07. Al Araf

7. ಅಲ್ ಅ್ರಾಫ್ (ಔನ್ನತ್ಯಗಳು)

ವಚನಗಳು – 206, ಮಕ್ಕಃ

ಅಲ್ಲಾಹನ ಹೆಸರಿಂದ – ಅವನು ಅಪಾರ ದಯಾಳು, ಕರುಣಾಮಯಿ.

 1. ಅಲಿಫ್ ಲಾಮ್ ಮ್ಮೀಮ್ ಸ್ವಾದ್.

2. (ದೂತರೇ,) ಈ ಗ್ರಂಥವನ್ನು ನಿಮ್ಮೆಡೆಗೆ ಇಳಿಸಿಕೊಡಲಾಗಿದೆ. ಈ ಕುರಿತು ನಿಮ್ಮ ಮನದಲ್ಲಿ ಯಾವುದೇ ಹಿಂಜರಿಕೆ ಇರಬಾರದು. ಏಕೆಂದರೆ ಈ ಮೂಲಕ ನೀವು (ಮಾನವ ಕುಲವನ್ನು) ಎಚ್ಚರಿಸಬೇಕಾಗಿದೆ ಮತ್ತು ಇದು ವಿಶ್ವಾಸಿಗಳ ಪಾಲಿಗೆ ಉಪದೇಶವಾಗಿದೆ.

3. (ಜನರೇ,) ನಿಮ್ಮ ಒಡೆಯನ ಕಡೆಯಿಂದ ನಿಮ್ಮೆಡೆಗೆ ಇಳಿಸಿಕೊಡಲಾಗಿರುವುದನ್ನು (ಕುರ್‌ಆನ್‌ಅನ್ನು) ಅನುಸರಿಸಿರಿ ಮತ್ತು ಅವನನ್ನು ಬಿಟ್ಟು ಇತರ ಪೋಷಕರನ್ನು ಅನುಸರಿಸಬೇಡಿ. ನೀವು ಉಪದೇಶ ಸ್ವೀಕರಿಸುವುದು ತೀರಾ ಕಡಿಮೆ.

4. ನಾವು ಅದೆಷ್ಟೋ ನಾಡುಗಳನ್ನು ನಾಶಗೊಳಿಸಿರುವೆವು – ನಮ್ಮ ಶಿಕ್ಷೆಯು ರಾತ್ರಿಯ ವೇಳೆ ಅಥವಾ ಹಗಲಲ್ಲಿ ಜನರು ವಿಶ್ರಾಂತಿ ಪಡೆಯುತ್ತಿದ್ದಾಗ ಹಠಾತ್ತನೆ ಬಂದೆರಗಿತ್ತು.

5. ನಮ್ಮ ಶಿಕ್ಷೆಯು ಅವರನ್ನು ತಲುಪಿದಾಗ ‘‘ನಿಜಕ್ಕೂ ನಾವು ಅಕ್ರಮಿಗಳಾಗಿದ್ದೆವು’’ ಎನ್ನುವುದನ್ನು ಬಿಟ್ಟರೆ ಬೇರೆ ಯಾವ ವಾದವೂ ಅವರ ಬಳಿ ಉಳಿದಿರಲಿಲ್ಲ.

6. ಯಾರೆಡೆಗೆ ದೂತರನ್ನು ಕಳಿಸಲಾಗಿತ್ತೋ ಅವರನ್ನು ನಾವು ಖಂಡಿತ ಪ್ರಶ್ನಿಸುವೆವು ಮತ್ತು ನಾವು ದೂತರನ್ನೂ ಖಂಡಿತ ಪ್ರಶ್ನಿಸುವೆವು.

7. ಖಂಡಿತವಾಗಿಯೂ ಜ್ಞಾನದ ಆಧಾರದಲ್ಲಿ ನಾವು, ನಡೆದುದೆಲ್ಲವನ್ನೂ ಅವರಿಗೆ ತಿಳಿಸುವೆವು – ನಾವು ಎಂದೂ ಅನುಪಸ್ಥಿತರಾಗಿರಲಿಲ್ಲ.

8. ಅಂದು (ಅಂತಿಮ ವಿಚಾರಣೆಯ ದಿನ) ಕರ್ಮಗಳ ತೂಕ ನಡೆಯುವುದು ಖಚಿತ ಸತ್ಯವಾಗಿದೆ. ಅಂದು ಯಾರ (ಸತ್ಕರ್ಮಗಳ) ಭಾರವು ಅಧಿಕವಾಗಿರುವುದೋ ಅವರೇ ವಿಜಯಿಗಳಾಗುವರು.

 9. ಮತ್ತು ಯಾರ (ಸತ್ಕರ್ಮಗಳ) ಭಾರವು ಕಡಿಮೆಯಾಗಿರುವುದೋ ಅವರೇ, ನಮ್ಮ ವಚನಗಳ ವಿಷಯದಲ್ಲಿ ಅಕ್ರಮವೆಸಗುವ ಮೂಲಕ ತಮಗೆ ತಾವೇ ನಷ್ಟವನ್ನುಂಟುಮಾಡಿಕೊಂಡವರು.

10. ನಾವು ನಿಮ್ಮನ್ನು ಭೂಮಿಯಲ್ಲಿ ನೆಲೆಸಿದೆವು ಮತ್ತು ಅದರಲ್ಲಿ ನಿಮಗೆ ವಿವಿಧ ಸಾಧನಗಳನ್ನು ಒದಗಿಸಿಕೊಟ್ಟೆವು. ಆದರೂ ನೀವು ಕೃತಜ್ಞತೆ ಸಲ್ಲಿಸುವುದು ತೀರಾ ಕಡಿಮೆ.

 11. ನಾವು ನಿಮ್ಮನ್ನು ಸೃಷ್ಟಿಸಿದೆವು, ಆ ಬಳಿಕ ನಿಮಗೆ ನಾವು ರೂಪವನ್ನು ಕೊಟ್ಟೆವು, ಆ ಬಳಿಕ ಮಲಕ್‌ಗಳೊಡನೆ, ಆದಮರ ಮುಂದೆ ಸಾಷ್ಟಾಂಗವೆರಗಿರಿ ಎಂದು ಹೇಳಿದೆವು. ಅವರೆಲ್ಲಾ ಸಾಷ್ಟಾಂಗವೆರಗಿದರು – ಆದರೆ ಇಬ್ಲೀಸನ (ಶೈತಾನನ) ಹೊರತು. ಅವನು ಮಾತ್ರ ಸಾಷ್ಟಾಂಗವೆರಗಿದವರ ಸಾಲಿಗೆ ಸೇರಲಿಲ್ಲ.

12. ನಾನು ನಿನಗೆ ಆದೇಶಿಸಿದಾಗ, ಸಾಷ್ಟಾಂಗವೆರಗದಂತೆ ನಿನ್ನನ್ನು ತಡೆದುದು ಯಾವುದು? ಎಂದು ಅವನು (ಅಲ್ಲಾಹನು) ಕೇಳಿದಾಗ ಅವನು (ಶೈತಾನನು) ಹೇಳಿದನು; ನಾನು ಅವನಿಗಿಂತ ಶ್ರೇಷ್ಠನು. ನನ್ನನ್ನು ನೀನು ಬೆಂಕಿಯಿಂದ ಸೃಷ್ಟಿಸಿರುವೆ ಮತ್ತು ಅವನನ್ನು ಮಣ್ಣಿನಿಂದ ಸೃಷ್ಟಿಸಿರುವೆ.

13. ಅವನು (ಅಲ್ಲಾಹನು) ಹೇಳಿದನು; ನೀನು ಇಲ್ಲಿಂದ ಇಳಿದು ಬಿಡು. ಇಲ್ಲಿ ದೊಡ್ಡಸ್ತಿಕೆ ಮೆರೆಯುವ ಯಾವ ಹಕ್ಕೂ ನಿನಗಿಲ್ಲ – ಹೊರಟು ಹೋಗು. ನೀನು ತೀರಾ ನೀಚನಾಗಿರುವೆ.

14. ಅವನು (ಶೈತಾನನು) ಹೇಳಿದನು; ಪುನರುತ್ಥಾನ ದಿನದ ತನಕ ನನಗೆ ಕಾಲಾವಕಾಶ ನೀಡು.

15. ಅವನು (ಅಲ್ಲಾಹನು) ಹೇಳಿದನು; ಖಂಡಿತವಾಗಿಯೂ ನಿನಗೆ ಕಾಲಾವಕಾಶ ನೀಡಲಾಯಿತು.

16. ಅವನು(ಶೈತಾನನು) ಹೇಳಿದನು; ‘‘ನೀನೀಗ ನನ್ನನ್ನು ದಾರಿ ತಪ್ಪಿದವನೆಂದು ತೀರ್ಮಾನಿಸಿರುವುದರಿಂದ ನಾನು ಅವರಿಗಾಗಿ (ಸರಿದಾರಿಯಲ್ಲಿ ಇರುವವರಿಗಾಗಿ) ನಿನ್ನ ನೇರ ಮಾರ್ಗದಲ್ಲಿ ಹೊಂಚು ಹಾಕುತ್ತಿರುತ್ತೇನೆ’’.

  17. ‘‘ಮಾತ್ರವಲ್ಲ, ಅವರ ಮುಂಭಾಗದಿಂದಲೂ, ಅವರ ಹಿಂಭಾಗದಿಂದಲೂ, ಅವರ ಬಲ ಭಾಗದಿಂದಲೂ, ಅವರ ಎಡ ಭಾಗದಿಂದಲೂ ನಾನು ಖಂಡಿತ ಅವರನ್ನು ತಲುಪುತ್ತೇನೆ. ಅವರಲ್ಲಿ ಹೆಚ್ಚಿನವರನ್ನು ನೀನು ಕೃತಜ್ಞರಾಗಿ ಕಾಣಲಾರೆ.’’

18. ಅವನು (ಅಲ್ಲಾಹನು) ಹೇಳಿದನು; ‘‘ನೀನು ನಿಂದಿತನಾಗಿಯೂ ಶಪಿತನಾಗಿಯೂ ಇಲ್ಲಿಂದ ಹೊರಟು ಹೋಗು. ಅವರ ಪೈಕಿ ನಿನ್ನನ್ನು ಅನುಸರಿಸುವವರಿಂದ ಮತ್ತು ನಿಮ್ಮೆಲ್ಲರಿಂದ ನಾನು ನರಕವನ್ನು ತುಂಬಲಿದ್ದೇನೆ.’’

 19. ‘‘ಇನ್ನು, ಓ ಆದಮ್, ನೀವು ಮತ್ತು ನಿಮ್ಮ ಪತ್ನಿ ಸ್ವರ್ಗದಲ್ಲಿ ನೆಲೆಸಿರಿ ಮತ್ತು ನೀವಿಬ್ಬರೂ (ಇಲ್ಲಿ) ನಿಮಗೆ ಇಷ್ಟವಾದುದನ್ನೆಲ್ಲಾ ತಿನ್ನಿರಿ. ಆದರೆ, ಆ ಮರದ ಹತ್ತಿರ ಹೋಗದಿರಿ – (ಹೋದರೆ) ನೀವಿಬ್ಬರೂ ಅಕ್ರಮಿಗಳಾಗುವಿರಿ.’’

 20. ಕೊನೆಗೆ ಅವರ ಪಾಲಿಗೆ ಗುಪ್ತವಾಗಿದ್ದ ಅವರ ಗುಪ್ತಾಂಗಗಳು ಅವರ (ಪರಸ್ಪರರ) ಮುಂದೆ ಪ್ರಕಟವಾಗಲೆಂದು ಶೈತಾನನು ಅವರಿಬ್ಬರ ಮನದಲ್ಲಿ ಸಂಶಯವನ್ನು ಬಿತ್ತಿದನು. ‘‘ನಿಮ್ಮ ಒಡೆಯನು ಆ ಮರದಿಂದ ನಿಮ್ಮಿಬ್ಬರನ್ನು ತಡೆದಿರುವುದು ನೀವಿಬ್ಬರೂ ಮಲಕ್‌ಗಳಾಗಬಾರದು ಅಥವಾ ಚಿರಂಜೀವಿಗಳಾಗಿ ಬಿಡಬಾರದು ಎಂಬ ಕಾರಣಕ್ಕಾಗಿ ಮಾತ್ರ’’ ಎಂದು ಅವನು (ಅವರೊಡನೆ) ಹೇಳಿದನು.

21. ಹಾಗೆಯೇ ಅವನು, ‘‘ಖಂಡಿತವಾಗಿಯೂ ನಾನು ನಿಮ್ಮ ಹಿತೈಷಿ’’ ಎಂದು ಅವರ ಮುಂದೆ ಆಣೆ ಹಾಕಿದನು.

 22. ಕೊನೆಗೆ ಅವನು ಮೋಸದಿಂದ ಅವರನ್ನು ಒಲಿಸಿಕೊಂಡನು ಮತ್ತು ಅವರಿಬ್ಬರೂ ಆ ಮರದ ಫಲವನ್ನು ಸವಿದಾಗ ಅವರ ಗುಪ್ತಾಂಗಗಳು ಅವರ (ಪರಸ್ಪರರ) ಮುಂದೆ ಪ್ರಕಟವಾಗಿ ಬಿಟ್ಟವು ಮತ್ತು ಅವರಿಬ್ಬರೂ ಸ್ವರ್ಗದ ಎಲೆಗಳಿಂದ ತಮ್ಮನ್ನು ಮುಚ್ಚಿಕೊಳ್ಳ ತೊಡಗಿದರು. (ಆಗ) ಅವರ ಒಡೆಯನು ಅವರನ್ನು ಕರೆದು ಹೇಳಿದನು; ನಾನು ನಿಮ್ಮನ್ನು ಆ ಮರದಿಂದ ತಡೆದಿರಲಿಲ್ಲವೇ? ಅಥವಾ ಶೈತಾನನು ನಿಮ್ಮಿಬ್ಬರ ಪಾಲಿಗೂ ಸ್ಪಷ್ಟ ಶತ್ರುವಾಗಿದ್ದಾನೆಂದು ನಾನು ನಿಮಗೆ ಹೇಳಿರಲಿಲ್ಲವೇ?

23. ಅವರಿಬ್ಬರೂ ಹೇಳಿದರು; ನಮ್ಮೊಡೆಯಾ! ನಾವು ನಮ್ಮ ಮೇಲೆಯೇ ಅಕ್ರಮವೆಸಗಿದೆವು. ನೀನು ನಮ್ಮನ್ನು ಕ್ಷಮಿಸದಿದ್ದರೆ ಮತ್ತು ನಮ್ಮ ಮೇಲೆ ಕರುಣೆ ತೋರದಿದ್ದರೆ ನಾವು ಖಂಡಿತ ನಷ್ಟಕ್ಕೊಳಗಾದವರ ಸಾಲಿಗೆ ಸೇರುವೆವು.

24. ಅವನು (ಅಲ್ಲಾಹನು) ಹೇಳಿದನು; ಇಳಿದು ಹೋಗಿರಿ. ನೀವು ಪರಸ್ಪರರ ಪಾಲಿಗೆ ಶತ್ರುಗಳು. ಒಂದು ನಿರ್ದಿಷ್ಟ ಕಾಲದ ತನಕ ನಿಮಗೆ ಭೂಮಿಯಲ್ಲಿ ನೆಲೆ ಇದೆ ಮತ್ತು ಸಾಧನಗಳಿವೆ.

25. ಅದರಲ್ಲೇ ನೀವು ಬದುಕುವಿರಿ, ಅದರಲ್ಲೇ ನೀವು ಸಾಯುವಿರಿ ಮತ್ತು ಅದರೊಳಗಿಂದಲೇ ನಿಮ್ಮನ್ನು ಹೊರತೆಗೆಯಲಾಗುವುದು.

26. ಆದಮ್‌ರ ಸಂತತಿಗಳೇ, ನಿಮಗೆ ನಾವು, ನಿಮ್ಮ ಮಾನದ ಭಾಗಗಳನ್ನು ಮುಚ್ಚುವ ಮತ್ತು ಅಲಂಕಾರವಾಗುವ ಉಡುಗೆಯನ್ನು ಇಳಿಸಿಕೊಟ್ಟಿರುವೆವು. ನಿಜವಾಗಿ ಧರ್ಮ ನಿಷ್ಠೆಯ ಉಡುಪೇ ಅತ್ಯುತ್ತಮ. ಇದು ಅವರು ಸ್ಮರಿಸುತ್ತಿರಲಿಕ್ಕಾಗಿ ಅಲ್ಲಾಹನು ಒದಗಿಸಿರುವ ಒಂದು ನಿದರ್ಶನ.

  27. ಆದಮ್‌ರ ಸಂತತಿಗಳೇ, ಶೈತಾನನು ನಿಮ್ಮ ತಂದೆ ತಾಯಿಯನ್ನು ಸ್ವರ್ಗದಿಂದ ಹೊರ ಹಾಕಿಸಿದಂತೆ (ಹಾಗೂ) ಅವರ ಮೇಲಿಂದ ಅವರ ಉಡುಗೆಗಳನ್ನು ಕಳಚಿಸಿ ಅವರ ಮಾನದ ಭಾಗಗಳನ್ನು ಅವರ ಮುಂದೆ ಪ್ರಕಟಪಡಿಸಿದಂತೆ ಅವನು ನಿಮ್ಮನ್ನು ದಾರಿಗೆಡಿಸದಿರಲಿ. ಖಂಡಿತವಾಗಿಯೂ, ಅವನು ಮತ್ತು ಅವನ ಪಂಗಡದವರು, ನಿಮಗೆ ಅವರನ್ನು ನೋಡಲಾಗದ ಕಡೆಯಿಂದ, ನಿಮ್ಮನ್ನು ನೋಡುತ್ತಿರುತ್ತಾರೆ. ನಾವಂತು ಶೈತಾನರನ್ನು, ವಿಶ್ವಾಸಿಗಳಲ್ಲದವರ ಪೋಷಕರಾಗಿಸಿದ್ದೇವೆ.

  28. ಅವರು ಯಾವುದಾದರೂ ಅಶ್ಲೀಲ ಕೆಲಸ ಮಾಡಿದಾಗ, ‘‘ನಮ್ಮ ಪೂರ್ವಜರನ್ನು ನಾವು ಇದೇ ದಾರಿಯಲ್ಲಿ ಕಂಡಿದ್ದೇವೆ ಮತ್ತು ಅಲ್ಲಾಹನು ಇದನ್ನು ನಮಗೆ ಆದೇಶಿಸಿದ್ದಾನೆ’’ ಎನ್ನುತ್ತಾರೆ. ಹೇಳಿರಿ; ಖಂಡಿತವಾಗಿಯೂ ಅಲ್ಲಾಹನು ಅಶ್ಲೀಲತೆಯನ್ನು ಆದೇಶಿಸುವುದಿಲ್ಲ. ನೀವೇನು, ನಿಮಗೆ ತಿಳಿದಿಲ್ಲದ್ದನ್ನು ಅಲ್ಲಾಹನ ಮೇಲೆ ಆರೋಪಿಸುತ್ತೀರಾ?

 29. ಹೇಳಿರಿ; ನನ್ನ ಒಡೆಯನು ನ್ಯಾಯವನ್ನೇ ಆದೇಶಿಸಿದ್ದಾನೆ. ನೀವಿನ್ನು ಪ್ರತಿಬಾರಿಯೂ ಸಾಷ್ಟಾಂಗವೆರಗುವಾಗ ನಿಮ್ಮ ಮುಖಗಳನ್ನು ಸರಿಯಾದ ದಿಕ್ಕಿನಲ್ಲಿಡಿರಿ ಮತ್ತು ಧರ್ಮವನ್ನು ಅವನಿಗೇ ಮೀಸಲಾಗಿಟ್ಟು (ಕೇವಲ ಅವನಿಗೆ ನಿಷ್ಠರಾಗಿ) ಅವನನ್ನು ಕೂಗಿರಿ. ಅವನು ಮೊದಲ ಬಾರಿಗೆ ನಿಮ್ಮನ್ನು ಸೃಷ್ಟಿಸಿದಂತೆಯೇ ನೀವು ಮತ್ತೆ ಸೃಷ್ಟಿಸಲ್ಪಡುವಿರಿ.

