1. ವಿಶ್ವಾಸಿಗಳೇ, ಪ್ರತಿಜ್ಞೆಗಳನ್ನು ಪಾಲಿಸಿರಿ. ನಾಲ್ಕು ಕಾಲಿನ ಜಾನುವಾರುಗಳನ್ನು ನಿಮ್ಮ ಪಾಲಿಗೆ ಸಮ್ಮತಗೊಳಿಸಲಾಗಿದೆ – (ಪ್ರತ್ಯೇಕವಾಗಿ) ನಿಮಗೆ ತಿಳಿಸಲಾಗುವವುಗಳ ಹೊರತು. ಹಾಗೆಯೇ ನೀವು ‘ಇಹ್ರಾಮ್’ನಲ್ಲಿ (ಹಜ್ಜ್ ಅಥವಾ ಉಮ್ರಃದ ಸಂದರ್ಭದ ವಿಶೇಷ ಉಡುಗೆಯಲ್ಲಿ) ಇರುವಾಗ, ಬೇಟೆಯಾಡಬಾರದು. ಖಂಡಿತವಾಗಿಯೂ ಅಲ್ಲಾಹನು ತಾನಿಚ್ಛಿಸುವುದನ್ನೇ ಆದೇಶಿಸುತ್ತಾನೆ.
2. ವಿಶ್ವಾಸಿಗಳೇ, ಅಲ್ಲಾಹನ ಕುರುಹುಗಳಿಗೆ, (ನಾಲ್ಕು) ಪಾವನ ತಿಂಗಳುಗಳಿಗೆ, ಹರಕೆಗಳಿಗೆ (ಕಅ್ಬ: ಭವನಕ್ಕೆಂದು ಹರಕೆಗೆ ಬಿಡಲಾದ ಜಾನುವಾರುಗಳಿಗೆ), ಕೊರಳಲ್ಲಿ (ಹರಕೆಯ) ಪಟ್ಟಿ ಇರುವವುಗಳಿಗೆ ಮತ್ತು ತಮ್ಮೊಡೆಯನ ಅನುಗ್ರಹ ಹಾಗೂ ಮೆಚ್ಚುಗೆಯನ್ನು ಹುಡುಕುತ್ತಾ ಪವಿತ್ರ ಭವನ (ಕಅ್ಬ:)ದೆಡೆಗೆ ಹೊರಟವರಿಗೆ ಯಾವುದೇ ಅಪಚಾರ ಎಸಗಬೇಡಿ. ‘ಇಹ್ರಾಮ್’ನಿಂದ ಮುಕ್ತರಾದ ಬಳಿಕ ನೀವು ಬೇಟೆಯಾಡಬಹುದು. ಒಂದು ಜನಾಂಗವು ಪವಿತ್ರ ಭವನ (ಕಅ್ಬ:)ದಿಂದ ನಿಮ್ಮನ್ನು ತಡೆದ ಕಾರಣ ಅವರ ಮೇಲೆ ನಿಮಗಿರುವ ದ್ವೇಷವು, ಯಾವುದೇ ಅನ್ಯಾಯ ನಡೆಸುವುದಕ್ಕೆ ನಿಮ್ಮನ್ನು ಪ್ರಚೋದಿಸಬಾರದು. ಸತ್ಕರ್ಮ ಹಾಗೂ ಧರ್ಮ ನಿಷ್ಠೆಯ ಕೆಲಸಗಳಲ್ಲಿ (ಎಲ್ಲರ ಜೊತೆ) ಸಹಕರಿಸಿರಿ ಮತ್ತು ಪಾಪದ ಹಾಗೂ ಅತಿಕ್ರಮದ ಕೆಲಸಗಳಲ್ಲಿ (ಯಾರ ಜೊತೆಗೂ) ಸಹಕರಿಸಬೇಡಿ. ಸದಾ ಅಲ್ಲಾಹನಿಗೆ ಅಂಜಿರಿ. ಅಲ್ಲಾಹನು ಖಂಡಿತ ಬಹಳ ಕಠಿಣ ಶಿಕ್ಷೆ ನೀಡುವವನಾಗಿದ್ದಾನೆ.
3. ಶವವನ್ನು, ರಕ್ತವನ್ನು, ಹಂದಿಯ ಮಾಂಸವನ್ನು, ಅಲ್ಲಾಹನ ಹೊರತು ಇತರರ ಹೆಸರಲ್ಲಿ ಬಲಿ ನೀಡಲಾಗಿರುವ ಪ್ರಾಣಿಯನ್ನು, ಕೊರಳು ಹಿಸುಕಿ ಕೊಂದಿರುವುದನ್ನು, ಪೆಟ್ಟು ತಿಂದು ಸತ್ತಿರುವುದನ್ನು, ಎತ್ತರದಿಂದ ಬಿದ್ದು ಸತ್ತಿರುವುದನ್ನು, (ಕ್ರೂರ ಪ್ರಾಣಿಯು) ಕೊಂಬಿನಿಂದ ಸೀಳಿ ಕೊಂದಿರುವುದನ್ನು ನಿಮ್ಮ ಪಾಲಿಗೆ ನಿಷಿದ್ಧ ಗೊಳಿಸಲಾಗಿದೆ. ಹಾಗೆಯೇ, ಕ್ರೂರ ಪ್ರಾಣಿಯು ತಿಂದು ಬಿಟ್ಟಿರುವುದು (ನಿಮಗೆ ನಿಷಿದ್ಧವಾಗಿದೆ) – ನೀವು ಜೀವಂತ ಪಡೆದು ದಿಬ್ಹ್ ಮಾಡಿದ್ದರ ಹೊರತು. (ಮಿಥ್ಯ ದೇವರ) ಗುಡಿಗಳಲ್ಲಿ ಬಲಿ ನೀಡಲಾದ ಪ್ರಾಣಿಗಳನ್ನು ಮತ್ತು ಬಾಣಗಳ ಮೂಲಕ ಅದೃಷ್ಟ ನಿರ್ಧರಿಸುವುದನ್ನು ನಿಮ್ಮ ಪಾಲಿಗೆ ನಿಷಿದ್ಧಗೊಳಿಸಲಾಗಿದೆ. ಇವೆಲ್ಲಾ ಪಾಪ ಕೃತ್ಯಗಳಾಗಿವೆ. ಧಿಕ್ಕಾರಿಗಳು ಇಂದು ನಿಮ್ಮ ಧರ್ಮದ ಕುರಿತಂತೆ ನಿರಾಶರಾಗಿದ್ದಾರೆ. ನೀವಿನ್ನು ಅವರಿಗೆ ಅಂಜಬೇಡಿ. ನನಗೆ ಮಾತ್ರ ಅಂಜಿರಿ. ಇಂದು ನಾನು ನಿಮಗಾಗಿ ನಿಮ್ಮ ಧರ್ಮವನ್ನು ಪೂರ್ಣಗೊಳಿಸಿದ್ದೇನೆ ಮತ್ತು ನಿಮ್ಮ ಪಾಲಿಗೆ ನನ್ನ ಕೊಡುಗೆಯನ್ನು ಪೂರ್ತಿಗೊಳಿಸಿದ್ದೇನೆ. ಹಾಗೆಯೇ ನಿಮಗಾಗಿ ನಾನು, ಇಸ್ಲಾಮ್ ಧರ್ಮವನ್ನು ಮೆಚ್ಚಿದ್ದೇನೆ. ಯಾರಾದರೂ ಹಸಿವಿನಿಂದ ನರಳುತ್ತಿದ್ದು, ಪಾಪ ಕೃತ್ಯವೆಸಗುವ ಇರಾದೆ ಇಲ್ಲದವನಾಗಿದ್ದರೆ, (ಅಂಥವನಿಂದ ನಿಯಮದ ಉಲ್ಲಂಘನೆ ನಡೆದರೂ) ಅಲ್ಲಾಹನು ಖಂಡಿತ ಕ್ಷಮಾಶೀಲನೂ, ಕರುಣಾಮಯಿಯೂ ಆಗಿದ್ದಾನೆ.
4. (ದೂತರೇ,) ಅವರು ನಿಮ್ಮೊಡನೆ, ತಮ್ಮ ಪಾಲಿಗೆ ಯಾವುದನ್ನು ಸಮ್ಮತಗೊಳಿಸಲಾಗಿದೆ ಎಂದು ಪ್ರಶ್ನಿಸುತ್ತಾರೆ. ಹೇಳಿರಿ; ಶುದ್ಧ ವಸ್ತುಗಳನ್ನೆಲ್ಲಾ ನಿಮ್ಮ ಪಾಲಿಗೆ ಸಮ್ಮತಗೊಳಿಸಲಾಗಿದೆ. ಅಲ್ಲಾಹನು ನಿಮಗೆ ನೀಡಿದ ಜ್ಞಾನದ ಪ್ರಕಾರ, ನೀವು ಬೇಟೆಯಾಡುವುದಕ್ಕೆಂದು ಪಳಗಿಸಿದ ಪ್ರಾಣಿಗಳು, ನಿಮಗಾಗಿ ಹಿಡಿದಿಟ್ಟ ಪ್ರಾಣಿಗಳನ್ನು ಅಲ್ಲಾಹನ ಹೆಸರನ್ನುಚ್ಚರಿಸಿ (ದಿಬ್ಹ್ ಮಾಡಿ) ತಿನ್ನಿರಿ. ಸದಾ ಅಲ್ಲಾಹನಿಗೆ ಅಂಜಿರಿ. ಖಂಡಿತವಾಗಿಯೂ ಅಲ್ಲಾಹನು ಕ್ಷಿಪ್ರವಾಗಿ ವಿಚಾರಣೆ ನಡೆಸುವವನಾಗಿದ್ದಾನೆ.
5. ಇಂದು ನಿಮ್ಮ ಪಾಲಿಗೆ ಎಲ್ಲ ಶುದ್ಧ ವಸ್ತುಗಳನ್ನು ಸಮ್ಮತಗೊಳಿಸಲಾಗಿದೆ. ಇನ್ನು, ಗ್ರಂಥದವರ ಆಹಾರವು ನಿಮ್ಮ ಪಾಲಿಗೆ ಸಮ್ಮತವಾಗಿದೆ ಮತ್ತು ನಿಮ್ಮ ಆಹಾರವು ಅವರ ಪಾಲಿಗೆ ಸಮ್ಮತವಾಗಿದೆ. ಹಾಗೆಯೇ, ವಿಶ್ವಾಸಿಗಳಲ್ಲಿನ ಸುಶೀಲ ಸ್ತ್ರೀಯರು ಮತ್ತು ನಿಮಗಿಂತ ಮುಂಚೆ ಧರ್ಮಗ್ರಂಥ ನೀಡಲಾಗಿದ್ದವರಲ್ಲಿನ ಸುಶೀಲ ಸ್ತ್ರೀಯರು ನಿಮ್ಮ ಪಾಲಿಗೆ ಸಮ್ಮತರಾಗಿದ್ದಾರೆ – ನೀವು ಅವರಿಗೆ ಅವರ ಶುಲ್ಕ (ವಿವಾಹಧನ)ವನ್ನು ಪಾವತಿಸಿದ ಬಳಿಕ. ನೀವು (ಅವರ ಜೊತೆ, ವಿವಾಹದ) ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವವರಾಗಿರಬೇಕು, ಅನೈತಿಕ ವ್ಯವಹಾರಗಳಲ್ಲಿ ತೊಡಗಿರಬಾರದು ಮತ್ತು ನೀವು ಗುಪ್ತ ನಂಟುಗಳನ್ನು ಪೋಷಿಸಬಾರದು. ವಿಶ್ವಾಸವನ್ನು ಧಿಕ್ಕರಿಸಿದವನ ಕರ್ಮಗಳೆಲ್ಲಾ ವ್ಯರ್ಥವಾದವು. ಪರಲೋಕದಲ್ಲಿ ಅವನು, ಎಲ್ಲವನ್ನೂ ಕಳೆದುಕೊಂಡವರ ಸಾಲಲ್ಲಿರುವನು.
6. ವಿಶ್ವಾಸಿಗಳೇ, ನೀವು ನಮಾಝ್‌ಗಾಗಿ ಹೊರಟಾಗ ನಿಮ್ಮ ಮುಖಗಳನ್ನು ಮತ್ತು ಮೊಣಗಂಟುಗಳ ತನಕ ನಿಮ್ಮ ಕೈಗಳನ್ನು ತೊಳೆದುಕೊಳ್ಳಿರಿ. ನಿಮ್ಮ ತಲೆಗಳನ್ನು ಸವರಿಕೊಳ್ಳಿರಿ ಮತ್ತು ನಿಮ್ಮ ಕಾಲುಗಳನ್ನು ಕೆಳಗಂಟುಗಳ ತನಕ ತೊಳೆದುಕೊಳ್ಳಿರಿ. ಇನ್ನು ನೀವು ‘ಜನಾಬತ್’ (ಸ್ನಾನ ಕಡ್ಡಾಯವಿರುವ) ಸ್ಥಿತಿಯಲ್ಲಿದ್ದರೆ, ಚೆನ್ನಾಗಿ ಶುದ್ಧೀಕರಿಸಿಕೊಳ್ಳಿರಿ. ಇನ್ನು ನೀವು ಅನಾರೋಗ್ಯ ಪೀಡಿತರಾಗಿದ್ದರೆ ಅಥವಾ ಪ್ರಯಾಣದಲ್ಲಿದ್ದರೆ ಅಥವಾ ನಿಮ್ಮಲ್ಲೊಬ್ಬರು ಶೌಚಾಲಯದಿಂದ ಬಂದಿದ್ದರೆ ಅಥವಾ ಸ್ತ್ರೀ ಸಂಗ ಮಾಡಿದ್ದರೆ ಮತ್ತು ಆ ವೇಳೆ ನಿಮಗೆ ನೀರು ಸಿಗದಿದ್ದರೆ, ಶುದ್ಧ ಮಣ್ಣಿನಿಂದ ‘ತಯಮ್ಮಮ್’ ಮಾಡಿರಿ (ಅಂದರೆ ಮಣ್ಣನ್ನು ಮುಟ್ಟಿ) ನಿಮ್ಮ ಮುಖಗಳನ್ನು ಮತ್ತು ಕೈಗಳನ್ನು ಸವರಿಕೊಳ್ಳಿರಿ. ಅಲ್ಲಾಹನು ನಿಮ್ಮನ್ನು ಯಾವುದೇ ಇಕ್ಕಟ್ಟಿಗೆ ಒಳಪಡಿಸಬಯಸುವುದಿಲ್ಲ. ಅವನಂತು, ನಿಮ್ಮನ್ನು ಶುದ್ಧಗೊಳಿಸಬಯಸುತ್ತಾನೆ ಮತ್ತು ನಿಮಗೆ ತನ್ನ ಕೊಡುಗೆಗಳನ್ನು ಪೂರ್ತಿಯಾಗಿ ನೀಡಬಯಸುತ್ತಾನೆ – ನೀವು ಕೃತಜ್ಞರಾಗಬೇಕೆಂದು.
7. ಅಲ್ಲಾಹನು ನಿಮಗೆ ನೀಡಿರುವ ಕೊಡುಗೆಯನ್ನು ಮತ್ತು ಅವನ ಜೊತೆ ನೀವು ಮಾಡಿರುವ ಕರಾರನ್ನು ನೆನಪಿಸಿಕೊಳ್ಳಿರಿ. ಆಗ ನೀವು, ‘‘ನಾವು ಕೇಳಿದೆವು ಮತ್ತು ಅನುಸರಿಸಿದೆವು’’ ಎಂದು ಹೇಳಿದ್ದಿರಿ. ಸದಾ ಅಲ್ಲಾಹನಿಗೆ ಅಂಜಿರಿ. ಅಲ್ಲಾಹನಂತು ಮನಸ್ಸಿನ ವಿಚಾರಗಳನ್ನು ಬಲ್ಲವನಾಗಿದ್ದಾನೆ.
8. ವಿಶ್ವಾಸಿಗಳೇ, ನೀವು ಸದಾ ಅಲ್ಲಾಹನಿಗಾಗಿ ನ್ಯಾಯದ ಪರ ಸಾಕ್ಷಿ ನಿಲ್ಲುವವರಾಗಿರಿ. ಒಂದು ಜನಾಂಗದ ಮೇಲಿನ ಹಗೆತನ ಕೂಡಾ, ನ್ಯಾಯ ಪಾಲಿಸದೆ ಇರಲು ನಿಮ್ಮನ್ನು ಪ್ರಚೋದಿಸ ಬಾರದು. ನೀವು ಸದಾ ನ್ಯಾಯವನ್ನೇ ಪಾಲಿಸಿರಿ. ಅದುವೇ ಧರ್ಮನಿಷ್ಠೆಗೆ ಹೆಚ್ಚು ನಿಕಟ ಧೋರಣೆಯಾಗಿದೆ. ಸದಾ ಅಲ್ಲಾಹನಿಗೆ ಅಂಜಿರಿ. ಅಲ್ಲಾಹನಂತು, ನೀವು ಮಾಡುತ್ತಿರುವ ಎಲ್ಲವನ್ನೂ ಚೆನ್ನಾಗಿ ಅರಿತಿರುತ್ತಾನೆ.
