾಹನ ಕೊಡುಗೆಗಳು ಹಾಗೂ ಅವನ ಅನುಗ್ರಹಗಳೊಂದಿಗೆ ಮರಳಿದರು. ಯಾವ ಹಾನಿಯೂ ಅವರನ್ನು ತಟ್ಟಲಿಲ್ಲ. ಅವರು ಅಲ್ಲಾಹನ ಮೆಚ್ಚುಗೆಯನ್ನರಸಿದರು. ಅಲ್ಲಾಹನಂತೂ ಭಾರೀ ಭವ್ಯ ಅನುಗ್ರಹಿಯಾಗಿದ್ದಾನೆ.

175. ನಿಮ್ಮನ್ನು ತನ್ನ ಮಿತ್ರರ ಕುರಿತು ಹೆದರಿಸುತ್ತಲೇ ಇದ್ದವನು ಆ ಶೈತಾನನು. ನೀವು ವಿಶ್ವಾಸಿಗಳಾಗಿದ್ದರೆ, ಅವರಿಗೆ ಅಂಜಬೇಡಿ, ನನಗೆ ಮಾತ್ರ ಅಂಜಿರಿ.

176. (ದೂತರೇ,) ಧಿಕ್ಕಾರದ ಪರವಾಗಿ ಹೋರಾಡುತ್ತಿರುವವರ ಕುರಿತು ನೀವೇನೂ ದುಃಖಿಸಬೇಡಿ. ಅವರು ಅಲ್ಲಾಹನಿಗೆ ಖಂಡಿತ ಯಾವ ಹಾನಿಯನ್ನೂ ಮಾಡಲಾರರು. ಅಲ್ಲಾಹನು ಅವರಿಗೆ ಪರಲೋಕದಲ್ಲಿ ಯಾವ ಪಾಲನ್ನೂ ನೀಡ ಬಯಸುವುದಿಲ್ಲ. ಅವರಿಗೆ ಭಾರೀ ಶಿಕ್ಷೆ ಕಾದಿದೆ.

177. ವಿಶ್ವಾಸದ ಬದಲಿಗೆ ಧಿಕ್ಕಾರವನ್ನು ಖರೀದಿಸಿಕೊಂಡವರು ಅಲ್ಲಾಹನಿಗೆ ಖಂಡಿತ ಯಾವ ಹಾನಿಯನ್ನೂ ಮಾಡಲಾರರು. ಅವರಿಗೆ ಕಠಿಣ ಶಿಕ್ಷೆ ಕಾದಿದೆ.

178. ಧಿಕ್ಕಾರಿಗಳು, ನಾವು ಅವರಿಗೆ ನೀಡುತ್ತಿರುವ ಕಾಲಾವಕಾಶವು ಅವರ ಪಾಲಿಗೆ ಉತ್ತಮವೆಂದು ನಂಬದಿರಲಿ. ಅವರು ತಮ್ಮ ಪಾಪಗಳನ್ನು ಹೆಚ್ಚಿಸಿಕೊಳ್ಳಲೆಂದು ನಾವು ಅವರಿಗೆ ಕಾಲಾವಕಾಶವನ್ನು ನೀಡುತ್ತಿದ್ದೇವೆ. ಅವರಿಗೆ ಭಾರೀ ಅಪಮಾನಕಾರಿ ಶಿಕ್ಷೆ ಕಾದಿದೆ.