 30. ಅವನು ಒಂದು ಪಂಗಡಕ್ಕೆ ಮಾರ್ಗದರ್ಶನ ಮಾಡಿರುವನು ಮತ್ತು ಇನ್ನೊಂದು ಪಂಗಡವು ದಾರಿಗೆಟ್ಟಿರುವುದಕ್ಕೆ ಅರ್ಹವೆಂಬುದು ಸಾಬೀತಾಗಿದೆ. ಖಂಡಿತವಾಗಿಯೂ ಅವರು ಅಲ್ಲಾಹನನ್ನು ಬಿಟ್ಟು ಶೈತಾನನನ್ನು ತಮ್ಮ ಆಪ್ತಮಿತ್ರರಾಗಿಸಿಕೊಂಡಿರುವರು ಮತ್ತು ತಾವು ಸನ್ಮಾರ್ಗದಲ್ಲೇ ಇದ್ದೇವೆ ಎಂದುಕೊಂಡಿರುವರು.

 31. ಆದಮ್‌ರ ಸಂತತಿಗಳೇ, ನೀವು ನಿಮ್ಮ ಎಲ್ಲ ಆರಾಧನಾ ಸ್ಥಳಗಳಲ್ಲಿ ನಿಮ್ಮ ಅಲಂಕಾರಗಳನ್ನು ಧರಿಸಿರಿ. ತಿನ್ನಿರಿ ಮತ್ತು ಕುಡಿಯಿರಿ ಆದರೆ ಅಪವ್ಯಯ ಮಾಡದಿರಿ. ಖಂಡಿತವಾಗಿಯೂ ಅವನು ಅಪವ್ಯಯ ಮಾಡುವವರನ್ನು ಮೆಚ್ಚುವುದಿಲ್ಲ.

 32. ಹೇಳಿರಿ; ಅಲ್ಲಾಹನು ತನ್ನ ದಾಸರಿಗಾಗಿ ಉತ್ಪಾದಿಸಿರುವ ಅಲಂಕಾರ ಸಾಮಗ್ರಿಗಳನ್ನು ಮತ್ತು ಶುದ್ಧ ಆಹಾರ ವಸ್ತುಗಳನ್ನು ನಿಷೇಧಿಸಿರುವವರು ಯಾರು? ಹೇಳಿರಿ; ಇಹಲೋಕದಲ್ಲಿ ಇವು ವಿಶ್ವಾಸಿಗಳಿಗೆ ಸಮ್ಮತವಾಗಿವೆ – ಪರಲೋಕದಲ್ಲಂತೂ ಇವು ಅವರಿಗೆಂದೇ ಮೀಸಲಾಗಿರುತ್ತವೆ. ಈ ರೀತಿ ನಾವು ಅರಿವು ಉಳ್ಳವರಿಗಾಗಿ ನಮ್ಮ ವಚನಗಳನ್ನು ವಿವರಿಸುತ್ತೇವೆ.

 33. ಹೇಳಿರಿ; ವ್ಯಕ್ತ ಹಾಗೂ ಗುಪ್ತವಾದ ಎಲ್ಲ ಅಶ್ಲೀಲ ಕೃತ್ಯಗಳನ್ನು, ಪಾಪ ಕೃತ್ಯಗಳನ್ನು, ಅಕ್ರಮ ಬಲಪ್ರಯೋಗವನ್ನು, ಯಾವುದರ ಪರವಾಗಿ ಅಲ್ಲಾಹನು ಯಾವುದೇ ಪುರಾವೆಯನ್ನು ಇಳಿಸಿಲ್ಲವೋ ಅದನ್ನು, ಅಲ್ಲಾಹನ ಜೊತೆ ಪಾಲುಗೊಳಿಸುವುದನ್ನು ಮತ್ತು ಅಲ್ಲಾಹನ ಕುರಿತು ನಿಮಗೆ ತಿಳಿದಿಲ್ಲದ್ದನ್ನು ಹೇಳುವುದನ್ನು – ನನ್ನೊಡೆಯನು ನಿಷೇಧಿಸಿರುವನು.

 34. ಪ್ರತಿಯೊಂದು ಸಮುದಾಯಕ್ಕೂ ಒಂದು ಕಾಲಾವಧಿ ನಿಗದಿತವಾಗಿದೆ. ತಮ್ಮ ಅವಧಿ ಸಮೀಪಿಸಿದಾಗ ಅದನ್ನು ಕ್ಷಣಮಾತ್ರಕ್ಕಾದರೂ ಮುಂದೂಡಲು ಅಥವಾ ಹಿಂದೂಡಲು ಅವರಿಗೆ ಸಾಧ್ಯವಾಗದು.

35. ಆದಮ್‌ರ ಸಂತತಿಗಳೇ, ನಿಮ್ಮ ಬಳಿಗೆ, ನಿಮ್ಮೊಳಗಿಂದಲೇ, ನಿಮಗೆ ನನ್ನ ವಚನಗಳನ್ನು ಕೇಳಿಸುವ ದೂತರು ಬಂದಾಗ, ಧರ್ಮನಿಷ್ಠನಾಗಿ ತನ್ನ ಸುಧಾರಣೆ ಮಾಡಿಕೊಂಡವನು – ಅವರಿಗೆ ಯಾವ ಭಯವೂ ಇರದು ಮತ್ತು ಅವರು ದುಃಖಿಸಲಾರರು.

 36. ನಮ್ಮ ವಚನಗಳನ್ನು ಸುಳ್ಳೆಂದವರು ಮತ್ತು ಅದಕ್ಕೆದುರಾಗಿ ಅಹಂಕಾರ ತೋರಿದವರು – ಅವರೇ ನರಕವಾಸಿಗಳು. ಅವರು ಸದಾ ಕಾಲ ಅದರಲ್ಲೇ ಇರುವರು.

 37. ಅಲ್ಲಾಹನ ಮೇಲೆ ಸುಳ್ಳಾರೋಪ ಹೊರಿಸಿದ ಅಥವಾ ಅವನ ವಚನಗಳನ್ನು ಸುಳ್ಳೆಂದವನಿಗಿಂತ ದೊಡ್ಡ ಅಕ್ರಮಿ ಯಾರಿದ್ದಾನೆ? – ನಮ್ಮ (ಮರಣ) ದೂತರು ಅವರ ಬಳಿಗೆ ಬಂದು ಅವರನ್ನು ಸಾಯಿಸುವ ತನಕ, ವಿಧಿ ಗ್ರಂಥದಲ್ಲಿರುವ ಅವರ ಪಾಲು ಅವರಿಗೆ ಸಿಗುತ್ತಲೇ ಇರುವುದು. ಅವರು (ಮರಣ ದೂತರು) ‘‘ಅಲ್ಲಾಹನ ಹೊರತು ನೀವು ಪ್ರಾರ್ಥಿಸುತ್ತಿದ್ದವರೆಲ್ಲಾ ಎಲ್ಲಿದ್ದಾರೆ?’’ ಎಂದು ಕೇಳುವರು. ಅವರು ‘‘ಅವರು ನಮ್ಮಿಂದ ಕಳೆದು ಹೋಗಿರುವರು’’ ಎನ್ನುವರು ಮತ್ತು ತಾವು ಧಿಕ್ಕಾರಿಗಳಾಗಿದ್ದೆವೆಂದು ಅವರೇ ತಮ್ಮ ವಿರುದ್ಧ ಸಾಕ್ಷಿ ಹೇಳುವರು.

 38. ಅವನು (ಅಲ್ಲಾಹನು) ಹೇಳಿದನು; ನೀವು, ಜಿನ್ನ್ ಮತ್ತು ಮಾನವರ ಪೈಕಿ ನಿಮಗಿಂತ ಹಿಂದೆ ಗತಿಸಿದ ಸಮುದಾಯಗಳ ಜೊತೆ ನರಕಾಗ್ನಿಯನ್ನು ಪ್ರವೇಶಿಸಿರಿ. (ಅಲ್ಲಿಗೆ) ಪ್ರವೇಶಿಸುವ ಪ್ರತಿಯೊಂದು ಸಮುದಾಯವೂ ತನ್ನ ಸಂಗಾತಿ (ಪೂರ್ವ) ಸಮುದಾಯವನ್ನು ಶಪಿಸುವುದು. ಕೊನೆಗೆ ಅವರೆಲ್ಲರೂ ಅದರೊಳಗೆ ಸೇರುವರು. (ಅಲ್ಲಿ) ಮುಂದಿನವರು ಹಿಂದಿನವರ ಕುರಿತು – ‘‘ನಮ್ಮೊಡೆಯಾ! ಇವರೇ ನಮ್ಮನ್ನು ದಾರಿಗೆಡಿಸಿದವರು. ಇವರಿಗೆ ನರಕಾಗ್ನಿಯ ಇಮ್ಮಡಿ ಶಿಕ್ಷೆ ನೀಡು’’ ಎನ್ನುವರು. ಅವನು (ಅಲ್ಲಾಹನು) ಹೇಳುವನು; ಇಮ್ಮಡಿ ಶಿಕ್ಷೆ ಎಲ್ಲರಿಗೂ ಇದೆ. ಆದರೆ ನಿಮಗೆ ತಿಳಿದಿಲ್ಲ.’’

 39. ಅದರಲ್ಲಿನ ಹಿಂದಿನವರು, ಮುಂದಿನವರೊಡನೆ ‘‘ನಮ್ಮೆದುರು ನಿಮಗೆ ಯಾವ ಮೇಲ್ಮೆಯೂ ಇಲ್ಲ. ಈಗ, ನಿಮ್ಮ ಗಳಿಕೆಯ ಫಲವಾಗಿ ಯಾತನೆಯನ್ನು ಸವಿಯಿರಿ’’ ಎನ್ನುವರು.

 40. ಖಂಡಿತವಾಗಿಯೂ, ನಮ್ಮ ವಚನಗಳನ್ನು ಸುಳ್ಳೆಂದವರ ಮತ್ತು ಆ ಕುರಿತು ಅಹಂಕಾರ ತೋರಿದವರ ಪಾಲಿಗೆ ಆಕಾಶದ ಬಾಗಿಲುಗಳನ್ನು ತೆರೆಯಲಾಗದು ಮತ್ತು ಸೂಜಿಯ ರಂಧ್ರದೊಳಗೆ ಒಂಟೆಯು ಪ್ರವೇಶಿಸುವ ತನಕ ಅವರು ಸ್ವರ್ಗವನ್ನು ಪ್ರವೇಶಿಸಲಾರರು. ನಾವು ಇದೇ ರೀತಿ ಅಪರಾಧಿಗಳಿಗೆ ಪ್ರತಿಫಲವನ್ನು ನೀಡುತ್ತೇವೆ.

41. ಅವರ ಪಾಲಿಗೆ ನರಕದ ಭಾಗವೇ ಹಾಸಿಗೆ ಮತ್ತು ನರಕದ ಭಾಗವೇ ಹೊದಿಕೆಯಾಗಿರುವುದು. ನಾವು ಇದೇ ರೀತಿ ಅಕ್ರಮಿಗಳಿಗೆ ಪ್ರತಿಫಲವನ್ನು ನೀಡುತ್ತೇವೆ,

42. ವಿಶ್ವಾಸಿಗಳು ಮತ್ತು ಸತ್ಕರ್ಮ ಮಾಡಿದವರು (ತಿಳಿದಿರಲಿ) ನಾವು ಯಾರ ಮೇಲೂ ಅವರ ಸಾಮರ್ಥ್ಯವನ್ನು ಮೀರಿದ ಹೊರೆಯನ್ನು ಹೊರಿಸುವುದಿಲ್ಲ – ಅವರೇ ಸ್ವರ್ಗದವರು. ಅವರು ಸದಾ ಕಾಲ ಅದರಲ್ಲಿರುವರು.

43. ಅವರ ಮನದೊಳಗಿನ ವೈಷಮ್ಯಗಳನ್ನೆಲ್ಲಾ ನಾವು ತೊಲಗಿಸಿ ಬಿಡುವೆವು. ಅವರ ತಳದಲ್ಲಿ ನದಿಗಳು ಹರಿಯುತ್ತಿರುವವು. ಅವರು ‘‘ಎಲ್ಲ ಪ್ರಶಂಸೆಗಳು, ನಮಗೆ ಇದರತ್ತ ಮಾರ್ಗದರ್ಶನ ಮಾಡಿದ ಅಲ್ಲಾಹನಿಗೆ ಮೀಸಲು. ಅಲ್ಲಾಹನು ಮಾರ್ಗದರ್ಶನ ಮಾಡಿರದಿದ್ದರೆ ನಾವು ಸನ್ಮಾರ್ಗವನ್ನು ಪಡೆಯುತ್ತಿರಲಿಲ್ಲ. ನಮ್ಮ ಒಡೆಯನ ದೂತರು ಸತ್ಯದೊಂದಿಗೆ ನಮ್ಮ ಬಳಿಗೆ ಬಂದಿದ್ದರು’’ ಎನ್ನುವರು. ಇದಕ್ಕುತ್ತರವಾಗಿ, ‘‘ನಿಮ್ಮ ಕರ್ಮಗಳ ಫಲವಾಗಿ, ನೀವು ಸ್ವರ್ಗದ ವಾರಸುದಾರರಾಗುವಿರಿ.’’ ಎಂದು ಅವರನ್ನು ಕರೆದು ಹೇಳಲಾಗುವುದು.

44. ಸ್ವರ್ಗದವರು, ನರಕದವರನ್ನು ಕರೆದು ‘‘ನಮ್ಮ ಒಡೆಯನು ನಮಗೆ ನೀಡಿದ ವಾಗ್ದಾನಗಳೆಲ್ಲ ಸತ್ಯವಾಗಿರುವುದನ್ನು ನಾವು ಕಂಡುಕೊಂಡೆವು. ನಿಮ್ಮ ಒಡೆಯನ ವಾಗ್ದಾನಗಳೆಲ್ಲ ಸತ್ಯವಾಗಿರುವುದನ್ನು ನೀವು ಕಂಡಿರಾ? ಎಂದು ಕೇಳುವರು. ಅವರು ‘‘ಹೌದು’’ ಎನ್ನುವರು. ಆಗ ಅವರ ನಡುವೆ ಕೂಗುವವನೊಬ್ಬನು ಕೂಗಿ ಹೇಳುವನು; ‘‘ಅಲ್ಲಾಹನ ಶಾಪವಿದೆ ಅಕ್ರಮಿಗಳ ಮೇಲೆ.’’

45. ‘‘ಅವರು (ಜನರನ್ನು) ಅಲ್ಲಾಹನ ಮಾರ್ಗದಿಂದ ತಡೆಯುತ್ತಿದ್ದರು, ಅದರಲ್ಲಿ ವಕ್ರತೆಯನ್ನು ಹುಡುಕುತ್ತಿದ್ದರು ಮತ್ತು ಅವರು ಪರಲೋಕವನ್ನು ಧಿಕ್ಕರಿಸುವವರಾಗಿದ್ದರು.’’

46. ಆ ಎರಡು ವರ್ಗಗಳ ನಡುವೆ ಒಂದು ತೆರೆ ಇರುವುದು ಮತ್ತು ‘ಅಅ್ರಾಫ್’ನಲ್ಲಿ (ತೆರೆಯ ಮೇಲು ತುದಿಯಲ್ಲಿ) ಕೆಲವರು ಇರುವರು. ಅವರು ಪ್ರತಿಯೊಬ್ಬರನ್ನೂ ಅವರ ಮುಖದಿಂದಲೇ ಗುರುತಿಸುವರು. ಅವರು ಸ್ವರ್ಗದವರನ್ನು ಕರೆದು ‘‘ನಿಮಗೆ ಶಾಂತಿ ಸಿಗಲಿ’’ ಎನ್ನುವರು. ಅವರು ಆವರೆಗೂ ಅದನ್ನು (ಸ್ವರ್ಗವನ್ನು) ಪ್ರವೇಶಿಸಿರಲಾರರು, ಆದರೆ ಅದನ್ನು ನಿರೀಕ್ಷಿಸುತ್ತಿರುವರು.

47. ಇನ್ನು ಅವರ ದೃಷ್ಟಿಗಳು ನರಕದವರ ಕಡೆಗೆ ತಿರುಗಿದಾಗ ಅವರು ‘‘ನಮ್ಮೊಡೆಯಾ, ನಮ್ಮನ್ನು ಅಕ್ರಮಿಗಳ ಜೊತೆ ಸೇರಿಸಬೇಡ’’ ಎನ್ನುವರು.

48. ಮತ್ತು ‘ಅಅ್ರಾಫ್’ನವರು, ತಾವು ಮುಖದಿಂದಲೇ ಗುರುತಿಸಿದ ಕೆಲವರನ್ನು ಕರೆದು ಹೇಳುವರು; ನಿಮ್ಮ ಸಂಖ್ಯಾಬಲದಿಂದಾಗಲಿ, ನೀವು ಅಹಂಕಾರ ಪಡುತ್ತಿದ್ದ ವಸ್ತುಗಳಿಂದಾಗಲಿ ನಿಮಗೆ ಯಾವ ಲಾಭವೂ ಆಗಲಿಲ್ಲ.

 49. ಇವರಿಗೆ ಅಲ್ಲಾಹನು ತನ್ನ ಯಾವ ಅನುಗ್ರಹವನ್ನೂ ತಲುಪಿಸಲಾರನೆಂದು ನೀವು ಆಣೆ ಹಾಕಿ ಹೇಳುತ್ತಿದ್ದುದು ಇವರ (ಈ ಸ್ವರ್ಗವಾಸಿಗಳ) ಕುರಿತೇ ಅಲ್ಲವೇ? (ಇಂದು ಅವರೊಡನೆ) ‘‘ನೀವು ಸ್ವರ್ಗವನ್ನು ಪ್ರವೇಶಿಸಿರಿ. ನಿಮಗೆ ಯಾವ ಭಯವೂ ಇಲ್ಲ ಮತ್ತು ನೀವು ದುಃಖಿಸಲಾರಿರಿ’’ (ಎಂದು ಹೇಳಲಾಗಿದೆ).

 50. ಅತ್ತ ನರಕದವರು ಸ್ವರ್ಗದವರನ್ನು ಕೂಗಿ ‘‘ನಮ್ಮ ಕಡೆಗೆ ಒಂದಿಷ್ಟು ನೀರನ್ನು ಹರಿಸಿ ಬಿಡಿರಿ ಅಥವಾ ಅಲ್ಲಾಹನು ನಿಮಗೇನನ್ನು ನೀಡಿರುವನೋ ಅದರಿಂದ (ಒಂದಿಷ್ಟನ್ನು ನಮಗೆ ನೀಡಿರಿ)’’ ಎನ್ನುವರು. ಅವರು ಹೇಳುವರು; ‘‘ಖಂಡಿತವಾಗಿಯೂ ಅಲ್ಲಾಹನು ಅವುಗಳನ್ನು ಧಿಕ್ಕಾರಿಗಳ ಪಾಲಿಗೆ ನಿಷೇಧಿಸಿರುವನು.’’

51. ‘‘ಅವರು (ಧಿಕ್ಕಾರಿಗಳು) ತಮ್ಮ ಧರ್ಮವನ್ನು ಕೇವಲ ಆಟ ಹಾಗೂ ಮೋಜಿನ ವಿಷಯವಾಗಿ ಪರಿಗಣಿಸಿದ್ದರು ಮತ್ತು ಲೌಕಿಕ ಜೀವನವು ಅವರನ್ನು ವಂಚನೆಗೆ ಒಳಪಡಿಸಿತ್ತು. ಅವರು ಈ ದಿನದ ಭೇಟಿಯನ್ನು ಮರೆತಂತೆ ಇಂದು ನಾವು ಅವರನ್ನು ಮರೆತಿರುವೆವು. ಅವರು ನಮ್ಮ ವಚನಗಳನ್ನು ಧಿಕ್ಕರಿಸುತ್ತಿದ್ದರು.’’

52. ನಾವು ಅವರ ಬಳಿಗೆ ಒಂದು ಗ್ರಂಥವನ್ನು ತಲುಪಿಸಿರುವೆವು. ಅದನ್ನು ನಾವು ಜ್ಞಾನದ ಆಧಾರದಲ್ಲಿ ಸಾಕಷ್ಟು ವಿಶಾಲಗೊಳಿಸಿರುವೆವು. ನಂಬುವವರ ಪಾಲಿಗೆ ಅದು ಮಾರ್ಗದರ್ಶಿ ಹಾಗೂ ಅನುಗ್ರಹವಾಗಿದೆ.