9. ವಿಶ್ವಾಸಿಗಳಾಗಿದ್ದು, ಸತ್ಕರ್ಮಗಳನ್ನು ಮಾಡುತ್ತಿರುವವರಿಗೆ ಕ್ಷಮೆ ಮತ್ತು ಭಾರೀ ಪ್ರತಿಫಲ ಇದೆ ಎಂದು ಅಲ್ಲಾಹನು ವಾಗ್ದಾನ ಮಾಡಿದ್ದಾನೆ.
10. ಇನ್ನು ಧಿಕ್ಕಾರಿಗಳು ಮತ್ತು ನಮ್ಮ ವಚನಗಳನ್ನು ಸುಳ್ಳೆಂದು ತಿರಸ್ಕರಿಸಿದವರು – ಅವರೇ ನರಕದವರಾಗಿದ್ದಾರೆ.
11. ವಿಶ್ವಾಸಿಗಳೇ, ಅಲ್ಲಾಹನು ನಿಮಗೆ ದಯಪಾಲಿಸಿರುವ ಅನುಗ್ರಹಗಳನ್ನು ನೆನಪಿಸಿ ಕೊಳ್ಳಿರಿ – ಒಂದು ಜನಾಂಗವು ನಿಮ್ಮ ಮೇಲೆ ಆಕ್ರಮಣ ಮಾಡಲಿದ್ದಾಗ ಅವನು ಅವರ ಕೈಗಳನ್ನು ನಿಮ್ಮಿಂದ ತಡೆದಿಟ್ಟನು. ಸದಾ ಅಲ್ಲಾಹನಿಗೆ ಅಂಜಿರಿ. ವಿಶ್ವಾಸಿಗಳಂತು ಅಲ್ಲಾಹನಲ್ಲೇ ಸಂಪೂರ್ಣ ಭರವಸೆ ಇಟ್ಟಿರುತ್ತಾರೆ.
12. ಅಲ್ಲಾಹನು ಇಸ್ರಾಈಲರ ಸಂತತಿಗಳಿಂದ ಕರಾರನ್ನು ಪಡೆದಿದ್ದನು. ನಾವು (ಅಲ್ಲಾಹ್) ಅವರ ಪೈಕಿ 12 ಮಂದಿಯನ್ನು ನೇತಾರರಾಗಿ ನೇಮಿಸಿದ್ದೆವು. ಅವರೊಡನೆ ಅಲ್ಲಾಹನು ಹೇಳಿದನು: ನಾನು ನಿಮ್ಮ ಜೊತೆಗಿದ್ದೇನೆ. ನೀವು ನಮಾಝ್‌ನ ಪಾಲನೆ ಮಾಡುತ್ತಲಿದ್ದರೆ, ಝಕಾತ್ ಅನ್ನು ಪಾವತಿಸುತ್ತಲಿದ್ದರೆ, ನನ್ನ ದೂತರಲ್ಲಿ ನಂಬಿಕೆ ಇರಿಸಿ, ಅವರಿಗೆ ನೆರವಾಗುತ್ತಲಿದ್ದರೆ ಮತ್ತು ನೀವು ಅಲ್ಲಾಹನಿಗೆ ಒಳಿತಿನ ಸಾಲವನ್ನು ನೀಡುತ್ತಲಿದ್ದರೆ ನಾನು ಖಂಡಿತ ನಿಮ್ಮಿಂದ ನಿಮ್ಮ ಪಾಪಗಳನ್ನು ನಿವಾರಿಸುವೆನು ಮತ್ತು ನಿಮ್ಮನ್ನು, ತಳದಲ್ಲಿ ನದಿಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳೊಳಗೆ ಸೇರಿಸುವೆನು. ಇನ್ನು ಇದಾದ ಬಳಿಕ ನಿಮ್ಮ ಪೈಕಿ ಧಿಕ್ಕಾರಿಯಾದವನು ಖಂಡಿತವಾಗಿಯೂ ಸನ್ಮಾರ್ಗವನ್ನು ಕಳೆದುಕೊಂಡನು – (ಎಂದು ಅವರಿಗೆ ತಿಳಿಸಲಾಗಿತ್ತು.)
13. ಕೊನೆಗೆ, ಅವರು ತಮ್ಮ ಕರಾರನ್ನು ಮುರಿದುದರಿಂದ ನಾವು ಅವರನ್ನು ಶಪಿಸಿದೆವು ಮತ್ತು ಅವರ ಮನಸ್ಸುಗಳನ್ನು ಕಠೋರಗೊಳಿಸಿದೆವು. ಅವರೀಗ ಮಾತನ್ನು ಅದರ ಹಿನ್ನೆಲೆಯಿಂದ ಸರಿಸಿ ತಿರುಚಿ ಬಿಡುತ್ತಿದ್ದಾರೆ ಮತ್ತು ಅವರಿಗೆ ನೀಡಲಾಗಿದ್ದ ಬೋಧನೆಗಳ ದೊಡ್ಡ ಭಾಗವನ್ನು ಅವರು ಮರೆತು ಬಿಟ್ಟಿದ್ದಾರೆ. ಅವರಲ್ಲಿನ ಕೆಲವರ ಹೊರತು ಉಳಿದವರ ವಂಚನೆಯ ಸುದ್ದಿಗಳು ನಿಮಗೆ ಸದಾ ತಲುಪುತ್ತಲೇ ಇರುತ್ತವೆ. ಏನಿದ್ದರೂ ನೀವು ಅವರನ್ನು ಕ್ಷಮಿಸಿರಿ ಮತ್ತು (ಅವರ ತಪ್ಪುಗಳನ್ನು) ಕಡೆಗಣಿಸಿರಿ. ಖಂಡಿತವಾಗಿಯೂ ಅಲ್ಲಾಹನು ಉದಾರಿಗಳನ್ನು ಪ್ರೀತಿಸುತ್ತಾನೆ.
14. ‘ನಾವು ನಸಾರಾಗಳು’ (ಕ್ರೈಸ್ತರು) ಎಂದು ಹೇಳಿಕೊಳ್ಳುವವರಲ್ಲಿ ಹಲವರಿದ್ದಾರೆ – ನಾವು ಅವರಿಂದ ಕರಾರನ್ನು ಪಡೆದುಕೊಂಡೆವು. ಆದರೆ ಅವರು ತಮಗೆ ನೀಡಲಾದ ಉಪದೇಶದ ಹೆಚ್ಚಿನ ಭಾಗವನ್ನು ಮರೆತು ಬಿಟ್ಟರು. ಕೊನೆಗೆ ನಾವು ಪುನರುತ್ಥಾನ ದಿನದ ತನಕ ಅವರ ನಡುವೆ ದ್ವೇಷ ಮತ್ತು ಹಗೆತನವನ್ನು ಬೆಳೆಸಿ ಬಿಟ್ಟೆವು. ಅವರು ರಚಿಸುತ್ತಿದ್ದುದು ಏನನ್ನು ಎಂಬುದನ್ನು ಅಲ್ಲಾಹನು ಶೀಘ್ರವೇ ಅವರಿಗೆ ತಿಳಿಸಲಿದ್ದಾನೆ.
15. ಗ್ರಂಥದವರೇ, (ಇದೀಗ) ನಿಮ್ಮ ಬಳಿಗೆ ನಮ್ಮ ದೂತರು ಬಂದಿದ್ದಾರೆ. ಗ್ರಂಥದಲ್ಲಿನ, ನೀವು ಅಡಗಿಸಿಟ್ಟಿದ್ದ ಹಲವು ವಿಷಯಗಳನ್ನು ಅವರು ನಿಮಗೆ ಸ್ಪಷ್ಟ ಪಡಿಸುತ್ತಿದ್ದಾರೆ ಮತ್ತು (ನಿಮ್ಮ ತಪ್ಪುಗಳಲ್ಲಿ) ಹೆಚ್ಚಿನವುಗಳನ್ನು ಅವರು ಕ್ಷಮಿಸುತ್ತಿದ್ದಾರೆ. ನಿಜಕ್ಕೂ ನಿಮ್ಮ ಬಳಿಗೆ ಅಲ್ಲಾಹನ ವತಿಯಿಂದ ಒಂದು ಪ್ರಕಾಶ ಮತ್ತು ಬಹಳ ಸ್ಪಷ್ಟವಾದ ಒಂದು ಗ್ರಂಥವು ಬಂದಿದೆ.
16. ಈ ಮೂಲಕ ಅಲ್ಲಾಹನು, ಅವನ ಮೆಚ್ಚುಗೆಯನ್ನು ಬಯಸುವವರಿಗೆ ಶಾಂತಿಯ ಮಾರ್ಗಗಳನ್ನು ತೋರಿಸುತ್ತಾನೆ ಮತ್ತು ತನ್ನ ಆದೇಶದ ಮೂಲಕ ಅವರನ್ನು ಕತ್ತಲಿಂದ ಹೊರತೆಗೆದು ಬೆಳಕಿನೆಡೆಗೆ ನಡೆಸುತ್ತಾನೆ ಮತ್ತು ಅವರಿಗೆ ನೇರ ಮಾರ್ಗವನ್ನು ತೋರಿಸಿಕೊಡುತ್ತಾನೆ.
17. ಖಂಡಿತವಾಗಿಯೂ ಮರ್ಯಮರ ಪುತ್ರ ಮಸೀಹರೇ ಅಲ್ಲಾಹನೆಂದು ವಾದಿಸಿದವರು ಧಿಕ್ಕಾರಿಗಳಾಗಿ ಬಿಟ್ಟರು. ಹೇಳಿರಿ; ಒಂದು ವೇಳೆ ಅಲ್ಲಾಹನು ಮರ್ಯಮರ ಪುತ್ರ ಈಸಾರನ್ನೂ, ಅವರ ತಾಯಿಯನ್ನೂ, ಭೂಮಿಯಲ್ಲಿರುವ ಎಲ್ಲರನ್ನೂ ನಾಶ ಮಾಡ ಬಯಸಿದರೆ, ಅವನನ್ನು ಯಾರು ತಾನೇ ತಡೆಯಬಲ್ಲರು? ಆಕಾಶಗಳ, ಭೂಮಿಯ ಮತ್ತು ಅವುಗಳ ನಡುವೆ ಇರುವ ಎಲ್ಲವುಗಳ ಅಧಿಕಾರವು ಅಲ್ಲಾಹನಿಗೇ ಸೇರಿದೆ. ಅವನು ತಾನಿಚ್ಛಿಸಿದ್ದನ್ನು ಸೃಷ್ಟಿಸುತ್ತಾನೆ. ಅಲ್ಲಾಹನು ಎಲ್ಲವನ್ನೂ ಮಾಡಲು ಶಕ್ತನಾಗಿದ್ದಾನೆ.
18. ಯಹೂದಿಗಳು ಮತ್ತು ಕ್ರೈಸ್ತರು – ನಾವು ಅಲ್ಲಾಹನ ಪುತ್ರರು ಮತ್ತು ಅವನ ಪ್ರೀತಿ ಪಾತ್ರರು – ಎನ್ನುತ್ತಾರೆ. ಹೇಳಿರಿ; ಹಾಗಾದರೆ ನಿಮ್ಮ ಪಾಪಗಳಿಗಾಗಿ ಅವನು ನಿಮ್ಮನ್ನು ಶಿಕ್ಷಿಸುವುದೇಕೆ? ನಿಜವಾಗಿ ನೀವು, ಅವನು (ಅಲ್ಲಾಹನು) ಸೃಷ್ಟಿಸಿರುವ ಮಾನವರಾಗಿರುವಿರಿ. ಅವನಂತು ತಾನಿಚ್ಛಿಸಿದವರನ್ನು ಕ್ಷಮಿಸುತ್ತಾನೆ ಮತ್ತು ತಾನಿಚ್ಛಿಸಿದವರನ್ನು ಶಿಕ್ಷಿಸುತ್ತಾನೆ. ಆಕಾಶಗಳ, ಭೂಮಿಯ ಮತ್ತು ಅವುಗಳ ನಡುವಿನ ಎಲ್ಲವುಗಳ ಆಧಿಪತ್ಯವು ಅಲ್ಲಾಹನಿಗೇ ಸೇರಿವೆ. ಅಂತಿಮ ಮರಳಿಕೆ ಕೂಡಾ ಅವನ ಕಡೆಗೇ ಇವೆ.
19. ಗ್ರಂಥದವರೇ, ಇದೋ ನಿಮ್ಮ ಬಳಿಗೆ ನಮ್ಮ ದೂತರು ಬಂದು ಬಿಟ್ಟಿದ್ದಾರೆ ಮತ್ತು ನಿಮಗೆ ಸ್ಪಷ್ಟ ಬೋಧನೆ ನೀಡುತ್ತಿದ್ದಾರೆ. ದೇವದೂತರ ಆಗಮನ ಸರಣಿಯು (ಬಹುಕಾಲ) ಸ್ಥಗಿತಗೊಂಡ ಕಾರಣ ನೀವು, ಸುವಾರ್ತೆ ನೀಡುವ ಅಥವಾ ಎಚ್ಚರಿಕೆ ನೀಡುವ ಯಾರೂ ನಮ್ಮ ಬಳಿಗೆ ಬರಲಿಲ್ಲವೆಂದು ಹೇಳಬಾರದೆಂದು, ಇದೋ ನಿಮ್ಮ ಬಳಿಗೆ ಬಂದು ಬಿಟ್ಟಿದ್ದಾರೆ – ಸುವಾರ್ತೆ ನೀಡುವವರು ಮತ್ತು ಎಚ್ಚರಿಕೆ ನೀಡುವವರು. ಅಲ್ಲಾಹನಂತು ಎಲ್ಲವನ್ನೂ ಮಾಡಲು ಶಕ್ತನಾಗಿದ್ದಾನೆ.
20. (ನೆನಪಿಸಿಕೊಳ್ಳಿರಿ) ಮೂಸಾ, ತಮ್ಮ ಜನಾಂಗದವರಿಗೆ ಹೇಳಿದ್ದರು; ನನ್ನ ಜನಾಂಗದವರೇ, ನಿಮ್ಮ ಮೇಲಿರುವ ಅಲ್ಲಾಹನ ಅನುಗ್ರಹಗಳನ್ನು ನೆನಪಿಸಿಕೊಳ್ಳಿರಿ. ಅವನು ನಿಮ್ಮ ನಡುವೆ ದೂತರುಗಳನ್ನು ನೇಮಿಸಿದನು, ನಿಮ್ಮನ್ನು ಅವನು ದೊರೆಗಳಾಗಿ ಮಾಡಿದನು ಮತ್ತು ಸರ್ವ ಲೋಕಗಳಲ್ಲಿ ಬೇರೆ ಯಾರಿಗೂ ನೀಡಿಲ್ಲದ್ದನ್ನು ನಿಮಗೆ ನೀಡಿದನು.
21. ನನ್ನ ಜನಾಂಗದವರೇ, ಅಲ್ಲಾಹನು ನಿಮಗೆಂದೇ ಬರೆದಿಟ್ಟಿರುವ ಪಾವನ ನೆಲವನ್ನು ಪ್ರವೇಶಿಸಿರಿ, ಬೆನ್ನು ತಿರುಗಿಸಿ ಹಿಂದಿರುಗಬೇಡಿ – ಅನ್ಯಥಾ ನೀವು ಸೋತವರಾಗಿ ಮರಳುವಿರಿ.
22. ಅವರು ಹೇಳಿದರು; ಓ ಮೂಸಾ, ಅಲ್ಲಿ ತುಂಬಾ ಬಲಿಷ್ಠರ ಒಂದು ಜನಾಂಗವಿದೆ. ಅವರು ಅಲ್ಲಿಂದ ಹೊರಟು ಹೋಗುವ ತನಕ ನಾವು ಆ ನಾಡನ್ನು ಪ್ರವೇಶಿಸಲಾರೆವು. ಅವರು ಅಲ್ಲಿಂದ ಹೊರಟು ಹೋದರೆ ಮಾತ್ರ, ನಾವು ಖಂಡಿತ ಅಲ್ಲಿಗೆ ಪ್ರವೇಶಿಸುವೆವು.
23. ಹೀಗೆ ಭೀತರಾಗಿದ್ದ ಆ ಜನರ ನಡುವೆ, ಅಲ್ಲಾಹನ ಅನುಗ್ರಹಗಳಿಗೆ ಪಾತ್ರರಾಗಿದ್ದ ಇಬ್ಬರು ಹೇಳಿದರು; ನೀವು ಅವರ ಮೇಲೆ, ಬಾಗಿಲಿಂದಲೇ ದಾಳಿ ಮಾಡಿರಿ. ನೀವು ಅದರೊಳಗೆ ಹೊಕ್ಕಾಗ ವಿಜಯಿಗಳಾಗುವಿರಿ. ನೀವು ವಿಶ್ವಾಸಿಗಳಾಗಿದ್ದರೆ ಅಲ್ಲಾಹನಲ್ಲಿ ಸಂಪೂರ್ಣ ಭರವಸೆ ಇಡಿರಿ.