 179. ಮಲಿನರನ್ನು ನಿರ್ಮಲರಿಂದ ಪ್ರತ್ಯೇಕಿಸುವ ತನಕ ಅಲ್ಲಾಹನು ವಿಶ್ವಾಸಿಗಳನ್ನು – ಇಂದು ನೀವು ಇರುವಂತಹ ಸ್ಥಿತಿಯಲ್ಲೇ ಬಿಟ್ಟು ಬಿಡಲಾರನು. ಅಲ್ಲಾಹನು ಎಲ್ಲ ಗುಪ್ತ ವಿಷಯಗಳನ್ನು ನಿಮಗೆ ತಿಳಿಸಿ ಬಿಡುವುದಿಲ್ಲ. (ಅದಕ್ಕಾಗಿ) ಅಲ್ಲಾಹನು ತನ್ನ ದೂತರ ಪೈಕಿ ತಾನಿಚ್ಛಿಸುವವರನ್ನು ಆಯ್ದುಕೊಳ್ಳುತ್ತಾನೆ. ನೀವು ಅಲ್ಲಾಹನಲ್ಲಿ ಮತ್ತವನ ದೂತರಲ್ಲಿ ವಿಶ್ವಾಸವಿಡಿರಿ. ಈ ರೀತಿ ನೀವು ವಿಶ್ವಾಸವಿಟ್ಟು, ಸತ್ಯ ನಿಷ್ಠೆಯ ಮಾರ್ಗವನ್ನು ಅನುಸರಿಸಿದರೆ ನಿಮಗೆ ಭವ್ಯ ಪ್ರತಿಫಲ ಸಿಗಲಿದೆ.

 180. ಅಲ್ಲಾಹನು ಅವನ ಅನುಗ್ರಹದಿಂದ ತಮಗೆ ದಯಪಾಲಿಸಿರುವುದರಲ್ಲಿ (ಸಂಪತ್ತಿನಲ್ಲಿ) ಜಿಪುಣತೆ ತೋರುವವರು, ಅದು ತಮ್ಮ ಪಾಲಿಗೆ ಉತ್ತಮವೆಂದು ಭಾವಿಸದಿರಲಿ. ನಿಜವಾಗಿ ಅದು (ಜಿಪುಣತೆ) ಅವರ ಪಾಲಿಗೆ ಕೆಟ್ಟದಾಗಿದೆ. ಅವರು ಜಿಪುಣತೆ ತೋರಿದ ಆ ಸಂಪತ್ತನ್ನು ಪುನರುತ್ಥಾನ ದಿನ ಹೊರೆಯಾಗಿಸಿ ಅವರ ಕೊರಳಿಗೆ ಕಟ್ಟಲಾಗುವುದು. ಆಕಾಶಗಳ ಮತ್ತು ಭೂಮಿಯ ಅಂತಿಮ ಒಡೆತನವು ಅಲ್ಲಾಹನಿಗೇ ಸೇರಿದೆ ಮತ್ತು ನೀವು ಮಾಡುತ್ತಿರುವ ಎಲ್ಲವನ್ನೂ ಅಲ್ಲಾಹನು ಬಲ್ಲನು.

181. ‘‘ಅಲ್ಲಾಹನು ಬಡವನು, ನಾವು ಶ್ರೀಮಂತರು’’ ಎಂದು ಹೇಳಿದವರ ಮಾತನ್ನು ಅಲ್ಲಾಹನು ಕೇಳಿದನು. (ಇದೀಗ) ಅವರು ಹೇಳುತ್ತಿರುವುದನ್ನು ಮತ್ತು (ಈ ಹಿಂದೆ) ಅವರು ಅನ್ಯಾಯವಾಗಿ ಪ್ರವಾದಿಗಳ ಹತ್ಯೆ ನಡೆಸಿರುವುದನ್ನು ನಾವು ಬರೆದಿಡುವೆವು ಮತ್ತು (ನಾಳೆ ಪರಲೋಕದಲ್ಲಿ ಅವರೊಡನೆ) ಹೇಳುವೆವು; ’‘ಸುಡುವ ಶಿಕ್ಷೆಯನ್ನು ಸವಿಯಿರಿ.’’

182. ‘‘ಇದುವೇ ನೀವು ನಿಮ್ಮ ಕೈಗಳಿಂದ ಸಂಪಾದಿಸಿ ಕಳುಹಿಸಿದ ಗಳಿಕೆ’’. ಅಲ್ಲಾಹನು ಖಂಡಿತ ತನ್ನ ದಾಸರ ಮೇಲೆ ಅನ್ಯಾಯವೆಸಗುವವನಲ್ಲ.