 53. ಅವರು ಕಾಯುತ್ತಿರುವುದು, ಅದರ (ಲೋಕಾಂತ್ಯದ ಕುರಿತಾದ ಭವಿಷ್ಯ ವಾಣಿಗಳ) ಈಡೇರಿಕೆಯನ್ನಲ್ಲದೆ ಮತ್ತೇನನ್ನು? ನಿಜವಾಗಿ, ಅದರ ಈಡೇರಿಕೆಯ ದಿನ ಬಂದಾಗ, ಹಿಂದೆ ಅದನ್ನು ಮರೆತಿದ್ದವರು, ‘‘ನಮ್ಮ ಒಡೆಯನ ದೂತರು ಖಂಡಿತ ಸತ್ಯದೊಂದಿಗೇ ಬಂದಿದ್ದರು. (ಈಗ) ನಮ್ಮ ಪರವಾಗಿ ಶಿಫಾರಸು ಮಾಡಲು ಶಿಫಾರಸುದಾರರು ಯಾರಾದರೂ ಇದ್ದಾರೆಯೇ? ಅಥವಾ ನಾವು ಹಿಂದೆ ಮಾಡುತ್ತಿದ್ದುದಕ್ಕಿಂತ ಭಿನ್ನವಾದ ಕರ್ಮಗಳನ್ನು ಮಾಡುವಂತಾಗಲು, ನಮ್ಮನ್ನು ಮರಳಿಸಲಾಗುವುದೇ?’’ ಎನ್ನುವರು. ಖಂಡಿತವಾಗಿಯೂ ಅವರು ಸ್ವತಃ ತಮ್ಮನ್ನು ನಷ್ಟಕ್ಕೆ ಒಳಪಡಿಸಿಕೊಂಡರು ಮತ್ತು ಅವರು ಕಟ್ಟಿಕೊಂಡಿದ್ದ ಸುಳ್ಳುಗಳೆಲ್ಲಾ ಅವರಿಂದ ಕಳೆದು ಹೋದವು.

 54. ನಿಮ್ಮ ಒಡೆಯನಾದ ಅಲ್ಲಾಹನೇ ಆರು ದಿನಗಳಲ್ಲಿ ಆಕಾಶಗಳನ್ನು ಮತ್ತು ಭೂಮಿಯನ್ನು ಸೃಷ್ಟಿಸಿದವನು. ತರುವಾಯ ಅವನು ವಿಶ್ವ ಸಿಂಹಾಸನದಲ್ಲಿ ಆಸೀನನಾದನು. ಅವನು ರಾತ್ರಿಯನ್ನು ಹಗಲಿನ ಮೇಲೆ ಆವರಿಸುತ್ತಾನೆ – ಅದು (ಹಗಲು) ಅದರ (ರಾತ್ರಿಯ) ಬೆನ್ನಿಗೇ ಧಾವಿಸಿ ಬರುತ್ತದೆ. ಇನ್ನು, ಸೂರ್ಯ ಮತ್ತು ಚಂದ್ರ ಹಾಗೂ ನಕ್ಷತ್ರಗಳು ಅವನ ಆದೇಶದಂತೆ ನಿಯಂತ್ರಿತವಾಗಿವೆ. ತಿಳಿದಿರಲಿ; ಸೃಷ್ಟಿಯೆಲ್ಲವೂ ಅವನಿಗೇ ಸೇರಿದೆ ಮತ್ತು ಅಧಿಕಾರವೂ ಅವನದೇ. ಸರ್ವಲೋಕಗಳ ಒಡೆಯನಾದ ಅಲ್ಲಾಹನು ತುಂಬಾ ಸಮೃದ್ಧನು.

55. ಭಯ ಮತ್ತು ವಿನಯದೊಂದಿಗೆ ನಿಮ್ಮ ಒಡೆಯನನ್ನು ಕರೆದು ಪ್ರಾರ್ಥಿಸಿರಿ. ಖಂಡಿತವಾಗಿಯೂ ಅವನು ಮಿತಿಮೀರುವವರನ್ನು ಮೆಚ್ಚುವುದಿಲ್ಲ.

56. ಭೂಮಿಯಲ್ಲಿ ಸುಧಾರಣೆ ಆದ ಬಳಿಕ, ಅಶಾಂತಿಯನ್ನು ಹರಡಬೇಡಿ. ಭಯ ಮತ್ತು ನಿರೀಕ್ಷೆಯೊಂದಿಗೆ ಅವನನ್ನು (ಅಲ್ಲಾಹನನ್ನು) ಕೂಗಿ ಪ್ರಾರ್ಥಿಸಿರಿ. ಖಂಡಿತವಾಗಿಯೂ ಅಲ್ಲಾಹನ ಅನುಗ್ರಹವು ಸತ್ಕರ್ಮಿಗಳಿಗೆ ನಿಕಟವಾಗಿರುತ್ತದೆ.

 57. ಅವನೇ (ಅಲ್ಲಾಹನೇ) ತನ್ನ ಅನುಗ್ರಹಕ್ಕೆ (ಮಳೆಗೆ) ಮುನ್ನ, ಶುಭವಾರ್ತೆಯಾಗಿ ಗಾಳಿಯನ್ನು ಕಳುಹಿಸುವವನು. ಕೊನೆಗೆ ಅವು (ನೀರಿಂದ) ಭಾರವಾದ ಮೋಡಗಳನ್ನು ಹೊತ್ತು ತಂದಾಗ ನಾವು ಅವುಗಳನ್ನು ನಿರ್ಜೀವ ನಾಡಿನೆಡೆಗೆ ಒಯ್ಯುತ್ತೇವೆ ಮತ್ತು ಅವುಗಳಿಂದ ನೀರನ್ನು ಸುರಿಸುತ್ತೇವೆ ಹಾಗೂ ಅದರ ಮೂಲಕ ನಾವು ಎಲ್ಲ ಬಗೆಯ ಫಲಗಳನ್ನು ಹೊರತರುತ್ತೇವೆ – ಇದೇ ರೀತಿ ನಾವು ಮೃತರನ್ನು (ಜೀವಂತ) ಹೊರ ತರಲಿದ್ದೇವೆ – ನೀವು ಪಾಠ ಕಲಿಯಬೇಕೆಂದು (ಇದನ್ನು ಹೇಳಲಾಗುತ್ತಿದೆ).

58. ಶುದ್ಧ ನೆಲದಿಂದ, ಅದರ ಒಡೆಯನ ಆದೇಶದಂತೆ, ಉಪಯುಕ್ತ ಬೆಳೆಯು ಉತ್ಪನ್ನವಾಗುತ್ತದೆ. ಆದರೆ ಅಶುದ್ಧ ನೆಲವು ಕೇವಲ ಕಸಕಡ್ಡಿಗಳನ್ನು ಉತ್ಪಾದಿಸುತ್ತದೆ. ಈ ರೀತಿ ನಾವು ಕೃತಜ್ಞ ಜನರಿಗಾಗಿ ನಮ್ಮ ವಚನಗಳನ್ನು ವಿವಿಧ ರೂಪಗಳಲ್ಲಿ ವಿವರಿಸುತ್ತೇವೆ.

59. ನಾವು ನೂಹರನ್ನು ಅವರ ಜನಾಂಗದೆಡೆಗೆ ಕಳುಹಿಸಿದ್ದೆವು. ಅವರು ಹೇಳಿದರು; ನನ್ನ ಜನಾಂಗದವರೇ, ಅಲ್ಲಾಹನನ್ನು ಆರಾಧಿಸಿರಿ. ನಿಮಗೆ ಅವನ ಹೊರತು ಬೇರಾವ ದೇವರೂ ಇಲ್ಲ. ನೀವು ಒಂದು ಮಹಾ ದಿನದ ಶಿಕ್ಷೆಗೆ ತುತ್ತಾಗುವ ಭಯ ನನಗಿದೆ.

60. ಅವರ ಜನಾಂಗದ ಕೆಲವು ನಾಯಕರು ‘‘ನಾವು ನಿಮ್ಮನ್ನು ಸ್ಪಷ್ಟವಾಗಿ ದಾರಿಗೆಟ್ಟ ಸ್ಥಿತಿಯಲ್ಲಿ ಕಾಣುತ್ತಿದ್ದೇವೆ.’’ ಎಂದರು.

61. ಅವರು (ನೂಹರು) ಹೇಳಿದರು; ನನ್ನ ಜನಾಂಗದವರೇ, ನಾನೇನೂ ದಾರಿಗೆಟ್ಟಿಲ್ಲ. ನಿಜವಾಗಿ ನಾನು ಸರ್ವಲೋಕಗಳ ಒಡೆಯನ ದೂತನಾಗಿದ್ದೇನೆ.

62. ನಾನು ನನ್ನ ಒಡೆಯನ ಸಂದೇಶಗಳನ್ನು ನಿಮಗೆ ತಲುಪಿಸುತ್ತಿದ್ದೇನೆ. ನಾನು ನಿಮ್ಮ ಹಿತೈಷಿಯಾಗಿದ್ದೇನೆ ಮತ್ತು ಅಲ್ಲಾಹನ ಕಡೆಯಿಂದ, ನಿಮಗೆ ತಿಳಿದಿಲ್ಲದ ವಿಷಯಗಳು ನನಗೆ ತಿಳಿದಿವೆ.

63. ನಿಮ್ಮನ್ನು ಎಚ್ಚರಿಸಲಿಕ್ಕಾಗಿ, ನಿಮ್ಮನ್ನು ಧರ್ಮನಿಷ್ಠರಾಗಿಸಲಿಕ್ಕಾಗಿ ಮತ್ತು ನೀವು ಕರುಣೆಗೆ ಪಾತ್ರರಾಗುವುದಕ್ಕಾಗಿ, ನಿಮ್ಮ ಒಡೆಯನ ಉಪದೇಶವು ನಿಮ್ಮಾಳಗಿನ ಒಬ್ಬ ವ್ಯಕ್ತಿಯ ಬಳಿಗೆ ಬಂದಿರುವ ಕುರಿತು ನೀವೇನು ಅಚ್ಚರಿ ಪಡುತ್ತೀರಾ?

64. ಅವರು (ನೂಹರ ಜನಾಂಗದವರು) ಅವರನ್ನು ಸುಳ್ಳುಗಾರನೆಂದು ತಿರಸ್ಕರಿಸಿದರು ಮತ್ತು ನಾವು ಅವರನ್ನು ಹಾಗೂ ಹಡಗಿನಲ್ಲಿ ಅವರ ಜೊತೆಗಿದ್ದವರನ್ನು ರಕ್ಷಿಸಿದೆವು. ಇನ್ನು, ನಮ್ಮ ವಚನಗಳನ್ನು ಸುಳ್ಳೆಂದು ತಿರಸ್ಕರಿಸಿದವರನ್ನು ನಾವು ಮುಳುಗಿಸಿಬಿಟ್ಟೆವು. ಖಂಡಿತವಾಗಿಯೂ ಅವರು (ಸತ್ಯದ ಪಾಲಿಗೆ) ಒಂದು ಕುರುಡ ಜನಾಂಗವಾಗಿದ್ದರು.

65. ಅತ್ತ, ಆದ್ ಜನಾಂಗದೆಡೆಗೆ ನಾವು ಅವರ ಸಹೋದರ ಹೂದ್‌ರನ್ನು ಕಳಿಸಿದೆವು. ಅವರು ಹೇಳಿದರು; ನನ್ನ ಜನಾಂಗದವರೇ, ಅಲ್ಲಾಹನನ್ನೇ ಆರಾಧಿಸಿರಿ. ಅವನ ಹೊರತು ನಿಮಗೆ ಬೇರಾವ ದೇವರೂ ಇಲ್ಲ. ನೀವೇನು ಅಂಜುವುದಿಲ್ಲವೇ?

66. ಅವರ ಜನಾಂಗದಲ್ಲಿನ ಕೆಲವು ಧಿಕ್ಕಾರಿ ನಾಯಕರು ಹೇಳಿದರು; ಖಂಡಿತವಾಗಿಯೂ ನಾವು ನಿಮ್ಮನ್ನು ಮೂರ್ಖತನದಲ್ಲಿ ಕಾಣುತ್ತಿದ್ದೇವೆ ಮತ್ತು ಖಂಡಿತವಾಗಿಯೂ ನಾವು ನಿಮ್ಮನ್ನು ಸುಳ್ಳುಗಾರರೆಂದು ಭಾವಿಸುತ್ತೇವೆ.

67. ಅವರು (ಹೂದ್) ಹೇಳಿದರು; ನನ್ನಲ್ಲಿ ಯಾವುದೇ ಮೂರ್ಖತನವಿಲ್ಲ. ನಿಜವಾಗಿ ನಾನು ಸರ್ವ ಲೋಕಗಳ ಒಡೆಯನ ದೂತನಾಗಿದ್ದೇನೆ.

68. ನಾನು ನಿಮಗೆ ನನ್ನ ಒಡೆಯನ ಸಂದೇಶಗಳನ್ನು ತಲುಪಿಸುತ್ತಿದ್ದೇನೆ ಮತ್ತು ನಿಮ್ಮ ಪಾಲಿಗೆ ನಾನು ಒಬ್ಬ ನಂಬಲರ್ಹ ಹಿತೈಷಿಯಾಗಿದ್ದೇನೆ.

 69. ನೀವೇನು, ನಿಮ್ಮನ್ನು ಎಚ್ಚರಿಸಲು, ನಿಮ್ಮ ಒಡೆಯನ ಉಪದೇಶವು ನಿಮ್ಮಳಗಿನ ಒಬ್ಬ ವ್ಯಕ್ತಿಯ ಬಳಿಗೆ ಬಂದಿರುವ ಕುರಿತು ಅಚ್ಚರಿಪಡುತ್ತೀರಾ? ಸ್ಮರಿಸಿರಿ; ನೂಹರ ಜನಾಂಗದ ಬಳಿಕ, ಅವನು (ಅಲ್ಲಾಹನು) ನಿಮ್ಮನ್ನು ಉತ್ತರಾಧಿಕಾರಿಗಳಾಗಿ ಮಾಡಿದನು ಮತ್ತು ರಚನೆಯಲ್ಲಿ ನಿಮಗೆ ಶ್ರೇಷ್ಠತೆಯನ್ನು ನೀಡಿದನು. ಅಲ್ಲಾಹನ ಅನುಗ್ರಹಗಳನ್ನು ಸ್ಮರಿಸಿರಿ – ನೀವು ವಿಜಯಿಗಳಾಗಬಹುದು.

 70. ಅವರು ಹೇಳಿದರು; ನೀವೇನು, ಅಲ್ಲಾಹನೊಬ್ಬನನ್ನು ಮಾತ್ರ ನಾವು ಪೂಜಿಸಬೇಕು ಮತ್ತು ನಮ್ಮ ಪೂರ್ವಜರು ಪೂಜಿಸುತ್ತಿದ್ದವುಗಳನ್ನೆಲ್ಲಾ ಬಿಟ್ಟು ಬಿಡಬೇಕೆಂದು ಹೇಳಲು ನಮ್ಮ ಬಳಿಗೆ ಬಂದಿರುವಿರಾ ? ನೀವು ಸತ್ಯವಂತರಾಗಿದ್ದರೆ, ಯಾವುದು ಬರಲಿದೆ ಎಂದು ನಮ್ಮೆಡನೆ ನೀವು ಹೇಳುತ್ತಿರುವಿರೋ ಅದನ್ನು ತಂದು ಬಿಡಿ.

71. ಅವರು (ಹೂದ್) ಹೇಳಿದರು; ಇದೋ, ನಿಮ್ಮ ಮೇಲೆ ಬಂದೆರಗಿತು ನಿಮ್ಮ ಒಡೆಯನ ಶಿಕ್ಷೆ ಮತ್ತು ಅವನ ಆಕ್ರೋಶ. ನೀವೇನು, ನೀವು ಮತ್ತು ನಿಮ್ಮ ಪೂರ್ವಜರು ಇಟ್ಟುಕೊಂಡಿರುವ ಕೇವಲ ಕೆಲವು ಹೆಸರುಗಳ ಕುರಿತು ನನ್ನೊಡನೆ ಜಗಳಾಡುತ್ತಿರುವಿರಾ? ನಿಜವಾಗಿ ಅವುಗಳ ಪರವಾಗಿ ಅಲ್ಲಾಹನು ಯಾವ ಪುರಾವೆಯನ್ನೂ ಇಳಿಸಿಲ್ಲ. ಇದೀಗ ಕಾಯಿರಿ, ನಿಮ್ಮ ಜೊತೆ ನಾನೂ ಕಾಯುತ್ತೇನೆ.

72. ಕೊನೆಗೆ ನಾವು ನಮ್ಮ ಅನುಗ್ರಹದಿಂದ, ಅವರನ್ನು (ಹೂದ್‌ರನ್ನು) ಮತ್ತು ಅವರ ಜೊತೆಗೆ ಇದ್ದವರನ್ನು ರಕ್ಷಿಸಿದೆವು ಮತ್ತು ನಮ್ಮ ವಚನಗಳನ್ನು ಸುಳ್ಳೆಂದು ತಿರಸ್ಕರಿಸಿದವರ ಮೂಲವನ್ನೇ ಕಡಿದು ಹಾಕಿದೆವು. ಅವರು ನಂಬುವವರಂತು ಆಗಿರಲಿಲ್ಲ.

 73. ಹಾಗೆಯೇ, ಸಮೂದ್ ಜನಾಂಗದೆಡೆಗೆ ನಾವು ಅವರ ಸಹೋದರ ಸಾಲಿಹ್‌ರನ್ನು ಕಳುಹಿಸಿದೆವು. ಅವರು ಹೇಳಿದರು; ನನ್ನ ಜನಾಂಗದವರೇ, ಅಲ್ಲಾಹನನ್ನು ಮಾತ್ರ ಪೂಜಿಸಿರಿ ಅವನ ಹೊರತು ನಿಮಗೆ ಬೇರೆ ದೇವರಿಲ್ಲ. ಇದೀಗ ನಿಮ್ಮೊಡೆಯನ ಕಡೆಯಿಂದ ನಿಮ್ಮ ಬಳಿಗೆ ಒಂದು ಸ್ಪಷ್ಟ ಪುರಾವೆಯು ಬಂದಿದೆ. ಇದು ಅಲ್ಲಾಹನ ಹೆಣ್ಣೊಂಟೆ. ಇದು ನಿಮ್ಮ ಪಾಲಿಗೊಂದು ಸೂಚನೆಯಾಗಿದೆ. ಇದನ್ನು ಇದರ ಪಾಡಿಗೆ ಬಿಟ್ಟು ಬಿಡಿರಿ – ಇದು ಅಲ್ಲಾಹನ ಭೂಮಿಯಲ್ಲಿ ಮೇಯುತ್ತಿರಲಿ. ಕೆಟ್ಟ ಸಂಕಲ್ಪದಿಂದ ಇದನ್ನು ಮುಟ್ಟಬೇಡಿ (ಮುಟ್ಟಿದರೆ) ಭಾರೀ ಕಠಿಣ ಶಿಕ್ಷೆಯು ನಿಮ್ಮನ್ನು ಆವರಿಸಲಿದೆ.

74. ನೆನಪಿಸಿಕೊಳ್ಳಿರಿ; ಅವನು (ಅಲ್ಲಾಹನು)ಆದ್ ಜನಾಂಗದ ಬಳಿಕ ನಿಮ್ಮನ್ನು ಉತ್ತರಾಧಿಕಾರಿಗಳಾಗಿ ಮಾಡಿದನು ಹಾಗೂ ಅವನು ನಿಮಗೆ ಭೂಮಿಯಲ್ಲಿ ನೆಲೆಯನ್ನು ಒದಗಿಸಿದನು. ನೀವೀಗ ಅದರ ಬಯಲು ಪ್ರದೇಶಗಳಲ್ಲಿ ಅರಮನೆಗಳನ್ನು ನಿರ್ಮಿಸುತ್ತೀರಿ ಮತ್ತು ಬೆಟ್ಟಗಳನ್ನು ಕೊರೆದು ನಿವಾಸಗಳನ್ನು ರಚಿಸುತ್ತೀರಿ. ಅಲ್ಲಾಹನ ಕೊಡುಗೆ ಗಳನ್ನು ಸ್ಮರಿಸಿರಿ ಮತ್ತು ಭೂಮಿಯಲ್ಲಿ ಅಶಾಂತಿಯನ್ನು ಹಬ್ಬುವವರಾಗಿ ಅಲೆಯಬೇಡಿ.

75. ಅವರ ಜನಾಂಗದ ಅಹಂಕಾರಿ ನಾಯಕರು, ಸತ್ಯವನ್ನು ನಂಬಿದ್ದ ತಮ್ಮ ಜನಾಂಗದ ಮರ್ದಿತರೊಡನೆ, ‘‘ಸಾಲಿಹ್, ತನ್ನ ಒಡೆಯನ ಕಡೆಯಿಂದ ಕಳುಹಿಸಲ್ಪಟ್ಟವನೆಂದು ನಿಮಗೆ ಗೊತ್ತೇ?’’ ಎಂದು ಕೇಳಿದರು. ಅವರು; ‘‘ಖಂಡಿತವಾಗಿಯೂ, ಅವರನ್ನು ಯಾವುದರ ಜೊತೆ ಕಳುಹಿಸಲಾಗಿದೆಯೋ ಅದನ್ನು ನಾವು ನಂಬಿರುವೆವು.’’ ಎಂದು ಉತ್ತರಿಸಿದರು.