24. ಅವರು ಹೇಳಿದರು; ಓ ಮೂಸಾ, ಅವರು (ಶತ್ರುಗಳು) ಅಲ್ಲಿರುವ ತನಕ ನಾವಂತೂ ಆ ಸ್ಥಳವನ್ನು ಪ್ರವೇಶಿಸಲಾರೆವು. ನೀವು ಮತ್ತು ನಿಮ್ಮ ದೇವರು ಹೋಗಿರಿ ಮತ್ತು ನೀವಿಬ್ಬರು ಹೋರಾಡಿರಿ. ನಾವು ಇಲ್ಲೇ ಕುಳಿತಿರುತ್ತೇವೆ.
25. ಅವರು (ಮೂಸಾ) ಹೇಳಿದರು ; ನನ್ನೊಡೆಯಾ, ನನಗಂತೂ ನನ್ನ ಹಾಗೂ ನನ್ನ ಸಹೋದರನ ಹೊರತು ಬೇರೆ ಯಾರ ಮೇಲೂ ನಿಯಂತ್ರಣವಿಲ್ಲ. ನೀನು ನಮ್ಮನ್ನು ಹಾಗೂ ಈ ಅವಿಧೇಯ ಜನಾಂಗವನ್ನು ಪ್ರತ್ಯೇಕಿಸಿಬಿಡು.
26. ಅವನು (ಅಲ್ಲಾಹನು) ಹೇಳಿದನು; ಈ ಭೂಭಾಗವು ನಲ್ವತ್ತು ವರ್ಷಗಳ ತನಕ ಇವರ ಪಾಲಿಗೆ ನಿಷಿದ್ಧವಾಗಿದೆ. ಆ ತನಕ ಅವರು ಭೂಮಿಯಲ್ಲಿ ಅಲೆಯುತ್ತಲೇ ಇರುವರು. ಅವಿಧೇಯ ಜನಾಂಗದ ಕುರಿತು ನೀವು ವಿಷಾದಿಸಬೇಡಿ.
27. ನೀವು ಅವರಿಗೆ ಆದಮರ ಇಬ್ಬರು ಪುತ್ರರ ನೈಜ ಘಟನೆಯನ್ನು ತಿಳಿಸಿರಿ. ಅವರಿಬ್ಬರೂ ಬಲಿದಾನ ನೀಡಿದಾಗ, ಅವರ ಪೈಕಿ ಒಬ್ಬನ ಬಲಿದಾನವು ಸ್ವೀಕೃತವಾಯಿತು ಮತ್ತು ಇನ್ನೊಬ್ಬನದು ಸ್ವೀಕೃತವಾಗಲಿಲ್ಲ. ಅವನು – ‘‘ನಾನು ಖಂಡಿತ ನಿನ್ನನ್ನು ವಧಿಸುತ್ತೇನೆ’’ ಎಂದನು. ಅವನು (ಮೊದಲನೆಯವನು) ಉತ್ತರಿಸಿದನು; ‘‘ಅಲ್ಲಾಹನಂತು, (ಯಾವುದನ್ನೂ) ಧರ್ಮನಿಷ್ಠರಿಂದ ಮಾತ್ರ ಸ್ವೀಕರಿಸುತ್ತಾನೆ‘‘.
28. ‘‘ನೀನೀಗ ನನ್ನನ್ನು ಕೊಲ್ಲಲಿಕ್ಕೆಂದು ನನ್ನ ಮೇಲೆ ಕೈ ಎತ್ತಿದರೂ, ನಾನಂತೂ ನಿನ್ನನ್ನು ಕೊಲ್ಲಲು ನಿನ್ನ ಮೇಲೆ ಕೈ ಎತ್ತುವವನಲ್ಲ. ಖಂಡಿತವಾಗಿಯೂ ನನಗೆ ಸರ್ವಲೋಕಗಳ ಪಾಲಕನಾದ ಅಲ್ಲಾಹನ ಭಯವಿದೆ’’
29. ‘‘ಖಂಡಿತವಾಗಿಯೂ ನೀನೀಗ ನನ್ನ ಪಾಪಗಳನ್ನೂ ನಿನ್ನ ಪಾಪಗಳನ್ನೂ ಹೊತ್ತು ನರಕವಾಸಿಗಳ ಸಾಲಿಗೆ ಸೇರಬೇಕೆಂದು ನಾನು ಬಯಸುತ್ತೇನೆ. ಅಕ್ರಮಿಗಳಿಗೆ ಇರುವುದು ಅದೇ ಪ್ರತಿಫಲ.’’
30. ಕೊನೆಗೆ ಅವನ ಚಿತ್ತವು ತನ್ನ ಸಹೋದರನ ಹತ್ಯೆಗೆ ಅವನನ್ನು ಸಿದ್ಧಗೊಳಿಸಿತು. ಅವನು ತನ್ನ ಸಹೋದರನನ್ನು ಕೊಂದು ಬಿಟ್ಟನು ಮತ್ತು ಎಲ್ಲವನ್ನೂ ಕಳೆದುಕೊಂಡವರ ಸಾಲಿಗೆ ಸೇರಿದನು.
31. ಆ ಬಳಿಕ ಅಲ್ಲಾಹನು (ಅವನೆಡೆಗೆ) ಒಂದು ಕಾಗೆಯನ್ನು ಕಳುಹಿಸಿದನು. ತನ್ನ ಸಹೋದರನ ಶವವನ್ನು ಹೇಗೆ ಅಡಗಿಸಬೇಕೆಂದು ಆತನಿಗೆ ತೋರಿಸಲು ಅದು ನೆಲವನ್ನು ಕೊರೆಯುತ್ತಿತ್ತು . ಆಗ ಅವನು ಹೇಳಿದನು; ’’ಅಯ್ಯೋ ನನ್ನ ಅವಸ್ಥೆ! ನನ್ನ ಸಹೋದರನ ಶವವನ್ನು ಅಡಗಿಸುವ ವಿಷಯದಲ್ಲಿ ಈ ಕಾಗೆಯಂತಾಗಲಿಕ್ಕೂ ನನ್ನಿಂದಾಗಲಿಲ್ಲ’’. ಹೀಗೆ ಅವನು, ಪಶ್ಚಾತ್ತಾಪ ಪಡುವವರ ಸಾಲಿಗೆ ಸೇರಿದನು.
32. ಇದೇ ಕಾರಣದಿಂದ ನಾವು ಇಸ್ರಾಈಲ್ ಸಂತತಿಗಳಿಗೆ ಈ ರೀತಿ ವಿಧಿಸಿದೆವು; ಒಂದು ಮಾನವ ಜೀವಕ್ಕೆ ಪ್ರತಿಯಾಗಿ (ಒಂದು ಕೊಲೆಗೆ ಶಿಕ್ಷೆಯಾಗಿ) ಅಥವಾ ಭೂಮಿಯಲ್ಲಿ ಅಶಾಂತಿ ಹರಡಿದ್ದಕ್ಕೆ (ಶಿಕ್ಷೆಯಾಗಿ) ಹೊರತು – ಒಂದು ಮಾನವ ಜೀವವನ್ನು ಕೊಂದವನು ಎಲ್ಲ ಮಾನವರನ್ನು ಕೊಂದಂತೆ. ಹಾಗೆಯೇ ಅದನ್ನು (ಒಂದು ಮಾನವ ಜೀವವನ್ನು) ರಕ್ಷಿಸಿದವನು ಎಲ್ಲ ಮಾನವರನ್ನು ರಕ್ಷಿಸಿದಂತೆ. ಮುಂದೆ ಅವರ ಬಳಿಗೆ ಸ್ಪಷ್ಟ ಪುರಾವೆಗಳೊಂದಿಗೆ ನಮ್ಮ ಅನೇಕ ದೂತರು ಬಂದರು. ಇಷ್ಟಾಗಿಯೂ ಅವರಲ್ಲಿ ಹೆಚ್ಚಿನವರು ಭೂಮಿಯಲ್ಲಿ ಅತಿರೇಕ ಎಸಗುವವರಾಗಿದ್ದಾರೆ.
33. ಅಲ್ಲಾಹ್ ಮತ್ತು ಅವನ ದೂತರ ವಿರುದ್ಧ ಯುದ್ಧ ಸಾರಿದವರಿಗೆ ಮತ್ತು ಭೂಮಿಯಲ್ಲಿ ಅಶಾಂತಿಯನ್ನು ಹಬ್ಬಲು ಹೆಣಗಾಡುವವರಿಗೆ ಇರುವ ಪ್ರತಿಫಲವೇನೆಂದರೆ, ಅವರನ್ನು ಕೊಲ್ಲಬೇಕು ಅಥವಾ ಶಿಲುಬೆಗೇರಿಸಬೇಕು ಅಥವಾ ಅವರ ಕೈಗಳನ್ನು ಹಾಗೂ ಕಾಲುಗಳನ್ನು ವಿರುದ್ಧ ಕಡೆಗಳಲ್ಲಿ (ಉದಾ: ಬಲಗೈ ಮತ್ತು ಎಡಕಾಲು) ಕತ್ತರಿಸಬೇಕು ಅಥವಾ ಅವರನ್ನು ನಾಡಿನಿಂದ ಹೊರಗಟ್ಟಬೇಕು. ಇದು ಇಹಲೋಕದಲ್ಲಿ ಅವರಿಗಿರುವ ಅಪಮಾನ. ಇನ್ನು ಪರಲೋಕದಲ್ಲಂತೂ ಅವರಿಗಾಗಿ ಭಾರೀ ಹಿಂಸೆ ಕಾದಿದೆ.
34. ನಿಮ್ಮ ನಿಯಂತ್ರಣಕ್ಕೆ ಬರುವ ಮುನ್ನವೇ ಪಶ್ಚಾತ್ತಾಪ ಪಟ್ಟವರು ಇದಕ್ಕೆ ಹೊರತಾಗಿದ್ದಾರೆ. ನಿಮಗೆ ತಿಳಿದಿರಲಿ! ಅಲ್ಲಾಹನು ತುಂಬಾ ಕ್ಷಮಿಸುವವನು ಮತ್ತು ಕರುಣಾಮಯಿಯಾಗಿದ್ದಾನೆ.
35. ವಿಶ್ವಾಸಿಗಳೇ, ಸದಾ ಅಲ್ಲಾಹನ ಭಯ ಉಳ್ಳವರಾಗಿರಿ ಹಾಗೂ ಅವನಿಗೆ ಹತ್ತಿರವಾಗುವ ದಾರಿಯನ್ನು ಹುಡುಕುತ್ತಲಿರಿ ಮತ್ತು ಅವನ ಮಾರ್ಗದಲ್ಲಿ ಹೋರಾಡಿರಿ – ನೀವು ವಿಜಯಿಗಳಾಗಲು.
36. ಖಂಡಿತವಾಗಿಯೂ ಭೂಮಿಯಲ್ಲಿರುವ ಎಲ್ಲವೂ ಧಿಕ್ಕಾರಿಗಳ ಬಳಿ ಇದ್ದರೆ ಮಾತ್ರವಲ್ಲ, ಹೆಚ್ಚುವರಿಯಾಗಿ ಮತ್ತೆ ಅಷ್ಟೇ ಅವರ ಬಳಿ ಇದ್ದರೆ ಮತ್ತು ಅವರು ಅದೆಲ್ಲವನ್ನೂ ಪರಿಹಾರವಾಗಿ ಕೊಟ್ಟು ಪುನರುತ್ಥಾನ ದಿನದ ಶಿಕ್ಷೆಯಿಂದ ಪಾರಾಗಲು ಬಯಸಿದರೆ, ಅವರಿಂದ ಅದನ್ನು ಸ್ವೀಕರಿಸಲಾಗದು. ಅವರಿಗೆ ಯಾತನಾಮಯ ಶಿಕ್ಷೆ ಕಾದಿದೆ.
37. ಅವರು ನರಕಾಗ್ನಿಯಿಂದ ಹೊರ ಹೋಗಲು ಹಂಬಲಿಸುವರು. ಆದರೆ ಅದರಿಂದ ಹೊರ ಹೋಗಲು ಅವರಿಗೆಂದೂ ಸಾಧ್ಯವಾಗದು. ಅವರಿಗಿರುವುದು – ಶಾಶ್ವತವಾದ ಯಾತನೆ.
38. ಕಳವು ಮಾಡಿದ ಪುರುಷ ಮತ್ತು ಕಳವು ಮಾಡಿದ ಸ್ತ್ರೀ – ಅವರ ಕೈ ಕತ್ತರಿಸಿರಿ. ಇದು ಅವರದೇ ಗಳಿಕೆಯ ಪ್ರತಿಫಲ (ಮತ್ತು) ಅಲ್ಲಾಹನ ಕಡೆಯಿಂದ ಒಂದು ಪಾಠವಾಗಿದೆ. ಅಲ್ಲಾಹನಂತು ಪ್ರಬಲನೂ ಯುಕ್ತಿವಂತನೂ ಆಗಿದ್ದಾನೆ.
39. ಯಾರು ತಾನು ಅಕ್ರಮವೆಸಗಿದ ಬಳಿಕ (ತನ್ನನ್ನು) ತಿದ್ದಿಕೊಳ್ಳುವನೋ ಅವನ ಪಶ್ಚಾತ್ತಾಪವನ್ನು ಖಂಡಿತವಾಗಿಯೂ ಅಲ್ಲಾಹನು ಸ್ವೀಕರಿಸುವನು. ನಿಸ್ಸಂದೇಹವಾಗಿಯೂ ಅಲ್ಲಾಹನು ಕ್ಷಮಿಸುವವನು ಮತ್ತು ಕರುಣಾಮಯಿಯಾಗಿದ್ದಾನೆ.
40. ನಿಮಗೆ ತಿಳಿದಿಲ್ಲವೇ, ಆಕಾಶಗಳ ಮತ್ತು ಭೂಮಿಯ ಅಧಿಕಾರವೆಲ್ಲವೂ ಅಲ್ಲಾಹನಿಗೆ ಸೇರಿದೆ ಎಂದು? ಅವನು ತಾನಿಚ್ಛಿಸಿದವರನ್ನು ಶಿಕ್ಷಿಸುತ್ತಾನೆ ಮತ್ತು ತಾನಿಚ್ಛಿಸಿದವರನ್ನು ಕ್ಷಮಿಸುತ್ತಾನೆ. ಅಲ್ಲಾಹನಂತು ಎಲ್ಲವನ್ನೂ ಮಾಡಲು ಶಕ್ತನಾಗಿದ್ದಾನೆ.
41. ದೂತರೇ, ನಿಮ್ಮನ್ನು ದುಃಖಕ್ಕೀಡು ಮಾಡಬಾರದು – ‘ನಾವು ನಂಬಿದೆವು’ ಎಂದು ತಮ್ಮ ಬಾಯಿಯಿಂದ ಹೇಳುತ್ತಾ ತಮ್ಮ ಮನಸ್ಸಿನಿಂದ ನಂಬಿಕೆ ಇಟ್ಟಿಲ್ಲದ ಜನರ ಪೈಕಿ, ಧಿಕ್ಕಾರದಲ್ಲಿ ಹುರುಪು ತೋರುವವರು ಮತ್ತು ಯಹೂದಿಗಳ ಪೈಕಿ ಮಿಥ್ಯದ ಪರವಾಗಿ (ಗುಟ್ಟನ್ನು) ಆಲಿಸುವವರು – ಅವರು ನಿಮ್ಮ ಬಳಿಗೆ ಬಂದಿಲ್ಲದ ಇನ್ನೊಂದು ಪಂಗಡದ ಪರವಾಗಿ (ಗುಟ್ಟನ್ನು) ಆಲಿಸುತ್ತಿದ್ದಾರೆ (ಬೇಹುಗಾರಿಕೆ ನಡೆಸುತ್ತಿದ್ದಾರೆ). ಅವರು ಮಾತನ್ನು ಅದರ ಹಿನ್ನೆಲೆಯಿಂದ ಸರಿಸಿ ವಿಕೃತಗೊಳಿಸುತ್ತಾರೆ. ಅವರು (ಜನರೊಡನೆ) ನಿಮಗೆ ಇಂತಹದನ್ನು ನೀಡಲಾದರೆ ಸ್ವೀಕರಿಸಿರಿ ಮತ್ತು ಅದನ್ನು ನಿಮಗೆ ನೀಡದಿದ್ದರೆ ನೀವು ದೂರವಿರಿ ಎಂದು ಹೇಳುತ್ತಾರೆ. ನಿಜವಾಗಿ ಅಲ್ಲಾಹನು ಯಾರನ್ನು ಪರೀಕ್ಷಿಸಬಯಸುತ್ತಾನೋ ಅವರ ವಿಷಯದಲ್ಲಿ ಅಲ್ಲಾಹನಿಗೆದುರಾಗಿ ನಿಮಗೆ ಯಾವ ಅಧಿಕಾರವೂ ಇರುವುದಿಲ್ಲ. ಅವರು ಎಂಥವರೆಂದರೆ, ಅಲ್ಲಾಹನು ಅವರ ಮನಸ್ಸುಗಳನ್ನು ನಿರ್ಮಲ ಗೊಳಿಸಬಯಸುವುದಿಲ್ಲ. ಅವರಿಗೆ ಈ ಲೋಕದಲ್ಲೇ ಅಪಮಾನ ಕಾದಿದೆ ಮತ್ತು ಪರಲೋಕದಲ್ಲಂತೂ ಅವರಿಗೆ ಘೋರ ಯಾತನೆ ಇದೆ.