183. (ದೂತರೇ,) ‘‘ಬೆಂಕಿಯು (ಬಂದು) ತಿನ್ನುವಂತಹ ಒಂದು ಬಲಿಪ್ರಾಣಿಯನ್ನು ನಮ್ಮ ಮುಂದೆ ತರುವ ತನಕ ನಾವು ಯಾವ ದೂತನನ್ನೂ ನಂಬಬಾರದೆಂದು ಅಲ್ಲಾಹನು ನಮ್ಮ ಜೊತೆ ಕರಾರು ಮಾಡಿರುತ್ತಾನೆ’’ ಎನ್ನುವವರೊಡನೆ ಹೇಳಿರಿ; ‘‘ನನಗಿಂತ ಹಿಂದೆಯೂ ಹಲವು ದೂತರು ಸ್ಪಷ್ಟ ಪುರಾವೆಗಳೊಂದಿಗೆ (ಮಾತ್ರವಲ್ಲ) ನೀವೀಗ ಕೇಳುತ್ತಿರುವ ದೃಷ್ಟಾಂತದೊಂದಿಗೆ ನಿಮ್ಮ ಬಳಿಗೆ ಬಂದಿದ್ದರು. ನೀವು ಸತ್ಯವಂತರಾಗಿದ್ದರೆ, ನೀವು ಅವರನ್ನು ಕೊಂದುದೇಕೆ ?’’

  184. ಅವರೀಗ ನಿಮ್ಮನ್ನು ಧಿಕ್ಕರಿಸುತ್ತಿದ್ದರೆ, ನಿಮಗಿಂತ ಮುನ್ನ ಸ್ಪಷ್ಟ ಪುರಾವೆಗಳೊಂದಿಗೆ, ದಿವ್ಯ ಕೃತಿಗಳೊಂದಿಗೆ ಮತ್ತು ಉಜ್ವಲ ಗ್ರಂಥಗಳೊಂದಿಗೆ ಬಂದಿದ್ದ ದೇವದೂತರುಗಳನ್ನೂ ಧಿಕ್ಕರಿಸಲಾಗಿದೆ.

185. ಪ್ರತಿಯೊಂದು ಜೀವವೂ ಮರಣವನ್ನು ಸವಿಯಲೇ ಬೇಕು. ಪುನರುತ್ಥಾನ ದಿನ ನಿಮಗೆ ನಿಮ್ಮ (ಕರ್ಮಗಳ) ಪೂರ್ಣ ಪ್ರತಿಫಲವು ಸಿಗಲಿದೆ. (ಅಂದು) ನರಕದಿಂದ ರಕ್ಷಿತನಾದವನು ಮತ್ತು ಸ್ವರ್ಗವನ್ನು ಪ್ರವೇಶಿಸಿದವನು ವಿಜಯಿಯಾದನು. ಇಹಲೋಕದ ಜೀವನವಂತೂ ಕೇವಲ ಒಂದು ಮೋಸದ ವ್ಯವಹಾರವೇ ಹೊರತು ಬೇರೇನೂ ಅಲ್ಲ.

186. (ವಿಶ್ವಾಸಿಗಳೇ,) ನಿಮ್ಮನ್ನು ನಿಮ್ಮ ಸಂಪತ್ತುಗಳ ಹಾಗೂ ನಿಮ್ಮ ಜೀವಗಳ ವಿಷಯದಲ್ಲಿ ಖಂಡಿತ ಪರೀಕ್ಷಿಸಲಾಗುವುದು. ಹಾಗೆಯೇ ನೀವು, ನಿಮಗಿಂತ ಮುನ್ನ ಗ್ರಂಥ ನೀಡಲಾಗಿದ್ದವರಿಂದ ಹಾಗೂ ಬಹುದೇವಾರಾಧಕರಿಂದ, ಮನನೋಯಿಸುವ ಹಲವು ಮಾತುಗಳನ್ನು ಕೇಳುವಿರಿ. (ಆಗ) ನೀವು ಸಹನಶೀಲರಾಗಿದ್ದರೆ ಹಾಗೂ ಸತ್ಯನಿಷ್ಠರಾಗಿದ್ದರೆ, ಅದು ಖಂಡಿತ ಒಂದು ಮಹಾ ಸಾಹಸದ ಸಾಧನೆಯಾಗಿದೆ.