76. ಅಹಂಕಾರಿಗಳು; ‘‘ನೀವು ನಂಬಿರುವುದನ್ನು ನಾವು ಧಿಕ್ಕರಿಸುತ್ತೇವೆ.’’ ಎಂದರು.

77. ಮುಂದೆ, ಅವರು ಆ ಹೆಣ್ಣೊಂಟೆಯನ್ನು ಕೊಂದು ಬಿಟ್ಟರು ಹಾಗೂ ತಮ್ಮ ಒಡೆಯನ ಆದೇಶವನ್ನು ಮೀರಿ ನಡೆದರು ಮತ್ತು ಹೇಳಿದರು; ‘‘ಓ ಸಾಲಿಹ್, ನಿಜಕ್ಕೂ ನೀನೊಬ್ಬ ದೇವದೂತನಾಗಿದ್ದರೆ, ನೀನು ನಮಗೆ ವಾಗ್ದಾನ ಮಾಡುತ್ತಿದ್ದುದನ್ನು ನಮ್ಮ ಬಳಿಗೆ ತಂದು ಬಿಡು.’’

78. ಕೊನೆಗೆ, ಭೀಕರ ಭೂಕಂಪವೊಂದು ಅವರನ್ನು ಆವರಿಸಿಕೊಂಡಿತು ಮತ್ತು ಅವರು ತಮ್ಮ ನಿವಾಸಗಳಲ್ಲೇ ನಿಶ್ಚಲ ಶವಗಳಾಗಿ ಬಿದ್ದುಕೊಂಡಿದ್ದರು.

 79. ಸಾಲಿಹ್‌ರು ಅವರನ್ನು ಕಡೆಗಣಿಸಿದರು ಮತ್ತು ‘‘ನನ್ನ ಜನಾಂಗದವರೇ, ನಾನು ನನ್ನ ಒಡೆಯನ ಸಂದೇಶವನ್ನು ನಿಮಗೆ ತಲುಪಿಸಿದೆನು ಮತ್ತು ನಾನು ನಿಮ್ಮ ಹಿತೈಷಿಯಾಗಿದ್ದೆನು. ಆದರೆ ನೀವು ಹಿತೈಷಿಗಳನ್ನು ಪ್ರೀತಿಸುವುದಿಲ್ಲ.’’ ಎಂದರು.

80. ಇನ್ನು ಲೂತ್, ತಮ್ಮ ಜನಾಂಗದವರೊಡನೆ ಹೇಳಿದರು; ‘‘ನೀವೇನು ಸರ್ವಲೋಕದಲ್ಲಿ ನಿಮಗಿಂತ ಮೊದಲು ಯಾರೂ ಮಾಡಿಲ್ಲದ ಅಶ್ಲೀಲ ಕೃತ್ಯವನ್ನು ಎಸಗುತ್ತೀರಾ?’’

81. ‘‘ನೀವಂತು, ಕಾಮಾಪೇಕ್ಷೆಯೊಂದಿಗೆ, ಸ್ತ್ರೀಯರ ಬದಲು ಪುರುಷರ ಬಳಿಗೆ ಹೋಗುತ್ತೀರಿ. ಖಂಡಿತವಾಗಿಯೂ ನೀವು ಅತಿರೇಕವೆಸಗುವವರಾಗಿದ್ದೀರಿ.’’

 

82.ಇದಕ್ಕೆ ಅವರ ಜನಾಂಗದ ಉತ್ತರ ‘‘ಇವರನ್ನು ನಿಮ್ಮ ನಾಡಿನಿಂದ ಹೊರಕ್ಕೆ ಅಟ್ಟಿ ಬಿಡಿರಿ. ಇವರು ಭಾರೀ ಪಾವಿತ್ರ ಬಯಸುವ ಜನರಾಗಿದ್ದಾರೆ’’ ಎನ್ನುವುದಷ್ಟೇ ಆಗಿತ್ತು.

83.ಕೊನೆಗೆ ನಾವು ಅವರನ್ನು (ಲೂತ್‌ರನ್ನು) ಮತ್ತು ಅವರ ಮನೆಯವರನ್ನು ರಕ್ಷಿಸಿದೆವು – ಅವರ ಪತ್ನಿಯ ಹೊರತು. ಏಕೆಂದರೆ ಆಕೆ ಹಿಂದೆ ಉಳಿಯುವವರ ಸಾಲಿಗೆ ಸೇರಿದ್ದಳು.

84. ಅವರ (ಲೂತ್‌ರ ಜನಾಂಗದ) ಮೇಲೆ ನಾವು ಒಂದು ಮಳೆಯನ್ನು ಸುರಿಸಿ ಬಿಟ್ಟೆವು. ನೋಡಿರಿ, ಅಪರಾಧಿಗಳ ಗತಿ ಏನಾಯಿತೆಂದು!

85. ಹಾಗೆಯೇ ನಾವು ಮದ್‌ಯನ್ ಜನಾಂಗದವರೆಡೆಗೆ ಅವರ ಸಹೋದರ ಶುಐಬ್‌ರನ್ನು ಕಳುಹಿಸಿದೆವು. ಅವರು ಹೇಳಿದರು; ‘‘ನನ್ನ ಜನಾಂಗದವರೇ, ಅಲ್ಲಾಹನನ್ನು ಮಾತ್ರ ಪೂಜಿಸಿರಿ, ಅವನ ಹೊರತು ನಿಮಗೆ ಬೇರೆ ದೇವರಿಲ್ಲ. ಇದೀಗ ನಿಮ್ಮ ಬಳಿಗೆ ನಿಮ್ಮ ಒಡೆಯನ ಕಡೆಯಿಂದ ಸ್ಪಷ್ಟ ಪುರಾವೆಯು ಬಂದಿದೆ. ನೀವಿನ್ನು, ಪರಿಪೂರ್ಣವಾಗಿ ಅಳೆಯಿರಿ ಮತ್ತು ತೂಗಿರಿ. ಜನರಿಗೆ ಅವರ ಸರಕುಗಳನ್ನು ಕಡಿತಗೊಳಿಸಿ ಕೊಡಬೇಡಿ. ಹಾಗೆಯೇ, ಭೂಮಿಯಲ್ಲಿ ಸುಧಾರಣೆಯಾದ ಬಳಿಕ ನೀವು ಅದರಲ್ಲಿ ಅಶಾಂತಿಯನ್ನು ಹಬ್ಬಬೇಡಿ. ನೀವು ನಂಬುವವರಾಗಿದ್ದರೆ, ಈ ಧೋರಣೆಯೇ ನಿಮ್ಮ ಪಾಲಿಗೆ ಉತ್ತಮ.’’

86.‘‘ನೀವು ಎಲ್ಲ ದಾರಿಗಳಲ್ಲಿ ಕುಳಿತು, ಜನರನ್ನು ಬೆದರಿಸುವವರೂ ಅಲ್ಲಾಹನಲ್ಲಿ ನಂಬಿಕೆ ಇಟ್ಟವರನ್ನು ಅವನ ದಾರಿಯಿಂದ ತಡೆಯುವವರೂ ಆಗಬೇಡಿ ಮತ್ತು ಅದರಲ್ಲಿ ವಕ್ರತೆಯನ್ನು ಹುಡುಕಬೇಡಿ. ನೆನಪಿಸಿಕೊಳ್ಳಿರಿ; ನೀವು ತೀರಾ ಕಡಿಮೆ ಸಂಖ್ಯೆಯಲ್ಲಿದ್ದಾಗ ಅವನು ನಿಮ್ಮ ಸಂಖ್ಯೆಯನ್ನು ಹೆಚ್ಚಿಸಿದನು. ಹಾಗೆಯೇ, ಅಶಾಂತಿ ಹಬ್ಬುವವರ ಗತಿ ಏನಾಯಿತೆಂಬುದನ್ನು ನೋಡಿರಿ.’’

87. ಇದೀಗ ನಿಮ್ಮಲ್ಲಿನ ಒಂದು ಗುಂಪು, ನನ್ನನ್ನು ಯಾವುದರ ಜೊತೆಗೆ ಕಳಿಸಲಾಗಿದೆಯೋ ಅದನ್ನು ನಂಬುವವರಾಗಿದ್ದಾರೆ, ಹಾಗೂ ಇನ್ನೊಂದು ಗುಂಪು ಅದನ್ನು ನಂಬುತ್ತಿಲ್ಲ – ಅಲ್ಲಾಹನು ನಮ್ಮ ನಡುವೆ ತೀರ್ಪು ನೀಡುವ ತನಕ ಸಹನೆ ವಹಿಸಿರಿ – ಅವನು ಅತ್ಯುತ್ತಮ ತೀರ್ಪು ನೀಡುವವನಾಗಿದ್ದಾನೆ.

ಕಾಂಡ – 9

   88. ಅವರ ಜನಾಂಗದ ಅಹಂಕಾರಿ ನಾಯಕರು ಹೇಳಿದರು; ಶುಐಬರೇ, ನಿಮ್ಮನ್ನು ಹಾಗೂ ನಿಮ್ಮ ಜೊತೆ (ಸತ್ಯಧರ್ಮದಲ್ಲಿ) ನಂಬಿಕೆ ಇಟ್ಟವರನ್ನು ನಾವು ನಮ್ಮ ನಾಡಿನಿಂದ ಹೊರಕ್ಕೆ ಅಟ್ಟಿ ಬಿಡುವೆವು. ಅಥವಾ (ಅದು ಬೇಡವಾದರೆ) ನೀವು ನಮ್ಮ ಪಂಥಕ್ಕೆ ಮರಳಿಬರಬೇಕು. ಅವರು (ಶುಐಬರು) ಕೇಳಿದರು; ನಮಗೆ ಇಷ್ಟವಿಲ್ಲದಿದ್ದರೂ (ಮರಳಬೇಕೇ)?

89. ಅಲ್ಲಾಹನು ನಿಮ್ಮ ಪಂಥದಿಂದ ನಮ್ಮನ್ನು ರಕ್ಷಿಸಿದ ಬಳಿಕ ನಾವು ಮತ್ತೆ ಅದರೆಡೆಗೆ ಮರಳಿದರೆ ನಾವು ಅಲ್ಲಾಹನ ಮೇಲೆ ಒಂದು ಭಾರೀ ಸುಳ್ಳಾರೋಪವನ್ನು ಹೊರಿಸಿದಂತಾದೀತು. ಹೀಗಿರುತ್ತಾ ನಮ್ಮೊಡೆಯನಾದ ಅಲ್ಲಾಹನೇ ಇಚ್ಛಿಸುವ ತನಕ, ಅದರೆಡೆಗೆ ಮರಳಲು ನಮಗೆ ಸಾಧ್ಯವಿಲ್ಲ. ನಮ್ಮೊಡನೆಯನ ಜ್ಞಾನವು ಎಲ್ಲವನ್ನೂ ಆವರಿಸಿಕೊಂಡಿದೆ. ನಾವು ಅಲ್ಲಾಹನಲ್ಲಿ ಸಂಪೂರ್ಣ ಭರವಸೆ ಇಟ್ಟಿರುವೆವು. ನಮ್ಮೊಡೆಯಾ, ನೀನೀಗ ನಮ್ಮ ಹಾಗೂ ನಮ್ಮ ಜನಾಂಗದ ನಡುವೆ ಸತ್ಯದೊಂದಿಗೆ ತೀರ್ಮಾನ ಮಾಡಿಬಿಡು. ನೀನು ಅತ್ಯುತ್ತಮ ತೀರ್ಮಾನ ಮಾಡುವವನಾಗಿರುವೆ.

90. ಅವರ ಜನಾಂಗದ ಧಿಕ್ಕಾರಿ ನಾಯಕರು (ಜನರೊಡನೆ) ಹೇಳಿದರು; ನೀವು ಶುಐಬರನ್ನು ಅನುಸರಿಸಿದರೆ, ಖಂಡಿತವಾಗಿಯೂ ನೀವು ನಷ್ಟಕ್ಕೊಳಗಾದವರ ಸಾಲಿಗೆ ಸೇರುವಿರಿ.

91. ಕೊನೆಗೆ ಒಂದು ಭಾರೀ ಭೂಕಂಪವು ಅವರನ್ನು ಆವರಿಸಿಕೊಂಡಿತು ಮತ್ತು ಅವರು ತಮ್ಮ ನಿವಾಸಗಳಲ್ಲೇ ನಿಶ್ಚಲ ಶವಗಳಾಗಿ ಬಿದ್ದುಕೊಂಡಿದ್ದರು.

 92. ಶುಐಬರನ್ನು ಧಿಕ್ಕರಿಸಿದವರು, ಹಿಂದೆಂದೂ ಬದುಕಿಯೇ ಇರಲಿಲ್ಲವೋ ಎಂಬಂತೆ ಅಳಿದು ಹೋದರು. ಹೀಗೆ, ಶುಐಬರನ್ನು ಧಿಕ್ಕರಿಸಿದವರೇ ನಷ್ಟ ಅನುಭವಿಸಿದವರಾದರು.

93. ಅವರು (ಶುಐಬರು) ಆ ಜನರಿಂದ ಮುಖ ತಿರುಗಿಸಿಕೊಂಡು ಹೇಳಿದರು; ನನ್ನ ಜನಾಂಗದವರೇ, ನನ್ನ ಒಡೆಯನ ಸಂದೇಶವನ್ನು ನಾನು ನಿಮಗೆ ತಲುಪಿಸಿದೆ ಮತ್ತು ನಾನು ನಿಮ್ಮ ಹಿತೈಷಿಯಾಗಿದ್ದೆ. ಇದೀಗ ಒಂದು ಧಿಕ್ಕಾರಿ ಜನಾಂಗದ ಕುರಿತು ನಾನು ಹೇಗೆ ತಾನೇ ದುಃಖಿಸಲಿ?

94. ನಾವು ಯಾವೆಲ್ಲ ನಾಡುಗಳಿಗೆ ನಮ್ಮ ದೂತರನ್ನು ಕಳುಹಿಸಿರುವೆವೋ ಆ ಎಲ್ಲ ನಾಡುಗಳ ಜನರು ವಿನಯಶೀಲರಾಗಿರಬೇಕೆಂದು ನಾವು ಅವರನ್ನು ಸಂಕಷ್ಟ ಹಾಗೂ ಕಾಠಿಣ್ಯಕ್ಕೆ ಒಳಪಡಿಸಿರುವೆವು.

95. ಆ ಬಳಿಕ ನಾವು (ಅವರ) ದುಸ್ಥಿತಿಯನ್ನು ಸುಸ್ಥಿತಿಯಾಗಿ ಪರಿವರ್ತಿಸಿದೆವು. ಎಷ್ಟೆಂದರೆ, ಅವರು ಸಮೃದ್ಧರಾಗಿ, ಸಂಕಷ್ಟ ಹಾಗೂ ಸಂತೋಷದ ಪರಿಸ್ಥಿತಿಗಳು ನಮ್ಮ ಪೂರ್ವಜರಿಗೆ ಎದುರಾಗುತ್ತಿದ್ದವು ಎನ್ನತೊಡಗಿದರು. ಕೊನೆಗೆ ನಾವು ಹಠಾತ್ತನೆ ಅವರನ್ನು ಹಿಡಿದುಬಿಟ್ಟೆವು – ಅವರಿಗೆ ಅದರ ಅರಿವೇ ಇರಲಿಲ್ಲ.

96. ಒಂದು ವೇಳೆ ನಾಡುಗಳ ಜನರು (ಸತ್ಯದಲ್ಲಿ) ನಂಬಿಕೆ ಇಟ್ಟು, ಸತ್ಯ ನಿಷ್ಠರಾಗಿದ್ದರೆ ನಾವು ಅವರ ಪಾಲಿಗೆ ಆಕಾಶದಿಂದಲೂ ಭೂಮಿಯಿಂದಲೂ ಸಮೃದ್ಧಿಯ ಬಾಗಿಲುಗಳನ್ನು ತೆರೆದುಬಿಡುತ್ತಿದ್ದೆವು. ಆದರೆ ಅವರು (ಸತ್ಯವನ್ನು) ಸುಳ್ಳೆಂದರು. ಕೊನೆಗೆ ನಾವು ಅವರ ಕೃತ್ಯಗಳ ಕಾರಣ ಅವರನ್ನು ಹಿಡಿದುಕೊಂಡೆವು.

97. ನಾಡುಗಳ ಜನರೇನು, ಇರುಳಲ್ಲಿ ಅವರು ಮಲಗಿರುವಾಗ ನಮ್ಮ ಶಿಕ್ಷೆಯು ಹಠಾತ್ತನೆ ಅವರ ಮೇಲೆ ಬಂದು ಎರಗಲಾರದೆಂದು ನೆಮ್ಮದಿಯಿಂದಿರುವರೇ?

98. ಅಥವಾ ನಾಡುಗಳ ಜನರೇನು, ಹಗಲಲ್ಲಿ ಅವರು ಆಟೋಟಗಳಲ್ಲಿ ನಿರತರಾಗಿರುವಾಗ ನಮ್ಮ ಶಿಕ್ಷೆಯು ಅವರ ಮೇಲೆ ಬಂದೆರಗಲಾರದೆಂದು ನೆಮ್ಮದಿಯಿಂದಿರುವರೇ?

99. ಅವರೇನು, ಅಲ್ಲಾಹನ ಯೋಜನೆಯ ಕುರಿತು ನಿಶ್ಚಿಂತರೇ? ನಿಜವಾಗಿ, ನಷ್ಟಕ್ಕೊಳಗಾಗುವವರ ಹೊರತು ಬೇರಾರೂ ಅಲ್ಲಾಹನ ಯೋಜನೆಗಳ ಕುರಿತು ನಿಶ್ಚಿಂತರಾಗಿರುವುದಿಲ್ಲ.

100. (ತಮಗಿಂತ ಹಿಂದಿನ) ಭೂವಾಸಿಗಳ ಬಳಿಕ ಭೂಮಿಯ ಉತ್ತರಾಧಿಕಾರಿಗಳಾದವರಿಗೆ ಸೂಚನೆ ಸಿಗಲಿಲ್ಲವೇ, ನಾವು ಬಯಸಿದರೆ ಅವರ ಪಾಪಗಳ ಕಾರಣ ಅವರನ್ನು ಸಂಕಷ್ಟಕ್ಕೆ ಗುರಿಪಡಿಸಬಲ್ಲೆವೆಂದು? ನಿಜವಾಗಿ ನಾವು ಅವರ ಮನಸ್ಸುಗಳ ಮೇಲೆ ಮುದ್ರೆ ಒತ್ತಿರುವೆವು. ಅವರು ಏನನ್ನೂ ಕೇಳುತ್ತಿಲ್ಲ.

101. ಇವು ಆ ನಾಡುಗಳು – ನಾವು ಅವುಗಳ ವೃತ್ತಾಂತವನ್ನು ನಿಮಗೆ ವಿವರಿಸುತ್ತಿದ್ದೇವೆ. ಅವರ ಬಳಿಗೆ ಅವರ ದೇವದೂತರುಗಳು ಸ್ಪಷ್ಟ ಪುರಾವೆಗಳೊಂದಿಗೆ ಬಂದಿದ್ದರು. ಇಷ್ಟಾಗಿಯೂ, ಯಾವುದನ್ನು ಅವರು ಈ ಹಿಂದೆಯೂ ಧಿಕ್ಕರಿಸಿದ್ದರೋ ಅದನ್ನು ಅವರು ನಂಬಲಿಲ್ಲ. ಈ ರೀತಿ ಅಲ್ಲಾಹನು ಧಿಕ್ಕಾರಿಗಳ ಮನಸ್ಸುಗಳ ಮೇಲೆ ಮುದ್ರೆ ಒತ್ತಿರುತ್ತಾನೆ.

102. ಅವರ ಪೈಕಿ ಹೆಚ್ಚಿನವರಲ್ಲಿ ನಾವು ವಚನ ಪಾಲನೆಯನ್ನು ಕಾಣಲಿಲ್ಲ. ನಿಜವಾಗಿ ಅವರಲ್ಲಿ ಹೆಚ್ಚಿನವರನ್ನು ನಾವು ದುಷ್ಕರ್ಮಿಗಳಾಗಿ ಕಂಡೆವು.