42. ಅವರು ಮಿಥ್ಯದ ಪರವಾಗಿ ಬೇಹುಗಾರಿಕೆ ನಡೆಸುವವರು ಮತ್ತು ಅಕ್ರಮ ಸಂಪಾದನೆಯನ್ನೇ ತಿನ್ನುವವರಾಗಿದ್ದಾರೆ. ಅವರು ನಿಮ್ಮ ಬಳಿಗೆ ಬಂದರೆ ನೀವು ಅವರ ನಡುವೆ ತೀರ್ಮಾನ ಮಾಡಿರಿ ಅಥವಾ ಅವರನ್ನು ಕಡೆಗಣಿಸಿ ಬಿಡಿರಿ. ನೀವು ಅವರನ್ನು ಕಡೆಗಣಿಸಿ ಬಿಟ್ಟರೂ ಅವರು ನಿಮಗೆ ಯಾವ ಹಾನಿಯನ್ನೂ ಮಾಡಲಾರರು. ಇನ್ನು ನೀವು ತೀರ್ಮಾನ ಮಾಡುವುದಾದಲ್ಲಿ ಅವರ ನಡುವೆ ನ್ಯಾಯೋಚಿತ ತೀರ್ಮಾನವನ್ನೇ ಮಾಡಿರಿ. ಖಂಡಿತವಾಗಿಯೂ ಅಲ್ಲಾಹನು ನ್ಯಾಯ ಪಾಲಿಸುವವರನ್ನು ಪ್ರೀತಿಸುತ್ತಾನೆ.
43. ಅವರ ಬಳಿ, ಅಲ್ಲಾಹನ ಆದೇಶವಿರುವ ತೌರಾತ್ ಗ್ರಂಥವಿರುವಾಗ ಅವರು ನಿಮ್ಮನ್ನು ತೀರ್ಪುಗಾರರಾಗಿ ಮಾಡುವುದಾದರೂ ಹೇಗೆ? ಆದರೆ ಆ ಬಳಿಕ ಅವರು ತಿರುಗಿ ನಿಲ್ಲುತ್ತಾರೆ – ಇನ್ನು ಅವರು ನಂಬುವವರಂತೂ ಅಲ್ಲ.
44. ಖಂಡಿತವಾಗಿಯೂ ತೌರಾತ್‌ಅನ್ನು ನಾವೇ ಇಳಿಸಿದೆವು. ಅದರಲ್ಲಿ ಮಾರ್ಗದರ್ಶನ ಮತ್ತು ಪ್ರಕಾಶವಿದೆ. ನಮ್ಮ ಆಜ್ಞಾಪಾಲಕರಾಗಿದ್ದ ದೇವದೂತರುಗಳು ಅದರ (ತೌರಾತ್‌ನ) ಮೂಲಕವೇ ಯಹೂದಿಗಳಿಗೆ ಆದೇಶಗಳನ್ನು ನೀಡುತ್ತಿದ್ದರು. (ಅವರಲ್ಲಿನ) ದೇವಭಕ್ತರು ಮತ್ತು ವಿದ್ವಾಂಸರು ಕೂಡ ಹಾಗೆಯೇ ಮಾಡುತ್ತಿದ್ದರು. ಏಕೆಂದರೆ ಅವರನ್ನು ಅಲ್ಲಾಹನ ಗ್ರಂಥದ ರಕ್ಷಕರಾಗಿ ಮಾಡಲಾಗಿತ್ತು ಮತ್ತು ಅವರು ಅದರ ಪರ ಸಾಕ್ಷಿಗಳಾಗಿದ್ದರು. ನೀವು ಜನರಿಗೆ ಅಂಜಬೇಡಿ. ನನಗೆ ಮಾತ್ರ ಅಂಜಿರಿ. ಹಾಗೆಯೇ ನೀವು ನನ್ನ ವಚನಗಳನ್ನು ಸಣ್ಣ ಬೆಲೆಗೆ ಮಾರಬೇಡಿ. ಅಲ್ಲಾಹನು ಇಳಿಸಿ ಕೊಟ್ಟಿರುವುದರ (ಅವನ ನಿಯಮದ) ಪ್ರಕಾರ ತೀರ್ಪು ನೀಡದವರು ಧಿಕ್ಕಾರಿಗಳಾಗಿರುತ್ತಾರೆ.
45. ಅದರಲ್ಲಿ (ತೌರಾತ್‌ನಲ್ಲಿ) ನಾವು ಅವರಿಗೆ – ಜೀವಕ್ಕೆ ಜೀವ, ಕಣ್ಣಿಗೆ ಕಣ್ಣು, ಮೂಗಿಗೆ ಮೂಗು, ಕಿವಿಗೆ ಕಿವಿ ಮತ್ತು ಹಲ್ಲಿಗೆ ಹಲ್ಲು ಪರಿಹಾರವೆಂದು ಮತ್ತು ಗಾಯಗಳಿಗೂ ಪರಿಹಾರವಿದೆ ಎಂದು, ಹಾಗೆಯೇ ಪ್ರತೀಕಾರದ ಹಕ್ಕನ್ನು ಕ್ಷಮಿಸಿ ಬಿಟ್ಟವನಿಗೆ ಅದಕ್ಕಾಗಿ ಪರಿಹಾರ ಧನ ಉಂಟೆಂದು ವಿಧಿಸಿದ್ದೆವು. ಇನ್ನು ಅಲ್ಲಾಹನು ಇಳಿಸಿ ಕೊಟ್ಟಿರುವುದರ (ಅವನ ನಿಯಮದ) ಪ್ರಕಾರ ತೀರ್ಪು ನೀಡದವರು ಅಕ್ರಮಿಗಳಾಗಿರುತ್ತಾರೆ.
46. ಅವರ (ಗತಕಾಲದ ದೂತರುಗಳ) ಹೆಜ್ಜೆ ಗುರುತುಗಳ ಮೇಲೆ ನಾವು ಮರ್ಯಮರ ಪುತ್ರ ಈಸಾರನ್ನು ಕಳಿಸಿದೆವು – ತೌರಾತ್‌ನ ಪೈಕಿ ಅವರ (ಯಹೂದಿಗಳ) ಬಳಿ ಉಳಿದಿದ್ದ ಭಾಗವನ್ನು ದೃಢೀಕರಿಸುವವರಾಗಿ. ಹಾಗೆಯೇ ನಾವು ಅವರಿಗೆ (ಈಸಾರಿಗೆ) ಇಂಜೀಲ್ ಅನ್ನು ನೀಡಿದೆವು. ಅದರಲ್ಲಿ ಮಾರ್ಗದರ್ಶನ ಮತ್ತು ಪ್ರಕಾಶವಿದೆ. ಅದು ತೌರಾತ್‌ನ ಪೈಕಿ ಅವರ ಬಳಿ ಉಳಿದಿರುವ ಭಾಗವನ್ನು ಸಮರ್ಥಿಸುತ್ತದೆ ಮತ್ತು ಅದು ದೇವಭಕ್ತರ ಪಾಲಿಗೆ ಮಾರ್ಗದರ್ಶಿ ಹಾಗೂ ಉಪದೇಶವಾಗಿದೆ.
47. ಇಂಜೀಲ್ ಗ್ರಂಥದವರು, ಅಲ್ಲಾಹನು ಅದರಲ್ಲಿ ಇಳಿಸಿಕೊಟ್ಟಿರುವ (ನಿಯಮ) ಪ್ರಕಾರ ತೀರ್ಪು ನೀಡಲಿ. ಅಲ್ಲಾಹನು ಇಳಿಸಿಕೊಟ್ಟಿರುವ ನಿಯಮದಂತೆ ತೀರ್ಪು ನೀಡದವರು ಅವಿಧೇಯರಾಗಿದ್ದಾರೆ.
48. (ದೂತರೇ,) ನಾವೀಗ ನಿಮಗೆ ಸತ್ಯವಿರುವ ಗ್ರಂಥವನ್ನು ಇಳಿಸಿ ಕೊಟ್ಟಿರುವೆವು. ಇದು (ಗತಕಾಲದ) ಗ್ರಂಥದ ಪೈಕಿ ಜನರ ಬಳಿ ಉಳಿದಿರುವುದನ್ನು ಸಮರ್ಥಿಸುವ ಮತ್ತು ಅದನ್ನು ಕಾಪಾಡುವ ಗ್ರಂಥವಾಗಿದೆ. ನೀವಿನ್ನು ಅಲ್ಲಾಹನು ಇಳಿಸಿರುವ ನಿಯಮ ಪ್ರಕಾರವೇ ಅವರ ನಡುವೆ ತೀರ್ಪು ನೀಡಿರಿ. ನಿಮ್ಮ ಬಳಿಗೆ ಸತ್ಯವು ಬಂದಿರುವಾಗ, ನೀವು ಅವರ ಅಪೇಕ್ಷೆಗಳನ್ನು ಅನುಸರಿಸಬೇಡಿ. ನಾವು ನಿಮ್ಮ ಪೈಕಿ ಪ್ರತಿಯೊಬ್ಬರಿಗೂ (ಪ್ರತಿಯೊಂದು ಸಮುದಾಯಕ್ಕೂ) ನಿರ್ದಿಷ್ಟ ನಿಯಮ ಹಾಗೂ ದಾರಿಯೊಂದನ್ನು ನಿಗದಿ ಪಡಿಸಿದ್ದೇವೆ. ಅಲ್ಲಾಹನು ಬಯಸಿದ್ದರೆ ನಿಮ್ಮೆಲ್ಲರನ್ನು ಒಂದೇ ಸಮುದಾಯ ವಾಗಿಸುತ್ತಿದ್ದನು. ಆದರೆ ಅವನು, ನಿಮಗೆ ಏನನ್ನು ನೀಡಿರುವನೋ ಅದರ ಮೂಲಕವೇ ನಿಮ್ಮನ್ನು ಪರೀಕ್ಷಿಸಬಯಸುತ್ತಾನೆ. ನೀವೀಗ ಒಳಿತಿನಲ್ಲಿ ಪರಸ್ಪರ ಸ್ಪರ್ಧಿಸಿರಿ. ಕೊನೆಗೆ ನೀವೆಲ್ಲರೂ ಅಲ್ಲಾಹನೆಡೆಗೇ ಮರಳಲಿಕ್ಕಿದೆ – ಆಗ ಅವನು, ನೀವು ಭಿನ್ನತೆ ತಾಳಿದ್ದ ವಿಷಯಗಳ ಕುರಿತು ನಿಮಗೆ ತಿಳಿಸುವನು.
49. ನೀವಿನ್ನು ಅಲ್ಲಾಹನು ಇಳಿಸಿಕೊಟ್ಟಿರುವ ನಿಯಮಕ್ಕನುಸಾರವಾಗಿಯೇ ಅವರ ನಡುವೆ ತೀರ್ಪು ನೀಡಿರಿ ಮತ್ತು ಅವರ ಅಪೇಕ್ಷೆಗಳನ್ನು ಅನುಸರಿಸಬೇಡಿ. ಅಲ್ಲಾಹನು ನಿಮಗೆ ಇಳಿಸಿಕೊಟ್ಟಿರುವ ನಿಯಮದ ಯಾವುದೇ ಭಾಗದ ವಿಷಯದಲ್ಲಿ ಅವರು ನಿಮ್ಮನ್ನು ಮೋಸಗೊಳಿಸದಂತೆ ಎಚ್ಚರ ವಹಿಸಿರಿ. ನಿಮಗೆ ತಿಳಿದಿರಲಿ; ಅಲ್ಲಾಹನು ಅವರ ಕೆಲವು ಪಾಪಗಳ ಕಾರಣ ಅವರನ್ನು ದಂಡಿಸ ಬಯಸುತ್ತಾನೆ. ನಿಜಕ್ಕೂ ಜನರಲ್ಲಿ ಹೆಚ್ಚಿನವರು ಅವಿಧೇಯರಾಗಿದ್ದಾರೆ.
50. ಅವರೇನು, ಅಜ್ಞಾನ ಕಾಲದ ನಿಯಮವನ್ನು ಅಪೇಕ್ಷಿಸುತ್ತಿದ್ದಾರೆಯೇ? ದೃಢ ವಿಶ್ವಾಸ ಉಳ್ಳವರ ಪಾಲಿಗೆ ಅಲ್ಲಾಹನ ನಿಯಮಕ್ಕಿಂತ ಉತ್ತಮ ನಿಯಮ ಬೇರಾವುದಿದೆ?
51. ವಿಶ್ವಾಸಿಗಳೇ, ಯಹೂದಿಗಳು ಮತ್ತು ಕ್ರೈಸ್ತರನ್ನು ನೀವು ನಿಮ್ಮ ಪೋಷಕರಾಗಿ ನೆಚ್ಚಿಕೊಳ್ಳಬೇಡಿ. ಅವರು ಪರಸ್ಪರರ ಪಾಲಿಗೆ ಮಾತ್ರ ಪೋಷಕರಾಗಿರುತ್ತಾರೆ. ನಿಮ್ಮ ಪೈಕಿ, ಅವರನ್ನು ತಮ್ಮ ಪೋಷಕರಾಗಿ ನೆಚ್ಚಿಕೊಂಡವನು ಖಂಡಿತ ಅವರಲ್ಲೊಬ್ಬನಾಗಿ ಬಿಡುವನು. ಅಕ್ರಮಿಗಳಿಗಂತೂ ಅಲ್ಲಾಹನು ಖಂಡಿತ ಸರಿ ದಾರಿ ತೋರಿಸುವುದಿಲ್ಲ.
52. ತಮ್ಮ ಮನಸ್ಸುಗಳಲ್ಲಿ ರೋಗವಿರುವವರು ಅವರೆಡೆಗೆ ಧಾವಿಸಿ ಹೋಗುವುದನ್ನು ನೀವು ಕಾಣುವಿರಿ. ‘‘ನಮ್ಮನ್ನು ಕಾಲಚಕ್ರವು ಬಾಧಿಸೀತೆಂಬ (ಆಪತ್ಕಾಲ ಬಂದೀತೆಂಬ) ಭಯ ನಮಗಿದೆ‘‘ ಎಂದು ಅವರು ಹೇಳುತ್ತಾರೆ. ನಿಜವಾಗಿ, ಅಲ್ಲಾಹನು (ಶೀಘ್ರದಲ್ಲೇ) ವಿಜಯವನ್ನು ತಂದು ಕೊಡುವ ಅಥವಾ ತನ್ನ ಕಡೆಯಿಂದ ಒಂದು ವಿಶೇಷ ಆದೇಶವನ್ನು ಕಳುಹಿಸುವ ಸಾಧ್ಯತೆ ಇದೆ. ಆಗ ಅವರು, ತಮ್ಮ ಮನಸ್ಸುಗಳೊಳಗೆ ಬಚ್ಚಿಟ್ಟಿರುವ ವಿಷಯಗಳ ಕುರಿತು ಪಶ್ಚಾತ್ತಾಪ ಪಡಬಹುದು.
53. (ಅಂಥವರ ಕುರಿತು) ವಿಶ್ವಾಸಿಗಳು ‘‘ನಾವು ನಿಮ್ಮ ಜೊತೆಗಿದ್ದೇವೆಂದು ಅಲ್ಲಾಹನ ಹೆಸರಲ್ಲಿ ಆಣೆ ಹಾಕಿ ಹೇಳುತ್ತಿದ್ದವರು ಇವರೇ?‘‘ ಎಂದು ಕೇಳುತ್ತಾರೆ. ನಿಜವಾಗಿ ಅವರ ಕರ್ಮಗಳೆಲ್ಲವೂ ವ್ಯರ್ಥವಾದವು ಮತ್ತು ಅವರು ಎಲ್ಲವನ್ನೂ ಕಳೆದು ಕೊಂಡವರಾದರು.