187. ‘‘ಅದನ್ನು (ದಿವ್ಯಗ್ರಂಥವನ್ನು) ನೀವು ಜನರಿಗೆ ವಿವರಿಸಿ ತಿಳಿಸಬೇಕು ಮತ್ತು ಅದನ್ನು ಬಚ್ಚಿಡಬಾರದು’’ ಎಂದು ಅಲ್ಲಾಹನು ಗ್ರಂಥದವರಿಂದ ಕರಾರನ್ನು ಪಡೆದಿದ್ದನು. ಅವರು ಅದನ್ನು (ಆ ಕರಾರನ್ನು) ಸಂಪೂರ್ಣ ಕಡೆಗಣಿಸಿ ಬಿಟ್ಟರು ಮತ್ತು ತೀರಾ ಸಣ್ಣ ಬೆಲೆಗೆ ಅದನ್ನು ಮಾರಿಬಿಟ್ಟರು. ಎಷ್ಟೊಂದು ಕೆಟ್ಟದು, ಅವರ ಆ ವ್ಯವಹಾರ!

188. ತಾವು ಎಸಗಿದ ಕೃತ್ಯಗಳ ಕುರಿತು ಸಂತುಷ್ಟರಾಗಿರುವವರು ಹಾಗೂ ತಾವು ಮಾಡಿಲ್ಲದ ಕೆಲಸಗಳಿಗಾಗಿ (ಜನರು) ತಮ್ಮನ್ನು ಹೊಗಳಬೇಕೆಂದು ಬಯಸುವವರು (ವಿಜಯಿಗಳೆಂದು) ನೀವು ಭಾವಿಸಬೇಡಿ. ಮತ್ತು ಅವರು ಶಿಕ್ಷೆಯಿಂದ ರಕ್ಷಿತರಾಗುವರೆಂದು ನೀವು ಭಾವಿಸಬೇಡಿ. ಅವರಿಗೆ ಕಠಿಣ ಶಿಕ್ಷೆ ಕಾದಿದೆ.

189. ಆಕಾಶಗಳ ಮತ್ತು ಭೂಮಿಯ ಪ್ರಭುತ್ವವೆಲ್ಲಾ ಅಲ್ಲಾಹನಿಗೇ ಸೇರಿದೆ ಮತ್ತು ಅಲ್ಲಾಹನು ಎಲ್ಲವನ್ನೂ ಮಾಡಲು ಶಕ್ತನಾಗಿದ್ದಾನೆ.

190. ಆಕಾಶಗಳ ಹಾಗೂ ಭೂಮಿಯ ಸೃಷ್ಟಿಯಲ್ಲಿ ಮತ್ತು ರಾತ್ರಿ ಹಾಗೂ ಹಗಲುಗಳ ಬದಲಾವಣೆಯಲ್ಲಿ ಬುದ್ಧಿವಂತರಿಗೆ ಪುರಾವೆಗಳಿವೆ.

191. ಅವರು ನಿಂತಲ್ಲೂ ಕುಳಿತಲ್ಲೂ ಮಲಗಿರುವಲ್ಲೂ ಆಕಾಶಗಳ ಮತ್ತು ಭೂಮಿಯ ಸೃಷ್ಟಿಯ ಕುರಿತು ಚಿಂತನೆ ನಡೆಸುತ್ತಿರುತ್ತಾರೆ (ಮತ್ತು ಪ್ರಾರ್ಥಿಸುತ್ತಾರೆ;) ‘‘ನಮ್ಮೊಡೆಯಾ, ನೀನು ಇದನ್ನೆಲ್ಲಾ ವೃಥಾ ಸೃಷ್ಟಿಸಿಲ್ಲ. ನೀನು ಪಾವನನು, ನಮ್ಮನ್ನು ನರಕಾಗ್ನಿಯ ಶಿಕ್ಷೆಯಿಂದ ರಕ್ಷಿಸು’’.