 103. ಅವರ ಬಳಿಕ ಮೂಸಾರನ್ನು ನಾವು ನಮ್ಮ ದೃಷ್ಟಾಂತಗಳೊಂದಿಗೆ ಫಿರ್‌ಔನ್ ಮತ್ತು ಆತನ (ಜನಾಂಗದ) ನಾಯಕರ ಬಳಿಗೆ ಕಳಿಸಿದೆವು. ಅವರೂ ಅವುಗಳ ವಿಷಯದಲ್ಲಿ ಅಕ್ರಮ ಧೋರಣೆಯನ್ನು ತೋರಿದರು. ನೋಡಿರಿ, ಅಶಾಂತಿ ಹರಡುವವರ ಗತಿ ಏನಾಯಿತೆಂದು!

 104. ಮೂಸಾ ಹೇಳಿದರು; ಓ ಫಿರ್‌ಔನ್, ನಾನು ಖಚಿತವಾಗಿಯೂ ಸರ್ವಲೋಕಗಳ ಒಡೆಯನ ದೂತನು.

 105. ಅಲ್ಲಾಹನ ಹೆಸರಲ್ಲಿ, ಸತ್ಯದ ಹೊರತು ಬೇರೇನನ್ನೂ ಹೇಳಬಾರದೆಂಬುದೇ ನನ್ನ ಕರ್ತವ್ಯವಾಗಿದೆ. ನಾನು ನಿಮ್ಮೊಡನೆಯನ ಕಡೆಯಿಂದ ನಿಮ್ಮ ಬಳಿಗೆ ಸ್ಪಷ್ಟ ಪುರಾವೆಗಳನ್ನು ತಂದಿದ್ದೇನೆ. ಇಸ್ರಾಈಲರ ಸಂತತಿಯನ್ನು ನನ್ನ ಜೊತೆ ಕಳಿಸಿಬಿಡು.

106. ಅವನು (ಫಿರ್‌ಔನ್) ಹೇಳಿದನು; ನೀನು ದೃಷ್ಟಾಂತದೊಂದಿಗೆ ಬಂದಿದ್ದರೆ (ಹಾಗೂ) ನೀನು ಸತ್ಯವಂತನಾಗಿದ್ದರೆ ಅದನ್ನು ಮುಂದಿಡು.

107. ಅವರು (ಮೂಸಾ) ತಮ್ಮ ಊರುಗೋಲನ್ನು ಎಸೆದರು ಮತ್ತು ಹಠಾತ್ತನೆ ಅದು ಸ್ಪಷ್ಟವಾಗಿ ಒಂದು ಹೆಬ್ಬಾವಾಗಿ ಬಿಟ್ಟಿತು.

108. ತರುವಾಯ ಅವರು ತಮ್ಮ ಕೈಯನ್ನು ಹೊರತೆಗೆದರು. ಹಠಾತ್ತನೆ ಅದು ನೋಡುವವರಿಗೆ ತುಂಬಾ ಉಜ್ವಲವಾಗಿ ಕಂಡಿತು.

109. ಫಿರ್‌ಔನನ ಜನಾಂಗದ ಸರದಾರರು ಹೇಳಿದರು; ಇವನು ಖಂಡಿತ ಒಬ್ಬ ತಜ್ಞ ಜಾದೂಗಾರನಾಗಿದ್ದಾನೆ.

110. ಇವನು ನಿಮ್ಮನ್ನು ನಿಮ್ಮ ನಾಡಿನಿಂದ ಹೊರದಬ್ಬ ಬಯಸುತ್ತಾನೆ. ಈಗ ನೀವೇನು ಆದೇಶಿಸುತ್ತೀರಿ?

111. ಅವರು (ಫಿರ್‌ಔನನೊಡನೆ) ಹೇಳಿದರು; ಇವನನ್ನು ಹಾಗೂ ಇವನ ಸಹೋದರನನ್ನು ತಡೆದಿಟ್ಟುಕೊ ಮತ್ತು ವಿವಿಧ ನಗರಗಳಿಗೆ ದೂತರನ್ನು ಕಳುಹಿಸು.

112. ಅವರು ಎಲ್ಲ ತಜ್ಞ ಜಾದೂಗಾರರನ್ನು ನಿನ್ನ ಬಳಿಗೆ ತರಲಿ.

113. ಹೀಗೆ, ಜಾದೂಗಾರರು ಫಿರ್‌ಔನನ ಬಳಿಗೆ ಬಂದರು. ನಾವು ವಿಜಯಿಗಳಾದರೆ ಖಂಡಿತವಾಗಿಯೂ ನಮಗೆ ಪ್ರತಿಫಲ ಸಿಗಲಿದೆ ಎಂದರು.

114. ಅವನು (ಫಿರ್‌ಔನ್) ಹೇಳಿದನು; ಹೌದು, ಜೊತೆಗೆ ನೀವು ನನ್ನ ಆಪ್ತರ ಸಾಲಿಗೆ ಸೇರುವಿರಿ.

115. ಅವರು (ಜಾದೂಗಾರರು), ಓ ಮೂಸಾ, ನೀನು ಎಸೆಯುವೆಯಾ ಅಥವಾ ನಾವು ಎಸೆಯಬೇಕೇ?ಎಂದು ಕೇಳಿದರು.

 116. ಅವರು (ಮೂಸಾ), ನೀವೇ ಎಸೆಯಿರಿ ಎಂದರು. ಹೀಗೆ ಅವರು (ಜಾದೂಗಾರರು ದಾಳಗಳನ್ನು) ಎಸೆದರು, ಜನರ ಕಣ್ಣುಗಳನ್ನು ಮಂಕುಗೊಳಿಸಿದರು ಹಾಗೂ ಅವರನ್ನು ಹೆದರಿಸಿಬಿಟ್ಟರು ಮತ್ತು ಭಾರೀ ಭವ್ಯ ಜಾದುವನ್ನು ಮುಂದಿಟ್ಟರು.

 117. ಆಗ ನಾವು ಮೂಸಾರ ಕಡೆಗೆ ದಿವ್ಯವಾಣಿಯನ್ನು ಕಳಿಸಿದೆವು; ಎಸೆಯಿರಿ ನಿಮ್ಮ ಊರುಗೋಲನ್ನು, ಅವರ ಎಲ್ಲ ಕೃತಕ ರಚನೆಗಳನ್ನು ಅದು ನುಂಗಿಬಿಡುವುದು – ಎಂದು.

118. ಕೊನೆಗೆ, ಸತ್ಯವು ಸಾಬೀತಾಗಿ ಬಿಟ್ಟಿತು ಮತ್ತು ಅವರು (ಜಾದೂಗಾರರು) ಮಾಡಿದ್ದೆಲ್ಲವೂ ಮಿಥ್ಯವಾಯಿತು.

119. ಹೀಗೆ, ಅವರು (ಫಿರ್‌ಔನನ ಕಡೆಯವರು) ಅಲ್ಲೇ ಸೋತು ಹೋದರು ಮತ್ತು ಅಪಮಾನಿತರಾಗಿ ಮರಳಿದರು.

120. ಅತ್ತ , ಜಾದೂಗಾರರು ಸಾಷ್ಟಾಂಗವೆರಗಿದರು.

121. ಅವರು ಹೇಳಿದರು; ನಾವು ಸರ್ವಲೋಕಗಳ ಒಡೆಯನನ್ನು ನಂಬಿದೆವು.

122. ಮೂಸಾ ಮತ್ತು ಹಾರೂನರ ಒಡೆಯನನ್ನು.

123. ಫಿರ್‌ಔನ್ ಹೇಳಿದನು; ನಾನು ನಿಮಗೆ ಅನುಮತಿ ನೀಡುವ ಮುನ್ನವೇ ನೀವು ನಂಬಿ ಬಿಟ್ಟಿರಿ. ಖಂಡಿತವಾಗಿಯೂ ಇದು, ಈ ನಗರದಲ್ಲಿ, ಇಲ್ಲಿಯವರನ್ನು ಇಲ್ಲಿಂದ ಹೊರದಬ್ಬಲು ನೀವು ನಡೆಸಿರುವ ಒಂದು ಸಂಚಾಗಿದೆ. (ಇದರ ಪರಿಣಾಮವನ್ನು) ಬೇಗನೇ ನೀವು ಅರಿಯುವಿರಿ.

124. ಖಂಡಿತವಾಗಿಯೂ ನಾನು ನಿಮ್ಮ ಕೈಗಳನ್ನು ಮತ್ತು ಕಾಲುಗಳನ್ನು ವಿರುದ್ಧ ಭಾಗಗಳಲ್ಲಿ ಕಡಿದು ಬಿಡುವೆನು ಆ ಬಳಿಕ ನಿಮ್ಮೆಲ್ಲರನ್ನೂ ಶಿಲುಬೆಗೇರಿಸುವೆನು.

125. ಅವರು (ಜಾದೂಗಾರರು) ಹೇಳಿದರು; ನಾವಂತು ನಮ್ಮ ಒಡೆಯನ ಕಡೆಗೆ ಮರಳುವೆವು.

   126. ನಮ್ಮ ಒಡೆಯನ ದೃಷ್ಟಾಂತಗಳು ನಮ್ಮ ಮುಂದೆ ಬಂದಾಗ ಅವುಗಳನ್ನು ನಾವು ನಂಬಿದೆವು ಎಂಬುದಷ್ಟೇ ನಿನಗೆ ನಮ್ಮ ಮೇಲಿರುವ ಕೋಪಕ್ಕೆ ಕಾರಣ. (ಮತ್ತು ಅವರು ಹೀಗೆ ಪ್ರಾರ್ಥಿಸಿದರು) ನಮ್ಮೊಡೆಯಾ, ನಮಗೆ ಸ್ಥಿರತೆಯನ್ನು ದಯಪಾಲಿಸು ಮತ್ತು ನಾವು ಮುಸ್ಲಿಮರಾಗಿರುವ ಸ್ಥಿತಿಯಲ್ಲಿ ನಮಗೆ ಮರಣವನ್ನು ನೀಡು.

 127. ಫಿರ್‌ಔನನ ಜನಾಂಗದ ನಾಯಕರು ಹೇಳಿದರು; ನೀನೇನು, ಭೂಮಿಯಲ್ಲಿ ಗೊಂದಲ ಹರಡುತ್ತಿರಲಿಕ್ಕಾಗಿ ಹಾಗೂ ನಿನ್ನನ್ನು ಮತ್ತು ನಿನ್ನ ದೇವರುಗಳನ್ನು ತೊರೆದಿರಲಿಕ್ಕಾಗಿ ಮೂಸಾ ಮತ್ತು ಆತನ ಜನಾಂಗವನ್ನು ಹಾಗೆಯೇ ಬಿಟ್ಟು ಬಿಡುವೆಯಾ? ಅವನು ಹೇಳಿದನು; ನಾನು ಅವರ ಪುತ್ರರನ್ನು ಕೊಂದುಬಿಡುವೆನು ಮತ್ತು ಅವರ ಪುತ್ರಿಯರನ್ನು ಜೀವಂತವಿಡುವೆನು. ಈ ರೀತಿ ನಾವು ಅವರ ಮೇಲೆ ನಿಯಂತ್ರಣ ಸಾಧಿಸುವೆವು.

 128. ಮೂಸಾ, ತಮ್ಮ ಜನಾಂಗದವರೊಡನೆ ಹೇಳಿದರು; ನೀವು ಅಲ್ಲಾಹನ ನೆರವನ್ನು ಬೇಡಿರಿ ಮತ್ತು ಸಹನಶೀಲರಾಗಿರಿ. ಭೂಮಿಯು ಅಲ್ಲಾಹನಿಗೇ ಸೇರಿದೆ. ಅವನು ತನ್ನ ದಾಸರ ಪೈಕಿ ತಾನಿಚ್ಛಿಸಿದವರನ್ನು ಅದರ ಉತ್ತರಾಧಿಕಾರಿಗಳಾಗಿ ಮಾಡುತ್ತಾನೆ. ಅಂತಿಮ ವಿಜಯವು ಸತ್ಯನಿಷ್ಠರಿಗೇ ಸೇರಿದೆ.

129. ಅವರು (ಮೂಸಾರ ಜನಾಂಗದವರು) ಹೇಳಿದರು; ನೀವು ನಮ್ಮ ಬಳಿಗೆ ಬರುವ ಮುನ್ನವೂ ನೀವು ನಮ್ಮ ಬಳಿಗೆ ಬಂದ ಬಳಿಕವೂ ನಮ್ಮನ್ನು ಸತಾಯಿಸಲಾಯಿತು. ಅವರು (ಮೂಸಾ) ಹೇಳಿದರು; ಬಹುಬೇಗನೇ, ನಿಮ್ಮೊಡೆಯನು ನಿಮ್ಮ ಶತ್ರುವನ್ನು ನಾಶಪಡಿಸಿ ಭೂಮಿಯಲ್ಲಿ ನಿಮ್ಮನ್ನು ಉತ್ತರಾಧಿಕಾರಿಗಳಾಗಿ ಮಾಡುವನು ಮತ್ತು ನೀವು ಏನೆಲ್ಲ ಮಾಡುವಿರಿ ಎಂಬುದನ್ನು ನೋಡುವನು.

130. ನಾವು ಫಿರ್‌ಔನನ ಜನಾಂಗವನ್ನು ಸತತ ಬರಗಾಲ ಹಾಗೂ ಬೆಳೆಗಳ ನಷ್ಟದಲ್ಲಿ ಸಿಲುಕಿಸಿದೆವು – ಅವರು ಪಾಠಕಲಿಯಬೇಕೆಂದು.

131. ಅವರ ಬಳಿಗೆ ಒಳಿತೇನಾದರೂ ಬಂದಾಗ ಅವರು, ನಾವು ಇದಕ್ಕೇ ಅರ್ಹರು, ಎನ್ನುತ್ತಿದ್ದರು. ಇನ್ನು ಅವರಿಗೆ ಅಹಿತವೇನಾದರೂ ಸಂಭವಿಸಿದಾಗ, ಅದಕ್ಕಾಗಿ ಅವರು ಮೂಸಾ ಮತ್ತು ಅವರ ಜೊತೆಗಾರರ ಭಾಗ್ಯವನ್ನು ಮೂದಲಿಸುತ್ತಿದ್ದರು. ತಿಳಿದಿರಲಿ! ಖಂಡಿತವಾಗಿಯೂ ಅವರ ಭಾಗ್ಯವೆಲ್ಲವೂ ಅಲ್ಲಾಹನ ಬಳಿಯಲ್ಲೇ ಇದೆ. ಆದರೆ ಹೆಚ್ಚಿನವರು ಅರಿತಿರುವುದಿಲ್ಲ.

132. ಅವರು ಹೇಳುತ್ತಿದ್ದರು; ನೀನು ನಮ್ಮನ್ನು ಮಾಟಕ್ಕೆ ಒಳಪಡಿಸಲು ಅದೆಂತಹ ದೃಷ್ಟಾಂತವನ್ನು ತಂದರೂ ನಾವಂತು ನಿನ್ನನ್ನು ನಂಬುವವರಲ್ಲ.

133. ಕೊನೆಗೆ ನಾವು ಅವರ ಮೇಲೆ, ಚಂಡಮಾರುತವನ್ನು ಎರಗಿಸಿದೆವು. ಮಿಡಿತೆಗಳನ್ನು, ಕ್ರಿಮಿಕೀಟಗಳನ್ನು, ಕಪ್ಪೆಗಳನ್ನು ಮತ್ತು ರಕ್ತವನ್ನು ಇಳಿಸಿದೆವು. ಇವೆಲ್ಲಾ ಪ್ರತ್ಯ ಪ್ರತ್ಯೇಕ ಸೂಚನೆಗಳಾಗಿದ್ದವು. ಇಷ್ಟಾಗಿಯೂ ಅವರು ಅಹಂಕಾರ ತೋರಿದರು. ಅವರು ನಿಜಕ್ಕೂ ಒಂದು ಅಪರಾಧಿ ಜನಾಂಗವಾಗಿದ್ದರು.

134. ಅವರ ಮೇಲೆ ವಿಪತ್ತು ಎರಗಿದಾಗಲೆಲ್ಲಾ ಅವರು, ಓ ಮೂಸಾ, ನಿನ್ನ ಬಳಿ ಇರುವ ಅವನ (ಅಲ್ಲಾಹನ) ವಾಗ್ದಾನದ ಆಧಾರದಲ್ಲಿ ನೀನು ನಮ್ಮ ಪರವಾಗಿ ನಿನ್ನ ಒಡೆಯನನ್ನು ಪ್ರಾರ್ಥಿಸು. ಒಂದು ವೇಳೆ ನೀನು ನಮ್ಮ ಮೇಲಿಂದ ಈ ವಿಪತ್ತನ್ನು ತೊಲಗಿಸಿದರೆ ನಾವು ಖಂಡಿತ ನಿನ್ನನ್ನು ನಂಬುವೆವು ಮತ್ತು ಇಸ್ರಾಈಲರ ಸಂತತಿಯನ್ನು ನಿನ್ನ ಜೊತೆ ಕಳುಹಿಸಿಕೊಡುವೆವು, ಎನ್ನುತ್ತಿದ್ದರು.

135. ಮತ್ತೆ ನಾವು, ಅವರು ಅನುಭವಿಸಬೇಕಾಗಿದ್ದ ಒಂದು ಅವಧಿಯವರೆಗಿನ ವಿಪತ್ತನ್ನು ಅವರಿಂದ ದೂರಗೊಳಿಸಿದಾಗ ಅವರು ತಮ್ಮ ವಚನವನ್ನು ಮುರಿದುಬಿಡುತ್ತಿದ್ದರು.

136. ಕೊನೆಗೆ ನಾವು ಅವರ ವಿರುದ್ಧ ಪ್ರತೀಕಾರ ತೀರಿಸಿದೆವು ಮತ್ತು ಅವರನ್ನು ಸಮುದ್ರದಲ್ಲಿ ಮುಳುಗಿಸಿಬಿಟ್ಟೆವು-ಏಕೆಂದರೆ ಅವರು ನಮ್ಮ ವಚನಗಳನ್ನು ಸುಳ್ಳೆಂದು ಧಿಕ್ಕರಿಸಿದ್ದರು ಮತ್ತು ಆ ಕುರಿತು ನಿರ್ಲಕ್ಷ್ಯ ತೋರಿದ್ದರು.

137. ಮತ್ತು ನಾವು ಮರ್ದಿತರಾಗಿದ್ದವರನ್ನು, ನಾವೇ ಸಮೃದ್ಧಗೊಳಿಸಿದ್ದ, ಭೂಮಿಯ ಪೂರ್ವಭಾಗಗಳ ಹಾಗೂ ಪಶ್ಚಿಮ ಭಾಗಗಳ ಉತ್ತರಾಧಿಕಾರಿಗಳಾಗಿ ಮಾಡಿದೆವು. ಹೀಗೆ, ಇಸ್ರಾಈಲರ ಸಂತತಿಗಳು ತೋರಿದ ಸಹನೆಯ ಕಾರಣ, ನಿಮ್ಮ ಒಡೆಯನು ಅವರಿಗೆ ಮಾಡಿದ್ದ ಒಳಿತಿನ ವಾಗ್ದಾನವು ಪೂರ್ತಿಗೊಂಡಿತು ಮತ್ತು ಫಿರ್‌ಔನ್ ಹಾಗೂ ಅವನ ಜನಾಂಗವು ಕಟ್ಟಿದ್ದ ಹಾಗೂ ಎತ್ತರಕ್ಕೆ ಬೆಳೆಸಿದ್ದ ಎಲ್ಲವನ್ನೂ ನಾವು ನೆಲೆಸಮಗೊಳಿಸಿಬಿಟ್ಟೆವು.

138. ಅತ್ತ , ಇಸ್ರಾಈಲರ ಸಂತತಿಗಳನ್ನು ನಾವು ಕಡಲಾಚೆಯ ದಡಕ್ಕೆ ತಲುಪಿಸಿದೆವು. ಮುಂದೆ ಅವರು, ತಮ್ಮಲ್ಲಿನ ವಿಗ್ರಹಗಳ ಆರಾಧನೆಯಲ್ಲಿ ತಲ್ಲೀನರಾಗಿದ್ದ ಒಂದು ಜನಾಂಗವನ್ನು ಎದುರಿಸಿದರು. ಆಗ ಅವರು (ಇಸ್ರಾಈಲರ ಸಂತತಿಗಳು), ಓ ಮೂಸಾ, ಅವರ ಬಳಿ ಇರುವಂತಹದೇ ದೇವರುಗಳನ್ನು ನಮಗೆ ತಯಾರಿಸಿಕೊಡು ಎಂದರು. ಅವರು (ಮೂಸಾ) ಹೇಳಿದರು; ನೀವು ಅಜ್ಞಾನಿಗಳಾಗಿ ವರ್ತಿಸುತ್ತಿರುವಿರಿ.