54. ವಿಶ್ವಾಸಿಗಳೇ, ನಿಮ್ಮಲ್ಲಿ ಯಾರಾದರೂ ತನ್ನ ಧರ್ಮದಿಂದ ವಿಮುಖನಾಗಿದ್ದರೆ (ಅವನಿಗೆ ತಿಳಿದಿರಲಿ;) ಅಲ್ಲಾಹನು ಬಹು ಬೇಗನೇ ಇನ್ನೊಂದು ಜನಾಂಗವನ್ನು ತರುವನು – ಅವನು ಅವರನ್ನು ಪ್ರೀತಿಸುತ್ತಿರುವನು ಮತ್ತು ಅವರು ಅವನನ್ನು ಪ್ರೀತಿಸುತ್ತಿರುವರು. ಅವರು ವಿಶ್ವಾಸಿಗಳ ಪಾಲಿಗೆ ಸೌಮ್ಯರಾಗಿರುವರು ಮತ್ತು ಧಿಕ್ಕಾರಿಗಳ ಪಾಲಿಗೆ ಕಠಿಣರಾಗಿರುವರು. ಅವರು ಅಲ್ಲಾಹನ ಮಾರ್ಗದಲ್ಲಿ ಹೋರಾಡುವವರಾಗಿರುವರು ಮತ್ತು ಮೂದಲಿಸುವವರ ಮೂದಲಿಕೆಗೆ ಅವರು ಅಂಜಲಾರರು. ಇದೆಲ್ಲಾ ಅಲ್ಲಾಹನ ಅನುಗ್ರಹ. ಅವನು ಇದನ್ನು ತಾನಿಚ್ಛಿಸಿದವರಿಗೆ ದಯಪಾಲಿಸುತ್ತಾನೆ. ಅಲ್ಲಾಹನಂತು ವಿಶಾಲ ಜ್ಞಾನ ಉಳ್ಳವನಾಗಿದ್ದಾನೆ.
55. ನಿಜವಾಗಿ ಅಲ್ಲಾಹ್, ಅವನ ದೂತರು ಮತ್ತು ವಿಶ್ವಾಸಿಗಳು ಮಾತ್ರ ನಿಮ್ಮ ಪೋಷಕರಾಗಿದ್ದಾರೆ. ಅವರು (ವಿಶ್ವಾಸಿಗಳು) ನಮಾಝ್ ಅನ್ನು ಸ್ಥಾಪಿಸುವವರು, ಝಕಾತ್ ಪಾವತಿಸುವವರು ಮತ್ತು (ಅಲ್ಲಾಹನೆದುರು) ಬಾಗುವವರಾಗಿರುತ್ತಾರೆ.
56. ಅಲ್ಲಾಹ್ ಮತ್ತು ಅವನ ದೂತರನ್ನು ಹಾಗೂ ವಿಶ್ವಾಸಿಗಳನ್ನು ಪೋಷಕರಾಗಿ ನೆಚ್ಚಿಕೊಂಡವರು (ತಿಳಿದಿರಲಿ;) – ಅಲ್ಲಾಹನ ಪಡೆಯವರೇ ಖಂಡಿತ ವಿಜಯಿಗಳಾಗುವರು.
57. ವಿಶ್ವಾಸಿಗಳೇ, ನಿಮಗಿಂತ ಮುಂಚೆ ಗ್ರಂಥ ನೀಡಲಾಗಿದ್ದವರ ಪೈಕಿ, ನಿಮ್ಮ ಧರ್ಮವನ್ನು ಕೇವಲ ತಮಾಷೆಯಾಗಿ ಹಾಗೂ ಆಟವಾಗಿ ಕಾಣುವವರನ್ನು ಮತ್ತು ಧಿಕ್ಕಾರಿಗಳನ್ನು ನಿಮ್ಮ ಪೋಷಕರಾಗಿ ನೆಚ್ಚಿಕೊಳ್ಳಬೇಡಿ. ನೀವು ವಿಶ್ವಾಸಿಗಳಾಗಿದ್ದರೆ, ಅಲ್ಲಾಹನ ಭಯ ಉಳ್ಳವರಾಗಿರಿ.
58. ನೀವು ನಮಾಝಿಗೆ ಕರೆ ನೀಡುವಾಗ ಅವರು ಅದನ್ನು ಒಂದು ತಮಾಷೆ ಹಾಗೂ ಆಟವೆಂಬಂತೆ ಕಾಣುತ್ತಾರೆ – ಏಕೆಂದರೆ ಅವರು ಅರ್ಥ ಮಾಡಿಕೊಳ್ಳುವ ಜನರಲ್ಲ.
59. ನೀವು ಹೇಳಿರಿ: ಗ್ರಂಥದವರೇ, ನಾವು ಅಲ್ಲಾಹನಲ್ಲಿ, ಅವನು ನಮ್ಮೆಡೆಗೆ ಇಳಿಸಿಕೊಟ್ಟಿರುವ ಸಂದೇಶದಲ್ಲಿ ಮತ್ತು ಈ ಹಿಂದೆ ಇಳಿಸಲಾಗಿದ್ದ ಸಂದೇಶದಲ್ಲಿ ನಂಬಿಕೆ ಉಳ್ಳವರು ಎಂಬುದನ್ನು ಬಿಟ್ಟರೆ ನಿಮಗೆ ನಮ್ಮ ವಿರುದ್ಧ ಇರುವ ಹಗೆತನವಾದರೂ ಏನು? ನಿಜವಾಗಿ ಅವರಲ್ಲಿ ಹೆಚ್ಚಿನವರು ಅವಿಧೇಯರು.
60. ನೀವು ಹೇಳಿರಿ; ಅಲ್ಲಾಹನ ಬಳಿ ಇದಕ್ಕಿಂತಲೂ (ಅವಿಧೇಯರಿಗಿಂತಲೂ) ಕೆಟ್ಟ ನೆಲೆ ಯಾರದೆಂದು ನಾನು ನಿಮಗೆ ತಿಳಿಸಲೇ? ಅಲ್ಲಾಹನಿಂದ ನಿಂದಿತರಾದವರು, ಅವನ ಕೋಪಕ್ಕೆ ಪಾತ್ರರಾದವರು ಹಾಗೂ ಅವರ ಪೈಕಿ ಅವನು ಯಾರನ್ನು ಕೋತಿಗಳಾಗಿಯೂ, ಹಂದಿಗಳಾಗಿಯೂ ಮಾಡಿದನೋ ಅವರು ಮತ್ತು ಶೈತಾನನ ದಾಸರಾದವರು. ಅವರ ನೆಲೆಯೇ ತೀರಾ ನೀಚ ನೆಲೆಯಾಗಿರುವುದು ಮತ್ತು ಅವರೇ ನೇರ ಮಾರ್ಗದಿಂದ ತುಂಬಾ ದೂರ ಹೊರಟು ಹೋದವರಾಗಿದ್ದಾರೆ.
61. ಅವರು ನಿಮ್ಮ ಬಳಿ ಬಂದಾಗ, ನಾವು ನಂಬಿದೆವು ಎನ್ನುತ್ತಾರೆ. ನಿಜವಾಗಿ ಅವರು ಧಿಕ್ಕಾರದೊಂದಿಗೇ ಒಳ ಬಂದಿದ್ದರು ಮತ್ತು ಅದರೊಂದಿಗೇ ಮರಳಿ ಹೋದರು. ಅವರು ಬಚ್ಚಿಟ್ಟಿರುವ ಎಲ್ಲವನ್ನೂ ಅಲ್ಲಾಹನು ಚೆನ್ನಾಗಿ ಬಲ್ಲನು.
62. ಅವರಲ್ಲಿ ಹೆಚ್ಚಿನವರು ಪಾಪ ಹಾಗೂ ದ್ರೋಹದ ಕೆಲಸಗಳಲ್ಲಿ ಉತ್ಸಾಹ ತೋರುವುದನ್ನು ಮತ್ತು ನಿಷಿದ್ಧ ವಸ್ತುಗಳನ್ನು ತಿನ್ನುವುದನ್ನು ನೀವು ಕಾಣುವಿರಿ. ಅವರು ಮಾಡುತ್ತಿರುವುದೆಲ್ಲವೂ ತೀರಾ ಕೆಟ್ಟದು.
63. (ಅವರ) ಧಾರ್ಮಿಕ ನೇತಾರರು ಮತ್ತು ವಿದ್ವಾಂಸರು ಅವರು ಪಾಪದ ಮಾತುಗಳನ್ನಾಡದಂತೆ ಮತ್ತು ನಿಷಿದ್ಧವಾಗಿರುವುದನ್ನು ತಿನ್ನದಂತೆ ಅವರನ್ನೇಕೆ ತಡೆಯುವುದಿಲ್ಲ? ಅವರು ರಚಿಸುತ್ತಿರುವುದೆಲ್ಲವೂ ತೀರಾ ಕೆಟ್ಟದು.
64. ಅಲ್ಲಾಹನ ಕೈಗಳು ಕಟ್ಟಿವೆ ಎಂದು ಯಹೂದಿಗಳು ಹೇಳುತ್ತಾರೆ. ಕಟ್ಟಲ್ಪಡಲಿ ಅವರ ಕೈಗಳು. ಅವರ ಹೇಳಿಕೆಯ ಕಾರಣ ಅವರು ಶಪಿತರಾದರು. ನಿಜವಾಗಿ ಅಲ್ಲಾಹನ ಕೈಗಳು ಧಾರಾಳ ವಿಶಾಲವಾಗಿವೆ. ಅವನು ತಾನಿಚ್ಛಿಸಿದಂತೆ ಖರ್ಚು ಮಾಡುತ್ತಾನೆ. ನಿಮ್ಮ ಒಡೆಯನು ನಿಮಗೇನನ್ನು ಇಳಿಸಿ ಕೊಟ್ಟಿರುವನೋ ಅದರಿಂದಾಗಿ ಅವರಲ್ಲಿ ಹೆಚ್ಚಿನವರ ವಿದ್ರೋಹ ಮತ್ತು ಧಿಕ್ಕಾರವು ಮತ್ತಷ್ಟು ಹೆಚ್ಚಲಿದೆ. ನಾವು ಪುನರುತ್ಥಾನ ದಿನದವರೆಗೂ ಅವರ ನಡುವೆ ವೈರ ಮತ್ತು ವೈಷಮ್ಯವನ್ನು ಬಿತ್ತಿರುವೆವು. ಅವರು ಯುದ್ಧದ ಬೆಂಕಿಯನ್ನು ಭುಗಿಲೆಬ್ಬಿಸಿದಾಗ ಅಲ್ಲಾಹನು ಅದನ್ನು ತಣಿಸಿ ಬಿಡುತ್ತಾನೆ. ಆದರೆ ಅವರು ಭೂಮಿಯಲ್ಲಿ ಅಶಾಂತಿ ಹಬ್ಬಲು ಶ್ರಮಿಸುತ್ತಲೇ ಇರುತ್ತಾರೆ. ಅಲ್ಲಾಹನಂತು, ಅಶಾಂತಿ ಹಬ್ಬುವವರನ್ನು ಖಂಡಿತ ಮೆಚ್ಚುವುದಿಲ್ಲ.
65. ಗ್ರಂಥದವರು ವಿಶ್ವಾಸಿಗಳಾಗಿ, ಧರ್ಮ ನಿಷ್ಠರಾಗಿ ಬಿಟ್ಟಿದ್ದರೆ ನಾವು ಅವರನ್ನು ಅವರ ಎಲ್ಲ ಪಾಪಗಳಿಂದ ಮುಕ್ತಗೊಳಿಸಿ ಬಿಡುತ್ತಿದ್ದೆವು ಮತ್ತು ಅನುಗ್ರಹಗಳೇ ತುಂಬಿರುವ ಸ್ವರ್ಗ ತೋಟಗಳೊಳಗೆ ಅವರನ್ನು ಸೇರಿಸುತ್ತಿದ್ದೆವು.
66. ಒಂದು ವೇಳೆ ಅವರು ತೌರಾತ್ ಮತ್ತು ಇಂಜೀಲ್‌ಗಳನ್ನು ಹಾಗೂ (ಇದೀಗ) ಅವರಿಗೆ ಅವರೊಡೆಯನ ಕಡೆಯಿಂದ ಏನನ್ನು ಇಳಿಸಿಕೊಡಲಾಗಿದೆಯೋ ಅದನ್ನು (ಕುರ್‌ಆನನ್ನು) ಸ್ಥಾಪಿಸಿರುತ್ತಿದ್ದರೆ ಅವರ ಮೇಲಿಂದಲೂ ಅವರ ಕಾಲಡಿಯಿಂದಲೂ ಅವರಿಗೆ ಆಹಾರವು ಹರಿದು ಬರುತ್ತಿತ್ತು. ಅವರಲ್ಲಿ ಮಧ್ಯಮ ನಿಲುವಿನ ಒಂದು ಪಂಗಡವಿದೆ. ಆದರೆ ಅವರಲ್ಲಿ ಹೆಚ್ಚಿನವರು ಕೆಟ್ಟದ್ದನ್ನೇ ಮಾಡುವವರಾಗಿದ್ದಾರೆ.
67. ದೂತರೇ, ನಿಮಗೆ ನಿಮ್ಮೊಡೆಯನ ಕಡೆಯಿಂದ ಏನನ್ನು ಇಳಿಸಿಕೊಡಲಾಗಿದೆಯೋ ಅದನ್ನು (ಜನರಿಗೆ) ತಲುಪಿಸಿರಿ. ನೀವು ಹಾಗೆ ಮಾಡದಿದ್ದರೆ, ನೀವು ಅವನ ಪ್ರತಿನಿಧಿತ್ವದ ಹೊಣೆಯನ್ನೇ ಈಡೇರಿಸಲಿಲ್ಲವೆಂದಾಗುವುದು. ಅಲ್ಲಾಹನು ನಿಮ್ಮನ್ನು ಜನರಿಂದ ರಕ್ಷಿಸುವನು. ಅಲ್ಲಾಹನು ಧಿಕ್ಕಾರಿಗಳಿಗೆ ಎಂದೂ ಸರಿದಾರಿಯನ್ನು ತೋರುವುದಿಲ್ಲ.
68. ಹೇಳಿರಿ; ‘‘ಗ್ರಂಥದವರೇ, ನೀವು ತೌರಾತ್ ಅನ್ನು, ಇಂಜೀಲ್ ಅನ್ನು ಮತ್ತು ನಿಮ್ಮ ಒಡೆಯನು ನಿಮ್ಮೆಡೆಗೆ ಇಳಿಸಿಕೊಟ್ಟಿರುವುದನ್ನು ಸಂಸ್ಥಾಪಿಸುವ ತನಕ ನಿಮಗೆ ಯಾವ ನೆಲೆಯೂ ಇಲ್ಲ.’’ ನಿಜವಾಗಿ, ನಿಮ್ಮ ಒಡೆಯನ ಕಡೆಯಿಂದ ನಿಮ್ಮೆಡೆಗೆ ಇಳಿಸಿ ಕೊಡಲಾಗಿರುವ ಸಂದೇಶವು ಅವರಲ್ಲಿ (ಗ್ರಂಥದವರಲ್ಲಿ) ಹೆಚ್ಚಿನವರ ವಿದ್ರೋಹ ಮತ್ತು ಧಿಕ್ಕಾರವನ್ನು ಮತ್ತಷ್ಟು ಹೆಚ್ಚಿಸಿದೆ. ನೀವು ಧಿಕ್ಕಾರಿಗಳ ವಿಷಯದಲ್ಲಿ ಬೇಸರಿಸಬೇಡಿ.
69. ಖಂಡಿತವಾಗಿಯೂ ವಿಶ್ವಾಸಿಗಳು, ಯಹೂದಿಗಳು, ಸಬಯನರು ಮತ್ತು ಕ್ರೈಸ್ತರಲ್ಲಿ ಅಲ್ಲಾಹನ ಮೇಲೆ ಹಾಗೂ ಅಂತಿಮ ದಿನದ ಮೇಲೆ ನಂಬಿಕೆ ಉಳ್ಳವರು ಮತ್ತು ಸತ್ಕರ್ಮ ಮಾಡಿದವರಿಗೆ ಯಾವ ಭಯವೂ ಇಲ್ಲ ಮತ್ತು ಅವರು ದುಃಖಿಸಲಾರರು.
70. ನಾವು ಇಸ್ರಾಈಲರ ಸಂತತಿಗಳಿಂದ ಸ್ಪಷ್ಟ ಕರಾರನ್ನು ಪಡೆದಿದ್ದೆವು ಮತ್ತು ನಾವು ಅವರೆಡೆಗೆ ದೂತರನ್ನು ಕಳುಹಿಸಿದೆವು. ಅವರ ಸ್ವೇಚ್ಛೆಗೆ ವಿರುದ್ಧವಾದ ಯಾವುದಾದರೂ ಆದೇಶದೊಂದಿಗೆ ದೂತರು ಅವರ ಬಳಿಗೆ ಬಂದಾಗಲೆಲ್ಲಾ ಅವರಲ್ಲಿ ಕೆಲವರು ಅವರನ್ನು (ದೂತರನ್ನು) ತಿರಸ್ಕರಿಸಿದರು ಮತ್ತು ಕೆಲವರು ಅವರನ್ನು ಕೊಂದು ಬಿಟ್ಟರು.