192. ‘‘ನಮ್ಮೊಡೆಯಾ, ನೀನು ಯಾರನ್ನು ನರಕಾಗ್ನಿಯೊಳಗೆ ತಳ್ಳಿದೆಯೋ ಅವನನ್ನು ಅಪಮಾನಿತನಾಗಿಸಿದೆ. ಅಕ್ರಮಿಗಳಿಗೆ ಯಾರೂ ಸಹಾಯಕರಿಲ್ಲ’’.

193. ‘‘ನಮ್ಮೊಡೆಯಾ, ವಿಶ್ವಾಸದೆಡೆಗೆ ನಮ್ಮನ್ನು ಕರೆಯುತ್ತಿದ್ದ ಹಾಗೂ ‘‘ನಿಮ್ಮ ಒಡೆಯನಲ್ಲಿ ವಿಶ್ವಾಸವಿಡಿರಿ’’ ಎನ್ನುತ್ತಿದ್ದವನ ಕರೆಯನ್ನು ನಾವು ಕೇಳಿದೆವು ಮತ್ತು ನಾವು ವಿಶ್ವಾಸವಿಟ್ಟೆವು. ನಮ್ಮೊಡೆಯಾ, ನಮಗಾಗಿ ನಮ್ಮ ಪಾಪಗಳನ್ನು ಕ್ಷಮಿಸು. ನಮ್ಮ ಕೆಡುಕುಗಳನ್ನೆಲ್ಲಾ ನಮ್ಮಿಂದ ದೂರಗೊಳಿಸು ಮತ್ತು ನಮಗೆ ಸಜ್ಜನರ ಸಂಗದಲ್ಲಿ ಮರಣವನ್ನು ನೀಡು’’.

 194. ‘‘ನಮ್ಮೊಡೆಯಾ, ನೀನು ನಿನ್ನ ದೂತರ ಮೂಲಕ ನಮಗೆ ನೀಡಿರುವ ವಾಗ್ದಾನಗಳನ್ನು ನೆರವೇರಿಸು ಮತ್ತು ಪುನರುತ್ಥಾನ ದಿನ ನಮ್ಮನ್ನು ಅಪಮಾನಿಸಬೇಡ. ಖಂಡಿತವಾಗಿಯೂ ನೀನು, ಕೊಟ್ಟ ಮಾತನ್ನು ತಪ್ಪುವವನಲ್ಲ’’.

195. ಅವರ ಒಡೆಯನು ಅವರಿಗೆ ಉತ್ತರಿಸಿದನು; ಖಂಡಿತವಾಗಿಯೂ ನಾನು, ನಿಮ್ಮ ಪೈಕಿ ಯಾವುದೇ ಸತ್ಕರ್ಮಿ ಪುರುಷನ ಅಥವಾ ಸ್ತ್ರೀಯ ಕರ್ಮವನ್ನು ವ್ಯರ್ಥಗೊಳಿಸಲಾರೆ. ನೀವು ಪರಸ್ಪರ ಅವಲಂಬಿತರು. (ನನ್ನ ಮಾರ್ಗದಲ್ಲಿ) ವಲಸೆ ಹೋದವರು, ತಮ್ಮ ನಾಡುಗಳಿಂದ ಹೊರದಬ್ಬಲ್ಪಟ್ಟವರು, ನನ್ನ ಮಾರ್ಗದಲ್ಲಿ ಹಿಂಸಿಸಲ್ಪಟ್ಟವರು, ಹೋರಾಡಿದವರು ಹಾಗೂ ಹತರಾದವರು – ಅವರ ಕೆಡುಕುಗಳನ್ನು ನಾನು ಖಂಡಿತ ಅವರಿಂದ ದೂರಗೊಳಿಸುವೆನು ಮತ್ತು ತಳದಲ್ಲಿ ನದಿಗಳು ಹರಿಯುತ್ತಿರುವ ಉದ್ಯಾನಗಳಲ್ಲಿ ಅವರನ್ನು ಸೇರಿಸುವೆನು. ಇದು ಅಲ್ಲಾಹನ ವತಿಯಿಂದಿರುವ ಪ್ರತಿಫಲ. ನಿಜಕ್ಕೂ ಅಲ್ಲಾಹನ ಬಳಿ ಇರುವ ಪ್ರತಿಫಲವೇ ಅತ್ಯುತ್ತಮವಾಗಿದೆ.