139. ಅವರು ಯಾವುದರಲ್ಲಿ ನಿರತರಾಗಿರುವರೋ ಅದೆಲ್ಲವೂ ಖಂಡಿತ ನಾಶವಾಗಲಿದೆ ಮತ್ತು ಅವರು ಮಾಡುತ್ತಿರುವುದೆಲ್ಲವೂ ಮಿಥ್ಯವಾಗಿದೆ.

140. ಅವರು (ಮೂಸಾ) ಹೇಳಿದರು; ಅವನು (ಅಲ್ಲಾಹನು) ಸರ್ವಲೋಕಗಳ ಮೇಲೆ ನಿಮಗೆ ಶ್ರೇಷ್ಠತೆಯನ್ನು ದಯಪಾಲಿಸಿರುವಾಗ, ನಾನೇನು ನಿಮಗಾಗಿ ಅಲ್ಲಾಹನ ಹೊರತು ಬೇರೊಬ್ಬ ದೇವರನ್ನು ಹುಡುಕಬೇಕೇ?

141. ಮತ್ತು (ಸ್ಮರಿಸಿರಿ;) ನಾವು ನಿಮ್ಮನ್ನು ಫಿರ್‌ಔನನ ಜನಾಂಗದವರಿಂದ ರಕ್ಷಿಸಿದ ವೇಳೆ, ಅವರು ನಿಮ್ಮನ್ನು ಭಾರೀ ಕಠಿಣ ಹಿಂಸೆಗೆ ಗುರಿಪಡಿಸಿದ್ದರು. ಅವರು ನಿಮ್ಮ ಪುತ್ರರನ್ನು ಕೊಂದುಬಿಡುತ್ತಿದ್ದರು. ಮತ್ತು ನಿಮ್ಮ ಮಹಿಳೆಯರನ್ನು ಜೀವಂತವಿಡುತ್ತಿದ್ದರು. ಆ ಸ್ಥಿತಿಯಲ್ಲಿ ನಿಮ್ಮ ಪಾಲಿಗೆ ನಿಮ್ಮ ಒಡೆಯನ ಕಡೆಯಿಂದ ಭಾರೀ ದೊಡ್ಡ ಪರೀಕ್ಷೆ ಇತ್ತು.

142. ಮುಂದೆ, ನಾವು ಮೂಸಾರಿಗೆ ಮೂವತ್ತು ರಾತ್ರಿಗಳ ವಾಗ್ದಾನ ಮಾಡಿದೆವು ಮತ್ತು ಹತ್ತು ರಾತ್ರಿಗಳನ್ನು ಸೇರಿಸಿ ಅದನ್ನು ಪೂರ್ತಿಗೊಳಿಸಿದೆವು. ಹೀಗೆ ಅವರ ಒಡೆಯನು ನಿಶ್ಚಯಿಸಿದ ನಲ್ವತ್ತು ರಾತ್ರಿಗಳ ಅವಧಿಯು ಪೂರ್ಣಗೊಂಡಿತು. (ಈ ಅವಧಿಗಾಗಿ ತೆರಳುವಾಗ) ಮೂಸಾ ತಮ್ಮ ಸಹೋದರ ಹಾರೂನರೊಡನೆ ಹೇಳಿದರು; ನೀನು ನನ್ನ ಜನಾಂಗದಲ್ಲಿ ನನ್ನ ಪ್ರತಿನಿಧಿಯಾಗಿರು ಮತ್ತು ಸುಧಾರಣೆಯನ್ನು ಮಾಡು. ಅಶಾಂತಿ ಹಬ್ಬುವವರ ದಾರಿಯನ್ನು ಅನುಸರಿಸಬೇಡ.

  143. ಮೂಸಾ, ನಾವು ನಿಗದಿಪಡಿಸಿದ ಅವಧಿಗಾಗಿ ಬಂದಾಗ, ತಮ್ಮ ಒಡೆಯನೊಡನೆ ಮಾತನಾಡಿದರು. ನನ್ನೊಡೆಯಾ, ನಾನು ನಿನ್ನನ್ನು ನೋಡಬಲ್ಲಂತಹ ದೃಷ್ಟಿಯನ್ನು ನೀನು ನನಗೆ ನೀಡು ಎಂದು ಅವರು ಹೇಳಿದರು. ಅವನು (ಅಲ್ಲಾಹನು) ಹೇಳಿದನು; ನನ್ನನ್ನು ನೋಡಲು ನಿನಗೆ ಸಾಧ್ಯವಿಲ್ಲ. ಆದರೆ ನೀನು ಆ ಪರ್ವತದೆಡೆಗೆ ನೋಡು, ಅದು ತನ್ನ ಸ್ಥಾನದಲ್ಲೇ ನಿಂತಿದ್ದರೆ ನೀನು ನನ್ನನ್ನು ನೋಡಬಹುದು. ತರುವಾಯ ಅವರ ಒಡೆಯನು ಪರ್ವತದೆಡೆಗೆ ದಿವ್ಯ ಬೆಳಕನ್ನು ಬೀರಿ ಅದನ್ನು ಚೂರು ಚೂರಾಗಿಸಿ ಬಿಟ್ಟನು ಮತ್ತು ಮೂಸಾ ಪ್ರಜ್ಞೆ ಕಳೆದುಕೊಂಡು ಬಿದ್ದುಬಿಟ್ಟರು. ಆ ಬಳಿಕ ಅವರಿಗೆ ಪ್ರಜ್ಞೆ ಬಂದಾಗ ಅವರು ಹೇಳಿದರು; ನೀನು ಪರಮ ಪಾವನನು, ನಾನು ಪಶ್ಚಾತ್ತಾಪ ಪಟ್ಟು ನಿನ್ನೆಡೆಗೆ ಮರಳುತ್ತೇನೆ ಮತ್ತು ನಂಬುವವರ ಪೈಕಿ ನಾನು ಪ್ರಥಮನಾಗುತ್ತೇನೆ.

144. ಅವನು (ಅಲ್ಲಾಹನು) ಹೇಳಿದನು; ಓ ಮೂಸಾ, ನಾನು ನನ್ನ ಸಂದೇಶಗಳಿಗಾಗಿ ಮತ್ತು ನನ್ನ ಸಂಭಾಷಣೆಗಾಗಿ ಎಲ್ಲ ಮಾನವರ ಪೈಕಿ ನಿಮ್ಮನ್ನು ಆರಿಸಿಕೊಂಡಿದ್ದೇನೆ. ನೀವೀಗ ನಾನು ನೀಡುವುದನ್ನು ಸ್ವೀಕರಿಸಿರಿ ಮತ್ತು ಕೃತಜ್ಞರಾಗಿರಿ.

 145. ಆ ಬಳಿಕ ನಾವು ಅವರಿಗಾಗಿ (ಮೂಸಾರಿಗಾಗಿ) ಎಲ್ಲ ವಿಷಯಗಳ ಕುರಿತಾದ ಉಪದೇಶಗಳನ್ನು ಮತ್ತು ಎಲ್ಲ ವಿಷಯಗಳ ಕುರಿತಾದ ಸ್ಪಷ್ಟ ಮಾರ್ಗದರ್ಶನಗಳನ್ನು ಫಲಕಗಳಲ್ಲಿ ಬರೆದೆವು (ಮತ್ತು ಹೇಳಿದೆವು); ನೀವು ಇದನ್ನು ಭದ್ರವಾಗಿ ಹಿಡಿದುಕೊಳ್ಳಿರಿ ಮತ್ತು ಇದರ ಉತ್ತಮ ಭಾಗವನ್ನು (ಸದ್ ವ್ಯಾಖ್ಯಾನವನ್ನು) ಸ್ವೀಕರಿಸಬೇಕೆಂದು ನಿಮ್ಮ ಜನಾಂಗದವರಿಗೆ ಆದೇಶಿಸಿರಿ. ಅವಿಧೇಯರ ನೆಲೆಯನ್ನು (ಅವರ ಗತಿ ಏನಾಗುತ್ತದೆಂಬುದನ್ನು) ನಾನು ನಿಮಗೆಲ್ಲಾ ತೋರಿಸುವೆನು.

146. ಅನ್ಯಾಯವಾಗಿ ಭೂಮಿಯಲ್ಲಿ ಅಹಂಕಾರ ಮೆರೆಯುವವರನ್ನು ನಾನು ನನ್ನ ದೃಷ್ಟಾಂತಗಳಿಂದ ದೂರ ಸರಿಸಿ ಬಿಡುವೆನು. ಅವರಂತು, ಎಲ್ಲ ದೃಷ್ಟಾಂತಗಳನ್ನು ಕಂಡರೂ ಅದನ್ನು ನಂಬುವವರಲ್ಲ. ಸತ್ಯದ ಮಾರ್ಗವನ್ನು ಕಣ್ಣಾರೆ ಕಂಡರೂ ಆ ಮಾರ್ಗವನ್ನು ಅವರು ಅನುಸರಿಸುವವರಲ್ಲ. ಅವರು ದುಷ್ಟ ಮಾರ್ಗವನ್ನು ಕಂಡರೆ ಅದನ್ನು ಮಾತ್ರ ಮಾರ್ಗವಾಗಿ ಅನುಸರಿಸುವರು. ಇದೇಕೆಂದರೆ, ಅವರು ನಮ್ಮ ದೃಷ್ಟಾಂತಗಳನ್ನು ಧಿಕ್ಕರಿಸಿದ್ದಾರೆ ಮತ್ತು ಆ ಕುರಿತು ಅರಿವಿಲ್ಲದವರಾಗಿದ್ದಾರೆ.

147. ಇನ್ನು, ನಮ್ಮ ವಚನಗಳನ್ನು ಹಾಗೂ ಪರಲೋಕದ ಭೇಟಿಯನ್ನು ಧಿಕ್ಕರಿಸಿದವರ ಕರ್ಮಗಳೆಲ್ಲಾ ವ್ಯರ್ಥವಾದವು. ಅವರಿಗೆ, ಅವರೇನು ಮಾಡಿದ್ದರೋ ಅದರ ಹೊರತು ಬೇರೆ ಪ್ರತಿಫಲ ಸಿಕ್ಕೀತೇ?

148. ಮೂಸಾರ ಅನುಪಸ್ಥಿತಿಯಲ್ಲಿ ಅವರ ಜನಾಂಗದವರು ತಮ್ಮ ಆಭರಣಗಳಿಂದ ಒಂದು ಕರುವಿನ ವಿಗ್ರಹವನ್ನು ರಚಿಸಿಕೊಂಡರು. ಅದರಲ್ಲಿ ಗೋವಿನ ಧ್ವನಿ ಇತ್ತು. ಅದು ತಮ್ಮೊಡನೆ ಮಾತನಾಡುವುದೂ ಇಲ್ಲ ಮತ್ತು ತಮಗೆ ದಾರಿ ತೋರುವುದೂ ಇಲ್ಲ ಎಂಬುದನ್ನು ಅವರು ಕಾಣಲಿಲ್ಲವೇ? ಆದರೂ ಅವರು ಅದನ್ನು ನಂಬಿಕೊಂಡರು. ಅವರು ಅಕ್ರಮಿಗಳಾಗಿದ್ದರು.

149. ಮುಂದೆ, ಅವರಿಗೆ ತಮ್ಮ ತಪ್ಪಿನ ಅರಿವಾದಾಗ ಮತ್ತು ತಾವು ದಾರಿ ತಪ್ಪಿರುವುದು ಅವರಿಗೆ ಮನವರಿಕೆಯಾದಾಗ, ಅವರು ಹೇಳಿದರು; ನಮ್ಮ ಒಡೆಯನು ನಮ್ಮ ಮೇಲೆ ಕರುಣೆ ತೋರದಿದ್ದರೆ ಮತ್ತು ಅವನು ನಮ್ಮನ್ನು ಕ್ಷಮಿಸದಿದ್ದರೆ ಖಂಡಿತವಾಗಿಯೂ ನಾವು ನಷ್ಟಕ್ಕೊಳಗಾಗುವೆವು.

150. ಆ ಬಳಿಕ, ಮೂಸಾ ತಮ್ಮ ಜನಾಂಗದೆಡೆಗೆ ಮರಳಿಬಂದಾಗ ಕೋಪಗೊಂಡರು ಹಾಗೂ ದುಃಖಿತರಾದರು. ಅವರು ಹೇಳಿದರು; ನನ್ನ ಅನುಪಸ್ಥಿತಿಯಲ್ಲಿ ನೀವು ನನ್ನ ಪ್ರಾತಿನಿಧ್ಯದ ಹೊಣೆಯನ್ನು ಬಹಳ ಕೆಟ್ಟದಾಗಿ ನಿರ್ವಹಿಸಿದಿರಿ. ನಿಮ್ಮ ಒಡೆಯನ ಆದೇಶದ ಕುರಿತು ನೀವು ಆತುರ ಪಟ್ಟಿರಾ? – ಮತ್ತು ಮೂಸಾ (ಅಲ್ಲಾಹನು ಕೊಟ್ಟ) ಫಲಕಗಳನ್ನು ಚೆಲ್ಲಿಬಿಟ್ಟರು ಹಾಗೂ ತಮ್ಮ ಸಹೋದರ (ಹಾರೂನ್)ರ ತಲೆಯನ್ನು ಹಿಡಿದು ತಮ್ಮಡೆಗೆ ಎಳೆದರು. ಅವರು (ಹಾರೂನ್) ಹೇಳಿದರು; ನನ್ನ ತಾಯಿಯ ಪುತ್ರನೇ! ಈ ಜನಾಂಗದವರು ನನ್ನನ್ನು ತೀರಾ ದುರ್ಬಲಗೊಳಿಸಿ ಬಿಟ್ಟರು. ಅವರಂತು ನನ್ನನ್ನು ಕೊಲ್ಲುವವರಿದ್ದರು. ನೀನೀಗ ನನ್ನ ಬಗ್ಗೆ ಶತ್ರುಗಳು ನಗುವಂತೆ ಮಾಡಬೇಡ ಮತ್ತು ನನ್ನನ್ನು ಅಕ್ರಮಿಗಳ ಸಾಲಿಗೆ ಸೇರಿಸಬೇಡ.

151. ಅವರು (ಮೂಸಾ) ಹೇಳಿದರು; ನನ್ನೊಡೆಯಾ, ನನ್ನನ್ನು ಹಾಗೂ ನನ್ನ ಸಹೋದರನನ್ನು ಕ್ಷಮಿಸಿಬಿಡು ಮತ್ತು ನಮ್ಮನ್ನು ನಿನ್ನ ಅನುಗ್ರಹದಲ್ಲಿ ಸೇರಿಸು. ನೀನಂತು ಎಲ್ಲ ಕರುಣಾಳುಗಳಿಗಿಂತ ಮಹಾಕರುಣಾಳುವಾಗಿರುವೆ.

152. ಖಂಡಿತವಾಗಿಯೂ, ಕರುವನ್ನು (ದೇವರಾಗಿ) ನೆಚ್ಚಿಕೊಂಡವರಿಗೆ, ಬಹುಬೇಗನೇ ಅವರ ಒಡೆಯನ ಕೋಪವು ತಟ್ಟಲಿದೆ ಮತ್ತು ಇಹಲೋಕದಲ್ಲಿ ಅವರಿಗೆ ಅಪಮಾನವು ಎದುರಾಗಲಿದೆ. ಸುಳ್ಳುಗಳನ್ನು ಸೃಷ್ಟಿಸುವವರಿಗೆ. ನಾವು ಇದೇ ರೀತಿ ಪ್ರತಿಫಲ ನೀಡುತ್ತೇವೆ.

153. ಪಾಪಕೃತ್ಯಗಳನ್ನು ಮಾಡಿದ ಬಳಿಕ ಪಶ್ಚಾತ್ತಾಪ ಪಟ್ಟವರು ಮತ್ತು ವಿಶ್ವಾಸವಿಟ್ಟವರು – ಖಂಡಿತವಾಗಿಯೂ ಇಷ್ಟಾದ ಬಳಿಕ ನಿಮ್ಮೊಡೆಯನು (ಅವರ ಪಾಲಿಗೆ) ಕ್ಷಮಾಶೀಲನೂ ಕರುಣಾಮಯಿಯೂ ಆಗಿರುತ್ತಾನೆ.

154. ಮೂಸಾರ ಕೋಪ ತಣಿದಾಗ, ಅವರು ಫಲಕಗಳನ್ನು ಎತ್ತಿಕೊಂಡರು. ಅವುಗಳ ಬರಹಗಳಲ್ಲಿ ಮಾರ್ಗದರ್ಶನ ಹಾಗೂ ಅನುಗ್ರಹವಿತ್ತು – ತಮ್ಮ ಒಡೆಯನ ಭಕ್ತಿ ಉಳ್ಳವರಿಗಾಗಿ.

 155. ಮುಂದೆ ಮೂಸಾ, ನಮ್ಮ ಜೊತೆಗಿನ ಕರಾರಿನ ಅವಧಿಗಾಗಿ ತಮ್ಮ ಜನಾಂಗದ ಎಪ್ಪತ್ತು ಮಂದಿ ಪುರುಷರನ್ನು ಆರಿಸಿಕೊಂಡರು. ತರುವಾಯ ಅವರಿಗೆ ಭೂಕಂಪವು ಎದುರಾದಾಗ, ಅವರು (ಮೂಸಾ) ಹೇಳಿದರು; ‘‘ನನ್ನೊಡೆಯಾ ನೀನಿಚ್ಛಿಸಿದ್ದರೆ, ಇವರನ್ನು ಮತ್ತು ನನ್ನನ್ನು ಈ ಹಿಂದೆಯೇ ನಾಶ ಪಡಿಸುತ್ತಿದ್ದೆ. ಇದೀಗ ನಮ್ಮಲ್ಲಿನ ಮೂರ್ಖರ ಕೃತ್ಯಕ್ಕಾಗಿ ನೀನು ನಮ್ಮನ್ನು ನಾಶ ಪಡಿಸುವೆಯಾ? ಇದು ನಿನ್ನ ಪರೀಕ್ಷೆಯಲ್ಲದೆ ಬೇರೇನಲ್ಲ. ಈ ಮೂಲಕ ನೀನು, ನೀನಿಚ್ಛಿಸಿದವರನ್ನು ದಾರಿಗೆಡಿಸುವೆ ಮತ್ತು ನೀನಿಚ್ಛಿಸಿದವರನ್ನು ಸರಿದಾರಿಗೆ ತರುವೆ. ನಮ್ಮ ಪೋಷಕನು ನೀನೇ. ಆದ್ದರಿಂದ ನಮ್ಮನ್ನು ಕ್ಷಮಿಸು ಮತ್ತು ನಮ್ಮ ಮೇಲೆ ಕರುಣೆತೋರು. ನೀನು ಅತ್ಯುತ್ತಮ ಕ್ಷಮಾಶೀಲನು.’’

 156. ‘‘ನೀನು ನಮ್ಮ ಪಾಲಿಗೆ ಈ ಲೋಕದಲ್ಲೂ ಪರಲೋಕದಲ್ಲೂ ಒಳಿತನ್ನೇ ವಿಧಿಸು. ನಾವಂತು ನಿನ್ನೆಡೆಗೆ ಮರಳಿರುವೆವು.’’ – ಅವನು (ಅಲ್ಲಾಹನು) ಹೇಳಿದನು; ನಾನು ನನ್ನ ಶಿಕ್ಷೆಯನ್ನು ನಾನಿಚ್ಛಿಸಿದವರಿಗೆ ನೀಡುತ್ತೇನೆ. ಇನ್ನು ನನ್ನ ಅನುಗ್ರಹವು ಎಲ್ಲವನ್ನೂ ಆವರಿಸಿಕೊಂಡಿದೆ. ನಾನು ಅದನ್ನು, ಧರ್ಮನಿಷ್ಠರ, ಝಕಾತ್ ಪಾವತಿಸುವವರ ಮತ್ತು ನಮ್ಮ ವಚನಗಳನ್ನು ನಂಬುವವರ ಪಾಲಿಗೆ ಬರೆದು ಬಿಡುವೆನು.