71. (ತಮಗೆ) ಯಾವುದೇ ಶಿಕ್ಷೆಯಾಗದೆಂದು ಅವರು ಭಾವಿಸಿದ್ದರು. ಮತ್ತು ಅವರು ಕುರುಡರೂ ಕಿವುಡರೂ ಆಗಿದ್ದರು. ಕೊನೆಗೆ ಅಲ್ಲಾಹನು ಅವರೆಡೆಗೆ ಒಲವು ತೋರಿದನು. ಆದರೂ ಅವರಲ್ಲಿ ಹೆಚ್ಚಿನವರು ಕುರುಡರು ಹಾಗೂ ಕಿವುಡರಾಗಿಯೇ ಇದ್ದರು. ಅಲ್ಲಾಹನಂತೂ ಅವರು ಮಾಡುವುದನ್ನೆಲ್ಲ ನೋಡುತ್ತಿರುವವನೇ ಆಗಿದ್ದಾನೆ.
72. ಖಂಡಿತವಾಗಿಯೂ, ಮರ್ಯಮರ ಪುತ್ರ ಮಸೀಹನೇ ಅಲ್ಲಾಹನೆಂದು ಹೇಳಿದವರು ಧಿಕ್ಕಾರಿಗಳಾಗಿ ಬಿಟ್ಟರು. ನಿಜವಾಗಿ ಮಸೀಹರು (ಈಸಾ ಅ.) ಹೀಗೆ ಹೇಳಿದ್ದರು; ಇಸ್ರಾಈಲರ ಸಂತತಿಗಳೇ, ನನ್ನ ಒಡೆಯನೂ ನಿಮ್ಮ ಒಡೆಯನೂ ಆಗಿರುವ ಅಲ್ಲಾಹನನ್ನೇ ನೀವು ಆರಾಧಿಸಿರಿ. ಅಲ್ಲಾಹನ ಜೊತೆ ಯಾರನ್ನಾದರೂ ಸೇರಿಸುವವನ ಪಾಲಿಗೆ ಅಲ್ಲಾಹನು ಖಂಡಿತವಾಗಿಯೂ ಸ್ವರ್ಗವನ್ನು ನಿಷಿದ್ಧಗೊಳಿಸಿರುವನು ಮತ್ತು ನರಕವೇ ಅವನ ನೆಲೆಯಾಗಿರುವುದು. ಅಕ್ರಮಿಗಳ ಪಾಲಿಗೆ ಯಾರೂ ಸಹಾಯಕರಿಲ್ಲ.
73. ಅಲ್ಲಾಹನು ಮೂವರಲ್ಲಿ ಒಬ್ಬನು ಎಂದು ಹೇಳಿದವರು ಖಂಡಿತ ಧಿಕ್ಕಾರಿಗಳಾದರು. ನಿಜವಾಗಿ ಏಕೈಕ ಪೂಜಾರ್ಹನ ಹೊರತು ಬೇರಾರೂ ಪೂಜಾರ್ಹರಲ್ಲ. ಅವರು ಸದ್ಯ ತಾವು ಏನನ್ನು ಹೇಳುತ್ತಿರುವರೋ ಅದರಿಂದ ದೂರ ಉಳಿಯದಿದ್ದರೆ, ಅವರಲ್ಲಿನ ಧಿಕ್ಕಾರಿಗಳಿಗೆ ತುಂಬಾ ಕಠಿಣ ಶಿಕ್ಷೆ ಸಿಗಲಿದೆ.
74. ಅವರೇನು ಅಲ್ಲಾಹನ ಬಳಿ ಪಶ್ಚಾತ್ತಾಪ ಪಡುವುದಿಲ್ಲವೆ ಮತ್ತು ಅವನಲ್ಲಿ ಕ್ಷಮೆ ಯಾಚಿಸುವುದಿಲ್ಲವೆ? ಅಲ್ಲಾಹನಂತು ತುಂಬಾ ಕ್ಷಮಾಶೀಲ ಮತ್ತು ಕರುಣಾಮಯಿ ಆಗಿದ್ದಾನೆ.
75. ಮರ್ಯಮರ ಪುತ್ರ ಮಸೀಹರು ಅಲ್ಲಾಹನ ದೂತರಲ್ಲದೆ ಬೇರೇನಲ್ಲ. ಅವರಿಗಿಂತ ಹಿಂದೆಯೂ ದೇವದೂತರಿದ್ದರು. ಅವರ ತಾಯಿ (ಮರ್ಯಮ್) ತುಂಬಾ ಸತ್ಯವಂತ ಮಹಿಳೆಯಾಗಿದ್ದರು. ಅವರಿಬ್ಬರೂ ಆಹಾರ ಸೇವಿಸುತ್ತಿದ್ದರು. ನಾವು ಯಾವ ರೀತಿಯಲ್ಲಿ ಅವರಿಗೆ ಪುರಾವೆಗಳನ್ನು ವಿವರಿಸಿಕೊಡುತ್ತಿದ್ದೇವೆಂಬುದನ್ನು ನೋಡಿರಿ ಮತ್ತು (ಇಷ್ಟಾಗಿಯೂ) ಅವರು ಎಲ್ಲೆಲ್ಲೋ ಅಲೆಯುತ್ತಿರುವುದನ್ನು ನೋಡಿರಿ.
76. ಹೇಳಿರಿ; ನೀವೇನು ಅಲ್ಲಾಹನನ್ನು ಬಿಟ್ಟು, ನಿಮಗೆ ಯಾವುದೇ ಲಾಭವನ್ನಾಗಲಿ, ನಷ್ಟವನ್ನಾಗಲಿ ಮಾಡಲಾಗದವರನ್ನು ಪೂಜಿಸುವಿರಾ? ಅಲ್ಲಾಹನಂತು ಎಲ್ಲವನ್ನೂ ಕೇಳುವವನು ಮತ್ತು ಎಲ್ಲವನ್ನೂ ಬಲ್ಲವನಾಗಿದ್ದಾನೆ.
77. ಹೇಳಿರಿ; ಗ್ರಂಥದವರೇ, ನೀವು ಸತ್ಯಕ್ಕೆದುರಾಗಿ ನಿಮ್ಮ ಧರ್ಮದಲ್ಲಿ ಅತಿಶಯವೆಸಗಬೇಡಿ ಮತ್ತು ನೀವು, ಈ ಹಿಂದೆಯೇ ದಾರಿ ತಪ್ಪಿರುವವರ ಅಪೇಕ್ಷೆಗಳನ್ನು ಅನುಸರಿಸಬೇಡಿ. ಅವರು ಅನೇಕರನ್ನು ದಾರಿಗೆಡಿಸಿದ್ದಾರೆ ಮತ್ತು ಸ್ವತಃ ದಾರಿ ತಪ್ಪಿದವರಾಗಿದ್ದಾರೆ.
78. ಇಸ್ರಾಈಲರ ಸಂತತಿಗಳ ಪೈಕಿ ಧಿಕ್ಕಾರಿಗಳು ದಾವೂದ್‌ರ ಬಾಯಿಯಿಂದ ಹಾಗೂ ಮರ್ಯಮರ ಪುತ್ರ ಈಸಾರಿಂದ ಶಪಿತರಾದರು. ಅವರು ಅವಿಧೇಯರಾಗಿದ್ದುದು ಮತ್ತು ಅತಿರೇಕವೆಸಗುತ್ತಿದ್ದುದೇ ಇದಕ್ಕೆ ಕಾರಣವಾಗಿತ್ತು.
79. ಅವರು ದುಷ್ಕೃತ್ಯಗಳನ್ನು ಎಸಗದಂತೆ ಪರಸ್ಪರರನ್ನು ತಡೆಯುತ್ತಿರಲಿಲ್ಲ. ಅವರು ಕೆಟ್ಟದ್ದನ್ನೇ ಮಾಡುತ್ತಿದ್ದರು.
80. ಅವರಲ್ಲಿ ಹೆಚ್ಚಿನವರು ಧಿಕ್ಕಾರಿಗಳನ್ನು ತಮ್ಮ ಪೋಷಕರಾಗಿಸಿಕೊಂಡಿರುವುದನ್ನು ನೀವು ಕಾಣುತ್ತೀರಿ. ಅವರು ತಮಗಾಗಿ ಕೇವಲ ಕೆಡುಕನ್ನು ಮಾತ್ರ ಮುಂದೆ ಕಳುಹಿಸಿದ್ದಾರೆ. ಇದರಿಂದಾಗಿ ಅಲ್ಲಾಹನು ಅವರ ಬಗ್ಗೆ ಕೋಪಗೊಂಡಿರುವನು ಮತ್ತು ಅವರು ಸದಾ ಕಾಲ ಯಾತನೆಯಲ್ಲಿರುವರು.
81. ಒಂದು ವೇಳೆ ಅವರು ಅಲ್ಲಾಹನಲ್ಲಿ, ದೂತರಲ್ಲಿ ಮತ್ತು ಅವರೆಡೆಗೆ ಇಳಿಸಿ ಕೊಡಲಾಗಿರುವ ಸಂದೇಶದಲ್ಲಿ ನಂಬಿಕೆ ಉಳ್ಳವರಾಗಿದ್ದರೆ, ಈ ರೀತಿ ಅವರನ್ನು (ಧಿಕ್ಕಾರಿಗಳು) ತಮ್ಮ ಪೋಷಕರಾಗಿಸಿಕೊಳ್ಳುತ್ತಿರಲಿಲ್ಲ. ಆದರೆ ಅವರಲ್ಲಿ ಹೆಚ್ಚಿನವರು ಅವಿಧೇಯರಾಗಿದ್ದಾರೆ.
82. ಜನರ ಪೈಕಿ ಯಹೂದಿಗಳು ಮತ್ತು ಬಹುದೇವಾರಾಧಕರು ವಿಶ್ವಾಸಿಗಳ ವಿರುದ್ಧ ಹೆಚ್ಚು ಶತ್ರುತ್ವ ಉಳ್ಳವರಾಗಿರುವುದನ್ನು ನೀವು ಕಾಣುವಿರಿ. ಹಾಗೆಯೇ ‘‘ನಾವು ಕ್ರೈಸ್ತರು’’ ಎಂದು ಹೇಳುವವರನ್ನು ನೀವು ವಿಶ್ವಾಸಿಗಳ ಜೊತೆ ಹೆಚ್ಚಿನ ಸ್ನೇಹ ಉಳ್ಳವರಾಗಿ ಕಾಣುವಿರಿ. ಇದೇಕೆಂದರೆ ಅವರ ನಡುವೆ ನಿಸ್ವಾರ್ಥ ಧರ್ಮ ಸೇವಕರು ಹಾಗೂ ಸಾಧುಗಳಿದ್ದಾರೆ ಮತ್ತು ಅವರು ಅಹಂಕಾರ ಪಡುವವರಲ್ಲ.
ಕಾಂಡ – 7
83. ದೂತರೆಡೆಗೆ ಇಳಿಸಿಕೊಡಲಾಗಿರುವ ಸಂದೇಶವನ್ನು ಕೇಳಿದಾಗ, ಅವರು ಸತ್ಯವನ್ನು ಗುರುತಿಸಿದ್ದರಿಂದ ಅವರ ಕಣ್ಣುಗಳಲ್ಲಿ ಕಣ್ಣೀರು ಉಕ್ಕುವುದನ್ನು ನೀವು ಕಾಣುತ್ತೀರಿ. ಅವರು ಹೇಳುತ್ತಾರೆ; ‘‘ನಮ್ಮೊಡೆಯಾ, ನಾವು ನಂಬಿದೆವು. ನಮ್ಮ ಹೆಸರನ್ನು (ಸತ್ಯದ ಪರ) ಸಾಕ್ಷಿಗಳ ಜೊತೆ ಬರೆ’’.
84. ‘‘ಅಲ್ಲಾಹನನ್ನು ಹಾಗೂ ನಮ್ಮ ಬಳಿಗೆ ಬಂದಿರುವ ಸತ್ಯವನ್ನು ನಾವೇಕೆ ನಂಬಬಾರದು? ನಾವಂತು, ನಮ್ಮೊಡೆಯನು ನಮ್ಮನ್ನು ಸಜ್ಜನರ ಸಾಲಿಗೆ ಸೇರಿಸಬೇಕೆಂದು ಹಂಬಲಿಸುತ್ತಿದ್ದೇವೆ’’
85. ಅವರ ಈ ಹೇಳಿಕೆಯ ಫಲವಾಗಿ ಅಲ್ಲಾಹನು ಅವರಿಗೆ, ತಳದಲ್ಲಿ ನದಿಗಳು ಹರಿಯುತ್ತಿರುವ ತೋಟಗಳನ್ನು ದಯಪಾಲಿಸಿದನು. ಅವರು ಅವುಗಳಲ್ಲಿ ಸದಾ ಕಾಲ ಇರುವರು. ಇದು ಸಜ್ಜನರಿಗಿರುವ ಪ್ರತಿಫಲ.
86. ಧಿಕ್ಕಾರಿಗಳು ಮತ್ತು ನಮ್ಮ ವಚನಗಳನ್ನು ತಿರಸ್ಕರಿಸಿದವರು – ನರಕದವರಾಗಿದ್ದಾರೆ.
87. ವಿಶ್ವಾಸಿಗಳೇ, ಅಲ್ಲಾಹನು ನಿಮಗೆ ಸಮ್ಮತಗೊಳಿಸಿರುವ ನಿರ್ಮಲ ವಸ್ತುಗಳನ್ನು ನಿಷಿದ್ಧವೆಂದು ಪರಿಗಣಿಸಬೇಡಿ ಮತ್ತು ಮಿತಿ ಮೀರಬೇಡಿ. ಮಿತಿ ಮೀರುವವರನ್ನು ಅಲ್ಲಾಹನು ಖಂಡಿತ ಮೆಚ್ಚುವುದಿಲ್ಲ.
88. ಅಲ್ಲಾಹನು ನಿಮಗೆ ನೀಡಿರುವ ಸಮ್ಮತ ಹಾಗೂ ಶುದ್ಧ ಆಹಾರವನ್ನು ತಿನ್ನಿರಿ ಮತ್ತು ನೀವು ನಂಬುವ ಆ ಅಲ್ಲಾಹನಿಗೆ ಸದಾ ಅಂಜಿರಿ.
89. ನೀವು ಕೇವಲ ತಮಾಷೆಯಾಗಿ ಮಾಡಿದ ಪ್ರತಿಜ್ಞೆಗಳಿಗಾಗಿ ಅಲ್ಲಾಹನು ನಿಮ್ಮನ್ನು ವಿಚಾರಿಸಲಾರನು. ಆದರೆ ನೀವು ಮಾಡಿದ ಗಂಭೀರ ಪ್ರತಿಜ್ಞೆಗಳ ಕುರಿತು ಅವನು ಖಂಡಿತ ನಿಮ್ಮನ್ನು ವಿಚಾರಿಸುವನು. (ಅಂತಹ ಪ್ರತಿಜ್ಞೆ ಮುರಿದರೆ) ಅದಕ್ಕೆ ಪರಿಹಾರವಾಗಿ ನೀವು ನಿಮ್ಮ ಮನೆಯವರಿಗೆ ಉಣಿಸುವಂತಹ ಮಧ್ಯಮ ಮಟ್ಟದ ಭೋಜನವನ್ನು ಹತ್ತು ಮಂದಿ ಬಡವರಿಗೆ ಉಣಿಸಬೇಕು ಅಥವಾ ಅವರಿಗೆ (ಅಷ್ಟು ಮಂದಿಗೆ) ಬಟ್ಟೆ ಉಡಿಸಬೇಕು ಅಥವಾ ಒಬ್ಬ ಗುಲಾಮನನ್ನು ದಾಸ್ಯದಿಂದ ಮುಕ್ತಗೊಳಿಸಬೇಕು. ಇದನ್ನು ಮಾಡಲಾಗದವನು ಮೂರು ದಿನ ಉಪವಾಸ ಆಚರಿಸಬೇಕು. ಇದು, ನೀವು ಪ್ರತಿಜ್ಞೆ ಮಾಡಿದ ಬಳಿಕ ಪ್ರತಿಜ್ಞೆಯನ್ನು ಮುರಿದುದಕ್ಕೆ ಪರಿಹಾರವಾಗಿದೆ. ನಿಮ್ಮ ಪ್ರತಿಜ್ಞೆಗಳನ್ನು ಸದಾ ಪಾಲಿಸಿರಿ. ನೀವು ಸದಾ ಕೃತಜ್ಞರಾಗಿರಬೇಕೆಂದು, ಈ ರೀತಿ ಅಲ್ಲಾಹನು ನಿಮಗೆ ತನ್ನ ಆದೇಶಗಳನ್ನು ವಿವರಿಸಿಕೊಡುತ್ತಾನೆ.