196. ನಾಡುಗಳಲ್ಲಿ ಮೆರೆಯುವ ಧಿಕ್ಕಾರಿಗಳ ವೈಭವವು ನಿಮ್ಮನ್ನು ಮೋಸಗೊಳಿಸದಿರಲಿ.

197. ಇದೆಲ್ಲಾ ತೀರಾ ಸೀಮಿತ ಸಂಪತ್ತು. ಅವರ ಅಂತಿಮ ನೆಲೆ ನರಕವೇ ಆಗಿದೆ. ಅದು ತುಂಬಾ ಕೆಟ್ಟ ನೆಲೆ .

198. ತಮ್ಮ ಒಡೆಯನಿಗೆ ಅಂಜುತ್ತಾ ಬದುಕಿದವರಿಗಾಗಿ, ತಳದಲ್ಲಿ ನದಿಗಳು ಹರಿಯುತ್ತಿರುವ ಉದ್ಯಾನಗಳಿವೆ. ಅವರು ಸದಾ ಕಾಲ ಅವುಗಳಲ್ಲಿರುವರು. ಇದು ಅಲ್ಲಾಹನ ಆತಿಥ್ಯ. ಸಜ್ಜನರ ಪಾಲಿಗೆ, ಅಲ್ಲಾಹನ ಬಳಿ ಏನಿದೆಯೋ ಅದುವೇ ಉತ್ತಮ.

199. ಗ್ರಂಥದವರಲ್ಲಿ ಕೆಲವರಿದ್ದಾರೆ – ಅಲ್ಲಾಹನಲ್ಲಿ ನಂಬಿಕೆ ಉಳ್ಳವರು ಮತ್ತು ನಿಮಗೇನನ್ನು ಇಳಿಸಿ ಕೊಡಲಾಗಿದೆಯೋ ಅದರಲ್ಲಿ (ಕುರ್‌ಆನ್‌ನಲ್ಲಿ) ಹಾಗೂ ತಮಗೆ ಇಳಿಸಿಕೊಡಲಾಗಿರುವುದರಲ್ಲಿ ನಂಬಿಕೆ ಉಳ್ಳವರು. ಅವರು ಅಲ್ಲಾಹನೆದುರು ವಿನಯಶೀಲರಾಗಿರುತ್ತಾರೆ. ಅವರು ಅಲ್ಲಾಹನ ವಚನಗಳನ್ನು ಸಣ್ಣ ಬೆಲೆಗೆ ಮಾರುವುದಿಲ್ಲ. ಅಂಥವರಿಗಾಗಿ ಅವರ ಪ್ರತಿಫಲವು ಅವರ ಒಡೆಯನ (ಅಲ್ಲಾಹನ) ಬಳಿ ಇದೆ. ಖಂಡಿತವಾಗಿಯೂ ಅಲ್ಲಾಹನು ಕ್ಷಿಪ್ರವಾಗಿ ವಿಚಾರಣೆ ನಡೆಸುವವನಾಗಿದ್ದಾನೆ.

200. ವಿಶ್ವಾಸಿಗಳೇ, ಸಹನಶೀಲರಾಗಿರಿ, ಸ್ಥಿರ ಚಿತ್ತರಾಗಿರಿ, (ಸತ್ಯದ ಪರ) ಹೋರಾಟಕ್ಕೆ ಸದಾ ಸನ್ನದ್ಧರಾಗಿರಿ ಮತ್ತು ಸದಾ ಅಲ್ಲಾಹನಿಗೆ ಅಂಜಿರಿ – ನೀವು ವಿಜಯಿಗಳಾಗಬಹುದು.