157. ಅವರು ನಿರಕ್ಷರಿ ಪ್ರವಾದಿಯನ್ನು ಅನುಸರಿಸುತ್ತಾರೆ. ಅವರ (ಆ ಪ್ರವಾದಿಯ) ಕುರಿತು ತಮ್ಮ ಬಳಿ ಇರುವ ತೌರಾತ್ ಮತ್ತು ಇಂಜೀಲ್‌ಗಳಲ್ಲಿ (ಈ ರೀತಿ) ಬರೆದಿರುವುದನ್ನು ಅವರು ಕಾಣುತ್ತಾರೆ; ‘‘ಅವರು (ಆ ಪ್ರವಾದಿ) ಅವರಿಗೆ, ಒಳಿತನ್ನು ಆದೇಶಿಸುವರು, ಅವರನ್ನು ಕೆಡುಕಿನಿಂದ ತಡೆಯುವರು, ನಿರ್ಮಲವಾದವುಗಳನ್ನು ಅವರ ಪಾಲಿಗೆ ಸಮ್ಮತಗೊಳಿಸುವರು, ಮಲಿನ ವಸ್ತುಗಳನ್ನು ಅವರ ಪಾಲಿಗೆ ನಿಷೇಧಿಸುವರು, ಅವರಿಂದ ಅವರ ಭಾರಗಳನ್ನು ಇಳಿಸುವರು ಮತ್ತು ಅವರ ಮೇಲಿದ್ದ ನೊಗಗಳನ್ನು ಕಳಚುವರು – ಅವರಲ್ಲಿ ನಂಬಿಕೆ ಇಟ್ಟು ಅವರನ್ನು ಸಮರ್ಥಿಸುವವರು, ಅವರಿಗೆ ನೆರವಾಗುವವರು ಮತ್ತು ಅವರ ಜೊತೆಗೆ ಇಳಿಸಲಾಗಿರುವ ಪ್ರಕಾಶವನ್ನು ಅನುಸರಿಸುವವರೇ ವಿಜಯಿಗಳು.’’

158. (ದೂತರೇ) ಹೇಳಿರಿ; ಮಾನವರೇ, ನಾನು ನಿಮ್ಮೆಲ್ಲರ ಪಾಲಿಗೆ ಅಲ್ಲಾಹನ ದೂತನಾಗಿರುವೆನು. ಆಕಾಶಗಳ ಮತ್ತು ಭೂಮಿಯ ಆಧಿಪತ್ಯವು ಅವನಿಗೆ (ಅಲ್ಲಾಹನಿಗೆ) ಸೇರಿದೆ. ಅವನ ಹೊರತು ಬೇರೆ ದೇವರಿಲ್ಲ. ಅವನೇ ಜೀವಂತಗೊಳಿಸುವವನು ಮತ್ತು ಮರಣ ನೀಡುವವನು. ನೀವೀಗ ಅಲ್ಲಾಹನಲ್ಲೂ ಆತನ ದೂತನಲ್ಲೂ ನಂಬಿಕೆ ಇಡಿರಿ – ಅವರು ನಿರಕ್ಷರಿ ಪ್ರವಾದಿಯಾಗಿದ್ದು, ಅಲ್ಲಾಹನಲ್ಲಿ ಹಾಗೂ ಅವನ ವಚನಗಳಲ್ಲಿ ನಂಬಿಕೆ ಉಳ್ಳವರಾಗಿದ್ದಾರೆ. ಮಾರ್ಗದರ್ಶನ ಪಡೆಯಲಿಕ್ಕಾಗಿ ನೀವು ಅವರನ್ನು ಅನುಸರಿಸಿ.

  159. ಮೂಸಾರ ಜನಾಂಗದಲ್ಲಿ ಸತ್ಯದೊಂದಿಗೆ ಮಾರ್ಗದರ್ಶನ ಮಾಡುವ ಮತ್ತು ಆ ವಿಷಯದಲ್ಲಿ ನ್ಯಾಯ ಪಾಲಿಸುವ ಒಂದು ಸಮುದಾಯವಿದೆ.

  160. ನಾವು ಅವರನ್ನು ಹನ್ನೆರಡು ಕುಲ ಗೋತ್ರಗಳಾಗಿ ವಿಂಗಡಿಸಿದೆವು. ಮೂಸಾರೊಡನೆ ಅವರ ಜನಾಂಗವು ನೀರನ್ನು ಕೇಳಿದಾಗ ‘‘ಆ ಕಲ್ಲಿನ ಮೇಲೆ ನಿಮ್ಮ ಊರುಗೋಲಿನಿಂದ ಹೊಡೆಯಿರಿ’’ ಎಂದು ನಾವು ಅವರೆಡೆಗೆ ದಿವ್ಯವಾಣಿಯನ್ನು ಕಳಿಸಿದೆವು; ಆಗ ಅದರಿಂದ ಹನ್ನೆರಡು ಚಿಲುಮೆಗಳು ಹರಿಯತೊಡಗಿದವು. ಪ್ರತಿಯೊಬ್ಬರೂ ತಮ್ಮ ಜಲಮೂಲವನ್ನು ಗುರುತಿಸಿಕೊಂಡರು. ನಾವು ಅವರ ಮೇಲೆ ಮೋಡದ ನೆರಳನ್ನು ಆವರಿಸಿದೆವು. ಅವರಿಗೆ ಮನ್ನ್ ಮತ್ತು ಸಲ್ವಾ (ಎಂಬ ಆಹಾರ ಸಾಮಗ್ರಿ)ಗಳನ್ನು ಇಳಿಸಿಕೊಟ್ಟೆವು.‘‘ನಿಮಗೆ ಒದಗಿಸಲಾಗಿರುವ ಶುದ್ಧ ವಸ್ತುಗಳಿಂದ ತಿನ್ನಿರಿ’’ (ಎಂದು ಅವರಿಗೆ ಆದೇಶಿಸಲಾಗಿತ್ತು. ಇದನ್ನು ಮೀರುವ ಮೂಲಕ) ಅವರು ನಮ್ಮ ಮೇಲೇನೂ ಅಕ್ರಮ ವೆಸಗಲಿಲ್ಲ. ಅವರು ಸ್ವತಃ ತಮ್ಮ ಮೇಲೆಯೇ ಅಕ್ರಮವೆಸಗಿಕೊಂಡರು.

 161. ಅವರೊಡನೆ ಹೀಗೆನ್ನಲಾಗಿತ್ತು; ನೀವು ಈ ಪಟ್ಟಣದಲ್ಲಿ ವಾಸಿಸಿರಿ, ಇಲ್ಲಿರುವುದರಲ್ಲಿ ನೀವಿಚ್ಛಿಸುವಂತೆ ತಿನ್ನಿರಿ, ’ಹಿತ್ತಃ’ ಎನ್ನುತ್ತಲಿರಿ (ಕ್ಷಮೆಯಾಚಿಸುತ್ತಲಿರಿ) ಮತ್ತು ಸಾಷ್ಟಾಂಗವೆರಗುತ್ತಾ ಪಟ್ಟಣದ ದ್ವಾರವನ್ನು ಪ್ರವೇಶಿಸಿರಿ. ನಾವು ನಿಮ್ಮ ಪ್ರಮಾದಗಳನ್ನು ಕ್ಷಮಿಸಿ ಬಿಡುವೆವು. ಸತ್ಕರ್ಮಿಗಳಿಗೆ ನಾವು ಬಹುಬೇಗನೇ ಇನ್ನಷ್ಟನ್ನು ನೀಡುವೆವು.

 162. ಆದರೆ ಅವರಲ್ಲಿನ ಅಕ್ರಮಿಗಳು ತಮಗೆ ನೀಡಲಾಗಿದ್ದ ಶಬ್ದವನ್ನು ಬೇರೆಯದಾಗಿ ಬದಲಿಸಿ ಬಿಟ್ಟರು. ಕೊನೆಗೆ ಅವರು ಎಸಗುತ್ತಿದ್ದ ಅಕ್ರಮದ ಫಲವಾಗಿ ನಾವು ಅವರ ಮೇಲೆ ಆಕಾಶದಿಂದ ಶಿಕ್ಷೆಯನ್ನು ಎರಗಿಸಿಬಿಟ್ಟೆವು.

163. ನೀವು ಅವರೊಡನೆ, ಕಡಲ ತೀರದಲ್ಲಿದ್ದ ಆ ಪಟ್ಟಣದ ಕುರಿತು ಕೇಳಿರಿ. ಅವರು ಸಬ್ತ್‌ನ (ಶನಿವಾರದ) ನಿಯಮವನ್ನು ಮೀರಿ ಬಿಟ್ಟರು. ಅವರ ಸಬ್ತ್‌ನ ದಿನವೇ ಮೀನುಗಳು ಅವರ ಮುಂದೆ ಬಂದು ಬಿಡುತ್ತಿದ್ದವು ಮತ್ತು ಸಬ್ತ್ ಅಲ್ಲದ ದಿನಗಳಲ್ಲಿ ಅವು ಅವರ ಮುಂದೆ ಬರುತ್ತಿರಲಿಲ್ಲ. ಈ ರೀತಿ ನಾವು ಅವರನ್ನು ಪರೀಕ್ಷಿಸುತ್ತಿದ್ದೆವು. ಏಕೆಂದರೆ ಅವರು ಅವಿಧೇಯರಾಗಿದ್ದರು.

    164. ಅವರಲ್ಲಿನ ಒಂದು ಗುಂಪು ‘‘ಅಲ್ಲಾಹನು ನಾಶಮಾಡಲಿರುವ ಅಥವಾ ತೀವ್ರ ಯಾತನೆಗೆ ಗುರಿಪಡಿಸಲಿರುವ ಒಂದು ಜನಾಂಗಕ್ಕೆ ನೀವೇಕೆ ಉಪದೇಶ ನೀಡುತ್ತೀರಿ?’’ಎಂದಿತು. ಅವರು (ಬೋಧಕರು) ಹೇಳಿದರು; ನಿಮ್ಮ ಒಡೆಯನ ಮುಂದೆ ನೆಪವಾಗಲು ಮತ್ತು ಅವರು ದೇವಭಯ ಉಳ್ಳವರಾಗಲೂ ಬಹುದೆಂದು.

165. ಕೊನೆಗೆ ಅವರು, ತಮಗೆ ನೀಡಲಾದ ಉಪದೇಶವನ್ನು ಮರೆತುಬಿಟ್ಟಾಗ, ಅವರನ್ನು ದುಷ್ಟ ಕೆಲಸಗಳಿಂದ ತಡೆಯುತ್ತಿದ್ದವರನ್ನು ನಾವು ರಕ್ಷಿಸಿದೆವು ಮತ್ತು ಅಕ್ರಮಿಗಳನ್ನು ಅವರ ಅವಿಧೇಯತೆಯ ಕಾರಣ ಹಿಡಿದು, ಭಾರೀ ಕೆಟ್ಟ ಶಿಕ್ಷೆಗೆ ಗುರಿಪಡಿಸಿದೆವು.

166. ಅವರಿಗೆ ಹೇರಲಾಗಿದ್ದ ನಿರ್ಬಂಧವನ್ನು ಅವರು ಉಲ್ಲಂಘಿಸಿದಾಗ ನಾವು ಅವರಿಗೆ ‘‘ಅಪಮಾನಿತ ಕೋತಿಗಳಾಗಿ ಬಿಡಿರಿ’’ ಎಂದೆವು.

167. ಪುನರುತ್ಥಾನ ದಿನದವರೆಗೂ, ಘೋರ ಹಿಂಸೆಯ ಮೂಲಕ ಅವರನ್ನು ದಂಡಿಸುತ್ತಿರುವವರನ್ನು ಅವರ ಮೇಲೆ ಹೇರುತ್ತಲೇ ಇರುವೆನೆಂದು ನಿಮ್ಮ ಒಡೆಯನು ಘೋಷಿಸಿರುವನು. ನಿಮ್ಮ ಒಡೆಯನು ಕ್ಷಿಪ್ರವಾಗಿ ದಂಡಿಸಬಲ್ಲವನಾಗಿದ್ದಾನೆ ಮತ್ತು ಅವನು ಖಂಡಿತವಾಗಿಯೂ ಅತ್ಯಂತ ಕ್ಷಮಾಶೀಲನೂ ಕರುಣಾಮಯಿಯೂ ಆಗಿದ್ದಾನೆ.

168. ತರುವಾಯ ನಾವು ಅವರನ್ನು ಗುಂಪು ಗುಂಪುಗಳಾಗಿ ಭೂಮಿಯಲ್ಲಿ ಹರಡಿ ಬಿಟ್ಟೆವು. ಅವರಲ್ಲಿ ಸಜ್ಜನರೂ ಇದ್ದಾರೆ ಮತ್ತು ಅವರಲ್ಲಿ ಇತರರೂ ಇದ್ದಾರೆ. ಅವರು (ಸನ್ಮಾರ್ಗದೆಡೆಗೆ) ಮರಳಿ ಬರಲೆಂದು ನಾವು ಅವರನ್ನು ಒಳಿತುಗಳ ಮೂಲಕವೂ ಕೆಡುಕುಗಳ ಮೂಲಕವೂ ಪರೀಕ್ಷೆಗೆ ಒಳಪಡಿಸಿದೆವು.

    169. ಅವರ ಬಳಿಕ ಒಂದು ದುಷ್ಟ ಪೀಳಿಗೆಯು ಗ್ರಂಥದ ಉತ್ತರಾಧಿಕಾರಿಯಾಯಿತು. ಅವರು ಈ ಲೋಕದ ಸುಖವನ್ನೇ ಆರಿಸಿಕೊಂಡರು ಮತ್ತು ನಮ್ಮನ್ನು ಕ್ಷಮಿಸಲಾಗುವುದು ಎನ್ನುತ್ತಿದ್ದರು. ನಿಜವಾಗಿ ಅದೇ ಸಂಪತ್ತು ಮತ್ತೆ ಅವರ ಬಳಿಗೆ ಬಂದರೆ ಅವರು ಅದನ್ನೇ ಆರಿಸುವರು. ಅಲ್ಲಾಹನ ಕುರಿತು ಸತ್ಯವಲ್ಲದ್ದನ್ನು ಹೇಳಬಾರದೆಂದು ಮತ್ತು ಅದರಲ್ಲಿ (ಗ್ರಂಥದಲ್ಲಿ) ಇರುವುದನ್ನು ಅಧ್ಯಯನ ಮಾಡಬೇಕೆಂದು ಗ್ರಂಥದ ಆಧಾರದಲ್ಲಿ ಅವರಿಂದ ಕರಾರನ್ನು ಪಡೆಯಲಾಗಿರಲಿಲ್ಲವೇ? ಧರ್ಮನಿಷ್ಠರ ಪಾಲಿಗೆ ಪರಲೋಕದ ನೆಲೆಯೇ ಶ್ರೇಷ್ಠವಾದುದು. ನೀವೇನು, ಅರ್ಥಯಿಸಿಕೊಳ್ಳುವುದಿಲ್ಲವೇ?

 170. ಗ್ರಂಥವನ್ನು ಭದ್ರವಾಗಿ ಹಿಡಿದುಕೊಂಡ ಹಾಗೂ ನಮಾಝ್‌ಅನ್ನು ಪಾಲಿಸುವಂತಹ ಸತ್ಕರ್ಮಿಗಳ ಪ್ರತಿಫಲವನ್ನು ನಾವು ಖಂಡಿತ ವ್ಯರ್ಥಗೊಳಿಸುವುದಿಲ್ಲ.

  171. ನಾವು ಪರ್ವತವನ್ನು, ನೆರಳುಕೊಡುವ ಚಪ್ಪರದಂತೆ ಅವರ ಮೇಲೆ ಎತ್ತಿದಾಗ, ಅದು ತಮ್ಮ ಮೇಲೆ ಬಿದ್ದು ಬಿಡುವುದೆಂದು ಅವರು ಭಾವಿಸಿದರು. ‘‘ನಿಮಗೆ ನಾವು ನೀಡಿರುವುದನ್ನು ಭದ್ರವಾಗಿ ಹಿಡಿದುಕೊಳ್ಳಿರಿ ಮತ್ತು ಅದರಲ್ಲೇನಿದೆಯೋ ಅದನ್ನು ನೆನಪಿಟ್ಟುಕೊಳ್ಳಿರಿ. ನೀವು ಸುರಕ್ಷಿತರಾಗಬಹುದು’’ (ಎಂದು ಅವರಿಗೆ ಆದೇಶಿಸಲಾಗಿತ್ತು.)

172. ನಿಮ್ಮೊಡೆಯನು ಆದಮ್‌ರ ಮಕ್ಕಳ ಮೂಲಕ ಜನಿಸಿದ ಅವರ ಸಂತತಿಗಳನ್ನು, ಸ್ವತಃ ತಮ್ಮ ವಿರುದ್ಧವೇ ಸಾಕ್ಷಿಗಳಾಗಿಸಿ ‘‘ನಾನು ನಿಮ್ಮ ಒಡೆಯನಲ್ಲವೇ?’’ ಎಂದು ಕೇಳಿದಾಗ ಅವರು, ‘‘ಯಾಕಲ್ಲ? ಅದಕ್ಕೆ ನಾವೇ ಸಾಕ್ಷಿಗಳು’’ ಎಂದಿದ್ದರು. ನಾಳೆ ಪುನರುತ್ಥಾನ ದಿನ ನೀವು ಈ ಕುರಿತು ನಮಗೇನೂ ತಿಳಿದಿರಲಿಲ್ಲ ಎನ್ನಬಾರದೆಂದು ಹೀಗೆ ಮಾಡಲಾಯಿತು.

173. ಅಥವಾ ನೀವು, ‘‘ಬಹುದೇವಾರಾಧನೆ ಮಾಡಿದವರು ಗತಕಾಲದ ನಮ್ಮ ಪೂರ್ವಜರು. ನಾವು ಅವರ ಸಂತತಿಗಳು ಮಾತ್ರ. ಆ ದಾರಿಗೆಟ್ಟವರ ಕೃತ್ಯಕ್ಕಾಗಿ ನೀನೇನು ನಮ್ಮನ್ನು ನಾಶಪಡಿಸುವೆಯಾ?’’ ಎನ್ನಬಾರದೆಂದು (ಹೀಗೆ ಮಾಡಲಾಯಿತು).

174. ಈ ರೀತಿ, ಅವರು (ಸತ್ಯದೆಡೆಗೆ) ಮರಳಬೇಕೆಂದು ನಾವು ನಮ್ಮ ವಚನಗಳನ್ನು ವಿವರಿಸುತ್ತೇವೆ. .

   175. ಆ ವ್ಯಕ್ತಿಯ ವಿಷಯವನ್ನು ನೀವು ಅವರಿಗೆ ಓದಿ ಹೇಳಿರಿ; ನಾವು ಆತನಿಗೆ ನಮ್ಮ ಪುರಾವೆಗಳನ್ನು ನೀಡಿದ್ದೆವು. ಅವನು ಅವುಗಳಿಂದ ಜಾರಿಕೊಂಡನು. ಶೈತಾನನು ಅವನ ಬೆನ್ನು ಹತ್ತಿದನು. ಕೊನೆಗೆ ಅವನು ಸಂಪೂರ್ಣ ದಾರಿಗೆಟ್ಟವನಾದನು.

176. ನಾವು ಬಯಸಿದ್ದರೆ ಅವುಗಳ (ಪುರಾವೆ) ಮೂಲಕ ಆತನನ್ನು ಉನ್ನತಿಗೇರಿಸಬಹುದಿತ್ತು. ಆದರೆ ಅವನು ಮಾತ್ರ ನೆಲದೆಡೆಗೇ ಬಾಗಿದ್ದನು ಮತ್ತು ತನ್ನ ಸ್ವೇಚ್ಛೆಯನ್ನೇ ಅನುಸರಿಸಿದನು. ಅವನ ಉದಾಹರಣೆ ನಾಯಿಯಂತಿದೆ. ನೀವು ಅದನ್ನು ಥಳಿಸಿದರೂ ಅದು ನಾಲಗೆಯನ್ನು ಹೊರಚಾಚಿ ಕಂಪಿಸುತ್ತಿರುತ್ತದೆ. ನೀವು ಅದನ್ನು ಹಾಗೆಯೇ ಬಿಟ್ಟರೂ ಅದು ನಾಲಗೆ ಹೊರಚಾಚಿ ಕಂಪಿಸುತ್ತಿರುತ್ತದೆ. ನಮ್ಮ ವಚನಗಳನ್ನು ಧಿಕ್ಕರಿಸುವವರ ಉದಾಹರಣೆಯೂ ಹೀಗೆಯೇ ಇದೆ. ನೀವು ಅವರಿಗೆ (ಇಂತಹ) ವೃತ್ತಾಂತಗಳನ್ನು ವಿವರಿಸಿರಿ. ಅವರು ಚಿಂತನೆ ನಡೆಸಲಿ.

 

177. ನಮ್ಮ ವಚನಗಳನ್ನು ತಿರಸ್ಕರಿಸಿದ ಹಾಗೂ ಸ್ವತಃ ತಮ್ಮ ಮೇಲೆಯೇ ಅಕ್ರಮವೆಸಗಿಕೊಂಡ ಜನರ ಅವಸ್ಥೆ ತುಂಬಾ ಕೆಟ್ಟದಾಗಿದೆ.