90. ವಿಶ್ವಾಸಿಗಳೇ, ಮದ್ಯ, ಜೂಜಾಟ, ವಿಗ್ರಹಗಳು ಮತ್ತು ದಾಳದಾಟ ಇವೆಲ್ಲಾ ಶೈತಾನನ ಮಲಿನ ಚಟುವಟಿಕೆಗಳಾಗಿವೆ. ನೀವು ವಿಜಯಿಗಳಾಗಲು ಅವೆಲ್ಲವುಗಳಿಂದ ದೂರ ಉಳಿಯಿರಿ.
91. ಶೈತಾನನಂತು ಮದ್ಯ ಹಾಗೂ ಜೂಜುಗಳ ಮೂಲಕ ನಿಮ್ಮ ನಡುವೆ ದ್ವೇಷ ಹಾಗೂ ಹಗೆತನವನ್ನು ಬೆಳೆಸಬಯಸುತ್ತಾನೆ ಮತ್ತು ನಿಮ್ಮನ್ನು ಅಲ್ಲಾಹನ ನೆನಪಿನಿಂದ ಹಾಗೂ ನಮಾಝ್‌ನಿಂದ ತಡೆಯಬಯಸುತ್ತಾನೆ. ಆದ್ದರಿಂದ ಇನ್ನಾದರೂ ನೀವು (ಅವುಗಳಿಂದ) ದೂರ ಉಳಿಯುವಿರಾ?
92. ನೀವು ಅಲ್ಲಾಹನ ಆಜ್ಞಾಪಾಲನೆ ಮಾಡಿರಿ ಹಾಗೂ ದೂತರ ಆಜ್ಞಾಪಾಲನೆ ಮಾಡಿರಿ ಮತ್ತು (ಕೆಡುಕುಗಳ ವಿರುದ್ಧ) ಸದಾ ಜಾಗೃತರಾಗಿರಿ. ನೀವಿನ್ನು ತಿರುಗಿ ನಿಂತರೆ, ನಿಮಗೆ ತಿಳಿದಿರಲಿ, ನಮ್ಮ ದೂತರ ಮೇಲಿರುವುದು ಸ್ಪಷ್ಟವಾಗಿ ಸಂದೇಶ ತಲುಪಿಸಿ ಬಿಡುವ ಹೊಣೆ ಮಾತ್ರ.
93. ಸತ್ಯವನ್ನು ನಂಬಿ ಸತ್ಕರ್ಮಗಳನ್ನು ಮಾಡುತ್ತಿರುವವರು (ಗತಕಾಲದಲ್ಲಿ) ಏನನ್ನು ತಿಂದಿದ್ದರೂ, ಅವರು ಧರ್ಮನಿಷ್ಠರೂ, ವಿಶ್ವಾಸಿಗಳೂ ಆಗಿದ್ದು ಸತ್ಕರ್ಮಗಳನ್ನು ಮಾಡುತ್ತಿರುವವರಾಗಿದ್ದರೆ ಮತ್ತು ಸದಾ ಧರ್ಮನಿಷ್ಠರೂ, ಸತ್ಯದಲ್ಲಿ ನಂಬಿಕೆ ಉಳ್ಳವರೂ, ಕೆಡುಕುಗಳಿಂದ ದೂರ ಉಳಿಯುವವರೂ, ಸೌಜನ್ಯ ತೋರುವವರೂ ಆಗಿದ್ದರೆ, ಅವರ ಮೇಲೆ ಪಾಪವೇನಿಲ್ಲ. ಅಲ್ಲಾಹನು ಸತ್ಕರ್ಮಿಗಳನ್ನು ಪ್ರೀತಿಸುತ್ತಾನೆ.
94. ವಿಶ್ವಾಸಿಗಳೇ, ಕಣ್ಣಾರೆ ಕಾಣದೆ ತನ್ನನ್ನು ಯಾರು ಅಂಜುತ್ತಾರೆಂಬುದನ್ನು ಅರಿಯಲಿಕ್ಕಾಗಿ ನಿಮ್ಮ ಕೈಗಳ ಹಾಗೂ ನಿಮ್ಮ ಈಟಿಗಳ ವ್ಯಾಪ್ತಿಗೆ ಬಂದಿರುವ ಬೇಟೆಯ ಪ್ರಾಣಿಯ ಮೂಲಕ ಅಲ್ಲಾಹನು ನಿಮ್ಮನ್ನು ಖಂಡಿತ ಪರೀಕ್ಷಿಸುವನು. ಇಷ್ಟಾಗಿಯೂ ಮೇರೆ ಮೀರಿ ಹೋಗುವಾತನಿಗೆ ಕಠಿಣ ಶಿಕ್ಷೆ ಕಾದಿದೆ.
95. ವಿಶ್ವಾಸಿಗಳೇ, ನೀವು ‘ಇಹ್ರಾಮ್’ನ ಸ್ಥಿತಿಯಲ್ಲಿರುವಾಗ ಬೇಟೆಯ ಪ್ರಾಣಿಯನ್ನು ಕೊಲ್ಲಬೇಡಿ. ಇನ್ನು ನಿಮ್ಮ ಪೈಕಿ ಯಾರಾದರೂ ಉದ್ದೇಶಪೂರ್ವಕ ಅದನ್ನು ಕೊಂದಿದ್ದರೆ – ಅವನು ಕೊಂದ ಪ್ರಾಣಿಗೆ ಸಮನಾಗಿರುವ ನಾಡಪ್ರಾಣಿಯೇ ಅದಕ್ಕೆ ಪರಿಹಾರವಾಗಿದೆ. ಈ ವಿಷಯದಲ್ಲಿ ನಿಮ್ಮಲ್ಲಿನ ಇಬ್ಬರು ನ್ಯಾಯವಂತರು ತೀರ್ಪು ನೀಡಲಿ. ಈ ಪರಿಹಾರವನ್ನು ಕಾಣಿಕೆಯಾಗಿ ಕಅ್ಬ: ಭವನಕ್ಕೆ ತಲುಪಿಸಬೇಕು. ಅಥವಾ (ಪರಿಹಾರವಾಗಿ) ಕೆಲವು ಬಡವರಿಗೆ ಆಹಾರ ಉಣಿಸಬೇಕು. ಅಥವಾ, ಅದಕ್ಕೆ ಸಮನಾಗುವಷ್ಟು ಉಪವಾಸ ಆಚರಿಸಬೇಕು. ಅವನು ತನ್ನ ಕೃತ್ಯದ ಫಲವನ್ನು ಅನುಭವಿಸಲೆಂದು (ಇದನ್ನು ವಿಧಿಸಲಾಗಿದೆ). ಹಿಂದೆ ಗತಿಸಿ ಹೋದುದನ್ನೆಲ್ಲಾ ಅಲ್ಲಾಹನು ಕ್ಷಮಿಸಿರುವನು. ಇದೀಗ ಅದನ್ನೇ ಪುನರಾವರ್ತಿಸುವವರ ವಿರುದ್ಧ ಅಲ್ಲಾಹನು ಪ್ರತೀಕಾರ ತೀರಿಸುವನು. ಅಲ್ಲಾಹನು ಭಾರೀ ಪ್ರಬಲನೂ ಪ್ರತೀಕಾರ ತೀರಿಸಬಲ್ಲವನೂ ಆಗಿದ್ದಾನೆ.
96. (ಇಹ್ರಾಮಿನ ಸ್ಥಿತಿಯಲ್ಲಿ) ಕಡಲಿನ ಬೇಟೆಯನ್ನು ನಿಮ್ಮ ಪಾಲಿಗೆ ಸಮ್ಮತಿಸಲಾಗಿದೆ. ಅದರ ಆಹಾರವು ನಿಮಗೆ ಹಾಗೂ ಕಡಲ ಪ್ರಯಾಣಿಕರಿಗೆ ಉಪಯುಕ್ತವಾಗಿದೆ. ನೀವು ‘ಇಹ್ರಾಮ್’ನ ಸ್ಥಿತಿಯಲ್ಲಿರುವಾಗ ಭೂಭಾಗದ ಬೇಟೆಯು ನಿಮ್ಮ ಪಾಲಿಗೆ ನಿಷಿದ್ಧವಾಗಿದೆ. ನೀವು ಅಲ್ಲಾಹನಿಗೆ ಅಂಜಿರಿ. ಕೊನೆಗೆ ಅವನ ಬಳಿಯೇ ನಿಮ್ಮೆಲ್ಲರನ್ನು ಒಟ್ಟು ಸೇರಿಸಲಾಗುವುದು.
97. ಅಲ್ಲಾಹನು ಪವಿತ್ರ ಭವನ ಕಅ್ಬ:ವನ್ನು ಮಾನವರ ಆಶ್ರಯ ಧಾಮವಾಗಿಸಿರುವನು. ಹಾಗೆಯೇ, ಪವಿತ್ರ ತಿಂಗಳುಗಳು, ಬಲಿಪ್ರಾಣಿ ಮತ್ತು ಕೊರಳಪಟ್ಟಿಯಿರುವ (ಹರಕೆಯ) ಪ್ರಾಣಿಗಳು (ಅವನ ಸಂಕೇತಗಳಾಗಿವೆ). ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಎಲ್ಲವನ್ನೂ ಅಲ್ಲಾಹನು ಬಲ್ಲನು ಮತ್ತು ಅಲ್ಲಾಹನು ಪ್ರತಿಯೊಂದು ವಿಷಯದ ಜ್ಞಾನ ಉಳ್ಳವನು ಎಂಬುದು ನಿಮಗೆ ತಿಳಿದಿರಬೇಕೆಂದು (ಇದನ್ನೆಲ್ಲಾ ನಿಮಗೆ ವಿವರಿಸಲಾಗುತ್ತಿದೆ).
98. ನಿಮಗೆ ತಿಳಿದಿರಲಿ – ಅಲ್ಲಾಹನು ಭಾರೀ ಕಠಿಣ ಶಿಕ್ಷೆ ನೀಡುವವನಾಗಿದ್ದಾನೆ ಮತ್ತು ಅದೇ ವೇಳೆ ಅಲ್ಲಾಹನು ತುಂಬಾ ಕ್ಷಮಾಶೀಲನೂ, ಕರುಣಾಮಯಿಯೂ ಆಗಿದ್ದಾನೆ.
99. ದೂತರ ಮೇಲಿರುವುದು (ಸಂದೇಶವನ್ನು) ತಲುಪಿಸುವ ಹೊಣೆಗಾರಿಕೆ ಮಾತ್ರ. ನೀವು ಪ್ರಕಟಪಡಿಸುತ್ತಿರುವ ಮತ್ತು ನೀವು ಬಚ್ಚಿಡುತ್ತಿರುವ ಎಲ್ಲವನ್ನೂ ಅಲ್ಲಾಹನು ಬಲ್ಲನು.
100. ಹೇಳಿರಿ; ಮಲಿನ ಮತ್ತು ನಿರ್ಮಲವು ಸಮಾನವಾಗಲು ಸಾಧ್ಯವಿಲ್ಲ. ಮಾಲಿನ್ಯದ ಬಾಹುಳ್ಯವು ನಿಮಗೆಷ್ಟು ಅದ್ಭುತವೆನಿಸಿದರೂ ಸರಿಯೇ. ಆದ್ದರಿಂದ, ಬುದ್ಧಿವಂತರೇ, ನೀವು ಸದಾ ಅಲ್ಲಾಹನ ಭಯಭಕ್ತಿ ಉಳ್ಳವರಾಗಿರಿ – ನೀವು ವಿಜಯಿಗಳಾಗಬಹುದು.
101. ವಿಶ್ವಾಸಿಗಳೇ, ನಿಮಗೆ ತಿಳಿಸಿದರೆ ನಿಮಗೆ ಕೆಟ್ಟದೆನಿಸುವಂತಹ ವಿಷಯಗಳ ಕುರಿತು ಪ್ರಶ್ನಿಸಬೇಡಿ. ಕುರ್‌ಆನ್ ಇಳಿಯುತ್ತಿರುವ ವೇಳೆ ನೀವು ಅಂತಹ ವಿಷಯಗಳನ್ನು ಕೇಳಿದರೆ ಅವುಗಳನ್ನು ನಿಮಗೆ ತಿಳಿಸಲಾಗುವುದು. ಅಲ್ಲಾಹನು ಅವುಗಳನ್ನು ಕ್ಷಮಿಸಿರುವನು. ಅಲ್ಲಾಹನಂತು ತುಂಬಾ ಕ್ಷಮಾಶೀಲನೂ ಸಂಯಮಿಯೂ ಆಗಿದ್ದಾನೆ.
102. ನಿಮಗಿಂತ ಹಿಂದಿನ ಜನಾಂಗಗಳೂ ಅಂತಹ ಪ್ರಶ್ನೆಗಳನ್ನು ಕೇಳಿದ್ದರು. ಆದರೆ ಆ ಬಳಿಕ ಅವರು ಅದನ್ನು (ಸತ್ಯವನ್ನು) ಧಿಕ್ಕರಿಸುವವರಾದರು.
103. ಬಹೀರಃ, ಸಾಯಿಬಃ, ವಸೀಲಾ ಮತ್ತು ಹಾಮ್ – ಇವರ ಪೈಕಿ ಯಾರನ್ನೂ ಅಲ್ಲಾಹನು (ಪೂಜ್ಯರಾಗಿ) ನೇಮಿಸಿಲ್ಲ. ನಿಜವಾಗಿ ಧಿಕ್ಕಾರಿಗಳು ಅಲ್ಲಾಹನ ಮೇಲೆ ಆರೋಪಗಳನ್ನು ಹೊರಿಸುತ್ತಾರೆ. ಅವರಲ್ಲಿ ಹೆಚ್ಚಿನವರು ಆಲೋಚಿಸುವುದಿಲ್ಲ.
104. ಅಲ್ಲಾಹನು ಇಳಿಸಿಕೊಟ್ಟಿರುವ ಸಂದೇಶದೆಡೆಗೆ ಮತ್ತು ದೇವದೂತರೆಡೆಗೆ ಬನ್ನಿರಿ ಎಂದು ಅವರೊಡನೆ ಹೇಳಿದಾಗ ಅವರು, ‘‘ನಾವು ನಮ್ಮ ಪೂರ್ವಜರನ್ನು ಯಾವ ದಾರಿಯಲ್ಲಿ ಕಂಡಿರುವೆವೋ, ಅದುವೇ ನಮಗೆ ಸಾಕು’’ ಎನ್ನುತ್ತಾರೆ. ಅವರ ಪೂರ್ವಜರು ಏನನ್ನೂ ಅರಿಯದವರು ಹಾಗೂ ಸನ್ಮಾರ್ಗ ಪಡೆಯದವರಾಗಿದ್ದರೂ (ಅವರಿಗೆ ಆ ದಾರಿ ಸಾಕೇ)?
105. ವಿಶ್ವಾಸಿಗಳೇ, ನೀವು ಸ್ವತಃ ನಿಮ್ಮ ಕುರಿತು ಚಿಂತಿಸಿರಿ. ನೀವು ಸನ್ಮಾರ್ಗದಲ್ಲಿದ್ದರೆ, ದಾರಿ ತಪ್ಪಿದವನಿಂದ ನಿಮಗೇನೂ ನಷ್ಟವಾಗದು. ಕೊನೆಗೆ ನೀವೆಲ್ಲರೂ ಅಲ್ಲಾಹನ ಬಳಿಗೇ ಮರಳುವಿರಿ. ನೀವು ಏನೆಲ್ಲ ಮಾಡುತ್ತಿದ್ದಿರೆಂಬುದನ್ನು (ಅಲ್ಲಿ) ಅವನು ನಿಮಗೆ ತಿಳಿಸುವನು.
106. ವಿಶ್ವಾಸಿಗಳೇ, ನಿಮ್ಮಲ್ಲಿ ಯಾರಾದರೊಬ್ಬರ ಮರಣವು ಸಮೀಪಿಸಿದ್ದರೆ, ಅವನು ಉಯಿಲನ್ನು ಬೋಧಿಸುವ ವೇಳೆ ನಿಮ್ಮೊಳಗಿನ ಇಬ್ಬರು ನ್ಯಾಯವಂತರು ಸಾಕ್ಷಿಗಳಾಗಲಿ. ಅಥವಾ, ನೀವು ಭೂಮಿಯಲ್ಲಿ ಪ್ರಯಾಣಿಸುತ್ತಿರುವಾಗ ನಿಮಗೆ ಮರಣದ ಆಪತ್ತು ಎದುರಾದರೆ, ನಿಮ್ಮ ಪಾಳಯದ ಹೊರಗಿನ ಇಬ್ಬರು (ಸಾಕ್ಷಿಗಳಾಗಲಿ). ನಿಮಗೆ ಸಂಶಯವಿದ್ದರೆ, ನೀವು ನಮಾಝ್‌ನ ಬಳಿಕ ಅವರನ್ನು ತಡೆದು ನಿಲ್ಲಿಸಿರಿ ಮತ್ತು ಅವರಿಬ್ಬರು ಅಲ್ಲಾಹನ ಆಣೆ ಹಾಕಿ ‘‘ನಾವು ಇದನ್ನು (ಸಾಕ್ಷವನ್ನು) ಯಾವುದೇ ಬೆಲೆಗೆ ಮಾರಲಾರೆವು – ವಿಷಯವು ಆಪ್ತರಿಗೆ ಸಂಬಂಧಿಸಿದ್ದಾದರೂ ಸರಿಯೇ. ಮತ್ತು ನಾವು ಅಲ್ಲಾಹನ ಸಾಕ್ಷವನ್ನು ಮರೆಮಾಚಲಾರೆವು. ಹಾಗೆ ಮಾಡಿದರೆ ನಾವು ಪಾಪಿಗಳಾಗುವೆವು’’ ಎಂದು ಪ್ರಮಾಣ ಮಾಡಲಿ.