178. ಅಲ್ಲಾಹನು ಯಾರಿಗೆ ದಾರಿ ತೋರಿದನೋ ಅವನೇ ಸರಿದಾರಿಯಲ್ಲಿರುತ್ತಾನೆ. ಅವನು ಯಾರನ್ನು ದಾರಿಗೆಡಿಸಿದನೋ ಅವರೇ ನಷ್ಟ ಅನುಭವಿಸುವವರಾಗಿದ್ದಾರೆ.

179. ನಾವು ಜಿನ್ನ್ ಮತ್ತು ಮಾನವರ ಪೈಕಿ ಅನೇಕರನ್ನು ನರಕಕ್ಕಾಗಿಯೇ ಸೃಷ್ಟಿಸಿದ್ದೇವೆ. ಅವರಿಗೆ ಮನಸ್ಸುಗಳಿವೆ, ಆದರೆ ಆ ಮೂಲಕ ಅವರು ಚಿಂತನೆ ನಡೆಸುವುದಿಲ್ಲ. ಅವರಿಗೆ ಕಣ್ಣುಗಳಿವೆ, ಆದರೆ ಆ ಮೂಲಕ ಅವರು ನೋಡುವುದಿಲ್ಲ. ಹಾಗೆಯೇ, ಅವರಿಗೆ ಕಿವಿಗಳಿವೆ, ಆದರೆ ಆ ಮೂಲಕ ಅವರು ಕೇಳುವುದಿಲ್ಲ. ಅವರು ಪ್ರಾಣಿಗಳಂತಿದ್ದಾರೆ, ಮಾತ್ರವಲ್ಲ, ಇನ್ನೂ ಹೆಚ್ಚು ದಾರಿಗೆಟ್ಟಿದ್ದಾರೆ. ಅವರಿಗೆ ಅರಿವಿಲ್ಲ.

 180. ಅತ್ಯುತ್ತಮ ಹೆಸರುಗಳು ಅಲ್ಲಾಹನಿಗೆ ಸೇರಿವೆ. ನೀವು ಅವನನ್ನು ಅವುಗಳಿಂದಲೇ ಕರೆಯಿರಿ. ಅವನ ಹೆಸರುಗಳಿಗೆ ಅಗೌರವ ತೋರುವವರನ್ನು ಬಿಟ್ಟುಬಿಡಿರಿ. ಅವರು ಮಾಡುತ್ತಿದ್ದುದರ ಫಲವನ್ನು ಅವರು ಉಣ್ಣಲಿದ್ದಾರೆ.

 181. ನಾವು ಸೃಷ್ಟಿಸಿರುವ ಒಂದು ಸಮುದಾಯವಿದೆ. ಅವರು (ಜನರಿಗೆ) ಸತ್ಯದೊಂದಿಗೆ ಮಾರ್ಗದರ್ಶನ ಮಾಡುತ್ತಾರೆ ಮತ್ತು ಅದರ ಆಧಾರದಲ್ಲೇ ನ್ಯಾಯಪಾಲನೆ ಮಾಡುತ್ತಾರೆ.

  182. ಇನ್ನು, ನಮ್ಮ ವಚನಗಳನ್ನು ಸುಳ್ಳೆಂದವರನ್ನು (ಶಿಕ್ಷಿಸಲು) ನಾವು, ಅವರಿಗೆ ಅರಿವೇ ಆಗದಂತೆ ಹಂತಹಂತವಾಗಿ ಅವರನ್ನು ಹಿಡಿದುಕೊಳ್ಳುತ್ತೇವೆ.

183. ನಾನು ಅವರಿಗೆ ಧಾರಾಳ ಕಾಲಾವಕಾಶ ನೀಡುತ್ತೇನೆ. ನನ್ನ ಯೋಜನೆ ಖಂಡಿತ ಬಹಳ ಬಲಿಷ್ಠವಾಗಿರುತ್ತದೆ.

184. ಅವರೇನು ಆಲೋಚಿಸುವುದಿಲ್ಲವೇ? ಅವರ ಜೊತೆಗಾರನಿಗೆ (ದೂತರಿಗೆ) ಹುಚ್ಚೇನೂ ಇಲ್ಲ. ಅವರು ಸ್ಪಷ್ಟವಾಗಿ ಎಚ್ಚರಿಸುವವರು ಮಾತ್ರ.

 185. ಅವರೇನು, ಆಕಾಶಗಳ ಹಾಗೂ ಭೂಮಿಯ ಸಾಮ್ರಾಜ್ಯವನ್ನು ಮತ್ತು ಅಲ್ಲಾಹನು ಸೃಷ್ಟಿಸಿರುವ ಯಾವ ವಸ್ತುವನ್ನೂ ನೋಡುವುದಿಲ್ಲವೇ? ಅವರ ಅಂತ್ಯ (ಮರಣವು) ಸಮೀಪಿಸಿರಬಹುದು. ಆ ಬಳಿಕ ಅವರು ಏನನ್ನು ತಾನೇ ನಂಬುವರು?

186. ಯಾರನ್ನು ಅಲ್ಲಾಹನು ದಾರಿಗೆಡಿಸಿದನೋ ಅವನಿಗೆ ಸರಿದಾರಿ ತೋರಬಲ್ಲವರು ಯಾರೂ ಇಲ್ಲ. ಅವನಂತು ಅವರನ್ನು ತಮ್ಮ ವಿದ್ರೋಹದ ಮರುಳಲ್ಲೇ ಅಲೆಯುತ್ತಿರಲು ಬಿಟ್ಟು ಬಿಡುತ್ತಾನೆ.

 187.(ದೂತರೇ,) ಅವರು ನಿಮ್ಮೊಡನೆ, ಪುನರುತ್ಥಾನದ ಘಳಿಗೆಯ ಕುರಿತು, ಅದು ಯಾವಾಗ ಬರಲಿದೆ ಎಂದು ಪ್ರಶ್ನಿಸುತ್ತಾರೆ. ಹೇಳಿರಿ; ಅದರ ಜ್ಞಾನವು ನನ್ನ ಒಡೆಯನ ಬಳಿ ಇದೆ, ಅದನ್ನು (ಪುನರುತ್ಥಾನವನ್ನು) ಅದರ ಸಮಯದಲ್ಲಿ ಪ್ರಕಟಪಡಿಸುವವನು ಅವನ ಹೊರತು ಬೇರಾರೂ ಅಲ್ಲ. ಅದು ಆಕಾಶಗಳ ಹಾಗೂ ಭೂಮಿಯ ಪಾಲಿಗೆ ತುಂಬಾ ಕಠಿಣವಾಗಿರುವುದು. ನಿಮ್ಮ ಬಳಿಗೆ ಅದು ತೀರಾ ಹಠಾತ್ತನೆ ಬಂದು ಬಿಡುವುದು. ನೀವು ಅದನ್ನೇ ಕಾಯುತ್ತಿರುವಿರೋ ಎಂಬಂತೆ ಅವರು ನಿಮ್ಮೊಡನೆ (ಆ ಕುರಿತು) ಕೇಳುತ್ತಾರೆ. ಹೇಳಿರಿ; ಅದರ ಜ್ಞಾನವು ಅಲ್ಲಾಹನ ಬಳಿ ಮಾತ್ರ ಇದೆ. ಆದರೆ ಹೆಚ್ಚಿನ ಜನರು ಅರಿತಿಲ್ಲ.

 188. ಹೇಳಿರಿ; ನಾನಂತು, ಅಲ್ಲಾಹನು ಇಚ್ಛಿಸದೆ, ಸ್ವತಃ ನನಗೆ ಯಾವುದೇ ಲಾಭ ಅಥವಾ ನಷ್ಟವನ್ನುಂಟುಮಾಡುವ ಅಧಿಕಾರ ಉಳ್ಳವನಲ್ಲ. ಒಂದು ವೇಳೆ ನನಗೆ ಗುಪ್ತ ವಿಷಯಗಳ ಜ್ಞಾನ ಇದ್ದಿದ್ದರೆ ನಾನು ಭಾರೀ ಪ್ರಮಾಣದಲ್ಲಿ ಒಳಿತನ್ನು (ಸಂಪತ್ತನ್ನು) ಸಂಗ್ರಹಿಸುತ್ತಿದ್ದೆ ಮತ್ತು ಯಾವ ಹಾನಿಯೂ ನನಗೆ ಸಂಭವಿಸುತ್ತಿರಲಿಲ್ಲ. ನಾನು, ಎಚ್ಚರಿಕೆ ನೀಡುವ ಮತ್ತು ನಂಬುವವರಿಗೆ ಶುಭವಾರ್ತೆ ನೀಡುವ ಕೇವಲ ಒಬ್ಬ ಮನುಷ್ಯನಲ್ಲದೆ ಬೇರೇನಾದರೂ ಆಗಿರುವೆನೇ?

 189. ಅವನೇ, ನಿಮ್ಮನ್ನು ಒಂದು ಜೀವದಿಂದ ಸೃಷ್ಟಿಸಿದವನು ಮತ್ತು ಅದು ಸುಖ ಪಡೆಯಲೆಂದು ಅದರಿಂದಲೇ ಅದರ ಜೊತೆಯನ್ನು ನಿರ್ಮಿಸಿದವನು. ಮುಂದೆ ಅವನು (ಪುರುಷನು) ಅವಳನ್ನು ಆವರಿಸಿದಾಗ, ಅವಳು ಲಘುವಾದ ಗರ್ಭವನ್ನು ಧರಿಸಿದಳು ಮತ್ತು ಅದರ ಜೊತೆ ನಡೆದಾಡಿದಳು. ತರುವಾಯ ಅದು ಭಾರವಾದಾಗ ಅವರಿಬ್ಬರೂ, ‘‘ನೀನು ನಮಗೆ ಸಜ್ಜನ ಸಂತತಿಯನ್ನು ದಯಪಾಲಿಸಿದರೆ ನಾವು ಖಂಡಿತ ನಿನಗೆ ಕೃತಜ್ಞರಾಗಿರುವೆವು’’ ಎಂದು ತಮ್ಮ ಒಡೆಯನಾದ ಅಲ್ಲಾಹನೊಡನೆ ಪ್ರಾರ್ಥಿಸುತ್ತಾರೆ.

190. ಮುಂದೆ ಅವನು (ಅಲ್ಲಾಹನು) ಅವರಿಗೆ ಸಜ್ಜನ ಮಗುವನ್ನು ನೀಡಿದಾಗ, ಅವರು ತಮಗೆ ಅವನು ನೀಡಿದ್ದರಲ್ಲಿ ಇತರರನ್ನು ಪಾಲುದಾರರಾಗಿಸುತ್ತಾರೆ. ನಿಜವಾಗಿ ಅವರು ಪಾಲುದಾರರಾಗಿ ಮಾಡಿದ ಎಲ್ಲರಿಗಿಂತಲೂ ಅಲ್ಲಾಹನು ಉನ್ನತನಾಗಿದ್ದಾನೆ.

 191. ಅವರೇನು, ಏನನ್ನೂ ಸೃಷ್ಟಿಸಿಲ್ಲದವರನ್ನು ಮತ್ತು ಸೃಷ್ಟಿಸಲ್ಪಟ್ಟವರನ್ನು (ದೇವರ) ಪಾಲುದಾರರಾಗಿಸುತ್ತಾರೆಯೇ?

192. ನಿಜವಾಗಿ ಅವರು (ಆ ಪಾಲುದಾರರು) ಅವರಿಗೆ ಯಾವುದೇ ಸಹಾಯಮಾಡಲು ಶಕ್ತರಲ್ಲ. ಮಾತ್ರವಲ್ಲ, ಅವರಂತು ಸ್ವತಃ ತಮಗೂ ಯಾವುದೇ ಸಹಾಯ ಮಾಡಲಾರರು.

193. ನೀವು ಅವರನ್ನು ಸನ್ಮಾರ್ಗದೆಡೆಗೆ ಕರೆದರೆ, ಅವರು ನಿಮ್ಮನ್ನು ಅನುಸರಿಸಲಾರರು. ನೀವು ಅವರನ್ನು ಕರೆದರೂ ಒಂದೇ ಅಥವಾ ಮೌನವಾಗಿದ್ದರೂ ಒಂದೇ.

194. ಅಲ್ಲಾಹನ ಹೊರತಾಗಿ ನೀವು ಯಾರನ್ನು ಕರೆದು ಪ್ರಾರ್ಥಿಸುವಿರೋ ಅವರು ನಿಮ್ಮಂತಹ ದಾಸರು ಮಾತ್ರ. ನೀವು ಸತ್ಯವಂತರಾಗಿದ್ದರೆ, ಅವರನ್ನು ಕರೆದು ನೋಡಿರಿ, ಅವರು ನಿಮಗೆ ಉತ್ತರಿಸಲಿ.

195. ಅವರ ಬಳಿ, ನಡೆದಾಡುವುದಕ್ಕೇನು ಕಾಲುಗಳಿವೆಯೇ? ಹಿಡಿಯುವುದಕ್ಕೇನು ಅವರ ಬಳಿ ಕೈಗಳಿವೆಯೇ? ನೋಡುವುದಕ್ಕೇನು ಅವರ ಬಳಿ ಕಣ್ಣುಗಳಿವೆಯೇ? ಅಥವಾ ಕೇಳುವುದಕ್ಕೇನು ಅವರ ಬಳಿ ಕಿವಿಗಳಿವೆಯೇ? ಹೇಳಿರಿ; ನೀವು ಆ ನಿಮ್ಮ ಪಾಲುದಾರರನ್ನು ಕರೆದು ನೋಡಿರಿ. ಆ ಬಳಿಕ ನನ್ನ ವಿರುದ್ಧ ಸಂಚು ಹೂಡಿರಿ ಮತ್ತು (ನನಗೆ) ಕಾಲಾವಕಾಶವನ್ನೇ ಕೊಡಬೇಡಿರಿ.

196. ಖಂಡಿತವಾಗಿ ದಿವ್ಯಗ್ರಂಥವನ್ನು ಇಳಿಸಿದ ಅಲ್ಲಾಹನೇ ನನ್ನ ಪರಮ ಪೋಷಕನಾಗಿದ್ದಾನೆ ಮತ್ತು ಅವನೇ ಎಲ್ಲ ಸಜ್ಜನರ ಪರಮ ಪೋಷಕನಾಗಿದ್ದಾನೆ.

197. ಅಲ್ಲಾಹನ ಹೊರತು ನೀವು ಯಾರನ್ನೆಲ್ಲಾ ಕರೆದು ಪ್ರಾರ್ಥಿಸುವಿರೋ ಅವರು ನಿಮಗೆ ನೆರವಾಗಲು ಶಕ್ತರಲ್ಲ. ಮಾತ್ರವಲ್ಲ, ಅವರಂತು ಸ್ವತಃ ತಮಗೇ ನೆರವಾಗಲು ಅಶಕ್ತರಾಗಿರುವರು.

198. ನೀವು ಮಾರ್ಗದರ್ಶನಕ್ಕಾಗಿ ಅವರನ್ನು ಕರೆದರೆ ಅವರು ಅದನ್ನು ಕೇಳುವುದಿಲ್ಲ. ಅವರು ನಿಮ್ಮನ್ನು ನೋಡುತ್ತಿರುವಂತೆ ನೀವು ಕಾಣುತ್ತೀರಿ. ಆದರೆ ನಿಜವಾಗಿ ಅವರು ಏನನ್ನೂ ನೋಡುವುದಿಲ್ಲ.

199. ನೀವು (ಜನರನ್ನು) ಕ್ಷಮಿಸಿರಿ, ಒಳಿತನ್ನು ಆದೇಶಿಸಿರಿ ಮತ್ತು ಅಜ್ಞಾನಿಗಳನ್ನು ನಿರ್ಲಕ್ಷಿಸಿರಿ.

 200. (ದೂತರೇ,)ಶೈತಾನನ ಕಡೆಯಿಂದ ನಿಮಗೆ ಯಾವುದೇ ತರದ ಪ್ರಚೋದನೆಯುಂಟಾದರೆ, ಅಲ್ಲಾಹನ ರಕ್ಷಣೆ ಬಯಸಿರಿ. ಖಂಡಿತವಾಗಿಯೂ ಅವನು ಎಲ್ಲವನ್ನೂ ಕೇಳುವವನು ಮತ್ತು ಬಲ್ಲವನಾಗಿದ್ದಾನೆ.

201. ಖಂಡಿತವಾಗಿಯೂ, ಧರ್ಮನಿಷ್ಠರಿಗೆ ಶೈತಾನನ ಕಡೆಯಿಂದ ಯಾವುದೇ ದುಷ್ಟ ಪ್ರೇರಣೆ ಉಂಟಾದಾಗ, ಅವರು (ಅಲ್ಲಾಹನನ್ನು) ಸ್ಮರಿಸುತ್ತಾರೆ ಮತ್ತು ಆಗಲೇ ಅವರು (ಸರಿದಾರಿಯನ್ನು) ಕಂಡುಕೊಳ್ಳುತ್ತಾರೆ.

202. ಇನ್ನು ಅವರ (ಶೈತಾನರ) ಸಹೋದರರು ಅವರನ್ನು ತಪ್ಪುದಾರಿಗೆ ಎಳೆಯುತ್ತಲೇ ಇರುತ್ತಾರೆ ಮತ್ತು (ಆ ವಿಷಯದಲ್ಲಿ) ಅವರು ಹಿಂಜರಿಯುವುದಿಲ್ಲ.

203. (ದೂತರೇ,) ನೀವು ಅವರ ಬಳಿಗೆ ಯಾವುದೇ ದಿವ್ಯ ವಚನವನ್ನು ತರದೆ ಇದ್ದಾಗ ಅವರು, ‘‘ಸ್ವತಃ ನೀವೇ ಅದನ್ನೇಕೆ ರಚಿಸಿಕೊಳ್ಳುವುದಿಲ್ಲ?’’ ಎಂದು ಕೇಳುತ್ತಾರೆ. ಹೇಳಿರಿ; ‘‘ನಾನಂತು, ನನ್ನ ಒಡೆಯನ ಕಡೆಯಿಂದ ನನಗೆ ನೀಡಲಾಗುವ ದಿವ್ಯವಾಣಿಯನ್ನಷ್ಟೇ ಅನುಸರಿಸುತ್ತೇನೆ. ಇದು (ಕುರ್‌ಆನ್) ನಿಮ್ಮ ಒಡೆಯನ ಕಡೆಯಿಂದ ಬಂದಿರುವ, ಕಣ್ಣು ತೆರೆಸುವ ಉಪದೇಶವಾಗಿದೆ ಮತ್ತು ಇದು ನಂಬುವವರ ಪಾಲಿಗೆ ಮಾರ್ಗದರ್ಶನ ಹಾಗೂ ಅನುಗ್ರಹವಾಗಿದೆ.

204. ಕುರ್‌ಆನ್ ಅನ್ನು ಓದಲಾದಾಗ ಅದನ್ನು ಕೇಳಿರಿ ಮತ್ತು ಮೌನವಾಗಿರಿ – ನೀವು ಕರುಣೆಗೆ ಪಾತ್ರರಾಗಬಹುದು.

205. (ದೂತರೇ,) ನೀವು ನಿಮ್ಮ ಮನದೊಳಗೇ ನಿಮ್ಮೊಡೆಯನನ್ನು ಸ್ಮರಿಸುತ್ತಲಿರಿ – ವಿನಯದೊಂದಿಗೆ ಹಾಗೂ ಭಯ ಭಕ್ತಿಯೊಂದಿಗೆ, ಧ್ವನಿಯನ್ನು ಎತ್ತರಿಸದೆ, ಮುಂಜಾನೆ ಹಾಗೂ ಸಂಜೆ, ಮತ್ತು ನೀವೆಂದೂ (ಅವನನ್ನು) ನಿರ್ಲಕ್ಷಿಸಿದವರಾಗಿರಬೇಡಿ.

206. ಖಂಡಿತವಾಗಿಯೂ, ನಿಮ್ಮ ಒಡೆಯನ ಬಳಿ ಇರುವವರು ಅವನನ್ನು ಆರಾಧಿಸುವ ವಿಷಯದಲ್ಲಿ ಎಂದೂ ಅಹಂಕಾರ ತೋರುವುದಿಲ್ಲ ಮತ್ತು ಅವರು ಅವನ ಪಾವಿತ್ರವನ್ನು ಜಪಿಸುತ್ತಿರುತ್ತಾರೆ ಹಾಗೂ ಅವನಿಗೇ ಸಾಷ್ಟಾಂಗ ವಂದಿಸುತ್ತಿರುತ್ತಾರೆ.