107. ತರುವಾಯ ಅವರಿಬ್ಬರೂ ಸತ್ಯವನ್ನು ಮರೆಮಾಚುವ ಪಾಪ ಕೃತ್ಯವನ್ನು ಎಸಗಿರುವರೆಂದು ತಿಳಿದು ಬಂದರೆ, ಅವರ ಸ್ಥಾನದಲ್ಲಿ, ಹಕ್ಕುವಂಚಿತರ ಪೈಕಿ ಮೃತ ವ್ಯಕ್ತಿಗೆ ಹೆಚ್ಚು ನಿಕಟ ಬಂಧುಗಳಾಗಿರುವ ಇಬ್ಬರು ಸಾಕ್ಷಿಗಳಾಗಿ ನಿಲ್ಲಲಿ. ಅವರಿಬ್ಬರು ಅಲ್ಲಾಹನ ಆಣೆ ಹಾಕಿ, ‘‘ನಮ್ಮ ಸಾಕ್ಷವು ಅವರಿಬ್ಬರ ಸಾಕ್ಷಕ್ಕಿಂತ ಹೆಚ್ಚು ಪಕ್ವವಾಗಿದೆ. ನಾವು ಯಾವುದೇ ಅತಿರೇಕವನ್ನೆಸಗಿಲ್ಲ. ಒಂದು ವೇಳೆ ನಾವು ಹಾಗೆ ಮಾಡಿದರೆ, ನಾವು ಅಕ್ರಮಿಗಳ ಸಾಲಿಗೆ ಸೇರುವೆವು’’ ಎಂದು ಪ್ರಮಾಣ ಮಾಡಲಿ.
108. ಈ ರೀತಿ ಅವರು ಸರಿಯಾದ ಸಾಕ್ಷ ಹೇಳುವ ಅಥವಾ ತಮ್ಮ ಸಾಕ್ಷವು (ಇತರರ) ಸಾಕ್ಷದ ಮುಂದೆ ತಿರಸ್ಕೃತವಾದೀತೆಂದು ಅಂಜುವ ಸಾಧ್ಯತೆ ಅಧಿಕವಿದೆ. ಅಲ್ಲಾಹನಿಗೆ ಅಂಜಿರಿ ಹಾಗೂ ಆಲಿಸಿರಿ. ಅಲ್ಲಾಹನು ಅವಿಧೇಯರಿಗೆ ಸರಿದಾರಿಯನ್ನು ತೋರಿಸುವುದಿಲ್ಲ.
109. ಅಲ್ಲಾಹನು ಎಲ್ಲ ದೂತರನ್ನು ಒಂದೆಡೆ ಸೇರಿಸುವ ದಿನ, ಅವರೊಡನೆ, ‘‘ನಿಮಗೇನು ಉತ್ತರ ಸಿಕ್ಕಿತು?’’ ಎಂದು ಕೇಳುವನು. ಅವರು ‘‘ನಮಗೆ ತಿಳಿಯದು. ನೀನಂತು ಎಲ್ಲ ಗುಪ್ತ ವಿಚಾರಗಳನ್ನು ಖಚಿತವಾಗಿ ಬಲ್ಲವನಾಗಿರುವೆ’’ ಎನ್ನುವರು.
110. ಅಲ್ಲಾಹನು ಹೇಳಿದನು; ‘‘ಓ ಮರ್ಯಮರ ಪುತ್ರ ಈಸಾ! ನಿಮ್ಮ ಮೇಲೆ ಹಾಗೂ ನಿಮ್ಮ ತಾಯಿಯ ಮೇಲೆ ನಾನು ತೋರಿದ ಅನುಗ್ರಹವನ್ನು ಸ್ಮರಿಸಿರಿ. ನಾನು ಪವಿತ್ರ ಆತ್ಮ (ಜಿಬ್ರೀಲ್)ನ ಮೂಲಕ ನಿಮಗೆ ನೆರವಾದಾಗ, ನೀವು ತೊಟ್ಟಿಲಿಂದಲೂ, (ಆ ಬಳಿಕ) ಬೆಳೆದ ಬಳಿಕವೂ ಜನರೊಡನೆ ಮಾತನಾಡಿದಿರಿ. ಹಾಗೆಯೇ, ನಾನು ನಿಮಗೆ ಗ್ರಂಥ ಹಾಗೂ ಜಾಣ್ಮೆಯನ್ನು ಮತ್ತು ತೌರಾತ್ ಹಾಗೂ ಇಂಜೀಲ್‌ಗಳನ್ನು ಕಲಿಸಿಕೊಟ್ಟೆನು ಮತ್ತು ನೀವು ನನ್ನ ಆದೇಶದಂತೆ ಮಣ್ಣಿನಿಂದ ಪಕ್ಷಿಯ ರೂಪವನ್ನು ರಚಿಸಿದಿರಿ ಹಾಗೂ ನೀವು ಅದರೊಳಗೆ ಊದಿದಾಗ ಅದು ನನ್ನ ಆದೇಶದಂತೆ ಹಾರುವ ಪಕ್ಷಿಯಾಗಿ ಬಿಡುತ್ತಿತ್ತು. ಹಾಗೆಯೇ, ಹುಟ್ಟು ಕುರುಡರನ್ನು ಮತ್ತು ಕುಷ್ಠರೋಗಿಗಳನ್ನು ನೀವು ನನ್ನ ಆದೇಶದಂತೆ ಗುಣಪಡಿಸಿ ಬಿಡುತ್ತಿದ್ದಿರಿ. ಮತ್ತು ನನ್ನ ಆದೇಶದಂತೆ ನೀವು ಮೃತರನ್ನು (ಗೋರಿಯಿಂದ) ಜೀವಂತ ಹೊರತೆಗೆಯುತ್ತಿದ್ದಿರಿ. ನೀವು ಸ್ಪಷ್ಟ ಪುರಾವೆಗಳೊಂದಿಗೆ ಇಸ್ರಾಈಲರ ಸಂತತಿಗಳ ಬಳಿಗೆ ಬಂದಿದ್ದಾಗ (ನಿಮ್ಮ ಮೇಲೆ ಕೈ ಎತ್ತದಂತೆ) ಅವರನ್ನು ನಾನು ತಡೆದಿದ್ದೆನು. ಅವರಲ್ಲಿನ ಧಿಕ್ಕಾರಿಗಳು, ‘‘ಇದು ಸ್ಪಷ್ಟ ಮಾಟಗಾರಿಕೆಯಲ್ಲದೆ ಬೇರೇನೂ ಅಲ್ಲ’’ ಎಂದರು.
111. ನಾನು ಹವಾರಿಗಳಿಗೆ (ಈಸಾರ ಶಿಷ್ಯರಿಗೆ), ನನ್ನಲ್ಲೂ ನನ್ನ ದೂತರಲ್ಲೂ ನಂಬಿಕೆ ಇಡಿರಿ ಎಂಬ ದಿವ್ಯ ಸಂದೇಶವನ್ನು ಕಳಿಸಿದಾಗ ಅವರು ‘‘ನಾವು ನಂಬಿದೆವು. ನೀನು ಸಾಕ್ಷಿಯಾಗಿರು, ಖಂಡಿತವಾಗಿಯೂ ನಾವು ಮುಸ್ಲಿಮರಾದೆವು’’ ಎಂದಿದ್ದರು.
112. (ಮುಂದೆ) ಹವಾರಿಗಳು ‘‘ಓ ಮರ್ಯಮರ ಪುತ್ರ ಈಸಾ, ಆಕಾಶದಿಂದ ನಮಗೊಂದು ಭೋಜನ ತುಂಬಿದ ತಟ್ಟೆಯನ್ನು ಇಳಿಸಿಕೊಡಲು ನಿಮ್ಮ ಒಡೆಯನಿಗೆ ಸಾಧ್ಯವೆ?’’ ಎಂದು ಕೇಳಿದಾಗ ಅವರು (ಈಸಾ) ‘‘ನೀವು ಸತ್ಯದಲ್ಲಿ ನಂಬಿಕೆ ಉಳ್ಳವರಾಗಿದ್ದರೆ, ಅಲ್ಲಾಹನಿಗೆ ಅಂಜುತ್ತಲಿರಿ’’ ಎಂದರು.
113. ಅವರು (ಹವಾರಿಗಳು) ಹೇಳಿದರು; ‘‘ನಾವು ಅದರಿಂದ (ಆ ತಟ್ಟೆಯಿಂದ) ಉಣ್ಣುತ್ತಾ ನಮ್ಮ ಮನಸ್ಸುಗಳನ್ನು ತೃಪ್ತಿಪಡಿಸುತ್ತಿರಬೇಕು ಮತ್ತು ನೀವು ನಮ್ಮ ಮುಂದೆ ಸತ್ಯವನ್ನೇ ಹೇಳಿದ್ದಿರೆಂಬುದು ನಮಗೆ (ಖಚಿತವಾಗಿ) ತಿಳಿದು ನಾವು ಅದಕ್ಕೆ ಸಾಕ್ಷಿಗಳಾಗಬೇಕೆಂಬುದು ನಮ್ಮ ಅಪೇಕ್ಷೆಯಾಗಿದೆ’’
114. ಮರ್ಯಮರ ಪುತ್ರ ಈಸಾ ಹೇಳಿದರು; ‘‘ಓ ಅಲ್ಲಾಹ್, ನಮ್ಮೊಡೆಯಾ, ನಮಗೆ ಆಕಾಶದಿಂದ ಭೋಜನ ತುಂಬಿದ ಒಂದು ತಟ್ಟೆಯನ್ನು ಇಳಿಸಿಕೊಡು. ಅದು ನಮ್ಮ ಮೊದಲಿಗರಿಗೂ ಕೊನೆಯವರಿಗೂ ಸಂಭ್ರಮವಾಗಲಿ ಮತ್ತು ಅದು ನಿನ್ನ ವತಿಯಿಂದ ಒಂದು ಪುರಾವೆಯಾಗಲಿ. ನಮಗೆ ನೀನು ಆಹಾರವನ್ನು ದಯಪಾಲಿಸು. ನೀನೇ ಅತ್ಯುತ್ತಮ ಆಹಾರ ನೀಡುವವನು’’.
115. ಅಲ್ಲಾಹನು ಹೇಳಿದನು; ‘‘ನಾನು ಖಂಡಿತ ಅದನ್ನು ನಿಮಗೆ ಇಳಿಸಿಕೊಡುವೆನು. ಆದರೆ ಆ ಬಳಿಕವೂ ನಿಮ್ಮಲ್ಲಿ ಯಾರಾದರೂ ಧಿಕ್ಕಾರಿಯಾದರೆ, ಆತನಿಗೆ ನಾನು ಸರ್ವಜಗತ್ತಿನಲ್ಲಿ ಯಾರಿಗೂ ನೀಡಿಲ್ಲದ ಶಿಕ್ಷೆಯನ್ನು ನೀಡುವೆನು’’
116. (ಪರಲೋಕದಲ್ಲಿ) ಅಲ್ಲಾಹನು; ‘‘ಮರ್ಯಮರ ಪುತ್ರ ಈಸಾ, ನೀವೇನು ಜನರೊಡನೆ – ಅಲ್ಲಾಹನನ್ನು ಬಿಟ್ಟು ನನ್ನನ್ನು ಮತ್ತು ನನ್ನ ತಾಯಿಯನ್ನು ದೇವರಾಗಿಸಿಕೊಳ್ಳಿರಿ – ಎಂದು ಹೇಳಿದ್ದಿರಾ?’’ ಎಂದು ಕೇಳಿದಾಗ ಅವರು (ಈಸಾ) ಹೇಳುವರು; ‘‘ನೀನು ಪಾವನನು. ನನಗೆ ಹೇಳಲು ಹಕ್ಕೇ ಇಲ್ಲದಂತಹ ಮಾತನ್ನು ಹೇಳಲು ನನ್ನಿಂದ ಸಾಧ್ಯವಿಲ್ಲ. ಒಂದು ವೇಳೆ ನಾನು ಹಾಗೇನಾದರೂ ಹೇಳಿದ್ದರೆ ನಿನಗೆ ಅದರ ಅರಿವಿರುತ್ತಿತ್ತು. ನನ್ನ ಮನದೊಳಗೆ ಇರುವುದೆಲ್ಲವೂ ನಿನಗೆ ತಿಳಿದಿದೆ. ನಿನ್ನ ಮನದೊಳಗಿರುವ ಯಾವುದೂ ನನಗೆ ತಿಳಿಯದು. ನೀನಂತು ಎಲ್ಲ ಗುಪ್ತ ವಿಚಾರಗಳನ್ನೂ ಖಂಡಿತ ಬಲ್ಲವನು’’.
117. ‘‘ನೀನು ನನಗೆ ಆದೇಶಿಸಿರುವುದರ ಹೊರತು ಬೇರೇನನ್ನೂ ನಾನು ಅವರಿಗೆ ಹೇಳಿಲ್ಲ. – ನನ್ನ ಒಡೆಯನೂ ನಿಮ್ಮ ಒಡೆಯನೂ ಅಗಿರುವ ಅಲ್ಲಾಹನನ್ನೇ ಆರಾಧಿಸಿರಿ (ಎಂದಷ್ಟೇ ನಾನು ಹೇಳಿದ್ದೆ). ನಾನು ಅವರ ನಡುವೆ ಇದ್ದಷ್ಟು ಕಾಲ ಅವರ ವಿಷಯದಲ್ಲಿ ನಾನೇ ಸಾಕ್ಷಿಯಾಗಿದ್ದೆ. ತರುವಾಯ ನೀನು ನನ್ನನ್ನು ಮೇಲೆತ್ತಿಕೊಂಡ ಬಳಿಕ ನೀನೇ ಅವರ ಮೇಲ್ವಿಚಾರಕನಾಗಿದ್ದೆ. ನೀನಂತೂ ಪ್ರತಿಯೊಂದು ವಿಷಯಕ್ಕೂ ಸಾಕ್ಷಿಯಾಗಿರುವೆ’’
118. ‘‘ನೀನೀಗ ಅವರನ್ನು ಶಿಕ್ಷಿಸುವುದಾದರೆ, ಅವರು ನಿನ್ನ ದಾಸರು. ಇನ್ನು ನೀನು ಅವರನ್ನು ಕ್ಷಮಿಸುವುದಾದರೆ ನೀನಂತು ಪ್ರಚಂಡನೂ, ಯುಕ್ತಿವಂತನೂ ಆಗಿರುವೆ’’
119. ಅಲ್ಲಾಹನು ಹೇಳುವನು; ಇಂದಿನ ದಿನವು ಸತ್ಯವಂತರಿಗೆ ಅವರ ಸತ್ಯವು ಲಾಭವೊದಗಿಸುವ ದಿನವಾಗಿದೆ. ಅವರಿಗಾಗಿ, ತಳ ಭಾಗದಲ್ಲಿ ನದಿಗಳು ಹರಿಯುತ್ತಿರುವಂತಹ ತೋಟಗಳಿವೆ. ಅವರು ಸದಾಕಾಲ ಅವುಗಳಲ್ಲಿರುವರು. ಅಲ್ಲಾಹನು ಅವರಿಂದ ಸಂತುಷ್ಟನಾದನು ಮತ್ತು ಅವರು ಅಲ್ಲಾಹನಿಂದ ಸಂತುಷ್ಟರಾದರು. ಇದುವೇ ಮಹಾ ವಿಜಯ.
120. ಆಕಾಶಗಳ ಹಾಗೂ ಭೂಮಿಯ ಮತ್ತು ಅವುಗಳ ನಡುವೆ ಇರುವ ಎಲ್ಲವುಗಳ ಮಾಲಕತ್ವವು ಅಲ್ಲಾಹನಿಗೆ ಸೇರಿದೆ. ಅವನಂತು ಎಲ್ಲವನ್ನೂ ಮಾಡಬಲ್ಲನು.